ಹಜ್ (ಯಾತ್ರೆ)

ಪ್ರತಿಯೊಬ್ಬ ಮುಸ್ಲಿಮನು ತನ್ನ ಜೀವಮಾನದಲ್ಲಿ ಕೊನೆಯ ಪಕ್ಷ ಒಂದು ಸಲವಾದರೂ ಮೆಕ್ಕಾದಲ್ಲಿ ಪ್ರತಿವರ್ಷ ನಡೆಯುವ ಅಂತಾರಾಷ್ಟ್ರೀಯ ಮೇಳಕ್ಕೆ ಹೋಗುವುದೇ ಹಜ್ ಯಾತ್ರೆ. ಭಿನ್ನ ಭಿನ್ನ ದೇಶವರ್ಣ ಜನಾಂಗಗಳಿಗೆ ಸೇರಿದ ರಂಕನಿಂದ ಮೊದಲ್ಗೊಂಡು ರಾಜನವರೆಗಿನ ಸಾವಿರಾರು ಜನರು ಪ್ರಪಂಚದ ಮೂಲೆ ಮೂಲೆಗಳಿಂದ ಹಜ್ ಯಾತ್ರೆಗೆ ’ಏಹ್ರಾಮ್’ ವಸ್ತ್ರಗಳನ್ನು ಧರಿಸಿ ಬರಿಗಾಲಿನಲ್ಲಿ ಬರಿತಲೆಯಲ್ಲಿ ಮೆಕ್ಕಾದಲ್ಲಿ ಬಂದು ಸೇರುವರು. ಇಂತಹ ಈ ಬೃಹತ್ ಮೇಳ ಸಾಮ್ಯವಾದದ ವಾರ್ಷಿಕ ಪ್ರದರ್ಶನವಾಗಿದ್ದು, ಸಹೋದರರತೆ ಸಮಾನತೆಗಳ ಅದ್ಭುತ ನಿದರ್ಶನವನ್ನೊದಗಿಸುತ್ತದೆ. ಈ ವಾರ್ಷಿಕ ಮೇಳ ಸ್ತ್ರೀ ಪುರುಷರ ಮಧ್ಯೆ ಧಾರ್ಮಿಕ ಕ್ಷೇತ್ರದಲ್ಲಿರುವ ಸಾಂಪ್ರದಾಯಿಕ ಸಮಾನತೆಯನ್ನು ವ್ಯಕ್ತಪಡಿಸುವುದಲ್ಲೆ ಎಲ್ಲಾ ಮಾನವಕುಲದ ಉದ್ದೇಶದ ಏಕತೆಯನ್ನು ಸಾರುತ್ತದೆ.

ಇಸ್ಲಾಂ ಧರ್ಮ ಮಾನವ ಜೀವನದೊಂದಿಗೆ ಸಂಬಂಧವಿರಿಸಿಕೊಂಡು, ಅದರ ಪ್ರತಿಯೊಂದು ವಿಷಯದಲ್ಲಿಯೂ ಮಾರ್ಗದರ್ಶನ ನಿಡುತ್ತದೆ. ವಿಶ್ವಾಸ, ಶ್ರದ್ಧೆ, ಆರಾಧನೆ, ಉಪಾಸನೆ, ನೀತಿ ನಡುವಳಿಕೆಯಿಂದ ಹಿಡಿದು, ಆರ್ಥಿಕ, ಸಾಮಾಜಿಕ, ರಾಜಕೀಯ ವಿಷಯಗಳವರೆಗೂ ಇದರ ವ್ಯಾಪ್ತಿ ಹರಡಿದೆ. ಒಟ್ಟಿನಲ್ಲಿ ಮಾವನ ಜೀವನದ ಯಾವ ಅಂಶವೂ ಇದರಿಂದ ಹೊರತಾಗಿಲ್ಲ. ಇದು ಒಂದು ಕಡೆ ದೈವ ಸಂತೃಪ್ತಿಯನ್ನು ಮತ್ತು ಅಲೌಕಿಕ ಭದ್ರತೆಯನ್ನು ನೀಡಿದರೆ ಇನ್ನೊಂದೆಡೆ ಲೌಕಿಕ ಸಮಸ್ಯೆಗಳಿಗೆ ಉಚಿತ ಪರಿಹಾರ ನೀಡುತ್ತದೆ. ಮನುಷ್ಯ ತನ್ನ ಗೃಹ ಜೀವನವನ್ನು ಹೇಗೆ ನಡೆಸಬೇಕು, ಉಪ ಜೀವನದ ಸಂಪಾದನೆ, ವ್ಯಯ ಮಾಡುವ ಬಗೆಯೇನು? ವ್ಯಾಪರ ವಹಿವಾಟುಗಳಲ್ಲಿ ಯಾವ ಕಾನೂನು ಕಾಯಿದೆಗಳಿರಬೇಕು? ಸರಕಾರದ ರಚನೆ ಮತ್ತು ಕಾರ್ಯಭಾರಗಳನ್ನು ಮಾಡುವ ರೀತಿ ಯಾವುದು? ಶಾಂತಿ ಯುದ್ಧಗಳ ಸಿದ್ಧಾಂತವೇನು? ಎಂಬುದನ್ನು ಇಸ್ಲಾಂ ಧರ್ಮ ವಿವರಿಸುತ್ತದೆ.

ಹ| ಮುಹ್ಮದ್ ಪೈಗಂಬರರು ಪವಿತ್ರ ಕುರಾನಿನ ತತ್ವಗಳಿಗನುಸಾರವಾಗಿ ಮಾಡಿದ ಮೇಲಿನ ಆಚರಣೆಗಳಿಗೆ ಸುನ್ನತ್ ಎನ್ನುತ್ತಾರೆ. ಕುರಾನ್ ಹಾಗೂ ಸುನ್ನತ್ ಇಸ್ಲಾಂ ಧಮ್ದ ಮೂಲ ಆಧಾರಗಳು. ಇವೆರಡರ ಮೂಲಕ ಇಸ್ಲಾಂ ಧರ್ಮಶಾಸ್ತ್ರ ರೂಪುಗೊಂಡಿದೆ. ಆದುದರಿಂದ ಇಸ್ಲಾಂ ಧರ್ಮವು ಮಾನವ ಜೀವನಕ್ಕೆ ಬೇಕಾಗುವ ಶಾಶ್ವತ ಮತ್ತು ಆದರ್ಶಪೂರ್ಣ ಶಾಸನ ಎನಿಸಿದೆ. ಇದಕ್ಕೆ ’ಷರಿಯತ್’ ಎನ್ನುತ್ತಾರೆ.

ಇಸ್ಲಾಂ ಸಮಾಜದ ರೀತಿ ನೀತಿಗಳಿಗೆಲ್ಲಾ ’ಕುರಾನ್‌ಷರೀಫ್ ಮತ್ತು ಹದೀಸ್’ ಆಧಾರ ಗ್ರಂಥವಾಗಿದೆ. ಸಂಪ್ರದಾಯದ ಹೆಸರಿನಲ್ಲಿ ಕೆಲವೊಂದು ನಿಯಮಗಳು ಅನವಶ್ಯಕವಾಗಿ ಅಚರಣೆಯಲ್ಲಿವೆ. ಆದರೂ ಕೆಲವು ಮುಖ್ಯ ತತ್ವಗಳನ್ನು ಇಲ್ಲಿ ವಿವರಿಸಲಾಗಿದೆ.

ನಿಕಾಹ್ (ಮದುವೆ)

ನಿಕಾಹ್ ಎಂದರೆ ಶರೀರ ಸಂಬಂಧ, ಶಾದಿ ಎಂದರೆ ಸಂತೋಷ. ಆದರೂ ಎರಡು ಶಬ್ದಗಳು ಮದುವೆ ಎಂಬರ್ಥದಲ್ಲಿ ಬಳಕೆಯಲ್ಲಿವೆ. ಇಸ್ಲಾಂ ಧರ್ಮ ಬ್ರಹ್ಮಚರ್ಯವನ್ನು ಒಪ್ಪುವುದಿಲ್ಲ. ಸ್ತ್ರೀಪುರುಷರು ತಮ್ಮ ತಮ್ಮ ಜೀವನದಲ್ಲಿ ಒಂದೇ ಸಲ ಮದುವೆ ಮಾಡಿಕೊಳ್ಳಬೇಕೆಂಬ ನಿಯಮವಿಲ್ಲ. ಸಂಸಾರ ನಡೆಸುವುದಕ್ಕೆ ದೈಹಿಕ ಮತ್ತು ಆರ್ಥಿಕ ಶಕ್ತಿ ಇದ್ದರೆ, ಒಂದಕ್ಕಿಂತ ಹೆಚ್ಚು ಮದುವೆ ಮಾಡಿಕೊಳ್ಳಬಹುದು. ಗಂಡ ಹೆಂಡತಿಯರು ಪರಸ್ಪರ ತಮಗೆ ದಾಂಪತ್ಯ ಜೀವನ ಬೇಡವೆನಿಸಿದರೆ, ಗಂಡನನ್ನು ಬಿಟ್ಟುಬಿಡುವುದಕ್ಕೆ ಹೆಂಡತಿಗೂ, ಹೆಂಡತಿಯನ್ನು ಬಿಡುವ ಅಧಿಕಾರ ಗಂಡನಿಗೂ ಉಂಟು. ಆದರೆ ಒಮ್ಮೆ ಪರಿತ್ಯಜಿಸಿದ ಹೆಂಡತಿಯನ್ನು ಮತ್ತೆ ಮದುವೆ ಮಾಡಿಕೊಳ್ಳಬೇಕಾದರೆ ಅವಳು ಮತ್ತೊಬ್ಬನನ್ನು ಮದುವೆ-ಯಾಗಿ, ಅವನೊಡನೆ ಬಾಳಿ, ಅವನಿಂದ ’ತಲಾಖ್’ ತೆಗೆದುಕೊಳ್ಳಬೇಕು.

ರಕ್ತ ಸಂಬಂಧ ಯಾರೊಡನೆ ಮಾಡಬೇಕು, ಯಾರೊಡನೆ ಮಾಡಬಾರದು ಎಂಬುದಕ್ಕೆ ಕುರಾನ್‌ನಲ್ಲಿ ಸವಿಸ್ತಾರವಾಗಿ ಹೇಳಲಾಗಿದೆ. ಮದುವೆಯಲ್ಲಿ ವಧೂ-ವರರ ಒಪ್ಪಿಗೆ ಅವಶ್ಯ-ವಾದುದು. ವಧುವಿನ ಒಪ್ಪಿಗೆಯಿಲ್ಲದೆ ಮದುವೆ ನಡೆಯುವುದಿಲ್ಲ.

ಪರದಾ (ಗೋಷಾ)

ದುಷ್ಟರ ಅತ್ಯಾಚಾರ, ಹಿಂಸೆ, ಅವರ ಕೆಟ್ಟ ದೃಷ್ಟಿ ಇತ್ಯಾದಿಗಳಿಂದ ರಕ್ಷಣೆ ಹೊಂದಲು ಸ್ತ್ರೀಯರು ತಮ್ಮ ದೇಹವನ್ನು ವಿಸೇಷ ಬಟ್ಟೆಯಿಂದ ಮುಚ್ಚಿಕೊಳ್ಳುವುದಕ್ಕೆ ಹೊಂದಲು ಸ್ತ್ರೀಯರು ತಮ್ಮ ದೇಹವನ್ನು ವಿಶೇಷ ಬಟ್ಟೆಯಿಂದ ಮುಚ್ಚಿಕೊಳ್ಳುವುದಕ್ಕೆ ಪರದಾ (ಗೊಷಾ) ಪದ್ಧತಿ ಎನ್ನುತ್ತಾರೆ. ಋತುಮತಿಯಾದ ಪ್ರತಿಯೊಬ್ಬ ಮಹಿಳೆಯೂ ಕಡ್ಡಾಯವಾಗಿ ’ನಾ ಮೊಹರಿಮ್’ (ಮದುವೆಯಾಗಲು ಅರ್ಹರು) ಅವರು ಮುಂದೆ ’ಪರದಾ’ ಮಾಡಬೇಕೆಂದು ಕುರಾನ್ ಮತ್ತು ಹದೀಸುಗಳಲ್ಲಿ ಹೇಳಲಾಗಿದೆ. ’ಔರತ್’ ಈ ಶಬ್ದದರ್ಥ ’ಛುಪಾನ’ (ಮುಚ್ಚು) ಎಂದು. ಪರದಾ ಪದ್ಧತಿ ಸ್ತ್ರೀಯರ ಕಲ್ಯಾಣಕ್ಕಾಗಿ ಇದೆಯೇ ಹೊರತು ಅನಿಷ್ಟ ಪದ್ಧತಿಯಲ್ಲ.

ಪೈದಾಯಿಷ್ (ಜನ್ಮೋತ್ಸವ)

ಮಗು ಹುಟ್ಟಿದೊಡನೆ ಸ್ನಾನ ಮಾಡಿಸಿ ಕಿವಿಯಲ್ಲಿ ’ಅಜಾನ್’ ಹೇಳೂವರು. ಇದಕ್ಕೆ ’ಬಾಂಗ ನಮಾಜು’ ಎಂದು ಹೆಸರು. ಬಾಂಗ ನಮಾಜಿನ ಉದ್ದೇಶ ನವಜನಿತ ಕೂಸಿಗೆ ಅಲ್ಲಾಹನ ಹೊರತು ಬೇರಾರು ದೊಡ್ಡವರಿಲ್ಲ. ಅಲ್ಲಾಹನೇ ಅಲ್ಲಾ ಹೊಗಳಿಕೆಗೆ ಯೋಗ್ಯನು. ಹ| ಮುಹ್ಮದ ಪೈಗಂಬರರು ಅವನ ಪ್ರವಾದಿಗಳು ಹೀಗೆ ಪ್ರಮಾಣ ಮಾಡಿ ಹೇಳುವುದೇ ಆಗಿದೆ. ಅನಂತರ ’ಅಖಿಕಾ’ ಎಂಬ ವಿಧಿಯನ್ನು ಮಾಡುವರು.

’ಅಖಿಕಾ’ದಲ್ಲಿ ಮಗುವಿನ ಕೂದಲು ತೆಗೆಯಿಸಿ ಕುರಿಯೊಂದನ್ನು ಕೊಯ್ದು ಮಾಂಸವನ್ನು ಹಂಚಲಾಗುತ್ತದೆ. ಇದು ಹದೀಸದಲ್ಲಿ ಉಲ್ಲೇಖವಾಗಿದೆ. ಆದರೆ ಕಡ್ಡಾಯ ನಿಯಮವಲ್ಲ. ನಲ್ವತ್ತನೆಯ ದಿನಕ್ಕೆ ಬಾಣಂತಿ ಮತ್ತು ಮಗು ಇಬ್ಬರಿಗೂ ಸ್ನಾನ ಮಾಡಿಸಿ ಓಣಿಯ ಹಿರಿಯ ಮಹಿಳೆಯರ ಸಮ್ಮುಖದಲ್ಲಿ ’ಚಿಲ್ಲಾ’ (ನಾಮಕರಣೋತ್ಸವ) ನಡೆಸುತ್ತಾರೆ. ಮಗುವಿಗೆ ಕ್ರಮೇಣ ಅಕ್ಷರಾಭ್ಯಾಸ, ಕುರಾನ್ ಅಧ್ಯಯನ ಮಾಡಿಸುವರು. ಅನಂತರ ’ಹದಿಯಾ’ ಮಾಡಿ ಮಿಠಾಯಿ ಹಂಚುವರು. ಇಲ್ಲವೆ ಊಟ ಹಾಕಿಸುವರು.

ಖತ್ನಾ (ಸುಂತಿ)

ಸಾಮಾನ್ಯವಾಗಿ ಏಳರಿಂದ ಹನ್ನೆರಡು ವರ್ಷದ ಒಳಗಿನ ಗಂಡು ಮಗುವಿನ ಜನನೇಂದ್ರಿಯದ ತುದಿಯ ಭಾಗದ ಚರ್ಮವನ್ನು ಕತ್ತರಿಸುವ ವಿಧಿಗೆ ’ಖತ್ನಾ’ (ಸುಂತಿ) ಎನ್ನುವರು. ಇದು ಇಬ್ರಾಹಿಂ ಪೈಗಂಬರರ ಕಾಲದಿಂದ ಪ್ರಾರಂಭವಾಗಿದ್ದು ಹದೀಸ್‌ನಲ್ಲಿ ಉಲ್ಲೇಖವಾಗಿದೆ. ಖತ್ನಾವನ್ನು ಮುಲ್ಲಾ ಸಾಹೇಬ ಇಲ್ಲವೆ ವೈದ್ಯರಿಂದ ಮಾಡಿಸುತ್ತಾರೆ. ’ಜ್ಯೂ’ ಮತ್ತು ಇಸ್ಲಾಮ್‌ನಲ್ಲಿ ಈ ರೂಢಿ ಕಡ್ಡಾಯವಾಗಿ ಬಳಕೆಯಲ್ಲಿದೆ. ಆಧುನಿಕ ವೈದ್ಯರ ಅಭಿಪ್ರಾಯದಂತೆ ಖತ್ನಾ ವಿಧಿ ಸಂಸಾರ ಸುಖ, ಆರೋಗ್ಯ ಹಾಗೂ ಸ್ವಚ್ಛತೆಯ ದೃಷ್ಟಿಯಿಂದ ಒಳ್ಳೆಯದು.

