ಇದುವರೆಗೂ ಸೌಂದರ‍್ಯವೆಂದರೇನು ಎನ್ನುವ ಪ್ರಶ್ನೆಗೆ ದೃಗ್ಗೋಚರವಾಗುವ ಲೋಕವಸ್ತುಗಳನ್ನು ಗಮನದಲ್ಲಿರಿಸಿಕೊಂಡು ಸಿದ್ಧವಾದ ಹಲವು ಪಾಶ್ಚಾತ್ಯ ಅಭಿಪ್ರಾಯಗಳನ್ನು ಮಂಡಿಸಲಾಗಿದೆ. ಈಗ ಕಲಾಕೃತಿಯನ್ನು ಪ್ರಧಾನವಾಗಿ ಗಮನದಲ್ಲಿರಿಸಿಕೊಂಡು ಸೌಂದರ‍್ಯವನ್ನು ಕುರಿತ ಅಭಿಪ್ರಾಯಗಳನ್ನು ಪರಿಶೀಲಿಸಬಹುದು.

ಕಲಾಕೃತಿ ಎಂದರೆ ರಮಣೀಯತಾ ರೂಪಸೃಷ್ಟಿ. ಈ ರಮಣೀಯತಾ ರೂಪ ಸೃಷ್ಟಿಯಾದ ಕಲೆ, ಪ್ರಕೃತಿಯ ಕೇವಲ ಒಂದು ಅನುಕರಣವೇ, ಅಭಿವ್ಯಕ್ತಿಯೇ, ಸೃಷ್ಟಿಯೇ, ಎನ್ನುವ ಹಲವು ಸಮಸ್ಯೆಗಳು ಕಾಲದಿಂದ ಕಾಲಕ್ಕೆ ಚರ್ಚಿತವಾಗಿವೆ. ಸೌಂದರ್ಯಮೀಮಾಂಸೆಯ ಇತಿಹಾಸವನ್ನು ಪರಿಶೀಲಿಸಿದರೆ, ಕಲಾಸೃಷ್ಟಿಯನ್ನು ಕುರಿತ ವಿವಿಧ ದೃಷ್ಟಿಗಳೂ ಹೇಗೆ ಈ ಬಗೆಯ ವಿಚಾರ ಮಥನದಿಂದ ವಿಕಾಸಗೊಂಡಿವೆ ಎಂಬುದನ್ನು ನಾವು ಗುರುತಿಸಬಹುದು.

ಅನುಕರಣೆ

ಕಲೆಯಲ್ಲಿ ಸೌಂದರ‍್ಯವೆಂದರೇನು ಎಂಬ ಪ್ರಶ್ನೆಗೆ, “ಪ್ರಕೃತಿಯನ್ನು ಅನುಕರಿಸುವುದೆಲ್ಲಾ ಸುಂದರ” – ಎಂಬ ಒಂದು ಸೂತ್ರ ಉಂಟು. ಇದರ ಉಗಮ ಗ್ರೀಕ್ ತತ್ವಜ್ಞರಿಂದ. ಪ್ಲೇಟೋಗಿಂತ ಹಿಂದಿನ ಗಣಿತ ಶಾಸ್ತ್ರಜ್ಞನಾದ ಪೈಥಾಗೊರಸ್‌ನ ಪಂಥದವರು ಗಣಿತ ಸಂಖ್ಯೆಗಳೂ ದಿವ್ಯ ಸತ್ವದ ಅನುಕರಣೆ ಎಂಬ ವಾದವನ್ನು ಎತ್ತಿಹಿಡಿದರು. ಈ ವಿಶ್ವದ ಆಕೃತಿಗಳಲ್ಲಿ ಗೋಚರಿಸುವ ಒಂದು ಲಯಬದ್ಧತೆಯನ್ನೂ ಕ್ರಮವನ್ನೂ ಅನುಕರಿಸುವುದರಿಂದ ಕಲಾನಿರ್ಮಿತಿ ಸಾಧ್ಯ ಎಂದು ಅವರು ವಾದಿಸಿದರು. ಈ ಮತದ ಪ್ರಭಾವಕ್ಕೊಳಗಾದ ಪ್ಲೇಟೋ, ಕಲೆಗಾರನಾದವನು ಲೋಕವಸ್ತುಗಳನ್ನು ಅನುಕರಿಸುವುದರಿಂದ ಅವು ಸುಂದರವಾಗಿ ತೋರುತ್ತವೆ, ಅವನು ಎಷ್ಟರ ಮಟ್ಟಿಗೆ ಅವುಗಳನ್ನು ಅನುಕರಿಸುವನೋ ಅವು ಅಷ್ಟರಮಟ್ಟಿಗೆ ಸುಂದರ ಎಂಬ ವಾದದ ಜೊತೆಗೆ, ಅವನ ಈ ಅನುಕರಣೆಗಳು ಆದರ್ಶ ಸಾಧನೆಗೆ ಸಾಧಕವಾಗಿದ್ದರೆ ಮಾತ್ರ ಗ್ರಾಹ್ಯ, ಇಲ್ಲದಿದ್ದರೆ ಅವು ಅಗ್ರಾಹ್ಯ ಎನ್ನುವ ಮತವನ್ನೂ ಮಂಡಿಸಿದನು. ಇಷ್ಟೇ ಅಲ್ಲದೆ ಅವನು, ಲೋಕದ ಸುಂದರ ವಸ್ತುಗಳು ದಿವ್ಯ ಸೌಂದರ‍್ಯದ ಮಾದರಿಯೊಂದರ ಅನುಕರಣೆ, ಕಲಾವಿದನಾದವನೇನಿದ್ದರೂ, ಸೌಂದರ‍್ಯದಲ್ಲಿ ಕನಿಷ್ಠ ದರ್ಜೆಯವಾದ ಈ ಲೋಕವಸ್ತುಗಳನ್ನು ಅನುಕರಿಸಬಹುದೇ ಹೊರತು, ದಿವ್ಯ ಸೌಂದರ‍್ಯವನ್ನು ಅನುಕರಿಸಲಾರ, ಆದುದರಿಂದ ಅನುಕರಣೆಯ ಅನುಕರಣೆಗಳಾದ ಈ ಕಲೆಗಳು ಅಷ್ಟೇನೂ ಆದರಣೀಯವಲ್ಲ ಎಂದು ಅಭಿಪ್ರಾಯಪಡುತ್ತಾನೆ.

ಪ್ಲೇಟೋನ ಶಿಷ್ಯನಾದ ಅರಿಸ್ಟಾಟಲನೂ, ಸೌಂದರ್ಯವು ‘ಅನುಕರಣೆ’ ಎಂದು ಒಪ್ಪಿದರೂ, ಅನುಕರಣೆ ಎಂದರೆ ವಾಸ್ತವದ ಯಥಾವತ್ತಾದ ಪ್ರತಿ ಅಲ್ಲ, ಕಲಾ ಪ್ರತಿಭಾನದಿಂದ ನಾವು ವಸ್ತುವಿನ ಸತ್ಯದಲ್ಲಿ ಪಾಲುಗೊಳ್ಳುವುದರ ಮೂಲಕ, ಅದನ್ನು ಹಿಡಿದಿಡುತ್ತೇವೆ ಎನ್ನುತ್ತಾನೆ. ಇವನು ಪ್ಲೇಟೋನಂತೆ ಕಾವ್ಯಕಲೆಗಳನ್ನು ತಿರಸ್ಕರಿಸದೆ ಅವುಗಳೇನಿದ್ದರೂ ಆದರ್ಶದ ಪ್ರತಿಮಾನ – ಎನ್ನುವ ಅಭಿಪ್ರಾಯವನ್ನು ಸಾರಿ ಪ್ಲೇಟೋಗಿಂತ ಬೇರೆಯದೆ ಆದ ಹಾದಿಯನ್ನು ತುಳಿದಿದ್ದಾನೆ.

ಅರಿಸ್ಟಾಟಲನ ಅನಂತರ ಆರು ಶತಮಾನಗಳಾದ ಮೇಲೆ ಸಿಸಿರೋ ಎನ್ನುವವನು ಪ್ಲೇಟೋನ ‘ಆದಿಕಾರಣವಾದ’ವನ್ನು ಒಪ್ಪಿ, ಆ ಪರಮತತ್ವವನ್ನು ನಾವು ಕಣ್ಣುಗಳಿಂದ ಕಾಣಲಾಗದಿದ್ದರೂ ಅದನ್ನು ಮಾನಸಿಕವಾಗಿ ಗ್ರಹಿಸಿ ಅನುಕರಿಸಲೂ ಸಾಧ್ಯ ಎನ್ನುತ್ತಾನೆ. “ಈ ವಿಶ್ವವೊಂದೇ ಪರಿಪೂರ್ಣ; ಮಾನವ ಪರಿಪೂರ್ಣನಲ್ಲ. ಅವನಲ್ಲಿಯೂ ಮೂಲ ಪರಿಪೂರ್ಣತೆಯ ಒಂದು ಅಂಶವಿರುವುದರಿಂದಲೆ ಅವನ ಜೀವನೋದ್ದೇಶ ಆ ಸತ್ಯವನ್ನು ಪರಿಭಾವನೆಯ ಮೂಲಕ ಅನುಕರಿಸುವುದು”[1] ಎನ್ನುತ್ತಾನೆ. ಪ್ಲೇಟೋ ಪ್ರಕಾರ ಪರಮಸತ್ಯ ರಸವಶತೆಗೆ ಸಂದ ಮತಿಗೆ ಗೋಚರವಾದರೂ ಅದನ್ನು ಕಲಾವಿದ ಅನುಕರಿಸಲಾರ, ಅವನದೇನಿದ್ದರೂ ಪ್ರಕೃತಿಯ ಅನುಕರಣೆ ಎನ್ನುವುದು. ಆದರೆ ಸಿಸಿರೋನ ವಾದದಲ್ಲಿ ಕಲೆಯಲ್ಲಿ, ಕೇವಲ ಪ್ರಕೃತಿಯ ಅನುಕರಣೆ ಮಾತ್ರವಲ್ಲ ಅದಕ್ಕೆ ಮೂಲವಾದ ಸತ್ಯದ ಅನುಕರಣೆಯೂ ಸಾಧ್ಯ ಎನ್ನುವ ಮತ ವ್ಯಕ್ತವಾಗಿದೆ.

ಮುಂದೆ ಬಂದ ಫಿಲೋಸ್ಟ್ರೇಟಸ್ ಮತ್ತು ಪ್ಲಾಟಿನಸ್ ಇವರು ಅನುಕರಣೆಯ ವಾದವನ್ನು ಖಂಡಿಸಿ, ಕಲಾವಿದನ ನಿರ್ಮಾಣದಲ್ಲಿ ಕಲ್ಪನೆಯ ಮಹತ್ವವನ್ನು ಎತ್ತಿ ಹಿಡಿದು ಸೌಂದರ‍್ಯ ಎನ್ನುವುದು ಕೇವಲ ಅನುಕರಣೆಯಲ್ಲ, ಅದೊಂದು ಸೃಷ್ಟಿ ಎಂದು ಸಾರಿದ್ದಾರೆ. ಪ್ಲೇಟೋನ ಅಭಿಪ್ರಾಯವನ್ನು ಖಂಡಿಸುತ್ತಾ ಪ್ಲಾಟಿನಸ್, “ಯಾರಾದರೂ ಕಲೆಗಳನ್ನು ಅವು ಕೇವಲ ಪ್ರಕೃತಿಯ ಅನುಕರಣೆಗಳೆಂದೋ ಪ್ರತಿಗಳೆಂದೋ ಕೀಳ್ಗಳೆದರೆ ಅವರಿಗೆ ಹೀಗೆ ಹೇಳಬೇಕಾಗುತ್ತದೆ : ಮೊದಲನೆಯದಾಗಿ ಲೋಕವಸ್ತುಗಳೂ ಅನುಕೃತಿಗಳೇ. ಎರಡನೆಯದಾಗಿ, ಕಲೆ ಲೋಕವಸ್ತುವಿನ ಬಹಿರಂಗದಲ್ಲೇ ನಿಲ್ಲದೆ ಅಂತರಂಗಕ್ಕೂ ಪ್ರವೇಶಿಸುತ್ತದೆ; ಮೂರನೆಯದಾಗಿ, ಕಲೆ ಪ್ರಕೃತಿಯ ವಸ್ತುಗಳನ್ನು ಸಂಸ್ಕರಿಸಿ ತೋರುವ ಒಂದು ಸೃಷ್ಟಿ”[2] ಎಂದು ಹೇಳುವಲ್ಲಿ ಹಿಂದಿನವರಿಗಿಂತ ಸ್ವಲ್ಪ ಮುಂದುವರಿದಿದ್ದಾನೆ.

‘ಎಲ್ಲ ಕಲೆಯೂ ಅನುಕರಣೆಯಿಂದ ಆರಂಭವಾಗುತ್ತದೆ’ ಎನ್ನುವ ಒಂದು ಮಾತು ಉಂಟು. ಎಂದರೆ ಅನುಕರಣೆ ಎನ್ನುವುದು ಕಲಾವಿದನ ಕಲೆಯ ಆರಂಭ ಕಾಲದ ಒಂದು ವಿಧಾನ. ಆದರೆ ಕೇವಲ ಅನುಕರಣೆಯಿಂದಲೇ ಅದು ಘನವಾಗುವುದಿಲ್ಲ; ಅದೊಂದು ಸ್ವಂತಂತ್ರ ಸೃಷ್ಟಿಗೆ ದಾರಿಯಾಗಬೇಕು. ಅಲ್ಲದೆ ಅನುಕರಣೆಯ ವಸ್ತುಗಳನ್ನು ತಿರಸ್ಕರಿಸಬೇಕಾಗಿಲ್ಲ. ಅನುಕರಣೆಯಲ್ಲೂ ಉತ್ತಮ, ಮಧ್ಯಮ, ಅಧಮ ರೀತಿಗಳುಂಟು. ಕಲಾಕೃತಿಯಲ್ಲಿ ಲೋಕಾನುಕೃತಿಯನ್ನು ಬಯಸುವ ಸಹೃದಯ ವೃಂದವೂ ಉಂಟು. ಅನುಕರಣೆಯೂ ಮಾನವನಿಗಿರುವ ಒಂದು ಶಕ್ತಿ. ಅತ್ಯುತ್ತಮ ಅನುಕರಣೆಯೂ ಒಂದು ಮಟ್ಟದ ಕಲೆಯಾಗಬಹುದು. ಆದರೆ ಅನುಕರಣೆ ಸ್ವತಂತ್ರ ಸೃಷ್ಟಿಪೂರ್ವದ ಒಂದು ಸಾಧನಾಸ್ಥಿತಿ. ಹಾಗಾದರೆ ಸ್ವತಂತ್ರ ಸೃಷ್ಟಿ ಎಂದು ನಾವು ಕರೆಯುವ ಕಲಾಕೃತಿಗಳಲ್ಲಿಯೂ ಅನುಕರಣೆಯ ಅಂಶ ಇಲ್ಲವೆ ಎಂಬ ಪ್ರಶ್ನೆ ಏಳುತ್ತದೆ. ಆದರೆ “ಕಲೆ ಎಂಬುದು ಅನುಕರಣಪೂರ್ವಕವಾದ ಸೃಷ್ಟಿ ಎನ್ನುವುದಕ್ಕಿಂತ ಸೃಷ್ಟಿಪೂರ್ವಕವಾದ ಅನುಕರಣೆ[3] ಎನ್ನುವುದು ಹೆಚ್ಚು ಸಮರ್ಪಕವೆಂದು ತೋರುತ್ತದೆ.[4]

ಪ್ರತಿಭಾವಂತನ ಸೃಷ್ಟಿ

ಕಲೆ ಎನ್ನುವುದು ಕೇವಲ ಅನುಕರಣೆಯಿಂದ ಸುಂದರವಾಗುವುದಿಲ್ಲ. ಒಂದು ಸುಂದರವಾದ ವಸ್ತುವನ್ನು ಅನುಕರಿಸುವುದರಿಂದ ಕಲಾಕೃತಿ ಸುಂದರವಾಯಿತು ಎನ್ನುವುದರ ಬದಲು ಸುಂದರವಾದ ಅನುಕರಣೆಯಾಯಿತು ಎಂದು ಹೇಳಬಹುದು. ಆದರೆ ಕಲಾವಿದನೂ ಒಬ್ಬ ವಿಶಿಷ್ಟವ್ಯಕ್ತಿ. ಅವನಲ್ಲಿ ಪ್ರತಿಭೆ ಎಂಬ ವಿಶೇಷ ಶಕ್ತಿಯಿದೆ. ಪ್ರತಿಭಾದೃಷ್ಟಿಗೆ ಅಥವಾ ಒಳಗಣ್ಣಿಗೆ ವಸ್ತು ಹೇಗೆ ಗೋಚರಿಸಿತೋ ಹಾಗೆ ಅದನ್ನು ಅವನು ಒಂದು ಸಂಕೇತವಾಗಿಯೋ, ಪ್ರತೀಕವಾಗಿಯೋ ರೂಪಿಸುತ್ತಾನೆ. ಆದುದರಿಂದ ಕಲಾವಿದನ ಈ ಪ್ರತಿಭಾಕ್ರಿಯೆ ಎನ್ನುವುದು ಕೇವಲ ಅನುಕರಣೆಯಲ್ಲ. ಅದೊಂದು ಸ್ವತಂತ್ರ ನಿರ್ಮಾಣ ಸಾಮರ್ಥ್ಯ. “ಕಲೆ ಎನ್ನುವುದು ಸೌಂದರ‍್ಯವನ್ನು ಸೆರೆಗೈಯ್ಯುವ ಒಂದು ವಿಶೇಷ ಕ್ರಿಯೆ. ಎಂದರೆ ಸೌಂದರ‍್ಯವನ್ನು ಗ್ರಹಿಸುವ ಬೇರೆ ಬೇರೆ ವಿಧಾನಗಳಿದ್ದರೂ, ಕಲೆ ಮಾತ್ರ ಒಂದು ವಿಶೇಷ ರೀತಿಯ ವಿಧಾನ. ಕಲಾವಿದ ತನ್ನ ಪ್ರತಿಭೆಯಿಂದ ಹೊರ ಜಗತ್ತನ್ನು ಗ್ರಹಿಸಿ ಒಂದು ವಿಶಿಷ್ಟವಾದ ಕಲಾಜಗತ್ತನ್ನು ಸೃಜಿಸುತ್ತಾನೆ.”[5] ವಿಗ್ರಹದ ಕಲ್ಲಿಗೆ ಶಿಲ್ಪಿ ಜೀವ ತುಂಬುವಂತೆ ಲೋಕವಸ್ತುವಿಗೆ ಕಲಾವಿದ ಒಂದು ವಿಶಿಷ್ಟತೆಯನ್ನು ತುಂಬುತ್ತಾನೆ. ಆದುದರಿಂದಲೇ, ಕಲಾಕೃತಿ ಪ್ರಕೃತಿಗಿಂತ ಬೇರೆ ಎಂಬಂತೆ ಅನುಭವಕ್ಕೆ ಬರುತ್ತದೆ. ಈ ಪ್ರತಿಮಾ, ಸಂಕೇತ ಇತ್ಯಾದಿಗಳ ಮೂಲಕ ವ್ಯಕ್ತವಾಗುವುದು ಹೊರಗಣ್ಣಿಗೆ ಕಂಡ ಕಾಣ್ಕೆಗಿಂತ ಬೇರೆಯಾದದ್ದು. ಈ ದೃಷ್ಟಿಯಿಂದ ಸೌಂದರ‍್ಯ ಎನ್ನುವುದು ಒಂದು ಪ್ರತಿಭಾಸೃಷ್ಟಿ ಎಂದು ಹೇಳಬೇಕಾಗುತ್ತದೆ.

