ಜೀವನಾವರ್ತನ ಹಾಗೂ ಧಾರ್ಮಿಕ ಆಚರಣೆಗಳು:

ಸಮುದಾಯದ ಆಚರಣೆಗಳಲ್ಲಿ ಮಹಿಳೆಯ ಪಾಲುದಾರಿಕೆ ಅತ್ಯಂತ ಕ್ರಿಯಾಶೀಲವಾದುದು. ನಿಸರ್ಗ ಸಹಜವಾದ ಹುಟ್ಟು-ಸಾವುಗಳಂತಹ ಸಂದರ್ಭದಲ್ಲಿ ಹಾಗೂ ಈ ನಡುವೆ ಮನುಷ್ಯ ತನ್ನ ಸಂತೋಷಕ್ಕಾಗಿ ಮಾಡಿಕೊಂಡ ಸೀಮಂತ, ನಾಮಕರಣ, ಜವಳ, ಋತುಮತಿ, ಮದುವೆಯಂತಹ ಸಂದರ್ಭಗಳಲ್ಲಿ ಹೆಣ್ಣಿನ ಹೊರತಾದ ಆಚರಣೆಗಳನ್ನು ಕಲ್ಪಿಸಿಕೊಳ್ಳಲಾಗದು. ಹಾಗೆ ನೋಡಿದರೆ ಈ ಎಲ್ಲಾ ಸನ್ನಿವೇಶಗಳಲ್ಲಿ ಹೆಣ್ಣು ತನ್ನ ಸಹಜವಾದ ತಾಯ್ತನ ಮತ್ತು ಆ ತಾಯ್ತನದ ಮಮತೆ, ಅಂತಃಕರಣ, ಸಹನೆಯನ್ನೆಲ್ಲ ಧಾರೆ ಎರೆದು ಆಚರಣೆಗಳ ಮೂಲಕವೇ ಸಂಸ್ಕೃತಿಯನ್ನು ಕಟ್ಟಿಕೊಂಡಿರುತ್ತಾಳೆ. ಆದ್ದರಿಂದಲೇ ಸಂಸ್ಕೃತಿಯ ನಿಜರೂಪಗಳ ನಿರ್ವಹಣೆಯ ಹೊಣೆಗಾರಿಕೆಯನ್ನು ಮಾತ್ರ ಗಂಡಸು ನಿಭಾಯಿಸುತ್ತಾ ಬಂದಿದ್ದಾನೆ. ಈ ಎಲ್ಲಾ ಆಚರಣೆಗಳ ಕೇಂದ್ರ ಹೆಣ್ಣು. ಅವಳ ಕ್ರಿಯಾಶೀಲ ಚಟುವಟಿಕೆಗಳ ವಿವರಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಸೀಮಂತ

ಪಿಂಜಾರ ಜನಾಂಗದಲ್ಲಿ ಸೀಮಂತ ನಡೆಯುವುದು ಗರ್ಭಿಣಿಯಾದ ಏಳನೆಯ ತಿಂಗಳಿನಲ್ಲಿ ಇದು ಗಂಡಿನ ಮನೆಯಲ್ಲಿ ನಡೆಯುತ್ತದೆ. ಉರ್ದು ಬಲ್ಲಕೆಲವರು ಈ ಕಾರ್ಯಕ್ರಮಕ್ಕೆ ಸತ್ವಾಸ ಎಂದು ಕರೆಯುತ್ತಾರೆ. ತಮ್ಮ ಮನೆಯ ಮಗಳು ಗರ್ಭಿಣಿಯಾದ ಸುದ್ದಿ ತಿಳಿದಾಗಿನಿಂದ ಆಗಾಗ್ಗೆ ಆಕೆಗೆ ವಿಶೇಷವಾದ ಅಡಿಗೆ ಅಂದರೆ ಹೋಳಿಗೆ, ಕರ್ಜಿಕಾಯಿ, ಉಂಡೆ ಮೊದಲಾದವುಗಳನ್ನು ಮಾಡಿ ಕಳಿಸುವ ಸಂಪ್ರದಾಯ ಪಿಂಜಾರರಲ್ಲಿದೆ. ಗರ್ಭ ಧರಿಸಿದ ಏಳನೆಯ ತಿಂಗಳಲ್ಲಿ ಗಂಡಿನ ಮನೆಯಲ್ಲಿ ನಡೆಸಲಾಗುವ ಸೀಮಂತದ ಪಿಂಜಾರರಲ್ಲಿದೆ. ಸೀಮಂತದ ಪೂರ್ಣ ಖರ್ಚು ಹಾಗೂ ಜವಾಬ್ದಾರಿ ಹೆಣ್ಣಿನ ಮನೆಯವರದೇ ಆಗಿರುತ್ತದೆ. ಏಳನೆಯ ತಿಂಗಳಲ್ಲಿ ಬರುವ ಯಾವುದಾದರೊಂದು ಸೋಮವಾರ, ಗುರುವಾರ ಅಥವಾ ಶುಕ್ರವಾರ ಸೀಮಂತದಕಾರ್ಯ ನಿಗದಿಯಾಗುತ್ತದೆ. ತವರಿನವರು ಅಂದು ತಮ್ಮ ಮಗಳ ಮಾವನ ಮನೆಗೆ ಬೇಳೆ, ಬೆಲ್ಲ, ಅಕ್ಕಿ, ಎಣ್ಣೆಯೊಡನೆ ಹಸಿರು ಸೀರೆ, ಕುಪ್ಪಸ, ಹತ್ತು ಹಲವು ಹಣ್ಣು – ಹಂಪಲು, ಹೂವುಗಳೊಂದಿಗೆ ಬರುತ್ತಾರೆ. ಮನೆಗೆ ಸುಣ್ಣ-ಬಣ್ಣ ಬಳಿದಿರುತ್ತಾರೆ. ಮೊದಲು ತವರಿನವರು ತಂದ ಅಡಿಗೆ ಸಾಮಾನುಗಳನ್ನು ಬಳಸಿ ಹೋಳಿಗೆ, ಅನ್ನ, ಸಾರು ತಯಾರು ಮಾಡುತ್ತಾರೆ. ಊಟದ ಅನಂತರವಷ್ಟೇ ಎರಡೂ ಕಡೆಯ ಗಂಡಸರು ಆರಾಮಾಗಿ ಎಲೆ – ಅಡಿಕೆ ಹಾಕಿಕೊಂಡು ಮಳೆ-ಬೆಳೆ, ಕಷ್ಟ-ಸುಖ ಮಾತಾಡುತ್ತಾ ಕುಳಿತುಕೊಳ್ಳುತ್ತಾರೆ. ಸೀಮಂತದ ಆಚರಣೆಯ ಶಾಸ್ತ್ರ ಮಾಡುವುದು ಹೆಣ್ಣುಮಕ್ಕಳ ಜವಾಬ್ದಾರಿ. ತುಂಬು ಬಸುರಿಯನ್ನು ಬಿಸಿ ನೀರಿನಿಂದ ಸ್ನಾನ ಮಾಡಿಸಿ ಅತ್ತರು, ಗಂಧ ಮೊದಲಾದ ಪರಿಮಳ ದ್ರವ್ಯಗಳನ್ನು ಪೂಸಿ ತವರಿನವರು ತಂದ ಹಸಿರು ಸೀರೆ, ಕುಪ್ಪಸ ತೊಡಿಸಿ, ತಲೆ ಬಾಚಿ, ಜಡೆಹಾಕಿ ಹೂವು ಮುಡಿಸುತ್ತಾರೆ. ಹಸಿರು ಬಳೆಗಳನ್ನು ಕೈತುಂಬ ತೊಡಿಸುತ್ತಾರೆ. ನಂತರ ಗರ್ಭಿಣಿಯನ್ನು ಅಕ್ಕಿಯ ಹಸೆಯಲ್ಲಿ ಕುಳ್ಳಿರಿಸಿ ಐದು ಜನ ಮುತ್ತೈದೆಯರು ಗಂಧ ಹಚ್ಚುತ್ತಾರೆ. ನಗುಮುಖದ ಗರ್ಭಿಣಿ, ನಗುಮುಖದ ಮುತ್ತೈದೆಯರತ್ತ ಕಣ್ಣಿಟ್ಟು ತಮಾಷೆ, ಅಣಕು ಮಾಡುತ್ತಾ ಕಾಲ ಕಳೆಯುವ ಗಂಡಸರು ಇಡೀ ವಾತಾವರಣವನ್ನು ಲವಲವಿಕೆಯಿಂದಿರುವಂತೆ ಮಾಡುತ್ತಾರೆ. ಮುತ್ತೈದೆಯರು ಒಬ್ಬೊಬ್ಬರಾಗಿ ಬಸುರಿಯ ಹೊಟ್ಟೆ, ಬೆನ್ನು, ಗಲ್ಲ, ಕೆನ್ನೆಗೆ ಗಂಧ ಹಚ್ಚಿ ’ಹೆರಿಗೆ ಸುಖವಾಗಲಿ, ಗಂಡು ಮಗುವನ್ನು ಹಡಿ’ ಎಂದು ಹರಸಿ ಆಶೀರ್ವದಿಸುತ್ತಾರೆ. ತಂದೆ – ತಾಯಿ, ಅತ್ತೆ – ಮಾವ, ಇಡೀ ತನ್ನ ಪ್ರಿಯ ಬಂಧು – ಬಳಗ, ಎಲ್ಲಕ್ಕಿಂತ ಹೆಚ್ಚಿನದಾಗಿ ಈ ಸಂಭ್ರಮಕ್ಕೆಲ್ಲಾ ಕಾರಣನಾದ, ತನ್ನ ಹೆಣ್ತನವನ್ನು ಸಾರ್ಥಕ ಪಡಿಸಿದ ಗಂಡ – ಇವರೆಲ್ಲರ ಉಪಸ್ಥಿತಿಯಲ್ಲಿ ನಾಚಿಕೆ, ಉಲ್ಲಾಸಗಳಿಂದ ಗರ್ಭಿಣಿಯಾದವಳ ಆನಂದಕ್ಕೆ ಪಾರವೇ ಇರುವುದಿಲ್ಲ. ಇದರ ಜೊತೆ ಮುಂದಿನ ಐದಾರು ತಿಂಗಳು ತವರಿನ ವಾಸ, ಮಡಿಲಲ್ಲಿ ಬೆಚ್ಚಗೆ ಮಲಗಿ ಕಣ್ಣು ಪಿಳುಕಿಸುವ ಕಂದನ ನೆನಪು ಅವಳ ಸುಖವನ್ನು ಇಮ್ಮಡಿಗೊಳಿಸುತ್ತದೆ. ಅಣ್ಣ – ಅತ್ತಿಗೆಯವರು ’ಹೆಣ್ಣು ಹಡಿಯವ್ವ ನನ್ನ ಮಗನಿಗೆ ಮಾಡಿಕೊಳ್ಳುತ್ತೇನೆ’ ಎಂದು ಭರವಸೆ ಕೊಡುತ್ತಾರೆ. ಎಲ್ಲವೂ ತಮಾಷೆ, ಪ್ರೀತಿಯ ವಾತಾವರಣದಲ್ಲಿ ಮುಗಿಯುತ್ತದೆ. ಈ ಸಂದರ್ಭದಲ್ಲಿ ಹಾಜರಿದ್ದವರಿಗೆ ಎಲೆ – ಅಡಿಕೆ ಸುಣ್ಣವನ್ನು ನೀಡಲಾಗುತ್ತದೆ.

