ಸೂರ್ಯೇ ಸೆಂದುರುನಂಗೆ ಹುಟ್ಟ್ಯಾನು ಬೊರುವಯ್ಯ
ಉಕ್ಕೆದಾ ಬಾಣ ಉರೀ ಬಾಣ ಕಾಯೀ ದರುಸೇ ಕೈಲಾಸಾದ
ಸ್ವಾಮಿ ಬಂದು |

ಉಕ್ಕಿದಾ ಬಾಣಾ ಉರೀಬಾಣ ಬೋರೂವಯ್ಯ
ಹುಟ್ಟ್ಯಾನೇ ಗೋವಾ ಮರುದಾಗೆ | ಕಾಯೀ
ದರುಸೇ ಕೈಲಾಸಾದ ಸ್ವಾಮೀ ಬಂದು

ಸಿನ್ನಾದ ಗೋಪುರಾವಾ ಇನ್ನ್ಯಾರು ನಿಲಿಸಾರೆ
ಸಣ್ಣ ನಾಯಕನಟ್ಟೀ ದ್ವರೀಗಾಳು | ಬೋರಯ್ಯಗೆ
ಸಿನ್ನದು ಗೋಪುರವ ನಿಲಿಸಾರೆ || ಕಾಯಿ ದರುಸೇ ||

ಮುತ್ತೀನ ಗೋಪುರಾವಾ ಮತ್ತ್ಯಾರು ನಿಲಿಸಾರೆ
ಸಿಕ್ಕ ನಾಯಕನಟ್ಟಿ ದ್ವರೀಗಾಳು | ಬೋರಯ್ಯಗೆ
ಮುತ್ತೀನ ಗೋಪುರವ ನಿಲಿಸಾರೆ || ಕಾಯಿ ದರುಸೇ ||

ಅತ್ತೀ ಅನ್ನೋ ಮರುಕೆ ಹತ್ತ್ಯೋಗೊ ಸರುಪಾನ
ಪುಕ್ಕಾವಾ ಇಡುದೇ ನ್ಯಲಾಕೊಡುದೆ | ಪಾಂಡವ ಪಡುಗ
ಉತ್ತಾ ಕೋಗೆಂದೇ ಕಳುವ್ಯಾರೆ || ಕಾಯಿ ದರುಸೇ ||

ಆಲು ಆದ ಮರುಕೆ ಏರ್ಯೋಗೋ ಸರುಪಾನ
ನಾಲೀಗೆ ಇಡುದೆ ನ್ಯಲಾಕೊಡುದು | ಪಾಂಡವ ಪಡುಗ
ತಾವೇ ಗೋಗೆಂದು ಕಳೂವ್ಯಾರೆ || ಕಾಯಿ ದರುಸೇ ||

ಸುಣ್ಣಾದ ಗ್ವಾಡೀಗೆ ಬಂದು ನಿಂತಿರುವೋರೆ
ಕಿನ್ನೂರೀ ನಾಗಾ ಸರದೊರು | ಬೋರೂವಯ್ಯ
ಸಿನ್ನಾಟ ಬ್ಯಾಡ ಇಡೀ ಜೋಗಿ || ಕಾಯಿ ದರುಸೇ ||

ಬಣ್ಣಾದ ಗ್ವಾಡೀಗೆ ಬಂದು ನಿಂತಿರುವೋರೆ
ಮತ್ತೀಬ್ಬಾರಾರೇ ಹೊಸಬಾರು | ಬೋರೂವಯ್ಯ
ಏರೀಗ್ಗೆ ನಾಗಾ ಸರಾದೋರು || ಕಾಯಿ ದರುಸೇ ||

ಕಾಸೀಯ ಕೊಯ್ದಾರೆ ಮೀಸೆ ತಿರುವಯ್ಯಾರೆ
ಜೊಗೋರೆಂಬೋರು ಇವಾರೇನೆ | ಬೋರೂವಯ್ಯ
ಜೋಗೆರಿಗೇ ಮಿಂಡಾ ಭಯಾರುಂಡಾ || ಕಾಯಿ ದರುಸೇ ||

ಹಳ್ಳಾದಾಗೇ ಒಬ್ಬ ಕಳ್ಳಾ ಕುಂತ್ತೈದಾನೇ
ವಳ್ಳೊಳ್ಳೇ ಹೆಣ್ಣೇ ಬರಾದೋರೆ | ಬೊರೂವಯ್ಯ
ಕಳ್ಳಾ ಕಂಡಾರೆ ಬಿಡಾನಿಮ್ಮಾ || ಕಾಯಿ ದರುಸೇ ||

ಬೆಂಚಾಲಾಗೇ ಒಬ್ಬ ಕೆಂಚಾ ಕುಂತ್ತೈದಾನೆ
ಕೆಂಪನ್ನಾ ಹೆಣ್ಣೇ ಬರಾದೀರೆ | ಬೋರೂವಯ್ಯ
ಕೆಂಚಾ ಕಂಡಾರೆ ಬಿಡಾನಿಮ್ಮಾ || ಕಾಯಿ ದರುಸೇ ||