 

ಯಶಸ್ವಿಯಾದ ಮಾಧ್ಯಮ

ಸೌಂದರ‍್ಯ ಎನ್ನುವುದು, ಯಶಸ್ವಿಯಾದ ಮಾಧ್ಯಮದ ಮೂಲಕ ವ್ಯಕ್ತಗೊಂಡದ್ದು ಎನ್ನುವ ಒಂದು ಮತವಿದೆ. ನಿಜ, ಕಲಾಕೃತಿ ಎಂದರೆ ಒಂದು ಮಾಧ್ಯಮವೇ ಎಂದು ನಮಗೆ ಗೋಚರಿಸುತ್ತದೆ. ಈ ಮಾಧ್ಯಮ ಏನಿದ್ದರೂ ಕಲಾವಿದನ ಅನುಭವಪ್ರವಹಣಕ್ಕೆ ನಿರ್ಮಿತವಾದ ಒಂದು ಪಾತ್ರ. ಈ ಪಾತ್ರ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಅಥವಾ – ಕಲಾವಿದನ  ಅನುಭವವನ್ನು ಪ್ರಕಟಿಸಲು ಸಮರ್ಥವಾಗಿದೆ – ಎನ್ನುವುದರ ಮೇಲೆ ಅದರ ಸೌಂದರ‍್ಯ ನಿಂತಿದೆ ಎನ್ನಬಹುದು. ಕ್ರೋಚೆ ಈ ಕಲಾಮಾಧ್ಯಮವನ್ನು ಅಷ್ಟೇನೂ ಪ್ರಧಾನವೆಂದು ಭಾವಿಸುವುದಿಲ್ಲ; ಆದರೆ ಕವಿಗೆ ಪ್ರಧಾನವಲ್ಲವಾದರೂ ಸಹೃದಯನಿಗೆ ಈ ಕಲಾ ಮಾಧ್ಯಮವೇ ಮುಖ್ಯ. ಇಲ್ಲಿ ಮಾಧ್ಯಮ ಮುಖ್ಯವೋ ಅದರಲ್ಲಿ ವ್ಯಕ್ತವಾದ ಭಾವ ಮುಖ್ಯವೋ ಎಂಬ ಪ್ರಶ್ನೆ ಬಂದರೆ – ಭಾವ ಒಂದು ಬೇರೆ, ಮಾಧ್ಯಮ ಏನಿದ್ದರೂ ಭಾವಪ್ರವಹಣಕ್ಕಾಗಿ ಹೊರಗಿನಿಂದ ತಂದು ಜೋಡಿಸಿಕೊಂಡ ಒಂದು ಉಪಕರಣ ಎಂದು ಅರ್ಥವಾಗುವುದುಂಟು. ಈ ದೃಷ್ಟಿಯಿಂದ ಕಲಾಮಾಧ್ಯಮ ಎನ್ನುವುದೊಂದು ಭೌತವಸ್ತು; ಅದು ಹಲವು ವೇಳೆ ಅಭಿವ್ಯಕ್ತಿಗೆ ಅಡ್ಡಿಯಾಗಲೂ ಬಹುದು – ಎನ್ನುವ ಸಂಶಯ ಹಲವರಲ್ಲಿ ಮೂಡಿದೆ. ಕ್ಯಾಥರಿನ್ ಗಿಲ್ಪರ‍್ಟ್ ಅವರು “ಒಂದು ನಿರ್ದಿಷ್ಟವಾದ ಮಾಧ್ಯಮ ಬೇರೊಂದು ನಿರ್ದಿಷ್ಟವಾದ ಭಾವ ಪ್ರಕಾಶನಕ್ಕೆ ಅಡ್ಡಿಯಾಗಬಹುದು. ಆದರೆ ಹಲವು ಬಗೆಯ ಸೌಂದರ‍್ಯ ಯಾವ ಮಾಧ್ಯಮದಲ್ಲಾದರೂ ಪ್ರಕಾಶಗೊಳ್ಳುವುದು”[6] ಎಂದು ಹೇಳುವ ಮಾತಿನಲ್ಲೂ ಇದೇ ಸಂಶಯ ಕಾಣುತ್ತದೆ. ಬಸಾಂಕ್ವೆ, ಕಲಾಮಾಧ್ಯಮದ ಬಗ್ಗೆ ಹೇಳುತ್ತಾ ಎರಡು ಅಂಶಗಳನ್ನು ಸೂಚಿಸುತ್ತಾನೆ.: “ಒಂದು – ಕಲಾಮಾಧ್ಯಮ ಭೌತಿಕವಾದುದರಿಂದ ಕಲಾವಿದನ ಚಿದ್ರೂಪದ ಪ್ರಕಾಶನಕ್ಕೆ ಅದು ಅಡ್ಡಿಯಾಗುತ್ತದೆ. ಎರಡು – ಕಲಾವಿದನ ಕ್ರಿಯೆ ಚಿತ್ ಕ್ರಿಯೆಯಾದುದರಿಂದ ಭೌತಮಾಧ್ಯಮ ಯಾವ ರೀತಿಯಲ್ಲೂ ಅವನ ಅಭಿವ್ಯಕ್ತಿಗೆ ಅಡ್ಡಿಯಾಗುವುದಿಲ್ಲ.”[7] ಈ ಎರಡರಲ್ಲಿ ಮೊದಲನೆಯದು ಆಕ್ಷೇಪ, ಎರಡನೆಯದು ಸಮಾಧಾನ. ಶಿಲ್ಪಿಗೆ ಕಲ್ಲು, ವರ್ಣಶಿಲ್ಪಿಗೆ ಬಣ್ಣ, ಕಾಗದ, ಕವಿಗೆ ಭಾಷೆ ಇವೆಲ್ಲವೂ ಅವನ ಭಾವಾಭಿವ್ಯಕ್ತಿಯ ಮಾಧ್ಯಮಗಳು. ಆದರೆ ಕಲ್ಲು, ಭಾಷೆ, ಬಣ್ಣ ಇತ್ಯಾದಿಗಳು ಕಲಾಮಾಧ್ಯಮವಾಗುವುದು ಕಲಾವಿದನ ಪ್ರತಿಭೆಗೆ ಅಥವಾ ಚಿತ್‌ಕ್ರಿಯೆಗೆ ಒಳಗಾದಾಗ, ಅಲ್ಲಿಯ ತನಕ ಇವು ಸಾಮಗ್ರಿಗಳು. ಈ ಸಾಮಗ್ರಿಗಳನ್ನು ಬಳಸಿಕೊಂಡು ಕಲಾವಿದನ ಭಾವದ ತೀವ್ರತೆ ಒಂದು ಮಾಧ್ಯಮವನ್ನು ರಚಿಸಿ ವ್ಯಕ್ತಗೊಳ್ಳುತ್ತದೆ. “ಈ ಕಲಾ ಮಾಧ್ಯಮವನ್ನು ಭೌತಿಕ, ರಾಸಾಯನಿಕವೆಂಬ ವೈಜ್ಞಾನಿಕ ಅರ್ಥದಲ್ಲಿ ಭಾವಿಸುವುದು ತುಂಬಾ ಅನ್ಯಾಯ. ಕಲಾಮಾಧ್ಯಮ ಕಲಾವಿದನ ಅನುಭವದ ಅಖಂಡತೆಯ ಒಂದು ಅಂಶ…. ಯಾವ ಒಂದು ಭೌತಿಕ ವಸ್ತುವೇ ಆಗಲಿ ಸೌಂದರ‍್ಯದ ವಲಯವನ್ನು ಪ್ರವೇಶಿಸಿದ ಒಡನೆಯೇ ಅದೂ ಸೌಂದರ‍್ಯದ ಒಂದು ಅಂಗವಾಗುತ್ತದೆ. ಆಗ ಈ ಮಾಧ್ಯಮ ಕೇವಲ ಭೌತವಸ್ತು ಎನ್ನುವುದಾಗಲೀ, ಅಭಿವ್ಯಕ್ತಿಗೆ ಅಡ್ಡಿಯಾಗುತ್ತದೆ ಎನ್ನುವ ಮಾತಾಗಲೀ ನಿಲ್ಲುವುದಿಲ್ಲ. ಅದು ಭೌತಗಿವ್ತವೆನ್ನುವುದೇನಿದ್ದರೂ, ಹಾಗೆಂದು ಭಾವಿಸುವವನ ತಲೆಯಲ್ಲಿ ಮಾತ್ರ. ಆ ವಸ್ತು ಪ್ರಾಣಪೂರ್ಣವಾಗಿದ್ದರೆ, ಮಾನಸಿಕ ಅನುಭವದ ವಸ್ತುವಾದರೆ, ಅದು ಅಭಿವ್ಯಕ್ತಿಗೆ ಅಡ್ಡಿಯಾಗಿ ಆಗಲೀ, ವಿರುದ್ಧವಾಗಿಯಾಗಲೀ ನಿಲ್ಲುವುದೆಲ್ಲಿ ಬಂತು? ದೇಹ ಆತ್ಮ ಪ್ರಕಾಶನಕ್ಕೆ ಅಡ್ಡಿಯಾಗಿ ನಿಂತೀತೆ?”[8]

ಕಲಾಸೌಂದರ‍್ಯವನ್ನು ಕುರಿತು ‘ಯಶಸ್ವಿಯಾದ ಮಾಧ್ಯಮದಲ್ಲಿ ಮೈಗೊಂಡದ್ದು’ಎಂದು ಅಭಿಪ್ರಾಯಪಡುವಲ್ಲಿ, ಅಯಶಸ್ವಿಯಾದ ಮಾಧ್ಯಮದಲ್ಲಿ ಮೈಗೊಂಡದ್ದು ಸೌಂದರ್ಯವಾಗಲಾರದು ಎನ್ನುವ ಭಾವ ಸೂಚಿತವಾಗುತ್ತದೆ. ಆ ಭಾವನೆಯೂ ಸಹಜವಾದುದೇ. ಏಕೆಂದರೆ ಹಲವು ಕಲಾಮಾಧ್ಯಮಗಳು ಸೌಂದರ‍್ಯ ಪ್ರಕಾಶನದಲ್ಲಿ ಅಡ್ಡಿಯಾಗುವುದೂ ಉಂಟು. ಹಲವು ಕೃತಿಗಳನ್ನು ನೋಡಿ ಇದು ಹೀಗಲ್ಲದೆ ಬೇರೆಯ ರೀತಿಯಲ್ಲಿದ್ದರೆ ಚೆನ್ನಾಗಿರುತ್ತಿತ್ತೇನೋ ಎನಿಸುತ್ತದೆ. ಆದರೆ ಅದು ಮಾಧ್ಯಮದ ದೋಷ ಎನ್ನುವುದಕ್ಕಿಂತ, ಪ್ರತಿಭಾಶಕ್ತಿಯ ಅಸಮರ್ಥತೆಯನ್ನು ಸೂಚಿಸುತ್ತದೆ ಎನ್ನಬಹುದು. ಮಾಧ್ಯಮ ಯಶಸ್ವಿಯಾಗುವುದು ಯಶಸ್ವಿಯಾಗದಿರುವುದು ಅದರ ನಿರ್ವಹಣಕ್ಕೆ ಮೂಲವಾದ ಕಲಾವಿದನ ಶಕ್ತಿಯನ್ನು ಅವಲಂಬಿಸಿದೆ. ಉತ್ತಮವಾದ ಕಲಾವಿದ ಉತ್ತಮವಾದ  ರೀತಿಯಲ್ಲೇ, ತನ್ನ ಪ್ರತಿಭಾ ಪ್ರಾಣಕ್ಕೆ ಕಲಾಮಾಧ್ಯಮ ತಕ್ಕ ಶರೀರ ಎನ್ನುವುದನ್ನು ಸಾಬೀತುಮಾಡಿಕೊಡುತ್ತಾನೆ. ಅಷ್ಟೇ ಏಕೆ, ಅತ್ಯುತ್ತಮ ಕಲಾವಿದ, ತನ್ನ ಕೃತಿಯಲ್ಲಿ ಮಾಧ್ಯಮ ಯಾವುದು ಎಂಬ ಕಡೆಗೆ ಸಹೃದಯರು ಪ್ರತ್ಯೇಕ ಗಮನ ಕೊಡದೆ ರಸಾಸ್ವಾದದಲ್ಲಿ ತಲ್ಲೀನವಾಗುಂತಹ ಮನಃಸ್ಥಿತಿಯನ್ನು ಉಂಟುಮಾಡಿಬಿಡುತ್ತಾನೆ.[9]

ಸಮ್ಮೋಹಕಶಕ್ತಿ

ಈ ತಲ್ಲೀನತೆಗೆ ಕಲಾಕೃತಿ ನಮ್ಮನ್ನು ಮರುಳಾಗಿಸುವುದೇ ಕಾರಣ; ನಾವು ಒಂದು ಚಿತ್ರವನ್ನು ನೋಡಿ, ಬೆರಗಾಗಿ ಮರುಳಾಗಿ ನಿಲ್ಲುತ್ತೇವೆ; ಹೀಗೆ ಮರುಳುಗೊಳಿಸುವ ಮಾಯಿಕತೆಯೆ ಸೌಂದರ‍್ಯ ಎಂದು ಹಲವರ ಮತ. ಹೀಗೆ ಮರುಳಾಗಿಸುವುದರಲ್ಲಿ ಕಲಾಕೃತಿ ಮುಖ್ಯವಾಗಿ ನಮಗೆ ಅದೂ ಒಂದು ಬಗೆಯಲ್ಲಿ ವಾಸ್ತವವೇ ಎಂಬ ಭ್ರಾಂತಿಯನ್ನು ಹುಟ್ಟಿಸುತ್ತದೆ. ಈ ಭ್ರಮೆ ಅಥವಾ ಭ್ರಾಂತಿ ಎಂದರೆ ಮಿಥ್ಯೆ ಎಂದಲ್ಲ. ಅದೂ ಸತ್ಯವೇ; ಅನುಭವದಲ್ಲಿ ಕಲಾಸತ್ಯವೇ. “ತನ್ನನ್ನು ತಾನೇ ಮರುಳುಗೊಳಿಸುವ (Self-deception) ಒಂದು ಸ್ವಭಾವ ಮಾನವನಲ್ಲಿದೆ, ಅದನ್ನು ಕಲಾವಿದ ತೃಪ್ತಗೊಳಿಸುತ್ತಾನೆ.” ಎಂಬ ವಾದವನ್ನು ಕೊನ್ರಾಡ್ ಲಾಂಜೆ (Konard Longe) ಎನ್ನುವವರು ವಿಸ್ತಾರವಾಗಿಯೇ ಪ್ರತಿಪಾದಿಸಿದ್ದಾರೆ.[10] ಆದರೆ ಸೌಂದರ‍್ಯಕ್ಕೆ ನಮ್ಮನ್ನು ಮರುಳುಗೊಳಿಸುವ, ತನ್ಮೂಲಕ ನಮ್ಮನ್ನು ನಾವೇ ಮೈಮರೆಯುವಂತೆ ಮಾಡುವ ಶಕ್ತಿಯಿದೆ ಎನ್ನುವಷ್ಟನ್ನು ಮಾತ್ರ ನಾವು ಒಪ್ಪಿಕೊಳ್ಳಬಹುದು. ಏಕೆಂದರೆ ಕಲಾಕೃತಿ ಮರುಳುಗೊಳಿಸುವುದರಲ್ಲೇ ಮುಕ್ತಾಯವಾದರೆ ಅದರ ಉದ್ದೇಶ ಘನವಾಗದು. ಅದು ಮರುಳುಗೊಳಿಸುವುದರ ಮೂಲಕ ತಿರುಳನ್ನು ತೋರಿಸಬೇಕು. ಕಲೆಯ ಗುರಿ ಕೇವಲ ಚಮತ್ಕಾರವಲ್ಲ; ಸತ್ಯದ ಸಾಕ್ಷಾತ್ಕಾರ.

ಭಾವಪ್ರಚೋದಕ

ಹಿಂದೆ ಹೇಳಿದಂತೆ ಕಲೆ ನಮ್ಮಲ್ಲಿ ಈ ಬಗೆಯ ಮೋಹಕತೆಯನ್ನುಂಟುಮಾಡಲು ಅದೂ ಲೋಕವಾಸ್ತದಂತೆ ತೋರುವುದೇ ಕಾರಣ ಎಂಬ ಅಂಶವನ್ನು ಆಧಾರವಾಗಿರಿಸಿಕೊಂಡು, ಲೋಕ ನಮಗೆ ಪ್ರಿಯವಾಗಿದೆ, ಅದೇ ಕಾರಣಕ್ಕಾಗಿ ಕಲೆ ನಮಗೆ ಪ್ರಿಯವಾಗುತ್ತದೆ, ಎನ್ನುವ ಒಂದು ವಾದವನ್ನು ಹಲವರು ಹೂಡಿದ್ದಾರೆ. ಅವರ ಪ್ರಕಾರ ಕಲೆ ಭಾವಪ್ರಚೋದಕವಾದುದು. ಆದುದರಿಂದ ಯಾವುದು ನಮ್ಮಲ್ಲಿ ಭಾವಪ್ರಚೋದನೆಯನ್ನುಂಟುಮಾಡುವುದೋ ಅದು ಸುಂದರ ಎನ್ನುವುದು ಇವರ ಸೂತ್ರ. ಇಲ್ಲಿ ‘ಭಾವ’ ಎಂದರೆ ಲೌಕಿಕಭಾವ (emotion) ಎಂದು ಅರ್ಥವಾಗುತ್ತದೆ. ಆದರೆ ಕಲೆ ಯಾವೆಲ್ಲ ಕ್ಷುದ್ರ ಭಾವಗಳನ್ನೂ ಪ್ರಚೋದಿಸತೊಡಗಿದರೆ ಸೌಂದರ‍್ಯ ಶ್ರೇಯಸ್ಸನ್ನು ಸಾಧಿಸಿದಂತಾಗುವುದಿಲ್ಲ. ಆದುದರಿಂದ ಅದು ಉದಾತ್ತ ಭಾವಗಳನ್ನು ಪ್ರಚೋದಿಸಬೇಕೆಂದು ನೀತಿವಾದಿಗಳು ಹೇಳುತ್ತಾರೆ. ಒಂದು ರಾಷ್ಟ್ರವನ್ನು ಯುದ್ಧೋನ್ಮುಖವಾಗಿ ಮಾಡುವಾಗ ಹಾಡುವ ರಣಗೀತೆಗಳು ವೀರಭಾವನನ್ನು ಪ್ರಚೋದಿಸಿ ಉತ್ಸಾಹವನ್ನು ತುಂಬಿರುವುದೂ ಉಂಟು. ಆದರೆ ಇಲ್ಲಿ ‘ಭಾವ’ ವಾಸ್ತವವಾಗಿಯೂ ಲೋಕಭಾವದ ಅತಿಶಯದ ರೂಪವಲ್ಲದಿದ್ದ ಪಕ್ಷದಲ್ಲಿ ಅದಕ್ಕೆ ಹೃದಯಸ್ಥಭಾವೋದ್ದೀಪನಶಕ್ತಿ ಬರಲು ಸಾಧ್ಯವಾಗುತ್ತಿರಲಿಲ್ಲ. ಆದುದರಿಂದ ಸೌಂದರ‍್ಯ ಪ್ರಚೋದಿಸುವುದು ಒಂದು ನಿರ್ದಿಷ್ಟವಾದ ಭಾವವನ್ನು. ಸೌಂದರ‍್ಯಾನುಭವದಿಂದ ನಮ್ಮಲ್ಲಿ ಆಗುವುದು ಕೇವಲ ಲೌಕಿಕಭಾವ ಪ್ರಚೋದನೆಯಲ್ಲ, ಅದೊಂದು ನಿರ್ದಿಷ್ಟ ಭಾವ ಪ್ರಚೋದನೆ. ಕಲಾಕೃತಿಗಳು ನಮ್ಮಲ್ಲಿ ಪ್ರಚೋದಿಸುವ ಭಾವಗಳು ವಿಶಿಷ್ಟವಾದ ಒಂದು ನಿರ್ದಿಷ್ಟವಾದ ಸೌಂದರ‍್ಯಾನುಭವದ ಪರಿಣಾಮಗಳೆ. ಇಂತಹ ಸೌಂದರ‍್ಯಾನುಭವವನ್ನು ನಮ್ಮಲ್ಲಿ ಪ್ರಚೋದಿಸುವ ಕಲಾಕೃತಿಗಳನ್ನು Significant Form  ಎಂದು ಕ್ಲೆ ವ್‌ಬೆಲ್ ಕರೆಯುತ್ತಾನೆ. ಇದೇ ವಾದವನ್ನು ರೋಜರ್ ಫ್ರೈ ಎನ್ನುವವನೂ ಸಮರ್ಥಿಸುತ್ತಾನೆ.