ಶವಸಂಸ್ಕಾರ

ಪ್ರಾಣ ಹೋದೊಡನೆ ಕಣ್ಣು ಬಾಯಿ ಮುಚ್ಚಿ ಮುಖವನ್ನು ಮೆಕ್ಕಾದ ಕಡೆಗೆ ತಿರುಗಿಸಿಟ್ಟು ಲೋಬಾನ (ಧೂಪ) ಹಾಕುತ್ತಾರೆ. ಕುರಾನ್ ಓದಿಸುತ್ತಾರೆ. ಶವಕ್ಕೆ ಸ್ನಾನ ಮಾಡಿಸಿ ಬಟ್ಟೆಯನ್ನು ಹೊದಿಸುವರು. ಮೃತ ಪುರುಷನ ಹೆಂಡತಿ ಅಲ್ಲಿದ್ದರೆ ಕಫನ್ ಬಟ್ಟೆಯನ್ನು ಓರೆ-ಯಾಗಿಸಿ ಮುಖ ತೋರಿಸಲಾಗುವುದು ಮತ್ತು ಪತಿಯಿಂದ ದೊರೆಯಬೇಕಾದ ’ಮಹರ್’ (ಸ್ತ್ರೀಧನ) ಬಾಕಿಯಿದ್ದರೆ ಮಾಫಿ ಮಾಡಲಾಗಿದೆಯೆಂದು ಆಕೆಯ ಬಾಯಿಂದ ಹೇಳಿಸಲಾಗುವುದು.

ಅನಂತರ ಮೃತ ಶರೀರವನ್ನು ತಾಬೂತ ಅಥವಾ ಡೋಲಿಯಲ್ಲಿಡುತ್ತಾರೆ. ಪೆಟ್ಟಿಗೆಯ ಮೇಲೆ ಹೊಸ ಬಟ್ಟೆ ಹೊದಿಸಿ ಹೂಮಾಲೆ ಹಾಕಿ ’ಅತ್ತರ‍್’ (ಸುಗಂಧದ್ರವ್ಯ) ಸಿಂಪಡಿಸುತ್ತಾರೆ. ಅನಂತರ ನಾಲ್ಕು ಮಂದಿ ಅದನ್ನು ಹೆಗಲ ಮೇಲೆ ಹೊತ್ತು ಸಾಮೂಹಿಕ ಗೀತೆ ಹಾಡುತ್ತಾ (ಮಧ್ಯ ಮಧ್ಯ ಹೆಣ ಹೊತ್ತವರು ಹೆಗಲು ಬದಲಾಯಿಸುವರು) ಕಬರಸ್ತಾನಕ್ಕೆ ನಡೆಯುವರು. ತೋಡಿದ ಕುಣಿಯಲ್ಲಿ ಹೆಣವನ್ನು ಮಲಗಿಸಿ, ಬಂಧು-ಬಾಂಧವರು, ಹಿಂದೂ -ಮುಸ್ಲಿಮರು ಒಂದೊಂದು ಹಿಡಿ ಮಣ್ಣು ಹಾಕುವರು. ಸಮಾಧಿಯ ಮೇಲೆ ಸುಟ್ಟ ಇಟ್ಟಿಗೆ ಅಥವಾ ಕಲ್ಲು ಇಲ್ಲವೆ ಬಾರಿ ಕಂಟಿ ಚುಚ್ಚುವರು. ಆದರೆ ಸುಣ್ಣ ಹಾಕುವುದುನ್ನು ಕುರಾನದ ಆಯತಗಳನ್ನು ಕಲ್ಲಿನತ್ತಿ ಕೆತ್ತಿ ನೆಡುವುದನ್ನು, ಸಮಾಧಿ ಸ್ಥಳದಲ್ಲಿ ಗುಂಬಜ ಮಾಡಿ ಕಟ್ಟಡ ಕಟ್ಟುವುದನ್ನು ಇಸ್ಲಾಂ ಧರ್ಮದಲ್ಲಿ ನಿಷೇಧಿಸಲಾಗಿದೆ.

ಕಬರಸ್ತಾನದಿಂದ ಹಿಂದಿರುಗಿದ ಮೇಲೆ ಶವಯಾತ್ರೆಯಲ್ಲಿ ಭಾಗವಹಿಸಿದವರಿಗೆಲ್ಲ ಭೋಜನ ವ್ಯವಸ್ಥೆ ಮಾಡುವರು. ಮೂರನೆಯ ದಿನ ಕುರಾನ್ ಓದಿಸಿ ಅನಂತರ ಗೋರಿಗೆ ಹೋಗಿ ಫಾತಿಹಾ ಮಾಡಿ ಬರುವರು. ಒಂಬತ್ತೆಯ ದಿನಕ್ಕೆ ’ನೌದಿನ್ ಜಿಯಾರತ್’ ಮಾಡುವರು. ೪೦ನೆಯ ದಿನ ಬಂಧು-ಮಿತ್ರರನ್ನು ಆಮಂತ್ರಿಸಿ ಕುರಾನ್ ಷರೀಫ ಓದಿಸಿ ಔತಣ ಏರ್ಪಡಿಸುವರು. ಬಡವರಿಗೂ ಫಕೀರರಿಗೂ ಅನ್ನದಾನ, ವಸ್ತ್ರದಾನ, ಅರ್ಥದಾನ ಮಾಡುವರು. ಒಂದು ವರ್ಷಕ್ಕೆ ’ಬರಸಿ’ ಎಂಬ ಪುಣ್ಯತಿಥಿಯನ್ನು ಮಾಡುವರು.

ಇಸ್ಲಾಂ ಧರ್ಮದ ಈ ಮೇಲಿನ ತಿಳುವಳಿಕೆಯ ಹಿನ್ನೆಲೆಯಲ್ಲಿ ನೋಡಿದರೆ ಬಹುಪಾಲು ಪಿಂಜಾರರ ಜೀವನವಿದಾನ ಈ ಧರ್ಮದ ತಾಂತ್ರಿಕ ಆಚರಣೆಗಳ ನೆಲೆಯನ್ನು ಮಾತ್ರ ಆಧರಿಸಿದಂತಿದೆ. ಆದರೆ ಸಂವೇದನೆಗಳ ನೆಲೆಯಲ್ಲಿ ಪಿಂಜಾರರು ತಮ್ಮ ಮೂಲಾಶ್ರಮದ ನೆನಪನ್ನು ಅಚ್ಚಳಿಯದೆ ಉಳಿಸಿ-ಕೊಂಡಂತಿದ್ದಾರೆ. ಪಿಂಜಾರರು ರಂಜಾನ್, ಬಕ್ರೀದ್, ಮೊಹರಂನಂತಹ ಹಬ್ಬಗಳ ಸಂದರ್ಭದಲ್ಲಿ ಮತ್ತು ಹುಟ್ಟು, ಮುಂಜಿ, ಮದುವೆ, ಸಾವಿನ ಸಂದರ್ಭಗಳಲ್ಲಿ ಇಸ್ಲಾಂನ ಅನುಯಾಯಿಗಳೇ ಆಗಿದ್ದಾರೆ. ಈ ಕುರಿತಾದ ಶಾಸ್ತ್ರಜ್ಞಾನ ಅವರಿಗಿಲ್ಲದಿದ್ದರೂ ಬಲ್ಲವರಿಂದ ತಿಳಿದುಕೊಂಡು ಕೆಲವೊಮ್ಮೆ ತಿಳಿದವರನ್ನೇ ಅವಲಂಬಿಸಿ ಈ ಆಚರಣೆಗಳಲ್ಲಿ ತಮ್ಮ ಧಾರ್ಮಿಕ ನಿಷ್ಠೆಯನ್ನು ತೋರುತ್ತಾರೆ. ಹಿಂದೆ ವಿಶ್ಲೇಷಿಸಿದಂತೆ ಇಸ್ಲಾಂನ ಪುರೋಹಿತಶಾಹಿ ವ್ಯವಸ್ಥೆ ಪಿಂಜಾರರಲ್ಲಿ ಜಾರಿಯಲ್ಲಿದೆ. ಇದಕ್ಕೆ ಕಾರಣ ಪಿಂಜಾರರಲ್ಲಿನ ಇಸ್ಲಾಂ ಅರಿವಿನ ಕೊರತೆ. ಆದರೆ ಪಿಂಜಾರರು ಇಸ್ಲಾಂ ಅರಿವು ಪಡೆಯಲು ಈ ಶತಮಾನಗಳ ಅಂತರದಲ್ಲಿ ಪ್ರಯತ್ನಿಸಲಿಲ್ಲವೇ? ಖಂಡಿತ, ಅಂತಹ ಪ್ರಯತ್ನಗಳು ಅಲ್ಲಲ್ಲಿ ನಡೆದಿವೆ. ಆರಂಭದ ದಿನಗಳಲ್ಲಿ ಈ ಬಗೆಗಿನ ಆಸಕ್ತಿ ಅಷ್ಟಾಗಿರಲಿಲ್ಲ ಎಂದು ತಿಳಿಯುತ್ತದೆ. ಬರಬರುತ್ತ ಪಿಂಜಾರರು ಆ ಬಗೆಯ ತಿಳುವಳಿಕೆ ಪಡೆಯುವುದರಲ್ಲಿ ಆಸಕ್ತವಾದ ಉದಾಹರಣೆಗಳು ಸಿಗುತ್ತವೆ. ಈ ದಿಸೆಯಲ್ಲಿ ಅವರಿಗೆದುರಾದ ಬಹುಮುಖ್ಯ ಅಡ್ಡಿ ಎಂದರೆ ಭಾಷೆಯದು. ಪಿಂಜಾರರಿಗೆ ತಮ್ಮ ಭಾಷೆಯಾದ ಕನ್ನಡದಲ್ಲಿ ಇಸ್ಲಾಂನ ಧಾರ್ಮಿಕ ಸಾಹಿತ್ಯ ಸಿಗದಿರುವುದು ಮತ್ತು ಮುಲ್ಲಾಗಳು ತಮ್ಮ ಧಾರ್ಮಿಕ ಪ್ರವಚನಗಳನ್ನು ಕನ್ನಡದಲ್ಲಿ ನೀಡದಿರುವುದು ಪಿಂಜಾರರು ಇಸ್ಲಾಂ ಅರಿವನ್ನು ಗಳಿಸಲು ಮುಖ್ಯ ತೊಂದರೆಯಾಗಿದೆ. ಈಗ ಅಂಥ ಸ್ಥಿತಿಯಿಲ್ಲ. ಈಗಿನ ಪಿಂಜಾರರ ಸ್ಥಿತಿಯನ್ನು ಕುರಿತು ಬೇರೊಂದು ಕಡೆ ಚರ್ಚಿಸುವುದರಿಂದ ಆ ವಿವರಗಳು ಇಲ್ಲಿ ಅನಗತ್ಯ. ಪಿಂಜಾರರಿಗೆ ಸರ್ಕಾರಿ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಕಳಿಸುವ ರೂಢಿಯಿದ್ದಂತೆ ಉರ್ದು ಶಾಲೆ ಅಥವಾ ಮದರಸಾಗಳಿಗೆ ಕಳಿಸುವಂತಹ ಆಸಕ್ತಿಯಿಲ್ಲ. ಕೆಲವರು ಕಳಿಸಿದರೂ ಆ ಮಕ್ಕಳು ಒಂದು ಬಗೆಯ ಪರಕೀಯ ಭಾವನೆಯಿಂದ ಕೆಲವೇ ದಿನಗಳಲ್ಲಿ ಅಂಥ ಶಿಕ್ಷಣವನ್ನು ಮೊಟಕುಗೊಳಿಸಿಬಿಡುತ್ತಾರೆ. ಪಿಂಜಾರರು ಧಾರ್ಮಿಕ ಶಿಕ್ಷಣದಿಂದ ದೂರ ಉಳಿಯುವುದಕ್ಕೆ ಅವರು ಅವಲಂಬಿಸಿದ ವೃತ್ತಿ ಮತ್ತು ಆರ್ಥಿಕ ಸಾಮಾಜಿಕ ಕಾರಣಗಳು ಮೂಲವಾಗಿವೆ.

ಮಗು ಹುಟ್ಟಿದಾಗ ಮುಲ್ಲಾನಿಂದ ಮಗುವಿನ ಕಿವಿಯಲ್ಲಿ ಅಜಾನ್ ಕೊಡಿಸುತ್ತಾರೆ. ಮುಂಜಿ ಸಂದರ್ಭದಲ್ಲಿ ಮುಲ್ಲಾನ ಉಪಸ್ಥಿತಿ ಅನಿವಾರ್ಯ. ಮದುವೆಯಲ್ಲಂತೂ ಮುಲ್ಲಾನ ಪೌರೋಹಿತ್ಯ ಪೂರ್ಣ ಪ್ರಮಾಣದಲ್ಲಿರುತ್ತದೆ. ಶವಸಂಸ್ಕಾರವೂ ಆತನ ಮಾರ್ಗದರ್ಶನದಲ್ಲಿ ನಡೆಯುತ್ತದೆ. ರಂಜಾನ್, ಬಕ್ರೀದ್ ಹಬ್ಬಗಳ ಸಾಮೂಹಿಕ ನಮಾಜಿನಲ್ಲಿ ಪಿಂಜಾರರು ಕಡ್ಡಾಯವಾಗಿ ಭಾಗವಹಿಸುತ್ತಾರೆ. ಆದರೆ ನಮಾಜಿನ ಪೂರ್ಣ ಆಚರಣೆಯ ಅರಿವು ಅವರಿಗಿರುವುದಿಲ್ಲ. ತಮ್ಮ ಮುಂದಿನವರು ಹೇಗೆ ಮಾಡುತ್ತಾರೋ ಹಾಗೆ ಅನುಕರಿಸುತ್ತಾರೆ. ಈ ಅನುಕರಣೆಯ ವಿಚಾರದಲ್ಲಿ ಅವರಿಗೆ ಕೀಳರಿಮೆಯಿದ್ದಂತಿಲ್ಲ. ಬದಲಾಗಿ ಮುಸ್ಲಿಮರಿಗೆ ಇವರನ್ನು ಕಂಡು ಅನುಕಂಪ ಅಣಕದ ಭಾವನೆಗಳಿವೆ. ಪಿಂಜಾರರಲ್ಲಿ ಬುರ್ಖಾ ಅಥವಾ ಗೋಷಾ ಪದ್ಧತಿಯಿಲ್ಲ. ಒಂದಕ್ಕಿಂತ ಹೆಚ್ಚು ಮದುವೆಯಾಗುವುದಿಲ್ಲ. ’ತಲಾಖ್’ ಬಗ್ಗೆ ಅವರಿಗೇನೂ ಗೊತ್ತಿಲ್ಲ. ಗೊತ್ತಿದ್ದವರು ಅದನ್ನು ಒಪ್ಪುವುದಿಲ್ಲ. ಪೈಗಂಬರ‍್ ಮತ್ತಿತರ ಶರಣರ ಕುರಿತು ಗೌರವವಿದೆ. ಆದರೆ ಅವರ ಚರಿತ್ರೆಯ ಬಗ್ಗೆ ಗೊತ್ತಿಲ್ಲ. ಮೊಹರಂ ಹಬ್ಬದ ಹಿನ್ನೆಲೆ ಅನೇಕರಿಗೆ ತಿಳಿದಿಲ್ಲ. ಅದರಿಂದಾಗಿಯೇ ಅದನ್ನು ಖುಷಿಯಿಂದ ಆಚರಿಸುತ್ತಾರೆ. ಮತ್ತು ಈ ಹಬ್ಬದಲ್ಲಿ ’ತಾಬೂತ್’ ರಚಿಸಿಕೊಂಡು ಅದಕ್ಕೆ ಆರಾಧಿಸುವ, ಹರಕೆ ಕಟ್ಟಿಕೊಳ್ಳುವ ವಿಚಾರಗಳು ನಡೆಯುತ್ತವೆ. ಅಂದರೆ ಇದು ಹಿಂದೂ ಮೂರ್ತಿ ಪೂಜೆಯ ಪ್ರಭಾವ. ಕೆಲವು ಮುಸಲ್ಮಾನ ದೊರೆಗಳ ಹಾಗೂ ಬ್ರಿಟಿಷರ ರಾಜಕೀಯ ಉದ್ದೇಶಗಳಿಂದಾಗಿ ಈ ಹಬ್ಬದ ನಿಜ ಸಂದೇಶವೇ ವಿರೂಪಗೊಂಡುಬಿಟ್ಟಿದೆ. ಈ ಹಬ್ಬದಲ್ಲಿ ಪಿಂಜಾರರು ಮತ್ತು ಹಿಂದೂಗಳ ಸಹಭಾಗಿತ್ವ ಮಾತ್ರ ಮೆಚ್ಚುವಂತಹದ್ದಾಗಿದೆ. ರಂಜಾನ್, ಬಕ್ರೀದ್, ಮೊಹರಂ ಹಬ್ಬಗಳಲ್ಲಿ ಮಾಡಿದ ಅಡಿಗೆಯನ್ನು ’ಓದಿಕೆ’ ಮಾಡಿಸುವುದು. ಕುರಿಕೋಳಿಗಳ ’ಜುಬಾ’ ಮಾಡಿಸುವುದು ಎಲ್ಲಾ ಮುಲ್ಲಾನಿಂದಲೇ. ಆದ್ದರಿಂದ ಪಿಂಜಾರರು ಇಡೀ ಇಸ್ಲಾಮಿನ ಆಚರಣೆಗಳಲ್ಲಿ ಅತ್ಯಂತ ಶ್ರದ್ಧೆ ನಿಷ್ಠೆ ತೋರಿದರೂ ಆ ಕುರಿತಾದ ಸ್ಪಷ್ಟ ಜ್ಞಾನ ಅವರಲ್ಲಿಲ್ಲ.