ಗುಂಡೂ ಕಲ್ಲಿನ ಮ್ಯಾಲೆ ತಂದುಂಡರು ಬುತ್ತೀಯ
ಖಂಡುಗದ ಜಡಿಗಾಳು ಕೊಡುವುತ | ಬೋರೂವಯ್ಯ
ಕಂಡೇವೇ ಗೋವೂ ಮರುದಾಗೆ || ಕಾಯಿ ದರುಸೇ ||

ಸಾಣೀಗಲ್ಲಿನ ಮ್ಯಾಲೆ ತೋರುಂಡರು ಬುತ್ತೀಯ
ನಾಗಾಳುದ ಜಡಿಗಾಳು ಕೊಡಾವುತ | ಬೋರೂವಯ್ಯ
ನೋಡೇವೇ ಗೋವಾ ಮರೂದಾಗೆ || ಕಾಯಿ ದರುಸೇ ||

ಮಲ್ಲಿಗನ್ನಾ ಬೀಜ ಎಲ್ಲೀ ಸೆಲ್ಲಿದರೇನೇ
ಹಳ್ಳಾಕೊಳ್ಳದಲೆ ಸಸೀನೆಟ್ಟಿ | ಬೋರೂವಯ್ಯ
ನೋಡೇವೇ ಗೋವಾ ಮರೂದಾಗೆ || ಸೋಬಾನವೇ ||

ಉತ್ತಾ ಉತ್ತೀ ಬೀಜ ಎತ್ತಾ ಸೆಲ್ಲಿದರೇನೇ
ಅತ್ತಾ ಕೊತ್ತದಲೇ ಸಸೀನೆಟ್ಟಿ | ಬೋರುವಯ್ಯ
ಎತ್ತಾ ನೋಡಿದರೇ ನೀರವೋಣಿ || ಸೋಬಾನವೇ ||

ವದ್ದೀ ಕೊರೀಲಿಂದಾ ಸಿದ್ಧರು ಬಂದೈದಾರೆ
ಹೆಜ್ಜೆಜ್ಜಿಗೆ ಬಂಗೀ ಕಿಡೀ ಬಂಗೀ | ಕುಡುವೊರೇ
ಸಿದ್ಧಾರೆಂಬೋರು ಇವಾರಾನೇ || ಸೋಬಾನವೇ ||

ಹೇಮಾವತೀಲಿಂದ ಜೋಗ್ಯರು ಬಂದೈದಾರೆ
ಜಾವಾ ಜಾವಾಕ್ಕೆ ಕಿಡೀ ಬಂಗೀ ಕುಡುವೊರೇ
ಜೋಗ್ಯಾರೆಂಬೋರು ಇವಾರೇನೇ || ಸೋಬಾನವೇ ||

ಕಾಸೀ ಹಾಕೈಯ್ದಾರೆ ಮೀಸೆ ತಿರುವಯ್ದಾರೆ
ಗುದ್ದೀನಾ ಸೀಲ ಬಗೂಲಾಗೆ | ಇಟ್ಟೂಕೊಂಡು
ಜೋಗ್ಯರೆಂಬೋರು ಇವಾರೇನೆ || ಸೋಬಾನವೇ ||

ಜೋಗಿ ಜೋಗ್ಯರಿಗೆಲ್ಲಾ ಓದ್ಯಾವು ಕಲಿಸ್ಯಾರೆ
ಓದಿನ ಸೀಲಾ ಬಗೂಲಾಗೆ | ಇಟ್ಟುಕೊಂಡು
ಜೋಗ್ಯರೆಂಬೋರು ಇವಾರೇನೆ || ಸೋಬಾನವೇ ||

ಸಿದ್ಧಾಸಿದ್ಧರಿಗೆಲ್ಲ ಇದ್ದೇವು ಕಲಿಸ್ಯಾರೆ
ಉದ್ದೀನಾ ಸೀಲಾ ಬಾಗುಲಾಗೆ | ಇಟ್ಟುಕೊಂಡು
ಸಿದ್ಧರೆಂಬೋರು ಇವಾರೇನೆ || ಸೋಬಾನವೇ ||

ದೊಡ್ಡಾ ದೊಡ್ಡಾ ಜೋಗಿ ದೊಡ್ಡ ಪಾತುರ ಜೋಗಿ
ದೊಡ್ಡಾ ಮರುದಾಗೆ ಪಡೀಗಾಳು | ತಂದೈದೇನೆ
ಇಡ್ಡಾಟ ಬ್ಯಾಡ ಈಡೀ ಜೋಗಿ || ಸೋಬಾನವೇ ||

ಸಣ್ಣಾ ಸಣ್ಣಾ ಜೋಗಿ ಸಣ್ಣಾ ಪಾತುರ ಜೋಗಿ
ಸಣ್ಣಾ ಮರುದಾಗೆ ಪಡೀಗಾಳು | ತಂದೈದೇವಿ
ಸಿನ್ನಾಟ ಬ್ಯಾಡ ಇಡೀ ಜೋಗಿ || ಸೋಬಾನವೇ ||

ಅಟ್ಟ್ಯಾಗಳಾ ಕಸುವಾ ಅತ್ತಾ ಗುಡಿಸೋ ಹೆಣ್ಣೇ
ಅತ್ತೈದಾಳೇನೆ ಮನೀಯಾಗೆ | ಸೋಬಾನವೇ |
ಬಿಕ್ಷಕೆ ಬಂದಾ ಜೋಗಿ ಬಿಕ್ಷಾ ನೀಡಿಸಿಕೊಳ್ಳೋ
ಅತ್ತೆಮ್ಮನ್ನ ಗೋಡವೀ ನಿಮೀಗ್ಯಾಕೋ

ಓಣಿಯಾಗಳು ಕಸುವಾ ಅಯಾ ಗುಡಿಸೋ ಹೆಣ್ಣೇ
ಮಾವಾ ಐದಾನೇನೇ ಮಾನೀಯಾಗೆ ಸೋಬಾನಾವೆ
ದಾನ್ಯಕೆ ಬಂದಾ ಜೋಗಿ ದಾನ್ಯಾ ನೀಡಿಸಿಕೊಳ್ಳೋ
ಮಾವಯ್ಯನ ಗೊಡವೀ ನೀಮೀಗ್ಯಾಕೋ | ಸೋಬಾನಾವೇ |

ಹಟ್ಟೀ ಹಟ್ಟೀ ಗುಂಟಾ ವಾರಾದಯ್ಯಾ ಬಂದಾ
ನಾನೇನು ನೀಡಲೋ ಬಡೀವಯ್ಯ | ಸಣಿವಾರದ
ಹಾಲು ನೀಡೇನಿ ಸಾಲುಸಯ್ಯ || ಸೋಬಾನವೇ ||

07_84_MDK-KUH

ಕೆಂದನ ಗುದುರೀ ಏರೀ ಬಂದನು ಬೋರೂವಯ್ಯ
ಕೆಂಗೂರೀ ಕಣ್ಣು ತೀರಾವೊತು | ಬೋರೂವಯ್ಯ
ಕೆಂಗಾಲಾಗಿಳದಾ ಕೂದಾರೀಯಾ || ಸೋಬಾನವೇ ||

ಅಪ್ಪುಗಳು ದೇವರಿಗೆ ಒಪ್ಪಿದ ಮಗಳೂ ನಾನು
ತುಪ್ಪಾ ಮೀಸಾಲು ಕಾಳೀವೇನೆ | ಗುಡಿಯಾ ಮುಂದೆ
ವ್ರಕ್ಕಾ ಸೂರ್ಯಾಡೀ ಬಾರೂವೇನೇ || ಸೋಬಾನವೇ ||

ಅಣ್ಣಾಗಳು ದೇವರಿಗೇ ಎಣ್ಣೂ ಮಗುಳೂ ನಾನು
ಅಣ್ಣೇ ಮೀಸಾಲು ಕಳೂವೇನೆ | ಗುಡಿಯಾ ಮುಂದೆ
ವನ್ನೇ ಸೂರ್ಯಾಡಿ ಬರೂವೇನೆ || ಸೋಬಾನವೇ ||

ತವರೂರು ದೇವರಿಗೇ ತಪ್ಪುದಲೇ ನಾನೋದೆ
ವಪ್ಪತ್ತೀಲೂಟ ಬರೀಗಾಲು | ಬೋರಯ್ಯ
ವಪ್ಪೀಸಿಕೊಳ್ಳೋ ಮಗೂಳರಕೆ || ಸೋಬಾನವೇ ||

ವಪ್ಪೀಸಿಕೊಳ್ಳೋಕೇ ಎತ್ತಲ್ಲ ಎಮ್ಮೆಲ್ಲ
ಸುತ್ತೀ ಬಾರಮ್ಮಾ ಪಗಳೀಯ | ಬಾಗಲು ಮುಂದೆ
ಇಕ್ಕಿರುವ ಮಗುಳ ಹೆಸರೇಳು || ಸೋಬಾನವೇ ||

ಮಗುಳೆಸರು ಮಲ್ಲೀಗೆ ನನ್ನೆಸರು ಕ್ಯಾದೀಗೆ
ಸತಿಪುರುಷಾರೆಸರು ರಾವಾರತುನಾ | ಹಿಂದೇ ಬರುವಾ
ಕುದರೀಯ ಹೆಸರು ಗಾರೂಡಾಳು || ಸೋಬಾನವೇ ||

ಆಯ್ತು ವಾರಾದಯ್ಯ ಹಾವು ಸೀಳೇನಯ್ಯ
ಗುರುವೇ ಹಾವು ಸೀಳೇನಯ್ಯಾ | ಯಾರೂ
ಐದೀರಯ್ಯ ಗುಡಿಯಾಗೇ ಗುರುವೇ

