ಈ ಲೋಕದಲ್ಲಿ ನಮಗೆ ಸೌಂದರ್ಯ ಗೋಚರಿಸುವುದು ಆಕಾರಗಳಲ್ಲಿ ಮತ್ತು ವರ್ಣವೈವಿಧ್ಯದಲ್ಲಿ. ಪ್ರತಿಯೊಂದು ವಸ್ತುವಿಗೂ ಒಂದು ನಿರ್ದಿಷ್ಟವಾದ ಆಕಾರ, ನಿರ್ದಿಷ್ಟವಾದ ವರ್ಣವಿಲಾಸ ಉಂಟು. ಆಕಾರದಲ್ಲಿ ನಮಗೆ ಗೋಚರಿಸುವುದು ಉದ್ದ, ಅಗಲ, ಗಾತ್ರ, ಇವುಗಳ ಮೇಲೆ ವರ್ಣವಿನ್ಯಾಸ. ಗಾತ್ರ ವರ್ಣಗಳಿಂದ ಕೂಡಿದ ಪ್ರತಿಯೊಂದು ವಸ್ತುವಿನಲ್ಲೂ ರೇಖಾಗಣಿತಕ್ಕೆ ಒಳಪಡುವ, ಒಂದು ರೇಖಾ ಸಂಯೋಜನೆ ನಮ್ಮನ್ನು ಬೆರಗಾಗಿಸುತ್ತದೆ. ಪ್ರಕೃತಿ ಒಂದು ರೇಖಾಗಣಿತ ದೃಷ್ಟಿಯನ್ನುಳ್ಳ ವರ್ಣಶಿಲ್ಪಿಯೋ ಏನೋ ಎನ್ನಿಸುವವಂತೆ, ಸೌಂದರ್ಯ ಎನ್ನುವುದು ವಸ್ತುಗಳ ವರ್ಣ ಗಾತ್ರಾದಿಗಳಂತೆ ಒಂದು ಗುಣವೋ ಏನೋ ಎಂಬಂತೆ ಭಾಸವಾಗುತ್ತದೆ.

ಪ್ಲೇಟೋಗಿಂತ ಹಿಂದೆ

ವಸ್ತುಗಳಲ್ಲಿ ನಮಗೆ ಗೋಚರಿಸುವ ಈ ರೇಖಾವಿನ್ಯಾಸ ಮತ್ತು ವರ್ಣಸಂಯೋಜನೆಯಿಂದ ಮೂರ್ತಗೊಳ್ಳುವ ಒಂದು ನಿರ್ದಿಷ್ಟವಾದ ಆಕಾರವೇ ಸೌಂದರ್ಯ ಎಂಬ ಭಾವನೆಯೂ ಸೌಂದರ್ಯ ಜಿಜ್ಞಾಸುಗಳಲ್ಲಿ ಮೂಡಿಬಂದಿದೆ. ಪ್ರಾಚೀನ ಗ್ರೀಕರಲ್ಲಿ ಈ ನಿಲುವಿನ ಪ್ರತಿಪಾದಕನಾದ ಪೈಥಾಗೊರಸ್ ಎಂಬ ಗಣಿತಶಾಸ್ತ್ರಜ್ಞನ ಮತವು ಗ್ರೀಕ್ ಸೌಂದರ‍್ಯ ಮೀಮಾಂಸಕರ ಮೇಲೆ ತನ್ನ ಪ್ರಭಾವವನ್ನು ಬೀರಿದೆ. ಯಾವುದು ಒಂದು ಬಗೆಯ ನಿರ್ದಿಷ್ಟವಾದ ಅಳತೆಯನ್ನು, ಅಚ್ಚುಕಟ್ಟನ್ನು ಹೊಂದಿದೆಯೋ ಅದೇ ಸೌಂದರ್ಯ ಎಂಬ ಅಭಿಪ್ರಾಯವನ್ನು, ಸೌಂದರ್ಯವನ್ನು ಕುರಿತು ಮೊಟ್ಟಮೊದಲು ಮಾತನಾಡಿದ ಪ್ಲೇಟೋ ತನ್ನ ವಾದದಲ್ಲಿ ಅಳವಡಿಸಿಕೊಂಡು, ರೇಖಾಗಣಿತದ ಪ್ರಾಥಮಿಕ ರೂಪಗಳಾದ ಸರಳರೇಖೆಗಳನ್ನೂ ತ್ರಿಕೋಣ ರಚನೆಗಳನ್ನೂ ಪರಿಪೂರ್ಣ ಸುಂದರ[1] ಎಂದು ಕರೆಯುತ್ತಾನೆ. ಕ್ರಿ. ಪೂ. ಎರಡನೆಯ ಶತಮಾನದಲ್ಲಿದ್ದ ಕ್ರಿಸಿಫಸ್ ಎನ್ನುವವನು ಮಾನವಶರೀರದ ಅಂಗಾಂಗಗಳಲ್ಲಿ ಕಂಡುಬರುವ ಒಂದು ಬಗೆಯ ಸಮಪ್ರಮಾಣ ರಚನೆ ದೇವಗಣಿತಕ್ಕೆ ಸಂಬಂಧಿಸಿದ್ದು ಎನ್ನುತ್ತಾನೆ. ಲಿಯೋನಾರ್ಡೋ ಡಾವಿನ್ಸಿಯು ರೇಖಾಗಣಿತ ಪ್ರಮಾಣವನ್ನೇ ಸೌಂದರ್ಯದ ಮೂಲ ಭಿತ್ತಿ ಎಂದು ಭಾವಿಸಿದ್ದನು. ಜೆಸ್ಸಿಂಗ್ ಎನ್ನುವವನು ಒಂದು ಸರಳ ರೇಖೆಯನ್ನು ನಡುವಣ ಯಾವುದೋ ಒಂದು ಬಿಂದುವಿನಲ್ಲಿ ಛೇದಿಸಿ, ಅದನ್ನು ಜೋಡಿಸಿದರೆ ಆಗುವ ತ್ರಿಕೋಣವೇ ಸೌಂದರ್ಯಮಾಪಕವೆಂದು ಹೇಳಿ ಅನೇಕ ವಸ್ತುಗಳ ರಚನೆಯ ಆಧಾರದ ಮೇಲೆ ಇದನ್ನು ಸಮರ್ಥಿಸಿದ್ದಾನೆ. ಗಣಿತಶಾಸ್ತ್ರದಲ್ಲಿ ಇದನ್ನು golden section ಎಂದು ಕರೆಯುತ್ತಾರೆ. ಹದಿಮೂರನೆಯ ಶತಮಾನದ ರೋಜರ್ ಬೇಕನ್, ಸಂಗೀತ ಎನ್ನುವುದು ಗಣಿತದಿಂದ ಪ್ರೇರಿತವಾದುದು ಎನ್ನುತ್ತಾನೆ. ಹದಿನೇಳನೆಯ ಶತಮಾನದ ಲಿಬ್ನಿಟ್ಸ್ ಎಂಬ ಶಾಸ್ತ್ರಜ್ಞ “ಸಂಗೀತ ಎನ್ನುವುದು ಅಜ್ಞಾತವಾಗಿ ನಡೆಯುವ ಮಾನಸಿಕ ಎಣಿಕೆಯಿಂದ ಮೂಡಿದುದು” ಎನ್ನುತ್ತಾನೆ.[2] ಸಾಹಿತ್ಯದಲ್ಲಿಯೂ ಇದು  ಪಂಕ್ತಿ ವಿನ್ಯಾಸದಲ್ಲಿ ಲಯದಲ್ಲಿ, ಛಂದಸ್ಸಿನಲ್ಲಿ ಗೋಚರಿಸಿದರೂ, ಸಾಹಿತ್ಯವನ್ನುಳಿದ ಬೇರೆಯ ಕಲಾಭಿವ್ಯಕ್ತಿಗಳಲ್ಲಿ ಮತ್ತು ಪ್ರಕೃತಿಯ ವಸ್ತುಗಳಲ್ಲಿ, ಒಂದು ಬಗೆಯ ಆಕಾರ, ರೇಖಾವಿನ್ಯಾಸ, ವರ್ಣವೈಖರಿ, ಎಣಿಕೆ, ಪ್ರಮಾಣಗಳುಂಟು. ಆದರೆ ಕಲಾಕೃತಿಯನ್ನಾಗಲೀ, ಪ್ರಕೃತಿಯ ಒಂದು ವಸ್ತುವನ್ನೇ ಆಗಲಿ ಕೇವಲ ವರ್ಣವಿಲಾಸದ, ರೇಖಾವಿನ್ಯಾಸದ ಒಂದು ರೀತಿ ಎಂದು ವರ್ಣಿಸಿದರೆ ಅದು ವಸ್ತು ಸ್ವರೂಪವನ್ನು ಸಂಪೂರ್ಣವಾಗಿ ವಿವರಿಸಿದಂತಾಗುವುದಿಲ್ಲ.  ಅದರಲ್ಲಿ, ಈ ರೇಖಾವಿನ್ಯಾಸಗಳನ್ನೂ ವರ್ಣವಿಲಾಸಗಳನ್ನೂ ಸಾಮರಸ್ಯಗೊಳಿಸುವುದರ ಮೂಲಕ ಅದನ್ನು ರಚಿಸಿದವನ – ವ್ಯಕ್ತಿಯ ಅಥವಾ ಶಕ್ತಿಯ – ಒಂದು ಅಭಿವ್ಯಕ್ತಿಯನ್ನು, ಅಥವಾ ಲಕ್ಷಣವನ್ನು ನಾವು ಕಾಣುವುದರಿಂದ ಅದನ್ನು ಸುಂದರ ಎಂದು ಹೇಳಬಹುದು.

ಸುಂದರವಾದ ವಸ್ತುಗಳು ನಿತ್ಯವೂ ವಿವಿಧರೂಪಗಳನ್ನು ತಾಳುತ್ತವೆ. ಒಂದು ವಸ್ತುವಿನಲ್ಲಿ ನಾವು ಕಾಣುವ ಸೌಂದರ್ಯ ಇಂದು ತೋರಿ ಮರುಕ್ಷಣದಲ್ಲೇ ಮರೆಯಾಗುತ್ತದೆ. ನೋಡ ನೋಡುತ್ತಲೇ ಹೂವಿನ ಬಣ್ಣ ಮಾಸುತ್ತದೆ; ಪಕಳೆಗಳು ನಲುಗಿ ಸಡಿಲವಾಗಿ ಉದುರಿ ಹೋಗುತ್ತವೆ. ಮೋಡದ ಆಕೃತಿ ನೋಡನೋಡುತ್ತಲೇ ಬದಲಾಯಿಸಿ ಕ್ಷಣಕ್ಕೊಂದು ರೂಪ ತಾಳಿಕೊಂಡು ಚಂಚಲ ಚಟುಲಗತಿಯಲ್ಲಿ ಸಾಗುತ್ತದೆ. ಒಂದು ಕ್ಷಣದಲ್ಲಿ ‘ಆಹಾ’ ಎನ್ನಿಸಿ, ಮತ್ತೊಂದು ಕ್ಷಣದಲ್ಲಿ ‘ಅಯ್ಯೋ’ ಎನ್ನಿಸಿ ಮಾಯವಾಗುವ ಈ ವರ್ಣಗಾತ್ರಾದಿ ವಿಲಾಸಗಳನ್ನು ನಾವು ಸೌಂದರ‍್ಯ ಎಂದು ಕರೆಯಬೇಕೆ? ‘ಹಾಗಾದರೆ ಸೌಂದರ‍್ಯ ಎನ್ನುವುದು ಕೇವಲ ಚಂಚಲವೆ’? ಕ್ಷಣಿಕವೆ’? ಈ ಚಾಂಚಲ್ಯತೆಗೆ ವೈವಿಧ್ಯತೆಗೆ ಮೂಲವಾದ ಶಾಶ್ವತವಾದ, ಅಚಂಚಲವಾದ ಶಕ್ತಿಯೊಂದು ಇದ್ದು, ಅದು ಹೇಗೆ ಈ ಚಾಂಚಲ್ಯದಲ್ಲಿಯೇ ನಾವೀನ್ಯತೆಯನ್ನು ತೋರಿ, ಶಾಶ್ವತಲೀಲೆಯಲ್ಲಿ ತೊಡಗಿದೆಯೇ ಎಂಬ ಪ್ರಶ್ನೆ ನಮ್ಮ ಎದುರು ನಿಲ್ಲುತ್ತದೆ. ವ್ಯಕ್ತದಿಂದ ಅವ್ಯಕ್ತದ ಕಡೆಗೆ ನಮ್ಮ ಚಿಂತನೆ ಹರಿಯುತ್ತದೆ.

