ವಿಶೇಷವಾಗಿ ಮೊಹರಂ ಆಚರಣೆ

ಪಿಂಜಾರರಿಗೂ ಮುಸ್ಲಿಮರಿಗೂ ಇರುವ ವ್ಯತ್ಯಾಸ ಹಾಗೂ ಪಿಂಜಾರರಿಗೂ ಹಿಂದೂ ಸಮುದಾಯಗಳಿಗೂ ಇರುವ ಭಾವನಾತ್ಮಕ ಸಂಬಂಧ ಸ್ವರೂಪ ಮುಖ್ಯವಾಗಿ ಮೊಹರಂ ಹಬ್ಬದ ಆಚರಣೆಯ ಸಂದರ್ಭದಲ್ಲಿ ತಿಳಿಯುತ್ತದೆ. ಪಿಂಜಾರರು ಈ ಹಬ್ಬವನ್ನು ಅಲೇಹಬ್ಬ, ಪೀರಲು ಹಬ್ಬ ಮೊದಲಾದ ಹೆಸರುಗಳಲ್ಲಿ ಕರೆಯುತ್ತಾರೆ. ಇದು ಮುಸ್ಲಾಂನ ಹಸೇನ್=ಹುಸೇನ್ ಎಂಬ ಶರಣರ ಬಲಿದಾನವನ್ನು ನೆನಪಿಸಿಕೊಳ್ಳುವ ಶೋಕಪೂರಿತವಾದ ಹಬ್ಬ. ಪಿಂಜಾರರಿಗೆ ಈ ಶರಣರ ಹಿನ್ನೆಲೆಯ ಕತೆ ಸ್ಪಷ್ಟವಾಗಿ ಗೊತ್ತಿಲ್ಲ. ಇದು ವಾಸ್ತವವಾಗಿ ರಾಜಕೀಯ ದ್ವೇಷದಿಂದ ನಡೆದ ಕಗ್ಗೊಲೆ. ಇದರ ಹಿನ್ನೆಲೆ ಹೀಗಿದೆ; ಹ| ಮುಹ್ಮದ ಪೈಗಂಬರರು ಮಾನವ ಕಲ್ಯಾಣಕ್ಕಾಗಿ ಬಹು ಕಷ್ಟ=ನಷ್ಟ ಅನುಭವಿಸಿ ಇಸ್ಲಾಂ ಪ್ರಜಾಪ್ರಭುತ್ವದ ಸ್ಥಾಪನೆ ಮಾಡಿದರು. ಅವರು ಮರಣದ ಕೆಲ ವರ್ಷಗಳಲ್ಲಿ ಖಲೀಫರಾಗಿ ಹ| ಅಬೂಬಕ್ರ ಸದ್ದೀಕ್ (ಕ್ರಿ.ಶ. ೬೩೨-೬೩೪) ಹ| ಉಮರ ಫಾರೋಖ್ (ಕ್ರಿ.ಶ. ೬೩೪-೬೪೪) ಹ| ಉಸ್ಮಾನ ಗನಿ (ಕ್ರಿ.ಶ.೬೪೪-೬೫೬) ಪ್ರಜಾಪ್ರಭುತ್ವ ನಡೆಸಿದರು. ನಾಲ್ಕನೆಯ ಖಲೀಫರಾಗಿ ಬನೀ ಹಾಷೀಮ್ ಪಂಗಡದವರು ಹ| ಅಲಿ ಅವರನ್ನು ಚುನಾಯಿಸಲು ಸಿರಿಯಾದ ಪ್ರಾಂತಾಧಿಕಾರಿಯಾದ ಹ| ಮುಆವಿಯಾ ವಿರೋಧಿಸಿದನು. ಎರಡು ಪಂಗಡಗಳ ನಡುವೆ ಘರ್ಷಣೆ ನಡೆದು ಒಪ್ಪಂದವಾಯಿತು. ಆದರೆ ಕ್ರಿ.ಶ. ೬೬೧ ರಲ್ಲಿ ಹ| ಮುಆವಿಯಾನ ಕುತಂತ್ರಕ್ಕೆ ಹ| ಅಲಿ ಅವರ ಖಲೀಫರಾದರು. ಮುಅವಿಯಾ ಸಾಯುವ ಮುನ್ನ ತನ್ನ ಮಗನಾದ ಯಜೀದನನ್ನು ಖಲೀಫನೆಂದು ಘೋಷಿಸಿ ಕೊನೆಯುಸಿರೆಳೆದನು. ತಂದೆಯ ಮರಣಾನಂತರ ಯಜೀದ್, ಇಮಾಮ ಹಸನರನ್ನು ಮೋಸದಿಂದ ವಿಷಪ್ರಾಶನ ಮಾಡಿಸಿ ಕೊಲ್ಲಿಸಿದನು ಮತ್ತು ನಿಜವಾದ ಖಲೀಫನಾದ ತನಗೆ ಮುಸ್ಲಿಂ ಮುಖಂಡರು ’ಬಯ್ಯತ್’ ಕೈಗೊಳ್ಳಬೆಕೆಂದು ಆಜ್ಞೆ ಹೊರಡಿಸಿದನು. ಖಲೀಫನಾಗಲು ಅನರ್ಹನಾದ ಯಜೀದನ್ನು ಧಿಕ್ಕರಿಸಿ ಅರೇಬಿಯಾ, ಇರಾಣ್, ಇರಾಕ್, ಕೂಫಾ ಜನರು ಹ| ಇ| ಹುಸೇನರಿಗೆ ಬೆಂಬಲ ನೀಡಿದರು. ಕೂಫೇದ ಜನ ಯಜೀದನ ದೌರ್ಜನ್ಯದಿಂದ ತಮ್ಮನ್ನು ಕಾಪಾಡಬೇಕೆಂದು ವಿನಂತಿಸಿ ಪತ್ರ ಬರೆದರು. ಧರ್ಮ ರಕ್ಷಣೆಗಾಗಿ, ಮಾವನ ಕಲ್ಯಾಣಕ್ಕಗಿ ಹ| ಇಮಾಮ ಹುಸೇನರು ಯಜೀದನ ಕ್ರೌರ್ಯವನ್ನು, ದುರಾಡಳಿತವನ್ನು ಪ್ರತಿಭಟಿಸಿದರು. ಹೆಂಡತಿ ಮಕ್ಕಳು, ಹತ್ತಿರದ ಬಂಧು-ಬಳಗ ಮೊದಲಾಗಿ ೭೨ ಜನರೊಂದಿಗೆ ಕೂಫೆಗೆ ಪ್ರಯಾಣ ಬೆಳೆಸಿದರು.

ಹಿಜರಿ ಸನ್ ೬೧ ರ ಮೊಹರಂ ತಿಂಗಳು (ಕ್ರಿ.ಶ. ೬೮೦) ಒಂದನೆಯ ದಿನಾಂಕದಂದು ಇರಾಕ್ ಪ್ರಂತ್ಯವನ್ನು ಪ್ರವೇಶಿಸಿದರು. ಐದನೆಯ ದಿನ ಕರ್ಬಲಾ ಭೂಮಿಗೆ ಬಂದಿಳಿದರು. ವೈರಿ ಸೈನಿಕರು ಜಲಾಶಯಗಳಿಗೆ ವಿಷಬೆರೆಸಿ ಅನ್ನ ನೀರಿಗೆ ತೊಂದರೆಯಾಗುವಂತೆ ವ್ಯವಸ್ಥೆ ಮಾಡಿದರು. ಹತ್ತು ದಿನಗಳವರೆಗೆ ಅನ್ನ ನೀರಿಲ್ಲದೆ ಹುಸೇನರ ಪರಿವಾರ ತತ್ತರಿಸಿತು. ಮೊಹರಂ ತಿಂಗಳ ಒಂಬತ್ತನೆಯ ದಿನ ಯಜೀದನ ಅಸಂಖ್ಯತ ಸೈನಿಕರಿಗೂ ಹುಸೇನರ ಅನುಯಾಯಿಗಳಿಗೂ ಘನಘೋರ ಯುದ್ಧ ನಡೆಯಿತು. ಕಾಸೀಮಾಧೂಲಾ, ಅಬ್ದುಲ್ಲಾ, ಅಬ್ಬಾಸ ಅಲಿ, ಹುಸೇನ ಅವರ ವೀರಾವೇಶದ ಹೋರಾಟಕ್ಕೆ ವೈರಿ ಸೈನಿಕರು ತತ್ತರಿಸಿದರು. ಯುದ್ದ ನೀತಿಯನ್ನು ಗಾಳಿಗೆ ತೂರಿದರು. ಮೋಸದಿಂದ ಹುಸೇನರ ಅನುಯಾಯಿಗಳ ರುಂಡ ಚಂಡಾಡುತ್ತ ನಡೆದರು. ಕೊನೆಗುಳಿದ ಹ| ಇಮಾಮ ಹುಸೇನರನ್ನು ಎದುರಿಸಿ ಯುದ್ದ ಮಾಡಲು ಯಾರೊಬ್ಬರಿಗೂ ಧೈರ್ಯವಾಗಲಿಲ್ಲ. ಆಗ ವೈರಿ ಪಡೆಯ ನಾಯಕನಾದ ’ಶುಮರ’ ಘಾತುಕ ರೀತಿಯಲ್ಲಿ ಆಕ್ರಮಣ ಮಾಡಲು ಆಜ್ಞೆ ಮಾಡಿದನು. ’ಜರಿವೀನ್ ಶರೀಕ್’ ಎಂಬ ಕ್ರೂರಿಯೊಬ್ಬ ಹುಸೇನರ ಎಡಗೈಯನ್ನು ಖಡ್ಗದಿಂದ ಕತ್ತರಿಸಿ ಹಾಕಿದನು. ’ಸಿನಾನ್ ಬಿನ್ ಅನಾಸ್ ಬಿನ್ ಅಮ್ರ ಅಲ್ ನಾಖಿಯಾ’ ಎಂಬುವನು ಹುಸೇನರನ್ನು ನೆಲಕ್ಕೆ ಕೆಡವಿದನು. ಆಗ ’ಖವಾಲಿ ಬಿನ್ ಯಜೀದ್ ಅಲ್ ಅಸ್ಬಾಹಿ’ ಅವರ ತಲೆಯನ್ನು ಕತ್ತರಿಸಿ ಹಾಕಿದನು. ಮೋಸಕ್ಕೆ ಜಯವಾಯಿತು. ಧರ್ಮಕ್ಕೆ ಸೋಲಾಯಿತು. ಹ| ಇಮಾಮ ಹುಸೇನರು ವೀರಮರಣ ಹೊಂದಿದರು.

ಈ ಘೋರ ದುರಂತ ಕೇಳಿದ ಮಕ್ಕಾ ಮದೀನಾ ಜನ, ಯಜೀದನ ಗುಂಪಿನ ಮೇಲೆ ದಂಗೆಯೆದ್ದು ಸೇಡು ತೀರಿಸಿಕೊಮಡರು. ಯಜೀದನ ಮರಣದ ಅನಂತರ ಬನೀ ಉಮೈಯರು, ಬನೀ ಹಾಷೀಮರು ಖಲೀಫರಗಿ ಆಳಿದರು. ಇದು ಕರ್ಬಲಾ ದುರಂತದ ಭೀಕರ ಕಥೆ.

ಹ| ಅಲಿ ಅವರ ಅನುಯಾಯಿಗಳಾದ ಷಿಯ ಮುಸ್ಲಿಮರು, ಹ| ಇಮಾಮ ಹುಸೇನರು ವೀರ ಮರಣದ ಕೆಲ ವರ್ಷಗಳ ಅನಂತರ ಅವರ ಗೌರವಾರ್ಥ ಸಭೆ ಸೇರಿ ಶೋಕ ವ್ಯಕ್ತಪಡಿಸಿದರು. ಕ್ರಿ. ಶ. ೯೬೨ ರಲ್ಲು ’ಬುವಯಹಿ’ ಸಂತತಿಯ ಷಿಯಾ ಮುಸ್ಲಿಮರು ಹ| ಅಲಿ ಅವರ ಸಂತತಿಗೆ ಭಕ್ತಿ ಗೌರವ, ಆದರಗಳಿಂದ ನಡೆದುಕೊಂಡು ಕರ್ಬಲಾ ಕಾಳಗದ ನೆನಪಿಗಾಗಿ ಕೂಟ ಕೂಡುವುದಕ್ಕೆ ಪ್ರೋತ್ಸಾಹ ಕೊಟ್ಟರು. ಹುಸೇನರ ಆತ್ಮಕ್ಕೆ ಶಾಂತಿ ಸಿಗಲೆಂದು ಮೊಹರಂ ತಿಂಗಳಿನಲ್ಲಿ ಮುಸ್ಲಿಮರು ಉಪವಾಸ ವ್ರತ, ಕುರಾನ್ ಪಠಣ, ದಾನ-ಧರ್ಮ ಇತ್ಯಾದಿಗಳನ್ನು ಮಾಡುತ್ತಿದ್ದರು. ದುಃಖ ಮೂಲವಾದ ಇಂತಹ ಮೊಹರಂ ಆಚರಣೆ ಸುಪ್ರಸಿದ್ಧ ಬಾದಶಹಾ ಅಮೀರ ತೈಮೂರ ಲಂಗ (ಕ್ರಿ.ಶ. ೧೩೩೬-೧೪೦೫) ನ ಕಾಲದಲ್ಲಿ ಭಾರತವನ್ನು ಪ್ರವೇಶಿಸಿತು. ’ತಾಜಿಯಾ’ ತಯಾರಿಸುವ ಪದ್ಧತಿಯನ್ನು ಭಾರತದಲ್ಲಿ ಆರಂಭಿಸಿದವನು ಇವನೇ. ಮೊಗಲರ ಆಳ್ವಿಕೆಯಲ್ಲಿ ಇದೇ ಪದ್ಧತಿ ಮುಂದುವರಿದು ಕಾಲಕಳೆದಂತೆ ಮೊಹರಂ ಆಚರನೆಯಲ್ಲಿ ಭಾಗ-ವಹಿಸುವ ಹಿಂದೂಗಳು ಕೂಡ ತಾಜಿಯಾ ತಯಾರಿಸಿ ಮೆರವಣಿಗೆ ಮಾಡಲಾರಂಭಿಸಿದರು. ಶೇರಖಿ ರಾಜಸಂತತಿಯ ಸುಲ್ತಾನರು (ಕ್ರಿ. ಶ. ೧೩೯೮-೧೪೮೬) ಮೊಹರಂ ಆಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು ಮತ್ತು ಸಕಲ ಮತ ಪಂಥಗಳಿಗೆ, ಮೊಹರಂ ಆಚರಣೆಗೆ ಧನ ಸಹಾಯ ನೀಡುತ್ತಿದ್ದರು.

ಔಧ ಪ್ರಾಂತವನ್ನಾಳಿದ ಮೊಗಲ್ ಸಾಮ್ರಾಜ್ಯದ ನವಾಬ ಶುಜಾ ಉದ್ಧೌಲನ ಹೆಂಡತಿ ಮೊಹರಂ ಆಚರಣೆಗೆ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದಳು ಮತ್ತು ಸ್ವತಃ ಭಾಗವಹಿಸುತ್ತಿದ್ದಳು. ಕ್ರಿ. ಶ. ೧೮೧೪ ರಲ್ಲಿ ಔಧ ಸಿಂಹಾಸನವೇರಿದ ಗಾಜಿ ಉದ್ದೀನ ಹೈದರ ಲಕನೌದಲ್ಲಿ ’ಶಹ್ ಜಹಾನ್’ ಎಂಬ ಇಮಾಮಬಾಡಾ ಕಟ್ಟಿಸಿದನು ಮತ್ತು ಹಿಂದೂ ಮುಸ್ಲಿಮರಿಗೆ ಹಣ ನೀಡಿ ಮೊಹರಂ ಆಚರಿಸಲು ಪ್ರೋತ್ಸಾಹ ನೀಡುತ್ತಿದ್ದನು.

ದಕ್ಷಿಣ ಭಾರತದಲ್ಲಿ ಕಲ್ಬುರ್ಗಿ ಮತ್ತು ಬೀದರಿನಿಂದ ಆಲಿದ ಬಹಮನಿ ಸುಲ್ತಾನರು (ಕ್ರಿ.ಶ. ೧೩೪೭-೧೫೩೮) ಬಿಜಾಪುರದ ಆದಿಲ್‌ಷಾಹಿಗಳು (ಕ್ರಿ.ಶ. ೧೪೮೯-೧೬೮೬) ಸಂಭ್ರಮ ಹಾಗೂ ಸಡಗರದಿಂದ ಮೊಹರಂ ಆಚರಿಸುತ್ತಿದ್ದರು. ಗೋಲ್ಕೊಂಡಾದ ಕುತುಬ್‌ಷಾಹಿಗಳು (ಕ್ರಿ. ಶ. ೧೫೫೦-೧೬೭೨) ಹೈದರಾಬಾದ ನಗರದಲ್ಲಿ ಆಲಂ ಇಡುವ ಪದ್ಧತಿ ಆರಂಭಿಸಿ ಮುಂದುವರಿಸಿಕೊಂಡು ಬಂದರು. ಅಲಮ್‌ಗಳ ಮುಂದೆಮಜಲಿಸ್ ಏರ್ಪಡಿಸಿ ಉದಾರ ಮನಸ್ಸಿನಿಂದ ತಮ್ಮ ಬೊಕ್ಕಸದಿಂದ ಧನ ಸಹಾಯ ಮಾಡುತ್ತಿದ್ದರು. ’ಅಬ್ದುಲ್ ಕುತುಬ್ ಷಾ’ ಮೊಹರಂ ತಿಂಗಳ ಮೊದಲೆಯ ದಿನದಿಂದ ಸಫರ ತಿಂಗಳ ೨೦ ನೆಯ ದಿನಗಳವರೆಗೆ ಹೆಂಡ ಕುಡಿಯುವುದನ್ನು, ಕ್ಷೌರ ಮಾಡಿಸಿಕೊಳ್ಳುವುದನ್ನು, ತಾಂಬೂಲ ಸೇವಿಸುವುದನ್ನು ಅಪರಾಧ-ವೆಂದು ಸಾರಿದ್ದನು. ಅಲಂ ಇಡುವುದಕ್ಕಾಗಿ ಕಟ್ಟಿಸಿದ ಆಶೂರ ಖಾನೆಗಳು ಇಂದಿಗೂ ಸುಸ್ಥಿತಿ-ಯಲ್ಲಿದ್ದು ಹೈದರಾಬಾದ ನಗರದ ಸಾಂಸ್ಕೃತಿಕ ಮಹತ್ವವನ್ನು ಸಾರಿ ಹೇಳುತ್ತವೆ.