ಆಲೇನೇ ತಂದೇನಿ ಸಲೂಸಯ್ಯ
ಆಲೇನೇ ತಂದಾರೇ ಕಾಯೆಲ್ಲಿ ಕಾಸೆಲ್ಲಿ
ನೀವೂ ಸಚ್ಚಾಲಡದ ಮಗನೆಲ್ಲಿ | ಗದ್ದಿಗೆ ಮ್ಯಾಲೆ
ಬಾಲಮ್ಮನ ಮಂಡಿ ತಾಗೀಸೇನಿ || ಗುರುವೇ ||

ಬಿಂದೀಗಾಲು ಕರುದು ತಂದೇಗೆ ಮೀಸಾಲು
ಅಂಜುದುಲೇ ನಾನು ಬಾಳಿಸೇನಿ | ಬೋರಯ್ಯ
ಕಂಡಾನೇ ತಾಪ್ಪುಗಳು ಕಾಡಿಯಾಸೊ || ಗುರುವೇ ||

ಅರಿಣೀಲಾಲು ಕರುದು ಗುರುವೀಗೆ ಮೀಸಾಲು
ಆರಿಯದಲೇ ನಾನು ಬಾಳೀಸೇನೆ | ಬೋರಯ್ಯ
ಸರ್ವಾನೇ ತಾಪ್ಪುಗಳು ಕಾಡಿಯಾಸೋ || ಗುರುವೇ ||

ಸರ್ವಾ ತಪ್ಪೂ ಮಾಡಿ ಸ್ವಾಮೀಯ ಮರೀ ಬಿದ್ದೆ
ಸೂರಾ ಹೊನ್ನಿನಿದಾಗೆ ಅಡಿಕೇ ಗೊನಿಯಾ ಮುರುದು
ಸ್ವಾಮೀನೇ ಬೋರಯ್ಯನ ಮರೀ ಬಿದ್ದೇ || ಗುರುವೇ ||

ಎಡಗೈಯಾಲಕ್ಕೀ ಹೊಯ್ಯೆ ನಾನು ಗಡಿಗೇಲಾಲು ಹೊಯ್ಯೇ
ಮಜ್ಜಣಕ್ಕೇ ಒಯ್ಯೇ ಮಗೀ ಹಾಲು
ಎಡಗೈಲಿ ಬಾಳೀ ಹಣ್ಣು ಗಡಿಗೇಲಿ ಹಾಲು ಮಸರೂ
ವಡದಾಡಿ ಮೀಸಾಲು ವರಾಟಾವು | ದ್ಯಾವರ ಹಟ್ಟಿ
ವಕ್ಕಾನೇ ಬೋರಯ್ಯನ ಗುಡಿಯಾಕೆ || ಗುರುವೇ ||

ಆಯ್ತುವಾರದ ಆದಿ ಬೋರೂವಯ್ಯ
ಆಲೂ ಎಂಜಾಲಯ್ಯ ಕರಾವುಂಡೇ | ಬೋರಯ್ಯ
ಅಣ್ಣು ಎಂಜಾಲಯ್ಯ ಗಿಣೀಮುಟ್ಟಿ ಕ್ವಾದಾಪುರದ
ಗಿಣಿ ಮುಟ್ಟಿ ಕ್ವಾದಾಪುರದ
ನೀರೂ ಎಂಜಾಲಯ್ಯ ಜಾನಾ ಬಳಸಿ

ಕ್ಯರಿಯಾಗೇ ಕೆಂದೂಳಾ ಬರಿಯಾ ನೆಗ್ಗಿಲಿ ಮುಳ್ಳು
ಬಾರುಲಾಕೇನಯ್ಯ ಗಿರೀ ದೂರ | ನಿಮ್ಮರಿಕೆ
ಬಾರೂವೋರೇ ಕೂಟೇ ಕಾಳೀವೇನೆ

ಬಿಂದಿಗಾಲು ಕರವೋ ಸೆಂದ್ರಮ್ಮಿ ಗಿಡ್ಡಿಯಾ
ತಂಗೇನೇ ಬೇಡ್ಯಾಳೆ ಬಾಳಾವೋಲೆ | ಬೋರಯ್ಯ
ಮಕ್ಕಳಾ ತಾಯಿ ವಡಾ ಕೊಡೂ || ಗುರುವೇ ||

ಮಕ್ಕಾಳಾಲು ಕರವೋ ಸಿಕ್ಕೆಮ್ಮಿ ಗಿಡ್ಡೀಯಾ
ಅಕ್ಕಾನೇ ಬೇಡ್ಯಾಳೆ ಬಾಳಾವೋಲೇ | ಬೋರಯ್ಯ
ಮಕ್ಕಾಳಾ ತಾಯಿ ವಡಾ ಕೊಡುವೆ || ಗುರುವೇ ||

ಅಡಕೀಯ ವಂಬಾಳೆ ವಪ್ಪೀಕೋ ಬೋರಯ್ಯ
ಎತ್ತೀನಾ ಮುಂದೇ ಮಗಾ ಬಂದಾ | ನಿಂತಾರೆ
ರಪ್ಪಾದ ನಿಧಿಯೂ ವೋಯಿಸೇನೇ || ಗುರುವೇ ||

