“ಕಲೆ ಮತ್ತು ಕಲಾತತ್ವಗಳನ್ನು ಕುರಿತು ವಿಪುಲವಾದ ಸಾಹಿತ್ಯ ಸಾಮಗ್ರಿಯೇನೋ ಇದೆ. ಆದರೆ ಈ ವಿಷಯಕ್ಕೆ ಆಧಾರಭೂತವಾಗಿರುವ ಸಂಗತಿಗಳ ಬಗೆಗೆ, ಇಷ್ಟೇ ಪ್ರಾಮುಖ್ಯತೆಯನ್ನು ಪಡೆದಿರುವ ಮತ್ತಾವ ವಿಷಯದ ವಿಚಾರದಲ್ಲಿಯೂ ಇಷ್ಟೊಂದು ಗೊಂದಲ ಮತ್ತು ವಿರುದ್ಧ ಮತಗಳು, ಬಹುಶಃ ಉಂಟಾಗಿಲ್ಲ.”[1]

“ಸೌಂದರ್ಯ ಮೀಮಾಂಸೆ ವಾಸ್ತವವಾಗಿ ಸಂಪೂರ್ಣ ತತ್ವಶಾಸ್ತ್ರವೇ. ಅದರಲ್ಲಿ ಕಲೆಗೆ ಸಂಬಂಧಿಸಿದ ವಿಶೇಷ ವಿವೇಚನೆ ಅದರ ಒಂದು ಅಂಗವಾಗಿ ಉಂಟು.”[2]

ಪಾಶ್ಚಾತ್ಯ ವಿದ್ವಾಂಸರಿಂದ ಉದ್ಧರಿಸಿರುವ ಈ ಎರಡು ಅಭಿಪ್ರಾಯಗಳೇ ಸಾಕು ಸೌಂದರ‍್ಯಮೀಮಾಂಸೆಯ ವಿಚಾರದ ನಿಲುವನ್ನು ಸೂಚಿಸುವುದಕ್ಕೆ.

ಸೌಂದರ‍್ಯವು ಎಷ್ಟೆಷ್ಟು ಮನೋಹರವಾಗಿ ತೋರುವುದೋ, ಅದರ ವಿಚಾರ ವಿಮರ್ಶೆ ಅಷ್ಟಷ್ಟು ತೊಡಕಾಗುತ್ತದೆ. ಸೌಂದರ‍್ಯವೆಂದರೇನು ಎಂಬ ಪ್ರಶ್ನೆಗೆ ಖಚಿತವಾದ ಉತ್ತರವನ್ನು ಕೊಡಲು ಸಾಧ್ಯವಾಗಿಲ್ಲ; ಬಹುಶಃ ಸಾಧ್ಯವಾಗುವುದೂ ಇಲ್ಲ. ಅದರ ವಿವಿಧ ವಿನ್ಯಾಸಗಳನ್ನು ನಾವು ಗುರುತಿಸಬಹುದು, ಅನುಭವಿಸಬಹುದು, ತೋರಿಸಬಹುದು.

ಈ ಸಮಸ್ಯೆಯ ಪರಿಶೀಲನೆಗೆ ಎರಡು ಮಾರ್ಗಗಳಿರುವಂತೆ ತೋರುತ್ತದೆ: ಒಂದು ತಾತ್ವಿಕ ವಿಧಾನ, ಮತ್ತೊಂದು ವೈಜ್ಞಾನಿಕ ವಿಧಾನ. ಮೊದಲನೆಯದು ಈ ವಿಶ್ವದ ಸ್ವರೂಪವೇನು ಎನ್ನುವ ವಿಚಾರದಿಂದ ಹೊರಟು, ಈ ಲೋಕದ ಸೌಂದರ‍್ಯವನ್ನು ಕಲೆಯ ಸಹಾಯದಿಂದ ವಿವರಿಸುತ್ತದೆ. ಮತ್ತೊಂದು ಈ ನಾಮರೂಪ ಲೋಕದ ವಸ್ತು ಸತ್ಯಗಳನ್ನು ವಿಮರ್ಶಿಸಿ, ಸೌಂದರ‍್ಯರ ಸ್ವರೂಪವನ್ನು ವಿವರಿಸುತ್ತದೆ.

