ಪಿಂಜಾರರ ಜನಸಂಖ್ಯೆಯನ್ನು ತಿಳಿಯಲು ಎರಡು ಮುಖ್ಯ ತೊಡಕುಗಳಿವೆ:

೧.   ಪಿಂಜಾರರು, ಅದರಲ್ಲೂ ಈಗೀಗ ತಮ್ಮನ್ನು ಅದೇ ಹೆಸರಿನಿಂದ ಗುರುತಿಸಿ-ಕೊಳ್ಳದಿರುವುದು.

೨.   ಪಿಂಜಾರರು ಸಂಘಟನೆಯಾಗದಿರುವುದು

ಇಂಡಿಯಾದಂತಹ ಸಾಮಾಜಿಕ ವಾತಾವರಣದಲ್ಲಿ ಜಾತಿಗಳ ಮೂಲಕ ಗುರುತಿಸಿಕೊಂಡು ಅನೇಕ ಆರ್ಥಿಕ, ರಾಜಕೀಯ ಲಾಭಗಳನ್ನು ಪಡೆದುಕೊಳ್ಳುವುದು ಮೇಲ್ಜಾಜಿಗಳ ಪಾಲಿಗೆ ವರವಾಗಿದೆ. ಆದರೆ ಅದೇ ಸಂದರ್ಭದಲ್ಲಿ ಇಲ್ಲಿ ಅಪಾರ ಸಂಖ್ಯೆಯ ಕೆಳಜಾತಿಗಳು ತಮ್ಮ ಜಾತಿಗಳನ್ನು ಹೇಳಿಕೊಳ್ಳುವ, ಆ ಮೂಲಕ ಲಾಭಗಳನ್ನು ಪಡೆದುಕೊಳ್ಳುವ ಸಾಮಾಜಿಕ ಐಡೆಂಟಿಟಿಯನ್ನೇ ಹೊಂದಿಲ್ಲ. ಇಲ್ಲಿನ ಇತಿಹಾಸದುದ್ದಕ್ಕೂ ಅದು ನಡೆದುಬಂದಿದೆ. ಯಾಕೆಂದರೆ ಈ ಜಾತಿಸೂಚಕ ಹೆಸರು, ಪದಗಳಿಗೆ ಅಂಟಿಕೊಂಡಿರುವ ಅಪಮಾನದ, ಕೀಳರಿಮೆಯ ಭಾವನೆ ಈ ಜನಾಂಗಗಳನ್ನು ಹೀಗೆ ಸದಾ ಸಮಾಜದ ಕಡೆಯ ಸ್ಥಾನದಲ್ಲಿರುವಂತೆ ನೋಡಿಕೊಂಡಿದೆ. ಇದರ ಜೊತೆಗೆ ಹಾಗೆ ಜಾತಿ ಹೇಳಿಕೊಳ್ಳುವುದು ಕೂಡ ಉತ್ತಮ ನೈತಿಕತೆಯಲ್ಲ ಎನ್ನುವ ಸಂಸ್ಕಾರದ ನಡುವಳಿಕೆಯೂ ಈ ಜನಾಂಗಗಳಿಗಿವೆ.

ಪಿಂಜಾರರಿಗೆ ತಾವು ಹಿಂದೂ ಧರ್ಮದಿಂದ ಮತಾಂತರಗೊಂಡವರೆಂಬ ಹಿನ್ನೆಲೆಯಲ್ಲಿ ವಿಷಾದವಾಗಲೀ, ಹೆಮ್ಮೆಯಾಗಲೀ ಇದ್ದಂತಿಲ್ಲ. ಈ ಬಗೆಗಿನ ನೆನಪುಗಳೂ ಅವರನ್ನು ಕಾಡುವುದಿಲ್ಲ. ಆದರೆ ಸಂವೇದನೆಗಳ ನೆಲೆಯಲ್ಲಿ ಅವರ ಆಚರಣೆಗಳಲ್ಲಿ ಈ ಕುರಿತಾದ ಸ್ತರಗಳನ್ನು ಗುರುತಿಸಬಹುದಾಗಿದೆ. ಧರ್ಮ ಎನ್ನುವುದು ಹೊಟ್ಟೆ ಹೊರೆಯುವುದರಷ್ಟು ತೀವ್ರವಾಗಿ ಕಾಡುವುದಿಲ್ಲ ಎನ್ನುವುದು ಪಿಂಜಾರರ ಬದುಕನ್ನು ಹತ್ತಿರದಿಂದ ನೋಡಿದರೆ ತಿಳಿಯುತ್ತದೆ. ವಿಚಿತ್ರವೆಂದರೆ ಹೀಗೆ ಮತಾಂತರಗೊಂಡ ಕಾರಣಕ್ಕೋ ಎನೋ ಹಿಂದೂ ಮತ್ತು ಮುಸಲ್ಮಾನರಿಬ್ಬರಿಂದಲೂ ಪಿಂಜಾರರು ತಾತ್ಸಾರಕ್ಕೊಳಗಾಗುತ್ತಿದ್ದಾರೆ. ಭಾವನಾತ್ಮಕ ಸಂಬಂಧಗಳ ಹಿನ್ನೆಲೆಯಲ್ಲಿ ಹಿಂದೂ ಧರ್ಮದ ಹಿಂದುಳಿದ ಸಮುದಾಯಗಳ ಜೊತೆಗಿರುವ ಪಿಂಜಾರರು ಮುಸಲ್ಮಾನರ ಜೊತೆ ವ್ಯಾವಹಾರಿಕವಾಗಿ ಮಾತ್ರ ವರ್ತಿಸುತ್ತಾರೆ.

ಇದೆಲ್ಲದರ ಹಿನ್ನೆಲೆಯಲ್ಲಿ ಪಿಂಜಾರರು ತಮ್ಮನ್ನು ಅದೇ ಹೆಸರಿನಿಂದ ಗುರುತಿಸಿಕೊಳ್ಳುವ ಮತ್ತು ಗುರುತಿಸಿಕೊಳ್ಳದಿರುವ ಎರಡೂ ರೀತಿಯನ್ನು ಗಮನಿಸಬಹುದಾಗಿದೆ. ಇದಕ್ಕೆ ಬಹುಮುಖ್ಯವಾದ ತೊಡಕು ಎಂದರೆ ಪಿಂಜಾರರ ಭಾಷೆ. ಪಿಂಜಾರರ ತಾಯಿ ನುಡಿ ಕನ್ನಡ. ಇವರು ಆಡುವ ಭಾಷೆಯನ್ನು ಕೇಳಿ ಯಾರೂ ಇವರ ಜಾತಿಯನ್ನು ಕಂಡುಹಿಡಿಯಲಾಗುವುದಿಲ್ಲ. ವಿಶೇಷವಾಗಿ ಕರ್ನಾಟಕದ ಸಂದರ್ಭದಲ್ಲಿ ಮುಸಲ್ಮಾನರ ಭಾಷೆ ಉರ್ದು ಎಂಬ ನಂಬಿಕೆಯಿದೆ. ವಿಚಿತ್ರವೆಂದರೆ ಮುಸಲ್ಮಾನರೂ ಹಾಗೆ ತಿಳಿದುಕೊಂಡಿದ್ದಾರೆ. ಪಿಂಜಾರರು ಧಾರ್ಮಿಕವಾಗಿ ಇಸ್ಲಾಂನ್ನು ಅನುಸರಿಸಿದರೂ ಅವರ ಒಟ್ಟು ಸಂವೇದನೆಯ ಭಾಷೆ ಕನ್ನಡವೇ ಆಗಿದೆ. ಇವರ ಭಾಷೆಯನ್ನು, ನಡವಳಿಕೆಯನ್ನು ಗಮನಿಸಿದ ಹಿಂದೂ ಬಾಂಧವರು ’ನೀವು ಮುಸಲ್ಮಾನರ ಧರ್ಮದಲ್ಲಿ ಹುಟ್ಟಬಾರದಿತ್ತು’ ಎಂದು ಕನಿಕರಿಸುತ್ತಾರೆ. ಹಾಗೆಯೇ ಮುಸಲ್ಮಾನರಾದವರು ಪಿಂಜಾರರ ಭಾಷೆ ಕೇಳಿದ ಕೂಡಲೇ ’ನೀವು ನದಾಫರೇನು?’ ಎಂದು ಪ್ರಶ್ನಿಸುತ್ತಾರೆ. ಪಿಂಜಾರರನ್ನು ’ಮುಸಲ್ಮಾನರು’ ಎಂದು ಗುರುತಿಸಿಲು ಸಾಧ್ಯವಾಗುವುದು ಬಹುಪಾಲು ಅವರ ಹೆಸರುಗಳನ್ನು ಕೇಳಿದಾಗ ಮತ್ತು ಮದುವೆ, ಮುಂಜಿ, ಸಾವು ಮೊದಲಾದ ಆಚರಣೆಗಳ ಸಮಯದಲ್ಲಿ ಮಾತ್ರ. ಹಿಂದೂ-ಮುಸಲ್ಮಾನರಿಬ್ಬರೂ ತಮ್ಮ ಬಗೆಗೆ ಕೇಳುವ ಪ್ರಶ್ನೆಗಳಿಗಾಗಲಿ, ಅವರ ಅಣಕಗಳಿಗಾಗಲೀ ತಲೆಕೆಡಿಸಿಕೊಳ್ಳುವ ಪಿಂಜಾರರು ಮುಸಲ್ಮಾನರು ತಮ್ಮನ್ನು ಅವಮಾನಿಸುವುದನ್ನು ಕಂಡು ಒಳಗೊಳಗೆ ಕ್ರೋಧಗೊಳ್ಳುತ್ತಾರೆ. ಮುಸಲ್ಮಾನರ ಬಗೆಗಿನ ತಿರಸ್ಕಾರಕ್ಕೆ ತಮಗೆ ನಮಾಜು. ಉರ್ದು ಬರುವುದಿಲವಲ್ಲ ಎಂದು ಕೊರಗುತ್ತಾರೆ. ಅವುಗಳನ್ನು ಕಲಿಯಲು ಪುರುಸೊತ್ತಿಲ್ಲದಂತಹ ಜೀವನದ ಜಂಜಾಟಗಳಲ್ಲಿ ಮುಳುಗಿದವರೇ ಹೆಚ್ಚು.

ಹೀಗಾಗಿ ’ಪಿಂಜಾರರು’ ಎಂದು ಹೇಳಿಕೊಳ್ಳುವುದಕ್ಕೂ ಮುಜುಗರಪಟ್ಟುಕೊಲ್ಳುವ, ಕೀಳರಿಮೆಯಿಂದ ನರಳುವ, ಮನಸ್ಸುಗಳ ನಡುವೆ ಧೈರ್ಯವಾಗಿ ಮುಲಾಜಿಲ್ಲದೆ ಹೇಳಿಕೊಂಡು ಬದುಕುವ ಪರಿಸರವೂ ಈ ಜನಾಂಗದಲ್ಲಿದೆ. ಅದರಲ್ಲೂ ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳಲ್ಲಿರುವ ಪಿಂಜಾರರು ಮಾತ್ರ ತುಂಬಾ ಸಲುಗೆ ಮತ್ತು ಪ್ರೀತಿಯಿಂದಲೇ ತಾವು ’ಪಿಂಜಾರರು’ ಎಂದು ಹೇಳಿಕೊಳ್ಳುತ್ತಾರೆ. ಹಾಗೂ ತಮ್ಮ ಹೆಸರಿನ ಜೊತೆಗೆ ಪಿಂಜಾರ, ನದಾಫ ಎಂದೂ ಸೇರಿಸಿಕೊಂಡಿರುತ್ತಾರೆ.

ಕೇವಲ ೧೦-೨೦ ವರ್ಷಗಳ ಹಿಂದೆ ಪಿಂಜಾರರಿಗೆ ಧಾರ್ಮಿಕವಾಗಿ ’ಅನ್ಯ’ತೆಯ ಭಾವನೆ ಕಾಡಿರಲಿಲ್ಲ. ಹಾಗೂ ಮುಸಲ್ಮಾನರಿಗೆ ಮಾತ್ರ ಮೀಸಲಾಗಿದ್ದ ಸಾಮಾಜಿಕ ಅಭದ್ರತೆಯೂ ಅವರನ್ನು ಕಂಗೆಡಿಸಿರಲಿಲ್ಲ. ಯಾಕೆಂದರೆ ಅವರು ಹೆಚ್ಚು ಕಡಿಮೆ ಹಿಂದೂಗಳ ಒಳಗಿನ ಪಂಗಡವೊಂದರಂತೆ ’ಒಳಗಿನವರಾಗಿ’ ಇದ್ದುಬಿಟ್ಟಿದ್ದರು. ಹಾಗಾಗಿ ಅವರಿಗೆ ಧಾರ್ಮಿಕವಾಗಿ ಪ್ರಧಾನ ಧರ್ಮವೊಂದರಿಂದ ಆವರಣದಲ್ಲಿ ಗುರುತಿಸಿಕೊಳ್ಳುವ ಅವಶ್ಯಕತೆಯೇ ಇರಲಿಲ್ಲ. ಮತ್ತು ಮುಸಲ್ಮಾನರಿಂದ ಪೂರ್ಣವಾಗಿ ಪ್ರಭಾವಿತರಾಗದೇ ಕೇವಲ ತಾಂತ್ರಿಕ ಆಚರಣೆಗಳ ಮಟ್ಟಿಗೆ ಮಾತ್ರ ಅವರನ್ನು ಆಶ್ರಯಿಸಿದ್ದರು. ಉಳಿದಂತೆ ಎಲ್ಲ ಭಾವನಾತ್ಮಕ ಒಡನಾಟ, ವ್ಯವಹಾರಗಳು ಹಿಂದೂಗಳ ನಡುವೆಯೇ ಜೀವ ಪಡೆಯುತ್ತಿದ್ದವು.

ಆದರೆ ಇತ್ತೀಚೆಗೆ ೧೦-೧೫ ವರ್ಷಗಳು ಪಿಂಜಾರ ಜನಾಂಗದ ಪಾಲಿಗೆ ತೀರ ಆತಂಕದ ದಿನಗಳಾಗಿವೆ. ಹಳ್ಳಿಗಳಲ್ಲಿ ಕೂಡ ಕೋಮುವಾದಿಗಳು ಕ್ರಿಯಾಶೀಲವಾಗಿರುವ ಈ ದಿನಗಳಲ್ಲಿ ಪಿಂಜಾರರು ಜೀವರಕ್ಷಣೆ ಮತ್ತು ಸಾಂವಿಧಾನಿಕ ಭದ್ರತೆಯನ್ನು ಅರಸಿ ನಗರಗಳತ್ತ ಬರುತ್ತಿದ್ದಾರೆ. ತಾವು ಎಲ್ಲಾದರೂ ಸಲ್ಲಲೇಬೇಕೆಂಬಂತೆ ಇಸ್ಲಾಂನ ಆಚರಣೆಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಪಿಂಜಾರರು ಎಂದು ಹೇಳದೆ ಮುಸ್ಲಿಮರು ಎಂದೇ ಹೇಳುತ್ತಿದ್ದಾರೆ. ವಿಷದ ಗಾಳಿಯಂತೆ ಹರಡುತ್ತಿರುವ ಕೋಮುವಾದ ಪಿಂಜಾರರಂತಹ ಉಭಯಸಂಸ್ಕೃತಿ ರೂಪಗಳನ್ನು ಉಸಿರು-ಗಟ್ಟಿಸುತ್ತಿದೆ. ರಾಜ್ಯಾಧಿಕಾರದ ಆಕಾಂಕ್ಷೆಯಲ್ಲಿ ಕೆಲವು ಕೋಮುವಾದೀ ಸಂಘಟನೆಗಳು ಪ್ರಭುತ್ವ ಮತ್ತು ಅಧಿಕಾರಶಾಹಿಯ ಜಂಟಿ ಕಾರ‍್ಯಾಚರಣೆಯಲ್ಲಿ ವ್ಯವಸ್ಥಿತವಾದ ಕೋಮುಗಲಬೆಯನ್ನು ಪ್ರಾಯೋಜಿಸುತ್ತಿವೆ. ಇದಕ್ಕೆ ಹಿಂದೂ-ಮುಸ್ಲಿಂ ಅಮಾಯಕ ಯುವ ಸಮುದಾಯಗಳ್ಲಿ ’ಹಿಂಸೆ’ಯನ್ನು ಸ್ವಾಭಿಮಾನ ಎಂಬಂತೆ ವೈಭವೀಕರಿಸುತ್ತಿರುವುದು ಆತಂಕಕಾರಿಯಾಗಿದೆ.

ಈ ಎಲ್ಲಾ ಕಾರಣಗಳಿಂದಾಗಿ ಪಿಂಜಾರರು ತಮ್ಮನ್ನು ಅದೇ ಹೆಸರಿನಿಂದ ಕರೆದು-ಕೊಳ್ಳುವುದು ಕಡಿಮೆಯಾಗುತ್ತಿದೆ. ಇಲ್ಲಿರುವ ಮತ್ತೂ ಒಂದು ತೊಡಕು ಎಂದರೆ ಜನಗಣತಿ ಮತ್ತು ಮಕ್ಕಳ ಶಾಲಾ ಪ್ರವೇಶಾತಿಯ ಸಂದರ್ಭದಲ್ಲಿ ಅಯಾಚಿತವಾಗಿ ನಡೆದುಹೋಗುವ ಪ್ರಮಾದ. ಈ ಎರಡೂ ಪ್ರಕ್ರಿಯೆಗಳಲ್ಲಿ ಸಹಜವಾಗಿ ಹಿಂದೂ ಶಿಕ್ಷಕರು, ಅಧಿಕಾರಿಗಳು ಕ್ರಿಯಾಶೀಲರಾಗಿರುತ್ತಾರೆ. ಪಿಂಜಾರರು ಈ ಸಂದರ್ಭದಲ್ಲಿ ಹೆಸರು ಹೇಳುವಾಗ ಜಾತಿಯನ್ನು ಸೇರಿಸಿಯೇ ಹೇಳಬೇಕೆನ್ನುವ ತಿಳುವಳಿಕೆಯುಳ್ಳವರಾಗಿರುವುದು ಕಡಿಮೆ. ಒಂದೊಮ್ಮೆ ಹೆಸರಿನ ಒಂದು ಭಾಗವಾಗಿ ಪಿಂಜಾರ ಅಥವಾ ನದಾಫ ಬಂದಾಗಲೂ ಜಾತಿಯ ಪ್ರತ್ಯೇಕ ಕಲಂನಲ್ಲಿ ಬರೆದುಕೊಳ್ಳುವವರು ಸಂಬಂಧಪಟ್ಟವರನ್ನು ವಿಚಾರಿಸದೇ ಸ್ವಂತ ತಿಳುವಳಿಕೆಯಿಂದ ’ಮುಸ್ಲಿಂ’ ಎಂದು ಬರೆದುಬಿಡುವುದು ರೂಢಿಯಾಗಿದೆ. ಉದಾಹರಣೆಗೆ ’ಬಸವರಾಜ’ ಧರ್ಮದಲ್ಲಿ ಹಿಂದೂ ಆಗಿಬಿಡುತ್ತಾನಾದರೂ, ಆತನಿಗೊಂದು ಪ್ರತ್ಯೇಕ ಜಾತಿಯ ಹಿನ್ನೆಲೆಯಿರುವುದರಿಂದ ಅದನ್ನು ಕೇಳಿ ಬರೆದುಕೊಳ್ಳಲಾಗುತ್ತದೆ. ಆದರೆ ’ಬುಡೇನ್‌ಸಾಬ್‌’ನ ಧರ್ಮವನ್ನಾಗಲೀ, ಜಾತಿಯನ್ನಾಗಲೀ ಕೇಳಿ ತಿಳಿದುಕೊಳ್ಳುವ ಪರಿಪಾಟವೇ ಇಲ್ಲ. ಈ ಬಗೆಯ ಮನೋಧರ್ಮ ಬೆಳೆದಿರುವುದಕ್ಕೆ ಬಹುಶಃ ಇಸ್ಲಾಂನಲ್ಲಿ ಜಾತಿಪದ್ಧತಿ ಇಲ್ಲದಿರುವುದೇ ಕಾರಣವಾಗಿದೆ ಅಥವಾ ಹಾಗಂತ ನಂಬಿಸಲಾಗಿದೆ. ಆದರೆ ವಾಸ್ತವವಾಗಿ ಇಸ್ಲಾಂನಲ್ಲಿ ಹತ್ತಾರು ಪಂಗಡಗಳಿವೆ. ಅವುಗಳ ನಡುವೆಯೂ ಸಾಮರಸ್ಯದ ಕೊರತೆಯಿದೆ. ಆಯಾ ಪಂಗಡಗಳು ತಮ್ಮತಮ್ಮನ್ನು ಶ್ರೇಷ್ಠ ಎಂದು ಕೊಂಡಿರುವುದರಿಂದ ಆಚರಣೆಯಲ್ಲಿ ಭೇದಗಳಿವೆ. ಆದರೆ ’ಅಲ್ಲಾ’ನಲ್ಲಿನ ಪರಮನಿಷ್ಠೆಯ ಕಾರಣಕ್ಕೆ ಅಲ್ಲಿ ಏಕರೂಪತೆ ಕಂಡುಬರುತ್ತದೆ ಅಷ್ಟೇ. ಪಿಂಜಾರರ ವಿಷಯ=ದಲ್ಲಿಯಂತೂ ಸಾಂಪ್ರದಾಯಿಕ ಮುಸ್ಲಿಮರಿಗೆ ವಿಚಿತ್ರವಾದ ಅಸಡ್ಡೆಯಿದೆ. ಅಸ್ಪೃಶ್ಯತೆಯೊಂದನ್ನು ಹೊರತುಪಡಿಸಿದರೆ ಹಿಂದೂ ಧಾರ್ಮಿಕ ಪರಿಸರದ ತಳ ಸಮುದಾಯಗಳು ಅನುಭವಿಸುವ ಇತರೆ ಎಲ್ಲ ಅವಮಾನಗಳನ್ನು ಪಿಂಜಾರರು ಅನುಭವಿಸುತ್ತಾರೆ. ಆದುದರಿಂದ ಕೇವಲ ಹೆಸರಿನ ಕಾರಣಕ್ಕಾಗಿ ಪಿಂಜಾರರು, ’ಮುಸ್ಲಿಮ’ರೆಂದೇ ದಾಖಲಾಗಿ ಬಿಡುವ ಅಪಾಯದಲ್ಲಿ ಈ ಹೆಸರಿನ ಜನಾಮಗವೊಂದು ಅಜ್ಞಾತವಾಗಿ, ಅದರ ವಿಶಿಷ್ಟ ಸಂಸ್ಕೃತಿ ರೂಪ ನಿರ್ಲಕ್ಷಿತವಾಗಿ ಹೋಗಿದೆ. ಸಾಮವಿಧಾನಿಕ ಸವಲತ್ತುಗಳನ್ನು ಪಡೆಯುವ ಹಿನ್ನೆಲೆಯಲ್ಲಿ ಜಾತಿಯ ಹೆಸರು ದಾಖಲಾಗುವಂತೆ ಎಚ್ಚರವಹಿಸುವ ’ಪ್ರಜ್ಞೆ’ ಈಗೀಗ ಪಿಂಜಾರರಲ್ಲಿ ಮೂಡುತ್ತಿದೆಯಾದರೂ ಅದು ಸಂಘಟನಾತ್ಮಕ ಪ್ರಯತ್ನವಾಗಿ ಕಾರ‍್ಯಗತವಾಗುತ್ತಿಲ್ಲ ಮತ್ತು ಪ್ರಭುತ್ವ ಹಾಗೂ ಅಧಿಕಾರಶಾಹಿಯ ಅಧಿಕೃತ ದೃಢೀಕರಣಗಳು ಸಂಬಂಧಪಟ್ಟವರಿಗೆ ಲಭ್ಯವಾಗುತ್ತಿಲ್ಲ. ವ್ಯಕ್ತಿಯ ಹೆಸರಿನಿಂದ ಮಾತ್ರವೇ ಆ ವ್ಯಕ್ತಿಯ ಜಾತಿ, ಧರ್ಮವನ್ನು ಗುರುತಿಸುವ, ಆ ಮೂಲಕ ಆ ಜಾತಿ, ಧರ್ಮಗಳಿಗೆ ಅಂಟಿಕೊಂಡಂತಿರುವ ಅನುಮಾನದ, ಅಪಮಾನದ ಆರೋಪಗಳನ್ನು ಹೊರಿಸಿಬಿಡುವ ಜಾತಿಪದ್ಧತಿಯ ಕ್ರೌರ್ಯ ಇಲ್ಲಿನ ದಮನಿತ ಜನಾಂಗಗಳ ಪಾಲಿಗೆ ಮೂಗುದಾರವಾಗಿಬಿಟ್ಟಿದೆ.