ಲೋಕಸೌಂದರ‍್ಯದ ಬಗೆಗೆ ಆಧ್ಯಾತ್ಮಿಕ ವಿವರಣೆಯನ್ನು ನೀಡಿದವರಲ್ಲಿ ಬಹುಶಃ ಭಾರತೀಯ ಋಷಿಗಳೇ ಮೊದಲಿಗರೆಂದು ತೋರುತ್ತದೆ. ಭಾರತೀಯರಲ್ಲಿ ಋಷಿಗಳು ತಮ್ಮ ಆಧ್ಯಾತ್ಮಾನುಭವದಿಂದ ಸರ್ವವೂ ಭಗವದ್ ವಿಭೂತಿಯ ವಿನ್ಯಾಸಗಳು ಎಂದು ಕಂಡುಕೊಂಡುದರಿಂದಲೂ, ಮತ್ತು ಆ ತತ್ವ ದರ್ಶನಗಳು ಕಾಲದಿಂದಕಾಲಕ್ಕೆ ಪುನಃ ಪ್ರಕಾಶನಗೊಳ್ಳುತ್ತ ಬಂದುದರಿಂದಲೂ, ಬೌದ್ಧಿಕ ಮಟ್ಟದಲ್ಲಿ ಇಂಥ ವಿಚಾರಗಳ ವಿವೇಚನೆ ಮಾಡುವಾಗಲೂ ಸಹ, ಪಾಶ್ಚಾತ್ಯ ಚಿಂತಕರಲ್ಲಿಯಷ್ಟು ಅನಿಶ್ಚಯತೆ, ಅನಿರ್ದಿಷ್ಟತೆ ನಮ್ಮಲ್ಲಿ ಆಗಲಿಲ್ಲ. ಲೋಕದ ಎಲ್ಲಾ ವಸ್ತುಗಳೂ ದಿವ್ಯಸತ್ಯದ ಪ್ರಕಾಶನಗಳೆಂದೂ, ವಸ್ತುವಿನಲ್ಲಿ ನಾವು ಕಾಣುವ ಸೌಂದರ‍್ಯವೇನಿದ್ದರೂ, ಭಗವದ್ ವಿಭೂತಿಯ ಅಭಿವ್ಯಕ್ತಿಗಳೆಂದೂ ಸಾರಿದ ಮೊದಲಿಗರು ಭಾರತೀಯರು.

 

ಪ್ಲೇಟೋ

ಇದೇ ಬಗೆಯ ಮತವನ್ನು ಪಾಶ್ಚಾತ್ಯರಲ್ಲಿ ಮೊದಲು ಸಾರಿದವನು ಸೌಂದರ‍್ಯಪ್ರವಾದಿ ಪ್ಲೇಟೋ. ಪ್ಲೇಟೋನ ಗುರುವಾದ ಸಾಕ್ರಟೀಸನೂ “ಸೌಂದರ‍್ಯವೆಂದರೆ ಎಲ್ಲ

ವಸ್ತುಗಳಲ್ಲಿಯೂ ತರತಮವಾಗಿ ಪ್ರಕಾಶನಗೊಳ್ಳುವ ಒಂದು ವಿಶ್ವಶಕ್ತಿ”[3] ಎನ್ನುತ್ತಾನೆ. ಪ್ಲೇಟೋ ಸೌಂದರ‍್ಯ ಜಿಜ್ಞಾಸೆಯ ಬಗ್ಗೆ ಹೆಚ್ಚು ಗಮನಕೊಡದಿದ್ದರೂ ಅವನು ಲೋಕವಸ್ತುಗಳಲ್ಲಿ ನಾವು ಕಾಣುವ ಸೌಂದರ‍್ಯವೇನಿದ್ದರೂ ಅತೀತ ಸೌಂದರ‍್ಯದ ಒಂದು ಅನುಕರಣೆ ಮಾತ್ರ ಎನ್ನುತ್ತಾನೆ. ಆ ಮೂಲ ಸೌಂದರ‍್ಯವೆನ್ನುವುದು “ರೂಪವರ್ಣಾತೀತವಾದ ವಿಶಿಷ್ಟವಲ್ಲದ ಗುಣವೆಂಬಂತೆ ಯಾವುದಕ್ಕೂ ಅಂಟಿಕೊಳ್ಳದ ಒಂದು ಶಕ್ತಿ”[4] “ರಸಪರವಶತೆಗೆ ಸಂದ ಚಿತ್ತಕ್ಕೆ ವೇದ್ಯವಾಗುವ ಒಂದು ಅತೀಂದ್ರಿಯವಾದ ಆಧ್ಯಾತ್ಮಿಕ ಸತ್ವ”[5]. ಈ ಲೋಕದ ವಸ್ತುಗಳೆಲ್ಲವೂ ಅದರ ಛಾಯೆಗಳು. “ಈ ಲೋಕದ ಸೌಂದರ‍್ಯವೇನಿದ್ದರೂ ಸೌಂದರ‍್ಯದ ಈ ಹಂತದಲ್ಲಿ ಕನಿಷ್ಠದರ್ಜೆಯದು”[6]. ಹೀಗೆ ಪ್ಲೇಟೋ ವಸ್ತುಸೌಂದರ‍್ಯವನ್ನು ಕೀಳ್ಗಳೆದರೂ ಅವುಗಳು ದಿವ್ಯ ಸೌಂದರ‍್ಯದ ಸೋಪಾನಗಳು ಎನ್ನುವುದನ್ನು ಸಾರಿದ್ದಾನೆ. ಅವನೇ ಈ ಬಗ್ಗೆ ಹೀಗೆ ಹೇಳಿದ್ದಾನೆ:

“ಸೌಂದರ‍್ಯಪ್ರಿಯನಾದ ವ್ಯಕ್ತಿ ಈ ಲೋಕದ ಆಕೃತಿಗಳಲ್ಲಿ ಮೊದಮೊದಲು ಚೆಲುವನ್ನುಕಾಣುತ್ತಾನೆ. ಒಂದು ಆಕೃತಿಗೂ ಮತ್ತೊಂದು ಆಕೃತಿಗೂ ಇರುವ ಒಂದು ಬಗೆಯ ಸಂಬಂಧವನ್ನು ಗುರುತಿಸುತ್ತಾನೆ. ಆದರೆ ಅಷ್ಟರಲ್ಲೇ ಅವನ ಸೌಂದರ‍್ಯಪ್ರಿಯತೆ ನಿಲ್ಲಬಾರದು. ಏಕೆಂದರೆ ಈ ರೂಪನಿಷ್ಠ ಸೌಂದರ‍್ಯದಲ್ಲೇ ನಿಂತರೆ ಎಲ್ಲ ಆಕೃತಿಗಳಿಗೂ ಮೂಲವಾದ ಚೆಲುವಿನ ಚೈತನ್ಯವನ್ನು ಆತ ಕಾಣದೆ ಹೋಗಬಹುದು. ಯಾವಾಗ ಈ ಎಲ್ಲ ರೂಪಗಳಿಗೂ ಮೂಲವಾದ ಚೆಲುವೊಂದಿದೆ ಎನ್ನುವುದನ್ನು ಆತ ಗುರುತಿಸುತ್ತಾನೆಯೋ, ಆಗ ಅದನ್ನು ಗುರುತಿಸುವ ಗ್ರಹಿಸುವ ತನ್ನ ಅಂತರಂಗದ ಚೆಲುವು ಉಳಿದೆಲ್ಲಕ್ಕಿಂತ ಹಿರಿಯದು ಎಂಬ ಅರಿವನ್ನು ಪಡೆಯುತ್ತಾನೆ. ಆಗ ಎಲ್ಲವೂ ಅವನಿಗೆ ಚೆಲುವಾಗಿಯೇ ಗೋಚರಿಸುತ್ತದೆ. ಹಿಗ್ಗದ, ಕುಗ್ಗ,ದ ನಿರಂತರವಾದ, ಪರಮವಾದ, ನಿತ್ಯನೂತನವಾದ, ಸೃಷ್ಟಿಶೀಲವಾದ ಚೆಲುವಿನ ಲೀಲೆಯನ್ನು ಅವನು ಕಾಣುತ್ತಾನೆ. ಆಗ ಅವನು ಈ ಮರ್ತ್ಯಸೌಂದರ‍್ಯವೇನಿದ್ದರೂ ಅಮರ್ತ್ಯಸೌಂದರ‍್ಯಕ್ಕೆ ಸೋಪಾನವೆಂದರಿತು ದಿವ್ಯ ಸೌಂದರ‍್ಯಾನುಭವವನ್ನು ಪಡೆಯುವ ಮಟ್ಟಕ್ಕೆ ಏರಬಹುದು. ಮಾನವನಿಗೆ ಸೌಂದರ‍್ಯದರ್ಶನದೃಷ್ಟಿ ಲಭಿಸಿದಾಗ ಅವನು ದೇವತೆಗಳ ಹೆಗಲೆಣೆಯಾಗಿ ನಿಂತು ಅಮರನಾಗುತ್ತಾನೆ.”[7]