ಸಾಮ್ರಾಟ ಅಕ್ಬರ (ಕ್ರಿ.ಶ. ೧೫೪೨-೧೬೦೫) ದೀನ್-ಎ-ಇಲಾಹಿ ಸ್ಥಾಪಿಸಿದ ಅನಂತರ ಮೊಹರಂ ಹಬ್ಬ ರಾಷ್ಟ್ರೀಯ ಹಬ್ಬವಾಗಿ ಮಾರ್ಪಾಡಾಯಿತು. ೧೮ನೆಯ ಶತಮಾನದಲ್ಲಿ ಮೈಸೂರು ಸಂಸ್ಥಾನವನ್ನಾಳಿದ ಮೈಸೂರು ಹುಲಿ ಟಿಪ್ಪು ಸುಲ್ತಾನನು ಮೊಹರಂ ಒಂದು ಹಬ್ಬವಲ್ಲ, ಅದು ಹ| ಮುಹ್ಮದ ಪೈಗಂಬರರ ಮೊಮ್ಮಕ್ಕಳು ಹೋರಾಡಿ ಹುತಾತ್ಮರಾದ ಪುಣ್ಯದ ದಿನ, ಅದನ್ನು ಸೂತಕದಂತೆ ಆಚರಿಸಬೇಕು, ಎಂದು ಹೇಳುತ್ತಿದ್ದನು. ಆದರೆ ಕುತಂತ್ರಿ ಬ್ರಿಟೀಷರು ತಮಗೆ ಸಿಂಹಸ್ವಪ್ನವಾಗಿದ್ದ ಟಿಪ್ಪೂವನ್ನು ಮುಸ್ಲಿಮರಿಂದ ಬೇರ್ಪಡಿಸಲು ಮೊಹರಂ ಪ್ರಸಂಗವನ್ನು ಉಪಯೋಗಿಸಿಕೊಂಡರು. ಕಂಪನಿ ಅಧಿಕಾರಿಗಳಿಗೆ ಮುಸ್ಲಿಮರ ಗೆಳೆತನ ಮಾಡಿಸಿ ಮುಸ್ಲಿಂ ಮುಜಾವರರಿಗೆ ಸಾಕಷ್ಟು ಹಣ ನೀಡಿ ’ಮೊಹರಂ’ ಅನ್ನು ಅದ್ದೂರಿಯಿಂದ ಆಚರಿಸಲು ವ್ಯವಸ್ಥೆ ಮಾಡಿದರು. ಅಂದು ಬ್ರಿಟಿಷ್ ಅಧಿಕಾರಿಗಳು ಹಣದಾಸೆ, ಅಧಿಕಾರದಾಸೆ ತೋರಿಸಿ ಪ್ರಾರಂಭಮಾಡಿದ ಮೊಹರಂ ವಿಕಾರ ರೂಪ ಹೊಂದಿ ಬಳಕೆಯಲ್ಲಿ ಬಂದಿತು. ಇಂದಿಗೂ ಕೆಲ ಹಳ್ಳಿಗಳಲ್ಲಿ ಸರಕಾರಿ ಕಾಮಣ್ಣ ನೀಡುವಂತೆ, ಸರಕಾರಿ ಡೋಲಿ, ಸರಕಾರಿ ಆಲಂ ಇಡುವುದನ್ನು ನಾವು ಕಾಣುತ್ತೇವೆ.

ಹೀಗೆ ಹಿಂದೂಗಳ ಪ್ರಭಾವದಿಂದ ಬ್ರಿಟೀಷರ ಪೈಪೋಟಿತನದಿಂದ ಶೋಕಮೂಲ ಮೊಹರಂ ಆಚರಣೆ ಮರೆಯಾಗಿ ಸಂತೋಷ ಮತ್ತು ಸಂಭ್ರಮದ ಹಬ್ಬವಾಗಿ ವಿಶೇಷವಾಗಿ ಕರ್ನಾಟಕದಲ್ಲಿ ಮಾರ್ಪಾಡಾಯಿತು. ತತ್ಫಲವಾಗಿ ಹಿಂದೂ – ಮುಸ್ಲಿಮರಲ್ಲಿ ಹೊಂದಾಣಿಕೆ ಗಟ್ಟಿಕೊಂಡು ಭಾವೈಕ್ಯ ಸಾಧನೆಗೆ ಹಾದಿಯಾಯಿತು.

ಭಾರತೀಯರು ವಿವಿಧ ಹಬ್ಬಗಳನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಆಚರಿಸುವಂತೆ ಮೊಹರು ಹಬ್ಬವನ್ನು ಆಚರಿಸುತ್ತಾರೆ. ಮೊಹರಂ ಹಬ್ಬದ ಮೇಲೆ ಹಿಂದೂ ಸಂಸ್ಕೃತಿಯ ಗಾಢ ಪ್ರಭಾವವಾಗಿದೆ. ಪ್ರಾದೇಶಿಕವಾಗಿ ರೂಢಿಯಲ್ಲಿರುವ ಮೊಹರಂ ಆಚರಣೆಯನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಹಿಂದೂ-ಮುಸ್ಲಿಂ ಮೈತ್ರಿಯ ಕುರುಹುಗಳು ಸ್ಪಷ್ಟವಾಗಿ ಗೋಚರಿಸುತ್ತವೆ.

ಉತ್ತರ ಪ್ರದೇಶದ ಲಖನೌ ನಗರದಲ್ಲಿ ಷಿಯಾ-ಸುನ್ನಿ ಮುಸ್ಲಿಮರ ಜೊತೆಗೆ ಹಿಂದೂಗಳು ಸೇರಿ ತಾಜಿಯಾ ಕಟ್ಟುತ್ತಾರೆ. ಮೊಹರಂ ತಿಂಗಳ ಆರನೆಯ ದಿನ ’ಆಸಫಿ ಇಮಾಮಬಾಡಾ=ದಲ್ಲಿ ಬರಿಗಾಲಿನಿಂದ ಬೆಂಕಿಯ ಮೇಲೆ ನಡೆದುಹೋಗುವ ದೃಶ್ಯ, ಮೆಹಂದಿ ಜುಲೂಸನಲಿ ಪಾಲಕಿ ಪಾಲ್ಗೊಳ್ಳುವುದು’ ಹಿಂದೂ ಸಂಸ್ಕೃತಿಯಿಂದ ಪ್ರಭಾವಗೊಂಡ ಅಂಶಗಳು. ಚನೋರಬಾ ಗ್ರಾಮದಲ್ಲಿ ಮೊಹರಂ ಮೆರವಣಿಗೆ ಹೊರಟಾಗ ಹಿಂದೂ-ಮುಸ್ಲಿಮರು ರೋಗ ಪೀಡಿತ ಮಕ್ಕಳನ್ನು ತಾಜಿಯಾಗಳ ಕೆಳಗೆ ಹಾಯಿಸುತ್ತಾರೆ. ಈ ಪದ್ಧತಿ ಹಿಂದೂಗಳ ರಥೋತ್ಸವವನ್ನು ನೆನಪಿಸುತ್ತದೆ.

ಆಂಧ್ರಪ್ರದೇಶದ ಹೈದರಾಬಾದ್ ಮತ್ತು ಗೋಲ್ಕೊಂಡ ನಗರಗಳ ಮೊಹರಂ ಆಚರಣೆಯಲ್ಲಿ ಹಿಂದೂಗಳು ಪಾಲ್ಗೊಂಡು ’ಅಲ್ಮೆ ಮುಬಾರಕ್‌’ಗಳಿಗೆ ಎಡೆ ಉಡಿ ಕಾಣಿಕೆ ನೀಡುತ್ತಾರೆ. ಹತ್ತನೆಯ ದಿನ ಮಾತಂ ನಡೆಯುವಾಗ ನಿಂತು ಕಣ್ಣೀರು ಸುರಿಸುತ್ತಾರೆ. ಪಶ್ಚಿಮ ಬಂಗಾಲದ ವಿಷ್ಣುಪುರ ನಗರದ ಮೊಹರಂ ಜುಲೂಸದಲ್ಲಿ ಪಾಲ್ಗೊಳ್ಳುವ ’ಧುಲ್ ಧುಲ್’ ಎಂಬ ಮಣ್ಣಿನ ಕುದುರೆಯನ್ನು ಪೋತದಾರರು ತಯಾರಿಸುತ್ತಾರೆ. ಇದರಲ್ಲಿ ಹಿಂದು ದೇವ ದೇವತೆಗಳ ಮಣ್ಣಿನ ಮಾದರಿಯ ಛಾಯೆ ಕಂಡುಬರುತ್ತದೆ.

ಮಹಾರಾಷ್ಟ್ರ ರಾಜ್ಯದ ಅಕ್ಕಲಕೋಟೆ ನಗರದಲ್ಲಿ ಹಿಂದು ಮುಸ್ಲಿಮರು ಸೇರಿ ತಜಿಯಾ ತಯಾರಿಸುತ್ತಾರೆ. ಗ್ರಾಮ ದೇವತೆಗಳಿಗೆ ಹಿಂದುಗಳು ತೆಂಗಿನಕಾಯಿ ಒಡೆಯುವಂತೆ ತಾಜಿಯಾ ಗಳಿಗೆ ಹಿಂದು-ಮುಸ್ಲಿಮರು ತೆಂಗಿನಕಾಯಿಗಳನ್ನು ಒಡೆಸುತ್ತಾರೆ ಮತ್ತು ಹಿಂದೂ ದೇವರಿಗೆ ಎಲೆ ಬಳ್ಳಿ ಪೂಜೆ ಮಾಡುವಂತೆ ಹಿಂದು ಮುಸ್ಲಿಮರು ತಾಜಿಯಾಗಳಿಗೆ ವೀಳ್ಯದೆಲೆಯ ಹಾರ ಹಾಕುತ್ತಾರೆ. ರತ್ನಾಗಿರಿ ಜಿಲ್ಲೆಯ ಫತೇಪುರದಲ್ಲಿ ಮೊಹರಂ ಆಚರಣೆಯ ಸಮದರ್ಭದಲ್ಲಿ ತಮಾಷೆ ಮದ್ದುಗಳನ್ನು ಸುಡುತ್ತಾರೆ ಹಾಗೂ ಹೊಸಬಟ್ಟೆ ತೊಟ್ಟು ಮುಖಕ್ಕೆ ಸುಗಂಧ ದ್ರವ್ಯಗಳನ್ನು ಲೇಪಿಸಿಕೊಳ್ಳುತ್ತಾರೆ. ಈ ಸಂಭ್ರಮ ಹಿಂದುಗಳ ದೀಪಾವಳಿ ಹಬ್ಬವನ್ನು ನೆನಪಿಸುತ್ತದೆ.

ಕರ್ನಾಟಕ ರಾಜ್ಯದ ರಾಯಚೂರ ಜಿಲ್ಲೆಯ ಮುದಗಲ್ಲ ಗ್ರಾಮದಲ್ಲಿ ಮೊಹರಂ ಆಚರಣೆ-ಯಲ್ಲಿ ಮುಸ್ಲೀಮೇತರರೇ ಹೆಚ್ಚಾಗಿ ಭಾಗವಹಿಸುತ್ತಾರೆ. ಹರಕೆ ಹೊತ್ತ ಹಿಂದೂ – ಮುಸ್ಲಿಮರು ಹುಲಿ ವೇಷ. ಅಳ್ಳಳ್ಳಿ ಬವ್ವಾ ವೇಷ ಹಾಕಿ ಕುಣಿದು ಕುಪ್ಪಳಿಸುತ್ತಾರೆ. ಕಂದೂರಿ ಮಾಡಿ ಎಡೆ ನೀಡಿ ಮನಸ್ಸಿಗೆ ನೆಮ್ಮದಿ ತಂದುಕೊಳ್ಳುತ್ತಾರೆ. ದೀರ್ಘದಂಡ ನಮಸ್ಕಾರ ಹಾಕಿ ಧನ್ಯರಾಗುತ್ತಾರೆ. ಹತ್ತನೆಯ ದಿನ ಹೊರಡುವ ಕಾಸೀಮ ಆಲಂ ಮತ್ತು ಹಸನ ಆಲಮ ಒಂದಕ್ಕೊಂದು ಭೆಟ್ಟಿಯಾದಾಗ ನೆರೆದ ಜನ ಸಮೂಹ ತೇರಿನ ಮೇಲೆ ಹಣ್ಣುಕಾಯಿ ಎಸೆಯುವಂತೆ ಸೂರೆ ಮಾಡಿ ಭಯ ಭಕ್ತಿಯಿಂದ ಕೈಮುಗಿದು ತೃಪ್ತರಾಗುತ್ತಾರೆ. ಹಿಂದುಗಳ ಜಾತ್ರೆಯ ಸಂಭ್ರಮವನ್ನು ನೆನಪಿಸುವ ಮುದಗಲ್ಲ ಮೊಹರಂ ಇಂದಿಗೂ ಸರ್ವರ ಇಷ್ಟಾರ್ಥಗಳನ್ನು ಪೂರೈಸುವ ಪುಣ್ಯಕ್ಷೇತ್ರೋತ್ಸವವೆಂದೇ ಪ್ರಚಲಿತವಾಗಿದೆ.

ಬಳ್ಳಾರಿ ಜಿಲೆಯ ಹೊಸಪೇಟೆಯಲ್ಲಿ ಕೂಡಿಸುವ ಮೌಲಾಲಿ ಅಲಮ್‌ಗಳಿಗೆ ಹಿಂದೂ – ಮುಸ್ಲಿಮರು ರಾಮುಲಸ್ವಾಮಿ ಎಂದೇ ಕರೆಯುತ್ತಾರೆ. ಒಂಬತ್ತನೆಯ ದಿನ ರಾತ್ರಿ ಎಡೆ ಕೊಡುವಾಗ ಉಪ್ಪನ್ನು ಒಯ್ದು ಅಲಾವಿಯನ್ನು ಚೆಲ್ಲಿ ಹುರುಕು ಕಜ್ಜಿಗಳನ್ನು ವಾಸಿ ಮಾಡಿಕೊಳ್ಳುತ್ತಾರೆ. ಕೋಲಾರ ಜಿಲ್ಲೆಯ ನಾಗಸಂದ್ರದ ಮೊಹರಂ ಬಾಬಯ್ಯನ ಹಬ್ಬವೆಂದೇ ಪ್ರಸಿದ್ಧಿ ಪಡೆದಿದೆ.

ಧಾರವಾಡ ಜಿಲ್ಲೆಯ ಯರಗುಪ್ಪಿ ಗ್ರಾಮದ ಮೊಹರಂ ಸುತ್ತ ಹತ್ತು ಹಳ್ಳಿಗಳಲ್ಲಿ ಮೊಹರಾಂ ಜಾತ್ರೆಯೆಂದೇ ಹೆಸರಾಗಿದೆ. ಊರಿನ ಹಿಂದೂ – ಮುಸ್ಲಿಮರು ವಿಶೇಷವಾಗಿ ಬ್ರಾಹ್ಮಣರು ತಮ್ಮ ಶಕ್ತ್ಯಾನುಸಾರ ದೇವರ ಚಾಕರಿ ಮಾಡುತ್ತಾರೆ.

ಹರಕೆ ತೀರಿಸುತ್ತಾರೆ. ಗದಗ-ಬೆಟಗೇರಿಯಲ್ಲಿ ನಡೆಯುವ ಮೊಹರಂ ಮೆರವಣಿಗೆಯಲ್ಲಿ ಹಿಂದೂ-ಮುಸ್ಲಿಂ ಭಕ್ತರು ಪಾಲ್ಗೊಂಡು ಮೈತುಂಬಿದ ದೇವರಿಂದ ಮಳೆ-ಬೆಳೆ ಕುರಿತು ಹೇಳಿಕೆ-ಕೇಳಿಕೆ ಮಾಡುತ್ತಾರೆ. ಸೋಟಕನಹಾಳದ ಡೋಲಿ ಮತ್ತು ಕೈದೇವರು ದ್ಯಾಮವ್ವನ ಗುಡಿಗೆ ಭೆಟ್ಟಿಯಿತ್ತಾಗ ಊರ ಜನ ಇಮಾನು ಹುಸೇನರು ತಮಗಿ ದ್ಯಾವಮ್ಮನ ದರ್ಶನಕ್ಕೆ ಬಂದಿದ್ದಾರೆಂದೇ ತಿಳಿಯುತ್ತಾರೆ.

ಹೀಗೆ ಮೊಹರಂ ಆಚರಣೆ ಶೋಕಮೂಲವಾಗಿದ್ದರೂ ಮೂಲತಃ ಮುಸ್ಲಿಮರಿಗೆ ಸಂಬಂಧಪಟ್ಟಿದ್ದರೂ ಅದು ಹಿಂದೂಗಳ ಸ್ನಿಗ್ದ ಸ್ನೇಹದಿಂದ ಭಾವೈಕ್ಯದ ಪ್ರತೀಕವಾಗಿ ಎಲ್ಲರ ಹಬ್ಬವಾಗಿ ಬಳಕೆಯಲ್ಲಿದೆ. ಹಿಂದು-ಮುಸ್ಲಿಮರನ್ನು ಒಂದು ಗೂಡಿಸುವ ಧಾರ್ಮಿಕ ಸೌಹಾರ್ದ-ವನ್ನು ಹುಟ್ಟುಹಾಕುವ ’ಮೊಹರಂ’ ಭಾವೈಕ್ಯದ ಬೆಸುಗೆಗೆ ಮತೀಯ ಸಾಮರಸ್ಯಕ್ಕೆ ಬಹು ದೊಡ್ಡ ಕಾಣಿಕೆಯಾಗಿದೆ.

