ಜನಪದ ಅನುಭಾವೀ ಕಥನಗಳ ಬಗ್ಗೆ ಮಾತನಾಡುತ್ತ ನಮ್ಮ ನಾಡಿನ ಬಹುದೊಡ್ಡ ವಿದ್ವಾಂಸರೊಬ್ಬರು ‘ಜುಂಜಪ್ಪ’ ಎಂಬ ಹೆಸರನ್ನು ಜುಂಜ-ಜುಂಚ-ಚುಂಚ-ಚುಂಚ ಎಂದು ಸೀಳಿ ಹಾಕಿದರು. ಹೀಗೆ ರೂಢ ನಾಮಗಳ ಒಡೆಯುವಿಕೆ ಶೈಕ್ಷಣಿಕವಾಗಿ ಸರಿಯಾದ ಕ್ರಮವಲ್ಲ. ಅದರಲ್ಲೂ ಮಹಾಕಥನಗಳ ಒಳಗೆ ಬರುವ ಪಾತ್ರಗಳು, ಘಟನೆಗಳು ವಾಚ್ಯದ ಮಟ್ಟದಲ್ಲಿ ನಿಲ್ಲದ ಸಂಕೇತಗಳು, ಶಬ್ದ ನಿಷ್ಪತ್ತಿ ಶಾಸ್ತ್ರದ ಕಸರತ್ತನ್ನು ಮೀರಿ ನಿಂತ ಪ್ರತಿಮೆಗಳಿವು. ಈ ಕಥನಗಳ ನಾಯಕರ ವ್ಯಕ್ತಿತ್ವಗಳು ಇಡಿಯಾಗಿ ನಿರಸನಗೊಂಡು ಸಂಕೇತಗಳಲ್ಲಿ ಸಾರ್ಥಕಗೊಂಡಿರುತ್ತವೆ.

“ಜನಪದ ಕಾವ್ಯಗಳಲ್ಲಿ ಸಮುದಾಯಗಳ ಅಂತಃಸಾಕ್ಷಿ ಅಡಗಿರುವಂತೆಯೇ ಆಯಾ ಸಮುದಾಯಗಳ ಅನೇಕ ತಲೆಮಾರುಗಳ ಸ್ಮೃತಿ ಪ್ರಪಂಚ ರೂಪಕ, ಪ್ರತಿಮೆ, ಸಂಕೇತ ಹಾಗೂ ಧ್ವನಿ ಮತ್ತು ಆಶಯಗಳಲ್ಲಿ ಕಾಣಿಸಿಕೊಂಡಿರುತ್ತದೆ.”[1] ಕೆಳವರ್ಗಗಳ ಸೃಜನಶೀಲತೆ ರೂಪಗೊಂಡಿರುವುದು ಅದು ವಾಸ್ತವದ ಅನೇಕ ವಿಕ್ಷಿಪ್ತ ಕ್ರೌರ್ಯದಲ್ಲಿ, ಅನೇಕ ಹಿಂಸಾತ್ಮಕ ಗೊಂದಲಗಳಲ್ಲಿ. ಅದು ನಿರಂತರ ಸವಾಲುಗಳಿಂದ ಸೃಷ್ಟಿಯಾದ ರೂಪಕ ಪ್ರತಿಭೆ. ಜನಪದ ಅನುಭಾವೀ ಕಥನದ ಪ್ರತಿಯೊಂದು ಭಾಗವೂ ಹೀಗೆ ಸಂಕೇತಗಳಿಂದ ಕಿಕ್ಕಿರಿದಿರುತ್ತದೆ. ಇದು ಕೇವಲ ಜನಪದ ಅನುಭಾವೀ ಕಥನದ ಸಮಸ್ಯೆಯಲ್ಲ. ಶಿಷ್ಠ ಅನುಭಾವಿಗಳಾದ ವಚನಕಾರರು ಮತ್ತು ಸೂಫಿಗಳ ಕುರಿತು ಇದೇ ವಾಗ್ವಾದಗಳು ಚಾಲ್ತಿಯಲ್ಲಿವೆ. “ಸೂಫಿ ಪದ ಹೇಗೆ ಬಂತು ಎಂಬುದರ ಮೇಲೆ ಸೂಫಿಗಳ ತತ್ವವನ್ನು ಅರ್ಥಮಾಡಿಕೊಳ್ಳಲು ಪುಸ್ತಕದ ಬದನೆಕಾಯಿ ಪಂಡಿತರು ಪ್ರಯತ್ನ ಮಾಡಿದ್ದಾರೆ. ಆ ಪದ ‘ತಸವುಫ್’ ಎಂಬ ಪರ್ಶಿಯನ್ ಪದದಿಂದ ಬಂತೋ, ‘ಸೋಫಿ’ ಎಂಬ ಗ್ರೀಕ್ ಪದದಿಂದ ಬಂತೋ ಇತ್ಯಾದಿ ಪ್ರಶ್ನೆಗಳು ಸೂಫಿಗಳಿಗೆ ಮುಖ್ಯವಲ್ಲ. ಅನೇಕ ಸಲ ಸೂಫಿಗಳಿಗೆ ‘ಸೂಫಿ’ ಪದವೇ ಗೊತ್ತಿರುವುದಿಲ್ಲ. ಎಷ್ಟಾದರೂ ಸೂಫಿಗಳು ಹುಡುಕುತ್ತಿರುವುದು ಪದಗಳಿಗೆ ಸಿಕ್ಕದ ಅರ್ಥವನ್ನು, ಅಕ್ಷರಗಳಿಗೆ ಸಿಕ್ಕದ ಜ್ಞಾನವನ್ನು, ಆಶದುಲ್ಲಾ ಖಾದ್ರಿಯವರ ಮಾತಿನಲ್ಲಿ ‘ನಮ್ಮದು ಅಕ್ಷರಗಳಲ್ಲಿ ಬರೆಯಲಾಗದ ವೇದ, ಅದು ಅಂತರಂಗದ ವೇದ”[2] ಸಾಂಪ್ರದಾಯಿಕ ಆಧ್ಯಯನಕಾರನಲ್ಲಿ ತನ್ನನ್ನು ಹೇಗೆ ನೋಡೆಂದು ಅನುಭಾವಿಯ ಅಂತರಂಗ ನಿವೇದಿಸಿಕೊಳ್ಳುತ್ತದೆ. ಆದರೂ ನಾವು ಮತ್ತೆ ಒಂದು ಸಂಕೇತದ ಹೊರಮೈಯನ್ನು ತಡಕುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತೇವೆ. ಆದರೆ ಇಲ್ಲಿನ ಪ್ರತಿಮೆ, ಸಂಕೇತಗಳು ಸಿದ್ಧ ಅರ್ಥದ ಚೌಕಟ್ಟುಗಳನ್ನು ಸದಾ ಮೀರುತ್ತಿರುತ್ತವೆ.