ಪಿಂಜಾರರಲ್ಲಿ ಸೀಮಂತ ಹೀಗೆ ನಡೆಯುವುದು ಒಂದು ಸಾಂಪ್ರದಾಯಿಕ ಆಚರಣೆಯಾಗಿ ಮಾತ್ರ ಕೆಲವು ಪಿಂಜಾರರಲ್ಲಿ ಸೀಮಂತದ ಪೂರ್ತಿ ಖರ್ಚನ್ನು ಗಂಡಿನ ಮನೆಯವರು ನಿರ್ವಹಿಸುವ ಸಂಪ್ರದಾಯವಿದೆ. ಇನ್ನು ಕೆಲವರು ಸೀಮಂತದ ಬಗ್ಗೆ ಹೆಚ್ಚು ಕಾಳಜಿ ತೋರುವುದಿಲ್ಲ. ಇಂತಹವರಿಗೆ ಅವರ ಆರ್ಥಿಕ ಸ್ಥಿತಿ ಅನುಕೂಲಕರವಾಗಿಲ್ಲದಿರುವುದೇ ಕಾರಣವಾಗಿದೆ. ಸೀಮಂತದ ಶಾಸ್ತ್ರ ಮುಗಿದ ಮರುದಿನ ಗರ್ಭಿಣಿ ಮಗಳೊಂದಿಗೆ ತವರಿನವರು ತಮ್ಮ ಮನೆಗೆ ಮರಳುತ್ತಾರೆ. ಅಂದಿನಿಂದ ಮಗಳನ್ನು ಮಗುವಿನೊಂದಿಗೆ ತಿರುಗಿ ಗಂಡನ ಮನೆಗೆ ಕಳಿಸುವವರೆಗೆ ಆಕೆಯ ಪೂರ್ತಿ ಜವಾಬ್ದಾರಿ ತವರಿನವರದೇ ಆಗಿರುತ್ತದೆ. ಅದರಲ್ಲೂ ಚೊಚ್ಚಲು ಹೆರಿಗೆ ತವರು ಮನೆಯಲ್ಲೇ ಆಗಬೇಕೆಂಬ ನಿಯಮವಿದೆ. ಈ ಸಂದರ್ಭದಲ್ಲಿ ಗಂಡು ಮತ್ತು ಆತನ ಮನೆಯವರು ಆಗಾಗ್ಗೆ ಭೇಟಿ ಕೊಟ್ಟು ಕ್ಷೇಮ ಕುಶಲ ವಿಚಾರಿಸಿಕೊಂಡು ಹೋಗುತ್ತಾರೆ. ಈ ಅವಧಿಯಲ್ಲಿ ಹೆಣ್ಣು ಬಯಸಿದ ಅಡಿಗೆಯನ್ನು ಸಾಧ್ಯವಾದಷ್ಟು ಮಾಡಿಕೊಡುತ್ತಾರೆ. ಆರ್ಥಿಕವಾಗಿ ಉತ್ತಮವಾಗಿರುವವರು ಅವಳಿಗೆ ಹೊಸ ಬಟ್ಟೆಬರೆ, ಚಿನ್ನ ಬೆಳ್ಳಿಯ ಆಭರಣ, ವಿವಿಧ ಗೊಂಬೆಗಳನ್ನು ಕೊಡಿಸುವುದುಂಟು. ಬಹುಪಾಲು ಪಿಂಜಾರರು ಮಗಳನ್ನು ಹೆರಿಗೆಗಾಗಿ ತವರಿಗೆ ಕರೆದುಕೊಂಡು ಬರುವ ಶಾಸ್ತ್ರವನ್ನು ತಮ್ಮ ಆರ್ಥಿಕವಾದ ಸ್ಥಿತಿ-ಗತಿಗಳ ಹಿನ್ನೆಲೆಯಲ್ಲಿ ನಿಭಾಯಿಸುತ್ತಾರೆ. ತಂದೆ – ತಾಯಿ ಇಲ್ಲದ ಮನೆಗಳಲ್ಲಿ ತಮ್ಮ ಮನೆ ಮಗಳ ಹೆರಿಗೆ, ಬಾಣಂತನದ ಉಪಚಾರದ ವಿಚಾರವಾಗಿ ಅಣ್ಣ – ತಮ್ಮಂದಿರ ನಡುವೆ ಚೌಕಾಸಿ ನಡೆಯುತ್ತದೆ. ಕೆಲವೊಮ್ಮೆ ಇದನ್ನು ಅರಿತುಕೊಂಡ ಹೆಣ್ಣು ತಾನು ಗಂಡನ ಮನೆಯಲ್ಲೇ ಉಳಿಯುವ ನಿರ್ಧಾರ ಮಾಡುತ್ತಾಳೆ. ಇಂಥ ಕಾರಣಗಳಿಗಾಗಿಯೇ ಇರಬೇಕು ತಾಯಿ ಇಲ್ಲದ ತವರು ಹೆಣ್ಣಿಗೆ ನರಕದ ಹಾಗೆ ಕಂಡಿದೆ. ಮಗಳ ಬಾಣಂತನವನ್ನು ತಾಯಿಯಷ್ಟು ಪ್ರೀತಿ, ಮುತುವರ್ಜಿಯಿಂದ ಬೇರೆ ಯಾರೂ ಮಾಡುವುದು ಸಾಧ್ಯವಿಲ್ಲ ಎನ್ನುವುದು ಎಲ್ಲ ಹೆಣ್ಣು ಮಕ್ಕಳ ಅನುಭವವಾಗಿದೆ.

