ಸಂಪಾದಕ – ನಿಮ್ಮ ಹೆಸರೇನು

ಕಲಾವಿದರು – ಪಾಲಜ್ಜಿ

ಸಂ – ನಿಮ್ಮ ಹೆಸ್ರು ?

ಕ – ಪಾಪಮ್ಮ

ಸಂ – ನಿಮ್ಮ ಹೆಸ್ರು ?

ಕ – ಓಬವ್ವ

ಸಂ – ನಿಮ್ಮ ಹೆಸ್ರು ?

ಕ – ಓಬವ್ವ

ಸಂ – ನಿಮ್ಮ ಹೆಸರು ?

ಕ – ಬೋರಮ್ಮ

ಸಂ – ನಿಮಗೆಷ್ಟು ವರ್ಷ ಈಗ ?

ಪಾಲಮ್ಮ – ಎಷ್ಟು ವರ್ಷಾಗೇತಾ ಏನಾ ನಮ್ಗೇನು ಗೊತ್ತು.

ಸಂ – ಒಂದು ಎಪ್ಪತ್ತು ವರ್ಷ ಆಗಿರಬಹುದಾ ?

ಪಾಪಮ್ಮ – ಹೂಂ.

ಸಂ – ನಿಮಗೆ

ಓಬವ್ವ – ನನಗೊಂದು ನಲವತ್ತು

ಸಂ – ನಿಮಗೆ ಒಂದೈವತ್ತಾಗೈತಾ ?

ಓಬವ್ವ – ಹೂಂ…..

ಸಂ – ನಿಮಗೆ ?

ಬೋರಮ್ಮ – ಅರವತ್ತಗೈತಿ.

ಸಂ – ನಿಮ್ಮ ಯಜಮಾನ್ರೆಸರೇನು ?

ಪಾಲಮ್ಮ – ತಮ್ಮಯ್ಯ.

ಸಂ – ತೀರಿಕೊಂಡು ಹೋಗ್ಯಾರೇನು ?

ಕ – ಹೂಂ ತೀರಿ ಹೋಗ್ಯಾರೆ.

ಸಂ – ನಿಮ್ಮ ಯಜಮಾನ್ರೆಸರು ?

ಬೋರಮ್ಮ – ಓಬಯ್ಯ.

ಓಬವ್ವ – ಪಾಪಯ್ಯ.

ಓಬವ್ವ – ತಮ್ಮಯ್ಯ

ಪಾಪಮ್ಮ – ಮಲ್ಲಯ್ಯ.

ಸಂ – ಎಷ್ಟು ಜನ ಮಕ್ಳು ನಿಮಗೆ ?

ಓಬವ್ವ – ನನಗೆ ಇಬ್ರು ಗಂಡು, ಮೂವರು ಹೆಣ್ಣು.

ಸಂ – ಈಗ ಈ ಪದಾ ಹೇಳ್ತೀರಲ್ಲಾ ಇದ್ನ ನಿಮಗೆ ಯಾರು ಕಲಿಸದ್ರು ?

ಪಾ – ನಮಗೆ ನಮ್ಮಜ್ಜಿತ್ತೊಂದು ನಮ್ಮ ದೊಡ್ಡಪ್ಪನೇಣ್ತಿ – ಆ ವಜ್ಜಿ ಹೇಳ್ತಿತ್ತು. ನಾವು ಹುಡುಗರಾಗಿದ್ದಾಗ ಕಲ್ತುಗೊಂಡಿದ್ದಿವಿ. ಆ ವಜ್ಜಿ ಜತೆ ಕೆಲ್ಸಮಾಡಾಕ ಹೋಗ್ತಿದ್ವಿ. ಸಸಿ ಹಾಕೋಕೆ, ಕಳೆ ತೆಗಿಯಾಕ ದಿವ್ಸಾ ಅದೇ ಆವಾಗಿನ ನಮಗೆ ಉಲ್ಲಾಸ ಆಸಕ್ತಿ ಇತ್ತು. ಆಗ ಅಜ್ಜೀ ನಮಗೆ ಪದ ಹೇಳಿಕೊಡಜ್ಜೀ ನಮಗೆ ಪದ ಹೇಳಿಕೊಡು ಅವೊಜ್ಜಿ ಒಂದೇಳಿದ್ರೆ ನಾವು ಎರಡು ಹೇಳಾದು. ಇವ್ವತ್ತು ಇದು ಬಂದೈತಿ ಇದೇಳು ಅಂತಾ ಕಲಿತಿದ್ವಿ. ಅದು ನಾನೊಬ್ಬಾಕಿ ಕಿವಿಯಾಕ ಹಾಕ್ಕೊಂಡಿರಾದು ಇವ್ರೆಲ್ಲಾ ಜೊತೆಗೆ ಹೇಳಿದ್ರೆ ಹೇಳ್ತಾರ. ಹೇಳ್ತಾರ ಒಂದೇಳಿದ್ರೆ ಒಂದು ಮುಂದಕ್ಕೆ, ಮುಂದಲದು ಹಿಂದಕ್ಕೆ ಹಿಂದಲದ ಮುಂದಕ್ಕೆ ಹೇಳ್ತಾರೆ.

ಸಂ – ಈಗ ನಿಮ್ಮ ಮಕ್ಳು ಏನಾದ್ರೂ ಕಲ್ತಾರ ಈ ಪದಗಳನ್ನ ?

ಕ – ಇಲ್ಲ ಕಲಿಸಿಲ್ಲ, ಯಾರೂ ಕಲಿತಿಲ್ಲ.

ಸಂ – ಯಾಕೆ ?

ಕ – ಅಂತಾರು ಯಾರಿಲ್ಲ.

ಕ – ಅಂದ್ರೆ ಅವ್ರಿಗೆ ಆಸಕ್ತಿ ಇಲ್ಲ.

ಸಂ – ಹೂಂ, ಇಲ್ಲ, ಇಲ್ಲ.

ಸಂ – ಮತ್ತೆ ಏನು ಕಲೀತಾರೆ ಅವ್ರು.

ಕ – ಸಿನಿಮಾ, ಡ್ರಾಮಾ, ಇಂಥಾವ ನೋಡಾಕ ಹೋಗ್ತಾರ. ಅವ್ರೇನು ಇಂಥನ್ನಾ ನೋಡಾಕ ಹೋಗ್ತಾರೆ. ಕೆಲ್ಸಕ್ಕೆ ಹೋಗ್ತಾರ ಅವ್ರಿಗೆ ಇಂತ ಪದ ಹೇಳಾಕ ಬರಲ್ಲ ಬ್ಯಾಡ ನಮಗೆ ಯಾಕಂತೆ ನೀವು ಕಲ್ತಕಳ್ಳಿ ಅಂತಾರ.