ಸಂಕೇತ ಅನುಭಾವಿಗಳ ಕಥನ ಶೈಲಿಯ ಪ್ರಧಾನ ಅಂಶ. ಎಲ್ಲ ಅನುಭಾವಿಗಳು ಸಂಕೇತಗಳನ್ನು ಹುಲುಸಾಗಿ ಬಳಸಿದವರು. ನಾನು ಇಲ್ಲಿ ಸಂಪಾದಿಸಿರುವ ಗಾದ್ರಿಪಾಲ ನಾಯಕನ ಕಥನದಲ್ಲಿ ಹುಲಿ ಮತ್ತು ಗಾದ್ರಿಪಾಲ ಮುಖಾಮುಖಿಯಾಗುತ್ತಾರೆ. ಗಾದ್ರಿಪಾಲ ಹುಲಿಗೆ ನೀನು ನನ್ನ ತಂಟೆಗೆ ಬರಬೇಡ, ನಾನು ನಿನ್ನ ತಂಟೆಗೆ ಬರುವುದಿಲ್ಲ ಎಂಬ ಒಪ್ಪಂದ ಮಾಡಿಕೊಳ್ಳುತ್ತಾನೆ. ಆದರೆ ಒಂದು ದಿನ ಒಪ್ಪಂದ ಮುರಿದು ಬೀಳುತ್ತದೆ. ಹುಲಿ ಮತ್ತು ಗಾದ್ರಿಪಾಲನ ನಡುವೆ ಯುದ್ಧ ನಡೆದು ಇಬ್ಬರೂ ಸಾಯುತ್ತಾರೆ. ಇದೊಂದು ಸಾಮಾನ್ಯ ಕಥೆ. ಹುಲಿಯೆಂಬುದು ನಮ್ಮ ಅನೇಕ ಅನುಭಾವೀ ಕಥನಗಳಲ್ಲಿ ಬರುವ ಅತ್ಯಂತ ಸಾಮಾನ್ಯವೂ ಮತ್ತು ವಿಶಿಷ್ಟವೂ ಆದ ಸಂಕೇತ. ಪ್ರಾಥಮಿಕ ಶಾಲೆಯಲ್ಲಿ ನಾವು ಓದಿದ ಗೋವಿನ ಹಾಡಿನಲ್ಲಿ ಬರುವ ಹುಲಿ ಮತ್ತು ಅದನ್ನು ತನ್ನ ಸಾತ್ವಿಕತೆಯಿಂದಲೇ ಮಣಿಸುವ ಗೋವಿನ ಕಥನ ಚಿರಪರಿಚಿತವಾದ ಪಾಠ. ಈಗ ‘ಗೋವು’ ಮತ್ತು ‘ಹುಲಿ’ ಈ ಎರಡು ಸಂಕೇತಗಳನ್ನು ನಮ್ಮ ಸಂಸ್ಕೃತಿಯ ಚೌಕಟ್ಟಿನೊಳಗೆ ಇಟ್ಟು ನೋಡಬೇಕಿದೆ. ಹಸು ಮತ್ತು ಹುಲಿಗಳೆರಡು ಈ ಕಥನದಲ್ಲಿ ಮುಖಾಮುಖಿಯಾಗುತ್ತವೆ ನಿಜ. ಆದರೆ ನಮ್ಮ ತಿಳುವಳಿಕೆಗೆ ದಕ್ಕಬಹುದಾದ ಸಾಮಾನ್ಯ ವಿಜ್ಞಾನವು ಬೌದ್ಧಿಕ ಚಟುವಟಿಕೆ ಮನುಷ್ಯನಿಗಲ್ಲದೆ ಉಳಿದ ಜೀವಿಗಳಿಗೆ ಅಸಾಧ್ಯವಾದುದ್ದು ಎಂದು ತಿಳಿಸುತ್ತದೆ. ನಿಜಕ್ಕೂ ಹಸು ಮತ್ತು ಹುಲಿಗಳು ಮುಖಾಮುಖಿಯಾಗಿ ಹೀಗೆ ಸಂಭಾಷಿಸಲಾರವು ಎನ್ನುವುದು ಲೋಕ ಸತ್ಯ. ಆದರೆ ಅನುಭಾವಿಗಳ ಲೋಕದಲ್ಲಿ ಅಸಾಧ್ಯದ ಮಾತೇ ಇಲ್ಲ. ಅಂದರೆ ಒಂದು ಸಮುದಾಯ ಕಟ್ಟಿದ ಈ ಕಥನದ ಹಿಂದಿರುವ ಸತ್ಯಗಳಾವವು…? ಒತ್ತಡಗಳಾವವು…? “ಸತ್ಯದ ಮಾತಿಗೆ ಬಂದರೆ ಪುಣ್ಯಕೋಟಿಯ ವಚನೆ ಪಾಲನೆ ಎಷ್ಟು ಸತ್ಯವೋ ಹುಲಿಯ ಹಸಿವೆ ಅದಕ್ಕಿಂತ ಹೆಚ್ಚಿನ ಸತ್ಯವಾಗಬಹುದು. ಇವೆಲ್ಲ ಸಮಸ್ಯೆಗಳು ಏಳುವುದರಿಂದ ಇದು ಮನುಷ್ಯರ ಕಥೆಯೇ ಹೊರತು ಬೇರೆಯಲ್ಲ”[3] ಎನ್ನುವುದಾದರೆ ಪುಣ್ಯಕೋಟಿಯ ವಚನ ಪಾಲನೆ ಮತ್ತು ಹುಲಿಯ ಹಸಿವು ಅಂದರೆ ಕ್ರೌರ್ಯ (ಏಕೆಂದರೆ ಅದು ಕ್ರೂರ ವಿಧಾನದ ಮೂಲಕ ತಣಿಯುತ್ತದೆ) ಎರಡು ಭಿನ್ನ ಸಮುದಾಯಗಳನ್ನು ಪ್ರತಿನಿಧಿಸುವ ಗುಣಗಳೇ ಆಗಿವೆ. ಹುಲಿಯ ಹಸಿವಿನ ಪ್ರತಿನಿಧೀಕರಣ ತಾನು ಸರ್ವಶಕ್ತ ಬಲಶಾಲಿ ಎಂಬ ಆತ್ಮಪ್ರತ್ಯಯದ ಸಂಕೇತ. ಪುಣ್ಯಕೋಟಿಯ ವಚನೆ ಪಾಲನೆ ಅದರ ನಿಕೃಷ್ಟ ಅಸಹಾಯಕತೆಯ ಆತ್ಮನಿಂದೆಯ ಸಂಕೇತ. ಯಾವತ್ತೂ ಅಧೀನ ಸಮುದಾಯಗಳು ಚಿಕ್ಕ ಪ್ರಾಣಿಗಳೊಂದಿಗೆ ತಮ್ಮನ್ನ ಸಮೀಕರಿಸಿಕೊಳ್ಳುತ್ತವೆ. ಆಫ್ರಿಕಾದ ಲೇಖಕ ಗೂಗಿ ತನ್ನ ಸಮುದಾಯದ ಬಗ್ಗೆ ಹೀಗೆ ಬರೆಯುತ್ತಾನೆ. “ಗೀಕೂಯೂ ಭಾಷೆಯಲ್ಲಿದ್ದ ಕತೆಗಳಲ್ಲಿ ಸಾಮಾನ್ಯವಾಗಿ ಪ್ರಾಣಿ-ಪಕ್ಷಿಗಳೇ ಪ್ರಧಾನ ಪಾತ್ರಗಳು ದೈಹಿಕವಾಗಿ ದುರ್ಬಲವಾಗಿದ್ದರೂ ಚಾಲಾಕಿತನ ಹಾಗೂ ಉಪಾಯಗಾರಿಕೆಯುಳ್ಳ ಪುಟ್ಟ ಪ್ರಾಣಿ ಮೊಲವು ನಮ್ಮ ಹೀರೋ ಆಗಿತ್ತು. ಅದರ ಗೆಲವುಗಳು ನಮ್ಮ ಗೆಲುವುಗಳಾಗಿದ್ದವು. ದುರ್ಬಲರೆನಿಸಿಕೊಂಡವರು ಬಲಿಷ್ಠರನ್ನ ಸಹ ಸೋಲಿಸಬಹುದು ಎಂಬುದನ್ನು ನಾವು ಕಲಿತೆವು. ಮೊಲದ ಜತೆ ನಾವು ನಮ್ಮನ್ನು ಗುರುತಿಸಿಕೊಳ್ಳುತ್ತಿದ್ದೆವು. ಅದು ಕ್ರೂರ ಮೃಗಗಳಾದ ಸಿಂಹ, ಚಿರತೆ, ಸೀಳುನಾಯಿಗಳ ಜೊತೆ ಬದುಕುತ್ತ, ಹೋರಾಡುತ್ತಿದ್ದುದು ನಮಗೆ ಮೆಚ್ಚಿನ ಸಂಗತಿಯಾಗಿತ್ತು.”[4] ಆಫ್ರಿಕಾವು ಇಂಡಿಯಾದಂತೆ ಬಹುರೂಪೀ ಬದುಕುಗಳ ನಾಡಾದ್ದರಿಂದ ಸಂವೇದನೆಗಳ ಮಟ್ಟದಲ್ಲಿ ಆಫ್ರಿಕಾ ಇಂಡಿಯಾ ಎರಡು ಜೊತೆಗೇ ನಿಲ್ಲುತ್ತವೆ.

ಸೋತ ಸಮುದಾಯಗಳ ಅಧೀನ ಸ್ಥಿತಿಗೂ ಅವು ತಮ್ಮನ್ನು ಸಾಧು ಪ್ರಾಣಿಗಳ ಜೊತೆ ಸಮೀಕರಿಸಿಕೊಳ್ಳುವುದಕ್ಕೂ ಸಂಬಂಧವಿದೆ. ಅಂದರೆ ಒಂದು ಸಮುದಾಯ ಕಟ್ಟಿದ ಕಥನದಲ್ಲಿ ಹಸು ಕೊನೆಯಲ್ಲಿ ಗೆಲ್ಲುತ್ತದೆಯೆಂದರೆ ಅದು ಗೆಲುವನ್ನು ಕನಸಿರಬೇಕು. ತನ್ನನ್ನು ಕಠೋರ ಕ್ರೌರ್ಯದಿಂದ ನಡೆಸಿಕೊಂಡ ಸಮುದಾಯವನ್ನು ತನ್ನ ಸಾತ್ವಿಕತೆಯಿಂದಲೇ ಮಣಿಸುವ ಆಶಯ ಈ ಕಥನದಿಂದ ವ್ಯಕ್ತವಾಗುತ್ತದೆ.

ಖಂಡವಿದೆ ಕೋ ಮಾಂಸವಿದೆ ಕೋ
ಗುಂಡಿಗೆಯ ಬಿಸಿ ರಕ್ತವಿದೆ ಕೋ
ಚಂಡ ವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು

ಎನ್ನುವ ಧ್ವನಿಯ ಹಿಂದಿನ ದೈನ್ಯಪೂರಿತ ಅಸಹಾಯಕತೆಯನ್ನು ನಾವು ವಿಶೇಷವಾಗಿ ಗಮನಿಸಬೇಕಿದೆ. ದಮನಿತ ವರ್ಗದ ಸೃಜನಶೀಲತೆ ಈ ರೀತಿಯ ಹೃದಯವಿದ್ರಾವಕ ಅಸಹಾಯಕತೆಯಿಂದ ಹುಟ್ಟಿದೆ. ಇಡೀ ವ್ಯವಸ್ಥೆ ಅದನ್ನು ಎಲ್ಲ ರೀತಿಯಿಂದಲೂ ನಿಶ್ಯಕ್ತಗೊಳಿಸಿರುವ ಕೇಂದ್ರದಿಂದ ಅದರ ತಾತ್ವಿಕತೆಯೆಂಬುದು ರೂಪುಗೊಂಡಿದೆ. ಅದಕ್ಕೆ ಎದುರು ಬಿದ್ದ ವರ್ಗವನ್ನು ಹುಲಿಯಾಗಿಸಿ ತನ್ನನ್ನು ಹಸುವಾಗಿಸಿಕೊಂಡು ಹೋರಾಟವೇ ಅಸಾಧ್ಯವೆಂಬ ಆತ್ಮನಿಕೃಷ್ಟತೆಯನ್ನು

ತಂದುಕೊಂಡ ಸಮುದಾಯ
ಬೆಟ್ಟದೊತ್ತಿಗೆ ಹೋಗಬೇಡ
ಕಟ್ಟಕಡೆಯಲಿ ಮೇಯಬೇಡ
ದುಷ್ಟವ್ಯಾಘ್ರನು ಹೊಂಚುತಿರುವನು
ನಟ್ಟನಡುವಿರು ಕಂದನೆ

ಎಂದು ತನ್ನನ್ನು ರಕ್ಷಿಸಿಕೊಳ್ಳುತ್ತದೆ. “ಆದರೂ ಹುಲಿಯ ಹಸಿವೆ ಸ್ವಭಾವ ಜನ್ಯವಾಗಿದೆಯೇ ಹೊರತು ಅಸ್ವಾಭಾವಿಕವಲ್ಲ”[5] ಎನ್ನುವ ಮಾತು ತುಂಬಾ ವಿಚಿತ್ರವಾದದ್ದು. ಇದು ಶೋಷಣೆ ಸ್ವಾಭಾವಿಕವಾಗಿ ಬಂದುದೇ ಹೊರತು ನಿರ್ಮಾಣಗೊಂಡುದಲ್ಲ ಎಂಬ ಜೀವ ವಿರೋಧೀ ನಿಲುವಾಗಿಯೇ ಕಾಣುತ್ತದೆ. ತಮ್ಮ ಲೇಖನದ ಆರಂಭದಲ್ಲಿ ಗೋವಿನ ಹಾಡು ಕುರಿತು ‘ಇದು ಮನುಷ್ಯನ ಕಥೆಯೇ ಹೊರತು ಬೇರೆಯಲ್ಲ’ ಎನ್ನುವ ಈ ವಿಮರ್ಶಕರು ‘ಹುಲಿಯ ಹಸಿವು ಸ್ವಾಭಾವಿಕವಾದದ್ದು’ ಎನ್ನುವ ತೀರ್ಮಾನಕ್ಕೆ ಬರುವುದು ಆಶ್ಚರ್ಯಕರವಾಗಿದೆ. ಕೊನೆಯಲ್ಲಿ ಹುಲಿಯ ಸಾವನ್ನು ಮಾನವೀಯಗೊಳಿಸಲು ಹೋಗಿ ‘ಹಸುವಿನ ತಾಯ್ತನವನ್ನು ಗಮನದಲ್ಲಿಟ್ಟುಕೊಂಡು ಅದು ತನ್ನ ಅಂತ್ಯ ಕಾಣುತ್ತದೆ’ ಎಂದು ಅದನ್ನು ಸಮರ್ಥಿಸುತ್ತಾರೆ. ಕಥೆಯ ಅಂತ್ಯದಲ್ಲಿ ಬರುವ ಹುಲಿಯ ಸಾವು ಅದರ ಪಶ್ಚಾತ್ತಾಪದ ಫಲವಾಗಿ ಬಂದುದಲ್ಲ. ಅದು ಶೋಷಿತ ಸಮುದಾಯವೊಂದರ ಅಸಹಾಯಕ ಅಂತಃಕರಣವೊಂದು ಕಂಡ ಅದ್ಭುತ ಕನಸು ಮಾತ್ರ. ಯಾವ ವರ್ಗ ತನ್ನ ಸರ್ವಶಕ್ತ ಅಧಿಕಾರದ ತುತ್ತ ತುದಿಯಲ್ಲಿದ್ದು ಕ್ರೌರ್ಯದಿಂದ ತನ್ನ ಆತ್ಮವನ್ನು ನಾಶಮಾಡಿಕೊಂಡಿರುತ್ತದೋ ಅದು ಪಶ್ಚಾತ್ತಾಪದಂತಹ ತಣ್ಣನೆಯ ಆಧ್ಯಾತ್ಮಕ್ಕಿಳಿಯಲು ಸಾಧ್ಯವೇ…?