ಹೆರಿಗೆ, ಜನನ ಮತ್ತು ನಾಮಕರಣ:

ಬಹುಪಾಲು ಪಿಂಜಾರರು ತಂತಮ್ಮ ಊರುಗಳಲ್ಲೇ ಇರುವ ತಮ್ಮವರ ನಡುವೆ ಬೀಗತನ ಮಾಡುತ್ತಾರೆ. ದೂರದೂರುಗಳ ಸಂಬಂಧ ಮಾಡುವುದರಿಂದ ಮಗಳು ಕಣ್ಣೆದುರಿಗೆ ಇದ್ದ ಹಾಗಾಗುವುದಿಲ್ಲ. ಹಾಗೂ ಆ ಬಗೆಯ ಸಂಬಂಧಕ್ಕೆ ಅಗತ್ಯವಾದ ಖರ್ಚನ್ನು ನಿಭಾಯಿಸುವುದು ತಮ್ಮಿಂದ ಸಾಧ್ಯವಾಗುವುದಿಲ್ಲ ಎನ್ನುವುದೇ ಪಿಂಜಾರರು ಸ್ಥಳೀಯ ನಂಟಸ್ತಿಕೆ ಮಾಡುವುದಕ್ಕೆ ಕಾರಣವಾಗಿದೆ. ಸಂಬಂಧವೆಂದರೆ ಮದುವೆ, ಮುಂಜಿ ಮೊದಲಾದ ಕಾರ್ಯಕಟ್ಟಳೆಗಳು ಇದ್ದೇ ಇರುತ್ತವೆ. ಅವುಗಳಿಗೆ ಹೋಗದೇ ಇರಲಾಗುವುದಿಲ್ಲ. ಆದುದರಿಂದ ಸುಮ್ಮನೇ ಸ್ಥಳೀಯವಾದ ಬೀಗತನಕ್ಕೆ ಆಸಕ್ತಿ ತೋರುವುದು ರೂಢಿಯಾಗಿದೆ. ಕೆಲವರು ಇದ್ದ ಊರಿನ ಹಳೆಯ ಸಂಬಂಧಗಳು ಏಕತಾನತೆಯಿಂದ ಬೇಸತ್ತು ದೂರದೂರುಗಳ ಹೊಸ ಸಂಬಂಧವನ್ನು ಹುಡುಕಿ ಹೋದವರೂ ಇದ್ದಾರೆ. ಇದ್ದ ಊರಿನ ಹಳೆಯ ಸಂಬಂಧಗಳೇ ಕಣ್ಣಳತೆಯಲ್ಲಿರುವುದರಿಂದ ಎದ್ದು ಬಿದ್ದು ಅವಳು ಕಾಣುವುದರಿಂದ ಅವಳ ಕಷ್ಟ-ಸುಖಕ್ಕೆ ಆಗಬಹುದು ಎಂಬ ಆಶಯ ಇಂಥ ಸಂಬಂಧಗಳ ಹಿನ್ನೆಲೆಯಲ್ಲಿ ಇದ್ದಂತಿದೆ.

ಪಿಂಜಾರರಲ್ಲಿ ಗರ್ಭಿಣಿಯನ್ನು ಆಕೆ ಗರ್ಭಿಣಿಯಾದ ಏಳನೆಯ ತಿಂಗಳಲ್ಲಿ ತವರಿಗೆ ಕರೆತರುವ ಸಂಪ್ರದಾವಿದೆ. ಸಾಮಾನ್ಯವಾಗಿ ಎಂಥ ಬೆಸಸಂಖ್ಯೆಯ ತಿಂಗಳನ್ನೇ ಮಗಳನ್ನು ಕರೆತರುವುದಕ್ಕಾಗಿ ಆಯ್ದುಕೊಳ್ಳಲಾಗುತ್ತದೆ. ಐದು, ಏಳು ಅಥವಾ ಒಂಬತ್ತನೆಯ ತಿಂಗಳಲ್ಲಿಯೂ ಕೆಲವರು ಕರೆದುಕೊಂಡು ಬರುವುದಿದೆ. ಈ ಹಿಂದೆ ಹೇಳಿದಂತೆ ಒಮ್ಮೆ ಹೆರಿಗೆಗೆಂದು ತವರಿಗೆ ಬಂದ ಬಸುರಿಯ ಎಲ್ಲ ಜವಾಬ್ದಾರಿ ತವರು ಮನೆಯದೇ ಆಗಿರುತ್ತದೆ. ಹೆಣ್ಣು ತವರುಮನೆಯಲ್ಲಿದ್ದಷ್ಟೂ ದಿನ ಒಳ್ಳೆಯ ಅಡಿಗೆ ಮಾಡಿ ಆಕೆಗೆ ಉಣಬಡಿಸುತ್ತಾರೆ. ಆಕೆಯನ್ನು ಯಾವ ಕೆಲಸಕ್ಕೂ ಹಚ್ಚುವುದಿಲ್ಲ. ಅದೇ ಊರಿನಲ್ಲಿರುವ ಸೂಲಗಿತ್ತಿಯೊಬ್ಬಳು, ಅವಳು ಪಿಂಜಾರಳಾಗಿರಬಹುದು ಅಥವಾ ಯಾವುದೇ ಜನಾಂಗವಾಗಿರಬಹುದು, ಆಗಾಗ್ಗೆ ಬಂದು ಬಸುರಿ ಹೆಂಗಸನ್ನು ನೋಡಿ ಮಾತಾಡಿಸಿ, ನೋವು ಇತ್ಯಾದಿ ಬಗ್ಗೆ ವಿಚಾರಿಸುತ್ತಾಳೆ. ದಿನ ತುಂಬುತ್ತ ಬಂದಂತೆ ಬಸುರಿಯನ್ನು ನೋಡಿಕೊಳ್ಳುವುದಕ್ಕಾಗಿ ಸೂಲಗಿತ್ತಿ ಆ ಮನೆಯಲ್ಲೇ ಉಳಿಯುತ್ತಾಳೆ. ಸೂಲಗಿತ್ತಿಯಿಂದಲೇ ಮಗುವಿನ ಜನನ ಮತ್ತು ನಂತರದ ಪ್ರಕ್ರಿಯೆಗಳೆಲ್ಲ ನಡೆಯುತ್ತವೆ.

ಹೆಣ್ಣಿಗೆ ಮೆತ್ತನೆಯ ಹಾಸಿಗೆಯನ್ನು ಹಾಸಿರುತ್ತಾರೆ. ಹಳೆಯ ಹರಿದ ಸೀರೆ, ಬಟ್ಟೆಗಳನ್ನು ಹಾಸಿ ಆಕೆಯನ್ನು ಮಲಗಿಸಿರುತ್ತಾರೆ. ಹಳೆಯ ಸೀರೆ ಉಡಿಸಿ, ಹಳೆಯ ಬಟ್ಟೆಯ ತುಂಡೊಂದನ್ನು ತಲೆ, ಕಿವಿಗೆ ಸೀತವಾಗದಿರಲೆಂದು ಕಟ್ಟಿರುತ್ತಾರೆ. ಹೆರಿಗೆಯ ನೋವು ಕಾಣಸಿಕೊಂಡಂತೆ ಸೂಲಗಿತ್ತಿ, ಹೆಣ್ಣಿನ ತಾಯಿ, ಅಕ್ಕಪಕ್ಕದ ಮನೆಯ ಹೆಂಗಸರು ಬಂದು ಹೆರಿಗೆ ಸಲೀಸಾಗುವಂತೆ ನೆರವಾಗುತ್ತಾರೆ. ಸೂಲಗಿತ್ತಿ ಎಣ್ಣೆಯಿಟ್ಟುಕೊಂಡು ಹಣತೆ ಅಥವಾ ಲಾಟೀನು ಹತ್ತಿಸಿಕೊಂಡು ಸದಾ ಎಚ್ಚರವಾಗಿದ್ದು ಹೆರಿಗೆ ಮಾಡಿಸುತ್ತಾಳೆ. ಮಗು ಮತ್ತು ತಾಯಿಯ ಮೈಯನ್ನು ಬಿಸಿ ನೀರಿನಿಂದ ತೊಳೆಯುತ್ತಾರೆ. ಸೂಲಗಿತ್ತಿ ತನ್ನ ಕಾಲುಗಳೆರಡನ್ನೂ ಚಾಚಿ ಕುಳಿತುಕೊಂಡು ಮೊಣಕಾಲಿನಿಂದ ಕೆಳಗೆ ಎರಡೂ ಕಾಲುಗಳ ನಡುವೆ ಮಗುವನ್ನಿಟ್ಟುಕೊಂಡು ಮತ್ತೊಬ್ಬರು ಹಂಚಿದ ನೀರಿನಿಂದ ತೊಳೆಯುತ್ತಾಳೆ. ಮೈಯೊರಿಸಿದ ನಂತರ ತಾಯಿಯ ಪಕ್ಕದಲ್ಲೇ ಮೆತ್ತನೆಯ ಹಳೆಯ ಬಟ್ಟೆಗಳನ್ನು ಹಾಸಿ ಮಲಗಿಸುತ್ತಾರೆ. ಅಥವಾ ಕಂಬಕ್ಕೆ ಕಟ್ಟಿದ್ದ ಜೋಲಿಯಲ್ಲಿ ಬಿಳಿಯ ಬಟ್ಟೆ ಹಾಕಿ ಮಗುವನ್ನು ಮಲಗಿಸುತ್ತಾರೆ. ಆ ಜೋಲಿಯ ಕೆಳಗೆ ಗಂಧದ ಪುಡಿ ಮತ್ತು ಸಾಂಬ್ರಾಣಿಯ ಹೊಗೆ ಹಾಕುತ್ತಾರೆ. ತಕ್ಷಣ ಯಾರಾದರೊಬ್ಬರು ಮುಲ್ಲಾನನ್ನು ಕರೆದು ತರುತ್ತಾರೆ. ಮತ್ತೊಬ್ಬರನ್ನು ಕಳಿಸಿ ಜನನದ ಸುದ್ಧಿಯನ್ನು ಗಂಡಿನ ಮನೆಯವರಿಗೆ ತಿಳಿಸಲಾಗುತ್ತದೆ. ಮುಲ್ಲಾ ಬಂದ ನಂತರ ಆತನಿಗೆ ಮಗುವನ್ನು ತೋರಿಸಿ ಮಗುವಿಗಾಗಿ ಪ್ರಾರ್ಥಿಸುವಂತೆ ಕೇಳಿಕೊಳ್ಳುತ್ತಾರೆ. ಮುಲ್ಲಾ ವಜೂ ಮಾಡಿಕೊಂಡು ಅಜಾನ್ ಕೊಡುತ್ತಾನೆ. ನಂತರ ಮಗುವಿನ ಕಿವಿಯಲ್ಲಿ ಒಂದೆರಡು ಸಲ ಬಾಯಿಯಿಂದ ಊದಿ ಹೆಸರೊಂದನ್ನು ಕರೆಯುತ್ತಾನೆ. ಇದು ಮಗುವಿನ ಮೊಟ್ಟಮೊದಲ ಹೆಸರಾಗುತ್ತದೆ. ಮಗು ಬೆಳೆದಂತೆ ಇದೇ ಹೆಸರನ್ನು ಉಳಿಸಿಕೊಳ್ಳಬಯಸುವವರು ಇದ್ದಾರೆ. ಆದರೆ ಬಹುಪಾಲು ಜನರು ತಮಗೆ ಇಷ್ಟವಾದ ಹೆಸರನ್ನು ಕರೆದುಕೊಳ್ಳುವ ಸಲುವಾಗಿ ಮೊದಲ ಹೆಸರನ್ನು ಕೈಬಿಡುತ್ತಾರೆ. ಹೀಗೆ ಹೊಸ ಹೆಸರನ್ನು ಕರೆಯುವುದಕ್ಕಾಗಿ ಹೆರಿಗೆಯಾದ ನಲ್ವತ್ತನೆಯ ದಿನದಲ್ಲಿ ’ಒಲೆ’ ಅಥವಾ ’ಚಿಲ್ಲಾ’ ಎಂದು ಕರೆಯುವ ಕಾರ್ಯಕ್ರಮವನ್ನು ಏರ್ಪಡಿಸುತ್ತಾರೆ. ಮಗುವಿನ ಜನನವಾದ ನಲ್ವತ್ತು ದಿನಗಳವರೆಗೆ ಬಾಣಂತಿ ಸೂತಕವಿರುತ್ತದೆ. ಬಾಣತಿ ಎದ್ದು ಓಡಾಡುವರೆಗೆ ಸೂಲಗಿತ್ತಿಯೇ ಬಂದು ಮಗುವಿನ ಮೈತೊಳೆಯುತ್ತಾಳೆ. ನಂತರ ಮಗುವಿನ ಅಜ್ಜಿ ಈ ಕೆಲಸ ಮಾಡುತ್ತಾಳೆ. ತಾಯಿ ಮಗುವಿನ ಪೂರ್ತಿ ಹಾರೈಕೆಯನ್ನು ಸೂಲಗಿತ್ತಿ ನೋಡಿಕೊಳ್ಳುತ್ತಾಳೆ. ತಾಯಿಗೆ ಹೆಚ್ಚು ಖಾರವಾದ ಊಟವನ್ನು ಕೊಡುವುದಿಲ್ಲ. ಹೆರಿಗೆಯಾದ ನಲ್ವತ್ತನೆಯ ದಿನದಲ್ಲಿ ಮಗುವಿಗೆ ನಾಮಕರಣ ಮಾಡಲಾಗುತ್ತದೆ.

