ಇಲ್ಲಿ ಕೋರಮಲ್ಲನಾಯಕ ಬಂದು ಸೇರ್ಕೊಂಡ ಸೂರ್ಯ ಎರಗಟ್ಟ್‌ನಾಯಕ ಗೋಣೂರಿಗೆ ಹೋದ. ಚಿನ್ನಪಲ್ಲನಾಯಕ ಇವರಿಬ್ರೂ ಒಂದೇ ಕಡೆ ಇದ್ರು. ಶುಕ್ಲಗಿರಿ ನನ್ನಿವಾಳದ ಪ್ರದೇಶ. ಈ ಕೋರಮಲ್ಲನಾಯಕನಿಗೆ ಪಚ್ಚಪದಿಪಾಲಮ್ಮ ತಂಗಿ, ಬಾಳೇರಪಟ್ಟಮ್ಮ ಅಂತ ಹೆಂಡ್ತಿ. ಇರ್ಬೇಕಾದ್ರೆ. ಮಾಮೂಲು ಅದೇ ಕೆಲ್ಸ. ದನಗಳನ್ನು ಕಾಯೋದು.

ಪಾಲನೆ ಮಾಡೋದೇ ಅವರ ಕಸಬು. ಸರಿ ಈಕೆ ಪ್ರಬುದ್ಧಮಾನಕ್ಕೆ ಬಂದ ನಂತ್ರ ತಂಗಿ ಪಚ್ಚಪದಿಪಾಲಮ್ಮ. ಆಗ ಈ ಶಿರುವಾಳ ಅಂತಿದೆ. ಓಬಳಾಪುರ ಅಂತ ಕರೀತಿವಿ. ಕಲ್ಯಾಣ ದುರ್ಗದ ರೋಡಲ್ಲಿ ಬರುತ್ತೆ. ಶಿರುವಾಳದ ಕಾವಲಿನಲ್ಲಿ ಕಾಮಗೇತ್ಲು ಕ್ಯಾಸಯ್ಯ ಅನ್ನೋನು ಇರ್ತಾನೆ. ಅವನು ಬಹಳ ರೌಡಿ ಆ ಕಾಲದಲ್ಲಿ. ಅವನು ಬರೋದು ಹಿಂಗೇನಾದ್ರೂ ದರೋಡೆ ಮಾಡಿಕೊಂಡು ಹೋಗೋದು ಮಾಡ್ತಿರ್ತಾನೆ.

ಒಂದ್ಸಾರಿ ಈ ಕಡೆ ಬಂದಾಗ ಇವರ ರೊಪ್ಪುದತ್ರ ಹೋಗ್ತಾನೆ ಹಟ್ಟಿಗೆ, ನೀರು ಕೇಳ್ತಾನೆ. ಆಕೆ ಪಚ್ಚಪದಿಪಾಲಮ್ಮ ಇರ್ತಾಳೆ, ನೀರು ತಂದು ಕೊಡ್ತಾಳೆ. ಬಹಳ ಸುಂದರವಾಗಿರ್ತಾಲೆ. ಆಕೆನ್ನ ಹೊತ್ಕೋಂಡು ಹೋಗಿ ಬಿಡ್ತಾನೆ. ಹೊತ್ಕೊಂಡು ಅಲ್ಲಿಂದ ದನಗಳನ್ನು ಹೊಡ್ಕೊಂಡು ಹೋಗಿ ಬಿಡ್ತಾನೆ ಶಿರುವಾಳ ಕಾವಲಿಗೇ. ಬಹಳ ಕ್ರೂರಿ ಅವನು.

ಸರಿ ಇವರೆಲ್ಲಾ ಮನಿಗೆ ಬಂದಾಗ ಹಿಂಗೆಲ್ಲ ಹೊತ್ಕೋಂಡು ಹೋಗಿಬಿಟ್ರು ಅಂತ ಗೊತ್ತಾಗುತ್ತೆ. ಅವನು ದುಷ್ಟ ಅವುಂತಾಗ ಏನ್ಮಾಡೋದು ಅಂತ ಇವನು ಸುಮ್ಮನಾಗಿಬಿಡ್ತಾನೆ. ಹೀಗೆ ಇರ್ಬೇಕಾದ್ರೆ ಕೋರಮಲ್ಲನಾಯಕನ ಹೆಂಡ್ತಿ ಗರ್ಭಿಣಿಯಾಗ್ತಾಳೆ, ಬಾಳಾರಮಟ್ಟಮ್ಮ ಗರ್ಭಿಣಿಯಾದ ಸಂದರ್ಭದಲ್ಲಿ ಪಿಂಡ ಮಾತಾಡುತ್ತಂತೆ. ಅಪ್ಪ ನಾನೀ ಜಗತ್ತಿಗೆ ಬರ್ಬೇಕಂದ್ರೆ ನನ್ನ ಸೋದರತ್ತೆನ್ನ ನೀ ಕರ್ಸೆಬೇಕು ಅಂತ ಹೇಳುತ್ತಂತೆ. ಎಲ್ಲರಿಗೂ ಆಶ್ಚರ್ಯ ಏನಿದು ಅಂತ.

ಆಯ್ತು ಅಂತ ಹೋಗ್ತಾರಲ್ಲಿ ಕಾಮಗೆತ್ಲು ಕ್ಯಾಸಯ್ಯನತ್ರ ಅಲ್ಲಿ ಏನೇನೋ ಮಾಡ್ಕೊಂಡು ನಮ್ಮಂತವರೆಲ್ಲ ಹೇಳಿ ಕಳಿಸ್ಕೊಡು ತವರು ಮನೆಗೆ ಅಂತ ಹೇಳ್ತಾರೆ. ಒಬ್ಬ ಶೆಟ್ಟಿ ಇರ್ತಾನೆ ಹೇಳ್ತಾನವನು. ಸರಿ ನೀನು ಹೆಂಗ ಕರ್ಕೊಂಡು ಹೋಗ್ತಿಯೋ ಹಂಗೆ ಕರ್ಕೊಂಡು ಬಂದು ತಂದು ಬಿಡು ನನ್ನ ಹೆಂಡ್ತಿನ್ನ ಎಂದು ಹೇಳ್ತಾನೆ. ಆಯ್ತು ಅಂತ ಕಂಡೀಷನ್‌ಗೆ ಒಪ್ಕೊಂಡು ಕರ್ಕೊಂಡು ಬರ್ತಾನೆ. ಕರ್ಕಂದು ಬಂದಾಗ ಹೆರಿಗೆಯಾಗುತ್ತೆ. ಹೆರಿಗೆ ಆಗ್ಬೇಕಾದ್ರೆ ಅತ್ತೆ ನೀನು ಮುಂದೆ ಕುಂತ್ಕೋ ನಾ ಬರ್ತಾ ಇದ್ದಿನಿ. ಬರ್ತಿದ್ದಂಗೆ ಮೂತಿಗೆ ಹೊಡೀತಾನೆ. ಕಾಲು ತಗಲುತ್ತೆ ಅಂತ ಹೇಳ್ತಾರೆ.

ಸರಿ ಆ ಕಾಲು ಮುಂದೆ ಮಾಡಿಕ್ಕೊಂಡು ಬಂದಿದ್ದರಿಂದ ಜಗಳೂರು ಪಾಪನಾಯಕ ಹುಟ್ಟಿದಂತ ಸ್ಥಳಕ್ಕೆ ಕಾಡ್ಲುಕುಂಟ ದಿಬ್ಬ ಅಂತ, ಕಾಲಿನಕುಂಟೆ ದಿಬ್ಬ ಅಂತ ಕರೀತಾರೆ. ಅದು ತೆಲುಗು ಕನ್ನಡ ಮಿಕ್ಸಾಗಿ ಬಿಡುತ್ತೆ. ಆ ದಿಬ್ಬಯಿದೆ ಅಲ್ಲಿ ಆ ಜಾಗಕ್ಕೆ ಕಾಡ್ಲುಕುಂಟ ದಿಬ್ಬ ಅಂತಾನೇ ಕರೀತಾರೆ. ಸರಿ ಹೆರಿಗೆಯಾಗಿ ಬಿದ್ರೆ ನೆಲದ ಮೇಲೆ ಅದೊಂತರ ಕರಗೆ ಪಿಂಡ ಕಂಡಂಗ ಕಾಣುತ್ತೆ. ಹೊರಗಡೆ ಬರ್ತಾ ಅತ್ತೆ ಹಲ್ಲು ಉದುರಿಸಿಬಿಟ್ಟನಲ್ಲ. ಅವನು ಮೊದ್ಲೇ ಕಾಮಗೇತ್ಲುಕ್ಯಾಸಯ್ಯ ಬಹಳ ಸಿಟ್ಟಿನವನು. ಅವನು ಕಂಡೀಷನ್ ಹಾಕಿ ಕಳ್ಸಿದಾನೆ. ಈಗ ಹಲ್ಲೆಲ್ಲ ಉದುರಿ ಹೋದವಲ್ಲ ಅವನತ್ರ ಏನು…? ನಾವು ಪಜೀತಿಬೀಳಬೇಕು ಅಂತ ಕೋರಮಲ್ಲ ನಾಯುಕನಿಗೆ ಭಯವಾಗುತ್ತೆ. ಅಯ್ಯೋ ಇದೇನು ಇದು ಹೊಟ್ಟೇಲ್ಲಿದ್ದಾಗ್ಲೇ ಮಾತಾಡಿಬಿಡ್ತು ಪೀಡೆನೋ ಪಿಶಾಚಿನೋ ಅಂತಂದು ಏನು ಮಾಡಿಬಿಟ್ರು ಹೆದರಿಕೊಂಡು ಒಂದು ಕಂಬಳಿ ಕೊರೆಯಲ್ಲಿ ಸುತ್ತಿಬಿಟ್ಟು ಒಂದು ಕಾರೆಗಿಡದತ್ತ ಇಟ್ಟುಬಿಡ್ತಾರೆ. ಇಟ್ಟು ಇನ್ನ ಗ್ರಹಚಾರ ನಮಗೆ ಬಂದು ಬಿಡ್ತು ಎಂದು ಅವರು ಕ್ಯಾಸಯ್ಯ ಬಂದುಬಿಟ್ರೆ ನಾವು ಉಳಿಯೊಲ್ಲ ಅನಿಷ್ಟ ಬಂದುಬಿಡ್ತು ಅಂತ ಎಲ್ಲ ದನಗಳನ್ನು ಹೊಡ್ಕೊಂಡು ಸಾಣಿಗೆರೆ ಕಾವಲಿಗೆ ಹೋಗ್ತಾರೆ, ಇಲ್ಲೇ ಸಾಣಿಕೆರೆ ಅಂತಿದೆ.

ಸರಿ ಆ ಮಗು ಅಲ್ಲಿ ಇತ್ತು ಕಾರೆಗಿಡದ ಕೆಳಗೆ. ಅಷ್ಟೊತ್ತಿಗೆ ಶಿವಪಾರ್ವತಿಯರು ಬಂದ್ರು ಶುಕ್ಲಗಿರಿ ಮೇಲೆ ಇಳಿದ್ರು ಆ ನಂದಿ ಬಂದು ಅಲ್ಲಿ ಇಳಿದಿದ್ದಕ್ಕೆ ನಂದಿವಾಳ, ನಂದೀಶನ ದುರ್ಗ ಅಂತಂದು ಹೆಸರು ಬಂತು ಅಂತ ಹೇಳ್ತಾರೆ. ಸರಿ ಆ ಮಗು ಅಳೋದು ನೋಡಿಬಿಟ್ಟು ಶಿವಪಾರ್ವತಿಯವ್ರು ಬಂದ್ರು, ಬಂದು ಆ ಮಗೂನ ಎತ್ಕೊಂಡು ಈಶ್ವರನತ್ರ ತೆಗೊಂಡು ಹೋಗ್ತಾಳೆ. ಆಗ ಈಶ್ವರ ಹೇಳ್ತಾನೆ. ಆಪತ್ಕಾಲದಲ್ಲಿ ನನ್ನ ಉರಿ ನೇತ್ರದ ಪ್ರಭಾವ ನಿನಗಾಗ್ಲೀ ಇವನು ಬಹಳ ಕಾರಣೀ ಪುರುಷನಾಗ್ತಾನೆ ಅಂತ ಪಾರ್ವತಿಗೆ ಹೇಳ್ತಾನೆ. ಪಾರ್ವತಿ ಆಗ್ಲೇ ಅಲ್ಲೊಂದು ನೀರಿಗೋಸ್ಕರ ಒಂದು ಇದನ್ನು ತೋಡಿಬಿಟ್ಟು ಚಿಲುಮೇನಾ ಆ ನೀರಿನಲ್ಲಿ ಸ್ನಾನ ಮಾಡ್ಸಿ ಆ ಮಗುನ ಅದೇ ಗಿಡದ ಕೆಳಗೆ ಮಲಗಿಸಿ, ಅಲ್ಲಿ ಒಂದು ಜೇನು ತೊಟ್ನಾ ಕಾರೇಗಿಡಕ್ಕೆ ಕಟ್ಟಿ ಇವ್ರು ಹೋಗಿಬಿಟ್ರು.