ಇಂದ್ರಿಯಸೌಂದರ‍್ಯ, ಅದನ್ನು ಗ್ರಹಿಸುವ ಆತ್ಮದ ಸೌಂದರ‍್ಯ, ಇವೆಲ್ಲದರ ಮೂಲವಾದ ದೈವೀ ಅಥವಾ ಕೇವಲ ಸೌಂದರ‍್ಯ – ಇವುಗಳ ವಿಚಾರವನ್ನು ಪ್ಲೇಟೋ ಹೇಳಿರುವ ರೀತಿಯನ್ನು ಮೇಲಿನ ಹೇಳಿಕೆ ಸ್ಪಷ್ಟಪಡಿಸುತ್ತದೆ. ಇದೇ ಮತವನ್ನು ನಾವು “ಸೌಂದರ‍್ಯವೆನ್ನುವುದು ದಿವ್ಯಾನಂದದ ವಸ್ತು. ಜಗತ್ತಿನಲ್ಲಿ ಏನೇನು ಸುಂದರವಾಗಿದೆಯೋ ಅದೆಲ್ಲ ಆ ವಸ್ತುವಿನಿಂದ ತುಂಬಿದೆ – ಅದರ ಸ್ವಭಾವದಿಂದ ರೂಪಿಸಲ್ಪಟ್ಟಿದೆ. ವಸ್ತುಗಳಲ್ಲಿ ನಿಷ್ಠಿತವಾಗಿರುವ ಕೇವಲ ಗುಣವೇ ಸೌಂದರ‍್ಯ”[8], ಎನ್ನುವ ಮಾರ್ಕಸ್ ಅರಿಲಿಯಸ್‌ನ ಮಾತಿನಲ್ಲಿಯೂ, “ಕೇವಲ ಸೌಂದರ್ಯ ಈ ಲೋಕದ ಅನಂತ ವಸ್ತುಗಳ ಮೂಲಕ ಮಿರುಗುತ್ತದೆ. ಸೌಂದರ‍್ಯ ಎನ್ನುವುದು ವಸ್ತುಗಳ ಕೇವಲ ರಚನಾವಿನ್ಯಾಸವಲ್ಲ – ಅವುಗಳ ಮೂಲಕ ಪ್ರಕಾಶಿಸುವ ಒಂದು ಬೆಳಕು,”[9] “ಮನಸ್ಸು ಪ್ರಥಮತಃ ಸುಂದರವಾಗಿಲ್ಲದಿದ್ದಲ್ಲಿ ಅದು ಸೌಂದರ‍್ಯವನ್ನು ಗುರುತಿಸಲು ಸಾಧ್ಯವಿರುತ್ತಿರಲಿಲ್ಲ. ಪ್ರತಿಯೊಂದೂ ದಿವ್ಯಚೇತನದಿಂದ ರೂಪಿಸಲ್ಪಟ್ಟಿರುವುದರಿಂದಲೇ ಪರಸ್ಪರ ಸಂಪರ್ಕವನ್ನು ಪಡೆಯಬಲ್ಲವು”[10] ಎಂದ ಪ್ಲಾಟಿನಸ್ಸಿನ ಮಾತಿನಲ್ಲಿಯೂ ಮತ್ತು ಮುಂದೆ ಬಂದ ಪಾಶ್ಚಾತ್ಯ ತತ್ವಜ್ಞರಲ್ಲಿ ಕವಿಗಳಲ್ಲಿ ಪ್ಲೇಟೋನಿಂದ ಹೊರಟ “ಆದಿಕಾರಣವಾದ”ದ ವಿಚಾರಧಾರೆಯೇ ಬೇರೆ ಬೇರೆ ರೂಪಗಳಲ್ಲಿ ಪ್ರವಹಿಸಿ, ಪ್ರಕಾಶಿಸಿರುವುದನ್ನು ಕಾಣಬಹುದು.

ಇಂದ್ರಿಯ ಗೋಚರವಾಗುವ ಸೌಂದರ‍್ಯವನ್ನು ಕುರಿತು ಎರಡು ರೀತಿಯ ವಿವರಣೆ ಮಾತ್ರ ಸಾಧ್ಯ. ಈ ಎಲ್ಲ ಚೆಲುವಿನ ವ್ಯಾಪಾರಕ್ಕೂ ಮೂಲವಾದ ದೈವೀ ಚೈತನ್ಯವೊಂದಿದೆ ಎಂದು ಅದರ ಕಡೆ ಕೈ ತೋರಿಸುವುದೊಂದು; ಈ ಲೋಕದಲ್ಲೇ ನಾವು ಕಾಣುವ ವಸ್ತುಗಳು ಮನೋರಮವಾಗಿರುವುದರಿಂದ ಸುಂದರವಾಗಿ ತೋರುತ್ತವೆ ಎನ್ನುವುದು ಮತ್ತೊಂದು.

ಸಂತೋಷ ತತ್ವ

ಲೋಕದಲ್ಲಿ ವಸ್ತುಗಳು ಮನೋಹರವಾಗಿವೆ. ನಮ್ಮ ನಮ್ಮ ಅನುಭವಗಳನ್ನೇ ಗಮನಿಸಿ ಹೇಳುವುದಾದರೆ ವಸ್ತುಗಳು ಅವುಗಳ ಬಣ್ಣ, ಆಕಾರ, ಚಲನೆ, ನಾದಗಳಿಂದ ನಮ್ಮ ಇಂದ್ರಿಯಾನುಭವಕ್ಕೆ ಸಂದು ತನ್ಮೂಲಕ ಮನಸ್ಸನ್ನು ರಮಿಸುತ್ತವೆ. ಆ ವಸ್ತುಗಳು ಏಕೆ ಮನಸ್ಸನ್ನು ರಮಿಸುತ್ತವೆ ಎಂಬ ಬಗ್ಗೆ ಹಲವಾರು ಮತಗಳಿವೆ.

ಮೊದಲನೆಯದಾಗಿ, ಮನಸ್‌ಶಾಸ್ತ್ರಜ್ಞರು ಹೇಳುವಂತೆ ನಮ್ಮಲ್ಲಿ ಒಂದು ವಸ್ತು ಸುಂದರ ಎಂಬ ಭಾವನೆ ಉಂಟಾಗಲು ಕಾರಣ, ಆ ವಸ್ತುಗಳಲ್ಲಿರುವ ಪ್ರತಿಪರಮಾಣುಗಳಿಂದ ಹೊರಟ ತೇಜಸ್ಸು, ಧ್ವನಿ, ರಸ ಇವೇ ಮೊದಲಾದ ಗುಣ ಪರಂಪರೆಗಳು ಬಹಿರ್ ಇಂದ್ರಿಯಗಳನ್ನು ಮುಟ್ಟಿ, ಆಯಾ ಇಂದ್ರಿಯಗಳ ಭಿತ್ತಿಗಳ ಮೇಲೆ ಒಂದು ವಿಧವಾದ ವಿಚಿತ್ರ ಸಂಸ್ಕಾರಗಳನ್ನು ಉಂಟುಮಾಡುವುವು. ಆಗ ಅಂತರಂಗದಲ್ಲಿ ಅದೇ ಬಗೆಯಾದ ಸಮಾನಾನುಭವಗಳು ಜಾಗ್ರತಗೊಂಡು ಸದ್ಯಾನುಭವದ ಸಂಪರ್ಕಸಾಮರಸ್ಯದಿಂದ ಆ  ವಸ್ತು ಸುಂದರವೋ ಅಸುಂದರವೋ ಎಂಬುದು ಅರಿವಿಗೆ ಬರುತ್ತದೆ.[11]

ಅಂದರೆ ನಮ್ಮ ಮನಸ್ಸಿನಲ್ಲಿ ಒಂದು ವಸ್ತು ಸುಂದರ ಎಂಬ ಭಾವನೆ ಉಂಟಾಗಲು ಆ ವಸ್ತುಗಳೂ ಮತ್ತು ಶತಶತಮಾನಗಳಿಂದ ಅವು ನಮ್ಮಲ್ಲಿ ಉಂಟು ಮಾಡಿರುವ ಪರಿಣಾಮಗಳೂ ಕಾರಣ. ವಸ್ತುವೊಂದು ನಮ್ಮ ಅಂತರಂಗದಲ್ಲಿ ಉಂಟು ಮಾಡುವ ಈ ಅನುಭವ ಸಂತೋಷರೂಪವಾದುದು. ಹೀಗೆ ಸಂತೋಷವಾಗಲು ಕಾರಣ, ಹಾಗೆ ನಮ್ಮ ಮೇಲೆ ಪರಿಣಾಮ ಮಾಡಿದ ವಸ್ತು ನಮಗೆ ಪ್ರಿಯವೂ, ಹಿತವೂ ಆಗಿರುವುದೇ. ಒಂದು ವೇಳೆ ಆ ವಸ್ತುವು ನಮಗೆ ಪ್ರಿಯವಲ್ಲದಿದ್ದ ಪಕ್ಷದಲ್ಲಿ ಅದು ಬೇರೆಯ ರೀತಿಯ ಪರಿಣಾಮವನ್ನುಂಟುಮಾಡಿ, ಆ ವಸ್ತುವು ಸುಂದರವಲ್ಲ ಎಂಬ ತೀರ್ಮಾನವನ್ನು ನಮ್ಮಲ್ಲಿ ಉಂಟುಮಾಡುತ್ತದೆ. “ನಾವು ಸುಂದರವಾದ ವಸ್ತುಗಳ ಬಗೆಗೆ ಎಷ್ಟೇ ಆಳವಾಗಿ ಪರಿಶೀಲಿಸಿದರೂ, ಅದರ ಬಗ್ಗೆ ಏನು ವಿವರಣೆ ನೀಡಿದರೂ ಕಟ್ಟಕಡೆಗೆ ನಮ್ಮ ಸರಳ ಸಾಧಾರಣವಾದ ಬೇಕು ಬೇಡಗಳೇ, ಇಷ್ಟ ಅನಿಷ್ಟಗಳೇ ಮೂಲ ಎಂಬ ಸಿದ್ಧಾಂತಕ್ಕೆ ತಲುಪುತ್ತೇವೆ.”[12] “ನೋವು ನಲಿವುಗಳು ಸೌಂದರ್ಯದ ಮತ್ತು ಅಸೌಂದರ್ಯದ ಅತ್ಯಂತ ಆವಶ್ಯಕವಾದ ಸಹಚರಿಗಳೂ ಮಾತ್ರವಲ್ಲ, ಅವೇ ಸೌಂದರ‍್ಯದ ಸಾರ…. ಸೌಂದರ್ಯದ ಸಂವೇದನೆ, ಅದು ಬೇರೆ ಇನ್ನೇನಾದರೂ ಆಗಿರಲಿ, ಅದು ಯಾವಾಗಲೂ ಸಂತೋಷರೂಪವಾದುದು.”[13]