ಸಂ – ನಿಮಗೆ ಓದಾಕ ಬರಿಯಾಕೆ ಬರ್ತೈತ್ರಾ ?

ಕ – ಇಲ್ಲ ಯಾರಿಗೂ ಬರೋದಿಲ್ಲ, ಯಾತ್ರದೂ ಇಲ್ಲ.

ಸಂ – ಒಟ್ಟು ಒದೇ ಇಲ್ಲ.

ಕ – ಓದಿಲ್ಲ ಗಂಡು ಹುಡುಗ್ರುನ್ನ ಓದಿಸಿದೀವಿ. ಹೆಣ್ಣು ಹುಡುಗ್ರು ಓದಿಲ್ಲ.

ಸಂ – ಈ ಹಾಡೋದನ್ನ ಕಲಿತ್ರಲ್ಲ, ನಿಮ್ಮ ಅವ್ವಾರು ಒತ್ತಾಯ ಮಾಡಿ ಕಲಿಸಿದ್ರಾ ಅಥವಾ ನೀವೇ ಅವ್ರತ್ರ ಹೋಗಿ ಕಲ್ತಿರಾ?

ಕ – ಇಲ್ಲ ನಾವೆ ಹೋಗಿ ಕಲ್ತಗಂತಿದ್ವಿ ಸಸಿ ನಾಟಾಕ, ಕಳೆ ತಗಿಯಾಕ ಹೋಗ್ತಿದ್ವಿ. ಅವ್ರು ಹೇಳಿದ್ರು ನಾವು ಕಲೀತಿದ್ವಿ. ಅವ್ರು ಮುಂದೆ ಹೇಳಿದ್ರು ನಾವು ಹಿಂದೆ ಕಲೀತಿದ್ವಿ.

ಸಂ – ಅಂದ್ರು ನಿಮ್ಮ ಸ್ವಂತ ಆಸಕ್ತಿಯಿಂದಾಲೇ ಕಲಿತ್ರಿ ?

ಕ – ಹೂಂ…

ಸಂ – ಯಾಕ, ಯಾಕಾಗಿ ಕಲಿತ್ರಿ ಈ ಹಾಡನ್ನ ?

ಕ – ನನಗೆ ಕಲ್ತುಕೊಳ್ಳಾಕ ಮನಸ್ಸು ಹುಡ್ತು, ಕಲ್ತಂಗಡ್ವಿ.

ಸಂ – ಅಂದ್ರ ನಾನು ಹಾಡಬೇಕು ಅಂತಾನಾ. ಅಥವಾ ದೇವ್ರು ಪದ ಅಂತನಾ.

ಕ – ದೇವ್ರು ಪದಾ, ನಮ್ಮ ಮನೆದೇವ್ರುದು, ಹಾಡಬೇಕಿದು ಕಲ್ತಗಬೇಕು, ನನ್ನ ಬಾಯಿಗೆ ಬರೋರು. ಒಂದು ಹೇಳಿ ಕೊಟ್ರೆ ಎರಡು ಬರಾದು. ಒಂದೂ ನೆಪ್ಪಿಲ್ಲದಂಗ ಬರ್ತುದ್ವು ಅವಾಗ ಉಲ್ಲಾಸವಾಗಿತ್ತು ನನಗೆ ಹೇಳಾಕ.

ಸಂ – ಇದು ಬಿಟ್ರೆ ಇನ್ನು ಯಾವ ಹಾಡು ಹೇಳ್ತೀರಿ ?

ಕ – ಗಾದ್ರಿಪಾಲ ಮತ್ತು ಜಗಳೂರಜ್ಜ, ಕಂಪಳದೇವ್ರು, ಬೊರೀದೇವ್ರು, ಮಾರೆಮ್ಮಂದು ಅರ್ಧ, ಎಲ್ಲ ಅರ್ಧರ್ಧ ಹೇಳ್ತೀವಿ ಗಾದ್ರಿಪಾಲಂದೊಂದು ಹುಟ್ಟಿದ್ದು ಬೆಳೆದದ್ದು, ಸತ್ತದ್ದು, ಬದುಕಿದ್ದು, ಗಂಗಮ್ಮನ ಮಾಡಿದ್ದು ಎಲ್ಲ ಹೇಳ್ತೀವಿ.

ಸಂ – ಆಮೇಲೆ ಈ ಪದ ಹೇಳ್ತೀರಲ್ಲ ಯಾವ ಟೈಮಿನಲ್ಲಿ ಹೇಳ್ತೀರಿ ಇದನ್ನಾ ?

ಕ – ನಾವಾ ಹಗಲಲ್ಲಾ ಹೊಲದಾಗ ಕೆಲಸ ಯಾವಾಗ ಮಾಡ್ತಿದ್ವಿ ಅವಾಗ ಹೇಳ್ತಿದ್ವಿ. ಈಗ ಬಿಟ್ಟು ಬಿಟ್ಟಿದಾರೆ. ನಾನು ಕೆಲ್ಸಕ್ಕೆ ಹೋಗಲ್ಲ ಏನೋ ಮನಿತಾಗ್ತ ಎಮ್ಮಿತಾಗ, ಹುಡುಗ್ರುತಾಗ ಇರ್ತೀನಿ. ಈಗ ನಾನು ಹೋಗಲ್ಲ ಅವ್ರು ಇನ್ನೆಲ್ಲಿ ಹೇಳ್ತಾರೆ. ನಾನು ಹೋಗಬೇಕಾದ್ರೆ ಪದ ಹೇಳ್ತ್ಯೆತಜ್ಜಿ ಅಂದು. ನನ್ನಿಂದೇ ಬರೋರು.

ಸಂ – ಈ ಗಾದ್ರಿಪಾಲನ ಹಬ್ಬ ಮಾಡ್ತೀರಲ್ಲ ಆವಾಗ ಹೇಳ್ತೀರಾ ?

ಕ – ಹಬ್ಬದ ದಿನಾ ಹೇಳ್ತೀವಿ.

ಸಂ – ಹಬ್ಬದ ದಿನಾ ಮನ್ಯಾಗ ಹೇಳ್ತೀರಾ ಅಥವಾ ಗುಡಿಯಾಗ ಹೇಳ್ತೀರಾ ?

ಕ – ಅಲ್ಲೇ ಗುಡಿಯಾಗ ಹೇಳ್ತೀವಿ.

ಸಂ – ಗುಡಿಯತ್ರ ಎಲ್ಲಾ ಹಿಂಗೆ ಸೇರಿಬಿಟ್ಟು ಹೇಳ್ತೀರಾ ?

