ಪಿಜಿನ್ ಎಂದು ಗುರುತಿಸುವ ಭಾಷೆಯೊಂದು ಯಾವುದೇ ಭಾಷಿಕರ ಮಾತೃಭಾಷೆಯಾಗಿರುವುದಿಲ್ಲ. ಆದರೆ ಅದು ಅಂಥ ಸಾಮಾನ್ಯ ಭಾಷೆಯನ್ನಾಡದ ಆದರೆ ಪರಸ್ಪರ ಸಂವಹನಕ್ಕಾಗಿ ವಯಸ್ಕ ಜನರೊಂದಿಗೆ ನಡೆಯುವ ಒಂದು ಭಾಷಿಕ ವ್ಯವಸ್ಥೆಯಾಗಿದೆ. ಮುಖ್ಯವಾಗಿ ವ್ಯಾಪಾರವೇ ಮೊದಲಾದ ವ್ಯಾವಹಾರಿಕವಾದ ಸಂದರ್ಭದಲ್ಲಿ ಸಂವಹನಕ್ಕೆ ಇದರ ಅಗತ್ಯತೆ ಏರ್ಪಡುತ್ತದೆ. ಸಾಮಾನ್ಯವಾಗಿ ಇವುಗಳನ್ನು ಅಂಚಿನ, ಪರಿಕರ ಭಾಷೆಗಳೆಂದು ಕರೆಯುವುದು ವಾಡಿಕೆ. ಮಾತೃಭಾಷೆಯ ಸ್ಥಾನಕ್ಕೆ ಏರಿರುವ ಭಾಷೆಗಳೊಂದಿಗೆ ಹೋಲಿಸಿದರೆ ಇವುಗಳಿಗೆ ಅಂಥ ಪ್ರಾಚೀನವಾದ ಇತಿಹಾಸವಿರುವುದಿಲ್ಲ.

ಆದರೆ ಕ್ರಿಯೋಲ್ ಭಾಷೆಗಳು ಈ ಮೇಲೆ ಹೇಳಿದ ಪಿಜಿನ್‌ಗಳಿಗಿಂತ ಭಿನ್ನವಾದ ಲಕ್ಷಣಗಳನ್ನು ಹೊಂದಿರುತ್ತವೆ. ಈ ಕ್ರಿಯೋಲ್‌ಗಳು ಕೂಡಾ ಪಿಜಿನ್ ಭಾಷೆಗಳೇ ಮೊದಲು ಅವು ಒಂದು ಸಮುದಾಯದ ಮಾತೃಭಾಷೆ ಗಳಾಗಿರುತ್ತವೆ. ಬಳಿಕ ಒಂದು ನಿರ್ದಿಷ್ಟವಾದ ಸಮುದಾಯದಲ್ಲಿ ಪಿಜಿನ್ ಮಾತಾಡುವವರ ಸಂಖ್ಯೆ ತಲೆಮಾರಿನಿಂದ ತಲೆಮಾರಿಗೆ ಮುಂದುವರೆಯುತ್ತದೆ ಮತ್ತು ಹೆಚ್ಚಾಗುತ್ತಾ ಹೋಗುತ್ತದೆ. ಆಗ ಮುಂದಿನ ತಲೆಮಾರಿನ ಮಕ್ಕಳು ಈ ಪಿಜಿನ್‌ಗಳನ್ನೇ ತಮ್ಮ ಮಾತೃಭಾಷೆಯಾಗಿ ಪರಿಗಣಿಸುತ್ತಾರೆ. ಹೀಗೆ ಅವು ಕ್ರಿಯೋಲ್‌ಗಳಾಗುತ್ತವೆ.

ವ್ಯಾಖ್ಯಾನಗಳು : ಪಿಜಿನ್ ಎಂಬುದು ವಲಸೆಗಾರ ವ್ಯಾಪಾರಿಗಳೊಡನೆ ವ್ಯವಹರಿಸಲು ಜನಸಮುದಾಯ ರೂಪಿಸಿಕೊಂಡ ಭಾಷೆಯಾಗಿರುತ್ತದೆ. ಅದು ಯಾರೊಬ್ಬರ ಮಾತೃಭಾಷೆಯಲ್ಲದಿದ್ದರೂ, ಸ್ಥಳೀಯ ಭಾಷಿಕರ ಮಾತೃಭಾಷೆಯ ತಳಹದಿಯಲ್ಲಿ ರೂಪುಗೊಂಡ ಭಾಷೆಯಾಗಿರುತ್ತದೆ. ಇದರಿಂದಾಗಿ ಈ ಭಾಷೆ ಸಾಮಾಜಿಕ ಹೊಣೆಗಾರಿಕೆಯ ನಿಬಂಧನೆಗೊಳಗಾಗಿರುತ್ತದೆ ಮತ್ತು ಸರಳವಾಗಿದ್ದು ಭಾಷಿಕರಿಗೆ ಇದರಿಂದ ಅನುಕೂಲತೆಗಳಿರುತ್ತವೆ. ಇದಕ್ಕೆ ಬದಲಾಗಿ ಕ್ರಿಯೋಲ್ ಎಂಬುದು ಪಿಜಿನ್ ಮಾತಾಡುವ ಭಾಷಿಕರ ಮಕ್ಕಳಿಗೆ ಮೊದಲ ಭಾಷೆಯೂ ಆಗಿರುತ್ತದೆ. ಸ್ಥಳೀಯ ಭಾಷೆಯಾಗುವ ಮತ್ತು ಬಳಸಿಕೊಳ್ಳುವ ನಿರಂತರವಾದ ಪ್ರಕ್ರಿಯೆ ಯಲ್ಲಿ ಪಿಜಿನ್ನಿನ ಭಾಷಾಂತರಗಳು ಹೆಚ್ಚಾಗುತ್ತವೆ. ಆದರೆ ಒಂದು ಪಿಜಿನ್ ಬಹುಕಾಲ ಅದರ ಭಾಷಿಕರ ಪ್ರಾಥಮಿಕ ಭಾಷೆಯಾಗಿ ಬಳಕೆಯಾಗಿದ್ದರೆ (ಉದಾ: ನ್ಯೂಗಿನಿಯಾ ಪಿಜಿನ್ ಇಂಗ್ಲಿಷ್, ಟಾಕ್ ಪಿಜಿನ್) ಅದರಲ್ಲಿ ಕೆಲವೊಂದು ಬೆಳವಣಿಗೆ ಮತ್ತು ಸಂಕೀರ್ಣತೆಯನ್ನು ತೋರ್ಪಡಿಸುತ್ತದೆ.

ಈ ಮೇಲಿನ ವ್ಯಾಖ್ಯಾನಗಳಿಂದ ಕ್ರಿಯೋಲ್ ಮತ್ತು ಪಿಜಿನ್‌ಗಳ ಬಗೆಗೆ ಒಂದು ಬಗೆಯ ಸ್ಪಷ್ಟತೆಯುಂಟಾಗುತ್ತದೆ. ಇದು ಎಲ್ಲರಿಗೂ ಒಪ್ಪಿತವಾದ ವ್ಯಾಖ್ಯಾನವೆಂದು ಭಾವಿಸಬೇಕಾಗಿಯೂ ಇಲ್ಲ. ಅನೇಕ ಕ್ರಿಯೋಲ್ ಮತ್ತು ಪಿಜಿನ್ ಭಾಷೆಗಳ ಇತಿಹಾಸವನ್ನು ಕ್ರಿ.ಶ. 16 ಮತ್ತು 17ನೆಯ ಶತಮಾನಗಳ ಕಾಲಘಟ್ಟದಿಂದಲೂ ಗುರುತಿಸಬಹುದು. ಯುರೋಪಿಯನ್ನರ ಅನ್ವೇಷಣೆಯ ಈ ಕಾಲಘಟ್ಟದಲ್ಲಿ ಬಹುತೇಕವಾಗಿ ಡಚ್, ಇಂಗ್ಲಿಷ್, ಫ್ರೆಂಚ್, ಪೋರ್ಚುಗೀಸ್ ಮತ್ತು ಸ್ಪ್ಯಾನಿಶ್ ಭಾಷೆಗಳಿಂದ ಪದ ಸಂಪತ್ತು ಗಳನ್ನು ಪಡೆದು ಇಂತಹ ಅನೇಕ ಭಾಷೆಗಳು ಉಂಟಾದವು. ಮುಂದೆ 20 ನೇ ಶತಮಾನದಲ್ಲಿ ಕೆಲವೊಂದು ಸ್ವರೂಪಗಳಲ್ಲಿ ಹೆಚ್ಚು ಕಡಿಮೆ ನೂರು ಮಿಲಿಯನ್ ಜನರ ಆಡುಭಾಷೆಗಳಾದವು. ಇಂದು ಪಿಜಿನ್ ಮತ್ತು ಕ್ರಿಯೋಲ್ ಪ್ರಕ್ರಿಯೆಗೆ ಒಳಗಾದ ಭಾಷೆಗಳನ್ನು ಅಂದಾಜಿಸಲು ಸಾಧ್ಯ ವಾಗುವುದಿಲ್ಲ. ಡಚ್‌ನಿಂದ ಕ್ರಿಯೋಲ್ ಪ್ರಕ್ರಿಯೆಗೆ ಒಳಗಾದ 5 ಮಿಲಿಯನ್ ಜನಗಳ ಆಫ್ರಿಕಾ ಭಾಷೆಯಾಗಿ 3 ಮಿಲಿಯನ್ ಜನಗಳ ಭಾಷೆಯಾಗಿ ಕೇಪ್ ವರ್ಡಿ ಕ್ರಿಯೋಲ್ 5 ಮಿಲಿಯನ್ ಭಾಷೆಯಾದ ಹೈಟಿಯನ್ನ್‌ನರ ಕ್ರಿಯೋಲ್, 20 ಮಿಲಿಯನ್ ಜನಗಳ ಭಾಷೆಯಾದ ನೈಜೇರಿಯನ್ ಪಿಜಿನ್ ಇಂಗ್ಲಿಷ್, 1.5 ಮಿಲಿಯನ್ ಜನರಾಡುವ ಟಾಕ್ ಪಿಜಿನ್ ಮುಂತಾದವು ಕೇವಲ ಕೆಲವೊಂದು ಉದಾಹರಣೆಗಳು ಮಾತ್ರ.