ಆದರೆ ಪಿಂಜಾರರು ಹಿಂದೂ ಸಮುದಾಯದ ಅನೇಕ ಹಬ್ಬ ಮತ್ತು ಆಚರಣೆಗಳನ್ನು ನಂಬಿದವರಿದ್ದಾರೆ. ಆಯಾ ಸ್ಥಳೀಯವಾದ ಹಿಂದೂ ಸ್ತ್ರೀ ದೇವತೆಗಳ ಹಬ್ಬವನ್ನು ಪಿಂಜಾರರು ಆಚರಿಸುತ್ತಾರೆ. ಅನೇಕರು ನಾಯಕನಹಟ್ಟಿಯ ತಿಪ್ಪೇಸ್ವಾಮಿ, ಉಕ್ಕಡಗಾತ್ರಿಯ ಅಜ್ಜಯ್ಯನಿಂದ ಹಿಡಿದು ಶಿರಡಿ ಸಾಯಿಬಾಬಾ, ಧರ್ಮಸ್ಥಳದ ಮಂಜುನಾಥನಿಗೂ ನಡೆದುಕೊಳ್ಳುವವರಿದ್ದಾರೆ. ಮುಸ್ಲಿಂ ಬಾಂಧವರು ಒಯ್ಯುತ್ತಾರೆ ಎಂಬ ಅಂಜಿಕೆಯಿಂದ ಈ ಸಂಬಂಧವಾದ ಫೋಟೋಗಳನ್ನು ಅಡಿಗೆ ಮನೆಗಳಲ್ಲಿ ಗುಪ್ತವಾಗಿಟ್ಟುಕೊಂಡವರಿದ್ದಾರೆ.

ಇವತ್ತಿಗೂ ಅನೇಕ ಪಿಂಜಾರರ ಮನೆದೇವತೆ ಎಲ್ಲಮ್ಮ, ಪ್ರತಿ ಮಂಗಳವಾರ ಮತ್ತು ಶುಕ್ರವಾರದ ದಿನ ಎಲ್ಲಮ್ಮನಿಗೆ ಎಡೆಯಿಟ್ಟು ಕಾಯಿ ಒಡೆದು ಬರುವ ಪದ್ಧತಿಯಿದೆ. ಸಾಮಾನ್ಯವಾಗಿ ಊರ ಹೊರಗಿರುವ ಚೌಡಮ್ಮ ಎಲ್ಲಮ್ಮನಂತಹ ದೇವತೆಗಳಿಗೆ ತಾವೇ ಎಣ್ಣೆ ಬಿಟ್ಟು ದೀಪಹಚ್ಚಿ, ಊದಿನಕಡ್ಡಿ ಬೆಳಗುತ್ತಾರೆ. ಪ್ರದಕ್ಷಿಣೆ ಹಾಕಿ ಅಡ್ಡ ಬೀಳುತ್ತಾರೆ. ಮಠಾಧಿಪತಿಗಳಿಗೆ ಅಡ್ಡ ಬೀಳುವವರೂ, ಶಿವರಾತ್ರಿಯ ಜಾಗರಣೆಯಲ್ಲಿ ಶಿವಭಜನೆ ಮಾಡುವವರೂ, ಶ್ರಾವಣದಲ್ಲಿ ಪುರಾಣ ಓದಿಸುವವರೂ ಇದ್ದಾರೆ. ಇದಲ್ಲದೆ ಇಸ್ಲಾಂ – ಹಿಂದೂ ಧಾರ್ಮಿಕ ಭಾವೈಕ್ಯತೆಯ ಸಂಗಮಗಳಂತಿರುವ ಬಾಬಾ ಬುಡನ್‌ಗಿರಿ ಉರುಸು, ಹಣಗೆರೆಕಟ್ಟೆ, ಬಸವಾಪಟ್ಟಣ, ಬಾತಿ, ಹೊನ್ನೂರಲಿ ಉರುಸುಗಳಿಗೆ ಗಾಡಿಕಟ್ಟಿಕೊಂಡು ಹೋಗಿ ಕುರಿಕೋಳಿ ಕೊಯ್ದು ಅಡಿಗೆ ಮಾಡಿ ’ಓದಿಸಿ’ ಉಂಡು ಬರುತ್ತಾರೆ. ಪಿಂಜಾರರಿಗೆ ಇಸ್ಲಾಂ ಧಾರ್ಮಿಕ ಸಾಹಿತ್ಯಕ್ಕಿಂತ ಮಹಾಭಾರತ, ರಾಮಾಯಣ, ಕೃಷ್ಣ ಶಿವನಿಗೆ ಸಂಬಂಧಿಸಿದ ಪುರಾಣಗಳು ತಿಳಿದಂತಿವೆ.

ಈ ಎಲ್ಲ ಕಾರಣಗಳಿಂದ ಪಿಂಜಾರರಿಗೆ ದೇವರನ್ನು ನಂಬುವುದು ಎಂದರೆ ನಿರ್ದಿಷ್ಟವಾಗಿ ಇಂತಹದ್ದೇ ದೇವರು ಆಗಬೇಕು ಎಂಬಂತಿಲ್ಲ. ದೇವರಲ್ಲಿ ಅಚಲವಾದ ವಿಶ್ವಾಸ ಮತ್ತು ಶ್ರದ್ಧೆಯಿದೆ. ಹಾಗೆಯೇ ಲೌಕಿ ಬದುಕಿನ ಸುಖ-ಸಂಕಷ್ಟಗಳ ಅರಿವೂ ಇದೆ. ಹಿಂದೂ – ಇಸ್ಲಾಂ ಎಂಬ ಧಾರ್ಮಿಕ ಭೇದ ಮಾಡದೆ ತಮಗೆ ಆಂತರಿಕ ಶಾಂತಿ ನೀಡುವ ಎಲ್ಲ ದೇವರಿಗೂ ನಡೆದುಕೊಳ್ಳುವ ಪಿಂಜಾರರಿಗೆ ಆಧ್ಯತ್ಮ ಎಂದರೆ ಅದು ಸತ್ತ ನಂತರದ ಯಾವುದೋ ಲೋಕದ ಸುಖವಲ್ಲ. ಈ ಲೋಕದ ಹಿಂಸೆ, ಅಪಮಾನಗಳಿಲ್ಲದ ಸಾಮರಸ್ಯದ ಬದುಕು.

ಪಿಂಜಾರರು ಪ್ರಧಾನವಾಗಿ ಅಚರಿಸುವ ಹಬ್ಬಗಳು ಯುಗಾದಿ, ರಂಜಾನ್, ಬಕ್ರೀದ್, ದೀಪಾವಳಿ, ಹಿರಿಯರ ಹಬ್ಬ ಮತ್ತು ಮೊಹರಂ ಇವುಗಳ ಜೊತೆಗೆ ಕಾರಬ್ಬ, ಬಸವನಹಬ್ಬ, ನಾಗಪ್ಪನ ಹಬ್ಬ (ನಾಗರ ಪಂಚಮಿ), ಚೌಡವ್ವನ, ಎಲ್ಲವ್ವನ ಹಬ್ಬ ಮುಂತಾದ ಸ್ಥಳೀಯ ಹಿಂದೂ ದೇವತೆಗಳ ಹಬ್ಬವನ್ನು ಬಿಡದೇ ಆಚರಿಸುತ್ತಾರೆ. ದಾದಾಪಹಾಡು (ಬಾಬಾಬುಡನ್‌ಗಿರಿ), ಹೊನ್ನುರಲಿ ಉರುಸು, ನಾಯಕನಹಟ್ಟಿ ಜತ್ರೆ, ದೇವರಗುಡ್ಡದ ಜಾತ್ರೆ, ಬಾತಿ ಚಮನ್‌ಷಾವಲಿ ಉರುಸು ಹೀಗೆ ಪಿಂಜಾರರು ತಮ್ಮ ಸಂಸ್ಕೃತಿಗೆ ಹಾಗೂ ನೆಲೆಗೆ ಹತ್ತಿರವಾದ ಎಲ್ಲ ಬಗೆಯ ಉರುಸು, ಜಾತ್ರೆಗಳನ್ನು ಮಾಡುತ್ತಾರೆ., ಇವೆಲ್ಲ ಉಳಿದುಕೊಂಡು ಬಂದಿರುವುದು ಮಹಿಳೆಯರ ಮೂಲಾಶ್ರಮದ ಭಾವಕೋಶದಲ್ಲಿ. ಈ ಎಲ್ಲ ಸಂದರ್ಭದಲ್ಲಿ ಶ್ರದ್ಧೆ ತೋರುವವರು ಅವರೇ. ಆದುದರಿಂದ ಮಹಿಳೆಯರು ತಮ್ಮನ್ನು ತೆರೆದುಕೊಳ್ಳುವುದು ಬಹುಶಃ ಮೂಲಾಶ್ರಮದ ನಂಬಿಕೆಗೆ ಹತ್ತಿರವಾದ ಆಚರಣೆಗಳ ವಿಷಯದಲ್ಲಿಯೇ. ಉಳಿದಂತೆ ಇಸ್ಲಾಂನ ಪ್ರಭಾವ ಕಳೆದ ಒಂದೆರಡು ಶತಮಾನಗಳಲ್ಲಿ ಆದದ್ದು ಅಷ್ಟೇ. ಈ ಹೊತ್ತಿಗೂ ಇಸ್ಲಾಂ ಆಚರಣೆಗಳಲ್ಲಿ ಪಿಂಜಾರರ ಮಹಿಳೆಯರು ಮೂಕರಾಗಿರುವುದೇ ಹೆಚ್ಚು. ಆ ಜ್ಞಾನ ಇರುವವರನ್ನು ಅನುಸರಿಸುವುದು ಮಾತ್ರ ಅವರಲ್ಲಿ ಕಂಡುಬರುತ್ತದೆ. ಅಂತಹ ಕೆಲವು ಹಬ್ಬಗಳ ಆಚರಣೆಗಳ ವಿವರಗಳನ್ನು ಇನ್ನು ಮುಂದೆ ಕೊಡಲಾಗುತ್ತದೆ.

ರಂಜಾನ್

ಮುಸ್ಲಿಮರ ಮಹತ್ವದ ಹಬ್ಬ ರಂಜಾನ್, ರಂಜಾನ್ ತಿಂಗಳಿಡೀ ಅತ್ಯಂತ ಪವಿತ್ರದ ದಿನಗಳೆಂದು ಮುಸ್ಲಿಮರು ಭಾವಿಸುತ್ತಾರೆ. ಈ ತಿಂಗಳು ಪೂರ್ತಿ ಮುಸ್ಲಿಮರು ’ರೋಜಾ’ ಎಂದು ಕರೆಯುವ ಉಪವಾಸ ವ್ರತವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ರಂಜಾನ್ ತಿಂಗಳ ಮೊದಲು ಚಂದ್ರ (ಅಮಾವಾಸ್ಯೆಯ ನಂತರದ ಚಂದ್ರ)ನನ್ನು ನೋಡಿ ನಮಾಜು ಮಾಡುತ್ತಾರೆ. ಆ ರಾತ್ರಿಯ ಬೆಳಗಿನಲ್ಲಿ ಅಂದರೆ ಸೂರ‍್ಯೋದಯದ ಮೊದಲು ನಮಾಜು ಮಾಡಿ ರೋಜಾ ಆರಂಭಿಸುತ್ತಾರೆ. ಅದೆಷ್ಟು ಕಠಿಣ ಉಪವಾಸ ಅಂದರೆ ಈ ಸಂದರ್ಭದಲ್ಲಿ ಉಗುಳು ನುಂಗುವ ಹಾಗಿಲ್ಲ, ಬೀಡಿ ಕೂಡ ಸೇದುವಂತಿಲ್ಲ. ಅಲ್ಲದೆ ಕಠೋರ ನಿಷ್ಠೆಯಿಂದ ’ಪಾಕಿ’ಯಾಗಿರಬೇಕು. ಸೂರ‍್ಯಾಸ್ತದ ನಂತರ ನಮಾಜು ಮಾಡಿ ರೋಜಾ ಬಿಡುತ್ತಾರೆ. ಸಾಮಾನ್ಯವಾಗಿ ಎಂಥ ಬಡ ಮುಸ್ಲಿಮನೂ ಕೂಡ ಈ ದಿನಗಳಲ್ಲಿ ಒಳ್ಳೆಯ ಊಟ ಉಣ್ಣುತ್ತಾನೆ. ಕೆಲವರು ನಿತ್ಯ ರಾತ್ರಿ ಮಾಂಸಾಹಾರ ಉಪಯೋಗಿಸುತ್ತಾರೆ. ಈ ವ್ರತ ಒಂದು ತಿಂಗಳ ಕಾಲ ಸತತವಾಗಿ ಮತ್ತೆ ಅಮಾವಾಸ್ಯೆಯ ನಂತರದ ಚಂದ್ರನನ್ನು ನೋಡುವವರೆಗೂ ಮುಂದುವರಿಯುತ್ತದೆ. ರಂಜಾನ್ ದಿನ ಸಾಮೂಹಿಕ ಪ್ರಾರ್ಥನೆ ನಡೆಯುವುದರೊಂದಿಗೆ ಹಬ್ಬದ ಸಂಭ್ರಮ ಸಡಗರ ಮುಗಿಯುತ್ತದೆ.

ಪಿಂಜಾರರಿಗೆ ರಂಜಾನ್ ಈ ತಿಂಗಳಲ್ಲಿ ಮುಸ್ಲಿಮರು ಮಾಡುವ ಆಚರಣೆಗಳ ಬಗ್ಗೆ ಅರಿವಾಗದೆ; ತಾವೂ  ಅವನ್ನು ಒಳಗೊಳ್ಳಬೇಕೆಂಬ ಅಪೇಕ್ಷೆ ಇದೆ; ಒಳಗೊಳ್ಳಲಾಗಿಲ್ಲ ಅನ್ನುವ ಕೊರಗಿದೆ; ಒಳಗೊಳ್ಳಲಾಗುವುದಿಲ್ಲವಲ್ಲಾ ಅನ್ನುವ ತಳಮಳವೂ ಇದೆ. ಇದಕ್ಕೆ ಪಿಂಜಾರರಿಗಿರುವ ಧಾರ್ಮಿಕ ತಿಳುವಳಿಕೆಯ ಅಧಿಕೃತ ಜ್ಞಾನದ ಕೊರತೆಯೇ ಕಾರಣ. ಮುಸ್ಲಿಮರು ಪಿಂಜಾರರನ್ನು ’ಮುಸ್ಲಿಮರು’ ಎಂದು ಒಟ್ಟಾಗಿ ಸ್ವೀಕರಿಸುವುದಿಲ್ಲ. ಇದಕ್ಕೂ ಪಿಂಜಾರರ ಧಾರ್ಮಿಕ (ಇಸ್ಲಾಂ) ತಿಳುವಳಿಕೆ ಕಡಿಮೆ ಎನ್ನುವಂತಹದ್ದೇ ಕಾರಣ. ಅದನ್ನೆಲ್ಲ ಕಲಿಯುವ ಉತ್ಕಟ ಅಪೇಕ್ಷೆ ಪಿಂಜಾರರಿಗಿದೆ. ಯಾರು ಕಲಿಸಬೇಕು? ಮುಸ್ಲಿಮರು ಕಲಿಸಬೇಕು. ಕಲಿಸಬೇಕಾಗಿತ್ತು. ಕಲಿಸಿಲ್ಲ. ಇದಕ್ಕೆ ಭಾಷೆಯ ತೊಂದರೆಯೂ ಸ್ವಲ್ಪಮಟ್ಟಿಗೆ ಕಾರಣವಾಗಿದೆ. ಇಸ್ಲಾಂ ಧರ್ಮದ ತಿಳುವಳಿಕೆಯನ್ನು ಕನ್ನಡ ಭಾಷೆಯ ಮೂಲಕ ತಲುಪಿಸುವ ಕೆಲಸವಾಗಬೇಕಿತ್ತು. ಆಗ ಪಿಂಜಾರರ ತಮ್ಮದೇ ಭಾಷೆಯಲ್ಲಿ ಸಹಜವಾಗಿ ಕಲಿಯುತ್ತಿದ್ದರು. ಆದರೆ ಮುಸ್ಲಿಮರಿಗೆ ಕನ್ನಡ ಬರುವುದಿಲ್ಲ. (ವ್ಯಾವಹಾರಿಕ ಅಗತ್ಯಕ್ಕೆ ತಕ್ಕಷ್ಟು ಬರುತ್ತದೆ. ಇಲ್ಲವೆಂದಲ್ಲ, ಧರ್ಮದ ಮೂಲಭೂತ ತಿರುಳನ್ನು ಮಂಡಿಸುವಷ್ಟರ ಮಟ್ಟಿನ ಕನ್ನಡ ಕರ್ನಾಟಕದಲ್ಲಿನ ಎಷ್ಟು ಮುಸ್ಲಿಮರಿಗೆ ಬರುತ್ತದೆ? ಬಂದವರು ಆ ಪ್ರಯತ್ನವನ್ನು ಯಾಕೆ ಮಾಡಿಲ್ಲ?) ಪಿಂಜಾರರಿಗೆ ಉರ್ದುವಾಗಿ, ಅರಬಿಕ್ ಆಗಲಿ ಬರುವುದಿಲ್ಲ. ಹೋಗಲಿ, ಇಸ್ಲಾಂ ಬಗ್ಗೆ ಉಳಿದ ಧರ್ಮದವರಾಗಲೀ (ಹಿಂದೂ, ಕ್ರಿಶ್ಚಿಯನ್ ಇತ್ಯಾದಿ) ಏನು ತಿಳಿದುಕೊಳ್ಳಲು ಸಾಧ್ಯವಾಗಿದೆ? ಉಳಿದವರು ತಿಳಿದುಕೊಳ್ಳಬೇಕೆಂಬ ಆಸಕ್ತಿಯನ್ನು ಹುಟ್ಟಿಸಬೇಕಾದವರು ಯಾರು? ಹಾಗೆಯೇ ಉಳಿದ ಧರ್ಮಗಳ ಬಗ್ಗೆ ಮುಸ್ಲಿಮರು ಏನು ತಿಳಿದು-ಕೊಂಡಿದ್ದಾರೆ? ಯಾಕೆ ಒಂದೊಂದು ಧರ್ಮಗಳ ಬಗ್ಗೆ ಮುಸ್ಲಿಮರು ಏನು ತಿಳಿದು -ಕೊಂಡಿದ್ದಾರೆ? ಯಾಕೆ ಒಂದೊಂದೂ ಧರ್ಮ ತನ್ನದೇ ಆದ ದ್ವೀಪಗಳನ್ನು ಸೃಷ್ಟಿ ಮಾಡಿ-ಕೊಂಡಿವೆ? ಈ ದ್ವೀಪಗಳನ್ನು ದೂರದಿಂದ ನೋಡುತ್ತಿರುವ ಪಿಂಜಾರರಂಥ ಜನಾಂಗದ ಗತಿ ಏನು? ಒಂದೊಂದೂ ದ್ವೀಪ ಒಂದೊಂದು ಧರ್ಮವಾದರೆ ಪಿಂಜಾರರದ್ದೂ ಒಂದು ಧರ್ಮ ಯಾಕಿಲ್ಲ?