“ನಮ್ಮ ಸಂಸ್ಕೃತಿಯಲ್ಲಿ ಹುಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದು ಒಂದು ಸಮೂಹ ಅಥವಾ ಒಬ್ಬ ವ್ಯಕ್ತಿಯ ಗುಣ, ಪರಾಕ್ರಮ, ಆತ್ಮಬಲ ಇಂಥದ್ದನ್ನೆಲ್ಲ ಅಳೆವ ಸಾಧನವಾಗಿ ಕಂಡು ಬರುತ್ತದೆ”[6] ನಮ್ಮ ಅನುಭಾವಿಗಳು ಹುಲಿಯನ್ನು ಸೋಲಿಸುವ ಅನೇಕ ಪ್ರಸಂಗಗಳು ನಮಗೆ ಕಾಣಸಿಗುತ್ತವೆ. ಬಾಬಾಬುಡನ್ ಗಿರಿಯ ಬಾಬಾನ ಗುಹೆಯನ್ನು ಹುಲಿ ತನ್ನ ಬಾಲದಿಂದ ಗುಡಿಸುವುದು, ಮಾಳಿಂಗರಾಯ ಹುಲಿಗಳನ್ನು ಕುರಿಕಾಯಲು ಹಚ್ಚುವುದು, ಅವುಗಳ ಉಗುರುಗಳಿಂದ ಹುಲಿಜಂತಿಯ ಕೋಟೆಯನ್ನು ಕಟ್ಟುವುದು. ಹುಲಿಗಳ ಬಾಯಿಂದ ವೇದಗಳನ್ನು ಓದಿಸುವುದನ್ನು ಮಾಳಿಂಗರಾಯ ಹವ್ಯಾಸವಾಗಿಸಿಕೊಂಡಿದ್ದನಂತೆ. ಇನ್ನು ಮಾದೇಶ್ವರನ ವಾಹನ ಹುಲಿಯೇ ಆಗಿದೆ. ನಮ್ಮ ಅನೇಕ ಸೂಫಿಗಳ ವಾಹನವೂ ಹುಲಿಯೇ ಆಗಿದೆ. ಹೀಗಾಗಿ ಹುಲಿಯೆಂಬ ಸಂಕಥನ ನಮ್ಮ ಅನುಭಾವೀ ಕಥನಗಳಲ್ಲಿ ಪ್ರತಿಸ್ಪರ್ಧಿಯಂತೆ ಚಿತ್ರಣಗೊಳ್ಳುತ್ತದೆ.

ಇನ್ನು ಅನುಭಾವೀ ಕಥನಗಳಲ್ಲಿ ಅತ್ಯಂತ ಕ್ಷುದ್ರ ವಸ್ತುವೂ ಬಲಿಷ್ಠ ಸಂಕೇತವಾಗುವ ಪರಿ ಅದ್ಬುತವಾದದ್ದು. ಶೋಷಿತ ಸಮುದಾಯವೊಂದು ತನ್ನ ಅಸಹಾಯಕ ಅಸ್ತಿತ್ವವನ್ನು ಶಕ್ತಗೊಳಿಸುವ ಕಡೆಗೆಲ್ಲ ಅದು ತನ್ನ ಸುತ್ತಲ ನಿರ್ಬಲ ವಸ್ತುಗಳಿಗೆ ಅಸಾಧಾರಣ ಬಲವನ್ನು ಆರೋಪಿಸುತ್ತದೆ. ಸಿರಿಯ ಕಥೆಯಲ್ಲಿ ಸಿರಿ ತನ್ನ ಕಾಲಿನ ಗೆಜ್ಜೆ ತೆಗೆದು ನೆಲವನ್ನು ಗೀರಿ ನೀರು ತಗೆಯುವುದು. ಅವಳ ಸೀಮಂತಕ್ಕೆ ಅಜ್ಜ ಸೀರೆ ತರಲು ಹೋಗುವಾಗ ಅವಳು ತನ್ನಜ್ಜನಿಗೆ ಒಂದು ನಾಣ್ಯ ಕೊಡುತ್ತಾಳೆ. ಬಟ್ಟೆಯಂಗಡಿಯಲ್ಲಿ ಅವಳ ಗಂಡನ ಎಂಟುನೂರು ನಾಣ್ಯಗಳನ್ನು ಅವಳ ಒಂದು ನಾಣ್ಯ ಮೀರಿಸುತ್ತದೆ. ಅವಳು ಹೊಳೆದಾಟುವಾಗ ಬಾಳೆ ಎಲೆಯಲ್ಲಿ ಮಗುವನ್ನಿಟ್ಟು ಪ್ರವಾಹದೊಳಕ್ಕೆ ಹರಿಬಿಟ್ಟಾಗ ಭೋರ್ಗರೆವ ನದಿಯನ್ನು ‘ಬಂಗ ಬಾಳೆ’ ಎಲೆಯು ಸೀಳಿ ಆಚೆ ದಡಕ್ಕೆ ಮಗುವನ್ನು ಒತ್ತೊಯ್ಯುವುದು. ಇವೆಲ್ಲ ಕ್ಷುದ್ರ ಪರಿಸರಕ್ಕೆ ಆನೆ ಬಲವನ್ನು ಆರೋಪಿಸುವ ಸಂಕೇತಗಳು. ಅದಕ್ಕಾಗಿಯೇ ಅನುಭಾವೀ ಕಥನಗಳೊಳಗಿನ ಸಂಕೇತಗಳನ್ನು ವಾಚ್ಯದ ಮಟ್ಟದಲ್ಲಿ ನೋಡುವುದು ಅಪಾಯ. ರಾಮಾಯಣದಲ್ಲಿ ಬರುವ ಕಪಿಗಳು “ವಾನರರೋ, ವಾನರರ ಕುಲಚಿನ್ಹೆಯಾಗಿಸಿಕೊಂಡಿರುವ ಸಮುದಾಯದ ಮನುಷ್ಯರೋ…? ಅಥವಾ ಇಡಿಯಾಗಿ ಅವು ವಾಲ್ಮೀಕಿಯ ಕಲ್ಪನೆಯ ಜೀವಗಳೋ…? ಎಂಬ ಪ್ರಶ್ನೆಗಳು ಅಷ್ಟು ಮುಖ್ಯವಾದವುಗಳಲ್ಲ. ವಾನರರು ಏನನ್ನು ಸಂಕೇತಿಸುತ್ತಾರೆ ಎಂಬುದು ಮಹತ್ವದ ಅಂಶವಾಗುತ್ತದೆ.”[7] ಅನುಭಾವೀ ಕಥನವನ್ನು ಚರಿತ್ರೆಗೆ ಬಳಸಿಕೊಳ್ಳುವಾಗಲಂತೂ ಇದು ಬಹು ಮುಖ್ಯ ಸಮಸ್ಯೆಯಾಗುತ್ತದೆ. ಇಲ್ಲಿನ “ಸಾಂಕೇತಿಕತೆ ಅನುಭವವನ್ನು ಒಂದು ವಿಚಾರವಾಗಿ ಪರಿವರ್ತಿಸಿ ನಂತರ ವಿಚಾರವನ್ನು ಪ್ರತಿಮೆಯಾಗಿ ಪರಿವರ್ತಿಸುತ್ತದೆ. ಆಗ ಪ್ರತಿಮೆಯೊಳಗೆ ಅಡಗಿರುವ ವಿಚಾರ ಸದಾ ಜಾಗೃತವಾಗಿ ಕ್ರಿಯಾಶೀಲವಾಗಿರುತ್ತದೆ. ಕೈಗೆ ಪೂರ್ಣ ಸಿಕ್ಕಿಯೂ ದಕ್ಕದಂತಿರುತ್ತದೆ.”[8] ಅದಕ್ಕಾಗಿ ಚರಿತ್ರೆಯನ್ನು ಅಧ್ಯಯನ ಮಾಡುವ ರೀತಿಯಲ್ಲಿ ಈ ಅನುಭಾವೀ ಕಥನಗಳನ್ನು ಅಧ್ಯಯನ ಮಾಡುವುದಕ್ಕಿಂತ ಅವುಗಳನ್ನು ನಮ್ಮಲ್ಲಿಯ ಸಾಂಸ್ಕೃತಿಕ ಸಂಕಥನಗಳಾಗಿ ನೋಡುವುದು ಹೆಚ್ಚು ಸಮಂಜಸವಾದ ಕ್ರಮವಾಗಿದೆ.

ಅಧ್ಯಯನದ ಮಿತಿಗಳು ಮತ್ತು ಕನಸುಗಳ ಅನನ್ಯತೆ

ನಾನು ಈ ಕಥನಗಳನ್ನು ಸಂಗ್ರಹಿಸುವ ಜೊತೆಗೆ ಮ್ಯಾಸಬೇಡರ ಬಹುತೇಕ ಅವರ ಎಲ್ಲ ಸಾಂಸ್ಕೃತಿಕ ಪರಿಸರವನ್ನು ಸುತ್ತಾಡಿದ್ದೇನೆ. ನಾನು ಹೋದಡೆಯಲ್ಲೆಲ್ಲ ಜಗಳೂರಜ್ಜನ ಕಥೆ ಕೇಳಿದೆ. ಮಂಟೇಸ್ವಾಮಿಯ ಕಾವ್ಯದಷ್ಟೇ ಬೃಹತ್ ಪ್ರಮಾಣದ ಕಾವ್ಯ ಅದಾಗಿರಬಹುದೆಂದು ಕ್ಷೇತ್ರಕಾರ್ಯದುದ್ದಕ್ಕೂ ವಿಶೇಷವಾಗಿ ಹುಡುಕಿದೆ. ಏಕೆಂದರೆ ಕಥೆಯುದ್ದಕ್ಕೂ ಬರುವ ರೋಚಕ ಸಾಂಸ್ಕೃತಿಕ ಬಿಕ್ಕಟ್ಟುಗಳು ಮತ್ತು ತಾತ್ವಿಕ ಜಗಳಗಳಿಂದ ಜಗಳೂರಜ್ಜನ ಕಥೆ ಒಂದು ಅಪೂರ್ವ ಕಥೆಯಾಗಿದೆ. ಆದರೆ ಕಥೆಯಲ್ಲಿನ ವಿವರಗಳನ್ನೊಳಗೊಂಡ ಕಾವ್ಯ ಕೊನೆಗೂ ಸಿಕ್ಕಲಿಲ್ಲ. ನಾನು ಕ್ಷೇತ್ರಕಾರ್ಯದಲ್ಲಿದ್ದಾಗ ಗಾದ್ರಿಪಾಲನ ಹೆಂಡತಿಯರು ಸಹಗಮನ ಮಾಡಿದರು ಎಂದು ಪ್ರತೀತಿ ಇರುವ ‘ಗಂಜೀಕಟ್ಟೆ’ ಎಂಬ ಗ್ರಾಮಕ್ಕೆ ಹೋದಾಗ, ಅಲ್ಲಿನ ಗಾದ್ರಿಪಾಲನ ಗುಡಿಯ ಪೂಜಾರಿಯ ಸಂದರ್ಶನವನ್ನು ಮಾಡಿದೆ (ಸಂದರ್ಶನ ಕೊನೆಯಲ್ಲಿದೆ) ಅದರ ಒಂದು ತುಣುಕು ಹೀಗಿದೆ.