ಆ ಮಗು ಅಳಬೇಕಾದ್ರೆ ಆ ಜೇನು ಬಾಯಲ್ಲಿ ತೊಟ್ಟಿಡ್ತಾ ಇತ್ತು. ಈಗ ಆ ಪ್ರದೇಶದಲ್ಲಿ ಕಾಡು ಕುಂಟ ದಿಬ್ಬ ಅಂತ ಹೇಳ್ತಿನಲ್ಲ. ಆ ಪ್ರದೇಶದಲ್ಲಿ ದೊಡ್ಡದೊಂದು ಚಿಲುಮೆಯಿದೆ. ಈಗದನ್ನು ಮುಚ್ಚಿದ್ದಾರೆ. ಈಗೀಗ ಒಳ್ಳೆದಾಗಿಲ್ಲ ಆ ಜಮೀನವರಿಗೆ ಅದಕ್ಕೆ ಮುಚ್ಚಿಬಿಟ್ವಿ ಸ್ವಾಮಿ ಅಂತ ಹೇಳ್ತಾರೆ. ಅಷ್ಟೊತ್ತಿಗೆ ಈ ಚಳ್ಕೆರೆ ಓಲ್ಡ್ ಟೌನ್ ಇದೆಯಲ್ಲ. ಅದಕ್ಕೆ ಓರ್ಗಲ್ಲು ಪಟ್ಟಣ ಅಂತ ಕರೀತಾ ಇದ್ರು.

ಓರಂಗಲ್ಲಿನ ರಾಜರು ಬಂದು ಇಲ್ಲಿ ನೆಲೆಸಿದ್ರು ಅಲ್ಲಿ ದೇವತೆ ಕೂಡ ಇದೆ ‘ಓರಗಲ್ಲಮ್ಮ’ ಅಂತ ಮೊದ್ಲು ಪೂಜೆ ನಡೀತಿತ್ತು. ಈಗ್ಲೂ ಕಾರ್ತೀಕ ನಡೀತಿರುತ್ತೆ. ಆ ಓರಗಲ್ಲು ಪಟ್ಟಣದಿಂದ ಒಂದಜ್ಜಿ ಕಟ್ಟಿಗೆಗೋಸ್ಕರ ಹಂಗೆ ನಡ್ಕೊಂಡು ಹೋದಳು ಅಲ್ಲಿಗೆ. ಆ ಅಜ್ಜಿ ಮಗು ಅಳೋದನ್ನು ನೋಡಿಬಿಟ್ಟು ಹೋಗಿ ಎತ್ಕೊಂಡು ಬಂದು ಓರಗಲ್ಲು ಪಟ್ಟಣದಲ್ಲಿ ಸಾಕ್ತಾಳೆ. ಮಗು ಬೆಳಿತಾ ದೊಡ್ಡವನಾದ್ಮೇಲೆ ಆವಜ್ಜಿಗೇನು ಏನೂ ಆಶ್ರಯ ಇರೋದಿಲ್ಲ. ಆ ಊರಿನ ಗೌಡನತ್ರ ಕರ್ಕೊಂಡು ಹೋಗಿ ಒಂದು ದುಗ್ಗಾಣಿಗೆ ಒಂದು ಹಸು ಕೂಲಿ ಎಂದು ಮಾತಾಡಿಬಿಟ್ಟು ಆತನ್ನ ದನ ಕಾಯೋಕೆ ಬಿಡ್ತಾಳೆ. ಆವಜ್ಜಿ ಈತನಿಗೆ ಪಾಪಣ್ಣಾ, ಪಾಪಯ್ಯ ಅಂತ ಹೆಸರಿಟ್ಟಳು. ಪಾರ್ವತಿಯ ಒಂದು ಆಶೀರ್ವಾದ ಈತನಿಗೆ ಇದ್ದುದರಿಂದ ಪಾಪಯ್ಯ ಅಂತ ಬಂತು ಅಂತ ಹೇಳ್ತಾರೆ. ಸರಿ ದಿನಾ ದನ ಹೊಡ್ಕೊಂಡು ಆ ದುರ್ಗಿಕೆರೆ ಅಂತ ಕರಿತಾರೆ. ಈ ಅಜ್ಜೀನಕೆರೆ ಅಂತೇನಿದೆ ಅದನ್ನು ದುರ್ಗಿಕೆರೆ ಅಂತ ಕರೀತಾರೆ ಅದನ್ನು ಅಲ್ಲಿ ಯತೇಚ್ಛವಾಗಿ ನೀರಿನ ಸೌಕರ್ಯ ದನಗಳಿಗೆ ಹುಲ್ಲು ಎಲ್ಲ ಇದ್ದುದರಿಂದ ಅಲ್ಲೆಲ್ಲ ಬಿಟ್ಕೊಂಡು ದೊಡ್ಡ ದೊಡ್ಡ ಮಂಗಾರಿ ಗಿಡಗಳು ಅಂತ ಇರ್ತವಂತೆ ಆಗ ಆ ಗಿಡಗಳ ನೆರಳಿನಲ್ಲಿ ಈತ ಮಲಗ್ತಾ ಇದ್ದ. ಹಿಂಗೆ ಪ್ರತಿನಿತ್ಯ ಈ ದನಗಳನ್ನು ವಡ್ಕಂಡು ಬರೋದು ಅಲ್ಲಿ ಬಿಡೋದು. ಏನೋ ಒಂತರ ಚಡ್ಡಿ, ಕಚ್ಚರಿಬಿ ಅವೇ ತಾನೇ ಇದ್ದದ್ದು. ಹಿಂಗೇ ಇರ್ಬೇಕಾದ್ರೆ ಒಂದು ಒಳ್ಳೆ ಮಂಗಾರಿ ಗಿಡ ಕವಲು ಒಡೆದಿರುತ್ತೆ.

ಒಂದು ಹುತ್ತುದ ಮೇಲೆ ಅದು ದನ ಕಾಯೋಕೆ ಚನ್ನಾಗಿರುತ್ತೆ ಅಂತ ಹೋಗಿಬಿಟ್ಟು ಈತ ಆ ಗಿಡನ್ನ ಬೇರು ಸಮೇತ ಕೀಳ್ತಾನೆ. ಬಹಳ ಬಿಗಿಯಾಗಿ ಕೀಳ್ತಾನೆ. ಕೀಳ್ತಾ ಇರ್ತಕ್ಕಂತ ಸಂದರ್ಭದಲ್ಲಿ ಭಯಂಕರ ಶಬ್ದ ಆಗುತ್ತೆ. ಆಗ ಅಲ್ಲಿ ಆ ಹುತ್ತದಿಂದ ಒಂದು ದೊಡ್ಡ ಸರ್ಪ ಮೇಲೆ ಬರ್ತದೆ. ಈ ಮುಂಗಾರಿ ಗಿಡದ ಬೇರು ಅದನ್ನು ಸುತ್ತೊಂಡಿರುತ್ತೇ. ಅದು ಯಾವುದೋ ಒಂದು ಶಾಪದಿಂದ ಆ ಸರ್ಪ ಅಲ್ಲಿರುತ್ತೆ. ಆತ ಬೇರು ಕಿತ್ತಾಗ ಆ ಸರ್ಪಕ್ಕೆ ಸ್ವಲ್ಪ ಅಳಾರಾಗುತ್ತೆ. ಅದು ಮೇಲಕ್ಕೆ ಬಂದು ಅಪ್ಪ ನೀನು ಬಹಳ ಮಹಿಮಾ ಪುರುಷ ನಿನ್ನಿಂದ ನನಗೆ ಶಾಪ ವಿಮೋಚನೆಯಾಯ್ತು. ನೀನು ವೆಂಕಟೇಶ್ವರನ ಭಕ್ತನಾಗ್ತೀಯಾ. ಸದಾ ನನ್ನ ಆಶೀರ್ವಾದ ನನ್ನ ಇದು ನಿನಗೆ ಇದ್ದೇ ಇರುತ್ತೆ ನಿನ್ನ ಕೈಯಲ್ಲಿ ಇಟ್ಕೊಂಡಿರುತ್ತಕ್ಕಂತ ಮಂಗಾರಿ ಗಿಡದ ಕೋಲೇ ನಾಗಮುರಿ ಬೆತ್ತ ಆಗ್ತದೆ ನಾನೇ ಅದ್ರಲ್ಲಿರ್ತೀನಿ. ಪ್ರತಿ ಸೋಮವಾರ ನಿನಗಿಲ್ಲ ಪೂಜೆ ಆಗ್ಲೀ ನಾನು ಇಲ್ಲೇ ಇರ್ತಕ್ಕಂತ ಒಂದು ಬಂಡೆಯಿಂದೆ ಅಲ್ಲಿ ಸೋಮುಲ ಬಂಡೆ ಅಂತ ಅಲ್ಲಿ ಹೋಗಿ ನೆಲೆಸ್ತೀನಿ.

ಅಲ್ಲಿ ಹೋಗಿ ನೆಲೆಸಿದ ಮೇಲೆ ನಾಗಭೈರವ ಅಂತ ಬೋರ ಬೋರೇದೇವರು ಅಂತ ಕರೀತಾರೆ. ಆ ಬೋರೇದೇವರು ಅಂದ್ರೆ ನಾಗಭೈರವ ಅಂತ. ಅದು ಭಾನುವಾರ ದಿವಸ ನನಗೆ ಪೂಜೆಯಾಗುತ್ತೆ ಸೋಮವಾರ ದಿವಸ ನಿನಗೆ ಪೂಜೆಯಾಗಲಿ ಅಂತ ಆಶೀರ್ವಾದ ಮಾಡಿ ಹೋಗುತ್ತೆ. ಅಲ್ಲಿಂದ ಈತ ಪೂರ್ತಿ ಬದಲಾವಣೆಯಾಗ್ತಾನೆ. ವೆಂಕಟೇಶ್ವರನ ಬಗ್ಗೆ, ಭಕ್ತಿಯ ಬಗ್ಗೆ ಆತನಿಗೆ ಅಲ್ಲಿಂದ ಪ್ರಾರಂಭವಾಗುತ್ತೆ. ಕೈಯಲ್ಲಿ ಅದು ಬಂದುಬಿಡ್ತು ನಾಗಮುರಿಬೆತ್ತ. ಸರಿ ಮನಿಗೆ ದನಗಳನ್ನು ಹೊಡ್ಕೊಂಡು ಬರೋದು, ಹೋಗೋದು ಕಂಬಳಿ ಹಾಸ್ಕೊಂಡು ಆ ಹುತ್ತ ಇತ್ತಲ್ಲ ಅಲ್ಲಿ ಧ್ಯಾನಕ್ಕೆ ಕುಂತು ಬಿಡೋದು. ಪ್ರತಿ ದಿನ ಹಿಂಗೆ ವೆಂಕಟೇಶ್ವರನ ಭಕ್ತ ಅಂತೇಳಿಬಿಟ್ಟಿದ್ರಲ್ಲ. ವೆಂಕಟೇಶ್ವರ ಎಲ್ಲಿರ್ತಾನೆ. ತಿರುಪತಿಯಲ್ಲಿರ್ತಾನೆ. ತಿರುಪತಿಗೆ ಹೋಗಬೇಕು ಅಲ್ಲಿ ದರ್ಶನ ಮಾಡಬೇಕು. ಅಂತೆಲ್ಲಾ ಮಾತಾಡ್ತಾ ಇರ್ತಾರೆ.

ಹಿಂಗೇ ಇರ್ಬೇಕಾದ್ರ ಮತ್ತೆ ತಿರುಪತಿಗೆ ಹೋಗ್ಲಿಕೆ ದುಗ್ಗಾಣಿ ಕಾಸು ಬೇಕಲ್ಲ. ಬಹಳ ದುಡ್ಡು ಬೇಕು ಅಂತೆಲ್ಲಾ ಮಾತಾಡಿರ್ತಾರೆ. ಸರಿ ದನ ಕಾದಿದ್ದು ದುಡ್ಡು ಇಸ್ಕೊಂಡಿರಲ್ಲ. ಅಷ್ಟೊತ್ತಿಗೆ ಆವಜ್ಜಿ ತೀರ್ಕೊಂಡಿರ್ತಾಳೆ. ಈತ ಪರದೇಶಿ ಪಾಪಯ್ಯ ಅಂತ ಹೆಸರಿರುತ್ತೆ. ಯಾರೂ ಇರಲ್ಲ ಈತನಿಗೆ. ಊರಿನ ಜನರೇ ಇಷ್ಟು ಮುದ್ದೆ ಕೊಟ್ಟು ಇದನ್ನು ಮಾಡಿಸ್ತಿದ್ರು. ದುಡ್ಡು ಯಾರತ್ರನೂ ಇಸ್ಕೊಂಡಿರ್ಲಿಲ್ಲ.

ಸರಿ ಓರಗಲ್ಲು ಪಟ್ಟಣಕ್ಕೆ ಬಂದು ಗೌಡ್ರನ ಅವರ್ನ ಸ್ವಾಮಿ ನಾನು ತಿರುಪತಿಗೆ ಹೋಗಬೇಕು, ದೇವರನ್ನು ನೋಡಬೇಕು. ಲೇ ಪಾಪ ಯಾತುದ್ದಲೇ ನಿಂದು ಓಹೋ ತಿರುಪತಿ ನೋಡ್ತಾನಂತೆ ಹೋಗೋ ಹೇಳಬೇಕಿಲ್ಲ ಅಂತ ಬೈತಾರೆಲ್ಲ ಎಲ್ಲರೂ. ಮೊದ್ಲೇ ಹೆಂಗೂ ಹುಚ್ಚ ಇದ್ದಂಗಿದ್ದನಲ್ಲ ಆ ತಿರುಪತಿ ಎಲ್ಲಿ ನೀನೆಲ್ಲಿ ಹೋಗೋ ನಿನ್ನ ಮುಖಕ್ಕೆ ತಿರುಪತಿ ಎಲ್ಲಿ ಅಂತ ಬೈತಾರೆ. ಸರಿ ಈತನಿಗೆ ಬೇಜಾರಾಯಿತು, ಮಾಡ್ತೀನಂದುಕೊಂಡು ಎಲ್ಲ ದನಗಳನ್ನು ಹೊಡ್ಕೊಂಡು ಹೋಗ್ತಾನೆ.

ಹೊಡ್ಕೊಂಡು ಬಂದು ಈಗೇನು ಈಗ ಗದ್ದುಗಿ ಅಲ್ಲಿರೋದು ನನ್ನಿವಾಳದ ಹತ್ತಿರದ ದೇವಸ್ಥಾನವಿದೆಯಲ್ಲ ಅಲ್ಲಿ ಮಂದಾರದ ಗಿಡ ಹುತ್ತನೂ ಇತ್ತು. ತುಂಬಾ ದೊಡ್ಡ ಹುತ್ತ ಅದು. ಆದ್ರೆ ಈಗಿಲ್ಲ ಅದು. ಮೊದ್ಲೆಲ್ಲಾ ಸುತ್ತ ತಿರುಗಬೇಕಾದ್ರೆ ಹೆದರುತ್ತಿದ್ವಿ ನಾವು. ಅಲ್ಲಿ ಹೋಗಿಬಿಟ್ಟು ದನನ್ನೆಲ್ಲ ಒಂದು ಕಡೆ ಅಲ್ಲೇ ಕೂಡಿ ಹಾಕಿಬಿಡ್ತಾನೆ. ನಾಗಮುರಿ ಬೆತ್ತದಿಂದ ಮೂರು ಗೆರೆ ಎಳಿದುಬಿಟ್ಟು ದ್ಯಾನಕ್ಕೆ ಕುಂತುಬಿಡ್ತಾನೆ. ಸಂಜೆಯಾದ್ರೂ ದನ ಮನಿಗೆ ಬರ್ಲೇ ಇಲ್ಲ. ಸರ್ವತ್ತಾದ್ರೂ ದನ ಬರ್ಲಿಲ್ಲ. ಅಲ್ಲಿ ಏನು ತಿಂದ್ವೋ ಏನು ಕಣೋ ಅಂತ ಎಲ್ಲ ಜನರೆಲ್ಲ ದೀಪ ಗೀಪ ಹಚ್ಕೊಂಡು ಬರ್ತಾರೆ. ಬಂದ್ರ ಒಂದು ದನ ಮುಸುಗಲಿಲ್ಲ. ಎಲ್ಲ ಆ ಗೆರೆಯೊಳಗೆ ಇದಾವೆ. ಸರಿ ಇವ್ರು ಆ ಗೆರೆ ದಾಟೋಕೆ ಹೋದ್ರೆ ಬೆಂಕಿ ಹತ್ಕೊಳ್ಳುತ್ತೆ.

ಆವಾಗ ಅರ್ಥವಾಗುತ್ತೆ ಈತ ಸಾಮಾನ್ಯನಲ್ಲಪೋ ಈತ ಈತನಲ್ಲಿ ಎನೋ ಒಂದು ಅಡಗಿದೆ. ಅಂತಂದು ಗೌಡ “ಪಾಪಣ್ಣ ನಾನಂದಿದ್ದು ತಪ್ಪಾಯಿತಪ್ಪ ಬಾರಪ್ಪ ನಿನಗೆ ದುಡ್ಡು ಕೊಡ್ತಿವಿ ನೀನು ತಿರುಪತಿಗೆ ಹೋಗುವಂತೆ” ಅಂತ ಸಮಾಧಾನ ಮಾಡಿಕೊಂಡು ಅವರನ್ನೆಲ್ಲ ಕರ್ಕೊಂಡು ಬಂದು ಮಾರನೆ ದಿನ ಎಲ್ಲರೂ ಅವರವರ ಎಷ್ಟೆಷ್ಟು ದನ ಕಾಯಿತ್ತಿದ್ದನೋ ಅಷ್ಟಷ್ಟು ದುಡ್ಡು ದುಗ್ಗಾಣಿ ತಂದು ಕೊಟ್ರು. ಸರಿ ಎಲ್ಲಾ ದುಗ್ಗಾಣಿ, ಸರಿ ನೀನು ಹೋಗಿಬಾರಪ್ಪ ತಿರುಪ್ತಿಗೆ. ಪಾಪಣ್ಣ ನಾವೆಲ್ಲ ನೋಡಿಕೊಳ್ತೀವಿ. ಅಂದ್ರ ದುಗ್ಗಾಣಿಗಳೆಲ್ಲ ಕಟ್ಟಿಕೊಂಡು ಈ ಸೋಮನ ಬಂಡೆ ಮೇಲೆ ಹೋಗ್ತಾನೆ. ಹೋಗಿಬಿಟ್ಟು ತೂರ್ತಾನೆ ಗಟ್ಟಿ ಯಾವುದು ಜ್ವಾಳ್ಳ್ಯಾವುದು ಅಂತ. ಅದು ಇಳಿಜಾರಲ್ಲ. ಎಲ್ಲಾ ಕೆಳಗೋಗಿರ್ತವೆ. ಮೂರೇ ಮೂರು ದುಗ್ಗಾಣಿ ಅಲ್ಲಿ ಬಿದ್ದಿರ್ತವೆ. ಅದನ್ನ ಕಟ್ಟಿಕೊಂಡು ಪಶ್ಚಿಮಕ್ಕೆ ಹೋಗ್ತಾನೆ. ಪಶ್ಚಿಮಕ್ಕೆ ಹೋದ್ರೆ ಈಗನ ಕಲ್ಲಳ್ಳಇ ಆ ಭಾಗಕ್ಕೆ ಹೋದಾಗ ಬಹಳ ಬಿಸಿಲು ನೀರಡಿಕೆ. ಊಟ ಇರೊಲ್ಲ ಒಂದು ಮರದ ಕೆಳಗೆ ಕುಂತಿರ್ತಾನೆ. ಅದೇ ಸಂದರ್ಭದಲ್ಲಿ ಈ ಗೋಣುರತ್ರ ಗೊಂದಳ್ಳಿ ಅಂತ ಒಂದು ಹಳ್ಳಿಯಿತ್ತಂತೆ. ಅಲ್ಲಿನ ಗೊಲ್ಲರು ಮೀಸಲನ್ನು ಹೊತ್ಕೊಂಡು ಬರ್ತಾ ಇರ್ತಾರೆ. ಅಲ್ಲಿಂದ ಮೀಸಲೆಲ್ಲ ಹೊತ್ಕೊಂಡು ಹೋಗಬೇಕಲ್ಲ. ಅದು ಕಾಲು ನಡಿಗೆಯಲ್ಲಿ ಹೋಗಬೇಕು. ತಲೆಮೇಲೆ ಮೀಸಲು ಹೊತ್ಕೊಂಡು ನಡೀಬೇಕು. ಅವರಿಗೂ ದಾಹಕ್ಕೆ ನೀರು ಬೇಕಾಗಿರುತ್ತೆ ಈತನ್ನ ಬಂದು ಕೇಳ್ತಾರೆ ಏನಪ್ಪ ಇಲ್ಲಿ ಎಲ್ಲಿಯಾದ್ರೂ ನೀರು ಸಿಗುತ್ತೇನು ಅಂತ. ಹೇ ಹೋಗ್ರಿ ಅಲ್ಲಿ ನೀರು ಮಸ್ತೈತಿ ನೀರು ಅಂತ ಹೇಳ್ತಾರೆ.

ಸರಿ ಸ್ವಲ್ಪ ಇವನ್ನೆಲ್ಲಾ ನೋಡ್ಕೊಂಡಿರಪ್ಪ ನಾವು ಹೋಗಿ ಬರ್ತೀವಿ ಅಂತ ಹೇಳ್ತಾರೆ. ಆಯ್ತು ಹೋಗ್ರಿ ಅಂತಾನೆ. ಅವರೆಲ್ಲಾ ಅಲ್ಲಿಟ್ಟು ಹೋಗ್ತಾರೆ. ಅವ್ರು ಹೋಗೋದೆ ತಡ ಈತಗೆ ಹಸಿವಾಗಿರುತ್ತೆ. ಹಾಲು ಮೊಸರು ಎಲ್ಲ ಕುಡಿದು ಬಿಡ್ತಾನೆ. ಸರಿ ಅಲ್ಲಿ ಹೋಗ್ತಾರೆ ನೀರು ಇಲ್ಲ. ಅವರಿಗೆ ಸಿಟ್ಟು ಬರುತ್ತವರಿಗೆ ಏನವನು ಅಲ್ಲಿ ನೀರು ಇದ್ದಾವೆಂದು ಹೇಳಿದ್ದ. ಸರಿ ಇಲ್ಲಿ ಬಂದು ನೋಡಿದ್ರೆ ಮೀಸಲು ಹಾಲು ಮೊಸರು ಎಲ್ಲ ಕುಡಿದುಬಿಟ್ಟಿರ್ತಾನೆ. ಆತನ ಬಾಯಿಗೆಲ್ಲಾ ಅಂಟ್ಕೊಂಡಿರುತ್ತೆ. ಸಿಟ್ಟು ಬಂದು ಚೆನ್ನಾಗಿ ಹೊಡೆದುಬಿಡ್ತಾರೆ. ಹೊಡೆದುಬಿಡ್ತಾರೆ ಆತ ನೆಲಕ್ಕೆ ಬಿದ್ದಿರ್ತಾನೆ. ಸತ್ತಿದ್ದಾನೆ ಎಂದು ಬಿಟ್ಟು ಕಲ್ಲು ಬಣವಿ ಎಳೆದುಬಿಡ್ತಾರೆ.

ಮುಂದಕ್ಕೆ ಹೋಗಿ ಬಿಡ್ತಾರವರು. ಆ ಕಲ್ಲು ಬಣಿವೇನೇ ಆತನಿಗೆ ಆಶರೀರವಾಣಿಯಾಗ್ತದೆ. ಸ್ವಾಮಿ ತಿರುಪತಿ ವೆಂಕಟರಮಣ ಪಾಪನಾಯಕ ನೀನು ಅಲ್ಲಿಗೆ ಬರಬೇಕು ದರ್ಶನ ಪಡೀಬೇಕು. ‘ನೀನು ಬಂದಾಗ ನಾನು ಎದುರುಗೊಳ್ತೀನಿ. ನಿನ್ನ ಕೈಯಲ್ಲಿರ್ತಕ್ಕಂತ ನಾಗಮುರಿ ಬೆತ್ತನೇ ನಿನಗೆ ಶಕ್ತಿ’ ಅಂತಂದು ಹೇಳಿದಾಗ ಆತನಿಗೆ ಎಚ್ಚರಾಗಿ ಆ ಕಲ್ಲು ಸಿಡಿಯುತ್ತಂತೆ ಸಿಡಿದ ಭಾಗ ಅಲ್ಲಿದೆ ಅದಕ್ಕೆ ಕಲ್ಲಳ್ಳಿ ಅಂತ ಹೆಸರು ಬಂತಂತೆ. ಸರಿ ಹೊರಗಡೆ ಬಂದುಬಿಡ್ತಾನೆ. ಬಂದ ಮೇಲೆ ಒಂದು ಕುಂಟು ಕುದುರೆ ಯಾವುದೋ ಇತ್ತಲ್ಲಿ ಅದನ್ನು ಬೆತ್ತದಿಂದ ಮುಟ್ಟಿಸಿದ ಅದು ಒಳ್ಳೆ ಕುದುರೆಯಾಗ್ತದೆ. ಆ ಕುದುರೆ ಮೇಲೆ ಹೊಂಟು ಬರ್ತಾ ಇರ್ತಾನೆ. ಅಲ್ಲಿ ಮುಂದಕ್ಕೆ ಹೋಗೋದು ಹಿಂದಕ್ಕೆ ಬರೋದು ಗೊಲ್ಲರು ಇದ್ದತ್ರ ಇವನ್ನು ಎಲ್ಲೊ ನೋಡಿದ್ದವಲ್ಲ, ಇವನ್ನ ಸಾಯಿಸಿ ಬಂದಿದ್ದೆವಲ್ಲ ಇವನ್ನ ಹೆಂಗ ಬಂದುಬಿಟ್ಟಿದ್ದಾನಲ್ಲ ಅಂತ. ಆವಾಗೆಲ್ಲಾ ಹೇಳ್ತಾನೆ.

ಹೇಳಿದಾಗ ಅವರೆಲ್ಲಾ ಸರಣರಾಗ್ತಾರೆ. ತಪ್ಪಾಯಿತಪ್ಪ ನೀನು ಬಹಳ ಪವಾಡಪುರುಷ ನಾವು ನಿಮ್ಮ ಜೊತೆಗೆ ಬರ್ತೀವಿ ದರ್ಶನಕ್ಕೆ ಆಯ್ತು ಅಂತ ಹೋಗ್ತಾರೆ. ಅವ್ರು ಎಲ್ಲ ಅಡಿಗೆ ಮಾಡೋ ಕಡೆ ಎಲ್ಲ ಅಕ್ಕಿ ಬೇಳೆ ಎಲ್ಲಾ ಚೆಲ್ಲಿರ್ತವೆಲ್ಲಾ ಅದನ್ನೆಲ್ಲಾ ಗಂಟು ಹಾಕ್ಕೊಂಡಿರ್ತಾನೀತ. ಹಂಗೆ ಹಿಂಗೆ ಮಾಡಿ ತಿರುಪತಿಗೆ ಹೋಗಿಬಿಡ್ತಾರೆ. ಹೋದಾಗ ಸರಿ ಇವರೆಲ್ಲ ಮುಡಿಪೇನಿತ್ತು ಅದನ್ನೆಲ್ಲಾ ತಗೊಂಡು ಹೋಗಿ ಗೊಲ್ಲರ ದರ್ಶನಕ್ಕೆ ಹೋಗಿಬಿಡ್ತಾರೆ. ಈತ ಏನು ಮಾಡಿದ್ರೂ ಕೂಡ ಒಳಗಡೆ ಹೋಗೋದೇ ಇಲ್ಲ.