ಈ ಬಗೆಯ ಪ್ರಶ್ನೆಗಳು ಪಿಂಜಾರರ ಜೀವನ ವಿಧಾನವನ್ನು ಅಧ್ಯಯನ ಮಾಡುವ ಹಿನ್ನೆಲೆಗೆ ಅನಿವಾರ್ಯವಾದವೆನಿಸುತ್ತದೆ. ಈ ಎಲ್ಲ ಪ್ರಶ್ನೆಗಳು ಕೊಡುವ ಉತ್ತರಗಳೇ ಪಿಂಜಾರರ ಬದುಕನ್ನು ವಿವರಿಸುತ್ತವೆ. ಈ ನೆಲೆಯಲ್ಲಿ ಪಿಂಜಾರರ ರಂಜಾನ್ ಆಚರಣೆ ಒಳಗೊಂಡಿರುವ ರೀತಿ ಇಂತಹದ್ದು; ರಂಜಾನ್ ಅನ್ನುವ ಹಬ್ಬ ನಾವೂ ಆಚರಿಸಬೇಕಾದದ್ದು ಅನ್ನುವ ಅರಿವು ಪಿಂಜಾರರಿಗಿದೆ. ಕರ್ನಾಟಕದ ಪಿಂಜಾರ ಈ ದಿನಗಳಲ್ಲಿ ಮುಸ್ಲಿಮರು ಆಚರಿಸುವ ಹಗೆ ’ಉಪವಾಸ’ವನ್ನು ಆಚರಿಸುವುದಿಲ್ಲ. ಇದಕ್ಕೆ ಮುಖ್ಯ ಕಾರಣಗಳಿವೆ. ೧) ಧರ್ಮದ ಬಗ್ಗೆ ಮುಸ್ಲಿಮರಿಗಿರುವಷ್ಟು ಕಠೋರ ನಿಷ್ಠೆ ಪಿಂಜಾರರಗಿಲ್ಲ. ೨) ’ಉಪವಾಸ’ ಇರಬೇಕಾದರೆ ಮುಸ್ಲಿಮರು ಅನುಸರಿಸುವ ವಿಧಾನಗಳು ಪಿಂಜಾರರಿಗೆ ಗೊತ್ತಿಲ್ಲ. (ಹಿಂದೆ ಹೇಳಿದ ಧಾರ್ಮಿಕ ಅಜ್ಞಾನ ಮತ್ತು ಭಾಷೆಯ ಕಾರಣಗಳು) ೩) ಅತ್ಯಂತ ಮುಖ್ಯವಾದದ್ದು, ಪಿಂಜಾರರು ಜೀವನದ ಬಹುಭಾಗ ಉಪವಾಸವಿರುತ್ತಾರೆ. ಅದು ಅನ್ನ ಇದ್ದೂ ಧರ್ಮದ ಕಾರಣಕ್ಕಾಗಿ ಆಚರಿಸುವಂತಹದ್ದಲ್ಲ. ಅನ್ನವಿಲ್ಲದೆ ಅನಿವಾರ‍್ಯವಾಗಿ ಇರಬೇಕಾದ ಉಪವಾಸ.

ಈ ಕಾರಣದಿಂದಾಗಿಯೇ ಅನೇಕ ಪಿಂಜಾರರು ಮುಸ್ಲಿಮರು ಆಚರಿಸುವ ’ಉಪವಾಸ’ ವ್ರತವನ್ನು ಪ್ರಶ್ನಿಸುತ್ತಾರೆ. ’ಪ್ರತಿ ಸಾಯಂಕಾಲ ಮತ್ತು ಬೆಳಂಬೆಳಗ್ಗೆ ಬೇಕಾದ್ದು ಮಾಡಿಕೊಂಡು ತಿನ್ನುವಂತಹದ್ದು ಹೇಗೆ ಉಪವಾಸವಾಗುತ್ತದೆ?’ ವರ್ಷದ ಮುಕ್ಕಾಲು ಭಾಗ ಅರೆ ಹೊಟ್ಟೆಯಲ್ಲಿ ಬದುಕುವ ನಾವು ವಿಶೇಷವಾಗಿ ’ಉಪವಾಸ’ ಆಚರಿಸುವ ಅಗತ್ಯವೇನಿದೆ? ಪ್ರಜ್ಞಾವಂತರಲ್ಲದ, ಅವಿದ್ಯಾವಂತ ಪಿಂಜಾರರ ಈ ಪ್ರಶ್ನೆಗಳು ’ಯಾವುದು ಧರ್ಮ’? ಅನ್ನುವ ಮೂಲಭೂತ ಪ್ರಶ್ನೆಯನ್ನೇ ಹುಟ್ಟಿಸುತ್ತವೆ. ಅವರನ್ನು ’ಪ್ರಜ್ಞಾವಂತರಲ್ಲ’ ಅನ್ನುವುದು ಹೇಗೆ?

ನಗರಗಳಲ್ಲಿ ಕೆಲವು ಹಳ್ಳಿಗಳಲ್ಲಿ ಸ್ವಲ್ಪ ಮಟ್ಟಿಗೆ ಹಿಂದೂ ಮೂಲಭೂತವಾದಿಗಳಿಂದ ಭೀತರಾದ ಪಿಂಜಾರರು ರಂಜಾನ್ ತಿಂಗಳಲ್ಲಿ ಉಪವಾಸವಿರುತ್ತಾರೆ. ರೋಜಾ ಬಿಡುವಾಗ, ಕಟ್ಟುವಾಗ ಧ್ಯಾನಿಸಬೇಕಾದ ಕಲ್ಮಗಳು ಇವರಿಗೂ ಬರುವುದಿಲ್ಲ. ಅಂಥವರು ಕಲ್ಮಗಳನ್ನು ಕನ್ನಡ ಅಕ್ಷರಗಳಲ್ಲಿ ಬರೆಸಿಕೊಂಡಿರುತ್ತಾರೆ. ಇದೂ ಪೂರ್ತಿ ತಿಂಗಳ ಕಾಲ ಹೀಗೆ ಮಾಡದೆ ಅವರು ಬಯಸಿದ ಯಾವುದೋ ಕೆಲವು ನಿರ್ದಿಷ್ಟ ದಿನಗಳಲ್ಲಿ ಉಪವಾಸಾಚರಣೆ ಮಾಡುತ್ತಾರೆ. ರಂಜಾನ್ ಇನ್ನೂ ಐದು ದಿನಗಳಿವೆ ಎನ್ನುವಾಗ ಆಚರಿಸುವ ’ಸತಾವಿ’ ದಿನದಂದು ಇಂತಹವರು ಸಾಮಾನ್ಯವಾಗಿ ಉಪವಾಸವಿರುತ್ತಾರೆ. ’ಸತಾವಿ’ ದಿನ ಉಪವಾಸ ಇದ್ದರೆ ಸಾಕು ಅದು ಒಂದು ತಿಂಗಳಿಗೆ ಸಮ ಎನ್ನುವ ಭಾವನೆಯೂ ಅನೇಕರಲ್ಲಿದೆ. ಆವತ್ತು ಮಾಂಸದಡಿಗೆ ಮಾಡಿ ಉಣ್ಣುತ್ತಾರೆ.

ಆದರೆ ತಿಂಗಳಿಡೀ ಉಪವಾಸವಿರುವ ಬಹುಸಂಖ್ಯಾತ ಪಿಂಜಾರರು ಉಬ್ಬದ ದಿನ ಉತ್ಸಾಹದಿಂದಿರುತ್ತಾರೆ. ಮನೆಮಂದಿಗೆಲ್ಲ ಬಟ್ಟೆಬರೆ ತರುತ್ತಾರೆ. ಕಡೆಯ ಪಕ್ಷ, ಹಳೆಯ ಬಟ್ಟೆಗಳನ್ನೇ ಒಗೆದು ಉಟ್ಟುಕೊಳ್ಳುತ್ತಾರೆ. ಮೈ ತಿಕ್ಕಿ ತಿಕ್ಕಿ ಸ್ನಾನ ಮಾಡುತ್ತಾರೆ. ಹೊಸ ಅಥವಾ ಹಳೆಯ ಅಂಗಿ, ಪಂಚೆ ಅಥವಾ ಜುಬ್ಬ ಪೈಜಾಮಗಳನ್ನು ತೊಟ್ಟುಕೊಂಡು ಶ್ಯಾವಿಗೆ ಹುಗ್ಗಿ ಉಂಡು ಬಗಲಲ್ಲಿ ಒಂದು ಚಾಪೆ ಅಥವಾ ದುಪ್ಪಡಿಯಿಟ್ಟುಕೊಂಡು ಊರ ಹೊರಗಿರುವ ಈದಗಾ ಹತ್ತಿರಕ್ಕೆ ತಂತಮ್ಮ ಆಪ್ತರೊಂದಿಗೆ ಹೊರಡುತ್ತಾರೆ. ಬೆಳಿಗ್ಗೆ ಆಗಲೇ ಹೊತ್ತು ಆಳೆತ್ತರಕ್ಕೆ ಬರುತ್ತಿದ್ದ ಹಾಗೇ ಅಲ್ಲರೂ ಈದಗಾ ಮೈದಾನದಲ್ಲಿ ಸೇರುತ್ತಾರೆ. ಹಿಂದಿನ ದಿನವೇ ಮೈದಾನದಲ್ಲಿ ಬೆಳೆದಿರುವ ಹುಲ್ಲು ಕೆತ್ತಿ, ಕಸಕಡ್ಡಿ ಗುಡಿಸಿ ಶುದ್ಧ ಮಾಡಿರುತ್ತಾರೆ. ಪಿಂಜಾರರು, ಮುಸ್ಲಿಮರು ಅವರವರದೇ ಸಣ್ಣಪುಟ್ಟ ಗುಂಪುಗಳಲ್ಲಿ, ಒಟ್ಟಾಗಿಯೂ ಇರುತ್ತಾರೆ. ಬರುವವರು ಬರುತ್ತಲೇ ಇರುತ್ತಾರೆ. ಅವರೆಲ್ಲ ಬಂದು ಸೇರಲೆಂದೇ ಮುಲ್ಲಾ ಪಶ್ಚಿಮಕ್ಕೆ ತಿರುಗಿ ’ಅಜಾನ್’ ಕೊಡುತ್ತಾನೆ. ಮುಸ್ಲಿಂ ಮುಖಂಡರೆಲ್ಲ ಮುಂದಿನ ಸಾಲಿನಲ್ಲಿ ನಿಲ್ಲುತ್ತಾರೆ. ಸಹಜ ಕೀಳರಿಮೆ-ಯಿಂದ ಪಿಂಜಾರರು ಮುಸ್ಲಿಂ ಜನರ ನಂತರದಲ್ಲಿ ಸಾಲುಗಳಲ್ಲಿ ತಂತಮ್ಮ ದುಪ್ಪಡಿ, ಚಾಪೆ ಹಾಸಿಕೊಂಡು ನಿಲ್ಲುತ್ತಾರೆ. ಅತ್ಯಂತ ಮುಗ್ಧ ಮಕ್ಕಳ ಹಾಗೆ ಪಿಂಜಾರರೆಲ್ಲ ಅತ್ಯಂತ ಆಸಕ್ತಿ, ಜವಾಬ್ದಾರಿಯಿಂದ ಮುಸ್ಲಿಮರ ಅನುಕರಣೆ ಮಾಡತೊಡಗುತ್ತಾರೆ. ನಮಾಜು ಮುಗಿದ ನಂತರ ಅವರವರದ ದುಪ್ಪಡಿಗಳನ್ನು ಮಡಿಸಿಕೊಂಡು ಮನೆಯ ಕಡೆ ಹೊರಡುತ್ತಾರೆ. ದಾರಿಯಲ್ಲಿ ಬರುವಾಗ ಅವರವರ ಸಂಬಂಧಿಕರು, ಮಕ್ಕಳು ಮರಿಗಳಿಗೆಲ್ಲ ಪ್ರೀತಿಯಿಂದ ತಿಳಿದಷ್ಟು ಹಣ ಕೊಡುವ ಸಂಪ್ರದಾಯವಿದೆ. ಮಾವನಾದವನು ಅಳಿಯ, ಸೊಸೆಯರಿಗಂತೂ ಕೊಟ್ಟೇ ಕೊಡುತ್ತಾನೆ. ಅವರೂ ಹಕ್ಕೆನ್ನುವ ರೀತಿಯಲ್ಲಿ ಅಧಿಕರಯುತವಾಗಿ ಕೇಳಿ ಪಡೆಯುತ್ತಾರೆ. ಮೆನೆಗೆ ಬಂದ ತಕ್ಷಣ ಕೈಕಾಲು ಮುಖ ತೊಳೆದು ಶಾವಿಗೆ ಹುಗ್ಗಿ ಉಣ್ಣುವವರು ಉಣ್ಣುತ್ತಾರೆ. ನಿತ್ಯದ ಹೊಲಮನೆ ಕೆಲಸಗಳಲ್ಲಿ ತೊಡಗುತ್ತಾರೆ. ಪಿಂಜಾರರ ವಿಶೇಷ ಖಯಾಲಿಯಾದ ಹೆಡ್ ಆಡಲೂ ಕೆಲವರು ಹೋಗುತ್ತಾರೆ. ಕುರಿ, ಮೇಕೆ, ಕೋಳಿ ಕುಯ್ಯುವುದು, ಕುರಿ, ಮೇಕೆ ಕೊಯ್ದವರಿಂದ ಸಾಲ ಹೇಳಿ ಮಾಂಸ ತರುವುದು ನಡೆಯುತ್ತದೆ. ಮಾಂಸ ಮತ್ತು ಅಡಿಗೆಗೆ ಬೇಕಾದ ಕೊಬರಿ, ಏಲಕ್ಕಿ, ಲವಂಗ, ಕಸಕಸೆ ಇತ್ಯಾದಿ ತಂದುಕೊಟ್ಟರೆ ಗಂಡಸರ ಕೆಲಸ ಮುಗಿಯಿತು. ಹೆಣ್ಣುಮಕ್ಕಳು ಅಡಿಗೆ ಮಾಡುವುದರಲ್ಲಿ ನಿರತರಾಗುತ್ತಾರೆ. ಸಂಜೆ ಅಡಿಗೆಯಾಗುತ್ತಿದ್ದಂತೆ ಮುಲ್ಲಾನನ್ನು ಹುಡುಹುಡುಕಿ ಆತ ಯಾರ ಮನೆಯಲ್ಲಿ ’ಓದಿಕೆ’ ಮಾಡುತ್ತಿದ್ದರೂ ಮುಗಿಯುವವರೆಗೆ ಕಾದಿದ್ದು ಕರೆದುಕೊಂಡು ಬರುತ್ತಾರೆ. ಮುಲ್ಲಾ ಮುಸ್ಲಿಮರ ಮನೆಗೆ ಈ ಕಾರಣಕ್ಕಾಗಿ ಹೋಗುವ ಅಗತ್ಯವಿರುವುದಿಲ್ಲ. ಯಾಕೆಂದರೆ ಮುಲ್ಲಾ ಮಾಡುವ ಓದಿಕೆ ಅವರಿಗೂ ಬರುತ್ತದೆ. ಆದರೆ ಪಿಂಜಾರರಿಗೆ ಮುಲ್ಲಾ ಅನಿವಾರ್ಯ, ’ಓದಿಕೆ’ ಮುಗಿಯದೆ ಹಬ್ಬ ಮುಂತಾದ ವಿಶೇಷ ದಿನಗಳಲ್ಲಿ ಉಣ್ಣುವುದಿಲ್ಲವಾದ್ದರಿಂದ ಆತನನ್ನು ಕಾಡಿ ಬೇಡಿ ಕರೆದುಕೊಂಡು ಬರುತ್ತಾರೆ. ಮುಲ್ಲಾ ಯಾರ ಮನೆಯನ್ನೂ ಬಿಡದೆ ಎಲ್ಲರ ಮನೆಯ ಓದಿಕೆಯನ್ನು ಮುಗಿಸಿಕೊಡುತ್ತಾನೆ. ಒಂದು ವ್ಯತ್ಯಾಸವೆಂದರೆ ಪಿಂಜಾರರಲ್ಲಿ ಅಷ್ಟಿಷ್ಟು ಶ್ರೀಮಂತರಾಗಿದ್ದು ಇಡೀ ಪಿಂಜಾರರನ್ನು ಅಧೀನದಲ್ಲಿಟ್ಟುಕೊಂಡಿರುವುದಾಗಿ ಭ್ರಮಿಸಿರುವವರ ಮನೆಗೆ ಮುಲ್ಲಾ ಅವರು ಹೇಳಿ ಕಳಿಸದಿದ್ದರೂ ಎಲ್ಲರಿಗಿಂತ ಮೊದಲು ಅಲ್ಲಿಗೆ ಹೋಗಿ ಓದಿಕೆ ನಡೆಸುತ್ತಾನೆ. ಪಿಂಜಾರರಲ್ಲಿ ವಿಶೇಷವೆಂದರೆ ಮುಲ್ಲಾ ಓದಿಕೆಗೆ ಬಂದನೆಂದರೆ ಆತನಿಗೆ ಕೈಕಾಲು ತೊಳೆಯಲು ನೀರು ಕೊಡುತ್ತಾರೆ. ಮನೆಯ ಒಳಗಡೆ ಮೂಲೆಯೊಂದರಲ್ಲಿ ಕೆಮ್ಮಣ್ಣು ಬಳಿದು ದಸ್ರಖಾನಿ ಹಾಸಿ ಗಂಗಾಳದಲ್ಲಿ (ಮೊದಲು ಮಣ್ಣಿನ ಚಪ್ಪುಗಳಲ್ಲಿ ಇಡುತ್ತಿದ್ದರಂತೆ) ಅನ್ನ ಇಟ್ಟು ಅನ್ನದ ಮೇಲೆ ಮಾಂಸದ ಚೂರುಗಳಿರುವ ಹಾಗೆ ಸಾರು ಬಿಟ್ಟು ಒಂದು ಕಡೆಗೆ ನಾಕೈದು ಊದಿನ ಕಡ್ಡಿಗಳನ್ನು ಹಚ್ಚಿ ಸಿಕ್ಕಿರುತ್ತಾರೆ. ಪಕ್ಕದಲ್ಲಿ ಕುಡಿಕೆಯಲ್ಲಿ ಬೆಂಕಿಕೆಂಡ ಹಾಕಿ ಅದರ ಕೆಳಗೆ ಕಾಗದದಲ್ಲಿ ಲೋಬಾನದ ಪುಡಿ ಇಟ್ಟಿರುತ್ತಾರೆ. ಮುಲ್ಲಾ ಸೀದಾ ಅಲ್ಲಿಗೆ ಬಂದು ಓದಿಕೆ ಮುಗಿಸಿ ಲೋಬಾನ ಹಾಕಿ ಮುಂದಿನ ಮನೆಗೆ ಹೊರಡುತ್ತಾನೆ. ಮುಲ್ಲಾನನ್ನು ಅತ್ಯಂತ ಪ್ರೀತಿಯಿಂದ ಉಂಡುಹೋಗಲು ಹೇಳುತ್ತಾರೆ. ಆದರೆ ಇನ್ನೂ ಅನೇಕ ಮನೆಗಳ ಓದಿಕೆ ಮುಗಿಸಬೇಕಾಗಿರುವುದರಿಂದ, ಆತ ಸೌಜನ್ಯದಿಂದಲೇ ನಿರಾಕರಿಸಿ ಹೋಗುತ್ತಾನೆ. ಓದಿಕೆ ಮುಗಿದದ್ದೆ ತಡ ಪಿಂಜಾರರು ಒಬ್ಬೊಬ್ಬರಾಗಿ ಲೋಬಾನ ಹಾಕಿ ಕುಕ್ಕುರುಗಾಲಲ್ಲಿ ಕೂತು ಮೊಣಕಾಲು ಮಂಡಿಯೂರಿ ಬಗ್ಗಿ ಎರಡೂ ಕೆಗಳನ್ನು ’ಎಡೆ’ಯ ಹತ್ತಿರದ ನೆಲಕ್ಕೆ ಮುಟ್ಟಿಸಿ ಮತ್ತೆ ಹಣೆಗೆ ಮುಟ್ಟಿಸಿಕೊಳ್ಳುತ್ತಾರೆ. ಹೀಗೆ ಪ್ರತಿಯೊಬ್ಬರೂ ನೆಲಕ್ಕೆ ಹಣೆ ಮುಟ್ಟಿಸಿ ಲೋಬಾನ ಹಾಕಿದ ನಂತರ ಊಟಕ್ಕೆ ಕುಳಿತುಕೊಳ್ಳುತ್ತಾರೆ. ಹೆಣ್ಣು ಮಕ್ಕಳು ಮೊದಲು ಗಂಡಸರಿಗೆ ಬಡಿಸಿ ನಂತರ ಅವರು ಉಣ್ಣುತ್ತಾರೆ. ಇಂತಹ ವಿಶೇಷ ದಿನಗಳಲ್ಲಿ ಎಲೆ ಅಡಿಕೆ ಹಾಕುವುದು ಪಿಂಜಾರರಲ್ಲಿದೆ. ಆದರೆ ಬಳ್ಳಾರಿ, ರಾಯಚೂರು, ಧಾರವಾಡದ ಪಿಂಜಾರರಿಗೆ ಎಲೆ ಅಡಿಕೆ ತಂಬಾಕು ನಿತ್ಯದ ಚಟವೂ ಆಗಿದೆ.