ಮೊಹರಂ ಹಬ್ಬದ ಈ ಐತಿಹಾಸಿಕ ಹಿನ್ನೆಲೆ ಬಹುಪಾಲು ಪಿಂಜಾರರಿಗೆ ಗೊತ್ತಿಲ್ಲ. ಪಿಂಜಾರರ ಈ ಜ್ಞಾನದ ಕೊರತೆ ಮತ್ತು ಈ ಹಬ್ಬಕ್ಕೆ ದೊರೆಯುವ ಹಿಂದೂಗಳ ಅಪಾರವಾದ ಸಹಯೋಗದ ಕಾರಣದಿಂದ ಶೋಕಮೂಲವಾದ ಈ ಹಬ್ಬವನ್ನು ಪಿಂಜಾರರು ಉತ್ಸಾಹ ಉಲ್ಲಾಸಗಳಿಂದ ಆಚರಿಸುತ್ತಾರೆ. ಮೊಹರಂ ಎನ್ನುವುದು ಇಸ್ಲಾಂ ಧರ್ಮದ ಹನ್ನೆರಡು ತಿಂಗಳುಗಳಲ್ಲಿ ಒಂದು. ಈ ತಿಂಗಳಲ್ಲಿ ಅಮಾವಾಸ್ಯೆಯ ನಂತರ ಕಾಣಬರುವ ಚಂದ್ರನ ದರ್ಶನದ ಕ್ಷಣದಿಂದ ಈ ಹಬ್ಬದ ಆಚರಣೆ ಆರಂಭವಾಗುತ್ತದೆ. ವಾಸ್ತವವಾಗಿ ಈ ದಿನದಿಂದ ಹತ್ತು ದಿನಗಳ ಕಾಲ ಈ ಹಬ್ಬದ ಆಚರಣೆಯಿರುವುದು ನಿಜವಾದರೂ ಚಂದ್ರದರ್ಶನದ ನಂತರ ಮಸೀದಿಯ ಮುಂದೆ ಹಾರೆ ಹಾಕಿ ಸಣ್ಣ ಗುಂಡಿ ತೋಡುವ ಶಾಸ್ತ್ರದ ಹೊರತಾಗಿ (ಬೆಂಕಿಕುಂಡದ ರಚನೆಗಾಗಿ) ಆರಂಭದ ಎಂಟು ದಿನಗಳಲ್ಲಿ ಮಹತ್ವವಾದದ್ದು ಏನೂ ನಡೆಯುವುದಿಲ್ಲ. ಈ ದಿನಗಳಲ್ಲಿ ಗುಂಬಜ್ ಆಕಾರದ ತಾಬೂತ್‌ನ್ನು (ತಾಜಿಯಾ ಎಂದೂ ಕರೆಯುತ್ತಾರೆ). ರಚಿಸಿ ಅದಕ್ಕೆ ವಿವಿಧ ಬಗೆಯ ಬಣ್ಣದ ಕಾಗದಗಳಿಂದ ಅಲಂಕಾರ ಮಾಡಲಾಗುತ್ತದೆ. ಈ ತಾಬೂತ್‌ನ ಅಲಂಕಾರ ಮಾತ್ರ ಪ್ರತಿ ವರ್ಷ ನಡೆಯುತ್ತದೆ; ಆದರೆ ಪ್ರತಿವರ್ಷ ತಾಬೂತನ್ನು ಹೊಸದಾಗಿ ತಯಾರಿಸುವುದಿಲ್ಲ. ಹಬ್ಬ ಮುಗಿದ ನಂತರ ಇದನ್ನು ಮಸೀದಿಯ ಒಂದುಕಡೆ ರಕ್ಷಿಸಿಡಲಾಗುತ್ತದೆ. ತಾಬೂತ್ ಎಂದರೆ ಶವಪೆಟ್ಟಿಗೆ ಎಂದು ಅರ್ಥ. ಧರ್ಮಕ್ಕಾಗಿ ಪ್ರಾಣ ಕಳೆದುಕೊಮಡ ಇಮಾಮ್‌ಹುಸೇನರ ಶವಸಂಸ್ಕಾರದ ಶೋಕಪೂರಿತ ಸಂಕೇತವದು. ಮೊಹರಂನ ಹಿನ್ನೆಲೆ ಗೊತ್ತಿಲ್ಲದ ಪಿಂಜಾರರಿಗೆ ಈ ತಾಬೂತ್ ಪದದ ಅಥವೂ ಗೊತ್ತಿಲ್ಲ. ಆದರೆ ಅದನ್ನು ದೇವರೆಂಬ ಭಯ-ಭಕ್ತಿಯಿಂದ ಹೊತ್ತುಕೊಳ್ಳುತ್ತಾರೆ. ಕಡೆಯ ಎರಡು ದಿನಗಳಲ್ಲಿಯೇ ವಿಶೇಷವಾದ ಆಚರಣೆ ಉತ್ಸವಗಳು ಕಂಡುಬರುತ್ತವೆ. ಈ ಹಿನ್ನೆಲೆಯಲ್ಲಿ ಪಿಂಜಾರರ ಮೊಹರಂ ಆಚರಣೆಯ ಸಂದರ್ಭವನ್ನು ವಿವರವಾಗಿ ನೋಡಬಹುದು. ಅಮಾವಾಸ್ಯೆ ನಂತರದ ಚಂದ್ರನನ್ನು ನೋಡಿ ಆ ಸಂಜೆಯೇ ಮಸೀದಿ (ಪಿಂಜಾರರು ಮಸೂತಿ ಎಂದೂ ಕರೆಯುತ್ತಾರೆ)ಯ ಮುಂದೆ ’ಹಾರೆಹಾಕುತ್ತಾರೆ’ ಈ ಹಾರೆ ಹಾಕುವುದೆಂದರೆ ಊರ ಹಿರಿಯರ ಮಾರ್ಗದರ್ಶನದಲ್ಲಿ ಹುಡುಗರು ಹಾರೆಯಿಂದ ಮಸೂತಿಯ ಮುಂದಿನ ಆವರಣಲದಲ್ಲಿ ನೆಲವನ್ನು ಸ್ವಲ್ಪ ಅಗೆಯುತ್ತಾರೆ. ಇಲ್ಲಿಂದ ಹಬ್ಬದ ಆಚರಣೆ ನಡೆಯುತ್ತಾ ಹೋಗುತ್ತದೆ. ಊರಿಗೊಂದು ಬಳಗ ಇರುತ್ತದೆ. ದೇವರಿಗೆ ಬಣ್ಣ ಹಚ್ಚುವುದಕ್ಕೆ, ಸವಾಲು ಹೇಳಿಸುವುದಕ್ಕೆ ಬೆಂಕಿ ಕೆಂಡ ತುಳಿಯುವ ಸಲುವಾಗಿ ಕಟ್ಟಿಗೆ ತರುವುದಕ್ಕೆ, ಮೈಕುಸೆಟ್ಟು ಇತ್ಯಾದಿ ಖರ್ಚಿಗೆಂದು ಬಳಗದವರು ಮನೆಮನೆಗೆ ಹೋಗಿ ಹಣವನ್ನು, ಹಣ ಇಲ್ಲದವರಹತ್ತಿರ ಕಾಳುಕಡೆಯನ್ನು ಕೇಳಿ ಪಡೆಯುತ್ತಾರೆ. ಹಬ್ಬದ ಕೆಲಸಕ್ಕಾದ್ದರಿಂದ ಯಾರೂ ಇಲ್ಲವೆನ್ನದೆ ಕೊಡುತ್ತಾರೆ. ಎಲ್ಲರಿಂದ ಬಂದ ಹಣವನ್ನು ಕೂಡಿಸಿ ಅಗತ್ಯದ ಸಾಮಾನು ತರುತ್ತಾರೆ. ಅನೇಕ ನಮೂನೆಯ ಬಣ್ಣದ ಕಾಗದಗಳನ್ನು ತಂದು ಕತ್ತರಿಸಿ ಚಿತ್ರಾಕಾರದಲ್ಲಿ ದೇವರಿಗೆ ಹಚ್ಚಿ ಅಲಂಕರಿಸುತ್ತಾರೆ. ಮನೆಯ ಹೆಣ್ಣುಮಕ್ಕಳು ಮನೆ ಬಳಿಯುವ, ಅಡಿಗೆ ಪದಾರ್ಥಗಳನ್ನು ತಂದುಕೊಳ್ಳುವ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ದೇವರ ಅಲಂಕಾರ ಮುಗಿಯುತ್ತಿದ್ದಂತೆ ಒಂಭತ್ತನೆಯ ದಿನದ ಬೆಳ್ಳಂಬೆಳಗ್ಗೆ ’ಮೌಲಾಲಿ’ ಹೊತ್ತುಕೊಂಡು ಮುಲ್ಲಾನ ಜೊತೆಗೆ ಕೆಲವರು ಮನೆಮನೆಗೆ ಬರುತ್ತಾರೆ. ಮಬ್ಬು ಹರಿಯುತ್ತಿದ್ದಂತೆ ಮೌಲಾಲಿ ಬರುತ್ತದೆಂದು ತಿಳಿದ ಜನ ತಂತಮ್ಮ ಮನೆ ಮುಂದೆ ಕಸಹೊಡೆದು ನೀರು ಚಿಮುಕಿಸುತ್ತಾರೆ. ಮೌಲಾಲಿಯನ್ನುಹಿಡಿದುಕೊಂಡು ಬಂದವನ ಕಾಲು ತೊಳೆದು ಮನೆಯ ಹೆಂಗಸರು ಸಕ್ಕರೆ ಅಥವಾ ಬೆಲ್ಲವನ್ನು ಓದಿಸಲು ಕೊಡುತ್ತಾರೆ. ಚಿತ್ತಾರದ ತ್ರಾಮದ ಅಥವಾ ಹಿತ್ತಾಳೆಯ ಗಂಗಾಳದಲ್ಲಿ ಸಕ್ಕರೆ ಅಥವಾ ಬೆಲ್ಲ ಹಾಕಿ ದಸ್ತರಖಾನಿ ಮುಚ್ಚಿಕೊಟ್ಟರೆ ಮುಲ್ಲಾ ’ಓದಿಕೆ’ ಮುಗಿಸಿ ಅರ್ಧದಷ್ಟು ಸಕ್ಕರೆ ಅಥವಾ ಬೆಲ್ಲವನ್ನು ತಾನು ತೆಗೆದುಕೊಂಡು ಉಳಿದದ್ದನ್ನು ಹಿಂತಿರುಗಿಸುತ್ತಾನೆ. ಹೀಗೆ ಇಡೀ ಊರಿನವರು ಅವರಿವರೆನ್ನದೆ ತಮ್ಮ ಮನೆ ಮುಂದೆ ಮೌಲಾಲಿಗೆ ಗೌರವ ತೋರಿಸುವ ಸಲುವಾಗಿ ಸಕ್ಕರೆ ಓದಿಸುತ್ತಾರೆ. ಬಹಳಷ್ಟು ಪಿಂಜಾರರು ಬಡವರೇ ಆಗಿರುವುದರಿಂದ ಬೆಲ್ಲವನ್ನು ಪುಡಿಮಾಡಿ ಕೊಟ್ಟು ಓದಿಸುತ್ತಾರೆ. ಸಕ್ಕರೆ ಓದಿಸಿ ಮಕ್ಕಳಿಗೆ ಕಟ್ಟುತ್ತಾರೆ.ಮಕ್ಕಳು ಅವರ್ಣನೀಯ ಆನಂದದಿಂದ ಕುಣಿದಾಡುತ್ತವೆ. ಮಧ್ಯಾಹ್ನಕ್ಕೆ ಈ ಸಂಭ್ರಮ ಮುಗಿಯುತ್ತದೆ.

ಆ ದಿನ ಮಧ್ಯಾಹ್ನವೇ ಮಸೂತಿ ಮುಂದೆ ಅಗಲವಾದ ೨-೩ ಅಡಿ ಆಳದ ಅಗಲವಾದ ಗುಂಡಿಯನ್ನು ತೋಡುತ್ತಾರೆ. ಕಟ್ಟಿಗೆಯನ್ನು ತಂದು ಅಲ್ಲಿ ಕಲೆಹಾಕುತ್ತಾರೆ. ಆ ದಿನ ಸಂಜೆ ಹಲಗೆ ವಾದ್ಯಗಳೊಡನೆ ತಾಬೂತನ್ನು ಹೊತ್ತುಕೊಂಡು ಇಡೀ ಊರನ್ನು ಕುಣಿಯುತ್ತಾ ಸುತ್ತಲಾಗುತ್ತದೆ. ತಾಬೂತಿನ ಮುಂದೆ ಕತ್ತಿಗಳನ್ನು ಹಿಡಿದವರು, ಮೌಲಾಲಿ ಹಿಡಿದವರು, ಕೈಯಲ್ಲಿ ಹಿಡಿದುಕೊಳ್ಳಬಹುದಾದ ಕುಡಿಕೆಯಲ್ಲಿ ಬೆಂಕಿ ಕೆಂಡ ಹಾಕಿಕೊಂಡು ಹಿಡಿದು ಮುಲ್ಲಾನ ಜೊತೆಗೆ ಅನೇಕರು ಹೊರಡುತ್ತಾರೆ. ತಾಬೂತು ಮುಂದೆ ಹೋದಂತೆ ಹೆಂಗಸರು, ಮಕ್ಕಳಾದಿಯಾಗಿ ಮನೆಯಿಂದ ಕಿಚಡಿ, ಶರಬತ್ತನ್ನು ಗಂಗಾಳ, ಲೋಟ-ಗಳಲ್ಲಿಟ್ಟುಕೊಂಡು ದಸ್ತರಖಾಣಿ ಮುಚ್ಚಿ ಕೈಲಿಟ್ಟುಕೊಂಡು ಹೊಸಸೀರೆ ಬಟ್ಟೆಗಳನ್ನುಟ್ಟು ತಲೆತುಂಬ ಸೆರಗು ಹೊದ್ದು ಹೊರಡುತ್ತಾರೆ. ಆವೇಶದಿಂದ ಕುಣಿಯುತ್ತಾ ಗಂಡಸರು, ಮಕ್ಕಳು ’ಕ್ಯಾ ಹುಸೇನ್ ಬಾ ಹುಸೇನ್’ ಎಂದು ಕೂಗುತ್ತಾ ನಡೆಯುತ್ತಾರೆ. ತಾಬೂತು ಮಸೀದಿ ತಲುಪಿದ ತಕ್ಷಣ ಅದನ್ನು ಕೆಳಗಿಳಿಸುತ್ತಾರೆ. ಅದರ ಮುಂದೆ ಮುಲ್ಲಾ ಕುಳಿತುಕೊಳ್ಳುತ್ತಾರೆ. ಹೆಣ್ಣುಮಕ್ಕಳು ತಂದ ಕಿಚಡಿ ಶರಬತ್ತನ್ನು ’ಓದಿಕೆ’ ಮಾಡಿ ತಂದದ್ದರಲ್ಲಿ ಅರ್ಧ ಉಳಿಸಿಕೊಂಡು ಉಳಿದರ್ಧ-ವನ್ನು ಕೊಟ್ಟು ಕಳಿಸಲಾಗುತ್ತದೆ. ಓದಿಕೆ ಮಾಡಿಕೊಂಡು ಬಂದ ನಂತರವೇ ಕಿಚಡಿ ಶರಬತ್ತನ್ನು ಕಲಸಿಕೊಂಡು ಉಣ್ಣಲಾಗುತ್ತದೆ. ಮುಲ್ಲಾ ಮಸೀದಿಯಲ್ಲಿ ಉಳಿಸಿಕೊಂಡ ಕಿಚಡಿ ಶರಬತ್ತನ್ನು ಬಡವರಿಗೆ ಹಂಚುತ್ತಾನೆ. ರಾತ್ರಿಯಿಡೀ ಮಸೂತಿಯ ಮುಂದೆ ಹಿರಿಯರೆಲ್ಲರೂ ಕೂಡಿಕೊಂಡು ಕತೆ ಹೇಳುವುದು, ಹರಟೆ ಹೊಡೆಯುವುದು, ಸಾಧ್ಯವಾದರೆ ಸವಾಲು ಹೇಳುವುದು ಮಾಡುತ್ತ ಬೀಡಿ ಸೇದುತ್ತಾ ಗುಮಡಿಗೆ ಕಟ್ಟಿಗೆ ತುಂಬಿ ಬೆಂಕಿ ಹಚ್ಚುತ್ತಾರೆ. ಹೆಚ್ಚು ಹೆಚ್ಚು ಕೆಂಡಗಳಿರಲೆಂದು ದಪ್ಪನೆಯ ತುಂಡುಗಳಿಗೆ ಬೆಂಕಿ ಹಚ್ಚುತ್ತಾರೆ. ಬೆಳಗಾಗುವವರೆಗೂ ಬೆಂಕಿ ಉರಿಯುತ್ತಿರುವಂತೆ ನೋಡಿಕೊಳ್ಳುತ್ತಾರೆ.

ಇದು ಹತ್ತನೆಯ ದಿನ, ಮೊಹರಂ ಕಡೆಯ ದಿನ. ಬೆಳಗಾಗುತ್ತಿದ್ದಂತೆಯೇ ಅಲೆದೇವರನ್ನು ಹೊತ್ತುಕೊಂಡು (ಗುಂಬಜ್ ಆಕಾರದಲ್ಲಿ ಕಟ್ಟಿಗೆಯಿಂದ ಮಾಡಿದ ದೇವರು, ಎಲ್ಲೂ ಕಟ್ಟಿಗೆ ಕಾಣದಂತೆ ಬಣ್ಣದ ಕಾಗದ ಅಂಟಿಸಿ ಅಲಂಕರಿಸುತ್ತಾರೆ. ಗುಂಬಜ್‌ನ ತುಟ್ಟ ತುದಿಯಲ್ಲಿ ಅರ್ಧಚಂದ್ರಾಕಾರದ ಬೆಳ್ಳಿಯ ಆಭರಣವಿರುತ್ತದೆ) ಜನಜಂಗುಳಿ ಕುಣಿಯುತ್ತ ಕೂಗಾಡಿಕೊಂಡು ಬರುತ್ತದೆ. ತಾಬೂತಿನ ಮುಂದೆ ೩-೪ ಜನ ಹಲಗೆ ಬಡಿಯುವವರು (ಸಾಮಾನ್ಯವಾಗಿ ಅವರು ಹರಿಜನರೇ ಆಗಿರುತ್ತಾರೆ. ಆಗಾಗ್ಗೆ ಬೆಂಕಿ ಹಾಕಿ ಹಲಗೆ ಕಾಯಿಸಿಕೊಳ್ಳುತ್ತ ಕುಣಿಯುತ್ತ ಲಯಬದ್ದವಾಗಿ ಹಲಗೆ ಬಡಿಯುತ್ತಾರೆ. ಸೊನೆಯದವರು (ವಾದ್ಯದವರೂ) ಇವರೊಂದಿಗೆ ತಮ್ಮ ವಾದ್ಯಗಳನ್ನು ಕುಣಿತಕ್ಕನುಸಾರವಾಗಿ ಬಾರಿಸುತ್ತಾರೆ. ಸಣ್ಣಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಕೈಯಲ್ಲಿ ಬಿಲ್ಲಿನಾಕಾರದಲ್ಲಿ ಬಿದಿರು ದಬ್ಬೆಯಿಂದ ಮಾಡಿದ ವಸ್ತುವಿಗೆ ಬಣ್ಣದ ಕಾಗದ ಅಂಟಿಸಿಕೊಂಡು, ಮತ್ತೊಂದು ಕೈಯಲ್ಲಿ ಹಿಡಿಯಾಕಾರದಲ್ಲಿ ಡಬ್ಬದಲ್ಲಿ ಮಾಡಿದ ವಸ್ತುವಿನೊಳಗೆ ಕಲ್ಲಾಳು ಹಾಕಿಕೊಂಡು ಅಲುಗಾಡಿಸುತ್ತಾ ’ಜಾಲದ ಜನಕ ಪಟಿ’ ಎನ್ನುತ್ತಾ ಕುಣಿಯುತ್ತಾರೆ. ನಾಲ್ಕೈದು ಮಂದಿಯಂತೆ ಸಾಲುಗಳನ್ನು ಮಾಡಿಕೊಂಡು ಕುಣಿಯುತ್ತಾರೆ. ಮಕ್ಕಳು ಸೊಂಟಕ್ಕೆ ಗೆಜ್ಜೆಯಿರುವ ಪಟಗಣ್ಣಿ ಕಟ್ಟಿಕೊಂಡು ಕಾಗದದಲ್ಲಿ ಗೋಪುರಾಕಾರದ ಟೋಪಿ ರಚಿಸಿ (ಅಳ್ಳಳ್ಳಿಬುವ್ವಾ) ತಲೆಗೆ ಹಾಕಿಕೊಂಡು ಕೈಯಲ್ಲಿ ಒಣಗಿದ ಅಡಿಕೆಪಟ್ಟಿಯನ್ನು ದುಂಡಗೆ ಮಡಿಸಿ ಹಿಡಿದುಕೊಂಡು ಕುಣಿಯುತ್ತಾರೆ. ಹೀಗೆ ಕುಣಿಯುವವರನ್ನು ಗೌರವದಿಂದ ಕುತೂಹಲದಿಂದ ಜನತೆ ನೋಡುತ್ತಿರುತ್ತದೆ. ಅಡಕೆಪಟ್ಟಿ ಹಿಡಿದುಕೊಂಡ ಮಕ್ಕಳನ್ನು ಕರೆದು ತುಂಬ ಚಿಕ್ಕ ಮಕ್ಕಳ ತಲೆಗೆ ಅಡಿಕೆಪಟ್ಟಿಯಿಂದ ಮೆಲ್ಲಗೆ ಮುಟ್ಟಿಸಲುಹೇಳುತ್ತಾರೆ. ಅದು ದೇವರ ಆಶೀರ್ವಾದವೆಂದೇ ಜನ ಭಾವಿಸುತ್ತಾರೆ. ಕುಣಿಯುವವರ ಗುಂಪು ಹಿಂದಕ್ಕೆ ಮುಂದಕ್ಕೆ ತಾಳಬದ್ದವಾಗಿ ಹೆಜ್ಜೆ ಹಾಕುತ್ತಾ ಮೆಲ್ಲಗೆ ಮುಂದೆ ಸಾಗುತ್ತಿರುತ್ತದೆ. ಪ್ರತಿಯೊಂದು ಮನೆಯವರೂ ಈ ಗುಂಪು ಬರುವ ಮೊದಲೇ ತಂತಮ್ಮ ಮನೆಮುಂದೆ ಜಾಗವನ್ನು ಸ್ವಚ್ಛ ಮಾಡಿ ನೀರು ಚಿಮುಕಿಸುತ್ತಾರೆ. ಕುಣಿಯವವರ ಹಿಂದೆ ಮೌಲಾಲಿ, ಹಿಡಿದು ಒಬ್ಬರು, ಪಕ್ಕದಲ್ಲಿ ತಲೆಗೆ ಕರವಸ್ತ್ರ ಕಟ್ಟಿದ ಮುಲ್ಲಾ, ಅವರೊಂದಿಗೆ ಕತ್ತಿ, ನವಿಲುಗಿರಿ, ಲೋಬಾನದ ಕುಡಿಕೆ ಹಿಡಿದುಕೊಂಡು ಹುಡುಗರು ಬರುತ್ತಿರುತ್ತಾರೆ. ಇವರ ಹಿಂದೆ ದೇವರನ್ನು ಹೊತ್ತು-ಕೊಂಡು ಬರುವವರು ಆಗಾಗ್ಗೆ ಹೆಗಲು ಬದಲಿಸಿಕೊಳ್ಳುತ್ತಾ ಬರುತ್ತಾರೆ. ಪ್ರತಿ ಮನೆಯ ಮುಂದೆ ದೇವರು ನಿಂತು ಮನೆಯವರು ಕೊಟ್ಟ ಸಕ್ಕರೆ ಅಥವಾ ಬೆಲ್ಲವನ್ನು ಮುಲ್ಲಾ ಓದಿಕೆ ಮಾಡಿದ ತಕ್ಷಣ ಹುಡುಗರು ’ಇಮಾಮಬೋಲ’ ಅನ್ನುತ್ತಾರೆ. ತಕ್ಷಣ ಇನ್ನೊಂದು ಗುಂಪು ’ಇಂಬುಂಬೋ ಇಮೋಂದೀನ್’ ಎಂದು ಪ್ರತಿಯಾಗಿ ಹೇಳುತ್ತದೆ. ಎಲ್ಲರೂ ದೇವರ ಮೇಲೆ ಬೀಳುವಂತೆ ಮಂಡಕ್ಕಿಯನ್ನು ತೂರುತ್ತಾರೆ. ಹೆಂಗಸರು ’ಓದಿಕೆ’ ಮಾಡಿಕೊಳ್ಳುವುದಕ್ಕಾಗಿ ಸಕ್ಕರೆ, ಬೆಲ್ಲ ತಂದು ಮುಲ್ಲಾ ಕೈಲಿಕೊಟ್ಟು ಕುಣಿಯುವ ಜನರನ್ನು ನೋಡುತ್ತಿರುತ್ತಾರೆ. ಅದಕ್ಕೆ ಮೊದಲು ಮುಲ್ಲಾನ ಕಾಲು ತೊಳೆಯಲಾಗುತ್ತದೆ. ದೇವರಿಗೆ ಮಂಡಕ್ಕಿ ಉಗ್ಗಿದ ನಂತರ ದೇವರು ಮತ್ತೆ ಮೆಲ್ಲಗೆ ಮುಂದಕ್ಕೆ ಸಾಗುತ್ತದೆ. ಕೆಲವರು ಹೆಣ್ಣುಮಕ್ಕಳು ಹಸುಗೂಸನ್ನು ಎತ್ತಿಕೊಂಡು ತಾಬೂತಿನ ಕೆಳಗೆ ಬಗ್ಗೆ ಭಯಭಕ್ತಿಯಿಂದ ದಾಟುತ್ತಾರೆ. ಕಾಯಿಲೆ-ಕಸಾಲೆ ಯಾದವರು ಮತ್ತು ಮಕ್ಕಳಿಗೂ ಈ ರೀತಿ ದಾಟಲು ಹೇಳುತ್ತಾರೆ. ಇನ್ನೂ ಕೆಲವರು ಮಕ್ಕಳು-ಮರಿಗಳನ್ನು ಕರೆದು ನವಿಲುಗರಿಯಿಂದ ಮೂರು ಸಲ ಹಣೆ ತಲೆಗೆ ಮುಟ್ಟಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತಾರೆ. ಇದರಿಂದ ದೇವರು ತಮಗೆ ಹರಸುತ್ತಾನೆ ಎಂಬ ನಂಬಿಕೆ ಇದೆ. ಹೀಗೆ ಇಡೀ ಊರನ್ನು ಸುತ್ತಿದ ನಂತರ ಪಕ್ಕದ ಊರಿನ ದೇವರ ಜೊತೆ ಗಡಿಯಾಡಲು ಹೋಗುತ್ತಾರೆ.