ನಾಮಕರಣದ ದಿನ ಮನೆಗೆ ಸುಣ್ಣ, ಕೆಮ್ಮಣ್ಣು ಬಳಿದು, ನೆಲಸಾರಿಸಿ ಊರಿನ ಬಂಧು ಬಳಗವನ್ನು ಕರೆಯುತ್ತಾರೆ. ಬಾಣಂತಿಯ ಮನೆಯ ಹಿರಿಯರೊಬ್ಬರು ಮಗುವಿನ ನಾಮಕರಣಕ್ಕಾಗಿ ಶಾಸ್ತ್ರ ಕೇಳಿಕೊಂಡು ಬರುತ್ತಾರೆ. ಮಗು ಹುಟ್ಟಿದ ನಕ್ಷತ್ರ ಇತ್ಯಾದಿ ತಿಳಿದುಕೊಂಡು ಇಡಬೇಕಾದ ಹೆಸರನ್ನು ಕೇಳಿಕೊಂಡು ಬರುತ್ತಾರೆ. ಕೆಲವು ಕಡೆ ಮಗು ಹುಟ್ಟಿದ ಒಂದೆರಡು ದಿನದಲ್ಲೇ ತಾತ್ಕಾಲಿಕವಾದ ಹೆಸರೊಂದನ್ನಿಡುತ್ತಾರೆ. ಅದು ಸಾಮಾನ್ಯವಾಗಿ ಆ ಮನೆಯ ಹಿರಿಯ ತಲೆಯ ಹೆಸರಾಗಿರುತ್ತದೆ. ನಾಮಕರಣದ ದಿನ ಹಿಂದೂ-ಮುಸ್ಲಿಂ ಎಂದು ನೋಡದೆ ಶಾಸ್ತ್ರ ಕೇಳಿಕೊಂಡು ಬರುತ್ತಾರೆ. ಸಂಜೆ ತಮ್ಮ ಬೀಗರು ಬಿಜ್ಜರೆಲ್ಲರನ್ನು ಕರೆದು, (ಆಪ್ತರಾದ ಸುತ್ತಮುತ್ತಲಿನ ಹಿಂದೂ ಬಾಂಧವರೂ ಬಂದಿರುತ್ತಾರೆ) ನಾಮಕರಣ ಮಾಡುತ್ತಾರೆ. ಶಾಸ್ತ್ರದಿಂದ ತಿಳಿದುಕೊಂಡು ಬಂದ ಹೆಸರನ್ನು ಮಗುವಿನ ಕಿವಿಯಲ್ಲಿ ಎಲ್ಲರಿಗೂ ಕೇಳುವಂತೆ ಹೇಳುತ್ತಾರೆ. ಸಾಮಾನ್ಯವಾಗಿ ಮಗುವಿನ ಸೋದರಮಾವ ಅಥವಾ ಸೋದರತ್ತೆಯರು ಈ ಹೆಸರನ್ನು ಹೇಳುತ್ತಾರೆ. ಮೂರು ಸಲ ಹೆಸರು ಹೇಳಿದ ನಂತರ ಎಲ್ಲರೂ ಊಟ ಮಾಡುತ್ತಾರೆ. ಮಗುವಿಗೆ ಹೊಸಬಟ್ಟೆ ತೊಡಿಸಿರುತ್ತಾರೆ. ತಾಯಿಗೂ ತವರುಮನೆಯವರು ತಂದ ಸೀರೆಯುಡಿಸಿರುತ್ತಾರೆ. ಎಲ್ಲರೂ ಊಟ ಮಾಡುವಂತೆ ಸಿಹಿಯೂಟವನ್ನು ಮಾಡಿಸಿರುತ್ತಾರೆ. ಸಾಮಾನ್ಯವಾಗಿ ಗೋಧಿ ಹುಗ್ಗಿ, ಅನ್ನ, ಸಾರು ಮಾಡಿಸಿರುತ್ತಾರೆ. ನಾಮಕರಣವನ್ನು ಮಾಡುವಾಗ ಗಂಡಿನ ಮನೆಯವರ ಅನುಮತಿಯನ್ನು ಕೇಳಲಾಗುತ್ತದೆ. ’ನಲ್ವತ್ತು ದಿನದ ನೀರು’ ಹಾಕುವುದು ಎಂದು ಈ ದಿನ ತಾಯಿ ಮಗುವಿನ ಮೈತೊಳೆದಿರುತ್ತಾರೆ. ಮಗುವಿಗೆ ದೃಷ್ಟಿ (ಕಣ್ಣಸ್‌ರ)ಯಾದೀತೆಂದು ಒಂದು ಕೆನ್ನೆಯಲ್ಲಿ ಬೆರಳಿನ ತುದಿಯಿಂದ ಕಪ್ಪು ಮಸಿ ಹಚ್ಚಿರುತ್ತಾರೆ. ನಾಮಕರಣದ ನಂತರ ಹಾಡು ಹೇಳುವುದೂ ಇದೆ. ನಾಮಕರಣವಾದ ತಕ್ಷಣ ಸಕ್ಕರೆ, ಕಡ್ಲೆ, ಬೆಲ್ಲ, ಮಂಡಕ್ಕಿ ಬೆರೆಸಿ ಬಂದಿದ್ದವರಿಗೆ ಹಂಚುತ್ತಾರೆ. ಕೆಲವು ಕಡೆ ನಾಮಕರಣವಾದ ದಿನ ಮಾಂಸದಡಿಗೆ ಮಾಡಿಸುವುದೂ ಇದೆ. ಸಿಹಿ ಅಡಿಗೆಯನ್ನೇ ಹೆಚ್ಚಾಗಿ ಪಿಂಜಾರರು ತಮ್ಮ ಈ ಬಗೆಯ ಆಚರಣೆಗಳ ಸಂದರ್ಭದಲ್ಲಿ ಮಾಡಿಸುತ್ತಾರೆ. ಯಾಕೆಂದರೆ ಮಾಂಸಾಹಾರಿಗಳಲ್ಲದ ಹಿಂದೂ ಬಾಂಧವರು ಕೂಡ ಮುಜುಗರವಿಲ್ಲದಂತೆ ಭೋಜನ ಪಂಕ್ತಿಯಲ್ಲಿ ಕುಳಿತು ಉಣ್ಣುವುದ ಇದರಿಂದ ಸಾಧ್ಯವಾಗುತ್ತದೆ.

