ಈ ಮ್ಯಾಸಮಂಡಲ ಪ್ರಾರಂಭ ಆಗಿದ್ದೇ ದ್ವಾಪರಯುಗದ ಕೊನೆಯಲ್ಲಿ ಶ್ರೀಕೃಷ್ಣ ಮೂಗನಾಯಕ ಅಂತಕ್ಕಂತವನಿಗೆ ಗೋವುಗಳನ್ನೆಲ್ಲ ಪಾಲನೆ ಮಾಡುವ ಜವಾಬ್ದಾರಿ ಕೊಟ್ಟು ಆತ ವೈಕುಂಠ ಸೇರಿದ ಅಂತ ಪ್ರತೀತಿ. ಮೂಗನಾಯಕನೇ ನಮ್ಮ ಮ್ಯಾಸಮಂಡಲದ ಪೂರ್ವಜ. ಅವನಿಗೆ ಒಬ್ಬ ಮಗ ಇರ್ತಾನೆ. ಮಂದಲಮೂರ್ತಿ ಮಹದೇವನಾಯಕ ಅಂತ. ಆತನಿಗೆ ಮೂರು ಜನ ಗಂಡು ಮಕ್ಕಳು, ಒಂದು ಹೆಣ್ಣಿರುತ್ತೆ. ಆಕೆ ಹೆಸರು ದಾನಸಾಲಮ್ಮ ಅಂತ.

ಹಿಂಗೆ ಗೋವುಗಳನ್ನೆಲ್ಲ ಕಾಪಾಡಿಕೊಂಡು ಬರೋದೇ ಅವರ ವೃತ್ತಿ. ನದಿ ತೀರದಲ್ಲೇ ಹೆಚ್ಚು ವಾಸ ಮಾಡ್ತಿರ್ತಾರೆ. ಗೋವುಗಳನ್ನು ದೇವ್ ಕಂಪಳ ಎಂದು ಕರೀತಾರೆ. ಆ ಕಂಪಳನೇ ಇವತ್ತು ಕಂಪಳ ಅಂತ ಹೇಳೋದು. ಕಂಪಳ ಎಂದ್ರೆ ಒಂದು ಸಮೂಹ. ಅದ್ರಲ್ಲಿ ಎತ್ತುಗಳೂ ಸೇರಿಕೊಳ್ತವೆ. ಜನರು ಸೇರಿಕೊಳ್ತಾರೆ. ಒಂದು ಕಂಪಳ ಅಂತ ಕರೆದ್ರು. ಅದನ್ನು ದೇವಕಂಪಳ ಎಂದು ಕರೆದ್ರು. ಬಹಳ ಭಕ್ತಿಯಿಂದ ಹಸುಗಳನ್ನು, ಎತ್ತುಗಳನ್ನು ಪೂಜೆ ಮಾಡೋದು ಅವುಗಳನ್ನು ಸಲಹುವುದೇ ಒಂದು ವೃತ್ತಿಯಾಗಿಬಿಡ್ತು ಅವರಿಗೆ. ಆನಂತ್ರ ಈಕೆ ದಾನಸಾಲಮ್ಮ ಬೆಳ್ದು ಪ್ರಬುದ್ಧಮಾನಕ್ಕೆ ಬಂದ ಮೇಲೆ ಆಕೆ ಈಶ್ವರನನ್ನು ಮದುವೆಯಾಗಬೇಕು ಎಂದು ಹಠ ಹಿಡಿತಾಳೆ. ಅವರೆಲ್ಲೂ ಸೇರಿಕೊಂಡು ಎಲ್ಲೆಮ್ಮೆ ನೀನು ದೇವರನ್ನೆಲ್ಲ ಮದ್ವೇಯಾಗೋಕೆ ಸಾಧ್ಯನಾ? ಅದು ಬಿಟ್ಟು ನೀ ಬೇರೆದು ಬಯಸಿದ್ರೆ ನಾವು ಮದ್ವೆ ಮಾಡ್ತೀವಿ ಅಂತಾರೆ. ಆದ್ರೂ ಆಕೆ ಹಠ ಹಿಡಿತಾಳೆ.

ಆಗ ಅವರೆಲ್ಲ ಸೇರ್ಕೊಂಡುಬಿಟ್ಟು ಆಕೇನ್ನ ತಪಸ್ಸು ಮಾಡಿ ನೀನು ಈಶ್ವರನನ್ನು ಪ್ರತ್ಯಕ್ಷವಾಗಿ ಕಂಡು ನಿನ್ನ ಈ ಬಯಕೆ ಈಡೇರಿಸಿಕೊಳ್ಳಬಹುದು ಅಂತ ಹೇಳ್ತಾರೆ. ಅದರಂತೆ ಆಕೆನೆಲ್ಲ ಶೃಂಗರಿಸಿಬಿಟ್ಟು ಕಾಡಿಗೆ ಬಿಟ್ಟು ಬರ್ತಾರೆ. ಬಿಟ್ಟು ಬಂದ ಮೇಲೆ ಆಕೆ ತಪಸ್ಸನ್ನಾಚರಿಸ್ತಾಳೆ. ಈಶ್ವರ ಪಾರ್ವತಿಯವ್ರು ಪ್ರತ್ಯಕ್ಷವಾಗಿ ಆಕೆಗೆ ಹಿಂಗ ಹನ್ನೆರಡು ದಿನಗಳ ಕಾಲ ನೀನು ಚಿಲುಮೆ ಪೂಜೆ ಮಾಡು, ಆ ಚಿಲುಮೆಯಲ್ಲಿ ನಿನಗೆ ನಿನ್ನ ಬಯಕೆ ಈಡೇರಿಸ್ತಕ್ಕಂತ ನನ್ನ ಅಂಶದ ಪುರುಷ ಹುಟ್ತಾನೆ. ನಿನ್ನನ್ನು ವಿವಾಹ ಆಗ್ತಾನೆ ಅಂತ ಹೇಳ್ತಾರೆ. ಅದೇ ರೀತಿ ಆಕೆ ಚಿಲುಮೆ ಪೂಜೆಯನ್ನು ಮಾಡಿ ಹನ್ನೆರಡನೇ ದಿನ ಅವತ್ತು ಶುಕ್ಲಪಕ್ಷ, ಆ ಮಲೆ ಪ್ರದೇಶದಲ್ಲಿ ಅತ್ಯಂತ ದಿವ್ಯ ಸ್ವರೂಪದ ವ್ಯಕ್ತಿ ಕಠಾರಿಯನ್ನು ಹಿಡ್ಕೊಂಡು ಪ್ರತ್ಯಕ್ಷನಾದ. ಆದನ್ನು ಸೂರ್ಯನಂದನ ಕಠಾರಿ ಎಂದು ಕರೀತಾರೆ. ಆಕೆ ಆತನನ್ನು ವರುಸ್ತಾಳೆ. ಆತನೇ ಶುಕ್ಲಮಲ್ಲನಾಯಕ ಅಂತ ಕರೆದ್ರು, ದಾನಸಾಲಮ್ಮರ ತಂದೆ ಮುಂದಲೋನು ಅಂದ್ರೆ ಬೆಡಗು ಅಂತಾರಲ್ಲ ಅದು. ಮಂದಲ ಎಂಬೋದು ಬೆಡಗು ಮಂದ್ಲ ಅಂತಂದ್ರ ಅದೊಂದು ಗುಂಪು. ಮಂದಲ ಅಂದ್ರೆ ಗುಂಪು. ಇದೆಲ್ಲ ದೇವ ಕಂಪಳಕ್ಕೆ ಅನುಸರಿಸುತ್ತೆ.