ಕ – ಗುಂಪೂಗ ಕೂತ್ಗಂಡು ರಾತ್ರೆಲ್ಲಾ ಹೇಳ್ತೀವಿ ಬೆಳ್ಕರಿಯತಂಕ ಹೇಳ್ತೀವಿ.

ಸಂ – ಎಷ್ಟನೇ ವಯಸ್ನಲ್ಲಿ ಕಲಿತ್ರೀ ಈ ಹಾಡನ್ನ ?

ಕ – ನಾವೇ ಹದಿನೈದು ವರ್ಷ, ಹನ್ನೆರಡು ವರ್ಷದಾಗ ಕಲ್ತೀವಿ.

ಸಂ – ಅಂದ್ರೆ ಅಷ್ಟೊತ್ತಿಗೆ ಮದುವೆ ಆಗಿತ್ತು ನಿಮಗಾಗ.

ಕ – ಸಣ್ಣ ಹುಡುಗೀನೇ ಮಾಡಿದ್ರಂತೆ ನನಗೆ……. ಸಣ್ಣ ಹುಡುಗಿನ ಯಾರು ಕೊಡ್ದೇ ಹೋದ್ರಂತೆ ನನ್ನ ಗಂಡಗೆ, ಕೆಟ್ಟೋಗ್ತಾರ ಬಡವರು ಮಾಡಿದ್ದೆಲ್ಲ ಅಂದು ನಮ್ಮಪ್ಪ ದಾರಿ ಒಯ್ದಿದ್ನಂತೆ ನಂದಿನ್ನೇನು ಕೆಲ್ಸ ಗಂಡ ಅತ್ಲಾಗೆ ಬಡವಾ. ಹೋಗೋದು ನಾನು ಪದ ಹೇಳಕೊಂಡು ಬರಾದು. ಬೈಯ್ಯೋನು, ಬಡಿಯೋನು ಆಗಿದ್ರೆ ಬಡೀತಾನೆ, ಹೊಡಿತಾನೆ ಪದ ಹೇಳಿದ್ರೆ ಗಲಾಟೆ ಮಾಡಿದ್ರೆ ಅಂತ ಭಯ ಇತ್ತು. ಪದ ಹೇಳಿದ್ರೆ ನನ್ನ ಗಂಡ ಏನು ಅಂತಿರ್ಲಿಲ್ಲ.

ಸಂ – ಆಮೇಲೆ ಗಾದ್ರಿಪಾಲನ ಜಾತ್ರೆ ಯಾವಾಗ ಮಾಡ್ತೀರಿ ?

ಕ – ಈ ತಿಂಗಳಾಗ ಮಾಡ್ತಾರೆ. ಗುಗ್ರಿಹಬ್ಬ ಅಂತ.

ಸಂ – ಗಾದ್ರಿಪಾಲನಾಯಕನ ಹಬ್ಬಕ್ಕೆ ಗುಗ್ರಿ ಹಬ್ಬ ಅಂತಾ ಕರೀತಾರಾ ? ಏನು ಹಂಗಂದ್ರ ಗುಗ್ರಿ ಹಬ್ಬ ಅಂದ್ರ ?

ಕ – ಇದಾ ಗುಗ್ರೀ ಹೋಯ್ತಾರೆ.

ನಿನ್ನ ತಲೆಗೆ ನನ್ನಿತಲೇ ಡಿಕ್ಕೀ ಡಿಕ್ಕೀ ಹಾಯ್ತಾರೆ.

ಮನುಷ್ಯರು ಮನುಷ್ಯರೆ, ಬಂಗಾರ ದೇವ್ರೈತೆ, ಆ ಹುಲಿ ದೇವ್ರೈತೆ. ಅದಕ್ಕೆ ಕಾಯಿ ಇಲ್ಲ. ಅದಕ್ಕೆ ಕಾಯಿ ಒಡ್ಸಲ್ಲ ನಾವು ಅದ್ರ ಮುಂದ ಡಿಕ್ಕಿ ಡಿಕ್ಕಿ ಹಾಯ್ತೀವಿ. ಬರೀ ಬಾಳೇಹಣ್ಣು ಇಡಿಸ್ತೀವಿ.

ಸಂ – ಈ ಜಾತ್ರಾಗೆ ಏನೇನು ಮಾಡ್ತೀರಿ ? ಎಷ್ಟು ದಿವ್ಸಾ ಮಾಡ್ತೀರಿ.

ಕ – ಮೂರು ದಿವ್ಸಾ ಮಾಡ್ತೀವಿ. ಒಂದಿನಾ ರಾತ್ರೀಗೆ ದೇವ್ರು ಅಂತ ಮಾಡ್ತಾರೆ. ಮೀಸಲು ತಗೊಂಡು ಹೋಗ್ತಾರೆ. ಕಾಯಿ, ಹಣ್ಣು ತಗೊಂಡು ಹೋಗ್ತಾರೆ ಸರಿ ಬೆಳಿಗ್ಗೆ ನನ್ನಿವಾಳಕ್ಕೆ ಸುತ್ತ ಹದಿನಾಲ್ಕು ಹಳ್ಳಿ ಅಲ್ಲಿಗೆ ಬರೋದು, ಮೀಸಲು ತುಪ್ಪ, ಕಾಳು, ಹುಳ್ಳಿ ಅವ್ನೆಲ್ಲಾ ತಗೊಂಡು ಬರ್ತಾರಲ್ಲಿಗೆ ಸೋಮವಾರ ರಾತ್ರಿಗೆ. ರಾತ್ರಿ ಅಲ್ಲಿ ಮೇಟದುನ್ನ ತಗೊಂಡೋಗಿದ್ದು ಅನ್ನ ಮಾಡ್ತಾರೆ. ಹುಳ್ಳಿ ತಗೊಂಡೋಗಿದ್ದು ಗುಗ್ರಿ ಹಾಕ್ತಾರೆ. ಆ ದೇವ್ರಿಗೊಯ್ದು ಅದು ಬೆಳಕರ್ದಾಗೆ ದಾಸೋಗಂತ ಎಲ್ಲ ದೇವ್ರಿಗೂ ಇಕ್ತಾರೆ. ಅದು ಉಂಡು ಹಟ್ಟಿಗೆ ಬರ್ತೀವಿ. ಹಟ್ಟೀಗಿ ಬಂದು ತಿರುಗಾ ಎತ್ತು ಬರ್ತಾವೆ. ಊರಾಕ, ದೊರೆಗಿಟ್ಟುಕೊಂಡು ಮುಮಡಾ ಸುತ್ತಿಕೊಂಡು, ಸತ್ರಿಕೆ ಹಿಡ್ಕೊಂಡು, ಅವು ನಡುವೆ ಬರ್ತಾನೆ. ಆ ಯಪ್ಪ ಮುಂದೆ ಎತ್ತುಗಳು ಹಿಂದೆ ಹೊಡ್ಕೊಂಡು ಊರಾಕೆ ಹೋಗ್ತಾರೆ, ಪೊಗಳ್ಯಾಕೆ. ಆ ಪೊಗಳ್ಯಾಕ ಕೂಡಿಕೊಂಡು ಕಟ್ಟಿಮ್ಯಾಲೆ ದೊರೆ ನಿಂತಗಮ್ತಾನೆ. ಕಟ್ಟಿಮ್ಯಾಲೆ ಒಂಟಿಕಾಲಿಲೆ ನಿತ್ಕಂತ್ತಾನೆ. ಜನಗಳೆಲ್ಲ ಬೆಲ್ಲ ತಗೊಂಡು ಹೋಗಿ ಸುರುವೋದು ದೇವ್ರಿಗೆ ಹಣ್ಣುಕಾಯಿ ಕೊಡೋದು, ತಿರುಗಾ ಹೊರಗ ವಂಡಿಸ್ಕೊಂಡು ಬಂದು ಪಾದಲಗಟ್ಟಿ ಅಂತಾ ಬೇವಿನಮರದ ಹತ್ತ್ಯಾಗ ಎತ್ತ ಮೆರಸಾತಾರೆ. ಹರಿಸ್ಯಾತಾರೆ ಓಡಿ ಓಡಿ ಮೂರೇಟು ಅತ್ಲಾಗ ಇತ್ಲಾಗ. ಇತ್ಲಾಗ ಹರಿಸಿ ಅತ್ಲಾಗ ಆತನ ಸಾಗ ಹಾಕಿ ಅವ್ರು ಮನಿಗೆ ಅವ್ರು ಹೋಗ್ತಿರೋದು. ತಿರುಗ ಬೆಳಿಗ್ಗೆ ಹೋಗ್ತಾರೆ. ಗುಡ್ಡದ ಮ್ಯಾಕೆ ಹತ್ತಸ್ತಾರೆ ದೇವ್ರು. ಆ ಹುಲಿ ದೇವ್ರು. ಆ ಹುಲಿ ದೇವ್ರೊಂದೇ ಹತ್ತಿ ಹೋಗ್ತೈತಿ.