ಎಲ್ಲ ಊರುಗಳಲ್ಲಿಯೂ ಪಿಂಜಾರರು ಈ ಗಡಿಯಾಡುವ ಆಚರಣೆಯನ್ನಿಟ್ಟುಕೊಂಡಿಲ್ಲ. ಕೆಲವು ಊರುಗಳಲ್ಲಿದೆ. ಪಕ್ಕದ ಊರಿನ ದೇವರು ತಮ್ಮೂರ ದೇವರ ಸಹೋದರ ಎಂದು ತಿಳಿದಿರುತ್ತಾರೆ. ಕುಣಿಯುತ್ತಿದ್ದವರು ತಾವು ಹಿಡಿದುಕೊಂಡಿದ್ದ ಸಾಮಾನುಗಳನ್ನೆಲ್ಲ ಮಸೂತಿ-ಯಲ್ಲಿಟ್ಟು ಎಲ್ಲರೂ ದೇವರ ಹಿಂದೆ ಹೊರಡುತ್ತಾರೆ. ಹೊರಟಾಗ ಯಾರೂ ಕುಣಿಯುವುದಿಲ್ಲ. ಮೌಲಾಲಿ ಮತ್ತು ದೇವರನ್ನು ಹೊತ್ತುಕೊಂಡವರ ಮುಂದೆ ಮುಲ್ಲಾ ಇರುತ್ತಾನೆ. ತಮ್ಮೂರ ಗಡಿಯವರೆಗೂ ಹೋಗಿ ಪಕ್ಕದೂರಿನ ದೇವರು ಬರುವವರೆಗೂ ಕಾಯುತ್ತಾರೆ. ಸಾಮಾನ್ಯವಾಗಿ ಹೆಚ್ಚು ಕಾಯಿಸದೆ ಎರಡೂ ಊರಿನವರೂ ಗಡಿಯಲ್ಲಿ ಬಂದು ಸೇರುತ್ತಾರೆ. ನಂತರ ಎರಡೂ ಕಡೆಯ ಮುಲ್ಲಾಗಳು ’ಓದಿಕೆ’ ಮಾಡುತ್ತಾರೆ. ಅವರ ಮಾರ್ಗದರ್ಶನದಂತೆ ಮೌಲಾಲಿ ಹಿಡಿದುಕೊಂಡವರು ಪರಸ್ಪರ (ಮೌಲಾಲಿ ಎಂದರೆ ಉದ್ದನೆಯ ಗಳುವೊಂದಕ್ಕೆ ಬಿಳಿಬಟ್ಟೆ ಸುತ್ತಿ ತುದಿಯಲ್ಲಿ ಗುಂಡು ಅಥವಾ ಚಂದ್ರಾಕಾರದ ಲೋಹದ ಬಂಗಾರದ ಬಣ್ಣದ ಆಭರಣವನ್ನು ಇಟ್ಟಿರುತ್ತಾರೆ) ಆ ಮೌಲಾಲಿಗಳಿಗೆ ಢಿಕ್ಕಿ ಹೊಡೆಸುತ್ತಾರೆ. ೨-೩ ಸಲಹ ಹಾಗೆ ಪರಸ್ಪರ ಸಂಘಟಿಸಿದ ನಂತರ ದೇವರನ್ನು ಹೊತ್ತುಕೊಂಡವರು ಕೂಡ ಎದುರುಬದುರ ಜೋರಾಗಿ ಈ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ ರಭಸದಿಂದ ಓಡಾಡುತ್ತಾರೆ. ಪ್ರದಕ್ಷಿಣೆ ಹಾಕುತ್ತಾರೆ. ಅದಕ್ಕೆಂದೇ ತಿಗುಡಾಗಿರುವ ಯುವಕರು ದೇವರನ್ನು ಹೊತ್ತುಕೊಂಡಿರುತ್ತಾರೆ. ದೇವರನ್ನು ಹೊತ್ತುಕೊಳ್ಳುವುದಕ್ಕೂ ನಾ ಮುಂದು ತಾ ಮುಂದು ಎನ್ನುವಂಥ ಸ್ಪರ್ಧೆಯಿರುತ್ತದೆ. ಅದು ದೇವರ ಸೇವೆ ಪುಣ್ಯದ ಕೆಲಸ ಎಂಬ ನಂಬಿಕೆಯಿರಬೇಕು. ಹೀಗೆ ಎರಡೂ ಊರಿನ ದೇವರುಗಳು ಗಡಿಯಾಡಿದ ನಂತರ ನೇರವಾಗಿ ತಂತಮ್ಮ ಊರಿನ ಮಸೂತಿಯ ಹತ್ತಿರ ಜನರೆಲ್ಲ ಬರುತ್ತಾರೆ. ಈ ಜನ ಬರುತ್ತಿದ್ದಂತಯೇ ಮಸೂರಿ ಮುಂದೆ ತೋಡಿದ್ದ ಗುಂಡಿಯ ಬೆಂಕಿ ಕೆಂಡವನ್ನು ಕೆದರಿ ಕೆಂಪಾಗಿ ಉರಿಯುವುದು ಕಾಣುವಂತೆ ಮಾಡಲಾಗುತ್ತದೆ. ಗುಮಡಿಯ ಸುತ್ತ ಕಿಕ್ಕಿರಿದು ಜನ ಸೇರುತ್ತಾರೆ. ಒಬ್ಬೊಬ್ಬರಾಗಿ ಕೆಂಡ ತುಳಿಯಲು ಅವಕಾಶ ಮಾಡಿಕೊಡಲಾಗುತ್ತದೆ. ಮೊದಲು ಮೌಲಾಲಿ ಹಿಡಿದವನು ಉನ್ಮಾದದಿಂದ ದೇವರ ಮೈಮೇಲೆ ಬಂದವನಂತೆ ಬೆಂಕಿ ಕೆಂಡವನ್ನು ಮತ್ತೆ ಮತ್ತೆ ತುಳಿಯುತ್ತಾನೆ. ಆತನನ್ನು ಹಿಡಿದುಕೊಳ್ಳುತ್ತಾರೆ. ಮತ್ತೆ ಕತ್ತಿ, ನವಿಲುಗರಿ ಹಿಡಿದವರು ’ಇಂಬುಂಬೋಲ ಇಮೋಂದೀನ್’ ಎಂದು ಕೂಗುತ್ತಾ ಬೆಂಕಿ ತುಳಿಯುತ್ತಾನೆ. ಉಳಿದವರಿಗೂ ಬೆಂಕಿ ತುಳಿಯಲು ಅವಕಾಶ ಮಾಡಿಕೊಡಲಾಗುತ್ತದೆ. ಹರಕೆ ಕಟ್ಟಿದವರು, ದೇವರು ಮೈ ಮೇಲೆ ಬಂದಂತೆ ನಟಿಸುವವರು. ಹುಡುಗಾಟಕ್ಕೆ ಬೆಂಕಿ ತುಳಿಯಲೆಂದು ಬಂದವರು, ಗಾಢ ನಂಬಿಕೆಯಿಟ್ಟವರು ಎಲ್ಲರೂ ಯಾವುದೇ ಜನಾಂಗ-ಭೇದವಿಲ್ಲದೆ ಬೆಂಕಿ ತುಳಿಯುತ್ತಾರೆ. ಯಾರಿಗೂ ಬಹಳ ಹೊತ್ತು ತುಳಿಯಲು ಬಿಡುವುದಿಲ್ಲ. ಎಲ್ಲರೂ ತುಳಿದ ನಂತರ ತಕ್ಷಣ ಆ ಗುಂಡಿಯನ್ನು ಮುಚ್ಚಲಾಗುತ್ತದೆ. ದೇವರನ್ನು ಮಸೀದಿಯ ಪಕ್ಕ ಇಳಿಸಿ ಎಲ್ಲರೂಮನೆಗೆ ಬರುತ್ತಾರೆ. ಮನೆಗೆ ಬಂದು ಕೈಕಾಲ ತೊಳೆದು ಉಣ್ಣುತ್ತಾರೆ. ಕೆಲವರು ಆಗಲೇ ಕುರಿ ಅಥವಾ ಮೇಕೆಯನ್ನು ಕೊಯ್ದು ಮಾಂಸ ಬೇಕೆಂದವರಿಗೆ ಕೊಡುತ್ತಿರುತ್ತಾರೆ. ಬೇಕಾದವರು ಮೊದಲೇ ಯಾರು ಕೊಯ್ಯುತ್ತಾರೆಂದು ತಿಳಿದು ತಮಗೆ ಇಷ್ಟು ಬೇಕೆಂದು ನಿಗದಿ ಮಾಡಿರುತ್ತಾರೆ. ಮಾಂಸ ತಂದುಕೊಟ್ಟು ಗಂಡಸರು ವಿವಿಧ ವೇಷಗಳನ್ನು ಧರಿಸಿಕೊಂಡು ಊರ ನಡುವೆ ತಿರುಗಾಡಿ ಜನರನ್ನು ರಂಜಿಸುತ್ತಾರೆ.

ಪಿಂಜಾರರು ಈ ವೇಷ ಹಾಕುವ ಕಲೆಯಲ್ಲಿ ನಿಜಕ್ಕೂ ನಿಪುಣರು. ಬುಡುಬುಡಿಕೆ-ಯವರು, ರಾಮಗುಂಡಾಡಿ, ಬೇಡರ ಕಣ್ಣಪ್ಪ, ಹುಲಿವೇಷ, ಊರಮಾರಮ್ಮ ಮುಂತಾಗಿ ಹತ್ತಾರು ರೀತಿಯ ವೇಷ ಧರಿಸಿ ಊರ ತುಂಬ ತಿರುಗಾಡುತ್ತಾರೆ. ಮನೆ ಮನೆಗೆ ಹೋಗಿ ಬುಡುಬುಡಿಕೆ ಅಲ್ಲಾಡಿಸಿ ಆ ಮನೆಯವರ ಭವಿಷ್ಯ ಹೇಳುತ್ತಾರೆ. ಬೇಡರ ಕಣ್ಣಪ್ಪನ ವೇಷದವರು ಹಲಗೆ ಬಡಿಯುವವರನ್ನು ಜೊತೆಯಲ್ಲಿಟ್ಟುಕೊಂಡು ಕುಣಿಯುತ್ತಾ ಐರು ಸುತ್ತತ್ತಾರೆ. ಹೀಗೆ ವೇಷ ಹಾಕಿಕೊಂಡು ಬಂದವರಿಗೆ ಊರಿನ ಜನ ತಮಗಿಷ್ಟವಾದವರಿಗೆ ತಿಳಿದಷ್ಟು ಹಣವನ್ನು ಮುಯ್ಯಿ ಮಾಡುತ್ತಾರೆ. ಊರ ಬಾಕಲು ಎಂದೇ ಕರೆಯುವ ಊರ ನಡುವಿನ ಜಾಗದಲ್ಲಿ, ಎಲ್ಲರೂ ಸಾಮಾನ್ಯವಾಗಿ ಸೇರುವ ಜಾಗ, ಈ ವೇಷಧಾರಿಗಳು ಹೆಚ್ಚು ಸಮಯವನ್ನು ಕಳೆಯುತ್ತಾರೆ. ವೇಷದೊಂದಿಗೆ ಅಷ್ಟೇ ವಿನೋದವಾಗಿ ಮಾತಾಡಿ ಜನರನ್ನು ಲವಲವಿಕೆಯಿಂದಿಡುತ್ತಾರೆ. ಅತ್ಯಂತ ಕಲಾತ್ಮಕ ದೃಷ್ಟಿಯಿಂದಲೂ, ಮನೋರಂಜನೆಯ ದೃಷ್ಟಿ-ಯಿಂದಲೂ ಪಿಂಜಾರರು ಮತ್ತು ಎಲ್ಲ ಜನಾಂಗದವರು ತರುವ ವೇಷಗಳನ್ನು ಅಧ್ಯಯನ ಮಾಡುವುದು ಸಾಧ್ಯವಿದೆ. ವಿಚಿತ್ರವೆಂದರೆ ಮುಸ್ಲಮರೇ ಈ ಯಾವುದರಲ್ಲೂ ಭಾಗವಹಿಸು-ವುದಿಲ್ಲ. ಕೆಲವು ಊರುಗಳಲ್ಲಂತೂ ಪಿಂಜಾರರಿಗೆ ಹೀಗೆ ಮಾಡಬಾರದೆಂದು ಮುಸ್ಲಿಮರು ಬಯ್ದು ಹೇಳುತ್ತಾರೆ. ಯಾರು ಏನು ಹೇಳಿದರೂ ವರ್ಷವರ್ಷಕ್ಕೂ ಹೆಚ್ಚು ಹೆಚ್ಚು ಸಂಭ್ರಮ, ಆಸಕ್ತಿಯಿಂದ ಪಿಂಜಾರರು ಈ ಹಬ್ಬವನ್ನು ಮಾಡಿಯೇ ತೀರುತ್ತಾರೆ. ಆ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಮುಸ್ಲಿಮರು ಪಿಂಜಾರರೊಮದಿಗೆ ಸಹಕರಿಸುವುದನ್ನು ಅವರು ಬಯಸುತ್ತಾರೆ. ಈ ವೇಷಗಳನ್ನು ತರುವುದು. ದೇವರನ್ನು ಹೊತ್ತು ಕುಣಿಯುವುದೆಲ್ಲಾ ಇಸ್ಲಾಂ ಧಾರ್ಮಿಕ ಆಚರಣೆಗೆ ವಿರುದ್ಧವಾದುದೆಂದು ಮುಸ್ಲಿಮರು ಹೇಳುತ್ತಾರೆ. ಅಲ್ಲದೆ ಮೊಹರಂ ಕಡೆಯ ದಿನ, ದೇವರು ಸಾಯುವ ದಿನ, ದುಃಖ ಪಡಬೇಕಾದ ಸಮಯದಲ್ಲಿ ಸಂಭ್ರಮದಿಂದ ಕುಣಿಯುತ್ತಾರೆ ಈ ಜನ. ಇವರಿಗೆ ಧರ್ಮ ಬಗ್ಗೆ ಜ್ಞಾನ ಇದ್ದರಲ್ಲವೇ? ಏ ಲದಾಫಾಂಕು ಕೋನ್ ಬೋಲ್ತ? ಎಂದಂದುಕೊಂಡು ಮುಸ್ಲಿಮರು ಹೇಳುವಷ್ಟು ಹೇಳಿ ಸುಮ್ಮನಾಗುತ್ತಾರೆ. ಕೆಲವು ಊರುಗಳಲ್ಲಿ ಪಿಂಜಾರರಿಗಿಂತ ಕಡಿಮೆ ಸಂಖ್ಯೆಯ ಮುಸ್ಲಿಮರಿರುವ ಊರುಗಳಲ್ಲಿ ಮುಸ್ಲಿಮರು ಪಿಂಜಾರರಿಗೇ ಹೊಂದಿಕೊಂಡು ಅವರಂತೆಯೇ ಈ ಹಬ್ಬದಲ್ಲಿ ಭಾಗವಹಿಸುತ್ತಾರೆ.

