ಇಸ್ಲಾಂ ಧರ್ಮದ ಆಚರಣೆಗಳನ್ನುಳ್ಳ ’ಪಿಂಜಾರ’ ಜನಾಂಗದವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ಆದರೆ ಅವರ ಜನಸಂಖ್ಯಾ ಬಾಹುಳ್ಯ ಕಂಡುಬರುವುದು ಮಾತ್ರ ಉತ್ತರ ಕರ್ನಾಟಕ ಭಾಗಗಳಲ್ಲಿ. ಇದಕ್ಕೆ ಮುಖ್ಯ ಕಾರಣ ಅವರ ವೃತ್ತಿ ಹಾಗೂ ಮೂಲ. ಪಿಂಜಾರರ ಮಹಿಳೆಯರ ಸಾಂಸ್ಕೃತಿಕ ವಿವರಗಳ ವಿಶ್ಲೇಷಣೆಯ ಸಂದರ್ಭದಲ್ಲಿ ಈ ಜನಾಂಗದ ಮೂಲವನ್ನು ಕುರಿತು ಕೆಲವು ಮಾಹಿತಿಗಳನ್ನು ಗಮನಿಸುವುದು ಸೂಕ್ತ.

ಈ ಜನಾಂಗದ ಮೂಲ ಹಾಗೂ ವೃತ್ತಿಯ ಬಗ್ಗೆ ಮೈಸೂರು ಗೆಜೆಟಿಯರ್‌ನಲ್ಲಿ ಕಂಡುಬರುವ ಸಾಲುಗಳು ಇವು : “The Pinjari, as their name indicates, are cleaners of cotton. They do not intermarry with other Muhammadans, who as a rule have no intercourse with them. The Pinjari were to a great extent afghans, Maratas, and jats in origin, disbanded from the service of the Mughal empire, but became known as a tribe of free boasters who ravaged India on a grand scale, with large armies and gave rise to many wars. They were finally suppressed in central India in 1917 in the time of Marguis of Hastings. They are now settled down in the persuit of peaceful occupations, in agriculture and government service of various kinds.”

ಮೇಲಿನ ಮಾತುಗಳಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿಗಳು ಇವು:

೧) ಪಿಂಜಾರರು ಮೂಲತಃ ಆಫ್ಘನ್ನರು, ಮರಾಠರು ಹಾಗೂ ಜಾಟರು ಆಗಿದ್ದರೆನ್ನುವುದು

೨) ವೃತ್ತಿಯಲ್ಲಿ ಹಾಸಿಗೆ, ದಿಂಬು ತಯಾರಿಸುವವರು ಹಾಗೂ ಇತರ ಮುಸ್ಲಿಂರೊಂದಿಗೆ ವೈವಾಹಿಕ ಸಂಬಂಧವನ್ನು ಹೊಂದದೆ ಇರುವವರು ಎನ್ನುವುದು.

ಮಹಿಳೆಯರನ್ನು ಕುರಿತು ಇಲ್ಲಿ ಯಾವ ಮಾಹಿತಿಯೂ ಇಲ್ಲ. ಆದರೆ ಪಿಂಜಾರರು ಉತ್ತರ ಭಾರತದ ಬಹಳ ಮುಖ್ಯವಾದ ಸಾಮಾಜಿಕ ನೆಲೆಯಿಂದ ಬಂದವರು ಎನ್ನುವ ಅಂಶವನ್ನು ನಿರಾಕರಿಸಲು ಸದ್ಯಕ್ಕೆ ಕಾರಣಗಳಿಲ್ಲ.

ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿರುವ The Mysore Tribes” ನ ಸಂಪುಟದಲ್ಲಿ ಮೇಲಿನದಕ್ಕಿಂತ ಭಿನ್ನ ಸಂಗತಿಗಳು ದೊರಕುತ್ತವೆ:

“Among the pinjaris there are both Hindus and Musalmans…. Musalman Pinjaris are said to have been converted by Aurangazeb. Some among them assume the title of sheik, pathan or sayyid after their names. Both men and women dress like Hindus and marry among themselves. They are Sunnis of Hanafi School. They avoid eating beef. They respect and obey the Khazi and engage him to register their marriages. They card cotton cleaning it to stiff matresses, quilts and pillows. Many have left their craft owing to the decline of hand spinning”

ಪಿಂಜಾರರ ಬಗೆಗಿನ ಈ ಮಾತುಗಳನ್ನು ಹೀಗೆ ಸಂಗ್ರಹಿಸಬಹುದು:

೧.   ಪಿಂಜಾರರು ಹಿಂದೂ ಮತ್ತು ಮುಸಲ್ಮಾನರಲ್ಲಿ ಕಂಡುಬರುತ್ತಾರೆ.

೨.   ಪಿಂಜಾರರು ಮೊಗಲರ ದೊರೆ ಔರಂಗಜೇಬ್‌ನಿಂದ ಮತಾಂತರಕ್ಕೆ ಒಳಗಾದವರು

೩.    ಮುಸ್ಲಿಮರಲ್ಲಿರುವ ಪಿಂಜಾರರ ಉಡುಗೆ-ತೊಡುಗೆ (ಗಂಡು=ಹೆಣ್ಣುಗಳಿಬ್ಬರೂ) ಹಿಂದೂಗಳಂತೆಯೇ ಇರುತ್ತದೆ. ಅವರ ವೈವಾಹಿಕ ಸಂಬಂಧಗಳು ಅವರಲ್ಲಿಯೇ ಜರುಗುತ್ತವೆ.

೪.   ಪಿಂಜಾರರು ದನದ ಮಾಂಸವನ್ನು ಉಪಯೋಗಿಸುವುದಿಲ್ಲ.

೫.   ಪಿಂಜಾರರಿಗೆ ಖಾಜಿ ಅಥವ ಮುಲ್ಲಾನೇ ಪುರೋಹಿತನಾಗಿರುತ್ತಾನೆ.

೬.   ವೃತ್ತಿಯಲ್ಲಿ ಪಿಂಜಾರರು ಹಾಸಿಗೆ, ದಿಂಬು, ತಯಾರಿಸುವವರಾಗಿದ್ದಾರೆ.