ಅವರೆಲ್ಲ ದರ್ಶನ ಮಾಡಿಕೊಂಡು ಬರ್ತಾರೆ ಇವನು ಅಷ್ಟೊತ್ತಿದ್ರೂ ಹೋಗೋದಿಲ್ಲ ಸಂಜೆಯಾದ್ರೂ ಹೋಗೋಲ್ಲ. ಏನಪ್ಪಾ ನೀನು ಬರೋಲ್ಲೇನು, ಇಲ್ಲ ಆತ್ನೆ ತಿರುಪತಿನೇ ಬಂದು ಕರಿಬೇಕು. ಆತನೇ ಹೇಳಿದ್ದಾನೆ. ಇಲ್ಲಪ್ಪ ನಾನು ಬಂದು ಕರಿತೀನಿಂತ. ಅಯ್ಯೋ ನೀನೆಲ್ಲೋ ಹುಚ್ಚ ಕಣಯ್ಯ ದೇವ್ರು ಎಲ್ಲಾದ್ರೂ ಬಂದು ಕರಿತಾನೇನು. ಸರಿ ಈತನಿಗೆ ಸಿಟ್ಟು ಆವೇಶ ಬಂದು ಕರೀಲಿಲ್ಲ ಎಂದು ಗುಂಡು ತಗೊಂಡು ಹಾಕ್ತಾನಂತೆ. ಆ ಗುಂಡು ಹಾಕ್ಬೇಕಾದ್ರೆ ಸ್ವಲ್ಪ ಸ್ವಾಮಿ ವಾಲಿದ್ದಾನೆ. ಆ ಗುಂಡು ಬಿದ್ದ ಪ್ರದೇಶನೇ ಪಾಪನಾಶನ ಇವತ್ತು ಅಂತಾರೆ.

ಅಷ್ಟೊತ್ತಿಗೆ ದೇವ್ರು ಈತನ ಪರೀಕ್ಷೆ ಮಾಡ್ಲಿಕ್ಕೆ ತಾಳ್ಮೆನ್ನ ಬಂದು ದರ್ಶನ ಕೊಟ್ಟು. ಕೊಟ್ಟ ಮೇಲೆ ಮತ್ತೆ ನಿನಗೆ ಏನು ಬೇಕು ಕೇಳ್ಕೊಳಪ್ಪ ಅಂದ. ನಂದೀನ್ನೇನೈತಪ್ಪ ನಿನ್ನ ನೋಡಿಬಟ್ಟೆನಲ್ಲ ಸಾಕು ನಾನು ಧನ್ಯನಾಗಿಬಿಟ್ಟೆ. ಇಲ್ಲ ನೀನು ಮಾಡೋ ಕೆಲ್ಸ ಇದಾವೆ. ನಿಮ್ಮ ಜನಗಳಿಗೆ ಜಗತ್ತಿಗೆ ಒಳ್ಳೆಯ ಭಕ್ತಿಮಾರ್ಗ ತೋರಿಸಬೇಕು ನೀನು ಮುಂದೆ ಕಾರಣೀಕ ಪುರುಷನಾಗ್ತೀಯ ಅಂತಂದು ಹೇಳ್ತಾನೆ. ನೀನು ಮೂರು ಕಠಾರಿಗಳನ್ನು ಪ್ರತಿಷ್ಠಾಪನೆ ಮಾಡಿಸಬೇಕು. ಸೂರ್ಯನಂದನ ಕಠಾರಿ, ಮುಕ್ಕಣ್ಣನ ಕಠಾರಿ, ಸಿಡಿಲು ಮಿಂಚಿನ ಕಠಾರಿ. ಈ ಸೂರ್ಯನಂದನ ಕಠಾರಿ ಶುಕ್ಲಮಲ್ಲ ನಾಯಕ ಹುಟ್ಟುತ್ತಲೇ ಅದನ್ನು ತಗೊಂಡು ಬಂದಿರ್ತಾನೆ. ಈ ಮುಕ್ಕಣ್ಣನ ಕಠಾರಿ ಅಂತಕ್ಕಂತದ್ದು ಅವರ ಬಂಧುಗಳಿಂದ ಪ್ರಾಪ್ತಿಯಾಗಿರುತ್ತೆ. ಸಿಡಿಲು ಮಿಂಚಿನ ಕಠಾರಿ ಅಂತಕಂತದು ಸಿಡಿಲು ಮತ್ತು ಮಿಂಚಿನಲ್ಲಿ ಪ್ರಾಪ್ತಿಯಾಗಿರುತ್ತೆ. ಈ ಮೂರು ಪೂರ್ವಜರಿಂದ ಸಂಪಾದಿಸಿದಂತ ಕಠಾರಿಗಳು.

ಅವುಗಳನ್ನು ಪ್ರತಿಷ್ಠಾಪನೆ ಮಾಡಬೇಕು, ನೀನು ಭಕ್ತಿ ಪ್ರಚಾರ ಮಾಡಬೇಕು ಆಗ ನಿನಗೆ ಮುಕ್ತಿ ಕೊಡ್ತೀನಿ ಅಂತ ಹೇಳ್ತಾನೆ. ಆಯ್ತು ಅಂತ ಮಾತುಕೊಟ್ಟು ಈ ಇದ್ರಲ್ಲಿ ಎಲ್ಲಿನೂ ಕೂಡ ನೀನು ಲೋಪ ಮಾಡಬಾರದು ಈ ಪ್ರತಿಷ್ಠಾಪನೆ ಕೆಲ್ಸ ನೀನು ಮಾಡ್ಲೇಬೇಕು ಅಂತ ಹೇಳ್ತಾರೆ. ಸರಿ ಎಲ್ಲ ಈತನ ಮಹಿಮೆ ನೋಡಬಿಟ್ಟು ಈ ಗೊಲ್ಲರೆಲ್ಲಾ ಬಹಳ ಇದಾಗಿಬಿಡ್ತಾರೆ, ಎಷ್ಟು ಭಕ್ತಿ ಈತನಿಗೆ ಅಂತ.

ಸರಿ ಅಲ್ಲಿ ಇನ್ನೊಂದು ಪವಾಡ ಮಾಡ್ತಾನೆ. ಪಾತ್ರೆ ತರಿಸ್ತಾನೆ, ಪಾತ್ರೆ ತರ್ಸಿ ನೀರು ಹಾಕಿ ಇಡ್ಸಿ ಆ ಬೇಳೆ ಕಾಳು ಅಕ್ಕಿ ಕಾಳನ್ನೆಲ್ಲ ಹಾಕ್ಸಿಬಿಟ್ಟು ಬೆಂಕಿ ಇಲ್ದನೆ ಅನ್ನ, ಪಾಯಸ, ಸಾರು ಮಾಡ್ತಾನೆ. ಎಲ್ಲರಿಗೂ ಯತೇಚ್ಛವಾಗಿ ಬಡ್ಸಿ ದಾಸೋಗ ಮಾಡಿ ಅಲ್ಲಿಂದ ಎಲ್ಲ ವಾಪಸ್ಸು ತಿರುಗಿದ್ರು. ಇವ್ರು ಗೊಲ್ಲರು ಪಾಪಣ್ಣ ಪಾಪಣ್ಣ ನೀನು ಒಂದ್ಸಾರಿ ನಮ್ಮ ಊರಿಗೆ ಬರ್ಬೇಕು ಅಂದ್ರು. ಆಯ್ತೇಳಪ್ಪ ಯಾವಾಗಾದ್ರೂ ಅವಕಾಶ ಇದ್ದಾಗ ಬರ್ತೀನಿ ಅಂತ ಹೇಳಿದ್ರು. ಸರಿ ಆತನ ಇಲ್ಲಿಗೆ ಬರೋವಷ್ಟತ್ತಿಗೆ ಓರ್ಗಲ್ಲುಪಟ್ಟಣಕ್ಕೆ ದುರ್ಗಿದು ಬಹಳ ಅವಾಂತರ ಆಗಿರುತ್ತೆ. ದುರ್ಗಿ ಇರ್ತಾಳೆ ಇಲ್ಲಿ. ಇಲ್ಲಿ ಸುಮಾರು ಹಳ್ಳಿಗಳನ್ನೆಲ್ಲ ಸರ್ವನಾಶ ಮಾಡಿರ್ತಾಳೆ. ಬಂದಾಗ ಬಾರಪ್ಪ ಪಾಪಣ್ಣ ನೀನು ಎಂಥಾ ಟೈಮಿಗೆ ಬಂದ್ಬಿಟ್ಟೆ. ಇಲ್ಲಿ ದುರ್ಗಿ ಎಲ್ಲ ಕಾಟ ಕೊಡ್ತಿದ್ದಾಳೆ. ನಮ್ಮನ್ನೆಲ್ಲ ಉಳಿಸಬೇಕು ಅಂತ ಓರ್ಗಲ್ಲು ಪಟ್ಟಣದ ಗೌಡ ಅವರೆಲ್ಲ ಸೇರ್ಕೋತಾರೆ. ಏ ನಡ್ರಿ ಅಲ್ಲಿಗೆ ಹೋಗೋಣ ಅಂತ ಅಲ್ಲಿಗೆ ಧ್ಯಾನಮಂದಿರ ಅಲ್ಲಿಗೆ ಬರ್ತಾರೆ. ಬಂದು ಕುಂತ್ಕೊಂಡು ಧ್ಯಾನ ಮಾಡಿದಾಗ ಸ್ವಾಮಿ ಅಪ್ಪಣೆ ಕೊಡ್ತಾನೆ. ಈ ದುರ್ಗಿಯನ್ನು ಮುಕ್ಕಣ್ಣನ ಕಠಾರಿಯಿಂದ ಸಂಹಾರ ಮಾಡಬೇಕು. ಹೆಣ್ಣು ಆಕೆನ್ನ ಸಂಹಾರ ಮಾಡಕೂಡದು ಕಾಲು ಕಟ್ಟು ಬೇಕಿದ್ರೆ. ಸ್ತ್ರೀ ಹತ್ಯೆ ಮಹಾ ಪಾಪ ಅಂತ.

ಸ್ವಾಮಿ ಪ್ರೇರಣೆ ಆಗುತ್ತೆ. ಆಗ್ಲೆನೇ ಎರಡು ಗದ್ದುಗೇನಾ ಸ್ಥಾಪನೆ ಮಾಡ್ತಾನೆ. ಕಟ್ಟಿಗಳಿದಾವೆ ಅಲ್ಲಿ ಈಗೆರಡು. ಒಂದು ಗೋಸೆ ರಂಗಸ್ವಾಮಿ. ಒಂದು ಕಂಪಳ ರಂಗಸ್ವಾಮಿ ಅಂತ. ಎರಡು ದೇವ್ರುಗಳ ಪ್ರತಿಷ್ಠಾಪನೆ ಮಾಡಿ ಜಪತಪ ಎಲ್ಲ ಮಾಡಿ. ಮತ್ತೆ ನಮ್ಮ ತಂದೆರತ್ರ ಹೋದ್ರೆ ಆ ಕಠಾರಿಗಳ ವಿಷಿಯ ಗೊತ್ತಾಗುತ್ತೆ ಅಂತಾನೆ. ಆಗ ಆತನಿಗೆ ತನ್ನ ದಿವ್ಯ ದೃಷ್ಟಿಯಿಂದ ತಂದೆ ಯಾವ ಕಡೆ ಇದಾನೆ ಅಂತ ಗೊತ್ತಾಗುತ್ತೆ. ಸಾಣಿಕೆರೆಗೆ ಹೋಗ್ತಾನೆ. ಹೋದಾಗ ಅವರಿಗೆ ಗೊತ್ತಿಲ್ಲವಲ್ಲ. ಹೇಳ್ಕೊಂತಾನೆ ಹೀಗೆ ನಾನು ಅಂತ. ಬಹಳ ಸಂತೋಷವಾಗುತ್ತೆ ತಂದೆ ತಾಯಿಗಳಿಗೆ. ಅತ್ತೆನೂ ಇನ್ನೂ ಇಲ್ಲೇ ಇದ್ದಾಳೆ. ಇನ್ನೂ ಹೋಗಿಲ್ಲ ಹಲ್ಲು ಕಳ್ಕೊಂಡು. ನೋಡಪ್ಪ ನಿಮ್ಮ ಅತ್ತೆ ಇಲ್ಲೇ ಇದ್ದಾಳೆ ಏನಿದು? ನಿನ್ನ ಸಾಕ್ಲಿಲ್ಲ ಸಲಹಲಿಲ್ಲ ನಾವು ಹೆದರಿಕೊಂಡು ಬಂದುಬಿಟ್ಟೆ ಹಿಂಗೆಲ್ಲ ಆಗಿಬಿಡ್ತು ಅಂತ ಹೇಳ್ತಾರೆ. ಏನೋ ಆಗಿಹೋಯ್ತು ಈಗ ನಮ್ಮತ್ತೆ ಸಮಸ್ಯೆನ್ನ ಬಗೆಹರಿಸ್ತೀನಿ.