ಆನಂತ್ರ ಶುಕ್ಲಮಲ್ಲನಾಯಕನ ಮದುವೆಯಾದ ಮೇಲೆ ಆತ ಎನುಮ್ಲಾರು ಅಂತ ಹೇಳ್ತಾರೆ. ಅಲ್ಲಿಂದ ಮತ್ತೆ ಮಂದಲಮೂರ್ತಿ ಮಹಾದೇವ ನಾಯಕ. ಶುಕ್ಲಮಲ್ಲನಾಯಕ ಇವರೆಲ್ಲ ಒಂದೇ ಕಡೆ ಗೂಡಿನಲ್ಲಿ ವಾಸ ಮಾಡ್ತಿರ್ತಾರೆ. ಆದಾದ ಮೇಲೆ ಒಂದ್ಸಾರಿ ಕ್ಷಾಮ ತಲೆದೊರ್ತದೆ. ಆ ಸಂದರ್ಭದಲ್ಲಿ ಅದಕ್ಕಿಂತ್ಲೂ ಮುಂಚೆ, ಇವ್ರು ಎಂತಾ ಮ್ಯಾಸಬೆಡಗು ಅಂದ್ರೆ ಕೋಳಿ-ಗೀಳಿ ಗೂಡಿಗೆ ಬರಬಾರದು. ಕೋಳಿ ಹಾರಿಸಬಾರದು. ಕೋಳಿ ಯಾಕ ಬರಬಾರದೆಂದು ನಂಗೊತ್ತಿಲ್ಲ ಅದ್ರೆ ಮುಂಚಿನಿಂದ್ಲೂ ಕೋಳಿ ಇದ್ರಲ್ಲಿ ಬರಬಾರದು. ಅವಕಾಶವಿಲ್ಲ ಅಂತಂದು ಮಾಡಿಕೊಂಡ್ರು ಅದಕ್ಕಿನ್ನೂ ಕಾರಣಗಳು ಸಿಕ್ಕಿಲ್ಲ.