ಈ ಮಾಹಿತಿಗಳು ಪಿಂಜಾರರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕಿನ ಸ್ಥೂಲ ಚಿತ್ರವನ್ನು ಒದಗಿಸುವಂತಿದೆ. ಇದಕ್ಕೆ ಪೂರಕವಾದ ಹಾಗೂ ಹೆಚ್ಚು ವಿಸ್ತೃತವಾದ ಅಧ್ಯಯನವನ್ನು ಮಾಡಿರುವ Edgar Thurston ಅವರು ತಮ್ಮ ‘Caste and tribes of Southern India’ ದಲ್ಲಿ ಪಿಂಜಾರರ ಬಗ್ಗೆ ಬರೆದಿರುವ ಆಯ್ದ ಭಾಗ ಇಲ್ಲಿದೆ:

“The Dudekulas are Muhammadans who have taken to the trade of cotton cleaing. (Dude-cotton; ekula-to clean). By the Tamils they are called pinjari or panjukotti, which have the same significance. Though Muhammadans they have adopted or retained many of the customs of th Hindus around them, tying a tali to the bride at marriage, being very ignorant of the Muhammdan religion, and even joining the Hindu worshp as far as allowable…….. In dress they resemble the Hindus and after shave off the beard but do not leave a single lock of hair upon the head as most Hindus do.

…………..They are either converts to Islam or the progeny of unions between Musalmans and the womens of the country consequently, they generally speak the Dravidian languages- either Canarese or Telugu. But some of them speak Hindustani also. There customs are a mixture of those of the Musalmans and Hindus. Inheritance is apparently according to Muhammadan law……… They pray in mosques and circumcise their boys and yet some of them observe the Hindu festivals. They worship their tools at Bakrid and not at the Dasara………

ತೆಲುಗಿನಲ್ಲಿ ’ದೊದೇಕುಲ’ ಎಂದು ಕರೆಯಲಾಗುವ ಪಿಂಜಾರರ ಬಗೆಗೆ ತುಂಬ ಅಧಿಕೃತ ಎನ್ನಬಹುದಾದ ಮಾಹಿತಿಗಳನ್ನು Thurston ಅವರು ಕೊಟ್ಟಿದ್ದಾರೆ. ಅವರ ಮಾತಿನಂತೆ ತಮಿಳಿನಲ್ಲಿ ಪಿಂಜಾರಿ ಹಾಗೂ ’ಪಂಜುಕೊಟ್ಟಿ’ ಎಂದು ಕರೆಸಿಕೊಳ್ಳುವ ಈ ಜನಾಂಗ ಬಹುಶಃ ಭಾರತದಾದ್ಯಂತ ಹರಡಿಕೊಂಡಿದೆ. ಆಯಾ ಪ್ರಾದೇಶಿಕವಾದ ಭಾಷೆಗಳನ್ನಾಡುತ್ತಾ, ಅಲ್ಲಿನ ಆಚರಣೆಗಳ ವೈಶಿಷ್ಟ್ಯಗಳನ್ನು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಒಳಗೊಳ್ಳುತ್ತಾ ಸಾಗಿ ಬಂದಿರುವ ಮುಸ್ಲಿಂ ಹಾಗೂ ಹಿಂದೂಗಳ ಮಿಶ್ರ ಸಂಸ್ಕೃತಿ ರೂಪ ಇದಾಗಿದೆ. ಆದುದರಿಂದಲೇ ಸಂಸ್ಕೃತಿ ಅಧ್ಯಯನದ ಸಂದರ್ಭದಲ್ಲಿ ಪಿಂಜಾರ ಜನಾಂಗದ ಅಧ್ಯಯನಕ್ಕೆ ವಿಶಿಷ್ಟ ಮಹತ್ವ ದೊರೆಯುತ್ತದೆ. ಅಪರಿಚಿತ, ಅವ್ಯಕ್ತ ಅಥವಾ ನಿರ್ಲಕ್ಷಿತ ಸಮುದಾಯಗಳ ಜೀವನ ವಿವರಗಳ ದಾಖಲಾತಿ ಎಷ್ಟೆಷ್ಟು ಸಾಧ್ಯವಾಗುತ್ತದೋ ಅಷ್ಟರಮಟ್ಟಿಗೆ ಸಮಾಜದ ಮೂಲನೆಲೆಗಳ ಅನಾವರಣ ಸಾಧ್ಯವಾಗುತ್ತದೆ. ಅದರಲ್ಲೂ ’ಸಂಸ್ಕೃತಿ’ಯ ವಿಷಯ ಬಂದಾಗಲೆಲ್ಲಾ ಅದನ್ನು ಮಹಿಳಾನಿಷ್ಠ ದೃಷ್ಟಿಕೋನಗಳಿಂದಲೇ ವಿಶ್ಲೇಷಣೆ ಮಾಡಬಯಸುವ ರೂಢಿಗತ ಮನಸ್ಸುಗಳಿಗೆ ಅಲಕ್ಷಿತ ಸಮುದಾಯಗಳ ಉದಾರ ಹಾಗೂ ನಿರ್ಭೀತ ಸಾಂಸ್ಕೃತಿಕ ವಿವರಗಳು ಬೇರೆಯದೇ ಆದ ವ್ಯಾಖ್ಯಾನವನ್ನು ಕಲಿಸಿಕೊಡುತ್ತವೆ. ’ಸಂಸ್ಕೃತಿ’ಯ ನಿಜವಾದ ನಿರ್ಮಾಪಕಿ ಮಹಿಳೆಯೇ ಆಗಿರುವುದರಿಂದ ಅದರ ಅಪವ್ಯಾಖ್ಯಾನದ ಆಸರೆಯಿಂದ ಗಂಡಸು ಸ್ವರ್ಥಪರ ನೀತಿ -ಶಾಸ್ತ್ರಗಳ ಪ್ರತಿಪಾದಕನಾಗಿದ್ದಾನೆ ಅಷ್ಟೆ.