ಪ್ರಶ್ನೆ : “ನೋಡಿ ಈ ರಾಘವೇಂದ್ರ, ತಿರುಪತಿ ವೆಂಕಟರಮಣಾ ಇವ್ರು ಹುಟ್ಟಿದ್ರೋ ಇಲ್ವೋ ನಮಗೆ ಗೊತ್ತಿಲ್ಲ. ಈಗ ದೇವ್ರಾಗಿ ಬಿಟ್ಟಾರೆ. ಅವ್ರು ಎಲ್ಲಿ, ಏನು ಅಂತಾ ಗೊತ್ತಿಲ್ಲ ನಮಗೆ, ಈಗ ಅವನು ಯಾರೋ ಸಾಯಿಬಾಬಾ ಅನ್ನೋನು ದೇವರಾಗಿದ್ದಾನೆ. ಒಟ್ಟಲ್ಲಿ ಅವರು ಸಮುದಾಯಕ್ಕೆ ಏನು ಮಾಡಿದ್ದಾರೆ ಅಂತ ನಮಗೆ ಗೊತ್ತಿಲ್ಲ. ಈ ಗಾದ್ರಿಪಾಲನಾಯಕ, ಈ ಜಗಳೂರಜ್ಜ, ಇವ್ರೆಲ್ಲ ಒಂದು ದೊಡ್ಡ ಸಮುದಾಯಕ್ಕೆ ತುಂಬಾ ದುಡಿದಿದ್ದಾರೆ, ಬಾಳ ಕಷ್ಟಪಟ್ಟಿದ್ದಾರೆ. ಈಗ ಅವ್ರು ದುಡೀಲಿಲ್ಲ ದುಕ್ಕ ಬಡೀಲಿಲ್ಲ ದೊಡ್ಡ ದೊಡ್ಡ ಗುಡಿಗಳನ್ನು ಕಟ್ಟಿಸಿಬಿಟ್ರು. ಆದ್ರೆ ಈ ಗಾದ್ರಿಪಾಲನಿಗೆ ಇಷ್ಟೇ ಸಣ್ಣ ಸಣ್ಣ ಗುಡಿ. ಯಾರೋ ಬೇಕಾದವ್ರು ಪೂಜೆ ಮಾಡ್ತೀರಿ, ದಿನಾ ಮಾಡಲೇಬೇಕಂತ. ಯಾಕಾಗಿ ಈತರ ಆಯ್ತು ಇದು…?
ಆತ ಕೊಟ್ಟ ಉತ್ತರ.

ಪೂಜಾರಿ : ಎನೋ ಒಂದು ಶಾಪ ಇರಬಹುದು ಅಂತ ಕಾಣುತ್ತೆ

ಪ್ರಶ್ನೆ : ಯಾರಿಗೆ

ಪೂಜಾರಿ : ನಮ್ಮೀ ನಾಯಕರ ವಂಶದವರಿಗೆ

ಪೂಜಾರಿ ಮುಗ್ಧವಾಗಿ ಉತ್ತರಿಸುತ್ತಲೇ ಹೋದ. ನಮ್ಮ ಸಮುದಾಯಗಳಿಗೆ ನಿಶ್ಚಿತವಾಗಿ ಯಾರು ನಮ್ಮ ಶತ್ರುಗಳು ಎಂಬ ಪರಿಕಲ್ಪನೆ ಇಲ್ಲವೇನೋ ಎನ್ನಿಸಿತು. “ರೈಲು ಬಂದಾಗ ಎಲ್ಲ ದೇವತೆಗಳೂ ಅದನ್ನು ಹತ್ತಿ ಕಾಡು ಬಿಟ್ಟು ನಗರಗಳನ್ನು ಸೇರಿದರು. ಅಲ್ಲಿಯ ಜನ ಅವರ ನೆರವಿನಿಂದ ಅಭ್ಯುದಯಗೊಳ್ಳುತ್ತಿದ್ದಾರೆ.”[9] ಎಂದು ಎಲ್ವಿನ್ ಗೊಂಡರ ವೃದ್ಧನೊಬ್ಬಾತನಿಂದ ಪಡೆದ ಉತ್ತರ ನನಗೆ ಆಗ ನೆನಪಿಗೆ ಬಂತು.

ಅಲಕ್ಷಿತ ವಿಷಯಗಳ ಅಧ್ಯಯನ (ಸಬಾಲ್ಟ್ರನ್ ಅಧ್ಯಯನಗ)ಳು ಕೇವಲ ಶೈಕ್ಷಣಿಕ ಶಿಸ್ತಿನ ಮಿತಿಗಳೊಳಗೇ ರೂಪುಗೊಳ್ಳುತ್ತಿರುವುದರಿಂದಲೇ ಏನೋ, ಈವತ್ತು ನಾವು ಯಾವ ಅಲಕ್ಷಿತ ವಿಷಯಗಳ ಕುರಿತು ಅಧ್ಯಯನ ಮಾಡುವೆವೋ, ಆ ಅಲಕ್ಷಿತ ಪರಿಸರಕ್ಕೆ ನಮ್ಮ ಅಧ್ಯಯನದ ಫಲಿತಾಂಶಗಳು ಮುಟ್ಟುತ್ತಿಲ್ಲವೆಂಬ ಆತಂಕ ನಮ್ಮ ಅಧ್ಯಯನಗಳಿಗೆ ಇಲ್ಲವೆಂದು ಕಾಣುತ್ತದೆ. “ಮೌಖಿಕ ಜಾನಪದವು ಸಂಗ್ರಹಿತವಾಗಿ ಮುದ್ರಿತ ರೂಪಕ್ಕೆ ಬಂದಾಗ ಪಠ್ಯ ಮಾತ್ರ ಉಳಿದುಕೊಂಡು ಸಹಪಠ್ಯ ಯಾವುದೋ ಒಂದು ಭಾಷಿಕ ಪಠ್ಯದ ಮಾದರಿಯನ್ನು ಅನುಸರಿಸುವುದಷ್ಟೇ”[10] ಈ ರೀತಿಯ ಆತಂಕ ಕೇವಲ ಶೈಕ್ಷಣಿಕವಾದದ್ದು. ಈವತ್ತಿನ ಶಕ್ತಿ ರಾಜಕಾರಣ ಮತ್ತು ನವವಸಾಹತುಶಾಹಿಗಳ ಸಾಂಸ್ಕೃತಿಕ ದಬ್ಬಾಳಿಕೆಗಳನ್ನು ಗಮನಿಸಿದಲ್ಲಿ ಈ ಅಧ್ಯಯನಗಳ ಉಪಯುಕ್ತತೆ ನಮ್ಮ ಅರಿವಿಗೆ ಬಾರದಿರದು.

ಮೇಲಿನ ಇಬ್ಬರು ಆಕ್ರಮಣಕಾರರ ಹಿಂದೆ ಸ್ಪಷ್ಟವಾಗಿ ರಾಜಕೀಯ ಮತ್ತು ಆರ್ಥಿಕ ಕಾರಣಗಳು ಕೆಲಸ ಮಾಡಿವೆ ಎಂಬುದು ಸರ್ವವಿಧಿತ. ಇಂಡಿಯಾದ ಶ್ರೇಣೀಕರಣ ವ್ಯವಸ್ಥೆಯಲ್ಲಿ ರಾಜಕೀಯ ಶಕ್ತಿ ಮತ್ತು ಅದನ್ನು ರೂಪಿಸಿದ ಸಾಂಸ್ಕೃತಿಕ ಪ್ರಭುತ್ವಕ್ಕೆ ಯಜಮಾನಿಕೆಗಳು ದೊರತಿದ್ದೇ ಸೋತ ಸಮುದಾಯಗಳು ಶರಣಾದ ಮೇಲೆ. ಅಲ್ಲಿಗೆ ಅಧೀನ ಸಮುದಾಯಗಳ ಸಾಂಸ್ಕೃತಿಕ ಬದುಕು ಮತ್ತು ಅರ್ಥವ್ಯವಸ್ಥೆ ಧೂಳೀಪಟವಾಗಿ ನಿಸ್ಸಹಾಯಕವಾದ ಸಮುದಾಯಗಳು ಕಟ್ಟಿಕೊಂಡ ಕಥನಗಳ ಒಳಗೆ ಸರ್ವಸ್ವವನ್ನು ಯಜಮಾನರಿಗೆ ಒಪ್ಪಿಸಿ ಶರಣಾದ ಅಸಹಾಯಕತೆ ಇದೆ. ಅವರ ನೋವಿನ ನೆಲೆಗಳನ್ನು ಅರ್ಥ ಮಾಡಿಕೊಳ್ಳಲು ನಾವು ಈ ಕಥನಗಳನ್ನು ಅಧ್ಯಯನ ಮಾಡಲೇಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಶೈಕ್ಷಣಿಕ ಸಮಸ್ಯೆಗಳನ್ನು ಮೀರಿದ ಉದ್ದೇಶ ಈ ಅಧ್ಯಯನಗಳ ಹಿಂದಿರುವುದು ಅಗತ್ಯ. ಇದು “ಕೇವಲ ಶೈಕ್ಷಣಿಕವಲ್ಲದ ಪ್ರತಿ ರಾಜಕಾರಣದ ಆಶಯವಿದು”.[11]

