ಎಲ್ಲಾಗಿನ್ನಾ ಮೊದಲೇ ಬಲ್ಲೋಳೆ ಬಲಾಗಂಬೆ
ಎಳ್ಳು ಜೀರಿಗೆಯಾ ಬೇಳಾವೊಳೇ | ಗುಮ್ಮಾಮ್ಮಾನಾ
ಬಲ್ಲೋಳೆ ಮೊದಲೇ ಬಲಗಂಬೆ ||ಸೋಬಾನವೇ||

ಆಕೆಗಿನ್ನಾ ಮೊದಲೇ ಆಕರಿ ಬಲಾಗಂಬೆ
ಕತ್ತಿ ಜೀರಿಗಿಯ ಬೆಳಾವವೊಳೇ | ಗುಮ್ಮಾಮ್ಮಾನಾ
ಆಕಿಯಾ ಮೊದಲೇ ಬಲಾಗಂಬೆ ||ಸೋಬಾನವೇ||

ವಾಲಿ ತೊಡಿಯ ಮ್ಯಾಲೆ ಗ್ಯಾನ ನಿಮ್ಮಾಮ್ಯಾಲೆ
ಮ್ಯಾಲೊಂದು ಸೊಲ್ಲೆ ಮೊದಲರಿಯೇ | ಪಾಲಯ್ಯ
ಬಾರದಾ ಪದುನಾ ಬರಾಕೊಡು ||ಸೋಬಾನವೇ||

ಬಾರದಾ ಪದುಗಾಳು ವಾಲಿಮ್ಯಾಲೇ ಐದಾವೇ
ವಾಲಿತತ್ತಾರೋ ಬೆನಾವಣ್ಣಾ | ಗ್ಯಾನಾರುಳ್ಳ |
ನಾರಿಗೆ ಪದುನಾ ಬರಾಕೊಡೋ ||ಸೋಬಾನವೇ||

ಒತ್ತಿಗೆ ತೊಡಿಯ ಮ್ಯಾಲೇ ಸಿತ್ತಾ ನಿಮ್ಮಾಮ್ಯಾಲೆ
ಮತ್ತೊಂದೆ ಸೊಲ್ಲ ಮೊದಲರಿಯೆ | ಪಾಲಯ್ಯ |
ತಪ್ಪಿದಾ ಪದುನಾ ಬರಾಕೊಡೋ ||ಸೋಬಾನವೇ||

ತಪ್ಪಿದಾ ಪದೂಗಾಳೊ ಒತ್ತಿಗೆ ಮ್ಯಾಲೈದಾವೇ
ವತ್ತಿಗಿ ತತ್ತಾರೋ ಬೆನಾವಣ್ಣಾ | ಗ್ಯಾನಾರುಳ್ಳ
ನಿಸ್ತ್ರರರಿಗೆ ಪದುನಾ ಬರಾಕೊಡೋ ||ಸೋಬಾನವೇ||

ಅಲ್ಲಲ್ಲಿ ನೋಡದಾ ಗ್ಯಾನ ಯರುಡಾಗದ ಜೋಡಿ
ನಾವಿಬ್ಬರೂ ಅಗುಲದಾಂಗಾಡಿವೇ | ವಾಲಿಗೊಜ್ಜರುವಾ |
ಬಿಗುದಾಂಗೇ ||ಸೋಬಾನವೇ||

ಅತ್ತಿತ್ತ ನೋಡದಾ ಚಿತ್ತಾ ಎರುಡಾಗದಾ ಜೋತೆ
ನಾವಿಬ್ಬರೂ ಅಗುಲದಂಗಾಡೀವೀ | ಕಟ್ಟಿಗೊಜ್ಜುರುವಾ
ಬಿಗುದಂಗೇ ||ಸೋಬಾನವೇ||

ಬೆಂಕಿಯ ಹಡೂದಾಳೇ ಎಂಟೂಗುಂಡೈ ಗುರುನಾ
ಗಂಟಾಲ ಗಲುಗಾ ತಿರುವೋರೇ | ಪಾಲಯ್ಯನ |
ಬಂಟೆ ಮಲ್ಲಮ್ಮ ಹಡುದಾಳೆ ||ಸೋಬಾನವೇ||

ಜಾಣಿಯ ಹಡೂದಾಳೆ ಏಳುಗುಂಡಿ ಗುರುನಾ
ನಾಲಿಗೆ ಲಲುಗ ತಿರುವೂರೇ | ಪಾಲಯ್ಯನ
ಜಾಣಿ ಮಲ್ಲಮ ಪಡುದಾಳೇ ||ಸೋಬಾನವೇ||