ವೇಷ ಹಾಕುವುದರ ಜೊತೆ ಜೊತೆಗೆ ಕತ್ತಿ ವರಸೆಯಲ್ಲಿ ನಿಪುಣರಾದವರು ಕತ್ತಿ ತಿರುಗಿಸುತ್ತಾರೆ. ಕೆಲವು ಊರುಗಳಲ್ಲಿ ಪಿಂಜಾರರು ಕತ್ತಿ ತಿರುಗಿಸುವುದನ್ನು ನೋಡಿದರೆ ಆಶ್ಚರ್ಯ, ಭಯ ಒಟ್ಟಿಗೇ ಉಂಟಾಗುತ್ತವೆ. ಎರಡೂ ಕಯಯಲ್ಲಿ ಎರಡು ಉದ್ದನೆಯ ಕತ್ತಿಗಳನ್ನು ಹಿಡಿದುಕೊಂಡು ಜೋರಾಗಿ ಮೈ ಸುತ್ತಿಸುತ್ತಾ ಹೆಜ್ಜೆ ಹಾಕುತ್ತಾ ಕತ್ತಿ ತಿರುಗಿಸುವ ಚಮತ್ಕಾರಿಕೆಯನ್ನು ನೋಡಿದರೆ ಎಂತಹವರಿಗೂ ಪಿಂಜಾರರ ಈ ಕಲೆಯ ಬಗ್ಗೆ ಪ್ರೀತಿ, ಮೆಚ್ಚುಗೆ ಹುಟ್ಟುತ್ತದೆ. ಜನ ಭಯ, ಕುತೂಹಲದಿಂದ ಹಿಂದು ಹಿಂದಕ್ಕೆ ಸರಿದು ಕತ್ತಿವರಸೆಯನ್ನು ನೋಡುತ್ತಾರೆ. ಈ ನಡುವೆ ಪಿಂಜಾರ ಹೆಂಗಸರಿಗೆ ವಿಪರೀತ ಕೆಲಸ. ಕಿಚುಡಿ, ಜೋಂಗಿ, ಶರಬತ್ತು ಮಾಂಸದ ಸಾರು, ಅನ್ನ ಹೀಗೆ ಹಲವಾರು ರೀತಿಯ ಅಡಿಗೆ ಮಾಡುತ್ತಲೇ ಮನೆಯ ಹತ್ತಿರ ಬಂದ ವೇಷಧಾರಿಗಳನ್ನು ಕಂಡು ಮಾತನಾಡಿಸಿ ಮನರಂಜನೆ ಪಡೆಯುತ್ತಾರೆ. ಧನಕರುಗಳಿದ್ದವರು ಅವುಗಳ ಬಗ್ಗೆ ನಿಗಾವಹಿಸುವುದು ಕಡಿಮೆ.

ಹುಡುಗಿಯರು ಕುಂಟಬಿಲ್ಲೆ ಆಡಲು ಗೆರೆ ಕೊರೆದುಕೊಳ್ಳುವಂತೆ, ಆದರೆ ಸ್ವಲ್ಪ ಉದ್ದನಾಗಿ, ದೊಡ್ಡದಾಗಿ ಗೆರೆ ಕೊರೆದು ಗೆರೆಯುದ್ದಕ್ಕೂ ನೀರು ಬಿಟ್ಟು ಬೂದಿ ಉದುರಿಸಲಾಗುತ್ತದೆ. ಗೆರೆಯ ಒಂದು ತುದಿಯಲ್ಲಿ ಬೇವಿನ ಸೊಪ್ಪು ಹಿಡಿದು ಝಳಪಿಸುತ್ತಾ ಋಷಿಭಂಗಿಯಲ್ಲಿ ಒಬ್ಬನು ಕುಳಿತಿರುತ್ತಾನೆ. ಗೆರೆಯ ಇನ್ನೊಂದು ತುದಿಯಿಂದ ಸೊಂಟಕ್ಕೆ ಹಣೆಗೆ ಬೇವಿನಸೊಪ್ಪು ಕಟ್ಟಿಕೊಂಡ ನಾಲ್ಕೈದು ಜನರು ಬಗ್ಗಿ ಋಷಿಭಂಗಿಯಲ್ಲಿ ಕುಳಿತವನ ಕಡೆ ಮೆಲ್ಲಗೆ ಬರುತ್ತಾರೆ. ಋಷಿ ಭಂಗಿಯ ಮನುಷ್ಯನ ಮುಂಭಾಗದಲ್ಲಿ ನಿಂಬೆಹಣ್ಣನ್ನು ಇಟ್ಟಿರುತ್ತಾರೆ. ಸೊಂಟಕ್ಕೆ ಸೊಪ್ಪು ಕಟ್ಟಿಕೊಂಡು, ತಲೆಯಲ್ಲೂ ಬೇವಿನಸೊಪ್ಪು ಸಿಕ್ಕಿಸಿಕೊಂಡೂ, ಕೈಯಲ್ಲೂ ಹಿಡಿದುಕೊಂಡು ಅವರು ಹತ್ತಿರ ಬರುತ್ತಿದ್ದಂತೆ ಋಷಿ ಹಿಡಿ ಬೂದಿಯನ್ನು ಅವರತ್ತ ಸೆಳೆದು ಹೂಂಕರಿಸುತ್ತಾನೆ. ತಕ್ಷಣ ಎದುರಿಗೆ ಬರುತ್ತಿದ್ದವರಲ್ಲಿ ಒಬ್ಬೊಬ್ಬರಾಗಿ ಹಿಂದೆ ಬೀಳುತ್ತಾರೆ. ಕೊನೆಗೊಬ್ಬ ಋಷಿಯ ಹೂಂಕಾರಕ್ಕೆ ಜಗ್ಗದೆ ಮಕಾಡೆ ಬಿದ್ದುಹೋಗಿ ಬಾಯಲ್ಲಿ ಆ ನಿಂಬೆಹಣ್ಣನ್ನು ಕಟ್ಟಿಕೊಳ್ಳುತ್ತಾನೆ. ಮಂಕುಬೂದಿಯ ಋಷಿ ಇಲಿಗೆ ಸೋತಂತೆ. ಪಿಂಜಾರರು ಅತ್ಯಂತ ನಿಷ್ಠೆಯಿಂದ ಇದನ್ನು ಮಾಡುತ್ತಾರಾದರೂ ಯಾಕೆ ಮಾಡುತ್ತೀರಿ? ಇದರ ಉದ್ದೇಶವೇನು? ಇತ್ಯಾದಿ ಪ್ರಶ್ನೆಗಳಿಗೆ ಅವರಲ್ಲಿ ಉತ್ತರವಿಲ್ಲ. ಸಿಗುವ ಒಂದೇ ಉತ್ತರ ’ಮೊದಲಿನಿಂದ ಮಾಡಿಕೊಂಡು ಬಂದಿದ್ದಾರೆ, ನಾವೂ ಮಾಡುತ್ತೀವಿ’ ಎನ್ನುವುದು. ಇದಕ್ಕೆ ಪಿಂಜಾರರು ಕಂಚಿಗೊಲ್ಲರ ಆಟ ಎನ್ನುತ್ತಾರೆ. ಇದರ ಉದ್ದೇಶ ಮನರಂಜನೆ ಮಾತ್ರವಾಗಿರದೆ ಋಷಿ ಅಥವಾ ಮಂಕುಬೂದಿಯವನ ಆಟವನ್ನು, ಶಕ್ತಿಯನ್ನು ಪರೀಕ್ಷಿಸುವ ಹಿನ್ನೆಲೆಯಲ್ಲಿ ಆತನ ಮಗಳನ್ನು ಮದುವೆಯಾಗುವ ಪಣದಿಂದ ಈ ಆಟ ಆಡುವುದಾಗಿ ತಿಳಿದು ಬರುತ್ತದೆ. ಆತನ ಮಗಳನ್ನು ಮದುವೆಯಾಗಲು ಹತ್ತಾರು ಜನರ ಸ್ಪರ್ಧೆಯಿದ್ದು ಅದರಲ್ಲಿ ಯಾವನು ಮಂತ್ರಿಸಿದ ನಿಂಬೆಹಣ್ಣನ್ನು ಬಾಯಲ್ಲಿ ಕಚ್ಚಿಕೊಳ್ಳುತ್ತಾನೋ ಅವನಿಗೆ ಮಗಳನ್ನು ಕೊಡುವುದಾಗಿ ಆತ ಈ ಆಟ ಹೂಡುತ್ತಾನೆ. ಇದನ್ನು ಒಂದು ನಂಬಿಕೆಯ ಹಿನ್ನೆಲೆಯಲ್ಲಿ ಚಾಚೂತಪ್ಪದೆ ಪಿಂಜಾರರು ಪ್ರತಿವರ್ಷ ಈ ಹಬ್ಬದಲ್ಲಿ ಆಡುತ್ತಾರೆ. ಈ ಆಟ ಪಿಂಜಾರರ ಸಾಂಸ್ಕೃತಿಕ ನೆಲೆಯನ್ನು ಅತ್ಯಂತ ಸೂಕ್ಷ್ಮವಾಗಿ ತೋರುವಂತಿದೆ.

ಇದನ್ನೆಲ್ಲ ನಿಬ್ಬೆರಗಾಗಿ ನೋಡುತ್ತಿದ್ದಂತೆಯೇ ಜನರು ಇದ್ದಕ್ಕಿದ್ದ ಹಾಗೆ ಇದೇ ಜನರಿಂದ ಕೂಡಿದ ಮತ್ತೊಂದು ಕಾರ್ಯಕ್ರಮವನ್ನು ನೋಡಲು ಕಾತರರಾಗುತ್ತಾರೆ. ಹತ್ತಿಪ್ಪತ್ತು ಜನರು ತಲೆಗೆ, ಸೊಂಟಕ್ಕೆ ಬೇವಿನಸೊಪ್ಪು ಕಟ್ಟಿಕೊಂಡು, ಕೈಯಲ್ಲಿ ಬೇವಿನಸೊಪ್ಪು ಹಿಡಿದು ಮೇಲೆತ್ತಿ ಆಡಿಸುತ್ತಾ ಭಜನೆ ಮಾಡುತ್ತಾ (ಇದು ಸಾಮಾನ್ಯವಾಗಿ ಶಿವಭಜನೆಯಾಗಿರುತ್ತದೆ) ಕೆಂಪನೆಯ ಶಾಲಿನಂತಹ ವಸ್ತ್ರಗಳನ್ನು ಮುಚ್ಚಿಕೊಂಡ ವ್ಯಕ್ತಿಯನ್ನು ಕರೆತರುತ್ತಾರೆ. ಈತ ಪ್ರತಿವರ್ಷ ’ಕಾರ್ನಿಕ’ ಹೇಳುವವನಾಗಿರುತ್ತಾನೆ. ಅಥವಾ ಹಾಗೆ ಹೇಳುತ್ತಾ ನಡೆದುಕೊಂಡುಬಂದ ಮನೆಯವನಾಗಿರುತ್ತಾನೆ. ಜನರಾಶಿಯ ನಡುವೆ ಈತ ಎಲ್ಲರಿಗೂ ಕಾಣುವಂತೆ ಏಣಿ ಹಾಕಿ ಅವನನ್ನು ಹತ್ತಿಸಿ ಏಣಿಯನ್ನು ಹಿಡಿದುಕೊಳ್ಳುತ್ತಾರೆ. ಆತ ತನ್ನ ತೆರೆ ತೆರೆದು ದಕ್ಷಿಣಾ – ಭಿಮುಖನಾಗಿ ನಿಂತು ಸ್ವಲ್ಪ ಹೊತ್ತು ಕಣ್ಣುಮುಚ್ಚಿ ಆಲೋಚಿಸಿದವನಂತೆ ಮಾಡಿ ಕಣ್ಣು ತೆರೆದು ಕೈಯಲ್ಲಿದ್ದ ಚಂಬಿನಿಂದ (ಆತನನ್ನು ಕರೆತರುವಾಗಲೇ ಹತ್ತಿರದ ಬಾವಿಗೆ ಹೋಗಿ ಒಂದು ಚಂಬು ನೀರನ್ನು ಆತನ ಕೈಗೆ ಕೊಟ್ಟಿರುತ್ತಾರೆ) ನೀರನ್ನು ಕೆಳಕ್ಕೆ ಚಿಮುಕಿಸುತ್ತಾನೆ – ಅಥವಾ ಬುಡುಬುಡು ಹುಯ್ಯುತ್ತಾನೆ. ನೀರನ್ನು ಚಿಮುಕಿಸಿದರೆ ಈ ಬಾರಿ ಮಳೆ ಕಡಿಮೆ, ಬುಡುಬುಡು ಹುಯ್ದರೆ ಮಳೆ ಜಾಸ್ತಿ ಎಂದು ಜನ ಭಾವಿಸುತ್ತಾರೆ. ಕೆಲವು ಸಲ ಆತ ಎರಡು ಪ್ರಾಸದ ಮಾತುಗಳನ್ನು ಆಡುತ್ತಾನೆ. ನೀರನ್ನು ಚಿಮುಕಿಸಿದಾಗ ಈ ವರ್ಷದ ಮಳೆಗಾಲ ಚೆನ್ನಾಗಿ ನಡೆಸುವುದಿಲ್ಲ ಎಂದು ಜನರೇ ತಿಳಿದುಕೊಳ್ಳುತ್ತಾರೆ ತಕ್ಷಣ ಆತ ಅದಕ್ಕೆ ಅನುಗುಣವಾಗಿ ’ಸರ್ಕಾರಕ್ಕೆ ಕುತ್ತು, ರೈತರಿಗೆ ಆಪತ್ತು’ ಎನ್ನುತ್ತಾನೆ. ಈ ಮಾತುಗಳು ಒಟ್ಟಾರೆ ಒಂದು ವರ್ಷದಲ್ಲಿ ಜನ ಎದುರುನೋಡಬಹುದಾದ ಭವಿಷ್ಯವನ್ನೇ ಹೇಳುವಂತಿರುತ್ತವೆ. ಮುಖ್ಯವಾಗಿ ಆ ವರ್ಷದಲ್ಲಿ ಆಗಬಹುದಾದ ಮಳೆ-ಬೆಳೆಯನ್ನು, ಜನಕ್ಕೆ ಒದಗಬಹುದಾದ ಆಪತ್ತು-ವಿಪತ್ತುಗಳನ್ನು ಅವನ ಮಾತುಗಳು ಸೂಚಿಸುತ್ತವೆ. ಭವಿಷ್ಯದ ಕುರಿತಾಗಿ ಪಿಂಜಾರರಲ್ಲಿರುವ ನಂಬಿಕೆಯ ನೆಲೆಯನ್ನು ಈ ಸಂಪ್ರದಾಯ ಹೇಳುತ್ತದೆ. ಈ ಕರ್ನಿಕ ಹೇಳುವವನ ಆಗಿನ ಮಾತುಗಳು ನಿಜವಾಗುತ್ತ-ವೆಂದು ಪಿಂಜಾರರು ನಂಬುತ್ತಾರೆ. ಆದರೆ ಹಾಗೆ ನಿಜವಾಗದೇ ಅವನು ಹೇಳಿದುದಕ್ಕಿಂತ ತದ್ವಿರುದ್ಧವಾದ ದಿನಮಾನಗಳನ್ನು ಕಂಡ ಉದಾಹರಣೆಗಳನ್ನು ಪಿಂಜಾರರೇ ಹೇಳುತ್ತಾರೆ. ಒಟ್ಟಿನಲ್ಲಿ ಒಂದು ಊರಿನ ಎಲ್ಲ ಜನಾಂಗದವರೂ ಆಸಕ್ತಿಯಿಂದ ಬಂದು ಭಾಗವಹಿಸಿ ನೋಡಿ, ಕೇಳಿ ಆನಂದಿಸುವಂತಹ ಈ ಆಚರಣೆ ಪಿಂಜಾರರ ಸಾಂಸ್ಕೃತಿಕ, ಸಾಮಾಜಿಕ ಬದುಕಿನ ಹಲವು ಬಗೆಗಿನ ವಿವರಗಳನ್ನು ಕೊಡುತ್ತದೆ. ಹೆಚ್ಚು ಕಡಿಮೆ ಜೋತಿಷ್ಯವನ್ನು ಕೇಳುವಂತೆಯೇ ಅವತ್ತು ಜನರೆಲ್ಲ ಕಾರ್ನಿಕವನ್ನು ನಿಶ್ಯಬ್ದವಾಗಿದ್ದು  ಕೇಳುತ್ತಾರೆ. ಒಂದು ಜನಾಂಗ ಅದೃಷ್ಟವನ್ನು ನಂಬುವುದರ ಮೂಲಕ ಮುಂದಾಗುವುದನ್ನು ತಿಳಿಯುವ ಕುತೂಹಲವನ್ನು, ಇಡೀ ಸಮಾಜದ ಆಶಾವಾದವನ್ನು ಈ ಆಚರಣೆ ವ್ಯಕ್ತಪಡಿಸುತ್ತದೆ. ಜೊತೆಗೆ ಹಿಂದೆ ವಿವರಿಸಿರುವ ’ನಂಬಿಕೆ’ಯ ಅವಲಂಬನೆಯಲ್ಲಿ ಬದುಕುತ್ತಿರುವ ಜನಾಂಗ ’ಅರಿವಿನ’ ನೆಲೆಯಲ್ಲಿ ಬದುಕನ್ನು ರೂಪಿಸಿಕೊಳ್ಳುವುದಕ್ಕೆ ಬೇಕಾಗಿರುವ ಆರ್ಥಿಕ ಮತ್ತು ಶೈಕ್ಷಣಿಕ ಸವಲತ್ತುಗಳು ಇಲ್ಲದಿರುವುದೇ ಒಂದು ಸಂಸ್ಕೃತಿ ಅದರ ಎಲ್ಲ ಮೂಲ ಲಕ್ಷಣಗಳಲ್ಲಿ ಜೀವಂತವಾಗಿರುವುದಕ್ಕೆ ಕಾರಣವಾಗಿರುವಂತಿದೆ.