ಮ್ಯಾಸಬೇಡರನ್ನು ಕುರಿತು ಎರಡು ಸಂಶೋಧನಾ ಪ್ರಬಂಧಗಳು ರಚನೆಯಾಗಿವೆ. ಕೃಷ್ಣಮೂರ್ತಿ ಹನೂರು ಮತ್ತು ಕರಿಶೆಟ್ಟಿ ರುದ್ರಪ್ಪನವರು ಈ ಮಹಾಪ್ರಬಂಧಗಳನ್ನು ಪ್ರಕಟಿಸಿದ್ದಾರೆ ಸಹ. ರುದ್ರಪ್ಪನವರು ತಮ್ಮ ಪುಸ್ತಕದಲ್ಲಿ ಮ್ಯಾಸಬೇಡರ ಮೂಲಪುರುಷನನ್ನು ಕುರಿತು ಎರಡು ಕಥೆಗಳನ್ನು ಉಲ್ಲೇಖಿಸುತ್ತಾರೆ. ಆ ಎರಡೂ ಕಥೆಗಳಲ್ಲಿ ಮ್ಯಾಸಬೇಡರ ಮೂಲಪುರುಷ ದುಷ್ಟನಾಗಿದ್ದು ನಂತರ ವಿಷ್ಣುವಿನ ಕೃಪಾಕಟಾಕ್ಷದಿಂದ ಒಳ್ಳೆಯವನಾಗುತ್ತಾನೆ. ಅಷ್ಟೇ ಏಕೆ ರಾಮನನ್ನು ಸೃಷ್ಟಿಸಿದ ವಾಲ್ಮೀಕಿಯೇ ಕೃಷ್ಣನಿಂದ ತನ್ನ ಶಾಪ ವಿಮೋಚನಾ ಮಾರ್ಗವನ್ನು ಕಂಡುಕೊಂಡು ತಪಸ್ಸು ಮಾಡಿ ವಾಲ್ಮೀಕಿಯಾಗುತ್ತಾನೆ. ಅಂಗ ಚಕ್ರವರ್ತಿಯ ಕಥೆಯಲ್ಲಿ ಮ್ಯಾಸಬೇಡರ ಮೂಲಪುರುಷ ‘ವೇನ’ ಕುರೂಪಿ. ಇವು ಪುರೋಹಿತರ ಶಂಖಗಳಿಂದಿಳಿದ ಕಥೆಗಳಾದ್ದರಿಂದ ಮ್ಯಾಸಬೇಡರ ಮೂಲ ವಿಕೃತಗೊಂಡಿರುವುದರಲ್ಲಿ ಆಶ್ಚರ್ಯವೇನಿಲ್ಲ. ಮುಂದೆ ಈ ಶತಮಾನದ ಆರಂಭದಲ್ಲಿ ಶುರುವಾದ ಸಮುದಾಯಗಳ ಅಧ್ಯಯನಗಳು ಸಹ ಈ ರೀತಿಯ ಸಮುದಾಯಗಳನ್ನು ‘ಕ್ರಿಮಿನಲ್‌ಗಳು’, ‘ಕಳ್ಳರು’, ‘ಅಪರಾಧಿಗಳು’ ಎಂದೇ ಪರಿಗಣಿಸಿದವು. ಕರಿಶೆಟ್ಟಿ ರುದ್ರಪ್ಪನವರು ತಮ್ಮ ಕೃತಿಯುದ್ದಕ್ಕೂ ‘ಮ್ಯಾಸನಾಯಕರು ನಾಗರೀಕತೆಯ ಪ್ರಭಾವದಿಂದ… ನಾಗರೀಕತೆಯ ಪ್ರಭಾವವಾದಂತೆಲ್ಲ… ನಾಗರೀಕತೆಯ ಸೋಂಕಿಲ್ಲದೆ… ಎಂದು ಪದೇ ಪದೇ ‘ನಾಗರೀಕತೆ’ ಎಂಬ ಪದವನ್ನು ಮ್ಯಾಸಬೇಡರಲ್ಲಾದ ಬದಲಾವಣೆಗಳನ್ನು ಗುರುತಿಸುವಾಗ ಬಳಸುತ್ತಾರೆ. ಈ ರೀತಿಯ ಮೂರನೇ ವ್ಯಕ್ತಿಯ ಕನ್ನಡಕವು ‘ಬದಲಾವಣೆ’ ತನ್ನ ಮೂಲಕವೇ ಎಂಬ ಭಯಂಕರ ಆತ್ಮರತಿಯಲ್ಲಿ ತೊಡಗಿಕೊಳ್ಳುತ್ತದೆ. ಸಮುದಾಯಗಳ ಕುರಿತ ನಮ್ಮ ಅಧ್ಯಯನಗಳು ಶತಮಾನದ ಆರಂಭದ ದನಿಯನ್ನು ಇನ್ನೂ ಉಳಿಸಿಕೊಂಡೇ ಇವೆ ಎಂಬುದನ್ನು ಇತ್ತೀಚಿನ ಅಧ್ಯಯನಗಳೂ ಸೂಚಿಸುತ್ತವೆ.

ಈ ರೀತಿಯ ಅಧ್ಯಯನಗಳು ‘ನಾಗರೀಕತೆ’ ಎನ್ನುವ ಪೊರೆಯ ಒಳಗಿದ್ದುಕೊಂಡು ಒಂದು ವಸ್ತುವಿನ ರೂಪದಲ್ಲಿ ಸಮುದಾಯಗಳನ್ನು ಪರಿಭಾವಿಸುತ್ತವೆ. ಇನ್ನು ಈ ಜನಪದ ಅನುಭಾವೀ ಕಥನಗಳನ್ನು ಸಹ ಎರವಲು ಮಾನದಂಡಗಳಿಂದಲೇ ಅಳೆಯಲಾಗುತ್ತದೆ. ಯುರೋಪಿನ ಮಧ್ಯಕಾಲೀನ ಚರಿತ್ರೆಯಲ್ಲಿ ನಡೆದ ಅನೇಕ ಚಕ್ರವರ್ತಿಗಳಿಗೆ ಹೋರಾಡಿ ಮಡಿದ ಯೋಧರ ಕಥೆಗಳೇ ಪಾಶ್ಚಾತ್ಯ ಮಹಾಕಾವ್ಯಗಳಾಗಿವೆ. ರೋಲಂಡ್, ಬೀವೋಲ್ಫ್, ನಿಬೆಲಂಗನ್ ಲೀಡ್, ಎಲ್‌ಸಿಡ್ ಮಹಾಕಾವ್ಯಗಳು ವೀರ ಕಥನಗೀತೆಗಳಾಗಿವೆ. ಮಹಾಕಾವ್ಯಗಳ ಅಧ್ಯಯನ ಶುರುಮಾಡಿದವರು ಪಾಶ್ಚಾತ್ಯರೇ ಆಗಿರುವುದರಿಂದ ಅವರದೇ ಅಧ್ಯಯನ ಮಾದರಿಗಳಿಂದ ನಮ್ಮ ಅನುಭಾವೀ ಕಥನಗಳನ್ನು ಅಭ್ಯಸಿಸಲಾಗುತ್ತಿದೆ. ಈ ಮಾದರಿಯ ಅಧ್ಯಯನಗಳು ಮೂರನೇ ಜಗತ್ತಿನ ದೇಶದ ಅನುಭಾವೀ ಕಥನಗಳ ಸಂಕೀರ್ಣ ತರ್ಕಗಳ ಗೋಜಿಗೇ ಹೋಗದೆ ಕಣ್ಣು ಕಟ್ಟಿಕೊಂಡು ಆನೆಯನ್ನು ಮುಟ್ಟುತ್ತವೆ. “ಆಧುನಿಕ ಯುರೋಪಿಯನ್ ವಿದ್ವಾಂಸರು ಕನಸುಗಳನ್ನು ವಿಶ್ಲೇಷಿಸುವಾಗ ಹೆಚ್ಚು ಹೆಚ್ಚು ವ್ಯಕ್ತಿವಾದಿಯಾಗಿ ಮತ್ತು ನವಯುಗದ ಮನಸ್ಸಿನ ಸೂಕ್ಷ್ಮ ವಿಶ್ಲೇಷಣೆಯನ್ನು ಆಧರಿಸಿ ಸಂಸ್ಕೃತಿಯ ಒಳಗಿನ ಸಮಷ್ಠಿ ಸುಪ್ತಪ್ರಜ್ಞೆಯ ಸಾಂಸ್ಕೃತಿಕ ಪ್ರಕ್ರಿಯೆಯನ್ನು ಅಷ್ಟಾಗಿ ಪರಿಗಣಿಸಲಿಲ್ಲ. ಯೂಂಗ್ ಮತ್ತು ಆನಂತರದವರು ಪುರಾಣಗಳನ್ನು ಮೂಲವಾಗಿಟ್ಟುಕೊಂಡು ಮನಸ್ಸನ್ನು ವಿಶ್ಲೇಷಿಸಿದರೂ ಕೂಡ ನಮ್ಮಂತಹ ದೇಶಗಳ ಅಲಕ್ಷಿತ ಸಮುದಾಯಗಳ ಸಾಂಸ್ಕೃತಿಕ ಮನಸ್ಸಿನ ಅಗಾಧ ಕತ್ತಲ ಲೋಕವನ್ನು ಅವರು ಪರಿಗಣಿಸಲಿಲ್ಲ.”[12] ಪಶ್ಚಿಮದ ಮನಸ್ಸಿಗೆ ಮಂಟೇಸ್ವಾಮಿಯ ತಾತ್ವಿಕ ಹೊಯ್ದಾಟ. ಜುಂಜಪ್ಪನ ಸಾಂಸ್ಕೃತಿಕ ಸಂಕೀರ್ಣತೆಯ ಸ್ಪಷ್ಟ ಅರಿವು ದಕ್ಕಿರಲಾರದು. ಹೀಗೆಂದು ಪಾಶ್ಚಾತ್ಯರ ಅಧ್ಯಯನ ಮಾದರಿಗಳನ್ನು ಇಡಿಯಾಗಿ ನಿರಾಕರಿಸಬೇಕೆಂಬುದು ನನ್ನ ವಾದವಲ್ಲ. ವೈವಿಧ್ಯಮಯ ಬಹುರೂಪೀ ಸಂಸ್ಕೃತಿಗಳ ಆಳದ ಈ ವೈಚಾರಿಕ ದಂಗೆಗಳನ್ನು ಜಗತ್ತಿನ ಸುವಿಶಾಲ ಚೌಕಟ್ಟಿನಲ್ಲಿಟ್ಟು ನೋಡಿದಾಗ ಅವು ಕ್ಷುದ್ರವಾಗಿ ಕಾಣಬಹುದು. ರೋಲಂಡ್, ಬೋವೋಲ್ಫ್ ತರ ಮಂಟೇಸ್ವಾಮಿ, ಮಾದೇಶ್ವರರು ಭಯಂಕರ ಯುದ್ಧಗಳನ್ನು ಮಾಡಿದವರಲ್ಲ. ಅವರದೇನಿದ್ದರೂ ತಾತ್ವಿಕ ಹೋರಾಟ. ಇವರು ಭಾರತವೆಂಬ ಅಖಂಡ ನಕ್ಷೆಯೊಳಗಿನ ಯಾವುದೋ ಒಂದು ಮೂಲೆಯ ಚಿಕ್ಕ ಸಮುದಾಯದ ಒಬ್ಬ ಸಾಧಕನಾಗಿ ಬಂದು ಅಖಂಡ ಭಾರತವನ್ನು ಆವರಿಸಿದ ಸಿದ್ಧಾಂತವೊಂದನ್ನು ಜಗ್ಗಿ ನಿಲ್ಲಿಸಿ ವಾಗ್ವಾದಕ್ಕಿಳಿಯುತ್ತಾರೆ. ಅದಕ್ಕಾಗಿ ಕಥನದ ಒಳಗೇ ಬರುವ ಸಾಂಸ್ಕೃತಿಕ ತರ್ಕಗಳಿಂದಲೇ ಅವುಗಳನ್ನು ವಿವೇಚಿಸಿ ಅವುಗಳನ್ನು ಕಟ್ಟಿದ ಸಮುದಾಯಗಳ ಪ್ರತಿರೋಧದ ನೆಲೆಗಳನ್ನು ಶೋಧಿಸಿ “ಅವಕ್ಕೆ ರಾಜಕೀಯ ಶಕ್ತಿಯನ್ನು ತಂದು ಕೊಡುವ ಅಧ್ಯಯನ ಕ್ರಮ ನಮಗೀಗ ಬೇಕಾಗಿದೆ”.[13]

ಸಂಸ್ಕೃತಿ ಎಂದರೆ ‘ಇದೆ’, ಚರಿತ್ರೆ ಎಂದರೆ ‘ಇದೆ’ ಎಂದು ಅವುಗಳನ್ನು ‘ಸೆಕ್ಯುಲರ್ ಭಾರತ’ದ ತಲೆಯ ಮೇಲೆ ಹೇರ ಹೊರಟಿರುವ ಫ್ಯಾಸಿಸ್ಟ್ ರಾಜಕಾರಣ ಮತ್ತು ಇದನ್ನು ಉತ್ತೇಜಿಸುತ್ತಿರುವ ನವವಸಾಹತುಶಾಹಿಗಳಿಗೆ ಪ್ರತಿಯಾಗಿ, ಬಹುರೂಪೀ ಭಾರತದ ಪ್ರಾಂಜಲ ಸಾಂಸ್ಕೃತಿಕ ನೆಲೆಗಳನ್ನು ಎತ್ತಿನಿಲ್ಲಿಸುವ ಉದ್ದೇಶ, ಈ ಬರಹಕ್ಕೆ ಮತ್ತು ಇಲ್ಲಿನ ಕಥನಗಳಿಗಿದೆ ಎಂದು ನಂಬಿದ್ದೇನೆ. ಈ ಕಥನಗಳನ್ನು ಓದುವ ನಮಗೆ ಈ ಎಚ್ಚರ ಮತ್ತು ಕನಸ್ಸು ಜಾಗೃತವಾಗಿದ್ದರೆ ಸಾಕು.