ಕಬ್ಬಿಣದ ಉಯ್ಯಾಲೆ ಜೋಗ್ಗೋಲ ಕೆಯ್ದಾರೇ
ಇಬ್ಬರೂ ತೂಗಿದುರೇ ಅಸುನಲ್ಲೆ | ಮಲ್ಲಮ್ಮ
ಹೆಬ್ಬುಲಿ ಮಗುನಾ ಹಡುದಾಳೇ ||ಸೋಬಾನವೇ||

ಮಾಣಿಕ್ಯದಾ ಉಯ್ಯಾಲೇ ಮಾಡಲ ಕೈದರೇ ನಾಲರು
ತೂಗಿದುರೇ ಆಸುನಲ್ಲೆ | ಮಲ್ಲಮ್ಮ
ಮಾಗಾಯಿ ಮಗುನಾ ಪಡುದಾಳೇ ||ಸೋಬಾನವೇ||

ಎತ್ತುನಾ ಗೂಡಾಗೆ ಹುಟ್ಟ್ಯಾನೇ ಪಾಲಯ್ಯ
ಹುಟ್ಟೇಳು ದಿನುಕೇ ಶಿವಪೂಜಿ | ನನ್ನಿವಾಳ
ಶೆಟ್ಟಿರಂದುಲವಾ ಕಳುವ್ಯಾರೋ ||ಸೋಬಾನವೇ||

ಅವಾನೂ ಗೂಡಾಗೇ ಆಡ್ಯಾನೇ ಪಾಲಯ್ಯ
ಆಡೇಳು ದಿನಕೇ ಶಿವಪೂಜೆ | ನನ್ನಿವಾಳ
ದೊರೆಗಳಂದುಲುವಾ ಕಳೀವ್ಯಾರೆ ||ಸೋಬಾನವೇ||

ಕಾರೀ ಕಳ್ಳೀ ಕಡುದೂ ಕರೀಯನ ಗೂಡಾ ಕಟ್ಟಿ
ಕಿರುಬಳ್ಳಿಲಾಲು ಕರಾವೊರೇ | ಪಾಲಯ್ಯ
ಮ್ಯಾಸ ಮಾನ್ಯರಿಗೆ ತಿಳಿಯಾವೇ ||ಸೋಬಾನವೇ||

ಗುಬ್ಬಿಸಿಕಳ್ಳೀ ಕಡುದೊ ಬಗ್ಗಿಸಿ ಗೂಡು ಕಟ್ಟೀ
ಹೆಬ್ಬಟ್ಟಿಲಾಲು ಕರಾವೊರೇ | ಪಾಲಯ್ಯನ
ಬುದ್ಧಿ ಮಾನ್ಯರಿಗೇ ತಿಳಿಯಾವೇ ||ಸೋಬಾನವೇ||

ದುಡ್ಡೀನಾ ದೂಪಾ ಒಯ್ದು ದೊಡ್ಡೋರೇ ಬಲಾಗಂಬೆ
ದೊಡ್ಡೆಬ್ಬೆನಾಗೇ ಇರಾವೊರೇ | ಪಾಲಯ್ಯನ ದೊಡ್ಡೊರೇ
ಮೊದಲೇ ಬಲಾಗಂಬೆ ||ಸೋಬಾನವೇ||

ವಾಸನಿ ದೂಪಾ ಒಯ್ದು ಆಕ್ಯಾನೇ ಬಲಾಗಂಬೆ
ಸಾಲೊಬ್ಬಿನಾಗೇ ಇರಾವೋರೇ | ಪಾಲಯ್ಯನ ಸ್ವಾಮಿಯಾ
ಮೊದುಲೇ ಬಲಾಗಂಬೆ ||ಸೋಬಾನವೇ||

ಅಣ್ಣಾನ ದಿನಾ ಬಂತು ಹೊನ್ನು ಎತ್ತಾನು ಬನ್ನಿ
ಅಣ್ಣಾ ತಮ್ಮಗಳು ಒಡಾಗೂಡೀ | ಗಾದಾನೂರೂ
ಹೊನ್ನಿಗಿ ತಮ್ಮಯ್ಯ ಹೊಣಿಯಾದಾ ||ಸೋಬಾನವೇ||

ಅಪ್ಪನಾ ದಿನಾ ಬಂತು ರೊಕ್ಕಾ ಎತ್ತಾನೂ ಬನ್ನಿ
ಅಪ್ಪಾ ಮಕ್ಕಳೂ ಒಡಗೂಡಿ | ಗಾದಾನೂರು |
ರೊಕ್ಕುಕ ತಮ್ಮಯ್ಯ ಹೊಣಿಯಾದಾ ||ಸೋಬಾನವೇ||