ಸಂ – ಒಟ್ಟು ಎಷ್ಟು ದಿನಾ ಆಗ್ತೈತೆ ಈ ಜಾತ್ರಿ ?

ಕ – ಮೂರು ದಿನಾ, ನಾಲ್ಕು ದಿನ.

ಸಂ – ಕೊನೆ ದಿನಾ ಏನ್ಮಾಡ್ತೀರಿ ?

ಕ – ಕೊನೆ ದಿನಾ ಏನೂ ಇಲ್ಲ ಗುಡ್ಡ ಹತ್ತೋದು ಇಳುದುಬರೊದು

ಸಂ – ನನ್ನಿವಾಳದ ಗುಡ್ಡ ಮ್ಯಾಗ ಹತ್ತಾದು.

ಕ – ಹೂಂ ಹತ್ತಿಹೋಗ್ತೀವಿ.

ಸಂ – ಅಲ್ಲಿ ಬೆಟ್ಟದ ಮ್ಯಾಲೆ ಏನೇನಿದೆ ?

ಕ – ಅಲ್ಲಿ ಬಸವಣ್ಣ ಐತಿ. ಆ ಗುಡ್ಡ ಎಷ್ಟೈತಿ ಅಷ್ಟು ಮನೆ ಐತಿ ವಳಿಗೆ.

ಸಂ – ಈಗ ನೀವು ಯಾವ್ಯಾವ ದೇವ್ರನ್ನ ಪೂಜೆ ಮಾಡ್ತೀರೀಗ ನೀವೆಲ್ಲ.

ಕ – ಅಲ್ಲಿ.

ಸಂ – ಅಲ್ಲಲ್ಲ ದಿನಾ ನಿಮ್ಮ ಮನೇಲಿ ಯಾವ್ಯಾವ ದೇವ್ರನ್ನ ಪೂಜೆ ಮಾಡ್ತೀರಿ ?

ಕ – ಕಂಪಳದೇವ್ರು, ಜಗಳೂರಜ್ಜ, ಸೌಡಮ್ಮ ಅಂತಾ ಐತಲ್ಲ ಅದು ಪೂಜೆ ಮಾಡ್ತೀವಿ.

ಸಂ – ಮತ್ತೆ ಯಾವ್ಯಾವ ಪೂಜೆ ಮಾಡ್ತೀರಿ ?

ಕ – ಎಲ್ಲ ನಾವೆಲ್ಲ ಒಂದಾ ಒಂದಾತಾಯಿ ಮಕ್ಳು. ಪೋಟುದ ದೇವ್ರು, ಕಂಪಳ ದೇವ್ರು, ನಮ್ಮಪ್ಪ ತೌರು ಮನಿ ದೇವ್ರು ಅದೇ ನಮಗೆ.

ಸಂ – ಸರಿ ನಿಮ್ಮ ಮನೆ ದೇವ್ರು ಯಾವ್ದು ?

ಕ – ಜಗಳೂರಜ್ಜ, ಗಾದ್ರಿಪಾಲನಾಯಕ ಗಂಡನ ಮನೆ ದೇವ್ರು.

ಸಂ – ನಿಮ್ಮ ಬೆಡಗ್ಯಾವುದು ?

ಕ – ನಾಯಕರು, ಮ್ಯಾಸ ನಾಯಕರು.

ಸಂ – ಬೆಡಗು ಬೆಡಗು ಬಳಿ ಅಂತಾರಲ್ಲ ಅದೆಂತಾದು ಮಂದ್ಲಾರು.

ಕ – ಮಂದ್ಲಾರು ಹೆಣ್ಮಕ್ಕಳು, ಎನುಮ್ಲರಿಗೆ ಕೊಟ್ಟಿದಾರೆ.

ಸಂ – ಅಲ್ಲಲ್ಲ ನೀವು ಮಂದ್ಲಾರಾ ?

ಕ – ಹೌದು.

ಸಂ – ಗಾದ್ರಿಪಾಲನಾಯಕನೂ ಎನುಮ್ಲಾರನಾ ?

ಕ – ಹೂಂ ನಮ್ಮರು ಗಾದ್ರಿಪಾಲನಾಯಕ.

ಸಂ – ಈ ಗಾದ್ರಿಪಾಲ ನಾಯಕನನ್ನ ಮತ್ತು ಜಗಳೂರಜ್ಜನ ಯಾವ್ಯಾವ ಬೆಡಗಿನವರು ಪೂಜೆ ಮಾಡ್ತಾರೆ ? ಅಥವಾ ಇಡೀ ಮ್ಯಾಸಬ್ಯಾಡರೆಲ್ಲಾ ಪೂಜೆ ಮಾಡ್ತಾರಾ ?