ಒಂದ್ಸಲ ಪಕ್ಕದ ಹಟ್ಟಿಲ್ಲಿ ಒಂದು ಕೋಳಿ ಕೂಗುತ್ತೆ. ಅಲ್ಲೇ ವಾಸವಾಗಿದ್ದಂತ ಲಂಕಾದ್ರಿ ಪರ್ವತದ ಸಿಯೇಟಿಸಿಂಗನ ಮಲೆ ಆ ಮೂಲದಲ್ಲಿ ವಾಸ ಮಾಡ್ತಿರ್ತಾರೆ. ಅಲ್ಲಿಂದ ಅಲೆಮಾರಿಗಳೆಲ್ಲ ಬರ್ತಾ ಇರ್ತಾರೆ. ಹುಲ್ಲು ನೀರು ಅಲ್ಲಿ ಸೌಕರ್ಯ ಇದಿಯೋ ಅಲ್ಲಿ ವಾಸವಾಗಿರ್ತಾರೆ. ಸರಿ ಕೋಳಿ ಕೂಗಿದಾಗೇನಾಗುತ್ತೆ, ಇವರಲ್ಲಿ ಹೋರಿಗಳಿರುತ್ತ್ವೆ ದನಗಳಲ್ಲಿ ಹೋರಿಗಳಿರುತ್ತ್ವೆ ಅವು ಗಾಬರಿಯಾಗಿಬಿಟ್ಟು ಎಲ್ಲಿ ಕೋಳಿ ಕೂಗುತ್ತೋ ಆ ಕಡೆ ನುಗ್ಗಿಬಿಡ್ತವೆ. ನುಗ್ಗಿಬಿಟ್ಟು ಅಲ್ಲಿ ಆ ಪ್ರದೇಶದಲ್ಲಿ ಸಿಕ್ಕಂತಹ ಜನಗಳನ್ನೆಲ್ಲ ಇರಿದುಬಿಟ್ಟು ಧ್ವಂಸ ಮಾಡಿಬಿಡ್ತವೆ. ಆಗ ಅಲ್ಲಿ ಒಬ್ಬ ಪೂಜಾರಿ ಇರ್ತಾನೆ, ಆತನ ಮಗಳು ನೀಲಮ್ಮ ಅಂತ ಇರ್ತಾಳೆ. ಅನ್ಯಾಯವಾಗಿ ಗೂಡು ಗೀಡು ಹಟ್ಟಿ ಎಲ್ಲ ಹಾಳಾಗಿ ಹೋಗ್ತಾವೆ ಅಂತಂದು ಆ ದೇವರು ಸಾಮಾನನ್ನೆಲ್ಲ ಒಂದು ಪುಟ್ಟಿಯಲ್ಲಿಟ್ಟುಕೊಂಡು ಬಂದು ಅಲ್ಲೊಂದು ನದಿ ಹರೀತ್ತಿರುತ್ತೆ ಆ ನದಿಯಲ್ಲಿ ಬಿಟ್ಟು ಬಿಡ್ತಾಳೆ. ಇವೇನಾದ್ರೂ ನಾನು ಹೇಳಿದಾಗ ಪ್ರಾಪ್ತಿಯಾಗಬೇಕು ಅಂತ ಬಿಟ್ಟುಬಿಟ್ಟು ಹಟ್ಟಿಗೆ ಹೋಗುವಷ್ಟತ್ತಿಗೆ ಅದೆಲ್ಲಾ ಸರ್ವನಾಶ ಆಗಿರುತ್ತೆ. ಆಕೆ ಇವರಿಗೆ ಶಾಪ ಕೊಡ್ತಾಳೆ. ಆಗ ಈ ಊರಿಗೆ ಕ್ಷಾಮ ಬರುತ್ತೆ. ಬಂದಾಗ ವಿಷಯ ಗೊತ್ತಾಗುತ್ತೆ ನಮ್ಮೆಲ್ಲ ಹೋರಿಗಳು ಹೋಗಿ ದಾಳಿ ಮಾಡಿದ್ದಕ್ಕೆ ಹಿಂಗೆ ಅವರ ಮಗಳ ಶಾಪದಿಂದ ಹಿಂಗಾಗಿದೆ ಅಂತ. ಅದಕ್ಕೆ ಅವರನ್ನು ಕರೆದು ಅವರಿಗೆ ಪೂಜೆ ಇದೆಲ್ಲ ಮಾಡಿದ್ರೆ ನಿಮಗೆ ಒಳ್ಳೆಯದಾಗುತ್ತೆ ಅಂತ. ಆಗ ನೀಲಮ್ಮನನ್ನು ಕರೆದುಕೊಂಡು ಬಂದು, ಆ ನದಿ ತೀರದಲ್ಲಿ ಎಲ್ಲ ರೀತಿಯ ಗದ್ದುಗೆ ಹಾಕಿಬಿಟ್ಟು, ಪೂಜೆ ಮಾಡಿ ಆಕೆಗೆ ನಾವು ಮಾಡಿದ್ದು ತಪ್ಪು ಎಂದು ಒಪ್ಪಿಕೊಳ್ತಾರೆ. ಆಗ ಆಕೆ ತೃಪ್ತಿಯಾಗಿಬಿಟ್ಟು ಆ ನದಿ ನೀರಿನಲ್ಲಿ ಬಿಟ್ಟಂತಹ ಪುಟ್ಟಿಯನ್ನು ಎತ್ಕೊಂತಾಳೆ. ಎತ್ಕೊಂಡಾಗ ಅದ್ರಲ್ಲಿ ಈಗೇನು ಕಂಪಳರಂಗ ಅಂತ ಹೇಳ್ತಿವೋ ಪೂರ್ತಿ ಈಶ್ವರ ಮತ್ತು ವಿಷ್ಣು ಪ್ರತಿಮೆಗಳು ದೇವರುಗಳು ಅದ್ರಲ್ಲಿರ್ತವೆ. ಎಲ್ಲ ಸಾಲಿಗ್ರಾಮಗಳು, ಶಂಕು ಚಕ್ರಗಳು ಎಲ್ಲ ಈಗೇನಿದೆ ಬಂಗಾರದ ಕೊಳಲು, ಮುತ್ತಿನ ಪೆಂಡೆ, ಒಂದು ಮಣ ತೂಕದ ಜಾಗಟೆ, ಶಂಕ, ಬಲಮುರಿ ಶಂಕ ಇವೆಲ್ಲವೂ ಕೂಡ ಇದ್ವು. ಅದನ್ನು ಇಬ್ರಿಗೂ ಕೊಟ್ಟುಬಿಟ್ಟು ನಿಮಗೆ ಮುಂದೆ ಹನ್ನೆರಡು ಪೆಟ್ಟಿಗೆಗಳಾಗುತ್ತವೆ. ನಿಮ್ಮಲ್ಲೊಬ್ಬ ಉತ್ತಮವಾದಂತಹ ಪವಾಡ ಪುರುಷನಾಗ್ತಾನೆ. ನೀವು ಇದನ್ನು ಉದಿಪದಿ, ನೋಮು ಇಷ್ಟನ್ನು ಮಾಡಿಕೊಂಡು ಮುಂದುವರಿಸಿಕೊಂಡು ಹೋಗಬೇಕು ಅಂತ ಆಶೀರ್ವಾದ ಮಾಡ್ತಾಳೆ. ಅದನ್ನೆ ಇವ್ರು ಒತ್ಕೊಂಡು ಬರ್ತಾರೆ. ಮುಂದೆ ಮೊಣಕಾಲ್ಮೂರು ಏನಿದೆ ತುಮಕೂರಿನಲ್ಲಿ ಅಲ್ಲಿಗೆ ಬರ್ತಾರೆ, ಆಕಡೆ ಬರ್ತಾರೆ. ಅಲ್ಲಿಗೆ ಬರೋ ವೇಳೆಗೆ ಇಲ್ಲಿ ಶುಕ್ಲಮಲ್ಲನಾಯಕನಿಗೆ ಕೊಂಡಮಲ್ಲನಾಯಕ ಅಂತ ಮಗ ಇರ್ತಾನೆ. ಕೊಂಡಮಲ್ಲನಾಯಕ ಶುಕ್ಲಮಲ್ಲನಾಯಕನ ಮಗ ಎಲ್ಲರೂ ಜೊತೆಗೇ ಇರ್ತಾರೆ. ಮಾವ ಬೀಗರು ಇವರೆಲ್ಲರೂ ಜೊತೆಗೇ ಇರ್ತಾರೆ. ಆ ಕೊಂಡಮಲ್ಲನಾಯಕನಿಗೆ ಇಬ್ರು ಮಕ್ಕಳು. ಒಬ್ಬನು ಕಾಟಮಲ್ಲನಾಯಕ, ಇನ್ನೊಬ್ಬನು ರೆಪ್ಪಲಸೂರ ನಾಯಕ.