ವಸ್ತುವೊಂದು ಸುಂದರವೆಂಬ ಅರಿವನ್ನುಂಟುಮಾಡಲು ಅದು ನಮ್ಮ ಮೇಲೆ ಮಾಡುವ ಪ್ರಭಾವವೇ ಕಾರಣ ಎಂಬ ಮೇಲಿನ ಈ ವಾದ ದೋಷಪೂರ್ಣವಾದುದು. ಸೌಂದರ್ಯ ಎನ್ನುವುದು ಅದರ ವರ್ಣಗಾತ್ರಾದಿಗಳಂತೆ ವಸ್ತುನಿಷ್ಠವಾಗಿದ್ದ ಪಕ್ಷದಲ್ಲಿ ಅದು ಎಲ್ಲರಿಗೂ ಸುಂದರವಾಗಿ ಕಾಣಬೇಕಾಗಿತ್ತು. ಒಬ್ಬನಿಗೆ ಇಂದು ಸುಂದರವಾಗಿ ಕಂಡ ವಸ್ತು ಬೇರೊಬ್ಬನಿಗೆ ಸುಂದರವಾಗಿ ಕಾಣದಿರಬಹುದು. ಹೀಗೆ ಅದು ಒಬ್ಬೊಬ್ಬನಿಗೂ ಒಂದೊಂದು ರೀತಿಯಾಗಿ ಅನುಭವಕ್ಕೆ ಬರುವುದರಿಂದ ಪ್ರತಿಯೊಬ್ಬನ ಅನುಭವವೂ ಸುಂದರವಾದ ವಸ್ತುವನ್ನು ಕುರಿತು ಬೇರೆ ಬೇರೆಯೆ. ಇದು ಏಕೆ ಎನ್ನುವ ಪ್ರಶ್ನೆಗೆ ಮೇಲೆ ನಿರೂಪಿಸಿರುವ ಮತದಲ್ಲೇ ಉತ್ತರವಿದೆ. ಪ್ರತಿಯೊಬ್ಬನ ಇಷ್ಟಾನಿಷ್ಟದ, ಪ್ರಿಯ ಅಪ್ರಿಯದ ಮತ್ತು ಅವನ ಮೇಲಾಗಿರುವ ಪರಿಣಾಮದ ತೀವ್ರತೆಯ ಮೇಲೆ ಆ ವ್ಯತ್ಯಾಸ ನಿಂತಿದೆ – ಎನ್ನುವುದು. ಎರಡನೆಯದಾಗಿ ಸೌಂದರ್ಯ ಎನ್ನುವುದು, ಒಂದು ಸಂತೋಷಾನುಭವ ಎನ್ನುವ ಅಂಶವನ್ನು ಪರಿಶೀಲಿಸೋಣ: ಸುಂದರವಾದ ವಸ್ತುಗಳೇನೋ ಸಂತೋಷದಾಯಕವಾದವುಗಳೇ, ಆದರೆ ಸಂತೋಷವನ್ನು ನೀಡುವ ವಸ್ತುಗಳೆಲ್ಲವೂ ಸುಂದರವಾಗಿಯೇ ಇರುತ್ತವೆ ಎನ್ನಲು ಸಾಧ್ಯವೇ? ತಿಂಡಿ ತಿನಸುಗಳನ್ನು ಸವಿಯುವಾಗಲೂ ಸಂತೋಷವಾಗುತ್ತದೆ; ಕವನವನ್ನು ಓದುವಾಗಲೂ ಸಂತೋಷವಾಗುತ್ತದೆ; ಒಂದು ಗಣಿತ ಸಮಸ್ಯೆಯನ್ನು ಬಿಡಿಸುವಾಗಲೂ ಸಂತೋಷವಾಗುತ್ತದೆ. ಆದರೆ ಈ ಸಂತೋಷವೆಲ್ಲಾ ಒಂದೇಯೇ’? ತಿಂಡಿತಿನ್ನುವಾಗ ಸಂತೋಷವಾದರೆ ಆ ತಿಂಡಿಯನ್ನು ಸುಂದರ ಎಂದು ಕರೆಯಬಹುದೆ? ಒಂದು ಪ್ರಹಸನವನ್ನು ನೋಡುವಾಗ ಸಂತೋಷವಾಗುವುದರಿಂದ ಅದನ್ನು ನಾವು ಸುಂದರವಾದ ಪ್ರಹಸನ ಎಂದು ಕರೆಯಬಹುದು. ಆದರೆ ಅತ್ಯುತ್ತಮವಾದ ರುದ್ರನಾಟಕವೊಂದನ್ನು ನೋಡಿದಾಗ ನಮ್ಮ ಮನಸ್ಸು ತಳಮಳಗೊಳ್ಳುತ್ತದೆ, ವೇದನೆಯಾಗುತ್ತದೆ. ಇದು ಸಂತೋಷವಲ್ಲವಾದುದರಿಂದ ಆ ರುದ್ರನಾಟಕವನ್ನು ಸುಂದರವಲ್ಲ ಎಂದು ಕರೆಯಬಹುದೆ? ಹೀಗೆ ಸಂತೋಷದಾಯಕವಾಗಿರುವುದರಿಂದಲೇ ಒಂದು ವಸ್ತು ಸುಂದರವಾಗಿದೆ ಎಂದು ತಿಳಿಯುವುದು ದೊಡ್ಡ ಪ್ರಮಾದವಾಗುತ್ತದೆ.

ಲೋಕದ ವಸ್ತುಗಳು ಸಂತೋಷದಾಯಕವಾಗಲು ಇನ್ನು ಹಲವು ದೃಷ್ಟಿಗಳು ಕಾರಣವಿರಬಹುದು. ಯಾವ ವಸ್ತು ನಮ್ಮ ದೈನಂದಿನ ಉಪಯೋಗದ ವಸ್ತುವೋ ಅದನ್ನು ಸುಂದರ ಎಂದು ಬಹುಮಂದಿ ಭಾವಿಸಿರುವುದುಂಟು. ಸಾಕ್ರೆಟೀಸನು ಸಹ ಸೌಂದರ್ಯದ ಬಗ್ಗೆ ಮಾತನಾಡುತ್ತ, ಕಣ್ಣುಗಳು ಸುಂದರವೆಂದು ತೋರಲು ಕಾರಣ, ಅವುಗಳ ಮೂಲಕ ನಾವು ವಸ್ತುಗಳನ್ನು ನೋಡುತ್ತೇವೆ ಅನ್ನುವುದರಿಂದ; ಯಾವ ಕಣ್ಣುಗಳು ನೋಟದ ಪ್ರಯೋಜನವನ್ನು ಹೊಂದಿವೆಯೋ ಅವು ಸುಂದರ, ಅವು ಕುರುಡಾಗಿದ್ದರೆ ಸುಂದರ ಎನ್ನಲು ಬರುವುದಿಲ್ಲ ಎನ್ನುತ್ತಾನೆ. ಯಾವ ಮನೆಗಳು ವಾಸಕ್ಕೆ ಅನುಕೂಲವಾಗಿವೆಯೋ ಅವೇ ಸುಂದರವಾದ ಮನೆಗಳು ಎನ್ನುತ್ತಾನೆ. ಹೀಗೆ ಲೋಕದಲ್ಲಿ ವಸ್ತುಗಳು ಪ್ರಿಯವಾಗಲು ತನ್ಮೂಲಕ ಸಂತೋಷವನ್ನು ನೀಡಲು ಅವು ಉಪಯೋಗದ ವಸ್ತುಗಳಾಗಿರುವುದೂ ಕಾರಣ ಎಂಬ ವಾದವಿದೆ. ಹಾಗಾದರೆ ಕಲಾಕೃತಿಗಳನ್ನು ಸುಂದರ ಎನ್ನುವಾಗಲೂ, ಅವುಗಳಿಂದ ಯಾವ ಬಗೆಯ ಉಪಯೋಗವಿದೆ ಎಂಬ ಪ್ರಶ್ನೆಗೆ, ಕಲಾಕೃತಿ ಸಾಮಾಜಿಕ ಸುಧಾರಣೆಯನ್ನೂ, ಶ್ರೇಯಸ್ಸನ್ನೋ ಸಾಧಿಸುವಂತಿದ್ದರೆ, ಮತ ತತ್ವಗಳನ್ನು ಪ್ರಚಾರಮಾಡುವ ಸಾಧನವಾದರೆ ಅದೇ ಕಲಾಕೃತಿಯಿಂದಾಗಬೇಕಾದ ಪ್ರಯೋಜನ; ಈ ಉದಾತ್ತ ಪ್ರಯೋಜನಗಳನ್ನು ಕಲೆ ಸಾಧಿಸುವುದರಿಂದ ಅದು ಪ್ರಿಯವಾಗುತ್ತದೆ, ಸುಂದರವಾಗುತ್ತದೆ – ಎನ್ನುವ ವಾದವನ್ನು ರಸ್ಕಿನ್, ಟಾಲ್‌ಸ್ಟಾಯ್ ಮೊದಲಾದವರು ಪ್ರತಿಪಾದಿಸಿದ್ದಾರೆ.

ಆದುದರಿಂದ, ಸಂತೋಷದಾಯಕವಾದುದು ಸುಂದರ ಎಂಬ ಸೂತ್ರದಲ್ಲಿ ೧. ವಸ್ತು ತನ್ನ ವರ್ಣ ಗಾತ್ರಾದಿಗಳಿಂದ ನಮ್ಮ ಮನಸ್ಸಿನ ಮೇಲೆ ಮಾಡುವ ಪರಿಣಾಮರೂಪವಾದ ಸಂತೋಷವೇ ಸೌಂದರ್ಯ. ೨. ಈ ಸಂತೋಷಕ್ಕೆ ಕಾರಣವಾದುದು ಪ್ರಿಯ-ಅಪ್ರಿಯ, ಇಷ್ಟ -ಅನಿಷ್ಟಗಳು. ೩. ವಸ್ತು ಪ್ರಿಯವಾಗುವುದು (ಅ) ದೈನಂದಿನ ಉಪಯೋಗದ ವಸ್ತುವಾಗುವುದರಿಂದ (ಆ) ದೈನಂದಿನ ಸಾಮಾನ್ಯ ಉಪಯೋಗವನ್ನು ಮೀರಿದ ಸಮಷ್ಟಿಪ್ರಯೋಜನಕ್ಕೆ, ಧಾರ‍್ಮಿಕವಾಗಿ, ನೈತಿಕವಾಗಿ ನೆರವಾಗುವುದರಿಂದ – ಎನ್ನುವ ಅಂಶಗಳು ಅಡಕವಾಗಿವೆ.

‘ಸಂತೋಷದಾಯಕವಾದುದೆಲ್ಲವೂ ಸುಂದರ’ – ಎನ್ನುವ ಸೂತ್ರ ಅಸಮರ್ಪಕವಾದುದು. ಏಕೆಂದರೆ ಒಂದು ಮತದವರಿಗೆ ಪ್ರಿಯವಾದುದು, ಇಷ್ಟವಾದುದು ಬೇರೊಂದು ಮತದವರಿಗೆ ಪ್ರಿಯವಾಗದೆ, ಇಷ್ಟವಾಗದೆ ಹೋಗಬಹುದು, ಯಾವುದು ಒಂದು ಕಾಲದಲ್ಲಿ ಇಷ್ಟವಾಗಿ, ಸುಖವಾಗಿ, ಪ್ರಿಯವಾಗಿ, ಸುಂದರವಾಗಿ ತೋರಿತೋ ಅದೇ, ಬೇರೊಂದು ಕಾಲದಲ್ಲಿ ಅನಿಷ್ಟವಾಗಿ, ಅಸುಖವಾಗಿ, ಅಪ್ರಿಯವಾಗಿ ಅಸುಂದರವಾಗಿ ತೋರಬಹುದು. ವ್ಯಕ್ತಿಯ ಇಷ್ಟಾನಿಷ್ಟಗಳು, ಸುಖ ಅಸುಖಗಳು ಅವನವನ ಅಭಿರುಚಿಗೆ, ಅನುಭವಕ್ಕೆ ಅನುಸಾರವಾಗಿ ಬದಲಾಯಿಸುತ್ತಾ ಹೋಗುವುದರಿಂದ ಅವುಗಳ ಆಧಾರದಿಂದ ನಾವು ಸೌಂದರ್ಯದ ಸೂತ್ರವನ್ನು ಕಟ್ಟಲಾಗುವುದಿಲ್ಲ. ಆದುದರಿಂದ ಲೋಕದ ಎಲ್ಲ ವಸ್ತುಗಳು ನಮ್ಮ ಮೇಲೆ ಒಂದು ಬಗೆಯ ಪರಿಣಾಮಮಾಡುವುವಾದರೂ, ಸುಂದರವಾದ ವಸ್ತುಗಳು ಮಾಡುವ ಪರಿಣಾಮವೆ ಬೇರೆ ರೀತಿಯಾದುದು – ಎನ್ನುವುದನ್ನು ಪರಿಶೀಲಿಸಬೇಕಾಗುತ್ತದೆ.