ಈಗ ನನಗೆ ಆಪತ್ತು ಒದಗಿದೆ ಅದನ್ನು ಪರಿಹಾರ ಮಾಡಬೇಕು ಹಿಂಗೆ ತಿರುಪತಿಗೆ ಹೋಗಿ ಬಂದೆ ನಾನು ಅಂತ ಹೇಳಿದಾಗ ಬಹಳ ಸಂತೋಷಪಡ್ತಾರೆ. ಮುಕ್ಕಣ್ಣನ ಕಠಾರಿ ಅವರ್ತಾಗೇ ಇರುತ್ತೆ. ಸೂರ್ಯನಂದನ ಕಠಾರಿ. ಆ ಸೂರ್ಯನಂದನ ಕಠಾರಿನ್ನ ತಗೊಂಡು ಬರ್ತಾನಲ್ಲಿಗೆ. ಬಂದಾಗ ಕೆರೆ ಮೇಲೆ ಬಂದಾಗ ದುರ್ಗಿನ್ನ ಕರೀತಾನೆ. ಇನ್ನ ನೀ ಇಲ್ಲಿಂದ ಬಿಟ್ಟು ಹೋಗು ನಿನ್ನ ನಾನು ಕ್ಷಮಿಸ್ತೀನಿ ಅಂತ. ಆಕೆ ಬಹಳ ಭಯಂಕರವಾಗಿ ನೀನು ಹೇಳಿದ್ರೆ ನಾನು ಹೋಗೊಲ್ಲ ಅಂತಾಳೆ. ಆಗ ಇಬ್ಬರಿಗೂ ಘೋರ ಯುದ್ಧ ನಡೆದಾಗ ಕಾಲುಗಳನ್ನು ಕಟ್ಟು ಮಾಡಬಿಟ್ಟು ತೂಬಿಗೆ ಎಸಿತಾನೆ. ತೂಬಿನಲ್ಲಿ ಈಗ್ಲೂ ಕೂಡ ಆಕೆಯ ದುರ್ಗಿನ್ನು ಪೂಜೆ ಮಾಡ್ತಾರೆ. ಆಕೆ ಶಾಪ ಕೊಡ್ತಾಳೆ. ನನ್ನ ನೀನು ಇವತ್ತು ಕಾಲು ಕತ್ತರಿಸಿ ಕುಂಟಿ ಮಾಡಿದ್ದೀಯಾ ನಿನ್ನ ಅವಸಾನ ಕಾಲದಲ್ಲಿ ಇದೇ ರೀತಿ ನಿನ್ನ ಕಾಲು ಕಳ್ಕೊಂಡು ಸಾಯ್ತಿಯಾ ಅಂತ ಶಾಪ ಕೊಡ್ತಾಳೆ. ಆದ್ರೂ ಏನೂ ಅನಿಸಲ್ಲ ಆತನಿಗೆ ಕೊನೆಗೆ ಮತ್ತೆ ಅನುಭವಿಸ್ಲೇಬೇಕಲ್ಲ ಒಳ್ಳೇ ಕೆಲ್ಸ ಮಾಡ್ತಾ ಇದ್ದೀನಿ ಅನ್ಕೊಂಡು ಅಲ್ಲಿಂದ ಬಂದು ಈ ಗದ್ದಿಗೆ ಇದೆಯಲ್ಲ ಅಲ್ಲಿ ಆ ಸೂರ್ಯನಂದನ ಕಠಾರಿಯನ್ನು ಪ್ರತಿಷ್ಠಾಪನೆ ಮಾಡ್ತಾರೆ. ಅಲ್ಲಿ ಒಂದು ಕಠಾರಿದು ಮುಗಿತಲ್ಲಿಗೆ.

ಇದೆಲ್ಲ ಮುಗಿದ ಮೇಲೆ ತಿರುಗ ತಂದೆ ಹತ್ತ ಹೋಗ್ತಾರೆ. ಹೋಗೆ ಅತ್ತೆ ಸಮಸ್ಯೆ ಬಗೆಹರಿಸಬೇಕಲ್ಲ. ಅತ್ತೇನ್ನ ಕರ್ಕೊಂಡು ಸೀದಾ ಶಿರುವಾಳದ ಕಾವಲಿಗೆ ಹೋಗ್ತಾನೆ. ಸರಿ. ಅಲ್ಲಿ ಅವನು ಸಾಧಾರಣನಲ್ಲ ಕಾಮಗೇತ್ಲುಕ್ಯಾಸಯ್ಯ ಅಂದ್ರೆ ಬಹಳ ವಾಗ್ವಿದ್ಧಗಳು ನಡೀತವೆ. ಅಲ್ಲಿ ಹೊಡುಸಕೇ ಪ್ರಯತ್ನ ಮಾಡ್ತಾನೆ. ಕಟ್ಟಾಕುಸ್ತಾನೆ. ಈತನ ಕೈಯಲ್ಲಿ ಅದಿತ್ತಲ್ಲ ಬೆತ್ತ ಇದ್ನೆಲ್ಲಾ ವಿಮೋಚನೆ ಮಾಡ್ತಿರುತ್ತೆ. ಕೊನೆಗೆ ಅದ್ರಲ್ಲಿ ಅವನು ಅವನಿಗೆ ಚೆನ್ನಾಗಿ ಪೂಜೆನೂ ಮಾಡಿಬಿಡ್ತಾನೆ. ಮಾಡಿಬಿಟ್ಟು ಚೆನ್ನಾಗಿ ಇದುನ್ನ ಮಾಡ್ಬೇಕಾದ್ರೆ ಅತ್ತೇನೇ ಬಂದು ಅಳಿಯನ್ನ ಬಿಟ್ಟುಬಿಡಪ್ಪ ಅವನಿಗೆ. ಪತಿಬಿಕ್ಷೆ ನೀಡು ಏನೋ ಗೊತ್ತಿಲ್ದೇ ಮಾಡಿದ್ದಾನೆ. ಅವನಿಗೆ ಅರಿವು ಬಂದನ ಸ್ವಲ್ಪ ಕಡಿಮೆಯಾಗುತ್ತೆ. ಆಗ ತಪ್ಪಾಯಿತು ಅಂತ ಒಪ್ಕೋತಾನೆ. ಒಪ್ಕೊಂಡು ಬಿಟ್ಟು ಮತ್ತೆ ನನಗೆ ಏನನ್ನು ಮಾಡಪ್ಪ ಪಾಪಣ್ಣ ಅಂದಾಗ, ಅಲ್ಲಿ ಅವರ ತಂದೆ ದನಗಳನ್ನು ಹೊತ್ಕೊಂಡು ಹೋಗಿರ್ತಾನಲ್ಲ ಅದ್ರಲ್ಲಿ ಒಂದೈದಾರು ಹಸುಗಳನ್ನು ಕೊಟ್ಟು ನೀನು ಕಾಮಗೇತ್ಲು ಇದ್ರಲ್ಲಿ ಪೂಜೆ ಮಾಡಿಕೊಂಡಿರು ಅಂತ ಹೇಳಿ ಕಾಟಪ್ಪನಿಗೆ ಕಾಟಪ್ಪ ಅಂತಿದೆ ಆ ದೇವ್ರಿಗೆ ಆರು ಹಸುಗಳನ್ನು ಕೊಟ್ಟು ನಿನ್ನ ಮಕ್ಕಳು ನನ್ನ ಗದ್ದುಗೆ ಪೂಜೆ ಮಾಡ್ಲಿ ಅಂತಂದು ‘ಇವತ್ತು ಆ ಸಂತತೀನೇ ಈತನ ಗದ್ದುಗೆ ಪೂಜೆ ಮಾಡ್ತಿದ್ದಾರೆ. ಅವ್ರೆ ಕಾಮಗೆತ್ಲರು.

ಅಲ್ಲಿಂದ ಅತ್ತೆನ್ನೆಲ್ಲ ವ್ಯವಸ್ಥೆ ಮಾಡಿಬಿಟ್ಟು ಇನ್ನ ಮುಕ್ಕಣ್ಣನ್ನು ಕಠಾರಿ ಎಲ್ಲಿದೆ ಅಂತ ತಂದೆನ್ನ ಕೇಳಿರ್ತಾನೆ. ನಿಮ್ಮ ದೊಡ್ಡಪ್ಪನತ್ರಯಿದೆಯಪ್ಪ ಅದು. ಸೂರ್ಯಎರಗಟ್ಟಿ ನಾಯಕನತ್ರ. ಗೋಣೂರಿಗೆ ಅಲ್ಲಿಗೆ ಹೋಗಬೇಕು. ಸರಿ ಅಲ್ಲಿಗೆ ಹೋಗ್ತಾನೆ. ಅಲ್ಲಿ ದೊರೆ ಕೊಂಡಮರಿರಾಜ. ಆ ದೊರೆ ಹತ್ರ ಈತ ದಳಪತಿ ಅಲ್ಲಿ ಹೋಗಿ ಎಲ್ಲಾ ವೃತ್ತಾಂತ ಹೇಳ್ತಾನೆ. ಹಿಂಗಪ್ಪ ನಾನು ಮಗ ಅಂತ. ಆತನಿಗೆ ಮದುವೆಯಾಗಿರೊಲ್ಲ. ಸೂರ್ಯಎರಗಟ್ಟನಾಯಕ ಬಹಳ ಸಂತೋಷಪಡ್ತಾನೆ. ಸಂತೋಷಪಟ್ಟು ನನ್ನ ಕಡೆ ಇದೆಯಪ್ಪ ಮುಕ್ಕಣ್ಣನ ಕಠಾರಿ ಅಂತ ಹೇಳ್ತಾನೆ. ಆತ ಅಲ್ಲಿದ್ದಂತ ಸಂದರ್ಭದಲ್ಲಿ ಆತನಿಗೆ ಒಂದು ಕನಸು ಬೀಳ್ತಾಎ. ಕಂಪಳ ದೇವರ ಹಟ್ಟಿಯಲ್ಲಿ ದೇವ್ರು ಕಳ್ಳತನ ಆಗಿರುತ್ತೆ. ಕಳ್ಳರು ಹೊತ್ಕೊಂಡು ಹೋಗಿರ್ತಾರೆ. ಆಗ ಹೇಳ್ತಾನೆ. ಅವರ ದೊಡ್ಡಪ್ಪನಿಗೆ ದೊಡ್ಡಪ್ಪ ನಾನು ಇನ್ನೊಂದ್ಸಾರಿ ಆರಾಮಿದ್ದಾಗ ಬರ್ತೀನಿ ಹಿಂಗೆ ಅನಾಹುತ ಆಗಿಬಿಟ್ಟಿದೆ ಅಲ್ಲಿ ಹೋಗಿ ಬಂದೋಬಸ್ತು ಮಾಡಬೇಕು ನಾನು ಅಂತ ನನ್ನಿವಾಳಕ್ಕೆ ಬರ್ತಾನೆ.

ನನ್ನಿವಾಳಕ್ಕೆ ಬಂದು ಅವರ ಚಿಕ್ಕಪ್ಪ ಚಿನ್ನಪಾಲನಾಯಕನ್ನ ಅವರ ತಂದೆ ಹತ್ರ ಕಳ್ಸಿ ಎಲ್ಲರನ್ನೂ ಕರೆಸ್ತಾರೆ. ಎಲ್ಲರನ್ನೂ ಕರ್ಸಿ ಆ ದೇವಸ್ಥಾನಕ್ಕೆ ಏನು ಬಿಗಿ ಬಂದೋಬಸ್ತು ಮಾಡಬೇಕೋ ಅದನ್ನೆಲ್ಲಾ ಮಾಡ್ತಾರೆ. ಎಲ್ಲಾ ಕುಲದಿಂದ ಒಬ್ಬೊಬ್ಬರನ್ನು ತಗೋಂತಾರೆ. ನಮ್ಮ ಬೆಡಗಿನಲ್ಲಿ ಪಡ್ಲೋರು, ಕಾಕನೊಡು, ಬೋಗನೂಡು, ಹೀಗೆ ಎಲ್ಲಾ ಬೆಡಗುಗಳಿಂದ ಒಬ್ಬೊಬ್ಬರನ್ನು ತಗೋತಾನೆ ಈವನ್ ಎಸ್ಸೀಗಳ್ನೂ ಕೂಡ ತಗೋತಾಅನೆ. ಅವರನ್ನೆಲ್ಲ ಕರ್ಕೊಂಡು ಅಲ್ಲಿಗೆ ಹೋಗ್ತಾರೆ. ಯಾಕಂದ್ರೆ ಆ ಮಠನ್ನ ನೋಡಿಕೊಳ್ಳರು ಇರ್ಲಿಲ್ಲ ಆವತ್ತು. ಒಬ್ಬೊಬ್ಬರಿಗೆ ಒಂದೊಂದು ಅಧಿಕಾರ ಕೊಟ್ಟುಬಿಟ್ಟು ಅವರನ್ನೆಲ್ಲಾ ಕರ್ಕೊಂಡು ಅಲ್ಲಿಗೆ ಹೋಗ್ತಾನೆ. ಅಲ್ಲಿಗೆ ಹೋದಾಗ ಪೂಜಾರಿಗಳು ಹಿಂಗೆ ಕಳ್ಳತನ ಆಗಿಬಿಟ್ಟಿದೆ ದೇವರ ಒಡವೆಗಳು ಅಂತ ಹೇಳ್ತಾರೆ.

