ಸಂ – ನಾವು ಕನ್ನಡ ಯುನಿವರ್ಸಿಟಿಯಿಂದ ಬರ್ತಾ ಇದೀವಿ. ಗಾದ್ರಿಪಾಲನ ಬಗ್ಗೆನೇ ಅಭ್ಯಾಸ ಮಾಡ್ತಾ ಇದೀವಿ. ನಿಮ್ಮ ಹೆಸರೇನು ?

ಪೂ – ನನ್ನ ಹೆಸರು ರಾಮಚಂದ್ರಪ್ಪ ಅಂತ.

ಸಂ – ನಿಮ್ಮ ಅಪ್ಪಾರ ಹೆಸರೇನು ?

ಪೂ – ನರಸಪ್ಪ ಅಂತ.

ಸಂ – ನಿಮ್ಮ ಅಪ್ಪಾರ ಅಪ್ಪರ ಹೆಸರು ?

ಪೂ – ಕಂಪಳಪ್ಪ ಅಂತ.

ಸಂ – ಯಾವ ಬೆಡಗು ನಿಮ್ಮದು ?

ಪೂ – ನಾವು ಕಾಮಗೆತ್ತಲಾರು.

ಸಂ – ಈ ಗಂಜಿಗಟ್ಟೀ ಅಂತಾ ಸ್ಥಳ ಐತಲ್ಲ ಇದರ ಮಹತ್ವ ಏನು ?

ಪೂ – ಬಾಳಾ ಇತಿಹಾಸದ ಹಿಂದೆ ಗದ್ರಿಪಾಲನಾಯಕನ ದನಗಳನ್ನೂ ಇಲ್ಲಿ ಮೇಯಿಸೋಕೆ ಈ ಬೌಂಡ್ರಿಯಲ್ಲಿಯೇ ಇಲ್ಲಿಯೇ ರೊಪ್ಪು ಮಾಡಿಕಂಡಿದ್ರಂತೆ. ಇಲ್ಲಿಯೇ ಅವ್ರು ದೇವ್ರನ್ನ ಸ್ಥಾಪನೆ ಮಾಡಿಕೊಂಡಿದ್ರಂತೆ. ಅಮೇಲೆ ಮಿಂಚೇರಿ ಅಡಿವೇಲಿ ದನಗಳನ್ನ ಮೇಯ್ಯಕ, ಹೋದಾಗ ಗಾದ್ರಿಪಾಲ ನಾಯಕನಿಗೂ ಹುಲಿಗೂ, ಹುಲಿಮರಿ ಗಾದ್ರಿಪಾಲನಾಯಕನ ಮರಿಗಳನ್ನು ಕೊಲ್ತು ಅಂತಾ. ಅವ್ರ ತಮ್ಮ ಗಾದ್ರಿಪಾಲ ನಾಯಕ ಇಲ್ಲದ ಸಮಯದಲ್ಲಿ ಹುಲಿ ಮರಿ ಕೊಂದ ಎಂದು ಇಬ್ರಿಗೂ ವ್ಯಾಜ್ಯಾ ಶುರುವಾಯ್ತು.

ಸಂ – ಆಮೇಲೆ ಈ ಗಂಜೀಕಟ್ಟಿ ಅಂತಾ ಯಾಕೆ ಈ ಊರಿಗೆ ಹೆಸರು ಬಂತು ?

ಪೂ – ಗಂಜಿಕಟ್ಟಿ ಅಂದ್ರೆ ಇಲ್ಲಿ ನೂರಾ ಒಂದು ಸಾಲಿಗ್ರಾಮಗಳು ಇದಾವೆ ಈ ಊರ್ನಲ್ಲಿ. ಅವು ಏನು ಗಂಜಿನಲ್ಲಿ ದನಗಳ ಗಂಜಿನಲ್ಲಿ ಸಿಕ್ಕಿದ್ವು ಅಂತಾ ಗಂಜೀಗಟ್ಟಿ ಅಂತಾ ಸ್ಥಾಪನೆ ಮಾಡ್ತಾರೆ.

ಸಂ – ಮತ್ತೆ ಇನ್ನೊಂದು ಕಥೆ ಹೇಳ್ತಾರೆ. ಏನಂದ್ರೆ ಅಕ್ಕಿ ಬೇಸಾಕೆ ಗಾದ್ರಿಪಾಲನ ಹೆಂಡ್ತೀರು ಇಟ್ಟು ಹೋಗಿದ್ರು ನೀರು ತಗಂಬರಕೇ.

ಪೂ – ಅಂದನೂರಾಗೆ.

ಸಂ – ಅಂದನೂರಾಗೆ ಅದೊಂದೇನೋ ಕಥೆ ಹೇಳ್ತಾರೆ. ಅದು ಗೊತ್ತಾ ನಿಮಗೆ ಕಥೆ ?

ಪೂ – ಅದು ಹಿಂದಿನವರು ಹೇಳ್ತಿದ್ರು ಅದರ ಬಗ್ಗೆ ಪೂರಾ ಮಾಹಿತಿ ಗೊತ್ತಿಲ್ಲ.

ಸಂ – ಯಾವ್ಯಾವ ಜಾತಿಯವರು ಪೂಜೆಮಾಡ್ತಾರೆ ಗಾದ್ರಿಪಾಲನಾಯಕನ್ನ ?

ಪೂ – ಗಾದ್ರಿಪಾಲನಾಯಕನ್ನ ಪೂಜೆಮಾಡೋರು ಕಾಮಗೆತ್ಲರು ಮಾತ್ರ. ಅವ್ರು ದೊರೆ ವಂಶದವರಲ್ಲ.

ಸಂ – ಕಾಮಗೆತ್ಲರು ದೊರೆ ವಂಶದೋರಾ ?