ಕ್ಯಾಂಟನ ಸೂತ್ರ

ಈ ಬೇರೆ ರೀತಿಯಾದ ಪರಿಣಾಮ ಎಂಥದು ಎನ್ನುವುದನ್ನು ಇಮ್ಯಾನುಯಲ್ ಕ್ಯಾಂಟ್ ವಿವರಿಸುತ್ತಾನೆ. ಒಂದು ಪದಾರ್ಥದಿಂದ ಉಪಯೋಗವಾದರೆ ಸಾಮಾನ್ಯವಾಗಿ ನಮಗೆ ಸಂತೋಷವಾಗುತ್ತದೆ. ಆದರೆ ಕೆಲವು ವಸ್ತುಗಳು ಉಪಯೋಗವಾಗಲಿ ಆಗದೇ ಇರಲಿ ಅವು ನಮಗೆ ಸಂತೋಷವನ್ನುಂಟು ಮಾಡುತ್ತವೆ. ಇಂತಹ ಒಂದು ಆನಂದವನ್ನುಂಟುಮಾಡುವ ಲಕ್ಷಣ ಸೌಂದರ್ಯದ್ದು. ಲೋಕದಲ್ಲಿ ಕಾಣುವ ವಸ್ತುಗಳನ್ನು ನಾವು ಒಂದು ಬಗೆಯ ಅನಾಸಕ್ತ ದೃಷ್ಟಿಯಿಂದ ನೋಡಿದ್ದೇ ಆದರೆ ಅವು ಒಂದು ರೀತಿಯ ಸಂತೋಷವನ್ನು ಕೊಡುತ್ತವೆ. ಈ ಬಗೆಯ ನಿರ್ಲಿಪ್ತ ಪರಿಭಾವನೆಯಿಂದ ನೋಡುವುದನ್ನು ಆಸ್ವಾದದ ಲಕ್ಷಣವನ್ನಾಗಿ ಮಾಡಿಕೊಂಡಾಗ ವಸ್ತುವಿನಿಂದ ಒದಗುವ ಸಂತೋಷ ಬೇರೆಯೆ ಆಗಿರುತ್ತದೆ. ನಿರ್ಲಿಪ್ತ ಎಂದರೆ, ಆ ವಸ್ತು ತನ್ನದಾಗಬೇಕು, ತನ್ನ ಯಾವುದೋ ಹಲವಾರು ದೃಷ್ಟಿಗಳಿಗೆ ಸಾಧಕವಾಗಬೇಕು ಎನ್ನುವ ಪ್ರಾಯೋಜನಿಕ ಹಂಬಲಗಳಿಂದ ದೂರವಾದ ಒಂದು ಸ್ಥಿತಿ. ಹೀಗೆ ಬೇರೆಯೆ ಆದ ಸಂತೋಷವನ್ನು ಉಂಟುಮಾಡುವ ವಸ್ತುಗಳನ್ನು ಸುಂದರ ಎಂದು ಕರೆಯಬಹುದು. ‘ಸಂತೋಷಕರವಾದುದೆಲ್ಲವೂ ಸುಂದರ’ ಎಂಬ ಹಿಂದಿನವರ ಸೂತ್ರವನ್ನು ಕ್ಯಾಂಟನ ಹೊಸ ತತ್ವ ತಿದ್ದಿ, ಯಾವುದು ನಿರ್ಲಿಪ್ತ ಪರಿಭಾವನೆಯಿಂದ ಒದಗುವ ಸಂತೋಷವನ್ನು ನೀಡುವುದೋ ಅದೆಲ್ಲವೂ ಸುಂದರ ಎಂಬ ಅಭಿಪ್ರಾಯವನ್ನು ಮಂಡಿಸುತ್ತದೆ, ಆದರೆ ಇಲ್ಲಿ ‘ಸಂತೋಷ’ ಎಂದರೆ ಹಿಂದಿನವರು ಭಾವಿಸಿದಂತೆ ಇಂದ್ರಿಯ ಸುಖದಿಂದ ಒದಗುವ ಸಂತೋಷವಲ್ಲ. ಏಕೆಂದರೆ ಇಂದ್ರಿಯ ಸುಖವೆಲ್ಲವೂ ವಸ್ತುಗಳ ಬಗ್ಗೆ ನಾವು ತೋರುವ ಆಸಕ್ತಿಯನ್ನು ಅವಲಂಬಿಸಿರುತ್ತದೆ. ಆದುದರಿಂದ ಇದು ಬೇರೆ ಯಾವ ಲೌಕಿಕ ಪ್ರಯೋಜನದ ಅರಿವನ್ನು ಹೊಂದದ ಒಂದು ಮಾನಸಿಕ ಅನುಭವ. ಈ ಬಗೆಯ ನಿರ್ಲಿಪ್ತ ಪರಿಭಾವನೆಯನ್ನೇ ಸೌಂದರ್ಯಾಸ್ವಾದದ ಲಕ್ಷಣವಾಗಿಸಿಕೊಂಡಾಗ ಒದಗುವ ಈ ಸಂತೋಷ ಸಾರ್ವತ್ರಿಕವಾದುದು; ವಿಶ್ವಸಾಮಾನ್ಯವಾದುದು. ಇದು ವಿಶ್ವಸಾಮಾನ್ಯ ಎಂದರೆ ಎಲ್ಲರಲ್ಲೂ ಒಂದೇ ಸಮ ಎಂದಲ್ಲ. ಪ್ರತಿಯೊಬ್ಬನಿಗೂ ವಿಶಿಷ್ಟವಾದುದು. ಆದರೆ ಅದರ ಲಕ್ಷಣ ಮಾತ್ರ ಇಂದ್ರಿಯಾನುಭವದಿಂದ ಒದಗುವ ಸಾಮಾನ್ಯ ಸಂತೋಷದಿಂದ ಭಿನ್ನವಾದುದು. ಕ್ಯಾಂಟನ ಈ ವಿಚಾರ ಪಾಶ್ಚಾತ್ಯ ಸೌಂದರ್ಯಮೀಮಾಂಸೆಯಲ್ಲಿ ಅತಿಮುಖ್ಯವಾದ ಒಂದು ಘಟ್ಟ.

ಕ್ಯಾಂಟನು ಪ್ರತಿಪಾದಿಸಿದ ಆಸ್ವಾದ ತತ್ವದಲ್ಲಿ ವಿಮರ್ಶಕರು ತೋರಿಸಿರುವ ಹಲವು ದೋಷಗಳನ್ನು ಗಮನಿಸಿ ಮುಂದುವರಿಯಬಹುದು: ಅನುಭವ ಪ್ರಾಮಾಣ್ಯವನ್ನು ಎತ್ತಿಹಿಡಿದವರು ವಸ್ತುಸೌಂದರ್ಯದ ಅರಿವಿಗೆ ಇಂದ್ರಿಯಾನುಭವಗಳನ್ನು ಮಾತ್ರ ಆಧಾರವಾಗಿಸಿಕೊಳ್ಳುವುದರಲ್ಲಿ ಯಾವ ತಪ್ಪನ್ನು ಮಾಡಿದರೋ, ಅದೇ ತಪ್ಪನ್ನು ಕ್ಯಾಂಟ್ ಇಂದ್ರಿಯಾನುಭವವನ್ನೂ ಮತ್ತು ವಸ್ತು ಮಾಡಬಹುದಾದ ಪರಿಣಾಮವನ್ನೂ ಗಮನಕ್ಕೆ ತೆಗೆದುಕೊಳ್ಳದೆ ಮಾಡಿದ್ದಾನೆ.[14] ಕ್ಯಾಂಟನು ಸೌಂದರ್ಯವೆಂಬುದು ವಸ್ತುಗಳಲ್ಲಿ ಅಭಿವ್ಯಕ್ತವಾಗುವ ಒಂದು ನಿಯತವಾದ ಉದ್ದೇಶ; ಅದನ್ನು ನೇರವಾಗಿ ಅರಿವು ಮತ್ತು ಕಲ್ಪನಾಶಕ್ತಿಯ ಮೂಲಕ ತಿಳಿಯಬಹುದು ಎನ್ನುತ್ತಾನೆ. ಎರಡನೆಯದಾಗಿ ಈ ಅರಿಯುವ ಶಕ್ತಿ ವಸ್ತುವಿಗೂ, ವ್ಯಕ್ತಿಗೂ ಇರುವ ನೇರವಾದ ಸಂಬಂಧ; ಆ ಸಂಬಂಧದಲ್ಲೇ ವಸ್ತುಸೌಂದರ್ಯದ ಅಸ್ತಿತ್ವ; ಅದರ ಹೊರತಾದ ಸೌಂದರ್ಯ ವಸ್ತುವಿಗೆ ಇದ್ದರೂ ಇರದಿದ್ದರೂ ಅದು ಅಪ್ರಕೃತ ಎನ್ನುತ್ತಾನೆ.[15] ಮೂರನೆಯದಾಗಿ ಸೌಂದರ‍್ಯಾನುಭವ ಅವನ ಮತದಲ್ಲಿ ವ್ಯಕ್ತಿನಿಷ್ಠವಾದರೂ ಅದು ವಿಶ್ವಸಾಮಾನ್ಯ. ಒಂದು ವಸ್ತು ನಿರ್ಲಿಪ್ತ ಪರಿಭಾವನೆಯಿಂದ ಕಂಡ ಒಬ್ಬನಿಗೆ ಸುಂದರವಾಗಿ ತೋರಿದರೆ, ಅದು ಅದೇ ರೀತಿಯ  ಪರಿಭಾವನೆಯಲ್ಲಿ ತೊಡಗಿದವರಿಗೂ ಅಷ್ಟೇ ಸುಂದರವೆಂದೇ ತೋರುತ್ತದೆ ಎಂದು ಹೇಳಲು ಬಾರದು. ಹೀಗೆ ಇವನ ತತ್ವದಲ್ಲಿ ಹಲವು ಅರಕೆಗಳಿದ್ದರೂ ಅವನು ಸೌಂದರ್ಯಮೀಮಾಂಸೆಗೆ ನೀಡಿದ ‘ನಿರ್ಲಿಪ್ತ ಪರಿಭಾವನೆ’ಯ ಸೂತ್ರ ಮಾತ್ರ ನಿರ್ವಿವಾದವಾಗಿಯೂ ಅಮೋಘವಾದುದು.