ಆಗ ನಾಗಮುರಿ ಬೆತ್ತಕ್ಕೆ ಪೂಜೆ ಮಾಡಿ ಮುಕ್ಕೊಂಡಾಗ ಅದು ಹೋಗಿಬಿಟ್ಟು ಎಲ್ಲೋ ಇದ್ದ ಕಳ್ಳರನ್ನು ಅವರಿಗೆಲ್ಲಾ ಪೂಜೆ ಮಾಡಿ ಆ ವಡಿವೆಲ್ಲಾ ತಗೊಂಡು ಬರ್ತಾರೆ. ಬಂದಾಗ ಎಲ್ಲರೂ ಆಶ್ವರ್ಯಪಡ್ತಾರೆ. ಈತನ್ನ ಕೊಂಡಾಡುತ್ತಾರೆ ಪಾಪನಾಯಕನ್ನು. ಆಗ ಆ ಒಡವೆನೆಲ್ಲ ದೇವರಿಗೆ ಇಡ್ಸಿ ಪೂಜೆ ಮಾಡ್ಸಿ ನಮ್ಮರಿಗೆಲ್ಲಾ ಹೇಳ್ತಾನೆ. ನೋಡಿವತ್ತು ನಮ್ಮ ದೇವರ ಒಡಿವೆನ್ನ ನಮ್ಮ ನಾಗೇಂದ್ರ ಸರ್ಪ ತಂದುಕೊಟ್ಟಿದೆ. ಅದಕ್ಕೆ ಹನ್ನೆರಡ ವರ್ಷಕ್ಕೊಂದು ಸಾರಿ ನಾವು ಪೆಡಗಟ್ಟು ಪಂಡಗ ಹಾವಿನ ಹಬ್ಬ ಆವತ್ತು ಆಚರಿಸಬೇಕು. ನಾವು ಕೃತಜ್ಞರಾಗಬೇಕು ಅಂತಂದು ಹೇಳಿ ಆತ ಕಂಪಳ ರಂಗಸ್ವಾಮಿ ದೇವಸ್ಥಾನದ ಮುಂದುಗಡೆ ಆ ಮುಕ್ಕಣ್ಣನ್ನು ಕಠಾರಿ ಪ್ರತಿಷ್ಠಾಪನೆ ಮಾಡ್ತಾನೆ. ಈಗ ಅದು ಸೂರ್ಯಪಾಪನಾಯಕನ ಗದ್ದುಗೆ ಅಂತ ಅಲ್ಲಿ ದೇವಸ್ಥಾನ ಕಟ್ಸಿದ್ದಾರೆ. ಇಷ್ಟೆಲ್ಲಾ ಅಲ್ಲಿ ಇದು ಮಾಡಿಬಿಟ್ಟು ಬಂದೋಬಸ್ತು ಮಾಡಿಬಿಟ್ಟು ಎಲ್ಲರೂ ಕೂಡ ಈ ಪಾಪನಾಯಕನ ಪವಾಡಕ್ಕೆ ಬಹಳ ಈತ ಪವಾಡಪುರುಷ ದೈವಭಕ್ತ ಅಂತ ಪ್ರಚಾರ ಆಗಿಬಿಡುತ್ತೆ ಸುತ್ತ.

ಸರಿ ಅಲ್ಲಿ ಎರಡು ಕಠಾರಿಗಳಾದವು. ಇನ್ನೊಂದು ಕಠಾರಿಯಿದೆ ಸಿಡಿಲು ಮಿಂಚಿನ ಕಠಾರಿ. ಅದರ ವೃತ್ತಾಂತ ತಿಳ್ಕೋಳಕ್ಕೆ ಪುನಃ ಅಲ್ಲಿಗೆ ಬರ್ತಾನೆ ಗೋಣೂರಿಗೆ. ಗೋಣೂರು ಬಂದಾಗ ಏನಾಗುತ್ತೆ ಅವರ ದೊಡ್ಡಪ್ಪರ ಮನೆಗೆ ಇರ್ತಾನೆ. ಅವ್ರು ದೊಡ್ಡಪ್ಪನ ಕೆಲ್ಸ ಕಂದಾಯ ವಸೂಲು ಮಾಡ್ತಕ್ಕೊಂತದ್ದು ಮತ್ತದನ್ನು ಜಮ ಮಾಡತಕ್ಕಂತದ್ದು. ಇವನು ಒಂದಿವಸ ನಾನೇ ಹೋಗ್ತಿನಿ ದೊಡ್ಡಪ್ಪ ಎಲ್ಲ ಕಲೆಕ್ಟ್ ಮಾಡಿಕೊಂಡು ಬರ್ತೀನಿ ಅಂತಾನೆ. ಇವನು ಹೋಗಿಬಿಟ್ಟು ಚಾವಡಿಯಲ್ಲಿ ಸುಮ್ನೆ ಮಲಗಿಬಿಡ್ತಾನೆ. ಅವತ್ತಿನ ಕಂದಾಯ ಏನು ಬಂದೇ ಇಲ್ಲ ಯಾಕೆ ಅಂತ ಕೇಳಿದಾಗ ಏ ಇಲ್ಲಾ ನನ್ನ ಮಗನ್ನ ಕಳ್ಸಿದ್ದೆ ಅವನು ಇದುನ್ನ ಮಾಡ್ತಾನೆ ಅಂತ ಹೇಳ್ತಾನೆ. ಬಂದು ಸೈನಿಕರೆಲ್ಲಾ ಕರೀತಾರೆ ಆತನ್ನ ಏ ನಾನು ಬರೊಲ್ಲ ಹೋಗು ಅಂತಾನೆ. ನೀವು ಕಂದಾಯ ತಲೆಗಂದಾಯ ಕಲೆಕ್ಟ್ ಮಾಡ್ತೀರೋದು ಒಳ್ಳೆಯದಲ್ಲ ಜನರಿಗೆ ತೊಂದ್ರೆ ಕೊಡ್ತಿದ್ದೀರಿ ನಾನು ಕಲೆಕ್ಟ್ ಮಾಡೊಲ್ಲ ನೀವು ಮಾಡ್ತಿರೋದು ತಪ್ಪು ಅಂತ ಹೇಳ್ತಾನೆ.

ಕೊನೆಗೆ ಯಾರ್ಯಾರು ಬಂದ್ರೂ ಬರೊಲ್ಲ ಆಗ ದೊರೆನೇ ಬರ್ತಾನೆ. ದೊರೆಗೂ ಈತನಿಗೂ ಬಹಳ ವಾಗ್ವಾದ ನಡೆಯುತ್ತೆ. ನೀವು ಮಾಡ್ತಿರೋದು ಸರಿಯಲ್ಲ ಇದು ಬಡಬಗ್ಗರಿಗೆಲ್ಲ ತೊಂದ್ರೆ ಮಾಡ್ತಿದಿ ಅಂತಾನೆ. ಈತನಲ್ಲಿ ಬಂದಿಸೋಕೋಗ್ತಾರೆ ಆಗ ಏನು ನಡೆಯೋದಿಲ್ಲ ಯಾಕಂದ್ರೆ ಕೈಯಲ್ಲಿ ಇದಿರುತ್ತಲ್ಲ ಎಲ್ಲ ಪವಾಡ ತೋರಿಸ್ತಾನೆ. ತೋರಿಸಿಬಿಟ್ಟಾಗ ಕೊಂಡಮರಿರಾಜ ಹೆದರಿಕೊಂಡುಬಿಟ್ಟು ಈತ ಬಹಳ ದೈವಭಕ್ತ ಅಂದುಕೊಂಡು ನನ್ನ ತಪ್ಪನ್ನು ನಾನು ತಿದ್ದಿಕೊಳ್ತೀನಪ್ಪ ನೀನು ಬಾ ನಿನ್ನ ಪೂಜೆ ಮಾಡ್ತೀನಿ ಅಂತ ಕರ್ಕೊಂಡು ಹೋಗ್ತಾನೆ.

ಅವರ ದೊಡ್ಡಪ್ಪ ಬರ್ತಾನಷ್ಟೊತ್ತಿಗೆ ಬಹಳ ಸಂತೋಷಪಡ್ತಾನೆ. ರಾಜ ಮರ್ಯಾದೆಯಿಂದ ಈತನ್ನ ಕರ್ಕೊಂಡು ಹೋಗಿ ಪಾದಪೂಜೆ ಮಾಡ್ತಾರಲ್ಲಿ. ಮಾಡಿದಾಗ ಹೇಳ್ತಾನೆ. ನಿಮಗೆ ಏನು ಬೇಕು. ಕೇಳ್ರಿ ಸ್ವಾಮಿ ಕೊಡ್ತೀನಿ ಅಂತ. ನಂಗೇನು ಬೇಡಪ್ಪ ನಿನ್ನ ಕಂಚಿನ ನೆಲಮಳಿಗೆಯಲ್ಲಿ ಕುದುರೆಯಿದೆ ಅದನ್ನು ತಗೊಂಡು ಬಂದು ಕೊಡು ಅಂತ ಕೇಳ್ತಾನೆ. ನೆಲಮಳಿಗೆ ಇರೋದು ಅವನಿಗೆ ಗೊತ್ತಿರೊದಿಲ್ಲ. ನೀವು ಅಗೀರಿ ಅಲ್ಲಿ ಕುದುರೆಯಿದೆ ನಿಮ್ಮಮ ಪೂರ್ವಜರು ಅಲ್ಲಿ ಇದುನ್ನ ಮಾಡಿದ್ರು ಅಂತಾನೆ. ಅಲ್ಲಿ ನೆಲಮಾಳಿಗೆಯನ್ನು ಅಗೆದಾಗ ಅಲ್ಲಿ ಕುದುರೆ ಇರುತ್ತೆ. ಅದನ್ನು ತಗೊಂಡು ಬಂದು ಆತನಿಗೆ ಕೊಡ್ತಾರೆ. ಆಮೇಲೆ ಈ ಸಿಡಿಲು ಮಿಂಚಿನ ಕಠಾರಿ ಎಲ್ಲಿದೆ ಏನು ಅಂತಂದು ಕೇಳಿದಾಗ, ಬಗ್ಗುಲು ದೊರೆ ಅಂತ ಇರ್ತಾನೆ. ಬಗ್ಗುಲೋರು ಅಂತಂದ್ರೆ ಒಂದು ಬೆಡಗು, ಬಗ್ಗುಲು ಅಂದ್ರೆ ಇದ್ದಿಲು ಅಂತ ನಮ್ಮಲ್ಲಿ ಬಗ್ಗುಲು ಅನ್ನೊದು ಒಂದು ಬೆಡಗಿದೆ. ಅವರೇನು ಮಾಡ್ತಾರೆ ಈಗ ಅಂತಂದ್ರೆ ಈ ಅಜ್ಜನ್ನ ಗುಡಿ ಮುಂದೆ ದೂಪ ಹಾಕ್ಲಿಕ್ಕೆ ಕೆಂಡ ಮಾಡ್ತಕ್ಕಂತವರು. ಅವರನ್ನ ಬಗ್ಗುಲರು ಅಂತ ಕರೀತಾರೆ. ನಮ್ಮ ಜಗಲೂರು ನಾಯಕ ಅದ್ರಲ್ಲೇ ಬರ್ತಾರೆ. ಬಗ್ಗುಲು ದೊರೆ ಅವನತ್ರ ಇರ್ತಕ್ಕಂತ ಸಿಡಿಲು ಮಿಂಚಿನ ಕಠಾರಿನ ಜಗಲೂರು ರಾಜ ಜಗಪತಿರಾಜ ಅಪಹರಿಸ್ಕೊಂಡು ಹೋಗ್ತಿರ್ತಾನೆ. ಅದರ ಜೊತೆಗೆ ಕೊಂಡಮರಿ ರಾಜನ ತಂಗಿನ್ನೂ ಕೂಡ ಅಪಹರಿಸಿಕೊಂಡು ಹೋಗ್ತಿರ್ತಾನೆ. ಬಹಳ ದುಷ್ಟ ಅವನು ಜಗಲೂರ ದೊರೆ. ಹಿಂಗೆಲ್ಲಾ ಆಗಿದೆ ಅಂತ ಹೇಳಿದಾಗ ನಾನು ಆ ಕಠಾರಿಯನ್ನು ಪಡೀಬೇಕು. ನಾನು ಜಗಲೂರಿಗೆ ಹೋಗ್ತೀನಿ ಅಂತ ಹೇಳಿದಾಗ ಇವನಿಗೆ ಬಹಳ ಸಂತೋಷವಾಗುತ್ತೆ ಯಾಕೆಂದ್ರೆ ತನ್ನ ತಂಗಿನ್ನ ಹೊತ್ಕೊಂಡು ಹೋಗಿದ್ದಾನಲ್ಲ ಅವನಿಗೆ ಸರಿಯಾಗಿ ಶಾಸ್ತಿ ಆಗುತ್ತೆ ಅಂತ

ನೀವು ಎಷ್ಟು ಜನ ಬೇಕಂತಿರೋ ಅಷ್ಟು ಜನ ಸೈನಿಕರನ್ನು ಕಳಿಸ್ತೀನಿ. ಅವನ ಸೊಕ್ಕು ಮುರೀರಿ ಅಂತಾನೆ. ನಂಗ್ಯಾರು ಬ್ಯಾಡ ಒಂದೈದಾರು ಜನ ಜಟ್ಟಿಗಳನ್ನ ಕೊಡು ಸಾಕು ನಾನು ಹೋಗ್ತೀನಿ ಅಂತ ಹೇಳ್ತಾನೆ. ಬಹಳ ರಾಜಮರ್ಯಾದೆಯಿಂದ ಆತನ್ನ ಬೀಳ್ಕೊಡ್ತಾರೆ. ಅಲ್ಲಿಂದ ಜಗಳೂರಿಗೆ ಹೋಗ್ತಾರೆ. ಜಗಳೂರಿಗೆ ಹೋದ ಮೇಲೆ ಅಲ್ಲಿ ಹೊರಗಡೆ ಬಂದು ಬಿಡಾರ ಹಾಕ್ಕೊಂಡಿರ್ತಾರೆ. ಜಟ್ಟಿಗಳು ಇವರೆಲ್ಲಾ ಆ ದೊರೆಯ ಏನಂತ ತಿಳ್ಕೊಬೇಕಲ್ಲ. ಸರಿ ಈತ ಜಗಳೂರಲ್ಲಿ ಆಡ್ಡ್ಯಾಡತಿರಬೇಕಾದ್ರೆ ಈತನ ಪವಾಡಕ್ಕೆ ಎಲ್ಲ ಜನ ಮರುಳಾಗ್ತಾರೆ ಜನ ಹಿಂಬಾಲಕರಾಗ್ತಾರೆ.