ಆವಿನಾ ಕೊಂಬೀನಂಗೇ ಏರೀ ಬಂದಾವ್ ರಾಶಿ
ಅಚ್ಚಡನಾಸೀ ಶರಣನ್ನೇ | ಬೋರಯ್ಯಗೆ
ಗೋವೀನಾಲಾದುಲುಸು ನಾಮದಂದೇ || ಗುರುವೇ ||

ಬತ್ತಿ ಕೊಂಬೀನಂಗೇ ಅತ್ತೀ ಬಂದಾವ್ ರಾಶಿ
ಅಚ್ಚಾಡನಾಸೀ ಶರಣನ್ನೇ | ಬೋರಯ್ಯಗೆ
ಗೋರೂ ಆಲಾದುಲುಸು ನಮಾದಂದೇ || ಗುರುವೇ ||

ಅರವತ್ತು ಗಾವುದಲೇ ಇರನಲ್ಲಿ ಗೋವಿಂದ
ಬರಾನಲ್ಲೇ ನನ್ನ ಸಾಪುನಾಕೆ | ಕ್ವಾದಾಪುರದ
ಬರಾನಲ್ಲೇ ನನ್ನ ಮನಾದಾಗೇ || ಗುರುವೇ ||

ಕಾಯೀ ದರುಸೇ ಕೈಲಾಸಾದಾ ಸ್ವಾಮೀ ಬಂದು

ರಾಗೀ ರಾಗೀ ಪೂಜಿ ರಾಗಿ ರನ್ನದು ಪೂಜೆ
ರಾಯರು ಕಟ್ಟಿಸಿದಾ ವಸಾಪೂಜೆ | ಬೋರೂವಯ್ಯ
ರಾಯಾರಿನ್ನೆಂತಾ ದನೂಕೋರೆ || ಕಾಯೀ ದರುಸೇ ||

ಅಕ್ಕೀ ಅಕ್ಕೀ ಪೂಜೀ ಅಕ್ಕಿ ರನ್ನಾದ ಪೂಜಿ
ವಕ್ಕಲು ಕಟ್ಟಿಸಿದಾ ವಸಾ ಪೂಜೀ | ಬೋರೂವಯ್ಯ
ವಕ್ಕಾಲಿನ್ನೆಂತಾ ದನೂಕೋರೆ || ಕಾಯೀ ದರುಸೇ ||

ದೊಡ್ಡೊರು ಬರುತಾರೆ ಎದ್ದು ನೋಡೋ ಬೋರಯ್ಯ
ಎದ್ದಾಗಣ್ಣಿನಾ ದ್ವರೀಗಾಳು | ಬರುತಾರೆ
ಎದ್ದು ನೋಡೋ ಗಾರೀ ಮಟಾದಯ್ಯ || ಕಾಯೀ ದರುಸೇ ||

ಸಣ್ಣಾರು ಬರುತಾನೆ ನಿಂತು ನೋಡೋ ಬೋರಯ್ಯ
ದಿಂದಿ ಗೊನ್ನೀನಾ ಗವೂಡಾರು | ಬರುತಾರೆ
ನಿಂತು ನೋಡೋ ಗಾರೀ ಮಟಾದಯ್ಯ || ಕಾಯೀ ದರುಸೇ ||

ಬಾಗಾಲು ಕಟ್ಟದಯ್ಯಗೆ ಬಾಳೇ ಹಣ್ಣು ಕೊಡುವೆ
ಮ್ಯಾಲೆ ಜೋಳಿಗೇ ಹಣಾ ಕೊಡುವೆ | ಬೋರಯ್ಯ
ಬಾಗಾಲ ಕಟ್ಟಿದಾ ಬಾಡಾಗೀಗೆ || ಕಾಯೀ ದರುಸೇ ||

ವಸ್ತುಲ ಕಟ್ಟಿದಯ್ಯಾಗೆ ಉತ್ತುತ್ತಣ್ಣಾ ಕೊಡುವೇ
ಮತ್ತೆ ಜೋಳೀಗೆ ಹಣಾಕೊಡುವೇ | ಬೋರಯ್ಯ
ವಸ್ತುಲ ಕಟ್ಟಿದಾ ಬಡಾಗೀಗೆ || ಕಾಯೀ ದರುಸೇ ||

ಎಲಿಯಾ ಪೂಜೆ ಮಾಡಿ ಬೊಳ್ಳೆರಡು ನೊಂದಾವೇ
ಸಣ್ಣನು ಪೂಜಾರೀ ಸ್ಯದಿರಾನೆ | ಬೋರಯ್ಯ
ಹೋಗಿ ತೂಗ್ಯಾನೇ ವಸಾ ಗಂಟೀ || ಕಾಯೀ ದರುಸೇ ||