ಇವರೆಲ್ಲ ತುಮಕೂರಿನಲ್ಲಿಇ ಆ ಪ್ರದೇಶಕ್ಕೆ ಬಂದು ಶುಕ್ಲಮಲ್ಲನಾಯಕ ಶುಕ್ಲಪಕ್ಷದ ದಿನ ಮಳೆಯಲ್ಲಿ ಜನಿಸಿದ್ದರಿಂದ ಆತನಿಗೆ ಶುಕ್ಲಮಲ್ಲನಾಯಕ ಎಂದು. ಅಲ್ಲಿ ಆ ಪ್ರದೇಶದಲ್ಲಿ ತಿಮ್ಮಲಾದ್ರಿ ಪೂರ್ವಕ್ಕೆ ಅಂತಲೇ ಬರುತ್ತೆ. ಅಲ್ಲಿ ನೆಲೆಸಿಬಿಟ್ಟು ಅವ್ರು ಒಂದು ಸಿದ್ಧಾಂತ ಮಾಡಿಕೊಳ್ತಾರೆ.

ಶುಕ್ಲಮಲ್ಲ ನಾಯಕನಿಗೆ ಅಲ್ಲಿ ಸಿಂಹಾಸನದೀಶನಾಗಿ ಮಾಡ್ತಾರೆ. ಕಂಪಳದಲ್ಲಿ ತುಮಕೂರಿನಲ್ಲಿ ಹೀಗೇನಿದೆ ಕಂಪಳದೇವರಟ್ಟಿ ಅಂಥ ಏನೈತೆ ಅಲ್ಲಿ. ಅಲ್ಲಿ ಸ್ಥಾಪನೆ ಮಾಡಿಕೊಳ್ತಾರೆ. ಗುಡಿಕಟ್ಟಿ ಶುಕ್ಲಮಲ್ಲ ನಾಯಕನನ್ನು ದೊರೆ ಮಾಡಿಕೊಂಡು, ಈ ಮಂದ್ಲರಿರ್ತಾರಲ್ಲ ಅವರೆಲ್ಲಾ ಪುಜಾರ್ಕೆ ತಗೋತಾರೆ. ಆ ದೇವರ ಈ ಶಂಖು, ಜಾಗಟೆ ಇದ್ದವಲ್ಲ ಇವೆಲ್ಲ ಈ ಪೂಜಾ ವಿಧಾನಗಳೆಲ್ಲ ಮಂದ್ಲರಿಗೆ ಕೊಟ್ರು, ಅಧಿಕಾರ ದೊರೆತನವನ್ನೆಲ್ಲಾ ಎನುಮ್ಲರಾದಂತಹ ಶುಕ್ಲಮಲ್ಲ ನಾಯಕನಿಗೆ ಕೊಟ್ರು, ಅಲ್ಲಿ ಎಲ್ಲ ಕಟ್ಕೊಂಡು ಸುಮಾರು ದಿವಸ ಬಾಳಿದ್ರು.

ಅಲ್ಲಿಂದ ಇವ್ರು ಮುಂದಕ್ಕೆ ಬರ್ತಾರೆ. ನೀರು-ನಿಡಿ ಮತ್ತೆ ಹುಡುಕಿಕೊಂಡು ಬರ್ಬೇಕಲ್ಲ, ಮೈಗ್ರೇಷನ್ ಇವರಿಬ್ಬರಲ್ಲಿ ಕಾಟಮಲ್ಲನಾಯಕನ ಸಂತತಿ. ಈ ಶುಕ್ಲಗಿರಿ ಅಂತ ಕರೀತಿದ್ರು ಈ ನನ್ನಿವಾಳನ್ನ. ಆ ಪ್ರದೇಶಕ್ಕೆ ಬರ್ತಾರೆ. ಕಾಟಮಲ್ಲನಾಯಕನಿಗೆ ಸೂರ್ಯ ಎರಗಟ್ ನಾಯಕ, ಕೋರಮಲ್ಲನಾಯಕ, ಚಿನ್ನಪಾಲನಾಯಕ ಮತ್ತು ಒಂದು ಹೆಣ್ಣು ಮಗಳಿರ್ತಾಳೆ. ಅವಳ ಹೆಸರು ಪಚ್ಚಪದಿಪಾಲಮ್ಮ. ಇವರೆಲ್ಲಾ ಕಾಟಮಲ್ಲನಾಯಕನ ಮಕ್ಕಳು. ಆನಂತರ ರೆಪ್ಪುಲಸೂರನಾಯಕನಿಗೆ ದಡ್ಡಿಸೂರನಾಯಕ, ದೊಡ್ಡೇರಿಪಾಲನಾಯಕ ಈತನನ್ನೇ ಗಾದ್ರಿಪಾಲನಾಯಕ ಅಂತ ಕರೀತೀವೆ. ಆನಂತ್ರ ದಡ್ಡಿಕಾಮನಾಯಕ. ದಡ್ಡಿ, ದಡ್ಡಿ ಅಂದ್ರೆ ಹಟ್ಟಿ ಅಂತ. ಇವ್ರು ಶುಕ್ಲಗಿರಿ ಕಡೆಗೆ ಕಾಟಮಲ್ಲನಾಯಕನ ಸಂತತಿ ಬಂತು. ರೆಪ್ಪಲುಸೂರನಾಯಕನ ಸಂತತಿ ನಾಯಕನಟ್ಟಿ ಕಡೆ ಹೋಯ್ತು. ಆ ಕಡೆ ಹೋದರು ಅಲ್ಲಿಂದ ರೆಪ್ಪುಲುಸೂರನಾಯಕನ ಸಂತತಿ ಈ ಗೌಡಗೇರಿ ಅಂತಿದೆ. ಅಲ್ಲಿ ಬೂದಾಳಪಟ್ಟಣ ಅಂತ ಹಿಂದೆ ಇತ್ತು. ಅಲ್ಲಿ ಇವ್ರು ಹೋಗಿ ಕಂಪಳನ್ನೆಲ್ಲ ಕಟ್ಟಿಕೊಂಡು ಅಲ್ಲಿರ್ತಾರೆ. ರೆಪ್ಪುಲಸೂರನಾಯಕ ಮತ್ತು ಆತನ ಸಂತತಿ ಅಲ್ಲಿರ್ತಾರೆ.

