ಸಾವು:

ಪಿಂಜಾರರಲ್ಲಿ ಸಾವಿನ ಆಚರಣೆ ಇಸ್ಲಾಂ ಅನುಸಾರವಾಗಿ ನಡೆಯುತ್ತದೆ. ಉಳಿದೆಲ್ಲ ಸಂಪ್ರದಾಯಗಳಂತೆ ಇಲ್ಲಿಯೂ ಪಿಂಜಾರರು ಇಸ್ಲಾಂನ ಅರಿವಿರುವವರ ಮಾರ್ಗದರ್ಶನವನ್ನು ಪಡೆದೇ ಅಂದರೆ ಮುಲ್ಲಾನ ಸಹಾಯದೊಂದಿಗೆ ಸಾವಿಗೆ ಸಂಬಂಧಿಸಿದ ಕ್ರಿಯೆಗಳನ್ನು ಪೂರೈಸುತ್ತಾರೆ. ವ್ಯಕ್ತಿ ಸತ್ತ ತಕ್ಷಣ ಸಂಬಂಧಿಕರಿಗೆ ಸುದ್ದಿ ಕಳಿಸುತ್ತಾರೆ. ಸಂಬಂಧಿಕರು, ಆಪ್ತರು, ಮನೆಯವರು ಗೋಳಾಡಿ ಎದೆ ಬಡಿದುಕೊಂಡು ಸತ್ತವರನ್ನು ಕೂಗಿ, ಅವರು ಬದುಕಿ ಬಾಳಿದ ರೀತಿಯನ್ನು ನೆನೆದು ಹಾಡಿ ಹೊಗಳಿ ಅಳುತ್ತಾರೆ. ಸಾವಿನ ಈ ಸಂದರ್ಭದಲ್ಲಿ ಹೀಗೆ ಭಾವನಾತ್ಮಕವಾಗಿ ಅಳುವವರು ಸತ್ತ ವ್ಯಕ್ತಿಗೆ ಸಂಬಂಧಿಸಿದ ಹೆಣ್ಣು ಮಕ್ಕಳೇ ಆಗಿರುತ್ತಾರೆ. ಗಂಡಸರು ಹೀಗೆ ಅಳುವುದು ಕಡಿಮೆ. ಹಿರಿಯರಾದವರು ಶವಸಂಸ್ಕಾರಕ್ಕೆ ಆಗಬೇಕಾಗದ ಏರ್ಪಾಡುಗಳನ್ನು ಮಾಡತೊಡಗುತ್ತಾರೆ. ಹತ್ತಿರದ ಪಟ್ಟಣಕ್ಕೆ ಹೋಗಿ ಶವಕ್ಕೆ ಮುಚ್ಚುವ ಬಟ್ಟೆಯನ್ನು ತರುತ್ತಾರೆ. ನೆಲಸಾರಿಸಿ, ಈಚಲಚಾಪೆ ಅಥವಾ ಕಡ್ಡಿ ಚಾಪೆ ಹಾಸಿ ಅದರ ಮೇಲೆ ಜಮಖಾನ ಹಾಸಿ ಶವವನ್ನು ಮಲಗಿಸುತ್ತಾರೆ. ಶವದ ಸುತ್ತ ಕರ್ಪೂರ ಉದುರಿಸಿ ತಲೆಯ ಹಿಂಭಾಗದಲ್ಲಿ ಊದಿನಕಟ್ಟಿ ಹಚ್ಚಿರುತ್ತಾರೆ. ಕಿವಿಯಲ್ಲಿ, ಮೂಗಿನ ಹೊಳ್ಳೆಗಳಲ್ಲಿ ಹತ್ತಿ ಅರಳೆಯನ್ನು ತುಂಬಿ, ಕೈಕಾಲು ಸೆಟೆದುಕೊಳ್ಳದಂತೆ ಉದಕ್ಕೆ ಚಾಚಿಕೊಳ್ಳುವಂತೆ ಮಾಡಿ ಕೈಬೆರಳುಗಳನ್ನು ಮಡಿಸಿರುತ್ತಾರೆ. ಶವದ ಹತ್ತಿರ ಸಂಬಂಧಿಕರ, ಆಪ್ತ ಹೆಂಗಸರು ಅಳುತ್ತಿರುತ್ತಾರೆ. ಮನೆಯ ಹೊರಗಡೆ ಬಾಗಿಲ ಪಕ್ಕದಲ್ಲಿ ಶವದ ಉದ್ದದಷ್ಟು ಕಾಲುವೆಯ ಗುಂಡಿ ತೋಡಿ ಅದರ ಮೇಲೆ ಹಲಗೆಯನ್ನಿಡುತ್ತಾರೆ. ಹಲಗೆಯ ಮೇಲೆ ಹೊಸ ಬಟ್ಟೆಯನ್ನು ಹಾಸಿರುತ್ತಾರೆ. ಹೆಣದ ಸ್ನಾನಕ್ಕಾಗಿ ಸಿದ್ಧತೆ ನಡೆಸುತ್ತಾರೆ. ಚೆನ್ನಾಗಿ ಕಾಯಿಸಿದ ನೀರಲ್ಲಿ ಕಿತ್ತಳೆ, ದಾಳಿಂಬೆ, ನಿಂಬೆ ಸೊಪ್ಪನ್ನು ಹಾಕುತ್ತಾರೆ.

ಅಂಟ್ವಾಳದ ಕಾಯನ್ನು ಪುಡಿ ಮಾಡಿ ನೀರಿನಲ್ಲಿ ಉದುರಿಸುತ್ತಾರೆ. ಸೀಗೆಪುಡಿ, ಸೋಪು ಎಲ್ಲ ಸಿದ್ದ ಮಾಡಿಕೊಂಡು ಮುಲ್ಲಾನನ್ನು ಕರೆದುಕೊಂಡು ಬರುತ್ತಾರೆ. ಹೆಣವನ್ನು ಸಾಗಿಸಲು ಬೇಕಾದ ಜನಾಜ (ಡೋಲಿ ಅಥವಾ ಸಿದಿಗೆ ಎಂತಲೂ ಕರೆಯುತ್ತಾರೆ) ಮುಲ್ಲಾನ ಉಸ್ತುವಾರಿಯಲ್ಲಿರುತ್ತದೆ. ಅದನ್ನು ಹೊತ್ತುಕೊಂಡು ಬರುತ್ತಾರೆ. ಮುಲ್ಲಾನ ಮಾರ್ಗದರ್ಶನದಂತೆ ಹೆಣದ ಮೈ ತೊಳೆಯುತ್ತಾರೆ. ಸತ್ತವರು ಗಂಡುಸಾದರೆ ಗಂಡಸರು, ಹೆಣ್ಣಾದರೆ ಹೆಂಗಸರು ಈ ಕಾರ್ಯನಿರ್ವಹಿಸುತ್ತಾರೆ. ಗಂಡಸು ಸತ್ತಿದ್ದರೆ, ಬಿಳಿ ಬಟ್ಟೆ, ಹೆಣ್ಣು ಸತ್ತಿದ್ದರೆ ಕೆಂಪು ಬಟ್ಟೆ ತಂದಿರಲಾಗುತ್ತದೆ. ಸೊಂಟದಿಂದ ಕಾಲಿನ ಆಚೆಯವರೆಗೆ, ಸೊಂಟದಿಂದ ತಲೆಯ ಆಚೆ ತುದಿಯವರೆಗೆ ಬಟ್ಟೆಯನ್ನು ಸುತ್ತಿ ಕಟ್ಟುತ್ತಾರೆ. ತಲೆಯ ಸುತ್ತಲೂ ಬಟ್ಟೆ ಸುತ್ತಿ ಕುತ್ತಿಗೆಯ (ಗದ್ದದಲ್ಲಿ) ಕೆಳಗೆ ಕಟ್ಟುತ್ತಾರೆ. ಮತ್ತೆ ಹೆಣದ ಕೆಳಗೊಂದು ಮೇಲೊಂದು ಬಟ್ಟೆ ಹಾಕಿ ಕಾಲಿನ ಕೆಳಗೆ ಜುಟ್ಟಿನಾಕಾರದಲ್ಲಿ ಕಟ್ಟುತ್ತಾರೆ. ಅದೇ ಬಟ್ಟೆಯನ್ನು ಕುತ್ತಿಗೆಯವರೆಗೂ ಕಟ್ಟಿ ಮುಖ ಮಾತ್ರ ಕಾಣುವಂತೆ ಬಿಟ್ಟಿರುತ್ತಾರೆ. ಬಂದವರು ಮುಖದರ್ಶನ ಮಾಡಲೆಂಬುದೇ ಆ ವ್ಯವಸ್ಥೆಯ ಮುಖ್ಯ ಕಾರಣ.

ಮೇಲಿನದೆಲ್ಲ ನಡೆಯುತ್ತಿರುವಾಗಲೇ ಕೆಲವು ತುಂಡು, ಹುಡುಗರನ್ನು ಹಾರೆ, ಚಲ್ಕೆ, ಪುಟ್ಟಿಯೊಂದಿಗೆ ಗುದ್ದು ತೆಗೆಯಲು ಖಬರಸ್ತಾನಕ್ಕೆ ಗೋರಿಗಳ ಹತ್ತಿರ ಕಳಿಸಿರುತ್ತಾರೆ. ಹಿರಿಯ – ರೊಬ್ಬರ ಮಾರ್ಗದರ್ಶನದಂತೆ ಹೆಣವನ್ನು ಹಳ್ಳದಲ್ಲಿಡಲು ಬೇಕಾದ ಉದ್ದ, ಅಗಲವನ್ನು ಊಹಿಸಿ ಗುದ್ದು ಕೊಡುತ್ತಾರೆ. ಪಿಂಜಾರರು ಉತ್ತರ ದಕ್ಷಿಣಕ್ಕೆ ಉದ್ದ, ಪೂರ್ವ ಪಶ್ಚಿಮಕ್ಕೆ ಅಗಲವಿರುವ ಹಾಗೆ ಗುದ್ದು ತೋಡಿ ಹೆಣ ಬರುವವರೆಗೂ ಕಾಯುತ್ತಾರೆ. ಈ ಗುದ್ದು ತೋಡುವ ಕೆಲಸದಲ್ಲಿ ಅವರಿವರೆನ್ನದೆ ಆಪ್ತರಾಗಿರುವ ಯಾವುದೇ ಜನಾಂಗದ ತಿಗುಡಾಗಿರುವ ಹುಡುಗರಿರುತ್ತಾರೆ.

ಸತ್ತವರಿಗೆ ಸಂಬಂಧಪಟ್ಟವರೆಲ್ಲರೂ ಬರುವವರೆಗೆ ಹೆಣವನ್ನು ಡೋಲಿಯಲ್ಲಿಡದೆ ಮನೆಯ ಹೊರಗೆ ಚಾಪೆ ಹಾಸಿ ಮಲಗಿಸಿರುತ್ತಾರೆ. ಅಪರೂಪಕ್ಕೆ ದೂರದೂರಿನವರು ತಕ್ಷಣ ಬರಲಾಗ-ದಿದ್ದರೆ, ಅವರು ಬರಲೇಬೇಕೆಂಬುದಿದ್ದರೆ ಅವರಿಗಾಗಿ ಕಾಯುತ್ತಾರೆ. ಹೆಣವನ್ನು ಮುಂದಿಟ್ಟು-ಕೊಂಡು ರಾತ್ರಿ, ಕತೆ, ಪುರಾಣ ಹೇಳಿಸುವುದು ಮಾಡುತ್ತಾರೆ. ಕೆಲವು ಕಡೆ ಕುರಾನ್ ಓದಿಸುವುದಾದರೆ ಕನ್ನಡದಲ್ಲಿ ಅದರ ಅರ್ಥವನ್ನು ಹೇಳುವವರೊಬ್ಬರಿರುತ್ತಾರೆ. ಕೆಲವರು ಹೆಣವನ್ನು ಹೆಚ್ಚು ಹೊತ್ತು ಕಾಯಿಸುವುದಿಲ್ಲ. ಯಾರೇ ಬರಬೇಕಿದ್ದರೂ ತಡೆಯದೆ, ಹೆಣ ಇದ್ದಷ್ಟು ದುಃಖ ಹೆಚ್ಚಾಗುತ್ತದೆಂದು ಹೊತ್ತುಕೊಂಡು ಹೋಗಿ ದಫನ್ ಮಾಡುತ್ತಾರೆ. ಆದರೆ ಅದು ಅಪರೂಪವಷ್ಟೇ.