ತಾತ್ವಿಕ ವಿಧಾನದವರು ವಸ್ತುವಿನಲ್ಲಿ ಕಾಣುವ ಸೌಂದರ‍್ಯವನ್ನು ಕುರಿತು ಚರ್ಚಿಸುತ್ತಾ ಅದು ವಸ್ತುವಿನಿಂದ ಬೇರೆಯಾದ ಒಂದು ಗುಣವೇ ಅಥವಾ ವಸ್ತುವಿಗೆ ಅನಿವಾರ‍್ಯವಾದ ಅಂತರ್ಗತವಾದ ಒಂದು ಶಕ್ತಿಯೇ ಎಂಬ ವಿಚಾರದಿಂದ ಹೊರಟು, ವಸ್ತುಗಳಲ್ಲಿ ನಮಗೆ ತೋರುವ ಸೌಂದರ‍್ಯವೇನಿದ್ದರೂ ಬೇರೊಂದು ದೈವೀತೇಜಸ್ಸಿನ ಪ್ರಕಾಶನ ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ವೈಜ್ಞಾನಿಕ ವಿಧಾನದವರು ಲೋಕಾತೀತವಾದ ದೈವೀಶಕ್ತಿಯ  ವಿಚಾರದ ಗೊಡವೆಗೆ ಹೋಗದೆ, ಸೌಂದರ‍್ಯವೆಂದು ದೃಗ್ಗೋಚರವಾಗುವ ವಸ್ತುಗಳ ಪರಿಶೀಲನೆಗೆ ತೊಡಗುತ್ತಾರೆ. ಇಲ್ಲಿ ಸೌಂದರ‍್ಯಮೀಮಾಂಸೆ ಬಹುಮಟ್ಟಿಗೆ ಮನಸ್‌ಶಾಸ್ತ್ರೀಯ ವಿಧಾನದಲ್ಲಿ ನಡೆದಿದೆ. ಇಲ್ಲಿ ಏಳುವ ಪ್ರಶ್ನೆಗಳೆಂದರೆ, ವಸ್ತುವಿನಲ್ಲಿ ಮೂಲಭೂತವಾಗಿರುವ ಯಾವ ದ್ರವ್ಯಗಳಿಂದ, ಅಥವಾ ಅವುಗಳ ನಿರಂತರ ಚಲನೆಯ ಸಂಘಟನೆಯಿಂದ ಅವು ಸುಂದರವಾಗಿರುವಂತೆ ತೋರುತ್ತವೆ? ನಮ್ಮ ಮನಸ್ಸಿನಮೇಲೆ ವಸ್ತು ಮಾಡುವ ಪರಿಣಾಮಗಳಿಂದ, ನಾವು ಪಡೆಯುವ ಒಂದು ಬಗೆಯ ಸುಖಾನುಭವದಿಂದ ವಸ್ತು  ಸುಂದರ ಎಂದು ತೀರ್ಮಾನಿಸುತ್ತೇವೆಯೇ? ಹೀಗೆ ವಸ್ತುವಿಗೆ ಪ್ರತಿಕ್ರಿಯೆ ತೋರುವ ಮನಸ್ಸಿನಲ್ಲಿ ಸದ್ಯದ ನೋಟದ ಪರಿಣಾಮದೊಡನೆ ಪೂರ್ವಾನುಭವಗಳೂ ಹೇಗೆ ಒಂದು ವಸ್ತುವನ್ನು ಸುಂದರವೆಂದು ತೀರ್ಮಾನಿಸುವುದರಲ್ಲಿ ನೆರವಾಗುತ್ತವೆ? – ಇತ್ಯಾದಿ ಪ್ರಶ್ನೆಗಳನ್ನು ಪರಿಶೀಲಿಸಬಹುದು.