ಈ ಹಿಂದೆ ಸೂಚಿಸಿದ ಮೂರೂ ಅಧ್ಯಯನಗಳು ಪಿಂಜಾರರ ಕಸುಬಿನ ಬಗ್ಗೆ ಒಂದೇ ರೀತಿಯ ಅಭಿಪ್ರಾಯವನ್ನು ಕೊಟ್ಟಿವೆ. ಪಿಂಜಾರರು ಅತಿ ಹೆಚ್ಚು ಸಂಖ್ಯೆಯಲ್ಲಿ ಕಂಡುಬರುವ ಉತ್ತರ ಕರ್ನಾಟಕದ ಭಾಗಗಳು, ನೆರೆಯ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಂತಿರುವ ಗಡಿಭಾಗದ ಕನ್ನಡ ಜಿಲ್ಲೆಗಳು ಹತ್ತಿಯನ್ನು ಬೆಳೆಯುವ ಭಾಗಗಳು ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಅನ್ನಕ್ಕೆ ಆಧಾರವಾದ ಹಾಸಿಗೆ ತಯಾರಿಸುವ ಕಸುಬಿಗೆ ಮೂಲ ಸಂಪತ್ತಾದ ’ಹತ್ತಿ’ ಎಲ್ಲಿ ಹೇರಳವಾಗಿ ದೊರಕುತ್ತದೆಯೋ ಅಲ್ಲಿ ಈ ಜನಾಂಗ ತುತ್ತಿನ ಚೀಲವನ್ನು ತುಂಬಿಕೊಳ್ಳುವ ಕಾಯಕದ ಬಿಡಾರ ಹೂಡುವುದು ಸಹಜವಾಗಿದೆ. ಹಳ್ಳಿ, ಪಟ್ಟಣ, ನಗರಗಳೆನ್ನದೆ ಸೈಕಲ್ಲಿನಲ್ಲಿ ಹಿಂಜಿದ (ಬೀಜದಿಂದ ಪ್ರತ್ಯೇಕಿಸಿದ) ಹತ್ತಿಯ ಮೂಟೆ, ಅದರ ಮೇಲೆ ನಾಲ್ಕಾರು ನಮೂನೆಯ ಬಣ್ಣ ಬಣ್ಣದ ಬಟ್ಟೆಗಳು ಹಾಗೂ ಒಂದೂ ಕೋಲನ್ನು ಇಟ್ಟುಕೊಂಡು ತಳ್ಳಿಕೊಳ್ಳುತ್ತಾ ’ಹಾಸಿಗೆ ದಿಂಬು ರಿಪೇರಿ’ ಎಂದು ಕೂಗುತ್ತಾ ಬರುವವರನ್ನು ಯಾರು ನೋಡಿಲ್ಲ? ಇವರದು ಹೀಗೇ ಅಲೆಮಾರಿ ಬದುಕು. ಅನ್ನ ಹುಡುಕಿಕೊಂಡು ಹೊರಟವರಿಗೆ ಒಂದು ಊರೇ, ಒಂದು ಮನೆಯೇ? ಹೀಗೇ ಇವರ ಊರು-ಕೇರಿ, ನಡೆ-ನುಡಿಗಳನ್ನು ಕೆದಕುತ್ತಾ ಹೋದರೆ ಇವರ ಮೂಲ ಸೀದಾ ನೆರೆಯ ಆಂಧ್ರಪ್ರದೇಶಕ್ಕೆ ಬಂದು ನಿಲ್ಲುತ್ತದೆ. ಈ ಜನಾಂಗದ ಬಗ್ಗೆ ನಡೆದಿರುವ ಕೆಲವು ಅಧ್ಯಯನಗಳು ಇದನ್ನು ದೃಢಪಡಿಸಸುತ್ತವೆ. ಅಲ್ಲದೆ ಈ ಜನಾಂಗ ದಟ್ಟವಾಗಿ ನೆಲೆಸಿರುವ ಬಳ್ಳಾರಿ, ಕೊಪ್ಪಳ, ದಾವಣಗೆರೆ, ಧಾರವಾಡ, ಗದಗ, ಹಾವೇರಿಯಂತಹ ಜಿಲ್ಲೆಗಳಲ್ಲಿ ಸ್ವತಃ ಈ ಜನರೇ ನಂಬಿರುವ ದಂತಕತೆಯೊಂದು ಇವರು ಆಂಧ್ರಮೂಲದವರೆಂಬುದನ್ನು ಖಚಿತಪಡಿಸುತ್ತದೆ.

“ಆಂದ್ರ ಪ್ರದೇಶ ಎಮ್ಮಿಗನೂರು ತಾಲೂಕಿನಲ್ಲಿ ಬ್ರಹ್ಮಯ್ಯ ಎನ್ನುವ ಹೆಸರಿನ ಅನುಭಾವಿಯೊಬ್ಬನಿದ್ದನಂತೆ. ಆತ ಒಮ್ಮೆ ಅನಾರೋಗ್ಯದ ಕಾರಣ ವಾಂತಿ ಮಾಡಿಕೊಂಡನಂತೆ. ಇದನ್ನು ಕಂಡ ಆತನ ಶಿಷ್ಯ  ಸಮುದಾಯ ಆ ವಾಂತಿಯನ್ನು ತೆಗೆದು ಸ್ವಚ್ಛಗೊಳಿಸಲು ಅರಿವೆ, ಪೊರಕೆ, ನೀರು ಹಿಡಿದುಕೊಂಡು ಅಲ್ಲಿಗೆ ಧಾವಿಸಿಬಂದರಂತೆ. ಬ್ರಹ್ಮಯ್ಯ ಇದ್ದಕ್ಕಿದ್ದ ಹಾಗೆ ಅವರನ್ನು ತಡೆದು ತಾನು ವಾಂತಿ ಮಾಡಿದ ಜಾಗವನ್ನ ನಾಲಗೆಯಿಂದ ನೆಕ್ಕಿ ತೊಳೆದು ಶುದ್ಧಗೊಳಿಸಲು ಹೇಳಿದನಂತೆ. ಶಿಷ್ಯರೆಲ್ಲಾ ಹಿಂಜರಿದು ಗುರುಗಳನ್ನು ಮಿಕಿಮಿಕಿ ನೋಡುತ್ತಿರುವಾಗ, ದೂದೇಕುಲದ ಸಿದ್ದಯ್ಯ ಎಂಬ ಶಿಷ್ಯ ಲಕ್ಷಣ ಬಂದು ಹಿಂದು-ಮುಂದು ನೋಡದೇ ಗುರುವಿನ ಆಜ್ಞೆಯಂತೆ ಅವರು ವಾಂತಿ ಮಾಡಿದ ಜಾಗವನ್ನು ತನ್ನ ನಾಲಿಗೆಯಿಂದ ನೆಕ್ಕಿ ತೊಳೆದು ಶುಚಿಗೊಳಿಸಿದನಂತೆ. ಆ ಕ್ಷಣದಿಂದ ಗುರು ಬ್ರಹ್ಮಯ್ಯ ಈ ದೂದೇಕುಲದ ಸಿದ್ದಯ್ಯನನ್ನು ತನ್ನ ಅತ್ಯಾಪ್ತ ಶಿಷ್ಯನನ್ನಾಗಿ ಮಾಡಿಕೊಂಡನಂತೆ. ಈ ಆಪ್ತತೆ ಬರಬರುತ್ತಾ ಯಾವ ಹಂತ ತಲುಪಿತೆಂದರೆ ಪ್ರತಿದಿನ ಸಿದ್ದಯ್ಯ ಎಲೆ, ಅಡಿಕೆ, ಸುಣ್ಣ, ಕಾಚ, ಕಸಕಸೆ, ಒಣಕೊಬರಿ, ಏಲಕ್ಕಿ, ಲವಂಗ ಮೊದಲಾದವುಗಳನ್ನು ಹವಣರಿತು ಹಾಕಿ ತಯಾರಿಸಿ ತನ್ನ ಬಾಯಲ್ಲಿ ಚೆನ್ನಾಗಿ ನುಣ್ಣಗಾಗುವಂತೆ ಜಿಗಿದು ನಂತರ ತನ್ನ ಗುರುವಿಗೆ ಕೊಡುತ್ತಿದ್ದನಂತೆ. ಗುರುಬ್ರಹ್ಮಯ್ಯ ಬದುಕಿರುವವರೆಗೂ ಸಿದ್ದಯ್ಯನ ಈ ಸೇವೆ ಮುಂದುವರಿಯಿತಂತೆ. ಗುರುಗಳ ನಿಧನದ ನಂತರ ಅವರು ನಡೆಸುತ್ತಿದ್ದ ಅನುಭಾವ ದೇಗುಲಕ್ಕೆ ಈ ಸಿದ್ದಯ್ಯನೇ ಗುರುವಾದನಂತೆ”. ಈತನೇ ನಮ್ಮ ಪೂರ್ವಿಕ ಎಂದು ಈ ಭಾಗದ ಪಿಂಜಾರರು ನಂಬುತ್ತಾರೆ.