ಶವವನ್ನು ಇನ್ನೇನು ಗೋರಿಯ ಕಡೆ ತೆಗೆದುಕೊಂಡು ಹೋಗಬೇಕೆನ್ನುವಾಗ ಹೆಂಗಸರು ಅಬ್ಬರಿಸಿಕೊಂಡು ಅಳುತ್ತಾರೆ. ಅವರನ್ನೆಲ್ಲ ಗಟ್ಟಿಯಾಗಿ ಹಿಡಿದುಕೊಂಡು ಗಂಡಸರು ಶವವನ್ನು ಡೋಲಿಗೆ ಹಾಕುತ್ತಾರೆ. ಡೋಲಿಯನ್ನು ರಿಪೀಸಿನಂತಹ ಕಟ್ಟಿಗೆಯ ನುಣುಪಾದ ತುಂಡುಗಳನ್ನು ಅಡ್ಡ ಉದ್ದವಾಗಿಟ್ಟು ಮಾಡಿರುತ್ತಾರೆ. ಒಂದು ಶವವನ್ನು ಒಯ್ಯಬಹುದಾದಷ್ಟು ಅಳತೆ ಯದಾಗಿರುತ್ತದೆ. ಮೇಲ್ಭಾಗದ ಮುಚ್ಚಳದ ರೀತಿಯ ಕದನವನ್ನು ಕೂಡ ಅಡ್ಡ ಉದ್ದ ಪಟ್ಟಿಗಳಿಂದ ತಯಾರಿಸುತ್ತಾರೆ. ಹೆಣವನ್ನು ಕಡೆಯ ಬಾರಿಗೆ ನೋಡುವವರಿಗೆಲ್ಲ ಅವಕಾಶ ಕೊಟ್ಟು ಕುತ್ತಿಗೆಯವರೆಗೂ ಕಟ್ಟಿ ಉಳಿದಿದ್ದ ಬಟ್ಟೆಯ ಭಾಗವನ್ನು ಮುಖದ ತುಂಬ ತಲೆಯ ಹಿಂದಿನವರೆಗೂ ಮುಚ್ಚಿ ಜುಟ್ಟಿನಂತೆ ಹಿಂದಕ್ಕೆ ಕಟ್ಟುತ್ತಾರೆ. ಮುಲ್ಲಾ ಹೇಳಿದಂತೆ ಹಿರಿಯರಾದವರು ಕಟ್ಟುತ್ತಾರೆ. ಕಡೆಯ ಬಾರಿ ಮುಖದರ್ಶನ ಮಾಡುವಾಗ ಸಾಮಾನ್ಯವಾಗಿ ಮುಲ್ಲಾ ತಟ್ಟೆಯೊಂದನ್ನು ಹಿಡಿದು ಜನರ ಹತ್ತಿರ ಒಯ್ದಂತೆ ಜನರು ಚಿಲ್ಲರೆ ನಾಣ್ಯಗಳನ್ನು ಹಾಕುತ್ತಾರೆ. ಮುಲ್ಲಾ ಹೇಳಿದ ನಂತರ ನಾಲ್ಕು ಜನ ಡೋಲಿಯ ಒಳಭಾಗದಲ್ಲಿ ಶವವನ್ನು ಇಟ್ಟು ಮೇಲ್ಭಾಗದ ಮುಚ್ಚಳವನ್ನು ಮುಚ್ಚಿ ಹೊತ್ತುಕೊಳ್ಳುತ್ತಾರೆ. ಹೊತ್ತುಕೊಳ್ಳುತ್ತಿದ್ದಮತೆ ಹೆಣ್ಣು ಮಕ್ಕಳು ಅಳು ಜೋರಾಗುತ್ತದೆ. ಗಂಡಸರು ಡೋಲಿಯ ಹಿಂದೆ ಹೊರಡುತ್ತಾರೆ. ಮುಂದೆ ಮುಂದೆ ಮುಲ್ಲಾ ಹೋದಂತೆ ಆತನ ಹಿಂದೆ ಡೋಲಿ, ನಂತರ ಜನರು ಅತ್ಯಂತ ಮೌನದಿಂದ ನಡೆದು ಹೋಗುತ್ತಾರೆ. ಹೋಗುವಾಗ ಡೋಲಿಯನ್ನು ಆರಂಭದಲ್ಲಿ ಮನೆಯ ಗಂಡಸರು, ನಂತರ ಆಪ್ತರಾದವರು ಹೊರುತ್ತಾರೆ. ಗೋರಿ ಹತ್ತಿರ ಬಂದ ನಂತರ ಡೋಲಿ ಇಳಿಸುತ್ತಾರೆ. ಮುಲ್ಲಾ ಪಶ್ಚಿಮಕ್ಕೆ ತಿರುಗಿ ನಮಾಜು ಮಾಡುತ್ತಾನೆ. ಮುಖ್ಯರಾದ ಕೆಲವರೂ ನಮಾಜು ಮಾಡುತ್ತಾರೆ. ಗೋರಿಯ ಹತ್ತಿರ ನೋಡುವವರಿದ್ದರೆ ಮತ್ತೊಮ್ಮೆ ಅಂತಿಮವಾಗಿ ಮುಖ ನೋಡಲು ಅವಕಾಶ ಮಾಡಿಕೊಡಲಾಗುತ್ತದೆ. ಶವವನ್ನು ಎತ್ತಿ ನಿಧಾನವಾಗಿ ಗೋರಿಯ ಒಳಗೆ ಉತ್ತರಕ್ಕೆ ತಲೆಯಿರುವಂತೆ, ಆದರೆ ಮುಖ ಪಶ್ಚಿಮಕ್ಕೆ ತಿರುಗಿರುವಂತೆ ಗೋಡಿಯಾಗಿಡುತ್ತಾರೆ. ಶವದ ಬಲಭಾಗ ಭೂಮಿಯ ಕೆಳಭಾಗಕ್ಕೆ ಹೊಂದಿಕೊಂಡಂತಿದ್ದು ಎಡಭಾಗವನ್ನು ಮೇಲ್ಮುಖವಾಗಿರಿಸುತ್ತಾರೆ. ನಂತರ ಬಂದಿದ್ದವರಿಗೆಲ್ಲ ಮೂರು ಮೂರು ಹಿಡಿ ಮಣ್ಣನ್ನು ಕೊಡಲು ಮುಲ್ಲಾ ಹೇಳುತ್ತಾನೆ. ಎಲ್ಲರೂ ಮೂರು ಹಿಡಿ ಮಣ್ಣನ್ನು ಹಾಕುತ್ತಾರೆ. ನಂತರ ಚಲ್ಕೆಯಿಂದ ಮಣ್ಣನ್ನೆಳೆದು ಮುಚ್ಚಲಾಗುತ್ತದೆ. ಮುಚ್ಚಿದ ಮೇಲೆ ಸುತ್ತಲೂ ಸಣ್ಣಪುಟ್ಟ ಕಲ್ಲುಗಳನ್ನು ನೆಟ್ಟು ಮೇಲ್ಭಾಗದಲ್ಲಿ ಹೂವುಗಳನ್ನು ಹೊದಿಸಲಾಗುತ್ತದೆ. ಎಲ್ಲರೂ ಹಿಂತಿರುಗುವಾಗ ಸತ್ತವರ ಬಗ್ಗೆ ಮಾತಾಡಿಕೊಳ್ಳುತ್ತಾ ಅವರವರ ಕೆಲಸಗಳನ್ನು ನೋಡಿಕೊಳ್ಳಲು ಹೊರಡುತ್ತಾರೆ. ಡೋಲಿಯನ್ನು ಮುಲ್ಲಾನ ಬಳಿಕೊಟ್ಟು ಆತನಿಗೆ ವಂದಿಸಿ ಬರುತ್ತಾರೆ.

ಪಿಂಜಾರರಲ್ಲಿ ಹೆಂಗಸರು ಮತ್ತು ಮಕ್ಕಳನ್ನು ಶವದ ಹಿಂದೆ ಮತ್ತು ಗೋರಿಯ ಹತ್ತಿರ ಕಳಿಸುವುದಿಲ್ಲ. ಪಿಂಜಾರರ ಮತ್ತು ಮುಸ್ಲಿಮರ ಗೋರಿಗಳನ್ನು ಒಟ್ಟಾಗಿರುತ್ತವೆ. ಇತ್ತ ಗಂಡಸರೆಲ್ಲ ಗೋರಿಯ ಬಳಿ ಬಂದಾಗ ಸತ್ತವನು ಗಂಡನಾಗಿದ್ದರೆ ಹೆಣ್ಣಿಗೆ ಬಳೆ ಒಡೆದು ಕರಿಮಣಿ ಅಥವಾ ತಾಳಿ ತೆಗಿಸಿ ಶವವನ್ನು ಮೈತೊಳೆದ ಜಾಗದಲ್ಲಿ ಹಾಕಿ ಆ ಗುಂಡಿಯನ್ನು ಮುಚ್ಚುತ್ತಾರೆ. ಹೆಣ್ಣಿಗೂ ಸ್ನಾನ ಮಾಡಿಸಿ ನಿತ್ಯ ಉಡುವಂತಹ ಉಡುಪನ್ನೇ ಕೊಡುತ್ತಾರೆ. ಶವವನ್ನು ದಫನ್ ಮಾಡಿದ ಒಂದೆರಡು ದಿನ ಸತ್ತವರ ಮನೆಯಲ್ಲಿ ಅರಣ್ಯ ಮೌನವಿರುತ್ತದೆ. ಒಲೆ ಹಚ್ಚಿರುವುದಿಲ್ಲ. ಅಕ್ಕಪಕ್ಕದವರು, ಆಪ್ತರು, ಸಂಬಂಧಿಕರೆಲ್ಲ ಊಟ ತಂದುಕೊಟ್ಟು ಸಂತೈಸಿ ಉಣ್ಣುವಂತೆ ಜುಲುಮೆ ಮಾಡುತ್ತಾರೆ. ಸತ್ತವರ ಗುಣಗಾನ ನಡೆಯುತ್ತದೆ. ಸತ್ತನಂತರದ ದಿನ ಕರ್ಮಗಳನ್ನು ಮಾಡುವ ವ್ಯವಸ್ತೆಗೆ ಗಂಡಸರು ಓಡಾಡುತ್ತಾರೆ. (ಪಿಂಜಾರರ ಶವಸಂಸ್ಕಾರಕ್ಕೆ ಹೋದವರೆಲ್ಲರೂ ಸತ್ತವರ ಮನೆಗೇ ಬಂದು ಕೈಕಾಲು ಮುಖ ತೊಳೆದುಕೊಂಡು ಹೋಗುವುದು ರೂಢಿ) ವಿಶೇಷವೆಂದರೆ’ ಶವ ಸಂಸ್ಕಾರಕ್ಕೆ ಊರಿನಲ್ಲಿರುವ ಪ್ರತಿ ಜನಾಂಗದವರೂ ಸಾಮಾನ್ಯವಾಗಿ ಹೋಗುತ್ತಾರೆ. ಪಿಂಜಾರರ ಬದುಕಿನ ಅತಿಮಹತ್ವದ ಸಂದರ್ಭಗಳನ್ನೂ ಒಳಗೊಂಡಂತೆ ಸಾಮಾನ್ಯ ಸಂದರ್ಭಗಳಲ್ಲೆಲ್ಲ ಎಲ್ಲ ಜನಾಂಗದವರ ಒಡನಾಟ ಮಾತ್ರ ಅವರ ಜಾತ್ಯಾತೀತ ಸಂಸ್ಕೃತಿಯ ದ್ಯೋತಕವಾಗಿದೆ. ಪಿಂಜಾರರ ಪೂರ್ವಿಕರು ಮೊದಲು ಸಿದಿಗೆ ಯನ್ನೂ ತಾವೇ, ಉದ್ದನೆಯ ಎರಡು ಬಿದಿರುಗಳನ್ನಿಟ್ಟು ಅಡ್ಡವಾಗಿ ಅಡಿಕೆಪಟ್ಟಿ ಬಿಗಿದು ತಯಾರು ಮಾಡಿ ಶವಸಂಸ್ಕಾರಕ್ಕೆ ತೆಗೆದುಕೊಂಡು ಹೋಗುತ್ತಿದ್ದರೆಂದೂ ತಿಳಿದುಬರುವುದರಿಂದ ಪಿಂಜಾರರ ಜೀವನ ಸಂಸ್ಕೃತಿಯ ಹಿನ್ನೆಲೆ ಸ್ಪಷ್ಟವಾಗುತ್ತದೆ.