ಹಾಗೆ ಅವನು ಕಾರ್ನಿಕ ಹೇಳಿದ ತಕ್ಷಣ ಏಣಿಯಿಂದ ಕೆಳಕ್ಕೆ ಬೀಳುತ್ತಾನೆ. ಕೆಳಗಿದ್ದವರು ಅವನನ್ನು ಹಿಡಿದುಕೊಳ್ಳುತ್ತಾರೆ. ಈ ದಿನವನ್ನು ಪಿಂಜಾರರು ದೇವರನ್ನು ಮೈತೊಳೆಯುವ ದಿನ ಅಥವಾ ದೇವರು ಸಾಯುವ ದಿನ’ ಎಂದು ಕರೆಯುತ್ತಾರೆ. ಕಾರ್ನಿಕ ಮುಗಿದ ತಕ್ಷಣ ದೇವರನ್ನು ಪ್ರತಿವರ್ಷದಂತೆ ನಿಗದಿಯಾದ ಒಂದು ಬಾವಿಯ ಹತ್ತಿರಕ್ಕೆ ಹೊತ್ತುಕೊಂಡು ಹೋಗುತ್ತಾರೆ. ಕಾರ್ನಿಕ ಕೇಳಿ ಮನೆಗೆ ಬಂದವರೇ ಜನ ಮನೆಗೊಬ್ಬರಂತೆ ಚೋಂಗಿ, ಬುತ್ತಿ, ಚಿಕ್ಕದೊಂದು ಗಿಂಡಿ ಅತವಾ ಚಂಬನ್ನು ತಟ್ಟೆಯಲ್ಲಿಟ್ಟುಕೊಂಡು ದಸ್ತರಖಾನಿ ಮುಚ್ಚಿಕೊಂಡು ದೇವರನ್ನು ಒಯ್ದ ಬಾವಿಯ ಹತ್ತಿರ ಹೋಗುತ್ತಾರೆ. ಅಲ್ಲಿ ದೇವರನ್ನು ಇಳಿಸಿ, ಬಾವಿಯಿಂದ ದೊಡ್ಡದೊಂದು ಕೊಡಪಾನದಲ್ಲಿ ನೀರನ್ನೆಳೆದುಕೊಂದು ದೃವರ ಮುಂದಿಟ್ಟು ಮುಲ್ಲಾ ಕುಳಿತಿರುತ್ತಾನೆ. ಎಲ್ಲರೂ ತೆಗೆದುಕೊಂಡು ಹೋದ ಚೋಂಗಿ (ಪಿಂಜಾರರು ಈ ಹಬ್ಬದಲ್ಲಿ ವಿಶೇಷವಾಗಿ ಮಾಡುವ ಆಹಾರ, ಗೋಧಿ ಹಿಟ್ಟು ಕಲಸಿ ಚಿತ್ರವಿರುವ ಕಲ್ಲಿನ ಮೇಲೆ ಅಂಗೈಯಗಲದಷ್ಟು ಎಲೆಯನ್ನು ಉದ್ದುತ್ತಾರೆ. ಆ ಎಲೆಗಳನ್ನು ಹಂಚಿನಲ್ಲಿಟ್ಟು ಚಪಾತಿಯಂತೆ ಬೇಯಿಸಿ ಎಲೆಯ  ಮೇಲೆ ತುರಿದ ಒಣಕೊಬರಿ, ಸಕ್ಕರೆ ಅಥವಾ ಪುಡಿ ಮಾಡಿದ ಬೆಲ್ಲ ಮತ್ತು ಕಸಕಸೆಯನ್ನು ಉದುರಿಸುತ್ತಾರೆ. ಉದುರಿಸಿದ ನಂತರ ಒಂದ ಮೇಲೊಂದರಂತೆ ಇಟ್ಟು ತಿನ್ನಲು ಕೊಡುತ್ತಾರೆ) ಬುತ್ತಿಯ ತಟ್ಟೆಯನ್ನು ದಸ್ತರಖಾನಿ ತೆಗೆದು ತಾಬೂತಿನ ಮೇಲಿಡುತ್ತಾರೆ. ಮುಲ್ಲಾ ಎಲ್ಲರ ಎಡೆಗಳನ್ನು ಒಂದೆ ಸಲಕ್ಕೆ “ಓದಿಕೆ” ಮುಗಿಸುತ್ತಾನೆ. ನಂತರ ಜನ ತಾವು ತಂದಿದ್ದ ಗಿಂಡಿಯಲ್ಲಿ ನೀರು ತೆಗೆದುಕೊಳ್ಳಲು ನೂಕು ನುಗ್ಗಲು ಮಾಡುತ್ತಾರೆ. ಮುಲ್ಲಾ ತನ್ನ ಬಳಿಯಿಟ್ಟಿದ್ದ ತುಂಬಿದ ಕೊಡಪಾನದಿಂದ ಎಲ್ಲರಿಗೂ ನೀರು ಕೊಡುತ್ತಾನೆ. ಈ ನೀರು ಸಾಲದು ಬಂದರೆ ಮತ್ತೆ ಬಾವಿಯಿಂದ ಎಳೆದುಕೊಳ್ಳಲಾಗುತ್ತದೆ. ಈ ಕೆಲಸವನ್ನು ಮುಲ್ಲಾನೇ ಮಾಡುತ್ತಾನೆ. ನೀರು ಪಡೆದ ಜನ ತಾವು ತಂದಿದ್ದ ಚೋಂಗಿ ಬುತ್ತಿಯಲ್ಲಿ ಮುಲ್ಲಾನಿಗೂ ಕೊಟ್ಟು, ಬಂದಿದ್ದ ಜನರಿಗೆಲ್ಲ ಹಂಚಿ ತಾವು ತಿಂದು ನೀರನ್ನು ಮಾತ್ರ ಜೋಪಾನವಾಗಿ ಮನೆಗೆ ತರುತ್ತಾರೆ. ಆ ನೀರನ್ನು ಮನೆಯಲ್ಲಿರುವ ಎಲ್ಲರಿಗೂ ಹಂಚಿ ಕುಡಿಸಲಾಗುತ್ತದೆ. ದೇವರ ಮೈತೊಳೆದ ನೀರು ಪವಿತ್ರವಾದ್ದರಿಂದ ಕುಡಿಯಬೇಕು ಎನ್ನುವುದು ಅವರ ನಂಬಿಕೆ. ನಂತರ ಎಲ್ಲರೂ ಚೋಂಗಿ, ಬುತ್ತಿಮಾಂಸ, ಸಾರು ಊಟ ಮಾಡಿ ಎಲೆ ಅಡಿಕೆ ಹಾಕಿಕೊಂದು ನಿಧಾನಕ್ಕೆ ಊರು ಬಾಕಲಿನಲ್ಲಿ ಅಂದರೆ ಮಸೂತಿಯ ಹತ್ತಿರ ಸೇರತೊಡಗುತ್ತಾರೆ. ಈ ರಾತ್ರಿ ಪರವೂರಿನಿಂದ ಕರೆಸಿದ ಸವಾಲು ಪದ ಹೇಳುವವರು ಮತ್ತು ಆಯಾ ಊರಲ್ಲಿ ಕೂಡ ಹೇಳಬಲ್ಲವಂತಹವರಿಂದ ಪದ ಹೇಳಿಸಲಾಗುತ್ತದೆ. ಇದು ಮೊದಲೇ ವಿವರಿಸಿದ ಹಾಗೆ ತೋಡಿಹಾಕಿ ತೋಡಿ ಬಿಡಿಸುವ ಪದಗಳ ಗಾಯನ, ಮುಖ್ಯವಾಗಿ ಧಾರ್ಮಿಕ ಶರಣರನ್ನು, ಧಾರ್ಮಿಕ ಬದುಕನ್ನು, ಆಧ್ಯಾತ್ಮವನ್ನು ಕುರಿತಂತೆ, ಪುರಾಣ ಪುಣ್ಯಕತೆಗಳನ್ನು ಹೇಳಿಸುವಂತೆಯೇ ಇಡೀ ರಾತ್ರಿ ಈ ಸಮಾರಂಭ ನಡೆಯುತ್ತದೆ. ದೇವರು ಸತ್ತಿದ್ದಾನೆ. (ದೇವರನ್ನು ಮಸೂತಿಯ ಹೊರಗಿಟ್ಟು ಅದರ ಪಕ್ಕದಲ್ಲೇ ಈ ಕಾರ್ಯಕ್ರಮ ನಡೆಯುತ್ತದೆ) ದೇವರ ಪವಿತ್ರ ಸ್ನಾನವನ್ನು ಆತನ ನೆನಪು, ಕೀರ್ತಿ, ಭಜನೆಗಳ ಮೂಲಕ  ಆಚರಿಸುವುದು ವಿಶೇಷವಾಗಿದೆ. ಪಿಂಜಾರರು ಈ ಹಬ್ಬವನ್ನು ಅತ್ಯಂತ ಖುಷಿಯಿಂದ ಆಚರಿಸುತ್ತಿರುವುದು ಅವರ ಸಾಂಸ್ಕೃತಿಕ ವೈಶಿಷ್ಟ್ಯವನ್ನು ತೋರುತ್ತದೆ. ಮೂರ್ತರೂಪದ ದೇವರನ್ನು ಇಟ್ಟುಕೊಂಡೇ ಪಿಂಜಾರರು ಈ ಹಬ್ಬವನ್ನು ಆಚರಿಸುತ್ತಾರೆ. ಮುಸ್ಲಿಮರು ಪಿಂಜಾರರನ್ನು ಇಷ್ಟಪಡದಿರುವುದಕ್ಕೆ ಇದೂ ಒಂದು ಕಾರಣ=ವಾಗಿರುವಂತಿದೆ. ಇಲ್ಲಿಂದ ಒಂದು ತಿಂಗಳ ಕಾಲವನ್ನು ಪಿಂಜಾರರು ’ಕೆಟ್ಟ ತಿಂಗಳು’ ಅಥವಾ ’ಸಫರ‍್’ ಎಂದು ಕರೆಯುತ್ತಾರೆ. ಈ ತಿಂಗಳಿನಲ್ಲಿ ಮದುವೆ ಮುಂತಾದ ಶುಭಕಾರ್ಯಗಳನ್ನು ಅವರು ಮಾಡುವುದಿಲ್ಲ.

ಮೊಹರಂ ಹಬ್ಬವನ್ನು ಮುಸ್ಲಿಮರು – ಹಿಂದೂಗಳು ಒಟ್ಟಾಗಿ ಆಚರಿಸುವ ಇಂಥ ನೂರಾರು ಉದಾಹರಣೆಗಳು ಕರ್ನಾಟಕದಲ್ಲಿ ಸಿಗುತ್ತವೆ. ಮಾಧ್ಯಮಗಳು ಪಿಂಜಾರರನ್ನು ಮುಸ್ಲಿಮರೆಂದೇ ಪ್ರಚಾರ ಮಾಡುವುದರಿಂದ ಪಿಂಜಾರರು ಹಾಗೂ ಹಿಂದೂಗಳ ನಡುವಿನ ಸಾಮಾಜಿಕ ಸಂಬಂಧಗಳ ಬಗ್ಗೆ ಜನರಿಗೆ ತಿಳಿಯುವುದಿಲ್ಲ. ಆದರೆ ಮೊಹರಂ ಹಬ್ಬವನ್ನು ಪಿಂಜಾರರು ಮುಸ್ಲಿಮರೂ ಇಲ್ಲದ ಊರುಗಳಲ್ಲಿಯೂ ಬರೀ ಹಿಂದೂ ಬಾಂಧವರೇ ಸೇರಿಕೊಂಡು ಆಚರಿಸುವ ಉದಾಹರಣೆಗಳು ಸಿಗುತ್ತವೆ. ಧಾರ್ಮಿಕ ಮೂಲಭೂತವಾದಿಗಳಿಗೆ ಸಿಟ್ಟು ತರಿಸಬಹುದಾದ ಇಂಥ ನಿದರ್ಶನಗಳು ಉದಾರವಾದಿಗಳಿಗೆ ಹರ್ಷವುಂಟು ಮಾಡುತ್ತವೆ. ಅಂತಹದೊಂದು ಉದಾಹರಣೆ ಇಲ್ಲಿದೆ. ’ಗದಗ ಶಹರದಿಂದ ೧೫ ಕಿ.ಮೀ. ದೂರದಲ್ಲಿರುವ ಶ್ಯಾಗೋಟಿ ೨೫೦೦ ಜನಸಂಖ್ಯೆಯುಳ್ಳ ಗ್ರಾಮ. ಇರುವ ೪೦೦ ಮನೆಗಳಲ್ಲಿ ಒಂದೇ ಒಂದು ಮನೆಯಾಗಲಿ, ಒಬ್ಬ ಗ್ರಾಮಸ್ಥನಾಗಲಿ ಮುಸ್ಲಿಮನಲ್ಲ. ಆದರೂ ಈ ಗ್ರಾಮದಲ್ಲಿ ಮಸೀದಿ ಇದೆ. ಪ್ರತಿ ವರ್ಷವೂ ಇಲ್ಲಿನ ’ಮೊಹರಂ’ ಹಬ್ಬವನ್ನು ಅತ್ಯಂತ ಭರ್ಜರಿಯಾಗಿ ಆಚರಿಸಲಾಗುತ್ತದೆ.

ಊರೊಳಗೆ ಎಲ್ಲ ಹಿಮದೂ ಹಬ್ಬಗಳ ಆಚರಣೆಯಂತೆ ಈ ಹಬ್ಬಕ್ಕೂ ಪಟ್ಟಿ ಹಾಕಿ (ಹಣ ಸಂಗ್ರಹಿಸಿ) ಮಸೀದಿಗೆ ಸುಣ್ಣಬಣ್ಣ ಬಳಿಯುವವರಿಂದ ಹಿಡಿದು ಒಂದು ತಿಂಗಳ ಪೂರ್ವದಿಂದ ಮೊಹರಂ ಹಬ್ಬದ ತಯಾರಿ ನಡೆಯುತ್ತದೆ. ಮೊಹರಂ ಹಬ್ಬದ ಎಲ್ಲ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ನೆರೆಯ ಚಿಕ್ಕಹಂದಿ ಗೋಳದ ’ಮುಕ್ತುಂಸಾಬ್’ ಎಂಬ ಮುಲ್ಲಾ ಬರುತ್ತಾರೆ. ೩ ಕ್ವಿಂಟಾಲ್‌ಗೂ ಅಧಿಕ ಭಾರದ ಕಟ್ಟಿಗೆಯ ಡೋಲಿಯನ್ನು ಸಿಂಗರಿಸಿ ಇದರಲ್ಲಿ ದೇವರನ್ನು ಕೂಡಿಸುತ್ತಾರೆ. ಈ ಡೋಲಿಯನ್ನು ೮ ಜನ ಆದಿಬಣಜಿಗ ಜನಾಂಗ – ದವರು ಊರು ಗೋಲಿನ ಸಹಾಯದಿಂದ ಹೊರುತ್ತಾರೆ.

ಪತ್ತಾ (ದೀವಟಿಗೆಯಂತಹ ವಸ್ತು) ಮತ್ತು ಉದ್ದನ್ (ಧೂಪ ಹಾಕುವ ವಸ್ತು) ಅನ್ನು ವಾಲ್ಮೀಕಿ ಜನಾಂಗದವರು ಹಿಡಿಯುತ್ತಾರೆ. ಇನ್ನು ಏಳೆಂಟು ಕೈಗಳ ದೇವರುಗಳಿದ್ದು ಇವುಗಳನ್ನು ವಾಲ್ಮೀಕಿ ಹಾಗೂ ಕುರುಬ ಜನಾಂಗದವರು ಹಿಡಿದುಕೊಳ್ಳುತ್ತಾರೆ. ದೇವರು ಮಸೀದಿಯಿಂದ ಹೊರಟ ತಕ್ಷಣ ಅಕ್ಕ-ಪಕ್ಕದ ಮನೆಯವರೆಲ್ಲರೂ ದೇವರ ಮುಂದೆ ಕೊಡಗಳಿಂದ ನೀರು ಹಾಕಿ ಡೋಲಿ ಹೊತ್ತವರನ್ನು ಮತ್ತು ಕೈ ದೇವರು ಹಿಡಿದವರನ್ನು ಪಾದಮುಟ್ಟಿ ನಮಸ್ಕರಿಸುತ್ತಾರೆ. ಅನೇಕ ಭಕ್ತಾದಿಗಳು ದೇವರು ಹೊತ್ತವರ ಕೊರಳಲ್ಲಿರುವ ಜೋಳುಗೆಯಲ್ಲಿ ಕೊಬ್ಬರಿ, ಉತ್ತತ್ತಿ, ಕಲ್ಲುಸಕ್ಕರೆ, ಬೆಲ್ಲ, ಪುಟಾಣಿ, ಬೇಳೆ ಮುಂತಾದವುಗಳನ್ನು ಹಾಕಿ ನಮಸ್ಕರಿಸುತ್ತಾರೆ.

ಮೊಹರಂ ಹಬ್ಬದ ಮೊದಲ ದಿನ ಬೆಳಗಿನ ಜಾವ ಮಸೀದಿಯ ಮುಂದೆ ತೋಡಿದ ಗುಂಡಿಯಲ್ಲಿ ಅಗ್ನಿಕುಂಡದಲ್ಲಿ ದೇವರುಗಳನ್ನು ಹೊತ್ತವರು ಹಾಗೂ ಧಾರ್ಮಿಕ ಮನೋಭಾವನೆಯಿಂದ ಹರಕೆ ಹೊತ್ತವರು ಹಾಯ್ದುಹೋಗುತ್ತಾರೆ. ಸಂದಲ ರಾತ್ರಿಯ ದಿನ (ಕತ್ತಲ ರಾತ್ರಿ) ಅಂದರೆ ನಾಲ್ಕನೇ ದಿನ ಗ್ರಾಮದ ಬಹುತೇಕ ಜನ ಸಕ್ರಿ ಓದಿಸೋದು (ಓದಿಕೆ), ಫಕೀರರಾಗುವುದು ಹಣ್ಣು, ಹೂ, ಧೂಪಗಳ ಓದಿಕೆ ’ಚೊಂಗೆ’ ಹಾಗೂ ’ಮದಾಲಿ’ಯ ಸಿಹಿ ತಿನಿಸುಗಳ ನೈವೇದ್ಯ ನಡೆಯುತ್ತದೆ. ಈ ಎಲ್ಲ ಧಾರ್ಮಿಕ ವಿಧಿವಿಧಾನಗಳಲ್ಲಿ ಗ್ರಾಮದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರನ್ನೊಳಗೊಂಡು ಎಲ್ಲರೂ ಪಾಲ್ಗೊಂಡಿರುತ್ತಾರೆ.

ಮೊಹರಂ ಹಬ್ಬದ ೫ ದಿನಗಳ ಕಾಲ ಊರಿನಲ್ಲಿ ಸಂಪೂರ್ಣ ಹಬ್ಬದ ವಾತಾವರಣ ನಿರ್ಮಾಣಗೊಂಡಿರುತ್ತದೆ. ಈ ದಿನಗಳಲ್ಲಿ ಹೆಜ್ಜೆಯ ಮಜಲು, ಡೊಳ್ಳು ಕುಣಿತ ಸವಾಲ್- ಜವಾಬ್ ಪದಗಳೊಂದಿಗೆ ವೈಶಿಷ್ಟ್ಯಪೂರ್ಣ ಆಲವಿ ಹೆಜ್ಜೆಯನ್ನು ೩೦ ರಿಂದ ೪೦ ಜನರು ತಂಡ ತಂಡವಾಗಿ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿರುತ್ತಾರೆ. ಇದರಲ್ಲಿ ಯುವಕರೇ ಹೆಚ್ಚು. ಹೀಗೆ ವಿಶೇಷಗಳು ನಡೆಯುತ್ತವೆ. ಅತ್ಯುತ್ತಮ ಹೆಜ್ಜೆಗಾರನಿಗೆ ಹೂಮಾಲೆ ಹಾಕು ಖುಷಿ ಮಾಡುವರು. ನೋಟುಗಳನ್ನು ಪಿನ್‌ಹಾಕಿ ಮಾಲೆಗೆ ಸೇರಿಸುವುದು. ಚುರುಮರಿ (ಮಂಡಕ್ಕಿ)ಯನ್ನು ತೂರುತ್ತಾರೆ. ಹೆಜ್ಜೆ ಹಾಕುವುದಕ್ಕೆ ಮತ್ತಷ್ಟು ಹುರಿದುಂಬಿಸುತ್ತಾರೆ.