ಷೋಪೆನ್ ಹೌರ್

ಕ್ಯಾಂಟನ ಈ ತತ್ವದ ಆಧಾರದ ಮೇಲೆ ಷೋಪೆನ್ ಹೌರನು ತನ್ನ ವಿಚಾರವನ್ನು ಮುಂದುವರಿಸಿದ್ದಾನೆ. ಒಂದು ವಸ್ತುವನ್ನು ನಿರ್ಲಿಪ್ತ ಪರಿಭಾವನೆಯಲ್ಲಿ ನೋಡುವುದು ಹೇಗೆ- ಎನ್ನುವುದನ್ನು ಈತ ಬಹು ಸೊಗಸಾಗಿ ವಿವರಿಸಿದ್ದಾನೆ : “ವಸ್ತುವೊಂದು ಸುಂದರವಾಗಿದೆ ಎಂದು ನಮಗೆ ತಿಳಿಯುವುದು ಕೇವಲ ಇಂದ್ರಿಯಾನುಭವದಿಂದ ಅಲ್ಲ; ವೈಜ್ಞಾನಿಕ ವಿಧಾನದಿಂದಲೂ ಅಲ್ಲ; ತರ್ಕದಿಂದಲೂ ಅಲ್ಲ; ಪ್ರತಿಭಾನ (intution)ದಿಂದ.”[16] ಎಂದರೆ ವಸ್ತುವನ್ನು ಪದಾರ್ಥದ ಹೊರಗಡೆ ನಿಂತು ನೋಡುವುದಲ್ಲ; ಅದರ ಅಂತರಂಗದಲ್ಲಿ ಹೊಕ್ಕು ತಲ್ಲೀನವಾಗಿ ನೋಡುವುದು. ಹೀಗೆ ತಲ್ಲೀನವಾಗಿ ನೋಡುವಾಗ ವಸ್ತು ನಮ್ಮ ಪರಿಶುದ್ಧ ಧ್ಯಾನದ ವಸ್ತುವಾಗಬೇಕು ಹಾಗೂ ವಸ್ತುವನ್ನು ಕುರಿತ ಪ್ರಯೋಜನಗಳಿಂದ, ಬಯಕೆಗಳಿಂದ ದೂರ ನಿಲ್ಲುವ ಮನಸ್‌ಶಕ್ತಿ ಬೇಕು. ಇಂತಹ ಪ್ರತಿಭಾನ ದೃಷ್ಟಿಯಲ್ಲಿ ವಸ್ತುವಿನ ಸೌಂದರ‍್ಯವನ್ನು ಪರಿಭಾವಿಸಿದಾಗ “ನಮ್ಮ ಬಯಕೆಗಳು ಹೆಡೆ ಮುಚ್ಚುತ್ತವೆ, ಮನಸ್ಸು ನಿರ್ಲಿಪ್ತವಾಗಿ ವಸ್ತುವಿನ ಸೌಂದರ್ಯವನ್ನು ಸವಿಯುತ್ತದೆ. ಈ ಒಂದು ಸ್ಥಿತಿಯಲ್ಲಿ ಶಾಶ್ವತವಾದ ಸೌಂದರ್ಯವನ್ನು ನಾವು ಗುರುತಿಸುತ್ತೇವೆ. ಇಂತಹ ಒಂದು ಪರವಶತೆಯಲ್ಲಿಯೇ ಕಲಾವಿದನಿಗೆ ವ್ಯಕ್ತಿ ವಿನಷ್ಟಿಯೊದಗುತ್ತದೆ. ಉಪಾಧಿಬದ್ಧವಾದ ಅವನ ಸಂಕುಚಿತತ್ವ ಹಿಮ್ಮೆಟ್ಟುತ್ತದೆ. ಕಲಾವಿದ ಸೌಂದರ್ಯದ ಪರಿಪೂರ್ಣ ಪ್ರಯೋಜನವನ್ನು ಪಡೆಯುತ್ತಾನೆ.”[17]

ಇದುವರೆಗಿನ ಸಮಾಲೋಚನೆಯಲ್ಲಿ ಸುಂದರವಾದ ವಸ್ತುಗಳು ನಮ್ಮ ಮನಸ್ಸಿನಲ್ಲಿ ಒಂದು ರೀತಿಯ ಸಂತೋಷವನ್ನು ನೀಡುತ್ತವೆ, ಆ ಸಂತೋಷಕ್ಕೆ ಕಾರಣ ನಾವು ಅವುಗಳನ್ನು ಕುರಿತ ಪರಿಭಾವನೆಯಲ್ಲಿ, ಪ್ರತಿಭಾನದ ಮೂಲಕ ವಸ್ತು ತಾದಾತ್ಮ್ಯವನ್ನು ಪಡೆಯುತ್ತೇವೆ; ಈ ಕ್ರಿಯೆಯಲ್ಲಿ ನಾವು ನಿರ್ಲಿಪ್ತವಾದ ಸ್ಥಿತಿಯಲ್ಲಿ ನಿಲ್ಲುವುದರಿಂದ ನಮಗೆ ಒಂದು ಅಪೂರ್ವವಾದ ಸಂತೋಷ ಉಂಟಾಗುತ್ತದೆ – ಎಂಬ ವಿಚಾರಗಳನ್ನು ಕಾಣುತ್ತೇವೆ. ಇಲ್ಲಿ ಆಗಲೇ ‘ಸಂತೋಷ’ ಎನ್ನುವುದು ಎಷ್ಟರಮಟ್ಟಿಗೆ ವಸ್ತುನಿಷ್ಠ ಎನ್ನುವ ವಿಚಾರ ಹರಿದುಬಂದಿದೆ.

ಲಿಪ್ಸ್ – ಸಂತಾಯನ

ಕ್ಯಾಂಟ್ ಮತ್ತು ಷೋಪೆನ್‌ಹೌರ್ ಇವರ ಮತಗಳಲ್ಲಿ ಪ್ರಸ್ತಾಪಿತವಾದ ಪರಿಭಾವನೆ ಮತ್ತು ಪ್ರತಿಭಾನಕ್ರಿಯೆ ಅಥವಾ ವಸ್ತು ತಾದಾತ್ಮ್ಯತೆ ಇವುಗಳನ್ನು ಒಪ್ಪಿಕೊಂಡು, ಲಿಪ್ಸ್ ಎಂಬ ವಿದ್ವಾಂಸನು ವಸ್ತುಗಳಲ್ಲಿ ನಾವು ಕಾಣುವ ಸೌಂದರ‍್ಯವೇನಿದ್ದರೂ ನಮ್ಮ ಮಾನಸಿಕ ಕ್ರಿಯೆಯ ಪ್ರತಿಬಿಂಬನವೇ, ವಸ್ತುವಿಗೆ ನಾವು ಸೌಂದರ‍್ಯವನ್ನು ಆರೋಪಿಸಿ, ಅದರಲ್ಲಿ ಒಂದಾಗಿ ಅನುಭವಿಸಿದಾಗ ಅದು ಒಂದು ರೀತಿಯ ಸಂತೋಷವನ್ನು ನೀಡುತ್ತದೆ; ವಸ್ತುವಿನಲ್ಲಿ ನಾವು ಹೀಗೆ ಅನುಭವಿಸುವುದು ನಮ್ಮ ಮಾನಸಿಕ ಭಾವವನ್ನೇ ಎನ್ನುತ್ತಾನೆ. ಈ ಸಿದ್ಧಾಂತಕ್ಕೆ ‘Einfulung’ ಎಂದು ಹೆಸರು[18] ಇದೇ ಬಗೆಯ ಅಭಿಪ್ರಾಯವನ್ನು ಎತ್ತಿ ಹಿಡಿದು, ‘ಸಂತಾಯನನೂ, ಸೌಂದರ‍್ಯವೆಂದರೆ ನಮ್ಮ ಸಂತೋಷದ ಒಂದು ಮೂರ್ತರೂಪ – ಎಂದು ಹೇಳುತ್ತಾನೆ. ವಸ್ತುವಿನಲ್ಲಿ ನೋಡುವವನು ಪಡೆಯುವ ತಾದಾತ್ಮ್ಯವನ್ನು ಆರೋಪ ಎಂದು ತಿಳಿದಿರುವುದೇ ಲಿಪ್ಸನ ವಾದದ ದೋಷ. ನಿಜ, ಹಲವು ವೇಳೆ ಆರೋಪಣೆಯಿಂದಲೂ ವಸ್ತುವಿನಲ್ಲಿ ಸೌಂದರ‍್ಯವನ್ನು ಕಾಣಬಹುದು, ಮತ್ತೆ ಹಲವು ವೇಳೆ ಆರೋಪಣೆ ಸೌಂದರ‍್ಯಾಸ್ವಾದಕ್ಕೆ ಸಹಕಾರಿಯಾಗುವುದರ ಬದಲು ತಡೆಯೂ ಆಗಬಹುದು. ಸಂತಾಯನ ಹೇಳುವಂತೆ ವಸ್ತು ಏನಿದ್ದರೂ ನಮ್ಮ ಸಂತೋಷದ ಮೂರ್ತರೂಪ ಎನ್ನುವುದು ಕವಿ ಅಥವಾ ಕಲಾವಿದ – ಕೃತಿಯಲ್ಲಿ ತನ್ನ ‘ಸಂತೋಷ’ವನ್ನು  ಮೂರ್ತಗೊಳಿಸುತ್ತಾನೆ[19] ಎನ್ನುವ ಅರ್ಥದಲ್ಲಿ ಮಾತ್ರ ಸರಿಯಾದೀತೇ ಹೊರತು ಉಳಿದಂತೆ ಲೋಕವಸ್ತುಗಳಲ್ಲಿ ಕಾಣುವ ಸೌಂದರ‍್ಯದ ಬಗೆಗೆ ಈ ಮಾತು ಒಪ್ಪುವುದಿಲ್ಲ.