ಅಕ್ಕಿ ಪೂಜೇ ಮಾಡಿ ಬೊಳ್ಳೆರಡು ನೊಂದಾವೇ
ಸಿಕ್ಕನು ಪೂಜಾರೀ ಸ್ಯದಿರಾನೆ | ಬೋರಯ್ಯ
ವೊಕ್ಕೀ ತೂಗ್ಯಾನೇ ವಸಾ ಗಂಟೀ || ಕಾಯೀ ದರುಸೇ ||

ವಡಿಯಾ ಟೆಂಗಿನ ಕಾಯಿ ಇಡಿಯಾ ಟೆಂಗಿನಾಕಾಯಿ
ಬಡವಾರು ತಂದ ಎಳಿಗಾಯಿ | ಬೋರಯ್ಯ
ತೋಳೇ ಈಡಾಡಿ ವಡೂದಾರೆ || ಕಾಯೀ ದರುಸೇ ||

ಇಡಿಯಾ ಟೆಂಗಿನಕಾಯಿ ಒಡಿಯಾ ಟೆಂಗಿನ ಕಾಯಿ
ವಕ್ಕಾಲು ತಂದು ವಸೂಗಾಯಿ | ಬೋರಯ್ಯ
ರಟ್ಟೇ ಈಡಾಡಿ ವಡೂದಾನೆ || ಕಾಯೀ ದರುಸೇ ||

ದೂಪದ ವಗಿ ಹೊಗಿ ಆಕಾಸುಕೆ ಮುಟ್ಟ್ಯಾವೇ
ಆತ ಬೋರಯ್ಯನಾ ಶಿವಾಪೂಝೆ | ಆಗಲು ವತ್ತಿಗೆ
ಆಕಾಸದ ಘಂಟೆ ಡಣಾಲಂದೇ || ಕಾಯೀ ದರುಸೇ ||

ಅಂದಾದ ವಗೀ ಹೋಗಿ ಅಂಬಾರಕೆ ಮುಟ್ಟ್ಯಾವೇ
ತಂದೇ ಬೋರಯ್ಯನಾ ಶಿವಪೂಜೆ | ಆಗುಲುವತ್ತೀಗೆ
ಅಂಬಾರದು ಗಂಟೇ ಡಣಾಲಂದೇ || ಕಾಯೀ ದರುಸೇ ||

ಹೂವೂ ಇಲ್ಲವೆಂದು ಹೂವಿಗೆ ಹೋಗಲದಿರು
ಹೂವೇ ಬೋರಯ್ಯನಾ ಗುಡೀ ಹಿಂದೆ | ಸೂರ್ಯೇಕಾಂತಿ
ಹೂವುಗಳು ಬಾಯಿ ಬಿಡುತಾವೇ || ಕಾಯೀ ದರುಸೇ ||

ಮೊಗ್ಗೇ ಇಲ್ಲಾವೆಂದು ಮೊಗ್ಗಿಗೆ ಹೋಗಲದೀರು
ಮೊಗ್ಗೇ ಬೋರಯ್ಯನ ಗುಡೀ ಹಿಂದೆ | ಸೂರ್ಯೇಕಾಂತಿ
ಮೊಗ್ಗರಳೀ ಬಾಯೀ ಬಿಡೂತಾವೇ || ಕಾಯೀ ದರುಸೇ ||

ಆಯವುಳ್ಳ ತ್ವಾಟಕ್ಕೆ ಸೇಯವುಳ್ಳೇಣೀ ಹಾಕೀ
ಸಾದೀನಚ್ಚಾಡಾ ಮಡಾಲೋಡ್ಡಿ | ಬೋರಯ್ಯ
ಸ್ವಾಮೀಗೇ ಹೂವು ಕೂಯಿದಾನೇ || ಕಾಯೀ ದರುಸೇ ||

ಅಂದವುಳ್ಳ ತ್ವಾಟಕ್ಕೆ ಸೆಂದವುಳ್ಳೇಣಿ ಹಾಕೀ
ಗಂಜಿನಚ್ಚಾಡಾ ಮಡಾಲೊಡ್ಡಿ | ಬೋರಯ್ಯ
ತಂದೀಗೆ ಹೂವು ಕೊಯಿದಾನೆ || ಕಾಯೀ ದರುಸೇ ||

ಅಲ್ಲೀ ಇಲ್ಲೀ ಹೂವ ವಲ್ಲಾನೇ ಬೋರಯ್ಯ
ಅಲ್ಲಿ ಕ್ವಾದಾಪುರದಾ ಅಳೀಗೇಲಿ | ಕಲ್ಲೇದುವ್ವಾ
ಮಲ್ಲಿಗೆ ಸರವೊಂದೇ ಮುಡೂದಾರೆ || ಕಾಯೀ ದರುಸೇ ||

ಅತ್ತಾ ಲಿತ್ತಾ ಹೂವು ವಪ್ಪಾನೇ ಬೋರಯ್ಯ
ಮತ್ತೆ ಕ್ವಾದಾಪುರದಾ ಅಳೀಗೇರಿಲಿ | ಕಲ್ಲೇದುವ್ವಾ
ಮುತ್ತಿನ ಸರವೊಂದೇ ಮುಡೂದಾರೆ || ಕಾಯೀ ದರುಸೇ ||