ಕೊನೆಯ ದಿನ ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆಯಲ್ಲಿ ದೇವರು ಹೊಳೆಗೆ ಹೋಗುವುದು. ಅಂದರೆ ಪೈಗಂಬರರ ಮಕ್ಕಳಾದ ಹುಸೇನಿ – ಹುಸೇನಬಿಯರ ಬಲಿದಾನದ ಶೋಕಾಚರಣೆಯ ಸಂಕೇತವಾಗಿ ನೀಲಪ್ಪ ಗೌಡರ ತೋಟದ ಬಾವಿಯಲ್ಲಿ ಎಲ್ಲ ದೇವರನ್ನು ತೊಳೆದುಕೊಂಡು ಬರುವ ಮೂಲಕ ಮೊಹರಂ ಹಬ್ಬಕ್ಕೆ ಮಂಗಲ ಹಾಡಲಾಗುತ್ತದೆ.

ಲಿಂಗಾಯತರು ಮತ್ತು ವಾಲ್ಮೀಕಿ ಜನಾಂಗದವರೆ ಅಧಿಕ ಸಂಖ್ಯೆಯಲ್ಲಿರುವ ಈ ಗ್ರಮದಲ್ಲಿ ಯಾವುದೇ ತಂಟೆ ತಕರಾರುಗಳಿಲ್ಲದ ಶಾಂತಿಯುತವಾಗಿ ಮೊಹರಂ ಹಬ್ಬದ ಆಚರಣೆಯಾಗುತ್ತದೆ. ಮುಸ್ಲಿಮರಿಲ್ಲದೆ ಮೊಹರಂ ಆಚರಣೆ ಅತ್ಯಂತ ಸಂಭ್ರಮ ಸಡಗರದಿಂದ ನಡೆಯುತ್ತದೆ. ಪರಧರ್ಮ ಸಹಿಷ್ಣುತೆ, ಪರಧರ್ಮವನ್ನು, ಪ್ರೀತಿಸುವ, ಪೂಜಿಸುವ, ಸುಮಧುರ ಮನೋಭಾವ ಭಕ್ತಿಗೆ ಹಿಡಿದ ಕನ್ನಡಿ ಈ ಶ್ಯಾಗೋಟಿಯ ಮೊಹರಂ. (ದಿ. ೨೬-೦೨-೨೦೦೪ರ ಪ್ರಜಾವಾಣಿ, ಕರ್ನಾಟಕ ದರ್ಶನ, ಪುಟ-೨, ಲೇಖನ : ಎಂ. ಮಂಜುನಾಥ ಬಮ್ಮನಕಟ್ಟಿ).

ಮೊಹರಂ ಹಬ್ಬದ ಆಚರಣೆಗಳಲ್ಲಿ ಊರಿಂದೂರಿಗೆ ಸ್ಥಳೀಯ ಜನಸಮುದಾಯದ ನಂಬಿಕೆ ಗಳಿಗನುಸಾರವಾಗಿ ಸಣ್ಣಪುಟ್ಟ ವ್ಯತ್ಯಾಸ ಕಂಡುಬರುತ್ತದೆ. ಆದರೆ ಪ್ರಧಾನವಾಗಿ ಆಚರಣೆಯಲ್ಲಿರುವ ವಿವರಗಳನ್ನು ಇಲ್ಲಿ ದಾಖಲು ಮಾಡಲಾಗಿದೆ. ಈ ಹಬ್ಬದ ಆಚರಣೆಗಳಲ್ಲಿ ಮುಖ್ಯವಾಗಿ ಗಮನಿಸಬೇಕಾದುದೆಂದರೆ ಹಿಂದೂ-ಮುಸ್ಲಿಂ ಸಮುದಾಯಗಳ ಕುತೂಹಲಕರ ಸಹಭಾಗಿತ್ವ. ಇದನ್ನು ಭರತದಾದ್ಯಂತ ಗಮನಿಸಬಹುದಾಗಿದೆ. ಹಿಂದೂ-ಮುಸ್ಲಿಮ್ ಸಮುದಾಯಗಳ ನಡುವೆ ಧಾರ್ಮಿಕ ಭಿನ್ನಾಭಿಪ್ರಯಗಳಿದ್ದಾಗ್ಯೂ ಈ ಎರಡು ಸಮುದಾಯಗಳ ಸಾಮಾಜಿಕ ಜೀವನಕ್ರಮದಲ್ಲಿ ವ್ಯಾವಹಾರಕ ಸಹಭಾಗಿತ್ವದಿಂದ ಉಂಟಾಗು ಆತಂಕದ ಹಿನ್ನೆಲೆಯಲ್ಲಿ ಗಮನಿಸಿದರೆ ಧರ್ಮಾಚರಣೆಗಳ ಸಂದರ್ಭದ ಉದ್ರೇಕ ತೀವ್ರತರದ್ದಾಗಿದೆ. ಭಾರತದಂತಹ ಸಾಮಾಜಿಕ ಪರಿಸರದಲ್ಲಿ ಇಸ್ಲಾಂ ಹಿನ್ನೆಲೆಯ ಆಚರಣೆಗಳನ್ನು ಸದಾ ಅನುಮಾನದಲ್ಲಿ, ಇಲ್ಲಿನ ನಂಬಿಕೆಗಳಿಗೆ ವಿರುದ್ಧವಾದುದು ಎಂಬಂತಹ ನೆಲೆಯಲ್ಲಿ ನೋಡಲಾಗುತ್ತಿರುವುದು ಸುಳ್ಳೇನಲ್ಲ. ಈ ಕಾರಣದಿಂದ ಉಂಟಾಗುವ ಧಾರ್ಮಿಕ- ಸಾಮಾಜಿಕ ಸಂಘರ್ಷ ರಾಜಕೀಯವಾಗಿಯೂ ಈ ಎರಡು ಸಮುದಾಯಗಳನ್ನು ಬೇರ್ಪಡಿಸುವ ನಿಟ್ಟಿನಲ್ಲಿ ಕೆಲಸಮಾಡುತ್ತದೆ. ಆದ್ದರಿಂದಲೇ ಪ್ರಗತಿಪರ ವಿಚಾರಗಳ ನೆಲೆಗಟ್ಟು ಈ ಜನವರ್ಗಗಳ ಯಾವುದೇ ಬಗೆಯ ಸಂಯೋಗವನ್ನು ಹಾರ್ದಿಕವಾಗಿ ಸ್ವಾಗತಿಸುತ್ತದೆ. ಇವರ ನಡುವಿನ ಯಾವುದೇ ಆಚರಣೆ ಮತ್ತು ಸಂಬಂಧಗಳಿಗೆ ಹೆಚ್ಚು ಪ್ರಚಾರ ಕೊಡುತ್ತ ಇವುಗಳ ಮಾದರಿ ನಡವಳಿಕೆಯನ್ನು ಸೆಕ್ಯುಲರ‍್ ಎಂದು ತೀರ್ಮಾನಿಸುತ್ತದೆ. ಮೊಹರಂ ಹಬ್ಬದ ಸಂದರ್ಭದಲ್ಲಿ ಈ ಸಮುದಾಯಗಳು ತೋರುವ ಭಾವನಾತ್ಮಕ ಸಮ್ಮಿಲನವನ್ನು ಆಚರಣೆಗಳ ಹೊರರೂಪದಲ್ಲಿ ಗ್ರಹಿಸುವ ನೆಲೆಯಿದು. ಇಸ್ಲಾಂ ಧರ್ಮ ಆಳರಸರ ಮೂಲಕ ಭಾರತಕ್ಕೆ ಬಂದದ್ದು ಎಂಬ ತಪ್ಪು ಗ್ರಹಿಕೆಯಿಂದಾಗಿ ಹಿಂದೂ ಸಮುದಾಯ ಇಡೀ ಇಸ್ಲಾಂ ಧರ್ಮಾನುಯಾಯಿಗಳನ್ನು ಸಂಶಯಿಸುವಂತಾದುದರ ಹಿನ್ನೆಲೆಯಲ್ಲಿ ಸೆಕ್ಯುಲರಿಸಂನ್ನು ನೋಡಬೇಕಿದೆ. ಸೂಫಿಗಳ ಮೂಲಕ ಇಸ್ಲಾಂ ಭಾರತಕ್ಕೆ ಬಂದದ್ದು ಮತ್ತು ಮುಸ್ಲಿಂ ಆಳರಸರು ತಮ್ಮ ರಾಜಕೀಯ ಕಾರಣಗಳಿಗಾಗಿ ಈ ಸಂದರ್ಭವನ್ನು ಬಳಸಿಕೊಂಡದ್ದು ಭಾರತೀಯ ಇತಿಹಾಸ ರಚನಾಕಾರರ ದೃಷ್ಟಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿಬಿಟ್ಟಿತು. ಹೀಗಾಗಿಯೇ ಸೂಫಿಗಳು ಮತ್ತು ಭಾರತೀಯ ಅನುಭಾವಿಗಳ ಒಡನಾಟದಿಂದ ಸಾಮರಸ್ಯದ ಬದುಕನ್ನು ಅದರ ಒಳರಚನಾಕ್ರಮದಲ್ಲಿ ಗ್ರಹಿಸಿದೆ ಕೇವಲ ಹೊರರೂಪಗಳ ನೆಲೆಯಲ್ಲಿ ಗ್ರಹಿಸುವ ರೀತಿ ಬೆಳೆದು ಬಂದಿತು. ’ಭಾರತದ ರಾಜಕಾರಣದಲ್ಲಿ ಕೋಮುವಾದ ಬೆಳೆಯುತ್ತಿದ್ದಂತೆ, ಪತ್ರಿಕೋದ್ಯಮದಲ್ಲಿರುವ ಪ್ರಗತಿಪರ ಸೆಕ್ಯುಲರ‍್ ದನಿಗಳು ಕ್ರಿಯಾಶೀಲಗೊಂಡವು. ಅವು ಕೋಮು ಸಾಮರಸ್ಯದ ನಿದರ್ಶನಗಳನ್ನು ನಿಧಿ ಹುಡುಕುವಂತೆ ಹುಡುಕುತ್ತ ವರದಿ ಮಾಡತೊಡಗಿದವು. ’ಹಿಂದೂ’ ಸಂತನು ’ಮುಸ್ಲಿಂ’ ರಿವಾಜುಗಳನ್ನು ಮಾಡುತ್ತಿದ್ದರೆ ಮುಸ್ಲಿಂ ಸಂತನಿಗೆ ಹಿಂದೂ ಶಿಷ್ಯರಿದ್ದರೆ, ಒಂದು ಧರ್ಮದ ದೈವಕ್ಕೆ ಇನ್ನೊಂದು ಧರ್ಮದ ಭಕ್ತರು ನಡೆದುಕೊಳ್ಳುತ್ತಿದ್ದರೆ ಸಾಕು, ಅದು ಧಾರ್ಮಿಕ ಸಾಮರಸ್ಯ ಆಗಿಬಿಡುತ್ತದೆ. ಮೂಲತಃ ಹಿಂದೂ-ಮುಸ್ಲಿಂ ಎಂಬ ಪರಿಭಾಷೆಯ ಕೋಮುವಾದಿಯಾದುದು. ಅದು ಜನರನ್ನು ಅವರ ಬಾಳಿನ ಸಂಸ್ಕೃತಿಯ ನೆಲೆಯಲ್ಲಿ ನೋಡದೆ ಧಾರ್ಮಿಕ ಗುರುತುಗಳ ಹಿನ್ನೆಲೆಯಲ್ಲಿ ನೋಡುತ್ತದೆ. ಎಂತಲೇ ಅದಕ್ಕೆ ಗೋವಿಂದಭಟ್ಟ – ಶಿಶುನಾಳರ ಗುರುಶಿಷ್ಯತ್ವ ಬೆರಗಿನ ಬೆರಗಿನ ಸಂಗತಿಯಾಗುತ್ತದೆ. ಕರ್ನಾಟಕ ಸೂಫಿಗಳು ಹಾಗೂ ಇತರೆ ಪಂಥಗಳ ಅನುಯಾಯಿಗಳು ಸಹಜವಾಗಿ ಮಾಡಿರುವ ತತ್ವಚಿಂತನೆ, ಅದನ್ನು ಸಹಜವಾಗಿ ಬದುಕುತ್ತಿರುವ ಜನ – ಇಲ್ಲೆಲ್ಲ ಕೋಮುಸಾಮರಸ್ಯದ ಉದ್ದೇಶಗಳೆ ಇಲ್ಲ. ಹಿಂದೂ -ಮುಸ್ಲಿಂ ಸಾಮರಸ್ಯದ ಗ್ರಹಿಕೆಯ ಕೋಮುವಾದಿ ಚಿಂತನೆಯೆದುರು ಸದಾಶಯ ಉಳ್ಳದಾಗಿದ್ದರೂ, ತನ್ನ ವಿಧಾನದಲ್ಲಿ ಅಸೂಕ್ಷ್ಮವೂ, ಅಸಾಂಸ್ಕೃತಿಕವೂ ಆಗಿದೆ’ (ಕರ್ನಾಟಕದ ಸೂಫಿಗಳು – ರಹಮತ್ ತರೀಕೆರೆ, ಪರಿಷ್ಕೃತ ಮುದ್ರಣ – ೨೦೦೧, ಹಂಪಿ ಕನ್ನಡ ವಿಶ್ವವಿದ್ಯಾಲಯ, ಪು. ೭೩-೭೪).

ವಾಸ್ತವವಾಗಿ ಪಿಂಜಾರರು ಮೊಹರಂ ಆಚರಿಸುವ ರೀತಿಯನ್ನು ಸಾಂಪ್ರದಾಯಿಕ ಮುಸ್ಲಿಮರು ವಿರೋಧಿಸುತ್ತಾರೆ ಮತ್ತು ಇಂಥ ಉತ್ಸವಗಳಿಂದ ಅವರು ದೂರವುಳಿದೂ ಬಿಡುತ್ತಾರೆ. ಇದು ಪಿಂಜಾರರು, ಮುಸ್ಲಿಮರು ಮತ್ತು ಹಿಂದೂ ಸಮುದಾಯಗಳು ಒಟ್ಟಾಗಿರುವ ಊರುಗಳಲ್ಲಿ ಹೀಗೆ ನಡೆಯುತ್ತದೆ.

ಪಿಂಜಾರರ ಮಹಿಳೆಯರಲ್ಲಿ ಅಶಿಕ್ಷಿತರ ಸಂಖ್ಯೆಯೇ ಹೆಚ್ಚು. ಇಡೀ ಪಿಂಜಾರ ಜನಾಂಗವೇ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವುದರಿಂದ ಈ ಜನಾಂಗದ ಪುರುಷರೂ ಅಶಿಕ್ಷಿತರೇ ಆಗಿದ್ದಾರೆ. ಕಳೆದ ೧೦-೧೫ ವರ್ಷಗಳಿಂದೀಚೆಗೆ ಅಕ್ಷರದ ಆಕರ್ಷಣೆ ಅರಿವಿನ ಆಕಾಂಕ್ಷೆ ಪರಿಧಿಯಾಚೆಗೆ ಉದ್ಯೋಗದ ಸುಖವನ್ನು ನೀಡುತ್ತಿರುವುದರಿಂದ ಎಲ್ಲ ಹಿಂದುಳಿದ ಜನಾಂಗಗಳಲ್ಲಿ ಓದುವವರು ಹೆಚ್ಚಾಗಿದ್ದಾರೆ. ಶಿಕ್ಷಿತರಿರಲಿ, ಅಶಿಕ್ಷಿತರಿರಲಿ ಮಹಿಳೆಯನ್ನು ಎಲ್ಲ ಜನಾಂಗಗಳ ಪುರುಷರು ಎರಡನೆಯ ದರ್ಜೆಯ ಜನರೆಂದೇ ಪರಿಗಣಿಸುತ್ತಾ ಬಂದಿದ್ದಾರೆ. ಬದುಕಿನ ಎಲ್ಲ ಮುಖ್ಯ ತೀರ್ಮಾನಗಳನ್ನು ಪುರುಷರೇ ಕೈಗೊಳ್ಳುತ್ತಾರೆ. ಹೆಚ್ಚಿನ ಸ್ವಾತಂತ್ರ‍್ಯ, ಸ್ವಾಭಿಮಾನ ಮತ್ತು ಅವಳದೇ ಆದ ವಿಶಿಷ್ಟ ಅನುಭವಗಳ ವಿಶ್ಲೇಷಣೆ ಮತ್ತು ಮೌಲ್ಯಮಾಪನ ಮಾಡುವ ಇಂಥ ಹೊತ್ತಿನಲ್ಲಿ ಗ್ರಾಮೀಣ ಮಹಿಳೆಯ ಕೌಟುಂಬಿಕ ಸ್ಥಾನಮಾನಗಳಲ್ಲಿ ಬದಲಾವಣೆಯಾಗಿಲ್ಲ, ಸ್ವತಃ ಹಳ್ಳಿಯ ಹೆಂಗಸರು ಈ ಬಗೆಯ ಅರಿವಿನ ಕಡೆಗೆ ಆಸಕ್ತ ಕಡೆಗೆ ಆಸಕ್ತರಾಗುತ್ತಿಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ.