ಹೆರಿಗೆ ಮಾಡಿಸಿದ ಸೂಲಗಿತ್ತಿಗೆ ಹೆಣ್ಣಿನ ತಂದೆ – ತಾಯಿ ಹೊಸ ಬಟ್ಟೆ ಕೊಡಿಸುತ್ತಾರೆ. ಮಗುವಿಗೆ ಹೊಸ ಬಟ್ಟೆ, ಸಾಧ್ಯವಾದವರು ಚಿನ್ನದ ಉಂಗುರವನ್ನು ತವರಿನವರು ತರುತ್ತಾರೆ. ಬಾಣಂತನವನ್ನು ಮಾಡಿಗೆ ಅತ್ತೆಗೆ ಅಳಿಯನಾದವನು ಹೊಸ ಸೀರೆ ತಂದುಕೊಡುವ ಸಂಪ್ರದಾಯ ಪಿಂಜಾರರಲ್ಲಿದೆ. ಹೆರಿಗೆಯ ನಂತರದ ಮೂರು ಅಥವಾ ಐದನೆಯ ತಿಂಗಳಲ್ಲಿ ತೊಟ್ಟಿಲು, ಹೊಸ ಸೀರೆ, ನಾನಾ ತರಹದ ಅಡಿಗೆ, ಕಾಳುಕಡೆಯೊಂದಿಗೆ ಮಗಳನ್ನು ಗಂಡನ ಮನೆಗೆ ಕಳಿಸಿಕೊಡಲಾಗುತ್ತದೆ. ಚೊಚ್ಚಲ ಹೆರಿಗೆಗೆ ಬಂದ ಮಗಳ ಉಪಚಾರವನ್ನು ಸಮಾಧಾನಕರವಾಗಿ ನಿರ್ವಹಿಸಿದ ತೃಪ್ತಿ ತಂದೆ – ತಾಯಿಯರಿಗಿದ್ದರೆ ಮಗಳು ಕಣ್ಣು ತುಂಬ ನೀರು ತುಂಬಿಕೊಂಡು ಕಡೆಯ ಸಲವೊ ಎಂಬಂತೆ ತಂದೆ – ತಾಯಿಗೆ ಕಾಲಿಗೆ ಬಿದ್ದು ಅವರ ಪಾದಗಳನ್ನು ಕಣ್ಣಿಗೆ ಒತ್ತಿಕೊಳ್ಳುತ್ತಾಳೆ. ಮಡಿಲಲ್ಲಿ ತನ್ನ ರಕ್ತ – ಮಾಂಸ ತುಂಬಿಕೊಂಡ ಮಗ, ಮೈತುಂಬ ಸೀರೆ, ಹೂವಿನ ಮುಡಿ, ತವರಿನವರು ಕೊಟ್ಟ ಆಕಳು ಅಥವಾ ಎಮ್ಮೆಯ ಹೆಣ್ಣುಕರು, ಜೀವಚೈತನ್ಯ ಜೋಲಿಯಾಡುವ ತೊಟ್ಟಿಲು – ಇಷ್ಟೆಲ್ಲಾ ಇದ್ದೂ ಮಗಳು ದುಃಖಿಸುತ್ತಾಳೆ. ತಂದೆ – ತಾಯಿಗೂ ಇದು ಅರ್ಥವಾಗುತ್ತದೆ. ಇಷ್ಟು ಪ್ರೀತಿಯಿಂದ ಕಾಣುವ ಅವ್ವ – ಅಪ್ಪ ಇನ್ನೆಷ್ಟು ದಿನ ನನ್ನ ಪಾಲಿಗಿದ್ದಾರು? ಎಂಬುದು ಮಗಳ ಚಿಂತೆ. ನಾವು ಇರುವವರೆಗೂ ನಿನ್ನನ್ನು ಒಂಟಿಯಾಗಿ ಬಿಡಲಾರೆವು ಎಂಬ ತಂದೆ – ತಾಯಿಯರ ಪ್ರೀತಿ, ಆಸರೆಯ ನುಡಿ, ಕರುಣೆಯ ಕಟ್ಟೆಯೊಡೆಯುವುದಕ್ಕೆ ಇನ್ನೇನು ಬೇಕು? ಅದಕ್ಕೆಂದೇ ಜನಪದ ಕವಿ ’ತೊಟ್ಟಿಲ ಹೊತ್ಕೊಂಡು, ತವರು ಬಣ್ಣ ಉಟ್ಕೊಂಡು ಅಪ್ಪ ಕೊಟ್ಟೆಮ್ಮೆ ಹೊಡಕೊಂಡು ತಂಗೆಮ್ಮ ತಿಟತ್ತಿ ತಿರುಗಿ ನೋಡ್ಯಾಳು’ ಎಂದಿರುವುದು. ಮುಂದಿನ ಹೆರಿಗೆಗೆ ತವರಿಗೆ ಬರುತ್ತಿನೋ ಇಲ್ಲವೋ, ಅವ್ವ – ಅಪ್ಪ ಕರೆದರೂ ತನ್ನದೇ ಸಂಸಾರದ ಜವಾಬ್ದಾರಿಯಿರುತ್ತದೆ ಎಂದೆಲ್ಲಾ ಯೋಚಿಸುವ ಮಗಳು ಇಡೀ ತನ್ನ ತವರಿನ ನೆನಪನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತಾಳೆ.

ಬಡವರು, ಅಸಹಾಯಕರೂ ಆದ ಪಿಂಜಾರರು ಈ ಬಗೆಯ ಅನುಭವಗಳಿಂದ ತುಂಬಿ ಹೋಗಿದ್ದಾರೆ. ಶ್ರೀಮಂತರಾದವರು, ನಾಗರಿಕ ಸೌಲಭ್ಯ ಪಡೆದವರು ’ಹುಟ್ಟ’ನ್ನು ಕಾಣುವುದು ಆಸ್ಪತ್ರೆಗಳಲ್ಲಿ! ಆದರೆ ಆರ್ಥಿಕವಾದ ಅಸಹಾಯಕತೆ ಗಾಳಿ ಬೆಳಕಿನ, ಸ್ವಚ್ಛಂದ ಬಯಲಿನ ಪ್ರೀತಿ, ಮಮತೆಯ ಹುಟ್ಟನ್ನು ಕೊಡುತ್ತದೆ. ಪಿಂಜಾರರು ತಮ್ಮ ಅಸಹಾಯಕತೆಯ ನಡುವೆಯೂ ಸಾಂಸ್ಕೃತಿಕ ಸಂಪತ್ತನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಈ ಜನಾಂಗದಲ್ಲಿ ಹೆರಿಗೆಯ ಸೂತಕದ ನಲ್ವತ್ತು ದಿನಗಳವರೆಗೂ ಹೆಣ್ಣಿನ ಕುರಿತಾಗಿ ತೋರುವ ನಿಗಾ ಅಸಾಧಾರಣವಾದುದು. ಈ ನಲ್ವತ್ತು ದಿನಗಳ ಕಾಲ ಗಂಡನಾದವನು ಬಂದು ಹೆಂಡತಿಯನ್ನು ನೋಡಿ ಮಾತನಾಡಿಸಿಕೊಂಡು ಹೋಗುತ್ತಾನೆ. ಆದರೆ ಆ ಸಂದರ್ಭದಲ್ಲಿ ಅವರು ಕೂಡುವುದಕ್ಕೆ ಪಿಂಜಾರರಲ್ಲಿ ಅವಕಾಶವಿಲ್ಲ. ಬಾಣಂತಿಯನ್ನು ಮೈಲಿಗೆ ಇತ್ಯಾದಿ ನೆವದಲ್ಲಿ ದೂರ ಇಟ್ಟಿರುವುದಿಲ್ಲ. ಹೆಣ್ಣು ಹಡೆದಿದ್ದಾಳೆಂದು ಆಕೆಗೆ ಹಿಂಸೆಯನ್ನು ಕೊಡುವುದಿಲ್ಲ. ಗಂಡು – ಹೆಣ್ಣು ಹೀಗೆ ಯಾವ ಮಗು ಹುಟ್ಟಿದರೂ ಅದು ದೇವರ ಫಲ ಎಂದುಕೊಂಡು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಈ ನಲ್ವತ್ತು ದಿನದ ನಂತರ ಹೆಣ್ಣನ್ನು ಯಾವಾಗಬೇಕಾದರೂ ಗಂಡನ ಮನೆಗೆ ಕಳಿಸಿಕೊಡುತ್ತಾರೆ. ಹಾಗೆ ಕಳಿಸುವಾಗ ಬಟ್ಟೆ ಬರೆ ಇತ್ಯಾದಿ ಉಡುಗೊರೆಗಳನ್ನು ಕೊಡುತ್ತಾರೆ. ಸಾಮಾನ್ಯವಾಗಿ ಪ್ರತಿ ಹೆರಿಗೆಯ ಸಮಯದಲ್ಲೂ ಹೆಣ್ಣನ್ನು ತವರಿಗೆ ಕರೆತರುತ್ತಾರೆ. ಚೊಚ್ಚಲ ಹೆರಿಗೆಯಂತೂ ಅಗತ್ಯವಾಗಿ ತವರು ಮನೆಯಲ್ಲೇ ನಡೆಯ ಬೇಕೆನ್ನುತ್ತಾರೆ. ನಲ್ವತ್ತು ದಿನಗಳ ನಂತರ ತಾಯಿ – ಮಗುವನ್ನು ಗಂಡನ ಮನೆಗೆ ಕಳಿಸಿದರೂ ಕೆಲವು ದಿನಗಳ ಕಾಲ ಹೆಣ್ಣಿನ ತಾಯಿ ಅವಳ ಜೊತೆ ಇದ್ದು ಬರುತ್ತಾಳೆ. ಬಾಣಂತಿಯ ಹಸಿ ಮೈ ಆರುವವರೆಗೂ ಅವಳಿಗೆ ಯಾವ ಕೆಲಸವನ್ನೂ ಮಾಡಗೊಡುವುದಿಲ್ಲ. ಮಗುವಿಗೆ ಎದೆಹಾಲನ್ನೇ ಹೆಚ್ಚಾಗಿ ಕೊಡುತ್ತಾರೆ.