ಪೂ – ಅಲ್ಲ ಅವ್ರು ಎನುಮ್ಲರು ಅಂತಾರಲ್ಲ ಅವ್ರು ದೊರೆ ವಂಶದವರು. ಈ ಗಾದ್ರಿಪಾಲನಾಯಕನ ಹೆಂಡ್ರೀರಿದಾರಲ್ಲ ಅವ್ರು ಕಾಮಗ್ಯತ್ಲರ ವಂಶದವರು. ಅವ್ರು ವಂಶಕ್ಕೆ ಕೊಟ್ಟು ಮಧುವೆ ಮಾಡಿದ್ರಲ್ಲ, ಅಮೇಲೆ ಅವ್ರು ಸತಿಯೊಡನೆ ಸಹಗಮನ ಪದ್ಧತಿ ಆವಾಗ ಇತ್ತಲ್ಲಾ ಇಲ್ಲಿ ಅವ್ರು ತೀರಿಕೊಂಡ್ರಲ್ಲ ಅವಾಗ ಅವ್ರು ಏನೋ ಒಂದು ಶಾಪ ಹಾಕಿದ್ರಂತೆ. ನಮ್ಮ ತವರುಮನೆಯವರು ಮಾತ್ರ ಮೈ ಕೈ ಮುಟ್ಟಿ ನಮ್ಮ ಪೂಜೆ ಮಾಡೋಕೆ ಅರ್ಹರು. ಅವ್ರು ಮಾಡಿಂಗಿಲ್ಲ ಅಂತಾ ಶಾಪ ಹಾಕಿದ್ರು. ಅದಕ್ಕೋಸ್ಕರ ಕಾಮಗೆತ್ಲರು ಪೂಜೆ ಮಾಡ್ತಾರೆ.

ಸಂ – ಅಂದ್ರೆ ಅವರ ಹೆಂಡ್ತೇರು ಕಾಮಗೆತ್ಲರು…..?

ಪೂ – ಹಾದು ಕಾಮಗೆತ್ಲರೆ ಎನುಮ್ಲರಲ್ಲ.

ಸಂ – ಗಾದ್ರಿಪಾಲನಾಯಕ ಎನುಮ್ಲರನು.

ಪೂ – ಎನುಮ್ಲರನು.

ಸಂ – ಈ ಜಗಳೂರಜ್ಜನ ಬಗ್ಗೆ ನಿಮಗೆ ಏನಾದ್ರೂ ಗೊತ್ತ ?

ಪೂ – ಅವರು ನಮಗೆ ಅಷ್ಟು ಗೊತ್ತಿಲ್ಲ.

ಇಲ್ಲಿಂದ ಅವರು ವಲಸೆ ಹೋಗಿ ಅವರು ಸ್ಥಾಪನೆ ಮಾಡಿಕಂಡಿದ್ದಾರಂತೆ.

ಪೂ – ಇದು ಮೂಲ ಇಲ್ಲೆಯಾ ಇಲ್ಲಿಂದ ಅಣ್ಣತಮ್ಮಗಳ ಜಗಳ ಮಾಡಿಕೊಂಡೋಗಿ ಅಲ್ಲಿ ಹೋಗಿ ಅಲ್ಲಿ ಒಂದು ಸ್ಥಾಪನೆ ಮಾಡಿ, ಅಲ್ಲೇ ಒಂದು ದೇವರ ಮಾಡಿಕೊಂಡರು ಅಂತ.

ಸಂ – ಜಗಳೂರಜ್ಜ ಗಾದ್ರಿಪಾಲ ಬೇರೆ ಬೇರೆನಾ ಅಥವಾ ಇಬ್ರೂ ಒಬ್ರೆನಾ ?

ಪೂ – ಅವ್ರು ಏನಾ ಅಣ್ಣ ತಮ್ಮಗಳು ಇರಬೇಕು. ಒಂದೆ ಸಾ ಪಾಲನಾಯಕ ಅಂತ ಬಿರುದು ಬಂದು ಮೇಲೆ ಈ ಊರೆಲ್ಲ ಜಗಳೂರಪ್ಪ ಜಗಳೂರಪ್ಪ ಪವಾಡಗಳು ಮಾಡಿಕೊಂಡು ಬೇರೆ ಬೇರೆ ಸ್ಥಾನ ಮಾಡಿದ್ರೆ ವಿನಾ ದು ಬಿಟ್ಟು ಬೇರೆ ಏನಿರಕಾಗಲ್ಲ.

ಸಂ – ಯಾಕಂದ್ರೆ ಇನ್ನೊಂದು ಕಥೆ ಹೇಳ್ತಾರಂದ್ರೆ ಗಾದ್ರಿಪಾಲ ಮತ್ತು ಜಗಳೂರಜ್ಜ ಇಬ್ರೂ ಅಳಿಯ ಮಾವ ಅಂತ.

ಪೂ – ಇಲ್ಲ.

ಸಂ – ಅವನಿಗೆ ಗಾದ್ರಿಪಾಲನ ಎಲ್ಲ ಯಸಸ್ಸಿನಲ್ಲಿ ಜಗಳೂರಜ್ಜ ಇರ್ತಾನೆ. ಅವ್ರು ಜೊತೆ ಜೊತೆಗೆನೆ ನಿಮ್ಮ ಕಮ್ಯುನಿಟಿ ಕಟ್ತಾ ಹೋಗ್ತಾರೆ, ಉದ್ದಾರ ಮಾಡೋದಕ್ಕೆ ಪ್ರಯತ್ನಮಾಡ್ತಾರೆ ಅಂತ ಜಗಳೂರಜ್ಜಗೂ ಗಾದ್ರಿಪಾಲಗೂ ಏನೋ ಸಂಬಂಧ ಇರಬೇಕೋ ?

ಪೂ – ಅಣ್ಣ ತಮ್ಮಗಳೇ.

ಸಂ – ಇಬ್ರೂ ಅಣ್ಣ ತಮ್ಮಗಳೇ

ಪೂ – ಏಕೆಂದ್ರೆ ಈ ಜಗಳೂರಜ್ಜುಗ ನಡಿತಕ್ಕಂತ ವಂಶಕರು ಏನು ನಮ್ಮ ಅಣ್ಣ ತಮ್ಮಗಳು ಅನ್ನೋರು ಇಲ್ಲಿ ನೆಡಿಯೋರು ಅವ್ರೆ, ಅಲ್ಲಿ ನಡಿಯೋರು ಅವ್ರೆ, ಅಂದ್ರೆ ಜಗಳೂರಜ್ಜಗ ನಡಿಯೋರು ಅದೇ ವಂಶದರೆ ಇವ್ರಿಗೆ ನಡಿಯೋರು ಅದೇ ವಂಶದರೆ. ಅಂಗಾಗಿ ಅವ್ರು ಅಣ್ಣತಮ್ಮಗಳು ವಿನಾ ಸಂಬಂಧಿಗಳೇನಲ್ಲ.

ಪೂ – ಜಗಳೂರಜ್ಜುಗ ನಡಿಯೋರು ಎನುಮ್ಲರೆ ಗಾದ್ರಿಪಾಲ್ನಾಯಗೆ ನಡಿಯೋರು ಎನುಮ್ಲರೆ ಅಂಗಿದ್ದ ಮೇಲೆ ಅಣ್ಣ ತಮ್ಮಗಳಾದ್ರಲ್ಲ.