ಪಿಜಿನ್ ಪದದ ವ್ಯತ್ಪತ್ತಿಯ ಬಗೆಗೆ ಇನ್ನೂ ಅನುಮಾನಗಳಿವೆ. ಬಹುಶಃ ಅದು ಪಿಡಿಯನ್ ಪದದಿಂದ (ದಕ್ಷಿಣ ಅಮೆರಿಕಾದ ಭಾರತೀಯರು) ಇಂಗ್ಲಿಶ್‌ನ ‘Bussiness’ ಪದದ ಚೀನಿಯನ್ನರ ಉಚ್ಛಾರಣೆಯಿಂದ ಅಥವಾ ಹೀಬ್ರೂಗಳು ವಿನಿಮಯ ಎಂಬರ್ಥದಲ್ಲಿ ಬಳಸುವ ಪಿಜಿಮ್ (Pidgim) ಅಥವಾ ಪೋರ್ಚುಗೀಸರು ವ್ಯಾಪಾರ (Bussiness) ಎಂಬರ್ಥದಲ್ಲಿ ಬಳಸುವ ಆಕ್ಯುಪೆಕಾ (Ocupeca) ಅಥವಾ ಅದೇ ಪೋರ್ಚು ಗೀಸ್ ಪೆಕ್ಯುನೊ (Pequono) ಅಥವಾ ಇವುಗಳಲ್ಲಿ ಯಾವುದಾದರೊಂದರ ಸಂಪರ್ಕದಿಂದ ಇಂಗ್ಲಿಶಿನಲ್ಲಿ ‘ಪಿಜಿನ್’ ಪದ ರೂಪುಗೊಂಡಿರಬೇಕು. ಕ್ರಿಯೋಲ್ ಪದದ ವ್ಯತ್ಪತ್ತಿಯನ್ನು ಅಂತಿಮವಾಗಿ ಲ್ಯಾಟಿನ್ ಭಾಷೆಯಿಂದ ನಾವು ಸಾಧಿಸಬಹುದು. ಈ ಭಾಷೆಯಲ್ಲಿ ‘Creare’ ಎಂಬ ಪದವಿದೆ, ಇದರರ್ಥ ಪಡೆದುಕೊಳ್ಳುವುದು To Bight ಎಂದಾಗಿದೆ. ಇದಕ್ಕೆ ಸಂವಾದಿಯಾಗಿ ಪೋರ್ಚುಗೀಸ್ ಭಾಷೆಯಲ್ಲಿ ‘Crioulo’, ಸ್ಪ್ಯಾನಿಶ್ ಭಾಷೆಯಲ್ಲಿ ‘crioulo’, ಹಾಗೂ ಫ್ರೆಂಚ್‌ನಲ್ಲಿ ‘Creare’ ಪದಗಳಿವೆ. ಮೊದಲಿಗೆ ಹೊಸ ಜಗತ್ತಿನಲ್ಲಿ ಜನಿಸಿದ ಯುರೋಪಿಯನ್ನರಿಗೆ ಆಮೇಲೆ ಆಫ್ರಿಕಾದ ಜನಗಳಿಗೆ ಹಾಗೂ ಸಂಕರ ಜನಾಂಗಗಳಿಗೆ, ಹಾಗೆಯೇ ಅಮೆರಿಕಾದ ನಿವಾಸಿಗಳಾಡುವ ವಿವಿಧ ಭಾಷೆಗಳಿಗೆ, ಜೊತೆಜೊತೆಗೆ ಸಮುದಾಯವೊಂದರ ಮಾತೃಭಾಷೆಯಾಗಿರುವ  ಭಾಷೆಗಳಿಗೆ ಈ ಪದವನ್ನು ಬಳಸಲಾಗಿದೆ.

ಈಗಾಗಲೇ ಪಿಜಿನ್ ಮತ್ತು ಕ್ರಿಯೋಲ್‌ಗೆ ಸಂಬಂಧಿಸಿದ ಸರ್ವೇಸಾಧಾರಣ ವಾದ ವ್ಯಾಖ್ಯಾನವೊಂದನ್ನು ನೀಡಲಾಗಿದೆ. ಆದರೆ 1880 ಮತ್ತು 1980 ರ ಕಾಲಘಟ್ಟದ ಅವಧಿಯಲ್ಲಿ ವಿದ್ವಾಂಸರು ಈ ಬಗೆಗೆ ವ್ಯಾಪಕವಾದ ಚರ್ಚೆಯನ್ನು ಮಾಡಿದ್ದಾರೆ. ಅವರಲ್ಲಿ ಕೆಲವರು ಸರಳತೆಯು ಪಿಜಿನ್ನಿನ ಬೆಳವಣಿಗೆಯ ಮೊದಲ ಗುಣವೆನ್ನುತ್ತಾರೆ. ಇನ್ನು ಕೆಲವರು ಮಿಶ್ರತೆಯೂ ಸಮಾನವಾಗಿಯೇ ಅಥವಾ ಹೆಚ್ಚಾಗಿಯೇ ಇರುತ್ತದೆ ಎನ್ನುತ್ತಾರೆ. ಇನ್ನು ಕೆಲವರು ಇವೆರಡೂ ಲಕ್ಷಣಗಳೂ ಭಾಷೆಯನ್ನು ತನ್ನದಾಗಿಸಿಕೊಳ್ಳುವಲ್ಲಿ ಸಮುದಾಯವೊಂದು ನಡೆಸುವ ಅನುಸಂಧಾನವೆನ್ನುತ್ತಾರೆ.

ಈಗ ಅಷ್ಟೊಂದು ಜನಪ್ರಿಯವಲ್ಲದ ಆದರೆ ಒಂದು ಕಾಲಕ್ಕೆ ಪರಿಣಾಮ ಕಾರಿಯಾಗಿದ್ದ ಎರಡು ವ್ಯಾಖ್ಯಾನಗಳ ಬಗೆಗೆ ಇಲ್ಲಿ ಈಗ ಸಂಕ್ಷಿಪ್ತವಾಗಿ ಹೇಳಬಹುದು. ಮೊದಲನೆಯದು ಹಾಲ್ ಎಂಬ ವಿದ್ವಾಂಸನ ಪಿಜಿನ್‌ಗೊಳ್ಳುವ/ ಕ್ರಿಯೋಲ್‌ಗೊಳ್ಳುವ ಜೀವನ – ವರ್ತುಲ. ಇನ್ನೊಂದು ವಿನೋಮನ್ ಹೇಳುವ ಪಿಜಿನ್ ಆಗಬೇಕಾದರೆ ಕೊನೆಪಕ್ಷ ಮೂರು ಭಾಷೆಗಳು ಬೇಕೆಂಬ ನಿಯಮ. ಹವಾಯಿಯನ್ನರ ಕ್ರಿಯೋಲ್ ಮತ್ತು ಇತರ ಕ್ರಿಯೋಲ್‌ಗಳು ಕ್ರಿಯೋಲ್‌ಗೊಳ್ಳುವ ಪ್ರಕ್ರಿಯೆಯೂ ಕೆಲವೊಂದು ಸಂದರ್ಭದಲ್ಲಿ ಅಪರೂಪ ವಾಗಿರುತ್ತದೆ ಎಂಬುದನ್ನು ತೋರಿಸುತ್ತದೆ. ಇದು ಯಾವಾಗೆಂದರೆ ಪಿಜಿನ್ ಗಟ್ಟಿಗೊಳ್ಳುವ ಮೊದಲು – ಇನ್ನು ಅರ್ಧಂಬರ್ಧ ವಾಗಿರುವಾಗ, ಕಡಿಮೆ ಬೆಳವಣಿಗೆ ಹೊಂದಿರುವಾಗ ಹಾಗೂ ಅದರದೇ ಆದ ನಿಯಮಗಳು ರೂಪುಗೊಳ್ಳದೆ ಇರುವಾಗ ಕ್ರಿಯೋಲ್ ಪ್ರಕ್ರಿಯೆಗೆ ಒಳಗಾಗುವುದೇ ಹೆಚ್ಚು ಎಂಬುದನ್ನು ಈಗ ಉಲ್ಲೇಖಿಸಿರುವ ಭಾಷೆಗಳು ತೋರಿಸುತ್ತವೆ. ರಸೆನಾರ್ಕ್ ಮತ್ತಿತರ ಪಿಜಿನ್‌ಗಳು ಮೂರು ಭಾಷೆಗಳ ಅಗತ್ಯತೆಯನ್ನು ಪೂರ್ಣವಾಗಿ ಅಲ್ಲಗಳೆಯಲಾಗುವುದಿಲ್ಲ ಎಂಬುದನ್ನು ತೋರಿಸುತ್ತದೆ.

ಪಿಜಿನ್ ಮತ್ತು ಕ್ರಿಯೋಲ್‌ಗಳು ಜಗತ್ತಿನಾದ್ಯಂತ ಇವೆ. ಸಾಮಾನ್ಯವಾಗಿ ಇಂತಹ ಕಡೆ ಹೆಚ್ಚು ಜನಪ್ರಿಯವಾದವುಗಳಷ್ಟೇ ಬೆಳಕಿಗೆ ತರಲಾಗುತ್ತದೆ. ಹೊಸ ಪಿಜಿನ್ ಮತ್ತು ಕ್ರಿಯೋಲ್‌ಗಳಿಗಾಗಿ ಇರುವ ಒಂದು ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ. ಅದರೊಂದಿಗೆ ಮಧ್ಯಕಾಲೀನ ಇಂಗ್ಲಿಷ್, ಆಫ್ರಿಕಾ ಭಾಷೆ ಹಾಗೂ ಇತರ ಭಾಷೆಗಳು ಅದರ ಆರಂಭಿಕ ಹಂತದಲ್ಲಿ ಪಿಜಿನ್ ಮತ್ತು ಕ್ರಿಯೋಲ್ ಪ್ರಕ್ರಿಯೆಗಳಿಗೆ ಒಳಗಾಗಿವೆಯೇ ಎಂಬ ಚರ್ಚೆಗಳು ನಡೆಯುತ್ತವೆ.

ಸರಳತೆ ಮತ್ತು ಪಿಜಿನ್ ಪ್ರಕ್ರಿಯೆ : ಪಿಜಿನ್‌ಗೆ ಸಂಬಂಧಿಸಿದ ವ್ಯಾಖ್ಯಾನದ ಇತಿಮಿತಿ ಏನೇ ಇರಲಿ, ಸರಳತೆಗೆ ಸಂಬಂಧಿಸಿದ ಅದರ ಗುಣವನ್ನು ಕಳೆದ ಒಂದು ಶತಮಾನದಿಂದೀಚೆಗೆ ಬಹುಮುಖ್ಯವಾದುದೆಂದೇ ಪರಿಗಣಿಸಲಾಗಿದೆ. ಅಲ್ಪ ಪ್ರಮಾಣದ ಪದ ಸಂಪತ್ತು, ಪ್ರಾತ್ಯಯಿಕ ಆಕೃತಿಮಾಗಳಲ್ಲಿ ಕಡಿತ ಇಲ್ಲವೇ ನಿರಾಕರಣೆ, ವ್ಯಂಜನ ಗುಚ್ಚಗಳ ದೂರೀಕರಣ, ಸ್ಪಷ್ಟವಾದ ಧ್ವನಿಮಾ ಗುಚ್ಛಗಳು, ವಾಕ್ಯ ರಚನೆಯ ನಿಯಮಾವಳಿಯಲ್ಲಿ ನಿರ್ದಿಷ್ಟ ಮತ್ತು ಕಡಿಮೆ ಪ್ರಮಾಣದಲ್ಲಿ ಶೈಲೀಕೃತ ಸ್ತರಗಳು ಪಿಜಿನ್ ಭಾಷೆಯ ಪ್ರಾಥಮಿಕ ಲಕ್ಷಣಗಳೆನ್ನಬಹುದು. ಮೊದಲ ಹಂತದಲ್ಲಿ ಅಂದರೆ ಪಿಜಿನ್ ರೂಪುಗೊಳ್ಳುವ ಪೂರ್ವದಲ್ಲಿ (ಕೆಲವು ಸಲ ಇದನ್ನು ಅರೆಭಾಷೆ – Jargon – ಪಿಜಿನ್ ಪೂರ್ವ ಎಂದೂ ಕರೆಯುವುದಿದೆ) ಕೆಲವೊಂದು ಭಾಷೆಯಲ್ಲಿ ಕೇವಲ 50 ರಿಂದ 100 ಪದಗಳಲ್ಲಿ ಇದ್ದದ್ದು ವರದಿಯಾಗಿದೆ. ಹೆಚ್ಚು ಅಭಿವೃದ್ದಿ ಹೊಂದಿದ ಪಿಜಿನ್‌ಗಳಲ್ಲಿ (ಉದಾ: ಪಪುವಾ ನ್ಯೂ ಗಿನಿಯಾದ ಹಿರಮೊಚು ಭಾಷೆ) ಹೊಸ ಪರಿ ಭಾಷೆಗಳನ್ನು ಹೇಳುವುದಕ್ಕೆ ವಾಕ್ಯಮಾದರಿಗಳನ್ನು ಬಳಸುವುದೂ ಇದೆ. ಉದಾಹರಣೆಗಾಗಿ ‘Pipe’ಗೆ Kuku ania ganna (ಸಾಹಿತ್ಯಕವಾಗಿ ಹೊಗೆ ತಿನ್ನುವ ವಸ್ತು) ‘matches’ಗೆ Cahi gabua gaana (ಸಾಹಿತ್ಯಕವಾಗಿ ಬೆಂಕಿ ಉರಿಸುವ ವಸ್ತು) ಇತ್ಯಾದಿ. 1860 ಮತ್ತು 1950 ರ ಕಾಲಘಟ್ಟದಲ್ಲಿ ಮಾತಾಡುತ್ತಿದ್ದ ಪಿಜಿನ್ ಫ್ರೆಂಚ್‌ನಲ್ಲಿ ವ್ಯಂಜನಗಳ ಗುಚ್ಛವನ್ನು ಸರಳೀಕರಿಸ ಲಾಗಿದೆ. ಲಿಂಗ, ವಚನ, ಸ್ಥಾನ ಮತ್ತು ಕಾಲ ಸೂಚಕ ಪದಗಳನ್ನು ಕೈ ಬಿಡಲಾಗಿದೆ. ಪ್ರತಿಯೊಂದು ಪಿಜಿನ್ ಭಾಷೆಯಲ್ಲಿಯೂ ಸಹಜವಾಗಿಯೇ ಈ ಪ್ರಕ್ರಿಯೆ ಕಂಡುಬರುತ್ತದೆ.