ಅವರ ಸಣ್ಣಪುಟ್ಟ ಅವಶ್ಯಕತೆಗಳೇನಿವೆಯಲ್ಲ ಅವುಗಳನ್ನು ಪೂರೈಸ್ತಾನೆ ಈತ. ಆಗ ಬಹಳ ಯೋಗಿಗಳು ಬಂದು ಬಂದಿದ್ದಾರೆ ಏನು ಬೇಕಂದ್ರೂ ಸಹಾಯ ಆಗುತ್ತೆ ಅಂತ ಪ್ರಚಾರ ಆಗಿಬಿಡುತ್ತೆ. ಪ್ರಚಾರ ಆಗಿಬಿಟ್ಟು ರಾಜ ಎಂತವನು ಎಂದ್ರೆ ಅವನು ಬಹಳ ದುರ್ಮಾರ್ಗ ಜನಗಳಿಗೆ ಬಹಳ ತೊಂದ್ರೆ ಕೊಡ್ತಾ ಇರ್ತಾನೆ. ಹೆಣ್ಣಿನ ವಿಷಯದಲ್ಲೂ ಅವನು ಬಹಳ ಸುಮಾರು ಲಂಪಟ, ಅವೆಲ್ಲ ಬಂದು ಹೇಳ್ತಾರೆ. ಈತನಿಗೆ ಸರಿ ಏನಾಯ್ತು ರಾಜನಿಗೆ ಯಾರೋ ಯೋಗಿಗಳು ಬಂದಿದ್ದಾನೆ ಜನಗಳೆಲ್ಲ ಅವನ ಕಡೆ ಇದ್ದಾರೆ ಎಲ್ಲಿ ಜನಗಳನ್ನು ನನ್ನ ಮೇಲೆ ಎತ್ತಿಕಟ್ತಾನೋ ಅಂತಂದು ಹಿಡ್ಕೊಂಡು ಬನ್ನಿ ಅಂತ ಹೇಳ್ತಾನೆ.

02_84_MDK-KUH

ಹಿಡ್ಕೊಂಡು ಬರ್ರಿ‍ ಅಂತಂದು ಹೇಳಿದಾಗ ಈತ ಹೋಗ್ತಾನೆ. ಏ ಯಾರಯ್ಯಾ ನೀನು ನಮ್ಮ ರಾಜ್ಯದಲ್ಲಿ ಬಂದು ಜನಗಳಿಗೆಲ್ಲ ಮೋಸ ಮಾಡ್ತಿದ್ದೀಯ ಅಂತಾನೆ. ಆಗ ಮೋಸ ಮಾಡೋದು ನಾನಲ್ಲ ನೀನು ಎಂದು ಅವನು ಮಾಡಿರ್ತಕ್ಕಂತದನ್ನೆಲ್ಲ ಎತ್ತಿ ಹಿಡಿತಾನೆ. ಎತ್ತಿಡ್ಕೊಂಡು ಅಲ್ಲಿ ಕೊನೆಗಿಲ್ಲಿ ಈತನ್ನು ಬಂದುಸ್ತಾರಲ್ಲಿ ಬಂದಿಸಿದ್ರೂ ಕೂಡ ಈತನ್ನೇನು ಅಲ್ಲಿ ಹಿಡ್ಕೊಳ್ಳಲಿಕ್ಕಾಗೊಲ್ಲ ಆ ನಾಗಮುರಿ ಬೆತ್ತ ಇರುತ್ತಲ್ಲ ಬಹಳ ಬಚಾವಾಗಿಬಿಡ್ತಾನೆ. ಕೊನೆಗಲ್ಲಿ ಬುದ್ಧಿವಂತ ಮಂತ್ರಿ ಹೇಳ್ತಾನೆ ಸ್ವಾಮಿ ಇವರತ್ರ ವಿರೋಧ ಕಟ್ಟಿಕೊಳ್ಳೋದಕ್ಕಿಂತ ಬುದ್ಧಿವಂತಿಕೆ ಮಾಡಿಬಿಟ್ಟು ಬೇರೆ ಉಪಾಯದಿಂದ ಇವನ್ನ ಮುಗಿಸಿಬಿಡೋಣ. ಈಗ ಸದ್ಯಕ್ಕೆ ನೀವು ರಾಜಿಯಾಗ್ರಿ ಇಲ್ಲಂದ್ರೆ ಜನಗಳ ಅಭಿಪ್ರಾಯ ಅವನ ಮೇಲೆ ಚೆನ್ನಾಗಿರೋದ್ರಿಂದ ಜನರೆಲ್ಲ ನಿಮ್ಮ ವಿರುದ್ಧ ತಿರುಗಿ ಬೀಳ್ತಾರೆ ಬಹಳ ಕಷ್ಟವಾಗುತ್ತೆ ಬುದ್ಧಿವಂತಿಕೆ ಮಾಡೋಣ ಈಗ ಸುಮ್ಮನಾಗಿಬಿಡ್ರಿ ಅಂತಂದು ಹೇಳ್ತಾನೆ.

ಆಯಿತಪ್ಪ ನಂದು ತಪ್ಪಾಯಿತು ಈಗ ನಾವು ನೀವು ಅನುಸರಿಸಿಕೊಂಡು ಹೋಗೋಣ ಅಂತಂದು ರಾಜಿಯಾಗ್ತಾರೆ. ರಾಜಿಯಾಗಿ ಇವ್ರು ಬಂದು ಇವರ ಪಾಡಿಗಿವ್ರು ಇರ್ತಾರೆ ಎಲ್ಲ ಗಮನಿಸ್ತಿರ್ತಾರೆ. ಅಷ್ಟೊತ್ತಿಗೆ ಇವರೇನು ಮಾಡ್ತಾರೆ ಒಂದು ಪ್ಲಾನ್ ಮಾಡ್ತಾರೆ. ದಿವ್ಸ ಗೊಲ್ಲರು ಹಾಲು ತರ್ತಾ ಇರ್ತಾರೆ ಆ ಸ್ಥಾನಕ್ಕೆ. ಆ ಹಾಲಿನಲ್ಲಿ ವಿಷ ಬೆರ್ಸಿಬಿಟ್ಟು ಇದನ್ನು ಅಲ್ಲಿ ಪಾಪನಾಯಕ ಮತ್ತು ಅವರ ಹಿಂಬಾಲಕರಿಗೆಲ್ಲ ಕುಡ್ಸಿಬಿಡ್ರಿ ಅಂತ ಹೇಳ್ತಾನೆ. ಸರಿ ಆಗ ಗೊಲ್ಲರು ಸ್ವಾಮಿ ಸಂಜೆ ನೀವು ಎಲ್ಲ ರಾಜಿ ಆದ್ರಲ್ಲ ಅದರ ಸ್ನೇಹದ ಕಾಣಿಕೆಯಾಗಿ ಹಾಲು ಕಳ್ಸಿದ್ದಾರೆ ನೀವು ಕುಡೀರಿ ಅಂತಂದು ಹೇಳ್ತಾರೆ. ಈತನಿಗೆ ಗೊತ್ತಾಗುತ್ತೆ ಇದ್ರಲ್ಲೇನೋ ಮೋಸಯಿದೆ ಅಂತ. ಈ ಹಾಲನ್ನು ಪೂರ್ತಿ ಆತನೇ ಕುಡಿದುಬಿಡ್ತಾನೆ. ಆ ಪಶ್ಚಾತಾಪಕ್ಕೆ ಗೊಲ್ಲರು ಪ್ರತಿ ಸೋಮವಾರ ಅಲ್ಲಿಗೆ ಬಂದು ಆ ಸಮಾದಿಯಿದೆಯಲ್ಲ ಈಗ್ಲೂ ಜಗಳೂರತ್ರ ಹಾಲನ್ನ ಅರ್ಪಿಸಿ ಹೋಗ್ತಾರೆ ಅಂತ ಪ್ರತೀತಿಯಿದೆ.

ಇದು ರಾಜನಿಗೆ ಗೊತ್ತಾಗಿಬಿಡುತ್ತೆ. ವಿಷ ಕೊಟ್ರೂ ಕೂಡ ಈತ ಸಾಯಲಿಲ್ಲವಲ್ಲ. ಹಾಗಾದ್ರೆ ಹೆಂಗ ಮಾಡಬೇಕು ಪ್ಲಾನು. ರಾತ್ರಿ ಹೊತ್ತು ಮಲಗಿರ್ತಾನಲ್ಲ ಆಗ ಹೋಗಿಬಿಟ್ಟು ಅಟ್ಯಾಕು ಮಾಡಿಬಿಟ್ಟು ಅವರನ್ನು ಮುಗಿಸಿಬಿಡಬೇಕು ಅಂತ ಯೋಚ್ನೆ ಮಾಡ್ತಾರೆ. ರಾತ್ರೋರಾತ್ರಿ ಹೋಗಿ ಮಲಗಿದವರನ್ನೆಲ್ಲ ಬಂದಿಸ್ಕೊಂಡು ಎಳ್ಕೊಂಡು ಹೋಗ್ತಾ ಇರ್ತಾರೆ. ಆಗ ಘೋರ ಯುದ್ಧ ಆಗುತ್ತೆ. ಸೈನಿಕರಿಗೂ, ಪಾಪನಾಯಕನಿಗೂ, ಈ ಜಟ್ಟಿಗಳಿಗೂ. ಇವ್ರು ಪ್ರಾರಂಭದಲ್ಲಿ ಜಟ್ಟಿಗಳು ಚೆನ್ನಾಗಿ ಕಾದಾಡ್ತಾರೆ. ಕ್ರಮೇಣ ಒಬ್ಬೊಬ್ರೆ ಸತ್ತು ಹೋಗಿಬಿಡ್ತಾರೆ. ಈತನ್ನ ಎಳ್ಕೊಂಡು ಹೋಗ್ತಾ ಇರ್ತಾರೆ. ಕೊನೆಗೆ ಈತನಿಗೆ ಬಹಳ ಸಿಟ್ಟು ಬಂದುಬಿಡುತ್ತೆ. ಮನುಷ್ಯತ್ವನ್ನೇ ಮರೆತುಬಿಡ್ತಾನೆ ಈತ. ಆ ಸಿಡಿಲುಮಿಂಚಿನ ಕಠಾರಿಯನ್ನು ಜ್ಞಾಪಿಸಿಕೊಳ್ತಾನೆ. ಆಗ ಆತನ ಕೈಯಲ್ಲಿ ಪ್ರಾಪ್ತಿಯಾಗಿಬಿಡುತ್ತೆ. ಸಿಡಿಲು ಮಿಂಚಿನ ಕಠಾರಿ ಪ್ರಾಪ್ತವಾದಾಗ ಆತನ್ನ ಭಕ್ತರು ಅನ್ನಲ್ಲ ಶತ್ರುಗಳು ಅನ್ನಲ್ಲ ಮೈಮೇಲೆ ನಿಟ್ಟಿಲ್ದೇ ರುಂಡಗಳನ್ನು ಚೆಂಡಾಡಿ ಬಿಡ್ತಾನೆ.

ನಿಟ್ಟಿಲ್ಲದಲೇ ಅಲ್ಲಿಗೆ ಮರೆತುಬಿಟ್ರಲ್ಲ ಅವ್ರು. ಉದ್ದೇಶ ಮರೆತುಬಿಟ್ರಲ್ಲ ಸ್ವಾಮಿ. ಎಲ್ಲರೂ ಗೋಸೆ ರಂಗಸ್ವಾಮಿನ್ನ ಕಂಪಳ ರಂಗಸ್ವಾಮಿನ್ನ ಸಾವಿರಾರು ಜನಗಳು ನೆನೆಸ್ತಾ ಇದ್ದಾರೆ. ಶಾಂತಿಗೋಸ್ಕರ. ಅಷ್ಟೊತ್ತಿಗೆ ಶಾಪಯಿತ್ತಲ್ಲ ದುರ್ಗಿದು. ಸ್ವಾಮಿ ಪ್ರತ್ಯಕ್ಷನಾಗಿ ವೆಂಕಟೇಶ್ವರಸ್ವಾಮೀನೇ ಸ್ತ್ರೀ ರೂಪ ತಾಳಿದಾನೆ. ಸ್ತ್ರೀ ರೂಪ ತಾಳಿ ಮುಂದುಗಡೆ ಅವನು ಹೋರಾಟ ಮಾಡ್ತಿರ್ತಾನೆ. ಹಿಂದುಗಡೆಯಿಂದ ಎರಡು ಕಾಲಗೂ ಎರಡು ಬಾಣಗಳಿಂದ ಹೊಡೀತಾನೆ ಸ್ವಾಮಿ. ಕಾಲುಗಳು ತುಂಡಾಗ್ತವೆ ಹಾಂಗೆ ಕುಸೆ ಬೀಳ್ತಾರಲ್ಲಿ ಹಿಂದುಗಡೆ ತಿರುಗಿ ನೋಡಿದಾಗ ಹೆಣ್ಣು ನೀನು ಹೆಣ್ಣು ಅಂತ ಬಿಟ್ಟಿದಿನಿ ಹೋಗು ಅಂತ ಹೇಳ್ತಾನೆ. ಆಗ ಮಾತಾಡಿಸ್ತಾನೆ.