ಜವಳ ಅಥವಾ ಅಕೀಖಾ:

ಪಿಂಜಾರರಲ್ಲಿ ಮಗುವಿನ ಹನ್ನೊಂದನೆಯ ತಿಂಗಳ ವಯಸ್ಸಿನಲ್ಲಿ ಜವಳ ತೆಗೆಸುವ ಸಂಪ್ರದಾಯವಿದೆ. ಉರ್ದು ಭಾಷೆ ಬಲ್ಲ ಕೆಲವರು ಈ ಸಂಪ್ರದಾಯಕ್ಕೆ ’ಅಕೀಖಾ’ ಎಂದು ಕರೆಯುತ್ತಾರೆ. ಜವಳ ಅಥವಾ ಅಕೀಖಾ ಎಂದರೆ ಮಗುವಿನ ತಲೆಗೂದಲನ್ನು ಕತ್ತರಿಸುವುದು ಎಂದರ್ಥ. ಮಗುವಿನ ಜನನದ ನಂತರ ಮೊಟ್ಟಮೊದಲನೆಯ ಕ್ಷೌರವಿದು. ಪಿಂಜಾರರಲ್ಲಿ ಕೆಲವರು ಈ ಕಾರ್ಯಕ್ರಮವನ್ನು ಮಗುವಿನ ಐದಾರು ವರ್ಷದವರೆಗೂ ಮಾಡುವ ರೂಢಿಯಿದೆ. ಅಲ್ಲಿಯವರೆಗೂ ಮಗುವಿನ ತಲೆಗೂದಲನ್ನು, ಗಂಡು ಮಗುವಾಗಿದ್ದರೂ ಸಹ, ಬಾಚಿ ಜಡೆ ಹಾಕಿ ಟೇಪು ಕಟ್ಟುತ್ತಾರೆ. ಅಂದರೆ ಮಗುವಿನ ಹನ್ನೊಂದನೆಯ ತಿಂಗಳ ವಯಸ್ಸಿನಿಂದ ಐದು ವರ್ಷದವರೆಗೂ ವಯಸ್ಸಿನ ನಿರ್ದಿಷ್ಟ ದಿನ, ಮುಹೂರ್ತ ಎಂದು ನೋಡದೆ ಆಚರಿಸುವ ಈ ಕಾರ್ಯಕ್ರಮ ಅವರವರ ಅನುಕೂಲದ ದಿನಗಳಲ್ಲಿ ನಡೆಯುತ್ತವೆ. ಪಿಂಜಾರರು ತಮ್ಮ ಆದಾಯದ ಸೀಸನ್‌ಗಳಿಗನುಗುಣವಾಗಿ, ಸಾಮಾನ್ಯವಾಗಿ ಬೇಸಿಗೆಯ ದಿನಗಳಲ್ಲಿ ಈ ಕಾರ್ಯಕ್ರಮವನ್ನು ನಡೆಸುತ್ತಾರೆ.

ಮಗು ಗಂಡಾಗಿರಲಿ, ಹೆಣ್ಣಾಗಿರಲಿ, ಮಗುವಿನ ಸೋದರ ಮಾವ ಅಂದರೆ ಮಗುವಿನ ತಾಯಿಯ ಅಣ್ಣ ಅಥವಾ ತಮ್ಮ ನಿಗಧಿಯಾದ ದಿನದಂದು ಸೋದರಿಯ ಮನೆಯ ವಿಶೇಷ ಅತಿಥಿ. ಈ ಆಚರಣೆಯಲ್ಲಿ ಎರಡೂ ಕಡೆಯ ಬಂಧುಗಳು, ಆಪ್ರೇಷ್ಟರು, ಮಿತ್ರರು ಬರುತ್ತಾರೆ. ಮಗುವನ್ನು ಒಂದು ಹೊಸ ಜಮಖಾನ ಹಾಸಿ ಅದರ ಮೇಲೆ ಕೂರಿಸುತ್ತಾರೆ. ಸೋದರ ಮಾವ ಕತ್ತರಿ ತೆಗೆದುಕೊಂಡು ಮಗುವಿನ ತಲೆಗೂದಲನ್ನು ಮೂರು ಕಡೆ ಮೂರು ಸಲ ಕತ್ತರಿಸಬೇಕು (ಹಾಗೆ ಕತ್ತರಿಸಿದ ಕೂದಲನ್ನು ವಿಶೇಷವಾದ ಕೆಂಪು ಬಟ್ಟೆಯಲ್ಲಿ ಕಟ್ಟಿ ಹರಿಯುವ ನೀರಿನಲ್ಲಿ ಹಾಕುತ್ತಾರೆ). ನಂತರ ಈ ಕಾರ್ಯಕ್ರಮಕ್ಕಾಗಿ ಕರೆಸಿದ ಕ್ಷೌರಿಕ ಮಗುವಿನ ಉಳಿದ ತಲೆಗೂದಲನ್ನು ಪೂರ್ತಿಯಾಗಿ ಬೋಳಿಸುತ್ತಾನೆ. ಸೋದರಮಾವ ಈ ಕ್ಷೌರ ಮುಗಿದ ನಂತರ ಮಗುವಿಗೆ ಬಿಸಿ ನೀರಿನಿಂದ ಸ್ನಾನ ಮಾಡಿಸಿ ತಾನೇ ತಂದ ಹೊಸಬಟ್ಟೆಯನ್ನು ತೊಡಿಸುತ್ತಾನೆ. ಮೊಟ್ಟ ಮೊದಲು ತಲೆಯ ಮೇಲೆ ಕತ್ತರಿಯಾಡುವುದರಿಂದ ತನಗೇನು ಮಾಡುತ್ತಾರೋ ಎಂದು ಮಗು ಅಳುತ್ತಿರುತ್ತದೆ. ಆ ಮಗುವಿಗೆ ಸಮಾಧಾನ, ಧೈರ್ಯ ಹೇಳಿ ಇಡೀ ಆಚರಣೆಯನ್ನು ಸೋದರಮಾವನೇ ಮುಗಿಸಿಕೊಡುತ್ತಾನೆ. ಈ ಸಂಪ್ರದಾಯದಲ್ಲಿ ಹೆಚ್ಚಾಗಿ ಶಾವಿಗೆ ಪಾಯಸದ ಸಿಹಿ ಊಟವಿರುತ್ತದೆ. ಕೆಲವರು ಉಳ್ಳವರು ಕೋಳಿ, ಕುರಿ ಕೊಯ್ದು ಅದ್ದೂರಿಯಾಗಿಯೇ ತಮ್ಮ ನೆಂಟರಿಷ್ಟರಿಗೆ ಉಣಬಡಿಸುತ್ತಾರೆ. ಈ ಕಾರ್ಯಕ್ರಮದ ವಿಶೇಷ ಅತಿಥಿಯಾದ ಸೋದರಮಾವನಿಗೆ ಹೊಸಬಟ್ಟೆ ಕೊಟ್ಟು ಗೌರವಿಸಲಾಗುತ್ತದೆ. ಬಡವರಾದವರು ಕಡೇ ಪಕ್ಷ ಒಂದು ಹೊಸ ಟವೆಲ್ಲನ್ನಾದರೂ ಕೊಟ್ಟು ಸತ್ಕರಿಸುತ್ತಾರೆ.