ಕ್ಲೆ ವ್‌ಬೆಲ್ ಈ ಸಿದ್ಧಾಂತವನ್ನು ಮಂಡಿಸುತ್ತಾ “ಸುಂದರವಾದ ವಸ್ತುಗಳಿಂದ ನಾವು ಒಂದು ವಿಲಕ್ಷಣವಾದ ಭಾವವನ್ನು ಅನುಭವಿಸುತ್ತೇವೆ – ಎನ್ನುವುದೇ ಸೌಂದರ‍್ಯ ಮೀಮಾಂಸೆಯಲ್ಲಿ ಮೊದಲ ಘಟ್ಟ. ಅಂತಹ ಭಾವವನ್ನು ನಮ್ಮಲ್ಲಿ ಪ್ರಚೋದಿಸುವ ವಸ್ತುಗಳನ್ನು ನಾವು ಕಲಾಕೃತಿ ಎಂದು ಕರೆಯುತ್ತೇವೆ. ಎರಡನೆಯದಾಗಿ, ಈ ಭಾವ ‘ಸೌಂದರ‍್ಯಭಾವ’ ಅಥವಾ ‘ರಸಭಾವ’. ಇಂತಹ ಭಾವಗಳನ್ನು ಪ್ರಚೋದಿಸುವ ಕಲಾವಸ್ತುಗಳೆಲ್ಲಕ್ಕೂ ಇರಬಹುದಾದ ಯಾವುದೇ ಒಂದು ಲಕ್ಷಣವನ್ನು ನಾವು ಕಂಡುಕೊಂಡ ಪಕ್ಷದಲ್ಲಿ ಸೌಂದರ‍್ಯ ಮೀಮಾಂಸೆಯ ಕೇಂದ್ರ ಸಮಸ್ಯೆಯನ್ನು ಬಿಡಿಸಿದಂತಾಗುತ್ತದೆ; ಅಂತೆಯೇ ಕಲಾಕೃತಿಯ ಸಾರಭೂತ ಗುಣವನ್ನರಿತಂತಾಗುತ್ತದೆ.”[11] ಎಂದು ಹೇಳುತ್ತಾ, ದೃಶ್ಯಕಲಾಕೃತಿ (Visual Art) ಗಳಲ್ಲಿ ಇರುವ ಈ ಗುಣವನ್ನು ‘ಸಿಗ್ನಿ ಫಿಕೆಂಟ್ ಫಾರಂ’ ಎಂದು ಕರೆಯುತ್ತಾನೆ. ಎಂದರೆ ಒಂದು ಕೃತಿ ಕಲಾಕೃತಿ ಎನಿಸಿಕೊಳ್ಳಬೇಕಾದರೆ ಅದಕ್ಕೆ ಅನಿವಾರ‍್ಯವಾದ ಒಂದು ವಿಶೇಷತೆಯಿರಬೇಕು. ಯಾವ ಅಂತಹ ಒಂದು ವೈಲಕ್ಷಣ್ಯವಿರದಿದ್ದರೆ ಅದು ಕಲಾಕೃತಿ ಎನಿಸಿಕೊಳ್ಳಲಾರದೋ ಅಂತಹ ಗುಣ ವಿಶೇಷವೇ ‘ಸಿಗ್ನಿಫಿಕೆಂಟ್ ಫಾರ್ಂ’[12] (Significant form) ಎಂದು ಅವನ ವಿವರಣೆ.

ಕ್ಲೆ ವ್ ಬೆಲ್‌ನ ವಿಚಾರ ಸರಣಿಯ ಮುಖ್ಯಾಂಶಗಳನ್ನು “Significant Form” ಎನ್ನುವುದಕ್ಕೆ ‘ಅರ್ಥಪೂರ್ಣಾಕೃತಿ’ ಎಂದು ಅನುವಾದಿಸಿಕೊಂಡು ನಮ್ಮ ಮಾತಿನಲ್ಲಿ ಹೀಗೆ ಸಂಗ್ರಹಿಸಬಹುದು:

ಅರ್ಥಪೂರ್ಣಾಕೃತಿ ಎಂಬ ಪದದಲ್ಲಿ ಎರಡು ಅಂಶಗಳು ಗೋಚರಿಸುತ್ತವೆ. ಒಂದು ಆಕೃತಿ, ಮತ್ತೊಂದು ಅದಕ್ಕಿರುವ ಅರ್ಥಪೂರ್ಣತೆ.

ಎಲ್ಲ ವಸ್ತುಗಳಿಗೂ ಒಂದು ಬಗೆಯ ಆಕೃತಿ ಇದೆ. ಅವುಗಳಲ್ಲಿ ಹಲವು ಮನಸ್ಸನ್ನು ಸೆರೆಹಿಡಿಯುತ್ತವೆ, ಕರಗಿಸುತ್ತವೆ, ಸಂತೋಷಪಡಿಸುತ್ತವೆ. ಮತ್ತೆ ಹಲವು ನಮ್ಮನ್ನು ಕೇವಲ ಕರಗಿಸದೆ, ಸಂತೋಷಪಡಿಸದೆ ಒಂದು ನಿರ್ದಿಷ್ಟವಾದ ರಸವಶತೆಗೆ ಒಯ್ಯುತ್ತವೆ. ಸುಮ್ಮನೆ ಮನಸ್ಸನ್ನು ಸೆರೆಗೈದರೆ, ಕರಗಿಸಿದರೆ ಸಾಲದು, ಅವು ನಮ್ಮನ್ನು ರಸವಶತೆಗೆ ಒಯ್ಯಬೇಕು. ಹಾಗೆ ರಸವಶತೆಗೆ ಒಯ್ಯಲು ಕಾರಣ ಅವುಗಳಲ್ಲಿ ಗೋಚರಿಸುವ ಒಂದು ‘ಅರ್ಥಪೂರ್ಣತೆ’.

ಆದರೆ ಈ ಅರ್ಥಪೂರ್ಣತೆ ಕೆಲವು ವಸ್ತುಗಳಲ್ಲಿ ಮಾತ್ರವೆ ಏಕೆ ಗೋಚರವಾಗಬೇಕು, ಎಲ್ಲದರಲ್ಲೂ ಏಕೆ ಗೋಚರಿಸುವುದಿಲ್ಲ ಎನ್ನುವುದಕ್ಕೆ ಈ ಲೇಖಕ ಯಾವ ಉತ್ತರವನ್ನೂ ಹೇಳುವುದಿಲ್ಲ.

ಹಾಗಾದರೆ ಕಲಾವಿದನ ಕಣ್ಣಿಗೆ ಲೋಕವಸ್ತುಗಳ ಆಕಾರದಲ್ಲಿ ಈ ‘ಅರ್ಥಪೂರ್ಣತೆ’ ಹೇಗೆ ಗೋಚರಿಸುತ್ತದೆ? ಅದಕ್ಕೆ ಕಾರಣ, ಕ್ಲೈವ್ ಬೆಲ್‌ನ ಪ್ರಕಾರ ಅವು ‘ಪರಿಶುದ್ಧಾಕೃತಿ’ (Pure forms)ಗಳಾಗಿವೆ ಎನ್ನುವುದರಿಂದ. ನಾವೆಲ್ಲರೂ ದಿನವೂ ನೂರಾರು ನೋಟಗಳನ್ನು ನೋಡುತ್ತೇವೆ. ಅವು ಆಕೃತಿಗಳಾಗೇನೋ ಗೋಚರಿಸುತ್ತವೆ; ಪರಶುದ್ಧಾಕೃತಿಗಳಾಗಿ ಅಲ್ಲ. ಏಕೆಂದರೆ ಒಂದು ವಸ್ತುವನ್ನು ನಾವು ನೋಡುವಾಗ, ಆ ವಸ್ತುವನ್ನು ಅನೇಕ ಲೋಕಭಾವಸಂಬಂಧಿಯಾಗಿ ನೋಡುತ್ತೇವೆ. ಎಂದರೆ ಒಂದು ಹೊಲವನ್ನು ನೋಡುವಾಗ ಅದು ‘ಪರಿಶುದ್ಧಾಕೃತಿ’ಯಾಗಿ ತೋರದೆ, ಅದರಿಂದ ಎಷ್ಟು ದವಸ ಬೆಳೆಯಬಹುದು, ಅದು ಯಾವ ರೀತಿಯ ಮಣ್ಣನ್ನು ಹೊಂದಿದೆ, ಎಷ್ಟು ಎಕರೆ ವಿಸ್ತಾರವಾಗಿದೆ, ಎನ್ನುವ ಹಲವಾರು ಪ್ರಾಯೋಜನಿಕ ದೃಷ್ಟಿಗಳಿಂದ ಬದ್ಧರಾಗಿರುತ್ತೇವೆ. ಈ ದೃಷ್ಟಿಯಲ್ಲಿ ಅದನ್ನು ‘ಸುಂದರ’ ಎಂದೂ ಕರೆದೇವು; ಆದರೆ ಅದು ‘ಅರ್ಥಪೂರ್ಣ’  ಎನ್ನಲಾಗುವುದಿಲ್ಲ. ಕಲಾವಿದನಿಗಾದರೋ ಆತನ ನಿರ್ಲಿಪ್ತ ಪರಿಭಾವನೆಯ ಫಲವಾಗಿ, ಅದು ಅವನಲ್ಲಿ ರಸವಶತೆಯನ್ನುಂಟುಮಾಡುವ, ‘ಪರಿಶುದ್ಧಾಕೃತಿ’ಯಾಗಿ, ವರ್ಣಗಾತ್ರ ರೇಖಾವಿನ್ಯಾಸಗಳ ವಿಶಿಷ್ಟ ರಚನೆಯಾಗಿ ಗೋಚರಿಸುತ್ತದೆ. ಆದುದರಿಂದ ವಸ್ತು ಬೇರೆ ಯಾವ ಉದ್ದೇಶಗಳಿಗೂ ಮಾಧ್ಯಮವಾಗದೆ, ‘ರಸಾನುಭವ’ ವೆಂಬ ನಿರ್ದಿಷ್ಟ ಭಾವೋದ್ದೀಪನೆಗೆ ನೆರವಾದರೆ ಅದು ಅರ್ಥಪೂರ್ಣಕೃತಿಯಾಗುತ್ತದೆ. ದೃಗ್ಗೋಚರ ಕಲೆಗಳೆಲ್ಲದರಲ್ಲಿರುವ ಈ ವಿಶಿಷ್ಟವಾದ ಗುಣವನ್ನು ನಾವು ‘ಅರ್ಥಪೂರ್ಣಾಕೃತಿ’ ಎಂದು ಕರೆಯಬಹುದು. “ಬೇಕಾದರೆ ಈ ಮಾತಿಗೆ ಬದಲಾಗಿ ಬೇರಾವ ಮಾತನ್ನಾದರೂ ಬಳಸಿಕೊಳ್ಳಿ; ನಾನು ಮಾತ್ರ ಅದನ್ನು ಅರ್ಥಪೂರ್ಣಾಕೃತಿ ಎಂದೇ ಕರೆಯುತ್ತೇನೆ”[13] ಎಂದು ಈ ಲೇಖಕ ಹೇಳುತ್ತಾನೆ.

ಲೋಕದಲ್ಲಿ ಕಲಾವಿದನಿಗೆ ವಸ್ತುಗಳು ‘ಪರಿಶುದ್ಧಾಕೃತಿ’ಗಳಲ್ಲಿ ಗೋಚರಿಸುವುದು ಯಾವುದರ ಅರ್ಥಪೂರ್ಣತೆ? ಸಹೃದಯನಿಗೆ ಕಲಾಕೃತಿಯಲ್ಲಿ ಗೋಚರಿಸುವುದು ಯಾವುದರ ಅರ್ಥಪೂರ್ಣತೆ? ಎಂಬ ಪ್ರಶ್ನೆಗೆ ಉತ್ತರ ಹೀಗಿದೆ: ಕಲಾವಿದನಿಗೆ ಲೋಕವಸ್ತುಗಳಲ್ಲಿ ಲೌಕಿಕಭಾವದೂರವಾದ ಪರಿಭಾವನೆಯ ಸ್ಥಿತಿಯಲ್ಲಿ ಗೋಚರಿಸುವ ‘ಅರ್ಥಪೂರ್ಣತೆ’ ಅತೀತಶಕ್ತಿಯದು. ಅಂತಹ ರಸವಶತೆಯಲ್ಲಿ ವಸ್ತುವಿನ ಹಿಂದೆ ಇರುವ ಮೂಲ ಚೈತನ್ಯದ ಛಂದೋಗತಿಯನ್ನು ಗ್ರಹಿಸಿ ಅದನ್ನು ‘ಕಲಾಕೃತಿ’ ಎಂಬ ಶುದ್ಧರೂಪದಲ್ಲಿ ಅಭಿವ್ಯಕ್ತಗೊಳಿಸುತ್ತಾನೆ. ವಸ್ತು ಹೇಗೆ ಅವನಿಗೆ ಪರಿಶುದ್ಧ ರೂಪದಲ್ಲಿ, ಎಂದರೆ ಯಾವ ಲೌಕಿಕಭಾವದ ಸೋಂಕೂ ಇಲ್ಲದೆ, ಗೋಚರಿಸಿತೋ ಅಂತೆಯೇ ಅವನ ಕಲಾಕೃತಿಯೂ ಸಹ ಯಾವ ಲೌಕಿಕಭಾವದ ಸೋಂಕೂ ಇಲ್ಲದೆ ಶುದ್ಧರೂಪ. ಆದುದರಿಂದ ನಾವು ಕಲಾಕೃತಿಯ ಆಸ್ವಾದಕ್ಕೆ ಲೋಕ ಜೀವನದಿಂದ ಏನನ್ನೂ ತರಬೇಕಾಗಿಲ್ಲ[14]…. “ಕಲಾಕೃತಿಯ ‘ತ್ರಿಗಾತ್ರದ’ ಅರಿವು ಮತ್ತು ವರ್ಣರೇಖಾದಿಗಳ ಪರಿಜ್ಞಾನ, ಇಷ್ಟಿದ್ದರೆ ಸಾಕು. ಕಲೆಯಲ್ಲಿ ಲೋಕಭಾವಗಳ ಒಂದು ಲೀಲೆಯನ್ನು ಪ್ರದರ್ಶಿಸುತ್ತೇನೆಂದು ಹೊರಡುವುದು, ಕಲಾವಿದನ ಮಿಡುಕಾಡುವ ಸ್ಫೂರ್ತಿಯ ಕುರುಹಾದರೆ, ಕಲಾಕೃತಿಯಲ್ಲಿ ಲೋಕಭಾವಗಳನ್ನೆ ಅರಸುವ ಸಹೃದಯದ ಅಭಿರುಚಿಯೂ ದೋಷಪೂರ್ಣವೆನ್ನುವುದರ ಕುರುಹು. ಒಟ್ಟಿನಲ್ಲಿನ ಅವನ ಸೌಂದರ್ಯಾನುಭವ ಶಕ್ತಿ ದುರ್ಬಲ, ಅಪರಿಪೂರ್ಣ.”[15] “ಲೋಕಭಾವ ಪ್ರದರ್ಶನಕ್ಕೆ ಕಲೆಯನ್ನು ಮಾಧ್ಯಮವಾಗಿ ಬಳಸುವುದು, ವೃತ್ತಪತ್ರಿಕೆಯನ್ನೋದಲು ಟೆಲಿಸ್ಕೋಪನ್ನು ಬಳಸಿದಂತೆ[16]” ಏಕೆಂದರೆ “ಕಲಾಕೃತಿಗೆ ವಿಶಿಷ್ಟವಾದ ಒಂದು ‘ಅರ್ಥಪೂರ್ಣಾಕೃತಿ’ ಉಂಟು. ಈ ಅರ್ಥಪೂರ್ಣತೆ ಜೀವನದ ಯಾವ ‘ಅರ್ಥಪೂರ್ಣತೆ’ಗೂ ಸಂಬಂಧಿಸಿದ್ದಲ್ಲ. ಈ ಕಲಾ ಲೋಕದಲ್ಲಿ ಲೋಕಭಾವಗಳಿಗೆ ಸ್ಥಾನವೇ ಇಲ್ಲ. ಅದು ತನ್ನದೇ ಆದ ನಿರ್ದಿಷ್ಟಭಾವಗಳಿಂದ ಕೂಡಿದ ಒಂದು ಲೋಕ.”[17]