ಕಥನಗಳ ಜಾಡು ಹುಡುಕುತ್ತಾ

ಈ ಕಥನಗಳನ್ನು ಹುಡುಕಲು ಎರಡು ಹಂತದ ಕ್ಷೇತ್ರಕಾರ್ಯವನ್ನ ಕೈಗೊಂಡಿದ್ದೇನೆ. ಮೊದಲು ಮ್ಯಾಸಬೇಡರ ಪ್ರಮುಖ ಸಾಂಸ್ಕೃತಿಕ ಕೇಂದ್ರಗಳನ್ನ ಸಂದರ್ಶಿಸಿದೆ. ಅಲ್ಲಲ್ಲಿ ಸಿಕ್ಕುವ ಕಥನಗಳನ್ನ ಖಾಸಗಿಯಾಗಿ ಧ್ವನಿ ಮುದ್ರಿಸಿಕೊಳ್ಳುತ್ತಿದ್ದೆ. ನಂತರ ಅವುಗಳ ಕುರಿತು ಟಿಪ್ಪಣಿಗಳನ್ನು ಮಾಡಿಕೊಳ್ಳಲಾಯ್ತು. ಕೊನೆಯಲ್ಲಿ ಮೂರು ತಂಡಗಳನ್ನು ಆರಿಸಿ ಕಥನಗಳನ್ನ ದಾಖಲಿಸಿಕೊಳ್ಳಲು ನಿಶ್ಚಯಿಸಿದರೂ, ನಮಗೆ ಕೊಡಮಾಡುವ ಹಣಕಾಸಿನ ಮಿತಿಯಿಂದ ಈ ಪ್ರಯೋಗ ದುಬಾರಿಯದಾಗಿತ್ತು. ಸಮುದಾಯದ ಸಾಂಸ್ಕೃತಿಕ ವಿವರಗಳು ದಟ್ಟವಾಗಿರುವ ಕಥನಗಳನ್ನ ದಾಖಲಿಸುವುದು ಸೂಕ್ತವೆಂದು ಪೆತ್ತಂಬರಹಟ್ಟಿಯ ತಂಡವನ್ನ ಕೊನೆಯಲ್ಲಿ ಆರಿಸಿದೆವು.

ಮಧ್ಯ ಕರ್ನಾಟಕದ ಬಯಲುಸೀಮೆಯ ಬಹುಪಾಲನ್ನ ಕಾಡುಗೊಲ್ಲರು ಮತ್ತು ಮ್ಯಾಸಬೇಡರು ಆವರಿಸಿಕೊಂಡಿದ್ದಾರೆ. ಕರ್ನಾಟಕದ ಈ ಹೃದಯ ಭಾಗವನ್ನ ತಮ್ಮ ವಿಶಿಷ್ಟ ಜೀವನ ಕ್ರಮದಿಂದ ಈ ಎರಡೂ ಬುಡಕಟ್ಟುಗಳು ಜೀವಂತವಾಗಿರಿಸಿವೆ. ಸಂಪದ್ಭರಿತ ಸಾಂಸ್ಕೃತಿಕ ಸ್ಮೃತಿಗಳನ್ನ ಈ ಎರಡೂ ಬುಡಕಟ್ಟುಗಳು ಜತನದಿಂದ ಕಾಪಾಡಿಕೊಂಡು ಬಂದಿವೆ. ಮ್ಯಾಸಬೇಡರ ಸಾಂಸ್ಕೃತಿಕ ಬದುಕಿನ ವ್ಯವಸ್ಥಿತ ಅಧ್ಯಯನ ನಮಗೆ ಮಧ್ಯಕಾಲೀನ ಸಾಮ್ರಾಜ್ಯಗಳ ಚರಿತ್ರೆಯ ಇನ್ನೊಂದು ಮಗ್ಗುಲನ್ನ ಪರಿಚಯಿಸುತ್ತದೆ.

ಇಲ್ಲಿ ನಾನು ಐದು ಕಥನಗಳನ್ನ ಸಂಕಲಿಸಿದ್ದೇನೆ. ಗಾದ್ರಿಪಾಲನಾಯಕನ ಕಥನದಲ್ಲಿ ಅವನ ಬದುಕಿನ ಪೂರ್ತಿ ವಿವರಗಳು ಸಿಗುವುದು ಬಿಟ್ಟರೆ, ಉಳಿದ ಕಥನಗಳ ನಾಯಕರ ವಿವರಗಳು ಸಿಗುವುದಿಲ್ಲ. ಜಗಳೂರಜ್ಜನ ಕಥನವು ಆತನ ಆರಾಧನಾ ಸಂಬಂಧೀ ಕಥನವಷ್ಟೇ.. ಜಗಳೂರಜ್ಜನನ್ನ ಕುರಿತು ಮ್ಯಾಸಬೇಡರಲ್ಲಿ ಕೆಲವು ಕಡೆ ಮಾತ್ರ ರೋಚಕ ಕಥೆಗಳಿವೆ. ಆ ಕಥೆಯೊಳಗಿನ ವಿವರಗಳು ಕಥನದಲ್ಲಿ ಸಿಗುವುದಿಲ್ಲ. ಕಥೆಯೊಳಗಿನ ವಿವರಗಳನ್ನೊಳಗೊಂಡ ಕಥನವೇನಾದರೂ ಸಿಕ್ಕಿದ್ದಿದ್ದರೆ ಅದು ಬೃಹತ್ ಕಥಾನಕವೇ ಆಗಿರುತ್ತಿತ್ತು. ಪ್ರಸ್ತಾವನೆಯಲ್ಲಿ ಜಗಳೂರಜ್ಜನ ಕುರಿತು ನಾನು ಕೊಡುವ ವಿವರಗಳನ್ನ ಕ್ಷೇತ್ರಕಾರ್ಯದಲ್ಲಿ ನಾನು ಸಂದರ್ಶಿಸಿದ ವ್ಯಕ್ತಿಗಳಿಂದ ಮಾಡಿಕೊಂಡ ಟಿಪ್ಪಣಿಗಳಿಂದ ಆರಿಸಿಕೊಂಡಿದ್ದೇನೆ.

ಈ ಕಥನಗಳನ್ನು ಹುಡುಕುತ್ತಾ ಬಳ್ಳಾರಿ, ಚಿತ್ರದುರ್ಗ, ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಯ ಹಲವು ಭಾಗಗಳಿಗೆ ಭೇಟಿಕೊಡಲಾಯ್ತು. ಹೋದೆಡೆಯಲ್ಲೆಲ್ಲ ಈ ಸಮುದಾಯ ಅದ್ಭುತವಾಗಿ ಪ್ರತಿಕ್ರಿಯಿಸಿದೆ. ಕ್ಷೇತ್ರಕಾರ್ಯದುದ್ದಕ್ಕೂ ಅವರ ಜೊತೆ ಇದ್ದು, ನಾನು ‘ಅನ್ಯ’ ಎನ್ನುವ ಭಾವನೆ ಕಿಂಚಿತ್ತೂ ನನ್ನ ಬಳಿ ಸುಳಿಯದಂತೆ ಅವರು ಸಹಕರಿಸಿದ್ದಾರೆ. ಜಗತ್ತು ವಿಜ್ಞಾನದ ಅವಿಷ್ಕಾರಗಳ ಮೂಲಕ ಒಂದು ಗ್ರಾಮವಾಗುತ್ತಿರುವ ಈ ಸಂದರ್ಭದಲ್ಲಿ, ಮ್ಯಾಸಬೇಡರು ‘ಆಧುನಿಕ’ ವೆಂದು ನಾವು ಕರೆಯುತ್ತಿರುವ ಇಂದಿನ ಜೀವನ ಕ್ರಮಕ್ಕೆ ಒಗ್ಗಿಕೊಳ್ಳಲು ಯತ್ನಿಸುತ್ತಿರುವುದು ಕಂಡು ಬರುತ್ತಿದೆ. ಭಾರತದ ಮಧ್ಯಕಾಲೀನ ಅನೇಕ ಸಾಮ್ರಾಜ್ಯಗಳ ಸಿಂಹಾಸನಗಳ ‘ತಳಪಾಯ’ ಅಲುಗದಂತೆ ನೋಡಿಕೊಂಡು ಪ್ರಭುತ್ವಕ್ಕೆ ತಮ್ಮ ಬದುಕನ್ನು ಅರ್ಪಿಸಿಕೊಂಡ ಸಮುದಾಯವಿದು.

ಇಂದು ಮ್ಯಾಸಬೇಡರು ತಮ್ಮ ಹಟ್ಟಿಗಳಲ್ಲಿ ವಾಸಿಸುತ್ತಿದ್ದಾರೆ. ಇಂದಿನ ಪ್ರಭುತ್ವಕ್ಕೂ ಇವರಿಗೂ ಇರುವ ಏಕೈಕ ರಾಜಕೀಯ ಸಂಬಂಧವೆಂದರೆ ಮತ ಚಲಾಯಿಸುವುದು ಮಾತ್ರ. ಮೇಲೊಂದು ಚಿಕ್ಕ ಅಂಗಿ ಕೆಳಗೊಂದು ನಿಕ್ಕರು ಧರಿಸಿ ಕುರುಚಲು ಗಡ್ಡದ ಇವರು ಅಂದಿನ ಸಾಮ್ರಾಜ್ಯಗಳ ಪಲ್ಲಕ್ಕಿಯನ್ನ ಹೊತ್ತ ಸದೃಢ ಜೀವಗಳು