ಪಿಂಜಾರ ಜನಾಂಗದ ಮೂಲದ ಬಗ್ಗೆ ಮೇಲಿನ ಸ್ಥೂಲ ವಿವರಗಳನ್ನು ಇಟ್ಟುಕೊಂಡು ಸಂಗ್ರಹವಾಗಿ ಈ ಕೆಳಗಿನ ನಿರ್ಣಯಕ್ಕೆ ಬರಬಹುದಾಗಿದ:

  • ಪಿಂಜಾರರು ಮಹಮ್ಮದೀಯ ಅರಸರ ಆಡಳಿತಾವಧಿಯಲ್ಲಿ ನಡೆದ ಬಲಾತ್ಕಾರದ ಸಮಯದಲ್ಲಿ ಹಾಗೂ ಕೆಲವೊಮ್ಮೆ ಮೂಲಾಶ್ರಮದ ಸಾಮಾಜಿಕ ಅಪಮಾನ ಮತ್ತು ಆರ್ಥಿಕ ಸಂಕೋಲೆಗಳಿಂದ ಹೊರಬರುವ ಬಳಾಕಾಂಕ್ಷೆಯಿಂದ ಮತಾಂತರಕ್ಕೆ ಒಳಗಾದವರು.
  • ತಮಿಳಿನಲ್ಲಿ ಪಂಜುಕೊಟ್ಟಿ, ತೆಲುಗಿನಲ್ಲಿ ದೂದೇಕುಲ, ಕನ್ನಡದಲ್ಲಿ ಪಿಂಜಾರರು ಎಂದು ಕರೆಸಿಕೊಳ್ಳುವ ಇವರು ಅಚ್ಚಕನ್ನಡ ಭಾಷೆಯ ಜನ. ಕರ್ನಾಟಕದ ಬಹುಪಾಲು ಪಿಂಜಾರರ ಮಾತೃಭಾಷೆ ಕನ್ನಡ.
  • ಪಿಂಜಾರರ ಒಟ್ಟಾರೆ ಜೀವನ ವಿಧಾನವನ್ನು ಪ್ರಭಾವಿಸಿರುವ ಲಿಂಗಾಯತ, ನಾಯಕ, ಕುರುಬ, ಮರಾಠಿ ಮತ್ತು ಅಸ್ಪೃಶ್ಯ ಜನಾಂಗದ ಅಂದರೆ ಹಿಂದೂ ಸಮಾಜದ ಶೂದ್ರ ಸಮುದಾಯದ ನೆಲೆಯೇ ಬಹುಮಟ್ಟಿಗೆ ಪಿಂಜಾರರ ಮೂಲ ನೆಲೆಯಾಗಿದೆ.
  • ಪಿಂಜಾರರು ಇಸ್ಲಾಂ ಹಾಗೂ ಹಿಂದೂ ಧರ್ಮದ ಆಚರಣೆಗಳನ್ನು ಸಮಾನ ನೆಲೆಯಲ್ಲಿ ಅನುಸರಿಸುವುದರಿಂದ ಇವರು ಉಭಯ ಸಂಸ್ಕೃತಿಗಳ (Dual culture) ಸೇತುವೆಯಂತಿದ್ದಾರೆ.

ಪಿಂಜಾರರ ವೃತ್ತಿಗೂ ಅವರು ವಾಸಿಸುವ ನೆಲೆಗಳಿಗೂ ಸಂಬಂಧವಿದೆ. ಆದುದರಿಂದ ಈ ಕುರಿತಾದ ವಿವರಗಳನ್ನು ಇಲ್ಲಿಯೇ ಸಂಗ್ರಹವಾಗಿ ನೋಡಬಹುದಾಗಿದೆ.