ಅಲ್ಲಿ ಇಲ್ಲಿ ಉರಿಮೆ ವಲ್ಲಾನೇ ಪಾಲಯ್ಯ
ಎಲ್ಲಾ ಜೆಲ್ಲಿಗಳೂ ಹೊಳೂದಾವೇ | ಗಾದಾನೂರೂ
ಕಂಚೀನಾ ಉರಿಮೆ ಬರಾಲೊಂದೇ ||ಸೋಬಾನವೇ||

ಅತ್ತಲಿತ್ತಾ ಉರಿಮೆ ಒಪ್ಪಾನೇ ಪಾಲಯ್ಯ
ಎತ್ತಾ ಜೆಲ್ಲೆಗಳು ಹೊಳುದಾವೇ | ನನ್ನಿವಾಳ
ಒಕ್ಕಲ ಉರಿಮೆ ಬರಾಲೊಂದೇ ||ಸೋಬಾನವೇ||

ಆರುವಾರಾ ಕೊಟ್ಟು ನೀಲಿಯ ಸತ್ತರಿಕೆ ಮ್ಯಾಲೆ
ದುರುಗುದಲೆ ಅಣುದಾರೇ | ಸತ್ತರಿಕೆ
ಸ್ವಾಮಿಗ್ವಾಲಾಲೀ ಇಡೂದಾರೇ ||ಸೋಬಾನವೇ||

ಅತ್ತುವಾರಾ ಕೊಟ್ಟು ಮುತ್ತಿನಾ ಸತ್ತುರಿಕೆ ಮತ್ತೆ
ದುರುಗುದಲೆ ಅಣುದಾರೇ | ಸತ್ತುರಿಕೆ
ಅಪ್ಪಾಗ್ವಾಲಾಲಿ ಇಡುದಾರೇ ||ಸೋಬಾನವೇ||

ಹಲಗೆಯನ್ನಾ ಮ್ಯಾಲೇ ಆರೂ ನಿಂಬೆಹಣ್ಣು
ಅಣ್ಣಾನ ಹೊರಡೂಸ ಹಿರಿಯರೇ | ನನ್ನೀವಾಳಾ
ಸಣ್ಣಗೋಸೀಕ್ಯಾರಿ ವಳೀ ತಂಕಾ ||ಸೋಬಾನವೇ||

ಪೆಟ್ಟಿಗನ್ನಾ ಮೇಲೆ ಹತ್ತೂ ನಿಂಬೆಹಣ್ಣು
ಅಪ್ಪಾನ್ನೊರಡೂಸ ಹಿರಿಯೋರೇ | ನನ್ನೀವಾಳ
ಸಿಕ್ಕಗೋಸಿಕ್ಯಾರೆ ವಾಳೀ ತಂಕಾ ||ಸೋಬಾನವೇ||

ಆರುರುಮೆ ಇಲ್ಲದಲೆ ಅಣ್ಣಯ್ಯ ವರೂಡಾನೇ
ಸಣ್ಣ ನನ್ನೀವಾಳ ಹೊರಾಪ್ಯಾಟಿ | ಬಾಡಿಗೆ
ಇನ್ನೊಂದೇ ಆಳು ಬಿಡಿರಣ್ಣಾ ||ಸೋಬಾನವೇ||

ಹತ್ತುರುಮೆ ಈವುದಲೆ ಅಪ್ಪಯ್ಯ ವರೂಡನೇ
ಸಿಕ್ಕ ನನ್ನೀವಾಳಾ ಹೊರೂಪ್ಯಾಟಿ | ಬಾಡಿಗೆ
ಮತ್ತೊಂದೇ ಆಳು ಬಿಡೀರಣ್ಣಾ ||ಸೋಬಾನವೇ||

ಅಣ್ಣಾನವರಾ ಊರೂ ಹೆಣ್ಣುಳ್ಳ ಮೈಯ್ಯೋರು
ಸಣ್ಣಾ ರುದ್ರಾಕ್ಷಿ ಕೊರಳೋರೇ | ಪಾಪಯ್ಯ
ಅಣ್ಣಯ್ಯಗೆಗುಲು ಕೊಡುಬಾರೋ ||ಸೋಬಾನವೇ||

ಅಪ್ಪಾನವರೋ ಊರು ತುಪ್ಪಳ್ಳಾ ಮೈಯ್ಯೋರು
ಸಿಕ್ಕ ರುದ್ರಾಕ್ಷಿ ಕೊರಳೋರೇ | ಪಾಪಯ್ಯ
ಅಪ್ಪಯ್ಯಗೆಗುಲಾ ಕೊಡುಬಾರೋ ||ಸೋಬಾನವೇ||

ಪೆಟ್ಟಿಗೊರುವಣ್ಣಾಗೆ ಬಟ್ಟ ಮತ್ತು ಬಾಬೂಲೆ
ಪಟ್ಟೇದುಟ್ಟಾರೆ ನಡಾವೀಗೇ | ಓಬಯ್ಯ
ಪೆಟ್ಟಿಗೆ ಹೊರುವ ಮಗಾನೀಗೆ ||ಸೋಬಾನವೇ||

ಕಂಬಿಗರುವಣ್ಣಾಗೆ ಮುಂಗೈಯಲೆ ಮೂರರಿವೆ
ಕೆಂದಾಗಾಯವರ ನಡವೀಗೆ | ಪಾಫಯ್ಯ
ಕಂಬಿಯ ಹೊರುವಾ ಮಗಾನಿಗೇ ||ಸೋಬಾನವೇ||

ಅಣ್ಣಾ ಹೊರಟಾನೊಂದು ಅಂದವಿಲ್ಲೂರಾಗೇ
ಅಂಬಾರುಕ ಮಟ್ಟಿದಕುನವೇ | ದಗ್ಗುಂಬಾವು
ನೀಲಿಯ ಗುಡುಗು ಹಿಡಿಸ್ಯಾರೇ ||ಸೋಬಾನವೇ||

ಅಪ್ಪಾ ಹೊರಟಾನಂದೂ ಒಪ್ಪವಿಲ್ಲೂರಾಗೇ
ಭೂಲೋಕಕು ಮುಟ್ಟಿದಗುನಾವೇ | ದಗ್ಗುಂಬವೊ
ಭೂಸೊಕ್ಕುರುಗುಡುಗು ಹಿಡಿಸ್ಯಾರೇ ||ಸೋಬಾನವೇ||

ಆವಾನೂ ಕರಕೊಂಡೂ ದೇವಾರೊರಿಸಿಕೊಂಡು
ಎಲ್ಲಿಗೆ ಪಾಲಯ್ಯ ನಿಮ ಪಯಣಾ | ಗೋಸೀ ಕ್ಯಾರಿ
ನೆಲ್ಲಿಯ ಮರುನ ತ್ರನವೀಗೆ ||ಸೋಬಾನವೇ||

ಎತ್ತನಾ ಕರಾಕೊಂಡು ಪೆಟ್ಟಿಗೊರಸೀಕೊಂಡೂ ಎತ್ತ
ಪಾಲಯ್ಯ ನಿಮ ಪಯಣಾ | ಗೋಸೀ ಕ್ಯಾರಿ
ಉತ್ತತ್ತಿ ಮರನಾ ತ್ರನವೀಗೇ ||ಸೋಬಾನವೇ||

ಎದ್ದನು ಎದ್ದಂಗೆ ಎದ್ದಲ್ಲೊ ಪಾಲಯ್ಯ
ಇದ್ದನಾಲರುನಾ ಕರಾಕೊಂಡೂ | ಗೋಸೀಕ್ಯಾರೇ
ಎದ್ದೆಲ್ಲ ಅರುವಾ ಜಲಾಧೀಗೇ ||ಸೋಬಾನವೇ||

ಹೋದೋನು ಹೋದಂಗೇ ಹೋದೆಲ್ಲೋ ಪಾಲಯ್ಯ
ಆದ ನಾಲರನಾ ಕರಾಕೊಂಡು | ಗೋಸೀಕ್ಯಾರೇ
ಹೋದೆಲ್ಲೊ ಅರುವಾ ಜಲಾಧೀಗೇ ||ಸೋಬಾನವೇ||

ಅರಿವೆ ಹೊದ್ದೂಕೊಂಡು ಸೀರಿಯ ಒಲುಸುತಾ
ಅರವತ್ತು ಜಡಿಯ ಕೊಡವೂತು ಜಲಜಲದಾ
ಬೆವತನಲ್ಲೇ |

ಜಲಜಲದೀ ಬೆವೆತನಲ್ಲೇ ಪಾಲಯ್ಯ ಜಲದಿ ಬಿಟ್ಟೇಳನಲ್ಲೇ
ಅರವತ್ತಾ ಜಡಿಯೂ ಕೊಡವೂತ ಗೊಸೀಕೆರೆಯಾ
ಸರವತ್ತೂಗಿಳಿದಾ ಜಾಲದೀಗೇ ||ಜಲ ಜಲದೆ||

ಅಂಚೆ ಹೊದ್ದುಕೊಂಡು ಸಿಂತೇ ವಾಲಿಸುತಾ
ಪಂಜುಳ್ಳ ಜಡೆಯ ಕೊಡವೂತಾ | ಗೋಸೀಕ್ಯಾರಿ
ಸಂಪತ್ತಿಲಳಿದಾ ಜಾಲದೀಗೇ ||ಜಲ ಜಲದೆ||

ಆಕಾಸಿಲೇ ಮಳೆಬಂದು ಮಾಚಲಗಡ್ಡೇ ಗಂಗೇ |
ಈಚಲಗಡ್ಡಿಗೆ ಬಾರೀ ಆಕಾಸದ ಗಂಗೇ ತೆರಿಹೊಯ್ಯೋ ||ಜಲ ಜಲದೆ||

ಜಲ ಜಲದೀ ಬೆವತನಲ್ಲೇ ಪಾಲಯ್ಯ ಜಲದಿ ಬಿಟ್ಟು ಏಳನಲ್ಲೆ
ಆಕಾಸದ ಗಂಗೇ ತೆರೆಹೊಯ್ಯೋ ಪಾಲಯ್ಯ
ಆವಿನ ಹಿಂಡಾ ಕಾಡಿಯಾಸೇ ||ಜಲ ಜಲದೆ||

ಹಿಂದಲಗಡ್ಡೀಗಂಗೀ ಮುಂದಲಗಡ್ಡೀಗೆ ಬಾರೇ
ಅಂಬಾರದ ಗಂಗೇ ತೆರೆಹೊಯ್ಯೋ | ಪಾಲಯ್ಯ
ಎತ್ತಿನಾ ಹಿಂಡೆ ತೆರಿಯಾಸೆ ||ಜಲ ಜಲದೆ||

ಬಾಳೀಹಣ್ಣಿನಂಗೇ ಬಾಗಿರುವೋ ಗಂಗಮ್ಮ
ತಾವೆ ಕೊಡು ನಮ್ಮ ಒಡಿಯಾ ಪಾಲಯ್ಯಗೇ
ಬೆಳ್ಳಿಯ ಹಾದಿ ತೂಳುದಾರೇ ||ಜಲ ಜಲದೆ||

ನಿಂಬೇ ಹಣ್ಣಿನಂಗೇ ತುಂಬಿರುವ ಗಂಗಮ್ಮ
ಇಂಬೆಕೊಡು ನಮ್ಮ ಒಡಿಯಾ | ಪಾಲಯ್ಯಾಗೇ
ಬಂಗಾರದ ಹಾದಿ ತೂಳುದಾರೇ ||ಜಲ ಜಲದೆ||

ಬಾವಿಯ ದಡುದಲ್ಲಿ ಬಾಳಿಯ ಮರನುಟ್ಟೀ
ಆಕಳುಸುತಾವೇ ಹುಲಿಕರಡೀ | ಪಾಲಯ್ಯ
ತೂಕಡಿಸಿ ಹೊಳಿಯಾ ಈಳುದಾನೇ ||ಜಲ ಜಲದೆ||

ಗಂಗೀಯ ದಡದಲ್ಲಿ ನಿಂಬಿಯಾ ಮರನುಟ್ಟೀ
ರಂಗುಳುಸುತಾವೇ ಹುಲಿಕರಡೀ | ಪಾಲಯ್ಯ
ವಂದಿಸೀ ಹೊಳಿಯ ಈಳುದಾನೇ ||ಜಲ ಜಲದೆ||

ಅಂಬಾರದಾ ಮಳಿ ಬಂದೂ ಮುಂಬಾರದ ಕೆರೆ
ತುಂಬೀ ಕೊಂಬಿಲಚ್ಚ್ಯಾಡಾ ತೆರೀಕಟ್ಟೀ | ಗೊಸೀಕ್ಯಾರೀ |
ಹಿಂದಲ ಗೂಡಾಗೆ ಶಿವಪೂಜೀ ||ಜಲ ಜಲದೆ||

ಆಕಾಸದಾ ಮಳೀ ಬಂದೊ ಭೂಪಾಲನ ಕ್ಯರಿತುಂಬೀ
ತೋಪಿನಚ್ಚಾಡ ತ್ಯಾರಿಕಟ್ಟೀ | ಗೊಸೀಕ್ಯಾರಿ
ಅಸನ ಕೂಡಾಗೇ ಶಿವಪೂಜೇ ||ಜಲ ಜಲದೆ||

ಆರುಸಾವಿರ ಲಿಂಗ ಹೋಗಿ ಮೈತೊಳೀವಾಗ
ಬಾವಿಯ ಕ್ವಲ್ಲೇ ಕಾದಿಲಾವೇ | ಪಾಲಯ್ಯ
ಹೋಗಿ ಮೈ ತೊಳವೋ ರಾವಸೀಗೇ ||ಜಲ ಜಲದೆ||

ಹತ್ತು ಸಾವಿರಲಿಂಗ ವಕ್ಕಿ ಮೈತೊಳಿವಾಗ
ಕಟ್ಟೀಯ ಕ್ವಲ್ಲೇ ಕಾದಿಲಾವೇ | ಪಾಲಯ್ಯ
ವಕ್ಕಿ ಮೈ ತೊಳೆವೋ ರಾವಸೀಗೇ ||ಜಲ ಜಲದೆ||

ಆರೂ ಕಂಬೀ ಆಲೂ ಎಳ್ಳುಕ್ಕೆ ಬಂದಾವೇ
ಸ್ವಾಮಿ ಪಾಲಯ್ಯ ಶಿವಪೂಜೆ | ಕುಡವತ್ತಿಗೇ
ಗೌಡಾ ಪಾಪಣ್ಣ ಕಾಳಿವ್ಯಾನೇ ||ಜಲ ಜಲದೆ||

ಅತ್ತ ಕಂಬೀ ಹಾಲು ಗೊತ್ತಿಗ್ಗೆ ಬಂದಾವೇ
ಅಪ್ಪ ಪಾಲಯ್ಯ ಶಿವಪೂಜೆ | ಕುಡವತ್ತಿಗೇ
ಗೌಡಾ ಪಾಪಣ್ಣ ಕಾಳಿವ್ಯಾನೇ ||ಜಲ ಜಲದೆ||

ಹುಬ್ಬಳ್ಳೀಯಲಿಂದಾ ಉಬ್ಬಿಬಂದಾವ ಬೆಳ್ಳೀ
ಹೆಜ್ಜ್ಯಾಗೆ ಎತ್ತು ತೋರವೋರೇ | ಪಾಪಯ್ಯಗೆ
ಅಗ್ಗಿಲ್ಲದಪವಾ ಕೋಡಿರಣ್ಣಾ ||ಜಲ ಜಲದೆ||

ಹರಿಹಾರಾಲಿಂಗ ಅರುದು ಬಂದವ ಬೆಳ್ಳೀ
ನಡಿಗ್ಯಾಗ ಎತ್ತೀ ತೋರವೋರೇ | ಪಾಪಯ್ಯಗೆ
ತಡವಿಲ್ಲದಡವಾ ಕೊಡಿರಣ್ಣಾ || ಜಲ ಜಲದೆ ||

ಎತ್ತು ತಂದಣ್ಣಾಗೆ ಮತ್ತಿನೋ ಉಡುಗಾರೋ
ಪ್ರತ್ರನೋದ್ದೇರವೋ ನಲ್ಲೋಸಂದ್ರಗಾಯಿ | ಎತ್ತುತಂದಣ್ಣಾ
ಉಡುಗೋರು ||ಜಲ ಜಲದೆ||

ಆವು ತಂದಣ್ಣಾಗೇ ಮ್ಯಾಲೇನಾ ಉಡಗೋರಾ
ಬಾಲನೊದ್ದಾರವೋ ದೇಸಲೇಯೋ | ಸಂದಿರಗಾಯಿ
ಆವೆತಂದಣ್ಣಾ ಉಡಗೋರಾ ||ಜಲ ಜಲದೆ||

ನಿಲ್ಲೋ ನಿಲ್ಲೋ ಪಾಲ ನಿಲ್ಲೋ ಸೆನ್ನಿಗ ಪಾಲ
ಮಲ್ಲಿಗೆ ಹೂವಾ ಸಾರನೀರೇ | ಬರುತಾವೇ
ನಿಲ್ಲೋ ಪಾಲಯ್ಯ ಮುಡೀವಂತೆ ||ಜಲ ಜಲದೆ||

ತಾಳೋ ತಾಳೋ ಪಾಲ ತಾಳೋ ಸೆನ್ನಿಗ ಪಾಲ
ಶಾವಂತಿಗೆ ಹೂವೇ ಸಾರನೀರೆ | ಬರುತಾವೇ
ತಾಳೋ ಪಾಲಯ್ಯ ಮುಡೀವಂತೆ ||ಜಲ ಜಲದೆ||

ಹಿಂದಲ ಪಾದದ ಮ್ಯಾಲೇ ಮುಂದಲ ಪಾದಾನೂರು
ಜಂಗೀಸೀ ಹೂವಾ ಮುಡಿಸೋರೇ | ಕೈಯಾಗೇ
ಉಂಗುರಾ ಬಂದಾವೆ ಊಡುಗೋರು ||ಜಲ ಜಲದೆ||

ಆಸಲ ಪಾದುದ ಮ್ಯಾಲೆ ಈಸಲ ಪಾದಾನೂರು
ದಾಟಿಸಿ ಹೂವೇ ಮುಡಿಸೋರೆ | ಪಾಪಯ್ಯಗೆ
ಅಚ್ಚಡ ಬಂದಾವೇ ಉಡುಗೋರೆ ||ಜಲ ಜಲದೆ||

ನಿಲ್ಲೋ ನಿಲ್ಲೋ ಪಾಲ ನಿಲ್ಲೋ ಸೆನ್ನಿಗೆ ಪಾಲ
ಮಲ್ಲಿಗೆ ಹೂವೇ ಸಾರನೀರೆ | ಬರುತಾವೇ
ನಿಲ್ಲೋ ಪಾಲಯ್ಯ ಮೂಡಿವಂತೀ ||ಜಲ ಜಲದೆ||

ತಾಳೋ ತಾಳೋ ಪಾಲ ತಾಳೋ ಸೆನ್ನಿಗ ಪಾಲ
ಶಾವಂತಿಗೆ ಹೂವೆ ಸಾರನೀರೆ | ಬರುತಾವೇ
ತಾಳೋ ಪಾಲಯ್ಯ ಮೂಡಿವಂತೀ ||ಜಲ ಜಲದೆ||

ಆಕಾಸ ಕಾಡ್ಯಾವೇ ಕಾತೇನೀಲದ ಗರಡೇ
ದಾಸನ ಕುಂಡಾರೇ ಬಾರೀ ಹೇಳೇ | ಆಡೋದು
ದೂಪದೋಕುಳಿಯ ದೀನಾ ಬಂತು ||ಜಲ ಜಲದೆ||

ಅಣ್ಣಾ ನಿಮು ದಾಸಾರು ಎಣ್ಣೆ ಬಾನಾ ಉಂಡು
ಸಣ್ಣಾ ಭೂತಾಳ ಕೈಯಲಿಡುದೇ | ಮುಡಾನಾಡ
ಅಣ್ಣಗಾಡಾರೆ ಆರಿಸಾವೆ ||ಜಲ ಜಲದೆ||

ಎಕ್ಕಿಯ ಎಲೆ ಹಾಸಿ ಇಕ್ಕಾರೆ ಬೆಲ್ಲಾವೋ
ಇಪ್ಪತ್ತಾಲದ ಸಸಿ ನೆಟ್ಟು | ಪಾಲಯ್ಯ
ಸಿಕ್ಕಾ ದಾಸುರಿಗೆ ನ್ಯಾರುಳಾಗಿ ||ಜಲ ಜಲದೆ||

ಆಲಾದ ಎಲಿ ಹಾಸಿ ನೀಡ್ಯಾರೋ ಬೆಲ್ಲಾವೋ
ಹನ್ನೋದಾಲಾದ ಸಸಿ ನೆಟ್ಟು | ಪಾಲಯ್ಯ
ಸಣ್ಣ ದಾಸರಿಗೇ ನ್ಯಾರುಳಾಗಿ ||ಜಲ ಜಲದೆ||

ಅಪ್ಪ ನಿಮು ದಾಸಾರು ತುಪ್ಪ ಬಾನಾ ಉಂಡು
ಸಣ್ಣಾ ಭೂತಾಳ ಕೈಯಲಿಡುದೇ | ಮುಡಾನಾಡ
ಅಣ್ಣಾಗಾಡಾರೇ ಆರಿಶಾವೇ ||ಜಲ ಜಲದೆ||

ಹೊನ್ನೀನಾ ಉರುಮೆಕ ಇನ್ನೆಲ್ಲಿ ವೊಯಿಸಾರೆ
ಸಣ್ಣಗೋಸಿ ಕ್ಯಾರೀ ವಾಳಿಯಾಲಿ | ಬಗುತಾರೂ
ಹೊನ್ನು ಕೊಟ್ಟೆ ಉರುಮೆ ವೋಯಿಸಾರೇ ||ಜಲ ಜಲದೆ||

ಮುತ್ತೀನಾ ಡಗಮು ಮತ್ತೆಲ್ಲಿ ವೋಯಿಸಾರೆ
ಸಿಕ್ಕಗೋಸೀ ಕ್ಯಾರೀ ವಾಳಿಯಾಲಿ | ಬಗುತಾರು
ಮುತ್ತು ಕೊಟ್ಟು ಡಗಮು ವೋಯಿಸಾರೆ ||ಜಲ ಜಲದೆ||

ಆಸಿಲಿ ಗಡ್ಡಿಗಂಗಿ ಈಸಲ ಗಾಡ್ಡಿಗೆ ಬಾರೆ
ಆಕಾಸುದು ಗಂಗೀ ತೆರೀ ಹೊಯ್ಯೋ | ಪಾಲಯ್ಯ
ಹಾವೀನಾ ಹಿಂಡು ಕಡೀಯಾಸೆ ||ಸೋಬಾನಾವೇ||