ಶಕ್ರವಾದ ಇಲ್ಲವೇ ಮನ್ನಣೆ ಪಡೆದ ಇತರ ಭಾಷೆಗಳನ್ನಾಡುವ ಕೆಳಸ್ತರದ ಭಾಷಿಕರಿಗೆ, ಪಿಜಿನ್ ಇನ್ನಷ್ಟು ಸರಳೀಕರಣದ ಹಾದಿಯನ್ನು ತೆರೆಯುತ್ತದೆ ಎನ್ನಲಾಗಿದೆ. ಇದು ಕೆಲವು ಮಟ್ಟಿಗೆ ಸರಿಯಾದುದಾದರೂ ಸಾರ್ವತ್ರಿಕ ವಾದುದೇನಲ್ಲ. ಸಾಮಾನ್ಯವಾಗಿ ಪಿಜಿನ್ನರು ಕೆಳಹಂತದ ಭಾಷಿಕರು ಮೇಲ್ ಹಂತದ ಭಾಷಿಕರೊಡನೆ ಸಂಭಾಷಣೆಗಾಗಿ ಬಳಸುತ್ತಾರೆ. ಆಗ ಆ ಭಾಷೆಯಲ್ಲಿ ಮೇಲ್ ಹಂತದ ಭಾಷೆಯ ಲಕ್ಷಣಗಳಿರುವುದಿಲ್ಲ. ಅದೇ ವೇಳೆಗೆ ಮೇಲ್ ಹಂತದ ಭಾಷಿಕರಿಂದ ಕೆಳಹಂತದ ಭಾಷಿಕರ ‘ಸರಳೀಕರಣ’ದ ಬಗೆಗೆ ಮಾತಾಡುವಾಗ ಅದು ಐತಿಹಾಸಿಕ ಬೆಳವಣಿಗೆಗೆ ಸಂಬಂಧಿಸಿದಾಗಿರುತ್ತದೆಯೇ ಹೊರತು ಮಾನಸಿಕ ಪ್ರಕ್ರಿಯೆಗಳ ಬಗೆಗಿನ ಈ ಸಂಗತಿಯಲ್ಲ. ಥಾಮಸೆನ್ ಮತ್ತು ಕೌಫ್‌ಮನ್ ಹಾಗೂ ಮತ್ತಿತರು ಹೇಳುವಂತೆ ಈ ಭಾಷಿಕರು ಪಿಜಿನ್‌ಗೊಳ್ಳುವ ಹಂತದಲ್ಲಿ ‘ಕಡಿತಗೊಂಡ’ ರೂಪಗಳ ಬಗೆಗೆ ಯೋಚಿಸಿರುವು ದಿಲ್ಲ. ಮೊದಲ ಭಾಷೆಯನ್ನು ಪಡೆಯುವ ಸಂದರ್ಭದಲ್ಲಿ ಸಾಂದರ್ಭಿಕ ತಂತ್ರವಾಗಿ ತಮಗೆ ಅಪರಿಚಿತವಾದ ರಚನೆಗಳ ಬಗೆಗೆ ಗಮನ ಕೊಡಲಾಗುವು ದಿಲ್ಲ. ಈ ಕಾರಣದಿಂದಲೇ ಪಿಜಿನ್‌ಗಳಲ್ಲಿ ಕೆಲವೊಂದು ವ್ಯಾವಹಾರಿಕವಾದ ರಚನೆಗಳು ಮಾತ್ರ ಇರುತ್ತವೆ.

ಕೆಲವೊಮ್ಮೆ ‘ಸರಳತೆ’ಯಲ್ಲಿ ಕೆಳಕಂಡಂತಹ ಪ್ರಭಾವವು ಸಕಾರಣವಾದು ದೆಂಬುದಕ್ಕೆ ಆಧಾರಗಳಿವೆ. ಅಂತಹ ಒಂದು ಉದಾಹರಣೆಯು ಜಮೈಕನ್ ಕ್ರಿಯೋಲ್ ಇಂಗ್ಲಿಶ್‌ನಿಂದ ಕೊಡಬಹುದು. ಈ ಭಾಷೆಯಲ್ಲಿ ‘den’ ಎಂಬ ಪದವನ್ನು ಬಹುವಚನ ಮಾಡುವುದಕ್ಕೆ ಮೂರು ಬಗೆಯ ಬಹುವಚನಗಳನ್ನು ಬಳಸುತ್ತಾರೆ.

ಮಿಶ್ರಣಗಳು : ಪಿಜಿನ್‌ಗೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲವರು ‘ಮಿಶ್ರಣ’ದ ಪಾತ್ರವನ್ನು ಅಲ್ಲಗಳೆಯುತ್ತಾರಾದರೂ, ಕೆಲವೊಮ್ಮೆ  ಸರಳೀಕರಣ ವೊಂದನ್ನೇ ಹೇಳಲಾಗುವುದಿಲ್ಲ. ಅದರಲ್ಲಿಯೂ ಮೇಲ್‌ಸ್ತರದ ಭಾಷೆಯಿಂದ ಸ್ವರೂಪಾತ್ಮಕವಾಗಿ ಪ್ರಭಾವವಾಗಿರುವ ಅಥವಾ ಇಲ್ಲದಿರುವ ಭಾಷೆಗಳಲ್ಲಿ ಇದನ್ನು ಹೇಳಲಾಗುವುದಿಲ್ಲ. ನ್ಯೂ ಗಿನಿಯಾದ ಟಾಕ್ ಪಿಜಿನ್‌ನಲ್ಲಿ ಬಹು ವಚನವನ್ನು ಮಲೇಶಿಯಾದ ಭಾಷೆಯಿಂದ ಪಡೆದುಕೊಳ್ಳಲಾಗಿದೆ.

ಸಾಮಾನ್ಯವಾಗಿ ಪಿಜಿನ್ ಮತ್ತು ಕ್ರಿಯೋಲ್ ಪ್ರಕ್ರಿಯೆಯಲ್ಲಿ  ಪದಸಂಪತ್ತು ಮೇಲ್‌ಸ್ತರದ ಭಾಷೆಯಿಂದಲೂ, ಕೆಳಸ್ತರದ ಭಾಷೆಯಿಂದ ಧ್ವನಿಮಾ ಮತ್ತು ವ್ಯಾಕರಣದ ಅಂಶಗಳೂ ಸೇರ್ಪಡೆಯಾಗುತ್ತವೆ. ಥಾಮನ್ಸ್ ಮತ್ತು ಕಾಫ್ ಮನ್ (1988 : 201) ಅವರು ಈ ಮೂರು ತೆರನಾದ – ಪದಸಂಪತ್ತು, ವ್ಯಾಕರಣ ಮತ್ತು ಧ್ವನಿಮಾ – ಲಕ್ಷಣಗಳು ಯಾವುದೇ ಒಂದು ಒಂದು ಭಾಷೆಯಿಂದ ಬಂದವುಗಳಾಗಿರುವುದಿಲ್ಲ. ಅವುಗಳು ವಂಶಜನ್ಯವಲ್ಲದ ಬೆಳವಣಿಗೆ ಗಳು ಎಂದು ಹೇಳುತ್ತಾರೆ. ಇಂತಹ ಮಿಶ್ರಿತ ಭಾಷೆಗಳು ಭಾಷಾಮೂಲವಾದ ವರ್ಗೀಕರಣ ಮತ್ತು ಮರುರಚನೆಗೆ  ಅಸಾಧ್ಯವಾದವು ಎಂಬುದು ಅವರ ಅಭಿಪ್ರಾಯ. ಈ ಮೂಲಕ ಈ ಲೇಖಕರು ಐತಿಹಾಸಿಕ ಮತ್ತು ತೌಲನಿಕ ಭಾಷಾ ವಿಜ್ಞಾನ ಕ್ಷೇತ್ರಗಳಿಗೆ ಸವಾಲು ನೀಡಿದ್ದಾರೆ.

ಪಿಜಿನ್ಗಳ ಲಕ್ಷಣಗಳು : ಸರಳ ಧ್ವನಿಮಾಗಳು : ಶಿಷ್ಟ ಭಾಷೆಗೆ ಹೋಲಿಸಿಕೊಂಡರೆ ಕೆಲವೇ ಕೆಲವು ಧ್ವನಿಮಾಗಳು ಪಿಜಿನ್ ಭಾಷೆಯಲ್ಲಿರುತ್ತವೆ. ಅನುನಾಸಿಕ ಮತ್ತು ಸಂವೃತ ಪೂರ್ವ ಸ್ವರಗಳು ಇರುವುದಿಲ್ಲ. ಹಾಗೆಯೇ ದಂತ್ಯ ಮತ್ತು ಪಾರ್ಶ್ವಿಕ ಘರ್ಷ ಹಾಗೂ ಅನುಘರ್ಷಗಳು ಕಂಡುಬರುವುದಿಲ್ಲ.

