ದ್ವಾಪರ ಯುಗ ಮುಗಿದ ಮೇಲೆ ಶ್ರೀ ಕೃಷ್ಣ ಪರಮಾರ್ತನು ಮೂಗನಾಯಕ ಅನ್ನೊನಿಗೆ ಹಸುಗಳ್ನ ಕೊಟ್ಟು ಬಿಟ್ಟು ವೈಕುಂಠಾ ಸೇರ್ದಾ. ಅಲ್ಲಿಂದ ಮೂಗನಾಯಕನಿಗೆ ಮಂದಲಮೂರ್ತಿ ಮಾದೇವನಾಯಕ ಅಂತ ಮಗ ಇದ್ದ. ಆತ ತನ್ನ ತಂದೆಯ ನಂತರ ಪಶುಪಾಲನೆಯನ್ನ ಮಾಡ್ಕೊಂಡು ಬಂದ. ಆ ಮಂದಲಮೂರ್ತಿ ಮಹದೇವನಾಯಕನಿಗೆ ದನಗೊಂಡರಾಜ, ವೆಂಕಟರಾಜ, ನಾಗನಾದ ಮುನಿ ಅಂತಕ್ಕಂತ ಮೂರು ಜನ ಗಂಡುಮಕ್ಳು.

ಒಬ್ಬ ಹೆಣ್ಣು ಮಗಳಿದ್ಲು ದಾನಸಾಲಮ್ಮ ಅಂತ. ಆಕೆ ಪ್ರಾಪ್ತ ವಯಸ್ಸಿಗೆ ಬಂದ ಮೇಲೆ ಯಾರನ್ನ ಮದ್ವೆಯಾಗಲ್ಲ ನಾನು ಈಶ್ವರನನ್ನೇ ಮದ್ವೆ ಆಗ್ತೀನಿ ಅಂತ ಹಠ ಹಿಡೀತಾಳ. ಆಗ ಗೂಡಿನ ಎಲ್ಲ ಹಿರಿಯರು ಸೇರ್ಕೋಂಬಿಟ್ಟು ಆಕೇನ ಮದುವಣಗಿತ್ತಿಯನ್ನಾಗಿ ಮಾಡಿಬಿಟ್ಟು, ನೀನು ಈಶ್ವರನನ್ನು ತಪಸ್ಸು ಮಾಡಿ ಆತನನ್ನ ವರಿಸ್ಲಿಕ್ಕೆ ಸಾಧ್ಯವುಂಟು ಇಲ್ಲದಿದ್ದರೆ ಆಗಲ್ಲ ಎಂದು ತೀರ್ಮಾನ ತಗೊಂಬಿಟ್ಟು ಆಕೇನ ಕಾಡಿಗೆ ಬಿಟ್ಟು ಬರ್ತಾರೆ. ಆ ಸಂದರ್ಭದಲ್ಲಿ ಆಕೆ ಭೂತ ವೃಕ್ಷದ ಕ್ಯಳಗೆ ಅಂದ್ರೆ ಈ ಋಷ್ಯ ಮುಖ ಪರ್ವತದ ಕೆಳಗೆ ಬರುವ ವಜ್ರಕಾಟದ ಪ್ರದೇಶಕ್ಕೆ ಬರ್ತಾಳೆ. ಅಲ್ಲಿ ಭೂತ ವೃಕ್ಷದ ಕ್ಯಳಗೆ ತಪಸ್ಸನ್ನಾಚರಿಸಿದ ಮೇಲೆ ಈಶ್ವರ ಮತ್ತು ಪಾರ್ವತಿ ಜಂಗಮ ರೂಪದಲ್ಲಿ ಬಂದು ಪ್ರತ್ಯಕ್ಷ ಆಗಿ ಆಕೆಗೆ ಹೇಳ್ತಾರೆ. ‘ಆಯಿತಮ್ಮ ನಿನ್ನ ಕೋರಿಕೆ ಈಡೇರಬೇಕಾದ್ರೆ ನೀನು ಹನ್ನೆರಡು ದಿನ ವ್ರತವನ್ನ ಆಚರಿಸು, ಕೊನೇ ದಿನ ನೀನು ಚಿಲುಮೆ ಪೂಜೆ ಮಾಡಿದ ಮೇಲೆ ನಿನಗೆ ನಿನ್ನ ಮನಸ್ಸಿನಲ್ಲಿರ್ತಕ್ಕಂತ ನಿನ್ನ ಇಷ್ಟಾರ್ಥ ಏನದೆ ಅಂತಹ ವರ ನಿನಗೆ ಪ್ರಾಪ್ತನಾಗ್ತಾನೆ ನಾವೇ ಬಂದು ನಿನಗೆ ಮದ್ವೆ ಮಾಡಿಸ್ತಿವೆ ಅಂತ ಹೇಳಿ ಹೋಗ್ತಾರೆ’. ಆಕೇ ಅದೇ ರೀತಿ ಹನ್ನೆರಡು ದಿನ ವ್ರತವನ್ನು ಆಚರಿಸಿ ಕೊನೆ ದಿನ ನೀರನ್ನ ಚಿಲುಮೆಯಿಂದ ತಗ್ದು ಪೂಜೆ ಮಾಡ್ದಾಗ ಬಂದು ಶುಕ್ಲ ಪಕ್ಷದ ದಿನ ಮಲೆಯಲ್ಲಿ ಜನಿಸಿದಂತಹ ಒಬ್ಬ ಸುಂದರ ಪುರುಷ ಸೂರ್ಯನಂದನ ಕಠಾರಿಯನ್ನ ಹಿಡ್ಕಂಡು ಪ್ರತ್ಯಕ್ಷನಾಗಿ ಬರ್ತಾನೆ. ಆತನಿಗೆ ಶುಕ್ಲಮಲ್ಲನಾಯಕ ಅಂತ ನಾಯಕರಣ ಆಗುತ್ತೆ. ಶಿವಪಾರ್ವತಿ ಬಂದು ಆತನಿಗೆ ಮದ್ವೆಮಾಡ್ಸಿ ಹೋಗ್ತಾರೆ. ಅವರಿಬ್ರು ಒಂದು ಕಡೆ ಸುಖವಾಗಿರ್ತಾರೆ. ಆ ನಂತರ ಮಂದಲಮೂರ್ತಿ ಮಾದೇವನಾಯ್ಕನಿಗೆ ಗೊತ್ತಾಗುತ್ತೆ. ಹಿಂಗೆ ಪಶುಪಾಲ್ನೆ ಮಾಡುತ್ತಾ ಹೋಗಬೇಕಾದ್ರೆ ಇವ್ರು ಗಂಡ ಹೆಂಡ್ತಿ ಒಂದು ಗೂಡ ಕಟ್ಟಿಗೊಂಡು ಇವ್ರು ಪಶುಪಾಲ್ನೆ ಕೆಲ್ಸ ಮಾಡಿಕಂಡು ಇರ್ತಾರೆ. ಮತ್ತೆ ಮಗಳು ಅಳಿಯನ್ನು ನೋಡಿಬಿಟ್ಟು ಬಾಳ ಸಂತೋಷ ಪಡ್ತಾರೆ. ಅವ್ರೆಲ್ಲ ಒಂದೇ ಗೂಡ್ನಲ್ಲಿ ವಾಸ ಮಾಡಿಕ್ಕೊಂಡೇ ಇರ್ತಾರೆ. ಆ ಸಂದರ್ಭದಲ್ಲಿ ಒಂದು ಹಳ್ಳಿಯಲ್ಲಿ ಸಮೀಪದ ಹಳ್ಳಿಯಲ್ಲಿ ಕೋಳಿ ಕೂಗೋ ಶಬ್ದ ಈ ಗೂಡಿಗೆ ಕೇಳಿಸುತ್ತೆ. ಇಲ್ಲಿದ್ದಂತಹ ಹಸುಗಳಲ್ಲಿ ಎರಡು ಹೋರಿ ಇರ್ತವೆ ಅವು ಆ ಕೋಳಿ ಶಬ್ದ ಕೇಳಿದ ತಕ್ಷಣ ಹಟ್ಟಿ ಕಡೀಗೆ ಹೋಗಿ ಬಿಟ್ಟು ಅಲ್ಲಿ ಇರ್ತಕ್ಕಾಂತ ಜನಗಳ್ನೆಲ್ಲ ಇರ್ದು ಬಿಟ್ಟು ದೊಂಬಿ ಮಾಡ್ತವೆ. ಆ ಸಂದರ್ಭದಲ್ಲಿ ಅಲ್ಲಿ ಒಬ್ಬ ದೇವಸ್ಥಾನದ ಪೂಜಾರಿಯ ಮಗಳು ನೀಲಮ್ಮ ಅಂತ ಈ ಹೋರಿಗಳ ಆರ್ಭಟಕ್ಕೆ ಹಳ್ಳೀನೇ ಸರ್ವನಾಶ ಆಗುತ್ತೆ ಅಂದ್ಕೊಂಬಿಟ್ಟು ಆಕೆ ದೇವರ ವಡವಿಗಳ್ನೆಲ್ಲ ಒಂದು ಬುಟ್ಟೀಲಿ ಇಟ್ಕೊಂಬಿಟ್ಟು ತಂದು ನದಿ ತೀರದಲ್ಲಿ ಬಿಟ್ಟು ಬಿಟ್ಟು ನಾನು ಕೇಳಿದಾಗ ಇವು ಪ್ರಾಪ್ತವಾಗಲಿ ಅಂತ ಗಂಗೇಲಿ ಬೇಡ್ಕೊಂಡು ಅದ್ರಲ್ಲಿ ಬಿಟ್ಟುಬಿಡ್ತಾಳೆ ಬುಟ್ಟೀನಾ. ಹಳ್ಳಿಗೋಗುವಷ್ಟತ್ತಿಗೆ ಎರಡು ಗೂಳಿಗಳು ಎಲ್ಲರ್ನು ಸರ್ವನಾಶ ಮಾಡಿರ್ತವೆ. ಈ ಹೋರಿಗಳಿರೋ ಗೂಡು ಸರ್ವನಾಶವಾಗ್ಲಿ ಕ್ಷಾಮ ಬರ್ಲಿ ಅಂತಕ್ಕಂತ ಶಾಪಾನ ನೀಲಮ್ಮ ಕೊಟ್ಟು ಬಿಡ್ತಾಳೆ. ಇವ್ರಿಗೆ ಕ್ಷಾಮ ತಲೆದೋರುತ್ತೆ. ಹಸು ಕರುಗಳಿಗೆ ಹುಲ್ಲು, ನೀರು ಇಲ್ಲದಂಗೆ ಸಿಗದಂಗಾಗುತ್ತೆ. ಎಂತಾ ಕಷ್ಟ ಬಂತಲ್ಲಾ ಅಂತ ಯಜಮಾನ್ರೆಲ್ಲ ಕುಂತ ತೀರ್ಮಾನ ಮಾಡ್ತಾರೆ. ಮಾಡಿದಾಗ ಈ ನಮ್ಮ ಹೋರಿಗಳು ಹಿಂಗೆಲ್ಲ ನುಗ್ಗಿಬಿಟ್ಟು ಇದು ಮಾಡಿದ್ವು. ಅದ್ರದ್ದೆ ಇದು ನಮಗೆಲ್ಲೋ ಶಾಪ ತಟ್ಟಿರಬೇಕು. ಅಂತಂದು ಬಿಟ್ಟು ಆ ಊರಲ್ಲಿ ಯಾರಿದಾರೆ ಅಂತಂಕಂತದ್ನ ನೋಡಿಬಿಟ್ಟು ಹಿಂಗೆ ಪೂಜಾರೀನ ನಮ್ಮ ಹೋರಿಗಳೆಲ್ಲ ಇರದ ಮ್ಯಾಲೆ ಪೂಜಾರಿ ಮಗಳು ಹಿಂಗೆಲ್ಲ ನೋವು ಪಟ್ಟು ನಮಗೆ ಶಾಪ ಹಾಕಿದ್ದಾಳೆ ಅಂತ ಗೊತ್ತಾಗಿ, ಆಕೇನ ಕರ್ಕೊಂಬಂದು ಹೊಸ ಸೀರೆ ಉಡಿಯಕ್ಕಿ ಹಾಕಿ ಕಂಬ್ಳಿ ಗದ್ದಿಗೆ ಹಾಗಿ ಕಂಬ್ಳಿ ಮ್ಯಾಲೆ ಕುಂದರ್ಸಿ ಅಕೆಗೆ ತಪ್ಪು ಕಾಣ್ಕೆ ಕಟ್ಟಿಕಂತಾರೆ. ನಮ್ಮ ಹೋರಿಗಳು ಎನೋ ಅನಾಹುತ ಮಾಡಿದಾವೆ ನಿನ್ನ ಶಾಪಕ್ಕೆ ನಮ್ಮ ಗೂಡೆಲ್ಲ ಬಾಳ ತೊಂದ್ರೆ ಅನುಭವಿಸ್ತಿದೆವೆ ದನಕರುಗಳೆಲ್ಲ. ನೀನು ನಮ್ಮನ್ನು