ಪಿಂಜಾರರ ಕಸುಬಿಗೆ ಬೇಕಾದ ಕಚ್ಚಾವಸ್ತು ಹತ್ತಿ. ಹತ್ತಿಯನ್ನು ಮಂಡಿಗಳಲ್ಲಿ ಖರೀದಿಸಿ ತಮ್ಮ ಕೈಮಗ್ಗಗಳಲ್ಲಿ ಸಂಸ್ಕರಿಸಿ, ಅಂದರೆ ಬೀಜದಿಮದ ಹತ್ತಿಯ ಅರಳೆಯನ್ನು ಪ್ರತ್ಯೇಕಿಸಿ ಹಾಸಿಗೆ, ದಿಂಬು ತಯಾರಿಸುವ ಕಾಲವೊಂದಿತ್ತು. ಆಧುನಿಕತೆಯ ಪರಿಣಾಮವಾಗಿ ಕೈಮಗ್ಗಗಳು ಮೂಲೆ ಸೇರಿದ್ದು ಜಿನ್ನಿಂಗ್ ಫ್ಯಾಕ್ಟರಿಯಿಂದ ಹತ್ತಿಯ ಅರಳೆಯನ್ನು ಕೊಂಡುತರುವುದು ಪಿಂಜಾರರಿಗೆ ಈಗ ಅನಿವಾರ‍್ಯವಾಗಿದೆ. ಅರಳೆಯನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿ ಹಾಸಿಗೆ ತಯಾರಿಸುವುದಕ್ಕೆಂದೇ ಪ್ರತ್ಯೇಕ ಮಳಿಗೆಗಳನ್ನೂ ತೆರೆದುಕೊಂಡಿರುವ ಶ್ರೀಮಂತ ಹಿಂದೂ-ಮುಸಲ್ಮಾನರ ಹತ್ತಿರ ಪಿಂಜಾರರು ಕೂಲಿಗಳಾಗಿ ಸೇರಿಕೊಂಡಿರುತ್ತಾರೆ. ಬಹುತೇಕ ಪಿಂಜಾರರು ಆರ್ಥಿಕವಾಗಿ ಸಬರಲ್ಲದರ ಕಾರಣ ಅವರು ಚಿಲ್ಲರೆಯಾಗಿ ಹತ್ತಿಯನ್ನು ಖರೀದಿಸಿ, ಹಾಸಿಗೆಗೆ ಅಗತ್ಯವಾದ ಕೆಲವು ಮೀಟರುಗಳಷ್ಟು ಬಟ್ಟೆಯೊಂದಿಗೆ ಆ ದಿನದ ಕಾಯಕ ಶುರು ಮಾಡುತ್ತಾರೆ. ನಾಳೆಗಳ ಕನಸುಗಳಿಲ್ಲದೆ, ನಿನ್ನೆಗಳ ಹಂಗಿಲ್ಲದೆ ವರ್ತಮಾನವನ್ನು ಕಟ್ಟಿಕೊಳ್ಳುವ ಅನಿವಾರ್ಯತೆ ಯಲ್ಲಿ ಪಿಂಜಾರರಂತಹ ಜನಾಮಗಗಳು ನಲಗುತ್ತಿವೆ. ಇಂಥ ಸ್ಥಿತಿಯಲ್ಲಿ ಧರ್ಮ-ಕರ್ಮಗಳ ಜಿಜ್ಞಾಸೆಗೆ ಪುರುಸೊತ್ತೊಲ್ಲಿ? ಅದಕ್ಕೆಂದೇ ಬುಡಕಟ್ಟುಗಳಲ್ಲಿ ಜಡಗೊಂಡ ಸಾಂಸ್ಥಿಕ ಆಚರಣೆ ಗಳಿಗಿಂತ ಜಂಗಮ ಸ್ವರೂಪದ ಸಾಂಸ್ಕೃತಿಕ, ಸಾಮುದಾಯಿಕ ಕ್ರಿಯಾಶೀಲತೆಯೇ ಮುಖ್ಯವಾಗುತ್ತದೆ. ಅದು ಸದಾ ಜೀವಪರವಾಗಿರುವುದರ ಹಿಂದಿನ ಲಕ್ಷಣವೇ ಇದಾಗಿದೆ.

ಪಿಂಜಾರರ ಕಸುವಿನ ಬಗ್ಗೆ ಅಧ್ಯಯನವೊಂದು ಹೀಗೆ ಹೇಳುತ್ತದೆ: “ಕಪ್ಪುಗಡ್ಡದ ಜಂಜಾಟವಿಲ್ಲದೆ ಜುಬ್ಬ ಪೈಜಾಮ ಹಾಕದ ಪಿಂಜಾರ ಪುರುಷರನ್ನು ಕಾಣಬಹುದು. ಇವರು ಕಮಾನಿನ ಒಂದು ತುದಿಯಲ್ಲಿ ಅಗಲವಾದ ನುಣುಪು ಹಲಗೆಯ ತುಂಡೊಂದನ್ನು ಜೋಡಿಸುವರು. ಅದರ ಹೊರ ತುದಿಯಿಂದ ಹಿಡಿದು ಕಮಾನಿನ ಮತ್ತೊಂದು ಚಿತ್ರಾಕಾರದ ತುದಿಯವರೆಗೆ ಹುರಿಯಾಗಿ ಹೊಸೆದ ತೊಗಲಿನ ದಾರ ಬಿಗಿಯುವರು. ಕಮಾನಿನ ಮಧ್ಯಭಾಗದಲ್ಲಿ ತೊಗಲಿನ ಬೆಲ್ಟ್ ಪಟ್ಟಿಯನ್ನು ಸುತ್ತಿ ಹತ್ತಿ ಹೊಡೆಯುವಾಗ ನೆಲದಲ್ಲಿ ಹಾಕಿದ ಹತ್ತಿಗೆ ದಾರ ತಗಲುವಂತೆ ಜೋಡಿಸಿದ ಕಮಾನು ಮತ್ತು ಕೊಡತಿಯನ್ನು ಹೆಗಲ ಮೇಲೆ ಹೊತ್ತು ಕಾಲ್ನಡಿಗೆಯಲ್ಲೇ ಹತ್ತೂರು ಸುತ್ತುವ ಪಿಂಜಾರರನ್ನು ಕಾಣಬಹುದು.

’ಬೆಸ್ಕಿ, ಹೆಂಡತಿಯನ್ನು ಹೊತ್ತವರು ಊರು ತಲುಪುತ್ತಿದ್ದಂತೆಯೇ ಹನುಮಪ್ಪನ ಗುಡಿಯೋ, ಬಸವಣ್ಣನ ಪೋಳಿ ಕಟ್ಟೆಯಮೇಲೋ ಠಿಕಾಣಿ ಹೂಡಿ ಊರ ಓಣಿಯ ಗಾದಿ ಹಾಕುವುದಾಗಿ ಸಾರುತ್ತಾರೆ. ಗಾದಿ ಬೇಕಾದವರು ಹತ್ತಿಯ ಗಂಟು, ಅರಿವೆ ಹೊತ್ತುಕೊಂಡು ಬರುತ್ತಾರೆ. ಹಣದ ಮಾತುಕತೆ ಮುಗಿಸಿ ಗಾದಿ ತಯಾರು ಮಾಡಲು ಹೇಳುತ್ತಾರೆ.’