ಸಂ – ಅದೇ ಅದೇ, ಜಾತ್ರೆ ಮಾಡ್ತೀರಲ್ಲ ಜಾತ್ರೆ ಯಾವ ಟೈಮ್ ನಲ್ಲಿ ಜಾತ್ರೆ ಮಾಡ್ತೀರಿ ?

ಪೂ – ಗಾದ್ರಿಪಾಲನ ಜಾತ್ರೆ ಹೊಳಿ ಹುಣಿಮೆ ಬರುತ್ತದಲ್ಲ, ಶಿವರಾತ್ರಿ ಆದಮೇಲೆ ಹುಣ್ಣಿಮೆ ಬರುತ್ತಲ್ಲ ಹುಣಿವಿ ಟೈಮಲ್ಲಿ ಮಾಡ್ತೀವಿ.

ಸಂ – ಅಂದ್ರೆ ಇನ್ನೊಂದು ತಿಂಗಳು ಮಾರ್ಚ್ ತಿಂಗಳಲ್ಲಿ ಮಾಡ್ತೀರಿ, ಅಂದ್ರೆ ಎಷ್ಟು ದಿನ ಮಾಡ್ತೀರಿ ?

ಪೂ – ಅದು ಐದು ದಿವಸ ಮಾಡ್ತೀವಿ. ಮೊದಲನೆ ದಿವಸಾ ಝಂಡಾ ಏರ್ಸೋದು. ಆಮೇಲೆ ಝಂಡಾ ಏರಿಸಿ ದೇವ್ರುಗಳು ಗಾದ್ರಿಪಾಲನಾಯಕನ ಒಂದು ಬಿಲ್ಲು, ಆಮೇಲೆ ಗಾದ್ರಿಪಾಲನಾಯಕನ ಮನೆ ದೇವ್ರು ಅಂತ ಕಂಪಳಸ್ವಾಮಿ ನರಸಿಂಹಸ್ವಾಮಿ ಅಂತ ಮಾಡಿಕಂಡಿದ್ದನಲ್ಲ ಅವನು ಆಹೋ ಬಲದಿಂದ ಬರಬೇಕಾದ್ರೆ ಅಲ್ಲಿಂದ ಆ ದೇವರನ್ನ ಸ್ಥಾಪನೆ ಮಾಡಿಕೊಂಡು. ಏಕೆಂದ್ರೆ ಇತ್ತೀಚಿಗೆ ಇವ್ನು ದೇವ್ರಾದ ಅವನಿಗೆ ಮೊದ್ಲು ಒಂದು ಮೂಲ ದೇವ್ರು ಬೇಕಾಗಿತ್ತಲ್ಲ ಆವಗ ಅವನು ಆ ನರಸಿಂಹ ಸ್ವಾಮಿನ ಮಾಡಿಕೊಂಡಿದ್ದಾ, ಆವಗ ನಾವು ಆ ನರಸಿಂಹ ದೇವಸ್ಥಾನದ ಮುಂದೆ ಒಂದು ದೊಡ್ಡದು ಒಂದು ಬಾವುಟ ಏರಿಸಿ, ಆಮೇಲೆ ಅವತ್ತದಕ್ಕೆಲ್ಲ ಅದುಕ್ಕೆಲ್ಲ ವಿಜೃಂಭಣೆ ಆವ್ರು ವಂಶದವರೆ ಅಲ್ಲೆ ಎಲ್ಲ ಕಾರ್ಯಕ್ರಮಗಳು ಎನಮ್ಲರು ವಂಶದವರೆ ಎಲ್ಲ ಮಾಡಿ ಅಲ್ಲಿ ಝಂಡಾ ಏರಿಸಿ ಆವತ್ತಿನ ದಿವಸ ಗಾದ್ರಿ ದೇವ್ರುನ ಒಂದು ಬಿಲ್ಲು ನರಸಿಂಹಸ್ವಾಮಿದು ಸಾಲಿಗ್ರಾಮದ ಒಂದು ಪೆಟ್ಟಿಗೆ ಆಮೇಲೆ ಇವ್ರು ಜತೆಗೆ ಒಂದು ಕುದುರೆ ಸೇಜಿ ಒಂದು ಐತೆ. ಅವು ಮೂರನ್ನೂ ತಗೊಂಡು ಗಾದ್ರಿಪಾಲ ನಾಯಕ ಪರಮೇಶ್ವರ ದೇವಸ್ಥಾನ ಐತಿ. ಅಲ್ಲಿಗೆ ಹೋಗಿ ಅಲ್ಲೆಲ್ಲ ಪೂಜೆ ಗೀಜೆ ಮಾಡಿಕೊಂಡು ಆಮೇಲೆ ಅಲ್ಲಿಂದ ಹುಲಿಗುಡ್ಡೆ ಪಾಲನಾಯಕನ ಗುಡ್ಡೆ ಗುಡ್ಡೆ ಸತ್ತುರ ಜಾಗ ಐತಲ್ಲ ಅಲ್ಲಿಗೆ ಹೋಗಿ ಆ ಹಳ್ಳದಲ್ಲಿ ಕುಂದ್ರಿಸಿ.

ಸಂ – ಮಿಂಚೇರಿ ಹಳ್ಳ

ಪೂ – ಮಿಂಚೇರಿ ಹಳ್ಳ ಆಮೇಲೆ ಅಲ್ಲಿಂದ ಮುಂದೆ ಕಡೇಕಂಬ ಅಂತಾ ಬರುತ್ತಲ್ಲ ಅಲ್ಲಿ ಪೂಜೆ ಮಾಡ್ಕಂಡು, ಆಮೇಲೆ ಮಿಂಚೇರಿಗೆ ಒಂದು ಸ್ಟಾಪು. ಈ ದೇವ್ರು ಇಲ್ಲಿಂದ ಹೊಂಟ್ರೆ ಆ ಹುಲೆಗುಡ್ಡೆ ಪಾಲನಾಯ್ಕನ ಗುಡ್ಡೆ ಹತ್ರ ಮಾತ್ರ ಪೂಜೆ ಕುಂದ್ರಿಸಿ ಪೂಜೆ ಮಾಡ್ತೀವಿ. ಅಲ್ಲಿ ಬಿಟ್ರೆ ಬೇರೆ ಎಲ್ಲೂ ಇಲ್ಲ. ಅಲ್ಲಿಂದ ಮಿಂಚೇರಿಗೆ ಒಂದತ್ರ ಕುಂದ್ರಸ್ತೀವಿ. ಅಲ್ಲಿಂದ ಬರ್ತಾ ಮಾರ್ಗವಾಗಿ ಹುಣ್ಸೇಮರ ಅಂತ ಅಲ್ಲಿ ಮೊದ್ಲು ಲುಡೇಗೇರಿ ಅಂತ ಹಳೇ ಊರು ಊರಿತ್ತಂತೆ ಅಲ್ಲಿ.