ಈ ಎಲ್ಲ ವಿವರಗಳನ್ನು ಸಂಗ್ರಹಿಸಿ ಹೇಳುವುದಾದರೆ – ಸೌಂದರ‍್ಯ ವಸ್ತುನಿಷ್ಠವೋ, ಮನೋನಿಷ್ಠವೋ ಅಥವಾ ಈ ಎರಡನ್ನೂ ಮೀರಿದ ಮತ್ತು ಅವುಗಳಿಗೆ ಮೂಲಭೂತವಾದ ಒಂದು ದೈವೀರಹಸ್ಯದ ಪ್ರಕಾಶವೋ ಎನ್ನುವ ಮೂರು ಮಾತಿನಲ್ಲಿ ಅಡಕಮಾಡಬಹುದು.

ಸೌಂದರ‍್ಯಮೀಮಾಂಸೆಯಲ್ಲಿ ಚರ್ಚೆಗೆ ಅರ್ಹವಾದ ಮತ್ತೊಂದು ವಿಚಾರವೆಂದರೆ, ಸೌಂದರ‍್ಯ ಮತ್ತು ಅಸೌಂದರ‍್ಯಗಳ, (ವಿಶಾಲವಾದ ಮತ್ತು ಪರಿಮಿತವಾದ ಅರ್ಥಗಳಲ್ಲಿ) ಭವ್ಯ ಮತ್ತು ಕ್ಷುದ್ರಗಳ (rediculous) ಪರಸ್ಪರ ಸಂಬಂಧ ಮತ್ತು ಅವುಗಳ ವಿವರಣೆ.

ಕಡೆಯದಾಗಿ ಸೌಂದರ‍್ಯ ನಿರ್ಮಿತಿಯಾದ ಕಲೆಯ ಸ್ವರೂಪ ಮತ್ತು ಕ್ರಿಯೆಗಳ ವಿವೇಚನೆ. ಕಲೆ ಎನ್ನುವುದು ಪ್ರಕೃತಿಯ ಅನುಕರಣೆಯೇ ಅಥವಾ ಮಾನವ ಮನಸ್ಸಿನ ಪ್ರತಿಭಾ ಚಿತ್ ಕ್ರಿಯೆಯೇ? ಅದು ಪ್ರಕಟಿಸುವುದು ಯಾವ ಸತ್ಯವನ್ನು? ಅದಕ್ಕೂ ಜೀವನದ ಪುರುಷಾರ್ಥಗಳಿಗೂ ಇರುವ ಸಂಬಂಧವೇನು? ಕಲೆ ಮಾನವನ ಮನೋಭಾವನೆಗಳ ಚಿತ್ರಣದ ಬೆಳವಣಿಗೆ ಎಂದು ನೋಡುವ ಚಾರಿತ್ರಿಕ ದೃಷ್ಟಿಯೂ, ಲೋಕಾತೀತವಾದ ಸತ್ಯವನ್ನು ಮಾನವನ ಪ್ರತಿಭೆ ವ್ಯಕ್ತಗೊಳಿಸಿರುವ ವಿಧಾನವೇ ಕಲೆ ಎಂಬ ತಾತ್ವಿಕದೃಷ್ಟಿಯೂ ಒಂದಕ್ಕೊಂದು ಪೂರಕವೆ?

ಇಲ್ಲಿ ಉದ್ಭವಿಸುವ ಮೊದಲ ಪ್ರಶ್ನೆ ಸೌಂದರ‍್ಯವೆಂದರೇನು – ಎನ್ನುವುದು. ಈ ಪ್ರಶ್ನೆಗೆ ಅನೇಕರು ಕೊಟ್ಟಿರುವ ಉತ್ತರಗಳಿಗೆ ಕಡೆಯಿಲ್ಲ; ಆದರೆ ಯಾವ ಉತ್ತರವೂ ಸಂಪೂರ್ಣ ತೃಪ್ತಿಕರವಾಗಿಲ್ಲ. ಅದಕ್ಕೆ ಕಾರಣ ಇಷ್ಟೇ: ‘ಸೌಂದರ‍್ಯ ವಿವರಣಾತೀತವಾದುದು. ಅದು ಯಾವೊಂದು ಸೂತ್ರದ ಹಿಡಿತಕ್ಕೂ ಸಿಗದೆ, ಸಂಚರಿಸುವ, ತೇಲುವ, ಮಿರುಗುವ ಒಂದು ಛಾಯೆ.”[3]