ರಂಜಾನ್‌ನ ಈ ಆಚರಣೆಯಲ್ಲಿ ಪಿಂಜಾರರು ನಡೆದುಕೊಳ್ಳುವ ರೀತಿ ಮತ್ತು ಬಕ್ರೀದ್ ಹಬ್ಬದ ಆಚರಣೆಯ ರೀತಿಗೂ ಮೂಲಭೂತವಾಗಿ ವ್ಯತ್ಯಾಸವಿಲ್ಲ. ರಂಜಾನ್‌ ಸಂದರ್ಭದ ಹಾಗೆ ಉಪವಾಸಾಚರಣೆಯಿಲ್ಲ ಅನ್ನುವುದನ್ನು ಬಿಟ್ಟರೆ ಹಬ್ಬದ ದಿನ ಸಾಮೂಹಿಕ ನಾಮಜ, ಅಡಿಗೆ, ಆಟ ಇತ್ಯಾದಿಯೆಲ್ಲ ಮೇಲಿನ ರೀತಿಯದೆ, ಆಗಿರುವುದರಿಂದ ಬಕ್ರೀದ್‌ನ್ನು ಇಲ್ಲಿ ವಿಶೇಷವಾಗಿ ವಿವರಿಸುವ ಅಗತ್ಯವಿಲ್ಲ ಎನಿಸುತ್ತದೆ. ಬಕ್ರೀದ್‌ನ್ಲಿ ಅಷ್ಟಿಷ್ಟು ಉಳ್ಳವರು ಖುರ್ಬಾನಿ ಮಾಡುವ ರೂಢಿಯಿದೆ. ಸಾಮೂಹಿಕ ನಮಜಿನಿಂದ ಬಂದ ತಕ್ಷಣ ಹಬ್ಬಕ್ಕಾಗಿ ತಂದ ಕುರಿಯನ್ನು ಕೊಯ್ದು ತಮ್ಮ ಆಪ್ತರಾದವರಿಗೆ ಮೂರು ನಾಲ್ಕು ಮಾಂಸದ ತುಂಡುಗಳನ್ನು ಹಂಚುವುದಿದೆ. ಪಿಂಜಾರರೂ ಕೂಡ ಖುರ್ಬಾನಿಯನ್ನು ಮಾಡುವುದು ಅಲ್ಲಲ್ಲಿ ಕಂಡುಬರುತ್ತದೆ. ಪಿಂಜಾರರಿಗೆ ರಂಜಾನ್, ಬಕ್ರೀದ್ ಮುಂತಾದವು ನಮ್ಮ ಹಬ್ಬಗಳು, ನಾವು ಆಚರಸಬೇಕು ಎನ್ನುವುದಷ್ಟಏ ಹೊರತು ಆ ಮೂಲಕ ನಂಬಿಕೆ ಅಥವಾ ಹಿನ್ನೆಲೆಯ ಜ್ಞಾನ ಇಲ್ಲದಿರುವುದರಿಂದಲೇ ಅವರು ಈ ಹಬ್ಬಗಳಲ್ಲಿ ಆಚರಿಸುವ ರೀತಿ ಮುಖ್ಯವಾಗಿ ತಾಂತ್ರಿಕವಾಗಿ ನಾವು ಹಾಗೆ ನಡೆದುಕೊಂಡಿದ್ದೇವೆನ್ನುವುದನ್ನು ಮುಸ್ಲಿಮರಿಗೆ ತೋರಿಸಿ ಒಪ್ಪಿಕೊಳ್ಳುವ ರೀತಿಯೇ ಆಗಿರುವಂತಿದೆ. ಇದರ ಹಿಂದಿರುವ ಭಯವನ್ನು ಗಮನಿಸಬಹುದು.

ಪಿಂಜಾರರ ಈ ಬಗೆಯ ಜೀವನ ವಿಧಾನವನ್ನು ತಿಳಿಯುವ ಸಂದರ್ಭದಲ್ಲಿ ಅತ್ಯಂತ ಕುತೂಹಲಕಾರಿಯಾದ ಸಂಗತಿಯೊಂದನ್ನು ಗುರುತಿಸಬಹುದಾಗಿದೆ. ಪಿಂಜಾರರ ಜನಾಂಗ ಈ ಎರಡು ಹಬ್ಬಗಳಲ್ಲಿ ಮಾತ್ರ ನಮಾಜಿನ ಆಸಕ್ತಿಯನ್ನು ತೋರಿಸುತ್ತಾರೆ. ಹಾಗೆ ಸಾಮೂಹಿಕ ನಮಾಜಿನಲ್ಲಿ ತೊಡಗಿದಾಗ ಪಿಂಜಾರ ತನ್ನ ನಿತ್ಯದ ಅವಮಾನವನ್ನು ಅನುಭವಿಸುವುದು ಕಡಿಮೆ. ಆ ಸಂದರ್ಭದಲ್ಲಿ ಮುಸ್ಲಿಮರು ಇವರಿಗೆ ಬಯ್ಯುವುದಿಲ್ಲ. ಆದರೆ ಪ್ರೀತಿಯಿಂದಲೂ ನೋಡಿಕೊಳ್ಳುತ್ತಾರೆಂದಲ್ಲ. ಅವರ ಪಾಡಿಗೆ ಅವರನ್ನು ಬಿಟ್ಟು ತಂತಮ್ಮ ನಮಾಜಿನಲ್ಲಿ ತೊಡಗುತ್ತಾರೆ. ಸಾರ್ವಜನಿಕವಾಗಿ, ಉಳಿದ ಸಂದರ್ಬದಲ್ಲಿ ಪಿಂಜಾರರು ಅನುಭವಿಸುವುದಿಲ್ಲ ಎನ್ನುವುದಾದರೆ ಮುಸ್ಲಿಮರು ಪಿಂಜಾರರಿಂದ ಏನನ್ನು ನಿರೀಕ್ಷಿಸುತ್ತಾರೆನ್ನುವುದು ಸ್ಪಷ್ಟವಾಗುತ್ತದೆ. ಬರೀ ಪಿಂಜಾರರೇ ಇರುವ ಊರುಗಳಲ್ಲಿ ಈ ತೊಂದರೆಯಿರುವುದಿಲ್ಲ. ಆದರೆ ಒಂದು ಊರಿನಲ್ಲಿ ಒಂದೆರಡು ಮುಸ್ಲಿಮರ ಮನೆಗಳಿದ್ದರೆ ಸಾಕು ಮಾನಸಿಕ ಹೊಯ್ದಾಟ ಶುರುವಾಗುತ್ತದೆ. ಅನೇಕ ಊರುಗಳಲ್ಲಿ ಮುಸ್ಲಿಮರೇ ಪಿಂಜಾರರಿಗೆ ಹೊಂದಿಕೊಂಡು ಸಾಂಪ್ರದಾಯಿಕ ಉಗ್ರನಿಷ್ಠೆಯಿಂದ ಹೊರಬಂದ ಉದಾಹರಣೆಗಳಿವೆ. ಇದು ಅನೇಕ ಪಿಂಜಾರರು ’ಮುಸ್ಲಿಮ’ರಾಗುವ ಮೂಲಕ ತಮ್ಮ ಸಮಾಜಿಕ ಭದ್ರತೆಯನ್ನು ಖಚಿತಪಡಿಸಿ – ಕೊಂಡ ಹಾಗೆ ಅಷ್ಟೆ. ಆದರೆ ಇಸ್ಲಾಂ ಬಗ್ಗೆ ಪಿಂಜಾರರಿಗಿರುವ ಅಜ್ಞಾನ, ಮುಸ್ಲಿಮರ ಬಗ್ಗೆ ಇರುವ ಭಯ ಮತ್ತು ಸಿಟ್ಟು ಒಟ್ಟಿಗೆ ಸೇರಿ ಪಿಂಜಾರರು ತಮ್ಮ ಮೂಲಾಚರಣೆಗಳನ್ನೇ ಸಹಜವಾಗಿ ಮುಂದುವರಿಸಿಕೊಂಡು ಬರಲು ಕಾರಣವಾಗಿದೆ. ಆದ್ದರಿಂದಲೇ ಪಿಂಜಾರರಿಗೆ ಇವತ್ತಿಗೂ ಯುಗಾದಿಯನ್ನು ಅಚರಿಸುವಾಗಿನ ತಿಳುವಳಿಕೆ ಮತ್ತು ಸಂಭ್ರಮ ರಂಜಾನ್ ಮತ್ತು ಬಕ್ರೀದ್ ಆಚರಣೆಯ ಸಂದರ್ಭದಲ್ಲಿ ಕಂಡುಬರುವುದಿಲ್ಲ.

ಪಿಂಜಾರರು ತಮ್ಮ ಮೂಲಾಶ್ರಮದ ಹಬ್ಬಗಳನ್ನು ಎಲ್ಲ ಹಿಂದೂ ಶೂದ್ರ ಸಮುದಾಯದವರು ಆಚರಿಸುವ ವಿಧಾನದಲ್ಲೇ ಆಚರಿಸುತ್ತಾರೆ. ಒಂದು ವಿಶೇಷವೆಂದರೆ ಆ ಯಾವುದೇ ಹಬ್ಬಗಳಲ್ಲಿ ಕೋಳಿ, ಕುರಿ ಕೊಯ್ಯುವಾಗ ಮತ್ತು ಅಡಿಗೆ ಎಡೆಯಿಟ್ಟು ಓದಿಕೆ ಮಾಡಿಸುವಾಗ ಮುಲ್ಲಾನನ್ನು ಅಗತ್ಯವಾಗಿ ಕರೆದು ತರುತ್ತಾರೆ.

ಪಿಂಜಾರರು ಮಾರ‍್ನೆಮಿ (ಮಹಾನವಮಿ) ಹಬ್ಬ ಇನ್ನೇನು ಬಂತು ಅನ್ನುವಾಗ, (ಅಮಾವಾಸ್ಯೆಯಾದ ಹನ್ನೊಂದು ದಿನದಲ್ಲಿ ಹಬ್ಬ ಎನ್ನುತ್ತಾರೆ) ಮನೆಗೆ ಸುಣ್ಣ ಬಳಿದು ಬಾಗಿಲಿಗೆ ಕೆಮ್ಮಣ್ಣು ಬಳಿದು ಶುದ್ಧ ಮಾಡುತ್ತಾರೆ. ಹಬ್ಬದ ದಿನ ಹುಗ್ಗಿ, ಅನ್ನ, ಸಾರು ಮಾಡಿಕೊಂಡು ಊರಿನ ಹನುಮಂತ ದೇವರ ಗುಡಿ ಅಥವಾ ಈಶ್ವರ ಗುಡಿಗೆ ಹಣ್ಣು ಕಾಯಿ ಮಾಡಿಸಿ ಅಡ್ಡಬಿದ್ದು ಬರುತ್ತಾರೆ. ನಂತರ ಹೊಲಕ್ಕೆ ಹೋಗಿ ಇದ್ದ (ಹತ್ತಿ ಅಥವಾ ಜೋಳ) ಬೆಳೆಯ ತುಂಬಾ ಅನ್ನ, ಮಜ್ಜಿಗೆಯನ್ನು ಕಲಸಿಕೊಂಡು ಚರಗ ಉಗ್ಗುತ್ತಾರೆ. ಒಂದು ಕಲ್ಲಿಗೆ ಸುಣ್ಣ ಹಚ್ಚಿ ಅದನ್ನು ಒಂದು ಗಿಡದ ಬುಡದಲ್ಲಿಟ್ಟು ಎಲೆ ಅಡಿಕೆ, ಅರಿಶಿಣ ಕೊಂಬು, ಅಕ್ಕಿ, ದಾರ ಇಟ್ಟು ಇಡೀ ಸಂಸಾರದೊಂದಿಗೆ ಹೊಲದಲ್ಲಿ ಊಟ ಮಾಡಿ ಬೈಗಾಗುವವರೆಗಿದ್ದು ಮನೆಗೆ ಬರುತ್ತಾರೆ. ಮರುದಿನ ಮಾಂಸದ ಸಾರು ಮಾಡಿಕೊಂಡು ಉಣ್ಣುತ್ತಾರೆ.