ಪಿಂಜಾರರಲ್ಲಿ ವ್ಯಕ್ತಿ ಸತ್ತ ನಂತರದ ತಿಥಿ ಕರ್ಮಗಳು ವಿಶಿಷ್ಟವಾದವುಗಳು. ಸತ್ತ ಮೂರನೆಯ ದಿನದಲ್ಲಿ ಚೀಲಗಟ್ಟಲೆ ಮಂಡಕ್ಕಿ ತಂದು ಅದರಲ್ಲಿ ಬೆಲ್ಲ, ಕೊಬ್ಬರಿ ಚೂರುಗಳು, ಉತ್ತುತ್ತಿ, ಹಣ್ಣು, ಕಿತ್ತಳೆತೊಳೆ, ಬಿಸ್ಕತ್ತು, ಕಡ್ಲೆ, ಪೆಪ್ಪರಮೆಂಟು ಬೆರೆಸುತ್ತಾರೆ. ಊರಿನ ಜನರಿಗೆಲ್ಲ ಗೋರಿಯ ಹತ್ತಿರ ಬರಲು ಹೇಳುತ್ತಾರೆ. ಹೆಣ್ಣು ಮಕ್ಕಳೆಲ್ಲ ಸತ್ತವರ ಮನೆಯ ಹತ್ತಿರವೇ ಸೇರುತ್ತಾರೆ. ಹೆಣ್ಣು ಮಕ್ಕಳಿಗೆಂದು ದೊಡ್ಡ ಗೂಡೆಯಂತಹ ಪುಟ್ಟಿಯಲ್ಲಿ ಸಿಹಿ ತಿನಿಸು ಬೆರೆಸಿದ ಮಂಡಕ್ಕಿಯನ್ನಿಟ್ಟು ಉಳಿದದ್ದನ್ನೆಲ್ಲ ಜಲ್ಲೆಯಲ್ಲಿ ತುಂಬಿಕೊಂಡು ಗೋರಿ ಹತ್ತಿರ ತರುತ್ತಾರೆ. ಮುಲ್ಲಾನನ್ನು ಅಲ್ಲಿಗೆ ಕರೆಸಲಾಗುತ್ತದೆ. ಮುಲ್ಲಾ ’ಘಾತೆಹ’ ಮಾಡಿದ ಮೇಲೆ ಮಂಡಕ್ಕಿಯನ್ನು ಎಲ್ಲರಿಗೂ ಹಂಚುತ್ತಾರೆ. ಇಲ್ಲಿ ವಿಶೇಷವಾಗಿ ಎಲ್ಲ ಜನಾಂಗದವರು, ಮಕ್ಕಳು ಮರಿಸಮೇತ ಸೇರಿರುತ್ತಾರೆ. ಈ ಕಾರ್ಯ ಬೆಳಗ್ಗೆ ನಡೆಯುತ್ತದೆ. ಮನೆಯಲ್ಲಿದ್ದ ಹೆಣ್ಣು ಮಕ್ಕಳೂ ಮಂಡಕ್ಕೆ ತಿನ್ನುತ್ತಾರೆ. ಗೋರಿ ಹತ್ತಿರ ಹಂಚಿದ ಮಂಡಕ್ಕಿಯನ್ನು ಅಲ್ಲೇ ತಿಂದು ಬರುತ್ತಾರೆ.

ಸಾವಿನ ನಂತರದ ಒಂಬತ್ತನೆಯ ದಿನ ಪಿಂಜಾರರು ತಿಥಿ ಆಚರಿಸುತ್ತಾರೆ. ಇದನ್ನು ಅತ್ಯಂತ ಖರ್ಚಿನಿಂದ, ಶ್ರದ್ಧೆ ಜವಾಬ್ದಾರಿಯಿಂದ ನಿರ್ವಹಿಸಲಾಗುತ್ತದೆ. ಒಂಭತ್ತನೆಯ ದಿನದ ಬೆಳಿಗ್ಗೆಯೇ ಮುಲ್ಲಾನನ್ನು ಕರೆಸಿ ಎಲ್ಲರಿಗೂ ’ದಾವತ್ತಿ’ಗೆ ಹೇಳಲು ತಿಳಿಸುತ್ತಾರೆ. ಅದರಂತೆ ಮುಲ್ಲಾ ಪ್ರತಿಯೊಬ್ಬ ಪಿಂಜಾರ, ಮುಸ್ಲಿಮರ ಮನೆಗೂ ಹೋಗಿ ’ದಾವತ್ತು’ ಹೇಳಿ ಬರುತ್ತಾನೆ. ಆವತ್ತಿನ ಅಡುಗೆಗಾಗಿ ಕುರಿಯನ್ನು ಹೊಸದಾಗಿ ಕೊಂಡು ತಂದಿರುತ್ತಾರೆ. ಈ ಕುರಿ ತಂದು ಕೊಯ್ಸಿ ಅಡುಗೆ ಮಾಡಿಸುವುದು ಅವರವರ ಶಕ್ತ್ಯಾನುಸಾರ ನಡೆಯುತ್ತದೆ. ಸ್ಥಿತಿವಂತರು ಮೂರು  – ನಾಲ್ಕು ಕುರಿ ಕೊಯ್ಸುತ್ತಾರೆ. ಬಡವರು ಸಾಲ ಮಾಡಿಯಾದರೂ ಕುರಿ ತರುತ್ತಾರೆ. ಆವತ್ತು  ಬೆಳಿಗ್ಗೆಯಿಂದಲೇ ಇದಕ್ಕಾಗಿ ಅವರಸರದ ಓಡಾಟ ನಡೆಯುತ್ತದೆ. ಕಟ್ಟಿಗೆ ಒಡೆಸುತ್ತಾರೆ. ಬಳಗದವರ ಹತ್ತಿರ ಹೋಗಿ ಅಗತ್ಯವಾದ ಪಾತ್ರೆ, ಗಂಗಾಳ, ಲೋಟ ಹಂಡೇವುಗಳನ್ನು ತರುತ್ತಾರೆ. ಮನೆಯ ಹೊರಗೆ ಸುತ್ತಲೂ ಕಂಬ ನೆಟ್ಟು ಕುಪ್ಪಡಿ ಕಟ್ಟಿಕೊಂಡು ಮೂರು ಕಲ್ಲುಗಳನ್ನಿಟ್ಟು ಒಲೆಮಾಡಿ ದೊಡ್ಡ ಹಂಡೇವುಗಳಲ್ಲಿ ಅಡಿಗೆ ಮಾಡುವ ವ್ಯವಸ್ಥೆ ಮಾಡುತ್ತಾರೆ. ಒಳ್ಳೆಯ ಅಕ್ಕಿ, ಗೋಧಿ ತಂದು ಗೋಧಿ ಹುಗ್ಗಿ, ಅನ್ನ ಮಾಡುತ್ತಾರೆ. ಕುರಿಯನ್ನು ಮುಲ್ಲಾನಿಂದ ಹಲಾಲ್ ಮಾಡಿಸಿ ಕೊಯ್ಸಿ ಖಲೀಝ ಮುಂತಾದ ಕೆಲವು ಭಾಗಗಳನ್ನು ಆತನಿಗೆ ಕೊಡುತ್ತಾರೆ. ಕುರಿಯ ಚರ್ಮ ಸುಲಿದು ಮಾರುತ್ತಾರೆ. ದೊಡ್ಡ ತಟ್ಟೆಯಾಕಾರದ ಹಿತ್ತಾಳೆ ಅಥವಾ ಚಿಲವಾರದ ಸೀನಿನಲ್ಲಿ ಕುರಿಯ ತಲೆಯಿಟ್ಟು ಗಟ್ಟಿಯಾಗಿ ಅದುಮಿಕೊಂಡು ಕುರಿಯ ಬಾಯಲ್ಲಿ ನೀರು ಬಿಟ್ಟು ಮುಲ್ಲಾ ಹರಿತವಾದ ಚಾಕುವಿನಿಂದ ಕುರಿಯ ಕುತ್ತಿಗೆಯ ಒಳನಾಳಗಳನ್ನು ಕತ್ತರಿಸುತ್ತಾನೆ. ರಕ್ತಪೂರ್ತಿ ಸೀನಿನಲ್ಲಿ ಉಳಿಯುವ ಹಾಗೆ ಮಾಡಿ ಕುರಿಯನ್ನು ತೊಲೆಗೆ ಕಟ್ಟಿ ಚರ್ಮ ಸುಲಿಸುತ್ತಾರೆ. ಜಠರದ ಭಾಗವನ್ನು ಪೂರ್ತಿ ಪುಟ್ಟಿಗೆ ಅದರೊಳಗಿರುವ ಕಳ್ಳು ಪಚ್ಚಿ ಇಕ್ಕೆಯನ್ನು ತಿಕ್ಕಿ ತೊಳೆದು ತರುತ್ತಾರೆ. ಕುರಿ ಮಾಂಸದ ಅಡಿಗೆ ಮಾಡಲು ಹೆಂಗಸರು ಮತ್ತು ಗಂಡಸರು ಇರುತ್ತಾರೆ. ಹುಗ್ಗಿ, ಅನ್ನ, ಸಾರು ಆದ ನಂತರ ಒಂದು ತಟ್ಟೆಯಲ್ಲಿ ಅದನ್ನು ತೆಗೆದಿಟ್ಟು ಮುಲ್ಲಾನನ್ನು ಕರೆಸಿ ’ಓದಿಕೆ’ ಮಾಡಿಸುತ್ತಾರೆ. ಸತ್ತವರ ಮನೆಯ ಯಾರಾದರೊಬ್ಬರನ್ನು ಮತ್ತೊಮ್ಮೆ ಸಂಬಂಧಿಕರು, ಆಪ್ತರು ಮುಂತಾದವರನ್ನು ಊಟಕ್ಕೆ ಕರೆತರಲು ವಿಶೇಷವಾಗಿ ಕಳಿಸುತ್ತಾರೆ. ಮಾಂಸಾಹಾರದ ಇತರೆ ಜನಾಂಗದವರೂ ಬರುತ್ತಾರೆ. ಸಸ್ಯಾಹಾರದ ಬೇರೆ ಜನಾಂಗದ ಆಪ್ತರೂ ಬಂದು ಊಟ ಮಾಡುವ ಜನರಿಗೆ ಬಡಿಸುತ್ತಾರೆ. ಊಟಕ್ಕೆ ಬಂದ ಜನರು ’ಓದಿಕೆ’ ಮಾಡಿಸಿದ ಆಹಾರದ ತಟ್ಟೆಯ ಬಳಿ ಇಟ್ಟಿರುವ ಕುಡಿಕೆಯಲ್ಲಿ ಲೋಬಾನ ಹಾಕಿ (ಹಾಗೆ ’ಓದಿಕೆ’ ಮಾಡುವ ಮುನ್ನ ಶವವನ್ನು ಮನೆಯಲ್ಲಿ ಮಲಗಿಸಿದ್ದ ಜಾಗದಲ್ಲಿ ಒಂದು ಕಡೆ ಕೆಮ್ಮಣ್ಣಿನಿಂದ ಬಳಿದು ತಟ್ಟಯನ್ನಿಟ್ಟು ಆಹಾರದಲ್ಲಿ ಊದಿನಕಡ್ಡಿ ಹಚ್ಚಿರುತ್ತಾರೆ) ಊಟಕ್ಕೆ ಸಾಮೂಹಿಕವಾಗಿ ಕುಳಿತುಕೊಳ್ಳುತ್ತಾರೆ. ಊಟದ ನಂತರ ಎಲೆ ಅಡಿಕೆ ಹಾಕಿಕೊಂಡು ಹೊರಡುತ್ತಾರೆ. ಪಿಂಜಾರರಲ್ಲಿ ಸಾಮಾನ್ಯವಾಗಿ ’ದಾವತ್ತು’ ಹೇಳಿದ ಈ ದಿನದ ಸಂಜೆ ಮನೆಗೊಬ್ಬರು ಬಂದೇ ಬರುತ್ತಾರೆ. ಕಳ್ಳುಬಳ್ಳಿ, ಸಂಬಂಧಿಕರಲ್ಲಿ ಒಲೆ ಹಚ್ಚಿರುವುದಿಲ್ಲ. ಉಪವಾಸವಾದರೂಇದ್ದು ಈ ದಿನ ಬಂದು ಒಂಬತ್ತನೆಯ ದಿನದ ಊಟ ಮಾಡಿ ಮನೆಗೆ ಹೋಗುತ್ತಾರೆ. ಮಾಂಸದ ಚೂರುಗಳನ್ನು ಪ್ರತಿಯೊಬ್ಬರಿಗೂ ಹಂಚಿಕೊಡುವವರಿರುತ್ತಾರೆ. ಮಾರನೆಯ ದಿನ ತಲೆಸಾರು, ರಕ್ತದ ಸಾರನ್ನು ಮಾಡಿಕೊಂಡು ಆಪ್ತರಾದವರೆಲ್ಲ ಉಣ್ಣುತ್ತಾರೆ. ಹೆಣ್ಣು ಮಕ್ಕಳು ಕೊನೆಯಲ್ಲಿ ಉಣ್ಣುತ್ತಾರೆ.