ಸಮನ್ವಯ ದೃಷ್ಟಿ

ಆಧುನಿಕರಲ್ಲಿ ಸೌಂದರ‍್ಯವನ್ನು ಕುರಿತ ಮತ ಇದು: ವಸ್ತುಗಳಲ್ಲಿ ನಾವು ಕಾಣುವ ಚೆಲುವು, ವಸ್ತುವಿನ ಬಣ್ಣ ಆಕಾರಗಳಂತೆ ಒಂದು ಗುಣವಲ್ಲ; ಅದು ಒಂದು ಮೌಲ್ಯ. ವಸ್ತುವಿನಲ್ಲಿ ಸೌಂದರ‍್ಯವೆಂಬ ಮೌಲ್ಯವನ್ನು ಗುರುತಿಸುವುದು, ತೀರ್ಮಾನಿಸುವುದು ಒಂದು ಮಾನಸಿಕಕ್ರಿಯೆ. ಎಂದರೆ ವ್ಯಕ್ತಿ ವಸ್ತುವಿಗೆ ವ್ಯಕ್ತಿವಿಶಿಷ್ಟವಾದ ಒಂದು ಮೌಲ್ಯವನ್ನು ನೀಡಿ ಅದನ್ನು ಸುಂದರ ಎಂದು ಕರೆಯುತ್ತಾನೆಂದು ಅರ್ಥವಲ್ಲ. ಅಥವಾ ವಸ್ತುವನ್ನು ಸುಂದರವೋ ಅಸುಂದರವೋ ಎಂದು ಬೆಲೆ ಕಟ್ಟುವಾಗ, ಮೊದಲು ಅದನ್ನು ಸುಂದರವೆಂದು ನಿರ್ಣಯಿಸಿ ಅನಂತರ ಸೌಂದರ‍್ಯಾನುಭವವನ್ನು ಪಡೆಯುತ್ತಾನೆಂದೂ ಅಲ್ಲ. ವಸ್ತು ನಮ್ಮಲ್ಲಿ ಸಂತೋಷವನ್ನುಂಟುಮಾಡುವ ಗುಣವನ್ನು ಗಮನಿಸಿ ಅನಂತರ ಅದನ್ನು ಸುಂದರ ಎಂದು ನಿರ್ಣಯಿಸುತ್ತೇವೆ. ಹೀಗೆ ಈ ಮೌಲ್ಯನಿರ್ಣಯ ಗೌಣವ್ಯಾಪಾರ. ವಸ್ತು ನಮ್ಮ  ಮನಸ್ಸನ್ನು ಸೌಂದರ‍್ಯದಿಂದ ತಣಿಸುವುದೇ ಮೊದಲಕ್ರಿಯೆ. ಸುಂದರವಾದ ವಸ್ತುವಿಗೆ ಮನಸ್ಸನ್ನು ಸಂತೋಷಪಡಿಸುವ ಶಕ್ತಿಯಿದೆ, ಅದೇ ಅದರ ಮೌಲ್ಯ. ಎಂದರೆ ‘ಆನಂದ’ವೇ ಸೌಂದರ‍್ಯದ ಮೌಲ್ಯ. ಆದರೆ ಇದು ಕೇವಲ ವಸ್ತುಗಳಲ್ಲಿದೆ ಎಂದಾಗಲೀ ವ್ಯಕ್ತಿಗಳಲ್ಲಿದೆ ಎಂದಾಗಲೀ ಅರ್ಥವಲ್ಲ. ವಸ್ತು ಮತ್ತು ವ್ಯಕ್ತಿಯ ಸಂಬಂಧದಿಂದ ಉದ್ಭವಿಸುವ ಮೂರನೆಯದಾದ ಒಂದು ಗುಣ ಈ ಸೌಂದರ‍್ಯ. ಈ ಮತವನ್ನು ಎಸ್. ಅಲೆಗ್ಸಾಂಡರ್,[20] ಇ.ಎಫ್, ಕ್ಯಾರೆಟ್, ಬಸಾಂಕ್ವೆ ಮೊದಲಾದ ಆಧುನಿಕ ಸೌಂದರ‍್ಯಮೀಮಾಂಸಕರು ಪ್ರತಿಪಾದಿಸಿದ್ದಾರೆ.

ಕಲಾಕೃತಿಯನ್ನು ಗಮನದಲ್ಲಿರಿಸಿಕೊಂಡು ಸೌಂದರ‍್ಯವೆಂದರೇನು ಎನ್ನುವ ಪರಿಶೀಲನೆಗೆ ಹೊರಡುವ ಮುನ್ನ, ಲೋಕವಸ್ತುಗಳಲ್ಲಿ ನಮಗಾಗುವ ಸೌಂದರ‍್ಯಾನುಭವ ವಸ್ತುನಿಷ್ಠವೇ – ವ್ಯಕ್ತಿನಿಷ್ಠವೇ ಎನ್ನುವ ಬಗೆಗೆ ನಡೆದಿರುವ ಚಿಂತನೆಯನ್ನು ಇಲ್ಲಿ ಸಂಗ್ರಹವಾಗಿ ಹೇಳಬಹುದು:

೧.    ಅನುಭವ ಪ್ರಾಮಾಣ್ಯವನ್ನೆ ಅವಲಂಬಿಸುವವರು ವಸ್ತುನಿಷ್ಠವಾದಿಗಳು. ವಸ್ತುವಿನ ಬಣ್ಣ ಲಾಲಿತ್ಯಾದಿಗಳು, ಎಂದರೆ ವಸ್ತುವಿನಿಂದ ಹೊರಟ ಶಕ್ತಿ ಕಿರಣಗಳು, ನಮ್ಮಲ್ಲಿ ದೈಹಿಕ ಪ್ರತಿಕ್ರಿಯೆನ್ನುಂಟುಮಾಡಿ ತನ್ಮೂಲಕ ಮನಸ್ಸಿಗೆ ವಸ್ತು ಸೌಂದರ‍್ಯದ ಅರಿವನ್ನುಂಟುಮಾಡುತ್ತವೆ. ಆದುದರಿಂದ ಸೌಂದರ‍್ಯ ಎನ್ನುವುದು ಅದರ ವರ್ಣಗಾತ್ರಾದಿಗಳಂತೆ ವಸ್ತುನಿಷ್ಠವಾದ ಒಂದು ಗುಣ.

೨.    ಎರಡನೆಯದು ವಸ್ತುವನ್ನು ನಾವು ನಿರ್ಲಿಪ್ತ ಪರಿಭಾವನೆಯಿಂದ ನೋಡಿದಾಗ ಅದು ಸುಂದರವಾಗಿ ಕಾಣುತ್ತದೆ. ಅದರಲ್ಲಿ ವಸ್ತುತಃ ಸೌಂದರ‍್ಯವಿರಲಿ ಬಿಡಲಿ ಅದು

ಅಪ್ರಕೃತ; ವಸ್ತುವಿಗೂ ನಮಗೂ ಇರುವ ಸಂಬಂಧದಲ್ಲಿ ಮಾತ್ರ ಅದರ ಅಸ್ತಿತ್ವ, ಅದೇನಿದ್ದರೂ ವ್ಯಕ್ತಿ ವಿಶಿಷ್ಟವಾದ ತೀರ್ಪು ಎನ್ನುವ ಕ್ಯಾಂಟನ ಮತವೂ, ವಸ್ತುವಿನಲ್ಲಿ ಸೌಂದರ‍್ಯವಿಲ್ಲವೇ ಇಲ್ಲ ಅದೇನಿದ್ದರೂ ನಮ್ಮ ಆರೋಪಣೆ, ನಮ್ಮ ಭಾವನೆಯ ಮೂಲಕ ವಸ್ತುವಿಗೆ ದತ್ತವಾದದ್ದು, ಅದು ನಮ್ಮ ಸಂತೋಷದ ಮೂರ್ತರೂಪ ಎಂದ ಲಿಪ್ಸ್, ಸಂತಾಯನ ಇವರ ಮತವೂ, ವಸ್ತುಸೌಂದರ‍್ಯವನ್ನೇ ಗೌಣವನ್ನಾಗಿಸಿ ವ್ಯಕ್ತಿನಿಷ್ಠಾನುಭವವನ್ನೇ ಪ್ರಧಾನವಾಗಿರಿಸಿಕೊಳ್ಳುವುದರ ಮೂಲಕ, ಸೌಂದರ‍್ಯ ವ್ಯಕ್ತಿನಿಷ್ಠವೆನ್ನುವ ವಾದವನ್ನು  ಪ್ರತಿಪಾದಿಸುತ್ತದೆ.

೩.    ಮೂರನೆಯದಾಗಿ ಸೌಂದರ‍್ಯ ಎನ್ನುವುದು ವ್ಯಕ್ತಿನಿಷ್ಠವೂ ಅಲ್ಲ, ವಸ್ತುನಿಷ್ಠವೂ ಅಲ್ಲ. ಇವೆರಡರ ಸಂಪರ್ಕದಿಂದ ಉದ್ಭವಿಸುವ ಮೂರನೆಯದಾದ ಒಂದು ಗುಣ ಎನ್ನುವ ಸಮನ್ವಯವಾದಿಗಳ ಮತ.

೪.    ನಾಲ್ಕನೆಯದಾಗಿ ತಾತ್ವಿಕ ವಿವರಣೆಯನ್ನು ನೀಡಿದ ಪ್ಲೇಟೊ, ಹೆಗೆಲ್, ಷೋಪೆನ್ ಹೌರ್, ಪ್ಲಾಟಿನಸ್ ಇವರ ಮತದಂತೆ, ವಸ್ತುವಿನಲ್ಲಿ ಸೌಂದರ‍್ಯವಿರುವಂತೆ ತೋರಿದರೂ ಅದೇನಿದ್ದರೂ ಆದರ್ಶದ, ದೈವೇಚ್ಛೆಯ, ದಿವ್ಯಧ್ಯೇಯದ ಒಂದು ಪ್ರಕಾಶನ. ಹಾಗೆ ನೋಡಿದರೆ ಅದು ವಸ್ತುವಿನಲ್ಲಿ ಸೌಂದರ‍್ಯವೂ ಆಗಿದೆ; ನಮ್ಮಲ್ಲಿ ಅರಿಯುವ ಶಕ್ತಿಯೂ ಆಗಿದೆ.