ಸಂಕ್ಷಿಪ್ತ ಪದಸಂಪತ್ತು : ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಪದ ಸಂಪತ್ತು ಇರುತ್ತದೆ. ಸಾಮಾನ್ಯವಾಗಿ ಈ ಪದ ಸಂಪತ್ತು ಸಾಮಾಜಿಕವಾಗಿ ಮನ್ನಣೆ ಪಡೆದ ಭಾಷೆಯಿಂದ ಬಂದಿರುತ್ತದೆ. ಇಂಗ್ಲಿಶ್ ಆಧಾರಿತವಾದ ಅನೇಕ ಪಿಜಿನ್‌ಗಳಲ್ಲಿ ಪ್ರತಿಶತ 90 ಪದಸಂಪತ್ತು ಇಂಗ್ಲಿಶ್ ಭಾಷೆಯಿಂದ ಬಂದಿರುತ್ತದೆ.

ಉದಾ:

English Kamtok Tok Pigin
arm, hand han ham
back, riturh bak bak (im)
become pregnant getbele gatim bel
blood bold blut
come kam kam
give gif gifim
go go go

 

ಹೆಚ್ಚಿನ ಪದಗಳು ನಾನಾರ್ಥಗಳನ್ನು ಹೊಂದಿರುತ್ತವೆ. ಉದಾ. ಕಾಮ್‌ಟಾಕ್‌ನಲ್ಲಿ hai (hear) ಎಂದರೆ ಕೇಳು (hear) ಪ್ರಜ್ಞೆ (sense)  ತಿಳಿಯುವಿಕೆ (understand) ಎಂದೆಲ್ಲ ಅರ್ಥ ಬರುತ್ತದೆ.

ಹೆಚ್ಚಿನ ಪದಗಳಲ್ಲಿ ಬಹು ಕ್ರಿಯಾತ್ಮಕತೆ ಇರುತ್ತದೆ. ಉದಾ. ಕಾಮ್‌ಟಾಕ್‌ನಲ್ಲಿ ಗಮನಿಸಬಹುದು. bad (L bad) ಎಂಬ ಪದದ ವಿವಿಧ ಕಾರ್ಯ ನಿರ್ವಹಣೆಯನ್ನು ಹೀಗೆ ಗುರುತಿಸಬಹುದು.

ನಾಮವಿಶೇಷಣ : tu bad pikin (two bad children)

ನಾಮಪದ : wi no laik dis kain bad (we do not like this kind of badness)

ಕ್ರಿಯಾವಿಶೇಷಣಕ್ಕಿಂತ ಪದವಾಗಿ ಬದಲಾವಣೆಯಾಗಿ : a Laikam bad  (I like it very much)

ಕ್ರಿಯಾನಾಮ ವಿಶೇಷಣವಾಗಿ : I Gu bad  (His bery Good)

ನಾಮವಿಶೇಷಣ ಕ್ರಿಯಾಪದವಾಗಿ : Di pikin bad (The hild is bad)

ಅವಧಾರಣೆಯನ್ನು ದ್ವಿರುಕ್ತಿಯ ಮೂಲಕ ಸೂಚಿಸಲಾಗುತ್ತದೆ.

ಉದಾ:

Kamkot Big ದೊಡ್ಡದು big ಬಹುದೊಡ್ಡದು
Petit negre Gran ದೊಡ್ಡದು Grangran ಬಹು ದೊಡ್ಡದು

ನಾಮ ಪ್ರತ್ಯಯಗಳು ಬಹಳ ಕಡಿಮೆ ಸಂಖ್ಯೆಯಲ್ಲಿರುತ್ತವೆ. ಕೆಲವೊಮ್ಮೆ ಅವು ಒಂದು ಅಥವಾ ಎರಡು ಮಾತ್ರ ಇರಬಹುದು. ಸಾಮಾನ್ಯವಾಗಿ ಅವು ಸ್ಥಾನ ಸೂಚಕ ಇಲ್ಲವೇ ಸಂಬಂಧವನ್ನು ಹೇಳುತ್ತವೆ.

ಉದಾ:

Mi Stei Longmobsi’ (I live in port moreshhby)

haus bilong mi (My house)

house belong wanpelatheri (A women’s house)

ಪದಚ್ಛೇದಗಳು ಪದಬಂಧದಿಂದ ಅರ್ಥವನ್ನು ಪಡೆಯುತ್ತವೆ.

ಉದಾ:

big ai (big + eye) – grand, greedy

drai ai (dry + eye) – brave, bravery

ಪದ ಸಂಯೋಜನೆಯು ಕ್ಲಿಷ್ಟಕರವಾಗಿರುತ್ತದೆ. ಸಾಮಾನ್ಯವಾಗಿ ಅದು ಈ ರೀತಿಯಲ್ಲಿರುತ್ತದೆ. ಉದಾ: ಕಾಮ್‌ಟಾಕ್

Las nait wi bin papa go house

Last night we saw (visited) our father in his house

ಅಂತರ್ಗಮಕ ಪ್ರತ್ಯಯಗಳು (ಇನ್‌ಫ್ಲೆಕ್ಸ್‌ನ್) ಕಡಿಮೆಯಾಗಿರುತ್ತವೆ ಅಥವಾ ಇರುವುದೇ ಇಲ್ಲ. ಉದಾ:

Kamtok Tok pigin English
wom man wompela man one man
to man tu pela man two man
a go mi go i go
i go mi go he\ she \ it goes
wi go mipela go we go
yu bin go yo go pinis you (sg) went
wuna go go bai yupela go you(pl) will go
a go go bai mi go shall I go

 

ನಿರಾಕರಣೆಯನ್ನು ಮಾಡುವಾಗ ಯಾವಾಗಲೂ ನಿಷೇಧ ಸೂಚಕ ಪದವನ್ನು ಕ್ರಿಯಾಪದದ ಮೊದಲಿಗೆ ಸೂಚಿಸಲಾಗುತ್ತದೆ. ಉದಾ:

kamtok tok pigin English
kam kam come
no kam No kam don’t come
ino kam Emino kam
He isn’t coming (hasn’t come)    

 

ಬಹುರೀತಿಯ ನಿರಾಕರಣೆಯ ಅವಧಾರಣೆಯ ಸೂಚಕವಾಗಿರುತ್ತದೆ.

ಉದಾ:

No man no link mi no smol. ( Nobody likes me at all)

ಪಿಜಿನ್ ಕ್ರಿಯೋಲ್ ಆದಾಗ ಅದರ ಸರಳತೆಯು ಮರೆಯಾಗಿ ಅದು ಮಾತೃಭಾಷೆಯಾಗುತ್ತದೆ. ಈ ಮಾತೃ ಭಾಷೆಯು ಅದರ ಭಾಷಿಕರ ಭಾಷಿಕ ಅಗತ್ಯವನ್ನು ಪೂರೈಸಲು ಶಕ್ತವಾಗುತ್ತದೆ. ಅಂತೆಯೇ ಪದಸಂಪತ್ತು ಹೆಚ್ಚುತ್ತದೆ. ಪದಗಳಿಗೆ ಇರುವ ನಾನಾರ್ಥಗಳು ಇಲ್ಲವಾಗುತ್ತದೆ. ಹೊಸ ಪ್ರತ್ಯಯಗಳು ಸೇರ್ಪಡೆಯಾಗುತ್ತವೆ. ಹಾಗೆಯೇ ಹೆಚ್ಚಾಗಿ ಸಂದರ್ಭಕ್ಕೆ ಅಧೀನವಾಗದ ವಾಕ್ಯರಚನೆ ಬೆಳೆಯುತ್ತದೆ.

ಪಿಜಿನ್ನಿನ ಮೊದಲ ಹಂತ : ಪದ ಸಂಪತ್ತು ಪಿಜಿನ್ನಿನ ಬಹುಮುಖ್ಯವಾದ ಅಗತ್ಯವಾಗಿರುತ್ತದೆ. ಧ್ವನಿಮಾ ವ್ಯವಸ್ಥೆಯು ಅನಿಯತವಾಗಿರುತ್ತದೆ. ಅಥವಾ ಕೆಲವೊಮ್ಮೆ ಇರುವುದೇ ಇಲ್ಲ. ಪದದ ಅನುಕ್ರಮಣಿಕೆಯಲ್ಲಿ ಅಸ್ಥಿರತೆ ಯಿರುತ್ತದೆ. ಕಡಿತಗೊಳ್ಳುವಿಕೆಯು ಕೆಲವೊಂದು ಚಿಕ್ಕ ಚಿಕ್ಕ ಪದಗಳೊಂದಿಗೆ ಎದ್ದು ಕಾಣುವ ಲಕ್ಷಣವಾಗಿರುತ್ತದೆ. ಇದಕ್ಕೆ ಉದಾಹರಣೆ ಯಾಗಿ ಬಟ್ಲರ್ ಇಂಗ್ಲಿಷ್ ಎಂದು ಕರೆಯಲಾಗುವ ಭಾರತೀಯ ಇಂಗ್ಲಿಶ್ ಭಾಷೆಯ ಉದಾಹರಣೆಯನ್ನು ಕೊಡಬಹುದು. I poor boy(I’m a poor boy). I no go Jesus (I won’t go to heaven) ಇತ್ಯಾದಿಗಳು. ಸರಳೀಕರಣ ಕೂಡ ಸರ್ವೇ ಸಾಮಾನ್ಯವಾದುದೇ. ಇದು ಎಲ್ಲ ವಿಧದ ಕ್ರಿಯಾಪದಗಳಿಂದಲೂ ‘is’ ಎನ್ನುವ ಪ್ರತ್ಯಯವನ್ನು ಆಗಾಗ ಹಚ್ಚುವುದರ ಮೂಲಕ ಕಾಣಿಸಿಕೊಳ್ಳುತ್ತದೆ. ಉದಾ: There is so many people no madam (There are so many people aren’t there, madam)  ಹಾಗೆಯೇ ‘ಸರ್ವೇ ಸಾಧಾರಣ’ಗೊಳಿಸುವ ಲಕ್ಷಣ ಕೂಡ ಕಂಡುಬರುತ್ತದೆ. ಇದು ‘ing’ ಮುಂತಾದ ಕೆಲವು ಸೂಚಕ ಪ್ರತ್ಯಯಗಳನ್ನು ಅಗತ್ಯಕಿಂತ ಹೆಚ್ಚಾಗಿ ಕ್ರಿಯಾ ಪದಾಂತ್ಯವಾಗಿ ಬಳಸುವುದರಲ್ಲಿ ಕಂಡು ಬರುತ್ತದೆ. ಉದಾ: After I travelling India (Afterwards I travelled around India) ಹಾಗೆಯೇ ವಾಕ್ಯವೊಂದರ ಆರಂಭದ ಭಾಗದಲ್ಲಿ ‘is’ ಎನ್ನುವ ಪದವನ್ನು ಆದ್ಯತೆಯಿಂದ ಬಳಸುವುದು. ಉದಾ: Is only me father and one brother (I have only  one father and one brother) ಅಂತೆಯೇ ಪ್ರಸ್ತುತ ಇರುವ ಭಾಷಾ ನಿಯಮಾವಳಿಗಳನ್ನು ಮರು ವ್ಯಾಖ್ಯಾನ ಗೊಳಿಸುವಂತಹ ಲಕ್ಷಣಗಳು ಕೂಡ ಪಿಜಿನ್‌ಗಳಲ್ಲಿ ಕಂಡು ಬರುತ್ತವೆ. ಅಂತಹದರಲ್ಲಿ ‘been’ ಭೂತಕಾಲ ಸೂಚಕ ಪ್ರತ್ಯಯವನ್ನು ಅಪರೂಪಕ್ಕೆ ಬಳಸುವ ನಿದರ್ಶನಗಳಲ್ಲಿ ಕಂಡುಬರುತ್ತವೆ. ಉದಾ: I been working lots of memsahib (I worked for lots of European ladies) ಇದಕ್ಕೆ ಇನ್ನೊಂದು ಉದಾಹರಣೆಯೆಂದರೆ ‘all’ ಪದವನ್ನು ಬಹುವಚನ ಸರ್ವನಾಮವಾಗಿ ಬಳಸುವುದು: All is take a nail (They (all) took a nail)