ಒಂಭತ್ತನೆಯ ದಿನದ ತಿಥಿಯ ಕಾರ್ಯಕ್ರಮ (ಪಿಂಜಾರರು ’ತಿಥಿ’ ಅನ್ನುವುದಿಲ್ಲ ಬದಲಾಗಿ ’ದಿನ’ ಎನ್ನುತ್ತಾರೆ) ಪಿಂಜಾರರ ಪಾಲಿಗೆ ಸಾಮಾಜಿಕ ಪ್ರತಿಷ್ಠೆಯ ದಿನ. ಅವತ್ತು ಊಟ ಹಾಕುವುದರ ಆಧಾರದ ಮೇಲೆ ಜನ ಸತ್ತವರ ಮನೆಯವರನ್ನು ಹೊಗಳುವ, ಮೆಚ್ಚಿಕೊಳ್ಳುವ ಅಥವಾ ಆಡಿಕೊಳ್ಳುವ ರೀತಿಯಲ್ಲಿ ಮಾತನಾಡಿಕೊಳ್ಳುತ್ತಾರೆ. ಇವರಲ್ಲೂ ಸ್ವರ್ಗ ನರಕದ ಕಲ್ಪನೆಯಿರುವುದರಿಂದ ಜನ ಹಾಡಿ ಹೊಗಳಿದಷ್ಟು ಸತ್ತವರಿಗೆ ಸದ್ಗತಿ ದೊರೆಯುತ್ತದೆಂದು ಪಿಂಜಾರರು ನಂಬುತ್ತಾರೆ. ಅದಕ್ಕಾಗಿಯೇ ಎಂಥ ಬಡ ಪಿಂಜಾರನೂ ಕೂಡ ಈ ದಿನವನ್ನು ತನ್ನ ಶಕ್ತಿ ಮೀರಿ ಆಚರಿಸುತ್ತಾನೆ. ಮತ್ತು ಕಡ್ಡಾಯವಾಗಿ ಮಾಂಸದೂಟವನ್ನು ಕೊಡುತ್ತಾನೆ. ಪಿಂಜಾರನ ಈ ಬಗೆಯ ಮನೋಭಾವ ಅತನ ಧಾರ್ಮಿಕ ಹಿನ್ನೆಲೆ ಮತ್ತು ಅವಲಂಬೆನಯನ್ನು ತೋರುವುದಲ್ಲದೆ ಮುಖ್ಯವಾಗಿ ಸಾಮಾಜಿಕ ಭಯವನ್ನು ತೋರುತ್ತದೆ. ಯಾಕೆಂದರೆ ಮದುವೆಯಂತಹ ಸಂತೋಷದ ಸಂದರ್ಭದಲ್ಲಿ ಕೂಡ ಮಾಂಸವನ್ನು ಕೊಡಲಾರದ ಪಿಂಜಾರರು ಸಾವಿನ ಹಿನ್ನೆಲೆಯ ವಿಧಿಕ್ರಿಯೆಗಳಲ್ಲಿ ಅದನ್ನು ಕಡ್ಡಾಯವಾಗಿಸಿಕೊಂಡಿದ್ದಾರೆ. ಮೊದಮೊದಲು ಈ ’ದಿನ’ದಲ್ಲಿ ಮಾಂಸಾಹಾರದ ಜೊತೆಗೆ ಪಾಯಸ ಮಾಡುತ್ತಿದ್ದರೂ ಈಗೀಗ ಪಾಯಸವನ್ನು ಕೈಬಿಟ್ಟಿದ್ದಾರೆ. ಅನ್ನ, ಮಾಂಸಾಹಾರದ ಸಾರು ಮಾತ್ರ ಈಗಿನ ದಿನಗಳಲ್ಲಿ ಮಾಮೂಲಿಯಾಗಿದೆ.

ಒಂಬತ್ತನೆಯ ದಿನದ ನಂತರ ಕ್ರಮವಾಗಿ ಇಪ್ಪತ್ತು, ನಲವತ್ತು ಕೊನೆಯದಾಗಿ ಒಂದು ವರುಷ (ಬರಸಿ)ದ ದಿನಗಳಲ್ಲಿ ಆಚರಿಸುವುದು ರೂಢಿಯಲ್ಲಿರುತ್ತದೆ. ಈ ಎಲ್ಲ ದಿನಗಳಲ್ಲಿ ಆಪ್ತೇಷ್ಟರು ಮಾತ್ರ ಹಾಜರಿರುತ್ತಾರೆ. ಹೆಣ್ಣು ಮಕ್ಕಳು ವಿಶೇಷವಾಗಿ ಅಡುಗೆ ಮಾಡುವುದು ಮತ್ತು ಅದನ್ನು ಓದಿಕೆ ಮಾಡಿಸುವುದು, ಸತ್ತವರ ನೆನಪಿನಲ್ಲಿ ಮಾತುಕತೆಯಾಡುತ್ತ ಆ ನೋವನ್ನು ಮರೆಯುವ ಪ್ರಯತ್ನವನನ್ನು ಮಾಡುತ್ತಾರೆ. ಪ್ರತಿವರ್ಷ ವ್ಯಕ್ತಿ ಸತ್ತ ದಿನದಂದು ಮನೆ-ಮಂದಿಯೆಲ್ಲಾ ಸೇರಿ ಕುರಾನ್ ಓದಿಸುವ ಪರಿಪಾಠ ಈಗೀಗ ಬೆಳೆಯುತ್ತಿದೆ. ಪಿಂಜಾರರ ಹೆಣ್ಣು ಮಕ್ಕಳಿಗೆ ನಮಾಜು ಕಲಿಸುವ ಅರಬ್ಬಿ ಓದಿಸುವ ತರಬೇತಿಯನ್ನು ಈಗೀಗ ಕೊಡಲಾಗುತ್ತಿದೆ. ಇದೂ ನಗರಸವಾಸಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಧಾರ್ಮಿಕ ಆಚರಣೆಗಳು:

ಪಿಂಜಾರರ ಧಾರ್ಮಿಕ ಆಚರಣೆಗಳನ್ನು ಗುರುತಿಸುವುದೆಂದರೆ, ಅವರ ಸಾಂಸ್ಕೃತಿಕ ಅನನ್ಯತೆ ಹಾಗೂ ಸಾಮಾಜಿಕ ಸ್ಥಾನಮಾನಗಳನ್ನು ಅರಿಯುವುದಾಗಿದೆ. ಹಬ್ಬಗಳಲ್ಲಿನ ಪಿಂಜಾರರ ಆಚರಣೆಗಳನ್ನು ಸೂಕ್ಷ್ಮವಾಗಿ ಗಮನಿಸದರೆ ಆ ಆಚರಣೆಗಳ ಕಲಾವಂತಿಕೆ ಅರ್ಥವಾಗುತ್ತದೆ.

’ದೇವರ’ ಕುರಿತಾದ ನಂಬಿಕೆ, ಗ್ರಹಿಕೆಯನ್ನು ಅಧ್ಯಯನ ಮಾಡುವ ಮೂಲಕ ಆ ಜನಾಂಗದ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಹಿನ್ನೆಲೆಯನ್ನು ಗುರುತಿಸಿಕೊಳ್ಳುವುದು ಸಾಧ್ಯವಿದೆ. ಪಿಂಜಾರರಂಥ ಉಭಯ ಸಾಂಸ್ಕೃತಿಕ ಪ್ರತಿನಿಧಿಯಾದ ಜನಾಂಗವೊಂದು ’ದೇವರ’ ಕುರಿತಾಗಿ ಎಂಥ ನಂಬಿಕೆಗಳನ್ನು ಒಳಗೊಂಡಿದೆ? ಆದ್ದರಿಂದ ಆ ಜನಾಂಗದ ಅನನ್ಯ ಸಾಂಸ್ಕೃತಿಕ ವ್ಯಕ್ತಿತ್ವ ದರ್ಶನ ಹೇಗಾಗುತ್ತದೆ? ಎನ್ನುವುದು ಕುತೂಹಲಕರವಾಗಿದೆ.

ಪಿಂಜಾರರು ಸದ್ಯ ನಿಷ್ಠರಾಗಿರುವ ಇಸ್ಲಾಂ ಧರ್ಮ ಏಕದೇವೋಪಾಸನೆಯನ್ನು ಬೋಧಿಸುತ್ತದೆ. ’ಅಲ್ಲಾಹ್’ ಇಸ್ಲಾಂ ಅನುಯಾಯಿಗಳ ಪಾಲಿನ ದಯಾಮಯನೂ ಪ್ರಶ್ನಾತೀತನೂ ಆದ ಪರಮದೈವ. ಇಸ್ಲಾಂ ಎಂದರೆ ’ಶರಣು ಹೋಗುವುದು’ ಎಂದೇ ಅರ್ಥ. ಈ ಧರ್ಮ ತನ್ನೆಲ್ಲ ಅನುಯಾಯಿಗಳಿಗೆ ನಿಯಮಿಸಿದ ಆಚಾರ ಸಂಹಿತೆಗಳು ಪ್ರಕಟ – ವಾಗಿರುವುದು ದೈವೀ ಆವೇಶದಲ್ಲಿ ಪ್ರವಾದಿ ಮೂಲಕ ಪ್ರಕಟವಾದವು ಎನ್ನಲಾದ ಸೂಕ್ತಗಳುಳ್ಳ ಪರಮಪವಿತ್ರವೂ ಪೂಜ್ಯವೂ ಆದ ’ಕುರಾನ್’ ಗ್ರಂಥದಲ್ಲಿ. ದೇವರು ಒಬ್ಬನೇ, ಬೇರೆ ದೇವರಿಲ್ಲ, ಮಹಮ್ಮದನು ದೇವರ ಪ್ರವಾದಿ ಎಂದು ನಂಬುವ ’ಕಲ್ಮಾ’ ಇಸ್ಲಾಂ’ ಅನುಯಾಯಿಗಳ ಮೂಲಮಂತ್ರ. ಉಳಿದಂತೆ ಇಸ್ಲಾಂ ಧರ್ಮದಲ್ಲಿ ಆಚರಣೆಯ ಮೂಲಸೂತ್ರಗಳಾದ ನಮಾಜ್, ರೋಜಾ, ಜಕಾತ್, ಹಜ್‌ಗಳ ಪರಿಪಾಲನೆ ಕಡ್ಡಾಯವಾಗಿದೆ. ಪಿಂಜಾರರ ವಿಚಾರ ಬಂದಾಗ ಇಸ್ಲಾಂ ಧಾರ್ಮಿಕ ಜ್ಞಾನದ ಕೊರತೆ ಎದ್ದು ಕಾಣುವ ಸಂಗತಿಯಾಗಿದೆ. ಈ ಸಂಗಿಯನ್ನು ವಿಶ್ಲೇಷಿಸುವ ಸಲುವಾಗಿ ಇಸ್ಲಾಂ ಧರ್ಮದ ಪರಂಪರೆ, ನಂಬಿಕೆ, ಆಚರಣೆಗಳನ್ನು ವಿಶ್ಲೇಷಿಸುವ ಸಲುವಾಗಿ ಇಸ್ಲಾಂ ಧರ್ಮದ ಪರಂಪರೆ, ನಂಬಿಕೆ, ಆಚರಣೆಗಳನ್ನು ಕುರಿತ ಪ್ರಾಥಮಿಕ ಪರಿಚಯವನ್ನು ಇಲ್ಲಿ ಕೊಡಲಾಗಿದೆ.