ದೀಪಾವಳಿಯ ಸಂದರ್ಭದಲ್ಲಿ ಎಂದಿನಂತೆ ಮನೆಬಳಿದು ಮಕ್ಕಳು ಮರಿಗಳಿಗೆಲ್ಲಾ ಹೊಸಬಟ್ಟೆ ತಂದು ಮೈತೊಳೆದು ಉಡಿಸುತ್ತಾರೆ. ಹಬ್ಬದ ದಿನ ಬೇಳೆ ಹಾಕಿ ಹೋಳಿಗೆ ಮಾಡುತ್ತಾರೆ. ಹೋಳಿಗೆಯ ಜೊತೆ ಅನ್ನ, ಸಾರು ಮಾಡಿ ಮನೆಯ ಒಂದು ಮೂಲೆಯಲ್ಲಿ ಕೆಮ್ಮಣ್ಣು ಬಳಿದು ಬಾಳೆ ಎಲೆ ಹಾಸಿ ಕುಂಕುಮ, ಕರ್ಪೂರ, ತೆಂಗಿನಕಾಯಿ, ಬಾಳೆಹಣ್ಣು, ಎಲೆ ಅಡಿಕೆ, ಗಂಧ, ಊದಿನಕಡ್ಡಿ ಎಲ್ಲ ಇಟ್ಟು ಎಡೆಗೆ ಸಿದ್ಧಮಾಡುತ್ತಾರೆ. ಅಡಿಗೆ ಆರಂಭವಾದಾಗಿ ನಿಂದಲೂ ಎಲ್ಲ ಶಾಸ್ತ್ರ ಮುಗಿಯುವರೆಗೂ ಯಾರೂ ಎಂಜಲು ಮಾಡುವಂತಿಲ್ಲ. ಎಡೆಗೆ ಸಿದ್ಧತೆಯಾದ ನಂತರ ಎಲ್ಲಮ್ಮನನ್ನು ಕರೆದುಕೊಂಡು ಬರುತ್ತಾರೆ. ಸಾಮಾನ್ಯವಾಗಿ ಊರಿಗೊಬ್ಬರಂತೆ ಈ ಎಲ್ಲಮ್ಮನನ್ನು ಹೊತ್ತುಕೊಂಡು ಬರುವವರು ಇರುತ್ತಾರೆ. ಹಾಗೆ ಹೊತ್ತು ತರುವವರು ತಳವಾರರು, ಕುರುಬರು, ಉಪ್ಪಾರರು ಅಥವಾ ಮರಾಠಿಗರು – ಈ ಯಾವುದೇ ಜನಾಂಗಕ್ಕೆ ಸೇರಿದ ಸ್ತ್ರೀಯಾಗಿರುತ್ತಾಳೆ. ಈಕೆ ಒಂದು ಪುಟ್ಟಿ ಅಥವಾ ಗೂಡೆಯಂತಹದರಲ್ಲಿ (ಕಾಗದ ನೆನೆಸಿಟ್ಟು ಅರೆದು ನಂತರ ಪುಟ್ಟಿಗೆ ಬಳಿದು ಒಣಗಿಸಿರುತ್ತಾರೆ) ಎಲ್ಲಮ್ಮನ ಫೋಟೋ, ಸಣ್ಣಕತ್ತಿ, ಬಳೆ ಕುಂಕುಮ ಇತ್ಯಾದಿ ಇಟ್ಟುಕೊಂಡು ಹೊರಡುತ್ತಾಳೆ. ಈಕೆಯನ್ನು ಕರೆದೊಯ್ಯುವವರು ಮುಂದೆ ಮುಂದೆ ನೀರು ಚಿಮುಕಿಸುತ್ತಾ ಬಂದಂತೆ ಎಲ್ಲಮ್ಮ ಆ ಪುಟ್ಟಿಯನ್ನು ಹೊತ್ತು ನೀರು ಚಿಮುಕಿಸಿದ ದಾರಿಯಲ್ಲಿ ನಡೆದುಬರುತ್ತಾಳೆ. ಮನೆಯೊಳಗೆ ಬಂದ ತಕ್ಷಣ ಎಲ್ಲಮ್ಮನ ಪುಟ್ಟಿಯನ್ನು ಇಳಿಸಿ ಕೆಮ್ಮಣ್ಣು ಬಳಿದ ಜಾಗದಲ್ಲಿ ಅಕ್ಕಿ ಹಾಸಿ ಅದರ ಮೇಲಿಡುತ್ತಾರೆ. ನಂತರ ಎಡೆಗಾಗಿ ಜೋಡಿಸಿದ್ದ ಒಂಬತ್ತು ಹೋಳಿಗೆ, ಎರಡು ಬಾಳೆಹಣ್ಣು, ಎರಡು ತೆಂಗಿನಕಾಯಿ, ಐದು ವೀಳೆದೆಳೆ ಮುಂತಾದವನ್ನು ಎಲ್ಲಮ್ಮನ ಮುಂದಿಡುತ್ತಾರೆ. ಅವಳು ತುಂಬಿದ ಕೊಡದಲ್ಲಿನ ನೀರನ್ನು ಬಂದು ಚಂಬಿಗೆ ತುಂಬಿಕೊಂಡು ಕೆಮ್ಮಣ್ಣಿನಿಂದ ಬಳಿದ ಜಾಗದಲ್ಲಿ ಅಕ್ಕಿ ಹರಡಿ ಅದರ ಮೇಲೆ ಚಂಬನ್ನು ಇಡುತ್ತಾಳೆ. ಸ್ವಲ್ಪ ಬೇವಿನಸೊಪ್ಪು, ಐದು ವೀಳೆಯದೆಲೆ=ಯನ್ನು ಚಂಬಿನೊಳಗಿಟ್ಟು ಎಡೆ ಮಾಡುತ್ತಾಳೆ. ಮಾಡುವಾಗ ’ಎಲ್ಲಮ್ಮ ಉಧೋ…’ ಇತ್ಯಾದಿ-ಯಾಗಿ ಒಂದೆರಡು ನುಡಿಪದ ಹಾಡುತ್ತಾಳೆ. ನಂತರ ಮನೆಯವರು ಕಾಯಿ ಒಡೆಯುತ್ತಾರೆ. ಆಮೇಲೆ ಎಲ್ಲಮ್ಮನ ಪಟ್ಟಳಿಗೆ (ಪುಟ್ಟಿ) ಹೋಳಿಗೆ, ಅಕ್ಕಿ ತಿಳಿದಷ್ಟು ದುಡ್ಡು, ಒಡೆದ ಕಾಯಿಯ ಒಂದು ಭಾಗವನ್ನು ಹಾಕಿ ಮೊದಲಿನಂತೆ  ನೀರು ಚಿಮುಕಿಸುತ್ತಾ ಕಳಿಸಿ ಬರುತ್ತಾರೆ.

ಇತ್ತ ಮನೆಯಲ್ಲಿ ಎಡೆಗೆ ಕೈಮುಗಿದು ಅಡ್ಡಬಿದ್ದು ಊಟಕ್ಕೆ ಕುಳಿತುಕೊಳ್ಳುತ್ತಾರೆ. ದೀಪಾವಳಿಯ ದಿನ ಬೆಳಿಗ್ಗೆ ಸಾಮಾನ್ಯ ಊಟ ಉಂಡ ನಂತರ ಇಲ್ಲಿಯವರೆಗೆ ಯಾವ ಕಾರಣಕ್ಕೂ ಪಿಂಜಾರರು ಮಾಡಿದ ಅಡಿಗೆಯನ್ನು ಎಂಜಲು ಮಾಡಲು ಬಿಡುವುದಿಲ್ಲ. ಊಟದ ನಂತರ ಚಂಬನ್ನು (ಬೇವಿನಸೊಪ್ಪು, ಎಲೆಯಿಟ್ಟಿರುವ) ತೆಗೆದುಕೊಂಡು ಹೋಗಿ ಬೇವಿನ ಮರದ ಬುಡಕ್ಕೆ ಚೆಲ್ಲಿ ಬರುತ್ತಾರೆ. ಎಡೆಯಲ್ಲಿ ಇದ್ದಂತಹ ಹೋಳಿಗೆ, ಅನ್ನ ಇತ್ಯದಿ ಅಡಿಗೆಯನ್ನು ಮನೆಯ ಹೆಣ್ಣು ಮಕ್ಕಳೇ ಉಣ್ಣಬೇಕೆಂಬ ನಿಯಮವಿದೆ. ಅಂದರೆ ಆ ಮನೆಯಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಉಣ್ಣಬೇಕೇ ಹೊರತು ಸೊಸೆಯರಾಗಿ ಬಂದವರು ಉಣ್ಣುವಂತಿಲ್ಲ.ಆ ಸೊಸೆಯರ ದೇವರು ಬದಲಿಯಾಗುತ್ತದೆಂಬ ಕಾರಣಕ್ಕೆ ಅಂದು ಸೊಸೆಯರನ್ನು ಅಡಿಗೆ ಮನೆಯೊಳಕ್ಕೆ ಬಿಟ್ಟುಕೊಳ್ಳುವುದಿಲ್ಲ. ಅಡಿಗೆ ಮುಗಿದು ಎಡೆಯಾಗಿ ಊಟ ಮುಗಿದ ನಂತರ ಅವರು ಉಣ್ಣಬೇಕು ಎನ್ನುವುದು ಪಿಂಜಾರರು ಪಾಲಿಸಿಕೊಂಡು ಬಂದ ರೂಢಿ. ಅಷ್ಟಿಷ್ಟು ಶ್ರೀಮಂತರು ಮಾತ್ರ ಪಟಾಕಿ ಹಾರಿಸುತ್ತಾರೆ. ಆರ್ಥಿಕವಾಗಿ ಹಿಂದುಳಿದ ಬಹಳಷ್ಟು ಪಿಂಜಾರರು ಪಟಾಕಿ ಸುಟ್ಟರೆ ಅದು ರೊಕ್ಕ ಸುಟ್ಟಂತೆ ಎನ್ನುತ್ತಾರೆ. ರೊಕ್ಕ ಸುಟ್ಟರೆ ಸದ್ದು ಬರುವುದಿಲ್ಲ, ಅದಕ್ಕೆಂತಲೇ ರೊಕ್ಕ ಕೊಟ್ಟು ಪಟಾಕಿ ತಂದು ಸುಡುತ್ತಾರೆ ಎಂದು ಮಾತನಾಡುತ್ತಾರೆ. ಎಂದಿನಂತೆ ಪಿಂಜಾರರು ಸಿಹಿಯೂಟದ ಮರುದಿನ ಮಾಂಸಾಹಾರ ಬಳಸುತ್ತಾರೆ.

ಪಿಂಜಾರರನೇಕರ ಮನೆದೇವರು ಈ ಎಲ್ಲಮ್ಮ, ಇವತ್ತಿಗೂ ಈ ದೀಪಾವಳಿಯ ಸಂದರ್ಭದಲ್ಲಿ ಈ ದೇವತೆಯ ಪೂಜೆ ಮಾಡದೆ ಪಿಂಜಾರರು ಉಣ್ಣುವುದಿಲ್ಲ. ಎಂದಿನಂತೆ ಇದನ್ನೊಂದು ಸಂಭ್ರಮದ ಹಬ್ಬವಾಗಿಯೂ ಆಚರಿಸುವ ಗ್ರಾಮಾಂತರದ ಪಿಂಜಾರರು ತಮ್ಮ ಸಹಜ ಪರಂಪರೆಯನ್ನು ನಿರ್ಭೀಡೆಯಿಂದ ಮುಂದುವರೆಸಿಕೊಂಡು ಬಂದಿದ್ದಾರೆ. ಕೆಲವು ನಗರಗಳಲ್ಲಿನ ಪಿಂಜಾರರು ಗುಪ್ತವಾಗಿ, ಆಂತರಿಕ ಭಯದಲ್ಲಿ ಈ ದೇವತೆಯ ಪೂಜೆ ಮಾಡುತ್ತಿರುವುದು ತಿಳಿದುಬರುತ್ತದೆ. ಈ ಬಗೆಯ ಭಯಕ್ಕೆ ಹಿಂದೂ – ಮುಸ್ಲಿಮರಿಬ್ಬರೂ ಕಾರಣವಾದಂತಿದೆ. ಯಾಕೆಂದರೆ ಕೋಮು ಗಲಭೆಯ ಸಂದರ್ಭಗಳು ಪಿಂಜಾರರನ್ನು ಈ ಸ್ಥಿತಿಗೆ ತಂದಿವೆ. ಹೆಚ್ಚಾಗಿ ಮುಸ್ಲಿಮರಿಗೇ ಹೆದರುವ ಪಿಂಜಾರರು ಇರುವ ಕಡೆಯೆಲ್ಲ ಎಂದೂ ಕೋಮು ಗಲಭೆಗಳಾಗಿಲ್ಲ. ಇದು ಪಿಂಜಾರರ ಜಾತ್ಯಾತೀತ ಪರಂಪರೆಯ ದ್ಯೋತಕವೂ ಆಗಿದೆ. ಇಂಥ ಹಬ್ಬಗಳಲ್ಲೆಲ್ಲ ಪಿಂಜಾರರು ಹಿಂದುಗಳು ಪರಸ್ಪರ ಬೆರೆತು ಉಣ್ಣುವುದೂ ಇದೆ.

ಯುಗಾದಿಯನ್ನು ಪಿಂಜಾರರು ಬಯಲುಸೀಮೆಯ ಉತ್ಸಾಹ, ಸಂಭ್ರಮಗಳಲ್ಲಿ ಆಚರಿಸುತ್ತಾರೆ. ’ಹೊಸದಿನ’ ಎಂದು ಉಗಾದಿಯ ದಿನದಂದು ರೈತರಾದವರು ಬೇಸಾಯ ಹೂಡಿಕೊಂಡು ಹೊಲಕ್ಕೆ ಹೋಗಿ ಎತ್ತು, ನೊಗ, ಕುಂಟೆ ಅಥವಾ ನೇಗಿಲಿಗೆ ಪೂಜೆ ಮಾಡಿ ಕಾಯಿ ಒಡೆದು ಸ್ವಲ್ಪ ಹೊತ್ತು ಬೇಸಾಯ ಮಾಡುತ್ತಾರೆ. ಇದು ಹೊಸ ವರ್ಷ ಆರು ಕಟ್ಟುವ ರೀತಿ, ಭೂಮಿ ತಾಯಿ ಈ ವರ್ಷ ಒಳ್ಳೆಯ ಫಸಲು ಕೊಡಲಿ ಎಂದು ಹಾರೈಸಿ ಮಾಡುವ ಈ ಪೂಜೆ (ಪಿಂಜಾರರು ಪೂಜೆ ಮಾಡುವುದೆಂದರೆ ಊದಿನಕಡ್ಡಿ ಹಚ್ಚಿ ಬೆಳಗಿ ಒಂದು ಕಡೆ ಸಿಕ್ಕಿಸಿ ಕಾಯಿ ಒಡೆದು ಕಾಯೊಳಗಿನ ನೀರನ್ನು ಚಿಮುಕಿಸುತ್ತಾರೆ) ರೈತರೆಲ್ಲರ ನಂಬಿಕೆಯೇ ಆಗಿದೆ. ಮನೆಯಲ್ಲಿ ಹೆಣ್ಣು ಮಕ್ಕಳು ಮನೆಮಂದಿಗೆಲ್ಲ ಎಣ್ಣೆ ಹಚ್ಚಿ ಮೈ ತೊಳೆಸಿ ಹುರಿಗಡ್ಲೆ (ಬೆಳೆಗಡ್ಲೆ ಎನ್ನುತ್ತಾರೆ, ಪಿಂಜಾರರು) ಬೆಲ್ಲ, ಶುಂಠಿ, ಯಾಲಕ್ಕಿ, ಬೇವಿನಸೊಪ್ಪನ್ನು ಕುಟ್ಟಿ ಕಲಸಿ ಮನೆಯವರಿಗೆ, ಹೊರಗಿನವರಿಗೆ ಹಂಚಿ ತಿನ್ನುತ್ತಾರೆ. ಸಂಜೆಯಲ್ಲಿ ಶ್ಯಾವಿಗೆ ಅಥವಾ ಗೋಧಿ ಹುಗ್ಗಿ ಮಾಡಿ ಎಡೆಯಿಟ್ಟು ಊದಿನಕಡ್ಡಿ ಹಚ್ಚಿಡುತ್ತಾರೆ. ಎಲ್ಲರೂ ಲೋಬಾನ ಹಾಕಿದ ನಂತರ ಊಟ ನಡೆಯುತ್ತದೆ. ಮರುದಿನ ಬಿಡುವು ಎಂದು ಆ ದಿನ ಏನೂ ವಿಶೇಷವಾಗಿ ಮಾಡದೆ ಎಂದಿನಂತಿರುತ್ತಾರೆ. ಮಾರನೆಯ ದಿನ ಹೋಳಿಗೆ  ತಯಾರಿ ಎಂದಿನಂತೆ ಎಡೆ, ಎಡೆಯ ಮುಂದಿಟ್ಟ ಬೇವಿನಸೊಪ್ಪು, ಎಲೆ ತುಂಬಿದ ನೀರಿನ ಚಂಬನ್ನು ಊಟದ ನಂತರ ಬೇವಿನ ಮರದ ಬುಡಕ್ಕೆ ಚೆಲ್ಲಿ ಬರುತ್ತಾರೆ ಅಥವಾ ಚೌಡಮ್ಮನ ಮರಕ್ಕೆ ಎಡೆ ಒಯ್ಯುತ್ತಾರೆ.