ಮನ್ನಿಸಬೇಕು ಅಂತ ಆಕೆ ಕಾಲಿಗೆ ಎಲ್ಲಾರು ಅಡ್ಡ ಬೀಳ್ತಾರೆ. ಆಕೆ ಆವಾಗ ಸಂತೃಪ್ತಳಾಗಿ ಮೆಚ್ಚಿಕೊಳ್ತಾಳೆ. ಆಗಿದ್ದಾಗೋಯ್ತು. ಈಗ ನೀವಾದ್ರೂ ಕೂಡ ಮುಂದೆ ಚೆನ್ನಾಗಿ ಬಾಳಿ ಬದುಕಿ ಅಂತಕ್ಕಾಂತ ಒಳ್ಳೆ ಉದ್ದೇಶದಿಂದ ತಾನು ಬಿಟ್ಟಿರ್ತಕ್ಕಂತ ದೇವರ ಬುಟ್ಟಿಯನ್ನು ಧ್ಯಾನ ಮಾಡಿದಾಗ ಆ ಬುಟ್ಟಿ ಮೇಲೆ ಬರುತ್ತೆ. ಆ ಬುಟ್ಟಿಯನ್ನ ಪೂರ್ತಿ ಇವರೇನಿದ್ರು ನೆಂಟ್ರು ಬಂಟ್ರು ಏನು ಜತಿಗಿದ್ರಲ್ಲ ಅವರ್ನೆಲ್ಲ ಕರ್ದು ಅವ್ರಿಗೆ ತೋರುಸ್ತಾಳೆ. ಅದ್ರಲ್ಲಿ ಮುತ್ತಿನ ಕಾಲುಪೆಂಡೆ, ಬಂಗಾರದ ಕೊಳಲು, ವಕ್ರದ ಭವನಾಸಿ ಒಂದು ಮಣ ತೂಕದ ಜಾಗಟೆ, ಶಂಖು ಆಮೇಲೆ ಬೇಕಾದಷ್ಟು ಸಾಲಿಗ್ರಾಮಗಳು, ಆಮೇಲೇ ಲಿಂಗಗಳು ಅಂದರೆ ಅದ್ರಲ್ಲಿ ವಿಷ್ಣು ಮತ್ತು ಶಿವರೂಪ ಎರಡು ಇದ್ದಂತಹ ಒಂದು ದೇವರ ವಿಗ್ರಹಗಳು ಮತ್ತು ವಸ್ತುಗಳು, ಪೂಜೆ ಸಾಮಾಗ್ರಿಗಳು ಇವೆಲ್ಲ ಬುಟ್ಟಿಯಲ್ಲಿ ಇರೋದನ್ನು ತೋರಿಸ್ತಾಳೆ. ನೋಡ್ರಿ ಇವನ್ನು ನಿಮಗೆ ಕೊಡ್ತೀನಿ ನೀವು ಬಾಳ ಭಕ್ತಿಯಿಂದ ಉದಿ-ಪದಿ ನೋಮು ಇವು ಬಾಳ ಮುಖ್ಯವಾದವು ಮ್ಯಾಸ ಮಂಡ್ಲಕ್ಕೆ ಅದರ ಮೂಲಕ ನೀವು ಆಚರಣೆ ಮಾಡಿಕೊಂಡು ಹೋದ್ರೆ ನಿಮಗೆ ಮುಂದೆ ಮೂರು ಸಂಸ್ಥಾನಗಳು ಪ್ರಾಪ್ತವಾಗುತ್ತೆ. ನಮ್ಮಲ್ಲಿ ಒಬ್ಬ ಕಾರಣಿಕ ಪುರುಷನೊಬ್ಬ ಹುಟ್ತಾನೆ ಅವನ ಕಾಲದಲ್ಲಿ ನೀವು ಚೆನ್ನಾಗಿ ನಿಮ್ಮ ಸಮಾಜ ಬೆಳೆಯುತ್ತೆ ಅಂತ ಆಶೀರ್ವಾದ ಮಾಡ್ತಾಳೆ. ಇದನ್ನು ಚೆನ್ನಾಗಿ ಪೂಜೆ ಮಾಡ್ಕೊಂಡೋಗಿ ನಿಮಗೆ ಒಳ್ಳೇದಾಗುತ್ತೆ ಅಂತ ಹೇಳ್ತಾಲೆ. ಎಲ್ಲರು