ಇವರೆಲ್ಲೆ ಕೋರಮಲ್ಲನಾಯಕ ಚಿನ್ನಪಾಲನಾಯಕ ನನ್ನಿವಾಳದಲ್ಲಿರ್ತಾರೆ. ಸೂರ್ಯಎರಗಟ್ಟಿನಾಯಕ ಗೋನೂರು ದೊರೆಯತ್ರ ದಳಪತಿಯಾಗಿರ್ತಾನೆ. ಗೋನೂರಿಗೆ ಹೋಗಿ ಸೇರ್ಕೋತಾನೆ ಆತ. ಈ ರೆಪ್ಪುಲುಸೂರನಾಯಕ ಒಂದು ಅನಾಚಾರ ಮಾಡ್ತಾನೆ. ಸ್ತ್ರೀ ವಿಷಯವಾಗಿ. ಆಗೆಲ್ಲಾ ಬಹಳ ಕಟ್ಟುನಿಟ್ಟು ಕ್ರಮಗಳು ನಮ್ಮವು. ತಪ್ಪು ಮಾಡಿದಿನಿ ನಾನು ಗೂಡಿಗೆ ಹೋಗಬಾರದು ಅಂತ ಆತನಿಗೆ ಅನಿಸುತ್ತೆ. ಅವ್ನಿಗೆ ಬಹಿಷ್ಕಾರನೂ ಹಾಕ್ತಾರೆ. ನೀ ಇಂತ ತಪ್ಪು ಮಾಡಿದ್ದೀಯ ನೀ ಯಾರೋ ಹೆಂಡರನ್ನು ಹೊತ್ಕೊಂಡು ಹೋಗಿದ್ದೀಯ ನೀನು ಮಾಡಿರೋದು ತಪ್ಪು ನೀ ಬರಕೂಡದು ಅಂತ ಹೊರಗೆ ಹಾಕ್ತಾರೆ.

ಅದಕ್ಕೆ ಅವನು ಎಷ್ಟೋ ದಿನ ಗೂಡುಗೆ ಬರದೇ ಇರ್ತಾನೆ. ಆದರೆ ಆತ ಬಹಳ ದೈವ ಭಕ್ತ. ಸೂರ್ಯನ ಮುಕ್ಕು ಅಂತ ಹೇಳ್ತೀವಿ, ಬೆಳಿಗ್ಗೆ ಎದ್ದು ಎತ್ತುಗಳಲ್ಲೇ ಸೂರ್ಯನ್ನು ಮುಗೀಬೇಕು, ಎತ್ತುಗಳನ್ನೇ ಪೂಜೆ ಮಾಡಿ ಊಟ ಮಾಡಬೇಕು ಅಂತ ಪದ್ದತಿ ಇತ್ತು. ಮಕ್ಕಳಿಗೆಲ್ಲ ಗೊತ್ತಾಯ್ತು. ನಮ್ಮಪ್ಪ ಎಷ್ಟೋ ದಿನ ಊಟ ಇಲ್ದೇ ಇದ್ರೆ ಹೆಂಗ ಅಂತ. ಅದ್ರಲ್ಲಿ ದಡ್ಡಿಸೂರನಾಯಕ ರಾತ್ರಿ ಹೊತ್ತು ಈ ದನಗಳನ್ನು ಹೊಡ್ಕೊಂಡು ಹೋಗಿಬಿಟ್ಟು ಹೊಡ್ಕೊಂಡು ಹೋಗಿ ಅವರಪ್ಪನಿಗೆ ಯಾರಿಗೂ ಕಾಣದಂತೆ, ಯಜಮಾನರಿಗೆ ಕಾಣದಂತೆ ಹೊಡ್ಕೊಂಡು ಹೋಗಿ ಬಿಡೋದು ರಾತ್ರಿ ಹೊತ್ತು. ಅವರಪ್ಪ ಪೂಜೆ ಗೀಜೆ ಮುಗಿಸಿಕೊಂಡು ಊಟ ಆದ ಮೇಲೆ ವಾಪಸ್ಸು ಹೊಡ್ಕಂಡು ಬರೋದು. ಇದು ಹೆಂಗೋ ಗೊತ್ತಾಗಿ ಬಿಡುತ್ತೆ. ಗೊತ್ತಾಗಿಬಿಟ್ಟು ಅವರನ್ನು ಮಕ್ಕಳನ್ನು ಕೂಡಾ ಬಹಿಷ್ಕಾರ ಹಾಕಿಬಿಡ್ತಾರೆ. ನೀವು ಮಾಡಿದ್ದು ಸರಿಯಲ್ಲ ಅಂತ. ಆಗ ಅವ್ರು ಅಲ್ಲಿಂದ ತಂದೆನ್ನ ಕರ್ಕೊಂಡು ದನಗಳನ್ನು ಹೊಡ್ಕೊಂಡು ದಡ್ಡಿಸೂರನಾಯಕ ಹಿರೇಳ್ಳಿಗೆ ಬಂದು ನೆಲೆಸ್ತಾರೆ. ದಡ್ಡಿಕಾಮಯ್ಯ, ಮುತ್ತಿಗಾನಳ್ಳಿ ಅಂತ ಇದೆ. ಅಲ್ಲಿ ದನ ಹೊಡ್ಕೊಂಡು ಹೋಗ್ತಾನೆ. ಈತ ಪಾಲನಾಯಕ ದೊಡ್ಡೇರಿ ಕಡೆಗೆ ಬರ್ತಾನೆ. ಅಲ್ಲಿಂದ ಆತನ ಕಥೆ ಮುಂದುವರಿಯುತ್ತೆ.