ಗಂಟಿನಿಂದ ಹತ್ತಿಯನ್ನು ಸುರುವಿದ ಪಿಂಜಾರ ಕಮಾನು ಕಟ್ಟಿ, ಕೊಡತಿಯಿಂದ ಹೊಡೆದು, ಹತ್ತಿಯನ್ನು ಎಳೆ ಎಳೆಯಾಗಿ ಮಾಡುತ್ತಾನೆ. ಪುಡಿಪುಡಿಯಾದ ಹತ್ತಿಯನ್ನು ಒಂದುಗೂಡಿಸು-ವಷ್ಟರಲ್ಲಿ ಧೂಳು ಆವರಿಸುತ್ತದೆ. ಕಾಟಾಚಾರಕ್ಕಾಗಿ ಮೂಗು ಬಾಯಿಗೆ ಬಟ್ಟೆ ಬಿಗಿದುಕೊಂಡು ಹತ್ತಿಯನ್ನು ಮೂರು ಬಾಯಿ, ಕೋಲಿನಿಂದ ಬಡಿದು ಸಮಗೊಳಿಸಿ ದಾರದಿಂದ ಚುಟಿಕಿ ಗಂಟು ಹಾಕಿ ಹಾಸಿಗೆ, ದಿಂಬು ಸಿದ್ದ ಮಾಡುವುದರಲ್ಲಿ ಸಫಲರಾಗುತ್ತಾರೆ.”

ಪಿಂಜಾರರು ತಮ್ಮ ಕಸುಬು ನಿರ್ವಹಿಸುವ ಈ ಚಿತ್ರ ಅವರ ನೆಲೆಗಳನ್ನು ಸೂಕ್ಷ್ಮವಾಗಿ ತಿಳಿಸುತ್ತದೆ. ಅಂದರೆ ಹತ್ತಿಯನ್ನು ಯಥೇಚ್ಛವಾಗಿ ಬೆಳೆಯುವ ಒಣ ಬಯಲು ಭೂಮಿಯ ಪ್ರದೇಶಗಳಲ್ಲಿ ಇವರು ಪ್ರಧಾನವಾಗಿ ಕಂಡುಬರುತ್ತರೆ. ಹಾಗಾಗಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇವರ ನೆಲೆಗಳಿವೆ. ಬೀದರ‍್, ಗುಲಬರ್ಗಾ, ಬೆಳಗಾಂ, ಬಿಜಾಪುರ, ರಾಯಚೂರು, ಕೊಪ್ಪಳ, ಬಳ್ಳಾರಿ, ಧಾರವಾಡ, ಗದಗ, ಹಾವೇರಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಇವರ ವಾಸ ಹೆಚ್ಚಾಗಿದೆ. ಔರಂಗಜೇಬನ ಕಾಲದಲ್ಲಿ ಆಯಿತು ಎನ್ನಲಾದ ಧಾರ್ಮಿಕ ಮತಾಂತರದ ನಂತರ ಉತ್ತರದಿಂದ ದಕ್ಷಿಣಕ್ಕೆ ವಲಸೆ ಬಂದವರಲ್ಲಿ ಪಿಂಜಾರರೂ ಸೇರಿರಬಹುದು. ಅಲ್ಲದೆ ಹಿಂದಿನ ಸಮೀಕ್ಷೆಗಳು ತಿಳಿಸಿದ ಹಾಗೆ ಪಿಂಜಾರರ ಪೂರ್ವಿಕರು ಬೊಂಬಾಯಿ ಪ್ರಾಂತ್ಯದವರು ಹಾಗೂ ಆಂಧ್ರದ ದೂದೇಕುಲ ಸಮುದಾಯದ ಸಾಂಸ್ಕೃತಿಕ ಸ್ವರೂಪವುಳ್ಳವರು ಎನ್ನುವುದು ಅವರಿರುವ ನೆಲೆಗಳಿಂದ ಕಂಡುಬರುತ್ತದೆ. ಮೇಲೆ ತಿಳಿಸಿದ ಜಿಲ್ಲೆಗಳಲ್ಲಿ ಅಲ್ಲದೆ ದಕ್ಷಿಣದ ಮೈಸೂರು, ಮಂಡ್ಯ, ಹಾಸನ, ಬೆಂಗಳೂರು, ಕೋಲಾರ, ಶಿವಮೊಗ್ಗ ಮುಂತಾದ ಪ್ರದೇಶಗಳಲ್ಲಿ ಕೂಡ ವಲಸೆ ಬಂದು ನೆಲೆಸಿದ್ದಾರೆ. ಆದರೆ ಇಂತಹ ಪ್ರದೇಶಗಳಲ್ಲಿ ಅವರ ಸಂಖ್ಯೆ ವಿರಳವಾಗಿದೆ. ಇವರೆಲ್ಲಾ ಉತ್ತರ ಕರ್ನಾಟಕ ಹಾಗೂ ಆಂಧ್ರದ ಕಡೆಯಿಂದಲೇ ಬಂದು ಇಲ್ಲಿ ನೆಲೆಯೂರಿದವರು ಮತ್ತು ಬೇರೆ ಬೇರೆ ವೃತ್ತಿಯನ್ನು ಅವಲಂಬಿಸಿದವರಾಗಿದ್ದಾರೆ. ಆಂಧ್ರದ ಕಡೆಯಿಂದ ಬಂದವರು ಎಲ್ಲಿ ಹೋದರೂ ತೆಲುಗು ಭಾಷೆಯನ್ನೇ ತಮ್ಮ ತಾಯಿ ನುಡಿಯನ್ನಾಗಿ ಉಳಿಸಿಕೊಂಡಿರುತ್ತಾರೆ. ಉಳಿದಂತೆ ಕನ್ನಡ ಮತ್ತು ಕೆಲವರಲಿ ಉರ್ದು ಮಾತೃಭಾಷೆಯಾಗಿದೆ.