ಪಾಪನಾಯಕನ ಕಾಲುಗಳನ್ನ ಶ್ರೀ ವೆಂಕಟೇಶ್ವರ ಹೆಣ್ಣುರೂಪದಲ್ಲಿ ಎರಡು ಬಾಣಗಳಿಂದ ಹಿಂದುಗಡೆ ನಿಂತು ಕತ್ತರಿಸಿದ ಮೇಲೆ ಪಾಪನಾಯಕ ತನ್ನ ಕಾಲುಗಳನ್ನ ಕತ್ತರಿಸಿದವರ್ಯಾರು ಎಂದು ಹಿಂದಕ್ಕೆ ತಿರುಗಿ ನೋಡ್ತಾನೆ. ಹೆಣ್ಣಿನ ರೂಪದಲ್ಲಿದ್ದ ಆಕೆಯನ್ನ ನೋಡಿ ನೀನು ಹೆಣ್ಣಾಗಿದ್ದೀಯಾ ನಿನ್ನ ಮೇಲೆ ನಾನೇನು ಪ್ರಯೋಗ ಮಾಡಲಾರೆ ಅಂದ ತಕ್ಷಣ, ಸ್ವಾಮಿ ತನ್ನ ನಿಜರೂಪವನ್ನ ಪಾಪನಾಯಕನಿಗೆ ತೋರಿಸಿ ಹೇಳ್ತಾನೆ. ಪಾಪನಾಯಕ ಹಿಂತಿರುಗಿ ನೋಡು ಅಂತ ಹೇಳ್ದಾಗ ಪಾಪನಾಯಕ ಹಿಂದೆ ತಿರುಗಿ ನೋಡ್ತಾನೆ. ಸ್ವಾಮಿನಾ ನೋಡಿ ತಕ್ಷಣ ತಾನು ಮಾಡಿದಂತಹ ಒಂದು ಕರ್ತವ್ಯ ಚ್ಯುತಿಯ ಬಗ್ಗೆ ಆತನಿಗೆ ತಕ್ಷಣ ಜ್ಞಾಪಕಕ್ಕೆ ಬರುತ್ತೆ. ಈ ಸಿಡಿಲು ಮಿಂಚಿನ ಕಠಾರಿಯ ಪ್ರತಿಷ್ಠಾಪನೆಯಲ್ಲಿ ನಾನು ವಿಫಲನಾಗಿದ್ದೇನೆ, ಸ್ವಾಮಿಯ ಕರ್ತವ್ಯವನ್ನು ನಾನು ಮರ್ತಿದ್ದೇನೆ. ಅಂತಕಂತದ್ದೊಂದು ವೇದನೆ ಆತನಲ್ಲಿ ಉಂಟಾಗಿ ತನ್ನ ತಪ್ಪನ್ನ ಮನ್ನಿಸು ಅಂತ ಶ್ರೀಸ್ವಾಮಿಯಲ್ಲಿ ನಮಸ್ಕಾರ ಮಾಡಿ ಕ್ಷಮೆ ಬೇಡಿಕೊಳ್ತಾನೆ. ಆದ್ರೂ ಕೂಡ ಪರಮ ಭಕ್ತನಾದಂತಹ ಪಾಪನಾಯಕ ಮಾಡಿದಂತಹ ಈ ಚಿಕ್ಕ ಅಪರಾಧ ಅದೇನು ದೊಡ್ಡದಲ್ಲ, ನೀನೇನು ಇದರ ಬಗ್ಗೆ ಕಾಳಜಿ ಇಟ್ಕೊಬಾರ್ದು, ನಿನಗೆ ಕಾಲುಗಳನ್ನ ಕೊಡ್ತೀನಿ ಪುನಃ ಈ ಲೋಕದಲ್ಲಿ ನಿನ್ನ ಭಕ್ತರಿಗೆ ಪಾರಮಾರ್ಥದ ಬಗ್ಗೆ ಬೋಧನೆಯನ್ನ ಮಾಡ್ತಾ ನೀನು ಸುಖದಿಂದ ಇರು ಮೋಕ್ಷ ಕೊಡ್ತೇನಿ ಅಂತ ಹೇಳ್ತಾನೆ. ಅದಕ್ಕೆ ಇಲ್ಲ ನಾನು ಈ ಸಿಡಿಲ ಮಿಂಚಿನ ಕಠಾರಿಯ ಪ್ರತಿಷ್ಠಾಪನೆಯಲ್ಲಿ ನಾನು ವಿಫಲನಾಗಿದ್ದೇನೆ. ಆದ್ದರಿಂದಲೇ ನನಗೆ ಈ ಜೀವನವೇ ಸಾಕು. ನೀನೇನಾದ್ರೂ ಮಾಡಿ ನನಗೆ ಒಳ್ಳೇದು ಮಾಡೊದಾದ್ರೆ ನನಗೆ ಮೋಕ್ಷ ಕೊಟ್ಟಬಿಡು. ನನ್ನ ಜನಾಂಗ, ನನ್ನ ಸಮಾಜ ನಿನ್ನ ಆರಾಧನೆ ಮಾಡ್ಲಿಕ್ಕೆ ನಾನು ಸಾಕಷ್ಟು ಅವರಲ್ಲಿ ಒಳ್ಳೆಯ ಮಾರ್ಗದರ್ಶನ ನೀಡಿದ್ದೀನಿ. ನಮ್ಮ ಜನಾಂಗ ಎಲ್ಲರೂ ಕೂಡ ಒಳ್ಳೆಯ ಕಾರ್ಯಗಳನ್ನು ಮಾಡುತ್ತ ನಿನ್ನ ಆರಾಧನೆಯನ್ನ ಮಾಡ್ತಾರೆ. ಇದೊಂದು ನನ್ನ ಕೋರಿಕೆಯನ್ನು ಈಡೇರಿಸು ಅಂತ ಕೇಳ್ಕೊಂಡಾಗ ವೆಂಕಟೇಶ್ವರ ನಗ್ತಾ ಭಕ್ತನ್ನ ಕೋರಿಕೆಯನ್ನು ಮನಿಸಿ ಆಯಿತು ನಿನಗೆ ಮೋಕ್ಷವನ್ನೆ ಕೊಡ್ತೇನೆ ಅಂತ ಹೇಳಿ ಅದೃಶ್ಯನಾಗ್ತಾನೆ. ಆಗ ಪಾಪನಾಯಕನು ತಾನು ಬಿದ್ದಂತಹ ಜಾಗದಲ್ಲಿನೆ ಸಿಡಿಲ ಕಠಾರಿಯನ್ನು ಹಿಡ್ಕಂಡು ಭೂಮಾತೆಯನ್ನ ಬೇಡ್ಕೋಳ್ತಾನೆ. ಅಮ್ಮ ನನಗೆ ನಿನ್ನಲ್ಲಿ ಐಕ್ಯ ಮಾಡ್ಕೊ ಅಂತ ಹೇಳ್ದಾಗ ಭೂಮಿ ಬಿರಿಯುತ್ತೆ. ಆ ಸಿಡಿಲ ಮಿಂಚಿನ ಕಠಾರಿಯನ್ನ ಹಿಡ್ಕೊಂಡು ಪಾಪನಾಯಕ ಭೂಮಿಯಲ್ಲಿ ಐಕ್ಯನಾಗ್ತಾನೆ. ಐಕ್ಯ ಆಗೋದಕ್ಕಿಂತ ಮುಂಚೆ ತನ್ನಲ್ಲಿದ್ದಂತ ನಾಗಮುರಿ ಬೆತ್ತವನ್ನ ತನ್ನ ಧ್ಯಾನ ಮಂದಿರಕ್ಕೆ ಹೋಗಿ ನನ್ನ ಒಂದು ಸಂಕೇತವಾಗಿ ಭಕ್ತರ ಇಷ್ಟಾರ್ಥಗಳನ್ನ ಈಡೇರಿಸು ಅಂತಂದ್ದೇಳಿ ಆ ನಾಗಮುರಿ ಬೆತ್ತಕ್ಕೆ ನಮಸ್ಕಾರ ಮಾಡಿಬಿಟ್ಟು ಅದನ ಕಳಿಸ್ಕೊಡ್ತಾನೆ. ಆಗ ನಾಗಮುರಿ ಬೆತ್ತ ಬಂದು ಈ ಧ್ಯಾನಮಂದಿರದಲ್ಲಿ ಸೇರಿಕೊಳ್ಳುತ್ತೆ. ಅಲ್ಲಿಂದ ಭೂಮಿಯಲ್ಲಿ ಐಕ್ಯ ಆದಮೇಲೆ ತನ್ನ ಸಂಬಂಧಿಕರಿಗೆ ಪಾಪನಾಯಕನ ಅಣ್ಣ ತಮ್ಮಗಳಿಗೆ ಗೊತ್ತಾಗುತ್ತೆ. ಹೀಂಗೆ ಜಗಲೂರಿಗೆ ಬರ್ತಾರೆ. ಈಗಿರ್ತಕ್ಕಂತ ಕೆರೆಯ ಸ್ಥಳ ರೌದ್ರಮಯವಾಗಿರುತ್ತೆ. ಹೆಣಗಳಿಂದ ತುಂಬಿರುತ್ತೆ. ಯುದ್ಧಾನೇ ಮಾಡಿರ್ತಾನೀತ ಸಿಡಿಲ ಮಿಂಚಿನ ಕಠಾರಿ ಹಿಡ್ಕೊಂಡು. ಹೆಣಗಳ ರಾಶಿ ಬಿದ್ದಿರುತ್ತೆ. ಈ ಸಂಬಂಧಿಕರು ಅಣ್ಣ ತಮ್ಮಗಳು ಹುಡಕಿದ್ರೆ ಆತ ಐಕ್ಯವಾಗಿರ್ತಾನೆ. ಬಿದ್ದ ಜಾಗನೇ ಗೊತ್ತರಲ್ಲವರಿಗೆ ಬಾಳ ಪ್ರಯಾಸಕ್ಕೆ ಬಿದ್ದು ಎಲ್ಲ ಹುಡಿಕಿದ್ರು ಕೂಡ ಸಿಕ್ಕಲ್ಲಲ. ರೋಸಿ ಬಿಟ್ಟು ಕೆರೆ ಏರೀ ಮ್ಯಾಲೆ ಕುಂತಕ್ಕಂತಾರ. ನಮ್ಮ ಪಾಪನಾಯಕನ ಹೆಣವಾದರು ಸಿಗಲಿಲ್ಲ ನಮಗೆ ಸಿಕ್ಕಿದ್ರೆ ನಮ್ಮ ಕರ್ಮಗಳನ್ನ ತೀರಿಸಿಕಂತಿದ್ವಿ, ಅಂದ್ಕೊಂಡಿದ್ದಾಗ ಅವರಲ್ಲೆ ಕೆಲವರು ಅಲ್ಲೆ ಕೆರೆ ಏರಿ ಮ್ಯಾಲೆ ಮಲಿಕೊಂತಾರೆ. ಒಬ್ನಿಗೆ ಕಾಗೆ ಮೇಲೆ ಹಾರಾಡೋದು ಕಾಣಿಸುತ್ತೆ. ಅವರ ಮೂಡನಂಬಿಕೆಗಳು ಏನೋ, ಕಾಗಿಗಳ್ನ ಕೂಡ ದೇವರು ಅಂತ ಭಾವಿಸಿದ್ರು ಆಗ. ಕಾಗಿರಾಜ ನೀನು ನಮ್ಮ ಪಾಪನಾಯಕ ಬಿದ್ದ ಸ್ಥಳ ತೋರಿಸಿದ್ರೆ ನಾವು ನಿನ್ನ ಹೆಸರ್ನ ನಮ್ಮ ಮನಿ ಮಂದಿಗೆಲ್ಲ ಇಟ್ಟಗಂತೀವಿ, ನಿನ್ನ ನೆನಸ್ಕಂತೀವಪ್ಪ ಅಂತ ಬೇಡ್ಕಂತಾರೆ. ಆಗ ಕಾಗೆ ಬಂದು ಪಾಪನಾಯಕ ಬಿದ್ದಿರೋ ಸ್ಥಳದಲ್ಲಿ ಕುಕ್ಕುತ್ತೆ. ಆಗ ಇವರೆಲ್ಲ ಹೋಗಿಬಿಟ್ಟು ಇಲ್ಲಿ ಪಾಪನಾಯಕ ಬಿದ್ದಿರೋದು ಅಂತ ಸಮಾದಿ ಮಾಡಿ ಅವರ ಕರ್ಮಗಳನ್ನ ತೀರಿಸ್ಕಂತಾರೆ. ಅಂದಿನಿಂದ ಇವ್ರು ನಮ್ಮರೆಲ್ಲ ಕಾಗಿಬೇಡ, ಕಾಗಿಪಾಲ ಅಂತ ಕಾಗೆಗೆ ಕೃತಜ್ಞತೆ ಸಲ್ಲಿಸೋದಕ್ಕೆ ಇವ್ರು ನಮ್ಮರೆಲ್ಲ ಹೆಸ್ರಿಟ್ಕಂಡ್ರು. ಹೀಗೆ ಪಾಪನಾಯಕ ಸೂರ್ಯಪಾಪನಾಯಕ ಅಂತಲೆ ಈತ ಈಶ್ವರನ ಭಕ್ತ ಅಂತಲೆ ಈವತ್ತು ಕೂಡ ಈ ಕಲಿಯುಗದಲ್ಲಿ ಕೂಡ ಆತನ ದರ್ಶನ ಮಾಡಿದ್ರೆ ಶ್ರೀ ವೆಂಕಟೇಶ್ವರ ದರ್ಶನ ಮಾಡಿದಷ್ಟೇ ತಿರುಪ್ತಿಗೋದಂತೆ ಪುಣ್ಯ ಫಲ ಸಿಗುತ್ತೆ ಅಂತ ಒಂದು ಪ್ರತೀತಿ ಇದೆ. ಭಕ್ತಾದಿಗಳು ಕೂಡ ಅದರಲ್ಲಿ ಜಾತಿ ಭೇದ ಇಲ್ಲ. ಎಲ್ಲಾ ಜಾತಿಯ ಜನ ಅಲ್ಲಿ ಹೋಗಿಬಿಟ್ಟು ಎಲ್ಲ ರೀತಿಯ ಸಿಹಿ ಮಾಡ್ತಾರೆ ಕಾರಾ ಮಾಡ್ತಾರೆ. ಎಲ್ಲ ಆತನಿಗೆ ಅರ್ಪಿಸಿ, ಆತನಿಗೆ ನೈವೇದ್ಯ ಮಾಡಿಕೊಂಡು ತಮ್ಮ ಹರಕೆ ಪುರೈಸ್ಕಂತಾರೆ.