ಇದಕ್ಕೆ ಮೊದಲು ಈ ಮೂರನೆಯ ದಿನದ ಸಂಜೆ ಪಿಂಜಾರರ ವಿಶೇಷ ಆಚರಣೆಯೊಂದಿದೆ. ಅವರಿವರೆನ್ನದೆ ಎಲ್ಲರೂ ಊರಿನ ಹೊರಗೆ ಬಯಲಿನನಲ್ಲಿ ಸಂಜೆ ಕಾಣುವ ಬಿದಿಗೆ ಚಂದ್ರನನ್ನು ನೋಡಲು ನೆರೆಯುತ್ತಾರೆ. ಕೆಲವರು ಮನೆಯ ಹತ್ತಿರವೇ ಇರುತ್ತಾರೆ. ಮುಳುಗುವ ಸೂರ‍್ಯನ ಚೆಂಬೆಳಗು ಕಡಿಮೆಯಾಗುತ್ತಿದ್ದಂತೆ ಚಂದ್ರನನ್ನು ಪಡುವಣ ಆಕಾಶದಂಚಿನಲ್ಲಿ ಹುಡುಕಲು ನಾ ಮುಂದೆ ತಾ ಮುಂದೆ ಎಂದು ನೆರೆದು ಚಂದ್ರ ಕಂಡ ತಕ್ಷಣ ಹಿರಿಯರಾದವರಿಗೆ ಬೀಗರಿಗೆ ಕಾಲಿಗೆ ಬೀಳುತ್ತಾರೆ. ಮನೆಯಲ್ಲಿ ಚಂದ್ರ ಕಂಡ ತಕ್ಷಣ ಕಾಯಿ ಒಡೆಯುತ್ತಾರೆ. ಚಂದ್ರನನ್ನು ನೋಡಿದ ಹಿರಿಯರು ಈ ಬಾರಿಯ ಮಳೆ, ದವಸ ಧಾನ್ಯಗಳ ಬೆಲೆಯ ಏರಿಳಿತ ಇತ್ಯಾದಿಯನ್ನು ಕುರಿತು ಹೇಳುತ್ತಾರೆ. ಮಕ್ಕಳು, ದೊಡ್ಡವರು ಎಲ್ಲರೂ ಮನೆಮನೆಗೆ ಹೋಗಿ ಹಿರಿಯರಿಗೆ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಬರುತ್ತಾರೆ. ಇಲ್ಲಿ ಎಲ್ಲ ಜನಾಂಗದವರೂ ಇರುತ್ತಾರೆನ್ನುವುದು ವಿಶೇಷವೇನಲ್ಲ. ಮಾರನೆಯ ದಿನ ಕೋಳಿ ಅಥವಾ ಕುರಿಕೊಯ್ಸಿ ಸಾರು ಮಾಡಿಕೊಂಡು ಉಣ್ಣುತ್ತಾರೆ.

ಶ್ರಾವಣ ಮಾಸದಲ್ಲಿ ಪಿಂಜಾರರ ನಾಗರಪಂಚಮಿ ಹಬ್ಬವನ್ನು ಮಾಡುತ್ತಾರೆ. ಪಿಂಜಾರರು ಎಲ್ಲ ಹಬ್ಬಗಳ ಮೊದಲ ಮನೆ, ನೆಲ ಬಳಿಯುತ್ತಾರೆ. ಸುಣ್ಣದ ಕಲ್ಲುಗಳನ್ನು ಕೊಂಡುಕೊಂಡು ದೊಡ್ಡ ಮಡಕೆಯಲ್ಲಿಟ್ಟು ನೀರು ಹಾಕಿರುತ್ತಾರೆ. ಹಬ್ಬ ಇನ್ನೂ ಎರಡು ಮೂರು ದಿನಗಳಿವೆ ಎನ್ನುವಾಗ ಹಳೆ ಕಂಬಳಿಯ ತುಣುಕೊಂದನ್ನು ತೆಗೆದುಕೊಂಡು ಸುಣ್ಣವನ್ನು ಪಾತ್ರೆಯಲ್ಲಿ ಹಾಕಿಕೊಂಡು ಮನೆಯ ಒಳಹೊರಗೆ ಬಳಿಯುತ್ತಾರೆ. ಮನೆಯ ಬಾಗಿಲು ತೋಳು, ಹೊಸಲಿಗೆ ಕೆಮ್ಮಣ್ಣು ಬಳಿಯುತ್ತಾರೆ. ಆಮೇಲೆ ಸಗಣಿ ನೀರು ಹಾಕಿ ನೆಲ ಸಾರಿಸುತ್ತಾರೆ. ಇದು ಎಲ್ಲ ಹಬ್ಬಗಳು ಬಂದಾಗ ಪಿಂಜಾರರು ಮಾಡಿಕೊಂಡು ಬಂದ ರೂಢಿ. ಶ್ರಾವಣ ಮಾಸದಲ್ಲಿ ಆ ತಿಂಗಳಿನ ಯಾವುದಾದರೊಂದಿನ (ಸಾಮಾನ್ಯವಾಗಿ ಸೋಮವಾರ) ಅವರಿಗೆ ಅನುಕೂಲವಾದ ದಿವಸ ಎಳ್ಳುಂಡೆ, ಹಸಿಹಿಟ್ಟಿನ ತಮಟ, ಹಸಿಹಾಲು, ತುಪ್ಪ, ಜೋಳದಹಳ್ಳು, ಪರಂಗ ಎಲೆ, ಗಂಧ, ಕುಂಕುಮ, ಎರಡು ಕಾಯಿ, ಹತ್ತಿಯ ಅರಳೆಯಲ್ಲಿ ಬತ್ತಿ ಮಾಡಿ ಒಂದು ಪುಟ್ಟಿಯಲ್ಲಿ ಇವೆಲ್ಲವನ್ನು ತುಂಬಿಕೊಂಡು ಹೊಲಕ್ಕೆ ಹೋಗುತ್ತಾರೆ. ಹೊಲದ ತುಂಬ ಅನ್ನ ಮಜ್ಜಿಗೆ ಕಲಿಸಿ ಚರಗ ಹೊಡೆಯುತ್ತಾರೆ. ಮನೆಮಂದಿಯೆಲ್ಲ ಅಂದು ಹೊಲದಲ್ಲಿರುತ್ತಾರೆ. ಹುತ್ತದಲ್ಲಿ ಎಲ್ಲೆಲ್ಲಿ ತೂತುಗಳಿರುತ್ತವೆಯೋ ಅಲ್ಲಿಗೆ ಗಂಧ ಕುಂಕುಮ ಹಚ್ಚಿ ಹತ್ತಿ ಅರಳೆಯಿಟ್ಟು ಪರಂಗಿ ಎಲೆಯಲ್ಲಿ ಉಂಡೆ, ಹೋಳಿಗೆ, ತುಪ್ಪ, ಜೋಳದ ಹಳ್ಳು ಎಲ್ಲವನ್ನು ಎಡೆಯಿಟ್ಟು ಒಬ್ಬೊಬ್ಬರಾಗಿ ಮನೆಯ ಎಲ್ಲರ ಹೆಸರನ್ನು ಹೇಳಿ ಹೇಳಿ ಹುತ್ತಕ್ಕೆ ಹಾಲು ಬಿಡುತ್ತಾರೆ. ನಂತರ ಎರಡು ಕಾಯಿ ಒಡೆದು (ಜೋಡುಕಾಯಿ) ನಾಲ್ಕು ದಿಕ್ಕಿಗೂ ತಿರುತಿರುಗಿ ಕೈಮುಗಿದು ಹುತ್ತಕ್ಕೆ ಅಡ್ಡಬಿದ್ದು ನಮ್ಮ ಮನೆಯ ಯಾರಿಗೂ ತೊಂದರೆ ಕೊಡಬೇಡೆಂದು ನಾಗಪ್ಪನಿಗೆ ಬೇಡಿಕೊಳ್ಳುತ್ತಾರೆ. ಇದಾದ ನಂತರ ಊಟ ಮಾಡಿ ಬೈಗಾಗುವವರೆಗೂ ಮರದ ನೆರಳಲ್ಲಿ ಕುಳಿತಿದ್ದು ಮನೆಗೆ ಬರುತ್ತಾರೆ. ಈ ಸಂದರ್ಭದಲ್ಲಿ ಅಲ್ಲಿಗೆ ಬಂದವರಿಗೆ ಕರೆದು ಊಟ ಕೊಡುತ್ತಾರೆ. ಅವರು ಯಾರಾದರೇನು, ಕರೆದು ಊಟಕೊಟ್ಟು ಕಳಿಸುತ್ತಾರೆ. ಈ ಹಬ್ಬದಲ್ಲಿ ಎಳ್ಳುಂಡೆ, ಕಡ್ಲೆ ಉಂಡೆ ಮಾಡಿಟ್ಟು ತಿಂಗಳುಗಟ್ಟಲೆ ಅದನ್ನು ತಿನ್ನುತ್ತಾರೆ. ಮಕ್ಕಳಿಗೆ ಈ ಹಬ್ಬದಲ್ಲಿ ಕೊಬ್ಬರಿ ಬಟ್ಟಲು ಮಾಡಿಕೊಟ್ಟು ಆಡಿಕೊಳ್ಳಲು ಹೇಳುತ್ತಾರೆ.

ಬಸವನ ಹಬ್ಬದಲ್ಲಿ ಪಿಂಜಾರರು ಎತ್ತುಗಳ ಕೋಡು ಎರೆಸಿ ಮೈ ತೊಳೆದು ಕೋಡುಗಳಿಗೆ ಬಣ್ಣ ಹಚ್ಚುತ್ತಾರೆ. ಕೆಲವರು ಕೋಡಿಗೆ ಅಣಸನ್ನು ಹಾಕಿಸುತ್ತಾರೆ. ಕೊರಳ ತುಂಬ ಗೆಜ್ಜೆ ಕಟ್ಟಿ ಮೈತುಂಬ ಬಣ್ಣದ ಜೋಲು ಹೊದಿಸಿ ಎತ್ತುಗಳ ಮೆರವಣಿಗೆ ಮಾಡುತ್ತಾರೆ. ಈ ಮೆರವಣಿಗೆಗೆ ವಾದ್ಯದವರು (ಸೊನೆಯದವರು) ಇರುತ್ತಾರೆ. ಎತ್ತುಗಳಿಗೆ ಸಂಬಂಧಪಟ್ಟವರು ಜೋಡಿ ಎತ್ತುಗಳನ್ನು ಹಿಡಿದುಕೊಂಡು ಸಾಲಾಗಿ ಮೆಲ್ಲಗೆ ಹೊರಡುತ್ತಾರೆ. ಊರಿನ ಜನ ಈ ಎತ್ತುಗಳ ಮೆರವಣಿಗೆಯಲ್ಲಿ ಯಾರ ಎತ್ತುಗಳು ತಯಾರಿಯಾಗಿವೆ ಎಂದು ಕುತೂಹಲದಿಂದ ನೋಡುತ್ತಾರೆ. ಚೆನ್ನಾಗಿ ಸಾಕಿದವರು ತಮ್ಮ ಎತ್ತುಗಳನ್ನು ಈ ಮೆರವಣಿಗೆಯಲ್ಲಿ ತಂದು ಪ್ರತಿಷ್ಠಿತರಾಗುತ್ತಾರೆ. ಸಂಜೆ ಮೆರವಣಿಗೆಯಾದ ನಂತರ ತೆಂಗಿನಕಾಯಿ, ಬಾಳೆಹಣ್ಣು ಊದಿನಕಡ್ಡಿ ತಂದು ಎತ್ತುಗಳಿಗೆ ಪೂಜೆ ಮಾಡಿ ಕಾಯಿ ಒಡೆದು ಮೈಗೆ, ಕೋಡುಗಳಿಗೆ ಗಂಧ ಹಚ್ಚಿ ಎತ್ತುಗಳ ಮುಂಗಾಲುಗಳನ್ನು ಮುಟ್ಟಿ ನಮಸ್ಕರಿಸುತ್ತಾರೆ. ಬಾಳೆಹಣ್ಣುಗಳನ್ನು ಎತ್ತಿಗೇ ತಿನ್ನಿಸಿ ಮತ್ತೊಮ್ಮೆ ಅಡ್ಡಬಿದ್ದು ಮೈತುರುಸಿಬರುತ್ತಾರೆ. ಈ ಹಬ್ಬದ ದಿನ ಯಾರೂ ಎತ್ತುಗಳನ್ನು ಹೂಡುವುದಿಲ್ಲ. ಈ ಹಬ್ಬವನ್ನೂ ಒಳಗೊಂಡಂತೆ ಪಿಂಜಾರರ ಉಳಿದ ಹಬ್ಬಗಳ ಆಚರಣೆಯಲ್ಲಿ ಕಂಡುಬರುವುದು ಲಿಂಗಾಯ್ತರ ಪ್ರಭಾವ ಎನ್ನುವುದನ್ನು ಸೂಕ್ಷ್ಮವಾಗಿ ಗುರುತಿಸಬಹುದು.

ತೇರು ಹಬ್ಬದಲ್ಲಿ ಲಿಂಗಾಯ್ತರಂತೆ ಕಡುಬು ದೋಸೆ ಮಾಡಿಕೊಂಡು ಉಣ್ಣುತ್ತಾರೆ. ತೇರಿಗೆ ಕಾಯಿ ಒಡೆಸಿಕೊಂಡು ಬರುತ್ತಾರೆ. ತೇರು ಹಬ್ಬದಲ್ಲಿ ಬಯಲು ಸೀಮೆಯ ಸಾಮಾನ್ಯ ರೂಢಿಯಂತೆ ಮುಳ್ಳು ತುಳಿಯುವ ಆಚರಣೆಯಲ್ಲಿ ಪಿಂಜಾರರೂ ಭಾಗವಹಿಸುತ್ತಾರೆ.

ಪಿಂಜಾರರ ಮನೆದೇವತೆಯೇ ಆದ ಎಲ್ಲಮ್ಮನ ಹಬ್ಬವನ್ನು ಪಿಂಜಾರರು ಬಿಡದೆ ಮಾಡುತ್ತಾರೆ. ಅವತ್ತು ಎರಡು ಕುಂಬಗಳಲ್ಲಿ ಹೆಂಡ ತರುತ್ತಾರೆ. ಅವು ಹೊಸದಾಗಿ ಕೊಂಡ ಕುಂಬಗಳು. ಹೆಂಡ ತಮ್ಮೂರಲ್ಲಿ ಸಿಗದಿದ್ದರೆ ಬೇರೆ ಊರಿನಿಂದಾದರೂ ತರುತ್ತಾರೆ. ನವಧಾನ್ಯಗಳ ಮೇಲೆ ಈ ಕುಂಬಗಳನ್ನಿಟ್ಟು ಬೇವಿನಸೊಪ್ಪು ಮುಡಿಸಿ ಎಲ್ಲಮ್ಮನನ್ನು ಕರೆತಂದು ಪೂಜೆ ಮಾಡಿಸುತ್ತಾರೆ. ಈ ಪೂಜೆ ಮಾಡುವವರು ಸಾಮಾನ್ಯವಾಗಿ ತಳವಾರರು ಇಲ್ಲವೇ ಆರೇರು ಎಂದು ಕರೆಯಲಾಗುವ ಕರ್ನಾಟಕದ ಮರಾಠಿ ಜನಾಂಗದವರು. ಕೆಲವು ಕಡೆ ಈಡಿಗರೂ ಇರುತ್ತಾರೆ. ಅವರಿಂದ ಪೂಜೆ ಮಾಡಿಸಿದ ನಂತರ ಎಲ್ಲರೂ ಊಟ ಮಾಡುತ್ತಾರೆ. ಬಹುಶಃ ಈ ಹಬ್ಬದ ಹಿನ್ನೆಲೆಯೇ ಇರಬೇಕು ಇವತ್ತು ಈ ಹಬ್ಬವನ್ನು ಅನೇಕ ಕಾರಣದಿಂದ ಮಾಡಲಾಗದ ಜನರು ಹೆಂಡಕುಡಿಯುತ್ತಾರೆ. ಪಿಂಜಾರರಲ್ಲಿ ಹೆಂಡದ ಬಳಕೆ ಸಾಮಾನ್ಯವಾಗಿ ಈಗಲೂ ಕಂಡುಬರುತ್ತದೆ. ಕೆಲವು ಮನೆಯ ಹೆಂಗಸರು ಮನೆಗೇ ಹೆಂಡ ತರಿಸಿಕೊಂಡು ಕುಡಿಯುತ್ತಾರೆ. ಈಗೀಗ ಕೆಲವರಿಗೆ ದೇವರ ನಂಬಿಕೆಯ ಹಿನ್ನೆಲೆ ಹೊರಟುಹೋಗಿ ಅದೊಂದು ಚಟವಾಗಿ ಕಂಡುಬರುತ್ತದೆ.

ಧಾರವಾಡ ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ಮತ್ತು ದಾವಣಗೆರೆಯ ಸುತ್ತಲಿನ ಊರುಗಳಲ್ಲಿ ಮಹೇಶ್ವರನ ಹಬ್ಬ ಮಾಡುವುದು ಪಿಂಜಾರರಲ್ಲಿ ಕಂಡುಬರುತ್ತದೆ. ಈ ಹಬ್ಬದ ಸಲುವಾಗಿ ಮಹೇಶ್ವರನ ಜಾತ್ರೆಯೂ ನಡೆಯುತ್ತದೆ. ಪಿಂಜಾರರು ನೇರವಾಗಿ ಈ ಹಬ್ಬದ ಆಚರಣೆಯನ್ನು ಮನೆಯಲ್ಲಿ ತರುವುದಿಲ್ಲವಾದರೂ ಜಾತ್ರೆಯಲ್ಲಿ ದೇವರ ಉತ್ಸವದಲ್ಲಿ ಸಡಗರದಿಂದ ಪಾಲ್ಗೊಳ್ಳುತ್ತಾರೆ. ಈಶ್ವರನಿಗೆ ಕೈಮುಗಿದು ಕಾಯಿ ಒಡೆಸುತ್ತಾರೆ. ಈ ಊರುಗಳಲ್ಲಿ ಈ ಹಬ್ಬಕ್ಕಾಗಿ ತಮ್ಮ ಸಂಬಂಧಿಕರನ್ನು ಬೀಗರು, ಬಿಜ್ಜರನ್ನು ಕರೆ ಕಳುಹಿಸುತ್ತಾರೆ. ಹಿಂದೆ ಗಮನಿಸಿ – ದಂತೆ ಲಿಂಗಾಯ್ತರ ದೇವರುಗಳಾದ ಬಸವ, ಈಶ್ವರ, ಹನುಮಂತ ಮುಂತಾದವುಗಳನ್ನು ಕಂಡರೆ ಪಿಂಜಾರರಿಗೆ ವಿಶೇಷ ಆಸಕ್ತಿ.