ಸಂ – ಅಂದ್ರೆ ಮಿಂಚೇರಿ ಹಳ್ಳದ ಪಕ್ಕಕ್ಕೆಲ್ಲಾ ಅಲ್ಲಿ ಹಾಳಾಗೈತಿ ಎಲ್ಲ.

ಪೂ – ಅಲ್ಲೊಂದು ಕಟ್ಟೆ ಐತೆಲ್ಲ, ಆ ಕಾಲದಲ್ಲಿ ಅದು ದೇವ್ರು ಕುಂದ್ರೋ ಕಟ್ಟೆ ಅಲ್ಲಿಂದ ಬಂದು ಅಂತಂದು ಅಲ್ಲಿ ಕುಂದ್ರಿಸಿ ಊರಿನವರೆಲ್ಲ ಅಲ್ಲಿ ದಾಸೋಹ ಇಟ್ಕೊಂಡಿರ್ತಾರೆ. ಆಮೇಲೆ ಭೂತಗಳು ತಗೊಂಡೋಗಿರ್ತಾವಲ್ಲ ಅವಕ್ಕೆಲ್ಲ ಹೆಡೆಗಿಡೆ ಹಾಕಿ ಅಲ್ಲಿ ಪೂಜೆ ಮಾಡ್ಕಂಡು ಅಲ್ಲೊಂದು ಗಂಟೆ ವಿಶ್ರಾಂತಿ ತಗೊಂಡು ಅಲ್ಲಿಂದ ಬಂದೋರು ಸೀದಾ ಉಡೇಗೇರಿಗೆ ಬಂದು ಇಲ್ಲೀ ಬನ್ನೀಮರಾ ಅಂತ ಬರುತ್ತೆ. ಅಲ್ಲಿ ಕ್ಯಾಂಪ್ ಆಗುತ್ತೆ, ಅಲ್ಲಿಂದ ಪೂಜೆಗೀಜೆ ಮುಗಿಸ್ಕಂಡು ಆಮೇಲೆ ಈ ಕಡೆ ಈ ಮರಕ್ಕೆ ಹೋಗಿ ಅಜ್ಜನ ಗುಡ್ಡೆ ಅಂತಾ ಇದೆ. ಅಂದ್ರೆ ನಮ್ಮ ಕಾಗಗೆತ್ಲರ ವಂಶದೋನು ಕಂಚಿಪೂಜಾರಿ ಅಂತಾ ಪೂಜಾರಿ, ಅವ್ನಿಗೆ ಮದ್ವೆಗಿದ್ವೆ ಏನೂ ಇಲ್ಲ. ಅವ್ರು ಬಾಳ ದಿವ್ಸದಿಂದ ಬಾಳನಿರತವಾಗಿ ಗಡ್ಡಗಿಡ್ಡ ಬೆಳಿಸ್ಕೊಂಡು ಬಾಳ ನಿಯತ್ತಿನಿಂದ ಮಾಡಿಕಂತದ್ದಿವನು ಅವ್ನು ದೇವ್ರು ಸ್ವರೂಪದಲ್ಲೇ ಇದ್ದ ಮನುಷ್ಯ ಅವ್ನು ಹೇಳಿದ ವಾಕ್ಯಗಳು ಏನೂ ಸುಳ್ಳಾಗದಂತಿದ್ದವನು. ಅವ್ನು ಸತ್ತೋದ್ನಲ್ಲ ಅಲ್ಲೋಂದು ಪೂಜೆ ಮಾಡಿಸ್ತೀವಿ. ಅಲ್ಲಿಂದಾ ಬಂದು ನರಸಿಂಹ ದೇವಸ್ಥಾನದ ಎದುರಿಗೆ ಭೂತಗಳು ಬಂದಿರ್ತಾವಲ್ಲ ಅವುಕೆಲ್ಲ ಹೆಡಿಹಾಕಿ ಅದನ್ನು ಮಾಡಿಕೊಂಡ ಮೇಲೆ ಊರಾಕ ಬರೋದು.

ಸಂ – ಅಂದ್ರೆ ಇದೆಲ್ಲಾ ಐದು ದಿನದ ಆಚರಣೆ ಇದು.

ಪೂ – ಐದುದಿನ ಅಂದ್ರೆ, ಮೊದಲೆ ಒಂದು ದಿವ್ಸಾ ಅಂಗ ಹೋಗ್ತೀವಿ. ಆಮೇಲೆ ಆ ದೇವಸ್ಥಾನದಿಂದ ಮತ್ತೆ ತಿರುಗದಿವಸ ಅದೇ ಮಿಂಚೇರಿ ಹಳ್ಳಕ್ಕೆ ನಾವು ಹೊಳೆಪೂಜೆ ಮಾಡಿಕೊಂಡು ಬರೋಕೆ ಹೋಗ್ತೀವಿ. ಅಲ್ಲಿಂದ ವಿಜೃಂಭಣೆಯಿಂದ ಬಂದು ಅಲ್ಲಿಂದ ಬಂದಮೇಲೆ ನರಸಿಂಹಸ್ವಾಮಿ ದೇವಸ್ಥಾನದ ಬಾಗಿಲು ಹಾಕಿಬಿಡೋದು. ಆಮೇಲೆ ತಿರುಗುದಿವ್ಸಾ ಅದೇ ಈ ಸ್ವಾಮೀದ ಹುಲಿಯೋತ ಅಂತ ಮಾಡ್ತಾರೆ. ಆಮೇಲೆ ದೇವಸ್ಥಾನದ ಬಾಗಿಲು ಹಾಕಿ, ಆಮೇಲೆ ಅದನ್ನು ಓಪನ್ ಮಾಡಲ್ಲ ಅದಕ್ಕೆ ಈ ದೇವಸ್ಥಾನದ ಬಾಗಿಲು ಹಾಕಿ, ಆಮೇಲೆ ಅದನ್ನು ಓಪನ್ ಮಾಡಲ್ಲ ಅದಕ್ಕೆ ಈ ದೇವಸ್ಥಾನದಲ್ಲಿ ಹುಲಿಯೋತು ಈ ದೇವಸ್ಥಾನ ಕರೆಯೋರು.

ಸಂ – ಈ ಪೆಟ್ಟಿಗೆ ದೇವ್ರು ಅಂತಾರಲ್ಲ ಏನದು ?