“ಸೌಂದರ‍್ಯವನ್ನು ಸವಿಯಬಹುದು, ಅನುಭವಿಸಬಹುದು, ಆದರೆ ಅದನ್ನು ಸೂತ್ರರೂಪದಲ್ಲಿ ಹೇಳಲಾಗುವುದಿಲ್ಲ.”[4]

ಆದರೂ ಸೌಂದರ‍್ಯವನ್ನು ಕುರಿತು ನಾನಾಬಗೆಯಾದ ಸೂತ್ರಗಳಿವೆ. ಆ ಸೂತ್ರವನ್ನು ಸಮರ್ಥಿಸಲು ಆಯಾ ಲೇಖಕರು ಕೈಕೊಂಡ ಬೌದ್ಧಿಕ ಸಿದ್ಧಾಂತಗಳ ವಿಪುಲತೆಯೂ ನಮ್ಮನ್ನು ಬೆರಗಾಗಿಸುತ್ತದೆ. ಆದರೆ ಯಾರು ಯಾರು ಸೌಂದರ‍್ಯವನ್ನು ಕುರಿತು ಯಾವ ಯಾವ ಸೂತ್ರಗಳನ್ನು ಮಾಡಿದ್ದಾರೆ ಎನ್ನುವ ವಿಸ್ತಾರವಾದ ವಿವರಕ್ಕೆ ಕೈ ಹಾಕದೆ, ಆ ಸೂತ್ರಗಳ ಸಾಮಾನ್ಯ ರೂಪುರೇಷೆಗಳನ್ನು ಹೀಗೆ ಕೊಡಬಹುದು.

I        ೧.    ಸೌಂದರ‍್ಯವೆಂಬ ಸರಳವಾದ ಗುಣವುಳ್ಳ ಯಾವ ವಸ್ತುವೇ ಆಗಲಿ ಅದು ಸುಂದರ.

೨.    ನಿರ್ದಿಷ್ಟವಾದ ಆಕೃತಿಯನ್ನುಳ್ಳ ವಸ್ತುವೆಲ್ಲವೂ ಸುಂದರ.

II       ೧.    ಪ್ರಕೃತಿಯನ್ನು ಅನುಕರಿಸುವ ಎಲ್ಲ ವಸ್ತುವೂ ಸುಂದರ.

೨.    ಯಶಸ್ವಿಯಾದ ವಸ್ತು ಮಾಧ್ಯಮದಲ್ಲಿ ಹೊಮ್ಮುವುದೆಲ್ಲವೂ ಸುಂದರ.

೩.    ಪ್ರತಿಭಾವಂತನ ರಚನೆಯೆಲ್ಲವೂ ಸುಂದರ.

೪.   ಯಾವುದು ಸತ್ಯವನ್ನು, ಪ್ರಕೃತಿಸತ್ಯವನ್ನು, ಧ್ಯೇಯವನ್ನು, ವಿಶ್ವ ಸಾಮಾನ್ಯವಾದುದನ್ನು, ಆದರ್ಶವನ್ನು ಪ್ರಕಾಶಪಡಿಸುತ್ತದೆಯೋ ಅದೆಲ್ಲವೂ ಸುಂದರ.

೫.   ಯಾವುದು ಒಂದು ಬಗೆಯ ಭ್ರಮೆ (ವಾಸ್ತವವೆಂಬ)ಯನ್ನುಂಟುಮಾಡುವುದೋ ಅದೆಲ್ಲವೂ ಸುಂದರ.