ಪಿಂಜಾರರು ಸಂಘಟಿತರಾಗದೇ ಇರುವುದಕ್ಕೆ ಆ ಜನಾಂಗದ ಅಲೆಮರಿ ಗುಣ ಬಹುಮುಖ್ಯ ಕಾರಣ. ಇದರ ಜೊತೆಗೆ ಅವರ ಖಾಯಂ ಸಂಗಾತಿಯಾಗಿರುವ ಬಡತನ ಮತ್ತೊಂದು ಕಾರಣ. ಬಡತನದ ಮುಖಗಳೇ ಆಗಿರುವ ಅನಕ್ಷರತೆ ಮತ್ತು ಅನಾರೋಗ್ಯ ಪಿಂಜಾರರು ಗಳಿಸಿರುವ ಸಂಪತ್ತು. ನಮ್ಮ ದೇಶದ ಎಲ್ಲ ಹಿಂದುಳಿದವರ ಈ ಪರಿಯ ಬದುಕು ಅವರು ಸಂಘಟಿತರಾಗಲು ಇರುವ ಬಹುಮುಖ್ಯ ತೊಡಕು. ಮೇಲ್ಜಾತಿಗಳು ಭೂಮಿಯ ಒಡೆತನದ ಕಾರಣದಿಂದಾಗಿ ಸಾಮಾನ್ಯ ಹಾಗೂ ಧಾರ್ಮಿಕ ಶಿಕ್ಷಣ ಪಡೆದು ಜಾಗೃತರಾಗಿ ಸಂಘಟನೆಗೆ ಆದ್ಯತೆ ನೀಡುತ್ತವೆ. ಈ ಮೂಲಕ ರಾಜ್ಯಾಧಿಕಾಋದ ಮೇಲೆ ಪ್ರಬಲವಾದ ಒತ್ತಡವನ್ನುಂಟು ಮಾಡುವಂತಹ ಜನಬಲದ ಪ್ರದರ್ಶನ ಮಾಡುತ್ತವೆ. ಕೆಳಜಾತಿಗಳು ಅಸಂಘಟಿತವಾಗಿರುವುದರ ಎಲ್ಲ ಲಾಭಗಳನ್ನು ಅವು ಪಡೆಯುತ್ತವೆ. ಹೀಗಾಗಿ ಪಿಂಜಾರರ ಸಂಘಟನೆಗಿರುವ ಮಹತ್ವವನ್ನು ಇಲ್ಲಿ ಸೂಚಿಸುತ್ತಾ ಸಂಘಟನೆಯ ಮೂಲಕವೇ ಆರ್ಥಿಕ – ಸಾಮಾಜಿಕ ಉನ್ನತಿಯನ್ನು, ರಾಜಕೀಯ ಪ್ರಾತಿನಿಧ್ಯವನ್ನು ಪಡೆಯುವುದು ಸಾಧ್ಯ ಮತ್ತು ಅದರಿಂದ ಮಾತ್ರವೇ ವಿಶಿಷ್ಟ ಸಾಂಸ್ಕೃತಿಕ ಭಿತ್ತಿಗಳನ್ನು ರಕ್ಷಿಸಿಕೊಳ್ಳುವ ಅರ್ಥಪೂರ್ಣ ಪ್ರಯತ್ನವನ್ನು ಮಾಡಬಹುದು ಎಂದು ಯೋಚಿಸಲು ಈ ಅಧ್ಯಯನ ಸಹಕಾರಿಯಾಗ – ಬಹುದೆಂದು ನಂಬಲಾಗಿದೆ.

ವಿಶೇಷವೆಂದರೆ ಪಿಂಜಾರರಲ್ಲಿ ಧಾರ್ಮಿಕ ಶಿಕ್ಷಣ ಪಡೆಯುವವರ ಸಂಖ್ಯೆ ತುಂಬಾ ಕಡಿಮೆ. ಮುಸ್ಲಿಮರಲ್ಲಿ ಸಾಮಾನ್ಯ ಶಿಕ್ಷಣಕ್ಕಿಂತ ಧಾರ್ಮಿಕ ಶಿಕ್ಷಣಕ್ಕೆ ಆದ್ಯತೆ ಜಾಸ್ತಿ. ಪಿಂಜಾರರು ಸಾಮಾನ್ಯ ಶಿಕ್ಷಣವನ್ನು ಮುಂದುವರಿಸಲಾಗದೇ ಮತ್ತದೇ ಮೂಲ ಕಸುಬಿಗೆ ಹಿಂದಿರುಗುವವರು ಬಹಳ. ಆಧುನೀಕರಣದ ಫಲವಾಗಿ ಹಾಸಿಗೆ, ದಿಂಬು ತಯಾರಿಸುವ ಕೈಗಾರಿಕೆಗಳು ಉಳ್ಳವರ ಪಾಲಾಗಿವೆ. ಪಿಂಜಾರರ ಹಳೆಯ ರೀತಿಯ ಹಾಸಿಗೆ ತಯಾರಿಕೆಗೆ ಬೇಡಿಕೆ ಇಲ್ಲವಾದಂತೆ ಸಣ್ಣಪುಟ್ಟ ವ್ಯಾಪಾರ, ಕೈಕಸುಬುಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಅವರು ಮತ್ತಷ್ಟು ಚದುರಿಹೋಗಿದ್ದಾರೆ. ಕಲಾಯ ಮಾಡುವುದು, ಕೂದಲು ಮಾರುವುದು, ಕೊಂಬು ಹೆರೆಯುವುದ, ಬಳೆ ವ್ಯಾಪಾರ, ಹಣ್ಣು ತರಕಾರಿ ಮಾರಾಟ, ಹಮಾಲಿ ಕೆಲಸ, ಕೂಲಿ-ನಾಲಿ ಮಾಡುವುದು, ಬಡಗಿತನ, ಕಮ್ಮಾರಿಕೆ, ಮೀನು ಹಿಡಿಯುವುದು, ಹಲ್ಲೆ ಕಟ್ಟುವುದು ಹೀಗೆ ಹತ್ತು ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಪಿಂಜಾರರು ಕರ್ನಾಟಕದಾದ್ಯಂತ ಹರಡಿ- ಹೋಗಿದ್ದಾರೆ. ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಪಡೆದವರು ಇದೀಗ ವಿರಳವಾಗಿ ಕಂಡು – ಬರುತ್ತಾರೆ. ಆದರೆ ಅಕ್ಷರ ಲೋಕದ ಹೊರಗುಳಿದು ಹತ್ತಿ ಹಾಗೂ ಹಾಸಿಗೆ ಬಟ್ಟೆ ಇಟ್ಟುಕೊಂಡು ಸೈಕಲ್ ತುಳಿಯುತ್ತ ಊರೂರು ಅಲೆಯುವ ಪಿಂಜಾರರು ಮತ್ತವರ ಜೀವನದ ಸ್ವರೂಪವನ್ನು ವಿವರವಾಗಿ ತಿಳಿಯುವುದು ಈ ಅಧ್ಯಯನದ ಪ್ರಧಾನ ಉದ್ದೇಶವಾಗಿದೆ.

ಪಿಂಜಾರರ ವೈವಾಹಿಕ ಸಂಬಂಧ ಮುಸ್ಲಿಮರ ನಡುವೆ ನಡೆಯುವುದಿಲ್ಲ. ತಂತಮ್ಮೊಳಗೆ ಹೆಣ್ಣೆ ತಂದುಕೊಳ್ಳುವ ಪರಿಪಾಠವಿರುವ ಪಿಂಜಾರರ ವೈವಾಹಿಕ ವಿವಾಹದ ರೀತಿ – ರಿವಾಜುಗಳು ಮುಸ್ಲಿಮರಿಗಿಂತ ಭಿನ್ನವಾಗಿವೆ. ಪೌರೋಹಿತ್ಯ ಹಾಗೂ ನೋಂದಾವಣಿಯ ರೀತಿಗಳನ್ನು ಇಸ್ಲಾಂ ಧರ್ಮಾನುಸಾರವಾಗಿ ನಡೆಸಿದರೂ ಮುಸ್ಲಿಮರಲ್ಲಿನ ಹಾಗೆ ಅಣ್ಣನ ಮಗಳು, ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳನ್ನು ಮದುವೆಯಾಗುವ ಪರಿಪಾಠ ಪಿಂಜಾರರಲ್ಲಿಲ್ಲ. ಹಾಗೆಯೇ ಸ್ವಂತ ಅಕ್ಕನ ಮಗಳನ್ನು ಕೂಡ ತಂದುಕೊಳ್ಳುವುದಿಲ್ಲ. ಹಿಂದೂ ಮತ್ತು ಇಸ್ಲಾಂ ಎರಡೂ ಧರ್ಮದಿಂದ ತಮಗೆ ಬೇಕಾದದ್ದನ್ನು ಆಯ್ಕೆ ಮಾಡಿಕೊಂಡು ಆಚರಣೆಯಲ್ಲಿ ಉಳಿಸಿಕೊಂಡಿರುವ ಪಿಂಜಾರರು ಈ ಕಾರಣಕ್ಕಾಗಿಯೇ ಉಭಯ ಸಂಸ್ಕೃತಿಯ ಪ್ರತೀಕವಾಗಿದ್ದಾರೆ. ಪಿಂಜಾರರು ತಮ್ಮೊಳಗೇ ನಡೆಸಿಕೊಳ್ಳುವ ಮದುವೆಯಿಂದಾಗಿ ತಮ್ಮ ಬಂಧು – ಬಾಂಧವರು ಯಾವ ಊರಲ್ಲಿ ನೆಲೆಸಿದ್ದಾರೆ, ಎಷ್ಟು ಜನರಿದ್ದಾರೆ ಎಂದೆಲ್ಲಾ ಸ್ಥಳೀಯ ವಿವರಗಳನ್ನು ಕೊಡುತ್ತಾರೆ. ಹಾಗಾಗಿ ಈ ಜನಸಂಖ್ಯೆಯ ವಿವರಗಳು ಎಲ್ಲೂ ಕರಾರುವಕ್ಕಾಗಿ ಲಭ್ಯ – ವಾಗುವುದಿಲ್ಲ. ಅಲ್ಲದೆ ಸರ್ಕಾರಿ ದಾಖಲೆಗಳಲ್ಲು ಕೂಡ ಈ ಹಿಂದೆ ತಿಳಿಸಿದಂತೆ ಪಿಂಜಾರರ ಜಾತಿ, ಜನಸಂಖ್ಯೆ, ಅವರಲ್ಲಿನ ಸಾಕ್ಷರತೆಯ ಪ್ರಮಾಣ, ಅವರ ಸಾಮಾಜಿಕ, ರಾಜಕೀಯ ಪ್ರಗತಿ ಇತ್ಯಾದಿ ವಿವರಗಳು ನಮೂದಾಗಿರುವುದಿಲ್ಲ. ಪಿಂಜಾರರ ಸಂಘಟನೆ ಅಸ್ತಿತ್ವಕ್ಕೆ ಬಂದ ನಂತರ ಉಂಟಾದ ಸಮಾವೇಶದಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಸಂಗ್ರಹಿಸಿ ಹೇಳುವುದಾದರೆ ಕರ್ನಾಟಕದಲ್ಲಿ ಪಿಂಜಾರರ ಅಂದಾಜು ಜನಸಂಖ್ಯೆ ಹತ್ತರಿಂದ ಹನ್ನೆರಡು ಲಕ್ಷದವರೆಗೆ ಇದೆ. ಪಿಂಜಾರರ ಸಂಘ ತಾನು ನೋಂದಾಯಿಸಿಕೊಂಡ ತನ್ನ ಸದಸ್ಯರ, ಅವರ ಮನೆತನದ ವಿವರಗಳನ್ನು ಗಮನಿಸಿದರೆ ಪಿಂಜಾರರು ಈ ಪ್ರಮಾಣದಲ್ಲಿದ್ದೂ ಹಿಂದುಳಿದಿರಲು ಕಾರಣಗಳನ್ನು ತಿಳಿಯಬಹುದಾಗಿದೆ.

ಇದುವರೆಗೆ ಪಿಂಜಾರ ಜನಾಂಗದ ಸಾಂಸ್ಕೃತಿಕ ಆವರಣವನ್ನು ಪ್ರವೇಶಿಸುವುದಕ್ಕೆ ಅಗತ್ಯವಾದ ಅವರ ಮೂಲ, ವೃತ್ತಿ, ಜನಸಂಖ್ಯಾ ಬಾಹುಳ್ಯವಿರುವ ಪ್ರದೇಶಗಳು ಮತ್ತು ಮತ್ತು ಭಾಷೆಯ ಕುರಿತಾಗಿ ತಿಳಿದುಕೊಂಡಂತಾಯಿತು. ಇನ್ನು ಮುಂದೆ ಈ ಜನಾಂಗದ ಮಹಿಳೆಯನ್ನು ಕೇಂದ್ರವನ್ನಾಗಿಟ್ಟುಕೊಂಡು ಅವಳ ಕೌಟುಂಬಿಕ, ಸಾಮಾಜಿಕ, ರಾಜಕಿಯ ಹಾಗೂ ಸಾಂಸ್ಕೃತಿಕ ಕ್ರಿಯಾಶಿಲತೆಯನ್ನೂ, ಅವಳು ಎದುರಿಸುವ ಒಟ್ಟಾರೆ ಸವಾಲುಗಳನ್ನು ವಿಶ್ಲೇಷಿಸುವ ಪ್ರಯತ್ನವನ್ನು ಮಾಡಬಹುದಾಗಿದೆ.

ಮೊದಲಿಗೆ ಪಿಂಜಾರ ಜನಾಂಗದ ಕುಟುಂಬಗಳ  ಸ್ವರೂಪವನ್ನು ತಿಳಿದುಕೊಳ್ಳಬಹುದು. ಸಾಮಾನ್ಯವಾಗಿ ಭಾರತೀಯ ಸಾಮಾಜಿಕ ನೆಲೆ ಪುರುಷ ಪ್ರಧಾನವಾದುದು. ಪಿಂಜಾರರ ಸಂದರ್ಭದಲ್ಲಿಯೂ ಪುರುಷ ಪ್ರಧಾನ ಕುಟುಂಬಗಳದೇ ಪಾರುಪತ್ಯ. ಕೈಗಾರಿಕೆಗಳು ಭಾರತೀಯ ಆರ್ಥಿಕ ವ್ಯವಸ್ಥೆಯನ್ನು ಪ್ರವೇಶಿಸಿದ ನಂತರ ಸಮಾಜದಲ್ಲಿನ ಅವಿಭಕ್ತ ಕುಟುಂಬಗಳ ವಿಘಟನೆ ಆರಂಭವಾಯಿತು. ಅವಿಭಕ್ತ ಎನ್ನುವುದು ತಿಳಿದಿರುವ ಸಂಗತಿಯಾಗಿದೆ. ಪಿಂಜಾರರ ಕುಟುಂಬಗಳು ಇದಕ್ಕೆ ಹೊರತಾಗಿಲ್ಲ.

ಕುಟುಂಬ ಎಂದರೆ ಗಂಡ – ಹೆಂಡತಿ, ಮಕ್ಕಳು-ಮರಿಗಳು ಎಂಬ ಸೀಮಿತ ಅರ್ಥದ ಘಟಕ ಸಮಾಜದ ಪ್ರಾಥಮಿಕ ಸ್ವರೂಪದ್ದು. ಇಂಥ ಕುಟುಂಬಗಳು ಹತ್ತು-ಹಲವು ಸೇರಿ ಒಂದು ಸಮಾಜವಾಗಿದೆ. ಸಮಾಜದ ಈ ಬಗೆ ಕೂಡ ಹಿಂದೆ ಹೇಳಿದ ವಿಶಾಲಾರ್ಥದಲ್ಲಿ ಕೂಡಿಬಾಳುವ ರೂಪದ್ದು. ಆದರೆ ಲಿಪಿಯ ಆವಿಷ್ಕಾರದ ನಂತರ ಸಮಾಜ ಎನ್ನುವುದು ಪರಿಸರ, ಪ್ರಾದೇಶಿಕತೆ ಬಣ್ಣ, ಉಚ್ಛ – ನೀಚ ಇತ್ಯಾದಿಗಳ ನೆಲೆಯಲ್ಲಿ ಒಡೆದು ಸಂಕುಚಿತಾರ್ಥದ ಅನೇಕ ಸಮಾಜಗಳಾಗಿ ಹೋಯಿತು. ಇನ್ನೂ ಮುಂದೆ ಹೋಗಿ ಪ್ರಾಕೃತಿಕ ನಿಗೂಢಗಳನ್ನು ಅರಿಯಲು ಯತ್ನಿಸಿದಂತೆಲ್ಲಾ ಮನುಷ್ಯನಿಗೆ ವಿಸ್ಮಯ, ಕುತೂಹಲ ಮತ್ತು ಭಯಮಿಶ್ರಿತ ಭಾನೆಗಳಿಂದಾಗಿ ಹುಟ್ಟಿಕೊಂಡ ದೇವರು – ದಿಂಡರು – ದೆವ್ವದ ಬಗೆಗಿನ ಕಲ್ಪನೆಗಳಿಂದ ಅನೇಕ ಸಮಾಜಗಳು ಜಾತಿ ಉಪಜಾತಿಗಳಾಗಿ ಛಿದ್ರಗೊಂಡುಬಿಟ್ಟವು. ಹೀಗೆ ಮನುಷ್ಯ ಇಡಿ – ಯಾಗಿದ್ದವನು ಬಿಡಿಯಾಗಿ ತನ್ನದೇ ಗುಂಪಿನ ರಕ್ಷಣೆಗೆ ಮುಂತಾದ ಕತೆಯೇ ಮನೆ – ಮಠ, ಆಸ್ತಿ – ಅಂತಸ್ತುಗಳ ಅಧ್ಯಯನವಾಗಿದೆ. ಒಟ್ಟು ಪ್ರಕೃತಿಯ ಭಾಗವಾಗಿದ್ದ ಮನುಷ್ಯ ಬರಬರುತ್ತಾ ತನ್ನವರಿಗಾಗಿ, ತನ್ನ ರಕ್ತ ಸಂಬಂಧಿಗಳಿಗಾಗಿ ಅದೇ ಪ್ರಕೃತಿಯ ಪಾಲನ್ನು ಹಂಚಿಕೊಂಡು ಅದರ ಒಡೆಯನಾಗಬಯಸಿದ ಕತೆಯೇ ಸಮಾಜ – ಕುಟುಂಬಗಳ ಅಧ್ಯಯನ. ಎಂದೆಂದಿಗೂ ಪ್ರಕೃತಿಯ ದಾಸಾನುದಾಸನಾಗಿರಬೇಕಾದ ಮನುಷ್ಯ ತನ್ನ ಸ್ವಾರ್ಥಪರತೆಯ ಕಾರಣಕ್ಕಾಗಿ ಈ ಭೂಮಿಗೆ ಬೇಲಿ ಹಾಕಲಾರಂಭಿಸಿದ. ಗಾಳಿಗೆ ಗೋಡೆ ಕಟ್ಟಲಾರಂಭಿಸಿದ. ಬೆಳಕಿಗೆ ಕಿಟಕಿ – ಬಾಗಿಲುಗಳನ್ನು ಜೋಡಿಸಿದ. ನೀರಿಗೆ ಕಟ್ಟೆ ಕಟ್ಟಿದ. ಈ ಯಾವುದನ್ನೂ ಮಾಡದ ಆದಿಮಾನವ ಪ್ರಕೃತಿ – ಯೊಂದಿಗೆ ಪ್ರತಿಸ್ಪಂದಿಸುತ್ತಾ ಸ್ವಚ್ಛಂದವಾಗಿ ಬದುಕುತ್ತಿದ್ದ. ಆದರೆ ನಾಗರಿಕ ಮಾನವ ಪ್ರಕೃತಿ – ಯನ್ನು ತನಗಾಗಿ ಬಳಸಿಕೊಳ್ಳುವ ಪ್ರಯತ್ನದಲ್ಲಿ ಸ್ವಾತಂತ್ರ‍್ಯವನ್ನು ಕಳೆದುಕೊಂಡುದರ ಚರಿತ್ರೆಯೇ ಸಮಾಜ ಮತ್ತು ಕುಟುಂಬದ ಅಧ್ಯಯನ. ಈ ಹಿನ್ನೆಲೆಯಲ್ಲಿ ಪಿಂಜಾರ ಜನಾಮಗದ ಸಮಾಜಿಕ ಶ್ರೇಣಿ ಹಾಗೂ ಕೌಟುಂಬಿಕ ಅಧ್ಯಯನವನ್ನು ಮಾಡಬಹುದಾಗಿದೆ.