ಅರಬ್ಬಿ ಭಾಷೆಯಲ್ಲಿ ಇಸ್ಲಾಂ ಶಬ್ದಕ್ಕೆ ಅನುಸರಣೆ, ಆತ್ಮ ಸಮರ್ಪಣೆ ಅಥವಾ ಅಲ್ಲಾಹನ ಆಜ್ಞೆಯ ಮುಂದೆ ತಲೆಬಾಗಿಸುವುದು ಎಂಬ ಅರ್ಥಗಳುಂಟು. ಅಲ್ಲಾಹನ ಆದೇಶದ ಮೇರೆಗೆ ಮನುಷ್ಯ ತನ್ನ ಜೀವನವನ್ನು ಸಾಗಿಸಬೇಕು. ಇದೇ ಇಸ್ಲಾಂ ಧರ್ಮದ ಗುರಿ. ಮಾನವನನ್ನು ಸೃಷ್ಟಿಸಿದ ಅಲ್ಲಾಹನು ಜಗತ್ತಿನಲ್ಲಿ ಶಾಂತಿ ಮತ್ತು ಸುಖ ಜೀವನ ನಡೆಯಿಸಲೆಂದು ತನ್ನ ಪ್ರವಾದಿಗಳ ಮುಖಾಂತರ ಆದೇಶಗಳನ್ನು ಕಳುಹಿಸಿದನು. ಈ ಆದೇಶಗಳಮತೆ ಜೀವನ ಮಾಡುವುದರಲ್ಲಿಯೇ ಮನವನ ಕಲ್ಯಾಣ ಅಡಗಿದೆ. ಮಾನವರಲ್ಲಿಯೇ ಸತ್ಯವಂತ ಪುಣ್ಯಶೀಲರಾದ ವ್ಯಕ್ತಿಗಳನ್ನು ಆರಿಸಿ ಅವರನ್ನು ಪ್ರವಾದಿಗಳನ್ನಾಗಿ ಮಾಡಿ ತನ್ನ ಆದೇಶಗಳನ್ನು ಮಾನವ ಜನಾಂಗಕ್ಕೆ ಬೋಧಿಸಲು ಹೇಳಿದನು. ಆದರೆ ಅಲ್ಲಾಹನು ಎಂದಿಗೂ ಮಾನವ ರೂಪದಲ್ಲಿ ಅವತರಿಸಿಲ್ಲ ಹಾಗೂ ಅವತರಿಸುವುದಿಲ್ಲವೆಂದು ಇಸ್ಲಾಂ ನಂಬಿಕೆ.

ಅಲ್ಲಾಹನು ತನ್ನ ಆದೇಶಗಳ ಮೂಲಕ ಪೈಗಂಬರರ ಜೀವನವನ್ನು ಆದರ್ಶ ಪೂರ್ಣ ಮಾಡಿದನು. ಅಷ್ಟೇ ಅಲ್ಲ ಮಾನವ ಜನಾಂಗಕ್ಕೆ ಸನ್ಮಾರ್ಗ ತೋರಿಸಲು ಜಗತ್ತಿಗೇ ತನ್ನ ಪ್ರವಾದಿಗಳನ್ನು ಕಳುಹಿಸಿದನು. ಈ ಪ್ರವಾದಿಗಳು ತಮ್ಮ ಜನಾಂಗಕ್ಕೆ ತಮ್ಮ ಭಾಷೆಗಳಲ್ಲಿ ಅಲ್ಲಾಹನ ಆಜ್ಞೆಗಳನ್ನು ಬೋಧಿಸಿದರು.

ಇಸ್ಲಾಂ ಸಂಪ್ರದಾಯದ ಪ್ರಕಾರ ಹ| ಆದಮ್ ಅವರು ಪ್ರಥಮ ಮಾನವರು ಮತ್ತು ಪ್ರಥಮ ಪೈಗಂಬರರು. ಅವರ ಸ್ವಭಾವ ಸಹಜಧರ್ಮ ಇಸ್ಲಾಂ ಧರ್ಮವೇ ಆಗಿದ್ದಿತು. ಅವರ ನಂತರ ಪ್ರತಿ ಜನಾಂಗದಲ್ಲಿಯೂ ಸನ್ಮಾರ್ಗ ತೋರಿಸಲೆಂದು ಪ್ರವಾದಿಗಳು ಉದ್ಭವಿಸಿ ತಮ್ಮ ತಮ್ಮ ಕಾಲದಲ್ಲಿ ಇಸ್ಲಾಂ ಧರ್ಮವನ್ನು ಪ್ರತಿಪಾದಿಸಿದರು. ಕಾಲಾನುಗುಣವಾಗಿ ಇಸ್ಲಾಂ ಧರ್ಮವು ಮಾನವಕುಲದ ಭೌತಿಕ ಮತ್ತು ಆಧ್ಯಾತ್ಮಿಕ ಪ್ರಗತಿಗಾಗಿ ತತ್ವಶಃ ಬೆಳವಣಿಗೆ ಹೊಂದುತ್ತಾ ಸಾಗಿತು. ಇದನ್ನು ಪರಿಪೂರ್ಣಗೊಳಿಸಲು ಹ| ಆದಮ್ ಅವರಿಂದ, ಹ| ಮುಹ್ಮದ (ಸೊ.ಅ) ಪೈಗಂಬರರಿಗೆ ಸುಮಾರು ೧೨೪೦೦ ಪೈಗಂಬರರು ಅವತರಿಸಿದರು. ಪೈಗಂಬರರ ಪರಂಪರೆಯಲ್ಲಿ ಕೊನೆಯವರಾದ ಹೆ||ಮುಹ್ಮದ ಪೈಗಂಬರರು ಮಾನವತೆಯ ತುತ್ತ ತುದಿಯಲ್ಲಿ ಮುಟ್ಟಿ ಪರಿಪೂರ್ಣತೆ ಹೊಂದಿದವರು. ಅಂತೆಯೇ ಅವರು ವಿಶ್ವಪೈಗಂಬರರು. ಇದು ಪವಿತ್ರ ಕುರಾನ್‌ನಲ್ಲಿ ಬರುವ ದೇವವಾಣಿಗಳಿಂದ ಸ್ಪಷ್ಟವಾಗುತ್ತದೆ.

ಕುರ‍್ ಆನ್: ಕುರ‍್ ಆನ್ ಶಬ್ದ ’ಯಕರಾ’ ಎಂಬ ಅರಬ್ಬೀ ಶಬ್ದಿಂದ ಬಂದಿದೆ. ’ಯಕರಾ’ ಎಂದರೆ ಓದು, ಪಠಿಸು ಎಂದರ್ಥ. ಇದಕ್ಕೆ ’ಅಲ್‌ಪುರಖಾನ್‌’ ’ಕಲಾಮೇ ಅಲ್ಲಾಹ್’ (ದೇವರ ನುಡಿ) ನೂರ‍್ (ಬೆಳಕು) ಮುಂತಾದ ಹೆಸರುಗಳುಂಟು. ಕುರ‍್ ಆನ್ ದೇವವಾನಿಯುಳ್ಳ ಅಪೌರುಷೇಯ ಗ್ರಂಥವಾಗಿದೆ. ಸಮಗ್ರ ಕುರ‍್ ಆನ್ ದೇವರಿಂದ ಏಕಕಾಲದಲ್ಲಿಯೇ ರಚಿತವಾಗಿ ಸ್ವರ್ಗದಲ್ಲಿದ್ದು, ೨೩ ವರ್ಷಗಳ ಅವಧಿಯಲ್ಲಿ ಬೇರೆ, ಬೇರೆ ಪ್ರಸಂಗಗಳಲ್ಲಿ ಅವಶ್ಯಕತೆಗನುಗುಣವಾಗಿ ಪ್ರವಾದಿ ಹ| ಮುಹ್ಮದ್ ಅವರ ಮೇಲೆ ಅಲ್ಲಾಹನು ಅದನ್ನು ಅವತೀರ್ಣಗೊಳಿಸಿದನು. ಪ್ರಾರಂಭದ ಎಂಟು ಒಂಬತ್ತು ವರ್ಷಗಳ ಅವಧಿಯಲ್ಲ ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ಅವತೀರ್ಣಗೊಂಡ ಕುರನಿನ ಹೆಚ್ಚು ಭಾಗಗಳು ಸಾಮಾನ್ಯವಾಗಿ ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಮೇಲೆ ಪ್ರಕಾಶ ಬೀರುತ್ತವೆ. ಹ| ಮುಹ್ಮದ್ ಪೈಗಂಬರರು ಒಂದೊಂದು ’ಸೂರಾ’ ಅವತೀರ್ಣವಾದೊಡನೆ ಹ| ಜೈದಬಿನ್ ಸಾದತ್ ಅನ್‌ಸಾರಿ ಅವರಿಂದ ಅದನ್ನು ಬರೆಯಿಸುತ್ತಿದ್ದನು. ಸಂಪೂರ್ಣ ಕುರಾನ್ ಅವತೀರ್ಣವಾದ ದಿನ ಅಲ್ಲಾಹನ ಆದೇಶದ ಪ್ರಕಾರ ಕುರ‍್ ಆನ್. ’ಸುರಾ’ ಮತ್ತು ಆಯತ್‌ಗಳನ್ನು ವ್ಯವಸ್ಥಿತ ಕ್ರಮದಲ್ಲಿ ಸಂಕಲನ ಮಾಡಲಾಯಿತು. ಹ|| ಮುಹ್ಮದ್ ಪೈಗಂಬರರ ಮರಣಾನಂತರ ಹ| ಅಬೂಬ್‌ಕರ‍್ ಅವರು ಪೈಗಂಬರರು ಬರೆಯಿಸಿದ ಕುರ‍್ ಆನ್‌ನ ಎಲ್ಲಾ ಭಾಗಗಳನ್ನು ಕ್ರೋಢಿಕರಿಸಿ ಸಂಪೂರ್ಣ ಕುರ‍್ ಆನ್‌ನ ಮೂಲ ಪ್ರತಿಯನ್ನು ಸಿದ್ಧಪಡಿಸಿದರು. (ಕ್ರಿ.ಶ.೭ ನೇಯ ಶತಮಾನ) ಅನಂತರ ಹ| ಉಸ್ಮಾನ್ ಅವರು ಕುರ್‌ಆನ್‌ನ ಮೂಲ ಪ್ರತಿಯನ್ನು ನಕಲುಗೊಳಿಸಿ ಇಜಿಪ್ತ್, ಸಿರಿಯಾ, ಮಾರಿಶಸ್, ಯೆಮನ್, ಬಹರೈನ್, ಮೆಕ್ಕಾ, ಮದೀನಾ, ಡಮಾಸ್ಕಸ್ ದೇಶಗಳ ರಾಜ್ಯಪಾಲರಿಗೆ ಕಳುಹಿಸಿಕೊಟ್ಟರು. ಇಂದಿಗೂ ಅಲ್ಲಿ ಹ| ಉಸ್ಮಾನರು ಕಳುಹಿಸಿದ್ದ ಕುರ್‌ಆನ್‌ಪ್ರತಿಗಳನ್ನು ಕಾಣಬಹುದಾಗಿದೆ. ಮೂಲದಲ್ಲಿ ಅರಬ್ಬಿ ಭಾಷೆಯಲ್ಲಿದ್ದ ’ಕುರ್‌ಆನ್‌’ ಸುಮಾರು ೪೦ ವಿವಿಧ ಭಾಷೆಗಳಿಗೆ ಅನುವಾದವಾಗಿದೆ.

