Categories
ರಂಗಭೂಮಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಪಾಲ್ ಸುದರ್ಶನ್

ನಟ, ನಾಟಕಕಾರ, ರಂಗಕರ್ಮಿ, ನಿರ್ದೇಶಕ, ಬರಹಗಾರರಾಗಿ ಕನ್ನಡ ರಂಗಭೂಮಿಯಲ್ಲಿ ಹೆಜ್ಜೆಗುರುತು ಮೂಡಿಸಿರುವ ವಿಶಿಷ್ಟ ಪ್ರತಿಭೆ ಪಾಲ್ ಸುದರ್ಶನ್, ಚಲನಚಿತ್ರ-ಕಿರುತೆರೆಯಲ್ಲೂ ಮಿಂಚಿದ ಪ್ರತಿಭಾಶಾಲಿ.
ಬೆಂಗಳೂರಿನ ಮೂಲದವರಾದ ಪಾಲ್ ಸುದರ್ಶನ್ ಶೇಷಾದ್ರಿಪುರಂ ಕಾಲೇಜಿನಲ್ಲಿ ಪದವೀಧರರು. ಕೆ.ಎಂ.ಎಫ್ ಉದ್ಯೋಗಿಯಾಗಿ ನೆಲೆ ಕಂಡುಕೊಂಡವರು. ಕ್ರಿಯಾಶೀಲತೆ-ಸೃಜನಶೀಲತೆ ಪಾಲ್‌ ಹುಟ್ಟುಗುಣ. ಕಾಲೇಜು ದಿನಗಳಿಂದಲೂ ಬರವಣಿಗೆಯ ಗೀಳು. ರಂಗದಿಗ್ಗಜ ದಿ|| ಆರ್.ನಾಗೇಶ್-ಸಿ.ಜಿ.ಕೆ ಅವರ ಸಖ್ಯದಿಂದ ರಂಗಭೂಮಿಗೆ ಪಾದಾರ್ಪಣೆ. ನಟ, ನಾಟಕಕಾರ, ರಂಗಕರ್ಮಿಯಲ್ಲದೆ ರಂಗಪತ್ರಿಕೆ ಸೂತ್ರಧಾರದ ಸಂಪಾದಕನಾಗಿಯೂ ಸೇವೆ. ಹವ್ಯಾಸಿ ರಂಗತಂಡಗಳಲ್ಲಿ ಸದಾ ಸಕ್ರಿಯ. ಕಿರುತೆರೆ-ಚಲನಚಿತ್ರಕ್ಕೂ ಅಡಿ, ವರನಟ ಡಾ.ರಾಜ್‌ಕುಮಾರ್ ಅವರ ಆಕಸ್ಮಿಕ, ಶಬ್ದವೇದಿ ಚಿತ್ರಕ್ಕೆ ಸಂಭಾಷಣಕಾರರಾಗಿ ದುಡಿದವರು. ೧೨ಕ್ಕೂ ಹೆಚ್ಚು ಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆಯ ಸೇವೆ. ಕಿರುತೆರೆಯ ಅನೇಕ ಧಾರಾವಾಹಿ, ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳಿಗೆ ಅಕ್ಷರಸೇವೆ-ನಿರ್ದೇಶನ. ೭೦ಕ್ಕೂ ಹೆಚ್ಚು ಸಣ್ಣಕಥೆಗಳು, ಮೂರು ಕಾದಂಬರಿಗಳನ್ನು ಬರೆದಿರುವ ಪಾಲ್ ಸುದರ್ಶನ್ ಅವರದು ಎಂದಿಗೂ ಬತ್ತದ ಉತ್ಸಾಹ, ಕ್ರಿಯಾಶೀಲ ನಡೆಯಿಂದಲೇ ಸದಾ ಸದ್ದು ಮಾಡುವ ಪ್ರತಿಭೆ. ರಾಜ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿಗಳಿಂದ ಭೂಷಿತರು.