ಸಮಾಜ ಎನ್ನುವುದನ್ನು ಅದರ ಸೀಮಿತ ಅರ್ಥದಲ್ಲಿ, ಅಂದರೆ ಇಡೀ ಮಾನವ ಸಮುದಾಯದ ಒಟ್ಟಾರೆ ಸ್ವರೂಪದ ಹೊರತಾದ ಆರ್ಥಿಕ ಕಾರಣಕ್ಕಾಗಿ ಒಡೆದುಹೋದ ಸಣ್ಣ ಗುಂಪು ಎನ್ನುವ ಅರ್ಥದಲ್ಲಿ ಇಲ್ಲಿ ಅಧ್ಯಯನಕ್ಕೆ ತೊಡಕಾಗಿದೆ. ಆರ್ಥಿಕ ಕಾರಣಗಳ ಜೊತೆಗೆ ಪರಿಸರ, ಭಾಷೆ, ಧರ್ಮ, ಜಾತಿ, ಬಣ್ಣ ಮೊದಲಾದ ಕಾರಣಗಳೂ ಇಲ್ಲಿರುವುದು ನಿಜವಾದರೂ ಮನುಷ್ಯ ಚಿಕ್ಕ ಘಟಕವಾಗಿ ಬದುಕಬಯಸುವುದು ಸುಖದ ಅಪೇಕ್ಷೆಯಿಂದ. ಈ ಸುಖವನ್ನು ಆರ್ಥಿಕ ನೆಲೆಯಲ್ಲಿ ವ್ಯಾಖ್ಯಾನ ಮಾಡುವ ರೂಢಿಯೇ ಇರುವುದರಿಂದ ಸಮಾಜದ ಅಧ್ಯಯನ ಪ್ರಧಾನವಾಗಿ ಈ ನೆಲೆಯಲ್ಲಿಯೇ ನಡೆಯಬೇಕಾಗಿದೆ.

ಪಿಂಜಾರರ ಸಮಾಜ ಮುಖ್ಯವಾಗಿ ಇಸ್ಲಾಂ ಧರ್ಮದ ಆವರಣದಲ್ಲಿ ಹರಡಿಕೊಂಡಿದೆ. ಭಾರತೀಯ ಸಂದರ್ಭದಲ್ಲಿ ಇಸ್ಲಾಂ ಧರ್ಮ ಗ್ರಹಿಕೆಯ ನೆಲೆಗಳು ವಿಚಿತ್ರವಾಗಿವೆ. ಅದು ಮುಖ್ಯವಾಗಿ ಭಾರತೀಯ ಪುರೋಹಿತಶಾಹಿ ಮನಸ್ಸಿನ ವ್ಯಾಖ್ಯಾನವಾಗಿದೆ. ಇಸ್ಲಾಂನ ಆಗಮನದ ಸಂದರ್ಭದಲ್ಲಿ ವೈದಿಕ ಮನಸ್ಸಿನ ತಳಮಳವನ್ನು ಗುರುತಿಸುವ ಪ್ರಯತ್ನವನ್ನು ಈ ಹಿಂದೆ ಮಾಡಲಾಗಿದೆ. ನಂತರ ಇಸ್ಲಾಂ ಭಾರತೀಯ ಸಮಾಜ ಸಂಸ್ಕೃತಿಯ ಮೇಲೆ ವಿಶೇಷವಾದ ಪ್ರಭಾವ ಹಾಗೂ ಪರಿಣಾಮಗಳನ್ನು ಬೀರುತ್ತಾ ಇಲ್ಲಿನ ಬದುಕಿನ ಭಾಗವಾಗಿದ್ದು ಇತಿಹಾಸ. ಆದರೆ ಭಾರತೀಯ ವೈದಿಕ ಮನಸ್ಸು ಭಾರತದ ಮೇಲೆ ರಾಜಕೀಯ ದಾಳಿ ಮಾಡಿಕೊಂಡು ಬಂದ ಕೆಲವು ಆಕ್ರಮಣಕಾರಿ ಮುಸಲ್ಮಾನ ದೊರೆಗಳ ನೆಪದಲ್ಲಿ ಇಡೀ ಇಸ್ಲಾಂ ಧರ್ಮವನ್ನೇ ಆಕ್ರಮಣಶೀಲ ಸ್ವರೂಪದ್ದೆಂಬಂತೆ ಬಿಂಬಿಸಿತು. ತಾನು ರೂಪಿಸಿಕೊಂಡು ಬಂದ ಜಾತಿವ್ಯವಸ್ಥೆಯ ಬೇರುಗಳು ಇಸ್ಲಾಂ ಆಗಮನದಿಂದ ಶಿಥಿಲವಾಗತೊಡಗಿದುದರ ಪರಿಣಾಮವಾಗಿ ಅದರ ಮಾನವೀಯ ಮುಖವನ್ನು ವಿರೂಪಗೊಳಿಸುವ ಕೆಲಸವನ್ನು ಈ ಮನಸ್ಸು ವ್ಯವಸ್ಥಿತವಾಗಿ ಮಾಡಿಕೊಂಡು ಬಂದಿತು. ಈ ಹಿನ್ನೆಲೆಯಲ್ಲಿ ಇಸ್ಲಾಂ ಎಂದರೆ ಏಕದೇವತಾರಾಧನೆ, ನಿರಾಕಾರ ದೈವರೂಪ, ಜಾತಿಗಳೇ ಇಲ್ಲದಿರುವ ಸರ್ವಸಮಾನ ಭಾವನೆ ಮೊದಲಾದವುಗಳೆಲ್ಲಾ ನೇಪಥ್ಯಕ್ಕೆ ಸರಿದು ಹಿಂದೂಗಳ ವಿರುದ್ಧ ದಾಳಿ ಮಾಡುವುದಕ್ಕಾಗಿಯೇ ರೂಪುಗೊಂಡ, ಮುರಿಯದ ಒಗಟ್ಟಿನಿಂದ ಸರ್ವಸನ್ನದ್ಧವಾದ ಸಂಘಟನೆ ಎಂಬ ಗ್ರಹಿಕೆಯೇ ಬಲವಾಗುವಂತೆ ನೋಡಿಕೊಳ್ಳಲಾಯಿತು. ಅಂದರೆ ಪ್ರಜ್ಞಾಪೂರ್ವಕವಾಗಿ ಇಸ್ಲಾಂ ಧಾರ್ಮಿಕಾವರಣದ ಒಳಗಿನ ವಿಭಿನ್ನ ಪಂಥ ಪಂಗಡಗಳನ್ನು ಅಲಕ್ಷಿಸಿ ಮುಸ್ಲಿಮರೆಂದರೆ ಧಾರ್ಮಿಕ ವಿಷಯದಲ್ಲಿ ಭಿನ್ನಾಭಿಪ್ರಾಯಗಳೇ ಇಲ್ಲದವರೆಂತಲೂ ಧರ್ಮರಕ್ಷಣೆಗಾಗಿ ಎಂಥ ಸಂದರ್ಭದಲ್ಲಿಯೂ ಹಿಂಸಾತ್ಮಕ ಹಾಗೂ ಸಂಘಟಿತ ಹೋರಾಟ ನಡೆಸುವ ಮತಾಂಧರು ಎಂಬಂತೆಯೂ ಚಿತ್ರಿಸಲಾಯಿತು. ವಾಸ್ತವವಾಗಿ ಇಸ್ಲಾಂ ಧರ್ಮ ಕೂಡ ಅನೇಕ ಜಾತಿ, ಪಂಗಡಗಳಿಂದ ವಿವಿಧ ಸಮಾಜಗಳಿಂದ ತುಂಬಿ-ಹೋಗಿದೆ ಎಂಬುದು ಪಿಂಜಾರರ ಸಮಾಜದ ಅಧ್ಯಯನದ ಸಮಯದಲ್ಲಿ ತಿಳಿಯುತ್ತದೆ.

ಇಸ್ಲಾಂ ಧಾರ್ಮಿಕ ಒಳಾವರಣದಲ್ಲಿ ಮುಖ್ಯವಾಗಿ ಸುನ್ನಿ ಮತ್ತು ಷಿಯಾ ಎಂಬ ಸಾಮುದಾಯಿಕ ವಿಂಗಡಣೆಗಳಿವೆ. ಇವತ್ತಿಗೂ ಜಾಗತಿಕ ಸಂದರ್ಭದಲ್ಲಿ ಈ ಎರಡು ಸಮುದಾಯಗಳ ನಡುವಿನ ಸಾಮರಸ್ಯದ ಕೊರತೆ ಒಡೆದು ಕಾಣುತ್ತಿರುತ್ತದೆ. ಈ ಎರಡೂ ಸಮುದಾಯಗಳು ’ಅಲ್ಲಾಹ್’ ನನ್ನೇ ಪರಮದೈವ ಎಂಬುದನ್ನು ನಿರ್ವಿವಾದವಾಗಿ ಒಪ್ಪಿಕೊಳ್ಳುತ್ತವಾದರೂ ’ಅಲ್ಲಾಹ್‌’ನ ಪ್ರಾರ್ಥನೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳನ್ನು ಒಳಗೊಂಡಿವೆ. ಧರ್ಮದ ಅಸ್ತಿತ್ವಕ್ಕೆ ಅಸ್ತಿಕತೆಯೇ ಮೂಲವಾದರೂ ಪ್ರಾರ್ಥನೆ, ಆಚರಣೆ ಮೊದಲಾದವುಗಳ ವಿಚಾರದಲ್ಲಿ ವ್ಯತ್ಯಯಗಳು ಉಂಟಾಗುತ್ತವೆ. ಈ ವ್ಯತ್ಯಾಸಗಳೇ ಸಮುದಾಯಗಳ ನಡುವಿನ ಸಂಘರ್ಷಕ್ಕೆ ಕಾರಣವಾಗುತ್ತವೆ. ಅದರಲ್ಲೂ ಮನುಷ್ಯ ಸ್ವಭಾವವೇ ಆದ ’ತನ್ನದೇ ಸರಿ’ ಎಂಬ ಮನೋಭಾವದಿಂದಾಗಿ ಆಸ್ತಿಕತೆಯು ನಾನಾ ರೂಪಗಳಾಗಿ ಒಡೆದುಹೋಗುತ್ತದೆ. ಇಸ್ಲಾಂನ ಪ್ರಕಾರ ’ಅಲ್ಲಾ’ನ ಪ್ರಾರ್ಥನೆಗೆ ಇಂತಹದ್ದೇ ನಿರ್ದಿಷ್ಟ ಜಾಗ ಬೇಕು ಎಂಬಂತೇನೂ ಇಲ್ಲ. ಇದು ವಾಸ್ತವವಾಗಿ ಜಂಗಮ ಸ್ವರೂಪದ ಧಾರ್ಮಿಕ ತಿಳುವಳಿಕೆಯಾಗಿದೆ. ಆದರೆ ಪ್ರಾರ್ಥನೆಗಾಗಿ ಕಿಬ್ಲಾದ ಕಡೆ ತಿರುಗಬೇಕೆಂಬ ನಂಬಿಕೆ ಮೇಲಿನ ಎರಡೂ ಸಮುದಾಯಗಳಲ್ಲಿದೆ.

ಸುನ್ನಿ ಮತ್ತು ಷಿಯಾ ಎಂಬ ಎರಡು ಪ್ರಧಾನ ಕವಲುಗಳ ಜೊತೆಗೆ ಇಸ್ಲಾಂ ಸಮುದಾಯದಲ್ಲಿ ಶೇಕ್, ಸೈಯದ್, ಪಠಾಣ್, ಮೊಗಲ್, ಲಬ್ಬೆ, ದೆಹರಾ, ಬೊಹರಾ, ಕಂಡುಬರುತ್ತದೆ. ಈ ಎಲ್ಲಾ ಸಮುದಾಯಗಳು ತನ್ನಷ್ಟಕ್ಕೆ ತಾನು ಶ್ರೇಷ್ಠ ಎಂದೂ, ತಾನೇ ನಿಜವಾದ ಇಸ್ಲಾಂನ ಅನುಯಾಯಿ ಎಂದು ನಂಬುತ್ತವೆ. ಪ್ರವೇಶ ಬದಲಾದಂತೆ ಈ ಸಮುದಾಯಗಳ ನಡುವಿನ ಭಾಷೆಯೂ ಬೇರೆ. ಇಂಡಿಯಾದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಹರಡಿರುವಂತೆ ಜಗತ್ತಿನ ಎಲ್ಲ ಮುಸ್ಲಿಮರ ಭಾಷೆ ’ಉರ್ದು’ ಎನ್ನುವುದು ನಿಜವಲ್ಲ. ಆದರೆ ಇಸ್ಲಾಂನ ಈ ಸಮುದಾಯಗಳಲ್ಲಿ ಹುಟ್ಟು, ಮುಂಜಿ, ಮದುವೆ, ಸಾವು ಮುಂತಾದ ಆಚರಣೆಗಳು ಮತ್ತು ಅವುಗಳ ಅನುಸರಣೆಯ ವಿಚಾರದಲ್ಲಿ ಪ್ರಾದೇಶಿಕವಾಗಿ ಲಭ್ಯವಾಗುವ ಪರಿಕರಗಳ ಮಟ್ಟಿಗೆ ಸಣ್ಣಪುಟ್ಟ ವ್ಯತ್ಯಾಸಗಳಿರಬಹುದಾದರೂ ಬಹುಮಟ್ಟಿಗೆ ಏಕರೂಪದಿಂದ ಕೂಡಿವೆ. ಹಾಗೆಯೇ ಈ ಎಲ್ಲ ಸಮುದಾಯಗಳು ’ಅಲ್ಲಾಹ್‌’ನನ್ನು ಆತ್ಯಂತಿಕ ದೈವ ಎಂದು ನಂಬುವುದು ನಿಜವಾದ ಪ್ರಾರ್ಥನೆ (ನಮಾಜು)ಯ ವಿಧಿ ವಿಧಾನಗಳಲ್ಲಿ ಕೆಲವು ವಿಭಿನ್ನ ರೀತಿಯ ತಿಳುವಳಿಕೆಗಳಿವೆ. ಇಸ್ಲಾಂನ ಸಮುದಾಯಗಳಲ್ಲಿ ಸಾಮಾನ್ಯವಾಗಿ ದೇವರು ಮತ್ತು ಮನುಷ್ಯನ ನಡುವಿನ ಭಕ್ತಿಯ ಮಾಧ್ಯಮವಾಗಿರುವ ವ್ಯಕ್ತಿಯನ್ನು ಮುಲ್ಲಾ, ಮೌಲ್ವಿ, ಮುಜಾವರ ಎಂಬಿತ್ಯಾದಿ ಹೆಸರುಗಳಿಂದ ಗುರುತಿಸಲಾಗುತ್ತದೆ. ಸರಳವಾಗಿ ಹೇಳಬೇಕೆಂದರೆ ಈತ ಇಸ್ಲಾಂ ಪುರೋಹಿತ. ಎಲ್ಲ ಧಾರ್ಮಿಕ ಆಚರಣೆಗಳಲ್ಲಿ ಈತನ ಉಪಸ್ಥಿತಿ ಅನಿವಾರ್ಯ. ಹಿಂದೂ ಧಾರ್ಮಿಕ ಪುರೋಹಿತ ಸಾಮಾನ್ಯವಾಗಿ ಅಲ್ಲಿನ ವರ್ಣವ್ಯವಸ್ಥೆಯ ಮೊದಲ ಸಾಲಿನಲ್ಲಿ ಅಲಂಕೃತನಾಗಿರುವ ಬ್ರಾಹ್ಮಣನೇ ಆಗಿರುತ್ತಾನೆ. ಉಳಿದಂತೆ ಕ್ಷತ್ರಿಯ, ವೈಶ್ಯ, ಶೂದ್ರ ವರ್ಣಗಳ ಜನ ಎಷ್ಟೇ ವಿದ್ವತ್ತು ಅಂತಸ್ತುಗಳನ್ನು ಒಳಗೊಂಡಿದ್ದರೂ ಅವರ ಧಾರ್ಮಿಕ ಕ್ರಿಯೆ ಮತ್ತು ಆಚರಣೆಗಳಿಗೆ ವೈದಿಕ ಪುರೋಹಿತ ಬೇಕೇ ಬೇಕು. ಆದರೆ ಇಸ್ಲಾಂನಲ್ಲಿ ಧಾರ್ಮಿಕ ತಿಳುವಳಿಕೆಯುಳ್ಳ ಯಾರೇ ಆಗಿರಲಿ, ಆತ ಸ್ವಯಂ ಇಚ್ಛೆಯಿಂದ ಒಪ್ಪಿದ್ದಲ್ಲಿ ಧಾರ್ಮಿಕ ಆಚರಣೆಗಳನ್ನು ನೆರವೇರಿಸಕೊಡಬಲ್ಲ ಅಧಿಕಾರ ಹೊಂದಿರುತ್ತಾನೆ. ಹಿಂದೂ ಮತ್ತು ಇಸ್ಲಾಂ ಧರ್ಮಗಳ ಮೂಲಭೂತ ಗ್ರಹಿಕೆಯ ಬಹಳ ಮುಖ್ಯವಾದ ವ್ಯತ್ಯಾಸವೆಂದರೆ ಹಿಂದೂ ತಾತ್ವಿಕ ನೆಲೆ ಆಸ್ತಿಕ ಹಾಗೂ ನಾಸ್ತಿಕ ವಿಚಾರಧಾರೆ -ಗಳನ್ನು ಒಳಗೊಂಡಿದ್ದರೆ ಇಸ್ಲಾಂನಲ್ಲಿ ಸಂಪೂರ್ಣವಾದ ಆಸ್ತಿಕ ವಿಚಾರಧಾರೆಯಿದೆ. ಹಾಗೆ ನೋಡಿದರೆ ಭಾರತೀಯ ತತ್ವಶಾಸ್ತ್ರದಲ್ಲಿ ನಾಸ್ತಿಕವಾದದ ಒಂದು ದೊಡ್ಡ ಪರಂಪರೆಯೇ ಇದೆ. ಭಾರತದ ತಾತ್ವಿಕ ಇತಿಹಾಸದಲ್ಲಿ ಈ ನಿರೀಶ್ವರವಾದ ಅಲ್ಲಲ್ಲಿ ಕೆಲವು ಉಗ್ರರೀತಿಯ ಪ್ರತಿಭಟನೆ ಹಾಗೂ ಹಿಂಸೆಯನ್ನು ಎದುಸಿಸಿದೆಯಾದರೂ ತನ್ನ ವೈಚಾರಿಕ ಹಾಗೂ ಭೌತವಾದೀ ದೃಷ್ಟಿಕೋನಗಳ ಪರಿಣಾಮವಾಗಿ ಅಸಾಧಾರಣವಾದ ಗೌರವವನ್ನು ಉಳಿಸಿಕೊಂಡು ಬಂದಿದೆ. ಈ ರೀತಿಯಲ್ಲಿ ತನ್ನ ಗ್ರಹಿಕೆಗೆ ವಿರುದ್ಧವಾದ ಧಾರೆಯೊಂದನ್ನು ಗೌರವಿಸುವ, ಸಹಿಸುವ ನೆಲೆ ಇಸ್ಲಾಂನಲ್ಲಿ ಕಂಡುಬರುವುದಿಲ್ಲ.  ಇದೇನೇ ಇರಲಿ, ಇಸ್ಲಾಂನ ವಿಭಿನ್ನ ಸಮುದಾಯಗಳಲ್ಲಿ ಎಲ್ಲ ಧಾರ್ಮಿಕ ವಲಯದಲ್ಲಿರುವಂತೆ ಆಸ್ತಿಕತೆ, ಪ್ರೀತಿ, ನಂಬಿಕೆ, ವಿಶ್ವಾಸ, ಔದಾರ್ಯ, ತ್ಯಾಗ, ಸಿಟ್ಟು, ಸಣ್ಣತನ, ದ್ವೇಷ, ದುರಾಸೆಗಳು ಸಹಜವಾಗಿವೆ. ಹಿಂದೂ ಸಮುದಾಯದಲ್ಲಿ ಸಸ್ಯಾಹಾರ ಹಾಗೂ ಮಾಂಸಾಹಾರದ ಜನವರ್ಗಗಳಿರುವಂತೆ ಇಸ್ಲಾಂನಲ್ಲಿ ಎರಡೂ ಬಗೆಯ ಆಹಾರವನ್ನು ಸೇವಿಸುವ ಜನವರ್ಗಗಳಿವೆ. ಆದರೆ ಇಸ್ಲಾಂನಲ್ಲಿ ಪೂರ್ಣ ಸಸ್ಯಾಹಾರಿಗಳಾಗಲಿ, ಪೂರ್ಣ ಮಾಂಸಾಹಾರಿಗಳಾಗಲೀ ಇಲ್ಲ. ಹಿಂದೂ ಸಮುದಾಯಗಳೂ ಇರುವುದು ಕಂಡುಬರುತ್ತದೆ. ಈ ಎಲ್ಲಾ ಸಮುದಾಯಗಳು ತನ್ನಷ್ಟಕ್ಕೆ ತಾನು ಶ್ರೇಷ್ಠ ಎಂದೂ, ತಾನೇ ನಿಜವಾದ ಇಸ್ಲಾಂನ ಅನುಯಾಯಿ ಎಂದು ನಂಬುತ್ತವೆ. ಅಲ್ಲದೆ ಪರಸ್ಪರ ವೈವಾಹಿಕ ಸಮುದಾಯಗಳ ನಡುವಿನ ಭಾಷೆಯೂ ಬೇರೆ. ಇಂಡಿಯಾದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಹರಡಿರುವಂತೆ ಜಗತ್ತಿನ ಎಲ್ಲ ಮುಸ್ಲಿಮರ ಭಾಷೆ ’ಉರ್ದು’ ಎನ್ನುವುದು ನಿಜವಲ್ಲ. ಆದರೆ ಇಸ್ಲಾಂನ ಈ ಸಮುದಾಯಗಳಲ್ಲಿ ಹುಟ್ಟು, ಮುಂಜಿ, ಮದುವೆ, ಸಾವು ಮುಂತಾದ ಆಚರಣೆಗಳು ಮತ್ತು ಅವುಗಳ ಅನುಸರಣೆಯ ವಿಚಾರದಲ್ಲಿ ಪ್ರಾದೇಶಿಕವಾಗಿ ಲಭ್ಯವಾಗುವ ಪರಿಕರಗಳ ಮಟ್ಟಿಗೆ ಸಣ್ಣಪುಟ್ಟ ವ್ಯತ್ಯಾಸಗಳಿರಬಹುದಾದರೂ ಬಹುಮಟ್ಟಿಗೆ ಏಕರೂಪದಿಂದ ಕೂಡಿವೆ. ಹಾಗೆಯೇ ಈ ಎಲ್ಲ ಸಮುದಾಯಗಳು ’ಅಲ್ಲಾಹ್‌’ನನ್ನು ಅತ್ಯಂತಿಕ ದೈವ ಎಂದು ನಂಬುವುದು ನಿಜವಾದರೂ ಪ್ರಾರ್ಥನೆ (ನಮಾಜು)ಯ ವಿಧಿವಿಧಾನಗಳಲ್ಲಿ ಕೆಲವು ವಿಭಿನ್ನ ರೀತಿಯ ತಿಳುವಳಿಕೆಗಳಿವೆ.

ಇಸ್ಲಾಂನ ಸಮುದಾಯಗಳಲ್ಲಿ ಸಾಮಾನ್ಯವಾಗಿ ದೇವರು ಮತ್ತು ಮನುಷ್ಯನ ನಡುವಿನ ಭಕ್ತಿಯ ಮಾಧ್ಯಮವಾಗಿರುವ ವ್ಯಕ್ತಿಯನ್ನು ಮುಲ್ಲಾ, ಮೌಲ್ವಿ, ಮುಜಾವರ ಎಂಬಿತ್ಯಾದಿ ಹೆಸರುಗಳಿಂದ ಗುರುತಿಸಲಾಗುತ್ತದೆ. ಸರಳವಾಗಿ ಹೇಳಬೇಕೆಂದರೆ ಈತ ಇಸ್ಲಾಂ ಪುರೋಹಿತ. ಎಲ್ಲ ಧಾರ್ಮಿಕ ಆಚರಣೆಗಳಲ್ಲಿ ಈತನ ಉಪಸ್ಥಿತಿ ಅನಿವಾರ್ಯ. ಹಿಂದೂ ಧಾರ್ಮಿಕ ಪುರೋಹಿತ ಸಾಮಾನ್ಯವಾಗಿ ಅಲ್ಲಿನ ವರ್ಣ ವ್ಯವಸ್ಥೆಯ ಮೊದಲ ಸಾಲಿನಲ್ಲಿ ಅಲಂಕೃತನಾಗಿರುವ ಬ್ರಾಹ್ಮಣನೇ ಆಗಿರುತ್ತಾನೆ. ಉಳಿದಂತೆ ಕ್ಷತ್ರಿಯ, ವೈಶ್ಯ, ಶೂದ್ರ ವರ್ಣಗಳ ಜನ ಎಷ್ಟೇ ವಿದ್ವತ್ತು ಅಂತಸ್ತುಗಳನ್ನು ಒಳಗೊಂಡಿದ್ದರೂ ಅವರ ಧಾರ್ಮಿಕ ಕ್ರಿಯೆ ಮತ್ತು ಆಚರಣೆಗಳಿಗೆ ವೈದಿಕ ಪುರೋಹಿತ ಬೇಕೇ ಬೇಕು. ಆದರೆ ಇಸ್ಲಾಂನಲ್ಲಿ ಧಾರ್ಮಿಕ ತಿಳುವಳಿಕೆಯುಳ್ಳ ಯಾರೇ ಆಗಿರಲಿ, ಆತ ಸ್ವಯಂ ಇಚ್ಛೆಯಿಂದ ಒಪ್ಪಿದ್ದಲ್ಲಿ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿಕೊಡಬಲ್ಲ ಅಧಿಕಾರ ಹೊಂದಿರುತ್ತಾನೆ. ಹಿಂದೂ ಮತ್ತು ಇಸ್ಲಾಂ ಧರ್ಮಗಳ ಮೂಲಭೂತ ಗ್ರಹಿಕೆಯ ಬಹಳ ಮುಖ್ಯವಾದ ವ್ಯತ್ಯಾಸವೆಂದರೆ ಹಿಂದೂ ತಾತ್ವಿಕ ನೆಲೆ ಆಸ್ತಿಕ ಹಾಗೂ ನಾಸ್ತಿಕ ವಿಚಾರಧಾರೆಗಳನ್ನು ಒಳಗೊಂಡಿದ್ದರೆ ಇಸ್ಲಾಂನಲ್ಲಿ ಸಂಪೂರ್ಣ = ವಾದ ಆಸ್ತಿಕ ವಿಚಾರಧಾರೆಯಿದೆ. ಹಾಗೆ ನೋಡಿದರೆ ಭಾರತೀಯ ತತ್ವಶಾಸ್ತ್ರದಲ್ಲಿ ನಾಸ್ತಿಕವಾದದ ಒಂದು ದೊಡ್ಡ ಪರಂಪರೆಯೇ ಇದೆ. ಭಾರತದ ತಾತ್ವಿಕ ಇತಿಹಾಸದಲ್ಲಿ ಈ ನಿರೀಶ್ವರವಾದ ಅಲ್ಲಲ್ಲಿ ಕೆಲವು ಉಗ್ರರೀತಿಯ ಪ್ರತಿಭಟನೆ ಹಾಗೂ ಹಿಂಸೆಯನ್ನು ಎದುರಿಸಿದೆಯಾದರೂ ತನ್ನ ವೈಚಾರಿಕ ಹಾಗೂ ಭೌತವಾದೀ ದೃಷ್ಟಿಕೋನಗಳ ಪರಿಣಾಮವಾಗಿ ಅಸಾಧಾರಣವಾದ ಗೌರವವನ್ನು ಉಳಿಸಿಕೊಂಡು ಬಂದಿದೆ. ಈ ರೀತಿಯಲ್ಲಿ ತನ್ನ ಗ್ರಹಿಕೆಗೆ ವಿರುದ್ಧವಾದ ಧಾರೆಯೊಂದನ್ನು ಗೌರವಿಸುವ, ಸಹಿಸುವ ನೆಲೆ ಇಸ್ಲಾಂನಲ್ಲಿ ವಿಭಿನ್ನ ಸಮುದಾಯಗಳಲ್ಲಿ ಎಲ್ಲ ಧಾರ್ಮಿಕ ವಲಯದಲ್ಲಿರುವಂತೆ ಆಸ್ತಿಕತೆ, ಪ್ರೀತಿ, ನಂಬಿಕೆ, ವಿಶ್ವಾಸ, ಔದಾರ್ಯ, ತ್ಯಾಗ, ಸಿಟ್ಟು, ಸಣ್ಣತನ, ದ್ವೇಷ, ದುರಾಸೆಗಳು ಸಹಜವಾಗಿವೆ. ಹಿಂದೂ ಸಮುದಾಯದಲ್ಲಿ ಸಸ್ಯಾಹಾರ ಹಾಗೂ ಮಾಂಸಾಹಾರದ ಜನವರ್ಗಗಳಿರುವಂತೆ ಇಸ್ಲಾಂನಲ್ಲಿ ಎರಡೂ ಬಗೆಯ ಆಹಾರವನ್ನು ಸೇವಿಸುವ ಜನವರ್ಗಗಳಿವೆ. ಆದರೆ ಇಸ್ಲಾಂನಲ್ಲಿ ಪೂರ್ಣ ಸಸ್ಯಹಾರಿಗಳಾಗಲೀ, ಪೂರ್ಣ ಮಾಂಸಾಹಾರಿಗಳಾಗಲೀ ಇಲ್ಲ. ಹಿಂದೂ ಧರ್ಮದಲ್ಲಿ ಪೂರ್ಣ ಸಸ್ಯಹಾರಿಗಳಿದ್ದರೆ, ಪೂರ್ಣ ಮಾಂಸಹಾರಿಗಳಿಲ್ಲ. ಇಸ್ಲಾಂ ಧರ್ಮದಲ್ಲಿ ಮೇಲೆ ತಿಳಿಸಿದ ಸಮುದಾಯಗಳು ಸಾಮಾಜಿಕವಾಗಿ (ಬಡತನ-ಶ್ರೀಮಂತಿಕೆಯೆಂಬ ಆರ್ಥಿಕ ಅಂತಸ್ತುಗಳು ನಡುವೆಯೂ) ಮೇಲು-ಕೀಳು ಎಂಬ ತರ -ತಮದ ಭಾವನೆಯನ್ನು ಹೊಂದಿಲ್ಲ. ಹಿಂದೂ ಜಾತಿವ್ಯವಸ್ಥೆಯ ಪ್ರಧಾನ ನೆಲೆಯಾದ ಅಸಮಾನತೆಯಾಗಲೀ, ಅಸ್ಪೃಶ್ಯತೆಯಾಗಲೀ ಇಸ್ಲಾಂನಲ್ಲಿ ಇಲ್ಲ. ಅಲ್ಲಿ ಒಂದು ಜಾತಿಯಲ್ಲಿ ಹುಟ್ಟಿದ ಕಾರಣಕ್ಕೆ ಶ್ರೇಷ್ಠನೋ, ಕನಿಷ್ಠನೋ ಆಗಿಬಿಡುವ ಮಾನವ ಸಮುದಾಯ ಇಸ್ಲಾಂನಲ್ಲಿ ಹಾಗಾಗುವುದಿಲ್ಲ. ಆದರೆ ಇಸ್ಲಾಂನಲ್ಲಿ ನಂಬಿಕೆಯುಳ್ಳವನು, ಧಾರ್ಮಿಕ ತಿಳುವಳಿಕೆಯುಳ್ಳವನು ಗೌರವಿಸಲ್ಪಟ್ಟ ಹಾಗೆ ಅದರಿಂದ ಹೊರತಾದವನನ್ನು ತುಚ್ಛವಾಗಿ ನೋಡಲಾಗುತ್ತದೆ. ಹಿಂದೂ ಧರ್ಮದಲ್ಲಿ ಈ ಬಗೆಯ ತಿಳುವಳಿಕೆಯಿಂದ ಗೌರವ ಸಿಗಬಹುದಾದರೂ ತಿಳುವಳಿಕೆಯಿಲ್ಲದವನನ್ನು ಕೀಳಾಗಿ ನೋಡಲಾಗುವುದಿಲ್ಲ. ಇದನ್ನು ಧಾರ್ಮಿಕ ಉದಾರತೆ ಎನ್ನಬೇಕೋ ಏನೋ ಗೊತ್ತಿಲ್ಲ. ಇದು ಇಸ್ಲಾಂನಲ್ಲಿ ಅಷ್ಟಾಗಿ ಕಂಡುಬರುವುದಿಲ್ಲ.

ಇಸ್ಲಾಂನಲ್ಲಿ ಸಮುದಾಯಗಳ ಒಳಗೆ ಸಾಮಾನ್ಯ ಸಮಸ್ಯೆಗಳು ಎದುರಾದಾಗ ಅವುಗಳಿಗೆ ಪರಿಹಾರ ಸೂಚಿಸಿ ನ್ಯಾಯದಾನ ಮಾಡುವವನು ಆ ಸಮಾಜದ ’ಮೌಲ್ವಿಯೇ ಆಗಿರುತ್ತಾನೆ. ಹಿಂದೂ ಜಾತಿವ್ಯವಸ್ಥೆಯಲ್ಲಿ ಆಯಾ ಜಾತಿಯ ಮುಖಂಡ ಆ ಬಗೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಾನೆ. ಇಲ್ಲಿ ಪ್ರತಿಯೊಂದು ಜಾತಿ-ಉಪಜಾತಿಗೂ ತನ್ನದೇ ಆದ ರೀತಿ-ರಿವಾಜುಗಳಿರುತ್ತವೆ. ಅವುಗಳನ್ನು ಮೀರಿದಾಗ ಅದೇ ಸಂದರ್ಭದಲ್ಲಿ ತಕ್ಕ ಪರಿಹಾರ-ಗಳನ್ನು ಆ ಜಾತಿವ್ಯವಸ್ಥೆ ಕಂಡುಕೊಳ್ಳುತ್ತದೆ. ಇಸ್ಲಾಂನಲ್ಲಿ ಆರ್ಥಿಕ, ಸಾಮಾಜಿಕ ಸಮಸ್ಯೆಗಳು ಇತ್ಯರ್ಥಗೊಳ್ಳುವುದು ತೀರ ವೈಯಕ್ತಿಕ ನೆಲೆಯಲ್ಲಿ. ಆದರೆ ಇಸ್ಲಾಂನಲ್ಲಿ ಬಹುಪಾಲು ಧಾರ್ಮಿಕ ವಿಧಿ-ವಿಧಾನಗಳ ವಿಚಾರದಲ್ಲಿ ಉಂಟಾಗಬಹುದಾದ ವಿಕ್ಕಟ್ಟಿನ ಸಂದರ್ಭದಲ್ಲಿ ಉಗ್ರವಾದ ವಾದ-ವಿವಾದಗಳ ಮೂಲಕ ನ್ಯಾಯದಾನ ಮಾಡಲಾಗುತ್ತದೆ. ಹಿಂದೂ ಹಾಗೂ ಇಸ್ಲಾಂ ಧರ್ಮದಲ್ಲಿ ಬಹಳ ಮುಖ್ಯವಾದ ಆಹಾರ ಪದ್ಧತಿಯ ಆಚರಣೆ ಎಂದರೆ ಮಾಂಸಾಹಾರಕ್ಕೆ ಸಂಬಂಧಿಸಿದುದಾಗಿದೆ. ಹಿಂದೂಗಳಲ್ಲಿ, ಅದರಲ್ಲೂ ಮೇಲ್ಜಾತಿಗಳಲ್ಲಿ ದನದ ಮಾಂಸ ವರ್ಜ್ಯ ವಿಶೇಷವಾಗಿ ಗೋಮಾಂಸವನ್ನು ತಿನ್ನುವುದು ಪಾಪ ಎಂದೇ ಹಿಂದೂ ಧಾರ್ಮಿಕ ತಿಳುವಳಿಕೆ. ಆದರೆ ಹಿಂದೂ ಧರ್ಮದ ಕೆಳವರ್ಗವಾದ ಅಸ್ಪೃಶ್ಯರು ದನದ ಮಾಂಸವನ್ನು ತಿನ್ನುತ್ತಾರೆ. ಭಾರತೀಯ ಸಮಾಜದ ದಲಿತರ ಬಹಳ ಮುಖ್ಯವಾದ ಆಹಾರ ಪದ್ಧತಿ ಇದು. ನಿಜವಾಗಿಯೂ ದನಗಳ ಉಪಚಾರಕರು ರೈತರು ಮತ್ತು ದಲಿತರೇ. ಅವುಗಳ ಮೈತೊಳೆದು, ಕಾಲಿಗೆ ಬಿದ್ದು ಪೂಜೆಮಾಡುವವರು, ಸಗಣಿ ಹೊಡೆದು ಗ್ವಾತ ತುಂಬಿ ತಿಪ್ಪೆಗೆ ಹಾಕುವವರು. ಅವುಗಳಿಗೆ ನೀರು – ನಿಡೆಯ ದೇಕರಿಕೆ ಮಾಡುವವರು, ಅವುಗಳ ರಕ್ತಹೀರುವ ಉಣ್ಣೆ ಕಿತ್ತು ಮೈ ತುರಿಸುವವರು. ಅವುಗಳನ್ನು ಮತ್ತೊಬ್ಬರಿಗೆ ಮಾರುವಾಗ ತಬ್ಬಿಕೊಂಡು ಆಳುವವರು, ಹಲ್ಲೆ ಕಟ್ಟಿಸಿ ನೊಗ ಹೂಡಿ ಬಾರು ಕೋಲಿನಿಂದ ಹೊಡೆದು ಭೂಮಿ ಉಳುವವರು, ಕಾಲುಜ್ವರ, ಬಾಯಿಜ್ವರ ಬಂದಾಗ ಗೊಟ್ಟ ತುಂಬ ಔಷಧಿ ಹಾಕುವವರು. ಕೊನೆಗೆ ಅವುಗಳ ಮಾಂಸವನ್ನು ಪಾಲು ಹಾಕಿಕೊಂಡು ತಿನ್ನುವವರು ದಲಿತರೇ. ಆದರೆ ಮೇಲ್ಜಾತಿಗಳು ದನದ ಮಾಂಸವನ್ನು ಉಪಯೋಗಿಸುವುದಿಲ್ಲ. ವಿಶೇಷವೆಂದರೆ ಶೂದ್ರ ಜನಾಂಗದ ಕೆಲವು ಜಾತಿಗಳಲ್ಲಿ ಹಂದಿ ಮಾಂಸ ಬಳಕೆಯಲ್ಲಿದೆ. ಇನ್ನೂ ಕೆಲವು ಬುಡಕಟ್ಟು-ಗಳಿಗೆ ಮಾಂಸಾಹಾರವಷ್ಟೇ ಮುಖ್ಯ. ಆ ಪ್ರಾಣಿ, ಈ ಪ್ರಾಣಿ ಎಂಬ ಭೇದವಿಲ್ಲ ಹೀಗಾಗಿ ಹಿಂದೂ ಧರ್ಮದಲ್ಲಿ ತುಂಬಿಹೋಗಿರುವ ಈ ಮಿಶ್ರಾಹಾರದ ರೀತಿಗಳೇನೇ ಇರಲಿ, ಇಲ್ಲಿ ಕೆಲವರಿಗಂತೂ ಗೋವು ಪವಿತ್ರ, ಗೋಹತ್ಯೆ ಪಾಪ. ಇನ್ನೂ ಮುಂದುವರೆದು ಈ ಗೋವಿನ ಬಗೆಗಿನ ಭಾವನೆ ಯಾವ ಹಂತಕ್ಕೆ ಹೋಗಿದೆ ಎಂದರೆ ಅದು ಸಾಮಾಜಿಕ ಕ್ಷೋಭೆಯನ್ನುಂಟು ಮಾಡಿ ರಾಜಕೀಯ ಅಧಿಕಾರವನ್ನು ಕಬಳಿಸುವ ಬಹುಮುಖ್ಯ ಸಾಧನವಾಗಿ ಹೋಗಿದೆ.