ಪಿಂಜಾರರು ಈ ವೃತ್ತಿಯನ್ನು ವಂಶಪಾರಂಪರ‍್ಯವಾಗಿ ಮುಂದುವರೆಸಿಕೊಂಡು ಬರುವುದೇ ಅವರ ಆರ್ಥಿಕ ಸ್ಥಿತಿ ಜಡಗೊಳ್ಳಲು ಕಾರಣವಾಗಿದೆ. ಆಧುನಿಕ ಕೈಗಾರಿಕೀಕರಣದ ಪರಿಣಾಮವಾಗಿ ಎಲ್ಲಾ ಬಗೆಯ ಕರಕುಶಲ, ಗೃಹ ಕೈಗಾರಿಕೆಗಳು ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಪಿಂಜಾರರ ಈ ಹಾಸಿಗೆ ಮಾಡುವ ಕಸುಬು ಲಾಭದಾಯಕವಾಗಿಲ್ಲ. ಸ್ವಂತ ಬಂಡವಾಳ ಹೂಡಿ ಇದನ್ನೇ ಲಾಭದಾಯಕ ಉದ್ಯಮವನ್ನಾಗಿ ಮಾಡಿಕೊಳ್ಳಬಹುದಾದ ಸ್ಥಿತಿವಂತಿಕೆ ಕರ್ನಾಟಕದ ಯಾವ ಪಿಂಜಾರನಿಗೂ ಇಲ್ಲ. ಪಿಂಜಾರರ ಇಂಥ ಸ್ಥಿತಿ ಕೂಡ ಒಟ್ಟಾರೆ ಒಂದು ಜನಾಂಗವೇ ನಿರ್ಲಕ್ಷ್ಯಕ್ಕೊಳಗಾದ ಸಂಗತಿಯನ್ನು ತಿಳಿಸುತ್ತದೆ. ನಮ್ಮ ಸಾಮಾಜಿಕ ಸಂದರ್ಭದಲ್ಲಿ ಮತಾಂತರಕ್ಕೆ ಇರಬಹುದಾದ ಎಲ್ಲಾ ಬಗೆಯ ಒತ್ತಡಗಳನ್ನು ಮೀರಿ, ಧರ್ಮಮೂಲವಾದ ಭಾವನಾತ್ಮಕ ನಿಯಂತ್ರಣದಲ್ಲಿಯೇ, ಮತಾಂತರಗೊಂಡ ಜನಾಂಗಗಳು ತಮ್ಮ ಎಂದಿನ ದಾರಿದ್ರ‍್ಯ, ಅಸಹಾಯಕತೆಯನ್ನು ಉಳಿಸಿಕೊಂಡಿವೆ ಎನ್ನುವುದಕ್ಕೆ ಪಿಂಜಾರ ಜನಾಮಗವೇ ಸ್ಪಷ್ಟ ಉದಾಹರಣೆಯಾಗಿದೆ. ಅಂದರೆ ಮತಾಂತರದ ಮೂಲ ಉದ್ದೇಶಗಳೇ ಚಾರಿತ್ರಿಕ, ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಒಳ-ಹೊರ ಒತ್ತಡಗಳಿದ್ದಾಗ್ಯೂ, ಈಡೇರದಂತಹ ಸಂಕೀರ್ಣ ಗೊಂದಲದಲ್ಲಿ ಮತಾಂತರಗೊಂಡ ಜನಾಂಗಗಳು ತಮ್ಮ ಮೂಲಜಾತಿಯ ಸರ್ವ ರೀತಿಯ ಅವಮಾನದ ನೆಲೆಗಳನ್ನು ವಿಸ್ತರಿಸಿಕೊಳ್ಳುತ್ತಲೇ ಇರುವುದು ನಿರಂತರವಾಗಿಬಿಟ್ಟಿದೆ. ಇತಿಹಾಸದ ಯಾವುದೋ ಒಂದು ಘಟ್ಟದಲ್ಲಿ ಸಂಭವಿಸಿರುವ ಈ ಮತಾಂತರದ ಪ್ರಕ್ರಿಯೆಯಲ್ಲಿ (ಅದರಲ್ಲೂ ಹಿಂದೂ ಧರ್ಮದಿಂದ ಇನ್ನಿತರೆ ಧರ್ಮಗಳಿಗೆ ಮತಾಂತರಗೊಳ್ಳುವ ಸಂದರ್ಭದಲ್ಲಿ) ಗುರುತಿಸಿಕೊಳ್ಳುವ ಜನಾಂಗಗಳು ಮುಖ್ಯವಾಗಿ ತಮ್ಮನ್ನು ಕೀಳರಿಮೆ, ಶೋಷಣೆ, ಕ್ರೌರ್ಯ, ಅವಮಾನಗಳಿಂದ ಬಿಡಿಸಿಕೊಳ್ಳುವ ಆಶಯವನ್ನು ಒಳಗೊಂಡಿರುತ್ತವೆ. ಇಂಡಿಯಾದ ಸಾಮಾಜಿಕ ಇತಿಹಾಸದಲ್ಲಿ, ಅದರಲ್ಲೂ ಪಿಂಜಾರರ ಸಂದರ್ಭದಲ್ಲಿ ಈ ಮೂಲಭೂತ ಆಶಯವೇ ಮರೆಯಾಗಿ ಮತ್ತೊಂದು ಬಗೆಯ ಕೀಳರಿಮೆಯನ್ನು ಅನುಭವಿಸಬೇಕಾದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಒಂದು ಜನಾಂಗದ ಒಟ್ಟಾರೆ ಬದುಕನ್ನು ಧಾರ್ಮಿಕ ಹಿತಾಸಕ್ತಿಗಳು ನಿರ್ದೇಶಿಸುವಷ್ಟೇ ಪ್ರಬಲವಾಗಿ ಅಲ್ಲಿನ ಆರ್ಥಿಕ ಸ್ಥಿತಿಗತಿಗಳೂ ನಿಯಂತ್ರಿಸುವುದರಿಂದ ಪಿಂಜಾರರು ತಮ್ಮ ವೃತ್ತಿಗೆ ಅಂಟಿಕೊಳ್ಳಲಾಗದಂತಹ ಗೊಂದಲ್ಲಿ ತಮಗೆ ಸಾಧ್ಯವಾದ ಇನ್ನಿತರೆ ಉಪಕಸುಬುಗಳನ್ನು ಆಶ್ರಯಿಸುವುದು ಅನಿವಾರ್ಯವಾಗಿದೆ. ಆಧುನಿಕ ಕೈಗಾರಿಕೆಗಳು ಬಂದ ನಂತರವಂತೂ ಪಿಂಜಾರರು ತಮ್ಮ ಮೂಲವೃತ್ತಿಯನ್ನು ಮುಂದುವರೆಸಿಕೊಂಡು ಬದುಕಲಾಗದೆ, ಸ್ವಂತ ಬಂಡವಾಳವಾಗಲೀ, ಸರ್ಕಾರದ ಅನುದಾನವಾಗಲೀ ಇಲ್ಲದೆ ಹೊಟ್ಟೆಪಾಡಿಗೆ ಕೂಲಿ-ನಾಲಿ ಮಾಡುವದು, ಕಲಾಯ ಮಾಡುವ, ಕೂದಲು ಮಾರುವ, ಕೊಂಬು ಹೆರೆಯುವ, ಬಡಗಿತನ, ಕಮ್ಮಾರಿಕೆ ಮುಂತಾದ ಸಣ್ಣ ಪುಟ್ಟ ಕಸುಬುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕರ್ನಾಟಕ ರಾಜ್ಯಾದ್ಯಂತ ಚದುರಿಹೋಗಿದ್ದಾರೆ.

