(ಕ್ರಿ. ಶ. ೧೮೪೯-೧೯೩೬) (ಮಿದುಳಿನ ಕಾರ್ಯರೀತಿ)

ತನ್ನ ಸಂಶೋಧನಾ ಕಾರ್ಯಕ್ಕೆ ಲೆನಿನ್ ರಿಂದ ಮೆಚ್ಚುಗೆ ಮತ್ತು ಪ್ರೋತ್ಸಾಹ ಪಡೆದಿದ್ದ ವೈದ್ಯವಿಜ್ಞಾನಿ, ಇವಾನ್ ಪೆತ್ರೊವಿಚ್ ಪಾವ್ ಲೊವ್. ಈತ ೧೮೪೯ರಲ್ಲಿ ಮಧ್ಯ ರಶಿಯದಲ್ಲಿನ ರೈಜಾನ್ ಎಂಬ ಊರಿನ ಪಾದ್ರಿ ಮನೆತನದಲ್ಲಿ ಜನಿಸಿದರು. ಅಂತಲೇ ಧಾರ್ಮಿಕ ಶಾಲೆಯಲ್ಲೇ ಆತನ ಶಿಕ್ಷಣ ಆರಂಭವಾಯಿತು. ಮಗ ಧರ್ಮೊಪದೇಶಕನಾಗಬೇಕೆಂದು ಈತನ ತಂದೆಯ ಅಪೇಕ್ಷೆಯಾಗಿತ್ತು. ಆದರೆ ವಿಮರ್ಶಾತ್ಮಕ ದೃಷ್ಟಿ ಮತ್ತು ವೈಜ್ಞಾನಿಕ ಮನೋಭಾವ ರೂಢಿಸಿಕೊಂಡ ಪಾವ್ ಲೊವ್ ದೊಡ್ಡ ವಿಜ್ಞಾನಿಯಾಗುವ ನಿಟ್ಟಿನಲ್ಲಿ ಸಾಗತೊಡಗಿದರು. ವೈದ್ಯಶಾಸ್ತ್ರದ ವ್ಯಾಸಂಗ ಮಾಡುವ ಸಲುವಾಗಿ ಅವರು ಸೇಂಟ್ ಪೀಟರ್ಸ್ ಬರ್ಗ್ ವಿಶ್ವವಿದ್ಯಾಲಯಕ್ಕೆ ಹೋದರು. ಅಲ್ಲಿ ಅವರ ವೈಜ್ಞಾನಿಕ ಅಭಿರುಚಿಗೆ ತಕ್ಕ ವಾತಾವರಣ ದೊರಕಿತು. ಹೃದಯ ಕಾರ್ಯಗಳ ಮೇಲೆ ನರವ್ಯೂಹದ ಪ್ರಭಾವವನ್ನು ಕುರಿತು ತನ್ನ ಪ್ರಬಂಧವನ್ನು ಸಮರ್ಥಿಸಿ ವೈದ್ಯಶಾಸ್ತ್ರ ಪದವಿ ಪಡೆದರು. ತರುವಾಯ ವಿದೇಶಗಳಲ್ಲಿ ಹೆಸರಾಂತ ವಿಜ್ಞಾನಿಗಳ ಜತೆ ಕಾರ್ಯ ಮಾಡಿ ಸ್ವದೇಶಕ್ಕೆ ವಾಪಸಾದರು. ಆರ್ಥಿಕವಾಗಿ ಕಷ್ಟದ ಪರಿಸ್ಥಿತಿಯಲ್ಲಿದ್ದಾಗಲೂ ಖುದ್ದಾಗಿ ಪ್ರಾಣಿಗಳನ್ನು ಕೊಂಡು ತನ್ನ ಪ್ರಯೋಗಗಳನ್ನು ಮುಂದುವರೆಸಿದರು. ಪಾವ್ ಲೊವ್ ಮೊದಲು ಮಿಲಿಟರಿ ಮೆಡಿಕಲ್ ಅಕಾಡೆಮಿಯ ಔಷಧ ಶಾಸ್ತ್ರದ ಪ್ರಾಧ್ಯಾಪಕನಾಗಿ, ತರುವಾಯ ಶರೀರಕ್ರಿಯಾಶಾಸ್ತ್ರದ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದರು. ಮುಂದೆ ಪೀಟರ್ಸ್‌ಬರ್ಗ್ ವಿಶ್ವವಿದ್ಯಾಲಯದ ಪ್ರಾಯೋಗಿಕ ವೈದ್ಯಶಾಸ್ತ್ರ ಕೇಂದ್ರದಲ್ಲಿ ಶರೀರಕ್ರಿಯಾಶಾಸ್ತ್ರದ ನಿರ್ದೇಶಕನಾಗಿ ೩೦ ವರ್ಷ ಸೇವೆ ಸಲ್ಲಿಸಿದರು.

ಜೀಣಾಂಗ ವ್ಯವಸ್ಥೆಯ ಬಗ್ಗೆ ಆತ ಅತ್ಯಂತ ಮಹತ್ವದ ಸಂಶೋಧನೆಗಳನ್ನು ಮಾಡಿದರು. ಈ ಉದ್ದೇಶಕ್ಕಾಗಿ ನಾಯಿಯ ಮೇಲೆ ಶಸ್ತ್ರಕ್ರಿಯೆ ಮಾಡಿ ಶಸ್ತ್ರಕ್ರಿಯಾ ವಿಧಾನವನ್ನು ಸಂಪನ್ನಗೊಳಿಸಿದರು. ಮುಂದೆ ನರಮಂಡಲ, ಮಿದುಳು, ಮನಸ್ಸಿನ ಕಾರ್ಯಗಳನ್ನು ಕುರಿತು ಅಧ್ಯಯನ, ಸಂಶೋಧನೆಗಳನ್ನು ಮಾಡಿದರು. ಮಿದುಳಿನ ಕಾರ್ಯಕ್ಕೆ ಸಂಬಂಧಪಟ್ಟಂತೆ ಈತ ಕಂಡುಹಿಡಿದ “ರೂಢಿಗೊಳಿಸಿದ ಪರಾವರ್ತನ ಕ್ರಿಯೆ” ಮಿದುಳಿನ ಕಾರ್ಯವನ್ನು ಅರಿಯುವುದಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿತು.

ಇವಾನ್ ಪೆತ್ರೊವಿಚ್ ಪಾವ್ ಲೊವ್ ೧೯೩೬ರಲ್ಲಿ ನಿಧನ ಹೊಂದಿದರು.