ಪಿಜಿನ್ನಿನ ಮೊದಲ ಹಂತದಲ್ಲಿ ಲಂಬಾಂತರ ಪ್ರಭಾವವಿರುತ್ತದೆ. ಅಂದರೆ ವಿದೇಶಿಯರು ಕೆಳಹಂತದವರೊಡನೆ ಇದನ್ನು ಬಳಸುತ್ತಾರೆ. ಮತ್ತು ಅದೇ ರೀತಿ ಕೆಳಹಂತದವರು ವಿದೇಶಿಯರೊಡನೆ ಮಾತಾಡುತ್ತಿರುತ್ತಾರೆ. ಆಗ ಭಾಷೆಯೊಂದು ಪಿಜಿನ್ ರೂಪದಲ್ಲಿ ಜನ್ಮ ತಾಳುತ್ತಿರುತ್ತದೆ. ಅದರ ಮುಂದಿನದು ಪಿಜಿನ್ ಸದೃಢಗೊಂಡ ಹಂತ. ಈ ಹಂತದಲ್ಲಿ ಸಮಾನ ಹಂತದವರು ಪರಸ್ಪರ ಮಾತಾಡಿಕೊಳ್ಳುತ್ತಾರೆ. ಇದರೊಂದಿಗೆ ಈ ಹಂತದಲ್ಲಿ ಈ ಭಾಷಿಕರು ಮೂಲ ಭಾಷೆಯ ಮಾದರಿಯಿಂದ ದೂರ ಸರಿದಿರುತ್ತಾರೆ. ಆದರೂ ಲಂಬಾಂತರವು ಅಷ್ಟೊಂದು ಅವಶ್ಯಕತೆಯಾದುದಲ್ಲಿ ಎನ್ನುವುದು Chihook Jargon ಮತ್ತು Russamork ಮೊದಲಾದ ಭಾಷೆಗಳ ಅಧ್ಯಯನದಿಂದ ತಿಳಿದು ಬಂದಿದೆ.

ಪಿಜಿನ್ನಾಗುವ ಮೊದಲ ಹಂತವೆಂದರೆ, ಏಕಾಏಕಿ ಭಾಷೆಯೊಂದು ಸೃಷ್ಟಿ ಯಾಗುವುದಿಲ್ಲ ಎಂಬುದರ ಸ್ಪಷ್ಟ ಸೂಚನೆಯೇ ಆಗಿದೆ. ಈಗಾಗಲೇ ಹೇಳಿರುವ ಕಡಿತಗೊಳ್ಳುವಿಕೆ, ಸರಳೀಕರಣ ಮತ್ತು ಮರುವ್ಯಾಖ್ಯಾನವೇ ಮೊದಲಾದ ಸರಳ ನಿಯಮಾವಳಿಗಳು ಪಿಜಿನ್ ಸದೃಢಗೊಳ್ಳುವ ಹಂತದಲ್ಲಿ ಮಾತ್ರ ಕಂಡುಬರುತ್ತವೆ. ಉದಾಹರಣೆಗೆ ಪಿಜಿನ್ನಿನಲ್ಲಿ ಅನೇಕ ನಾಮಪದಗಳು a ನಿಂದ ಅಂತ್ಯಗೊಳ್ಳುತ್ತವೆ; Silka cherring fisha (fish) ಹಾಗೆಯೇ ಅನೇಕ ಕ್ರಿಯಾಪದಗಳು on ನಿಂದ ಕೊನೆಗೊಳ್ಳುತ್ತವೆ. ಉದಾ: drikkon (drink), kopon (buy) slipon (sleep) ಎರಡು ಭಾಷೆಗಳು ಪರಸ್ಪರ ಸೇರಿಕೊಂಡಾಗ ಎರಡೂ ಭಾಷೆಗೂ ಸಾಮಾನ್ಯವಾದ ಲಕ್ಷಣಗಳು ಉಳಿಯುತ್ತವೆ. ವಿಶಿಷ್ಟವಾದವುಗಳು ಕೈಬಿಟ್ಟು ಹೋಗುತ್ತವೆ. ಪ್ರಾರಂಭದ ಪಿಜಿನ್ ಪ್ರಕ್ರಿಯೆಯಲ್ಲಿ ಕಡಿತ, ಸರಳೀಕರಣ ಮತ್ತು ಸರ್ವೇ ಸಾಧಾರಣ – ಈ ಗುಣ ಲಕ್ಷಣಗಳು ಸಾರ್ವತ್ರಿಕವಾಗಿರುವಂತೆ ಮರು ವ್ಯಾಖ್ಯಾನ ಅಷ್ಟೊಂದು ಕಂಡುಬರುವುದಿಲ್ಲ.

ಪಿಜಿನ್ ಮುಂದಿನ ಹಂತ : ಈಗಾಗಲೇ ಹೇಳಿರುವಂತೆ ಪಿಜಿನ್ನೆನ್ನುವುದು ವಿದೇಶೀ ಭಾಷೆಯನ್ನು ಕಲಿಯುವ ಸಂದರ್ಭದಲ್ಲಿ ಉಂಟಾಗುವ ಭಾಷಿಕ ಕ್ರಿಯೆಯಾಗಿದೆ. ಹೀಗಾಗಿ ಅದರ ಸದೃಢತೆ ಹಾಗೂ ವಿಸ್ತೃತೆಗೆ ಸಂಬಂಧಿಸಿದಂತೆ ಹೆಚ್ಚಿನವರು ಗಮನ ನೀಡುವುದಿಲ್ಲ. ಅದೇನಿದ್ದರೂ ಕ್ರಿಯೋಲ್ ಹಂತದಲ್ಲಿ ಮಾತ್ರ ಎಂಬುದು ಅಂತಹ ವಿದ್ವಾಂಸರ ಅಭಿಪ್ರಾಯ.

ಆದರೆ ಪಿಜಿನ್‌ಗಳಲ್ಲಿ ಕೆಲವೊಂದು ಅಲ್ಪ ಪ್ರಮಾಣದಲ್ಲಿ ಭಾಷಿಕ ಲಕ್ಷಣಗಳನ್ನು ತೋರ್ಪಡಿಸುತ್ತದೆ. ಟಾಕ್ ಪಿಜಿನ್‌ಗೆ (ಪಪುನಾ ನ್ಯೂಗಿನಿಯಾ) ಸಂಬಂಧಿಸಿ ನಡೆದ ಅಧ್ಯಯನದಲ್ಲಿ ಅದು ಸದೃಢತೆ ಮತ್ತು ವಿಸ್ತೃತೆಯನ್ನು ಪಡೆದಿರುವುದು ಸ್ಪಷ್ಟವಾಗಿದೆ. ಒಂದು ಶತಮಾನದ ಕಾಲಾವಧಿಯಲ್ಲಿ ಅದು ಸ್ಪಷ್ಟವಾಗಿ ಆಕರ್ಮಕ ಮತ್ತು ಕ್ರಿಯಾಪದ ಮತ್ತು ಸಕರ್ಮಕ ಕ್ರಿಯಾಪದಗಳನ್ನು ಹೊಂದಿತ್ತು. ಹಾಗೆಯೇ ಅದು ಮೊದಲ ಹಂತದ ಪೂರಕ ಕ್ರಿಯಾಪದಗಳನ್ನು ಹೊಂದಿತ್ತು. ಅದರಲ್ಲಿ ಸರಳವಾದ ಪೂರಕ ವಾಕ್ಯ ಬಂಧಗಳೂ ಇದ್ದವು.

ಇದು ಕೇವಲ ಟಾಕ್‌ಪಿಜಿನ್‌ಗೆ ಮಾತ್ರ ಸಂಬಂಧಿಸಿದುದಲ್ಲ. ಜಗತ್ತಿ ನಾದ್ಯಂತ ಅನೇಕ ಪಿಜಿನ್‌ಗಳು ಈ ರೀತಿ ಸದೃಢತೆಯಲ್ಲಿರುವುದು ಅನಂತರ ಬೆಳಕಿಗೆ ಬಂದಿದೆ. ಒಟ್ಟಿನಲ್ಲಿ ಪಿಜಿನ್‌ಗಳು ಸದೃಢತೆ ಪರಸ್ಪರ ಏಕರೂಪೀಯ ಮತ್ತು ಸ್ಪಷ್ಟವಾದ ವಿಸ್ತೃತವಾಗಿರುವುದರೊಂದಿಗೆ ಅವುಗಳನ್ನು ಜನ ಎರಡನೇ ಭಾಷೆಯಾಗಿ ಬಳಸುತ್ತಿರುವುದನ್ನು ಕಾಣಬಹುದು. ಆದರೆ ಅದಕ್ಕೆ ಮಾತೃ ಭಾಷಿಕರು ಮಾತ್ರ ಇರುವುದಿಲ್ಲ.

ಇದರೊಂದಿಗೆ ಮರುವ್ಯಾಖ್ಯಾನದ ಕುರಿತಾಗಿಯೂ ಗಮನಹರಿಸುವುದು ಉಚಿತವಾಗಿದೆ. ಈ ಪ್ರಕ್ರಿಯೆಯು ಒಂದು ಸ್ವತಂತ್ರವಾದ ವ್ಯಾಕರಣ ಘಟಕವನ್ನು ಅವಲಂಬಿತ ಹಂತಕ್ಕೆ ತರುವುದೇ ಆಗಿದೆ. ಉದಾ: ಟಾಕ್ ಪಿಜಿನ್‌ನಲ್ಲಿ ಇಂಗ್ಲಿಷ್‌ನ ‘belong’ ಪದವು ‘bilong’ ಎಂದರೆ ‘of’ ಎನ್ನುವುದಕ್ಕೆ ಪರ್ಯಾಯವಾಗಿ (mama bilong mi = my mother) ಬಳಕೆಯಾಗುತ್ತದೆ.