ಕ – ಎಲ್ಲಾರೂ ಮಾಡ್ತಾರೆ. ಹೊಲ್ಯಾರು, ಬ್ಯಾಗಾರು ಇಂತಾವ್ರು ಪೂಜೆ ಮಾಡಲ್ಲ ಅನ್ನಂಗಿಲ್ಲ. ರೆಡ್ಡಿಗರೇ ಜಾಸ್ತೀ ಗೋರ್ಲುಕಟ್ಟಿ ಕುರುಬರು ಮನೆದೇವ್ರಿದ್ದಂಗವ್ರೀಗೆ.

ಸಂ – ಈಗ ಗಾದ್ರಿಪಾಲನ್ನ ಮತ್ತೆ ಯಾವ್ಯಾವ ಜಾತಿಯವ್ರು ಪೂಜೆ ಮಾಡ್ತಾರೆ ?

ಕ – ಎಲ್ಲಾರೂ ಮಾಡ್ತಾರೆ. ಕುರುಬ್ರು, ಗೊಲ್ಲರು, ವಡ್ರು, ಬಾಂಬ್ರು ಕೆಲಿಸೇರು ಎಲ್ಲಾ ಪೂಜೆ ಮಾಡ್ತಾರೆ.

ಸಂ – ಈ ಸಿನಿಮಾ, ಟಿ.ವಿ. ಇವೆಲ್ಲ ಬಂದು. ಈ ದೇವ್ರು ಅಂದ್ರೆ ಈ ತರದ ಹಾಡುಗಳು ಅಂದ್ರೆ. ನಮ್ಮಂಥ ವಯಸಿನವರಿಗೆ ಒಂಥರಾ ಅಲಕ್ಷ್ಯ. ಏನು ದೇವ್ರು ಈಗ ನೀವೇ ಹೇಳಿದ್ರಿ, ನಿಮ್ಮ ಮಕ್ಕಳು ಯಾರೂ ಹಾಡು ಹೇಳೋದನ್ನ ಕಲ್ತಿಲ್ಲಂತ. ಈ ದೇವ್ರ ಬಗ್ಗೆ ಈ ಥರದ ಹಾಡುಗಳ ಬಗ್ಗೆ ಅವ್ರಿಗೆ ಆಸಕ್ತೀನೆ ಇಲ್ಲ. ಏನು ಅನಿಸುತ್ತದೆ ನಿಮಗೆ ?

ಕ – ನಮಗೇನು, ನಮಗಿಂತ ಸಣ್ಣವರು ಕಲೀಬೇಕು

ಸಂ – ಈಗ ಕಲೀತಾ ಇಲ್ಲವಲ್ಲ.

ಕ – ಯಾರ್ಯಾರು ಕಲೀವಲ್ರು ಈ ವಜ್ಜಿ ಹೋದ್ರೆ ನಮ್ಮ ಹಟ್ಯಾಗ ಪದಾ ಹೇಳಾರೇ ಇಲ್ಲ. ಗಟ್ಟ್ಯಾಗ ಕಲೀಯಾರೂ ಇಲ್ಲ, ಹೇಳಿಸ್ಕೊಂಬೋರು ಇಲ್ಲ.

ಸಂ – ಆಮೇಲೆ ನಿಮ್ಮನ್ನ ಎಂಥಾ ಜಾತಿಯವ್ರು ಅಂತಾರೆ ?

ಕ – ನಾಯಕರು

ಸಂ – ಎಂಥಾ ನಾಯಕರು ಅಂತಾರೆ ?

ಕ – ಮ್ಯಾಸ ನಾಯಕರು ಅಂತಾರೆ.

ಸಂ – ಈ ಗಾದ್ರಿಪಾಲ ಯಾವ ಬೆಡಗಿನವನು ಅಂದ್ರಿ…?

ಕ – ಎನುಮ್ಲಾರನು.

ಸಂ – ಆಮೇಲೆ ಈ ಪೆಟ್ಟಿಗೆ ದೇವ್ರು ಅಂತರಲ್ಲಾ ಏನದು ಅದರಲ್ಲೇನಿದೆ ?

ಕ – ಬರೇ ಪೆಟ್ಟಿಗೆ ಅಮತದು ಮಾಡ್ಯಾರ ಜೀವಕಾಳ ಹಾಕಿ ಇಟ್ಟು ಇಲಿ ಇರ್ತೈತಲ್ಲ ಮನಿಯಾಗೆ ಇಲಿ ಅಂಗಿರತೈತಿ. ಕೊಡುವೆ ಮಾಡಿ ಅದರಾಗ ದೀಪ ಹಾಕಿ ಅಂಗ ಕೊಳುವೆ ಮಾಡಿ ಅವರಿಗೆ. ದೀಪ ಹಾಕಿ ಅದರ ನಡುವೆ ಇಟ್ಟಿರ್ತಾರೆ.

ಸಂ – ಹುಲೀನ ಆ ಪೆಟ್ಟಿಗೆ ಒಳಗೆ ಇಟ್ಟಿರ್ತಾರಾ ?

ಕ – ಬಂಗಾರದ್ದು ಹಿಮದಲ ಕಾಲ್ದಾಗ ಮಾಡಿದ್ದು. ಅದಕ್ಕೆ ತೋರಿಸಲ್ಲ ಅದು ಯಾರಿಗೆ ಕೊರೂಟಕ ಹಾಕಿದ್ರು ನಾವ್ ನೋಡಿದ್ವಿ. ಅದು ನೋಡಿರೋರಿಲ್ಲ. ಅದು ಜನ್ನರಿಗೆ ಹೋಗಿ ಮೈತೊಳೆ ಬೇಕಾದ್ರೆ ತೆರೆ ಕಟ್ಟಿಕೊಂಡು ಇಂಗ ಕೈಯಾಗ ಇ‌ಟ್ಟುಕೊಂಡು ಜನುಗಳು ನೋಡದಂಗೆ ಅಂಗಿ ಹಾಲು ಹೊಯ್ದು ತೋಳಿತಾರಂತೆ ಒಬ್ಬರಿಗೂ ತೋರಿಸಲ್ಲ ಶಾನಭೋಗ.

ಸಂ – ಪೆಟ್ಟಿಗೆ ದೇವ್ರಂದ್ರೆ ಪೆಟ್ಟಿಗೆಲಿರೊ ಹುಲಿ ಅಷ್ಟೇ.

ಕ – ಹಾ ಹಾ ಹಾ.

ಸಂ – ಅದನ್ನೆ ಪೂಜೆ ಮಾಡೋದು

ಕ – ಒಳಗ ಹುಲಿ ಇರ್ತತಿ ವಡುವ್ಯಲ್ಲ ಸುತ್ತ ಸಿಗುಸ್ತಾರ.