ವಿಚಿತ್ರವೆಂದರೆ ಇಸ್ಲಾಂ ಉಗ್ರವಾಗಿ ವಿರೋಧಿಸುವ ಹಂದಿ ಮಾಂಸವೂ ಕೂಡ ಗೋವಿನ ಜೊತೆಗೆ ಸಾಮಾಜಿಕ – ರಾಜಕೀಯ ಸ್ತಗಳಲ್ಲಿ ಸೆಣಸಾಡುತ್ತಿರುವುದು. ಇಸ್ಲಾಂ ಅನುಯಾಯಿಗಳಿಗೆ ಮಾಂಸಾಹಾರ ಅವರ ಆಹಾರ ಪದ್ಧತಿಯ ಒಂದು ಭಗ. ಅವರವರ ಆದಾಯಕ್ಕನು=ಗುಣವಾಗಿ ಕುರಿ, ಮೇಕೆ, ಕೋಳಿ, ಧನ ಮೊದಲಾದ ಪ್ರಾಣಿಗಳ ಮಾಂಸವನ್ನು ಬಳಸುತ್ತಾರೆ. ಇಂಡಿಯಾದ ಸಾಮಾಜಿಕ ವಾತಾವರಣದಲ್ಲಿ ನಿತ್ಯದ ಮೂರೂ ಹೊತ್ತು ಮಾಂಸ ತಿನ್ನುವ ಯಾವುದೇ ಮುಸ್ಲಿಮನಿದ್ದಂತಿಲ್ಲ. ಮುಖ್ಯವಾಗಿ ಹಬ್ಬ ಹರಿದಿನಗಳಲ್ಲಿ ಮದುವೆ-ಮುಂಜಿಗಳಲ್ಲಿ ಮಾಡುವ ವಿಶೇಷ ಅಡಿಗೆ ಮಾಂಸಾಹಾರದ್ದೇ ಆಗಿರುತ್ತದೆ. ಇಸ್ಲಾಂ ಹಂದಿ ಮಾಂಸವನ್ನು ನಿಷೇಧಿಸಿದೆ. ಕೆಲವು ಮಡಿವಂತ ಮುಸ್ಲಿಮರಿಗೆ ಹಂದಿಯ ಹೆಸರು ಕೇಳಿದರೂ ಆಗುವುದಿಲ್ಲ. ಹಿಂದೂ ಹಾಗೂ ಮುಸ್ಲಿಂ ಮೂಲಭೂತವಾದಿಗಳು ಗೋವು ಮತ್ತು ಹಂದಿಯಂತಹ ಪ್ರಾಣಿಗಳ ಬಗೆಗೆ ಎರಡೂ ಧಮ್ದ ಜನಸಾಮಾನ್ಯನಲ್ಲಿರುವ ಭಾವನೆಗಳನ್ನು ಉದ್ರೇಕ-ಗೊಳಿಸುವ ಮೂಲಕ ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುತ್ತಿರುವುದು ಮಾತ್ರ ದುರಂತವಾಗಿದೆ. ಹಿಂದೂಗಳಲ್ಲಿ ಹಂದಿಯನ್ನು ವರಹಾವತಾರವೆಂದೂ, ಲಕ್ಷ್ಮಿ ಎಂದೂ ಭಾವಿಸುತ್ತಾರೆ. ಆದರೂ ಹಂದಿಯನ್ನು, ಅದು ಇರುವ ಜಾಗವನ್ನು ಕೀಳಾಗಿ ನೋಡುವುದೂ ಇದೆ. ಮೋಟಾರು ಸೈಕಲ್, ಕಾರು ಮೊದಲಾದ ವಾಹನಗಳನ್ನು ಓಡಿಸುವಾಗ ಅಕಸ್ಮಾ ಅಡ್ಡ ಬಂದ ಹಂದಿಗೆ ವಾಹನ ತಾಗಿದರೆ ಅದು ಅಪಶಕುನವೆಂದೂ, ಅದರಿಂದ ಒಳ್ಳೆಯದಾಗುವುದಿಲ್ಲವೆಂದೂ ಭಾವಿಸಿ ಹಾಗೆ ತಾಗಿದ ಕೆಲವೇ ದಿನಗಳಲ್ಲಿ ಆ ವಾಹನವನ್ನು ಇತರರಿಗೆ ಮಾರಿಬಿಡುತ್ತಾರೆ. ಆ ವಾಹನವನ್ನು ಖರೀದಿಸುವವರಿಗೆ ಹಂದಿ ತಾಗಿದ ಸುದ್ಧಿಯನ್ನೂ ಹೇಳುವುದಿಲ್ಲ. ಇಷ್ಟೆಲ್ಲಾ ಭಾವನೆಗಳಿದ್ದರೂ ಹಂದಿಯನ್ನು ತಿನ್ನುವವರು ಹಿಂದೂ ಧರ್ಮದಲ್ಲಿದ್ದಾರೆ.

ಪಿಂಜಾರರ ಸಾಮಾಜಿಕ ಜೀವನಕ್ಕೂ, ಇದುವರೆಗೂ ಇಸ್ಲಾಂ-ಧಾರ್ಮಿಕ ವ್ಯವಸ್ಥೆಯೊಳಗೆ ಇರುವ ಸಮುದಾಯಗಳ ಸ್ಥೂಲ ಚಿತ್ರಣವನ್ನು ಹಿಂದೂ ಧಾರ್ಮಿಕ ಚಿತ್ರದೊಂದಿಗೆ ವಿಶ್ಲೇಷಿಸಿ ನೋಡಿದ ಕ್ರಮಕ್ಕೂ ಸಂಬಂಧವಿದೆ. ಯಾಕೆಂದರೆ ಒಂದೆರಡು ನೂರು ವರ್ಷಗಳಿಂದಷ್ಟೇ ತಾಂತ್ರಿಕವಾಗಿ ಇಸ್ಲಾಂಗೆ ಪರಿವರ್ತನೆಗೊಂಡಿರುವ ಪಿಂಜಾರರು ಭಾವನಾತ್ಮಕವಾಗಿ ಇನ್ನೂ ಹಿಂದೂ ಧಾರ್ಮಿಕ ವಿಚಾರಗಳ ಹ್ಯಾಂಗೋವರ್‌ನಲ್ಲಿದ್ದಾರೆ. ಹಿಂದೂ ಹಾಗೂ ಇಸ್ಲಾಂ ಧರ್ಮಗಳ ಉಭಯ ಸಾಂಸ್ಕೃತಿಕ ಪ್ರತಿನಿಧಿಗಳಂತಿರುವ ಪಿಂಜಾರರು ಸಾಮಾಜಿಕವಾಗಿ ಎರಡೂ ಧರ್ಮಗಳಿಗೆ ಜೋತು ಬಿದ್ದಿದ್ದಾರೆ. ಈ ಕಾರಣದಿಂದಲೇ ಅನನ್ಯ ಸಂಸ್ಕೃತಿಯೊಂದರ ಅನಾಮಿಕ ಧಣಿಗಳಾಗಿದ್ದಾರೆ.

ಹಿಂದಿನ ಅಧ್ಯಾಯದಲ್ಲಿ ಸ್ಪಷ್ಟಪಡಿಸಿರುವಂತೆ ಪಿಂಜಾರರು ಹಿಂದೂ ಮೂಲಾಶ್ರಮದಿಂದ ಇಸ್ಲಾಂಗೆ ಬಂದವರು. ಹೀಗೆ ಬಂದಾಗ ಅವರ ಸ್ವಂತ ಅಪೇಕ್ಷೆ ಎಷ್ಟಿತ್ತು. ಆಳುವ ವರ್ಗದ ಅವಸರ ಏನಿತ್ತು ಎಂಬ ಚರ್ಚೆ ಈಗ ಅಪ್ರಸ್ತುತ. ಆದರೆ ಹೀಗೆ ಒಂದು ಧರ್ಮದ ಆವರಣವನ್ನು ದಾಟಿಕೊಂಡು ಮತ್ತೊಂದು ಧರ್ಮದ ನೆಲೆಗೆ ಬಂದಾಗ ಅನುಭವಿಸುವ ಇಕ್ಕಟ್ಟುಗಳು ಎಂಥವು ಎಂಬುದನ್ನು ತಿಳಿಯಲು ಪಿಂಜಾರರ ಜನಜೀವನದ ಅಧ್ಯಯನ ಮಾಡಬೇಕು. ಇವುಗಳಲ್ಲಿ ಮೊದಲನೆಯ ಬಿಕ್ಕಟ್ಟು ಎಂದರೆ ಪಿಂಜಾರರಿಗೆ ಇಸ್ಲಾಂನ ಪ್ರಾಥಮಿಕ ತಿಳುವಳಿಕೆಯೂ ಇರಲಿಲ್ಲ ಎನ್ನವುದಾಗಿದೆ. ಒಂದು ಭೌಗೋಳಿಕ ಪರಿಸರವನ್ನು ತೀವ್ರವಾಗಿ ಪ್ರಭಾವಿಸುವ ಅಲ್ಲಿನ ಭಾಷೆ, ಅದು ಅಭಿವ್ಯಕ್ತಿಸಿದ ಪುರಾಣ, ಚರಿತ್ರೆ, ಕಾವ್ಯ, ಕತೆ, ಕಲೆ, ಜನಪದ, ಕ್ರೀಡೆ, ವಿವಿಧ ನಂಬಿಕೆ, ಆಚರಣೆಗಳು, ಸಾವಿರಾರು ವರ್ಷಗಳ ಪರಂಪರೆಯುದ್ಧಕ್ಕೂ ಅಕ್ಷರ ಬಲ್ಲವನಿಗೂ, ಇಲ್ಲದವನಿಗೂ ಆತನ ರಕ್ತಕಣಗಳಲ್ಲಿ, ಜೀವಕೋಶಗಳಲ್ಲಿ ಗುಪ್ತಗಾಮಿನಿಯಾಗಿ ಪ್ರಾಣಧಾತುಗಳಾಗಿರುತ್ತವೆ. ಅದರಿಂದ ಆತನ ಸಂವೇದನೆಗಳು ರೂಪುಗೊಂಡಿರುತ್ತವೆ. ಇವೆಲ್ಲಾ ಅಂಗಿ ಬಿಚ್ಚಿ ಅಂಗಿ ತೊಟ್ಟಂತೆ ಹೆಸರು ಬದಲಾದ ತಕ್ಷಣ ಬೇರೆಯಾಗಿಬಿಡುವುದಿಲ್ಲ. ಈ ಕೋಣೆಯಲ್ಲಿನ ದೀಪ ಮಂದವಾಯಿತೆಂದು ಮತ್ತೊಂದು ಕೋಣೆಯ ದೀಪವನ್ನು ತಂದಿಟ್ಟುಕೊಂಡಷ್ಟು ಸರಳವೂ ಅಲ್ಲ ಇದು. ಹಾಗಾಗಿ ಪಿಂಜಾರರಿಗೆ, ಅವರ ದೇಹಗಳ ಹೆಸರುಗಳ ಬದಲಾದವೇ ಹೊರತು ಆತ್ಮ ಬದಲಾಗಲಿಲ್ಲ. ಅವರ ಆತ್ಮದ ಬೇರುಗಳು ತಮ್ಮ ಮೂಲಾಶ್ರಮದಲ್ಲಿ ಗಾಢವಾಗಿ, ಆಳವಾಗಿ ಇಳಿದುಹೋಗಿದ್ದವು. ಆದುದರಿಂದ ಪಿಂಜಾರರು ಇಸ್ಲಾಂನ ಬಾಹ್ಯಾಚರಣೆಗಳಿಗೆ ಒಗ್ಗಿಕೊಳ್ಳಲು ಕೂಡ ನೂರಾರು ವರ್ಷಗಳು ಬೇಕಾದವು. ಆರಂಭದಲ್ಲಿ ಹೆಸರುಗಳು ಬದಲಾದಂತೆಲ್ಲಾ ಮುಂಜಿ-ಮದುವೆಯಂತೆ ಕಾರ್ಯಕ್ರಮಗಳಲ್ಲಿ ಹಿಂದೆ ಹೇಳಿದ ’ಮುಲ್ಲಾ’ ಅವುಗಳನ್ನು ನೆರವೇರಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ. ಹೀಗೆ ತಾವು ಹೊಸದಾಗಿ ಕಾಲಿಟ್ಟ ಧರ್ಮವೊಂದರ ಜ್ಞಾನವನ್ನು ಅರಿಯುವುದಕ್ಕಿಂತ ಮೊದಲೇ ತಮ್ಮ ಮೂಲಾಶ್ರಮದ ರೀತಿಯ ಪುರೋಹಿತಾಶಾಹಿ ವ್ಯವಸ್ಥೆ ಅವರನ್ನು ನಿಂತಲ್ಲಿ ನಿಲ್ಲಿಸಿಬಿಟ್ಟಿತು. ಈ ಮುಲ್ಲಾಗಳು ಪಿಂಜಾರರ ಜನಜೀವನದ ಧಾರ್ಮಿಕ ಆಚರಣೆಗಳ ಉಸ್ತುವಾರಿ ವಹಿಸಿಕೊಂಡು ಬಂದರೇ ಹೊರತು ಇಸ್ಲಾಂನ ತತ್ವಾದರ್ಶಗಳನ್ನು ತಿಳಿಸಿ ಹೇಳುವ ರಿಸ್ಕ್‌ನ್ನು ತೆಗೆದುಕೊಳ್ಳಲಿಲ್ಲ. ಅದು ಮುಲ್ಲಾಗಳ ಜೀವನೋಪಾಯದ ಹಾದಿಯಾಯಿತು. ಆರ್ಥಿಕವಾಗಿ ಹಿಂದುಳಿದಿದ್ದ ಪಿಂಜಾರರಿಗೆ ತಂತಮ್ಮ ಜೀವನವನ್ನು ನಿಭಾಯಿಸುವುದು ಮುಖ್ಯವಾಯಿತು. ಆದುದರಿಂದ ಧಾರ್ಮಿಕ ತಿಳುವಳಿಕೆಯ ವಿಚಾರದಲ್ಲಿ ಎಂದಿನ ಉಪೇಕ್ಷೆ ಮುಂದುವರಿಯಿತು.

ಹೀಗೆ ಇಸ್ಲಾಂ ಅರಿವಿನಿಂದ ವಂಚಿತರಾಗಿದ್ದ ಪಿಂಜಾರರನ್ನು ಅಂದಿನ ಸಾಮಾಜಿಕ ಬದುಕು ಹೇಗೆ ಸ್ವೀಕರಿಸಿತು? ಎಂದು ಕೇಳಿಕೊಂಡರೆ ಪಿಂಜಾರರ ಸಾಮಾಜಿಕ ಶ್ರೇಣಿಯ ಚಿತ್ರ ದೊರಕುತ್ತದೆ. ಅಲ್ಲದೆ ಹಿಂದೆ ಹೇಳಿದಂತೆ ಇಸ್ಲಾಂನ ಹೆಚ್ಚು ಕಡಿಮೆ ಎಲ್ಲ ಸಮುದಾಯಗಳಲ್ಲಿ ಧಾರ್ಮಿಕ ಅರಿವು ಮಾತ್ರ ವ್ಯಕ್ತಿಯೊಬ್ಬನ ಸಂಸ್ಕಾರವನ್ನೂ, ಜನಾಂಗವೊಂದರ ಸಾಮಾಜಿಕ ಪ್ರತಿಷ್ಠೆಯನ್ನೂ ಅಳೆಯುವ ಮಾನದಂಡವಾಗಿದೆ. ಆದುದರಿಂದ ಒಂದು ಕಡೆ ಇಸ್ಲಾಂ ಅರಿವಿನ ಕೊರತೆಯಿಂದ ಸಾಂಪ್ರದಾಯಿಕ ಮುಸ್ಲಿಮರಿಂದ ಉಪೇಕ್ಷೆಗೊಳಗಾದರೆ ಹಿಂದೂ ಧಾರ್ಮಿಕಾವರಣವನ್ನು ದಾಟಿ ಬಂದ ಕಾರಣಕ್ಕಾಗಿ ಹಿಂದೂ ಸಮುದಾಯದವರ ತಿರಸ್ಕಾರಕ್ಕೆ ಪಿಂಜಾರರು ಒಳಗಾದರು. ಇದು ಪಿಂಜಾರರು ನಿಜಕ್ಕೂ ಸಾಮಾಜಿಕವಾಗಿ ದ್ವೀದಂತಾದ ಸ್ಥಿತಿ. ಇನ್ನು ಪಿಂಜಾರರ ಎರಡನೆಯ ಬಿಕ್ಕಟ್ಟು ಎಂದರೆ ಅದು ಅವರ ಭಾಷೆಯದು.

ಭಾಷೆ ಎಂದರೆ ಅದು ಕೇವಲ ವ್ಯಾವಹಾರಿಕ ಸಂಗತಿಗಳಿಗಾಗಿ ಇರುವ, ಮಾಹಿತಿ ಸಂಗ್ರಹ ಮಾಧ್ಯಮ ಎನ್ನುವಂತಹ ತಿಳುವಳಿಕೆ ತಪ್ಪು.ಬದಲಾಗಿ ಭಾಷೆ ಒಂದು ಪ್ರದೇಶದ, ಜನಾಂಗದ ಸಾಂಸ್ಕೃತಿಕ ಸಂಪತ್ತನ್ನು ಒಳಗೊಂಡ ಸಂವೇದನೆಗಳ ನಿರ್ಮಾಪಕ ಮತ್ತು ವಾಹಕ. ಇದು ಒಂದು ಜನಾಂಗದ ಪರಂಪರಾಗತವಾದ ಸಂವೇದನೆಗಳನ್ನು ಪೀಳಿಗೆಯಿಂದ ಪೀಳಿಗೆಗೆ ಹೊತ್ತೊಯ್ಯುವ ಸಾಧನವಾಗಿಯೂ ಕೆಲಸ ಮಾಡುತ್ತದೆ. ಇಂಥ ಕರ್ತೃತ್ವ ಶಕ್ತಿಯಿರುವುದು ಮಾತೃಭಾಷೆಗೆ. ಅದರ ನಂತರ ವ್ಯಕ್ತಿ ಎಷ್ಟೇ ಇತರ ಭಾಷೆ ಕಲಿತರೂ, ಅದರಲ್ಲಿ ಎಷ್ಟೇ ಪ್ರಭುತ್ವ ಗಳಿಸಿದರೂ ಅದು ಕೇವಲ ಸಂದೇಶವಾಹಕವಾಗಿ ಕಾಣುತ್ತದೆಯೇ ಹೊರತು ಆತನ ಅಂತರ್ಗತ ಸ್ವರೂಪವನ್ನು ದಾಖಲಿಸುವಷ್ಟು ಶಕ್ತವಾಗಿರುವುದಿಲ್ಲ. ಹಾಗಾಗಿ ಪಿಂಜಾರರ ಭಾಷೆ ಅವರ ಪರಿವರ್ತನೆಯ ಪೂರ್ವದ ಕನ್ನಡವೇ ಆಗಿ ಉಳಿದಿರುವುದು ಅತ್ಯಂತ ಸ್ವಾಭಾವಿಕ. ಆದರೆ ಇಸ್ಲಾಂನ ತತ್ವಾದರ್ಶಗಳನ್ನು ಕನ್ನಡದಲ್ಲಿ ಹೇಳಿಕೊಡುವ, ಬರೆಯುವ ಪ್ರಯತ್ನವನ್ನು ಸಂಬಂಧಪಟ್ಟವರು ಮಾಡದೇ ಹೋದ ಕಾರಣದಿಂದ ಹಾಗೂ ಪಿಂಜಾರರು ಧಾರ್ಮಿಕ ತಿಳುವಳಿಕೆಗಾಗಿ ಹಪಹಪಿಸುವಂತಹ ಸಾಮಾಜಿಕವಾದ, ಆರ್ಥಿಕವಾದ ಪರಂಪರೆಯನ್ನು ಹೊಂದಿರದೇ ಇದ್ದುದರಿಂದ ಅಷ್ಟರಮಟ್ಟಿಗೆ ಪಿಂಜಾರರಿಗೆ ಇಸ್ಲಾಂನ ಅರಿವು ದೂರವೇ ಉಳಿದುಬಿಟ್ಟಿತು. ಇವತ್ತಿಗೂ ಇಸ್ಲಾಂ ಧರ್ಮದ ಬಗೆಗಿನ ಸಾಹಿತ್ಯ ಕನ್ನಡದಲ್ಲಿ ವಿಫಲವಾಗಿ ದೊರೆಯುತ್ತಿದ್ದರೂ ಪಿಂಜಾರರು ಅದರ ಬಗ್ಗೆ ಆಸಕ್ತಿ ತೋರದಿರುವುದಕ್ಕೆ ಅವರ ದೈನಂದಿನ ಬದುಕಿನ ಜಂಜಾಟಗಳೇ ಸಾಕ್ಷಿಯಾಗಿವೆ. ಅದರ ಹೊರತಾಗಿ ಇಸ್ಲಾಂ ಕುರಿತಂತೆ ನಡೆಯುವ ಇಸ್ತೆಮಾಗಳಲ್ಲಿ ಮಸೀದಿ, ಮದರಸಾಗಳಲ್ಲಿ ನಡೆಯುವ ಪ್ರವಚನಗಳಲ್ಲಿ ಬಳಕೆಯಾಗುವ ಭಾಷೆ ಕೂಡ ಕನ್ನಡವೇ ಆಗಿದ್ದಿದ್ದರೆ ಪಿಂಜಾರರಿಗೆ ಕೆಲಮಟ್ಟಿನ ಪ್ರಯೋಜನವಾಗುತ್ತಿತ್ತೋ ಏನೋ! ಆದರೆ ಅಲ್ಲಿ ಕೂಡ ಮುಲ್ಲಾಗಳು ಕೆಲವರಿಗೆ ಮಾತ್ರ ಅರ್ಥವಾಗುವ ಉರ್ದು ಮತ್ತು ಅರಬ್ಬಿಯಲ್ಲಿ ಸುದೀರ್ಘ ಪ್ರವಚನ ನೀಡುತ್ತಾರೆ. ಇವರಿಗೆ ಕನ್ನಡ ಬರುವುದಿಲ್ಲ ಎನ್ನುವ ಅಂಶದ ಜೊತೆಗೆ ಕನ್ನಡ ಕಲಿಯುವ ಆಸಕ್ತಿಯಾಗಲೀ, ಕನ್ನಡ ಕಲಿತು ಕನ್ನಡದಲ್ಲಿ ಧಾರ್ಮಿಕ ಪ್ರವಚನ ನೀಡಿದರೆ ಹೆಚ್ಚು ಜನರಿಗೆ ತಲುಪೀತು ಎಂಬ ತಿಳುವಳಿಕೆಯಾಗಲೀ ಸಾಧ್ಯವಾಗಿಲ್ಲ. ಬದಲಾಗಿ ತಮಗೆ ಬರುವ ಭಾಷೆಯೇ ಎಲ್ಲರಿಗೂ ಅರ್ಥವಾಗುತ್ತದೆಂಬ ಭ್ರಮೆಯಿಂದ ಕೂಡಿದ್ದಾರೆ. ಆದುದರಿಂದಾಗಿಯೇ ಪಿಂಜಾರರು ತಮ್ಮ ಧಾರ್ಮಿಕ ಕ್ರಿಯೆಗಳಿಗೆ ಮುಲ್ಲಾಗಳನ್ನು ಅವಲಂಬಿಸಿದ್ದಾರೆ ಹಾಗೂ ಸಾಮೂಹಿಕವಾಗಿ ನಮಾಜು ಮಾಡುವ ಸಂದರ್ಭದಲ್ಲಿ ಅನುಕರಣೆ ಮಾಡುವುದು ಅವರಿಗೆ ಅನಿವಾರ‍್ಯಾವಾಗಿದೆ. ಈ ಕುರಿತು ಇನ್ನೂ ಕೆಲವು ಸಂಗತಿಗಳನ್ನು ಚರ್ಚಿಸುವುದು ಸಾಧ್ಯವಿದೆ. ಆದರೆ ಮುಂದೆ ಪಿಂಜಾರರ ಸಾಹಿತ್ಯವನ್ನು ಕುರಿತು ಚರ್ಚಿಸುವ ಸಂದರ್ಭದಲ್ಲಿ ಅವುಗಳ ಪ್ರಸ್ತಾಪ ಬರುವುದರಿಂದ ಇಲ್ಲಿ ಪಿಂಜಾರರ ಸಾಮಾಜಿಕ ಶ್ರೇಣಿಯ ಅಧ್ಯಯನಕ್ಕಷ್ಟೇ ಸೀಮಿತವಾಗಿರುವ ಸಂಗತಿಗಳನ್ನು ವಿಚಾರ ಮಾಡಲಾಗಿದೆ.

