(ಕ್ರಿ.ಶ. ೧೮೫೪ – ೧೯೧೫)
(ವೈದ್ಯ ಚಿಕಿತ್ಸೆಯಲ್ಲಿ ಸಾವಯುವ ರಾಸಾಯನಿಕ ವಸ್ತುಗಳ ಬಳಕೆ)

ಗೋನೋಕಾಕಸ್ (ಬಿಳಿ ಮೇಹ ಉಂಟುಮಾಡುವ ಸೂಕ್ಷ್ಮಜೀವಿ), ಮೈಲೋಸೈಟ್ (ಮಜ್ಜೆಕಣ), ರಿಸೆಪ್ಟಾರ್ (ಗ್ರಾಹಕ), ಕಾಂಪ್ಲಿಮೆಂಟ್ (ಪೂರಕ), ಇಮ್ಯುನೈಸೇಷನ್ (ಪ್ರತಿರೋಧ ಶಕ್ತಿಯ ಬೆಳವಣಿಗೆ) ಮೊದಲಾದ ಶಬ್ದಗಳನ್ನು ರೂಪಿಸಿ ವೈದ್ಯಕೀಯ ಪದಕೋಶವನ್ನು ಶಿಮಂತಗೊಳಿಸಿದ ಮಹಾನ್ ವೈದ್ಯಶಾಸ್ತ್ರಜ್ಞ ಪಾಲ್ ಏರ್‌ಲಿಹ್. ಈತ ೧೮೫೪ರಲ್ಲಿ ಪೂರ್ವ ಜರ್ಮನಿಯ ಸಿಲೇಸಿಯ ಪ್ರಾಂತ್ಯದಲ್ಲಿ ಯಹೂದಿ ಕುಟುಂಬವೊಂದರಲ್ಲಿ ಜನಿಸಿದರು. ಈತನ ತಾಯಿ-ತಂದೆ ಮಧ್ಯಮವರ್ಗಕ್ಕೆ ಸೇರಿದವರು. ಬಾಲ್ಯದಲ್ಲಿ ಈತ ಯಾವ ವಿಶೇಷಜ್ಞಾನವನ್ನೂ ಅಷ್ಟಾಗಿ ಪ್ರದರ್ಶಿಸಿರಲಿಲ್ಲ. ಆದರೆ ಹೈಸ್ಕೂಲು ಶಿಕ್ಷಣ ಪಡೆಯುತ್ತಿದ್ದಾಗ ಈತನಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಲಾರಂಭಿಸಿತು.
ಪಾಲ್ ಏರ್ಲಿಹ್ ತಮ್ಮ ಇಪ್ಪತ್ತನಾಲ್ಕನೆಯ ವಯಸ್ಸಿನಲ್ಲಿ ಲಿಪ್‌ಜಿಗ್ ವಿಶ್ವವಿದ್ಯಾಲಯದಿಂದ ವೈದ್ಯಶಾಸ್ತ್ರ ಪದವಿಯನ್ನು ಪಡೆದರು. ಮಾನವ ಶರೀರದಲ್ಲಿ ರಾಸಾಯನಿಕ ವಸ್ತುಗಳು ವಹಿಸುವ ಪಾತ್ರವನ್ನು ಕುರಿತು ಅವರು ವಿಶೇಷವಾಗಿ ಅಧ್ಯಯನ ಮಾಡಿದರು. ಅವರ ಈ ವಿಶೇಷ ಆಸಕ್ತಿಯೇ ಮುಂದೆ ವೈದ್ಯ ಚಿಕಿತ್ಸೆಯಲ್ಲಿ ಸಾವಯುವ ರಾಸಾಯನಿಕ ವಸ್ತುಗಳನ್ನು ಪರಿಣಾಮಕಾರಿಯಾಗಿ ಬಳಸುವುದಕ್ಕೆ ಆಧಾರವಾಯಿತು. ಇದರ ಆಧಾರದ ಮೇಲೆಯೇ ಅವರು ‘ಪಕ್ಕ ಸರಪಳಿ ಸಿದ್ಧಾಂತ’ವನ್ನು ರೂಪಿಸಿದರು.
ಏರ್ಲಿಹ್ ತಮ್ಮ ವೈದ್ಯವೃತ್ತಿಯನ್ನು ಆರಂಭಿಸಿದ್ದು ಬರ್ಲಿನ್ ಆಸ್ಪತ್ರೆಯಲ್ಲಿ. ಬರ್ಲಿನ್‌ನಲ್ಲಿ ಕೈಗಾರಿಕೋದ್ಯಮಿಯೊಬ್ಬರ ಮಗಳ ಜತೆ ವಿವಾಹವಾದದ್ದು ಇವರ ವೈದ್ಯಕೀಯ ಸಂಶೋಧನಾ ಕಾರ್ಯಗಳಿಗೆ ಆರ್ಥಿಕವಾಗಿ ತುಂಬ ಅನುಕೂಲವಾಯಿತು. ಕ್ಷಯ ಮತ್ತು ಗಂಟಲಮಾರಿ ರೋಗಗಳ ಚಿಕಿತ್ಸಾಕ್ರಮದ ಬಗ್ಗೆ ಇವರು ಮಾಡಿದ ಸಂಶೋಧನೆಗಳು, ಬರೆದ ಲೇಖನಗಳು ಇಂದಿನ ಚಿಕಿತ್ಸಕರಿಗೂ ಮಾರ್ಗದರ್ಶಕವಾಗಿವೆ.
ಸಿಫಿಲಿಸ್‌ನಂತಹ ರತಿರೋಗಗಳನ್ನು ಗುಣಪಡಿಸುವುದು ಒಂದು ದೊಡ್ಡ ಸಮಸ್ಯೆಯಾಗಿತ್ತು. ಈ ರೋಗದ ಮೇಲೆ ದಾಳಿ ಆರಂಭಿಸಿದ ಏರ್ಲಿಹ್ ಸುಮಾರು ಒಂಬತ್ತನೂರಕ್ಕೂ ಹೆಚ್ಚು ಪ್ರಯೋಗಗಳನ್ನು ಮಾಡಿ ಆ ಪೀಡಕ ರೋಗ ನಿವಾರಣೆಗೆ ನಿಯೋಸಾಲ್ವರ್ಸಾನ್ ಮದ್ದು ಕಂಡು ಹಿಡಿದರು.
ತನ್ನ ಕಾರ್ಯಗಳಿಗೆ ಪಾಲ್ ಏರ್ಲಿಹ್ ೧೯೦೮ರಲ್ಲಿ ನೊಬೆಲ್ ಪಾರಿತೋಷಕ ಪಡೆದರು.
ಇವರು ತನ್ನ ೬೧ನೆಯ ವಯಸ್ಸಿನಲ್ಲಿ ನಿಧನ ಹೊಂದಿದರು.