೬.    ಯಾವುದು ಹಿತವಾದ ಸಾಮಾಜಿಕ ಪರಿಣಾಮಗಳಿಗೆ ನಮ್ಮನ್ನು ಒಯ್ಯುವುದೋ ಅದೆಲ್ಲವೂ ಸುಂದರ.

೭.    ಯಾವುದು ಒಂದು ಅಭಿವ್ಯಕ್ತಿರೂಪವಾದುದೋ ಅದೆಲ್ಲವೂ ಸುಂದರ.

III     ೧.    ಸಂತೋಷದಾಯಕವಾದುದೆಲ್ಲವೂ ಸುಂದರವೇ,

೨.    ಭಾವಪ್ರಚೋದಕವಾದುದೆಲ್ಲವೂ ಸುಂದರ.

೩.    ಯಾವುದು ಒಂದು ನಿರ್ದಿಷ್ಟವಾದ ಭಾವವನ್ನು ಉದ್ದೀಪಿಸುವುದೋ ಅದು ಸುಂದರ.

೪.   ಯಾವುದು ವಸ್ತುವಿನಲ್ಲಿ ತಾದಾತ್ಮ್ಯಹೊಂದಿ ನಮ್ಮ ಆನಂದವನ್ನೇ ಅಲ್ಲಿ ಅನುಭವಿಸುವ ‘ಅನುಭೂತಿಶಕ್ತಿ’ (Empathy) ಗೆ ಒಳಗಾಗುವುದೋ ಅದು ಸುಂದರ.

೫.   ಯಾವುದು ನಮ್ಮ ಪ್ರಾಣಶಕ್ತಿಯನ್ನು ವೃದ್ಧಿಗೊಳಿಸುವುದೋ ಅದು ಸುಂದರ.

೬.    ಯಾವುದು ನಮಗೆ ಅಪೂರ್ವವ್ಯಕ್ತಿತ್ವದ ಪರಿಚಯವನ್ನು ಮಾಡಿಕೊಡುವುದೋ ಅದೆಲ್ಲವೂ ಸುಂದರ.[5]

ಮೇಲಿನ ಈ ಮೂರು ರೀತಿಯ ವಿಭಜನೆಯಲ್ಲಿ, ಮೊದಲನೆಯದು ದೃಗ್ಗೋಚರವಾದ ವಸ್ತುಗಳ ಬಾಹ್ಯರಚನೆ ಮತ್ತು ವರ್ಣಾದಿ ಗುಣಗಳನ್ನು ದೃಷ್ಟಿಯಲ್ಲಿರಿಸಿಕೊಂಡಂತೆ ತೋರಿದರೆ, ಮೂರನೆಯದು ವಸ್ತುಗಳು ನಮ್ಮ ಮನಸ್ಸಿನಮೇಲೆ ಮಾಡುವ ಪರಿಣಾಮಗಳನ್ನು ದೃಷ್ಟಿಯಲ್ಲಿರಿಸಿಕೊಂಡಿದೆ. ಎರಡನೆಯದು ಕಲಾಕೃತಿಗೆ ಸಂಬಂಧಿಸಿದ್ದು; ಅಲ್ಲಿ ಕಲಾವಿದನ ಸೃಷ್ಟಿ, ಸಹೃದಯನ ಆಸ್ವಾದ ಮತ್ತು ಕಲೆಗೂ ಜೀವನದ ಹಲವು ಮುಖಗಳಿಗೂ ಇರುವ ಸಂಬಂಧ ವ್ಯಕ್ತವಾಗುವುದು.


[1] H. Wildon Carr: Philosophy of  Benedetto Croce: p. 43.

[2] Encyclopaedia Britanica. Ed. by J.H. Garvin : p (226.)

[3] W. Knight: Philosophy of the Beautiful, VoI. l. p. 60.

[4] Bosanquet : History of the Aesthetics. p. 179.

[5] C.K. Ogden and l.A. Richards: Foundations of the Aesthetis; 20-21