ಈವರೆಗೆ ಚರ್ಚಿತವಾಗಿರುವ ವಿಚಾರಗಳ ಹಿನ್ನೆಲೆಯಲ್ಲಿ ಪಿಂಜಾರರ ಸಾಮಾಜಿಕ ಸ್ಥಾನಮಾನಗಳನ್ನು ಗುರುತಿಸಬೇಕಾಗಿದೆ. ಪಿಂಜಾರರ ಮೂಲ ಕಸುಬಿಗೂ, ಅವರ ಸಾಮಾಜಿಕ ಜೀವನ ವಿಧಾನಕ್ಕೂ ಸಂಬಂಧವಿದೆ. ಹಾಸಿಗೆ, ದಿಂಬು ತಯಾರಿಸುವ ಪಿಂಜಾರರು ಅದಕ್ಕೆ ಅಗತ್ಯವಾಗಿರುವ ಕಚ್ಛಾವಸ್ತು ಹತ್ತಿ ಬೆಳೆಯುವ ಬಯಲು ಸೀಮೆಗಳಲ್ಲಿ ಹೆಚ್ಚು ವಾಸಿಸುತ್ತಾರೆ. ಹಾಗೆಂತಲೇ ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳಲ್ಲಿ ಅವರು ಕಂಡುಬರುತ್ತಾರೆ. ಪಿಂಜಾರರಲ್ಲಿ ಯಾವುದೇ ಉಪಜಾತಿ / ಪಂಗಡಗಳು ಕಂಡುಬರುವುದಿಲ್ಲ. ಇವರ ವೈವಾಹಿಕ ಸಂಬಂಧಗಳು ಪಿಂಜಾರರಲ್ಲಿಯೇ ನಡೆಯುತ್ತದೆ. ಮದುವೆಯೂ ಸೇರಿದಂತೆ ಇತರ ಧಾರ್ಮಿಕ ವಿಧಿ-ವಿಧಾನಗಳೆಲ್ಲವೂ ಇಸ್ಲಾಂ ಪ್ರಕಾರ ನಡೆಯುತ್ತವೆ. ಮೊದಲೇ ಹೇಳಿದಂತೆ ಇಲ್ಲೆಲ್ಲಾ ಮುಲ್ಲಾನ ಉಪಸ್ಥಿತಿ ಅನಿವಾರ‍್ಯವಾಗಿರುತ್ತದೆ. ಪಿಂಜಾರರು ತಮ್ಮ ಮೂಲ ಕಸುಬಾದ ಹಾಸಿಗೆ ತಯಾರಿಸುವುದರ ಜೊತೆಗೆ ಇತರೆ ಉಪಕಸುಬುಗಳನ್ನು ಮಾಡುತ್ತಾರೆ. ಸಣ್ಣಪುಟ್ಟ ಬೀಡಿ ಅಂಗಡಿಯ ವ್ಯಾಪಾರ, ಬಳೆ ವ್ಯಾಪಾರ, ಹಲ್ಲೆ ಕಟ್ಟುವುದು, ಕೂಲಿ-ನಾಲಿ ಮಾಡುವುದು. ತೆಂಗಿನ ಹಗ್ಗದ ವ್ಯಾಪಾರ, ಕಮ್ಮಾರಿಕೆ ಮೊದಲಾದ ಕಸುಬುಗಳಲ್ಲಿ ತೊಡಗಿದ್ದಾರೆ. ಇನ್ನು ಕೆಲವು ಕಡೆ ಒಂದೆರಡು ಎಕರೆ ಜಮೀನು ಹೊಂದಿದವರೂ ಇದ್ದಾರೆ. ಬಯಲು ಸೀಮೆಗಳಲ್ಲಿ ಹತ್ತಾರು ಎಕರೆ ಒಣಭೂಮಿಯ ಮಾಲೀಕರೂ ವಿರಳವೆಂಬಂತೆ ಕಂಡುಬರುತ್ತಾರೆ. ಪಿಂಜಾರರು ರೈತಾಪಿ ದುಡಿಮೆಯಲ್ಲಿ ನಿಪುಣರು. ಬಿತ್ತುವ, ಒಕ್ಕು ಮಾಡುವ, ಬಣವೆ ಒಟ್ಟುವ, ಬರಲುಕಟ್ಟುವ, ಹಗ್ಗ ಹೊಸೆಯುವ ಯಾವುದೇ ಕೆಸಲಗಳನ್ನು ಮಾಡಬಲ್ಲ ಕಲಾವಂತಿಕೆ ಅವರಲ್ಲಿದೆ. ಹೀಗಾಗಿ ಪಿಂಜಾರರು ತಾವು ಬದುಕುವ ಸಮಾಜದ ಮುಖ್ಯವಾಹಿನಿಯಲ್ಲಿರುವುದಂತೂ ನಿಜ. ಇವರ ನಿತ್ಯದ ಎಲ್ಲ ವ್ಯವಹಾರಗಳೂ ಹಿಂದೂ ಶೂದ್ರ ಸಮುದಾಯಗಳೊಂದಿಗೆ ಬೆರೆತು ಹೋಗಿವೆ. ಇದಕ್ಕೆ ಕಾರಣ ಪಿಂಜಾರರು ಹಿಂದೂ ಹಬ್ಬ-ಹರಿದಿನಗಳನ್ನು ಆಚರಿಸುವುದು, ಆ ದೇವರು ದಿಂಡರುಗಳಿಗೆ ನಡೆದುಕೊಳ್ಳುವುದು. ಅಷ್ಟೇ ಅಲ್ಲದೆ ಉಡುಗೆ – ತೊಡುಗೆ, ಆಹಾರ ಪದ್ಧತಿ, ನಡೆ – ನುಡಿಗಳ ವಿಚಾರದಲ್ಲಿ ಪಿಂಜಾರರನ್ನು ಹಿಂದೂ ಶೂದ್ರ ಸಮುದಾಯದಿಂದ ಬೇರ್ಪಡಿಸಿ ನೋಡುವುದು ಸಾಧ್ಯವಿಲ್ಲ. ಹೀಗಾಗಿ ಪಿಂಜಾರರ ಹೆಸರು ಮತ್ತು ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಇಸ್ಲಾಂನ ಅನುಕರಣೆ ಹೊರತು ಪಡಿಸಿದರೆ ಇವರು ಆಯಾ ಊರಿನ ಪ್ರಬಲ ಜಾತಿಯವರ ಮರ್ಜಿಗೊಳಗಾಗಿ ಬದುಕುತ್ತಾರೆ. ಉಳಿದಂತೆ ಕಾಟುಗ ಜನಾಂಗದವರೊಡನೆ (ಮಾಂಸಾಹಾರದ ಬಳಕೆಯಿರುವ ಜನಾಂಗಗಳಿಗೆ ಕರೆಯುವ ಹೆಸರು) ಪಿಂಜಾರರು ಅತ್ಯಂತ ಪ್ರೀತಿ ಸಲುಗೆಯಿಂದಿರುತ್ತಾರೆ. ವಿಶೇಷವಾಗಿ ಲಿಂಗಾಯ್ತರು ಹೆಚ್ಚಾಗಿರುವ ಊರುಗಳಲ್ಲಿ ಪಿಂಜಾರರು ಅವರನ್ನು ಶ್ರೀಮಂತರು, ದೌಳೋರು, ದೊಡ್ಡಜಾತಿ- ಯವರು ಎಂದು ಗೌರವಿಸುವುದು ಕಂಡುಬರುತ್ತದೆ. ಪಿಂಜಾರರು ವ್ಯಾವಹಾರಿಕ ಹಾಗೂ ಭಾವನಾತ್ಮಕವಾಗಿ ಹಿಂದೂ ಸಮುದಾಯದವರೊಂದಿಗೆ ಹೆಚ್ಚು ಒಡನಾಡುವುದರಿಂದ ಸಹಜವಾಗಿ ಸಾಂಪ್ರದಾಯಿಕ ಮುಸ್ಲಿಮರು ಇವರನ್ನು ಹೀಯಾಳಿಸುವ, ಕಡೆಗಣಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಪಿಂಜಾರರು ಮುಸ್ಲಿಮರೊಂದಿಗೆ ಎಂದಿನ ತಿರಸ್ಕಾರದ ಅಂತರವನ್ನಿಟ್ಟುಕೊಂಡಿರುತ್ತಾರೆ.

ಪಿಂಜಾರರ ಸಮಾಜಕ್ಕೆ ವಿಶಿಷ್ಟವಾದ ನಡವಳಿಕೆಗಳು ಎಂದರೆ ಇಸ್ಲಾಂ ಮತ್ತು ಹಿಂದೂ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು. ಹಾಗೆ ನೋಡಿದರೆ ಇಸ್ಲಾಂಗಿಂತ ಹಿಂದೂ ಧರ್ಮದ ಚಟುವಟಿಕೆಗಳೇ ಅವರನ್ನು ಹೆಚ್ಚು ಪ್ರಭಾವಿಸಿವೆ. ಈ ಸಂಬಂಧವಾದ ವಿವರಗಳನ್ನು ಪಿಂಜಾರರ ಆಚರಣೆಗಳ ಅಧ್ಯಯನದಲ್ಲಿ ನೋಡಬಹುದಾಗಿದೆ. ಪಿಂಜಾರರಲ್ಲಿ ಸಂಘಟನೆಯಿಲ್ಲ. ಅದಕ್ಕೆ ಕಾರಣ ಅವರ ಬಡತನ ಮತ್ತು ಅನಕ್ಷರತೆ. ಹಾಗಾಗಿ ಅವರ ಸಾಮಾಜಿಕ ಬದುಕಿನಲ್ಲಿ ಒದಗುವ ಯಾವುದೇ ಸಮಸ್ಯೆಗಳಿಗೆ ಇಸ್ಲಾಂ ಧಾರ್ಮಿಕ ಆವರಣದಲ್ಲಿ ಪರಿಹಾರ ಹುಡುಕಿಕೊಳ್ಳುವುದಕ್ಕಿಂತ, ಕೋರ್ಟು, ಕಚೇರಿ ಅಲೆಯುವುದಕ್ಕಿಂತ ಅವುಗಳನ್ನು ಸಹಿಸಿಕೊಳ್ಳು=ವುದರಲ್ಲೇ ಅವರ ಅನನ್ಯತೆಯಿದೆ. ಆದುದರಿಂದ ಪಿಂಜಾರರ ಸಾಮಾಜಿಕ ಜೀವನ ಅತ್ಯಂತ ಸಂಕೀರ್ಣವಾದದ್ದೇನೂ ಅಲ್ಲ. ಅಲ್ಲಿನ ಬಡತನ, ಅನಕ್ಷರತೆಯಂತಹ ಸಂಗತಿಗಳನ್ನು ಹೊರತು – ಪಡಿಸಿದರೆ ಅವರ ಬದುಕು ತೀರ ಸರಳವಾದದ್ದು. ಅವರ ಬದುಕಿನ ಒಳಾಡಳಿತದ ರೀತಿಯೂ ಜಾತಿಮೂಲ ವ್ಯವಸ್ಥೆಯ ಅವಿಭಾಜ್ಯ ಅಂಗವೇ ಆಗಿರುವುದರಿಂದ ಪಿಂಜಾರರು ತಮ್ಮ ಸಾಮಾಜಿಕ ಹಾಗೂ ಸಾಂಸಾರಿಕ ಸಂಬಂಧದ ವಿಷಯದಲ್ಲಿ ತಂತಮ್ಮ ನಡುವೆಯೇ ವ್ಯವಹರಿಸುತ್ತಾರೆ. ಸಮಸ್ಯಾತ್ಮಕವಾದ ಸಂದರ್ಭದಲ್ಲಿ ಊರಿನ ಹಿರಿಯರನ್ನು, ಗೌಡ ಅಥವಾ ಪಟೇಲರನ್ನು ಕಂಡೇ ಚರ್ಚಿಸುತ್ತಾರೆ. ಸಾಮಾನ್ಯವಾಗಿ ಊರಿನ ಹಿರಿಯರು ಎಂದರೆ ಸಾಮಾಜಿಕ, ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಲಿಂಗಾಯ್ತರೇ ಆಗಿರುತ್ತಾರೆ. ಲಿಂಗಾಯ್ತರನ್ನೂ ಒಳಗೊಂಡು ಹಿಂದೂ ಸಮುದಾಯದ ಇತರ ಜನಾಂಗದವರೊಂದಿಗೆ ಪಿಂಜಾರರ ಆತ್ಮೀಯ ಒಡನಾಟವಿರುತ್ತದೆ. ಇವರು ಪರಸ್ಪರರಲ್ಲಿ ಅಳಿಯ, ಮಾವ, ಅತ್ತೆ, ಸೊಸೆಯಂಥ ಆಪ್ತ ಸಂಬಂಧದ ಸಂಭೋಧನಾ ರೀತಿಯನ್ನು ಉಳಿಸಿಕೊಂಡಿದ್ದಾರೆ. ವಿವಾಹದ ವಿಷಯದಲ್ಲಿ ಪಿಂಜಾರರು ಪಿಂಜಾರರಲ್ಲೇ ಸಂಬಂಧವನ್ನು ತರುವುದು, ಕೊಡುವುದು ನಡೆಯುತ್ತದೆ. ಬಹುಪತ್ನಿತ್ವವನ್ನು ನಿಷ್ಠೂರವಾಗಿ ವಿರೋಧಿಸುವ ಪಿಂಜಾರರು ಸ್ವಂತ ಅಕ್ಕನ ಮಗಳನ್ನೂ ಮದುವೆಯಾಗುವುದಿಲ್ಲ. ಮತ್ತು ಚಿಕ್ಕಪ್ಪ – ದೊಡ್ಡಪ್ಪರ ಮಕ್ಕಳನ್ನೂ ಮದುವೆಯಾಗುವುದಿಲ್ಲ. ಈ ಸಂಗತಿಯೂ ಪಿಂಜಾರರು ಹಿಂದೂ ಮತ್ತು ಮುಸ್ಲಿಮರಿಂದ ಎಷ್ಟರ ಮಟ್ಟಿಗೆ ಭಿನ್ನ ಸಂಸ್ಕೃತಿಯೊಂದನ್ನು ಆಚರಣೆಯಲ್ಲಿಟ್ಟುಕೊಂಡಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.

ಸಾಮಾನ್ಯವಾಗಿ ಆಸ್ತಿ ಮತ್ತು ಹೆಣ್ಣಿನ ಸಂಬಂಧದ ವಿಷಯದಲ್ಲೇ ಬಹಳಷ್ಟು ಸಮಸ್ಯೆಗಳು ಇರುತ್ತವೆ. ಪಿಂಜಾರರೂ ಇದರಿಂದ ಹೊರತಲ್ಲ. ಈ ಎರಡೂ ಬಗೆಯ ಸಂದರ್ಭಗಳು ಉಂಟಾಗುವುದು ಸಾಮಾನ್ಯವಾಗಿ ಪಿಂಜಾರರು ಮತ್ತು ಹಿಂದೂ ಸಮುದಾಯದವರ ನಡುವೆಯೇ ಅನ್ನುವುದು ಸಹ ಮುಸ್ಲಿಮರಿಂದ ಪಿಂಜಾರರು ಎಷ್ಟು ದೂರವಿದ್ದಾರೆ ಅನ್ನುವುದನ್ನು ಖಚಿತ ಪಡಿಸುತ್ತದೆ. ಹಣ, ಭೂಮಿ, ಮನೆಗೆ ಸಂಬಂಧಿಸಿದ ತಕರಾರುಗಳಾಗಲೀ ಒಂದು ಗಂಡು ಮತ್ತೊಂದು ಹೆಣ್ಣನ್ನು ಇಟ್ಟುಕೊಂಡ ಅಥವಾ ಓಡಿಸಿಕೊಂಡ ಹೋದ ಸಂಗತಿಯಾಗಲೀ ಊರಿನ ಎಲ್ಲಾ ಜನಾಂಗದ ಹಿರಿಯರ ನಡುವೆ ಚರ್ಚಿತವಾಗುತ್ತದೆ. ಇಲ್ಲಿ ಖಾಜಿ ಅಥವಾ ಮುಲ್ಲಾನ ಉಪಸ್ಥಿತಿಯೇ ಇರುವುದಿಲ್ಲ. ಆತನ ಕೆಲಸವೇನಿದ್ದರೂ ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ಮಾತ್ರ. ಪಿಂಜಾರರ ನಡುವೆ ಉಂಟಾಗುವ ಅನೇಕ ಜಗಳ, ತಂಟೆಗಳನ್ನು ಹಿರಿಯ ಜಮೀನ್ದಾರರಾದ ಲಿಂಗಾಯ್ತ ಯಜಮಾನರೊಬ್ಬರು ಬಗೆಹರಿಸುತ್ತಾರೆ. ಪೊಲೀಸು, ಕೋರ್ಟು, ಕಚೇರಿ ಮೆಟ್ಟಿಲು ಹತ್ತುವ ಸಾಮರ್ಥ್ಯವಿಲ್ಲದ ಪಿಂಜಾರರು ಊರಿನ ದೊಡ್ಡವರ ಮಾರ್ಗದರ್ಶನದಂತೆ ನಡೆದುಕೊಳ್ಳುತ್ತಾರೆ. ಕೋಳಿ ಕದ್ದ, ಇನ್ಯಾವನೋ ಬಣವೆಗೆ ಬೆಂಕಿಯಿಟ್ಟು, ಮತ್ತೊಬ್ಬ ಯಾರೂ ಹೊಲದಲ್ಲಿ ದನ ಕೂಡಿದ – ಇಂತಹ ಸಾಮಾನ್ಯ ಸಂಗತಿಗಳು ಪಿಂಜಾರರ ಬದುಕಿನಲ್ಲಿ ಅತಿದೊಡ್ಡ ಮನಸ್ತಾಪವನ್ನುಂಟು ಮಾಡುತ್ತವೆ. ಹಾಗೇ ಎಲ್ಲರಲ್ಲಿರುವ ಹೊಟ್ಟೆಕಿಚ್ಚು, ಸಣ್ಣತನ, ಮೋಸ, ಸುಳ್ಳು, ಹೇಳುವುದೂ ಕೂಡ ಪಿಂಜಾರದಲ್ಲಿದೆ. ಹಿಂಸೆಗೆ ಹೆದರುವ ಪಿಂಜಾರರು ಸಮಸ್ಯಾತ್ಮಕ ಸಂದರ್ಭಗಳಲ್ಲಿ ಬೈಗುಳಗಳ ಮೂಲಕವೇ ತಮ್ಮ ಸಿಟ್ಟನ್ನು ಹೊರಹಾಕುತ್ತಾರೆ. ಜಗಳ ಅನ್ನುವುದು ಮಾತುಗಳ ನೆಲೆಯಲ್ಲಿ ಮುಗಿದೇ ಹೋಗುತ್ತದೆ. ಒಂದೆರಡು ದಿನದಲ್ಲಿ ಮನಸ್ತಾಪ ಕರಗಿ ಮತ್ತೆ ಎಂದಿನ ಆತ್ಮೀಯ ಒಡನಾಟ ದಲ್ಲಿ ತೊಡಗುತ್ತಾರೆ.