ಅದರಂಗ ಇಕ್ಕಲ ಮನುಷ್ಯರು ಒತ್ತುಕಂತರಲ್ಲಾ ಸೊಂಟುಕ ಕಟ್ಟಿಕಂತರಂತೆ ಅವ್ರು.

ಸಂ – ಆಮೇಲೆ ಈ ಗಾದ್ರಿಪಾಲನ ಗುಡಿಗಳ ಬಾಳ ನೊಡಿದಿನಿಕ ನಾನು. ಒಂದು ಐದು ಆರು ಗುಡಿಗಳನ್ನು ನೋಡಿದಿನಿ. ಒಳಗೆ ಮೂರ್ತಿನೆ ಇರಲ್ಲ ಒಂದು ಕತ್ತಿ ಇರ್ತದೆ, ಒಂದು ಕೋಲು ಇರ್ತದೆ ಅದೇನದು ಕೋಲು ಕತ್ತಿ ?

ಕ – ಚಿತ್ರಗೋಲು ಕಟ್ಟಿಗಾಗ ಅದು ಜೀವಕಾಳ ಹಾಕಿ ಆ ಪೆಟ್ಟಿಗ್ಯಾಗೆ ಒಳಕೆ ಇಟ್ಟಿದಾರಂತೆ.

ಸಂ – ಅದೆಲ್ಲ ಒಪನ್ ಆಗಿ ಇಟ್ಟರ್ತಾರಾ, ಪೆಟ್ಟಿಗೆ ದೇವ್ರು ಬೇರೆ ಇರ್ತದೆ ಒಂದು ಬೆತ್ತ ಒಂದು ಕತ್ತಿ ಇರ್ತದೆ ಯಾಕೆ ಯಾಕೆ?

ಕ – ಅದೇ ಬೆತ್ತದ ಕೋಲೆ ದೇವ್ರು.

ಸಂ – ಕತ್ತಿ ಮತ್ತು ಕೋಲೆ ಗಾದ್ರಿಪಾಲ ಅಂತಾರಾ ?

ಕ – ಕತ್ತಿ ಕೈಯಾಗೆ, ಕಪ್ಪದು ಮರಿ ಇರ್ತದಲ್ಲ, ಆ ದೊಣ್ಣಿ ಅದೇ ಕಟ್ಟೆ ಮೇಲೆ ಬಂದದ್ದು. ಯಾವಾಗ ತಂದ್ದಿದ್ದೋ ಕೋರಿ ಸುತ್ತಿ ಅದ್ರಮ್ಯಾಕೆ ಮಂಡಾಸುತ್ತಿ, ಅದ್ರಮ್ಯಾಕೆ ಕೆಂಪುಬಟ್ಟಿ ಸುತ್ತಿ ಅದರ ಮ್ಯಾಕೆ ಕೋರಿ ಸುತ್ತಿರ್ತಾರೆ. ಒಡವಿ ಹಾಕಿ, ಪಟ್ಟಿಗಳೂ, ಡಾಬುಗಳಂತ ಗೆಜ್ಜಿ ಅವು ಇವು ಹಾಕಿರ್ತಾರ. ಅಲ್ಲಿಗೆ ಹೊತ್ತುಕೊಂಡು ಹೋಗ್ತಾರೆ.

ಸಂ – ಆಮೇಲೆ ಈ ಪದಾ ಹೇಳ್ತೀರಲ್ಲ. ಯಾವ್ಯಾವ ಭಾಷೇಲಿ ಹೇಳ್ತೀರಿ ನೀವು ? ಕನ್ನಡದಾಗೆಳ್ತೀರೋ, ತೆಲುಗಿನಾಗೇಳ್ತೀರೋ.

ಕ – ಕನ್ನಡದಾಗೇ, ಈಗ ಹೇಳಿದಂಗೇ.

ಸಂ – ಆಮೇಲೆ ನಿಮ್ಮ ಮನೆ ಭಾಷೆಯೆಲ್ಲಾ ತೆಲುಗು. ಅದೆಂಗೆ ಕನ್ನಡದಾಗೇಳ್ತೀರಿ ಇದನ್ನ ನೀವು ?

ಕ – ನಾವು ಕನ್ನಡೇ, ತೆಲುಗಿನಾಗ ನಮಗೆ ಪದಾ ಬರಾದಿಲ್ಲ. ಯಾವುದು ಹೇಳಿದ್ರೂ ಕನ್ನಡನೇ.

ಸಂ – ಮತ್ತೆ ಮನ್ಯಾಗೆಲ್ಲಾ ತೆಲುಗು ಮಾತಾಡ್ತೀರಲ್ಲ ?

ಕ – ಮಾತಾಡ್ತೀವಿ, ಯಾವಪದ ಹೇಳಿದ್ರೂ ಕನ್ನಡದಾಗೇ.

ಸಂ – ಈಗ ಮತ್ತೆ ನಿಮ್ಮ ಅವ್ವಾ ಅವ್ರು, ಯಾವ ಭಾಷ್ಯಾಗ ಹೇಳ್ತಿದ್ರು ?

ಕ – ಅದೇ ಕನ್ನಡದಾಗೇ ಹೇಳ್ತಿದ್ರು. ಬೀಸವಾದ್ರು, ಕುಟ್ಟವಾದ್ರು ಯಾವಾದ್ರು ಕನ್ನಡದಾಗೆ.

ಸಂ – ಈಗ ಗಾದ್ರಿಪಾಲ ಮನುಷ್ಯ, ನಮ್ಮ ನಿಮ್ಮಂತೆ ಒಬ್ಬ ಮನುಷ್ಯ. ಈಗ ನಾವು ಏನ್ಮಾಡ್ತಿದ್ದೀವಿ ದೇವ್ರು ಅಂತಾ ಪೂಜೆ ಮಾಡ್ತೀವಿ. ಅವ್ರನ್ನ ನಾವು ಮನುಷ್ಯ ಅಂತಾ ಕರೀಬೇಕೋ ಅಥವಾ ದೇವ್ರು ಅಂತಾ ಕರೀಬೇಕೋ ?

ಕ – ಆ ಯಪ್ಪ ಹುಲಿಬಾಯ್ಯಾಗ ಕಡದು ಸತ್ತು, ತಿರುಗಿ ಬದುಕಿ ತಿರುಗಿ ಸತ್ತಿದಾನೆ ನೋಡು ಆಯಪ್ಪ ದೇವ್ರ ಪೀಠಕ್ಕಾಗಿದಾನೆ.