ನಾಯಕನಹಟ್ಟಿ ಜಾತ್ರೆ, ದೇವರಗುಡ್ಡದ ಜಾತ್ರೆ, ಎಲ್ಲಮ್ಮನ ಜಾತ್ರೆ, ದಾದಾಪಾಡು, ಹೊನ್ನೂರಲಿ, ಬಾತಿ ಉರುಸು ಮುಂತಾದ ಕಡೆ ಪಿಂಜಾರರು ತಮ್ಮ ಅನೇಕ ದಿನಗಳ ಹರಕೆ ಪೂರೈಸಲು ಹೋಗುತ್ತಾರೆ. ಹಾಗೆಯೇ ಧರ್ಮಸ್ಥಳ, ಹಣಿಗೆರೆಕಟ್ಟೆ ಮುಂತಾದ ಕ್ಷೇತ್ರಗಳಿಗೂ ಹೋಗಿ ಬರುತ್ತಾರೆ. ಇಂಥ ಯಾವ ಕಡೆ ಹೋದರೂ ಪಿಂಜಾರರ ಆಚರಣೆ ಮತ್ತು ಅನುಭವ ಒಂದೇ ತೆರನಾದುದು; ಉರುಸುಗಳಲ್ಲಿ ಮುಲ್ಲಾನ ಹತ್ತಿರ ಸಕ್ಕರೆ ’ಓದಿಸಿ’ಕಂಡು ಬರುವುದು, ಜಾತ್ರೆಗಳಲ್ಲಿ ದೇವಸ್ಥಾನಗಳಿಗೆ ಹೋಗಿ ಹಣ್ಣುಕಾಯಿ ಮಾಡಿಸಿಕೊಳ್ಳುವುದು, ಬೆಂಡು ಬತ್ತಾಸು ಕೊಂಡುಕೊಂಡು ಹರಕೆ ಪೂರೈಸಿ ಬರುವುದು. ಕೆಲವು ಕೋಳಿ, ಕುರಿ ಕೊಯ್ಸಿಕೊಂಡು ಅಡಿಗೆ ಮಾಡಿ ಉಂಡೂ ಬರುತ್ತಾರೆ. ಮನೆಯ ಯಾರಿಗಾದರೂ ಖಾಯಿಲೆಯಾದಾಗ ಗುಣವಾಗ=ಲೆಂದು ಬಡತನ ನಿವಾರಣೆಯಾಗಲೆಂದು ಮುಂತಾಗಿ ಹರಕೆ ಕಟ್ಟಿಕೊಳ್ಳುವ ಪಿಂಜಾರರು ಇಂಥದ್ದೇ ದೇವರಿಗೆ ನಡೆದುಕೊಳ್ಳಬೇಕೆಂದೇನೂ ಇರುವುದಿಲ್ಲವಾದರೂ ಹೊನ್ನೂರಲಿಗೆ ಹೋಗುವವರು ದಾದಾಪಾಡಿಗೆ ಹೋಗುವುದಿಲ್ಲ. ದೇವರು ಗುಡ್ಡದ ಜಾತ್ರೆಗೆ ಪ್ರತೀಸಲ ಹೋಗುವವರಿದ್ದಾರೆ. ಧರ್ಮಸ್ಥಳದ ಮಂಜುನಾಥನಿಗೆ ಅಂಚೆ ಮೂಲಕ ಹಣ ಕಳಿಸುವವರೂ, ಅಲ್ಲಿಗೆ ಹೋಗಿ ತಲೆಬೋಳಿಸಿಕೊಂಡು ಬರುವವರೂ ಇದ್ದಾರೆ.

ಪಿಂಜಾರರ ವಿಶಿಷ್ಟ ಹಬ್ಬಗಳು ಎಂದರೆ ಹಿರಿಯರ ಹಬ್ಬ ಮತ್ತು ಮೊಹಂ ಹಬ್ಬ.

ಮುಸ್ಲಿಮರು ಷಬ್-ಎ-ಬರಾತ್ ಎಂದು ಆಚರಿಸುವ ದಿನದಂದೇ ಪಿಂಜಾರರು ಹಿರಿಯರ ಹಬ್ಬವನ್ನು ಆಚರಿಸುತ್ತಾರೆ. ಪಿಂಜಾರರು ಮುಸ್ಲಿಮರಿಂದ ಎಷ್ಟರಮಟ್ಟಿಗೆ ಭಿನ್ನರಾಗಿ ಕಾಣುತ್ತರೆನ್ನುವುದನ್ನು ಈ ಎರಡೂ ಹಬ್ಬದ ಆಚರಣೆಗಳಲ್ಲಿ ಕಾಣಬಹುದಾಗಿದೆ. ಹಿರಿಯರ ನೆನಪು, ಅವರ ಬಗ್ಗೆ ಆರಾಧನೆ ಭಾವನೆ, ಅವರು ಸ್ವರ್ಗದಲ್ಲಿ ಬದುಕಿದ್ದಾರೆ ಎನ್ನುವ ಕಲ್ಪನೆ. ಅವರು ನಮಗೆ ಸದಾ ಒಳ್ಳೆಯದನ್ನು ಹಾರೈಸಲಿ ಎಂಬ ಬಯಕೆ ಮುಂತಾದ್ದನ್ನೆಲ್ಲ ಒಳಗೊಂಡಿರುವ ಹಿರಿಯರ ಹಬ್ಬದ ಆಚರಣೆ ಪಿಂಜಾರರ ಮೂಲ ಸಂಸ್ಕೃತಿಯಿಂದ ಬಂದದ್ದು ಎನ್ನುವುದರಲ್ಲಿ ಅನುಮಾನವಿಲ್ಲ.

ಸತ್ತ ಹರಿಯರನ್ನು ನೆನೆಸಿಕೊಳ್ಳುವ ಮೂಲಕ ತಮ್ಮ ನಿತ್ಯದ ಬದುಕಿನಲ್ಲಿ ಅವರ ನಡವಳಿಕೆ ಮತ್ತು ಪ್ರಭಾವವನ್ನು ಗುರುತಿಸಿಕೊಳ್ಳುವುದು ಈ ಹಬ್ಬದ ಮೂಲ ಉದ್ದೇಶದಂತೆ ಕಾಣುತ್ತದೆ. ಸತ್ತ ಗಂಡಸರಿಗಾದರೆ ಲುಂಗಿ ಪಂಚೆ, ಅಂಗಿಬಟ್ಟೆ, ಟವೆಲ್ಲು ತರುತ್ತಾರೆ. ಹೆಂಗಸರಿಗೆ ಅವರು ಬದುಕಿದ್ದಾಗ ಉಡುತ್ತಿದ್ದ ರೀತಿಯ ಬಟ್ಟೆಗಳನ್ನೇ ತರುತ್ತಾರೆ. ಹೆಂಗಸರಿಗೆ ಅವರು ಬದುಕಿದ್ದಾಗ ಉಡುತ್ತಿದ್ದ ರೀತಿಯ ಬಟ್ಟೆಗಳನ್ನೇ ತರುತ್ತಾರೆ. ಈ ಬಟ್ಟೆಗಳನ್ನು ಮನೆಯ ಮೂಲೆಯೊಂದರಲ್ಲಿ ಕೆಮ್ಮಣ್ಣು ಬಳಿದ ಜಾಗದಲ್ಲಿ ಅಗಲವಾದ ತಾಮ್ರ ಅಥವಾ ಹಿತ್ತಾಳೆಯ, ಚಿತ್ರ ಬಿಡಿಸಿದ ಗಂಗಾಳದಲ್ಲಿ ದಸ್ತರಖಾನಿ ಹಾಸಿ ಇಡುತ್ತಾರೆ. ಅವತ್ತು ತಮ್ಮ ಹಿರಿಯರು ಇಷ್ಟಪಡುತ್ತಿದ್ದ ವಿವಿಧ ನಮೂನೆಯ ಅಹಾರ ಪದಾರ್ಥಗಳನ್ನು ತಯಾರಿಸಿ, ತಂದು ಎಡೆಯಲ್ಲಿಡುತ್ತಾರೆ. ಜೊತೆಗೆ ಗಂಡಸರಿಗೆ ಬೀಡಿ, ಬೆಂಕಿಪೊಟ್ಟನ, ಎಲೆಅಡಿಕೆ, ಹೊಗೆಸೊಪ್ಪು ಹೆಂಗಸರಿಗೆ ಕೂಡ ಎಲೆ ಅಡಿಕೆ ಹೊಗೆಸೊಪ್ಪು ಇಡುತ್ತಾರೆ. ಹುಗ್ಗಿ, ತುಪ್ಪ, ರೊಟ್ಟಿ, ಹೋಳಿಗೆ, ಅನೇಕ ಬಗೆಯ ಹಣ್ಣುಹಂಪಲುಗಳು, ಕೊಬರಿ, ಉತ್ತುತ್ತಿ, ಮಾಂಸದ ಸಾರಿನಲ್ಲಿದ್ದ ಚೂರುಗಳು, ಮೊಟ್ಟೆ ಮುಂತಾದುವನ್ನೆಲ್ಲ ಎಡೆಯ ರೂಪದಲ್ಲಿಡುತ್ತಾರೆ. ನಂತರ ಮುಲ್ಲಾನನ್ನು ಕರೆತರಲಾಗುತ್ತದೆ. ಮುಲ್ಲಾ ಮನೆಮನೆಗೂ ಬಂದು ಈ ಎಡೆಯನ್ನು ’ಘಾತೆಹ’ ಮಾಡುವುದರ ಮೂಲಕ ದೇವ ಸನ್ನಿಧಿಯಲ್ಲಿರುವ ತಮ್ಮ ಹಿರಿಯರಿಗೆ ತಲುಪಿಸುತ್ತಾನೆಂಬ ನಂಬಿಕೆಯಿದೆ. ಮುಲ್ಲಾನಿಂದ ’ಓದಿಕೆ’ಯಾದ (ಮುಸ್ಲಿಮರು ’ಘಾತೆಹ’ ಅಂದರೆ ಪಿಂಜಾರರು ’ಓದಿಕೆ’ ಅನ್ನುತ್ತಾರೆ. ’ಘಾತೆಹ’ ಪದಕ್ಕೆ ಸಂವಾದಿಯಾಗಿ ಓದಿಕೆ ಎಂಬ ಕನ್ನಡ ಪದವನ್ನು ಬಳಸುತ್ತಾರೆ) ನಂತರ ಎಲ್ಲರೂ ಎಡೆಯ ಹತ್ತಿರವಿರುದ ಮಣ್ಣಿನ ಕುಡಿಕೆಯ ಬೆಂಕಿ ಕೆಂಡದಲ್ಲಿ ಲೋಬಾನ ಹಾಕಿ ಅಡ್ಡಬಿದ್ದು ಹಿರಿಯರನ್ನೆಲ್ಲ ನೆನೆದು ಬಂದು ಉಣ್ಣಲು ಕೂರುತ್ತಾರೆ. ಮುಲ್ಲಾನ ’ಓದಿಕೆ’ ಮುಗಿಯುವವರೆಗೂ ಅಡಿಗೆಯನ್ನು ಯಾರೂ ಎಂಜಲು ಮಾಡಲು ಬಿಡುವುದಿಲ್ಲ. ಎಡೆಯಲ್ಲಿಟ್ಟ ಆಹಾರ ಪದಾರ್ಥಗಳೆಲ್ಲವೂ ಹಾಗೇ ಇರುತ್ತವೆ. ರಾತ್ರಿ ಹಿರಿಯರು ಬಂದು ಉಣ್ಣುತ್ತಾರೆ ಎಂಬ ನಂಬಿಕೆಯಿದೆ. ಬೆಳಿಗ್ಗೆ ಗೋರಿಗಳ ಹತ್ತಿರ ಹೋಗಿ ಹೂವು, ಗಂಧ ಹಾಕಿ ಊದಿನ ಕಡ್ಡಿ ಹಚ್ಚಿಟ್ಟು ಕೈಮುಗಿದು ಬರುತ್ತಾರೆ. ನಂತರ ಮನೆಯವರೆಲ್ಲರೂ ಆ ಎಡೆಯಲ್ಲಿರುವ ಆಹಾರವನ್ನು ಹಂಚಿಕೊಂಡು ತಿನ್ನುತ್ತಾರೆ. ಅಲ್ಲಿಟ್ಟಿದ್ದ ಲುಂಗಿ, ಪಂಚೆ, ಟವೆಲ್ಲು, ಸೀರೆ, ಕುಬಸ ಮುಂತಾದ ಬಟ್ಟೆಗಳನ್ನು ಮನೆಯ ಹಿರಿಯರು ಬಳಸುತ್ತಾರೆ.

ಇದು ಒಂದು ಗಾಢನಂಬಿಕೆಯಾಗಿ ಆಚರಣೆಯ ರೂಪದಲ್ಲಿ ಉಳಿದುಕೊಂಡಿದೆ. ಪಿಂಜಾರರು ಎಷ್ಟೇ ಕಷ್ಟವಿರಲಿ, ಹಿರಿಯರ ಹಬ್ಬವನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೆ. ಪಿಂಜಾರರ ಮೂಲಾಶ್ರಮದ ಪರಂಪರೆಯನ್ನು ಸ್ಪಷ್ಟವಾಗಿ ನಾವು ಈ ಬಗೆಯ ಆಚರಣೆಯಿಂದ ಗುರುತಿಸಬಹುದಾಗಿದೆ. ಈ ಪರಂಪರೆಯ ಹಿನ್ನೆಲೆಯಲ್ಲಿರುವ ಆತ್ಮ, ದೇವರು, ಸ್ವರ್ಗ – ನರಕ, ಪಾಪ-ಪುಣ್ಯ ಮತ್ತು ಪುನರ್ಜನ್ಮದ ಕಲ್ಪನೆಗಳು ಕೂಡ ಪಿಂಜಾರರ ಬದುಕನ್ನು ಪ್ರಭಾವಿಸಿರುವುದು ತಿಳಿಯುತ್ತದೆ. ಇಂಥ ರೂಢಿ ಸಂಪ್ರದಾಯಗಳು ಜನಾಂಗವೊಂದರ ಭಾವಕೋಶದಲ್ಲಿ ಶತಮಾನಗಳ ಕಾಲ ಸ್ಥಾಯಿಯಾಗಿ ಉಳಿದುಕೊಂಡು ಬಂದಿರುವುದೇ ನಮ್ಮ ಸಾಮಾಜಿಕ ಪರಂಪರೆಯನ್ನು ನಿರಂತರವಾಗಿ ಧರ್ಮ ಮತ್ತು ಸಂಸ್ಕೃತಿಯ ನಿರ್ದೇಶನದಲ್ಲಿ, ನಿಯಂತ್ರಣದಲ್ಲಿ ರೂಪಿಸಿಕೊಂಡು ಬರುವುದರ ಸಂಕೇತವಾಗಿದೆ. ವಿಚಿತ್ರವೆಂದರೆ ಸಂಸ್ಕೃತಿಗೂ ಧರ್ಮಕ್ಕೂ ಇರುವ ನಿರಪೇಕ್ಷ ಸಂಬಂಧವನ್ನು ಅವಿನಾಭಾವ ಸಂಬಂಧ ಎನ್ನುವ ರೀತಿಯಲ್ಲಿ ನಮ್ಮ ತತ್ವಶಾಸ್ತ್ರಜ್ಞರು ಕಾವ್ಯ ಮೀಮಾಂಸಕರು ವ್ಯಾಖ್ಯಾನಿಸುತ್ತ ಬಂದಿರುವುದು. ಹಾಗಾಗಿ ಪಿಂಜಾರರು ಹಿರಿಯರ ಹಬ್ಬವನ್ನು ಕೂಡ ಒಂದು ಧಾರ್ಮಿಕ ಆವರಣದೊಳಗೇ ಅಚರಿಸುತ್ತ ಬಂದಿದ್ದು ಹಿರಿಯರ ಬಗ್ಗೆ ತೋರುವ ಗೌರವ, ಪ್ರೀತಿ, ಶ್ರದ್ಧೆಗಳು ಕೂಡ ’ಸಂಪ್ರದಾಯ’ದ ಅರ್ಥ ಪಡೆದುಕೊಂಡಿದೆ. ಎಲ್ಲ ಹಬ್ಬಗಳು ಮತ್ತು ಆಚರಣೆಗಳು ಕೂಡ ಸಂಪ್ರದಾಯದ ಚೌಕಟ್ಟಿನೊಳಗೇ ಅರ್ಥಪಡೆದುಕೊಳ್ಳುವುದು ಒಂದು ಜನಾಂಗದ ಸಂಸ್ಕೃತಿಯ ಅಧ್ಯಯನದ ಸಂದರ್ಭದಲ್ಲಿ ಅನಿವಾರ್ಯವಾದ ಕ್ರಿಯೆಯಾಗಿದೆ.