ದನ ಮತ್ತು ಹಂದಿ ಮಾಂಸದ ಬಳಕೆಯನ್ನು ವಿರೋಧಿಸುವಷ್ಟರ ಮಟ್ಟಿಗೆ ಹೆಚ್ಚು ಜನ ಹೆಂಡತಿಯರನ್ನು ಪಿಂಜಾರರು ನಿರಾಕರಿಸುತ್ತಾರೆ. ಇದಕ್ಕೆ ಅವರ ಬಡತನವಷ್ಟೇ ಕಾರಣವಾಗಿರ-ಲಾರದು. ಹೆಂಡತಿ ಸತ್ತು ಹೋದರೆ, ಹೆಂಡತಿಗೆ ಮಕ್ಕಳಾಗದಿದ್ದರೆ ಮತ್ತೊಂದು ಮದುವೆಯ ಪ್ರಸ್ತಾಪ ಬರುತ್ತದೆ. ಅನೇಕರು ಪಿಂಜಾರರು ಇಂಥ ಸಂದರ್ಭಗಳಲ್ಲಿ ’ನಮ್ಮ ಹಣೆ ಬರಹದಲ್ಲಿ ಇದ್ದಂಗಾಗ್ತತೆ’ ಎಂದು  ಸುಮ್ಮನಿರುತ್ತಾರೆ. ಆದರೆ ಮತ್ತೊಬ್ಬ ಹೆಂಡತಿಗಾಗಿ, ಮೊದಲ ಹೆಂಡತಿ ಬದುಕಿದ್ದೂ, ಆಸೆ ಪಡುವುದನ್ನು ಪಿಂಜಾರರು ಒಪ್ಪುವುದಿಲ್ಲ. ವಿಶೇಷವೆಂದರೆ ಪಿಂಜಾರರು ಹೆಣ್ಣು ಮಕ್ಕಳನ್ನು ಅವಮಾನದಿಂದ ಕೀಳಾಗಿ ನಡೆಸಿಕೊಳ್ಳುವುದಿಲ್ಲ. ದಿನವಿಡೀ ಗಂಡಿನಂತೆ ಕೆಲಸಮಾಡಿ ಮನೆಗೆ ಬಂದು ಅಡಿಗೆ ಮಾಡುವ ಜವಾಬ್ದಾರಿ ಹೆಣ್ಣಿನದಾಗಿರುತ್ತದೆ. ದುಡಿಯದ ಗಂಡಸನ್ನು ಹೆಣ್ಣು ಬಾಯಿಗೆ ಬಂದ ಹಾಗೆ ಬಯ್ಯುತ್ತಾಳೆ. ಹೆಣ್ಣು ಹುಟ್ಟಿದರೂ ಕೀಳೆಂದು ಭಾವಿಸುವುದಿಲ್ಲ. ’ಹೆಣ್ಣು ಹುಟ್ಟಿದ ಮನೆ ತಣ್ಣಗಂತೆ’ ಅನ್ನುವುದು ಪಿಂಜಾರರ ತುದಿನಾಲಗೆಯಲ್ಲಿರುವ ಗಾದೆ. ಆದರೂ ಮದುವೆ ಮತ್ತು ಬದುಕಿನ ಅತಿಮುಖ್ಯ ನಿರ್ಧಾರಗಳನ್ನು ಕೈಗೊಳ್ಳುವಾಗ ಗಂಡಸರೇ ಮುಂದಾಗುತ್ತಾರೆ. ಆದರೆ ಇದು ಯಾವುದೂ ಹೆಣ್ಣಿನ ಗುಪ್ತ ಸಮ್ಮತಿಯನ್ನು ಪಡೆಯದೇ ನಡೆಯುವುದಿಲ್ಲ. ಪಿಂಜಾರರಲ್ಲಿ ವರದಕ್ಷಿಣೆಯ ಅನಿಷ್ಠ ಕೂಡ ಇದೆ. ಇದು ಈಗೀಗಂತೂ ವಿಕಾರರೂಪ ಪಡೆಯುತ್ತಿದೆ.

’ಹಿರಿಯಳಿಯ ತಂದೆಗೆ ಸಮಾನ’ ಎಂದು ಭಾವಿಸುವ ಪಿಂಜಾರರು ಆತನನ್ನು ವಿಶೇಷವಾಗಿ ಆದರಿಸುತ್ತಾರೆ. ಪ್ರತಿ ವಿಚಾರದಲ್ಲೂ ಆತನ ಅನುಮತಿಯನ್ನು ಅಪೇಕ್ಷಿಸುತ್ತಾರೆ. ಅತ್ತೆಯಾದವಳಂತೂ ಅಳಿಯನ ಮುಖಕ್ಕೆ ಮುಖ ಕೊಟ್ಟು ಮಾತನಾಡದಷ್ಟು ಸಂಕೋಚದಿಂದಿರುತ್ತಾಳೆ. ಆತ ಸೊಸೆ ಮತ್ತು ಅಳಿಯಂದಿರ ಬದುಕನ್ನು ನೇರಗೊಳಿಸಲು ತಂದೆಯಷ್ಟೇ ಶ್ರಮವಹಿಸುತ್ತಾನೆ, ಚಿಂತಿಸುತ್ತಾನೆ. ಗಂಡಸರು ಮದುವೆಯಾಗಿ ಹೋದ ಅಕ್ಕತಂಗಿಯರಿಗೆ ಪ್ರತಿವರ್ಷ ಯಾವುದಾದರೊಂದು ಹಬ್ಬದಲ್ಲಿ ಬಟ್ಟೆಬರೆ ಉಡುಗೊರೆ ಕೊಟ್ಟು ಆದರಿಸುತ್ತಾರೆ. ಹಾಗೆ ಮಾಡದಿದ್ದರೆ ಹೆಣ್ಣುಮಕ್ಕಳ ಶಾಪ ತಟ್ಟಿ ತಾನು ಏಳಿಗೆಯಾಗುವುದಿಲ್ಲ ಅನ್ನುವ ಆಂತರಿಕ ಭಯ ಅವರನ್ನು ಕಾಡುತ್ತದೆ.

ಪಿಂಜಾರರು ಅವಿಭಕ್ತ ಕುಟುಂಬ ಪದ್ಧತಿಯಲ್ಲಿದ್ದವರಾದರೂ ಈಗ ವಿಭಕ್ತ ಕುಟುಂಬದವರೂ ಇದ್ದಾರೆ. ಕೆಲವರು ಮನೆಯಷ್ಟನ್ನೇ ಭಾಗ ಮಾಡಿಕೊಂಡು ತಮಗಿರುವ ಭೂಮಿಯಲ್ಲಿ ಒಟ್ಟಾಗಿ ದುಡಿಯುತ್ತಾರೆ. ಒಟ್ಟಾಗೆ ಕೂಲಿ-ನಾಲಿ ಮಾಡುತ್ತಾರೆ. ಪಿಂಜಾರರಲ್ಲಿ ವಿಶೇಷವಾದ ಒಳಾಡಳಿತ ವ್ಯವಸ್ಥೆಯಿಲ್ಲವಾದರೂ ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಹೋಗಿರುತ್ತಾರೆ. ಮುಸ್ಲಿಮರನ್ನು ತಮ್ಮ ನಿತ್ಯದ ಬದುಕಿನಲ್ಲಿ ಅಷ್ಟಾಗಿ ಹಚ್ಚಿಕೊಳ್ಳದ ಪಿಂಜಾರರು ಹಿಂದೂ ಸಮುದಾಯದವರಲ್ಲಿ ತಮ್ಮ ಒಟ್ಟಾರೆ ಜೀವನವನ್ನು ಕಳೆಯುತ್ತಾರೆ. ಹಿಂದೆ ಸೂಚಿಸಿದ ಆಸ್ತಿ ಮತ್ತು ಹೆಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ಪಿಂಜಾರರು – ಪಿಂಜಾರರ ನಡುವೆ ಕಾಣುವಷ್ಟೇ ಹಿಂದೂ – ಪಿಂಜಾರರ ನಡುವೆಯೂ ತಲೆದೋರುತ್ತವೆ. ಪಿಂಜಾರರು ಇರುವ ಕಡೆಯೆಲ್ಲ ಅವರ ಬಗ್ಗೆ ಹಿಂದೂಗಳಲ್ಲಿ ಸಾಮಾನ್ಯವಾದ ಒಂದು ಅಭಿಪ್ರಾಯವಿದೆ. ಅದೇನೆಂದರೆ ’ಇವರು ಸಾಬರಂಗಲ್ಲ’ ಅನ್ನುವುದು ಅಥವಾ ಕೆಲವೊಮ್ಮೆ ರೇಗಿಸುವಾಗ ಸಿಟ್ಟಿನಿಂದ ’ನೀವೆಂಥ ಅಡ್ಡಸಾಬರಲೇ’ ಎಂದೂ ಅನ್ನುತ್ತಾರೆ. ಇಂಥ ಸಂಗತಿಗಳು ಪಿಂಜಾರರ ಸಾಮಾಜಿಕ ಸ್ಥಾನವನ್ನು, ಎಲ್ಲೂ ಸಲ್ಲದಿರುವ ಸ್ಥಾನವನ್ನು, ಸ್ಪಷ್ಟವಾಗಿ ಹೇಳುತ್ತವೆ. ಹಿಂದೂಗಳ ಜೊತೆಯಲ್ಲಿರುವ ಕಾರಣದಿಂದ ಮುಸ್ಲಿಮರು ಪಿಂಜಾರರನ್ನು ದೂರುತ್ತಾರೆ. ಪಿಂಜಾರರನ್ನು ಮುಸ್ಲಿಮರಿಂದ ಪ್ರತ್ಯೇಕಿಸಿ ನೋಡುವ ಹಿಂದೂಗಳು ಪಿಂಜಾರರನ್ನು ಹಿಂದೂಗಳೆಂದು ಒಪ್ಪಲಾರರು, ಮುಸ್ಲಿಮರೆಂದೂ ಕರೆಯಲಾರರು. ಈ ಬಗೆಯ ಸಾಮಾಜಿಕ ಸಂದಿಗ್ಧತೆ ಪಿಂಜಾರ ಜನಾಂಗದ್ದು, ಆದರೆ ಇಂತಹ ಇಕ್ಕಟ್ಟಿನ ನಡುವೆಯೂ ಪಿಂಜಾರರು ಜನಾಂಗದ್ದು. ಆದರೆ ಇಂತಹ ಇಕ್ಕಟ್ಟಿನ ನಡುವೆಯೂ ಪಿಂಜಾರರು ಉಭಯ ಸಂಸ್ಕೃತಿಗಳ ಅನುಸರಣೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಪಿಂಜಾರರ ಸಾಮಾಜಿಕ ಜೀವನದ ಅಧ್ಯಯನದ ಈ ಹಂತದಲ್ಲಿ ಒಂದು ಸಂಗತಿಯನ್ನು ಹೇಳಲೇಬೇಕು. ಅದೇನೆಂದರೆ ಪಿಂಜಾರರು ಭಾರತೀಯ ಸಮಾಜದಲ್ಲಿ ಅತ್ಯಂತ ನಿಕೃಷ್ಟ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ತಮ್ಮ ಮೂಲಾಶ್ರಮದ ಆಕರ್ಷಣೆಯಿಂದಾಗಿ ಇಸ್ಲಾಂನ ನಿಷ್ಠೆ ಹೊಂದಿರುವುದಕ್ಕಾಗಿ ಹಿಂದೂ ಧರ್ಮದ ತಿರಸ್ಕಾರವನ್ನು ಒಟ್ಟಿಗೇ ಅನುಭವಿಸುವ ಪಿಂಜಾರರು ವಾಸಿಸುವ ಯಾವುದೇ ಊರಿನಲ್ಲಿಯಾಗಲೀ ಅಸ್ಪೃಶ್ಯರನ್ನು ಮೇಲ್ಜಾತಿಯ ಧಣಿಗಳ ಗತ್ತಿನಲ್ಲಿ ಉಪಚರಿಸುತ್ತಾರೆ. ಅಸ್ಪೃಶ್ಯರನ್ನು ತಮ್ಮ ಮನೆಯೊಳಗೆ ಬಿಟ್ಟುಕೊಂಡರೂ ಅಡಿಗೆ  ಮನೆ, ದೇವರ ಕೋಣೆಯೊಳಗೆ ಬಿಟ್ಟುಕೊಳ್ಳುವುದಿಲ್ಲ. ಅಷ್ಟೇ ಅಲ್ಲ ಲಿಮಗಾಯ್ತರ ಮನೆಯೊಳಗೆ ಪಿಂಜಾರರು ಊಟ ಮಾಡುವ, ಚಹಾ ಕುಡಿಯುವ ಸಂದರ್ಭ ಬಂದರೆ ಅವರು ಬಳಸಿದ ತಟ್ಟೆ ಲೋಟಗಳನ್ನು ತೊಳೆಯದೇ ಒಳಗೆ ತೆಗೆದುಕೊಂಡು ಹೋಗುವುದಿಲ್ಲ. ಪಿಂಜಾರರ ಪರಿಸ್ಥಿತಿಯೇ ಹೀಗಿರುವಾಗ ಅವರು ಅಸ್ಪೃಶ್ಯರನ್ನು ಹೀಗೆ ನೋಡಿಕೊಳ್ಳುವುದು ವಿಚಿತ್ರವಾಗಿದೆ. ಹಿಂದೂಜಾತಿ ವ್ಯವಸ್ಥೆಯ ಮೇಲ್ಜಾತಿಯವರು ನಡೆಸಿಕೊಳ್ಳುವಷ್ಟು ಅಮಾನವೀಯವಾಗಿ ನಡೆದುಕೊಳ್ಳದಿದ್ದರೂ ಪಿಂಜಾರರು ಅಸ್ಪೃಶ್ಯರ ನಡುವಿನ ಸಂಬಂಧ ಆಪ್ಯಾಮಾನವೀಯವಾಗಿ ಇಲ್ಲ. ಇದನ್ನು ಗಮನಿಸಿದರೆ ಪಿಂಜಾರರು ಅಸ್ಪೃಶ್ಯರಲ್ಲದ, ಆದರೆ ಹಿಂದುಳಿದ ಶೂದ್ರ ಸಮುದಾಯಗಳಿಂದ ಮತಾಂತರಗೊಂಡಿರಬಹುದೇ? ಎಂದು ಸಂಶಯವಾಗುತ್ತದೆ. ಹಾಗೆ ನೋಡಿದರೆ ತಳವಾರ, ಕುರುಬ ಮತ್ತಿತರ ಕಾಟುವ ಜನಾಂಗದವರೊಡನೆ ಸಲುಗೆಯಿಂದಲೇ ಇರುತ್ತಾರೆ. ಲಿಂಗಾಯಿತ ರೊಂದಿಗಿನ ಹೊಕ್ಕು ಬಳಕೆ ಕೂಡ ಚೆನ್ನಾಗಿದೆ. ಆದ್ದರಿಂದ ಪಿಂಜಾರರ ಇಂಥ ನಡವಳಿಕೆ ಅವರ ಮೂಲದ ಕುರಿತು ವಿಶೇಷವಾದ ಒಳನೋಟಗಳನ್ನು ಕೊಡುತ್ತದೆ.

ಪಿಂಜಾರರ ಕುಟುಂಬ ಪದ್ಧತಿ ಕೂಡ ಅವರ ಸಾಮಾಜಿಕ ಜೀವನದಂತೆಯೇ ವಿಶಿಷ್ಟ-ವಾದುದು. ಅವರು ತಮ್ಮ ಕುಟುಂಬ ರಚನೆಯಲ್ಲಿ ಹಿಂದೂ ಮುಸ್ಲಿಮರಿಬ್ಬರಿಂದಲೂ ಅತ್ಯುತ್ತಮವಾದುದನ್ನು ಆಯ್ಕೆ ಮಾಡಿಕೊಂಡಂತೆ ಕಾಣುತ್ತದೆ. ಪಿಂಜಾರರಲ್ಲಿ ಕೂಡ ಪುರುಷ ಪ್ರಧಾನ ಕುಟುಂಬ ಪದ್ಧತಿಯೇ ರೂಢಿಯಲ್ಲಿದೆ. ಮದುವೆಯಾದ ಹೆಣ್ಣು ಗಂಡಿನಮನೆಗೆ ಹೋಗಿ ನೆಲೆಸುವುದರಿಂದ ಪುರುಷ ಪ್ರಾಧಾನ್ಯತೆ ಆರಂಭವಾಗುತ್ತದೆ. ಪಿಂಜಾರರಲ್ಲಿ ಮದುವೆಯ ಸಂಪ್ರದಾಯಗಳು ಇಸ್ಲಾಂ ಧರ್ಮಾನುಸಾರವಾಗಿಯೇ ನಡೆಯುತ್ತವೆ. ಗಂಡನ್ನು ಹೆಣ್ಣಿನ ಮನೆಗೆ ಕರೆದುಕೊಂಡು ಹೋಗಿ ತೋರಿಸಲಾಗುತ್ತದೆ. ಪರಸ್ಪರರಿಗೆ ಒಪ್ಪಿಗೆಯಾದ ನಂತರ ನಿಶ್ಚಿತಾರ್ಥ, ಮಾತುಕತೆ, ಕೊಡುವುದು, ತಗೊಳ್ಳುವುದು, ಮದುವೆ ಮುಹೂರ್ತದ ನಿರ್ಧಾರ ಇತ್ಯಾದಿಗಳು ನಡೆಯುತ್ತವೆ. ಪಿಂಜಾರ ಜನಾಂಗದಲ್ಲಿ ತಂತಮ್ಮ ನಡುವೆಯೇ ಸಂಬಂಧಗಳು ನಡೆಯುತ್ತವೆ. ಸಾಮಾನ್ಯವಾಗಿ ಪಿಂಜಾರರು ತಮ್ಮ ಮನೆಯ ಹೆಣ್ಣನ್ನು ಮುಸ್ಲಿಂ ಮನೆತನಕ್ಕೆ ಕೊಡುವುದಿಲ್ಲ ಹಾಗೂ ಮುಸ್ಲಿಂ ಮನೆತನದ ಹೆಣ್ಣನ್ನು ತಮ್ಮ ಮನೆಗೆ ತಂದುಕೊಳ್ಳುವುದೂ ಇಲ್ಲ. ಪಿಂಜಾರರು ಇದಕ್ಕೆ ಕೊಡುವ ಕಾರಣ ಕುತೂಹಲಕರವಾಗಿದೆ. ’ನಮಗೂ ಅವರಿಗೂ ಸರಿಬರುವುದಿಲ್ಲ, ನಮ್ಮ ಹೆಣ್ಣು ಮಕ್ಕಳಿಗೆ ಬುರುಖಾ ಹಾಕಿಸಿಬಿಡ್ತಾರೆ’ ಎಂದು ಮೂಗು ಮುರಿಯುತ್ತಾರೆ. ಹಾಗೆಯೇ ಮುಸ್ಲಿಮರು ಕೂಡ ಪಿಂಜಾರರ ಮನೆತನಕ್ಕೆ ಹೆಣ್ಣುಕೊಟ್ಟು ತಂದುಕೊಳ್ಳುವ ಸಂಪ್ರದಾಯವನ್ನಿಟ್ಟುಕೊಂಡಿಲ್ಲ. ಅದಕ್ಕೆ ಅವರು ಕೊಡುವ ಕಾರನ ’ಅವರು ನದಾಫ ದೀನ್ ಮೆ ನಹೀ, ದುನಿಯಾಮೆ ನಹೀ’, ಅಂದರೆ ಪಿಂಜಾರರಿಗೆ ಧರ್ಮವೂ ಇಲ್ಲ, ಲೋಕವೂ ಇಲ್ಲ, ಎಂದು ಇದು ವಿಚಿತ್ರವಾದರೂ ಸತ್ಯವಾಗಿದೆ. ಇಂಥ ಕಾರಣದಿಂದಲೇ ಪಿಂಜಾರರನ್ನು ಅಲ್ಪಸಂಖ್ಯಾತರಲ್ಲಿಯೇ ಇರುವ ಅತ್ಯಲ್ಪಸಂಖ್ಯಾತರು (Microscopic Minority) ಎಂದು ಕರೆಯುವುದು ವಾಡಿಕೆಯಾಗಿದೆ.