ದಡ್ಡಿ ಸೂರ್ಯಯ್ಯಂದು ದೇವಸ್ಥಾನವಿದೆ. ಅದು ದಡ್ಡಿಸೂರ್ಯಂದು ನಮ್ಮ ಮ್ಯಾಸಮಂಡಲದಲ್ಲಿ ಗುಗ್ರಿ ಪೂಜೆ ಅಂತ ಬರ್ತದೆ, ಅದನ್ನು ಕಾರ್ತೀಕ ಮಾಸದಲ್ಲಿ ಮಾಡ್ತಾರೆ. ಮೊದಲು ದೊಡ್ಡಸೂರನಾಯಕಂದು ಗುಗ್ರಿಹಬ್ಬ ಆದ ಮೇಲೆ ಇತರೆ ಮ್ಯಾಸ ದೇವಸ್ಥಾನಗಳಲ್ಲಿ ಆ ಪೂಜೆ ಆಗುತೆ. ಅಷ್ಟು ಮೊದಲನೇ ಪೂಜೆ ಆತಂದೆ ದೊಡ್ಡ ಸೂರನಾಯಕಂದು. ಹೀಗೆ ಈ ಕಡೆ ಬರ್ತಾನೆ ಪಾಲನಾಯಕ ಬಂದ ಮೇಲೆ ಆತನ ಸಂತತಿ ಮತ್ತು ದನಗಳನ್ನೆಲ್ಲ ಹೊಡ್ಕೊಂಡೇ ಬರ್ತಾನೆ. ನೆಂಟ್ರು-ಗಿಂಟ್ರು ಎಲ್ಲ ಕರ್ಕೊಂಡು ಬಂದು ದೊಡ್ಡೇರಿನಲ್ಲಿ ಸ್ವಲ್ಪ ದಿನ ಇರ್ತಾನೆ ಆತ.

ಅಲ್ಲಿಂದ ಮುಂದಕ್ಕೆ ಆತ ನೀರಿನ ಪ್ರದೇಶ ತೊರೆ ಇರ್ತಕ್ಕಂತ ವೇದಾವತಿ ನದಿ ಅಂತಕ್ಕಂತದ್ದು ಗೋಸಿಕೆರೆ ಅಂತ. ದೊಡ್ಡ ಮಾಗಾಣೆ ದೊಡ್ಡ ಕಾವಲು. ಗೋಸಿಕೆರೆ ಕಾವಲಿನಲ್ಲಿ ಬಂದು ಇಳ್ಕೋಂತಾರೆ. ಇಳ್ಕೊಂಡಾಗ ಪ್ರತಿನಿತ್ಯ ಹಿಂಗೇ ದನ ಕಾದುಕೊಂಡು ಬರೋದು ಜೀವನ ಮಾಡೋದು, ಅದೇ ಅಯ್ತು. ಅಲ್ಲಿ ಎರಡು ಹುಲಿಗಳು ಇರ್ತವೆ. ಒಂದು ಗಂಡು ಹುಲಿ, ಇನ್ನೊಂದು ಹೆಣ್ಣು ಹುಲಿ. ಇವರಿಗೆ ಭಯ. ಹುಲಿ ಎಂದಾಕ್ಷಣ ಏನಾದ್ರೂ ನಾವಿಲ್ಲದಾಗ ಬಂದು ಗೂಡ್ನಲ್ಲಿ ಕರು ಚಿಕ್ಕ ಮಕ್ಕಳಿರ್ತವೆ. ಏನಾದ್ರೂ ಮಾಡಿದ್ರೆ ಹೆಂಗೇ ಅಂತ. ಅವುಗಳ ಪಾಡಿಗವು ಜೀವನ ಮಾಡ್ತಿರ್ತವೆ. ಸರಿ ಈತ ಏನು ಮಾಡ್ತಾನೆ, ಅವುಗಳ ಜೊತೆ ಒಪ್ಪಂದ ಮಾಡಿಕೊಳ್ತಾನೆ. ನೀವು ನಮ್ಮ ತಂಟೆಗೆ ಬರಬಾರದು. ನಾವು ನಿಮ್ಮ ತಂಟೆಗೆ ಬರೊಲ್ಲ ಅಂತ ವಾಗ್ದಾನ ನಡೆಯುತ್ತೆ.

ಸರಿ, ಅವುಗಳ ಪಾಡಿಗೆ ಅವಿರುತ್ತ್ವೆ. ಇವರ ಪಾಡಿಗೆ ಇವರಿರ್ತಾರೆ. ಮಂದೆಲ್ಲ ಚೆನ್ನಾಗಿ ಬೆಳೆಯುತ್ತೆ. ಗೂಡು ಕಂಪಳ ಎಲ್ಲ ಚೆನ್ನಾಗಿ ಬೆಳೆಯುತ್ತೆ. ಅವು ಹೆಣ್ನು ಹುಲಿ ಎರಡು ಮರಿಗಳಿಗೆ ಜನ್ಮ ಕೊಡುತ್ತೆ. ಆ ಮರಿಗಳು ಬೆಳಿತಾ ಬೆಳಿತಾ ದೊಡ್ಡವಾಗಿ ಇವ್ರು ದನಗಳನ್ನೆಲ್ಲ ಹೊಡ್ಕೊಂಡು ಹೋದಾಗ ಆ ರಪ್ಪುಕ್ಕ ಬಂದು ಕರುನ್ನು ಕಿವಿ ಮುರಿಯೋದು, ಕಡಿಯೋದು ಇವೆಲ್ಲಾ ಮಾಡ್ತಿರುತ್ತ್ವೆ. ಅವುಕ್ಕೆ ಗೊತ್ತಿಲ್ವಲ್ಲ ಸಣ್ಣ ಹುಲಿ ಮರಿಗಳಿಗೆ ಗೊತ್ತಿರೊಲ್ಲ. ಇದು ಹೇಳ್ತಾರೆ ಗಾದ್ರಿಪಾಲನಾಯಕನಿಗೆ ನೀವೇನೋ ಹೋಗ್ತೀರಾ ಇಲ್ಲಿ ಹೀಗೆಲ್ಲಾ ಮಾಡ್ತವೆ ಎಂದು. ಇರಲಿ ಹೇಳಪ್ಪ ಅವರನ್ನು ಕರೆಸಿ ಹೇಳೋಣ ಅಂತ ಹೇಳ್ತಾನೆ. ಬರ್ತಾ ಬರ್ತಾ ಸ್ವಲ್ಪ ದೊಡ್ಡವಾಗ್ತವೆ. ದೊಡ್ಡವಾದಷ್ಟು ಇವುಗಳಿಗೆ ಹಿಂಸೆ ಕೊಡ್ತವೆ. ಈಗ ಅದ್ರಲ್ಲಿ ಕೆಲವು ಹುಡುಗರಿರ್ತಾರಲ್ಲ ಜಂಬದೋರು ಅವರೇನು ಮಾಡ್ತಾರೆ, ಹುಲಿ ಮರಿಗಳನ್ನು ಸಾಯಿಸಿಬಿಡ್ತಾರೆ ಒಂದು ಸಾರಿ. ಹೇಳಿದ್ರಾಯ್ತು ಹೊಡ್ದುಬಿಡಾಣ ಅಂತ, ಹೊಡೆದುಬಿಡ್ತಾರೆ.