ಕ್ಲೈವ್‌ಬೆಲ್ಲನ ವಾದಸರಣಿ ಮೊದಲು ಕಲಾಕೃತಿಗಳಿಂದ ಮಾತ್ರವೇ ‘ರಸಾನುಭವ’ ಎಂಬ ಭಾವನೆಯಿಂದ ಆರಂಭವಾಗಿ, ಕಡೆಗೆ ಈ ಬಗೆಯ ‘ರಸಾನುಭವ’ವನ್ನುಂಟುಮಾಡುವ ಎಲ್ಲವೂ ‘ಅರ್ಥಪೂರ್ಣಾಕೃತಿ’ಗಳು ಎನ್ನುವ ತೀರ್ಮಾನದಲ್ಲಿ ನಿಲ್ಲುತ್ತದೆ; ಮೊದಲು ವೈಯಕ್ತಿಕ ಅನುಭವವೇ ಆಧಾರ ಎಂಬ ಮಟ್ಟದಿಂದ ಅವನ ಸಿದ್ಧಾಂತ ಆಧ್ಯಾತ್ಮಿಕ ಲೋಕಕ್ಕೆ ಹಾರುತ್ತದೆ – ಎಂದು ಹಲವು ವಿಮರ್ಶಕರು ಇವನ ವಾದವನ್ನು ಅಲ್ಲಗಳೆದಿದ್ದರೂ, ಕಲಾಕೃತಿಗೆ ಒಂದು ‘ಅರ್ಥಪೂರ್ಣಾಕೃತಿ’ ಉಂಟು; ಕಲಾವಿದನಿಗೆ ಅದು ಲೋಕದಲ್ಲಿ ನಿರ್ಲಿಪ್ತ ಪರಿಭಾವನೆಯಿಂದ ವಸ್ತುವಿನ ‘ಶುದ್ಧರೂಪ’ದಲ್ಲಿ ಅನುಭವಕ್ಕೆ ಬರುತ್ತದೆ ಎನ್ನುವ ವಿಚಾರ ನೂತನವಾದುದು, ಮತ್ತು ಪ್ರಶಂಸನೀಯವಾದುದು. ಪ್ರತಿಯೊಂದು ಕಲಾಕೃತಿಯ ವಿಶಿಷ್ಟತೆಯೂ ಅದರ ‘ಅರ್ಥಪೂರ್ಣಾಕೃತಿ’ಯ ಮೇಲೆ ನಿಂತಿದೆ. ಆದರೆ ಇಂತಹ ರಸಾನುಭವಗಳನ್ನು ನಮ್ಮಲ್ಲಿ ಉಂಟುಮಾಡುವ ಕಲಾಕೃತಿಗಳೆಲ್ಲಕ್ಕೂ ‘ಅರ್ಥಪೂರ್ಣಾಕೃತಿ’ಯೊಂದೇ ಗುಣ ಎಂದು ಹೇಳಲಾಗುವುದಿಲ್ಲ. ಅಷ್ಟೇ ಅಲ್ಲ, ಕಲಾಕೃತಿ ಎನ್ನುವುದೊಂದು ತನಗೆ ತಾನೇ ಸ್ವತಂತ್ರವಾದ ಲೋಕ, ವಾಸ್ತವಲೋಕಕ್ಕೂ ಅದಕ್ಕೂ ಯಾವ ಸಂಬಂಧವೂ ಇಲ್ಲ, ಎನ್ನುವುದಾಗಲೀ; ಕಲಾಕೃತಿಯ ಆಸ್ವಾದನೆಗೆ ಸಹೃದಯರು ಹೊರಲೋಕದಿಂದ ಏನನ್ನೂ ತರಬೇಕಾಗಿಲ್ಲ, ಕೇವಲ ವರ್ಣರೇಖಾ ವಿನ್ಯಾಸಗಳ ಪರಿಜ್ಞಾನವಿದ್ದರೆ ಸಾಕು ಎನ್ನುವುದಾಗಲೀ ಸತ್ಯದೂರವಾದ ವಿಚಾರಗಳು. ಕಲಾ ಅನುಭವ ನಿರ್ದಿಷ್ಟವಾದ ಭಾವವನ್ನು ನೀಡುತ್ತದೆ ಎಂದ ಮಾತ್ರಕ್ಕೆ, ಈ ನಿರ್ದಿಷ್ಟಭಾವ ಲೋಕಭಾವಕ್ಕೆ ಯಾವ ರೀತಿಯಲ್ಲೂ ಋಣಿಯಾಗಿಲ್ಲವೆಂದು ಹೇಳಿ ಅತೀತದೆಡೆ ಕೈ ತೋರಿಸಿದರೆ ‘ಅರ್ಥಪೂರ್ಣಾಕೃತಿ’ ಎಂಬುದನ್ನು ಸರಿಯಾಗಿ ವಿವರಿಸಿದಂತಾಗುವುದಿಲ್ಲ.

ಈವರೆಗಿನ ವಿಚಾರದಲ್ಲಿ ಕಲಾಕೃತಿ ಎನ್ನುವುದು ಅನುಕರಣೆಯಲ್ಲ, ಅದು ಪ್ರತಿಭಾವಂತನ ಒಂದು ಸೃಷ್ಟಿ, ಆ ಸೃಷ್ಟಿಯಲ್ಲಿ ಅವನು ಮಾಧ್ಯಮವೊಂದರ ಮೂಲಕ ತನಗೆ ಹೊಳೆದ ಭಾವನೆಗಳನ್ನು ಅಭಿವ್ಯಕ್ತಗೊಳಿಸುತ್ತಾನೆ; ಹಾಗೆ ಅಭಿವ್ಯಕ್ತಗೊಂಡ ಕೃತಿಗೆ ‘ರಸಾನುಭವ’ ಎಂಬ ನಿರ್ದಿಷ್ಟ ಭಾವಪ್ರಚೋದಕಶಕ್ತಿ ಒದಗುತ್ತದೆ – ಎಂಬ ಸಂಗತಿಗಳು ವ್ಯಕ್ತವಾಗಿವೆ. ಇದುವರೆಗೂ ಕಂಡ ಹಾಗೆ, ಅಭಿವ್ಯಕ್ತಿ ಎಂದರೆ ಕಲಾಮಾಧ್ಯಮದಲ್ಲಿ ಕಲೆಗಾರ ತನ್ನ ಭಾವಗಳನ್ನು ಪ್ರಕಾಶಪಡಿಸುವ ರೀತಿ ಎನ್ನುವುದು. ಆದರೆ ಅಭಿವ್ಯಕ್ತಿ ಎನ್ನುವ ಮಾತಿಗೆ ಬೇರೊಂದು ಅರ್ಥವನ್ನು ತುಂಬಿ, ಸೌಂದರ‍್ಯಮೀಮಾಂಸೆಯಲ್ಲಿ ಅದನ್ನೊಂದು ಸಿದ್ಧಾಂತವೆಂಬಂತೆ ಪ್ರತಿಪಾದಿಸಿದವನು ಕ್ರೋಚೆ. ಅವನ Intuition is Expression ಎನ್ನುವ ಪ್ರಸಿದ್ಧ ಸೂತ್ರವನ್ನು ಇಲ್ಲಿ ಪರಿಶೀಲಿಸಬಹುದು.

ಪ್ರತಿಭಾನ -intuition-ವನ್ನು ಕುರಿತು ಪಾಶ್ಚಾತ್ಯ ತತ್ವಶಾಸ್ತ್ರದಲ್ಲಿ,ಜ್ಞಾನಮೀಮಾಂಸೆಯನ್ನು ಚರ್ಚಿಸಿದ ಬರ್ಗಸನ್ ಹೀಗೆ ಹೇಳುತ್ತಾನೆ: “ಪ್ರತಿಯೊಂದು ವಸ್ತುವಿಗೂ ಒಂದು ವ್ಯಕ್ತಿತ್ವವಿದೆ. ಅವುಗಳಲ್ಲಿ ಒಂದು ಅಭೇದ್ಯವಾದ ಹೊಂದಿಕೆಯಿದೆ.ಇದನ್ನು ತಿಳಿಯಬೇಕಾದರೆ ನಮಗೂ ವಸ್ತುವಿಗೂ ಇರುವ ಅಂತರವನ್ನು ದಾಟಬೇಕು. ಅದನ್ನು ಹೊರಗಿನಿಂದ ಈಕ್ಷಿಸಿದರೆ ಪ್ರಯೋಜನವಿಲ್ಲ. ಅದರ ಅಂತರಂಗದಲ್ಲಿ ಹೊಕ್ಕು ತಲ್ಲೀನರಾಗಬೇಕು. ಇಂಥ ತಲ್ಲೀನತೆ ಸಾಧ್ಯವಾಗುವುದು ಪ್ರತಿಭಾನದಿಂದ. ಈ ತಲ್ಲೀನತೆಯಿಂದ ವಸ್ತುವಿನ ವ್ಯಕ್ತಿತ್ವವು ನಮಗೆ ಗೋಚರಿಸುತ್ತದೆ”[18]

ಸೌಂದರ‍್ಯಮೀಮಾಂಸೆಗೆ ಸಂಬಂಧಿಸಿದಂತೆ ‘ಪ್ರತಿಭಾನ’ ವನ್ನು ಕುರಿತು ಒಂದು ಬಗೆಯಾದ ವಿವರಣೆಯನ್ನು ನೀಡಿದವರು ಷಾಫ್ಟ್ಯಬರಿ ಮತ್ತು ಹೆಚೆಸೆನ್ ಎನ್ನುವರು. ಪ್ರತಿಭಾನ ಎನ್ನುವುದು ವ್ಯಕ್ತಿಗಳಲ್ಲಿ ವಿವಿಧ ಮಟ್ಟಗಳಲ್ಲಿರುವ ಒಂದು ಸೌಂದರ‍್ಯಾನುಭವಶಕ್ತಿ ಎಂಬ ವಿವರಣೆಯನ್ನು ಕೊಡುವುದರಲ್ಲೇ ಅವರು ತೃಪ್ತರಾದರು.[19] ಈ ವಿಚಾರವನ್ನು ಕ್ರೋಚೆ ಮತ್ತು ಅವನ ಅನುಯಾಯಿಗಳು ವಿಸ್ತಾರವಾಗಿ ಚರ್ಚಿಸಿದ್ದಾರೆ.

ಅಭಿವ್ಯಕ್ತಿವಾದ

ಕ್ರೋಚೆಯ ಸೌಂದರ‍್ಯ ಸೂತ್ರ ಇದು : ಸೌಂದರ‍್ಯ ಎನ್ನುವುದು ಅಭಿವ್ಯಕ್ತಿ; ಅಭಿವ್ಯಕ್ತಿ ಎಂದರೆ ಪ್ರತಿಭಾನ. ಪ್ರತಿಭಾನವೇ ಅಭಿವ್ಯಕ್ತಿ; ಅಭಿವ್ಯಕ್ತಿಯೇ ಪ್ರತಿಭಾನ.

ಕ್ರೋಚೆಯ ಮತದಲ್ಲಿ ಪ್ರತಿಭಾನವೆಂದರೆ ಏನು?

ನಮ್ಮ ಚಿತ್ ಈ ಲೋಕಾನುಭವವನ್ನು ಎರಡು ರೀತಿಯಲ್ಲಿ ಗ್ರಹಿಸುತ್ತದೆ. ಒಂದು ಪ್ರತಿಭಾನ (Intuition)ದ ಮೂಲಕ, ಮತ್ತೊಂದು ಬುದ್ಧಿವ್ಯಾಪಾರ (reason)ದ ಮೂಲಕ. ಮೊದಲನೆಯದು ಒಂದು ರಸವ್ಯಾಪಾರ. (Aesthetic) ಎರಡನೆಯದು ತಾರ್ಕಿಕ  ವ್ಯಾಪಾರ (Logic).[20] ತರ್ಕ ಪ್ರತಿಭಾನವನ್ನವಲಂಬಿಸಿದ್ದರೆ, ಪ್ರತಿಭಾನವು ತರ್ಕವನ್ನವಲಂಬಿಸಿಲ್ಲ. ಈ ಪ್ರತಿಭಾನ ಎಂಬ ಸಾಮರ್ಥ್ಯ ಪ್ರತಿಯೊಬ್ಬರಲ್ಲೂ ಇದೆ. ಅದು ವಸ್ತುಗಳಿಗೆ ಮನಸ್ಸು ಪಡಿಮಿಡಿಯುವುದರಿಂದ ಆಗುವ ಸಂವೇದನಾ ಜ್ಞಾನವಲ್ಲ ಅಥವಾ ಬುದ್ಧಿ ಪೂರ್ವಕವಾಗಿ ಗ್ರಹಿಸುವ ವಿಧಾನವೂ ಅಲ್ಲ.[21] ಅದೊಂದು ನಿರಂತರತೆಯನ್ನು ಗ್ರಹಿಸುವ ಶಕ್ತಿ.[22] ತನಗೆ ತಾನೇ ಸ್ವಸಂಪೂರ್ಣವಾದ ಮತ್ತು ವಸ್ತುಸತ್ಯವನ್ನು ಸ್ವಸ್ವರೂಪದಲ್ಲಿ ಗ್ರಹಿಸಿ ವಿಶಿಷ್ಟೀಕರಿಸುವ ಒಂದು ಚಿತ್‌ಕ್ರಿಯೆ.[23]

ಎರಡನೆಯದಾಗಿ, “ಪ್ರತಿಯೊಂದು ನಿಜವಾದ ಪ್ರತಿಭಾನವೂ ಅದೇ ಕಾಲದಲ್ಲಿ ಅಭಿವ್ಯಕ್ತಿಯೂ ಹೌದು. ಯಾವುದು ಅಭಿವ್ಯಕ್ತಿಯಲ್ಲಿ ಮೂರ್ತಗೊಳ್ಳದೋ ಅದು ಪ್ರತಿಭಾನವಲ್ಲ…[24]“ಪ್ರತಿಭಾನವೇ ಅಭಿವ್ಯಕ್ತಿ; ಅಭಿವ್ಯಕ್ತಿಯೇ ಪ್ರತಿಭಾನ.”[25]

ಮೂರನೆಯದಾಗಿ, ನಾವು ಕಲಾಕೃತಿ ಎಂದು ಯಾವುದನ್ನು ಕರೆಯುತ್ತೇವೆಯೋ, ಆ ಚಿತ್ರವೊ, ಗೀತವೋ, ಶಿಲ್ಪವೋ – ಅದು ಏನಿದ್ದರೂ ಪ್ರತಿಭಾನದ ಬಹಿಃಕರಣ ರೂಪವಾದುದು.  ಅದು ಬರಿಯ ನೆನಪಿಗೋ, ಸಹೃದಯಾನುಭವಕ್ಕೋ, ಉದ್ದೇಶ ಪೂರ್ವಕವಾಗಿ ಮಾಡುವ ಲೌಕಿಕಕ್ರಿಯೆ. ಇದು ಕಲೆಗಾರಿಕೆಯಲ್ಲಿ ಅಷ್ಟೇನೂ ಪ್ರಧಾನವಾದುದಲ್ಲ.[26]

ನಾಲ್ಕನೆಯದಾಗಿ, ಈ ಕಲಾಕೃತಿಯೂ ಸಹ ಒಂದು ಚಿತ್‌ಕ್ರಿಯಾ ನಿರ್ಮಾಣವೇ ಆದುದರಿಂದ, ಅದನ್ನು ಎಂದಿಗೂ ಒಂದು ಭೌತ ವಸ್ತುವೆಂದೆಣಿಸಬಾರದು.

ಐದನೆಯದಾಗಿ, ಸಹೃದಯನಾದವನು ಕಲಾಕೃತಿಯಲ್ಲಿ ಪಡೆಯುವುದು ತನ್ನ ಪ್ರತಿಭಾನದ ಅಭಿವ್ಯಕ್ತಿಯನ್ನೇ.

ಕಡೆಯದಾಗಿ, ಸೌಂದರ್ಯ ಎನ್ನುವದು ಒಂದು ಮಾನಸಿಕ ಅಭಿವ್ಯಕ್ತಿ. “ಅದು ಕಲಾಕೃತಿಯಲ್ಲಾಗಲೀ, ಪ್ರಕೃತಿಯಲ್ಲಾಗಲೀ, ವಸ್ತುವಿಗೆ ಸಂಬಂಧಿಸಿದ್ದಲ್ಲ. ಅದು ಮಾನಸಿಕ ರಸವ್ಯಾಪಾರಸಂಬಂಧಿಯಾದುದು.[27] “ಕಲೆ ಎಂದರೆ ಕವಿಸೃಷ್ಟಿ ಮಾತ್ರವಲ್ಲ, ಸಹೃದಯನ ಕೃತಿರಸಾಸ್ವಾದವೂ ಕಲೆಯೇ. ಈ ಎರಡು ಸಂದರ್ಭಗಳಲ್ಲೂ ಪ್ರತಿಭಾನವೇ ಅಭಿವ್ಯಕ್ತಿ, ಅಭಿವ್ಯಕ್ತಿಯೇ  ಪ್ರತಿಭಾನ.”[28]

ಸೌಂದರ‍್ಯಕ್ಕೆ ಸಂಬಂಧಿಸಿದಂತೆ ಕವಿಯ ಪ್ರತಿಭಾನ ವ್ಯಾಪಾರ ನಾಲ್ಕುಘಟ್ಟಗಳಲ್ಲಿ ನಡೆಯುತ್ತದೆ. 1) ಸುಂದರವಾದ ವಸ್ತುವನ್ನು ಕುರಿತು ಕಲಾವಿದನ ಅಂತರಂಗದಲ್ಲಿ ಆಗುವ ಮೂಡಿಕೆಗಳು. 2) ಮನಸ್ಸಿನಲ್ಲಿ ಆಗುವ ರಸವಾವ್ಯಾಪಾರ, ಅಥವಾ ಅಭಿವ್ಯಕ್ತಿ. 3) ಈ ರಸಾಭಿವ್ಯಕ್ತಿಯಿಂದ ಕಲಾವಿದನಿಗಾಗುವ ಸೌಂದರ‍್ಯಾನುಭವದ ಸಂತೋಷ. 4) ಈ ಮಾನಸಿಕ ಅಭಿವ್ಯಕ್ತಿಯನ್ನು ವಸ್ತುಮಾಧ್ಯವುವೊಂದರಲ್ಲಿ ಬಹಿಃಕರಣಗೊಳಿಸುವ ಕ್ರಿಯೆ.[29] ಈ ಕಡೆಯದನ್ನೇ ಎಲ್ಲರೂ ಕಲಾಕೃತಿ ಅಥವಾ ಅಭಿವ್ಯಕ್ತಿ ಎಂದು ಕರೆಯುತ್ತಾರೆ. ಇದು ಕಲಾವ್ಯಾಪಾರದಲ್ಲಿ ಗೌಣವಾದುದು; ನೆನಪಿಗೋ, ಸಹೃದಯಾಸ್ವಾದನಕ್ಕೋ ಮಾಡಿಕೊಂಡದ್ದು.

ಕವಿಯ ಈ ಪ್ರತಿಭಾನರೂಪವಾದ ಕವಿಹೃದಯವ್ಯಾಪಾರವನ್ನು ಕ್ರೋಚೆ ಹೀಗೆ ವರ್ಣಿಸುತ್ತಾನೆ:

‘`A ಎನ್ನುವವನು ತನ್ನ ಮನದಲ್ಲಿ ಹೊಳೆದ ಭಾವವೊಂದಕ್ಕೆ ರೂಪು ಕೊಡಲು ಬಯಸುತ್ತಾನೆ. ಆ ಬಯಕೆಯ ಹಿಂದೆ ಅಭಿವ್ಯಕ್ತಿಯ ಒತ್ತಡವಿದೆ. ಆಗ ಅವನ ಮನದ ಮುಂದೆ ಹಲವಾರು ಶಬ್ದಗಳು, ಪದ ಪಂಕ್ತಿಗಳು ತೇಲಿಬರುತ್ತವೆ. ಅವುಗಳ ಮೂಲಕ ತನ್ನ ಭಾವಾಭಿವ್ಯಕ್ತಿ ಸಾಧ್ಯವೇ ಎಂದು ನೋಡುತ್ತಾನೆ. ಒಂದು ರೀತಿಯ ಪದ ಪಂಕ್ತಿಗಳು, M ಎಂದು ಇಟ್ಟುಕೊಳ್ಳೋಣ, ಅವುಗಳನ್ನು ಪರಿಶೀಲಿಸಿ ಅವು ತನ್ನ ಭಾವಕ್ಕೆ ತಕ್ಕವಲ್ಲವೆಂದು ತಳ್ಳಿಬಿಡುತ್ತಾನೆ. ಆದರೆ ಮತ್ತೊಂದು ಬಗೆಯ – “m” ಎನ್ನೋಣ – ಪದರಚನಾ ಪರಂಪರೆ ತೇಲಿ ಬರುತ್ತದೆ. ಆಗಲೂ ಅಭಿವ್ಯಕ್ತಿ ತಪ್ಪಿಸಿಕೊಳ್ಳುತ್ತದೆ. ಈ ವೇದನಾ ವ್ಯಾಪಾರ ಮುಗಿದ ಮೇಲೆ, ಒಮ್ಮೆಗೇ ಅವನಿಗೇ ಅರಿವಿಲ್ಲದಂತೆ ಈ ಭಾವಾಭಿವ್ಯಕ್ತಿಗೆ ತಕ್ಕ ಪದ ಸಾಮಗ್ರಿ ನುಗ್ಗಿ ಬರುತ್ತದೆ. ಅದು ಅಪ್ರಯತ್ನ ಪೂರ್ವಕವಾಗಿ, ನಿರಂತರವಾಗಿ ಬಂದು ಪ್ರಸ್ತುತ ಭಾವಕ್ಕೆ ಆಕಾರವನ್ನು ನೀಡುತ್ತದೆ.[30] ಹೀಗೆ ಪ್ರತಿಭಾವ್ಯಾಪಾರದಿಂದ ಮನಸ್ಸಿನಲ್ಲಿ ಮೊದಲು ಮೂಡುವ ಈ ಕೃತಿಯೇ ಅಭಿವ್ಯಕ್ತಿ. ಈ ಮಾನಸಿಕವಾದ ‘ಅಭಿವ್ಯಕ್ತಿ’ಯನ್ನು ಆತ ಬರಹದ ಮೂಲಕ ಬಹಿರ್ಗತಗೊಳಿಸುವುದು ಅನಂತರದ ಕ್ರಿಯೆ.

ಯಾವಾಗ ಕವಿಗೆ ಅಪ್ರಯತ್ನ ಪೂರ್ವಕವಾಗಿ, ‘ಅಭಿವ್ಯಕ್ತಿ’ ಒದಗಿ ಬಂದಿತೋ ಆ ಸಂದರ್ಭದಲ್ಲಿ ನಿಜವಾದ ಪ್ರತಿಭಾನ ಕ್ರಿಯೆ ನಡೆದಿದೆ. ಅಲ್ಲಿ ಪ್ರತಿಭಾನವೇ ಅಭಿವ್ಯಕ್ತಿ. ಎಂದರೆ ಕವಿಯ ಮನಸ್ಸಿನಲ್ಲಿ ಇಡೀ ಅಭಿವ್ಯಕ್ತಿಯೇ ಮೈಗೊಂಡು ಯಶಸ್ವಿಯಾಗಿ ನಿಂತುಕೊಂಡಿದೆ. ಅದಕ್ಕೆ ಮೊದಲಿನ ಪ್ರಜ್ಞಾಪೂರ್ವಕ ವ್ಯಾಪಾರದಲ್ಲಿ ಅಭಿವ್ಯಕ್ತಿ  ಸಾಧ್ಯವಾಗಿಲ್ಲ. ಆದುದರಿಂದ ನಿಜವಾದ ಪ್ರತಿಭಾನ ವ್ಯಾಪಾರ ಯಾವ ತಾರ್ಕಿಕವಾದ ಬುದ್ಧಿಗೂ ಒಳಗಾಗುವಂಥದಲ್ಲ. ಅದು ತನಗೆ ತಾನೇ ಅಭಿವ್ಯಕ್ತಿಯನ್ನು ಪಡೆಯುವ, ಭಾವವನ್ನು ವಿಶಿಷ್ಟಗೊಳಿಸುವ ಒಂದು ಚಿದ್ ವ್ಯಾಪಾರ ಎನ್ನುವುದನ್ನು ಅವನ ಈ ವಿವರಣೆ ಸಮರ್ಥಿಸುತ್ತದೆ.

ಅಭಿವ್ಯಕ್ತಿಯ ಸ್ವರೂಪವೇನು ಎನ್ನುವುದರ ಬಗ್ಗೆ ಕ್ರೋಚೆ ಹೇಳಿರುವ ಮಾತನ್ನು ಗಮನಿಸಿ: “ಆಂತರಿಕ ಲೋಕ ನಮ್ಮ ವಶವಾದಾಗ, ಸ್ಪಷ್ಟವಾದ ಚಿತ್ರವನ್ನೋ, ಆಕೃತಿಯನ್ನೋ ಮಾನಸಿಕವಾಗಿ ಗ್ರಹಿಸಿದಾಗ, ಸಂಗೀತದ ರಾಗವೊಂದನ್ನು ಒಳಗಿವಿಯಲ್ಲಿ ಕೇಳಿದಾಗ, ಅಲ್ಲಿಯೇ ಅಭಿವ್ಯಕ್ತಿಯ ಉಗಮವಾಯಿತು. ಅದು ಅಲ್ಲಿಗೇ ಸಂಪೂರ್ಣ; ಅದು ಅನ್ಯಕ್ರಿಯಾ ನಿರಪೇಕ್ಷಣೀಯ. ನಾವು ಅದನ್ನು ಬರೆಯಲು ಯತ್ನಿಸುವುದಾಗಲೀ, ಹೇಳಲು ಬಾಯಿಬಿಡುವುದಾಗಲೀ ನಾವಾಗಿ ಮಾಡುವ ಉದ್ದೇಶಪೂರ್ವಾಕವಾದ ಕ್ರಿಯೆಯೇ.”[31]

“ಪ್ರತಿಯೊಂದು ಅಭಿವ್ಯಕ್ತಿಯೂ ಅಸದೃಶಾಭಿವ್ಯಕ್ತಿ. ಅದು ಅನುಭವದ ಸಾವಯವ ಅಖಂಡತೆ. ಇದೇ, ಕಲಾಕೃತಿ ಏಕಾಖಂಡ ಅಥವಾ ವೈವಿಧ್ಯದಲ್ಲೂ ಏಕ – ಎನ್ನುವುದರ ಅರ್ಥ, ಅಭಿವ್ಯಕ್ತಿ ಎನ್ನುವುದು ಅನೇಕತೆಯನ್ನು ಅಥವಾ ವೈವಿಧ್ಯವನ್ನು ಏಕೀಕೃತಗೊಳಿಸುವ ಕಾರ್ಯ”[32]

ಇದು ಕವಿಯ ಮನಸ್ಸಿನಲ್ಲಿ ನಡೆಯುವ ಪ್ರತಿಭಾನ ಕ್ರಿಯೆ ಅಥವಾ ಅಭಿವ್ಯಕ್ತಿ. ಆದರೆ ಪ್ರತಿಭಾನವೇ ಅಭಿವ್ಯಕ್ತಿ ಎನ್ನುವುದು ಕಲಾವಿದನ ಮಟ್ಟಿಗೆ ಸರಿ. ಕವಿಯ ರಸಾನುಭೂತಿಯೆ ಕಲಾ ಸೃಷ್ಟಿ ಎಂದು ಒಪ್ಪಿಕೊಂಡರೆ ನಾವು ಕಲೆಯನ್ನು ಪ್ರತ್ಯೇಕವಾಗಿ ಗಮನಿಸಿದಂತಾಗುವುದಿಲ್ಲ. ನಿಜ, ಕವಿಯ ಅಂತರಂಗದಲ್ಲಿ ಪ್ರತಿಭಾನದಿಂದ ಮೂರ್ತಗೊಂಡು ಅವನ ಒಳಗಣ್ಣಿಗೆ ಗೋಚರಿಸುವ ಕೃತಿ ಮಹತ್ತಾದುದು; ಅಸದೃಶವಾದುದು. ಅದು ಕವಿಭಾವ ಮಾತ್ರ ಸಂವೇದ್ಯವಾದುದೇ ಹೊರತು, ಸಹೃದಯಸಂವೇದ್ಯವಾಗಬೇಕಾದರೆ ಅದೊಂದು ಮಾಧ್ಯಮದಲ್ಲಿ ಮೂರ್ತಗೊಳ್ಳಬೇಕಷ್ಟೆ? ಅನೇಕ ವೇಳೆ ಅದು ಲೋಕ ಲೋಚನಗೋಚರವಾಗುವಂತೆ ಕಲಾಕೃತಿಯಾಗಿ ಮೈದೋರುವವರೆಗೂ, ಕವಿಗೂ ಅದರ ಸಮಗ್ರ ಸ್ವರೂಪದ ಪರಿಜ್ಞಾನವಿತ್ತೆಂದು ಹೇಳಲು ಬಾರದು. ಮತ್ತೆ ಹಲವು ವೇಳೆ

ಕಲಾಕೃತಿಯಲ್ಲಿ ಮೂರ್ತಗೊಂಡದ್ದು ಮೂಲಾನುಭವದ ಕೇವಲ ಛಾಯೆಯೂ ಆಗಿ ಕವಿಗೆ ಅತೃಪ್ತಿಯನ್ನೂ ನೀಡೀತು. ಇದೇನೇ ಇರಲಿ, ಕವಿಯನ್ನು ಕುರಿತು ಹೇಳುವುದಾದರೆ, ಬಹುಮಟ್ಟಿಗೆ ಪ್ರತಿಭಾನವೇ ಅಭಿವ್ಯಕ್ತಿ, ಅಭಿವ್ಯಕ್ತಿಯೇ ಪ್ರತಿಭಾನ ಎನ್ನುವುದು ಸರಿ ಎಂದು ತೋರುತ್ತದೆ.

ಇನ್ನು ಕಲಾಕೃತಿಯನ್ನು ಕುರಿತು ಎರಡು ಮಾತು ಅಗತ್ಯ. ಕ್ರೋಚೆಯ ದೃಷ್ಟಿಗೆ ನಾವು ಯಾವುದನ್ನು ಕಲಾಕೃತಿ ಎನ್ನುತ್ತೇವೋ ಅದು ಗೌಣ. ಕ್ರೋಚೆ ಹೇಳುತ್ತಾನೆ: “ಈ ಬಹಿಃಕರಣ (Externalasition) ಕಾರ್ಯದಲ್ಲಿ ನಮ್ಮ ಪ್ರತಿಭಾನವನ್ನು ಹೆಚ್ಚು ಕಡಿಮೆ ಹಿಡಿದು ಇಳಿಸಲು ಯತ್ನಿಸುತ್ತೇವೆ. ಇದರಲ್ಲಿ ಕಲಾ ಉದ್ದೇಶಕ್ಕೆ ಮಿಗಿಲಾದ ಲೌಕಿಕೋದ್ದೇಶವಿರುತ್ತದೆ. ಹೀಗಾಗಿ ನಾವು ಒಳಕೃತಿ ಮತ್ತು ಹೊರಕೃತಿ ಎಂದು ವಿಭಾಗಿಸುತ್ತೇವೆ. ಆದರೆ ನಿಜವಾದ ಕಲಾಕೃತಿ ಸದಾ ಆಂತರಿಕವಾದುದು; ಅದರ ಬಹಿಃಕರಣ ಕಲಾಕೃತಿಯಲ್ಲ.”[33]

ಕೃತಿ ಏನಿದ್ದರೂ ಬಹಿಃಕರಣ, ಒಂದು ನಿಯಮಿತ ಉದ್ದೇಶಕ್ಕೆ ಆದದ್ದು ಎನ್ನುವ ಕ್ರೋಚೆಯ ಈ ವಿಚಾರ ಒಪ್ಪತಕ್ಕದಲ್ಲ. ವಾಸ್ತವವಾಗಿ ಈ ಬಗೆಯ ವಿಭಜನೆಯೇ ಕೃತಕ. ಏಕೆಂದರೆ ಕ್ರೋಚೆ ಭಾವಿಸಿರುವಂತೆ ‘ಕಲೆಗಾರ’ ಕಲಾಕೃತಿಯ ನಿರ್ಮಾಣ ಸಮಯದಲ್ಲಿ ನೈತಿಕ ಮತ್ತು ಔಪಯೋಗಿಕ ಉದ್ದೇಶಗಳನ್ನು ಹೊಂದಿರುತ್ತಾನೆಂಬುದನ್ನು ಒಪ್ಪಲಾಗುವುದಿಲ್ಲ. “ಇಂಥಲ್ಲಿ ರಸಾನುಭವ ಮುಗಿಯಿತು, ಇಂಥಲ್ಲಿಂದ ಲೌಕಿಕೋದ್ದೇಶಕ್ಕಾಗಿ ಬಹಿಃಕರಣರೂಪದ ಕೃತಿರಚನೆ ಆರಂಭವಾಯಿತು ಎನ್ನುವುದನ್ನು ಯಾರು ತಾನೇ ಗೆರೆ ಎಳೆದು ತೋರಿಸಲು ಸಾಧ್ಯ? ಪದಗಳಿಲ್ಲದೆ, ಪ್ರತಿಮೆಗಳಿಲ್ಲದೆ ಕೃತಿಯ ಅಸ್ತಿತ್ವ ಹೇಗೆ ಸಾಧ್ಯ? ಒಂದು ವೇಳೆ ಇದ್ದರೂ ಅದು ನಮಗೆ ಅಗೋಚರ”[34]

ಆದರೆ ವಾಸ್ತವವಾಗಿ ಕವಿಪ್ರತಿಭೆ, ತನ್ನ ಪಾತ್ರರೂಪವಾದ ಪದ ಪ್ರತಿಮೆಗಳನ್ನು ಏಕಕಾಲದಲ್ಲೇ ಸೃಷ್ಟಿಸುತ್ತದೆ. ಈ ರಚನೆ ಆಗಲೇ ಆಗಬಹುದು; ಅಥವಾ ಮನೋಗೋಚರವಾದದ್ದನ್ನು ಕೆಲವು ಕಾಲಾನಂತರದ ಮೇಲೆ ಬೇಕಾದರೆ ಕೃತಿಗಿಳಿಸಬಹುದು.

ಕ್ರೋಚೆ ಪ್ರತಿಭಾನಗೋಚರವಾದ ಅಭಿವ್ಯಕ್ತಿ ಕಲಾಕೃತಿಯಾಗಿ ರೂಪುಗೊಳ್ಳುವಾಗ ಅದೂ ಕೂಡಾ ಪ್ರತಿಭಾನದ ಕ್ರಿಯೆ ಎಂದು ಹೇಳಿದರೂ, ಅದು ಕೃತಿ ರಚನೆಯಾಗುವ ಕಾಲದಲ್ಲಿ ಅವನ ಬುದ್ಧಿ ಅದನ್ನು ಎಷ್ಟರ ಮಟ್ಟಿಗೆ ಸಂಸ್ಕರಿಸಿ ತದನಂತರ ಅಭಿವ್ಯಕ್ತಗೊಳಿಸುತ್ತದೆ ಎನ್ನುವ ಅಂಶವನ್ನು ನಿರ್ಲಕ್ಷಿಸಿದ್ದಾನೆ.

ತುಂಬ ಚರ್ಚೆಗೆ ಒಳಗಾಗಿರುವ ಮಾತು, ‘ಕಲಾಕೃತಿ ಒಂದು ಭೌತ ವಸ್ತುವಲ್ಲ ಅಥವಾ ಮೃಣ್ಮಯವಲ್ಲ; ಅದು ಚಿದ್ರೂಪವಾದುದು’ ಎನ್ನುವುದು. ಬೆರ‍್ಲ್‌ಲೇಕ್ ಎನ್ನುವ (Beryl lake) ವಿಮರ್ಶಕರು “ಅಭಿವ್ಯಕ್ತಿ ಎನ್ನುವುದು ಕಡೆಯಪಕ್ಷ ಒಂದು ಭೌತಮಾಧ್ಯಮದಲ್ಲಾದರೂ ವ್ಯಕ್ತಗೊಳ್ಳದಿದ್ದಪಕ್ಷದಲ್ಲಿ, ಅಭಿವ್ಯಕ್ತಿ ಎನ್ನುವುದರ ಅರ್ಥವನ್ನು ತಿಳಿಯುವುದು ಕಷ್ಟ”[35] ಎಂದು ಟೀಕಿಸುತ್ತಾರೆ. ಆದರೆ ಕಲಾಕೃತಿ ಒಂದು ಚಿತ್ ಕ್ರಿಯೆಯೇ ಹೊರತು, ಭೌತವಸ್ತುವಲ್ಲ ಎಂದರೆ ಅದರ ಅರ್ಥ ಹೀಗೆ: ಕಲಾವಿದನೊಬ್ಬ ಬಳಸುವ ಬಣ್ಣ ಹಲಗೆ ಇತ್ಯಾದಿಗಳು ಮೃಣ್ಮಯ ವಸ್ತುಗಳೇನೋ ನಿಜ. ಆದರೆ ಯಾರೂ ಒಂದು ಚಿತ್ರವನ್ನು ಹಲಗೆ ಬಣ್ಣಗಳ ಸಂಯೋಜನೆ ಎಂದು ಕರೆಯುವುದಿಲ್ಲ. ಕಲಾವಿದ ತನ್ನ ಅಭಿವ್ಯಕ್ತಿಗೆ ಹಲಗೆ-ಬಣ್ಣಗಳನ್ನು ಬಳಸಿದರೂ ಅದು ವ್ಯಕ್ತಪಡಿಸುವ ಭಾವ ಮಾತ್ರ ಅಭೌತಿಕ. ಈ ಭೌತಿಕಕ್ಕೆ (ಮೃಣ್ಮಯಕ್ಕೆ) ಬೆಲೆ ಅದು ವ್ಯಕ್ತಪಡಿಸುವ ಅಭೌತಿಕ (ಚಿನ್ಮಯ) ದಿಂದಲೇ. ಆದುದರಿಂದ ಕಲಾಕೃತಿ ಮೃಣ್ಮಯವಲ್ಲ ಚಿನ್ಮಯ ಎಂದರೆ ಕಲಾಕೃತಿಯ ಸ್ವರೂಪವನ್ನು ವಿವರಿಸಿದಂತಾಯಿತೇ ಹೊರತು, ಅದು ಭೌತಿಕ ಮಾಧ್ಯಮದಲ್ಲಿ ವ್ಯಕ್ತಗೊಳ್ಳಲೇ ಆರದೆಂದು ಹೇಳಿ ಮೃಣ್ಮಯವನ್ನು ತಿರಸ್ಕರಿಸಿದಂತೆ ಆಗುವುದಿಲ್ಲ. ಕ್ರೋಚೆಯ ಮತ್ತೊಂದು ಹೇಳಿಕೆ ‘ಕಲಾಕೃತಿ ಸದಾ ಆಂತರಿಕವಾದುದು, ಈ ಬಹಿಃಕರಣ ಕಲೆಯಲ್ಲ’, ಎನ್ನುವ ಮಾತು, ಈಗ ಹಿಂದೆ ಹೇಳಿದ ಅಭಿಪ್ರಾಯವನ್ನೇ ಸಮರ್ಥಿಸುತ್ತದೆ. ಏಕೆಂದರೆ ಹಲವರು ಭಾವಿಸಿದಂತೆ, ಈ ಮೃಣ್ಮಯವೇ ಕಲಾಕೃತಿಯಲ್ಲ. ಕಲಾಕೃತಿ ಅಥವಾ ಅಭಿವ್ಯಕ್ತಿ ಅಥವಾ ಪ್ರತಿಭಾನ (ಕ್ರೋಚೆಗೆ ಈ ಮೂರು ಒಂದೇ) ಏನಿದ್ದರೂ ಮಾನಸಿಕ ವ್ಯಾಪಾರವೇ. ಆದುದರಿಂದ ಈ ಎರಡು ಹೇಳಿಕೆಗಳ ಅರ್ಥ ಇಷ್ಟು : ಕಲಾಕೃತಿ ಕೇವಲ ಮೃಣ್ಮಯವಲ್ಲ ಚಿನ್ಮಯ; ಮತ್ತು ಮೃಣ್ಮಯವೇ ಕಲಾಕೃತಿಯಲ್ಲ, ಚಿನ್ಮಯ. ಈ ಕಾರಣಗಳಿಂದ ಕಲಾಕೃತಿ ಕೇವಲ ಮೃಣ್ಮಯ ಎನ್ನುವ, ಮತ್ತು ಮೃಣ್ಮಯವೇ ಕಲಾಕೃತಿ ಎನ್ನುವ ಎರಡು ಭ್ರಾಂತಿಗಳಿಂದಲೂ ನಾವು ಪಾರಾಗಬೇಕು ಎನ್ನುವ ಸೂಚನೆ ಅಲ್ಲಿದೆ.

ಒಟ್ಟಿನಲ್ಲಿ ಕ್ರೋಚೆಯ ದೃಷ್ಟಿಗೆ ಬಹಿಃಕರಣರೂಪವಾದ ಕಲಾಕೃತಿಗಿಂತ, ಪ್ರತಿಭಾನರೂಪವಾದ ಮಾನಸಿಕ ಅಭಿವ್ಯಕ್ತಿಗೇ ಹೆಚ್ಚು ಮಹತ್ವ ಎಂಬಷ್ಟನ್ನು ಅವನ ವಾದದಿಂದ ಗ್ರಹಿಸಬೇಕು. ಏಕೆಂದರೆ ಅವನ ಪ್ರಕಾರ ಕಲಾ ಅನುಭವ ಒಂದು ಪ್ರತಿಭಾನಕ್ರಿಯೆ. ಈ ವ್ಯಾಪಾರಕ್ಕೆ ಬಹಿಃಕರಣರೂಪವಾದ ಅಭಿವ್ಯಕ್ತಿ ಅಥವಾ ಕಲಾಕೃತಿ ಗೌಣವಾದರೂ ಅಗತ್ಯವಾದುದು ಎಂಬ ಮಾತನ್ನೂ ಹೇಳಿದ್ದಾನೆ.

“ಕ್ರೋಚೆಯ ಮತದಲ್ಲಿ ಕಲೆ ಒಂದು ಅಭಿವ್ಯಕ್ತಿ. ಯಾವುದು ಮೊದಮೊದಲು ಅಸ್ಪಷ್ಟವೋ, ಚಂಚಲವೋ, ಸಂವೇದನಾ ಗೋಚರವೋ ಅದನ್ನು ಪ್ರತಿಭಾನದಿಂದ, ಕಲಾವಿದ ಅಭಿವ್ಯಕ್ತಗೊಳಿಸುತ್ತಾನೆ. ಒಂದು ಕಲಾಕೃತಿಯಲ್ಲಿ ಸಹೃದಯ ಗುರುತಿಸುವ ಭಾವಾಭಿವ್ಯಕ್ತಿಯೇ ಸೌಂದರ್ಯ.”[36]

ಅಭಿವ್ಯಕ್ತಿಯೇ ಸೌಂದರ‍್ಯ ಎನ್ನುವುದಾದರೆ, ಎಲ್ಲ ಅಭಿವ್ಯಕ್ತಿಯೂ ಸೌಂದರ‍್ಯವೇ? ಎನ್ನುವ ಪ್ರಶ್ನೆಯನ್ನು ಹಲವರು ಎತ್ತಿದ್ದಾರೆ. ಆಧುನಿಕರಲ್ಲಿ ಹಲವರು ಅಭಿವ್ಯಕ್ತಿ ಎಲ್ಲವೂ ಸೌಂದರ‍್ಯವಲ್ಲ ಎಂದು ವಾದಿಸುತ್ತಾ, “ಕಲೆಯ ಗುರಿ ಸೌಂದರ‍್ಯವಲ್ಲ, ಅಭಿವ್ಯಕ್ತಿ; ಅತ್ಯುತ್ತಮ ಅಭಿವ್ಯಕ್ತಿ”[37] “ಕಲಾವಿದನ ಉದ್ದೇಶ ಸೌಂದರ‍್ಯವಲ್ಲ, ಅವನ ಗುರಿ ಅಭಿವ್ಯಕ್ತಿಯ ಸೌಂದರ‍್ಯ,”[38] “ಸುಂದರವಾಗಿರಬೇಕೆಂಬ ಉದ್ದೇಶದಿಂದ ಕಲಾಕೃತಿ ರಚಿತವಾಗುವುದಿಲ್ಲ. ಆದರೆ ಕಲಾಕೃತಿ ಯಶಸ್ವಿಯಾಗಿದೆ ಎನ್ನುವುದರ ಗುರುತು ಸೌಂದರ‍್ಯ”[39] ಎಂದು ಹೇಳುತ್ತಾರೆ. ಇದು ಕೇವಲ ವಾದ ಮಾತ್ರ. ಏಕೆಂದರೆ ಸೌಂದರ‍್ಯ ನಿರ್ಮಾಣ ಮಾಡಬೇಕೆಂದೇ ಯಾವ ಕಲಾವಿದನೂ ಹೊರಡುವುದಿಲ್ಲ. ಆದರೆ ಕಲಾವಿದನ ಅನುಭವ ಸೌಂದರ‍್ಯ ಅಭಿವ್ಯಕ್ತಿಯ ಸೌಂದರ‍್ಯವಾಗಿಯೇ ಮೈತಾಳುವುದು ಅನಿವಾರ್ಯವಾಗಿದೆ. ಆದುದರಿಂದ ಅಭಿವ್ಯಕ್ತಿ ಬೇರೆ ಸೌಂದರ‍್ಯವೆ ಬೇರೆ ಎನ್ನುವ ಅಭಿಪ್ರಾಯ ಸರಿಯಾದುದಲ್ಲ. ಕಲಾ ಅಭಿವ್ಯಕ್ತಿಯ ಬಗ್ಗೆ ಕ್ಯಾರೆಟ್ ಅವರು ಹೇಳಿರುವ ಮಾತುಗಳನ್ನು ಇಲ್ಲಿ ನೆನೆಯಬಹುದು: “ಒಬ್ಬ ಕಲಾವಿದ ತನಗೆ ಸ್ಫುರಿಸಿದ ಭಾವವೊಂದನ್ನು ಒಂದು ಆಕೃತಿಗೆ ಇಳಿಸಲು ಪ್ರಯತ್ನ ಮಾಡುತ್ತಾನೆ. ಅವನ ಪ್ರಯತ್ನದಲ್ಲಿ ಅತೃಪ್ತಿಯ, ಕುರೂಪದ ಎಲ್ಲೆಯನ್ನು ದಾಟಿ ತನಗೆ ಪ್ರತಿಭಾ ವೇದ್ಯವಾದುದನ್ನು, ತಕ್ಕ ತೃಪ್ತಿಕರವಾದ ಒಂದು ರೂಪದಲ್ಲಿ ವ್ಯಕ್ತಗೊಳಿಸುತ್ತಾನೆ. ಹೀಗೆ ಯಶಸ್ವಿಯಾಗಿ ಮೂರ್ತಗೊಂಡ ಅಭಿವ್ಯಕ್ತಿಯೇ ಸೌಂದರ್ಯ ಎಂದು ಕ್ರೋಚೆಯ ಮತ.”[40] “ಆದರೆ ಯಾವ ಅಥವಾ ಎಲ್ಲ ಅಭಿವ್ಯಕ್ತಿಗಳೂ ಕಲೆಯಾಗಲಾರವು; ಯಾವುದು ಭಾವದ ಪರಿಪೂರ್ಣ ಅಭಿವ್ಯಕ್ತಿಯೋ ಅದು ಮಾತ್ರ ಕಲೆಯಾಗುತ್ತದೆ. ಇಲ್ಲಿ ‘ಪರಿಪೂರ್ಣ’ ಎಂದರೆ, ಅದು ಈ ರೀತಿಯಲ್ಲಲ್ಲದೆ ಮತ್ತಾವ ರೂಪದಲ್ಲೂ ಇರಲು ಸಾಧ್ಯವಾಗುತ್ತಿರಲಿಲ್ಲವೆಂಬಷ್ಟರಮಟ್ಟಿಗೆ ಪರಿಪೂರ್ಣವಾಗಿರಬೇಕು”[41]

ಅಭಿವ್ಯಕ್ತಿಯೇ ಪ್ರಧಾನ ಎನ್ನುವುದನ್ನು ಸಂತಾಯನನು ಒಪ್ಪದೆ, ಕವಿ ತನ್ನ ‘ಆನಂದ’ವನ್ನು ಮೂರ್ತಗೊಳಿಸುವ ಮೂರು ವಿಧಾನಗಳಲ್ಲಿ ಅಭಿವ್ಯಕ್ತಿಯೂ ಒಂದು, ಅಷ್ಟೇ ಅಲ್ಲ ಕಲಾಕೃತಿಯಲ್ಲಿ ಅಭಿವ್ಯಕ್ತಿ ಎನ್ನುವುದು ನಾವು ಗುರುತಿಸಬಹುದಾದ ವಿಶಿಷ್ಟತೆಯನ್ನು ಹೊಂದಿರುವ ಒಂದು ಅಂಗ ಎಂದು ಹೇಳುತ್ತಾನೆ.[42] ಆದರೆ ಸಂತಾಯನನು ಭಾವಿಸಿರುವಂತೆ ಅಭಿವ್ಯಕ್ತಿಯನ್ನು ನಾವು ಕಲಾಕೃತಿಯಿಂದ ಬೇರ್ಪಡಿಸಿ ಅಥವಾ ಗುರುತಿಸಿ ನೋಡಲು ಸಾಧ್ಯವಿಲ್ಲ. ಕ್ರೋಚೆ ಹೇಳಿದಂತೆ ಅಭಿವ್ಯಕ್ತಿ ಎನ್ನುವುದು ಪ್ರತಿಭಾನದ ಅಥವಾ ಸೌಂದರ್ಯಾನುಭವದ ಏಕಾಖಂಡರೂಪ. ಈ ವಿಚಾರವಾಗಿ ನಿರ್ದಿಷ್ಟವಾಗಿ ಕ್ರೋಚೆಯೇ ಹೇಳಿದ್ದಾನೆ: “ಚಿತ್ರವಾಗಲೀ, ಸಾಹಿತ್ಯವಾಗಲೀ, ಸಂಗೀತವಾಗಲೀ ಮತ್ತೆ ಇನ್ನಾವ ರೂಪದಲ್ಲೇ ಆಗಲಿ, ಅಭಿವ್ಯಕ್ತಿ ಎನ್ನುವುದನ್ನು ಪ್ರತಿಭಾನದಿಂದ ಬೇರ್ಪಡಿಸಲಾಗುವುದಿಲ್ಲ. ಭಾವಗಳೋ, ಮೂಡಿಕೆಗಳೋ ತಮ್ಮ ಅಸ್ಪಷ್ಟ ಸೀಮೆಯಿಂದ ಇಳಿದು ಕಲಾಮಾಧ್ಯಮದ ಮೂಲಕ ನಮ್ಮ ಪರಿಭಾವನೆಯ ವಸ್ತುವಾಗುತ್ತವೆ. ಈ ಸೌಂದರ‍್ಯಾನುಭವ ಕ್ರಿಯೆಯಲ್ಲಿ ಅನುಭವವನ್ನು ಅಭಿವ್ಯಕ್ತಿಯಿಂದ ಪ್ರತ್ಯೇಕಿಸುವುದು ಅಸಾಧ್ಯ. ಅವು ಒಂದು ಮತ್ತೊಂದರಲ್ಲಿ ಏಕಕಾಲದಲ್ಲಿಯೇ ಗೋಚರಿಸುತ್ತವೆ. ಏಕೆಂದರೆ ಅವು ಎರಡಲ್ಲ; ಒಂದೇ”[43]

ಕಲಾವಿದನ ಅಂತರಂಗದಲ್ಲಿ ಭಾವವೊಂದು ಅಭಿವ್ಯಕ್ತಿಗೊಳ್ಳುವ ರೀತಿಯ ವಿಚಾರವನ್ನು ನೋಡಿದೆವು. ಅಂತೆಯೇ ಕಲಾಕೃತಿಯೊಂದರ ಪ್ರಚೋದನೆಯಿಂದ ಸಹೃದಯನ ಅಂತರಂಗದಲ್ಲಿ ನಡೆಯುವ ಅಭಿವ್ಯಕ್ತಿ ಅಥವಾ ಪ್ರತಿಭಾನ ವ್ಯಾಪಾರವನ್ನು ಪರಿಶೀಲಿಸಬಹುದು.

ಕ್ರೋಚೆಯ ಪ್ರಕಾರ ಅಭಿವ್ಯಕ್ತಿ ಎನ್ನುವುದು ಅಂತರಂಗದ ಕ್ರಿಯೆ. ಸಹೃದಯನಾದವನು ಕಲಾಕೃತಿಯನ್ನು ತನ್ನಲ್ಲಿ ಪುನರನುಭವಿಸುವುದರ ಮೂಲಕ, ಅವನು ತನ್ನ ಪ್ರತಿಭಾನವನ್ನೇ ಪಡೆಯುತ್ತಾನೆ. ಹೀಗೆ ಸಹೃದಯನಲ್ಲಿ ಆಗುವುದು ಕವಿಯ ಅನುಭವವಲ್ಲ; ಅದು ಸಹೃದಯನದೇ. ಇದು ಕ್ರೋಚೆಯ ಮತದಲ್ಲಿ ಕಾವ್ಯಾಸ್ವಾದನ ಕ್ರಿಯೆ.[44] ಈ ಮತವನ್ನು ಕ್ರೋಚೆಯ ಅನುಯಾಯಿಯೊಬ್ಬರು ಹೀಗೆ ವ್ಯಾಖ್ಯಾನಿಸುತ್ತಾರೆ; “ಒಂದು ಕಲಾಕೃತಿಯಲ್ಲಿ ನಾವು ಅನುಭವಿಸುವುದು ನಮ್ಮ ಪ್ರತಿಭಾನವನ್ನೇ. ಉತ್ತಮವಾದ ಕಲಾವಿದ ನಮ್ಮ ಪ್ರತಿಭಾನವನ್ನು ಅಭಿವ್ಯಕ್ತಗೊಳಿಸಲು ಕೃತಿಯ ಮೂಲಕ ನೆರವಾಗುತ್ತಾನೆ. ಅಲ್ಲಿ ಆಗುವ ಸೌಂದರ‍್ಯಾನುಭವ ನಮ್ಮದಲ್ಲದೆ ಬೇರೆ ಅಲ್ಲ. ಷೇಕ್ಸ್‌ಪಿಯರನ ಹ್ಯಾಮ್ಲೆಟ್‌ನ್ನು ಓದುವಾಗ ನಾವು ಅಲ್ಲಿ ಹ್ಯಾಮ್ಲೆಟ್‌ನನ್ನು ಚಿತ್ರಿಸಿಕೊಳ್ಳುವುದು ನಮ್ಮ ಪ್ರತಿಭಾನದಿಂದಲೇ. ಆದರೆ ಷೇಕ್ಸ್‌ಪಿಯರನ ಮಹತ್ವವೇನೆಂದರೆ, ಆ ಕೃತಿಯ ನೆರವಿಲ್ಲದಿದ್ದರೆ ಇಂತಹ ಅನುಭವವನ್ನು ನಾವು ಪಡೆಯಲು ಸಾಧ್ಯವಾಗುತ್ತಿರಲಿಲ್ಲ ಎನ್ನುವಷ್ಟು ವಿಶೇಷವಾದ ರಸಾನುಭವವನ್ನು ಪ್ರಚೋದಿಸುವುದೇ. ಹೀಗೆ ಕವಿಪ್ರತಿಭಾನ ನಮ್ಮಲ್ಲಿರುವ ಪ್ರತಿಭಾನವನ್ನು ಉದ್ದೀಪಿಸುತ್ತದೆ.[45] ಈ ಪ್ರತಿಭಾನವೇ ಸಹೃದಯನಿಗೊದಗುವ ಅಭಿವ್ಯಕ್ತಿ.

ಇದರ ಜೊತೆಗೆ ಸಹೃದಯನಾದವನು ಒಂದು ಕಲಾಕೃತಿಯನ್ನು ಪುನರನುಭವಿಸುವ ಹೊತ್ತಿನಲ್ಲಿ, ಅವನಿಗೆ ಆ ಕೃತಿ ರಚಿತವಾದ ಕಾಲ ಸಮಯ ಸಂದರ್ಭಾದಿಗಳ ವಿವರಣೆಯ ಒಂದು ಚಾರಿತ್ರಿಕಜ್ಞಾನವಿರಬೇಕು ಎನ್ನುತ್ತಾನೆ ಕ್ರೋಚೆ. ಕಲಾಕೃತಿಯ ಉಗಮಕ್ಕೆ ಕಾರಣವಾದ ಆವರಣ ಕಲಾವಿದನಲ್ಲಿ ಯಾವ ಪ್ರಚೋದನೆಯನ್ನುಂಟುಮಾಡಿತೋ, ಅದರ ಒಂದು ನೆನಹಿನಿಂದ, ಅರಿವಿನಿಂದ ನಾವು ಕೃತಿಯನ್ನು ಪರಿಭಾವಿಸಿದಾಗ – ನಮಗೂ ಅದೇ ರೀತಿಯ, ಒಂದು ಪ್ರಚೋದನೆಯುಂಟಾಗಿ ನಮ್ಮ ಪ್ರತಿಭಾನಕ್ಕೆ ಅವಕಾಶವಾಗುತ್ತದೆ.[46]

ಕಲಾಕೃತಿಯ ಆಸ್ವಾದ ಕಾಲದಲ್ಲಿ ಸಹೃದಯನಿಗೆ ಆಗುವುದು, ಅವನಲ್ಲಿ ಸುಪ್ತವಾದ ಸೌಂದರ‍್ಯಾನುಭವವೇ ಎಂದರೂ, ಅದಕ್ಕೆ ಕವಿಯ ಕಾವ್ಯ ಕೇವಲ ಪ್ರಚೋದನೆ ಎನ್ನುವುದಕ್ಕಿಂತ ಹೆಚ್ಚಿನ ಮಹತ್ವವನ್ನು ಪಡೆದಿದೆ ಎನ್ನುವುದನ್ನು ಮರೆಯಬಾರದು. ಹಲವುವೇಳೆ ಕಲಾಕೃತಿ ಸಹೃದಯನಿಗೆ ಅವನು ಪಡೆಯದಿದ್ದ ವಿಶೇಷ ಸೌಂದರ‍್ಯಾನುಭವ ಶಕ್ತಿಯನ್ನೂ ನೀಡುತ್ತದೆ. ತನ್ಮೂಲಕ ಅವನ ಚೇತನಕ್ಕೆ ಹೊಸ ಸತ್ವವನ್ನು ಹರಿಸುತ್ತದೆ. ಅದೂ, ಅಲ್ಲದೆ ಸೌಂದರ‍್ಯಾನುಭವ ಸಂಪೂರ್ಣ ಮನೋನಿಷ್ಠ, ವಸ್ತು ಏನಿದ್ದರೂ ಕೇವಲ ಪ್ರಚೋದನೆ ಎನ್ನುವುದರಲ್ಲಿ ಏಕಪಕ್ಷೀಯವಾದ ದೃಷ್ಟಿಯಿದೆ. ‘ರಸಾನುಭವ’ವೇನೋ ವ್ಯಕ್ತಿನಿಷ್ಠವೇ; ಆದರೆ ವಸ್ತುವಿನಲ್ಲಿ ಇಲ್ಲದ ಸೌಂದರ‍್ಯವನ್ನು ನಾವು ತುಂಬಿ ಅನುಭವಿಸುತ್ತೇವೆ ಎನ್ನುವಷ್ಟರಮಟ್ಟಿನ ವ್ಯಕ್ತಿನಿಷ್ಠತೆ ಉಂಟೆನ್ನುವುದು ಸಾಧುವಲ್ಲ. ಎರಡನೆಯದಾಗಿ, ಕೃತಿಯ ಆಸ್ವಾದ ಕಾಲದಲ್ಲಿ, ಕೃತಿಯ ಉಗಮಕ್ಕೆ ಕಾರಣವಾದ ಸಂದರ್ಭವನ್ನು ಊಹಿಸಿ ಕೃತಿಯ ಅನುಭವವನ್ನು ಪಡೆಯುತ್ತೇವೆನ್ನುವುದು ಅಷ್ಟು ಸರಿಯಲ್ಲ. ಚಾರಿತ್ರಿಕ ವಿಷಯಗಳ ಪರಿಜ್ಞಾನದಿಂದ ಹಲವು ವೇಳೆ ಕೃತಿಯ ರಸಾಸ್ವಾದನಕ್ಕೆ ಅನುಕೂಲವಾಗಬಹುದಾದರೂ, ಚಾರಿತ್ರಿಕ ಪರಿಜ್ಞಾನ ಕೃತಿಯ ಆಸ್ವಾದನಕ್ಕೆ ಅಷ್ಟೇನೂ ಅಗತ್ಯವಾದುದಲ್ಲ. ಆಯಾಕಾಲದ ಸಹೃದಯ ತನ್ನ ಕಾಲದ ಅನುಭವದ ಹಿನ್ನೆಲೆಯಿಂದ ಕೃತಿಯನ್ನವಲೋಕಿಸುತ್ತಾನೆ. ವಾಸ್ತವವಾಗಿ ಕಲಾವಿದನ ಮೂಲಭಾವವೇನಿತ್ತೋ ಅದನ್ನು ನಾವು ಸಂಪೂರ್ಣವಾಗಿ ಅರಿಯಲಾರೆವು; ನಮ್ಮಲ್ಲಿ ಆಗುವ ಪ್ರತಿಕ್ರಿಯೆಯಿಂದ ನಾವು ಕೃತಿಯನ್ನಳೆಯುತ್ತೇವೆ, ಅದೂ ನಮಗೆ ತಿಳಿದಿರುವ ವಿಷಯದಿಂದ, ನಮ್ಮ ಅನುಭವದಿಂದ.

ಕ್ರೋಚೆಯ ಕಲಾತತ್ವವನ್ನು ಕುರಿತು ಪಾಶ್ಚಾತ್ಯರಲ್ಲಿ ವಿಪುಲವಾದ ಚರ್ಚೆ ನಡೆದಿರುವುದಾದರೂ,[47] ಇಲ್ಲಿ ಅವನ ಸಿದ್ಧಾಂತದ ಹಲವು ಮುಖ್ಯ ಆಶಯಗಳನ್ನು ಮಾತ್ರ ಗಮನಿಸಲಾಗಿದೆ. ಅವನ ಸೌಂದರ‍್ಯತತ್ವವನ್ನು ಹೀಗೆ ಸಂಗ್ರಹಿಸಿ ಮುಂದುವರಿಯಬಹುದು: ಕಲಾಕೃತಿ ಎನ್ನುವುದು ಸಹೃದಯನಲ್ಲಾಗಲೀ ಕಲಾವಿದನಲ್ಲಾಗಲೀ ಆಂತರಿಕವಾಗಿ ನಡೆಯುವ ಪ್ರತಿಭಾನಕ್ರಿಯೆಯಿಂದ ಮೂಡುವಂಥದ್ದು. ಈ ಪ್ರತಿಭಾನವೇ ಅಭಿವ್ಯಕ್ತಿ. ಅದು ಸಾಧಾರಣವನ್ನು ವಿಶಿಷ್ಟೀಕರಿಸುವ ಒಂದು ಶಕ್ತಿ. ಹೀಗೆ ವಿಶಿಷ್ಟೀಕೃತವಾದ ಕಲಾಕೃತಿಯ ಪರಿಭಾವನೆಯ ಫಲವಾಗಿ ಸಹೃದಯನು ತನ್ನ ಪ್ರತಿಭಾನದ ಮೂಲಕ ಕೃತಿಯ ಸೌಂದರ್ಯಾನುಭವವನ್ನು ಪಡೆಯತ್ತಾನೆ.

ಮಾನಸಿಕ ದೂರ

ವಸ್ತುಗಳು ನಮ್ಮಲ್ಲಿ ವಿಶಿಷ್ಟವಾದ ಸೌಂದರ‍್ಯಾನುಭವವನ್ನುಂಟುಮಾಡಲು ಕಾರಣವೇನು ಎನ್ನುವುದನ್ನು ಕುರಿತು ವಿಚಾರಮಾಡಿದ ಎಡ್ವರ್ಡ್ ಬುಲ್ಲೋ ಎಂಬ ವಿದ್ವಾಂಸನು, Psychical distance ಎಂಬ ತತ್ವವೊಂದನ್ನು ಪ್ರತಿಪಾದಿಸಿದ್ದಾನೆ. ಈ ತತ್ವ ಅದರ ವಿವರಣೆಯ ಸೊಗಸಿನಿಂದ ಅನೇಕ ಸೌಂದರ‍್ಯಜಿಜ್ಞಾಸುಗಳ ಗಮನವನ್ನು ಸೆಳೆದಿದೆ.

Psychical distance  ಮಾನಸಿಕ ದೂರ – ಎನ್ನುವುದು ಲೋಕವಸ್ತುವನ್ನಾಗಲೀ, ಕಲಾವಸ್ತುವನ್ನಾಗಲೀ ಕುರಿತು, ಕಲಾವಿದ ಮತ್ತು ಪ್ರೇಕ್ಷಕಾದಿಗಳಿಗೆ ಇರಬೇಕಾದ ಒಂದು ವಿಶಿಷ್ಟ ಸಂಬಂಧಾಂತರವನ್ನು ಸೂಚಿಸುತ್ತದೆ. ಲೋಕದಲ್ಲಿ ನಾವು ವಸ್ತುಗಳನ್ನು ತೀರಾ ‘ಹತ್ತಿರ’ದಲ್ಲಿರಿಸಿಕೊಂಡು, ಎಂದರೆ ಕೇವಲ ವ್ಯಾವಹಾರಿಕ ಪ್ರಾಯೋಜನಿಕ ದೃಷ್ಟಿಯಿಂದ ನೋಡುವುದು ನಮಗೆ ಸಹಜವಾದದ್ದು. ಈ ಸಂಬಂಧದಲ್ಲಿ ನಮಗೆ ಸೌಂದರ‍್ಯಾನುಭವ ಲಭಿಸದು. ಏಕೆಂದರೆ ಈ ವ್ಯಾವಹಾರಿಕ ಸಂಬಂಧದಲ್ಲಿ ಲಾಭ-ನಷ್ಟ, ಸುಖ-ದುಃಖ, ಇಷ್ಟ-ಅನಿಷ್ಟ, ಇತ್ಯಾದಿ ಭಾವನೆಗಳೇ ಪ್ರಧಾನವಾಗಿರುತ್ತವೆ. ಆದುದರಿಂದ ಈ ಪ್ರಾಯೋಜನಿಕ ಭಾವನೆಗಳ ವರ್ತುಲದಿಂದ ವಸ್ತುವನ್ನು ‘ದೂರ’ ಇರಿಸಿ, ವೈಯಕ್ತಿಕವಲ್ಲದ ಒಂದು ನೆಲೆಯಲ್ಲಿ ನಿಂತು ನೋಡಿದಾಗ ನಮಗೆ ಸೌಂದರ‍್ಯಾನುಭವ ಲಭಿಸುತ್ತದೆ. ಆದಕಾರಣ ಯಾವ ಒಂದು ನಿಯತವಾದ ‘ದೂರ’ದಲ್ಲಿ ಇರಿಸಿಕೊಂಡು ನೋಡಿದರೆ, ‘ವಸ್ತು’ ನಮಗೆ ಸೌಂದರ‍್ಯಾನುಭವಕಾರಿಯಾಗಿ ಗೋಚರಿಸುವುದೋ ಆ ಒಂದು ‘ದೂರ’ವನ್ನೆ, ಎಡ್ವರ್ಡ್‌ಬುಲ್ಲೋ Psychical distance ಎಂದು ಕರೆಯುತ್ತಾನೆ.

ಕಲಾವಿದ ಲೋಕವಸ್ತುವನ್ನು ಕಲಾಕೃತಿಯನ್ನಾಗಿ ಮಾಡಿ ನೀಡುವಲ್ಲಿ ಈ ಒಂದು ‘ದೂರ’ದಲ್ಲಿ ನಿಲ್ಲಿಸಿಕೊಡದೆ ಹೋದಲ್ಲಿ ‘ದೂರ ಭಂಗ’ (Loss of distance) ವಾಗಿ ರಸಾನುಭವಕ್ಕೆ ಚ್ಯುತಿ ಒದಗುತ್ತದೆ. ಆದಕಾರಣ, ಯಾವ ಒಂದು ನೆಲೆಯಲ್ಲಿ  ಕಲಾಕೃತಿಯಿಂದಾಗಲಿ, ಲೋಕವಸ್ತುವಿನಿಂದಾಗಲಿ ನಾವು ಸೌಂದರ‍್ಯಾನುಭವವನ್ನು ಪಡೆಯಲು ಸಾಧ್ಯವೋ ಅಂತಹ ಒಂದು ನಿಲುವಿನಲ್ಲಿ ನಮ್ಮನ್ನು ಹಾಗೂ ವಸ್ತುವನ್ನು ನಿಲ್ಲಿಸಿಕೊಳ್ಳುವ ಈ ಕೌಶಲವೇ ಮಾನಸಿಕದೂರ[48] ಈ ತತ್ವ ನೋಡುವುದಕ್ಕೆ ಹೊಸತೆಂಬಂತೆ ತೋರಿದರೂ, ಮೂಲತಃ ಹೊಸತೇನೂ ಅಲ್ಲ. ಕ್ಯಾಂಟ್ ಹೇಳಿದ ‘ನಿಸ್ಸಂಗಪರಿಭಾವನೆ’ಯ ತತ್ವದಲ್ಲಿ, ರೋಜರ್ ಫ್ರೈ ಹೇಳಿದ ‘ಅರ್ಥಪೂರ್ಣಾಕೃತಿ’ಯ ತತ್ವದಲ್ಲಿ ಇದು ಸಾಕಷ್ಟು ಸಿದ್ಧವಾಗಿದೆ. ಆದರೆ ಆ ತತ್ವವನ್ನು ಸೊಗಸಾಗಿ ವಿವರಿಸಿ, ಅದಕ್ಕೊಂದು ಹೊಸ ಹೆಸರನ್ನು ಕೊಟ್ಟು ವಿಸ್ತಾರವಾಗಿ ಪ್ರತಿಪಾದಿಸಿರುವುದು ಹೊಸವಿಚಾರ. ಅದರಲ್ಲಿಯೂ, ‘ದೂರ’ ಎಂದರೇನು, ಈ ದೂರದಲ್ಲಿ ವಸ್ತು ವ್ಯಕ್ತಿಗಳ ಸಂಬಂಧ ಎಂಥದು, ಎಲ್ಲೆಲ್ಲಿ ಯಾವ ಯಾವ ಕಾರಣಗಳಿಂದ ‘ದೂರಭಂಗ’ ವಾಗುತ್ತದೆ ಎನ್ನುವ ವಿಚಾರಗಳನ್ನು ಈ ಲೇಖಕ ನಿದರ್ಶನಪೂರ್ವಕವಾಗಿ ವಿವರಿಸಿರುವುದು ಅತ್ಯಂತ ಪ್ರಶಂಸಾರ್ಹವಾಗಿದೆ. ಭಾರತೀಯ ಕಾವ್ಯಮೀಮಾಂಸೆಯಲ್ಲಿ ಬರುವ ಅಭಿನವಗುಪ್ತನ ‘ಸಾಧಾರಣೀಕರಣ’ ತತ್ವವನ್ನು ಬಹುಮಟ್ಟಿಗೆಆಶ್ಚರ‍್ಯಕರವಾಗಿ ಹೋಲುವ ಈ ‘ಮಾನಸಿಕದೂರ’, ಇನ್ನೂ  ವಿಸ್ತಾರವಾದ ತುಲನಾತ್ಮಕ ಅಭ್ಯಾಸಕ್ಕೆ ಯೋಗ್ಯವಾಗಿದೆ.

ಕಾಲಾಸತ್ಯ ಇತ್ಯಾದಿ

ಕಲೆಯನ್ನು ಅಭಿವ್ಯಕ್ತಿ ಎಂದಾಗ, ಕ್ರೋಚೆಯ ತತ್ವದ ಪ್ರಕಾರ ಅದು ಸಾಧಾರಣವನ್ನು ವಿಶಿಷ್ಟೀಕರಿಸುವ ಶಕ್ತಿ ಎಂಬುದನ್ನು ಗಮನಿಸಿದೆವು. ಕವಿಯ ಕೃತಿ ಹೀಗೆ ವಿಶಿಷ್ಟಗೊಳಿಸುವ ವಿಶ್ವಸಾಮಾನ್ಯವಾದ ಸತ್ಯ ಯಾವುದು, ಅದು ಈ ಲೋಕ ಸತ್ಯವೇ, ಲೋಕಾತೀತ ಸತ್ಯವೇ ಎಂಬ ಪ್ರಶ್ನೆ ಏಳುತ್ತದೆ. ಈ ಬಗೆಯ ತಾತ್ವಿಕ ದೃಷ್ಟಿಯುಳ್ಳವರೆಲ್ಲರೂ – ಪ್ಲೇಟೋನಿಂದ ಮೊದಲಾಗಿ-ಕಲಾಕೃತಿ ಎನ್ನುವುದು ಆದರ್ಶ ಸತ್ಯವನ್ನು ಪ್ರಕಟಿಸಿ ಮಾರ್ಗದರ್ಶಿಯಾಗಬೇಕು ಎನ್ನುವುದನ್ನು ಕಲೆಯ ಪರಮೋದ್ದೇಶವೆಂಬಂತೆ ಸಾರಿ ಹೇಳಿದ್ದಾರೆ. ಆದುದರಿಂದ ಸೌಂದರ‍್ಯವೆಂದರೇನು ಎಂಬ ಪ್ರಶ್ನೆಯಲ್ಲಿ ಯಾವುದು ಸತ್ಯವನ್ನು, ಪ್ರಕೃತಿ ಸತ್ವವನ್ನು, ಧ್ಯೇಯವನ್ನು, ವಿಶ್ವ ಸಾಮಾನ್ಯವಾದುದನ್ನು, ಮಾದರಿಯಾದುದನ್ನು, ಪ್ರಕಾಶಪಡಿಸುತ್ತದೆಯೋ ಮತ್ತು ಯಾವುದು ವ್ಯಕ್ತಿಯನ್ನು ಹಿತವಾದ ಸಾಮಾಜಿಕ ಪರಿಣಾಮಗಳ ಕಡೆಗೆ ಒಯ್ಯುವುದೋ, ಯಾವುದು ಕಲೆಯ ಮೂಲಕ ನಮ್ಮ ಚೈತನ್ಯೋತ್ಕರ್ಷವನ್ನು ಸಾಧಿಸುವುದೋ – ಅದು ಸೌಂದರ‍್ಯ ಎನ್ನುವ ಸೂತ್ರವನ್ನು ಗಮನಿಸಬಹುದು.