ಪಿಂಜಾರರಲ್ಲಿ ವೈವಾಹಿಕ ಸಂಬಂಧವನ್ನು ಕುರಿತು ವೈಜ್ಞಾನಿಕ ತಿಳುವಳಿಕೆಯಿರುವಂತೆ ಕಾಣುತ್ತದೆ. ಈ ಕುರಿತ ವಸ್ತುಸ್ಥಿತಿ ಹೀಗಿದೆ; ಇಸ್ಲಾಂನಲ್ಲಿ ಗಂಡು ತನ್ನ ಸ್ವಂತ ಅಕ್ಕ ಅಥವಾ ತಂಗಿಯ ಮಗಳನ್ನು ಮದುವೆಯಾಗುವುದು ನಿಷಿದ್ಧ. ಹಿಂದೂಗಳಲ್ಲಿ ಇದಕ್ಕೆ ಅವಕಾಶವಿದೆ. ಮಾತ್ರವಲ್ಲ ಇದು ಹೆಚ್ಚಾಗಿಯೂ ಇದೆ. ಇಸ್ಲಾಂನಲ್ಲಿ ಅಣ್ಣ, ಚಿಕ್ಕಪ್ಪ, ದೊಡ್ಡಪ್ಪನ ಮಗಳನ್ನು ಮದುವೆಯಾಗಲು ಸಮ್ಮತಿಯಿದೆ. ಹಿಂದೂಗಳಲ್ಲಿ ಇದಕ್ಕೆ ಅವಕಾಶವಿಲ್ಲ, ಮಾತ್ರವಲ್ಲ ಇದನ್ನು ಅನೈತಿಕ ಎಂದೇ ಪರಿಗಣಿಸಲಾಗುತ್ತದೆ. (ಭಾರತೀಯ ಸಾಮಾಜಿಕ ಪರಿಸರದಲ್ಲಿ ಹಿಂದು ಮುಸ್ಲಿಂ ಎಂಬಂತಾಗಿರುವುದಕ್ಕೆ ಬಹುಶಃ ಈ ಎರಡೂ ಧರ್ಮಗಳಲ್ಲಿರುವ ಪರಸ್ಪರ ವಿರುದ್ಧವೆನ್ನಬಹುದಾದ ಈ ಬಗೆಯ ಸಂಗತಿಗಳೇ ಕಾರಣವಿರಬಹುದು. ಇದಕ್ಕೆ ಪೂರಕವಾಗಿ ಹಿಂದೂಗಳಲ್ಲಿ ವಿಗ್ರಹಾರಾಧನೆಯಿದೆ. ಇಸ್ಲಾಂನಲ್ಲಿ ಇಲ್ಲ. ಹಿಂದೂಗಳಲ್ಲಿ ಅನೇಕ ದೇವ – ದೇವತೆಗಳಿದ್ದಾರೆ, ಇಸ್ಲಾಂನಲ್ಲಿ ಏಕದೇವೋಪಾಸನೆ, ಹಿಂದೂಗಳು ಪೂರ್ವಕ್ಕೆ ತಿರುಗಿ ಪ್ರಾರ್ಥಿಸಿದರೆ, ಮುಸ್ಲಿಮರು ಪಶ್ಚಿಮಕ್ಕೆ ತಿರುಗುತ್ತಾರೆ. ಉರ್ದು ಭಾಷೆಯೊಂದನ್ನು ಹೊರತು – ಪಡಿಸಿದರೆ ಭಾರತೀಯ ಭಾಷೆಗಳ ಲಿಪಿಯನ್ನು ಬರೆಯುವ, ಓದು ಕ್ರಮ ಎಡದಿಂದ ಬಲಕ್ಕೆ. ಆದರೆ ಭಾರತದಲ್ಲಿ ಮುಸ್ಲಿಮರು ಹೆಚ್ಚಾಗಿ ಉರ್ದು, ಮತ್ತು ಮುಸ್ಲಿಮರ ಮೂಲ ಭಾಷೆ ಅರಬ್ಬಿಯನ್ನು ಓದುವ, ಬರೆಯುವ ಕ್ರಮ ಬಲದಿಂದ ಎಡಕ್ಕೆ ಇತ್ಯಾದಿ – ಹೀಗೆ ಪಟ್ಟಿ ಬೆಳೆಯುತ್ತದೆ). ಇರಲಿ, ಪಿಂಜಾರರಲ್ಲಿ ಮಾತ್ರ ಹಿಂದೂ ಹಾಗೂ ಇಸ್ಲಾಂನಿಂದ ಆಯ್ದುಕೊಂಡ ವಿವಾಹ ಪದ್ಧತಿಯ ಕ್ರಮಗಳು ವಿಶಿಷ್ಟವಾಗಿವೆ. ಉದಾಹರಣೆಗೆ ಪಿಂಜಾರರು ಸ್ವಂತ ಅಕ್ಕ ಅಥವಾ ತಂಗಿಯ ಮಗಳನ್ನು ಮದುವೆಯಾಗುವುದಿಲ್ಲ. ಇದು ಇಸ್ಲಾಂನಿಂದ ಆಯ್ದುಕೊಂಡದ್ದು. ಹಾಗೆಯೇ ಪಿಂಜಾರರು ಅಣ್ಣ, ದೊಡ್ಡಪ್ಪ, ಚಿಕ್ಕಪ್ಪನ ಮಗಳನ್ನು ಮದುವೆಯಾಗುವುದಿಲ್ಲ.  ಹಾಗೂ ಇದನ್ನು ಅನೈತಿಕ ಎಂದೇ ಭಾವಿಸುತ್ತಾರೆ.  ಇದು ಹಿಂದೂಧರ್ಮದಿಂದ ಆಯ್ಕೆ ಮಾಡಿಕೊಂಡದ್ದು. ಪಿಂಜಾರರು ಅಳವಡಿಸಿಕೊಂಡಿರುವ ಈ ರೀತಿಯನ್ನು ಗಮನಿಸಿದರೆ ಒಂದು ವೈಜ್ಞಾನಿಕವಾದ ಮತ್ತೊಂದು ಸಾಮಾಜಿಕ ಸಂಬಂಧಗಳ ಸಂದರ್ಭದಲ್ಲಿ ಅನುಸರಿಸಲಾಗುವ ಕೆಲವು ಮೌಲ್ಯಗಳನ್ನು ಯಥಾವತ್ತಾಗಿ ಮುಜುಗರಕ್ಕೆ ಒಳಗಾಗದಂತೆ ಪಾಲಿಸಬಹುದಾದ ಆಯ್ಕೆ ಇದಾಗಿದೆ.ಇದು ಉತ್ತಮವೂ ಆಗಿದೆ. ಆದರೆ ಪಿಂಜಾರರ ಕೌಟುಂಬಿಕ ಪದ್ಧತಿಯಲ್ಲಿರುವ ವಿಶಿಷ್ಟತೆಯೆಂದರೆ ತಂತಮ್ಮೊಳಗೆ ಹೊಸ ಹೊಸ ಸಂಬಂಧವನ್ನು ಹುಡುಕಿಕೊಳ್ಳುವುದು.  ಇದರಿಂದ ಕಾಲಾನಂತರದಲ್ಲಿ ಆಗುವ ವಿರುದ್ಧ ಪರಿಣಾಮವನ್ನು ಪಿಂಜಾರರು ಗಮನಿಸಿಲ್ಲ ಎಂದು ಹೇಳುವಂತಿಲ್ಲ.  ಯಾಕೆಂದರೆ ಒಂದು ಊರಿನ ಗಂಡು ಮತ್ತೊಂದು ಊರಿನ ಹೆಣ್ಣನ್ನು ಮದುವೆಯಾದಾಗ ಅದು ಹೊಸ ಸಂಬಂಧವೇನೋ ಸರಿ. ಆ ಎರಡು ಮನೆತನಗಳ ನಡುವೆ ನಂಟಸ್ತಿಕೆ ಏರ್ಪಟ್ಟಿದ್ದು ಸರಿ.  ಆದರೆ ಇವರ ಕರುಳಬಳ್ಳಿ ಬೆಳೆದಂತೆ ಇಂಥದೇ ಹೊಸ ಸಂಬಂಧ ಸಾಧ್ಯವಾಗುತ್ತದೆ ಎಂಬ ನಂಬಿಕೆಯಿಲ್ಲ.  ಅಲ್ಲದೇ ಹೀಗೆ ಹೊಸ ಸಂಬಂಧವನ್ನು ಹುಡುಕಿ = ಕೊಂಡು ಹೊರಟಾಗ ತಮ್ಮ ಬೀಗರಿಗೆ ಅಣ್ಣ – ತಮ್ಮಂದಿರಾದಂತಹ ಮನೆತನದಲ್ಲಿ ಹೆಣ್ಣು ಮಾಡಿಕೊಂಡರೇನೋ ಸರಿ, ಕೆಲವೊಮ್ಮೆ ತಮ್ಮ ಬೀಗರಿಗೆ ಬೀಗರಾದವರ ಮನೆಯಲ್ಲಿ ಸಂಬಂಧ ಉಂಟಾಗುವುದು ಸಾಧ್ಯವಿದೆ. ಇದರಿಂದ ತಮಗೆ ಅಣ್ಣ – ತಮ್ಮಂದಿರಾದವರ ಮನೆಯಿಂದ ಹೆಣ್ಣು ತಂದುಕೊಂಡು, ಅಣ್ಣ – ತಮ್ಮ ಎಂದು ಕರೆಯುತ್ತಿದ್ದರು, ಅಳಿಯ – ಮಾವ ಎನ್ನಬೇಕಾದ ಆಭಾಸಗಳೂ ಆದದ್ದಿದೆ. ಇವು ದೂರದ ಊರಿನಲ್ಲಿ ತಮಗೆ ಅರಿವಿಲ್ಲದೇ ಆಗುವುದರಿಂದ ಇವುಗಳ ಬಗ್ಗೆ ಪಿಂಜಾರರು ಅಷ್ಟೇನೂ ತಲೆಕೆಡಿಸಿಕೊಳ್ಳುವುದಿಲ್ಲ.

ಪಿಂಜಾರರ ಕುಟುಂಬದಲ್ಲಿ ಅವ್ವ – ಅಪ್ಪ, ಅಜ್ಜ – ಅಜ್ಜಿ, ಅತ್ತೆ – ಮಾವ, ಸಣ್ಣಪ್ಪ – ದೊಡ್ಡಪ್ಪ, ಅಕ್ಕ – ತಮ್ಮ, ಅಣ್ಣ – ತಂಗಿ, ಅಕ್ಕ – ಮಾವ ( ಅಕ್ಕ   ಅಥವಾ ತಂಗಿಯ ಗಂಡನನ್ನು ಹಿಂದೂಗಳಲ್ಲಿ ಭಾವ ಎಂದು ಕರೆಯುವ ವಾಡಿಕೆಯಿದೆ. ಆದರೆ ಪಿಂಜಾರರಲ್ಲಿ ಮಾವ ಎಂದೇ ಕರೆಯುತ್ತಾರೆ. ಕನ್ನಡದಲ್ಲಿರುವ ವ್ಯಾಕರಣ ವೈಶಿಷ್ಟ್ಯವಾದ ’ವಮಹಪ’ ಭೇದವನ್ನು ಇಲ್ಲಿ ನೆನೆಸಿಕೊಂಡರೆ ಭಾವ – ಮಾವ ಪದಗಳ ಅರ್ಥ ಒಂದೇ ಆಗುತ್ತದೆ.) ಮುಂತಾದ ಪರಿಭಾಷೆಗಳಲ್ಲಿಯೇ ಸಂಬಂಧಗಳಿವೆ. ತಂಗಿ ಅಥವಾ ಮಗಳನ್ನೂ ಸಂಬೋಧಿಸುವಾಗ ತಾಯಿ ಎಂದೂ, ಮಗನನ್ನು ಕರೆಯುವಾಗ ತಮ್ಮ ಎಂದೂ, ಪ್ರೀತಿ ತೋರುವುದಿದೆ. ಈ ಮೊದಲೇ ಹೇಳಿದಂತೆ ಪಿಂಜಾರರಲ್ಲಿ ಪುರುಷ ಪ್ರಧಾನ ಕೌಟುಂಬಿಕ ವ್ಯವಸ್ಥೆ ಜಾರಿಯಲ್ಲಿದೆ. ಕುಟುಂಬದ ಯಾವುದೇ ಮುಖ್ಯ ಜವಾಬ್ದಾರಿ ಗಂಡಸಿನದೇ ಆಗಿರುತ್ತದೆ. ಅದು ರೈತಾಪಿ ಕೆಲಸವಾಗಿರಲಿ, ಮನೆಯ ಸದಸ್ಯರಿಗೆ ಬಟ್ಟೆ – ಬರೆ ತರುವುದಿರಲಿ, ಹಬ್ಬ – ಹರಿದಿನದ ಆಚರಣೆಯಿರಲಿ, ಮದುವೆಯ ಸಂಬಂಧವಾದ ಮಾತುಕತೆಯಿರಲಿ, ಆಸ್ತಿಹಂಚಿಕೆಯ ವಿಚಾರವಿರಲಿ, ಎಲ್ಲಾ ಸಂಗತಿಗಳನ್ನು ಮನೆಯ ಯಜಮಾನ ನಿರ್ವಹಿಸುತ್ತಾನೆ. ಆತನದೇ ಕಡೆಯ ಮಾತೂ ಆಗಿರುತ್ತದೆ. ಕೆಲವೊಮ್ಮೆ ಇದೆಲ್ಲಾ ಮನೆಯವರೊಂದಿಗೆ ಚರ್ಚೆ ಮಾಡಿದ ನಂತರವೇ ನಿರ್ಧಾರವಾಗುತ್ತದೆ.

ಪಿಂಜಾರರಲ್ಲಿ ಅವಿಭಕ್ತ ಕುಟುಂಬಗಳೇ ಹೆಚ್ಚಾಗಿದ್ದುದು ತಿಳಿದುಬರುತ್ತದೆ. ಸಾಮಾನ್ಯವಾಗಿ ನಾಲ್ಕೈದು ತಲೆಮಾರಿನವರೆಗೂ ಈ ಬಗೆಯ ಅವಿಭಕ್ತ ಕುಟುಂಬಗಳು ಮುಂದುವರಿದು – ಕೊಂಡು ಬಂದದ್ದಿದೆ. ಇಂಥ ಕುಟುಂಬದ ಹಿರಿಯ ಯಜಮಾನನ ನಿರ್ದೇಶನದಂತೆ ಹಾಸಿಗೆ, ದಿಂಬು ತಯಾರಿಸುವುದು, ಉಳುಮೆ, ಬಿತ್ತನೆ, ಕೊಯ್ಲು, ಒಕ್ಕಲು, ಮೊದಲಾದ ರೈತಾಪಿ ಕೆಲಸಗಳು, ಸಂಸಾರಕ್ಕೆ ಅಗತ್ಯವಾದ ಕಾಳು – ಕಡೆ, ಬಟ್ಟೆ – ಬರೆ ತರುವುದು, ಮನೆಯ ಗಂಡು – ಹೆಣ್ಣಿನ ವಿವಾಹದ, ಕೊಡು-ತಗೊಳೋ ಮಾತುಕತೆ ನಡೆಸುವುದು. (ಇನ್ನೂ ಮುಂದುವರಿದು ಅಣ್ಣ -ತಮ್ಮಂದಿರ ನಡುವೆ ಭಿನ್ನಾಭಿಪ್ರಾಯಗಳು ಬಂದು ಭಾಗವಾಗಲೇ ಬೇಕೆಂದು ಯಾರಾದರೂ ಹಟ ಹಿಡಿದರೆ ಹಾಗೆ ಹೊರಗೆ ಹೋಗಬೇಕೆನ್ನುವವನನ್ನು ಮೊದಲು ಬರಿಗೈಯಿಂದಲೇ ಬೇರೆ ಮಾಡಲಾಗುತ್ತದೆ. ಯಾಕೆಂದರೆ ಎಲ್ಲರಲ್ಲಿಯೂ ಒಂದಾಗಿ ಬಾಳುವ ಬಯಕೆಯಿದ್ದಾಗ ತಾನೊಬ್ಬನು ಬೇರೆಯಾಗಬೇಕೆನ್ನುವನನ್ನೇ ಹೊರಹಾಕಿ ಆತ ತಾನಾಗಿಯೇ ಮತ್ತೆ ಕೂಡಿ ಬದುಕುತ್ತೇನೆಂದು ಬರಲಿಚ್ಛಿಸಿದರೆ ಸೇರಿಸಿಕೊಳ್ಳುತ್ತಾರೆ. ಈ ನಡುವೆ ಕುಟುಂಬದಿಂದ ಹೊರಹೋದವನು ಇಲ್ಲಿಗಿಂತ ಸ್ವಂತ ಕೂಲಿ -ನಾಲಿ ಮಾಡಿ ಸುಖವಾಗಿರುವುದನ್ನು ಕಂಡ ಒಳಗಿನವರಲ್ಲಿಯೂ ಭಾಗವಾಗಬೇಕೆಂಬ ಬಯಕೆ ಏನಾದರೂ ಬಂದರೆ ಅದರ ಸೂಕ್ಷ್ಮವನ್ನು ಅರ್ಥಮಾಡಿಕೊಂಡ ಹಿರಿಯ ತಲೆ ಎಲ್ಲರಿಗೂ ಇದ್ದುದರಲ್ಲಿ ಸಮವಾಗಿ ಹಂಚಿ ಕೈತೊಳೆದು-ಕೊಳ್ಳುತ್ತದೆ) ಮೊದಲಾದ ಎಲ್ಲಾ ಕೆಲಸ ಕಾರ್ಯಗಳಿಗೂ ಮನೆಯ ಯಜಮಾನದ ಆಣತಿ ಬೇಕೇ ಬೇಕು.

ಪಾಶ್ಚಾತ್ಯರ ಆಧುನಿಕತೆಯ ಪ್ರಭಾವ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲ ಜಾತಿ-ಗಳಲ್ಲಿದ್ದಂತಹ ಅವಿಭಕ್ತ ಕುಟುಂಬ ಪದ್ಧತಿಯನ್ನು ಒಡೆದುಹಾಕಿದೆ. ಮೇಲ್ಜಾತಿಯ ಶ್ರೀಮಂತರಲ್ಲಿ ಮಾತ್ರವಿದ್ದ ಈ ಪದ್ಧತಿ ನಿಧಾನವಾಗಿಯಾದರೂ ಇತರ ಮಧ್ಯಮ, ಹಿಂದುಳಿದ ವರ್ಗಗಳನ್ನು ಪ್ರಭಾವಿಸಿತು. ಅವಿಭಕ್ತ ಕುಟುಂಬ ಪದ್ಧತಿಗೆ ಆರ್ಥಿಕವಾದ ಉತ್ಪಾದನೆ ಮತ್ತು ಆದಾಯ ಮುಖ್ಯ ಲಕ್ಷಣವಾಗಿರುವುದರಿಂದ ಇದು ಬರಬರುತ್ತಾ ಹಲವಾರು ದುಡಿದುಂಡರೆ ಕೆಲವರು ಮಾತ್ರ ಅವರ ಬೆವರಿನ ಫಲದಿಂದ ಅಧಿಕಾರ ನಡೆಸುವುದನ್ನು ವಿರೋಧಿಸುವ ಕುಟುಂಬದೊಳಗಿನ ಸಾಮಾಜಿಕ ಬಂಡಾಯವನ್ನು ಹುಟ್ಟು ಹಾಕಿತು. ಅಲ್ಲದೆ ಮನುಷ್ಯ ಆಧುನಿಕನಾದಂತೆ ಕೆಲವು ಸಂಗತಿಗಳಲ್ಲಾದರೂ ಏಕಾಂತವನ್ನು ಬಯಸಲಾರಂಭಿಸಿದ. ಆ ಏಕಾಂತದಲ್ಲಿ ತಾನು, ತನ್ನ ಮಕ್ಕಳು ಎನ್ನುವ ವಿಶೇಷ ಮಮಕಾರ ಹುಟ್ಟಿದಂತೆ ತನ್ನದೇ ಆದಾಯ ತನ್ನ ಸಣ್ಣ ಕುಟುಂಬಕ್ಕೆ ಮಾತ್ರ ವ್ಯಯವಾಗುವಂತಿದ್ದರೆ ಅದರಿಂದ ತನಗೇ ಲಾಭ ಎನ್ನುವಂತಹ ಲಾಲಸೆ ಅಥವಾ ಸಹಜ ಬಯಕೆಯಿಂದ ಪ್ರತ್ಯೇಕಗೊಳ್ಳುವ ಬಗ್ಗೆ ಆಲೋಚನೆ ಬರುತ್ತದೆ.

ಆದ್ದರಿಂದ ಈಗ ವಿಭಕ್ತ ಕುಟುಂಬಗಳೇ ಹೆಚ್ಚು ಸಂಖ್ಯೆಯಲ್ಲಿವೆ. ಪಿಂಜಾರರಲ್ಲಿ ಅವಿಭಕ್ತ ಕುಟುಂಬಗಳು ದೀರ್ಘಾವಧಿಯ ಕಾಲ ಜಾರಿಯಲ್ಲಿರಲಿಲ್ಲ ಎಂದು ಈಗಿನ ಹಿರಿಯರು ಹೇಳುತ್ತಾರೆ. ಯಾಕೆಂದರೆ ಇಂಥ ಕುಟುಂಬಗಳ ನಿರ್ವಹಣೆಗೆ ಸಾಕಾಗುವಷ್ಟು ದೊಡ್ಡ ಮನೆಗಳಾಗಲೀ, ಆರ್ಥಿಕ ಉತ್ಪನ್ನವಾಗಲೀ ಪಿಂಜಾರರಿಗೆ ಇರಲಿಲ್ಲ. ಪಿಂಜಾರರ ಕಾಯಕವೇ ಅಂತಹದ್ದು. ಆ ಹೊತ್ತಿನ, ಆ ದಿನದ ಖರ್ಚಿಗೆ ಸಾಕಾಗುವಷ್ಟು ಆದಾಯ ದೊರೆತರೆ ಅದೇ ಪುಣ್ಯ. ಅದರಲ್ಲೂ ಆಧುನಿಕ ಕೈಗಾರಿಕೆಗಳ ಹಿನ್ನೆಲೆಯಲ್ಲಿ ಪಿಂಜಾರರ ಕಯಕಕ್ಕೆ ತೀವ್ರತರವಾದ ಹಿನ್ನಡೆಯುಂಟಾಗಿದೆ. ನಮ್ಮ ನಾಡಿನ ಎಲ್ಲ ಬಗೆಯ ವೃತ್ತಿವಂತರ ಗೃಹ ಕೈಗಾರಿಕೆಗಳು ನಾದ ಹಂತಕ್ಕೆ ಬಂದು ವಿಚಿತ್ರವಾದ ಸ್ಪರ್ಧೆಯೂ ಏರ್ಪಟ್ಟಿದೆ. ಆಧುನಿಕ ಗಿರಣಿ, ಕೈಗಾರಿಕೆಗಳ ಆಕರ್ಷಣೀಯ ತಯಾರಿಕೆಗಳ ಜೊತೆಗೆ ಸ್ಪರ್ಧಿಸುವುದು ಕರಕುಶಲ ಕಲಾವಿದರಿಗೂ ಕಷ್ಟವಾಗುತ್ತಿದೆ. ಇಷ್ಟಾಗಿಯೂ ಪಿಂಜಾರರ ಕಾಯಕ ಹೊಸ ಜಾಯಮಾನಕ್ಕನುಗುಣವಾಗಿ ಹೊಂದಿಕೊಳ್ಳುತ್ತ ಕುಂಟುತ್ತಾ ಸಾಗಿದೆ. ಹಳ್ಳಿಹಳ್ಳಿಗಳ ಮೇಲೆ ಹತ್ತಿ, ಬಟ್ಟೆ ಹೊತ್ತು ತಿರುಗಾಡಿ ಹಾಸಿಗೆ ರಿಪೇರಿ ಎಂದು ಕೂಗುತ್ತಾ ಹೊರಟ ಪಿಂಜಾರರನ್ನು ಒಂದಿಷ್ಟು ಪ್ರೀತಿಯಿಂದ ಕರೆದು ಮಾತನಾಡಿಸಿದರೆ ಅವರ ಕಾಯಕ ಕಷ್ಟದ ಕತೆಯನ್ನು ಕೇಳಬಹುದು. ಕಣ್ಣೀರು ಮಿಡಿಯಬಹುದು.