ಆಕೇನ್ನ ವಂದಿಸಿಬಿಟ್ಟು ಅಲ್ಲಿಂದ ಮುಂದೆ ಶಾಪದಿಂದ ವಿಮುಕ್ತರಾದ್ವಿ ಧನ್ಯರಾದ್ವಿ ಅಂದ್ಕಂಡು ಅಲ್ಲಿಂದ ಮುಂದೆ ಬರ್ತಾರೆ. ತಮ್ಮ ಹಸುಗಳನ್ನು ಹೊಡ್ಕಂಡು ಮುಂದಕ್ಕೆ ಚಿನ್ಮುಲಾದ್ರಿಯ ಪೂರ್ವಕ್ಕೆ ಬರ್ತಾರೆ. ಬಂದಾಗ ಈಗ ಎನು ತುಮ್ಕೂರ್ನಲ್ಲಿ ಏನು ಇದಿಯೋ ಆ ಜಾಗದಲ್ಲಿ ಇವ್ರು ತಮ್ಮ ನೆಲೆಯನ್ನ ಸ್ಥಾಪನೆ ಮಾಡ್ತಾರೆ. ಇಲ್ಲಿ ಎಲ್ಲ ಸೇರ್ಕೊಂಡಿದ್ರಲ್ಲ ಮಂದಲ ಮೂರ್ತಿ ಮಾದೇವನಾಯಕ ಬೆಡಗಿನಲ್ಲಿ ಮಂದ್ಲರು, ಶುಕ್ಲ ಮಲ್ಲ ನಾಯಕ ಬೆಡಗಿನಲ್ಲಿ ಎನುಮ್ಲರು. ಈ ನೀಲಮ್ಮ ಕೊಟ್ಟಂತಹ ದೇವರ ಒಡವಿಗಳನ್ನೆಲ್ಲ ಎರಡು ಭಾಗ ಮಾಡ್ಕೊಂತಾರೆ. ಶುಕ್ಲ ಮಲ್ಲನಾಯಕನಿಗೆ ಒಂದು ದೊರೆ ಪಟ್ಟ ಕಟ್ಟಿ ಪೂಜಾ ಕಾರ್ಯಗಳನ್ನೆಲ್ಲ ಮಂದ್ಲರು ಮಾಡಬೇಕು ಅಂದೇ ತೀರ್ಮಾನ ಆಗುತ್ತೆ. ಎನುಮ್ಲರಿಗೆ ದೊರೆ ಸ್ಥಾನ ಕೊಡಬೇಕು. ಒಂದು ಸಿಂಹಾಸನ ಅಲ್ಲಿ ಪ್ರಾರಂಭ ಆಗುತ್ತೆ. ಪೂಜೆ ವಿಧಾನಗಳನ್ನೆಲ್ಲ ಮಂದ್ಲರು ಮಾಡಿಕೊಂಡು ಹೋಗಬೇಕು. ಈ ಒಂದ ದೊಡ್ಡ ಕಂಪಳ ನೆಂಟ್ರು-ಬಂಟ್ರು ಸೇರ್ಕೊಂಡಿರೋದೆ ಒಂದು ಕಂಪಳ. ಈ ಕಂಪಳಕ್ಕೆ ಸೇರಿರ್ತಕ್ಕಂತ ಒಂದು ಈ ದೇವ್ರೇ ಮುಂದೆ ಕಂಪಳ ರಂಗಸ್ವಾಮಿ, ಕಂಪಳ ದೇವ್ರು ಅಂತ ಆಗುತ್ತೆ. ಇದು ಮ್ಯಾಸರ ಮೊದಲನೇ ಮೂಲ ದೇವ್ರು ಇದು. ಕಂಪಳದ ದೇವರು ಕಂಪಳ ದೇವ್ರು. ಕಂಪಳ ಅಂತಂದ್ರೆ ಒಂದು ಗುಂಪು, ಒಂದು ಒಕ್ಕೂಟ ಅಂತಾ ಹೇಳ್ತೀವಿ ನಾವು. ಅಲ್ಲಿ ಇವ್ರು ವಿಧಿ, ವಿಧಾನಗಳನ್ನು ಹಂಚಿಕೊಂಡ್ರು. ಶುಕ್ಲ ಮಲ್ಲನಾಯಕನ ನೆಂಟ್ರೆಲ್ಲ ಪೂಜೆ ಮಾಡ್ತಕ್ಕಂತದ್ದು. ಪೂಜಾರ್ಕೆಲ್ಲ ಅವ್ರಿಗೆ ಬಂತು ಅವತ್ತ್ನಿಂದ. ಇವ್ರು ದೊರಿಗಳು ದೊರೆತನ ಇವ್ರಿಗೆ ಕಟ್ಟಿದ್ರು. ಅಲ್ಲಿಂದ ಆ ದೇವರ್ನ ವರ್ಷಾನು ಅದನ್ನ ನದಿಗೆ ಕರ್ಕೊಂಡು ಹೋಗೋದು ಅಲ್ಲಿಂದ ಪೂಜೆ ಮಾಡ್ಕಂಡು ಬಂದು ಸಿಂಗರಿಸಿ ಅದಕ್ಕೆ ಬೇಕಾದಂತಹ ಗುಗ್ರಿ ಹಬ್ಬ ಅಂತಹ ಹೇಳ್ತೀವಲ್ಲ. ಎಲ್ಲಾ ದೇವ್ರಗಳಿಗಿಂತ ಮೊದಲು ಕಂಪಳ ದೇವ್ರದೇ ಮದ್ಲು ಗುಗ್ರಿ ಆಗೋದು. ಇದನ್ನ ಕಾರ್ತೀಕ ಮಾಸ್ದಲ್ಲಿ ಮಾಡ್ತಾರೆ.

ಎನುಮ್ಲರಿಗೂ ಮಂದ್ಲರಿಗೂ ಇಬ್ರಿಗೂ ದೇವ್ರದು. ಅಲ್ಲೇನು ವ್ಯತ್ಯಾಸವಿಲ್ಲ. ಆತನಿಗೆ ನಡ್ಕೋಳ್ಲಿಕ್ಕೆ ಕಂಪಳದೇವ್ರಿಗೆ. ಯಾಕಂದ್ರೆ ಇಬ್ರು ಸೇರಿ ಮಾಡಿರ್ತಕ್ಕಂತ ದೇವ್ರದು. ಅದು ಸಿಕ್ಕದ್ದು ಆಕಸ್ಮಿಕವಾಗಿ ಇವ್ರಿಗೆ. ಆಕೆ ಕೊಡ್ದೇ ಇದ್ರೆ ಇವ್ರಿಗೆ ದೇವರಿಲ್ಲ. ಏಕೆಂದ್ರೆ ಇವ್ರು ಅಲೆಮಾರಿಗಳು ತಾನೆ. ಆ ಪುಟ್ಟೇಲಿಟ್ಕೊಂಡೆ ಹೋದಕಡೇಲೆಲ್ಲ ಅದನ್ನು ಹೊತ್ಕಂಡು ಹೋಗ್ತಿದ್ರು. ಈವತ್ತು ಕೂಡ ಜಾತ್ರೇಲಿ ಮುತ್ತಿನ ಕಾಲಪೆಂಡೆ ಏನಿದೆ ಅದ್ನ ತೋರುಸ್ತಾರೆ. ಆಮೇಲೆ ಆ ದೇವ್ರು ವಡವೇ ಪೂಜಾರಿಗೊಬ್ರಿಗೆ ಗೊತ್ತು. ಜಾತ್ರೆ ಆದ ತಕ್ಷಣ ಅವುನ್ನ ಎಲ್ಲಿ ಊಣಿರ್ತಾನೆ ಗೊತ್ತಿರಲ್ಲಾ. ಇಲ್ಲದಿದ್ದರೆ ಅಷ್ಟೊಂದು ವಡವೇ ಇರ್ಲಿಕ್ಕೆ ಸಾಧ್ಯವಿತ್ತಾ ಈ ಕಾಲ್ದಲ್ಲಿ? ಅವನಿಗೊಬ್ಬನಿಗೆ ಗೊತ್ತಿರುತ್ತೆ ಎಲ್ಲಿ ಊಣಿದೇನಿ ಅಂತ. ಆ ದೇವರ ದಿನ ಆ ವಡವೇನ ತಂದು ಅದಕ್ಕೆ ಅಲಂಕಾರ ಮಾಡ್ತಾರೆ. ಆಮೇಲೆ ಆವತ್ತು ಅಲಂಕಾರ ಮಾಡಿದ ದಿನ ಮುತ್ತಿನ ಕಾಲಪೆಂಡೆ ಅವ್ರಿಗೆಲ್ಲ ತೋರುಸ್ತಾರೆ. ಈತ ಕಂಪಳ ರಂಗಸ್ವಾಮಿ ವೆಂಕಟೇಶ್ವರ ಅಂತ್ಲೆ ಆತನ್ನ ಆರಾದ್ನೆ ಮಾಡ್ತಿರೋದು. ಕಂಪಳ ರಂಗಸ್ವಾಮಿ ಬೇರೆಯಲ್ಲ ತಿರುಪ್ತಿ ವೆಂಕಟರಮಣನೆ. ಏಕೆಂದ್ರೆ ಗೋಪಾಲಕರಿದ್ದಂಗೆ ತಾನೆ ಇವ್ರು…? ಆತನ್ನ ಕಂಪಳಸ್ವಾಮಿ, ಕಂಪಳರಂಗ ಅಂತ ಕರೀತಾರೆ. ಹಿಂಗೇ ಅಲ್ಲಿಂದ ಗದ್ದಿಗೆ ಸ್ಥಾಪನೆ ಮಾಡಿಬಿಟ್ಟು ಅವರವರ ಕೆಲಸಕ್ಕೆ ಹೋಗಿಬಿಟ್ರು. ಅವ್ರೆಲ್ಲ ಅಲ್ಲೊಬ್ಬ ಯಜಮಾನನ್ನು ಇಟ್ಟು ಪೂಜಾಕಾರ್ಯಗಳನ್ನು ಮಾಡೋದಕ್ಕೆ ಒಂದು ವ್ಯವಸ್ಥೆ ಮಾಡದ್ರು. ಒಂದು ಸರಿ ಏನು ಮಾಡಿಬಿಡ್ತಾರೆ ಅಲ್ಲಿ ಸರಿಯಾದ ವ್ಯವಸ್ಥೆ ಇಲ್ದೆ ದೇವರ ಹಟ್ಟೀಲಿ ಕಳ್ತನ ಆಗಿಬುಡುತ್ತೆ. ಅದು ಹೆಂಗೋ ಯೋಗ ಇದರಲ್ಲಿ ಗೊತ್ತಾಗಿಬಿಡುತ್ತೆ ಜಗಲೂರು ಪಾಪನಾಯಕನಿಗೆ. ಗೋಣೂರಲ್ಲಿದ್ದಾಗ ಆತನಿಗೆ ಕನಸಲ್ಲಿ ದೇವರ ಒಡವೇ ಕಳ್ತನ ಆಗಿರೋದು ಗೊತ್ತಾಗುತ್ತೆ. ಆ ತಕ್ಷಣ ಗೋಣೂರಿಂದ ನನ್ನಿವಾಳಕ್ಕೆ ಬಂದು ಕಟ್ಟೆಮನೆಯಲ್ಲ ಎಲರ್ನು ಕರ್ದು ಒಂದು ಟ್ರಸ್ಟ್ ಮಾಡ್ತಾನೆ. ಎಲ್ಲ ಜಾತಿಯೋರ್ನ ಸೇರುಸ್ತಾನೆ. ಕುರುಬರು, ಎಸ್ಸಿಗಳು ಎಲ್ಲರ್ನು ಕರ್ಕಂಡು ಅಲ್ಲಿಗೆ ಹೋಗ್ತಾನೆ. ಯಾಕಾಂದ್ರೆ ಮೂಲವಾದ ದೇವಸ್ಥಾನ ಅದು ಮೂಲ ದೇವ್ರದು ಮ್ಯಾಸರಿಗೆ ಅದಕ್ಕೊಂದು ಬಂದೋಬಸ್ತು ಇಲ್ಲಂದ್ರೆ ಹ್ಯಂಗೇ ಅಂದು ಈತ ಎಲ್ಲರ್ನು ಕರ್ಕೊಂಡು ಹೋಗ್ತಾನಲ್ಲಿಗೆ. ಕರ್ಕೊಂಡೋದ ತಕ್ಷಣ ಅಲ್ಲಿಯವರಿಗೆ ದೇವ್ರ ವಡವೆ ಕಳ್ತನ ಆಗಿದೆ ಅಂತ ಗೊತ್ತಾಗಿಬಿಡುತ್ತೆ. ಆಗ ಈತನ ಕೈಯಲ್ಲಿ ನಾಗಮುರಿ ಬೆತ್ತ ಇರುತ್ತಲ್ಲ ಅದಕ್ಕೆ ಆಜ್ಞೆ ಮಾಡ್ತಾನೆ. ಅದು ಹೋಗಿಬಿಟ್ಟು ಅವ್ರೆಲ್ಲಿ ಕಳ್ಳರಿದ್ರೋ ಅವರ್ನೆಲ್ಲ ಹೊಡ್ದಬಿಟ್ಟು ವಾಪಸ್ಸು ಕರ್ಕೊಂಬರುತ್ತೆ. ಅವತ್ತು ವಡವೆ ಇಡಿಸಿಬಿಟ್ಟು ಅವ್ರು ತಮ್ಮದು ತಪ್ಪಾಯ್ತು ಅಂತ ಕಾಲಿಡುಕೊಂತಾರೆ ಪಾಪನಾಯಕನ್ನ. ಆಯ್ತು ಇನ್ನು ಮಾಡಬೇಡ್ರೆ ಸ್ವಾಮಿ ಸೇವೆ ಮಾಡಿಕೊಂಡು ಹೋಗ್ರಿ ಅಂತ ಅವರ್ನ ದೇವಸ್ಥಾನದಲ್ಲಿ ಕೆಲ್ಸಕ್ಕೆ ಹಚ್ತಾನೆ. ಆಗ ಯಜಮಾನ್ರೆಲ್ಲ ಸೇರ್ಕೊಂಡು ಬಿಟ್ಟು ಹೆಂಗಪ್ಪಾ ನಿನ್ನಿಂದ ದೇವರ ವಡವೇ ಸಿಕ್ವು ಪಾಪನಾಯಕ ಅಂತಂದು ಅವತ್ತೆಲ್ಲ ದೇವ್ರು ಮಾಡ್ತಾರೆ. ಈ ನಾಗೇಂದ್ರ ನಮ್ಮ ದೇವ್ರ ವಡವೇನೆ ತಂದು ಕೊಟ್ಟ ಅಂತ ಒಂದು ಜ್ಞಾಪಕ್ಕೆ ಹನ್ನೆರಡೊವರುಸುಕ್ಕೆ ಒಂದ್ಸಾರಿ ಪೆಡಗಟ್ಟು ಪಂಡುಗಾ ಅಂತ ಮಾಡ್ತಾರೆ. ಎಡೆ ಹಬ್ಬಾ ಅಂತ. ಅವತ್ತು ನಾಗೇಂದ್ರನ ಪೂಜೆ. ಆತ ನಮ್ಮ ದೇವರ ವಡವೇನ ತಂದು ಕೊಟ್ಟದ್ದಕ್ಕೆ ಆವತ್ತು ಆತನಿಗೆ ಪೂಜೆ ಸಲ್ಲಿಸ್ಲಿಕ್ಕೆ ಅವತ್ತು ಬರೇ ನಾಗೇಂದ್ರನ ಪೂಜೆ. ಪೆಡಗಟ್ಟು ಹಬ್ಬ ಅಂತ ಮಾಡ್ತಾರೆ.ಈತ ಅಲ್ಲಿಗೆ ಹೋದ ಮೇಲೆ ಮುಕ್ಕಣ್ಣನ ಕಠಾರೀನಾ ಕಂಪಳರಂಗಸ್ವಾಮಿಯ ಗುಡಿಯ ಮುಂದೆ ಪ್ರತಿಷ್ಠಾಪನೆ ಮಾಡ್ತಾನೆ ಪಾಪನಾಯಕ. ಈಗ್ಲು ಅಲ್ಲಿ ಗದ್ದಿಗೆ ಇದೆ ಸೂರ್ಯ ಪಾಪನಾಯಕನ ಗದ್ದಿಗೆ ಅಂತ. ದೇವಸ್ಥಾನಾನ ಅಲ್ಲಿ ಕಟ್ಟಿಸಿದ್ದಾರೆ. ದೇವರು ಹೊರಡಿಸಿದ ತಕ್ಷಣ ಜಾತ್ರೇಲಿ ಪಾಪನಾಯಕನ ಗದ್ದಿಗೆ ಮೇಲೆ ಕೂತ್ಕೊಳ್ಳತ್ತೆ. ಇಷ್ಟು ಕಂಪಳರಂಗ ಸ್ವಾಮಿಯ ಕಥೆ.

—-
– ಈ ಕಥೆಗಳನ್ನು ಹೇಳಿದವರು ಚಳ್ಳಿಕೆರೆಯ ತಿಪ್ಪೇಸ್ವಾಮಿಯವರು