ಈ ಹಂತದಲ್ಲಿ ಅವಲಂಬಿತ ಭಾಷೆಯ ಪಾತ್ರವೂ ಬಹುಮುಖ್ಯವಾದ ಚರ್ಚೆಯಾಗುತ್ತದೆ. ಸಾಮಾನ್ಯವಾಗಿ ಮೊದಮೊದಲು ಅವಲಂಬಿತ ಭಾಷೆಯ ಪಾತ್ರವನ್ನು ನಗಣ್ಯವಾಗಿಯೇ ಪರಿಗಣಿಸಲಾಗಿತ್ತು. ಆದರೆ ಇದೀಗ ಈ ಪಾತ್ರವನ್ನು ಮಹತ್ವದ್ದೆಂದೇ ಗಮನಿಸಲಾಗಿದೆ. ಸಾಮಾನ್ಯವಾಗಿ ಅವಲಂಬಿತ ಭಾಷೆಯಿಂದ ನೇರವಾಗಿಯೇ ಸಮಾನಾರ್ಥಕಗಳನ್ನು ಈ ಹಂತದಲ್ಲಿ ಅನುವಾದಿಸಿಕೊಳ್ಳಲಾಗುತ್ತದೆ. ಉದಾಹರಣೆಗೆ ಟಾಕ್ ಪಿಜಿನ್‌ನಲ್ಲಿ ಕ್ರಿಯಾ ಸೂಚಕವಾಗಿ ಅರ್ಥ ರಹಿತವಾದ ‘i’ ಅನ್ನು ಕ್ರಿಯಾಪದದ ಮೊದಲಿಗೆ ಸೇರಿಸಲಾಗುತ್ತದೆ. ಉದಾ: (man i kam = the man came) ಇದು ಇಂಗ್ಲಿಶ್ ಎಂಬ ಇಂಗ್ಲಿಶ್‌ನ ಸರ್ವನಾಮ ಸೂಚಕವಾದ ಬದಲಿಗೆ ಇಂಗ್ಲಿಶೇತರ ಭಾಷೆಯಲ್ಲಿ ಬಳಸುವ ಜಾಯಮಾನಕ್ಕೆ ಸಂಬಂಧಿಸಿದಾಗಿದೆ. ಹೀಗೆ ಅವಲಂಬಿತ ಭಾಷೆಯೊಂದರ ರಾಚನಿಕ ಲಕ್ಷಣಗಳು ಮತ್ತು ಮೇಲ್‌ಸ್ತರದ ಭಾಷೆಯ ಅಡತಡೆಗಳ ನಡುವೆ ಒಂದು ಸಂವಾದ ಏರ್ಪಟ್ಟು ಕೊನೆಗೆ ಅದು ಮಾನವ ಸಹಜ ಭಾಷೆಗಳಿಗನುಗುಣವಾಗಿ ಒಪ್ಪಂದವೇ ಏರ್ಪಡುತ್ತದೆ.

ಸಾಮಾನ್ಯವಾಗಿ ಅಸ್ತಿತ್ವದಲ್ಲಿರುವ ಎಲ್ಲ ಪಿಜಿನ್‌ಗಳು ಈಗ ಹೇಳಿದಂತೆ ಏಕಸೂತ್ರಕ್ಕೆ ಅಳವಡುತ್ತದೆ. ಅದಕ್ಕೆ ಒಂದು ಕಾರಣ ವೆಂದರೆ ಭಾಷೆಯೊಂದ ರಲ್ಲಿರುವ ನಿರ್ಬಂಧಿತವಾದ ಪದ ರಚನೆ. ಹೀಗೆ ನಿರ್ಬಂಧಿತ ಪದರಚನೆಯಿರುವು ದರಿಂದ ಆಯ್ಕೆಗಳು ಕೆಲವು ಮಾತ್ರ ಇರುತ್ತವೆ. ಪ್ರತಿಯೊಂದು ಆಯ್ಕೆಯೂ ಮತ್ತೊಂದು ಪರಿಣಾಮವನ್ನು ಸೇರ್ಪಡೆಗೊಳಿಸುತ್ತದೆಯಲ್ಲದೆ ಆ ಮೂಲಕ ಇನ್ನಷ್ಟು ಸಾದೃಶ್ಯಗಳು ತಲೆದೋರುತ್ತವೆ. ಇನ್ನೊಂದು ಕಾರಣ, ಭಾಷೆಯಲ್ಲಿನ ಕೆಲವೊಂದು ಕ್ರಿಯೆಗಳು ಪ್ರಯೋಜನಕಾರಿಯಾಗಿರಬೇಕೆಂದು ಮಾನವರು ಬಯಸುವುದೂ ಆಗಿದೆ. ಉದಾಹರಣೆಗೆ ನಿರಂತರವಾದ ಕ್ರಿಯೆಗಳು ಮತ್ತು ಒಂದೇ ಒಂದು ಕ್ರಿಯೆಯ ನಡುವೆ ಭಾಷೆಯಲ್ಲಿ ವ್ಯತ್ಯಾಸವನ್ನು ಕಲ್ಪಿಸುತ್ತದೆ. ಇಂತಹ ವ್ಯತ್ಯಾಸಗಳು ಪ್ರತ್ಯೇಕವಾಗಿ ಬೇರೆ ಬೇರೆ ಪಿಜಿನ್‌ಗಳಲ್ಲಿ ಕಾಣಿಸಿ ಕೊಳ್ಳುತ್ತವೆ.

ಒಟ್ಟಿನಲ್ಲಿ ಪಿಜಿನ್‌ಗಳು ಸದೃಢ ಮತ್ತು ವಿಸ್ತೃತಗೊಳ್ಳಬಲ್ಲವೆಂಬುದನ್ನು ಸಾರಾಂಶ ರೂಪದಲ್ಲಿ ಹೇಳಬಹುದು. ಸಾಮಾನ್ಯವಾಗಿ ಪಿಜಿನ್‌ನಿಂದ ಕ್ರಿಯೋಲ್‌ಗೊಳ್ಳುವ ಪ್ರಕ್ರಿಯೆ ಉಂಟಾಗುತ್ತದೆ ಎಂಬುದನ್ನು ಅಕ್ಷರಶಃ ಒಪ್ಪಬೇಕಾಗಿಲ್ಲ. ಸ್ಥಳೀಯರಲ್ಲದ ಭಾಷಿಕರೇ ಪಿಜಿನ್‌ನನ್ನು ಸದೃಢಗೊಳಿಸಿ, ಮುಂದೆ ಕ್ರಿಯೋಲ್ ಭಾಷಿಗರು ಬೆಳೆಸುವುದಕ್ಕೆ ಅವಕಾಶ ಕಲ್ಪಿಸಿಕೊಡಬಹುದು.

ಕ್ರಿಯೋಲೀಕರಣ : ಸಾಮಾನ್ಯವಾಗಿ ಕ್ರಿಯೋಲೀಕರಣವು ಪಿಜಿನ್‌ನ ಪ್ರಥಮಾವಸ್ಥೆಯಿಂದ ನೇರವಾಗಿ ಉಂಟಾಗುವ ಪ್ರಕ್ರಿಯೆ ಎಂದು ಭಾವಿಸಲಾಗುತ್ತದೆ. ಮಕ್ಕಳೇನೋ ತಮ್ಮ ತಂದೆ ತಾಯಿಗಳಿಂದ ಕ್ರಿಯೋಲನ್ನು ಪ್ರಥಮ ಭಾಷೆಯಾಗಿ ಪಡೆಯಬಹುದು. ಆದರೆ ಸಾಮಾನ್ಯವಾಗಿ ಮಕ್ಕಳು ಕ್ರಿಯೋಲ್‌ನ ಜತೆಜತೆಗೇ ತಮ್ಮ ತಂದೆ ತಾಯಿಗಳಾಡುವ ಒಂದು ಅಥವಾ ಎರಡೂ ಭಾಷೆಗಳನ್ನು ಕಲಿಯಬಹುದು. ಬಹಳ ಅಪರೂಪಕ್ಕೆ ಮಗುವೊಂದು ಒಂದೇ ಒಂದು ಭಾಷೆಯನ್ನು ಕಲಿಯುವ ಅವಕಾಶವಿರುತ್ತದೆ. ಇಲ್ಲಿಯೂ ಮಗು ಏಕಾಏಕಿ ಒಂದು ಬಲಿಷ್ಠವಾದ ಜತೆಗಾರರ ಗುಂಪಿಲ್ಲದೆ ಭಾಷೆಯನ್ನು ಕಲಿಯುವುದಿಲ್ಲ ಎಂಬುದನ್ನು ಗಮನಿಸಬೇಕು. ಈಗ ಪಿಜಿನ್ ಮತ್ತು ಕ್ರಿಯೋಲ್ ಭಾಷಿಕರ ನಡುವಿನ ವ್ಯತ್ಯಾಸಗಳನ್ನು ಗಮನಿಸುವುದರ ಮೂಲಕ ಕ್ರಿಯೋಲೀಕರಣವನ್ನು ಹೆಚ್ಚು ಸ್ಪಷ್ಟಪಡಿಸಿಕೊಳ್ಳಬಹುದು.

1. ಕ್ರಿಯೋಲ್ ಭಾಷಿಗರು ಪಿಜಿನ್ ಭಾಷಿಗರಿಗಿಂತ ಹೆಚ್ಚು ವೇಗವಾಗಿ ಮಾತಾಡಬಲ್ಲರು. ಅದೇ ವೇಳೆ ಸತತವಾಗಿ ಉಚ್ಛಾರಗೊಳ್ಳುವ ಪದ ಸಂಬಂಧಗಳು ಧ್ವನಿಮಾ ವ್ಯವಸ್ಥೆಯಲ್ಲಿ ಕಡಿತಗೊಳ್ಳುತ್ತವೆ. ಉದಾಹರಣೆಗೆ ಟಾಕ್ ಪಿಜಿನ್ ಕ್ರಿಯೋಲ್ ಭಾಷಿಗರು ‘sare’ಗೆ sa, ‘long‘ಗೆ lo bilong ‘blo’ ಎಂಬ ರೀತಿಯಲ್ಲಿ ಕಡಿತಗೊಳಿಸುತ್ತಾರೆ. ಅದೇ ರೀತಿ ಆಖ್ಯಾತ ಪ್ರತ್ಯಯ ‘ಕಿ’ ಎಂಬುದು ಉನ್ನತ ಸ್ವರಗಳ ನಂತರ ಯಾವಾಗಲೂ ಕ್ಷೀಣವಾಗಿರುತ್ತದೆ. ಈ ರೀತಿಯ ವೇಗ ಮತ್ತು ಧ್ವನಿಮಾತ್ಮಕವಾದ ಕಡಿತಗಳು ವ್ಯಾಕರಣದ ಮೇಲೆ ಪರಿಣಾಮಕಾರಿಯಾಗಿರುತ್ತದೆ. ಉದಾಹರಣೆಗೆ ಕೆಲವೊಂದು ಸಲ ಮೇಲೆ ಹೇಳಿದ ‘i’ ಕಣ್ಮರೆಯಾಗುತ್ತದೆ. ಇನ್ನು ಕೆಲವು ಸಲ ಅದು ಮುಂದಿನ ಪದದ ಒಂದು ಭಾಗವಾಗಿ ಪರಿಗಣನೆಗೊಳ್ಳುತ್ತದೆ.

2. ಭಾಷೆಯ ಪದ ಸಂಪತ್ತು ಹೆಚ್ಚಾಗುತ್ತದೆ. ಇದು ಹೊಸ ಪದಗಳ ರಚನೆಯ ಮೂಲಕ ಮತ್ತು ಸ್ವೀಕರಣೆಯ ಮೂಲಕ ನಡೆಯುವ ಪ್ರಕ್ರಿಯೆಯಾಗಿದೆ. ಪಿಜಿನ್ ಹಂತದಲ್ಲಿ ಸುತ್ತು ಬಳಸಿ ಹೇಳುವ ನುಡಿಗಟ್ಟುಗಳು ಈಗ ಪದಸಂಪತ್ತಿಗೆ ವರ್ಗಾವಣೆಯಾಗುತ್ತವೆ. ಉದಾ: ಟಾಕ್ ಪಿಜಿನ್‌ನಲ್ಲಿ ‘man belong pait ’(An aggressive man, a man given to fighting) ಎಂಬುದು ಈಗ yaitman bun bilong baksait (backbone) ಎಂಬುದು ‘bakbun’ ಎಂದೂ ಆಗುತ್ತದೆ. ಅನೇಕ ಹೊಸ ಪದಗಳನ್ನು ಪಡೆದುಕೊಳ್ಳುವುದರ ಮೂಲಕ ಪದಸಂಪತ್ತನ್ನು ಹೆಚ್ಚಿಸಿಕೊಳ್ಳಲಾಗುತ್ತದೆ.

3. ಮೊದಲಿಗೆ ಇದ್ದ ಅನೇಕ ಪದಗಳನ್ನು ನಿಯಮ ರಹಿತವಾಗಿ ಬಳಸುವ ಪದ್ಧತಿಯು ನಿಧಾನಕ್ಕೆ ವರ್ಗೀಕೃತವಾಗುತ್ತದೆ. ಅಥವಾ ವರ್ಗೀಕರಣಗೊಳ್ಳುವ ಹಂತಕ್ಕೆ ಬರುತ್ತವೆ. ಪಿಜಿನ್ ಹಂತದಲ್ಲಿ ಟಾಕ್ ಪಿಜಿನ್ನಿನಲ್ಲಿ ‘bin’ ಪದವು ಐಚ್ಛಿಕವಾಗಿ ಸಾಂದರ್ಭಿಕವಾಗಿ ಭೂತಕಾಲದ ಸ್ಪಷ್ಟತೆಯಿಲ್ಲದೆ ಹೋದಾಗ ಬಳಕೆಯಾಗುತ್ತಿತ್ತು. ಆದರೆ ಕ್ರಿಯೋಲ್ ಮಾತಾಡುವ ಮೊದಲ ತಲೆಮಾರಿ ನಲ್ಲಿ ಅದು ನಿರಂತರವಾಗಿ ಅನಗತ್ಯವಾಗಿ ಬಳಕೆಯಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಇದನ್ನು ಮುಂದಿನ ತಲೆಮಾರು ಬಿಡಬಹುದೇನೋ.

4. ಅನಗತ್ಯವಾದ ಮಾದರಿಗಳನ್ನು ಈ ಹಂತದಲ್ಲಿ ಕೈ ಬಿಡಲಾಗುತ್ತದೆ. ಸಾಮಾನ್ಯವಾಗಿ ಪಿಜಿನ್ನಿನಲ್ಲಿ ಸಾಮಾನ್ಯ ಕ್ರಿಯೆಗಳನ್ನು ಅಭಿವ್ಯಕ್ತಿಸಲು ಅನೇಕ ಆರಂಭಿಕ ವಿಧಾನಗಳಿರುತ್ತವೆ. ಟಾಕ್ ಪಿಜಿನ್ನಿನಲ್ಲಿ ರೂಢಿಯನ್ನು ಹೇಳಲು ‘save’ ಎನ್ನುವ ಕ್ರಿಯಾಪದ ಪೂರ್ವ ಪ್ರತ್ಯಯ ಬಳಕೆಯಾಗುತ್ತದೆ. ಉದಾ: pikinini save kraic (The child habitually cries) ಅದರೊಂದಿಗೆ ಕ್ರಿಯಾಪದೋತ್ತರ ಸಾತತ್ಯ ಸೂಚಕ ಪದವೂ ಇರುತ್ತದೆ. ಉದಾ: pikininin i krai go (The child keeps on crying) ಕೆಲವೊಂದು ಕ್ರಿಯೋಲ್ ಭಾಷಿಕರಲ್ಲಿ ಈ ಕ್ರಿಯಾಪದೋತ್ತರ ಸೂಚಕವು ಅಪರೂಪಕ್ಕೆ ಬಳಕೆಯಾಗುತ್ತದೆ. ಹಾಗೆಯೇ ರೂಢಿ ಮತ್ತು ಸಾತತ್ಯ ನಡುವೆ ಅಂತರ ಹೊರಟು ಹೋಗಿ ಆ ಎರಡೂ ಸಂದರ್ಭದಲ್ಲಿಯೂ ಕ್ರಿಯಾಪದ ಪೂರ್ವ ಪ್ರತ್ಯಯ ‘sa’(save­ನಿಂದ ಬಂದಿದೆ) ಬಳಕೆಯಾಗುತ್ತದೆ.

5. ಸರಳ ವಾಕ್ಯ ರಚನೆಗಳು ಬೆಸೆದುಕೊಂಡು ಮಿಶ್ರಿತವೂ ಆಗಿ ಸಂಕೀರ್ಣ ವಾಕ್ಯ ರಚನೆಗಳುಂಟಾಗುತ್ತವೆ. ಟಾಕ್‌ಪಿಜಿನ್ನಿನಲ್ಲಿ olsem (thus)  ಪದವು ಸಕರ್ಮಕ ವಾಕ್ಯ ಸೂಚಕ ಪೂರ್ವ ಪದವಾಗುತ್ತದೆ. ಉದಾ: mari i toke olsem: yuni  mas kisim pis (the woman said: we must  get the fish) ಕ್ರಿಯೋಲ್‌ನಲ್ಲಿ ‘olsem’ ಸ್ಪಷ್ಟವಾಗಿ ಇಂಗ್ಲಿಶ್‌ನ that ಎಂಬ ವಿವರಾಣಾತ್ಮಕ ಸೂಚಕ ಪ್ರತ್ಯಯಕ್ಕೆ ಪರ್ಯಾಯ ಪದವಾಗುತ್ತದೆ. ಉದಾ: yu no some olsem mi sik ? (Don’t you know that he is ill?)

ಹೀಗೆ ನಿಧಾನವಾಗಿ ಪದ ಸಂಪತ್ತು ಹೆಚ್ಚಾಗುತ್ತದೆಯಲ್ಲದೆ ಕ್ರಿಯೋಲ್ ಒಂದೇ ಸಲ ವ್ಯವಸ್ಥಿತವಾದ ನಿಯಮಾವಳಿಗಳನ್ನು ಪಡೆದುಕೊಳ್ಳುತ್ತದೆ ಎಂದು ಭಾವಿಸಬೇಕಾಗಿಲ್ಲ. ಭಾಷೆಯಲ್ಲಿ ಶುದ್ದೀಕರಣದ ಕೆಲಸವು ತಲೆಮಾರಿನಿಂದ ತಲೆಮಾರುಗಳವರೆಗೆ ಸಾಗುತ್ತದೆ. ಆ ಮೂಲಕ ಹೊಸ ರಚನೆಗಳುಂಟಾಗಿ ಧ್ವನಿಮಾತ್ಮಕ ಕಡಿತವುಂಟಾಗುತ್ತದೆ. ಅಂತೂ ಕ್ರಿಯೋಲೀ ಕರಣವು ಭಾಷೆಯನ್ನು ಹೆಚ್ಚು ಸಮೃದ್ಧ, ಸ್ಪಷ್ಟ ಹಾಗೂ ಗಟ್ಟಿಗೊಳಿಸುತ್ತದೆ ಎಂಬುದರಲ್ಲಿ ಅನುಮಾನ ವಿಲ್ಲ. ಅನೇಕ ತಲೆಮಾರುಗಳ ಬಳಿಕ ಅದು ಯಾವುದೇ ಸಮೃದ್ಧವಾದ ಭಾಷೆಯೊಂದರಿಂದ ಬೇರ್ಪಡಿಸಲಾರದಷ್ಟು ಮೈದುಂಬಿಕೊಳ್ಳುತ್ತದೆ.

ಅಪಕ್ರಿಯೋಲೀಕರಣ: ಒಂದು ನಿರ್ದಿಷ್ಟವಾದ ಭೂ ಪ್ರದೇಶದಲ್ಲಿ ಮಾತಾಡುವ ಒಂದು ಮೂಲ ಕ್ರಿಯೋಲ್ ಭಾಷೆಯು ಒಂದು ಹಂತದಲ್ಲಿ ಹೆಚ್ಚು ಗೌರವಯುತವಾದ ಮೇಲ್‌ಸ್ತರದಿಂದ ಕೆಳಹಂತಕ್ಕಿಳಿಯುತ್ತದೆ. ಇದನ್ನು ಅಪಕ್ರಿಯೋಲೀಕರಣ ಎನ್ನುತ್ತಾರೆ. ಈ ಹಂತದಲ್ಲಿ ಕ್ರಿಯೋಲ್ (ಮೂಲ) ಭಾಷೆಯು ಜನಸಮೂಹದ ಭಾಷೆಯಾಗಿ ಉಳಿದರೆ, ಕೆಲವೇ ಕೆಲವರು ಗೌರವಾರ್ಹ ಕ್ರಿಯೋಲ್‌ನ್ನು ಮಾತ್ರ ಬಳಸತೊಡಗುತ್ತಾರೆ. ಇದನ್ನು ಬಿಕರ್ ಟನ್ ಎನ್ನುವ ವಿದ್ವಾಂಸರು ಹೀಗೆ ಸೂತ್ರೀಕರಿಸುತ್ತಾರೆ.

baselect misolect acrolect
ಮೂಲಭಾಷೆ ಮಧ್ಯಮಭಾಷೆ ಸಮೃದ್ಧಭಾಷೆ

ಕ್ರಿಯೋಲ್ ಭಾಷೆಯನ್ನೇ ‘ಮೂಲಭಾಷೆ’ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ಅದುವೇ ಮುಂದೆ ಸಮೃದ್ಧ ಭಾಷೆಯ ಹಂತಕ್ಕೆ ಏರುತ್ತದೆ. ಈ ಎರಡೂ ಕೊನೆಗಳ ನಡುವಿನ ಸ್ಥಿತಿಯೇ ಮಧ್ಯಮ ಭಾಷೆಯದು. ಇದು ಎರಡು ಪ್ರತ್ಯೇಕ ವ್ಯವಸ್ಥೆಯ ಹಂತಗಳಲ್ಲ. ಅದಕ್ಕಿಂತ ಮಿಗಿಲಾಗಿ ಇದು ಪಿಜಿನ್ ಮತ್ತು ಕ್ರಿಯೋಲ್‌ನ ನಡುವಿನ ಅವಚ್ಛೇದಿತ ಸ್ಥಿತಿಯೊಂದಾದರೆ, ಇನ್ನೊಂದು ಗೌರವಾರ್ಥದ ಹಂತ. ಈಗ ಸಮಸ್ಯೆಯಿರುವುದು ಈ ಎರಡರ ಮಧ್ಯೆ ಎಲ್ಲಿ ನಾವು ತೀಕ್ಷ್ಣವಾದ ಬಿರುಕನ್ನು ಪತ್ತೆ ಮಾಡಬಹುದು ಎಂಬುದರಲ್ಲಿಯೇ.