ಕುರ್‌ಆನ್ ೩೦ ಪಾರಾ (ವಿಭಾಗ) ೧೧೪ ಸೂರಾ (ಅಧ್ಯಾಯ) ೬,೬೬೦ ರಷ್ಟು ಪದ್ಯಗಳಿಂದ ಕೂಡಿದೆ. ಕೆಲವು ಅಧ್ಯಾಯಗಳು ದೊಡ್ಡವು, ಕೆಲವು ಚಿಕ್ಕವು ಆಗಿದ್ದು ವಿಷಯಾನುಸಾರ ಅದನ್ನು ಕ್ರೋಢೀಕರಿಸಲಾಗಿದೆ. ಪದ್ಯವು ಅಲ್ಲದ ಗದ್ಯವೂ ಅಲ್ಲದ ಕರ್‌ಆನ್ ವಾಕ್ಯಗಳು ಪ್ರಾಸ ಅನುಪ್ರಾಸಗಳಿಂದ ಕೂಡಿದೆ. ಶೈಲಿ ಬಹು ಸುಂದರವೂ, ಗಂಭೀರವೂ ಆಗಿದ್ದು ಕೆಲವು ಭಾಗಗಳು ಸಂವಾದ ರೂಪದಲ್ಲಿದೆ, ಇಸ್ಲಾಂ ಧರ್ಮದ ತಳಪಾಯವೇ ಕುರ್‌ಆನ್ ಆಗಿದ್ದು ನಿತ್ಯಜೀವನದ ಮೂಲ ಸೂತ್ರಗಳನ್ನು ಅದು ನಿರ್ಧಾರ ಮಾಡುವುದಲ್ಲದೆ ಸಾಮಾಜಿಕ, ರಾಜಕೀಯ, ಆರ್ಥಿಕ ರಂಗಗಳಿಗೆ ಸಂಬಂಧಿಸಿದ ಕಾನೂನು ನಿಯಮಗಳ ಮೇಲೂ ಬೆಳಕು ಚೆಲ್ಲುತ್ತದೆ. ಅಲ್ಲಾಹನು ಒಬ್ಬನೇ, ಮಾನವರೆಲ್ಲರೂ ಸಹೋದರರು ಮತ್ತು ಸಮಾನರು ಎಂದು ಅದರಲ್ಲಿ ಹೇಳಲಾಗಿದೆ. ಹ| ಮುಹ್ಮದ್ ಪೈಗಂಬರರು ಬೋಧಿಸಿದ ವಚನಗಳ ಗ್ರಂಥಕ್ಕೆ ’ಹದೀಸ್’ ಎಂದು ಕರೆಯುತ್ತಾರೆ.

ಅರೇಬಿಯಾದ ’ಕುರೇಷು’ ಬುಡಕಟ್ಟಿಗೆ ಸೇರಿದ ’ಫೆಹರ‍್’ ಸಂತತಿಯ ಕುಸ್ಸಾಯ್ ಎಂಬುವರ ಮಗ ಅಬ್‌ದೇಮುನಾಫ್‌, ಇವರ ಮೊಮ್ಮಗ ಅಬ್ದುಲ್ ಮುತಾಲಿನ್, ಅಬ್ದುಲ್ ಮುತಾಲಿಬ್‌ರಿಗೇ ೧೨ ಜನ ಗಂಡು ಮಕ್ಕಳು ೬ ಜನ ಹೆಣ್ಣು  ಮಕ್ಕಳು. ಹ| ಮುಹ್ಮದ್ (ಸೋ.ಅ)ರ ತಂದೆ ಅಬ್ದುಲ್ ಅವರು ಹನ್ನೆರಡು ಜನ ಗಂಡುಮಕ್ಕಳಲ್ಲಿ ಒಬ್ಬರು. ಇವರು ಹ || ಬೀಬಿ ಅಮೀನಾರನ್ನು ಮದುವೆಯಾಗಿದ್ದರು. ಇವರ ಏಕಮಾತ್ರ ಪುತ್ರ ಮುಹ್ಮದ. ಇವರು ಕ್ರಿ. ಶ. ೫೭೧ ರಲ್ಲಿ ಮೆಕ್ಕಾದಲ್ಲಿ ಜನಿಸಿದರು. ಎಂಟು ವರ್ಷದವರಾಗುವ ಹೊತ್ತಿಗೇ ತಂದೆ, ತಾಯಿ, ಅಜ್ಜನನ್ನು ಕಳೆದುಕೊಂಡು ಕಕ್ಕ ಅಬುತಾಲಿಬ್‌ರ ಆಶ್ರಯದಲ್ಲಿ ಬೆಳೆದರು. ಇವರು ೨೫ ವರ್ಷದ ವಿಧವೆ ಖದೀಜಾ ಇವರನ್ನು ಮದುವೆಯಾದರು. ಸ್ತ್ರೀಕಲ್ಯಾಣ, ಸಮಾಜ ಸುಧಾರಣೆ, ಶಾಂತಿ ಸಾಧನೆ ಇತ್ಯಾದಿ ಒಳ್ಳೆಯ ಉದ್ದೇಶಗಳಿಗಾಗಿ, ವಯಸ್ಕ, ವಿಧವೆ, ವಿವಾಹ ವಿಚ್ಛೇದಿತ ಹೀಗೆ ಹನ್ನೆರಡು ಜನ ಸ್ತ್ರೀಯರನ್ನು ಪೈಗಂಬರರು ಮದುವೆಯಾಗಿದ್ದರು. ಇವರು ಆರು ಜನ ಮಕ್ಕಳಲ್ಲಿ ಹ| ಫಾತಿಮಾ ಅವರನ್ನು ಹೊರತುಪಡಿಸಿ ಎಲ್ಲರೂ ಚಿಕ್ಕವಯಸ್ಸಿನಲ್ಲಿಯೇ ಮರಣ ಹೊಂದಿದರು.

ಅಧೋಗತಿಗಿಳಿದ ಮಾನವಕುಲಕ್ಕೆ ಸನ್ಮಾರ್ಗ ತೋರಲು ಪ್ರವಾದತ್ವದ ಕರೆಬರುವ ಪೂರ್ವದಲ್ಲಿ ಹ| ಮುಹ್ಮದ ಪೈಗಂಬರರು ಅವ್ಯಾಹತವಾಗಿ ’ಹಿರಾ’ ಗುಹೆಯಲ್ಲಿ ಧ್ಯಾನಾಸಕ್ತರಾಗಿ ಕುಳಿತು ದೀರ್ಘ ಚಿಂತನೆ ಮಾಡುತ್ತಿದ್ದರು. ತಮ್ಮ ೪೦ ನೆಯ ವಯಸ್ಸಿನಲ್ಲಿ ’ಹಿರಾ’ ಗುಹೆಯಲ್ಲಿ ಧ್ಯಾನಾಸಕ್ತರಾದಾಗ ರಮ್‌ಜಾನ ತಿಂಗಳ ೨೭ನೆಯ ಮಧ್ಯರಾತ್ರಿ (ಕ್ರಿ.ಶ.೬೦೯), ಸಮಯದಲ್ಲಿ ಹ|ಜಿಬ್ರಾಯಿಲ್‌ರ ಮುಖಾಂತರ ವಿಶ್ವ ಪೈಗಂಬರರೆಂದು ಅಧಿಕಾರ ಸೂತ್ರಗಳನ್ನು ವಹಿಸಿ=ಕೊಂಡಂತೆ ಅನುಭವವಾಯಿತು.

ಹ| ಖದೀಜಾ ಅವರು ಪೈಗಂಬರರ ಪ್ರಥಮ ಶಿಷ್ಯರಾದರು. ಅನಂತರ ಹ| ಉಸ್ಮಾನ್, ಹ| ಅಬೂಬಕ್ಕರ‍್, ಜಯ್‌ದ, ಬಿಲಾಲ, ಯಾಸಿರ, ಅಬ್ದುಲ್‌ಬಿನ್ ಮಸಜಿದ್, ಹಮಜಾ, ಉಮರ ಮುಂತಾದವರು ಪೈಗಂಬರರ ಶಿಷ್ಯರಾದರು. ಇಸ್ಲಾಂ ಧರ್ಮದ ತತ್ವ ಮತ್ತು ಸಂದೇಶಗಳನ್ನು ಪ್ರಸಾರ ಮಾಡುತ್ತಾ ಕ್ರಿ. ಶ. ೬೩೨ ರಲ್ಲಿ ಜೂನ್ ೨ ರಂದು ಸೋಮವಾರ ಮುಂಜಾವಿನಲ್ಲಿ ತಮ್ಮ ೬೩ ನೆಯ ವರ್ಷದಲ್ಲಿ ಕೊನೆ ಉಸಿರೆಳೆದರು.

ಹ| ಮುಹ್ಮದ್ ಪೈಗಂಬರರು ತಮಗಿಂತಲೂ ಪೂರ್ವದಲ್ಲಿದ್ದ ಇಸ್ಲಾಂ ಧರ್ಮಕ್ಕೆ ಒಂದು ನಿಶ್ಚಿತ ಸ್ವರೂಪ ನೀಡಿ ಅಲ್ಲಾಹನು ನೀಡಿದ ಸಂದೇಶಗಳನ್ನು ಜನಮನದಲ್ಲಿ ಬಿತ್ತಿದರು. ಅಷ್ಟೇ ಅಲ್ಲ ರಜಾಖ್(ಅನ್ನದಾತ) ಗಫಾರ‍್ (ಕ್ಷಮಾದಾತ) ರಹೀಮ್ (ದಯಾಮಯಿ) ಮುಂತಾದ ೯೯ ಸದಗುಣ ಸೂಚಕ ಹೆಸರುಗಳಿಂದ ಪ್ರಸಿದ್ಧಿ ಪಡೆದರು.

ಹ| ಮುಹ್ಮದ್ ಪೈಗಂಬರರು ತಮ್ಮ ಮೇಲೆ ಅವತೀರ್ಣಿಸಿದ ಪವಿತ್ರ ಕುರ್‌ಆನ್‌ನಲ್ಲಿಯ ವಾಣಿಗಳನ್ನು ೨೩ ವರ್ಷಗಳ ಪರ್ಯಂತ ಬೋಧಿಸಿ ಅವುಗಳನ್ನೇ ತಾವು ನಡೆದು ತೋರಿಸಿದರು. ಅವುಗಳಲ್ಲಿ ಪ್ರಮುಖವಾದವುಗಳನ್ನು ಸಂಗ್ರಹವಾಗಿ ಕೆಳಗೆ ವಿವರಿಸಿದೆ.