ಪಿಂಜಾರರ ಆಹಾರ ಪದ್ಧತಿಯನ್ನು ಇಲ್ಲಿಯೇ ಸ್ವಲ್ಪಮಟ್ಟಿಗೆ ಗಮನಿಸಿದರೆ ಅವರ ಭೌಗೋಳಿಕತೆಗೆ ಒಂದು ಬಗೆಯ ಅಥೆಂಟಿಸಿಟಿ ದೊರೆಯುತ್ತದೆ. ಪಿಂಜಾರರ ವಾಸದ ನೆಲೆಗಳಲ್ಲಿ ಪ್ರಧಾನವಾದ ಬೆಳೆ ಎಂದರೆ ಜೋಳ ಅವರ ಮುಖ್ಯ ಆಹಾರವೂ ಕೂಡ ಜೋಳದ ರೊಟ್ಟಿ. ಉಳಿದಂತೆ ಕುರುಸಾಣಿ, ತೊಗರಿ, ಹಲಸಂದಿ, ಅವರೆ, ಮೊದಲಾದ ಬೆಳೆಗಳು ಇಲ್ಲಿ ಹೇರಳ. ಹಸಿಮೆಣಸಿನಕಾಯಿ ಮತ್ತು ಒಣ ಮೆಣಸಿನಕಾಯಿ ಚಟ್ನಿಯೊಂದಿಗೆ ಕೆನೆಮೊಸರು ಕಲೆಸಿಕೊಂಡು ರೊಟ್ಟಿ ತಿನ್ನಲು ಕೂತರೆಂದರೆ ದೇವರಿಗೂ ಹೊಟ್ಟೆ ಕಿಚ್ಚಾಗಬಹುದು. ರಾಗಿ ಮತ್ತು ಅಕ್ಕಿ ಇವರ ನಿತ್ಯದ ಆಹಾರವಲ್ಲ. ನವಣೆ ಅಕ್ಕಿ ಅನ್ನ ಇವರಿಗೆ ಪ್ರಿಯವಾದುದು. ಸೂರ್ಯಕಾಂತಿ, ಶೇಂಗಾ, ಉಳ್ಳಗಡ್ಡಿಯಂತಹ ವಾಣಿಜ್ಯ ಬೆಳೆಗಳು ಇಲ್ಲಿ ಅಪಾರ. ಇಂತಹ ವಾತಾವರಣದಲ್ಲಿ ಬದುಕುವ ಪಿಂಜಾರರ ಕೆಲವರು ಸಣ್ಣಪುಟ್ಟ ಹಿಡುವಳಿದಾರರೂ ಆಗಿದ್ದಾರೆ. ಈ ಅಧ್ಯಯನದ ಸಂದರ್ಭದಲ್ಲಿ ಗಮನಿಸಿದಂತೆ ಒಂಟಿ ಎತ್ತನ್ನು ಕಟ್ಟಿಕೊಂಡು ಪಿಂಜಾರರು ಅಗತ್ಯ ಬಿದ್ದಾಗಲೆಲ್ಲಾ ಮತ್ತೊಬ್ಬರ ಒಂಟಿ ಎತ್ತನ್ನು ’ಮುಯ್ಯಿ’ ಪಡೆದು ಜಿರಾತಿನ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ ಕಾಡಿನ ದಟ್ಟ ಹಸಿರಿಲ್ಲದ, ಗುಡ್ಡಬೆಟ್ಟಗಳಿಂದ ಧುಮ್ಮಿಕ್ಕುವ ಝರಿ-ಜಲಪಾತಗಳಿಲ್ಲದ ಒಣ ಪರಿಸರದಲ್ಲಿ ಧೂಳು ಸೇವಿಸುತ್ತಾ ಈ ಜನ ಬದುಕಲು ಎಷ್ಟೆಲ್ಲಾ ಹರಸಾಹಸ ಮಾಡುತ್ತಾರೆಂದು ನೋಡಿದರೆ ’ನರಕ’ ಎನ್ನುವುದು ಇದೇ ಇರಬೇಕು ಎನಿಸುತ್ತದೆ.

ಪಿಂಜಾರರ ಜೀವನದ ನೆಲೆಗಳು ಹೀಗೆ ಬಯಲುಸೀಮೆಯ ಆವರಣದಲ್ಲಿ ಪ್ರಧಾನವಾಗಿ ಕಂಡುಬರುತ್ತವಾದರೂ ಜೀವನದ ಭದ್ರತೆಯನ್ನು ಹುಡುಕಿಕೊಂಡು ಪ್ರಧಾನವಾಗಿ ಕಂಡುಬರುತತವಾದರೂ ಜೀವನದ ಭದ್ರತೆಯನ್ನು ಹುಡುಕಿಕೊಂಡು ಈಗಲೂ ಬೇರೆ ಬೇರೆ ನೆಲೆಗಳಿಗೆ ಅವರು ಸ್ಥಳಾಂತರಗೊಳ್ಳುವುದು ನಡೆದೇ ಇದೆ. ಅದರಲ್ಲೂ ಮುಸಲ್ಮಾನರ ಬಗ್ಗೆ ಹರಡಲಾಗುತ್ತಿರುವ ಕೋಮುದ್ವೇಷದ ಹಿನ್ನೆಲೆಯಲ್ಲಿ ಪಿಂಜಾರರು ಜೀವರಕ್ಷಣೆಗಾಗಿ ನಗರಗಳತ್ತ ವಲಸೆ ಹೊರಟಿರುವುದು ಕಂಡುಬರುತ್ತಿದೆ. ಅನೇಕರು ನಗರಕ್ಕೆ ಬಂದರೂ ತಮ್ಮ ಮೂಲ-ಕಸುಬನ್ನು ತೊರೆಯದೆ ಅದರಲ್ಲೇ ಜೀವನ ನಿಭಾಯಿಸುತ್ತಿದ್ದಾರೆ.