ರಾಮಾಯಣ ಮತ್ತು ಮಹಾಭಾರತಗಳು ಮಾತ್ರ ನಮ್ಮ ದೇಶದ ಮಹಾಕಾವ್ಯಗಳು ಎಂಬ ಸಾರ್ವತ್ರಿಕ ಅಭಿಪ್ರಾಯ ನಮ್ಮದಾಗಿದೆ. ಆ ಎರಡು ಮೇರು ಕೃತಿಗಳಷ್ಟೇ ಇಡೀ ಭರತ ಖಂಡದ ಸಂಸ್ಕೃತಿಯನ್ನು ಪ್ರತಿನಿಧಿಸುವಂಥ ಶಕ್ತಿಯನ್ನು ಪಡೆದುಕೊಂಡಿವೆ ಎಂಬ ತರ್ಕವೂ ಈ ನಂಬಿಕೆಗೆ ಕಾರಣವಿರಬಹುದು. ಆದರೆ ಈಗ, ಒಂದು ದೇಶಕ್ಕೆ ಒಂದೇ ಸಂಸ್ಕೃತಿ ಎಂಬುದಿರುವುದಿಲ್ಲ; ಅದರಲ್ಲೂ ನಮ್ಮ ಭಾರತ ಬಹುಮುಖೀ ಸಂಸ್ಕೃತಿಯನ್ನು ಪ್ರತಿನಿಧಿಸುವ ಒಂದು ಸಂಕೀರ್ಣ ಭೂಪ್ರದೇಶವಾಗಿದ್ದು ಕೆಲವರು ಊಹಿಸುವಂಥ ಒಂದೇ ಸಂಸ್ಕೃತಿ ಇರಲು ಸಾಧ್ಯವಿಲ್ಲ ಎಂಬ ತಿಳುವಳಿಕೆ ಗಟ್ಟಿಗೊಳ್ಳುತ್ತಿದೆ. ಪ್ರತಿಯೊಂದು ನೆಲದ ವಿವಿಧ ಭಾಷೆಗಳು, ಅಲ್ಲಿನ ಜನ, ಅವರ ಆಚಾರ ವಿಚಾರಗಳು, ರೂಢಿಸಿಕೊಂಡ ಮೌಲ್ಯ, ಅವರ ಲೋಕದೃಷ್ಟಿ ಇತ್ಯಾದಿಗಳನ್ನು ಅವಲೋಕಿಸಿದಾಗ ನೂರಾರು ಸಂಸ್ಕೃತಿ ವಿಶೇಷಗಳು ನಮ್ಮ ಕಣ್ಣ ಮುಂದೆ ಮೂಡುತ್ತವೆ. ನೆಲದ ಗುಣ ಪಡೆದ, ಆಯಾ ವರ್ಗಗಳ ಉಸಿರಿನೊಡನೆ ಬೆಳೆದು ಬಂದ ಸಾಂಸ್ಕೃತಿಕ ವಿಶೇಷಗಳ ಹಲವು ಘಟಕಗಳೇ ಭಾರತೀಯ ಸಂಸ್ಕೃತಿಯ ಜೀವಕೋಶಗಳು. ಈ ನಂಬಿಕೆಯ ಹಿನ್ನಲೆಯಲ್ಲಿ ನೆಲದ ಗುಣ ಹುಡುಕುವ ಕಾರ್ಯದಲ್ಲಿ ನಮ್ಮ ಬುಡಕಟ್ಟು ಅಧ್ಯಯನ ವಿಭಾಗ ನಿರತವಾಗಿದೆ. ರಾಮ, ಕೃಷ್ಣ, ಶಿವ ಮುಂತಾದ ಅಖಿಲ ಭಾರತ ಮಟ್ಟದ ದೈವಗಳಂತೆಯೇ ಮಲೆಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಕುಮಾರರಾಮ, ಮಾಳಿಂಗರಾಯ, ಗಾದ್ರಿಪಾಲ, ಸೇವಾಲಾಲ ಇವರಂಥ ಸ್ಥಳೀಯ ಸಾಂಸ್ಕೃತಿಕ ವೀರರೂ ನಮ್ಮ ಅಧ್ಯಯನಕ್ಕೆ ಮುಖ್ಯರಾಗಬೇಕು. ಇವರ ಕಥನಗಳೇ ನಿಜವಾದ ಅರ್ಥದಲ್ಲಿ ನಮ್ಮ ಸಂಸ್ಕೃತಿಯ ಒಳಪದರನ್ನು ಹಾಗೂ ನಿರ್ಲಕ್ಷಿತರ ಇತಿಹಾಸವನ್ನು ನಿರೂಪಿಸಬಲ್ಲಂಥ ಶಕ್ತಿಪಡೆದಂಥವು. ರಾಜಮಹಾರಾಜರ ಆಳ್ವಿಕೆಯ ವಿಧಾನಗಳೇ ನಮ್ಮ ಭವ್ಯ ಇತಿಹಾಸ ಎಂದು ಸಾರುತ್ತ ಬಂದಿರುವ ನಮ್ಮ ಬಹುಪಾಲು ಇತಿಹಾಸಕಾರರ ಕಣ್ಣು ತೆರೆಸಿ, ಜನಸಾಮಾನ್ಯರ ಇತಿಹಾಸಕ್ಕಾಗಿ ಒತ್ತಾಯಿಸಬಲ್ಲ, ಆ ಬಗೆಗಿನ ಅರಿವು ಮೂಡಿಸಬಲ್ಲ ಶಕ್ತಿ ಈ ಕಥಾನಕಗಳಿಗಿದೆ. ಪರಂಪರಾಗತವಾದ ಶಿಷ್ಟ ಮನಸ್ಸಿನ ನಂಬಿಕೆಗಳಿಗೆ ತದ್ವಿರುದ್ಧವಾದ ಈ ಕಥನಗಳು ತಮ್ಮದೇ ಮೌಲ್ಯಗಳನ್ನು, ಜೀವನದೃಷ್ಟಿಯನ್ನು, ಒಂದು ನಿರ್ದಿಷ್ಟ ನೆಲದ ಲೋಕದೃಷ್ಟಿಯನ್ನ ಹಾಗೂ ಆ ಮೂಲಕ ಆಯಾ ಜನವರ್ಗಗಳ ವಿವೇಕವನ್ನು ಹೇಳುತ್ತವೆ. ಭಾಷೆ, ಸಾಹಿತ್ಯ ಮತ್ತು ಕಾವ್ಯಗುಣದ ದೃಷ್ಟಿಯಿಂದಲಂತೂ ಈ ಕಾವ್ಯಗಳು ಸಂಶೋಧಕರಿಗೆ ತೆರೆದ ಹೊಸ ಗಣಿಗಳು ಎಂದೇ ಹೇಳಬೇಕು. ಇಲ್ಲಿ ಕಾವ್ಯವನ್ನು ಕಾವ್ಯವನ್ನಾಗಿಯೂ ನೋಡಬಹುದು ಹಾಗೇ ಆ ಕಾವ್ಯಗಳ ಮೂಲಕ ಇತಿಹಾಸ, ಐತಿಹ್ಯ, ಪುರಾಣ, ಸಮಾಜ ಶಾಸ್ತ್ರ ಮತ್ತು ಮಾನವಶಾಸ್ತ್ರಗಳಿಗೂ ಪ್ರವೇಶ ಮಾಡಬಹುದು.