ಪಿಂಜಾರರಲ್ಲಿ ಹೆಣ್ಣು ಮಗುವಿಗೆ ಕಿವಿಗೆ ಮುರ ಚುಚ್ಚಿಸುವ ಸಂಪ್ರದಾಯವಿದೆ. ಈ ಸಂಪ್ರದಾಯ ಕೆಲವೊಮ್ಮೆ ಜವಳದೊಂದಿಗೇ ನಡೆದುಬಿಡುತ್ತದೆ. ಇನ್ನೂ ಕೆಲವೊಮ್ಮೆ ಪ್ರತ್ಯೇಕವಾಗಿ ನಡೆಯುತ್ತದೆ. ಹೆಣ್ಣು ಮಗುವಿಗೆ ಒಂದನೆಯ ವರ್ಷದ ವಯಸ್ಸು ದಾಟುತ್ತಿದ್ದಂತೆ ಸಾಮಾನ್ಯವಾಗಿ ಸೋದರ ಮಾವ ಈ ಮುರ ಚುಚ್ಚಿಸುವ ಕಾರ್ಯಕ್ರಮಕ್ಕಾಗಿ ಅಕ್ಕಸಾಲಿಗನನ್ನು ಕರೆದುಕೊಂಡು ಬರುತ್ತಾನೆ. ಮುರ ಸಾಮಾನ್ಯವಾಗಿ ಬಂಗಾರದ್ದೇ ಆಗಿರುತ್ತದೆ. ಇದರ ಖರ್ಚು ಸೋದರ ಮಾವನದ್ದೇ ಆಗಿರುವುದು ವಿಶೇಷ. ಹುಡುಗಿ ಅಕ್ಕಸಾಲಿಗನಿಗೆ ಅಕ್ಕಿ, ಬೆಲ್ಲ, ಎಲೆಅಡಿಕೆ, ತೆಂಗಿನಕಾಯಿ ಮತ್ತು ಹತ್ತೂ ಕಾಲು ರೂಪಾಯಿ ಕೊಟ್ಟು ಸತ್ಕರಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿಶೇಷ ಊಟವಿರುವುದಿಲ್ಲ. ಪಿಂಜಾರರಲ್ಲಿ ಹೆಣ್ಣು ಮಕ್ಕಳಿಗೆ ಎಂಟು – ಹತ್ತು ವರ್ಷದವರಾದಾಗ ಮೂಗು ಚುಚ್ಚಿಸುತ್ತಾರೆ. ಮೂಗು ಚುಚ್ಚಿಕೊಳ್ಳುವುದು ಈಗೀಗ ವಿರಳವಾಗಿದೆ. ಆಧುನಿಕವಾಗಿ ಹೆಣ್ಣು ಮಕ್ಕಳಲ್ಲಿ ಬೆಳೆದಿರುವ ಸೌಂದರ್ಯದ ಕಲ್ಪನೆಯಿಂದಾಗಿ ಇದು ನಿಂತು ಹೋಗಿದೆ. ಈಗ ಇದೊಂದು ಸಂಪ್ರದಾಯವಾಗಿ ಉಳಿದಿಲ್ಲ.