ಅಲ್ಲಿ ಗಾದ್ರಿಪಾಲನಾಯಕ ಬಂದ ಮೇಲೆ ನೋಡ್ತಾನೆ. ಅಚಾತುರ್ಯ ಆಗಿಹೋಗಿಬಿಟ್ಟಿದೆ. ನಾನು ಮಾತಿಗೆ ತಪ್ಪಿಬಿಟ್ಟಿದಿನಿ, ಈಗವು ಬಂದು ನಮ್ಮನ್ನು ಸುಮ್ನೆ ಬಿಡೋದಿಲ್ಲ. ನಮ್ಮನ್ನು ಸಾಯಿಸೋದಂತೂ ಖಾಯಂ. ನಮ್ಮ ವಂಶನೇ ಉಳಿಯೊಲ್ಲ ಇದು. ಏನಾದ್ರು ಮಾಡಿ ಅವುಗಳು ಬರೋಷ್ಟತ್ತಿಗೆ ಇಲ್ಲಿಂದ ಸ್ಥಾನ ಕಿತ್ತು ಬಿಡಬೇಕು. ಅಂತ ತೀರ್ಮಾನ ಮಾಡಿಕೊಂಡು ಆಗಿಂದಾಗ್ಲೇ ಎಲ್ಲ ಕಿತ್ತುಕೊಂಡು ಎಲ್ಲ ಕಂಪಳನೂ ಹೊಡ್ಕೊಂಡು ಆ ನದಿ ದಾಟಿಕೊಂಡು ಬಹಳ ಜೋರಾಗಿ ಹರೀತಿರುತಂತೆ ನದಿ ಅದನ್ನು ಪೂಜೆ ಮಾಡಿ ನುಗ್ಗಿಕೊಂಡು ದಾಟಿಕೊಂಡು ಬಂದ್ರು, ದಾಟಿಕೊಂಡು ಬಂದ ಮೇಲೆ ಅಲ್ಲಿ ಎಲ್ಲೂ ನಿಲ್ಲದ ಹಾಗೆ ಈಗೇನಿದೆ ಮಿಂಚೇರಿ ಎಂದು ಆ ಭಾಗಕ್ಕೆ ಹೋಗಿ ನೆಲೆಸಿದ್ರು.

ಸರಿ ಇವು ಬೇಟೆಗೆ ಹೋದಾವು ಬಂದುಬಿಟ್ಟವು. ಬಂದುನೋಡಿದ್ರೆ ಎರಡೂ ಹುಲಿಮರಿಗಳು ಸತ್ತುಬಿದ್ದಿದಾವೆ. ಎಲಾ ಪಾಲನಾಯಕ ನಮಗೆ ಮಾತಿಗೆ ತಪ್ಪಿಬಿಟ್ಟ. ಗಂಡು ಹುಲಿ ಅಲ್ಲೇ ಸತ್ತು ಹೋಗಿಬಿಡುತ್ತೆ ಮಕ್ಕಳು ಸತ್ತಿರೋದು ನೋಡಿ ಹೆಣ್ಣು ಹುಲಿ ಮಾತ್ರ ನಾ ಬಿಡೋದಿಲ್ಲ ನಾ ಎಲ್ಲಿದ್ರೂ ನೋಡೇಬಿಡ್ತೀನಿ ಮಾತಿಗೆ ತಪ್ಪಿದ್ದಾನೆ ಅಂತ. ಸರಿ ಅದು ಆ ರೀತಿ ಇರುತ್ತೆ. ಇವ್ರು ಬಂದು ನೆಲೆಸಿದ ಮೇಲೆ ಎಲ್ಲ ಬಂದೋಬಸ್ತು ಮಾಡಿಕೊಂಡು ಇದನ್ನ ಮರತೇಬಿಡ್ತಾರೆ ಈ ಘಟನೆಯನ್ನು. ಏಕೆ ಇಷ್ಟು ದೂರ ಬಂದು ಅದು ನನ್ನೇನು ಮಾಡುತ್ತೆ ಅಂತ. ಅಲ್ಲೆಲ್ಲ ಚೆನ್ನಾಗಿ ಡೆವಲಪ್ ಆಗ್ತರೆ ಆ ಏರಿಯಾದಲ್ಲಿ.

