ವಿದ್ಯೆ ಸುಲಭವಾಗಿ ದಕ್ಕುವ ವಸ್ತುವಲ್ಲ ತಪಸ್ಸಿನಿಂದ ಮಾತ್ರ ಶಾರದೆಯನ್ನು ಒಲಿಸಿಕೊಳ್ಳಲು ಸಾಧ್ಯ. ಈ ಮಾತು ಕರ್ನಾಟಕ ಸಂಗೀತ ಪರಂಪರೆಯ ಮಹಾನ್‌ ಸಾಧಕ ಬಿಡಾರಂ ಕೃಷ್ಣಪ್ಪನವರು ತಮ್ಮಲ್ಲಿ ಶಿಷ್ಯವೃತ್ತಿಯನ್ನರಸಿ ಬಂದ ಹದಿನಾರರ ತರುಣ ಚೌಡಯ್ಯನಿಗೆ ಹೇಳಿದ್ದು. ಈ ವಯಸ್ಸಿಗೆ ನೇಗಿಲು ಹಿಡಿದು ಭೂಮಿಯನ್ನು ಉತ್ತಿ, ಬಿತ್ತಿ ಫಸಲು ತೆಗೆದು ಅನ್ನದಾತನೆನಿಸಬೇಕಾಗಿದ್ದ ಒಕ್ಕಲಿಗ ಹುಡುಗ ತನ್ನ ಹಳ್ಳಿಯನ್ನು ಬಿಟ್ಟು ಮೈಸೂರಿಗೆ, ಅದರಲ್ಲೂ ಬಿಡಾರಂ ಕೃಷ್ಣಪ್ಪನವರಲ್ಲಿಗೆ ಬಂದು ಸಂಗೀತ ವಿದ್ಯೆಗಾಗಿ ