ಮದುವೆ ಮತ್ತು ವಿಚ್ಛೇದನ

ಪಿಂಜಾರ ಜನಾಂಗದಲ್ಲಿ ’ಮದುವೆ’ ಸಂಪ್ರದಾಯವು ಇಸ್ಲಾಂ ಧರ್ಮಾನುಸಾರವೇ ನಡೆಯುತ್ತದೆ. ಆದರೆ ಇದು ಮುಖ್ಯವಾಗಿ ಮುಲ್ಲಾನ ಉಸ್ತುವಾರಿ, ಮಾರ್ಗದರ್ಶನವನ್ನು ಅವಲಂಬಿಸಿರುತ್ತದೆ. ಆತ ತಾಂತ್ರಿಕವಾಗಿ ಇಸ್ಲಾಂನ ಆಚರಣೆಗಳನ್ನು ನಡೆಸಿಕೊಡುವ ಪುರೋಹಿತನಾಗಿರುತ್ತಾನೆ. ಉಳಿದಂತೆ ಪಿಂಜಾರರ ಮಾತು ನಡವಳಿಕೆಗಳೆಲ್ಲವೂ ಸಹಜವಾಗಿ ಕನ್ನಡದಲ್ಲೇ ಇರುವುದರಿಂದ ಮುಲ್ಲಾ ಕೂಡ ಅವರೊಂದಿಗೆ ಕನ್ನಡ ಮಾತಾಡಲೇ ಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಪಿಂಜಾರರ ಈ ನಡವಳಿಕೆಯ ಕಾರಣದಿಂದಲೇ ಮುಸ್ಲಿಮರ ಮದುವೆಗಳಿಗಿಂತ ಪಿಂಜಾರರ ಮದುವೆಗಳಲ್ಲಿ ಹಿಂದೂಗಳ ಪಾಲುದಾರಿಕೆ ಹೆಚ್ಚಿರುತ್ತದೆ. ಮದುವೆಯ ವಿಚಾರದಲ್ಲಿ ಇಸ್ಲಾಂನ ಅನುಕರಣೆ, ಅನುಸರಣೆ ಮಾಡುವ ಪಿಂಜಾರರು ವಿಚ್ಛೇದನದ ವಿಚಾರದಲ್ಲಿ ವಿಭಿನ್ನವಾಗಿದ್ದಾರೆ. ಗಂಡ – ಹೆಂಡತಿಯರ ನಡುವಿನ ವಿರಸ, ಅಸಹನೆ, ಮಕ್ಕಳಾಗದೇ ಇರುವುದು, ಅಕಾಲಿಕ ಮರಣ ಇತ್ಯಾದಿ ಕಾರಣಗಳಿಂದ ಹೆಂಡತಿಯನ್ನು ಬಿಡುವ, ಮರುಮದುವೆಯಾಗುವ ಅವಶ್ಯಕತೆ ಬಂದಾಗ ಇಸ್ಲಾಂನಲ್ಲಿನ ’ತಲಾಕ್’ ಪದ್ಧತಿಯನ್ನು ಅನುಸರಿಸುವುದಿಲ್ಲ. ಅಥವಾ ಅದು ಪಿಂಜಾರರಿಗೆ ಗೊತ್ತಿಲ್ಲ. ಅಲ್ಲದೆ ಹಾಗೆ ಸಣ್ಣಪುಟ್ಟ ಕಾರಣಗಳಿಗಾಗಿ ಹೆಂಡತಿಯನ್ನು ಬಿಡುತ್ತಾ ಹೋದರೆ ’ಜೀವನ’ ಎನ್ನುವುದಕ್ಕೆ ಅರ್ಥವೇ ಇರುವುದಿಲ್ಲ ಎಂಬ ತಿಳಿವಳಿಕೆಯಿಂದ ಈ ಬಗೆಯ ವಿಚ್ಛೇದನದ ಪದ್ಧತಿಯನ್ನು ಪಿಂಜಾರರು ತೀವ್ರವಾಗಿ ವಿರೋಧಿಸುತ್ತಾರೆ. ಪಿಂಜಾರರಲ್ಲಿ ಏಕಪತ್ನಿ ವ್ಯವಸ್ಥೆಯ ಬಗ್ಗೆ ಇರುವ ಒಲವು ಅವರ ಆ ಬಗೆಯ ನಿಲುವಿಗೆ ಪ್ರೇರಣೆಯಿರಬಹುದು. ಹೆಂಡತಿ ಬಿಟ್ಟವನು, ಗಂಡನನ್ನು ಬಿಟ್ಟವಳು ಎಂಬ ಕಾರಣಕ್ಕೆ ಅವರ ಬಗ್ಗೆ ಪಿಂಜಾರರಲ್ಲಿ ಪ್ರೀತಿ, ಕರುಣೆ ಹುಟ್ಟುವುದಿಲ್ಲ, ಬದಲಾಗಿ ಅವರನ್ನು ಸಾಮಾಜಿಕವಾಗಿ ತೀವ್ರ ಉಪೇಕ್ಷೆಯಿಂದ ನೋಡಲಾಗುತ್ತದೆ. ವಿಧವಾ ವಿವಾಹ, ಸೀರುಡಿಕೆಯಂಥ ಪದ್ಧತಿಗಳಿಗೂ ಪಿಂಜಾರರಲ್ಲಿ ವಿರೋಧವಿದೆ. ಆದರೆ ಅವರಲ್ಲಿ ವಿಧುರನ ಪುನರ್‌ವಿವಾಹಕ್ಕೆ ಅಂತಹ ಅಡ್ಡಿಯೇನಿಲ್ಲ. ಅದೂ ಅವನಿಗೆ ಮದುವೆ ಮಾಡಿಕೊಳ್ಳುವ ವಯಸ್ಸಿದ್ದರೆ ಮಾತ್ರ! ಗಂಡ -ಹೆಂಡತಿಯ ನಡುವೆ ನಾನಾ ಕಾರಣಗಳಿಗಾಗಿ ಮನಸ್ತಾಪ ಬಂದು ಅವರು ಬೇರೆಯಾಗಲೇಬೇಕಾದಂತಹ ಸಂದರ್ಭ ಒದಗಿದರೆ ಎರಡೂ ಕಡೆಯ ಮನೆಯವರು ಸೇರಿ ಇಬ್ಬರಿಗೂ ಬಯ್ದು ಹೊಂದಿಕೊಂಡು ಹೋಗುವಂತೆ ಬುದ್ಧಿವಾದ ಹೇಳಲಾಗುತ್ತದೆ. ಸಾಂಸಾರಿಕವಾದ ಕಲಹಗಳಿಗೆ ಸಿದ್ಧೌಷಧಿ ಎಂದರೆ ಸಹನೆ ಮತ್ತು ಹೊಂದಾಣಿಕೆ. ಬದುಕು ಅದನ್ನು ಕಲಿಸಬೇಕು.ಮನುಷ್ಯರಾದವರು ಕಲಿಯುತ್ತಾ ಹೋಗ-ಬೇಕು. ಕಲಿಯಲೊಲ್ಲದವರು ಮಾತ್ರ ಸದಾ ನೋವುಣ್ಣಬೇಕಾಗುತ್ತದೆ. ಪಿಂಜಾರ ಜನಾಂಗದ ಆರ್ಥಿಕ ಸ್ಥಿತಿ-ಗತಿಗಳು ಸಂಸಾರವಂದಿಗರಲ್ಲಿ ’ತಲಾಖ್‌’ನಂತಹ ತಣ್ಣನೆಯ ಕ್ರೌರ್ಯ ಹುಟ್ಟಿಸುವ ಬದಲು ಸಹನೆ, ಪ್ರೀತಿಯನ್ನೇ ಬಿತ್ತುತ್ತವೆ. ಹಾಗಾಗಿ ಪಿಂಜಾರರಲ್ಲಿ ಕಷ್ಟವೋ, ನಿಷ್ಠುರವೋ ವಿಚ್ಛೇದನಗಳು ನಡೆಯುವುದಿಲ್ಲ. ಅದಕ್ಕೆ ಈ ಸಮುದಾಯದವರಲ್ಲಿ ಅಪೇಕ್ಷೆಯೂ ಇದ್ದಂತಿಲ್ಲ. ಈ ಬಗೆಯ ತಿಳುವಳಿಕೆಗೆ ಕಾರಣ ಪಿಂಜಾರರ ಜೀವನಪ್ರೀತಿ ಮತ್ತು ಸಾಮಾಜಿಕ ಬದ್ಧತೆ. ಧಾರ್ಮಿಕ ಶಾಸ್ತ್ರ-ಕಟ್ಟಳೆಗಳಿಗಿಂತ ಸಮಾಜದ ಬಗೆಗಿನ ಒಂದು ರೀತಿಯ ಅಲಿಖಿತವಾದ ನೈತಿಕ ಪ್ರಜ್ಞೆ ಅವರನ್ನು ಕಾಡುತ್ತದೆ. ಪಿಂಜಾರರ ಜನಾಂಗದ ಒಟ್ಟು ಆಚರಣೆಗಳು ಈ ಹಿನ್ನೆಲೆಯಲ್ಲಿ ಅರ್ಥಪೂರ್ಣವೆನಿಸುತ್ತವೆ. ಈ ಜನಾಂಗದ ಒಟ್ಟು ಆಚರಣೆಗಳು ಈ ಹಿನ್ನೆಲೆಯಲ್ಲಿ ಅರ್ಥಪೂರ್ಣವೆನಿಸುತ್ತವೆ. ಈ ಜನಾಂಗದ ಮದುವೆಯ ಸಂಪ್ರದಾಯದ ವಿವರಗಳನ್ನು ನೋಡುವಾಗ ಸಾಮಾಜಿಕವಾಗಿ ಪಿಂಜಾರರ ನೆಲೆಯನ್ನು ಸೂಚಿಸುವಂತಹ ವಿಶ್ಲೇಷಣೆ ಸಾಧ್ಯವಾಗಬೇಕೆಂಬ ಆಶಯದಿಂದ ಮೇಲಿನ ಮಾತುಗಳನ್ನು ಹೇಳಬೇಕಾಯಿತು.

ಪಿಂಜಾರರಲ್ಲಿ ಹುಡುಗಿ ಋತುಮತಿಯಾದ ನಂತರ ಮದುವೆ ಮಾಡುವುದು ರೂಢಿಯಲ್ಲಿದೆ. ಒಂದೆರಡು ತಲೆಮಾರಿನ ಹಿಂದೆ ಋತುಮತಿಯಾಗುವುದಕ್ಕಿಂತ ಮೊದಲೇ ಮದುವೆ ಮಾಡುವುದೂ ಇತ್ತೆಂದು ತಿಳಿದುಬರುತ್ತದೆ. ಸಂಬಂಧದವರು ಹೆಣ್ಣು ಕೈಬಿಟ್ಟು ಹೋದೀತೆಂದು ಚಿಕ್ಕವಳೇ ಅಂದರೆ ಎಂಟು, ಒಂಬತ್ತು, ಹತ್ತು ವರ್ಷದ ಹುಡುಗಿಯನ್ನು ’ಇಳೇವು’ ಮಾಡಿಕೊಂಡು ಅಥವಾ ಮದುವೆಯನ್ನೇ ಮಾಡಿಕೊಂಡು ಹೋಗುತ್ತಿದ್ದರಂತೆ. ಇಂತಹ ಹುಡುಗಿಗೆ ಹದಿನೆಂಟರಿಂದ ಇಪ್ಪತ್ತರ ವಯಸ್ಸಿನ ಹುಡುಗನನ್ನು ಗೊತ್ತು ಮಾಡುವುದ ಹೆಚ್ಚು ಕಡಿಮೆ ಬಾಲ್ಯವಿವಾಹದ ಪದ್ಧತಿಯನ್ನೇ ಹೋಲುತ್ತದೆ. ಇದು ಕಡಿಮೆಯಾಗುತ್ತಿದ್ದಂತೆ ಹುಡುಗಿ ದೊಡ್ಡೋಕಿಯಾದ ನಂತರದ ಒಂದೆರಡು ವರ್ಷದಲ್ಲಿ ಮದುವೆ ಮಾಡುವುದು ರೂಢಿಗೆ ಬಂದಂತೆ ತೋರುತ್ತದೆ. ಮೊದಲ ಗಂಡಿನವರೇ ಕನ್ಯಾನ್ವೇಷಣೆಗಾಗಿ ತಿರುಗಾಡುತ್ತಿದ್ದು ಅದಕ್ಕಾಗಿ ಜೊತೆ ಚಪ್ಪಲಿ ಸವೆಯುತ್ತಿದ್ದವು ಅನ್ನುವವರಿದ್ದಾರೆ. ಕನ್ಯೆಯನ್ನು ಹುಡುಕಿ ತಮ್ಮವಳನ್ನಾಗಿ ಮಾಡಿಕೊಳ್ಳುವ ಮುನ್ನ ಮಾತುಕತೆಯಾಗುತ್ತಿದ್ದವು. ಹೆಣ್ಣಿಗೆ ತೆರ ಕೊಟ್ಟು ಮದುವೆಯಾಗಬೇಕಿತ್ತು. ತೆರೆದ ಜೊತೆಗೆ ಹೆಣ್ಣಿಗೆ ಕೊಡಬೇಕಾದ ವಸ್ತ್ರ, ಒಡವೆ ಮತ್ತು ಮದುವೆಯನ್ನು ಯಾವಾಗ ಮಾಡಿಕೊಳ್ಳುವುದು ಇತ್ಯಾದಿಯಾಗಿ ’ಇಳೇವು’ ಮಾಡುವಾಗಲೇ ನಿರ್ಧಾರವಾಗುತ್ತಿತ್ತು. ಇಳೇವು ಆದ ನಂತರ ಆರು ತಿಂಗಳಿಂದ ವರ್ಷದೊಳಗಾಗಿ ಮದುವೆ ಮುಗಿಯಬೇಕಿತ್ತು. ಮೊದಮೊದಲು ಹೆಣ್ಣಿಗಾಗಿ ಅಲೆದಾಡುತ್ತಿದ್ದ ಪಿಂಜಾರರು ಬರುಬರುತ್ತ ಆಯಾ ಊರಿನಲ್ಲೇ ಇರುವ ಸಂಬಂಧಿಗಳಿಗೆ ಕೊಡುವುದು. ಅಲ್ಲಿಂದ ತರುವುದು ಮಾಡಿಕೊಂಡಂತೆ ಕಾಣುತ್ತದೆ. ’ತೆರ’ ಕೊಟ್ಟು ಮದುವೆಯಾಗುತ್ತಿದ್ದ ಕಾಲವೂ ಬದಲಾಗಿ ಈಗ ಹೆಣ್ಣಿನವರು ವರಾನ್ವೇಷಣೆ ಮಾಡಿ ವರದಕ್ಷಿಣೆ ಕೊಟ್ಟು ಮದುವೆ ಮಾಡಿ ಕನ್ಯಾಸೆರೆಯನ್ನು ಬಿಡಿಸಿಕೊಳ್ಳುವಂತಹ ಸ್ಥಿತಿ ಬಂದಿದೆ. ಪಿಂಜಾರರಲ್ಲಿ ಈ ಬದಲಾವಣೆ ಸಹಜವೇ ಆಗಿದೆ.

ಗಂಡಿನ ಕಡೆಯ ಒಂದಿಷ್ಟು ಜನ ಮುತ್ತೈದೆಯನ್ನು ಒಳಗೊಂಡಂತೆ, ಇಳೇವಿನ ದಿನ ಹೆಣ್ಣಿನ ಮನೆಗೆ ಹೋಗುತ್ತಾರೆ. ಈ ಮೊದಲೇ ನಡೆದ ಮಾತುಕತೆಯಲ್ಲಿ ಈ ದಿನದ ನಿರ್ಧಾರವಾಗಿರುತ್ತದೆ. ಹುಡುಗಿಗೆ ಹಸಿರು ಸೀರೆ, ಕುಬುಸ, ಹಸಿರು ಬಳೆ ತೊಡಿಸುತ್ತಾರೆ. ಇವುಗಳ ಜೊತೆಗೆ ಎಡೆ ಅಕ್ಕಿ, ಉತ್ತುತ್ತಿ ಹಣ್ಣು. ಬಾಳೆಹಣ್ಣು, ತೆಂಗಿನಕಾಯಿ ಮುಂತಾದುವನ್ನು ಗಂಡನ ಕಡೆಯವರು ತಂದಿರುತ್ತಾರೆ. ಈ ಸಂದರ್ಭದಲ್ಲಿ ಗಂಡಿನ ಉಪಸ್ಥಿತಿ ಅನಿವಾರ್ಯು ವೇನೂ ಇಲ್ಲ. ಯಾಕೆಂದರೆ ಮೊದಲೇ ನೋಡಿರುತ್ತಾನೆ. ಆತನ ಒಪ್ಪಿಗೆಯನ್ನು ಕೇಳಿರುತ್ತಾರೆ. ಹುಡುಗಿಯ ಇಷ್ಟಾನಿಷ್ಟಗಳನ್ನು ಕೇಳುವುದಿಲ್ಲ. ತಾವು ತಂದ ವಸ್ತ್ರಫಕರಣಗಳನ್ನು ಹುಡುಗಿಗೆ ತೊಡಿಸಿ ಐದು ಜನ ಮುತ್ತೈದೆಯರು ಹುಡುಗಿಯ ಕುತ್ತಿಗೆಗೆ ಗಂಧವನ್ನು ಹಚ್ಚುತ್ತಾರೆ. ತಟ್ಟೆಯಲ್ಲಿ ಉತ್ತುತ್ತಿ, ಹಣ್ಣುಕಾಯಿ, ಎಲೆಅಡಿಕೆ, ಸುಣ್ಣದೊಂದಿಗೆ ಹಸುರಿಳೆ ಸೀರೆಯನ್ನು ಇಟ್ಟು ಹೆಣ್ಣಿನ ತಂದೆಗೆ ಗಂಡಿನ ತಂದೆ ಕೊಡುತ್ತಾನೆ. ಗಂಧ ಹಚ್ಚಿದ ಮುತ್ತೈದೆಯರು ಆಶೀರ್ವದಿಸಿದ ನಂತರ ಎಲ್ಲರೂ ಊಟಕ್ಕೆ ಏಳುತ್ತಾರೆ. ಬಂದ ಬೀಗರಿಗೆ ಗೋಧಿ ಹುಗ್ಗಿ ಮಾಡಿ ಅನ್ನ ಬಸಿದಿರುತ್ತಾರೆ. ಊಟದ ನಂತರ ಎಲೆ ಅಡಿಕೆ ಹುಡುಕುತ್ತಾ ಲೋಕಾಭಿರಾಮವಾಗಿ ಮಾತನಾಡಿ ಗಂಡಿನ ಮನೆಯವರು ಹೊರಡುತ್ತಾರೆ. ಸ್ವಲ್ಪ ದೂರದವರೆಗೆ ಹೆಣ್ಣಿನ ಮನೆಯ ಗಂಡಸರು ಅವರನ್ನು ಕಳಿಸಿಬರಲು ಹೋಗುತ್ತಾರೆ. ಈ ’ಇಳೇವು’ (ಈಗಿನ ನಿಶ್ಚಿತಾರ್ಥ) ಕಾರ್ಯಕ್ರಮದ ನಂತರ ಹುಡುಗಿ ಆಗಲೇ ಬೀಗರ ಸೊಸೆ ಎನ್ನುವಂತೆ  ಅಣಕಿಸುತ್ತಿರುತ್ತಾರೆ. ಹುಡುಗಿ ಕೂಡ ಗಂಡನ ಮನೆಯ ಪರವಾಗಿ ವಾದಿಸುತ್ತಾಳೆ. ಒಕ್ಕಲಿನ ಸಮಯ, ಎರಡೂ ಮನೆಯವರಿಗೆ ಸಂಬಂಧಿಸಿದಂತೆ ಯಾರಾದರೂ ಸತ್ತಿದ್ದ ಮೊದಲ ವರ್ಷದಲ್ಲಿ, ಮೊಹರಂ ನಂತರದ ಒಂದು ತಿಂಗಳಿನಲ್ಲಿ ಸಾಮಾನ್ಯವಾಗಿ ಮದುವೆ ಮಾಡುವುದಿಲ್ಲ.

ಪಿಂಜಾರರಲ್ಲಿ ’ಇಳೇವು’ ಶಾಸ್ತ್ರ ಮಾಡುವಾಗಲೇ ಮದುವೆ ಮುಹೂರ್ತ ಕುರಿತು ಚರ್ಚಿಸುತ್ತಾರೆ. ಎರಡೂ ಕಡೆಯವರಿಗೆ ಅನುಕೂಲವಾಗಬಹುದಾದ ದಿನಾಂಕವನ್ನು ಗುರುತು ಮಾಡುತ್ತಾರೆ. ಮತ್ತು ಈ ಬಗ್ಗೆ ಬ್ರಾಹ್ಮಣ ಪುರೋಹಿತರಲ್ಲಿ. ಕೆಲವೊಮ್ಮೆ ಮುಲ್ಲಾ ಬಳಿ ಹೋಗಿ ಶುಭಲಗ್ನದ ಮುಹೂರ್ತವನ್ನು ಗೊತ್ತು ಮಾಡಿಕೊಂಡು ಬಂದಿರುತ್ತಾರೆ. ಅದರಂತೆ ದಿನಾಂಕವನ್ನು ನಿಗದಿ ಮಾಡಿ ಆ ಸಂಬಂಧವಾಗಿ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ ಹಂಚುವ ಕಾರ್ಯಭಾರವನ್ನು ಗಂಡಿನ ಕಡೆಯವರಿಗೆ ವಹಿಸಲಾಗುತ್ತದೆ.

ಮದುವೆಗೆ ೨-೩ ದಿನಗಳಿವೆ ಎನ್ನುವಾಗ ಎರಡೂ ಮನೆಯವರು ತಮ್ಮ ಮನೆಗಳ ಮುಂದೆ ಚಪ್ಪರ ಹಾಕುತ್ತಾರೆ. ಚಪ್ಪರ ಹಾಕುವ ಮೊದಲು ಚಲ್ಕೆ, ಹಾರೆಕೋಲಿಗೆ ಗಂಧ ಹಚ್ಚುತ್ತಾರೆ. ಅಟ್ಟಕ್ಕೆ ಹಾಕುವ ಉದ್ದನೆಯ ಬೊಂಬು, ಈಚು, ದಂಡರನೊಗ ಮುಂತಾದುವನ್ನು ಅವರಿವರ ಮನೆಯಿಂದ ತೆಗೆದುಕೊಂಡು ಬಂದು ಮನೆಯಂಗಳದಲ್ಲಿ ಆಯ ನೋಡಿ ಚೌಕಾಕಾರವಾಗಿ ನೆಡುತ್ತಾರೆ. ಸಾಮಾನ್ಯವಾಗಿ ಐದು ಅಥವಾ ಒಂಬತ್ತು ಕಂಬಗಳನ್ನು ನೆಡಲಾಗುತ್ತದೆ. ಮೇಲೆ ಅಡ್ಡಲಾಗಿಗಳುಗಳನ್ನು ಬೀಸಿ ಕತ್ತದಿಂದ ಬಿಗಿದು ತೆಂಗಿನ ಗರಿಗಳನ್ನು ಹೊದಿಸಲಾಗುತ್ತದೆ. ಪ್ರತಿ ಕಂಬಕ್ಕೂ ಹಸಿ ತೆಂಗಿನಗರಿಯನ್ನು ಸುತ್ತುತ್ತಾರೆ. ಕಂಬಗಳಿಗೆ, ಮನೆಯ ಬಾಗಿಲಿಗೆ ಮಾವಿನ ತೋರಣವನ್ನು ಕಟ್ಟುತ್ತಾರೆ. ಅಡಿಕೆಯನ್ನಿಟ್ಟು ದುಂಡಗೆ ಮಾಡಿ ಕಟ್ಟುತ್ತಾರೆ. ಇದನ್ನು ಇಟ್ಟುವ ಹುಡುಗಿಗೆ ಮುಖದ ತುಂಬ ಮುಸುಕು ಹೊದಿಸಿರುತ್ತಾರೆ. ಪಿಂಜಾರ ಜನಾಂಗದ ಮದುವೆಗೆಳು ಸಾಮಾನ್ಯವಾಗಿ ಹೆಣ್ಣಿನ ಮನೆಯಲ್ಲಿ ನಡೆಯುತ್ತವೆ.

ಮದುವೆಯ ಹಿಂದಿನ ರಾತ್ರಿಯೇ ಗಂಡಿನ ಕಡೆಯವರೆಲ್ಲ ಹೆಣ್ಣಿಗೆ ಕೊಡಬೇಕದ ವಸ್ತ್ರಾಭರಣ ಮತ್ತಿತರ ಪದಾರ್ಥಗಳೊಂದಿಗೆ ಹೆಣ್ಣಿನ ಊರಿಗೆ ಬರುತ್ತಿದ್ದಂತೆ ಹೆಣ್ಣಿನವರು ವಾದ್ಯಸಮೇತವಾಗಿ ಅವರನ್ನ ಎದುರುಗೊಳ್ಳುತ್ತಾರೆ. ಅವರನ್ನು ಹೆಣ್ಣಿನ ಕಡೆಯವರದೇ ಆದ ಪ್ರತ್ಯೇಕವಾದ ಮನೆಯಲ್ಲಿ ಬಿಟ್ಟು ಅವರ ಊಟೋಪಚಾರದ ವ್ಯವಸ್ಥೆ ಮಾಡುತ್ತಾರೆ. ಗಂಡಿನವರಿಗೆ ಕೊಟ ಆ ಮನೆಗೆ ’ಬಿಡದಿ ಮನೆ’ ಎನ್ನುತ್ತಾರೆ. ಅದು ಹೆಣ್ಣಿನ ಮನೆಗೆ ಸ್ವಲ್ಪ ಹತ್ತಿರದಲ್ಲೇ ಇರುತ್ತದೆ. ಗಂಡು ಮತ್ತು ಹೆಣ್ಣಿನ ಮನೆಯಲ್ಲಿ ಅವರಿಬ್ಬರಿಗೆ ಸಂಬಂಧಪಟ್ಟವರು ಮಾಡಬೇಕಾದ ಶಾಸ್ತ್ರಗಳ ಏರ್ಪಾಡಿನಲ್ಲಿ ತೊಡಗುತ್ತಾರೆ.

ಒಂದು ಗೂಡೆಯಲ್ಲಿ ಹೆಣ್ಣಿಗೆ ಏಳು, ಗಂಡಿಗೆ ಒಂಬತ್ತರಂತೆ ಮಣ್ಣಿನ ಕುಡಿಕೆಗಳನ್ನಿಟ್ಟು ಅವುಗಳಲ್ಲಿ ಅಕ್ಕಿಕಾಳು ಹಾಕಿ ಹೆಣ್ಣಿನ ತಲೆಯ ಮೇಲಿರಿಸಿಕೊಂಡು ಹೆಣ್ಣುಮಕ್ಕಳು ಸೊನೆಯದವರ (ಸೊನೆಯದವರು ಎಂದರೆ ಚಲುವಾದಿ ಜನಾಂಗದವರನ್ನೇ ಇಂತಹ ಶುಭಕಾರ್ಯಗಳಿಗೆ ಪಿಂಜಾರರು ಕರೆದುಕೊಂಡು ಬರುತ್ತಾರೆ. ಊದುವ, ಬಡಿಯುವ ಹಲವು ಸಾಧನಗಳೊಂದಿಗೆ ಏಳೆಂಟು ಮಂದಿ ವಾದ್ಯದವರಿರುತ್ತಾರೆ) ಸಮೇತ ಬಾವಿಗೆ ಕರೆದೊಯ್ಯುತ್ತಾರೆ. ಬಾವಿಯಿಂದ ನೀರನ್ನೆಳೆದು ಆ ಎಲ್ಲ ಕುಡಿಕೆಗಳನ್ನು ವಧುವಿನ ಕೈಯಿಂದ ತೊಳೆಸುತ್ತಾರೆ. ಹಾಗೆ ಮತ್ತೆ ಮನೆಗೆ ಬರುತ್ತಾರೆ. ನಂತರ ಹೆಣ್ಣಿನ ಮನೆಯಲ್ಲಿ ಅರಿಸಿನ ಹಚ್ಚಿದ ಅಕ್ಕಿಯನ್ನು ಚೌಕಾಕಾರದಲ್ಲಿ ಹರಡಿ ಹೆಣ್ಣನ್ನು ಅದರ ಮೇಲೆ ಕೂರಿಸುತ್ತಾರೆ. ಇದೇ ರೀತಿ ಬಿಡದಿ ಮನೆಯಲ್ಲಿ ಗಂಡನ್ನೂ ಕೂರಿಸುತ್ತಾರೆ. ಹೆಣ್ಣಿಗೆ ಹೊಸ ಸೀರೆ, ಕುಬುಸ ತೊಡಿಸಿದ್ದರೆ ಗಂಡಿಗೆ ಹೊಸ ಪಂಚೆಯನ್ನು ಉಡಿಸುತ್ತಾರೆ. ಹೆಣ್ಣಿನ ಕಡೆಯ ಐದು ಜನ ಮುತ್ತೈದೆಯರು ಬಿಡದಿ ಮನೆಗೆ ಹೋಗಿ ಗಂಡಿಗೆ ಅರಿಶಿಣ ಹಚ್ಚಿ ಅಕ್ಕಿಕಾಳನ್ನು ಕೈಯಲ್ಲಿ ಹಿಡಿದುಕೊಂಡು ಎರಡೂ ಕೈಯಿಂದ ಗಂಡನ ಮೊಣಕಾಲು, ಭುಜ ಮತ್ತು ತಲೆಗೆ ಮುಟ್ಟಿಸಿ ಅಕ್ಕಿಕಾಳನ್ನು ಉದುರಿಸುತ್ತಾರೆ. ಇದಾದ ನಂತರ ಗಂಡಿನ ಕಡೆಯ ಐದು ಜನ ಮುತ್ತೈದೆಯರು ಹೆಣ್ಣಿನ ಮನೆಗೆ ಬಂದು ಹೆಣ್ಣಿಗೆ ಅರಿಶಿನ ಹಚ್ಚುತ್ತಾರೆ. ಪಾದದಿಂದ ಮೊಣಕಾಲವರೆಗೆ, ಭುಜದಿಂದ ಅಂಗೈಯವರೆಗೆ, ಕೆನ್ನೆಗಳಿಗೆ ಅರಿಶಿಣವನ್ನು ಹಚ್ಚಿ ತೀಡುತ್ತಾರೆ. ಹೀಗೆ ಒಬ್ಬರಾದ ನಂತರ ಒಬ್ಬರಂತೆ ಅರಿಶಿಣ ಹಚ್ಚುತ್ತಾ, ಬೆಳಗಾಗುವವರೆಗೆ ಸುಮಾರು ಗಂಡಿಗೆ ಒಂಬತ್ತು ಸಲ, ಹೆಣ್ಣಿಗೆ ಏಳು ಸಲ ಅರಿಶಿಣ ಹಚ್ಚುವ ಕಾರ್ಯಕ್ರಮ ನಡೆಯುತ್ತದೆ. ಈ ಇಡೀ ಕಾರ್ಯಕ್ರಮ ಹೆಣ್ಣು ಮಕ್ಕಳದ್ದು. ಯಾರೂ ನಿದ್ದೆ ಮಾಡದೆ ಅತ್ಯಂತ ಸಡಗರದಿಂದ ಎಲ್ಲ ಹೆಣ್ಣುಮಕ್ಕಳು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಗಂಡಸರು ಬೀಡಿ ಸೇದಿಕೊಂಡು ಅದೂ ಇದೂ ಮಾತನಾಡುತ್ತ, ಆಗಾಗ್ಗೆ ಹೆಣ್ಣು ಮಕ್ಕಳಿಗೆ ಸಹಕರಿಸುತ್ತ, ಮತ್ತೆ ಕೆಲವರು ನೀರು ತರುವುದು, ಮರುದಿನದ ನಿಖಾ ಸಮಯಕ್ಕೆ ಬೇಕಾದ್ದನ್ನೆಲ್ಲ ಜೋಡಿಸುವುದು, ಬೀಗರು ಯಾರು ಬರಲಿಲ್ಲ. ಯಾರು ಬಂದರು ಇತ್ಯಾದಿ ಹರಟುತ್ತ ಇರುತ್ತಾರೆ. ಇಡೀ ರಾತ್ರಿ ಹೆಣ್ಣು ಮಕ್ಕಳು ಸಂಭ್ರಮದಲ್ಲಿ, ಗಂಡು -ಹೆಣ್ಣು ಪ್ರತ್ಯೇಕವಾಗಿದ್ದರೂ ಪರಸ್ಪರರ ಬಗ್ಗೆ ತಿಳಿಯುವ ಕಾತುರದಲ್ಲಿರುತ್ತಾರೆ. ಅರಿಶಿಣ ಹಚ್ಚುವ ಮುತ್ತೈದೆಯರು ಹೆಣ್ಣಿನ ಬಗ್ಗೆ ಹತ್ತಿರ ಗಂಡಿನ ಬಗ್ಗೆ ಹೆಣ್ಣಿನ ಹತ್ತಿರ ಸೊಗಸಾಗಿ ಹೇಳುತ್ತಿರುತ್ತಾರೆ. ಗಂಡಿಗೆ ಹೆಣ್ಣಿನ ಮನೆಯವರು ವಿಶೇಷ ಅಡಿಗೆ ಮಾಡಿರುತ್ತಾರೆ. ಆತನ ಜೊತೆಯಲ್ಲಿ ನಾಲ್ಕು ಜನ ಗಂಡಿನ ಕಡೆಯವರು ಅಥವಾ ಗೆಳೆಯರು ಕೂತು ಅದನ್ನು ಉಣ್ಣಬೇಕು. ಖರ್ಜಿಕಾಯಿ, ತುಪ್ಪ, ಅನ್ನ, ಸಾರನ್ನು ಅವರಿಗೆ ವಿಶೇಷ ಮುತುವರ್ಜಿಯಿಂದ ಬಡಿಸಲಾಗುತ್ತದೆ. ಇದೇ ರೀತಿ ಹೆಣ್ಣಿಗೂ ಊಟವಿರುತ್ತದೆ. ರಾತ್ರಿಯೆಲ್ಲ ಅರಿಶಿಣ ಹಚ್ಚಿಕೊಂಡು ನಿದ್ದೆಯಿಲ್ಲದೆ ಬಳಲಿದಂತಿದ್ದ ಗಂಡು -ಹೆಣ್ಣಿಗೆ ಪ್ರತ್ಯೇಕವಾಗಿಯೇ ಬಿಸಿ ನೀರಿನಲ್ಲಿ ಬೆಳ್ಳಿಗ್ಗೆ ಮೈತೊಳೆಯಲಾಗುತ್ತದೆ. ಗಂಡಿನ ಮಾವ ಅಥವಾ ಅಳಿಯಂದಿರು ಗಂಡಿಗೆ, ಹೆಣ್ಣಿನ ಅತ್ತೆ ಅಥವಾ ಗಂಡಿನ ಕಡೆಯ ಹೆಂಗಸರು ಹೆಣ್ಣಿನ ಸ್ನಾನ ಮಾಡಿಸುತ್ತಾರೆ. ಆಗಲೇ ಪರಸ್ಪರರು ಕೊಡಬೇಕಾದ ವಸ್ತ್ರಾಭರಣಗಳ ವಿನಿಮಯವಾಗುತ್ತದೆ. ಮಾವ ಅಥವಾ ಅಳಿಯಂದಿರಿಂದ ಮೈ ತೊಳಸಿಕೊಂಡು ಗಂಡು ಒಂಬತ್ತು ಅಥವಾ ಹದಿನೈದು ರೂಪಾಯಿಗಳನ್ನುದ ಅವರಿಗೆ ಕೊಡುತ್ತಾನೆ. ಗಂಡಿಗೆ ಬಿಳಿಯ ಉದ್ದನೆಯ ತೋಳಿನ ಅಂಗಿ, ಒಂದು ಟವೆಲ್ಲು, ಬಿಳಿಯ ಪಂಜೆಯನ್ನು ಕೊಡುತ್ತಾರೆ. ಅವನಿಗೆ ಬಟ್ಟೆ ತೊಡಿಸಿ ತಲೆಗೆ ರುಮಾಲು ಕಟ್ಟಿ ಕೂರಿಸುತ್ತಾರೆ. ಹೆಣ್ಣಿನ ಮನೆಯಿಂದ ಶಾವಿಗೆ ಹುಗ್ಗಿ, ಮೊಟ್ಟೆಸಾರು, ಅನ್ನ ಎಲ್ಲ ತೆಗೆದುಕೊಂಡು ವಾದ್ಯಮೇಳದೊಂದಿಗೆ ಗಂಡಿಗೆ ಒಯ್ದು ಕೊಡುತ್ತಾರೆ. ಹೆಣ್ಣಿನ ಮನೆಯ ಇಬ್ಬರು ಗಂಡಸರು ಮತ್ತು ಗಂಡಿನ ಮನೆಯ ಇಬ್ಬರೊಂದಿಗೆ ಆತ ಊಟ ಮಾಡಬೇಕು. ನಂತರ ಆತನಿಗೆ ಉಂಗುರ, ಕೊರಳಸರ, ಚಪ್ಪಲಿ ಎಲ್ಲ ಕೊಟ್ಟು ತೊಡಿಸಿ ’ಸೇರ’ ಕಟ್ಟಿ ಕುದುರೆಯ ಮೇಲೆ ಕೂರಿಸಿ ವಾದ್ಯದೊಂದಿಗೆ ಮಸೀದಿಗೆ ಆತನನ್ನು ಕರೆದೊಯ್ಯಲಾಗುತ್ತದೆ. ಈ ಮದಲಿಂಗನಿಗೆ ಮುಲ್ಲಾ ನಮಾಜಿ ಹೇಳಿಕೊಡುತ್ತಾನೆ. ಮುಲ್ಲಾ ಹೇಳಿದಂತೆ ಮಾಡಿತೋರಿಸಿದಂತೆ ಗಂಡು ಅನುಸರಿಸುತ್ತಾನೆ. ಅವನೊಂದಿಗೆ ಎರಡೂ ಕಡೆಯ ಗಂಡಸರೂ ಮಸೀದಿಗೆ ಹೋಗಿದ್ದರೂ ಎಲ್ಲರೂ ನವಾಜು ಮಾಡುವುದಿಲ್ಲ. ನವಾಜಿನ ನಂತರ ನೇರವಾಗಿ ಬಂದು ಹೆಣ್ಣಿನ ಮನೆಯ ಮುಂದಿನ ಚಪ್ಪರದ ಕೆಳಗೆ ಹಾಕಿದ ಮಂಚದ ಮೇಲೆ ಮದಲಿಂಗನನ್ನು ಕೂರಿಸಲಾಗುತ್ತದೆ.

ಈ ಕಡೆ ಗಂಡಿನ ಕಡೆಯ ಹೆಂಗಸರು ಖರ್ಜಿಕಾಯಿ, ಹಣ್ಣು, ಕೊಬ್ಬರಿ, ಉತ್ತುತ್ತಿ, ಮದುವೆ ಸೀರೆ, ಉಡುತಾರದ ಸೀರೆ, ಹಸುರಿಳೆ ಸೀರೆ, ಕುಬುಸ, ಎಲೆ, ಅಡಿಕೆ, ತಾಳಿಯನ್ನಿಟ್ಟುಕೊಂಡು ಬಂದು ಹೆಣ್ಣಿನ ಸಿಂಗಾರದಲ್ಲಿ ತೊಡಗುತ್ತಾರೆ. ಹೆಣ್ಣಿಗೆ ಒಟ್ಟು ಐದು ಬಗೆಯ ಸೀರೆಯನ್ನು ಕೊಡುತ್ತಾರೆ. ಮದುವೆ ಸೀರೆ, ಉಡುತಾರದ ಎರಡು ಸೀರೆ, ಹಸುರಿಳೆ ಸೀರೆ, ಸಾಲಿಜೋಡು (ಹೆಣ್ಣಿನ ತಂಗಿಗೆ ಕೊಡುವ ಸೀರೆ) ಸೀರೆಯ ಜೊತೆಗೆ ಧಾರ ಸೀರೆ ಪ್ರತ್ಯೇಕವಾದದ್ದು, ವಧುವಿನ ಹೊರತಾಗಿ ಉಳಿದ ಹೆಣ್ಣುಮಕ್ಕಳು ಚಪ್ಪರದಡಿಯಲ್ಲಿ ಮದಲಿಮಗನ ಮುಂಭಾಗದಲ್ಲಿ ಕುಳಿತಿರುತ್ತಾರೆ. ಊರಿನ ಎಲ್ಲ ಜನಾಂಗದ ಆಪ್ತರು ಬಂದು ಸೇರಿರುತ್ತಾರೆ. ತಲೆಗೆ ಸೇರ ಕಟ್ಟಿಕೊಂಡು ಮುಖದ ತುಂಬ ಮಲ್ಲಿಗೆಯ ಸರವನ್ನು ಮರೆಮಾಡಿಕೊಂಡು ಕುಳಿತ ಮದಲಿಂಗನ ಬಳಿ ಮುಲ್ಲಾ ಗುರುವಿನ ಸ್ಥಾನದಲ್ಲಿ ಕೂರುತ್ತಾನೆ. ಆತನ ಕೈಯಲ್ಲಿ ಪುಸ್ತಕವೊಂದಿರುತ್ತದೆ. ಆದರಿಂದ ಏನನ್ನೋ ಆತ ಓದುತ್ತಾನೆ. ಎಲ್ಲ ಜನ ನಿಶ್ಯಬ್ಧರಾಗಿ ಅದನ್ನು ಕೇಳುತ್ತಾರೆ. ಅದು ಅರಬ್ಬಿ/ಉರ್ದುವಾದ್ದರಿಂದ ಪಿಂಜಾರರಿಗೆ ಅದೇನೆಂದು ತಿಳಿಯುವುದಿಲ್ಲ. ಮದಲಿಂಗನ ಮುಂದೆ ಚಿತ್ರಾಕಾರದ ಹಿತ್ತಾಳೆಯ ತಟ್ಟೆಯೊಂದರಲ್ಲಿ ದಸ್ತರ್‌ಖಾನಿ ಹಾಸಿ ಅದರ ಮೇಲೆ ಹೆಣ್ಣಿನ ಧಾರೆಸೀರೆ, ತಾಳಿ ಮತ್ತೊಂದು ತಟ್ಟೆಯಲ್ಲಿ ಉತ್ತುತ್ತಿ, ದ್ರಾಕ್ಷಿ, ಕೊಬ್ಬರಿ, ಕಲ್ಲುಸಕ್ಕರೆ, ಬಾದಾಮಿಗಳಿರುತ್ತದೆ. ಐದಾರು ನಿಮಿಷದ ಓದಿನ ನಂತರ ಮುಲ್ಲಾ ಲೆಡ್ಜರ‍್ ತರದ ಪುಸ್ತಕವೊಂದರಲ್ಲಿ ಹೆಣ್ಣು ಮತ್ತು ಗಂಡಿನ ತಂದೆ-ತಾಯಿಗಳ ಹೆಸರು, ವಧು -ವರರ ಹೆಸರು ಮತ್ತು ಸಾಕ್ಷಿಯಾಗಿ ಮೂರು =ನಾಲ್ಕು ಜನರ ಹೆಸರನ್ನು ಬರೆದು ಮದುವೆಯನ್ನು ರಿಜಿಸ್ಟರ‍್ ಮಾಡುತ್ತಾನೆ. ಈ ರಿಜಿಸ್ಟರ‍್ ಮಾಡುವಾಗಲೇ, ಇದೆಲ್ಲ ಎಲ್ಲರಿಗೂ ಕೇಳುವಂತೆ ಹೇಳಲಾಗುತ್ತದೆ. ಗಂಡು ಮುಂದೆ ಹೆಣ್ಣನ್ನು ಬಿಡುವಂತಹ ಸಂದರ್ಭದಲ್ಲಿ ಇಂತಿಷ್ಟು ಮೊತ್ತದ ಹಣವನ್ನು ಹೆಣ್ಣಿಗೆ ಜೀವನಾಂಶದ ರೂಪದಲ್ಲಿ ಕೊಡಬೇಕೆಂದು ಹೇಳಲಾಗುತ್ತದೆ. ಗಂಡು ಮುಂದೆ ಹೆಣ್ಣನ್ನು ಬಿಡುವಂತಹ ಸಂದರ್ಭದಲ್ಲಿ ಇಂತಿಷ್ಟು ಮೊತ್ತದ ಹಣವನ್ನು ಹೆಣ್ಣಿಗೆ ಜೀವನಾಂಶದ ರೂಪದಲ್ಲಿ ಕೊಡಬೇಕೆಂದು ತೀರ್ಮಾನಿಸಿ ಗಂಡಿನ ಒಪ್ಪಿಗೆಯನ್ನು ಕೇಳಲಾಗುತ್ತದೆ. ಆ ಹಣವನ್ನು ’ಮಹರ‍್’ (ಪಿಂಜಾರರ ಮಾತಿನಲ್ಲಿ ಮಾರಿನ ಹಣ) ಎಂದು ಕರೆಯುತ್ತಾರೆ. ಗಂಡು ಒಪ್ಪಿದ ನಂತರ ವಧುವನ್ನು ಕೂಡ ಹೆಂಡತಿಯಾಗಿ ಒಪ್ಪಿದ ಬಗ್ಗೆ ಆತನ ಅಭಿಪ್ರಾಯವನ್ನು ಕೇಳುತ್ತಾರೆ. ಈ ಗಂಡಿಗೆ ಉರ್ದು ಉಚ್ಛಾರಣೆ ಕಷ್ಟಕರವಾದ್ದರಿಂದ ಮುಲ್ಲಾ ಗಂಡು ಹೇಳಬೇಕಾದ ಅಭಿಪ್ರಾಯವನ್ನು ಮಕ್ಕಳಿಗೆ ಹೇಳಿಕೊಟ್ಟಂತೆ ಹೇಳಿಕೊಡುತ್ತಾನೆ. ಮುಲ್ಲಾ ಹೇಳಿದಂತೆ ಮದಲಿಂಗ ಆ ಮಾತುಗಳನ್ನು ಮೂರು ಬಾರಿ ಹೇಳಿದರೆ ನಿಖಾಃ ಮುಗಿಯುತ್ತದೆ. ಮುಲ್ಲಾಮೊದಲು ಉರ್ದುವಿನಲ್ಲಿ ಹೀಗೆನ್ನುತ್ತಾನೆ:  ’ನಜೀರ್‌ಸಾಬ್‌ಕೆ ನೇಕ್ ದುಕ್ತರ‍್ ಜೋ ದೋ ಹಜರತ್ ಕೆ ಗವಾಯಿಸೆ ರಫಿಯಾ ಕೆ ಸಾತ್ ತುಮಾರ ಜೋಡ ಕಿಯಾ ಔರ‍್ ನಿಖಾಃ ಕಿಯ, ಕ್ಯಾ ತುಮ್ ಕುಬಲ್ ಕಿಯಾ’ (ಉದಾಹರಣೆಗಾಗಿ ಆ ಹೆಸರುಗಳನ್ನು ಕೊಡಲಾಗಿದೆ ಅಷ್ಟೆ). ಅದಕ್ಕೆ ಹೇಳುವ ಉತ್ತರವನ್ನು ಮುಲ್ಲಾ ಗಂಡಿಗೆ ಹೇಳಿಕೊಡುತ್ತಾನೆ. ಅದು ಹೀಗಿದೆ; ’ಅಲ್ಲಹಮ್ದುಲಿಲ್ಲ ಮೈನೆ ಕುಬುಲ್ ಕಿಯಾ’ ಈ ಮಾತನ್ನು ಮೂರು ಸಲ ಹೇಳಿದ ತಕ್ಷಣ ತಟ್ಟೆಯಲ್ಲಿದ್ದ ಬಿಸ್ಕತ್ತು, ಉತ್ತುತ್ತಿ, ಕಲ್ಲುಸಕ್ಕರೆ, ದ್ರಾಕ್ಷಿ, ಕೊಬ್ಬರಿಗಳನ್ನೆಲ್ಲ ಚಪ್ಪರದಡಿಯಲ್ಲಿ ಕುಳಿತಿದ್ದ ಜನರ ಕಡೆ ತೂರಲಾಗುತ್ತದೆ. ಜನ ಕೂಡ ತಮ್ಮ ಕೈಲಿದ್ದ ಅರಿಶಿಣ ಹಚ್ಚಿದ ಅಕ್ಕಿಕಾಳನ್ನು ಮದಲಿಂಗನ ಕಡೆ ತೂರುತ್ತಾರೆ. ಉತ್ತುತ್ತಿ ಇತ್ಯಾದಿಗಳನ್ನು ಆರಿಸಿಕೊಂಡು ತಿನ್ನುತ್ತಾರೆ. ಗಂಡಿನ ಒಪ್ಪಿಗೆಯ ನಂತರ ಪುಸ್ತಕದಲ್ಲಿ ಆತನ ಸಹಿ ಹಾಕಿಸಿಕೊಳ್ಳುತ್ತಾನೆ. (ಅಕ್ಷರಸ್ಥನಲ್ಲದಿದ್ದರೆ ಹೆಬ್ಬಟ್ಟು ಗುರುತು ಹಾಕಿಸಿ -ಕೊಳ್ಳಲಾಗುತ್ತದೆ). ತಕ್ಷಣ ಅದೇ ಪುಸ್ತಕದೊಂದಿಗೆ ಹೆಣ್ಣಿನ ತಾಳಿ, ಧಾರೆಸೀರೆಯಿರುವ ತಟ್ಟೆಯನ್ನು ಹೆಣ್ಣಿನ ಬಳಿ ಅತ್ತೆಯರಾದವರ ಕೈಲಿ ಕಳಿಸಿಕೊಡಲಾಗುತ್ತದೆ. ಆಗ ಹೆಣ್ಣಿಗೆ ಮದುವೆ ಸೀರೆ ಉಡಿಸಿ ಅಕ್ಕಿಯ ಹಸೆ ಬರೆದು ಆಕೆಗೆ ಸೇರ ಕಟ್ಟಿ ಐದು ಜನ ಮುತ್ತಯದೆಯರು ಗಂಧ ಹಚ್ಚಿ ತಾಳಿಯನ್ನು ಅಲ್ಲಿ ನೆರೆದಿದ್ದ ಹೆಣ್ಣು ಮಕ್ಕಳಿಗೆಲ್ಲ ತೋರಿಸಿ ಒಪ್ಪಿಗೆ ಪಡೆಯುತ್ತಾರೆ. ನಂತರ ಅತ್ತೆಯಾದವಳು ಅಥವಾ ನಾದಿನಿಯರು ಹೆಣ್ಣಿಗೆ ತಾಳಿ ಕಟ್ಟುತ್ತಾರೆ ಮತ್ತು ಪುಸ್ತಕದಲ್ಲಿ ಸಹಿ ಹಾಕಿಸಿಕೊಳ್ಳುತ್ತಾರೆ.

ಮಸೀದಿಯಿಂದ ನಮಾಜು ಮುಗಿಸಿಕೊಂಡು ಹೆಣ್ಣಿನ ಮನೆಯತ್ತ ಬಂದಾಗ ಗಂಡಿಗೆ ಅಡ್ಡವಾಗಿ ಒನಕೆ ಹಿಡಿಯುವುದು ಮತ್ತು ನಿಖಾಃದ ನಂತರ ಜಡೆ ಬಿಚ್ಚುವ ಶಾಸ್ತ್ರ ಎಂದು ಮಾಡುವ ಆಚರಣೆಗಳು ಪಿಂಜಾರರ ಮದುವೆಯ ವಿಶಿಷ್ಟತೆಯ ಕುರುಹಾಗಿವೆ. ಗುಂಡು ನಮಾಜಿನ ನಂತರ ವಾದ್ಯಮೇಳಗಳೊಂದಿಗೆ ಚಪ್ಪರದಡಿ ಬರುತ್ತಿದ್ದಮತೆ ಅತನಿಗೆ ಅಳಿಯರಾದವರು ಒನಕೆಯನ್ನು ತಂದು ಆತ ಬರದಂತೆ ತಡೆಯುತ್ತಾರೆ. ಉಳಿದ ಜನಾಂಗದವರಿಗೆ ಇದು ಆಶ್ಚರ್ಯಕರವಾಗಿ ಕಾಣುತ್ತದೆ. ವರನಾದವನು ಹೆಣ್ಣನ್ನು ಮದುವೆಯಾಗಬೇಕಾದರೆ ಈ ಒನಕೆಯನ್ನು ತಳ್ಳಿಕೊಂಡು ನುಗ್ಗಿ ಬರಬೇಕು. ಇಲ್ಲವಾದರೆ ಹಾಗೆ ಒನಕೆ ಹಿಡಿದವರಿಗೆ ಐದೋ ಹತ್ತೋ ರೂಪಾಯಿ ಕೊಟ್ಟು ದಾರಿ ಬಿಡುವಂತೆ ಅವರ ಮನ ಒಲಿಸಬೇಕು. ಸಾಮಾನ್ಯವಾಗಿ ರೊಕ್ಕ ಕೊಟ್ಟುಬರುತ್ತಾರೆ. ಈ ಒನಕೆಯ ಶಾಸ್ತ್ರ ಏನನ್ನು ಸಂಕೇತಿಸುತ್ತದೆ ಅನ್ನುವುದು ಕುತೂಹಲಕಾರಿಯಾದುದು.

ನಿಖಾಃದ ನಂತರ ಮತ್ತೆ ಅದೇ ಅಳಿಯಂದಿರು ಒಂದು ಚಂಬಿನಲ್ಲಿ ನೀರು ತುಂಬಿಕೊಂಡು ಅಗಲವಾದ ಪಾತ್ರೆಯಂತಹದರ ಮೇಲೆ ದಸ್ತರಖಾನಿ (ಚಿತ್ರಾಕಾರದ, ಬಣ್ಣ ಬಣ್ಣದ ದಾರದಿಂದ ಹೆಣೆದಬಟ್ಟೆ) ಮುಚ್ಚಿಕೊಂಡು ಮಾವನ (ಮದುಮಗ) ಬಾಯಿ ತೊಳೆಸುವುದಕ್ಕೆ ಬರುತ್ತಾರೆ. ಇದು ಬಾಯಿ ತೊಳೆಸುವ ಶಾಸ್ತ್ರ. ಅಳಿಯರು ಕೊಟ್ಟ ನೀರನ್ನು ಬಾಯಲ್ಲಿ ಹಾಕಿಕೊಂಡು ಮುಕ್ಕಳಿಸಿ ದಸ್ತರಖಾನಿಯಲ್ಲಿ ಆತ ಉಗುಳಬೇಕು. ಹಾಗೆ ಉಗುಳುವಾಗ ಬರೀ ನೀರನ್ನು ಉಗುಳಿದರೆ ಅಳಿಯಂದಿರು ಸುಮ್ಮನಿರುವುದಿಲ್ಲ. ’ರೊಕ್ಕ ಉಗುಳು’ ಎಂದು ಕೇಳುತ್ತಾರೆ. ಆತ ಬಾಯಲ್ಲಿ ನಾಲ್ಕಾಣೆ, ಎಂಟಾಣೆ ನಾಣ್ಯವನ್ನಿಟ್ಟುಕೊಂಡು ನೀರಿನೊಂದಿಗೆ ಮುಕ್ಕಳಿಸಿ ಉಗುಳುತ್ತಾನೆ. ದಸ್ತಾರಖಾನಿಯ ಮೇಲೆ ಉಳಿದ ನಾಣ್ಯವನ್ನು ಅಳಿಯಂದಿರು ತೆಗೆದುಕೊಳ್ಳುತ್ತಾರೆ. ಇದಾದ ನಂತರ ಸಾಮೂಹಿಕ ಭೋಜನ ನಡೆಯುತ್ತದೆ. ಪಿಂಜಾರರ ಮದುವೆಯಲ್ಲಿ ಸಾಮಾನ್ಯವಾಗಿ ಗೋಧಿ, ಹುಗ್ಗಿ, ಅನ್ನ ಬೇಳೆಸಾರು ಮಾಡಿರುತ್ತಾರೆ. ಈ ಅಡಿಗೆ ಮಾಡುವುದು ಕೂಡ ಪಿಂಜಾರರ ಮೂಲಾಶ್ರಮದ ಆಚರಣೆಯ ಕಾರಣದಿಂದಾಗಿ ಎನಿಸುತ್ತದೆ. ಪಿಂಜಾರರ ಮದುವೆಗೆ ಹಿಂದೂ ಜನಾಂಗದ ಅನೇಕ ಪಂಗಡದವರು ಸ್ವಯಂ ಆಸಕ್ತಿಯಿಂದ ಬರುತ್ತಾರೆ. ಅದರಲ್ಲಿ ಸಸ್ಯಹಾರಿಗಳೂ ಇರುತ್ತಾರೆ. ಅಲ್ಲದೆ ಬಂದವರಿಗೆಲ್ಲ ಮಾಂಸದೂಟ ಹಾಕುವಂತಹ ಸ್ಥಿತಿವಂತಿಕೆಯೂ ಪಿಂಜಾರರಿಗಿಲ್ಲ. ಹಾಗಾಗಿ ಸವಿಯೂಟ ಅವರ ಮದುವೆಯಲ್ಲಿ ತೀರಾ ಸಾಮಾನ್ಯ. ಎಲ್ಲ ಜನಾಂಗದವರೂ ಒಟ್ಟಿಗೆ ಕೂತು ಊಟ ಮಾಡುತ್ತಾರೆ. ಕೆಲವು ಮಡಿವಂತ ಹಿಂದೂ ಬಾಂಧವರು ಊಟ ಮಾಡದಿದ್ದರೂ ಉತ್ಸಾಹದಿಂದ ಓಡಾಡಿಕೊಂಡು ಊಟ ಬಡಿಸುತ್ತಾರೆ. ಮನೆಯ ಒಳಗೇ ಎಲೆಯಲ್ಲಿ ಊಟ ಬಡಿಸುತ್ತಾರೆ, ಹೊರಗೆ ಕೈತೊಳೆಯಲು ನೀರಿಟ್ಟಿರುತ್ತಾರೆ. ಮದಲಿಂಗನ ಹತ್ತಿರದಲ್ಲೇ ತಟ್ಟೆಯಲ್ಲಿ ಎಲೆ ಅಡಿಕೆ ಸುಣ್ಣ ಇಟ್ಟಿರುತ್ತಾರೆ. ಊಟ ಮುಗಿಸಿದವರು ಮದಲಿಂಗನನ್ನು ಮಾತಾಡಿಸಿ, ಉಡುಗೊರೆ ಕೊಡುವವರು ಕೊಟ್ಟು ಎಲೆ ಅಡಿಕೆ ಹಾಕುತ್ತ ಹರಟುತ್ತ ಹೊರಡುತ್ತಾರೆ.

ಎಲ್ಲರ ಊಟದ ನಂತರ ಒಂದು ಕುತೂಹಲಕರ ಮನರಂಜನೆ ನಡೆಯುತ್ತದೆ. ಮದಲಿಂಗ ಸೇರ ಬಿಚ್ಚಿ ಸಾಧಾರಣ ಉಡುಪಿನಲ್ಲಿ ಚಪ್ಪರದಡಿಯಲ್ಲಿ ಕುಳಿತಿರುತ್ತಾನೆ. ನೆರೆದಿದ್ದವರು ಹೆಂಡತಿಯನ್ನು ಕರೆತರುವಂತೆ ಆತನಿಗೆ ಒತ್ತಾಯಿಸುತ್ತಾರೆ. ಆಕೆ ಬರದಿದ್ದರೆ ಹೊತ್ತು ತರಲು ಹೇಳುತ್ತಾರೆ. ಈ ಕಡೆ ಒಳಗೆ ಗಂಡಸೊಬ್ಬನಿಗೆ ಸೀರೆ ಉಡಿಸಿ ಕೆಂಪನೆಯ ಬಟ್ಟೆಯೊಂದನ್ನು ಮುಚ್ಚಿ ಕೂರಿಸಿರುತ್ತಾರೆ. ಮದಲಿಂಗ ಒಳಗೆ ಹೋದವನೆ ಸೀರೆಯುಟ್ಟು ಕುಳಿತಿದ್ದ ವ್ಯಕ್ತಿಯನ್ನು ಹೊರುತ್ತಾನೆ. ಹೊತ್ತು ತಂದು ಹೊರಗೆ ಜನರ ನಡುವೆ ಎತ್ತಿ ಬಿಡುತ್ತಾನೆ. ಎಲ್ಲರೂ ನಗುತ್ತಾರೆ. ಹಾಗೆ ಅಳಿಯನನ್ನು ಬೇಸ್ತು ಬೀಳಿಸುವಂತೆ ಸೀರೆಯುಟ್ಟುಕೊಂಡ ವ್ಯಕ್ತಿ ಸಾಮಾನ್ಯವಾಗಿ ಸೋದರ ಮಾವನಾಗಿರುತ್ತಾನೆ. ಕೆಳಗೆ ದಪ್ಪಂತ ಬಿದ್ದರೂ ಈತ ಖುಷಿಯಿಂದ ನಗುತ್ತಾನೆ.

ಇದಾದ ನಂತರ ಕೆಂಪನೆಯ ವಸ್ತ್ರವೊಂದನ್ನು ಮುಚ್ಚಿಕೊಂಡ ವಧುವನ್ನು ಮದಲಿಂಗನ ಹತ್ತಿರ ಕರೆತರುತ್ತಾರೆ. ಹೆಣ್ಣಿಗೆ ಎರಡೂ ಕೆನ್ನೆಗಳ ಮೇಲ್ಭಾಗದಲ್ಲಿ ಒಂದು ಕಡೆ ಐದು ಮತ್ತೊಂದು ಕಡೆ ನಾಲ್ಕು ಚಿಕ್ಕ ಜಡೆಗಳನ್ನು ಹೆಣೆದಿರುತ್ತಾರೆ. ಹೆಣ್ಣನ್ನು ಗಂಡಿನ ಎದುರಿಗೆ ಕೂರಿಸಿ ನಡುವೆ ಮುಖ ಕಾಣದಂತೆ ಪರದೆ ಹಿಡಿಯುತ್ತಾರೆ. ಉಡಿದಾರಕ್ಕೆ ಉಂಗುರ ಕಟ್ಟಿ ಅದರ ಒಂದು ತುದಿಯನ್ನು ಗಂಡಿನ ಕೈಯಲ್ಲಿ ಕೊಡುತ್ತಾರೆ. ಆತ ಉಂಗುರವನ್ನು ಪರದೆಯಾಚೆ ಇರುವ ಹೆಣ್ಣಿನ ಕಡೆಗೆ ತೂರುತ್ತಾನೆ. ಹೆಣ್ಣು ಅದೇ ರೀತಿ ಉಂಗುರವನ್ನು ಗಂಡಿನ ಕಡೆಗೆ ತೂರುತ್ತಾಳೆ. ಹೀಗೆ ಸ್ವಲ್ಪ ನಡೆಯುತ್ತದೆ. ಪರದೆ ತೆಗೆಯುತ್ತಾರೆ. ಸುಮಾರು ಒಂಬತ್ತು ಅಡಕೆಯನ್ನು ಗಂಡಿನ ಕೈಯಲ್ಲಿ ಕೊಟ್ಟು ಹೆಣ್ಣಿನ ಬೈತಲೆಗೇರಿಸುವಂತೆ ಹೇಳುತ್ತಾರೆ. ಬಲಗೈಯಲ್ಲಿ ಅಡಕೆಯನ್ನು ಹೆಣ್ಣಿನ ಬೈತಲೆಗೇರಿಸುತ್ತಲೇ ಎಡಗೈಯಲ್ಲಿ ಹೆಣ್ಣಿಗೆ ಹಾಕಿರುವ ಪುಟ್ಟ ಜಡೆಗಳಲ್ಲಿ ಒಂದು ಭಾಗದ ಜಡೆಗಳನ್ನು ಬಿಚ್ಚಬೇಕು.ಏಕಕಾಲಕ್ಕೆ ಎರಡು ಕೈಯಿಂದ ಬೇರೆ ಬೇರೆ ಕೆಲಸಗಳನ್ನು ನಿರ್ವಹಿಸಲಾಗದ ಗಂಡು ನಾಚುತ್ತಲೇ ಮತ್ತೆ ಮತ್ತೆ ಪ್ರಯತ್ನಿಸುತ್ತಾನೆ. ಕೊನೆಗೂ ಅವನಿಂದಾಗುವುದಿಲ್ಲ. ಹೆಂಗಸರು ಜಡೆಬಿಚ್ಚಲಾಗದ ಗಂಡನ್ನು ಜರೆಯುತ್ತಾರೆ. ಅಳಿಯಂದಿರು ಜಡೆ ಬಿಚ್ಚಲಾಗದ ಮಾವನ ಕೈಯಿಗೆ ವಸ್ತ್ರವೊಂದರಿಂದ ಕಟೆಯುತ್ತಾರೆ. ಎರಡೂ ಕೈಗಳನ್ನೂ ಬಳಸಿದಾಕ್ಷಣ ಕೈಗೆ ಹೊಡೆಯುತ್ತಾರೆ. ಕಡೆಗೆ ಹೆಂಗಸರು ಗಂಡನ್ನೂ ಚುಡಾಯಿಸುತ್ತ ತಾವೇ ಜಡೆಗಳನ್ನು ಬಿಚ್ಚುತ್ತಾರೆ. ಹೆಣ್ಣಿನ ಮುಖ ಮಾತ್ರ ಕಾಣುವಂತೆ ಗಂಡನ ಎದುರು ಕುಳಿಸಿರುತ್ತಾರೆ. ಇದೆಲ್ಲ ಸರಸ, ಮನರಂಜನೆ ಮುಗಿದ ನಂತರ ಹುಡುಗಿಯನ್ನು ಗಂಡಿನ ಪಕ್ಕ ಕೂರಿಸಿ ಗಂಡು – ಹೆಣ್ಣಿನ ತಂದೆ – ತಾಇಯಗಳನ್ನು ಕರೆಸುತ್ತಾರೆ. ಹೆಣ್ಣಿನ ತಾಯಿ – ತಂದೆಯರು ಗಂಡಿನ ತಾಯಿ – ತಂದೆಯರ ಕೈ ಮೇಲೆ ಎರಡೂ ಕೈಯಿಟ್ಟು ’ಇವಳು ನಮ್ಮ ಮಗಳಲ್ಲ, ನಿಮ್ಮ ಮಗಳು, ಏನಾರ ತಪ್ಪು ಕಂಡು ಬಂದ್ರೆ ಹೊಟ್ಟೆಗಾಕ್ಕಳ್ರಿ, ವಿಶ್ವಾಸದಿಂದ ನೋಡ್ಕಳ್ರಿ’ ಎನ್ನುತ್ತಾರೆ. ಗಂಡಿನ ತಾಯಿ=ತಂದೆಯವರು ತಮ್ಮ ಸೊಸೆಯನ್ನು ಮಗಳಂತೆಯೇ ಪ್ರೀತಿಯಿಂದ ನೋಡಿಕೊಳ್ಳುವುದಾಗಿ ಭರವಸೆ ಕೊಡುತ್ತಾರೆ.

ಇಷ್ಟೊತ್ತಿಗೆ ಆಗಲೇ ಸಂಜೆಯಾಗಿರುತ್ತದೆ. ಗಂಡಿನ ಕಡೆಯವರು ಅನೇಕರು ಹೋಗಿರುತ್ತಾರೆ. ಹೆಣ್ಣನ್ನು ಕರೆದುಕೊಂಡು ಹೋಗುವ ಮೊದಲು ಗಂಡು – ಹೆಣ್ಣಿಗೆ ಜೊತೆಯಲ್ಲಿ, ಗಂಡಿನ ಮನೆಯವರಿಗೆಲ್ಲ ಶಾವಿಗೆ ಹುಗ್ಗಿ, ಕೋಳಿಸಾರು ಬಡಿಸಿ ಊಟ ಕೊಡುತ್ತಾರೆ. ಹೆಣ್ಣು ಹೊರಡುವಾಗ ಅವ್ವ-ಅಪ್ಪರಿಗೆಲ್ಲ ಕಾಲಿಗೆ ಬಿದ್ದು ಅಳುತ್ತಾಳೆ. ವರೂ ಅಳುತ್ತಳುತ್ತಲೇ ಮಗಳನ್ನು ಸಮಾಧಾನಪಡಿಸುತ್ತಾರೆ. ಒಡಹುಟ್ಟಿದವರನ್ನೆಲ್ಲ ಇದ್ದಕ್ಕಿದ್ದ ಹಾಗೆ ಆಗಲಿ ಹೋಗಬೇಕಾದ ಹೆಣ್ಣು ಎಲ್ಲರಿಗೂ ’ಹೋಗಿ ಬರುತ್ತೇನೆಂದು’ ಹೇಳುತ್ತಾಳೆ. ಇಡೀ ಸನ್ನಿವೇಶ ಪ್ರೀತಿಯ ಭಾವುಕತೆಯಿಂದ ತುಂಬಿರುತ್ತದೆ. ಗಂಡ ಹೆಂಡತಿಯನ್ನು ಹೊತ್ತುಕೊಂಡು ಬಂದು ಗಾಡಿಯಲ್ಲಿ ಕೂರಿಸುತ್ತಾನೆ. ಹೆಣ್ಣಿನ ಕಡೆಯ ಕೆಲವರೂ ಹೊರಡುತ್ತಾರೆ. ಮಾಮನೆ ಅಥವಾ ಮಾನವ ಮನೆಯ ಪ್ರಯಾಣ ಸಾಗುತ್ತಿದ್ದಂತೆಯೇ ಹೆಣ್ಣಿನ ಮನೆ ಅರಣ್ಯರೋದನದಲ್ಲಿ, ಅಗಲಿದ ಮನೆಮಗಳ ಗುಣಗಾನದಲ್ಲಿ ಮುಳುಗುತ್ತದೆ.

ಇತ್ತ ಗಂಡಿನ ಮನೆಯನ್ನು ತಲುಪುತ್ತಿದ್ದಂತೆಯೇ ಗಂಡಿನ ತಂಗಿಯರು ದಂಪತಿಗಳ ಕಾಲು ತೊಳೆಯುತ್ತಾರೆ. ಅಣ್ಣ – ಅತ್ತಿಗೆಯರನ್ನು ಒಳಗೆಬಿಡುವ ಮೊದಲು ಇಬ್ಬರ ಕಾಲಿನ ಹೆಬ್ಬೆರಳುಗಳನ್ನು ಹೊಸಿಲ ಮೇಲೆ ಕೂಡಿಸಿ ಹಿಡಿದು ಅದರ ನಡುವೆ ಮೊಳೆ ಬಡಿಸುತ್ತಾರೆ. ಮೊಳೆ ಬಡಿದ ನಂತರವೂ ಹಿಡಿದ ಹೆಬ್ಬೆರಳುಗಳನ್ನು ತಂಗಿಯರಾದವರು ಬಿಡುವುದಿಲ್ಲ. ಅಣ್ಣ ’ಯಾಕವ್ವ ಕಾಲು ಹಿಡ್ಕಂಡೀದೀಯ ಬಿಡವ್ವ ತಾಯಿ’ ಅನ್ನುತ್ತಾರೆ. ತಂಗಿ ’ಹೆಣ್ಣು ಕೊಡಪ್ಪ’ ಎಂದು ಕೇಳುತ್ತಾಳೆ. ಅಣ್ಣ ’ಇನ್ನು ಈಗ್ಲೇ ಹೆಣ್ಣೆಲ್ಲಿದ್ದವವ್ವ, ಒಂದು ಬೆಕ್ಕಿನ್‌ಮರಿ ಕೊಡ್ತೀನಿ’ ಎನ್ನುತ್ತಾನೆ. ತಂಗಿ ’ಇಲ್ಲ ನನಗೆ ಹೆಣ್ಣೇ ಬೇಕು’ ಎಂದು ಕೇಳುತ್ತಾಳೆ. ಅಣ್ಣ ಮತ್ತೆ ’ಹೆಣ್ಣಿಲ್ಲವ್ವ, ಒಂದಿಲಿ ಮರಿ ಕೊಡ್ತೀನಿ’ ಅನ್ನುತ್ತಾಳೆ. ಮತ್ತೆ ತಂಗಿಯ ಹಟ. ಕಡೆಗೆ ’ಆಯ್ತು ಬಿಡವ್ವ ಕಾಲ್‌ನ, ಹೆಣ್ ಕೊಡ್ತೀನಿ’ ಅಂತ ಅಣ್ಣ ಅಂದರೂ ತಂಗಿ ’ನೀನೊಬ್ಬನು ಒಪ್ಪಿದ್ರೆ ಆಯ್ತು, ನಿನ್ಹೆಂಡ್ತಿಗೂ ಒಪ್ಪಿಸಪ್ಪ’, ಅಂತ ಹೇಳ್ತಾಳೆ. ಅಣ್ಣನಿಗೆ ಏನೋ ನಾಚಿಕೆ. ಮೊದಲ ಸಲ ಹೆಂಡತಿಯನ್ನು ಮಾತಾಡಿಸಬೇಕು. ಸಂಕೋಚ ತಂಗಿಯಾ ಒತ್ತಾಯಕ್ಕೆ ಮಣಿದು ಕೇಳುತ್ತಾನೆ. ’ನನ್‌ತಾಯಿ ಹೆಣ್ಣು ಕೇಳ್ತಾಳೆ ಕೊಡಾನೇನೆ’ ಎಂದು ಹೆಂಡತಿಯನ್ನು ಕೇಳಿದರೆ ಆಕೆ ಮುಖ ತಿರುವಿ ಮುಚ್ಚಿ ಕೊಳ್ಳುತ್ತಾಳೆ. ಪಕ್ಕದಲ್ಲಿದ ಹೆಂಗಸರು ’ಮಾತಾಡೇ ತಾಯಿ’ ಅಂತಾರೆ. ’ನೀವು ಕೊಡ್ತನೀ ಅಂದ್ರೆ ನಾನೇನು ಬ್ಯಾಡ ಅಂತೀನ ಅಂತ ಹೇಳೇ ತಾಯಿ’ ಎಂದು ಹೇಳಿಕೊಡುತ್ತಾರೆ. ಕೊನೆಗೆ ಎಲ್ಲರ ಒತ್ತಾಯಕ್ಕೆ ಸೋತು ಹೆಣ್ಣು ಕೇಳಿಸಿತೋ ಇಲ್ಲವೋ ಅನ್ನುವ ಹಾಗೆ ’ನೀವು ಕೊಡ್ತನಿ ಅಂದ್ರೆ ನಾನೇನ್ ಬ್ಯಾಡ ಅಂತೀನಾ?’ ಅನ್ನುತ್ತಾಳೆ. ಎಲ್ಲರೂ ನಗುತ್ತಾರೆ. ತಂಗಿ ಕಾಲುಬಿಟ್ಟು ಅವರನ್ನು ಒಳಗೆ ಕರೆದುಕೊಳ್ಳುತ್ತಾಳೆ.

ಮಾವನ ಮನೆಯಲ್ಲಿ ಆಗಲೇ ಬೇಳೆಬೆಲ್ಲ ಬೇಯಿಸಿ ಹುರಾಣ (ಹೂರಣ) ತಿರುವಿ ಇಟ್ಟಿರುತ್ತಾರೆ. ಹೊಸದಂಪತಿಗಳನ್ನು ಅಕ್ಕಪಕ್ಕ ಕೂರಿಸಿ ಚಾಪೆ ಹಾಸಿ ಹುರಾಣವನ್ನು, ಕಲಿಸಿದ ಮೈದಾಹಿಟ್ಟನ್ನು ಕೊಡುತ್ತಾರೆ. ಗಂಡ ಎಲೆ ಉದ್ದಿದ ಹಾಗೆ ಹೆಂಡತಿ ಅದರಲ್ಲಿ ಹುರಾಣ ತುಂಬಿ ಹೋಳಿಗೆ ಮಾಡಬೇಕು. ನಂತರ ಹಸಿ ಹೋಳಿಗೆ ತೆಗೆದುಕೊಂಡು ಒಲೆಮುಂದೆ ಬರಬೇಕು. ಗಂಡ ಒಲೆಯ ಮೇಲೆ ಎಣ್ಣೆಯ ಬಾಣಲಿಯನ್ನಿಟ್ಟು ಉರಿಕಾಯಿಸಿ ಎಣ್ಣೆ ಬಿಸಿಯಾದ ತಕ್ಷಣ ಎಣ್ಣೆಯಲ್ಲಿ ಹೋಳಿಗೆ ಹಾಕಿದರೆ ಹೆಂಡತಿ ಅದನ್ನು ಕರಿಯುತ್ತಾಳೆ. ಇಬ್ಬರೂ ಸೇರಿ ಮಾಡಿದ ಹೋಳಿಗೆಯನ್ನು ತಿನ್ನಲು ಮನೆಯ ಮಕ್ಕಳು ಸತಾಯಿಸುತ್ತಾರೆ. ಗಂಡ – ಹೆಂಡತಿ ಅವರಿಗೆ ಹೋಳಿಗೆ ಕೊಟ್ಟು ಸಮಾಧಾನಪಡಿಸಬೇಕು. ಈ ಕ್ರಿಯೆ ಪಿಂಜಾರರಲ್ಲಿ ಶಾಸ್ತ್ರ -ವೆಂಬಂತಹ ರೀತಿಯಲ್ಲಿ ನಡೆಯುತ್ತದೆ. ಮರುದಿನದ ಬೆಳಿಗ್ಗೆಯವರೆಗೂ ಇದ್ದು ಹೆಣ್ಣಿನ ಮನೆಯವರು ತಮ್ಮೂರಿನ ಕಡೆ ಹೊರಡುತ್ತಾರೆ.

ಪಿಂಜಾರರ ಮದುವೆಯ ಒಂದು ಹಂತ ಇಲ್ಲಿಗೆ ಮುಗಿಯುತ್ತದೆ. ನಂತರ ಪಿಂಜಾರರು ’ಶುಕ್ರವಾರ’ ಎಂದು ಐದು ವಾರಗಳ ಕಾಲ ಆಚರಿಸುತ್ತಾರೆ. ಮೊದಲ ಎರಡು ಶುಕ್ರವಾರ ಗಂಡಿನ ಮನೆಯಲ್ಲಿ, ನಂತರದ ಎರಡು ಶುಕ್ರವಾರ ಹೆಣ್ಣಿನ ಮನೆಯಲ್ಲಿ, ಕಡೆಯ ಶುಕ್ರವಾರ ಗಂಡಿನ ಮನೆಯಲ್ಲಿ ನಡೆಯುತ್ತದೆ. ಈ ಐದೂ ಶುಕ್ರವಾರಗಳ ಆಚರಣೆಯ ನಂತರವೇ ಪಿಂಜಾರರಲ್ಲಿ ಮೊದಲ ರಾತ್ರಿಯನ್ನು ಆಚರಿಸುವುದಾಗಿ ತಿಳಿದುಬರುತ್ತದೆ. ಇದು ಈಗಾಗಲೇ ೭೦-೮೦ ವರ್ಷದವರು ಹೇಳುವ ಮಾತು. ಆದರೆ ಈಗ ಪಿಂಜಾರರಲ್ಲಿ ನಿಖಾಃ ನಡೆದ ರಾತ್ರಿಯೇ ಗಂಡಿನ ಮನೆಯಲ್ಲಿ ಹೆಣ್ಣು -ಗಂಡಿನ ಸಮಾಗಮ ನಡೆಯುತ್ತದೆ. ಈ ಐದೂ ಶುಕ್ರವಾರಗಳ ಆಚರಣೆಯ ನಂತರವೇ ಪಿಂಜಾರರಲ್ಲಿ ಮೊದಲ ರಾತ್ರಿಯನ್ನು ಆಚರಿಸುವುದಾಗಿ ತಿಳಿದುಬರುತ್ತದೆ. ಇದು ಈಗಾಗಲೇ ೭೦-೮೦ ವರ್ಷದವರು ಹೇಳುವ ಮಾತು. ಆದರೆ ಈಗ ಪಿಂಜಾರರಲ್ಲಿ ನಿಖಾಃ ನಡೆದ ರಾತ್ರಿಯೇ ಗಂಡಿನ ಮನೆಯಲ್ಲಿ ಹೆಣ್ಣು-ಗಂಡಿನ ಸಮಾಗಮ ನಡೆಯುತ್ತದೆ. ಪ್ರಥಮ ರಾತ್ರಿಯಲ್ಲಿ ಹೆಣ್ಣಿನವರು ಕೊಡಮಾಡಿದ ’ಹಾಸಿಗೆ’ಯನ್ನು ಹಾಸಿ ಅದರ ಮೇಲೆ ಮಲ್ಲಿಗೆ ಹೂವುಗಳನ್ನು ಚೆಲ್ಲಿರುತ್ತಾರೆ. ಅನೇಕ ಪಿಂಜಾರರ ಮನೆಗಳಲ್ಲಿ ಹೊಸದಂಪತಿಗಳಿಗಾಗಿ ಪ್ರತ್ಯೇಕ ಕೊಠಡಿ ಗಳಿರುವುದಿಲ್ಲ. ಗೋಡೆಗಳಿಗೆ ತಂತಿಕಟ್ಟಿ ಪರದೆ ಇಳಿಬಿಟ್ಟು ಮರೆಮಾಡಿರುತ್ತಾರೆ. ನಿಖಾಃ ನಡೆದ ಆ ರಾತ್ರಿಯಲ್ಲಿ ಹೆಣ್ಣಿನ ಕಡೆಯ ಒಂದಿಬ್ಬರು ಹೆಣ್ಣು ಮಕ್ಕಳು ಮದುಮಗಳನ್ನು ಬಿಸಿಯಾದ ಹಾಲಿನೊಂದಿಗೆ ಗಂಡನ ಸಮೀಪಕ್ಕೆ ಕಳಿಸುತ್ತಾರೆ. ಎಂದೂ ಪರಸ್ಪರ ಮಾತನಾಡಿರದ, ಭಾವನೆಗಳನ್ನು ಅರ್ಥಮಾಡಿಕೊಳ್ಳದ  ಗಂಡು – ಹೆಣ್ಣು ದೈಹಿಕವಾಗಿ ಸೇರುವ ಮೂಲಕವೇ ಅವರಿಬ್ಬರ ನಡುವೆ ಹೊಂದಾಣಿಕೆ, ಆತ್ಮೀಯತೆ ಉಂಟಾಗಬೇಕಾದ ಅನಿವಾರ್ಯ ಸಂದರ್ಭವಿದು. ಮೊದಲ ರಾತ್ರಿ ಅಷ್ಟೇ ಭಯ, ಮುಜುಗರಗಳ ವಿಶೇಷವಾಗಿ ಹೆಣ್ಣಿಗೆ ಕಾಡುತ್ತವೆ. ಕ್ರಮೇಣ ಅವೆಲ್ಲ ಕಡಿಮೆಯಾಗಿ ನಂತರದ ಶುಕ್ರವಾರದ ಆಚರಣೆಗಳಲ್ಲಿ, ಬೀಗರು – ಬಿಜ್ಜರು ಮನೆಗಳಿಗೆ ಓಡಾಡುವುದರಲ್ಲಿ ಇಬ್ಬರಲ್ಲೂ ಮಾತು, ಸರಸ ಮೊದಲಾದ ಆತ್ಮೀಯ ಭಾವನೆಗಳು ಸಹಜವಾಗುತ್ತವೆ.

ಶುಕ್ರವಾರದ ಆಚರಣೆಯಲ್ಲಿ ದಂಪತಿಗಳ ಮೈತೊಳೆಸಿ ಬಟ್ಟೆ ತೊಡಿಸಿ ಅಕ್ಕಿಯ ಹಸೆ ಬರೆದು ಇಬ್ಬರನ್ನೂ ಕೂರಿಸುತ್ತಾರೆ. ಸಾಮಾನ್ಯವಾಗಿ ಸಂಜೆ ಮತ್ತು ರಾತ್ರಿಯ ಹೊತ್ತು ಮನೆಯ ಒಳಗೇ ನಡೆಯುವ ಕಾರ್ಯಕ್ರಮ ಇದು. ಬಂಧುಗಳು, ಹಿತೈಷಿಗಳೆಲ್ಲ ಇಲ್ಲಿ ನೆರೆದಿರುತ್ತಾರೆ. ಮುತ್ತೈದೆಯರು ಹೊಸ ದಂಪತಿಗಳಿಗೆ ಗಂಧ ಹಚ್ಚಿ ಆಶೀರ್ವಾದ ಮಾಡುತ್ತಾರೆ. ಇಲ್ಲಿ ಕೂಡ ಎಲ್ಲ ಜನಾಂಗದವರು ಸೇರುವುದರಿಂದ ಸೋಬಾನೆ ಪದಗಳು ಮತ್ತು ಮುಸ್ಲಿಂ ಹೆಣ್ಣು ಮಕ್ಕಳು ಹಾಡುವ ಉರ್ದು ಪದಗಳನ್ನು ಹತ್ತಾರು ಜನರೆಲ್ಲ ಕೂಡಿ ಹಾಡುತ್ತಾರೆ. ಈ ಕಾರ್ಯಕ್ರಮ ಸಾಮಾನ್ಯವಾಗಿ ಊಟದ ನಂತರ ನಡೆಯುತ್ತದೆ. ಪ್ರತಿ ಶುಕ್ತವಾರ ಒಂಬತ್ತು ಮಣ್ಣಿನ ಸಣ್ಣ ಕುಡಿಕೆಗಳನ್ನು ಅಡಕಲಿನಂತೆ ಏರಿಸಿ ಇಳಿಸಬೆಕಾದ ಆಚರಣೆಯೂ ಇದೆ, ಗಂಡು – ಹೆಣ್ಣು ಕೂಡಿ ಈ ಕುಡಿಕೆಗಳನ್ನು ಒಂಬತ್ತು ಬಾರಿ ಏರಿಸಿ ಇಳಿಸುತ್ತಾರೆ, ಹೆಣ್ಣು ಮತ್ತು ಗಂಡಿನ ಮನೆಯಲ್ಲಿ ನಡೆಯುವ ಈ ಆಚರಣೆಯ ದಿವಸ ಪರಸ್ಪರರ ಮನೆಯವರು ಇರಲೇಬೇಕೆಂದಿಲ್ಲ. ಕಡೆಯ ಶುಕ್ರವಾರದಂದು ಕೋಳಿ ಕೊಯ್ದು ಬಂದವರಿಗೆಲ್ಲ ಊಟ ಹಾಕುತ್ತಾರೆ. ಈ ಶುಕ್ರವಾರದ ಆಚರಣೆಯಲ್ಲಿ ಆಪ್ತರಾದ ಕೆಲವೇ ಜನರ ಉಪಸ್ಥಿತಿಯಿರುತ್ತದೆ. ವಿಶೇಷವಾಗಿ ಈ ಶುಕ್ರವಾರಗಳಲ್ಲಿ ನಡುವಿನ ಯಾವುದಾದರೊಂದು ಅಥವಾ ಎರಡು ವಾರಗಳನ್ನು ಗಂಡು ಮತ್ತು ಹೆಣ್ಣಿನ ಅಕ್ಕಂದಿರು ಅಥವಾ ಸೋದರತ್ತೆಯರ ಮನೆಯಲ್ಲಿ ಆಚರಿಸುವುದೂ ಇದೆ. ಇನ್ನೂ ವಿಶೇಷವೆಂದರೆ ಇವರ ಶಾಸ್ತ್ರಾಚರಣೆಯ ಪ್ರಕಾರವಿರುವ ಐದು ಶುಕ್ರವಾರಗಳನ್ನು, ಅಂದರೆ ಒಟ್ಟು ಅವಧಿಯನ್ನು ಕಡಿಮೆ ಮಾಡಿಕೊಳ್ಳುವ ರೀತಿಯೊಂದಿದೆ. ಮೊದಲ ಶುಕ್ರವಾರವೇ ಎರಡು ಮತ್ತು ನಂತರದ ಶುಕ್ರವಾರ ಮತ್ತೆರಡರಂತೆ ಅಚರಿಸಿ ಕಡೆಯಲ್ಲಿ ಒಂದನ್ನು ಮುಗಿಸುವ ಪದ್ಧತಿಯೂ ಕ್ವಚಿತ್ತಾಗಿ ನಡೆಯುತ್ತದೆ. ಅಂದರೆ ಮೂರೇ ವಾರದಲ್ಲಿ ಐದು ಶುಕ್ರವಾರಗಳನ್ನು ಆಚರಿಸಿಬಿಡುವ ಈ ರೂಢಿಯ ಹಿನ್ನೆಲೆಯಲ್ಲಿ ಮುಖ್ಯವಾಗಿ ಎರಡು ರೀತಿಯ ಕಾರಣಗಳಿರುವಂತೆ ಕಾಣುತ್ತದೆ. ೧) ಐದು ಶುಕ್ರವಾರಗಳನ್ನು ಮೂರೇ ವಾರದಲ್ಲಿ ಮುಗಿಸಬೇಕೆನ್ನುವಾಗ ಮುಂಬರುವ ಯಾವುದೋ ಕೆಟ್ಟದಿನಗಳನ್ನು ಗಮನದಲ್ಲಿಟ್ಟುಕೊಂಡಿರಬೇಕು. ಆ ಕೆಟ್ಟ ದಿನಗಳು ಬರುವ ಮೊದಲೇ ಈ ಶುಭಕಾರ‍್ಯ ಮುಗಿದು ಬಿಡಲಿ ಎಂಬಂತಹ ತಿಳುವಳಿಕೆ ಮೊದಲ ಕಾರಣ. ೨) ಐದು ಶುಕ್ತವಾರಗಳೆಂದರೆ ಒಂದು ತಿಂಗಳಿಗೂ ಹೆಚ್ಚಿನ ಅವಧಿ-ಯವರೆಗೂ ಕಾಯದ ಕೇವಲ ಇಪ್ಪತ್ತುದಿನಗಳಲ್ಲಿ ಐದೂ ವಾರಗಳನ್ನು ಆಚರಿಸಿಬಿಡುವ ಅವರಸರದ ಹಿಂದೆ ಗಂಡು – ಹೆಣ್ಣಿನ ಸಮಗಮದ ಬಯಕೆಯ ಒತ್ತಡವಿರಬೇಕು. ಇದು ಗಂಡು -ಹೆಣ್ಣಿನ ನಡವಳಿಕೆಯಲ್ಲಿ ಕಾಣುವ ಲಕ್ಷಣ ಮಾತ್ರವಲ್ಲದೇ ಸುಮ್ಮನೇ ಬಹಳ ದಿನಗಳ ಕಾಲ ದಂಪತಿಗಳನ್ನು ದೂರ ಇಡುವುದರಲ್ಲಿ ಅರ್ಥವಿರಲಾರದೆನ್ನುವ ಹಿರಿಯರ ವಿವೇಕವೂ ಇರಬಹುದು. ಯಾಕೆಂದರೆ ಈ ಐದೂ ಶುಕ್ರವಾರಗಳ ಆಚರಣೆಯ ನಂತರವೇ ಮೊದಲ ರಾತ್ರಿಯನ್ನು ಪಿಂಜಾರರು ಆಚರಿಸುತ್ತಿದ್ದುದಾಗಿ ತಿಳಿದುಬರುತ್ತದೆ. ಸಾಮಾನ್ಯವಾಗಿ ಮಗಳನ್ನು ಗಂಡನ ಮನೆಗೆ ಮಂಗಳವಾರ ಪಿಂಜಾರರು ಕಳಿಸುವುದಿಲ್ಲ.

ಇಲ್ಲಿಗೆ ಪಿಂಜಾರರ ಮದುವೆಯ ಆಚರಣೆಗಳು ತಾಂತ್ರಿಕವಾಗಿ ಮುಗಿಯುತ್ತವೆ. ಈವರೆಗೆ ತಿಳಿಸಿದ ಆಚರಣೆಗಳಲ್ಲಿ ಮುಖ್ಯವಾಗಿ ನಾವು ಹಿಂದೂ -ಮುಸ್ಲಿಂ ಆಚರಣೆಯ ವೈಶಿಷ್ಟ್ಯವನ್ನೂ, ಅಲ್ಲದೆ ಪಿಂಜಾರರ ಧಾರ್ಮಿಕ ಗುರುವಾರದ ಮುಲ್ಲಾನ ಅಲ್ಪಕಾಲದ ಉಪಸ್ಥಿತಿಯನ್ನು, ಪಿಂಜಾರರ ಒಟ್ಟಾರೆ ಇತಿಹಾಸದ ಹಿನ್ನೆಲೆಯಲ್ಲಿ ನೋಡುವುದು ಒಳ್ಳೆಯದು. ಮುಸ್ಲಿಂ ಧರ್ಮದ ತಿಳುವಳಿಕೆಯ ಸ್ಪಷ್ಟ ಕೊರತೆಯಿರುವ ಪಿಂಜಾರರಿಗೆ ಅದನ್ನು ಒಳಗೊಳ್ಳುವ ಸಾಮಾಜಿಕ ಒತ್ತಡವಿದ್ದಂತಿದೆಯಲ್ಲದೆ ಅದು ಅನಿವಾರ್ಯವೂ ಆಗಿದೆ. ಮದುವೆಯ ಒಟ್ಟಾರೆ ಖರ್ಚನ್ನು ಎರಡೂ ಮನೆಯವರು ಸಮನಾಗಿ ವಹಿಸುತ್ತಾರೆ. ಒಂದೊಮ್ಮೆ ತೆರ ಕೊಟ್ಟು ಹೆಣ್ಣನ್ನು ಮದುವೆ ಮಾಡಿಕೊಳ್ಳುತ್ತಿದ್ದ ಪಿಂಜಾರರು ನಾಗರಿಕತೆಯ ಅನಿಷ್ಟವಾಗಿರುವ ವರದಕ್ಷಿಣೆಯಿಂದಲೂ ಪ್ರಭಾವಿತರಾಗಿದ್ದಾರೆ. ಇತರೆ ಜನಾಂಗಗಳಿಗೆ ಹೋಲಿಸಿದರೆ ಪಿಂಜಾರದಲ್ಲಿ ವರದಕ್ಷಿಣೆ ಉದಾಹರಣೆಗಳು ಕಡಿಮೆ ಎಂದೇ ಹೇಳಬೇಕು. ಇದಕ್ಕೆ ಅವರ ಆರ್ಥಿಕ ಸ್ಥಿತಿಯಂತೆಯೇ ಅವರೊಳಗೇ ಸಂಬಂಧವನ್ನು ಅವರು ಹುಡುಕಿಕೊಳ್ಳುವುದರಿಂದ ಪಿಂಜಾರರ ಹೆಚ್ಚು ಮದುವೆಗಳು ಪ್ರೀತಿ ವಿಶ್ವಾಸಗಳ ನೆಲೆಯಲ್ಲಿಯೇ ನಡೆಯುತ್ತವೆ. ಪಿಂಜಾರರ ಮದುವೆಯಲ್ಲಿ ವಾದ್ಯ ಅಗತ್ಯವಾಗಿರುತ್ತದೆ. ಆದರೆ ಖರ್ಚನ್ನು ಹೆಣ್ಣಿನ ಮನೆಯವರೇ ವಹಿಸುತ್ತಾರೆ. ಗಂಡಿನ ಮನೆಯವರನ್ನು ಮದುವೆಯ ಹಿಂದಿನ ರಾತ್ರಿ ಎದುರುಗೊಳ್ಳುವುದರಿಂದ ಕಡಿಮೆ ನಿಖಾಃ ಮುಗಿಯುವವರೆಗೂ ವಾದ್ಯದವರ ಮೇಳ ಇರುತ್ತದೆ.

ಪಿಂಜಾರರ ಮತಾಂತರ ಒತ್ತಡದಿಂದಾಗಿದೆ ಎನ್ನುವುದನ್ನು ಸಮರ್ಥಿಸಲು ಬದುಕಿನ ಅತ್ಯಂತ ಮಹತ್ವದ ಘಟ್ಟವಾದ ಮದುವೆ ಸಮಾರಂಭದ ಆಚರಣೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಜನನದ ಸಂದರ್ಭದಲ್ಲಿ ಜಾತಕವನ್ನು ಬರೆಸುವ ಹಾಗೆಯೇ ಮದುವೆಗಾಗಿ ಮುಹೂರ್ತವನ್ನು ಬ್ರಾಹ್ಮಣರಿಂದ ಪಿಂಜಾರರು ತಿಳಿದುಕೊಂಡು ಬರುತ್ತಾರೆ. ಅತ್ಯಂತ ತಾಂತ್ರಿಕ ಕಾರಣಗಳಿಗಾಗಿ ಮುಲ್ಲಾನನ್ನು ಆಮಂತ್ರಿಸುವ, ಅವಲಂಬಿಸುವ ಪಿಂಜಾರರು ಆತನನ್ನು ಗೌರವಿಸುತ್ತಾರೆ. ಸತ್ಕರಿಸುತ್ತಾರೆ. ಉಡುಗೊರೆಗಳನ್ನು ಕೊಡುತ್ತಾರೆ. ಆತ ಮದುವೆಯನ್ನು ರಿಜಿಸ್ಟರ‍್ ಮಾಡುವ ಸಂದರ್ಭದಲ್ಲಿ ಪಿಂಜಾರರು ಮೂಕ ಪ್ರೇಕ್ಷಕರಾಗಿರುತ್ತಾರೆ. ಆತನ ನಿರ್ದೇಶನ, ಮಾರ್ಗದರ್ಶನದಂತೆ ನಡೆಯುತ್ತಾರೆ. ಉಳಿದಂತೆ ಮದುವೆಯ ಇತರೆ ಸಂದರ್ಭದಲ್ಲಿ, ಅಂದರೆ ಮಸೀದಿಯಲ್ಲಿ ಗಂಡಿಗೆ ನಮಾಜು ಮಾಡಿಸಿ, ಚಪ್ಪರದಡಿಯಲ್ಲಿ ಮದುವೆಯನ್ನು ರಿಜಿಸ್ಟರ‍್ ಮಾಡುವುದನ್ನು ಬಿಟ್ಟರೆ, ಮುಲ್ಲಾನ ಉಪಸ್ಥಿತಿಯಲ್ಲಿ ಮದುವೆಯನ್ನು ರಿಜಸ್ಟರ‍್ ಮಾಡುವುದನ್ನು ಬಿಟ್ಟರೆ, ಮುಲ್ಲಾನ ಉಪಸ್ಥಿತಿಯಿರುವುದಿಲ್ಲ. ಮದುವೆಯನ್ನು ರಿಜಿಸ್ಟರ‍್ ಮಾಡಿದುದಕ್ಕಾಗಿ ಮುಲ್ಲಾನಿಗ ನಗದು ರೂಪದ ಮಜೂರಿಯೂ ಇರುತ್ತದೆ. ಹಾಗೆ ರಿಜಿಸ್ಟರ‍್ ಮಾಡಿದಾಗಲೇ ಗಂಡು ಹೆಣ್ಣನ್ನು ಬಿಡಬೇಕಾಗಿ ಬಂದರೆ ಇಂತಿಷ್ಟು ಮೊತ್ತದ ಹಣವನ್ನು ಹೆಣ್ಣಿಗೆ ಕೊಡಬೇಕೆಂಬ ಕರಾರನ್ನು ಮಾಡುತ್ತಾರೆ. ಇದಕ್ಕೆ ಎಲ್ಲರ ಒಪ್ಪಿಗೆ ಮತ್ತು ಸಾಕ್ಷಿಯೂ ಇರುತ್ತದೆ. ಆದರೆ ಈ ಕರಾರನ್ನು ಪಾಲಿಸುವವರು ಕಡಿಮೆ. ಮದುವೆಯಂತಹ ಶುಭ ಸಮಾರಂಭದಲ್ಲಿ ಈ ಬಗೆಯ ಕರಾರನ್ನು ಮಾಡುವುದು ಎಷ್ಟರಮಟ್ಟಿಗೆ ಒಳ್ಳೆಯದೋ ಏನೋ! ಆದರೆ ಪಿಂಜಾರರಲ್ಲಿ ಬಹುಪತ್ನಿತ್ವ ಇಲ್ಲವಾದ್ದರಿಂದ ಈ ಕರಾರನ್ನು ದುರುಪಯೋಗ – ಪಡಿಸಿಕೊಳ್ಳುವಂತಹ ಸಂದರ್ಭ ಅವರಲ್ಲಿ ಬರುವುದಿಲ್ಲ. ಹೆಂಡತಿ ತೀರಿ – ಹೋದರೆ ಅಥವಾ ಬಿಟ್ಟು ಹೋದರೆ ಅಥವಾ ಮೊದಲ ಹೆಂಡತಿಗೆ ಮಕ್ಕಳಾಗದಿದ್ದರೆ ಗಂಡಸು ಮತ್ತೆ ಮದುವೆಯಾಗುತ್ತಾನೆ. ಆದರೆ ಇವೇ ಅವಕಾಶ ಹೆಣ್ಣಿಗಿಲ್ಲ. ಅಂಥ ಸಂದರ್ಭದಲ್ಲಿ ಹೆಣ್ಣು ತವರು ಮನೆಯಲ್ಲಿರುವುದೇ ಹೆಚ್ಚು. ಮತ್ತು ಕೆಲವು ಕಡೆ ಒಬ್ಬಳೇ ಸ್ವತಂತ್ರವಾಗಿ ಕೂಲಿ, ಗೀಲಿ ಮಾಡಿಕೊಂಡಿರುತ್ತಾಳೆ. ಹೆಣ್ಣಿನ ಪುನರ‍್ ವಿವಾಹಕ್ಕೆ ಸಮ್ಮತಿಯಿಲ್ಲ. ಗಂಡಸು ಹೆಂಡತಿ ಮಕ್ಕಳಿದ್ದೂ ಇನ್ನೊಬ್ಬಳನ್ನು ಮದುವೆಯಾಗುವುದನ್ನು ವಿರೋಧಿಸುತ್ತಾರೆ. ಇಂತಹ ಅಪರೂಪದ ಘಟನೆಗಳಲ್ಲಿ ಕಳ್ಳಸಂಸಾರ ನಡೆಸುವುದು ಅಲ್ಲಲ್ಲಿ ಇದ್ದೇ ಇದೆ. ಒಬ್ಬರಿಗಿಂತ ಹೆಚ್ಚು ಹೆಂಡತಿಯರನ್ನಿಟ್ಟುಕೊಂಡವರನ್ನು ಪಿಂಜಾರರು ತೀವ್ರ ತಾತ್ಸಾರದಿಂದ ಕಾಣುತ್ತಾರೆ. ಸ್ವಂತ ಅಕ್ಕ-ತಂಗಿಯರ ಮಗಳನ್ನು ಮತ್ತು ಚಿಕ್ಕಪ್ಪ-ದೊಡ್ಡಪ್ಪರ ಮಕ್ಕಳನ್ನು ಮದುವೆಯಾಗುವುದಿಲ್ಲ. ಹಿರಿಯರು ನಂಟಸ್ತನ ಮಾಡಿಕೊಂಡಿದ್ದ ಕಡೆಯೇ ಇವರ ಸಂಬಂಧ ಹೆಚ್ಚು. ಇವರ ಹಿರಿಯರಾದವರಿಗೆ ಬೀಗರೆನಿಸಿದವರೆಲ್ಲ, ಅಂದರೆ ಅವರ ಕಳ್ಳು-ಬಳ್ಳಿಯೆಲ್ಲ, ನೆಂಟರೇ ಆಗಿರುತ್ತಾರೆ. ಅದೇ ಸಲುವಳಿಯ ಜಾಡು ಹಿಡಿದು ಬೀಗತನ ಕುದುರಿಸುತ್ತಾರೆ. ಮುಸ್ಲಿಮರು ಇವರಿಗೆ ಹೆಣ್ಣು ಕೊಡುವುದಿಲ್ಲ. ಆದರೆ ಅಪರೂಪಕ್ಕೆ ಇವರ ಹೆಣ್ಣನ್ನು ಮದುವೆಯಾಗುತ್ತಾರೆ. ಪಿಂಜಾರರು ಮುಸ್ಲಿಂ ಸಂಬಂಧವನ್ನು ಇಷ್ಟಪಡುವುದಿಲ್ಲ. ಅವರಿಗೆ ಹೆಣ್ಣು ಕೊಡುವುದಿಲ್ಲ, ಅಲ್ಲಿಂದ ಹೆಣ್ಣನ್ನು ತರುವುದೂ ಇಲ್ಲ. ಈ ವಿಚಾರದಲ್ಲಿ ಮುಸ್ಲಿಮರು ಪಿಂಜಾರರನ್ನು ಜರೆದಷ್ಟೇ ತೀವ್ರವಾಗಿ ಪಿಂಜಾರರು ಮುಸ್ಲಿಮರನ್ನು ಜರಿಯುತ್ತಾರೆ. ಇದಕ್ಕೆ ಮುಸ್ಲಿಮರು ಮಾತನಾಡುವ ಉರ್ದು ಪಿಂಜಾರರಿಗೆ ಬಾರದಿರುವುದು, ಮುಸ್ಲಿಮರ ಕಂದಾಚಾರಗಳು ಪಿಂಜಾರರಿಗೆ ಇಷ್ಟವಾಗದಿರುವುದು ಕಾರಣವಾಗಿದೆ. ಇದೇ ಕಾರಣಕ್ಕೆ ಮುಸ್ಲಿಮರು ಕೂಡ ಪಿಂಜಾರರನ್ನು ಕಡೆಗಣಿಸುವುದು. ಇವತ್ತಿಗೂ ಇದೇ ಪರಿಸ್ಥಿತಿ ಮುಂದುವರಿದಿದೆ.