ಮಲೆ ಅಂತ ಹೇಳ್ತಿವಲ್ಲ ಅದು ಗುಡ್ಡ ಪ್ರದೇಸ ಗಾದ್ರಿಮಲೆ ಅಂತ ಆ ಪ್ರದೇಶಕ್ಕೆ ಹೆಸರು. ಆತ ಅಲ್ಲಿ ನೆಲಸಿದ್ನಲ್ಲ ಗಾದ್ರಿಮಲೆ ಅಂತ ಹೇಳ್ತಾರೆ. ಇದು ಹೇಗೋ ಮಾಡಿಬಿಟ್ಟು ಅಲ್ಲಿಗೆ ಗೊತ್ತಾಗಿಬಿಡುತ್ತೆ. ದೊಡ್ಡ ಆರ್ಭಟ ಮಾಡುತ್ತೆ ಹುಲಿ. ಸರಿ ಈ ವಿಷಯ ಗೊತ್ತಾಗಿಬಿಡುತ್ತೆ ಪಾಲನಾಯಕರಿಗೆ. ಓಹೋ ಇದು ಸುಮ್ಮನೇ ಬಿಡೋದಿಲ್ಲ ಆಗಿದ್ದಾಯ್ತು ಅಂತಂದು ಆತ ಬಿಲ್ಲು ಬಾಣ ಹಿಡ್ಕೋಂಡು ಯುದ್ಧ ಮಾಡ್ತಾನೆ. ಘೋರವಾದ ಯುದ್ಧ ಆಗುತ್ತೆ. ಆ ಯುದ್ಧದಲ್ಲಿ ಇಬ್ರೂ ಸತ್ತು ಹೋಗ್ತಾರೆ. ಹುಲಿನೂ ಮತ್ತು ಆತನು ಸತ್ತು ಹೋಗ್ತಾರೆ. ಅಲ್ಲಿ ಹುಲಿದು ಸಮಾದಿಯಿದೆ ಮತ್ತು ಈತಂದೂ ದೇವಸ್ಥಾನವಿದೆ.

ಆ ದೇವಸ್ಥಾನ ಹೇಂಗೆ ಎಂದ್ರೆ ಈ ನನ್ನೀವಾಳದ ಕಡೆಯವ್ರು ದೇವ್ರುಗೆ ಅಲ್ಲಿಗೆ ಹೋದ್ರೆ ಅಲ್ಲಿಯ ದೊರೆ ಆ ದೇವಸ್ಥಾನದ ಬಾಗಿಲನ್ನು ತೆಗೆದ್ರೆ ಹುಲಿಶಾಪ ಆ ದೊರೆ ಸತ್ತುಹೋಗ್ತಾನೆ ಅಂತ ಒಂದು ಪ್ರತೀತಿ. ಪೂಜೆ ಇಲ್ಲ ಅಲ್ಲಿ ಬೀಗ ಹಾಕಿರ್ತಾರೆ. ಹೆದರ್ತಾರೆ ಹುಲಿಶಾಪವಿದೆಯಲ್ಲ ಅಂತ. ದೊರೆ ಬಂದು ತೆಗೆದ್ರೆ ದೊರೆ ಸರ್ವನಾಶ ಆಗ್ತಾನೆ. ಅವನ ವಂಶ ಬೆಳೆಯೊಲ್ಲಾ ಅಂತ ಶಾಪವಿದೆ. ಗಾದ್ರಿಪಾಲನಾಯಕನ ಗುಡಿನ್ನ ದೊರೆ ಬಾಗಿಲು ತೆಗೆದ್ರೆ ಅವನ ವಂಶ ಉಳಿಯೊಲ್ಲ ಅಂತ. ಈಗ್ಲೂ ಅದನ್ನು ತೆಗಿಲಿಕ್ಕೆ ಹೆದರ್ತಾರೆ. ಒಂದ್ಸಲ ಪಾಪನಾಯಕರಿದ್ದಾಗ ಇವರನ್ನೆಲ್ಲ (ವೀರಭಧ್ರ ನಾಯಕರ ಕಡೆ ಕೈ ತೋರಿಸುತ್ತಾ, ವೀರಭದ್ರ ನಾಯಕರು ಚಿತ್ರದುರ್ಗದ ಪಾಳೇಗಾರರ ವಂಶಸ್ಥರು. ಇವರು ಕಥೆ ಹೇಳುವಾಗ ಜೊತೆಯಲ್ಲಿದ್ದರು) ಹೊರಡಿಸಿಕೊಂಡು ಹೋದ್ರು ದೊರೆ ತಪ್ಪಿಸಿಕೊಂಡು ಬರ್ಲೆ ಇಲ್ಲ. ಪಾಪನಾಯಕರೇ ತೆಗೆಸಿದ್ರು ಅದಕ್ಕೆ ಪಾಪನಾಯಕರು ಉಳೀಲಿಲ್ಲ ಅಂತ ಹೇಳ್ತಾರೆ ನಮ್ಮ ಹಳೇ ಜನ. ಅದು ಶಾಪ ಕೊಡ್ತಂತೆ. ಅದಕ್ಕೆ ಏನು ಮಾಡಿದ್ರೂ ಈ ದೊರೆವಂಶ ಉದ್ಧಾರವಾಗ್ಲಿಲ್ಲ ಅಲ್ಲಿಂದ.

ಈ ಗಾದ್ರಿಪಾಲನಾಯಕನ ಸಂತತಿ ಏನಿತ್ತು. ಅವರೆಲ್ಲಾ ಹುಲಿ ಶಾಪದಿಂದ ಬಹಳ ಜನ ತೀರಿಕೊಳ್ಳೋಕೆ ಪ್ರಾರಂಭವಾಯ್ತು. ಅದಕ್ಕೇನು ಮಾಡಿದ್ರು ಇವ್ರು ಇದಕ್ಕೆ ಪರಿಹಾರಕ್ಕೋಸ್ಕರ ಹುಲಿನೇ ಒಂದು ದೇವ್ರು ಮಾಡಿಕ್ಕೊಂಡು ಅದ್ನ ಪೂಜೆ, ಅದನ್ನ ಮಾಡೋಣ ಎಂದು ಗಾದ್ರಿಪಾಲನಾಯಕನಿಗೆ ಶಾಪಕೊಟ್ಟಂತಹ ಈ ಹುಲಿ ದೇವ್ರಿದೆಯಲ್ಲ ಅದನ್ನೇ ಪೂಜೆ ಮಾಡಿಬಿಡೋಣ ಅಂತಂದು ಮಾಡಿಕೊಂಡು ಬಂಗಾರ ದೇವರು ಅಂತ ಪೂಜೆ ಮಾಡ್ತಾರೆ. ಆ ಬಂಗಾರ ದೇವರೇ ಹುಲಿ.