ಋತುಮತಿಯಾದಾಗ

ಪಿಂಜಾರ ಭಾಷೆ ಕನ್ನಡವೇ ಆಗಿರುವುದರಿಂದ ಹೆಣ್ಣು ಮಕ್ಕಳ ಅನುಭವಕ್ಕೆ ಬರುವ ಮೊಟ್ಟಮೊದಲು ಈ ಘಟನೆಯನ್ನು ಋತುಮತಿ, ಪುಷ್ಪವತಿ, ಪ್ರೌಢಸಂಸ್ಕಾರ ಎಂದೆಲ್ಲಾ ಕರೆಯುವ ವಾಡಿಕೆಯಿಲ್ಲ. ಬದಲಾಗಿ ದೊಡ್ಡೋಕಿ ಆದಳು ಎನ್ನುತ್ತಾರೆ. ಇದುವರೆವಿಗೂ ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ಕುಣಿದು ಕುಪ್ಪಳಿಸಿ ಆಡುತ್ತಿದ್ದ ಹುಡುಗಿ ತನ್ನ ದೇಹದಲ್ಲಿ ಆದ ಈ ಹೊಸ ಅನುಭವದಿಂದ ಹೆದರಿ, ನಾಚಿಕೊಂಡು ಮೂಲೆ ಸೇರಿ ಮೌನಿಯಾಗಿ ಬಿಡುತ್ತಾಳೆ. ಸಾಮಾನ್ಯವಾಗಿ ಮನೆಮಗಳ ಈ ತೆರಿನ ಸ್ಥಿತಿಯನ್ನು ಮೊದಲು ಗಮನಿಸುವವಳು ತಾಯಿಯೇ. ಹುಡುಗಿ ೧೦=೧೧ ವರ್ಷಗಳಾದರೂ ಚೆಲ್ಲುಚೆಲ್ಲಾಗಿ ಆಡಿದರೆ ತಾಯಿ ಗದರುತ್ತಾಳೆ. ಇವತ್ತೋ ನಾಳೆಯೋ ದೊಡ್ಡೋಕಿ ಆಗ್ತೀಯಾ. ನಾಚಿಕೆ ಬೇಡವಾ? ಎಂದು ಬಯ್ಯುತ್ತಾಳೆ. ಹುಡುಗಿಗೆ ಹಾಗೆಂದರೇನೆಂದು ಆಗ ಗೊತ್ತಾಗುವುದಿಲ್ಲ. ಈಗ ಗೊತ್ತಾದ ಮೇಲೆ ತಾಯಿ ಯಾಕೆ ಹಾಗೆನ್ನುತ್ತಿದ್ದಾಳೆಂದು ಅರಿವಾಗುತ್ತದೆ. ತಾಯಿ ಇದನ್ನು ತಿಳಿದುಕೊಂಡವಳೇ ಮನೆಯ ಗಂಡಸರಿಗೆ ಸುದ್ಧಿ ಒಪ್ಪಿಸುತ್ತಾಳೆ. ಸೋದರತ್ತೆಗೆ ಬುಲಾವ್ ಹೋಗುತ್ತದೆ. ಸೋದರತ್ತೆ ಹುಡುಗಿಯ ಮೈತೊಳೆಯುತ್ತಾಳೆ. ಅಗಸರ ಮನೆಯ ಹೆಣ್ಣು ಮಕ್ಕಳು ಇಂಥ ಬಟ್ಟೆಗಳನ್ನು ನಿತ್ಯ ಧರಿಸುತ್ತಾರೆ ಎನ್ನುವ ಪ್ರತೀತಿಯಿದೆ. ಹುಡುಗಿಗೆ ಬೇರೆ ಬಟ್ಟೆ ಉಡಿಸುತ್ತಾರೆ. ಆಕೆಯನ್ನು ಅಡಿಗೆ ಮನೆ ಒಳಗೆ ಬಿಟ್ಟುಕೊಳ್ಳುವುದಿಲ್ಲ. ಆಕೆಗೆ ಬೇರೆ ಏನೂ ಕೆಲಸವನ್ನು ಹೇಳುವುದಿಲ್ಲ. ಹೊರಗಡೆ ಮೊದಲಿನಂತೆ ತಿರುಗಾಡಲು ಹೇಳುತ್ತಾರೆ. ಹುಡುಗಿ ಋತುಮತಿಯಾದ ವಿಷಯವನ್ನು ಆಪ್ತರಾದವರಿಗೆ ತಿಳಿಸುತ್ತಾರೆ. ಉಳಿದಂತೆ ವಿಷಯವನ್ನು ರಹಸ್ಯವಾಗಿಡಲಾಗುತ್ತದೆ. ಹುಡುಗಿಯ ಚಲನ-ವಲನ, ಮಾತುಕತೆಯಲ್ಲಾದ ವ್ಯತ್ಯಾಸದಿಂದಲೇ ವಿಷಯ ಇತರರಿಗೆ ತಿಳಿದೂ ಬಿಡುತ್ತದೆ. ಋತುಮತಿಯಾದ ಒಂಬತ್ತು ದಿನಗಳವರೆಗೂ ಆಕೆಗೆ ನಿತ್ಯ ಮೈ ತೊಳೆಸುತ್ತಾರೆ. ಒಂಬತ್ತನೆಯ ದಿನದಂದು ವಿಶೇಷವಾಗಿ ’ಕುಂದುರಿಸುವ’ ಕಾರ್ಯಕ್ರಮ. ಅವತ್ತು ಬೆಳಿಗ್ಗೆಯೇ ಹುಡುಗಿಗೆ ಸೋದರ‍್ತೆ ಮತ್ತಿತ್ತರ ಮುತ್ತೈದೆಯರು ಸೇರಿ ಗುಸುಲ್‌ನೀರು ಹಾಕುತ್ತಾರೆ. ಹೊಸಬಟ್ಟೆ ತೊಡಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಮೊದಲ ಸಲ ಸೀರೆ ರವಿಕೆ ತೊಡಿಸುತ್ತಾರೆ. ಇದು ’ಹುಡುಗಿ’ಯಾಗಿದ್ದವಳು ’ಹೆಂಗಸಾ’ದುದನ್ನು ಒತ್ತಿ ಹೇಳು-ವಂತಿರುತ್ತದೆ. ಅವಳಿಗಾಗಿ ಮಾಡಿಸಿದ ಆಭರಣಗಳ ಜೊತೆಗೆ ಮನೆಯಲ್ಲಿದ್ದ ಒಡವೆಗಳನ್ನು ಹಾಕಿ ಆಕೆಯನ್ನು ಮದುವಣಗಿತ್ತಿಯಂತೆ ಶೃಂಗರಿಸಲಾಗುತ್ತದೆ. (ಈ ನಡುವೆ ಈ ’ಕುಂದುರಿಸುವ’ ಕಾರ್ಯಕ್ರಮಕ್ಕೆ ನೆಂಟರಿಷ್ಟರು ಆಗಮಿಸತೊಡಗುತ್ತಾರೆ. ಎಲ್ಲರೂ ಸೇರಿದ ನಂತರ ಮೊದಲು ಊಟ, ಸಾಮಾನ್ಯವಾಗಿ ಸಿಹಿ ಊಟ. ಗೋಧಿ ರವೆ ಪಾಯಸ, ಅನ್ನ ಸಾರು ಇತ್ಯಾದಿ) ಕಾಲಿಗೆ ಬೆಳ್ಳಿ ಗೆಜ್ಜೆ, ಮೂಗುತಿ, ಕಿವಿಗೆ ಬೆಂಡೋಲೆ, ಜುಮುಕಿ ಹಾಕಿರುತ್ತಾರೆ. ತುರುಬಿಗೆ ಹೂ ಮುಡಿಸುತ್ತಾರೆ. ಮನೆಯ ಹಜಾರದಲ್ಲಿ ಜಮಖಾನ ಹಾಸಿ ಎಲ್ಲರನ್ನು ಕೂರಿಸುತ್ತಾರೆ. ಅವರಿಗೆ ಎದುರಾಗಿರುವಂತೆ ಎತ್ತರದಲ್ಲಿರುವಂತೆ ಕುರ್ಚಿಯಲ್ಲಿ ಹುಡುಗಿಯನ್ನು ಕೂರಿಸಿ ಕೊರಳಿಗೆ ಹಾರ ಹಾಕುತ್ತಾರೆ. ಮುತ್ತೈದೆಯರು ಗಂಧ ಹಚ್ಚುತ್ತಾರೆ. ಈ ಸಂದರ್ಭದಲ್ಲಿ ಹುಡುಗಿಯನ್ನು ಕುರಿತಂತೆ ಹಾಡುಕಟ್ಟಿ ಹಾಡುವವರಿರುತ್ತಾರೆ. ಆಕೆ ಮುಂದೆ ಮದುವೆಯಾಗಿ ಗಂಡನ ಮನೆಯಲ್ಲಿ ಬಾಳೇವು ಮಾಡುವಾಗ, ಮಕ್ಕಳು ಮರಿ ಮಾಡಿಕೊಂಡು ಸಂಸಾರ ನಿಭಾಯಿಸುವಾಗ – ಹೀಗೆ ಆಕೆಯ ಮುಂಬರುವ ದಿನಗಳನ್ನು ಕಲ್ಪಿಸಿಕೊಂಡು ಕನಸಿನಲೋಕದಲ್ಲಿ ಆಕೆ ನಾಚಿ ನೀರಾಗುವಂತೆ ಮಾಡುತ್ತ ಹಾಡುತ್ತಾರೆ. ಅಲ್ಲಿ ಸೇರಿದ್ದ ಜನರಲ್ಲಿ ಆಕೆಯ ಸಂಬಂಧಿಗಳಿದ್ದರೆ ಅದರಲ್ಲೇ ಒಬ್ಬ ಮಾವನನ್ನು ತೋರಿಸಿ ಆತನೇ ಆಕೆಯ ಗಂಡನೆಂದು ಹೇಳಿ ರೇಗಿಸುತ್ತಾರೆ. ಮಾವನಾದವನು ಆಕೆಯನ್ನು ಕುರಿತು ಅಣಕು ಮಾಡುತ್ತಾನೆ. ಅತ್ತೆಯ ಮಗಳಾದ ಈಕೆಯನ್ನು ಚುಡಾಯಿಸುವ ರೀತಿಯಲ್ಲಿ ಕೆಲವರು ಸಿನಿಮಾ  ಹಾಡುಗಳನ್ನೂ ಹೇಳುತ್ತಾರೆ. ಇಂಥದ್ದು ರಾತ್ರಿ ಸುಮಾರು ಹೊತ್ತಿನವರೆಗೂ ನಡೆಯುತ್ತದೆ. ಸಾಕಾಗಿ ಹೋಗುವವರು ಕೆಲವರು ಹುಡುಗಿಗೆ ರವಿಕೆಯ ಕಣ, ತಟ್ಟೆ, ಲೋಟ, ದುಡ್ಡು – ಹೀಗೆ ಏನಾದರೊಂದು ಉಡುಗೊರೆ ಕೊಟ್ಟು ಹೋಗುತ್ತಾರೆ. ಮರುದಿನದಿಂದಲೇ ಹುಡುಗಿ ಎಂದಿನಂತೆ ಹೊಲಮನೆಯ ಕೆಲಸಗಳಲ್ಲಿ ತೊಡಗುತ್ತಾಳಾದರೂ ಮೊದಲಿನ ಲವಲವಿಕೆ ಮಾಯವಾಗಿ ಏನೋ ಒಂದು ರೀತಿಯ ಗಾಂಭೀರ್ಯ ಅವಳ ನಡುವಳಿಕೆಯಲ್ಲಿ ವ್ಯಕ್ತವಾಗಲಾರಂಭಿಸುತ್ತದೆ. ತಂದೆ – ತಾಯಿಯಾದವರಿಗೆ ಅಂದಿನಿಂದಲೇ ಆಕೆಗೆ ಮದುವೆ ಮಾಡುವ ಕೊರಗು ಹುಟ್ಟಿಕೊಳ್ಳುತ್ತದೆ.

ಕೆಲವರು ಉಳ್ಳವರು ಈ ಕಾರ್ಯಕ್ರಮವನ್ನು ಚಪ್ಪರ ಮೈಕ್ ಹಾಕಿಸಿ ಅದ್ಧೂರಿಯಾಗಿ ಮಾಡುವುದೂ ಇದೆ. ಆದರೆ ಬಹುಪಾಲು ಪಿಂಜಾರರ ಇಂಥ ಯಾವುದೇ ಆಚರಣೆಗಳ ಸಂದರ್ಭದಲ್ಲಿ ಸ್ಪಷ್ಟವಾಗಿ ಎದ್ದು ಕಾಣುವುದು ಬಡತನ ಮತ್ತು ಮುಸ್ಲಿಂ ಧಾರ್ಮಿಕ ತಿಳುವಳಿಕೆಯ ಕೊರತೆ. ಆದರೆ ಎಲ್ಲ ಜಾತಿಯ ಜನ ತಂತಮ್ಮ ಜಾತೀಯ ಭಾವನೆಗಳನ್ನೆಲ್ಲ ಬಿಟ್ಟು ಇಂಥ ಸಂದರ್ಭದಲ್ಲಿ ಬೆರೆಯುತ್ತಾರೆ. ಮನಸಂಜನೆ, ದುಃಖ, ಹಸಿವು, ಹಬ್ಬ – ಹೀಗೆ ಇವರ ಯಾವುದೇ ಕ್ರಿಯೆ ಯಾವುದೋ ಒಂದು ಜನಾಂಗದವರಿಂದ ತುಂಬಿಕೊಂಡಿರುವುದಿಲ್ಲ. ಪಿಂಜಾರರ ಆಚರಣೆಗಳಲ್ಲಿ ಮುಸ್ಲಿಮರ ಹಾಜರಾತಿ ಅತ್ಯಂತ ಕಡಿಮೆಯಿರುತ್ತಾದಾದರೂ ಅವರು ಕೂಡ ಪಿಂಜಾರರಿಗೆ ಹೊಂದಿಕೊಂಡು ನಡೆಯುವ ಅನೇಕ ಉದಾಹರಣೆಗಳು ಸಿಗುತ್ತವೆ. ಗಂಡಿಗೆ ’ಮುಂಜಿ’ಯ ಅಚರಣೆ, ಹೆಣ್ಣು ಋತುಮತಿಯಾದಾಗ ನಡೆಸುವ ಆಚರಣೆಯನ್ನು ಹೋಲಿಸಿದರೆ ಗಂಡು – ಹೆಣ್ಣಿನ ನಡುವೆ ಕೂಡ ಪಿಂಜಾರರು ಅಷ್ಟಾಗಿ ಭೇದ ತೋರುವಂತೆ ಕಾಣುವುದಿಲ್ಲ.