ದಾಸೀವಾಳಾದ ಬಾಸೀ ಮಟ್ಟೇ ಕಟ್ಟಿ
ದಾಸಾರ ಕೂಟೇ ಕಳಿವೇನೆ | ಬೋರಯ್ಯ
ಸ್ವಾಮೀ ಬೋರಯ್ಯಾಗೆ ಉಲಾಪೀಯ || ಕಾಯೀ ದರುಸೇ ||

ಮಧ್ಯನುದಾ ಮಲ್ಲಿಗೆ ನಿಂತು ಮಟ್ಟೇ ಕಟ್ಟಿ
ಸಂಪನ್ನರ ಕೂಟೇ ಕಳೀವೇನೇ | ಬೋರಯ್ಯ
ಸ್ವಾಮಿ ಬೋರಯ್ಯಗೆ ಉಲಾಪೀಯ || ಕಾಯೀ ದರುಸೇ ||

ಪೂಜಾರಿ ತಂದಾ ಹುವು ಪೂಜೆಗೆ ಸಾಲಾವಂದು
ಸ್ವಾಮೀ ಬೋರಯ್ಯ ಮನಾಮುನುದೇ | ಬೋರಯ್ಯ
ವೋಗೀ ವಂಬಾಳೇ ಕಡಿಸಾನೆ || ಕಾಯೀ ದರುಸೇ ||

ವಕ್ಕಾಲು ತಂದಾ ಹೂವು ಪಕ್ಕಿಗೆ ಸಾಲಾವಂದು
ಅಪ್ಪಾ ಬೋರಯ್ಯ ಮನಾ ಮುನುದೆ | ಬೋರಯ್ಯ
ವಕ್ಕೀ ವಂಬಾಳೆ ಕಡೀಸಾನೆ || ಕಾಯೀ ದರುಸೇ ||

ಕಟ್ಟೀ ಮ್ಯಾಲೋಗೂತ ಎತ್ತುಗಳೂ ನೋಡುತ
ವಪ್ಪಾಕೊಂದೆಜ್ಜೇ ನ್ಯಡಾವೂತ | ಬೋರಯ್ಯ
ಅಪ್ಪಾಗೇ ಹೂವೂ ಕೋಯಿದಾನೆ || ಕಾಯೀ ದರುಸೇ ||

ಏರೀ ಮ್ಯಾಲೋಗೂತ ಯಳ್ಯೇವೂ ನೋಡುತ
ಜಾವಾಕೊಂದೆಜ್ಜೆ ನ್ಯಡಾವೂತ | ಬೋರಯ್ಯ
ಸ್ವಾಮೀಗೇ ಹೂವು ಕೋಯಿದಾನೇ || ಕಾಯೀ ದರುಸೇ ||

ದೊಡ್ಡಾ ದೊಡ್ಡಾ ಪದುವ ದೊಡ್ಡಾ ಬರಣಿಗೆ ತುಂಬಿ
ದೊಡ್ಡಾ ಮುದ್ದರಿ ಬಿಗಾದೊತ್ತಿ | ಬೋರಯ್ಯ
ದೊಡ್ಡಗೊಪ್ಪಿಸಿದೇ ಪದಾನೂರು || ಕಾಯೀ ದರುಸೇ ||

ಸಣ್ಣಾ ಸಣ್ಣಾ ಪದುವಾ ಸಣ್ಣಾ ಬರಣಿಗೆ ತುಂಬಿ
ಸಣ್ಣಾ ಮುದ್ದಾರಿ ಬಿಗಾದೊತ್ತಿ | ಬೋರಯ್ಯ
ಸಣ್ಣನಿಗೊಪ್ಪಿಸಿದೇ ಪದಾನೂರು || ಕಾಯೀ ದರುಸೇ ||

ಅಸಿಯ ವೋಳಿಗೆ ಬಿಸಿಯ ಮಾಡಿ
ತೇಲಿ ಗಮ ಗಮ ಬರುತಿದೇ
ಅಸಿಯ ವೋಳಿಗೆ ಬಿಸಿಯ ಮಾಡಿ
ತೀಡಿ ಗಮ ಗಮ ಬರುತಿದೇ
ಆರಿವಾಯಿತು ಮಾಯವಾಯಿತು
ಎನ್ನ ಬಾಗ್ಯದ ಜ್ಯೋತಿಯೇ
ಮಾಡೇ ನಂದಾ ದೀಪವಾ

ಕಣ್ಣು ಕಾಮದೆ ಎಡವಿ ಬೀಳ್ವನು ಕಾಮನೋ ಸನಿದೇವನು
ಆರಿವೋಯಿತು ಮಾಯವಾಯಿತು ಎನ್ನ ಬಾಗ್ಯದ ಜ್ಯೋತಿಯು
ಮಾಡೇ ನಂದಾ ದೀಪವಾ