ವಸ್ತುವಿನಲ್ಲಿ ಸೌಂದರ‍್ಯವಿದೆ ಎಂದು ನಮಗೆ ವಸ್ತುವಿನ ಆಕಾರ ವರ್ಣಾದಿ ಸಂಯೋಜನೆಯಿಂದ ಗೋಚರಿಸುವುದೇನೋ ನಿಜ. ಆದರೆ ನಾವು ವಸ್ತುವನ್ನು ಸುಂದರವಾಗಿದೆ ಎಂದೊಡನೆಯೇ ಅದು ಸೌಂದರ‍್ಯಾನುಭವವೆಂಬ ನಮ್ಮ ಮಾನಸಿಕ ಅನುಭವದ ವಸ್ತುವಾದಂತಾಯಿತು. ಸುಂದರವಾದ ವಸ್ತು ಎನ್ನುವುದು ವಾಸ್ತವವಾಗಿಯೂ ಒಂದು ವಸ್ತುವೇ; ಆದರೆ ಅದು ಸುಂದರ ಎಂದು ತೋರುವುದು ಅದು ನಮ್ಮ ಮಾನಸಿಕ ಅನುಭವಕ್ಕೆ ಒಳಗಾಗುವುದರಿಂದಲೇ. ಅದು ನಮ್ಮ ಮಾನಸಿಕ ಅನುಭವಕ್ಕೆ ಒಳಗಾಗುವಾಗ ನಮ್ಮ ನಿರ್ಲಿಪ್ತ ಪರಿಭಾವನೆಗೆ ಸಲ್ಲುತ್ತದೆ. ಆಗ ಅದರ ಬಾಹ್ಯ ಸೌಂದರ್ಯ ಮಾತ್ರವಲ್ಲ, ವಿಶೇಷ ಸೌಂದರ್ಯವೂ ಗೋಚರಿಸಿ ತನ್ಮೂಲಕ ವಸ್ತು ಪ್ರಿಯವಾಗುತ್ತದೆ. “ಈ ಅನುಭವಕ್ಕೆ ಒಳಗಾದರೆ ಮಾತ್ರ ಸುಂದರ, ಹಾಗಾಗದಿದ್ದರೆ ವಸ್ತುವಿನಲ್ಲಿ ಸೌಂದರ‍್ಯವೇ ಇಲ್ಲವೆಂದು ಅರ್ಥವಲ್ಲ. ಏಕೆಂದರೆ ವಸ್ತುವಿನಲ್ಲಿ ಸೌಂದರ‍್ಯವಿದ್ದೂ ಅದನ್ನು ಹಲವು ಸಲ ಅನುಭವಿಸುವ ಸಾಮರ್ಥ್ಯ ನಮಗೆ ಇಲ್ಲದೆಯೂ ಇರಬಹುದು. ಹೀಗೆ ಒಂದು ವಸ್ತುವಿನಲ್ಲಿದೆ ಎಂದು ನಾವು  ಭಾವಿಸುವ ಸೌಂದರ‍್ಯ ವಾಸ್ತವವಾಗಿಯೂ ನಮ್ಮ ಅನುಭವಕೂಡ.”[21] ಎಂದರೆ ನಾವು ಅದಕ್ಕೆ ಸೌಂದರ‍್ಯವನ್ನು ತುಂಬುತ್ತೇವೆ ಎಂದಲ್ಲ. “ಈ ಅನುಭವವನ್ನು ಉದ್ದೀಪಿಸುವ ಶಕ್ತಿ ಆ ವಸ್ತುಗಳಲ್ಲಿಯೂ ಇರಲೇಬೇಕಾಗುತ್ತದೆ.”[22] “ಸೌಂದರ‍್ಯಾನುಭವ ಕೇವಲ ಬಾಹ್ಯ ವಸ್ತುವಿನಿಂದ ಪ್ರಚೋದಿತವಾದುದಲ್ಲ, ನಮ್ಮ ಸೌಂದರ‍್ಯಾನುಭವಕ್ಕೆ ಪ್ರಚೋದಕವಾದ ಯಾವ ವಸ್ತು ಇಲ್ಲದಿದ್ದರೆ ನಮ್ಮಲ್ಲಿ ಸೌಂದರ‍್ಯಾನುಭವ ಸಾಧ್ಯವಿರುತ್ತಿರಲಿಲ್ಲವೆಂದು ಭಾವಿಸಿರುವೆವೋ, ಅಂಥ ಬಾಹ್ಯ ವಸ್ತುವಿನ ಸ್ವಭಾವದ ಮೇಲೆ ನಮ್ಮ ಸೌಂದರ‍್ಯಾನುಭವ ನಿಂತಿದೆ ಎನ್ನುವುದಕ್ಕಿಂತ, ಆ ಪ್ರಚೋದನೆಗೆ ನಮ್ಮ ಮನಸ್ಸು ತೋರುವ ಪ್ರತಿಕ್ರಿಯೆಯಲ್ಲಿದೆ ಎನ್ನುವುದು ಹೆಚ್ಚು ಸೂಕ್ತ. ಬಹುಮಟ್ಟಿಗೆ ನಮಗೆ ಇಂದ್ರಿಯ ಗೋಚರವಾಗುವ ವಸ್ತುಗಳಿಂದ ಸೌಂದರ‍್ಯಾನುಭವವಾಗುವುದಾದರೂ ಅಂತಹ ಬಾಹ್ಯಪ್ರಚೋದನೆ ಕೂಡ ಇಲ್ಲದೆ ಕೇವಲ ಧ್ಯಾನದರ್ಶಿತಾನುಭವಗಳಿಂದಲೂ ಸೌಂದರ‍್ಯಾನುಭವ ಸಾಧ್ಯ’’[23] ಎನ್ನುವ ಮಾತು ಗಮನೀಯವಾಗಿದೆ. ಅಷ್ಟೇ ಅಲ್ಲ “ಸೌಂದರ‍್ಯ ಎನ್ನುವುದು ವಾಸ್ತವವಾಗಿಯೂ ನಮ್ಮ  ಪಾಲಿಗೆ ಒಂದು ವಸ್ತು. ವಸ್ತುವಿನ ಪರಿಭಾವನೆಯಿಂದ ನಾವು ಒಂದು ಬಗೆಯ ಆನಂದಾನುಭವವನ್ನು ಪಡೆಯುವುದರಿಂದ, ಏಕಕಾಲದಲ್ಲಿಯೇ ಅದು ವಸ್ತುನಿಷ್ಠ ಮತ್ತು ಮನೋನಿಷ್ಠ”[24], ಎಂದು ಷೆಲ್ಲಿಂಗನು ಹೇಳಿದರೆ, ಅದು ವ್ಯಕ್ತಿನಿಷ್ಠವೂ ಅಲ್ಲ ವಸ್ತುನಿಷ್ಠವೂ ಅಲ್ಲ. ಅದು ವಸ್ತು – ವ್ಯಕ್ತಿಗಳ ಸಂಬಂಧದಿಂದ ಉದ್ಭವಿಸುವ ಸೌಂದರ‍್ಯವೆಂಬ ತೃತೀಯ ಗುಣ ಎಂಬ ಸಮನ್ವಯಸಿದ್ಧಾಂತದಲ್ಲಿ ಈ ಚರ್ಚೆ ತನ್ನ ನಿಲುಗಡೆಯನ್ನು ಕಂಡುಕೊಳ್ಳುತ್ತದೆ.


[1] Bosanquet : History of Aesthetics. p. 35.

[2] H.R. Marshall: The Beautiful: p. 20.

[3] E.F. Carritt : The Philosophy of Beauty: p. 4

[4] Edward Zeller : Plato and the Older Academy : p. 507

[5] Phaedrus: Plato: p. 165.

[6] Edward Zeller: Plato and the Older Academy:  p. 507.

[7] Plato : Symposium: p.14

[8] E.F. Carritt: The Philosophy of Beauty: p. 40.

[9] ಅಲ್ಲೆ. ಪು. ೪೩-೪೪.

[10] Plotinus: Enneade i, p. 6-9

[11] H. Macdougal: Outlines of Psychology : p. 222.

[12] Felix Clay: Origin of the Sense of Beauty: p. 131

[13] H.R. Marshall: The Beautiful: p. 52.

[14] Israel Knox: Aesthetic Theories of Hegel and Shopenhaur p. 26.

[15] Bosanquet: History of Aeshetics; p. 266.

[16] W.Knight: The Philosophy of the Beautiful: p.79 (Vol.1)

[17] ಅಲ್ಲೆ : ಪು.೭೯.

[18] ಈ ವಿಚಾರದ ಬಗ್ಗೆ ‘ಸೌಂದರ‍್ಯಾನುಭವ’ ಎಂಬ ಅಧ್ಯಾಯವನ್ನು ನೋಡಿ.

[19] ಇದುವರೆಗೂ ಈ ಚರ್ಚೆಯಲ್ಲಿ ಬಳಸಿರುವ ‘ಸಂತೋಷ’ ಎಂಬ ಪದ ಪಾಶ್ಚಾತ್ಯ ಸೌಂದರ‍್ಯ ಮೀಮಾಂಸೆಯಲ್ಲಿ ಬಳಕೆಯಲ್ಲಿರುವ Pleasure ಎಂಬ ಪದಕ್ಕೆ ಸಂವಾದಿಯಾದುದು. Pleasure ಎಂಬ ಪದಕ್ಕೆ ಸಾಮಾನ್ಯವಾಗಿ ಇಂದ್ರಿಯಾನುಭವಜನ್ಯ ಸಂತೋಷ ಎಂಬ ಅರ್ಥವೇ ಪ್ರಧಾನ. ಆದರೆ ಅದನ್ನೇ ಸೌಂದರ‍್ಯಾನುಭವ ಎಂಬ ಭಾವದಲ್ಲೂ ಅವರು ಬಳಸಿದ್ದಾರೆ. ಅಷ್ಟೇ ಅಲ್ಲ, ಅದೇ ಪದವನ್ನು ಅವರು ಕಲಾನುಭವ ಮತ್ತು ಇಂದ್ರಿಯಾನುಭವ ಎರಡಕ್ಕೂ ಬಳಸಿರುವುದರಿಂದ ಈ ಎರಡು ‘ಸಂತೋಷ’ಗಳಿಗೂ ಅಷ್ಟೇನೂ ವ್ಯತ್ಯಾಸವಿಲ್ಲವೆಂದು ಭಾವಿಸಿರುವಂತಿದೆ, ಸಂತಾಯನನೂ Pleasure ಎಂಬ ಪದವನ್ನೆ ಬಳಸುತ್ತಾ, ಈ ಸಂತೋಷ ಎಲ್ಲರಲ್ಲೂ ಒಂದೇ ಎಂಬಂತೆ ತೋರಿದರೂ, ಕಲಾವಿದನಲ್ಲಿ ಅದಕ್ಕೆ ಒಂದಿಷ್ಟು ತೀವ್ರತೆ ಮತ್ತು ನಯ ಒದಗುವುದಷ್ಟೇ ವಿಶೇಷ ಎನ್ನುತ್ತಾನೆ. ಇದೇ ಮಾತನ್ನು ಇನ್ನೂ ಹಲವರು ಪ್ರತಿಪಾದಿಸಿದ್ದಾರೆ. ಆದರೆ ಇವೆರಡೂ ಬೇರೆ ಬೇರೆ ಎನ್ನುವುದನ್ನು ಮನಸ್‌ಶಾಸ್ತ್ರ ಒಪ್ಪದಿದ್ದರೂ, ಯೂಂಗ್‌ನಂತಹ ಆಧುನಿಕ ಮನಸ್‌ಶಾಸ್ತ್ರಜ್ಞರು ಲೌಕಿಕಕಾನುಭವದ ಸಂತೋಷದಿಂದ ಕಲಾಸಂತೋಷ ಬೇರೆ ಎನ್ನುವುದನ್ನು ಸಮರ್ಥಿಸಿದ್ದಾರೆ.               ಕ್ಯಾಂಟನು ಸಹ ಇದನ್ನು ‘ನಿರ್ಲಿಪ್ತ ಪರಿಭಾವನೆಯ ಸಂತೋಷ’ ಎಂದು ಕರೆದು ಇದರ ವಿಶಿಷ್ಟತೆಯನ್ನು ಗುರುತಿಸಿದ್ದಾನೆ. ಮತ್ತೆ ಹಲವರು ಇದನ್ನು ಬೇರೆ ಎಂದು ತೋರಿಸಲು Pleasure ಎನ್ನುವುದರ ಬದಲು Aesthetic Pleasure ಎಂಬ ಮಾತನ್ನು ಬಳಸಿದ್ದಾರೆ. ಕೊಲ್‌ರಿಡ್ಜ್ ಕವಿ ಕಲಾನುಭವವನ್ನು, Pleasure ಎಂದು ಕರೆಯುವುದರ ಬದಲು, ‘Delight” ಎಂದು ಕರೆಯುವುದು ಸೂಕ್ತ ಎಂದು ಅಭಿಪ್ರಾಯಪಡುತ್ತಾನೆ,. Delight ಎನ್ನುವುದೇ ಇಲ್ಲಿ ಹೆಚ್ಚು ಸಮರ್ಪಕವೆಂಬಂತೆ ತೋರುತ್ತದೆ. ನಮ್ಮವರು ಹೇಳುವ ಸೌಂದರ‍್ಯಗುಣವಾದ ‘ದೀಪ್ತಿ’,  ‘ಕಾಂತಿ’ಗಳನ್ನು ನೆನಪಿಗೆ ತರುವುದರ ಜೊತೆಗೆ ‘ಆನಂದ’ ಎಂಬ ಮಾತಿಗೂ ಇದು ಸಮೀಪವಾಗಿದೆ.

[20] S.Alexander: Beauty and other forms of Value : p. 7 and 183.

[21] E.F. Carritt : What is Beauty? p. 66-67.

[22] ಅಲ್ಲೆ : ಪು. ೭೯.

[23] H.R. Marshall: The Beautiful: p. 46-47.

[24] Bosanquet: History of Aesthetics: p.231.