ಸಂ – ಅವ್ರನ್ನ ಮನುಷ್ಯ ಅಂತಿರೋ ಅಥವಾ ದೇವ್ರು ಅಂತಾ ಕರೀತಿರೋ ?

ಕ – ದೇವ್ರು ಅಂತಾ ಕರೀತಿವಿ.

ಸಂ – ಈ ಜಗಳೂರಜ್ಜಗೂ, ಗಾದ್ರಿಪಾಲನಿಗೂ ಏನು ಸಂಬಂಧ ?

ಕ – ಏನಾ ಅಣ್ಣ ತಮ್ಮ ಆಯಪ್ಪಂದೊಂದು ಗುಡಿ. ಆಯಪ್ಪಂದೊಂದು ಗುಡಿ ಎಲ್ಡು ಅಲ್ಲವಾ ನಾವಾದ್ರ ಜಗಳಾಡ್ಕಂಡು ಎರಡು ಕಟ್ಟಿರ್ಲಿಲ್ವೆ ಎರಡು ಗುಡಿ ಅಯಪ್ಪಂದೊಂದು ಆಯಪ್ಪಂದೊಂದು. ಗಾದ್ರಿಪಾಲನಿಗೊಂದು ನಮ್ಮೂರಾನ ಕಟ್ಟಿರಲಿಲ್ವೇ ಅವೇ. ಎರಡು ಗುಡಿ ಇದ್ವಲ್ಲ. ಅದು ಒಂದು ಜಗಳೂರಜ್ಜಂದು. ಇನ್ನೊಂದು ಗಾದ್ರಪಾಲನಾಯಕನದು. ಗಾದ್ರಿಪಾಲ ಅಣ್ಣ, ಜಗಳೂರಜ್ಜ ತಮ್ಮ.

ಸಂ – ಈ ಗಾದ್ರಿಪಾಲನ ಗುಡಿಗಳು ಎಲ್ಲಲ್ಲಿ ಅದಾವೆ ?

ಕ – ಇಲ್ಲೇ (ಪೂರ್ವಕ್ಕೆ ಕೈ ತೋರಿಸುತ್ತಾ) ಇತ್ಲಾಗಿಂದ ಬಂದಿರಾದು ಆಯಪ್ಪ. ಇಲ್ಲೆ ದಿಬ್ಬದಹಳ್ಳ್ಯಾಗೆ ಐದಾವೆ ಅಂತಾರೆ ಇನ್ನೆಲ್ಲೆಲ್ಲಿ ಐದಾವೋ

ಸಂ – ಐಗೂರತ್ರ, ಕಮಲಾಪುರ ಹತ್ರ, ದಾವಣಗೇರಿ ಹತ್ರಾ.

ಕ – ನಮಗ ಗೊತ್ತಿಲ್ಲ. ದಾವಣಗೇರಿ ಎಲ್ಲೆಲ್ಲೋ ಅತ್ಲಾಗಿಂದ ಇಳಿದು ಬಂದಾನೇ. ಅವ್ರು ಬಾಳಜನಾ ಅಣ್ಣ ತಮ್ಮಂದಿರು ಯಾರಗಟ್ಟನಾಯಕ ಅಂತಾ ಆಯಪ್ಪ ತಮ್ಮೇ ಅಣ್ಣೋ ಅದೆಲ್ಲೋ ಅದಾನ ಬೆಳಗಟ್ಟತಾಕ ಎಲ್ಲೆಲ್ಲಾ ಐದಾರಂತೆ.

ಸಂ – ಆಮೇಲೆ ನಮಗೆಲ್ಲ ತಿಳಿದಂಗೆ ಬ್ಯಾಡ್ರು ಅಂದ್ರೆ, ಬೇಟೆ ಆಡೋರು. ಈಗ ಏನೇನು ಮಾಡ್ತೀರಲ್ಲಿ ? ನಿಮ್ಮೂರಲ್ಲಿ ಏನೇನು ಕೆಲ್ಸಮಾಡ್ತೀರಿ ?

ಕ – ಕೂಲಿ.

ಸಂ – ಏನು ಕೂಲಿ ?

ಕ – ಸಸಿ, ಕಳೆ, ಮನೆಕೆಲಸ ಮಾಡ್ತೇವಿ, ಸಸಿ ಹಾಕೋದು, ಸಸಿ ಕಳೆ ತೆಗಿಯೋದು.

ಸಂ – ಆವಾಗ ಬೇಟೆ ಆಡ್ತಿದ್ರು, ಸರ್ಕಾರ ಈಗ ಬೇಟೆ ಆಡೋದನ್ನ ನಿಷೇದ ಮಾಡಿಬಟ್ಟೈತಿ, ರದ್ದು ಮಾಡಿಬಿಟ್ಟೈತಿ, ಬೇಟೇನ ಯಾರೂ ಆಡಬಾರದು ಆಡಿದ್ರ ಅವ್ರನ್ನ ತಗೊಂಡೋಗಿ ಜೈಲಿಗೆ ಹಾಕ್ತಾರೆ. ಮೊದಲು ನಿಮ್ಮ ವೃತ್ತಿ ಆಗಿತ್ತು ಅದು, ಅದನ್ನ ಈಗ ಸರ್ಕಾರ ರದ್ದು ಮಾಡಿ ಬಿಟ್ಟೈತಿ. ಯಾಕ ಮಾಡಿದ್ರು ಅದ್ನ ? ನಿಮಗೇನನ್ನಿಸುತ್ತೆ ಅದರ ಬಗ್ಗೆ ? (ಈ ಪ್ರಶ್ನೆಗೆ ಬೇಗ ಉತ್ತರಿಸಲಿಲ್ಲ).

ಕ – ಹೆಂಡ್ರು ಮಕ್ಳು ದುಡುದು ಹಾಕೋರ್ಯಾರು ? ಅವ್ರು ಮಜಮಾಡಿ ತಿರುಗಿದ್ರೆ ? ರದ್ದು ಮಾಡಿದ್ರೆ ದುಡುದು ಹಾಕ್ತಾರಂತ ರದ್ದುಮಾಡಿದಾರೋ ಹೆಂಗೋ.