ಕೆಲವೊಮ್ಮೆ ಕ್ರಿಯೋಲೀಕರಣ ಮತ್ತು ಅಪಕ್ರಿಯೋಲೀಕರಣದ ನಡುವೆ ವ್ಯತ್ಯಾಸವೇ ಕಾಣದಿರುವುದೂ ಇದೆ. ಇಂತಹ ಸಂದರ್ಭದಲ್ಲಿ ಯಾವುದನ್ನು ಸ್ಪಷ್ಟೀಕರಿಸಿಕೊಳ್ಳಬೇಕೆಂಬುದೇ ಸಮಸ್ಯೆಯಾಗುತ್ತದೆ. ಉದಾ: ಮೇಲ್ ಸ್ತರದ ಕ್ರಿಯೋಲ್‌ನ ಪದಸಂಪತ್ತು ಅಪಕ್ರಿಯೋಲ್ ಹಂತದಲ್ಲಿಯೂ ಚಲಾವಣೆಯಲ್ಲಿ ಇರುತ್ತವೆ. ಏಕೆಂದರೆ ನಿಧಾನವಾಗಿ ಕ್ರಿಯೋಲ್ ಭಾಷಿಕರು ಸಾಮಾಜಿಕ ಪ್ರತ್ಯೇಕತೆಗಳು ಅಳಸಿ ಹೋಗುತ್ತಿರುವಂತೆ ತಮ್ಮ ಭಾಷೆಯನ್ನು ಶಿಷ್ಟಗೊಳಿಸು ವುದಕ್ಕೆ ತೊಡಗುತ್ತಲೇ ಇರುತ್ತಾರೆ. ಪರಿಣಾಮವಾಗಿ ಆಗಲೂ ಪದಸಂಪತ್ತು ಹೆಚ್ಚಾಗುತ್ತದೆ. ಉದಾಹರಣೆಗೆ ಟಾಕ್ ಪಿಜಿನ್‌ನಲ್ಲಿ ಇಂಗ್ಲಿಶ್‌ನ ‘because’ ಗೆ ಸಂವಾದಿಯಾಗಿ ‘bilong wanem’ ಎಂಬ ನುಡಿಗಳು ಇತ್ತು. ಆಡು ಸಾಮಾನ್ಯವಾಗಿ ಕ್ರಿಯೋಲ್ ಹಂತದಲ್ಲಿ ‘bikos’ ನಿಂದ ಸ್ಥಾನಪಲ್ಲಟ ವಾಗುತ್ತದೆ. ಕೆಲವರು ಇದನ್ನು ‘ಅಪಕ್ರಿಯೋಲ್’ ಎಂದೂ ಗುರುತಿಸುತ್ತಾರೆ. ಹಾಗಿದ್ದರೂ ನಿಜವಾದ ಕ್ರಿಯೋಲೀಕರಣ ಪ್ರಕ್ರಿಯೆಯು ಅದರ ಭಾಷಿಕರು ಕ್ರಿಯೋಲ್ ರೂಪಗಳ ನಿಜವಾದ ಕ್ರಿಯೆಯನ್ನು ಮರೆತಾಗಲೇ ಆರಂಭವಾಗು ತ್ತದೆ. ಟಾಕ್ ಪಿಜಿನ್ನಿನ ಭಾಷಿಕರು ‘sa’ ಪದದ ಒಗ್ಗಿಕೊಳ್ಳುವಿಕೆ ಎಂಬ ಅರ್ಥವನ್ನು ಮರೆತು ಅದನ್ನು ‘ರೂಢಿ’ಯ ಸೂಚಕವಾಗಿ ಬಳಸುತ್ತಾರೆ. ಹಾಗೆಯೇ ಅದನ್ನು ಅವರು ಭೂತಕಾಲದ ಘಟನೆಗಳನ್ನು ಸೂಚಿಸಲು ಮಾತ್ರ ಬಳಸುತ್ತಾರೆ. ಉದಾ: of sa karim mi to hans sik) (They carry me to the hospital) ನಿಧಾನಕ್ಕೆ ಕ್ರಿಯೋಲ್‌ನಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ. ಆದರೆ ತಳಹದಿ ಮರೆಯಾಗಿರುವುದಿಲ್ಲ. ಅದರ ಬದಲು ಹೆಚ್ಚು ಹೆಚ್ಚು ಪದಗಳು ಮೇಲ್ ಸ್ತರದಿಂದ ಸ್ವೀಕರಣೆಯಾಗುತ್ತವೆ. ಉದಾಹರಣೆಗಾಗಿ, ಟಾಕ್ ಪಿಜಿನ್ನಿನ ಅಪಕ್ರಿಯೋಲೀಕರಣದ ಭಾಷಿಕರು ಇಂಗ್ಲಿಶ್‌ನ ಬಹುವಚನ ಪ್ರತ್ಯಯ -s-ನ ಹೆಚ್ಚು ಮಾದರಿಗಳನ್ನು ಸಮೃದ್ಧವಾಗಿ ಕ್ರಿಯೋಲ್ ಭಾಷಿಗರಿಗಿಂತ ಮಿಗಿಲಾಗಿ ಬಳಸುತ್ತಾರೆ. ಬದಲಾವಣೆಯ ದೃಷ್ಟಿಯಿಂದ ಯಾವುದೇ ಭಾಷಾ ಸಂಪರ್ಕದ ಸ್ಥಿತಿಗಿಂತ ಹೆಚ್ಚು ಬದಲಾವಣೆ ಯೇನೂ ಕಂಡುಬರುವುದಿಲ್ಲ.

ಒಟ್ಟಿನಲ್ಲಿ ಸ್ಪಷ್ಟವಾಗಿ ಪಿಜಿನ್ನನ್ನು ಕ್ರಿಯೋಲ್‌ನಿಂದ ಬೇರ್ಪಡಿಸುವುದಕ್ಕೆ ಆಗುವುದಿಲ್ಲ. ಹಾಗೆಯೇ ಪಿಜಿನ್ನೀಕರಣ, ಕ್ರಿಯೋಲೀಕರಣ, ಅಪಕ್ರಿಯೋಲೀ ಕರಣ ಇವೆಲ್ಲವೂ ಒಂದನ್ನೊಂದು ಹೋಲುತ್ತವೆ. ಸಾಮಾನ್ಯವಾಗಿ ಅವುಗಳನ್ನು ಸಾಮಾನ್ಯವಾದ ಭಾಷಿಕ ಬದಲಾವಣೆಗಳಲ್ಲಿ, ಅದರಲ್ಲಿಯೂ, ಕಡಿತ ಸರಳೀಕರಣ, ಸರ್ವೇಸಾಧಾರಣೀಕರಣ ಮತ್ತು ಮರು ವ್ಯಾಖ್ಯಾನಗಳಲ್ಲಿ ಬಳಸಿ ಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ಅವು ಸ್ಪಷ್ಟವಾಗುವುದು ಆಯಾಯ ಪ್ರಕ್ರಿಯೆಗಳು ಪ್ರಾಯೋಗಿಕವಾಗುವಲ್ಲಿ. ಅಂದರೆ ಪಿಜಿನ್ನೀಕರಣದಲ್ಲಿ ಭಾಷಾಂಶಗಳು ಹೆಚ್ಚು ಕಡಿತಕ್ಕೆ ಒಳಗಾದರೆ ಕ್ರಿಯೋಲೀಕರಣದಲ್ಲಿ ಅತೀ ಭಾಷಾಂಶಗಳು ಹೆಚ್ಚು ಮರುವ್ಯಾಖ್ಯಾನಕ್ಕೆ ಒಳಗಾಗುತ್ತವೆ.

ಸಾಮಾನ್ಯ ಬೆಳವಣಿಗೆಯಲ್ಲಿ ಭಾಷೆಯು ಅನೇಕ ಆಯ್ಕೆಗಳೊಂದಿಗೆ ಮರುಹುಟ್ಟು ಪಡೆಯುತ್ತದೆ. ಹೀಗೆ ಬೆಳೆಯಲು ಭಾಷೆಯೊಳಗಡೆಯೇ ಅಥವಾ ಸುತ್ತಲಿನ ಭಾಷೆಗಳಲ್ಲಿ ಅವಕಾಶವಿರುತ್ತದೆ. ಯಾವುದೂ ಶೂನ್ಯದಲ್ಲಿ ಸೃಷ್ಟಿಯಾಗುವುದಿಲ್ಲ. ಈ ಆಯ್ಕೆಗಳು ಸ್ಪರ್ಧಾತ್ಮಕವಾಗಿರುತ್ತವೆ. ಸಾಂದರ್ಭಿಕ ವಾಗಿ ಯಾವುದೇ ಒಂದು ಇದರಲ್ಲಿ ಗೆಲ್ಲುತ್ತದೆ. ಇನ್ನು ಕೆಲವು ಮರೆಯಾಗುತ್ತದೆ.

ಯಾವಾಗಲೂ ಪಿಜಿನ್, ಕ್ರಿಯೋಲ್ ಮತ್ತು ಸಮೃದ್ಧ ಭಾಷೆಗಳಲ್ಲಿ ನಡೆಯುವ ಬದಲಾವಣೆಗಳನ್ನು ಅರಿತುಕೊಳ್ಳಲು ಸಂಶ್ಲೇಷಣೆಯ ಕೀಲಿಕೈಯಾಗಿರು ತ್ತದೆ. ಮೇಲ್‌ಸ್ತರದ ಮತ್ತು ಕೆಳಸ್ತರಗಳನ್ನು ಕೇವಲ ತೋರಿಕೆಗಷ್ಟೇ ಒಪ್ಪಿ ಕೊಂಡಾಗ, ಒಂದು ಸಿದ್ಧ ಮಾದರಿಯನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಇದು ಬಹುಮಟ್ಟಿಗೆ ಮಾನವ ಸಂವಹನದ ಅಗತ್ಯಗಳನ್ನು ಬಿಗಿಗೊಳಿಸುತ್ತದೆ. ಅದರೊಂದಿಗೆ  ಭಾಷೆಗಳಲ್ಲಿ ಕೆಲವೊಂದು ಆಂತರಿಕ ವ್ಯವಸ್ಥೆಗಳಿದ್ದು, ಅದು ಮತ್ತೊಂದು ಭಾಷಾ ಮಾದರಿಯಲ್ಲಿ ಒತ್ತಾಯ ಪೂರ್ವಕವಾಗಿ ಪ್ರವೇಶಿಸುತ್ತವೆ.

ಸಂಕ್ಷಿಪ್ತದಲ್ಲಿ, ಭಾಷಾ ಸಂಪರ್ಕ ಮತ್ತು ಆಂತರಿಕ ರಚನೆಗಳು ಪರಸ್ಪರ ಮುಖಾಮುಖಿಯಾಗಿ ನಿರ್ಬಂಧಿತ ಮಿಶ್ರ ಗಾತ್ರ ಉಂಟಾಗುವ ಪರಿಸ್ಥಿತಿಯು ಎಲ್ಲ ಭಾಷೆಯಲ್ಲಿಯೂ ಇರುತ್ತದೆ. ಆದರೆ ಕ್ರಿಯೋಲ್ ಮತ್ತು ಪಿಜಿನ್‌ಗಳು ಅತಿ ವೇಗ ಮತ್ತು ಅಸಂಖ್ಯಾತ ಪರ್ಯಾಯಗಳ ಮೂಲಕ ಇಂತಹ ಬದಲಾವಣೆಯ ಅಧ್ಯಯನಗಳಿಗೆ ವ್ಯಾಪಕ ಕಾರ್ಯಕ್ಷೇತ್ರವನ್ನು ಒದಗಿಸುತ್ತವೆ. ಇಂತಹ ಬದಲಾವಣೆಯನ್ನು ಎಡಿಸನ್ ಎನ್ನುವ ವಿದ್ವಾಂಸನು ಒತ್ತಡಗಳ ಅಧಿಕ ಹಿಂಸೆ ಎಂದು ಕರೆಯುತ್ತಾನೆ.