ಪೂ – ಪೆಟ್ಟಿಗೆ ದೇವ್ರು ಅಂದ್ರೆ ಸಾಲಿಗ್ರಾಮ ಇದೆ, ನರಸಿಂಹಸ್ವಾಮೀದು.

ಸಂ – ಅದ್ರ ಒಳಗೆ ಇರ್ತೈತಿ ಪೆಟ್ಟಿಗೆ ಒಳಗಾ.

ಪೂ –     ಪೆಟ್ಟಿಎ ಒಳಗಾ.

ಸಂ – ಅದನ್ಯಾಕೆ ಪೆಟ್ಟಿಗೆ ಒಳಗಾ ಇಡಬೇಕು ?

ಪೂ – ಅದಾಕ ಮೊದಲಿಂದ್ಲು ಹಂಗೇ ಬಂದಿರಬೇಕು.

ಸಂ – ನಿಮಗೇನನ್ನಿಸುತ್ತಿ ಅದರ ಬಗ್ಗೆ

ಪೂ – ಅದು ಮೊದಲಿನಿಂದಲೂ ಹಂಗೇ ಬಂದಾರ ನಾವೂ ಹಂಗೇ ಮಾಡಿಕೊಂಡು ಬಂದಿದೀವಿ. ನಾವು ಅದರ ಬಗ್ಗೆ ನಮಿಗೇನೂ ಇಲ್ಲ. ಹಿಂದಿನವರು ಹೇಗೆ ಮಾಡಿಕ್ಕೊಂಡು ಬಂದಾರೋ ಹಂಗೇ ಮಾಡ್ಕೊಂಡು ಬಂದೀವಿ. ಅದಕ್ಕಲ್ಲ ಪೆಟ್ಟಿಗೆ ಮೇಲೆ ಇಡಾಕ ಚಿನ್ನದ ಆಭರಣ….

ಪೂ – ನಿಮ್ಮ ಮನಸ್ಸಿಗೆ ಹೆಂಗೆ ಅನ್ನಿಸುತ್ತೆ ಸಾರ್

ಮಾರುತಿ – ಅಲ್ಲಿ ಅವ್ರು ಒಂದು ಯಾವುದು ಇದಕ್ಕೆ ಇದನ್ನ ಮಡಿದಾರೆ ಅಥವಾ ನೀವು ಪೆಟ್ಟಿಗೆ ದೇವ್ರುನ್ನ ಒಂದು ದಿನದ ಮಟ್ಟಿಗೆ ಪೂಜೆ ಮಾಡ್ತೀರೋ ಅಥವಾ….

ಪೂ – ಡೇಲಿ ಪೂಜೆ ಮಾಡ್ತೀವಿ. ಅವಕ್ಕೆ ಒಂದು ದೇವಸ್ಥಾನ ಕಟ್ಟಿಸೀವಿ.

ಮಾ – ಇದನ್ನು ಪೂಜೆ ಮಾಡಿ ಮತ್ತೆ ಪೆಟ್ಟಿಗೇಲೆ ಇಡ್ತೀರ ಇದನ್ನ.

ಪೂ – ಇಲ್ಲ ನಾವು ಪೆಟ್ಟಿಗೇಗೆ ಪೂಜೆ ಮಾಡ್ತೀವಿ.

ಮಾ – ಪೆಟ್ಟಿಗೆ ತಗಿಯಂಗಿಲ್ಲ.

ಪೂ – ಇಲ್ಲ ತಗಿಯಂಗಿಲ್ಲ.

ಮಾ – ಯಾವತ್ತಿಗೂ ತಗಿಯಂಗಿಲ್ಲ.

ಪೂ – ಮಾವತ್ತಿಗೂ ತಗಿಯಂಗಿಲ್ಲ. ಪೆಟ್ಟಿಗೆಗೇ ಪೂಜೆ ಮಾಡ್ತೀವಿ.

ಮಾ – ಮತ್ತೆ ಅದ್ರಲ್ಲಿ ಮೂರ್ತಿ ಇದೆ ಅಂತ ನಿಮಗೇನು ಗ್ಯಾರಂಟಿ

ಪೂ – ಐತಿ. ಅದೂ ಶಿಥಿಲವಾಗಿತ್ತಲ್ಲ ಪೆಟ್ಟಿಗೆ ಅದು ಬೆತ್ತದ ಪೆಟ್ಟಿಗೆಲ್ಲ. ಅದು ಶಿಥಿಲವಾದಾಗ ಮತ್ತೆ ಮೊನ್ನೆ ಹೊಸದಾಗಿ ಮಾಡಿಸ್ಗಂಡು ಬಂದು ಅದ್ರಾಗ ಇಟ್ಟೀವಿ.

ಸಂ – ಅಂದ್ರೆ ಶಿಥಿಲವಾದ ಪೆಟ್ಟಿಗೇನಾ ಆ ಪೆಟ್ಟಿಗ್ಯಾಕೆ ಹಾಕ್ತಿರೋ. ಅಥವಾ…?

ಪೂ – ಇಲ್ಲ ಅದ್ನ ತೆಗೆದುಬಿಡ್ತೀವಿ.

ಸಂ – ಅಂದ್ರ ಅದು ಶಿಥಿಲವಾದಾಗಲಾದ್ರು ತೆಗೀತೀರಲ್ಲ ಓಪನ್ ಮಾಡ್ತೀರಿ.

ಮಾ – ಆವಾಗ ಮೂರ್ತಿಗಳು ಹ್ವಾಗಿದ್ವು ? ಅಂದ್ರೆ ಕಲಿನದಿತ್ತೋ ಅಥವಾ….

ಪೂ – ಇಲ್ಲ ನರಸಿಂಹಸ್ವಾಮಿ ಥರಾನೇ ಒಂದು ವಿಗ್ರಹ ಇದೆ.

ಮಾ – ಅದೇನದು ಕಂಚಿಂದೋ.

ಪೂ – ಮರದ್ದು, ಒಂದು ಸಾಲಿಗ್ರಾಮ ಇದೆ. ಆಮೇಲೆ ನಾಲ್ಕೈದು ಸಾಲಿಗ್ರಾಮಗಳಿವೆ ಅದ್ರಲ್ಲಿ, ಒಂದು ದಪ್ಪ ದುಂಡಂದಿದೆ. ಇನ್ನೊಂದು ಬೇರೆ ಬೇರೆ ಟೈಪ್ ಇದಾವೆ. ಇನ್ನು ಮರದಲ್ಲಿ ಒಂದೆರಡು ವರೈಟೀಸ್ ಮಾಡಿ ಅದ್ರಲ್ಲಿಕ್ಕಿದ್ದೀವಿ.

ಸಂ – ಗಾದ್ರಿಪಾಲನಿಗೆ ಗುಡೀಲಿ ಇಲ್ಲಿ ಬಿಟ್ರೆ ಬೇರೆ ಎಲ್ಲೂ ಮೂರ್ತಿಗಳಿಲ್ಲ.

ಪೂ – ಇಲ್ಲ ಎಲ್ಲೀ ಇಲ್ಲ.

ಸಂ – ಒಂದು ಕತ್ತಿ ಕೋಲು ಇದೆಯಲ್ಲ ಗುಡೀಲಿ ಏನದು ?

ಪೂ – ಅದೇ ಹುಲಿ ಹೋತು ಅಂತಾ, ಅದನ್ನೇ ನಾವಿಲ್ಲಿ ಕಾರ್ಯಕ್ರಮ ಮಾಡ್ತೀವಲ್ಲ ಆವಾಗ ಹೋತಾನ್ನ ಹಿಡ್ಕೊಂಡು ಬಂದಾಗ ಅದನ್ನ ಇಲ್ಲಿಗೆ ಎರೀಗೆ ಇರಿದು…….

ಇನ್ನೊಬ್ಬ – ಅಲ್ಲವಾ ಮತ್ತೆ ಗಾದ್ರಿಪಾಲನಾಯಕ ವಂಶಸ್ತ್ರೀಗೆ ಮತ್ತೆ ಆ ಬಿಲ್ಲು ಬಾಣ ಕೊಟ್ರು ಅಂತಾರಲ್ಲ ಅದು ನಿಜನೂ ಹೆಂಗೆ ?

ಸಂ – ಗಾದ್ರಿಪಾಲನ ಗುಡಿಗಳು ಎಲ್ಲೆಲ್ಲಿ ಅದಾವು ಇನ್ನೂ ?

ಪೂ – ಜಗಳೂರು ಅಂದ್ರೆ ಜಗಳೂರಜ್ಜ.

ಸಂ – ನನ್ನಿವಾಳದಲ್ಲಿದೆ. ವಿಗ್ರಹವಿದೆ. ಗುಡಿಕಟ್ಟಿದ್ದಾರೆ.

ಪೂ – ಇಲ್ಲಿಯದು ನೋಡಿದ್ರಿಲ್ಲ ಹೇಗಿದೆ.

ಸಂ – ಐಗೂರದು ಅದೇ ತರ ಇದೆ. ಜಗಳೂರಜ್ಜನದು ಏನು ಇದೆಯಲ್ಲ ಅದರ ಪಕ್ಕಕ್ಕೆ ಪೆಟ್ಟಿಗೆ ದೇವ್ರು ಇಟ್ಟಿದ್ದಾರೆ. ಅದು ಬಿಟ್ಟು ಮತ್ತೆಲ್ಲಿವೆ ?

ಪೂ – ಲಕ್ಷ್ಮಿಸಾಗರದಲ್ಲಿದೆ. ಅಲ್ಲಿ ಇದೇ ತರ ಜಾತ್ರೆ, ಹಬ್ಬ ಹರಿದಿನ ಎಲ್ಲಾ ಮಾಡೋದು.

ಸಂ – ಈ ಗಾದ್ರಿಪಾಲ ಈತ ಒಂದು ಕಾಲಕ್ಕೆ ಮನುಷ್ಯನೇ. ಅವುನ್ನ ನೀವು ದೇವ್ರು ಅಂತ ಪರಿಗಣಿಸ್ತಿರೋ ಅಥವಾ ಒಬ್ಬ ಮನುಷ್ಯ ಅಂತಾ ಪರಿಗಣಿಸ್ತೀರೋ ?

ಪೂ – ಅವ್ನು ಪವಾಡದ ಮೇಲೆ ಅವ್ನು ಒಬ್ಬ ದೇವರ ಸ್ವರೂಪವಾಗಿರೋ ಮನುಷ್ಯ ಅಂತಾನೇ ನಾವು ತಿಳ್ಕೊಂಡೀವಿ.

ಸಂ – ಎಲ್ರೂ ನಿಮ್ಮನ್ನ ಏನೂ ಅಂತಾ ಕರೀತಾರೆ ಅಂದ್ರೆ ಬ್ಯಾಡ್ರು, ಬ್ಯಾಟೆ ಆಡೋರು ಅಂತಾ ಕರೀತಾರೆ. ಈಗ ನೀವು ಏನೇನು ಮಾಡ್ತೀರಿ ?

ಪೂ – ಈಗ ವ್ಯವಸಾಯ ಮಾಡ್ತೀವಿ. ದನಕರನ್ನ ಸಾಕ್ಕೊಂಡಿದೀವಿ. ಮತ್ತೆ ಈಗಿನ ನಾಗರೀಕತೆಗೆ ತಕ್ಕಂತೆ ಏನೇನು ಬೇಕೋ ಅವ್ನೆಲ್ಲಾ.

ಸಂ – ಎಲ್ರೀಗೂ ಎಷ್ಟೇಷ್ಟು ಎಕರೆ ಐತಿ ಹೊಲ ?

ಪೂ – ಇಲ್ಲ ಬಾಳ ಕಡಿಮೆ. ಒಂದು ಕಾಲದಲ್ಲಿ ಇತ್ತು ಈಗೆಲ್ಲ ಚಿದ್ರ ಚಿದ್ರ ಆದ ಮೇಲೆ ಕಡಿಮೆ ಆಗಿದೆ.

ಮಾರುತಿ – ಬೇಟೆ ಯಾವ ಸಂದರ್ಭದಲ್ಲೂ ನೀವು ಮಾಡೋದಿಲ್ವಾ ? ಹಬ್ಬ ಹರಿದಿನಗಳಲ್ಲಾಗಲೀ….

ಪೂ – ಮೊದಲೆಲ್ಲಾ ಹೋಗ್ತಿದ್ರು, ಶಿವರಾತ್ರಿ ಟೈಮಲ್ಲಿ ಅವ್ರು ಏನು ಒಂದು ಬೇಟೆ ಇತ್ತಲ್ಲಾ ಅದೇ ಬಂದು ಸಂಪ್ರದಾಯಕ್ಕೆ ನಾವು ಹೋಗೋರು.

ಮಾ – ಅಂದರೆ ಬೇಟೆ -ಗೀಟೆ ಆಡ್ತೀರಾ ಆ ಟೈಮಲ್ಲಿ ?