ಕನ್ನಡ ಭಾಷೆಯ ಶಕ್ತಿಯೋ ಅಥವಾ ಕನ್ನಡ ಸಂಸ್ಕೃತಿಯ ವಿವಿಧತೆಯೋ ಎಂಬಂತೆ ನಮ್ಮ ನಾಡಿನಾದ್ಯಂತ ಹತ್ತಾರು ಮೌಖಿಕ ಮಹಾಕಾವ್ಯಗಳು ಲಭ್ಯವಿವೆ. ಅದರಲ್ಲೂ ಬುಡಕಟ್ಟು ಸಮಾಜಗಳ ಕಾವ್ಯಗಳಂತೂ ಆದಿಮ ಸಂಸ್ಕೃತಿಯ ಹಲವು ಮಜಲುಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಪ್ರಾಚೀನ ಮಾನವನ ಆಹಾರ ಸಂಗ್ರಹಣೆ, ನಂತರದ ಬೇಟೆ, ಆನಂತರದ ಪಶುಸಂಗೋಪನೆ, ತದನಂತರದ ಕೃಷಿ, ಮುಂತಾಗಿ ಮನುಷ್ಯನ ಆನ್ವೇಷಣೆ ಹಾಗೂ ಅವಸ್ಥಾಂತರ ಮತ್ತು ಆ ಸಂಬಂಧದಲ್ಲಿ ನಡೆದ ಆರ್ಥಿಕ ಮತ್ತು ಸಾಂಸ್ಕೃತಿಕ ಘರ್ಷಣೆಗಳು ಈ ಕಾವ್ಯಗಳಲ್ಲಿ ಕಂಡುಬರುವ ಬಹುಮುಖ್ಯ ವಸ್ತು. ಇಂಥ ಸಾಂಸ್ಕೃತಿಕ ಮಹತ್ವದ ಕಾವ್ಯಗಳನ್ನು ಇದೇ ಮೊದಲ ಬಾರಿಗೆ ಸಮಗ್ರವಾಗಿ ಸಂಗ್ರಹಿಸುವ ಪಟತೊಟ್ಟು ನಾಲ್ಕು ವರ್ಷಗಳ ಹಿಂದೆ ಕಾರ್ಯಯೋಜನೆಯೊಂದನ್ನು ರೂಪಿಸಲಾಯಿತು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ ಹಿಂದಿನ ಕುಲಪತಿ ಡಾ. ಚಂದ್ರಶೇಖರ ಕಂಬಾರರು ಮತ್ತು ಇಂದಿನ ಕುಲಪತಿ ಡಾ. ಎಂ.ಎಂ. ಕಲಬುರ್ಗಿ ಅವರು ನಮಗೆ ನೀಡಿದ ಸಹಕಾರ ಅನನ್ಯವಾದದ್ದು. ಇಡೀ ಭಾರತದಲ್ಲಿಯೇ ಎಲ್ಲೂ ಅಗದ ಕೆಲಸ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೈಗೊಂಡಿದೆ. ಮಂಟೇಸ್ವಾಮಿ, ಮಲೆ ಮಾದೇಶ್ವರ, ಜುಂಜಪ್ಪ, ಕುಮಾರರಾಮ, ಕೃಷ್ಣಗೊಲ್ಲರ ಕಥನ, ಸಿರಿ, ಮಾಳಿಂಗರಾಯ, ಸೇವಾಲಾಲ, ಮ್ಯಾಸಬೇಡರ ಕಾವ್ಯ, ಸೋಲಿಗರ ಕಾವ್ಯ ಹಾಗೂ ಗೊಂಡರ ರಾಮಾಯಣವನ್ನೊಳಗೊಂಡಂತೆ ಹತ್ತಕ್ಕೂ ಹೆಚ್ಚು ಮೌಖಿಕ ಮಹಾಕಾವ್ಯಗಳು ಹೊರಬರುತ್ತಿವೆ. ಇದು ನಮ್ಮ ಪುಣ್ಯವೂ ಹೌದು, ಒಂದು ನಾಡಿನ ಪುಣ್ಯವೂ ಹೌದು. ಕಾವ್ಯಾಸಕ್ತರಿಗೆ, ಅಧ್ಯಯನಕಾರರಿಗೆ ಹಾಗೂ ಸಂಸ್ಕೃತಿ ಚಿಂತಕರಿಗೆ ಈ ಮಹಾಕಾವ್ಯಗಳು ಮಹತ್ವದ ಆಕರಗಳಾಗುತ್ತವೆ ಎಂಬುದು ನಮ್ಮೆಲ್ಲರ ಆಶಯ. ಅಷ್ಟಾದರೆ ಈ ಶ್ರಮ ಸಾರ್ಥಕ.

– ಹಿ.ಚಿ. ಬೋರಲಿಂಗಯ್ಯ
ಮುಖ್ಯಸ್ಥ
ಬುಡಕಟ್ಟು ಅಧ್ಯಯನ ವಿಭಾಗ, ಗಿರಿಸೀಮೆ.