ಮದುವೆ, ಹಬ್ಬದಂತಹ ಆಚರಣೆಗಳಲ್ಲಿ ಹೆಣ್ಣಿನ ಪಾತ್ರ ಮಹತ್ವವಾದುದು. ಆದರೆ ಇದರ ನಿರ್ವಹಣೆಗೆ ಅಗತ್ಯವಾದ ಆರ್ಥಿಕ ಹಿಡಿತ ಮಾತ್ರ ಗಂಡಿನದೇ ಆಗಿರುತ್ತದೆ. ಕುಟುಂಬ ನಿರ್ವಹಣೆಯಲ್ಲಿ ಜಾಣತನ ತೋರುವ ಕೆಲವು ಹೆಂಗಸರು ಮಾತ್ರ ಆರ್ಥಿಕವಾದ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ. ಉಳಿದಂತೆ ಸಂತೆ ಮಾಡುವುದರಿಂದ ಹಿಡಿದು ಬಟ್ಟೆ-ಬರೆಕೊಳ್ಳುವವರೆಗೆ ಗಂಡಿನದೇ ನಿರ್ಧಾರ. ಊರುಕೇರಿ ಮಾಡಬೇಕೆಂದರೆ ಗಂಡನ್ನು ಹಿಂಬಾಲಿಸುವುದಷ್ಟೇ ಹೆಣ್ಣಿನ ಕೆಲಸ. ಪಿಂಜಾರರ ವೃತ್ತಿಗೆ ಸಂಬಂಧಿಸಿದಂತೆ ಆಧುನಿಕ ಕೈಗಾರಿಕೆಗಳು ಬಂದಿರುವುದರಿಂದ ಅನೇಕರು ನಗರಗಳನ್ನು ಸೇರಿಕೊಂಡು ತಮ್ಮ ಜೀವನೋಪಾಯಕ್ಕಾಗಿ ಇತರೆ ಕಸುಬುಗಳನ್ನು ಅವಲಂಬಿಸಿದ್ದಾರೆ. ಅಂತಹ ಕಡೆ ಹೆಂಗಸರು ಮನೆಯಲ್ಲೇ ಮಾಡಬಹುದಾದ ಶಾವಿಗೆ ಒತ್ತುವುದು, ಊದು ಬತ್ತಿ ಮಾಡುವುದು, ಬೀಡಿ ಕಟ್ಟುವುದು ಮುಂತಾದ ಕೆಲಸಗಳನ್ನು ನಿರ್ವಹಿಸುತ್ತಾ ಗಂಡ – ಮಕ್ಕಳ ಊಟೋಪಚಾರ, ಹಬ್ಬ – ಹುಣ್ಣಿಮೆಯಂತಹ ಸಂಗತಿಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾಳೆ. ಹಳ್ಳಿಯಲ್ಲಿ ವಾಸವಾಗಿರುವ ಪಿಂಜಾರರು ಬಹುಮಟ್ಟಿಗೆ ತಮ್ಮ ಮೂಲ ಕಸುಬಿನಿಂದ ದೂರವುಳಿದಿದ್ದಾರೆ. ಅವರು ಅಷ್ಟಿಷ್ಟು ಜಮೀನಿದ್ದವರಾದರೆ ಕೃಷಿ ಚಟುವಟಿಕೆಗಳನ್ನು ಮಾಡುವುದು, ಇಲ್ಲದಿದ್ದರೆ ಉಳ್ಳವರ ಮನೆ ಜಮೀನಿನ ಕೂಲಿ ಕೆಲಸ ಮಾಡುವುದರಲ್ಲಿ ನಿರತರಾಗಿದ್ದಾರೆ. ಅನೇಕ ಪಿಂಜಾರರಂತೂ ಶ್ರೀಮಂತರ ಮನೆಯಲ್ಲಿ ಸಂಬಳದಾಳುಗಳಾಗಿ ದುಡಿಯುತ್ತಿದ್ದಾರೆ. ಇಂತಹವರ ಮನೆಯ ಹೆಣ್ಣು ಮಕ್ಕಳು ನಗರವಾಸದ ಪಿಂಜಾರರ ಹೆಣ್ಣು ಮಕ್ಕಳಿಗಿಂತ ಸ್ವತಂತ್ರರಾಗಿದ್ದಾರೆ. ತಾಯಿ ಅಥವಾ ಹೆಂಡತಿಯನ್ನು ಕೇಳದೇ ಮುಖ್ಯವಾದ ತೀರ್ಮಾನಗಳನ್ನು ಇಲ್ಲಿನ ಗಂಡು ತೆಗೆದುಕೊಳ್ಳುವುದು ಕಡಿಮೆಯಾದರೂ ಅಂತಿಮವಾದುದು ಅವನ ನಿರ್ಣಯವೇ ಆಗಿರುತ್ತದೆ. ಹೆಣ್ಣು ಕಲಿತರೆ ಆರ್ಥಿಕ ಸ್ವಾವಲಂಬನೆ ಸಿಗುತ್ತದೆ ಎನ್ನುವುದು ಎಲ್ಲೋ ಕೆಲವು ಮನೆತನಗಳಲ್ಲಿ ಮಾತ್ರ. ಆದರೆ ಹೊರಗೆ ದುಡಿಯುವ ಹೆಣ್ಣು ತನ್ನ ಸಂಪಾದನೆಯನ್ನು ತಂದು ಗಂಡಿಗೇ ಕೊಡುವ, ಕೊಡದಿದ್ದರೆ ಮಾನಸಿಕ, ದೈಹಿಕ ಹಿಂಸೆ ಅನುಭವಿಸುವ ಉದಾಹರಣೆಗಳು ಸಾಕಷ್ಟಿವೆ. ವಿಚಿತ್ರ ಎಂದರೆ ಹೆಣ್ಣು ಹೆಚ್ಚು ರಿಲಿಜಿಯಸ್ ಆಗಿರಬೇಕೆಂದು ಬಯಸುವ ಗಂಡಸರು ತಾವು ಮಾತ್ರ ಅಂಥ ವಿಷಯಗಳಿಗೆ ಪ್ರಾಮುಖ್ಯತೆ ಕೊಡಬೇಕೆಂದುಕೊಳ್ಳುವುದಿಲ್ಲ. ಅವಳು ದುಡಿಯುವುದಕ್ಕೆ ಹೋದರೆ ಇಂತಹ ಕೆಲವು ವಿಚಾರಗಳಲ್ಲಿ ವಿನಾಯಿತಿ ಸಿಕ್ಕಿಬಿಡುತ್ತದೆ. ಏನೇ ಆಗಲಿ ಹೆಣ್ಣು ಸುಶಿಕ್ಷಿತಳಾಗಿ ಆರ್ಥಿಕವಾಗಿ ಸಂಪಾದಿಸುವುದು ಈ ಹೊತ್ತಿನಲ್ಲಿ ಗಂಡಿನ ಆಕಾಂಕ್ಷೆಯಾಗಿದೆ. ಅದು ಹೆಣ್ಣಿನ ಸಾಂಪ್ರದಾಯಿಕ ಸಂಕೋಲೆಯನ್ನು ಕಳಚಿಕೊಳ್ಳುವ ವಿಮೋಚನೆಯ ಸಾಧನವೂ ಆಗಿದೆ. ನಿಧಾನವಾಗಿಯಾದರೂ ಹೆಣ್ಣು ಸ್ವಾವಲಂಬಿ, ಸ್ವಾಭಿಮಾನಿಯಾಗುವುದು ನಡೆದಿದೆ- ಎನ್ನುವುದ ಆಶಾದಾಯಕ ಸಂಗತಿಯಾಗಿದೆ.

ಪ್ರಪಂಚವೇ ಅಂಗೈಲಿರುವಂತಹ ಮಾಹಿತಿ ತಂತ್ರಜ್ಞಾನದ ಬೀಸಿನಲ್ಲಿ ಬದುಕುತ್ತಿರುವ ಯಾರೂ ಅದರಿಂದ ದೂರವುಳಿದು ದ್ವೀಪವಾಗಬಯಸುವುದಿಲ್ಲ. ಮತ್ತು ಇದರಿಂದ ಉಂಟಾಗ ಬಹುದಾದ ಬದಲಾವಣೆಗಳಿಂದ ಹೊರತಾಗುವುದಿಲ್ಲ. ಜಗತ್ತಿನ ಅತಿ ವೇಗ ವಿದ್ಯಮಾನಗಳು ಕ್ಷಣಮಾತ್ರದಲ್ಲಿ ಎಲ್ಲರ ಏಕಾಂತವನ್ನು ಸೀಳಿ ಎಚ್ಚರಗೊಳಿಸುತ್ತವೆ. ಸಹಜವಾಗಿ ಮಹಿಳೆ ಈ ಎಚ್ಚರದಲ್ಲಿ ತನ್ನನ್ನು ಬದುಕಿನ ನಾವೀನ್ಯತೆಗೆ ತೆರೆದುಕೊಳ್ಳುತ್ತಿದ್ದಾಳೆ. ಪಿಂಜಾರರಲ್ಲಿ ೨೦-೩೦ ವರ್ಷಗಳ ಹಿಂದೆ ಇದ್ದ ಅವಿಭಕ್ತ ಕುಟುಂಬಗಳು ಒಡೆದಿವೆ. ಕುಟುಂಬ ಚಿಕ್ಕದಾಗಿದೆ. ಸರ್ಕಾರಗಳ ಯೋಜನೆಗಳು, ಘೋಷಣೆಗಳು ಏನೇ ಇರಲಿ ಹೆಣ್ಣು ತಾನೇ ಚಿಕ್ಕ ಕುಟುಂಬದ ಆಕಾಂಕ್ಷಿಯಾಗಿದ್ದಾಳೆ. ಅದಕ್ಕೆ ಅವಳ ಸಾಮಾಜಿಕ – ಆರ್ಥಿಕ, ಸ್ಥಿತಿ-ಗತಿಗಳು ಕಾರಣವಾದಂತೆ ಸಮಕಾಲೀನ ಒತ್ತಡಗಳೂ ಕಾರಣವಾಗಿರುತ್ತವೆ. ಇತರ ಎಲ್ಲರಂತೆ ಸರಕುನಿಷ್ಠೆ ಭೋಗಾಕಾಂಕ್ಷೆ ಅವಳನ್ನು ಕಾಡುತ್ತಿದೆ. ಪಿಂಜಾರರಲ್ಲಿ ಈಗ ಶಿಕ್ಷಿತ ಮಹಿಳೆಯರು ಮತ್ತು ಶಿಕ್ಷಿತರನ್ನು ಮದುವೆಯಾದ ಹೆಣ್ಣು ಮಕ್ಕಳು ಸಾಂಪ್ರದಾಯಿಕವಾದ ಮೌಲ್ಯಗಳ ಬಗ್ಗೆ ಉದಾಸೀನರಾಗಿದ್ದಾರೆ. ಹಳ್ಳಿಗಳಲ್ಲಿ ಇದಕ್ಕೆ ವಿರುದ್ಧವಾದ ಸ್ಥಿತಿಯಿದೆ. ಪಿಂಜಾರರು ಈಗಲೂ ಬಹುಪತ್ನಿತ್ವವನ್ನು, ವಿಚ್ಛೇದನವನ್ನು ವಿರೋಧಿಸುತ್ತಾರೆ. ಸಿನಿಮಾ ಮತ್ತು ಇತರೆ ಮಾಧ್ಯಮಗಳು ಅವರ ಮನರಂಜನೆಯ ಕೇಂದ್ರವನ್ನು ವಿಸ್ತರಿಸುತ್ತವೆಯೇ ವಿನಾ ಅಂತಃಕರಣವನ್ನು ಕಲುಷಿತಗೊಳಿಸಿದಂತಿಲ್ಲ.

ಪಿಂಜಾರರ ಮಹಿಳೆಯರ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಸ್ಥಾನಮಾನಗಳನ್ನು ಕುರಿತು ಕೆಲವು ಮಾತುಗಳನ್ನು ಹೇಳಬಹುದಾಗಿದೆ. ಹೆಣ್ಣು ತನ್ನ ಕ್ರಿಯಾಶೀಲತೆಯ ಬಿಡುಗಡೆಯಾಗಿ ಯಾವ ಕ್ಷೇತ್ರವನ್ನಾದರೂ ಆಯ್ಕೆ ಮಾಡಿಕೊಳ್ಳಬಲ್ಲ ಸ್ವಾತಂತ್ರ‍್ಯವನ್ನು ಇತ್ತೀಚಿನ ದಿನಗಳಲ್ಲಿ ಪಡೆಯುತ್ತಿದ್ದಾಳೆ. ಈ ಜನಾಂಗದಲ್ಲಿ ಹುಟ್ಟಿದ ಕಾರಣಕ್ಕೇ ದಕ್ಕುವ ವಿಶಿಷ್ಟ ಸಂವೇದನೆಗಳನ್ನು ದಾಖಲು ಮಾಡುವ ಅವಕಾಶ ಕೆಲವರಿಗಿರುತ್ತದೆ. ಹಾಗೂ ತನ್ನ ಕನಸುಗಾರಿಕೆಯನ್ನು ಸಾರ್ವಜನಿಕವಾಗಿ ಪೂರೈಸಬಲ್ಲ ಶಕ್ತಿ ಮತ್ತೆ ಕೆಲವರಿಗಿರುತ್ತದೆ. ಸಾಹಿತ್ಯ ಮತ್ತು ರಾಜಕೀಯ ಇಂಥ ಕ್ಷೇತ್ರಗಳಾಗಿವೆ.

ಸಾಹಿತ್ಯದ ಕ್ಷೇತ್ರದಲ್ಲಿ ಎಲ್ಲ ಬಗೆಯ ಸಂವೇದನೆಗಳೂ ದಾಖಲಾಗುವುದಕ್ಕೆ ಮುಖ್ಯವೇದಿಕೆಯನ್ನು ಒದಗಿಸಿದ್ದು ಬಂಡಾಯ ಸಾಹಿತ್ಯ ಚಳುವಳಿ. ಈ ಚಳುವಳಿಯ ಆಶಯಗಳನ್ನು ನಿಧಾನವಾಗಿಯಾದರೂ ತಮ್ಮ ಬರಹಗಳ ಮೂಲಕ ಅಭಿವ್ಯಕ್ತಗೊಳಿಸಿದವರು ಡಿ. ಬಿ. ರಜಿಯಾ ಅವರು. ರಜಿಯಾ ಬರೆಯುತ್ತಿರುವ ಕಾವ್ಯದ ವಿಶ್ಲೇಷಣೆಗೆಂದೇ ಪ್ರತ್ಯೇಕ ಲೇಖನದ ಅವಶ್ಯಕತೆಯಿದೆ. ಇಲ್ಲಿ ಸದ್ಯಕ್ಕೆ ಹೆಣ್ಣಿನ ವಿಶಿಷ್ಟ ಸಂವೇದನೆಗಳನ್ನು ದಾಖಲಿಸುತ್ತಿರುವ ಮಹಿಳಾ ಲೇಖಕಿಯರಲ್ಲಿ ರಜಿಯಾ ಕೂಡ ಒಬ್ಬರು ಎಂಬುದನ್ನು ಗಮನಿಸಬೇಕು. ಇಂತಹ ಅನೇಕ ಮಹಿಳಾ ಬರಹಗಾರರು ಪಿಂಜಾರರಲ್ಲಿರಬಹುದು. ಯಾಕೆಂದರೆ ಪಿಂಜಾರರ ಬರಹಗಾರರನ್ನು ಗುರುತಿಸುವುದಕ್ಕೆ ಇರುವ ಕಷ್ಟವೇ ಒಂದು ರೀತಿಯದು. ಪಿಂಜಾರರ ಹೆಸರುಗಳು ಮುಸ್ಲಿಮರ ಹೆಸರುಗಳನ್ನೇ ಹೋಲುವುದು ಮತ್ತು ಅನೇಕರು ತಮ್ಮನ್ನು ಪಿಂಜಾರರು ಎಂದು ಹೇಳಿಕೊಳ್ಳಲಾಗದ ಸಾಮಾಜಿಕ ಕೀಳರಿಮೆಯಲ್ಲಿರುವುದು. ಪಿಂಜಾರರ ಮಹಿಳೆಯ ವಿಶಿಷ್ಟ ಸ್ವರೂಪವನ್ನು ಹೇಳುವ ಒಂದೆರಡು ಮಾತುಗಳು ಇಲ್ಲಿವೆ; “ಪಿಂಜಾರಳಾಗಿ ಹುಟ್ಟಿನಿಂದ ಕನ್ನಡ ಭಾಷೆ ಮಾತ್ರ ಗೊತ್ತಿಲ್ಲ. ಬೀಬಜ್ಜಿಗೆ ಉರ್ದು ಭಾಷೆಯೇ ಗೊತ್ತಿರಲಿಲ್ಲ. ಅವಳಿಗೆ ಉರ್ದು ಇಂಗ್ಲೀಷ್ ಭಾಷೆಯಷ್ಟೇ ಅಪರಿಚಿತವಾಗಿತ್ತು. ಅವಳದು ಸಹಜ ಗ್ರಾಮೀಣ ಕನ್ನಡ ….. .ನಡೆ-ನುಡಿ, ವೇಷ – ಭಾಷೆಗಳಲ್ಲಿ ಯಾವುದಾದರೂ ಜಾತಿಯ ಶೂದ್ರ ಹೆಂಗಸಿನಂತೆ ಇದ್ದಳೇ ವಿನಾಮುಸ್ಲಿಮರಂತೆ ತೋರುವ ಯಾವ ಲಕ್ಷಣವೂ ಅವಳಲ್ಲಿರಲಿಲ್ಲ”. ಹೀಗೆ ಪಿಂಜಾರರಲ್ಲಿ ತಮ್ಮ ನಿಜವಾದ, ಸ್ವಭಾವಸಿದ್ಧವಾದ ರೂಪದಲ್ಲಿ ಕಾಣಸಿಗುವುದು ಹಳ್ಳಿಗಳ ಅಶಿಕ್ಷಿತ ಮಹಿಳೆಯರು ಮಾತ್ರ.

ಇನ್ನೂ ರಾಜಕೀಯ ಕ್ಷೇತ್ರದಲ್ಲಿ ಪಿಂಜಾರರ ಮಹಿಳೆಯರ ಪ್ರವೇಶ ಆಕಸ್ಮಿಕ ಎನ್ನುವಂತೆ ಆಗಿದೆ. ಅದೂ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರ ನಿಗದಿಪಡಿಸಿದ ಮೀಸಲಾತಿಯಿಂದಾಗಿ. ಪಿಂಜಾರರಿಗೇ ಪ್ರತ್ಯೇಕವಾಗಿ ರಾಜಕೀಯ ಮೀಸಲಾತಿ ಇಲ್ಲ. ಆದರೆ ಮುಸ್ಲಿಂ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಬೇಕಾದಾಗ ಮಾತ್ರ ಬಹುಸಂಖ್ಯಾತ ಹಿಂದೂಗಳ ಅಪೇಕ್ಷೆ ಮೇರೆಗೆ ಪಿಂಜಾರರ ಮಹಿಳೆಯರನ್ನು ಕಣಕ್ಕಿಳಿಸಲಾಗುತ್ತದೆ. ಇಂತಹ ಮಹಿಳೆ ಆಯ್ಕೆಯಾದ ನಂತರವೂ ತನ್ನ ಮನೆಯ ಗಂಡಸರ ಆಣತಿಯಂತೆಯೋ, ತನ್ನ ಗೆಲುವಿಗೆ ಕಾರಣಕರ್ತರಾದ ಇತರರ ಮಾತಿನಂತಲೋ ನಡೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ರಾಜಕೀಯದಲ್ಲಿ ತನ್ನದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಬಲ್ಲ ಚೈತನ್ಯ ಪಿಂಜಾರ ಮಹಿಳೆಯರಿಗಿಲ್ಲ. ದಾವಣಗೆರೆಯಂತಹ ನಗರಗಳಲ್ಲಿ ಸೈಯದುನ್ನೀಸಾ, ಪೀರಾಂಬಿಯಂತಹ ಹೆಣ್ಣುಮಕ್ಕಳು ಕೌನ್ಸಿಲರುಗಳಾಗಿ ಆಯ್ಕೆಯಾಗಿದ್ದಾರೆ.

ಒಟ್ಟಿನಲ್ಲಿ ಪಿಂಜಾರ ಜನಾಂಗದ ಮಹಿಳೆ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದಿದ್ದು ಸಾಂಸ್ಕೃತಿಕವಾಗಿ ವಿಚಾರಗಳ ಸಂಗಮವಾಗಿದ್ದಾಳೆ.

ಅಡಿಟಿಪ್ಪಣಿಗಳು

೧.   Mysore Gezetter-Vol.2, Ed.C. Hayavadana Rao, P. 340

೨.    The Mysore Tribes and Castes, Editors : H. V. Nanjundaiah, L. K. Ananthakrishna Iyer Vol. IV. University of Mysore, 1931.

೩.    Caste and Tribes of Southern India by Edgar Thurston, Vol-II, P. 195-202

೪.   ಬಸವರಾಜ ಮೂಲಿಮನಿ ಅವರ ಲೇಖನ : ಸಂಯುಕ್ತ ಕರ್ನಾಟಕ, ಸಾಪ್ತಾಹಿಕ ಸೌರಭ, ದಿನಾಂಕ ೦೩-೦೬-೨೦೦೧

೫.   ಮೊಹರಂ ಪದಗಳು – ಡಾ. ದಸ್ತಗೀರ‍್ ಅಲ್ಲೀಭಾಯಿ – ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ಪ್ರಥಮ ಮುದ್ರಣ ೧೯೯೯, ಪು. ೨೯೩-೩೦೫

೬.   ಅದೇ, ಪು. ix-xv

೭.   ಬೀಬಜ್ಜಿ – ಮಿರ್ಜಾಬಷೀರ‍್, ಪ್ರಜಾವಾಣಿ, ಸಾಪ್ತಾಹಿಕ ಪುರವಣಿ, ೧೧-೧೧-೨೦೦೭, ಪು. ೪

* * *