ಚಳ್ಳಕೆರೆಯಿಂದ ಪಶ್ಚಿಮಕ್ಕೆ ಏಳೆಂಟು ಕಿಲೋಮೀಟರ್ ಅಂತರದಲ್ಲಿ ಪೆತ್ತಂಬರಹಟ್ಟಿ ಇದೆ. ಈ ಪೆತ್ತಂಬರಹಟ್ಟಿ ಮತ್ತು ಚಳ್ಳಕೆರೆಯ ಮಧ್ಯೆ ಜಗಳೂರಜ್ಜನ ಗುಡಿಯೊಂದಿದೆ. ಜಗಳೂರಜ್ಜ ನಾಗಬೆತ್ತವನ್ನು ಪಡೆದ ಸ್ಥಳವದು. ಪೆತ್ತಂಬರಹಟ್ಟಿಯ ನಂತರ ಬರುವುದೇ ನನ್ನಿವಾಳ. ಬೃಹತ್ ಏಕಶಿಲಾ ಬೆಟ್ಟದ ಬುಡದಲ್ಲಿರುವ ಪುಟ್ಟ ಊರು. ಈ ನನ್ನಿವಾಳ. ಇಲ್ಲಿ ಗಾದ್ರಿಪಾಲನಾಯಕನ ಉತ್ಸವ ಗುಗ್ರಿಹಬ್ಬ ನಡೆಯುತ್ತದೆ. ಶಿವರಾತ್ರಿಯ ಆಸುಪಾಸಿಗೆ ಶುರುವಾಗುವ ಈ ಹಬ್ಬ ಮಿಂಚೇರಿ ಕಾಡಿನವರೆಗೂ ಹರಡುತ್ತದೆ. (ನನ್ನ ತೀವ್ರ ಅನಾರೋಗ್ಯದ ಕಾರಣ ನಾನು ಗುಗ್ರಿ ಹಬ್ಬವನ್ನು ನೋಡಲಾಗಲಿಲ್ಲ). ಚಳ್ಳಕೆರೆಯಿಂದ ಚಿತ್ರದುರ್ಗಕ್ಕೆ ಬಂದು ಸಿರಿಗೆರೆಯ ಮಾರ್ಗವಾಗಿ ಸುಮಾರು ಹದಿನೈದು ಕಿಲೋಮೀಟರ್ ಚಲಿಸಿದರೆ ಮಿಂಚೇರಿ ಕಾಡು ಸಿಗುತ್ತದೆ. ಹುಲಿಯ ಜೊತೆ ಸಂಧಾನ ವಿಫಲವಾದ ಮೇಲೆ ಗಾದ್ರಿಪಾಲ ಇದೇ ಕಾಡಲ್ಲಿ ಬೀಡು ಬಿಟ್ಟಿರುತ್ತಾನೆ. ಈ ಮಿಂಚೇರಿ ಕಾಡಿಗೆ ಅಭಿಮುಖವಾಗಿರುವುದು ಗಾದ್ರಿಗುಡ್ಡ. ಇದಕ್ಕೆ ‘ಗಾದ್ರಿಮಲೆ’ ಎನ್ನುವ ಹೆಸರೂ ಇದೆ. ಮಿಂಚೇರಿ ಅರಣ್ಯಕ್ಕೆ ಒಂದು ರುದ್ರ ಗಾಂಭೀರ್ಯವಿದೆ. ಕೆಲವು ವರ್ಷಗಳ ಹಿಂದೆ ದಟ್ಟ ಕಾಡಾಗಿರಬಹುದಾದ ಗುರುತುಗಳಿವೆ. ಮಿಂಚೇರಿ ಕಾಡಿನ ಭಾಗವೇ ಆಗಿರುವ ಇಬ್ಬರು ಸ್ಥಳೀಯರೊಂದಿಗೆ ಕಾಡಿನಲ್ಲಿ ಸುಮಾರು ಏಳೆಂಟು ಕಿಲೋಮೀಟರ್ ನಡೆದು ಮಿಂಚೇರಿ ಹಳ್ಳವನ್ನ ತಲುಪಿದೆವು. ನಮ್ಮ ಜೊತೆಗಿದ್ದ ಸ್ಥಳೀಯರು ಗಾದ್ರಿಪಾಲನ ಬಗ್ಗೆ ತಮಗೇನು ತಿಳಿಯದು ಎನ್ನುತ್ತಲೇ ಮಹತ್ವದ ಅನೇಕ ಮಾಹಿತಿಗಳನ್ನ ನೀಡಿದ್ದರು. ಮಿಂಚೇರಿ ವಿಶಾಲವಾದ ಕಾಡು, ಸಮೃದ್ಧ ಹುಲ್ಲುಗಾವಲು. ನನ್ನಿವಾಳದಲ್ಲಿ ಶುರುವಾಗುವ ಗುಗ್ರಿಹಬ್ಬ ದೂರದ ಈ ಮಿಂಚೇರಿ ಕಾಡಿನಲ್ಲಿ ಮುಗಿಯುತ್ತದೆ. ಮಿಂಚೇರಿಯ ಹಳ್ಳದ ಎರಡೂ ಬದಿಗೆ ಗಾದ್ರಿಪಾಲ ಮತ್ತು ಹುಲಿಯ ಸಮಾಧಿಗಳಿವೆ. ಹಳ್ಳದ ಎಡಭಾಗದಲ್ಲಿ ಗಾದ್ರಿಪಾಲ ಮತ್ತು ಆತನ ಪ್ರೀತಿಯ ‘ಜನಿಗೆ’ ಆಕಳ ಸಮಾಧಿ ಇದ್ದರೆ, ಇನ್ನೊಂದು ಬದಿಯಲ್ಲಿ ಹುಲಿಯ ಸಮಾಧಿ ಇದೆ. ಈ ಎರಡೂ ಸಮಾಧಿಗಳ ಮಧ್ಯೆ ಮಿಂಚೇರಿ ಹಳ್ಳ ನೀರವ ಮೌನದಲ್ಲಿ ಹೂತು ಹೋಗಿದೆ. ಇಲ್ಲಿ ಸಮಾಧಿಗಳೆಂದರೆ ಕಲ್ಲುಗುಡ್ಡಗಳು ಮಾತ್ರ. ಇದು ಆದಿಮಶವಸಂಸ್ಕಾರದ ವಿಧಾನವಾಗಿದೆ. ಇಲ್ಲಿಂದ ಮುಂದಕ್ಕೆ ನಾಲ್ಕೈದು ಕಿಲೋಮೀಟರ್ ನಡೆದರೆ ಗಂಜೀಕಟ್ಟೆ ಎಂಬ ಗ್ರಾಮ ಸಿಗುತ್ತದೆ. ಅಲ್ಲಿ ಗಾದ್ರಿಪಾಲನಾಯಕನ ಗುಡಿ ಇದೆ. ಗುಡಿಯ ಮುಂದೆ ಆಳವಾದ ಒಂದು ಹೊಂಡವಿದೆ. ಗಾದ್ರಿಪಾಲನಾಯಕ ಹುಲಿಯ ಜೊತೆ ಹೋರಾಡಿ ಮಡಿದಾಗ, ಅವನ ಜೊತೆ ಆತನ ಹೆಂಡತಿಯರಾದ ಕಂಚವ್ವ ಮತ್ತು ಕಾಮವ್ವರು ಸಹಗಮನ ಮಾಡುತ್ತಾರೆ. ಸಹಗಮನ ಮಾಡಿದ ಸ್ಥಳವೇ ಈಗ ಹೊಂಡವಾಗಿದೆ. ಗಾದ್ರಿಪಾಲನಾಯಕನ ಗುಡಿಯಲ್ಲಿ ಮೂರ್ತಿಯಿಲ್ಲ. ಒಳಗೆ ವೀರ-ಮಾಸ್ತಿಗಲ್ಲು ಇದೆ. ಈ ವೀರ-ಮಾಸ್ತಿಗಲ್ಲಿನ ಮೇಲ್ಭಾಗದಲ್ಲಿ ಹುಲಿಯೊಡನೆ ಹೋರಾಡುವ ಚಿತ್ರವಿದೆ. ಕೆಳಗೆ ಇಬ್ಬರು ಮಹಿಳೆಯರು ಸತಿ ಹೋಗುವ ಚಿತ್ರವಿದೆ. ಈ ಗುಡಿಯ ಪಕ್ಕದಲ್ಲಿ ಗಾದ್ರಿಪಾಲನ ಕುರಿತ ಅಸ್ಪಷ್ಟ ಶಾಸನವೂ ಇದೆ. ಗಾದ್ರಿಪಾಲನ ಕುರಿತು ಈ ಶಾಸನದಲ್ಲಿ ಸ್ಪಷ್ಟ ವಿವರಗಳಿಲ್ಲ. ನಾಯಕನ ಹಟ್ಟಿಯ ಬಖೈರು ಮಾತ್ರ ಗಾದ್ರಿಪಾಲ ನಾಯಕನ ಕುರಿತ ಸ್ಪಷ್ಟ ಲಿಖಿತ ದಾಖಲೆಯಾಗಿದೆ.

ಒಂದು ವರ್ಷದ ಅವಧಿಯ ನಮ್ಮ’ಮಹಾಕಾವ್ಯ ಮಾಲೆಯ’ ಯೋಜನೆ ಕಾಲದ ಮಿತಿಯಿಂದ ಮ್ಯಾಸಬೇಡರ ಬಹುಮುಖ್ಯ ಆಚರಣೆಗಳನ್ನ ನೋಡಲಾಗಲಿಲ್ಲ. ಮುಂದೆಂದಾದರೂ ಅದು ಸಾಧ್ಯವಾಗಬಹುದು. ಈ ಕಥನಗಳನ್ನ ಅತ್ಯುತ್ತಮ ಆಡಿಯೋ ಕ್ಯಾಸೆಟ್‌ಗಳಲ್ಲಿ ಧ್ವನಿಮುದ್ರಿಸಿಕೊಳ್ಳಲಾಗಿದೆ. ದೀರ್ಘಕಾಲ ಸುಸ್ಥಿತಿಯಲ್ಲಿರುವ ಸಾಮರ್ಥ್ಯವಿರುವ ಕ್ಯಾಸೆಟ್‌ಗಳಿವು. ಮುಖ್ಯ ಕಲಾವಿದೆಗೆ ವಯಸ್ಸಾಗಿರುವುದರಿಂದ ಅವಳು ನಿರಂತರವಾಗಿ ಹಾಡಲಾಗುತ್ತಿರಲಿಲ್ಲ. ಅದಕ್ಕಾಗಿ ಕ್ಯಾಸೆಟ್‌ನ ಒಂದು ಬದಿಯಲ್ಲಿ ಧ್ವನಿಮುದ್ರಣ ಪೂರ್ಣಗೊಂಡ ನಂತರ ಅವರು ಹತ್ತು ನಿಮಿಷ ಸುಧಾರಿಸಿಕೊಳ್ಳುತ್ತಿದ್ದರು. ಮತ್ತೆ ಕ್ಯಾಸೆಟ್‌ನ್ನು ಹಿಂದಕ್ಕೆ ಓಡಿಸಿ ಅವರು ಹಾಡಿದ್ದನ್ನ ಕೇಳಿಸಿ, ಮುಂದಿನ ಭಾಗವನ್ನ ಅವರು ನೆನಪಿಸಿಕೊಂಡ ನಂತರ ಮತ್ತೆ ಹಾಡಲಾರಂಭಿಸುತ್ತಿದ್ದರು. ಎರಡು ದಿನಗಳ ಅವಧಿಯಲ್ಲಿ ಇಲ್ಲಿನ ಐದು ಕಥನಗಳನ್ನ ಹಾಡಿದರು. ಒಂದು ಆಶ್ಚರ್ಯದ ಸಂಗತಿಯೆಂದರೆ ಈ ಕಲಾವಿದರು ಹಾಡುವಾಗ ಕನ್ನಡದ ಅತ್ಯುತ್ತಮ ಶಬ್ದಗಳನ್ನ (ಉದಾ: ಅಂಬರ, ಸ್ಯಾವಂಚೀಗೆ ಇತ್ಯಾದಿ) ಉಪಯೋಗಿಸಿದರೂ ಮಾತಾಡುವುದೆಲ್ಲ ತೆಲುಗಿನಲ್ಲಿ. ಹಾಡುವಾಗ ನಿರರ್ಗಳ ಕನ್ನಡ, ಮಾತಾಡುವಾಗ ಅಷ್ಟೇ ಸುಲಲಿತ ತೆಲುಗು.