ಸಂ – ಈಗ ಈ ರಾಘವೇಂದ್ರ ದೇವ್ರು ಆಮೇಲೆ ತಿರುಪತಿ ತಿಮ್ಮಪ್ಪ ಆಮೇಲೆ ಅದ್ಯಾರೋ ಸಾಯಿಬಾಬಾ, ಅಯ್ಯಪ್ಪಸ್ವಾಮಿ ಇವ್ರೆಲ್ಲ ದೊಡ್ಡ ದೊಡ್ಡ ದೇವ್ರು. ಈ ಬಾರಿ ದೊಡ್ಡ ದೇವ್ರು ಅವ್ರು ಹುಟ್ಟಿದ್ರೋ ಬಿಟ್ಟಿದ್ರೋ ಗೊತ್ತಿಲ್ಲ. ಆಮೇಲೆ ಅವ್ರು ಜಾತಿಗೆ ಏನು ಮಾಡಿದ್ರೋ ಗೊತ್ತಿಲ್ಲ. ಈ ಗಾದ್ರಿಪಾಲ, ಜಗಳೂರಜ್ಜ ನಿಮ್ಮ ಜಾತಿಗೆ ಬಾಳಾ ದುಡುದಾರ. ನಿಮ್ಮ ಜಾತಿ ಉದ್ಧಾರ ಮಾಡಿದಾರೆ, ಆದ್ರ ಗಾದ್ರಿಪಾಲನಿಗೆ ನಿಮ್ಮನ್ನ ಬಿಟ್ರೆ ಯಾರೂ ಇಲ್ಲ. ಆಮೇಲೆ ಅವ್ರಿಗೆ ಸಣ್ಣ ಸಣ್ಣ ಗುಡಿಸಲು ಯಾರಿಗೆ ಗಾದ್ರಿಪಾಲನಿಗೆ ಜಗಳೂರಜ್ಜನಿಗೆ, ಆದ್ರೆ ರಾಘವೇಂದ್ರ ಅವ್ರಿಗೆಲ್ಲ ಭಯಂಕರವಾದ ಗುಡಿ ಕಟ್ಟಿದ್ದಾರೆ ಯಾಕೆ ಹಂಗಾತು ?

ಕ – ನಮಗ ಅದಾ ಗುಡಿ, ನಮಗ ಒಲಸಿಕೊಂಡು ಬಿಟ್ಟೈತಿ ನಮ್ಮ ದೇವ್ರು.

ಸಂ – ಅಂದ್ರೆ ಗುಡಿ ಕಟ್ಟದಿದ್ರೂ ನಡೀತೈತಿ, ನಿಮ್ಮ ದೇವ್ರು ಅಷ್ಟು ದೊಡ್ಡವನು.

ಕ – ಅಲ್ಲಿ ಕರೇಕಲ್ಲಾಗ ಅದಾನಂತೆ ಅಲ್ಲೇ ಪೂಜೆ ಮಾಡ್ತಾರೆ, ನನಿಗೆ ನೀವು ಗುಡಿ ಕಟ್ತೀರಾ ನಾನು ಅದರಾಗ ಇರಲ್ಲ ಅಂತಾನಂತೆ.

ಸಂ – ಅಂದ್ರ ಗುಡಿ ಕಟ್ಟಬ್ಯಾಡಂತ ಜಗಳೂರಜ್ಜ ಹೇಳ್ಯಾನಂತ ?

ಕ – ಗುಡಿಯಾಗಿರಲ್ಲ ಆ ಕರೆಕಲ್ಲ ಕೆಳಗಿರ್ತಿನಿ ಅಂತಾನಂತೆ. ಅಲ್ಲೇ ಮೊದಲಿಗೆ ಪೂಜೆ ಎಡೆ ಅದಕಾ ನನ್ನಿವಾಳದಾಗೂ ಕಟ್ಟಿಸಿಲ್ಲ. ಗುಡಿ ಬ್ಯಾಡ ಅಂತಾನ ಇಲ್ಲಾಂದ್ರೆ ನಾವು ಕಟ್ತಿದ್ವಿ. ಅವ್ರಿಗೆ ಗುಡಿ ಬೇಕು ಅಂತ ಕಟ್ಟಿಸಿಗಂಡಿದ್ದಾರೆ ನಮಗೆ ಗುಡಿ ಬೇಕಿಲ್ಲ. ನಾವು ಗುಡ್ಲಾಗ ಇರ್ತೀವಿ ಅಂತ ಗಾದ್ರಿಪಾಲಯ್ಯ, ನಾವು ಕಲ್ಲಿನ ಕ್ಯಳಗ ಇರ್ತೀನಿ ಅಂತ ಜಗಳೂರಜ್ಜ ಗುಡಿ ಕಟ್ಟಿಸಿದ್ರು. ಈಗ ನಾನು ಅಲ್ಲಿರಲ್ಲ ಅಂತಾನ ಜಗಳೂರಜ್ಜ. ಕರೀ ಕಲ್ಲು ಕ್ಯಳಗ ಐದಾನ ಈಟು ಗವಿ ಐತೆ ಅಲ್ಲಿ ಅದಾನಂತೆ. ಮೊದ್ಲು ಅಲ್ಲಿ ಪೂಜಿ ಮಾಡಿಕೊಂಡು ತಿರುಗಿ ಎಡಿ ಅದೆಲ್ಲ ತಗೊಂಡು, ಅಲ್ಲ ಗುಡಿಗ್ಹೋಕ್ತೇವಿ.

ಸಂ – ಈ ತಿರುಪತಿ, ರಾಘವೇಂದ್ರ ಆ ದೇವ್ರ ಬಗ್ಗೆ ಏನನ್ನಿಸ್ತೈತಿ ನಿಮಗೆ ?

ಕ – ಅಪರೂಪಕ್ಕೋದ್ರೆ ಹೋಗಿ ನೋಡಿ ಬರೋದಷ್ಟೇ. ನಾವೇನು ಅದಕಾ ನಡಕಂಬಾಂಗಿಲ್ಲ.

ಸಂ – ಆ ಮೇಲೆ ನೋಡ್ರಿ ನಾನೇನು ಮಾಡ್ತೀನಿ. ನಿಮ್ಮ ಹಾಡನ್ನ ರೆಕಾರ್ಡ್ ಮಾಡಿಕೊಂಡು ಬರದು ಈ ತರದ ಪುಸ್ತಕ ಮಾಡ್ತೀನಿ. ಏನನ್ನಿಸುತ್ತೆ ಇದರ ಬಗ್ಗೆ ನಿಮಗೆ ?

ಕ – ಮಾಡು ಅದಕ್ಕೇನು ತಪ್ಪೈತಿ. ಏನೋ ಬಂದು ಹೇಳಿದಾರೆ ಅವ್ರುದೊಂದು ಹೆಸರಿರ್ಲಿ ಅಂತ ಮಾಡಿದೀಯ ಮಾಡು. ಮಾಡು ಒಳ್ಳೇದು.

ಸಂ – ಆಯ್ತು ಅಲ್ಲಿಂದಾ ಇಲ್ಲಿಗೆ ಬಂದು ಕಾವ್ಯ ಹಾಡಿದಿರಿ ನಿಮಗೆ ಯುನಿವರ್ಸಿಟಿ ಪರವಾಗಿ ಮತ್ತು ನಾನು ನಮಸ್ಕಾರ ಹೇಳ್ತೀನಿ.