ಇಸ್ಲಾಂ  ನಿಂತಿರುವುದು ನಂಬಿಕೆಯ ಮೇಲೆ. ಇದನ್ನೇ ’ಇಮಾನ್’ ಎಂದು ಕರೆಯಲಾಗಿದೆ. ೧) ಅಲ್ಲಾಹ್, ೨) ಅಲ್ಲಾಹ್‌ನ ದೂತರು, ೩) ದೈವಿ ಗ್ರಂಥಗಳು, ೪) ಅಲ್ಲಾಹನು ಕಳುಹಿಸಿದ ಪೈಗಂಬರರು, ೫) ಕಯಾವತ್, ೬) ಅಲ್ಲಾಹ್‌ನ ನಿರ್ಣಯ ಮತ್ತು ಸಾವಿನ ನಂತರದ ಕಲ್ಪನೆ, ಇವುಗಳಲ್ಲಿ ಪ್ರತಿಯೊಬ್ಬನೂ ನಂಬಿಕೆಯಿಡಬೇಕೆಂದು ’ಕುರ್‌ಆನ್‌’ನಲ್ಲಿ ಸ್ಪಷ್ಟಪಡಿಸಲಾಗಿದೆ.

ಅಲ್ಲಾಹ್‌ನು ಒಬ್ಬನೇ ಒಬ್ಬ. ಅವನೇ ಬ್ರಹ್ಮಾಂಡನ ಸೃಷ್ಟಿಕರ್ತ. ಸೂರ್ಯ, ಚಂದ್ರ, ಪೃಥ್ವಿ, ನಕ್ಷತ್ರಗಳೆಲ್ಲವೂ ಅವನಿಂದಲೇ ಹುಟ್ಟಿವೆ. ಎಲ್ಲಾ ಜೀವರಾಶಿಗಳಿಗೂ ಅವನೇ ಜೀವದಾನ ಜೀವನೋಪಾಯ ಕಲ್ಪಿಸಿರುವನು. ಹುಟ್ಟು ಮತ್ತು ಸಾವು ಅಲ್ಲಾಹನ ಅಧೀನ. ಮಾನವ ಜನಾಂಗಕ್ಕೆ ಸನ್ಮಾರ್ಗ ಮುಸ್ಲಿಂ ಭಕ್ತಿಯ ತಳಹದಿ ಇದಕ್ಕೆ ’ತೌಹೀದ್’ ಎನ್ನುವರು. ಈ ಸಿದ್ಧಾಂತವನ್ನು ಪವಿತ್ರ ಕುರ‍್ ಆನ್‌ನಲ್ಲಿ ಹೇಳಲಾಗಿದೆ.

ಅಲ್ಲಾಹ್ ದೂತರಲ್ಲಿ ನಂಬಿಕೆ

ಅಲ್ಲಾಹ್‌ನ ಒಬ್ಬನೇ ಒಬ್ಬ. ಅವನೇ ಬ್ರಹ್ಮಾಂಡದ ಸೃಷ್ಟಿಕರ್ತ. ಸೂರ್ಯ, ಚಂದ್ರ, ಪೃಥ್ವಿ, ನಕ್ಷತ್ರಗಳೆಲ್ಲವೂ ಅವನಿಂದಲೇ ಹುಟ್ಟಿವೆ. ಎಲ್ಲಾ ಜೀವರಾಶಿಗಳಿಗೂ ಅವನೇ ಜೀವದಾನ ಜೀವನೋಪಾಯ ಕಲ್ಪಿಸಿರುವನು. ಹುಟ್ಟು ಮತ್ತು ಸಾವು ಅಲ್ಲಾಹನ ಅಧೀನ. ಮಾನವ ಜನಾಂಗಕ್ಕೆ ಸನ್ಮಾರ್ಗ ತೋರಿಸಲು ಅಲ್ಲಾಹನು ಪೈಗಂಬರರನ್ನು ಕಳುಹಿಸಿದ್ದಾನೆ. ಆದುದರಿಂದ ಏಕದೇವತ್ವವೇ ಮುಸ್ಲಿಂ ಭಕ್ತಿಯ ತಳಹದಿ. ಇದಕ್ಕೆ ’ತೌಹೀದ್’ ಎನ್ನುವರು. ಈ ಸಿದ್ಧಾಂತವನ್ನು ಪವಿತ್ರ ಕುರ್‌ಆನ್‌ನಲ್ಲಿ ಹೇಳಲಾಗಿದೆ.

ಅಲ್ಲಾಹ್ ದೂತರಲ್ಲಿ ನಂಬಿಕೆ

ಮುಸ್ಲಿಮರು ಅಲ್ಲಾಹ್‌ನ ನಂತರ ಅವರ ದೂತರ ಮೇಲೆ ನಂಬಿಕೆಯಿಡಬೇಕು. ಅಲ್ಲಾಹ್‌ನ ಈ ದೂತರು ಜ್ಯೋತಿಯಿಂದ ಹುಟ್ಟಿದವರು. ಆದರೆ ಕಣ್ಣಿಗೆ ಕಾಣಿಸರು. ಅಲ್ಲಾಹನು ನಿಯಮಿಸಿದ ಕಾರ್ಯಗಳನ್ನು ಚಾಚೂತಪ್ಪದೇ ಅನುಸರಿಸುವವರು. ಅವರಲ್ಲಿ ಹ| ಜಿಬ್ರಾಯಿಲ್, ಹ|ಇಸ್ರಾಫಿಲ್, ಹ| ಮಿಕಾಯಿಲ್, ಹ| ಇಜರಾಯಿಲ್ ಪ್ರಮುಖರು

ದೈವಗ್ರಂಥಗಳಲ್ಲಿ ನಂಬಿಕೆ

ಅಲ್ಲಾಹ್‌ನು ಕಾಲಕಾಲಕ್ಕೆ ಕಳುಹಿಸಿದ ದೈವಗ್ರಂಥಗಳಲ್ಲಿ ನಂಬಿಕೆಯಿಡಬೇಕು. ಹ| ದಾವೋದ್ ಅವರ ಮೇಲೆ ಜಬೂರನ್ನು, ಹ| ಮೂಸಾ ಅವರ ಮೇಲೆ ತಾರೇತನ್ನು, ಹ| ಇಸಾ ಅವರ ಮೇಲೆ ಇಂಜೀ ಅವರನ್ನು ಅವತೀರ್ಣಿಸಿದಂತೆ. ಹ| ಮುಹ್ಮದ್ ಪೈಗಂಬರರ ಮೇಲೆ ಪವಿತ್ರ ’ಕುರ್‌ಆನ್’ ಅವತೀರ್ಣಿಸಿದರು.

ಪೈಗಂಬರರಲ್ಲಿ ನಂಬಿಕೆ

ಅಲ್ಲಾಹ್‌ನು ಮಾನವ ಜನಾಂಗಕ್ಕೆ ಸನ್ಮಾರ್ಗ ತೋರಿಸಲು ಕಾಲಕಾಲಕ್ಕೆ ಕಳುಹಿಸಿದ ಎಲ್ಲಾ ಪೈಗಂಬರರ ಮೇಲೆ ಭಕ್ತಿಯನ್ನಿಡಬೇಕು. ಇವರು ಸುಮಾರು ಒಂದುಲಕ್ಷ ಇಪ್ಪತ್ನಾಲ್ಕು ಸಾವಿರವೆಂದು ಹೇಳುವರು. ಅವರಲ್ಲಿ ಹ| ಆದಮ್ ಮೊದಲನೆಯವರು, ಹ| ಮುಹ್ಮದ್ ಪೈಗಂಬರರು ಕೊನೆಯವರು.

ಕಯಾಮತ್ದಲ್ಲಿ ನಂಬಿಕೆ

ಕಯಾಮತ್‌ಅಂದರೆ ಅಲ್ಲಾಹ್‌ನು ಇಡೀ ಸಚರಾಚರ ಪ್ರಪಂಚವನ್ನು ಲಯಗೊಳಿಸುವ ದಿನ, ಹ| ಇಸ್ರಾಫಿಲ್ ಜಗತ್ ಪ್ರಳಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವರು. ಜಗತ್ಪ್ರಳಯ ಒಂದು ದಿನ ಆಗಿಯೇ ತೀರುತ್ತದೆ. ಆದರೆ ಇಂಥ ದಿನವೇ ಅದು ಆಗುತ್ತದೆಂಬುದು ಅಲ್ಲಾಹ್‌ನಿಗೆ ಮಾತ್ರ ಗೊತ್ತು.

ಅಲ್ಲಾಹ್ ನಿರ್ಣಯದಲ್ಲಿ ನಂಬಿಕೆ

ಒಳ್ಳೆಯದನ್ನು ಕೆಟ್ಟದ್ದನ್ನು ಮಾಡುವವ ಅಲ್ಲಾಹನೇ. ನಾವು ಯಾವುದನ್ನು ಬಯಸ=ಬಾರದು, ಬೇಡಬಾರದು, ನಮ್ಮ ಕಾರ್ಯವನ್ನು ನಾವು ಮಾಡುತ್ತಿರಬೇಕು. ಎಲ್ಲವನ್ನೂ ಅಲ್ಲಾಹ್‌ನೇ ನಿರ್ಣಯಿಸುವವನು. ಅವನ ನಿರ್ಣಯದ ಮೇಲೆ ನಾವು ನಂಬಿಕೆ ಇಡಬೇಕು.

ಸಾವಿನ ನಂತರದ ಲೋಕದಲ್ಲಿ ನಂಬಿಕೆ

ಮುಸ್ಲಿಮನು ಸಾವು ಬಯಸಬಾರದು. ಬದುಕಿದಷ್ಟು ದಿನ ಸತ್ಕರ್ಮಗಳನ್ನು ಮಾಡಿ ಪುಣ್ಯ ಗಳಿಸಬೇಕು. ಮರಣಾನಂತರ ಎಲ್ಲರೂ ಅಲ್ಲಾಹ್‌ನ ಮುಂದೆ ಉಪಸ್ಥಿತರಾಗುವರು. ಇದಕ್ಕೆ ’ಹಶರ‍್’ ಎನ್ನುತ್ತಾರೆ. ಭೂಲೋಕದಲ್ಲಿ ಮನುಷ್ಯನು ಮಾಡುವ ಎಲ್ಲಾ ಕೃತಿಗಳ ಲೆಕ್ಕಾಚಾರವನ್ನು ಅಲ್ಲಾಹ್‌ನ ನ್ಯಾಯಾಲಯದಲ್ಲಿ ಮಾಡಲಾಗುವುದು.

ಮಾನವ ಜನಾಂಗ ಸನ್ಮಾರ್ಗದಲ್ಲಿ ನಡೆಯಲು ಕುರ್‌ಆನ್‌ನಲ್ಲಿ ನಂಬುಗೆ ಅತ್ಯಂತ ಅವಶ್ಯ. ಜೊತೆಗೆ ಪಂಚಸೂತ್ರಗಳ ಪರಿಪಾಲನೆಯನ್ನು ಹೇಳಲಾಗಿದೆ. ಕಲಿಮಾ, ನಮಾಜ್, ರೋಜಾ, ಜಕಾತ್, ಹಜ್ ಇವೇ ಆ ಪಂಚಸೂತ್ರಗಳು ಇವುಗಳನ್ನು ಕಡ್ಡಾಯವಾಗಿ ಆಚರಿಸಬೇಕು.

ಕಲಿಮಾ (ಪ್ರಾರ್ಥನಾರೂಪದ ಶ್ಲೋಕ)

ಕಲಿಮಾ ಒಟ್ಟು ಆರು ಇದ್ದು, ಇವುಗಳಲ್ಲಿ ೫ ಕಲಿಮಾಗಳನ್ನು ಮುಸಲ್ಮಾನರು ಕಡ್ಡಾಯವಾಗಿ ಪಠಿಸಬೇಕು. ಇವು ಅಲ್ಲಾಹ್‌ನ ಹೊರತಾಗಿ ದೇವರಿಲ್ಲ. ಹ| ಮುಹ್ಮದ್‌ರು ಅಲ್ಲಾಹ್‌ನ ದೂತರು. ಪೈಗಂಬರರು ನಡೆದ ದಾರಿಯಲ್ಲಿ ನಮ್ಮನ್ನು ನಡೆಸು ಎಂಬ ಬೇಡಿಕೆಯನ್ನು ಒಳಗೊಂಡಿರುತ್ತವೆ.