ಇಂದುಲ ಗಡ್ಡೀ ಗಂಗೀ ಮುಂದಲ ಗಡ್ಡಿಗೆ ಬಾರೆ
ಅಂಬಾರುದ ಗಂಗೀ ತೆರೀ ಹೊಯ್ಯೇ | ಪಾಲಮ್ಮ
ಆವಿನ ಹಿಂಡೇ ಕಡೀಯಾಸೆ ||ಸೋಬಾನಾವೇ||

ಬಾಳೇ ಹಣ್ಣೀನಂಗೆ ಬಾಗಿರವೋ ಗಂಗಮ್ಮ
ತಾವೇ ಕೊಡು ನಮ್ಮ ಒಡೀಯಾ | ಪಾಲಯ್ಯಗೆ
ಬಾಳೀಯ ಹಣ್ಣು ಶಿವಾ ಪೂಜೆ ||ಸೋಬಾನಾವೇ||

ನಿಂಬೆ ಹಣ್ಣೀನಂಗೆ ತುಂಬಿರುವ ಗಂಗಮ್ಮ
ಇಂಬೇ ಕೊಡು ನಮ್ಮ ಒಡೀಯಾ | ತಿಪ್ಪೇನೂರು
ನಿಂಬೆಯ ಹಣ್ಣು ಶಿವಾ ಪೂಜೆ ||ಸೋಬಾನಾವೇ||

ಹಿಂಡು ಹಾವಿನ ಗೊಲ್ಲ ಮುಂದೆ ಬಾರೋ ಪಾಲಯ್ಯ
ಕೆಂದೋರಿ ಬೆನ್ನ ವರಸೂತಾ | ತಿಪ್ಪೇನೂರು
ಕಂದಮ್ಮಾಳಾನೆ ಒರಾಗೂಡೋ ||ಸೋಬಾನಾವೇ||

ಎತ್ತು ಹಾವಿನ ಗೊಲ್ಲ ಮುಂದೆ ಬಾರೋ ಪಾಲಯ್ಯ
ಬಟ್ಟೋರಿ ಬೆನ್ನೇ ವರಾಸುತಾ | ತಿಪ್ಪೇನೂರು
ಪುತ್ರಮ್ಮಳಾನೇ ವರಾಗೂಡೋ ||ಸೋಬಾನಾವೇ||

ಜಾಜೀ ಅನ್ನೋ ಹೂವು ನಾರೀ ಮಂಚುಕೆ ತುಂಬಿ
ನಾನೂರು ದೀಪ ಪಟಾ ಮಾಡೆ | ಅಜ್ಜಾಮಲ್ಲಿ
ನಾನೂರು ಲಿಂಗ ಸಯಾವಾಗೇ ||ಸೋಬಾನಾವೇ||

ಮಲ್ಲಿಗೆ ಅನ್ನೋ ಹೂವು ಕನ್ನೇ ಮಂಚುಕ ತುಂಬಿ
ಮುನ್ನೂರು ದೀಪ ಪಟಾ ಮಾಡಿ | ಅಜ್ಜಾ ಮಲ್ಲಿ
ಮುನ್ನೂರು ಲಿಂಗ ಸಯಾವಾಗಿ ||ಸೋಬಾನಾವೇ||

ರಾಯರಿಗೆ ರಾಜ ಬೀದಿ ಪಾಲಯ್ಯ
ತಾ ಬರುವ ತೇರು ಬೀದಿ

ಅರುಗೀದಾ ಹೊಲುದಾಗೆ ಸುರುಹೊನ್ನಿನ ಗಿಡುದಾಗೆ
ಬಳಿಯಾರಜ್ಜುಣದ ಬಯಲಾಗೆ | ಪಾಲಯ್ಯ
ಉರುಮೀಯಾ ಸಾಲು ನ್ಯಾಡುದಾನೇ ||ರಾಯರಿಗೆ||

ಬಿತ್ತಿದಾ ಹೊಲುದಾಗೆ ಉತ್ರಾಣೀ ಗಿಡುದಾಗೆ
ಬಿಟ್ಟಾರಜ್ಜುಣದ ಬಯಲಾಗೆ | ಪಾಲಯ್ಯ
ಸತ್ತುರಿಕೆ ಸಾಲು ನ್ಯಾಡುದಾನೆ ||ರಾಯರಿಗೆ||

ಆಲುದ ಕಾಯಂಗೆ ತೋಳ ತುಂಬಾ ಗೆಜ್ಜೆ
ವಾಲುಗುದ ನಡುವೇ ಬರುವೋರೇ | ಪಾಲಯ್ಯನ
ವಾಲುಗದರೆಂತ ದೋನುಕೋರೇ ||ರಾಯರಿಗೆ||