ಪೂ – ಮೊದ್ಲೆಲ್ಲ ಆಡ್ತಿದ್ರು ಇವಾಗೆಲ್ಲ ಅಂಥಾ ಕ್ಷತ್ರಿಯರು ಯಾರೂ ಇಲ್ಲ ಬಾಳ ಕಡಿಮೆ ಆಗಿಬಿಟ್ಟಿದ್ದಾರೆ. ಬಂದುಕ ಅವನೆಲ್ಲ ಇಟ್ಟಕಂಡಿದ್ರು.

ಸಂ – ಒಂದು ಕಾಲಕ್ಕೆ ನಾವೆಲ್ಲ ಬ್ಯಾಡಿ ಆಡಿರೊರಲ್ವ, ಈಗ ಸರಕಾರ ಅದ್ನೆಲ್ಲ ರದ್ದು ಮಾಡಿಬಿಟ್ಟಿದೆ. ಈಗ ಯಾರಾರಾ ಬೇಟೆ ಆಡಿಬಿಟ್ರೆ ತಗೊಂಡೊಗಿ ಜೇಲಿಗಾಕ್ತಾರೆ ?

ಪೂ – ಹೂಂ. ಒಳಗಾಕ್ತಾರೆ.

ಸಂ – ಏನು ಅನಿಸ್ತದೆ ಅದರ ಬಗ್ಗೆ ?

ಪೂ – ಅಲ್ಲ ಅದರ ಬಗ್ಗೆ ಈ ಸರ್ಕಾರ ರೂಲ್ಸು ಮಾಡೈತಿ ಅಷ್ಟೇ. ಮೊದಲಿಂದಲೂ ಬೇಟೆ ಆಡಿರದೋ ಅಂದ್ರೆ ಇವರು ಧೈರ್ಯ, ಸಾಹಸ ಶಕ್ತಿ ಇದ್ದವರೇ ಆಡಿರೊದು ಇಲ್ಲದಂತವರೇನೂ ಆಡಿಲ್ಲ.

ಸಂ – ಅಂದ್ರೆ ಅದ್ನ ನಿಷೇದ ಮಾಡಿರೋದು ಕರೆಕ್ಟ ಅಂತ್ಲಾ ?

ಪೂ – ನಿಷೇದ ಮಾಡಿರೋದೇನು ಕರೆಕ್ಟ್ ಅನ್ನಿಸೋಲ್ಲ ನಮಿಗೆ.

ಸಂ – ಇರಬೇಕಿತ್ತಂತ್ತಾ ?

ಪೂ – ಹೂಂ ಇರಬೇಕಿತ್ತು

ಸಂ – ಪ್ರಾಣಿಗಳೇ ಇಲ್ವಲ್ಲ ಏನು ಬೇಟೆ ಆಡ್ತೀರಿ ?

ಪೂ – ಪ್ರಾಣಿಗಳಿಲ್ಲ

ಸಂ – ಸರಿ ಈಗ ಇದು ಬಿಟ್ಟು ಮತ್ತೆ ಯಾವ್ಯಾವ ದೇವ್ರುನ್ನ ಪೂಜೆ ಮಾಡ್ತೀರಿ ?

ಪೂ – ಬೈರೇಶ್ವರ, ಅಲ್ಲಿ ಅದೇ ದೊಡ್ಡ ಜಾತ್ರೆ ಸಮಯದಲ್ಲಿ ವಾಸೆ ಅಂತಾ ಮಾಡ್ತಾರೆ.

ಸಂ – ಏನು ವಾಸೆ ಅಂದ್ರೆ ?

ಸಂ – ವಾಸೆ ಅಂದ್ರೆ ಕುರಿ ಕೊಯ್ತಾರೆ.

ಮಾರುತಿ – ಗಾವು ಜಿಗಿಯೋದಾ ಏನು ?

ಪೂ – ಇಲ್ಲ ಇಲ್ಲ ಕೊಯ್ತಾರೆ, ಇಲ್ಲಿ ಇರಿಯೋದು. ಅಲ್ಲಿ ವಾಸೆ ಅಂದರೆ ಕೊಯ್ಯೊದು.

ಸಂ – ನಿಮ್ಮ ಕಮ್ಯುನಿಟಿಯಲ್ಲಿ ಎಷ್ಟು ಬೆಡಗುಗಳು ಇದಾವೆ ?

ಪೂ – ಇಲ್ಲಿ ಬೆಡಗುಗಳು ನಮ್ಮ ಏರಿಯಾದಲ್ಲಿ ಇರೋದು ಅಂದರೆ ಎನುಮ್ಲರು, ಕಾಮಗೆತ್ಲರು, ಮಂದ್ಲರು ಅಂತ ಇದ್ದಾರೆ, ಮಲ್ಲರು, ಪುಲಾರ, ಇದಾರೆ. ಲಕ್ಕಮಲ್ಲೇರು ಇದಾರೆ, ಪಾಮುಲ್ಲೇರು ಅಂತ ಇದಾರೆ. ಮಳೀಲೆಯವರು ಅಂತಾ ಇದಾರೆ. ಮುದಿಗುಂಡ್ತೇರು ಅಂತಾ ಇದ್ದಾರೆ. ಅದ್ರಲ್ಲೆ ಕೆಲ ಕಲವು ಪಂಗಡಗಳಿವೆ. ನಮ್ಮೆಜಮಾನ್ರಿಗೆ ಗೊತ್ತಿತ್ತು.

ಸಂ – ನೀವು ಓದಿದೀರಾ ?

ಪೂ – ಹೂಂ ನಾವು ಓದಿದೀವಿ.

ಸಂ – ಎಷ್ಟನೇ ಕ್ಲಾಸ್.

ಪೂ – ಏಳನೇ ಕ್ಲಾಸ್‌ನವರೆಗೆ.

ಸಂ – ಓದೋಕೆ ಬರೆಯೋಕೆ ಎಲ್ಲ ಬರ್ತೈತೇನು ?

ಪೂ – ಬರುತ್ತೆ.

ಸಂ – ನಿಮ್ಮ ಮನೆಯಲ್ಲಿ ?

ಪೂ – ನಮ್ಮ ಮನೆ ಹೆಣ್ಮಕ್ಕಳು ಅವ್ರೂ ನಾಲ್ಕನೇ ಕ್ಲಾಸ್, ಐದನೇ ಕ್ಲಾಸ್ ಓದಿದಾರೆ. ಅವ್ರೀಗೂ ಓದೋಕೆ ಬರುತ್ತೆ.

ಸಂ – ಮಕ್ಳು ಎಷ್ಟು ಜನ ?