ಎಣ್ಣೆ ಹಾಕದ ಬತ್ತಿಸೋಸದು ಬೆರಳು ಕೆಲಸವು ಮುಗಿಯಿತು
ಆರಿವೋಯಿತು ಮಾಯವಾಯಿತು ಎನ್ನ ಬಾಗ್ಯದ ಜ್ಯೋತಿಯು
ಮಾಡೇ ನಂದಾ ದೀಪವಾ
ಎಣ್ಣೆ ಬಸಿಯದು ಗಾಣ ತಿರುಗದು ಮೂಕಿ ಜಲ್ಮವು ನಿಂತಿದೆ

|| ಜಯನೆನ್ನಿರೀ ಜಯ ಮಂಗಳೆನ್ನಿರಿ ||

ತಾಲಿಯ ತಕ್ಕೊಂಡು ಹಾಲಿಗೆ ನಾನೋದೆ
ಹಾಲಿಗೆ ನಾನೋದೆ
ಹಾಲಿನಾಗಳಾವು ಮನಿಗಿದ್ದಾವೆ || ಈ ಊರು
ನಿಂತಾರೇ ಸ್ವಾಮಿ ಶಿವಪೂಜಿಗೆ
|| ಜಯನೆನ್ನಿರೀ ಜಯ ಮಂಗಳೆನ್ನಿರಿ ||

ಜೋಳಿಗೆ ತಕ್ಕೊಂಡು ಪತ್ರಿಗೆ ನಾನೋದೆ
ಪತ್ರ್ಯಾಗಳ ಸರ್ಪ ಮನಿಗಿದ್ದಾವೆ || ಈ ಊರು
ನಿಂತಾರೆ ಸ್ವಾಮಿ ಶಿವಪೂಜಿಗೆ
|| ಜಯನೆನ್ನಿರೀ ಜಯ ಮಂಗಳೆನ್ನಿರಿ ||

ಬಾವಿಯ ಸುತ್ತಿಕ್ಕಿ ಬಸವನ ಕೊಂದಯ್ಯಗೆ
ದೀರಾ ಮೂರುತಿ ನಮ್ಮಪ್ಪಯ್ಯಗೆ || ಗುರ್ಲೂಕಟ್ಟಿ
ನಾಗರುಗನ್ನರನ್ಯಕೈಯ ಆರುತಿ ತಂದಿತ್ತೆರೆ |
|| ಜಯನೆನ್ನಿರೀ ಜಯ ಮಂಗಳೆನ್ನಿರಿ ||

ಅಪ್ಪನಾ ಗುಡಿ ಮುಂದೆ ತುಪುಳ್ಳದಾರಿಕೆ
ನಿಸ್ತ್ರೇರು ನೆರಿಗೆ ಮುದಾರಿಡಿರೆ || ಕೈಯ್ಯಾಗಳಾ
ಮುತ್ತಿಣರುತೆ ಈ ಜಾತುನಾವೆ
|| ಜಯನೆನ್ನಿರೀ ಜಯ ಮಂಗಳೆನ್ನಿರಿ ||

ಅಣ್ಣಾನ ಗುಡಿಮುಂದೆ ಹೆಣ್ಣುಳ್ಳಾ ಜಾರಿಕೆ
ಕನ್ಯೇರು ನೇರಿಗೆ ಮೂದರಿಡಿರೆ || ಕೈಯ್ಯಗಳಾ
ಹೊನ್ನಿನ ಆರುತಿ ಈ ಜಾತೂನಾವೆ |
|| ಜಯನೆನ್ನಿರೀ ಜಯ ಮಂಗಳೆನ್ನಿರಿ ||

ಕುಂಕುಮದೆರುಡಾರುತಿ, ಕುಂಕುಮುದೆರುಡಾರುತಿ
ಕುಂತಲ್ಲಿ ಜೊತಿ ಮಾಡಿ ಕುಂತಲ್ಲಿ ಜೊತಿ ಮಾಡಿ
ಮಂದಾಗಮಾನಿ ಆರುತಿಗಾಳು ಬೆಳಾಗುವೆ
ಸ್ವಾಮಿ ನಿಮಾಗೆ |

ಅರಿಶಿಣದೇರುಡಾರುತಿ, ಅರಿಶಿಣದೇರುಡಾರುತಿ
ಅರುಸದಿಂದಾಲಿ ತಂದು ಹರನುದಿರಿದಾಲಿ ತಂದು
ಮಂದ್ಲಾಗಮಾನಿ ಆರುತಿಗಾಳು ಬೆಳುಗಾವೆ
ಸ್ವಾಮಿ ನಿಮಗೆ

ಮುತ್ತಿನೆರುಡಾರತಿ, ಮುತ್ತಿನೆರುಡಾರತಿ
ಮುತ್ತೈದರಿಡಕೊಂಡು, ಮುತ್ತೈದೈರಿದಾಕೊಂಡು
ಮಂದಾಗಮಾನಿ ಆರುತಿಗಾಳು ಬೆಳುಗಾವೆ
ಸ್ವಾಮಿ ನಿಮಾಗೆ |