ಇಲ್ಲಿರುವ ಒಂದೊಂದೂ ಒಂದೊಂದು ಪ್ರಬಂಧವನ್ನು ಬರೆಯಲು ತಕ್ಕ ವಿಚಾರಗಳು. ಕಲಾಕೃತಿ ಕೇವಲ ಭಾವಾಭಿವ್ಯಕ್ತಿಯಿಂದ ಸುಂದರವಾಗುವುದಿಲ್ಲ; ಯಾವುದನ್ನು ಕಲೆ ಅಭಿವ್ಯಕ್ತಗೊಳಿಸುವುದೋ ಅದರಲ್ಲಿ ಒಂದು ಮಹೋನ್ನತ ಉದ್ದೇಶವಿರಬೇಕು. ಯಾವ ಸೌಂದರ್ಯ ಸತ್ಯವನ್ನು ಪ್ರಕಟಿಸುವುದೋ ಅದು ನಿಜವಾಗಿಯೂ ಉದಾತ್ತವಾದುದು. ಪ್ಲೇಟೋ, ಕ್ಯಾಂಟ್, ಹೆಗಲ್, ಗಯಟೆ, ರಸ್ಕಿನ್, ಟಾಲ್‌ಸ್ಟಾಯ್ ಇವರೆಲ್ಲರೂ ಕಲೆಯ ಈ ಆದರ್ಶತತ್ವವನ್ನು ಎತ್ತಿ ಹಿಡಿಯುತ್ತಾರೆ. ಕಲೆ ಪರಮಸತ್ಯದೆಡೆಗೆ ದಾರಿಯಾಗಬೇಕು ಎಂದು ಪ್ಲೇಟೋ, “ಯಾವಾಗ ಕಲೆ ಧರ್ಮದ, ತತ್ವದ ಲೋಕಕ್ಕೆ  ಸಂಬಂಧವನ್ನಿಟ್ಟುಕೊಳ್ಳುವುದೋ ಆಗ ಅದು ಲೋಕಾತೀತ ಸತ್ಯಗಳನ್ನು ಪ್ರಕಟಿಸಬಹುದು”[49] ಎಂದು ಹೆಗಲ್‌ನೂ, “ಕಲೆ ಎನ್ನುವುದೇನಿದ್ದರೂ ಅತೀತದ ನೇರವಾದ ದರ್ಶನವನ್ನು  ಮಾಡಿಸುವ ವಿಧಾನ”[50]ವೆಂದು ಬರ್ಗ್‌ಸನ್ನನೂ, “ಯಾವಾಗ ಕಲಾವಿದನ ಮನಸ್ಸು ಸುಂದರವೂ ಶಾಶ್ವತವೂ ಆದ ಭಾವನಾ ಜಗತ್ತಿಗೆ ಏರುತ್ತದೆಯೋ, ಯಾವುದರ ಅನುಭವ ಸ್ವಯಂವೇದ್ಯವಾದ ಮಾಧುರ್ಯದಲ್ಲಿ ಸೃಷ್ಟಿಯ ಏಕತಾನದೊಡನೆ ಮಿಡಿಯುವುದೋ, ಆಗ ಅದು ಸೌಂದರ್ಯವನ್ನಲ್ಲದೆ ಮತ್ತೇನನ್ನು ತಾನೇ ಅಭಿವ್ಯಕ್ತಗೊಳಿಸೀತು? ಆದುದರಿಂದ ಕಲೆ ಶಾಸ್ತ್ರ ಮಾತ್ರವಾದರೆ ಸಪ್ಪೆಯಾದೀತು; ಆದರ್ಶವಾಗಿದ್ದರೆ ಮಾತ್ರ ನಮ್ಮನ್ನು ಮೇಲೆತ್ತೀತು”[51] ಎಂದು ಗಯಟೆಯೂ, “ಕಲಾವಿದನಾದವನು ಪ್ರಕೃತಿಸತ್ವವನ್ನು ಅನುಕರಿಸಿ ತೋರಬೇಕು’ ಎಂದು ಕೋಲ್‌ರಿಜ್ ಕವಿಯೂ ಹೇಳುತ್ತಾರೆ. ರಸ್ಕಿನ್ನನು “ಕಲಾಕೃತಿ ಸುಂದರವಾಗಿರಬೇಕಾದರೆ ಧಾರ್ಮಿಕ ಭಾವನೆಗಳನ್ನು ತೀವ್ರವಾಗಿ ಆಚರಣೆಗೆ ತರುವುದು, ಜನತೆಯ ನೈತಿಕ ದೃಷ್ಟಿಯನ್ನು ಪರಿಪೂರ್ಣಗೊಳಿಸುವುದು ಮತ್ತು ಸಾಮಾಜಿಕ ಪರಿಣಾಮಗಳನ್ನು ಸಾಧಿಸುವುದು – ಈ ಮೂರು ಉದ್ದೇಶಗಳನ್ನು ಹೊಂದಿರಬೇಕು”  ಎನ್ನುತ್ತಾನೆ.[52] ಮತ್ತೆ ಕೆಲವರು ಕಲೆಯನ್ನು ಧಾರ್ಮಿಕಾದಿ ವಿಚಾರಗಳಿಗೆ ಗಂಟುಹಾಕಬಾರದೆಂದು ವಾದಿಸುತ್ತಾ, ಕಲೆ ನೀತಿ-ಅನೀತಿಗಳಿಗೆ ಅತೀತವಾದುದು, ಸೌಂದರ್ಯದ ಪ್ರಶ್ನೆಗೂ ನೀತಿಯ ಸಮಸ್ಯೆಗೂ ಗಂಟುಹಾಕಬಾರದೆಂದು ಸಾರುತ್ತಾರೆ.

ಕಲೆ ಸತ್ಯವನ್ನು ಪ್ರಕಟಿಸುತ್ತದೆ ಎಂದರೆ ಅದು ಯಾವ ಸತ್ಯ? ಚಾರಿತ್ರಕವೆ, ವೈಜ್ಞಾನಿಕವೇ, ಲೋಕನಿಷ್ಠವೇ ಅಥವಾ ಲೋಕಾತೀತವೇ – ಈ ಬಗೆಯ ಹಲವು ಸಮಸ್ಯೆಗಳು ಏಳುತ್ತವೆ. ಒಂದು ಮಾತಿನಲ್ಲಿ ಹೇಳುವುದಾದರೆ ಕಲೆ ಪ್ರಕಟಿಸುವುದು ಚಿರಂತನವಾದ ಭಾವಸತ್ಯವನ್ನು.

ಸೌಂದರ್ಯ ನಮಗೆ ಮಹದ್ ವ್ಯಕ್ತಿತ್ವಗಳ ಪರಿಚಯವನ್ನುಂಟುಮಾಡುತ್ತದೆ. ಕಲೆಯಲ್ಲಿ ಮೂರ್ತಿಗೊಂಡ, ಮಹದ್ ವ್ಯಕ್ತಿಗಳ ಜೀವನಾವಲೋಕದಿಂದ ನಮ್ಮ ಜೀವನವೂ ಆದರ್ಶದೆಡೆಗೆ ನಡೆಯುವುದರ ಮೂಲಕ, ಕವಿ ನಿರ್ಮಿತಿಯು ನಮಗೆ ನೀಡುವ ಲೋಕೋತ್ತರ ಮೌಲ್ಯಗಳ ಸಹಾಯದಿಂದ ನಾವು ನಮ್ಮ ಚೈತನ್ಯೋತ್ಕರ್ಷವನ್ನು ಸಾಧಿಸಿಕೊಳ್ಳಬಹುದು. ಸೌಂದರ್ಯಕ್ಕೆ ನಮ್ಮನ್ನು ಮರ್ತ್ಯದಿಂದ ಅಮರ್ತ್ಯಕ್ಕೆ ಉದ್ಧರಿಸುವ ಸಾಮರ್ಥ್ಯವಿದೆ. ನಮ್ಮಲ್ಲಿ ದಿವ್ಯಾನುಭೂತಿಯನ್ನು ಉಂಟುಮಾಡುವ ಶಕ್ತಿಯಿದೆ. ಇಂತಹ ಶಕ್ತಿಯನ್ನು ಪಡೆದಾಗಲೇ – ಸತ್ಯವೇ ಸೌಂದರ‍್ಯ, ಸೌಂದರ‍್ಯವೇ ಸತ್ಯ” ಎನ್ನುವ ದರ್ಶನ ದೊರೆತೀತು.

ಇದುವರೆಗೂ ನಿರೂಪಿಸಿದ ಈ ಪಾಶ್ಚಾತ್ಯವಿಚಾರ ಸರಣಿಯಲ್ಲಿ, ಹೇಗೆ ಸೌಂದರ‍್ಯವನ್ನು ಕುರಿತ ಚಿಂತನೆ, ಸಾಧಾರಣದಿಂದ ಅಸಾಧಾರಣದ ಮಟ್ಟದವರೆಗೂ ಅಲೆ ಅಲೆಯಾಗಿ ಪ್ರವಹಿಸಿದೆ ಎನ್ನುವುದನ್ನು ಗುರುತಿಸಬಹುದು. ಇಷ್ಟನ್ನು ಹೇಳಿದ ಮೇಲೂ ಸೌಂದರ್ಯ ಎಂದರೇನು ಎಂಬ ಪ್ರಶ್ನೆಗೆ ಉತ್ತರ ದೊರೆತಿಲ್ಲ. ಈ ಚರ್ಚೆ ಏನಿದ್ದರೂ ಸೌಂದರ್ಯದ ಒಂದೊಂದು ಕಿರಣವನ್ನು ಮಾತ್ರ ತೆರೆದು ತೋರಿದೆ. ಲೋಕದಲ್ಲಿ ಸೌಂದರ್ಯವೆಂದರೇನು, ಕಲೆಯಲ್ಲಿ ಸೌಂದರ್ಯವೆಂದರೇನು – ಅದನ್ನು ಕುರಿತು ಯಾವ ಯಾವ ಮತಗಳಿವೆ ಎನ್ನುವುದನ್ನೂ ಸ್ಥೂಲವಾಗಿ ಪರಿಶೀಲಿಸಲಾಗಿದೆ. ಈ ಪರಿಶೀಲನೆಯಲ್ಲಿ ತಾತ್ವಿಕ ವಿವರಣೆಗಳ ಜಟಿಲತೆಯನ್ನು ಕೈಬಿಟ್ಟು, ಕೇವಲ ಸೌಂದರ‍್ಯ ಮೀಮಾಂಸೆಯ ದೃಷ್ಟಿಯನ್ನು ಬಹುಮಟ್ಟಿಗೆ ಅನುಸರಿಸಲಾಗಿದೆ.

* * *


[1] Basanquet : History of Aesthetics, p 100.

[2] Ennead: Plotinus (V.VIII …1)

[3] H.S. Ramaswamy Sastry : Indian Aesthetics : p. 32.

[4] ಒಂದು ದೃಷ್ಟಿಯಿಂದ ನೋಡಿದರೆ ನಿಜವಾದ ಅನುಕರಣೆ ಸಾಧ್ಯವಿಲ್ಲವೇನೋ ಎನ್ನಿಸುತ್ತದೆ. ಏಕೆಂದರೆ ಅನುಕರಿಸಲು ಕುಳಿತ ವ್ಯಕ್ತಿಯ ಯಾವುದೋ ಸ್ವಭಾವ ಅವನಿಗರಿವಿಲ್ಲದೆಯೇ ನುಸುಳಿ ಬರಬಹುದು. ಹತ್ತು ಜನ ಒಂದೇ ವಸ್ತುವನ್ನು ಅನುಕರಿಸಿದಾಗ ಅವರ ಅನುಕರಣೆ ಒಂದೇ ತರಹ ಇರುವುದೆಂದು ಹೇಳಲಾಗುವುದಿಲ್ಲ; ಅದು ಹತ್ತು ಮುಖಗಳಿಂದ ಕಂಡ ಅನುಕರಣೆಯಾಗುತ್ತದೆ.

[5] E.F. Carritt: The Philosophy of Beauty p, 292-93.

[6] Catharine Gilbert: Studies in Recent Aesthetics : p. 46.

[7] ಅಲ್ಲೆ ಪು. ೪೬

[8] ಅಲ್ಲೆ; ಪು. ೪೬-೫೩, ೫೭ ಮತ್ತು ೬೧.

[9] ಸೌಂದರ್ಯಮೀಮಾಂಸೆಯಲ್ಲಿ ಬರುವ ಅಭಿವ್ಯಕ್ತಿ ಮತ್ತು ಕಲಾಮಾಧ್ಯಮದ ಚರ್ಚೆಯೂ, ಕಾವ್ಯಮೀಮಾಂಸೆಯಲ್ಲಿ ಬರುವ ರೀತಿ ರಸ (content and Form) ಗಳ ಚರ್ಚೆಯೂ ಒಂದೇ.

[10] C.K. Ogden and l.A. Richards: Foundations of Aesthetics; p. 39.

[11] Clive Bell : Art  p 7

[12] Clive Bell : Art  p. 7,8, 7-8

[13] Clive Bell. Art p.17

[14] To appreciate a work of art we need bring with us nothing from life, no knowledge of its ideas and affairs, no familiarities with its emotions- Clive Bell – Art  p 25.

[15] ಅಲ್ಲೆ   p, 28-29

[16] ಅಲ್ಲೆ   p, 29-30

[17] ಅಲ್ಲೆ   p, 26-27

[18] ಜಿ. ಹನುಮಂತರಾವ್ : ಆಧುನಿಕ ತತ್ವಶಾಸ್ತ್ರದ ಸಮಸ್ಯೆಗಳು : ಪು 35

[19] H.R. Marshall: The Beautiful : p. 32.

[20] ಕ್ರೋಚೆಯ ಪ್ರಕಾರ ಚಿದ್ ವ್ಯಾಪಾರಗಳು ನಾಲ್ಕು : Aesthetic, Logic, Economic and  Ethic. ಇವುಗಳನ್ನು ಅವನು, pure Concepts  ಎಂದು ಕರೆಯುತ್ತಾನೆ.

[21] H.W. Carr : The Philosophy of Benedetto Croce : p 15

[22] A.E. Pawell : Romantic Theory of Poetry :  p. 24

[23] H.W. Carr: The Philosophy of Benedetto Croce p. 15

[24] Croce : Estetica : p.11

[25] ಅಲ್ಲೆ  ಪು. 14

[26] A.E. Pawell. Romantic Theory of Poetry: p. 24

[27] H.W. Carr. Philosophy of Benedetto Croce; p. 164

[28] O.K. Struckmeyer. Croce and Literary criticism: p.3

[29] ಅಲ್ಲೆ   ಪು. ೫

[30] Estetica : Chap XVI-Part l

[31] ಅಲ್ಲೆ p.58

[32] Croce : Estetica. Chap. XVI  Part 1   p.23

[33] ಅಲ್ಲೆ  ಪು. 58

[34] O.K. Struckmayer; Croce and Literary Criticism : p. 31

[35] Ed. by William Edton: Aesthetics and Language: p.101

[36] E.F. Carritt: What is Beauty? p. 91 and 106

[37] Bosanquet : History of Aeshetics p. 130
S. Alexander: Beauty and other forms of Value: p 186

[38] J.S. Mackenzie: Fundamental problems of life p. 517

[39] Abercrombie: Towards a Theory of Art : p. 65-66

[40] E.F. Carrit: What is Beauty; p. 199

[41] E.F. Carritt: What is Beauty p 213.

[42] Katherine Gillbert: Studies in recent Aesthetics: p 117

[43] Croce.: Estetica., p 8-9

[44] ಭಾರತೀಯ ಆಲಂಕಾರಿಕರ ಮತವೂ ಇದೇ.

[45] W.H. Carr, Philosophy of Benedetto Croce, p. 72

[46] O.K. Struckmeyer: Croce and Literary Criticism   p.9

[47] ಕ್ರೋಚೆ ಭಾವಿಸುವಂತೆ, ಸಹೃದಯ ಅಭಿವ್ಯಕ್ತಿಯನ್ನು ಒಪ್ಪಲಿ, ಬಿಡಲಿ ಕಲೆಯಲ್ಲಿ ಭಾವಾಭಿ ವ್ಯಕ್ತಿಯನ್ನು ಗುರುತಿಸಿದವರೆಲ್ಲರೂ ಅದನ್ನು ಸುಂದರ ಎಂದು ಕರೆಯುತ್ತಾರೆ – ಎಂದು ಹೇಳುವುದು ಸರಿಯಲ್ಲ. ಯಾವುದನ್ನು ಅಭಿವ್ಯಕ್ತಗೊಳಿಸಲಾಗುವುದಿಲ್ಲವೋ ಅದು ಸೌಂದರ‍್ಯವಲ್ಲ ಎನ್ನುವುದೂ ಸರಿಯಲ್ಲ. ಜಾನ್ ಡುಕಾಸೆ, The Philosophy of Art’ ಎಂಬ ಗ್ರಂಥದಲ್ಲಿ  ಹೀಗೆ ಹೇಳುತ್ತಾರೆ;

‘ಯಾವಾಗ ಕಲಾವಿದ ಒಂದು ಭಾವವನ್ನು ಕೃತಿಯಲ್ಲಿ ಅಭಿವ್ಯಕ್ತಗೊಳಿಸುತ್ತಾನೋ ಆಗ ಸಹೃದಯರು ಅಭಿವ್ಯಕ್ತಿಯನ್ನೇನೋ ಗುರುತಿಸುತ್ತಾರೆ. ಆದರೆ ಅಭಿವ್ಯಕ್ತವಾದ ಆ ಭಾವ ಪರಿಭಾವನೆಗೆ ಪ್ರಿಯವಾಗಿ ತೋರಿದರೆ ಅದನ್ನು ಸೌಂದರ‍್ಯವೆನ್ನುತ್ತಾರೆ, ಇಲ್ಲದಿದ್ದರೆ ಇಲ್ಲ’ – ಈ ಅಭಿಪ್ರಾಯದಲ್ಲಿ ಇವರು ಕ್ರೋಚೆಯಿಂದ ಬೇರೆಯ ಮತವನ್ನು ಪ್ರಕಟಿಸಿದ್ದಾರೆ.
“ಕಲೆ ಎನ್ನುವುದು ಅಭಿವ್ಯಕ್ತಿ: ಎಂದರೆ ಕೇವಲ ಸಂಗತಿಗಳ ಅಥವಾ ಅಭಿಪ್ರಾಯಗಳ ಅಭಿವ್ಯಕ್ತಿಯಲ್ಲ, ಗ್ರಾಹ್ಯವಾದ ಅನುಭವ ಮೌಲ್ಯದ ಸ್ವಸಂಪೂರ್ಣವಾದ ಅಭಿವ್ಯಕ್ತಿ. ಅತ್ಯುತ್ತಮ ಮಾಧ್ಯಮವೊಂದರಲ್ಲಿ ಸಹೃದಯನ ಹೃದಯವೇದ್ಯವಾಗುವಂತೆ ಮೂರ್ತಗೊಳಿಸುವ ಒಂದು ಆನಂದಾನುಭವ ಅದು,” – ಎಂದು Dewitt Parker ಅವರು (Principles of Aesthetics p 42)  ಎಂದು ಹೇಳುತ್ತಾರೆ. ಇದೇ ಸೂತ್ರವನ್ನು ಡಾ. ಬೊಸಾಂಕ್ವೆಯೂ ಮಂಡಿಸಿದ್ದಾರೆ. ಒಟ್ಟಿನಲ್ಲಿ ಕ್ರೋಚೆ “Intuition’ ಬಗ್ಗೆ ಸರಿಯಾದ ವಿವರಣೆಯನ್ನಾಗಲೀ ಅದರ ವ್ಯಾಪಾರದ ವಿವರವನ್ನಾಗಲೀ ನೀಡಿಲ್ಲ. ಕವಿ ಪ್ರತಿಭೆಯಲ್ಲೇ ಕೃತಿಯೊಂದು ಆದ್ಯಂತವಾಗಿ ಹೊಳೆದುಬಿಡುತ್ತದೆ ಎನ್ನುವುದನ್ನು ಒಪ್ಪಲಾಗುವುದಿಲ್ಲ. ಬರೆಯುತ್ತಾ ಹೋದಂತೆ ಅದು ತೆರೆಯುತ್ತಾ ಹೋಗುತ್ತದೆ.

[48] ಈ ತತ್ವದ ವಿಸ್ತಾರವಾದ ವಿವರಣೆಗೆ, Edward Bullough: Aesthetics: Lectures and Essays: p.93-129 ನೋಡಿ

[49] E.F. Carritt : Philosophy of Beauty : p. 161

[50] ಅಲ್ಲೆ  ಪು. 207

[51] Bosanquet : History of Aesthetics: p 310 and 313

[52] E.F. Carritt: The Theory of Beauty :  p.64