ಪೂ – ಮಕ್ಳು ನಮಗೆ ಐದು ಜನ. ಇಬ್ರು ಗಂಡು ಮಕ್ಳು, ಮೂರುಜನ ಹೆಣ್ಣು ಮಕ್ಳು.

ಮಾ – ಹೆಣ್ಮಕ್ಕಳು ಓದ್ತಾ ಇದಾರಾ ಯಾರಾದ್ರೂ ?

ಪೂ – ಹೆಣ್ಮಕ್ಕಳು ಇಬ್ರನ್ನು ಎಸ್.ಎಸ್.ಎಲ್‌.ಸಿ. ಮಾಡಿ ಬಿಡ್ಸಿದೀವಿ ಮೂರನೆಯವಳೊಬ್ಬಳು ಸೆಕೆಂಡ್ ಇಯರ್ ಪಿ.ಯು.ಸಿ. ಓದ್ತಾ ಇದಾಳೆ ದುರ್ಗದಲ್ಲಿ. ಹಿರೇಮಗ ಒಬ್ನು ಪೈನಲ್ ಬಿ.ಎ. ಓದ್ತಿದಾನೆ. ಸಣ್ಣ ಮಗಾ ಒಬ್ನು ನವೋದಯ ಶಾಲೆಯಲ್ಲಿ ಓದ್ತಿದಾನೆ. ಹಿರಿಯೂರು ಹತ್ರಾ ಉರುವಳ್ಳಿ ಅಂತಾ.

ಸಂ – ರಾಘವೇಂದ್ರ, ತಿರುಪತಿ ವೆಂಕಟರಮಣ ಇವ್ರು ಹುಟ್ಟಿದ್ರೋ ಇಲ್ವೋ ನಮಗೆ ಗೊತ್ತಿಲ್ಲ. ಈಗ ದೇವ್ರಾಗಿ ಬಿಟ್ಟಾರೆ. ಅವ್ರು ಎಲ್ಲಿ ಏನು ಅಂತಾ ಗೊತ್ತಿಲ್ಲ ನಮಗೆ ಈಗ ಅವರನ್ನ ಯಾರೋ ಸಾಯಿಬಾಬ ಅನ್ನೋನು ದೇವ್ರಾಗೀದ್ದಾನೆ. ಒಟ್ಟಲ್ಲಿ ಅವ್ರು ಏನು ಮಾಡಿದ್ದಾರೆ ಅಂತಾ ಗೊತ್ತಿಲ್ಲ ನಮಗೆ. ಈ ಗಾದ್ರಿಪಾಲ, ಈ ಜಗಳೂರಜ್ಜ ಇವ್ರೆಲ್ಲ ಒಂದು ದೊಡ್ಡ ಸಮುದಾಯಕ್ಕೆ ತುಂಬಾ ದುಡಿದಿದ್ದಾರೆ, ಬಾಳ ಕಷ್ಟಪಟ್ಟಿದಾರೆ. ಈಗ ಅವ್ರು ದುಡೀಲಿಲ್ಲ ದುಕ್ಕ ಬಡೀಲಿಲ್ಲ ದೊಡ್ಡ ದೊಡ್ಡ ಗುಡಿಗಳನ್ನ ಕಟ್ಟಿಸಿ ಬಿಟ್ರು. ಈ ಗಾದ್ರಿಪಾಲನಿಗೆ ಇಷ್ಟಷ್ಟ ಸಣ್ಣ ಸಣ್ಣ ಗುಡಿ. ಈ ಯಾರೋ ಬೇಕಾದವ್ರು ಪೂಜೆ ಮಾಡ್ತೀರಿ ದಿನಾ ಮಾಡಲೇಬೇಕಾಗಿ. ಯಾಕಾಗಿ ಈತರ ಆಯ್ತು ಅದು ?

ಪೂ – ಏನೋ ಒಂದು ಶಾಪ್ ಇರಬಹುದು ಅಂತ ಕಾಣುತ್ತೆ.

ಸಂ – ಯಾರಿಗೆ

ಪೂ – ನಮ್ಮೀ ನಾಯಕರ ವಂಶದವರಿಗೆ.

ಸಂ –      ಯಾರು ಶಾಪ ಕೊಟ್ಟಿರಬಹುದು ?

ಪೂ – ಸತ್ರಲ್ಲ ಅವ್ರೆಂಡ್ತೀರು ಅವ್ರೇ ಶಾಪ್ ಕೊಟ್ಟಿರಬಹುದು.

ಸಂ – ಯಾರೂ ?

ಪೂ – ಅವರ ಹೆಂಡ್ತಿರು ಅವ್ರು ಏನೋ ಒಂದು ಶಾಪ್ ಕೊಟ್ಟಿದ್ರಂತೆ.

ಸಂ – ಏನಂತಾ ?

ಪೂ – ಎನುಂಬ್ಲರಿಗೆ ಹೆಣ್ಣು ಹೆಚ್ಚಬಾರದೂಂತಾ.

ಸಂ – ಅಂದ್ರೆ ಸತ್ತೊಗಿ ಬಿಟ್ನಲ್ಲ ಆ ಮನುಷ್ಯ ಅವರೇ.

ಮಾರುತಿ – ಆ ತರ ಏನಾದ್ರೂ ಆಗ್ತಾ ಇದೀಯಾ ಈಗ ಅವ್ರೇಳಿದ ಪ್ರಕಾರ.

ಪೂ – ಹಂಗಾ ಆಗ್ತೈತಿ ಬಿಡ್ರಿ ಮತ್ತೆ. ಈಗ ನಮಗೆ ಹೆಣ್ಣು ಜಾಸ್ತಿ ಅವ್ರು ಮನ್ಯಾಗೆ ಗಂಡು ಕಮ್ಮಿ. ನಮ್ಮ ವಂಶದಾಗ ಹೆಣ್ಣು ಜಾಸ್ತಿ.

ಸಂ – ನಮ್ಮ ಜೊತೆಗೆ ಮಾತಾಡಿದ್ರಿ. ನಮಸ್ಕಾರ.

ಪೂ – ಆಯ್ತು ಸರಿ.

—-
ಗಂಜೀಕಟ್ಟಿಯಲ್ಲಿನ ಗಾದ್ರಿಪಾಲನ ಗುಡಿಯ ಪುಜಾರಿಯನ್ನು ಸಂದರ್ಶಿಸಲಾಯ್ತು. ದಿನಾಂ ೪-೨-೯೯ರಂದು ಸಂಜೆ ನಾಲ್ಕು ಗಂಟೆಗೆ, ಸಹಾಯ – ವಿ.ಸಿ. ಮಾರುತಿ.