ನಮಾಜ್ (ಪ್ರಾರ್ಥನೆ)

ಮುಸ್ಲಿಮನೊಬ್ಬ ತನ್ನ ಸೃಷ್ಟಿಕರ್ತನೊಡನೆ ವೈಯಕ್ತಿಕವಾಗಿ ಸಾಮೂಹಕವಾಗಿ ಮಸೀದಿಯಲ್ಲಿ ದಿನಕ್ಕೆ ಐದ ಸಲ ಪಡೆಯುವ ಆಧ್ಯಾತ್ಮಿಕ ಸಂರ್ಪಕ್ಕೆ ಸಾಧನವಾದದ್ದು ನಮಾಜ್. ಪ್ರತಿಯೊಬ್ಬ ಮುಸ್ಲಿಮನು ತನ್ನ ದೇಹ ಆತ್ಮಗಳಿಗೆ ಕಾರಣವಾದ ಪವಿತ್ರ ಶಕ್ತಿಯೊಂದರ ಸಾನಿಧ್ಯದಲ್ಲಿ ತಾನಿದ್ದೇನೆಂಬ ಭಾವನೆಯನ್ನು ನಮಾಜ್ ಗಟ್ಟಿಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಎಲ್ಲಾ ಅನೀತಿ ಅಪರಾಧಗಳಿಂದ ನಮ್ಮನ್ನು ದೂರವಿರಿಸುತ್ತದೆ. ನಮಾಜಿನ ಶಮ್ರವನ್ನು ಕುರಾನ್‌ನಲ್ಲಿ ಸ್ಪಷ್ಟವಾಗಿ ಹೇಳಿಲ್ಲವಾದರೂ ನಮಾಜಿನ ವೇಳೆಯನ್ನು, ನಮಾಜಿನ ಮಹತ್ವವನ್ನು ವಿವರಿಸಲಾಗಿದೆ.

ನಮಾಜ್ ಮುಸ್ಲಿಮನನ್ನು ದೇಹದಲ್ಲಿ ಮತ್ತು ಆತ್ಮದಲ್ಲಿ ಕ್ಲುಪ್ತನನ್ನಾಗಿ, ವ್ಯವಸ್ಥಿತನನ್ನಾಗಿ, ಸ್ವಸ್ಥಶುದ್ಧನನ್ನಾಗಿ ಇರಿಸುವ ಆಧ್ಯಾತ್ಮಿಕ ಸಾಧನವಾಗಿದೆ. ’ಜಮಾತ್‌’ನೊಂದಿಗೆ ಮಾಡುವ ನಮಾಜ್ (ಸಾಮೂಹಿಕ ಪ್ರಾರ್ಥನೆ) ಮನಸ್ಸಿನಲ್ಲಿ ಸಮಷ್ಟಿ ಚೈತನ್ಯವನ್ನು ಉಂಟು ಮಾಡುತ್ತದೆ. ಜೊತೆಗೆ ಸಮಾನತೆ ಹಾಗೂ ಸೋದರ ಭಾವನೆಗಳನ್ನು ಜಾಗ್ರತಗೊಳಿಸಿ ಸ್ಥಿರೀಕರಿಸಲು ಸಹಾಯಕವಾಗುತ್ತದೆ.

ಮುಸ್ಲೀಮರು ಯಾವುದೇ ವಯಸ್ಸಿನವರಿರಲಿ, ಯಾವುದೇ ಅಂತಸ್ತಿನವರಿರಲಿ ಎಂಥದೇ ಪರಿಸ್ಥಿತಿಯಲ್ಲಿರಲಿ ನಮಾಜು ಮಾಡಲೇಬೇಕು. ಏಕೆಂದರೆ ಕರುಣಾಮಯನಾದ ಅಲ್ಲಾಹ್‌ನೊಂದಿಗೆ ಮುಸ್ಲಿಮನು ನಡೆಸುವ ನೇರ ಸಂವಾದವೇ ನಮಾಜಿನ ಜೀವಾಳವಾಗಿದೆ.

ನಮಾಜ್ ಮಾಡುವವರು ದೇಹ ಶುದ್ಧವಾಗಿರಬೇಕು. ಅವರು ಸ್ವಚ್ಛವಾದ ಬಟ್ಟೆಗಳನ್ನು ಮೊಣಕಾಲು ಮುಚ್ಚುವವರೆಗೆ ಧರಿಸಬೇಕು. ’ಆಜಾನ್‌’ ಹೇಳಿದ ನಂತರ ’ವಜೂ’ ಮಾಡಿಕೊಂಡು ಶುಚಿಯಾದ ಜಾಗದಲ್ಲಿ ’ಮೆಕ್ಕಾಷರೀಫ್’ (ಪಶ್ಚಿಮ ದಿಕ್ಕಿನೆಡೆಗೆ) ಮುಖ ಮಾಡಿ ಮನಸ್ಸಿನಲ್ಲಿ ’ನಿಯತ್’ ಕಟ್ಟಿಕೊಂಡು ನಮಾಜು ಮಾಡಬೇಕು. ದಿನಕ್ಕೆ ಐದು ಹೊತ್ತು ಗೊತ್ತಾದ ವೇಳೆಯಲ್ಲಿ ನಿರ್ದಿಷ್ಟ ಸಂಖ್ಯೆಯ ’ರಖಾತ್‌’ಗನ್ನು ಪಠಣ ಮಾಡಬೇಕು. ರಮ್‌ಜಾನ್ ಮತ್ತು ಬಕ್ರಿದ್ ಹಬ್ಬದಂದು ಮಾಡುವ ನಮಾಜುಗಳಿಗೆ ಕ್ರಮವಾಗಿ ’ಈದುಲ್‌ಫಿತರ‍್’ ಮತ್ತು ’ಈದುಜ್ಜುಹಾ’ ಎನ್ನುತ್ತಾರೆ. ಈ ನಮಾಜುಗಳ ವೇಳೆ ಸೂರ್ಯೋದಯದಿಂದ ಪ್ರಾರಂಭವಾಗಿ ಸೂರ್ಯಾಸ್ತದವರೆಗೆ ಇರುತ್ತದೆ. ಇವುಗಳನ್ನು ’ಈದಗಾ’ ಮೈದಾನದಲ್ಲಿ ಸಾಮೂಹಿಕವಾಗಿ ಮಾಡುತ್ತಾರೆ.

ರೋಜಾ (ಉಪವಾಸ ವ್ರತ)

ಪ್ರತಿವರ್ಷ ’ರಂಜಾನ್’ ತಿಂಗಳಿನಲ್ಲಿ ಎಲ್ಲಾ ಮುಸ್ಲಿಮರು ಉಪವಾಸ ಕೈಗೊಳ್ಳಬೇಕು. ಪೈಗಂಬರರು ನಮಾಜಿನಂತೆ ರೋಜಾವನ್ನು ಕೂಡ ಎಲ್ಲಾ ತಮ್ಮ ತಮ್ಮ ಅನುಯಾಯಿಗಳಿಗೆ ಕಡ್ಡಾಯವಾಗಿ ಕೈಗೊಳ್ಳಬೇಕೆಂದು ಬೋಧಿಸಿದ್ದರು. ಕುರ್‌ಆನ್‌ನಲ್ಲಿ ರೋಜಾದ ಮಹತ್ವ ಕುರಿತು ಹೇಳಲಾಗಿದೆ.

ರಮ್‌ಜಾನ್ ಉಪವಾಸ ಒಂದು ತಿಂಗಳು ಮಾಡಬೇಕು. ಬೆಳಗಿನ ನಾಲ್ಕು ಗಂಟೆಯಿಂದ ಐದು ಗಂಟೆಯ ಮಧ್ಯದಲ್ಲಿ ಮಿತ ಆರ್ಹರ ಸ್ವೀಕರಿಸಿ ಸಂಝೆ ಪರ‍್ಯಂತ ನೀರನ್ನೂ ಕೂಡ ಕುಡಿಯದೇ ಇದ್ದು ರಾತ್ರಿ ಆಹಾರ ತೆಗೆದುಕೊಳ್ಳಬೇಕು. ಈ ಕಾಲದಲ್ಲಿ ಕಾಮ ಕ್ರೋಧಾದಿಗಳಿಗೆ ವಶವಾಗದೆ, ಭೋಗಲಾಲಸೆಗಳಿಗೆ ಬೀಳದೆ ಮನಸ್ಸನ್ನು ಪರಿಶುದ್ಧವಾಗಿಟ್ಟುಕೊಂಡು ಇರಬೇಕು. ಸಾಯಂಕಾಲ ಮಸೀದಿಗೆ ಹೋಗಿ ’ತರಾವಿ’ ನಮಾಜು ಮಾಡಬೇಕು. ರೋಜಾ ಇದ್ದವರು ನಮಾಜು, ಕುರಾನ್, ಪಠಣ, ಮಸೀದಿಗಳಲ್ಲಿ ಧರ್ಮಶ್ರವಣ ಇತ್ಯಾದಿ ಕಾರ್ಯಗಳಲ್ಲಿ ಮನ ತೊಡಗಿಸಬೇಕು. ರಮ್‌ಜಾನ್ ತಿಂಗಳಿನಲ್ಲಿ ’ಕುರ್‌ಆನ್’ ಅವತೀರ್ಣವಾಯಿತು. ಕಾರಣ ಈ ತಿಂಗಳಿನಲ್ಲಿ ಪ್ರತಿಯೊಬ್ಬ ಉಪವಾಸ ವ್ರತ ಕೈಗೊಳ್ಳಬೇಕು. ಉಪವಾಸ ವ್ರತದಿಂದ ರಾಗದ್ವೇಷಗಳ ಸಂಯಮ, ದೇಹ, ಆತ್ಮಗಳ ಪರಿಶುದ್ಧಿ ಸಾಧ್ಯವಾಗುತ್ತದೆ.

ಜಕಾತ್ (ದಾನ)

ನಿರ್ದಿಷ್ಟ ಆದಾಯವು ಒಂದು ವರ್ಷದವರೆಗೆ ಉಳಿದುಕೊಂಡರೆ ಮುಂದಿನ ವರ್ಷ ಅದು ಕರಾಕರಣೆಗೆ ಪಾತ್ರವಾಗುವುದು. ಇದಕ್ಕೆ ’ಜಕಾತ್’ ಎನ್ನುವರು. ಪ್ರತಿವರ್ಷ ರಮ್‌ಜಾನ್ ತಿಂಗಳಿನಲ್ಲಿ ಮುಸ್ಲಿಮರು ಅಂತಹ ಆಸ್ತಿ ಆದಾಯ ಕರ ಕೊಡಬೇಕು. ಇದರ ಉದ್ದೇಶ ಸಾಮಾಜಿಕ ಸೇವೆ, ದೀನ ದರಿದ್ರರಿಗೆ ಆಹಾರವನ್ನೀಯುವುದೇ ಆಗಿದೆ. ಇದರ ಹೊರತಾಗಿ ’ಸದಖಾ’ (ತಲೆಗಂದಾಯ ಎಂಬ ದಾನ) ಮತ್ತು ಫಿತರಾ (ಜೀವದ ತೆರಿಗೆ) ಎಂಬ ದಾನವನ್ನು ಮಾಡಲು ಇಸ್ಲಾಂ ಧರ್ಮ ತಿಳಿಸುತ್ತದೆ. ಸಮಾಜದಲ್ಲಿ ಆರ್ಥಿಕ ವಿಷಮತೆಯನ್ನು ದೂರ ಮಾಡಲು ಪರಸ್ಪರರಲ್ಲಿ ಪ್ರೀತ್ಯಾದಾರಗಳು ಕುದುರಲು ಈ ’ಜಕಾತ್’ ಯೋಜನೆಯನ್ನು ಇಸ್ಲಾಂ ಧರ್ಮ ರೂಪಿಸಿದೆ.