ಈ ಕಥನಗಳನ್ನ ಟೇಪುಗಳಿಂದ ಅಕ್ಷರಕ್ಕಿಳಿಸಿದ ಮೇಲೆ ಅವರ ಬಳಿ ಹೋಗಿ ಇಡೀ ಕಥನಗಳನ್ನ ಓದಲಾಯ್ತು. ಕೆಲವು ಕಡೆ ತಿದ್ದುಪಡಿಗಳಾದವು. ಈ ಕಥನಗಳ ಒಳಗೆ ಓದುಗರ ದೃಷ್ಟಿಯಲ್ಲಿ ಕಠಿಣವೆನ್ನಿಸುವ ಪದಗಳನ್ನ ನಾನೇ ಆಯ್ಕೆಮಾಡಿ ಕಲಾವಿದರ ಬಳಿ ಅರ್ಥಗಳನ್ನ ಕೇಳಿ ಬರೆದುಕೊಂಡೆ. ಇಲ್ಲಿ ಕೊನೆಯಲ್ಲಿರುವ ಅರ್ಥಸೂಚಿಯಲ್ಲಿನ ಶಬ್ದಾರ್ಥಗಳು ಕಲಾವಿದರೇ ಹೇಳಿದವುಗಳು. ಕರಡು ತಿದ್ದಲು ಪೆತ್ತಂಬರಹಟ್ಟಿಗೆ ಹೋದಾಗ ಪಾಲಮ್ಮ ಮತ್ತು ಸಂಗಡಿಗರು ಬಹಳ ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಅವರ ಸಹಕಾರ ಮತ್ತು ಕಾಳಜಿಗಳು ನಿರ್ಮಲವಾದವುಗಳು. ಇಲ್ಲಿನ ಕಥನಗಳಲ್ಲಿ ಯಾವ ಬಗೆಯ ತಿದ್ದುಪಡಿಯೂ ನನ್ನಿಂದಾಗಿಲ್ಲ. ಕಲಾವಿದರು ಹಾಡಿದ ಕಥನಗಳನ್ನು ಒಂದಕ್ಷರವೂ ತಿದ್ದದೆ ಹಾಗೆಯೇ ಕೊಟ್ಟಿದ್ದೇನೆ. ಇನ್ನೊಂದು ಈ ಕಲಾವಿದರು ‘ಅ’ ಮತ್ತು ‘ಹ’ ಗಳನ್ನು ಬೇರೆ ಬೇರೆ ರೀತಿಯಲ್ಲಿ ಉಚ್ಚರಿಸುತ್ತಾರೆ. ಕೆಲವು ಕಡೆ ‘ಹುಲಿ’ ಎಂದರೆ ಮತ್ತೆ ಕೆಲವು ಕಡೆ ‘ವುಲಿ’ ಎನ್ನುತ್ತಾರೆ. ಮಹಾಪ್ರಾಣಗಳ ಉಚ್ಚಾರಣೆಯ ಹಂಗು ಅಷ್ಟಾಗಿ ಇವರನ್ನ ಕಾಡದು. ಹೀಗಾಗಿ ಕೆಲವು ಕಡೆ ಮಹಾಪ್ರಾಣಗಳು ಇದ್ದರೆ ಕೆಲವು ಕಡೆಗಳಲ್ಲಿ ಇಲ್ಲ. ಕ್ಯಾಸೆಟ್‌ಗಳಲ್ಲಿನ ಉಚ್ಚಾರಣೆಗಳನ್ನ ಅತ್ಯಂತ ಗಮನವಿಟ್ಟು ಕೇಳಿ ಕಥನಗಳನ್ನ ಲಿಪ್ಯಂತರಗೊಳಿಸಲಾಗಿದೆ.

ಕನ್ನಡದ ಸಂದರ್ಭದಲ್ಲಿ ಮಹಾಕಥನಗಳ ಅಧ್ಯಯನದ ಇತಿಹಾಸ ಬಹು ದೊಡ್ಡದು. ಪಶ್ಚಿಮದಲ್ಲಿ ಆರಂಭವಾದ ಈ ಕಥನಗಳ ಅಧ್ಯಯನ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಇತ್ತೀಚಿಗೆ ಕರ್ನಾಟಕದ ಪಶ್ಚಿಮದಲ್ಲಿ ಲಾರಿ ಹಾಂಕೋ ಮತ್ತು ತಂಡ ‘ಸಿರಿ’ ಕಾವ್ಯವನ್ನು ಅತ್ಯಂತ ಬಹುಮುಖೀ ವಿಧಾನದ ಮೂಲಕ ದಾಖಲಿಸಿಕೊಂಡಿದೆ. ಈ ಮಹಾಕಥನಗಳ ಬಿಳುಲುಗಳು ಬಹು ವಿಶಾಲವಾಗಿ ಚಾಚಿಕೊಂಡಿರುತ್ತವೆ. ಅವುಗಳ ವ್ಯಾಪ್ತಿ ಅನೂಹ್ಯ. ಆದರೆ ಮಹಾಕಥನಗಳು ಪುನರ್‌ಸೃಷ್ಟಿಗೊಳ್ಳುವ ಹಲವು ಸಾಂಸ್ಕೃತಿಕ ನೆಲೆಗಳೂ ಈ ಅಧ್ಯಯನಗಳಲ್ಲಿ ಮಹತ್ವದ ಪಾತ್ರವಹಿಸುತ್ತವೆ.

ಹೀಗೆ ಕನ್ನಡದ ಸಂದರ್ಭದಲ್ಲಿ ಈ ಅನುಭಾವೀ ಕಥನಗಳನ್ನ ನೋಡುವ ಬಗೆಯನ್ನು ರೂಪಿಸಿದವರು ಡಿ.ಆರ್. ನಾಗರಾಜ್ ಅವರು. ಕನ್ನಡದ ಸಂದರ್ಭದಲ್ಲಿ ಕುವೆಂಪುರವರ ನಂತರ ಶೂದ್ರ ಜ್ಞಾನಶಿಸ್ತುಗಳ ಬಗ್ಗೆ ಅಪಾರ ಕಾಳಜಿಯನ್ನಿಟ್ಟುಕೊಂಡು ಅದನ್ನು ತಪಸ್ಸಿನ ರೀತಿಯಲ್ಲಿ ಆಚರಿಸಿದವರು ಡಿ.ಆರ್. ಅವರ ‘ಅಲ್ಲಮಪ್ರಭು ಮತ್ತು ಶೈವಪ್ರತಿಭೆ’ ಪುಸ್ತಕ ಈ ನಾಡಿನ ಅಜ್ಞಾತ ಅನುಭಾವೀ ಧಾರೆಗಳನ್ನ ನೋಡುವ ಬಗೆಯನ್ನು ರೂಪಿಸುವಂತದ್ದು. ಈ ರೀತಿಯ ಧಾರೆಗಳ ಕುರಿತು ಸದಾ ಬೌದ್ಧಿಕ ಚಡಪಡಿಕೆಗಳಲ್ಲಿ ತೊಡಗಿರುತ್ತಿದ್ದ ಡಿ.ಆರ್. ‘ಮಂಟೇಸ್ವಾಮಿ’ಯನ್ನು ಕುರಿತು ನಮ್ಮ ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಮಾಡಿದ ಭಾಷಣ ಕನ್ನಡ ವಿಶ್ವವಿದ್ಯಾಲಯದಲ್ಲಿ ಅವರು ಮಾಡಿದ ಕೊನೆಯ ಭಾಷಣವಾಗಿತ್ತು.

ವಿಸ್ಮೃತಿಗೊಳಪಟ್ಟ ಅಧೀನ ಸಮುದಾಯಗಳ ಆತ್ಮಶಕ್ತಿಯ ಕುರಿತು ಅಪಾರ ಮಮಕಾರವನ್ನಿಟ್ಟುಕೊಂಡು, ಹಲವು ವಾಗ್ವಾದಗಳನ್ನ ಬಿಟ್ಟು ಇರದೆಡೆಗೆ ಪಯಣಿಸಿದ ಡಿ.ಆರ್. ಭಾರತದ ಬಹುದೊಡ್ಡ ಪ್ರತಿಭೆ. ನಮ್ಮ ಮಧ್ಯೆ ಇದ್ದು, ಇದ್ದಷ್ಟು ದಿನಗಳೂ ನಮ್ಮೆಲ್ಲರಲ್ಲಿ ವಿಸ್ಮಯ ಹುಟ್ಟುವಂತೆ ಬದುಕಿದ ಡಿ.ಆರ್.ರವರಿಗೆ ಈ ಪುಸ್ತಕವನ್ನು ಅತ್ಯಂತ ಪ್ರೀತಿಯಿಂದ ಅರ್ಪಿಸುತ್ತಿದ್ದೇನೆ.

-ಪ್ರಭಾಕರ್. ಎ.ಎಸ್
6-12-1999
ವಿದ್ಯಾರಣ್ಯ

 

[1] ಕಂಬಾರರ ಚಕೋರಿ ಒಂದು ಅಧ್ಯಯನ – ಮೊಗಳ್ಳಿ ಗಣೇಶ್ – ಪುಟ – ೩೩

[2] ಮೊದಲ ಕಟ್ಟಿನ ಗದ್ಯ- ಎಚ್.ಎಸ್. ಶಿವಪ್ರಕಾಶ್ – ಪುಟ – ೩೭

[3] ಕನ್ನಡ ಸಾಹಿತ್ಯ ಸಂಗಾತಿ – ಕೀರ್ತಿನಾಥ ಕುರ್ತಕೋಟಿ – ಪುಟ – ೩೦೮

[4] ವಸಾಹತು ಪ್ರಜ್ಞೆ ಮತ್ತು ವಿಮೋಚನೆ – ಅನು – ರಹಮತ್ ತರೀಕೆರೆ – ಪುಟ – ೨೧, ೨೨

[5] ಕನ್ನಡ ಸಾಹಿತ್ಯ ಮತ್ತು ಸಂಗಾತಿ – ಕೀರ್ತಿನಾಥ ಕುರ್ತಕೋಟಿ – ಪುಟ – ೩೦೯

[6] ಜಾನಪದದ ವೈಜ್ಞಾನಿಕ ಅಧ್ಯಯನದ ನೆಲೆಗಳು – ಕೃಷ್ಣಮೂರ್ತಿ ಹನೂರು – ಪುಟ – ೩೪

[7] Exile and Kingdom Thapar ಪುಟ – ೩

[8] ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ – ಡಿ.ಆರ್.ನಾಗರಾಜ್ – ಪುಟ – ೧೬೭

[9] ಕಾಡಿನ ಹಾಡುಗಳು – ವೆರಿಯರ್ ಎಲ್ವಿನ್ – ಪುಟ – ೯

[10] ಕನ್ನಡ ಸಾಹಿತ್ಯದಲ್ಲಿ ಪ್ರಧಾನ ಮತ್ತು ಅಧೀನ ಸಂಸ್ಕೃತಿಗಳು – ಕೆ.ವಿ.ನಾರಾಯಣ-ಪುಟ-೫೮

[11] ಕರ್ನಾಟಕದ ಸೂಫಿಗಳು – ರಹಮತ್ ತರೀಕೆರೆ – (ಪ್ರಸ್ತಾವನೆ)

[12] ಸೊಲ್ಲು – ಮೊಗಳ್ಳಿ ಗಣೇಶ್ – ಪುಟ – ೪೫

[13] ಕೂಡುಕಟ್ಟು – ಪುರುಷೋತ್ತಮ ಬಿಳಿಮಲೆ – ಪುಟ – ೭೯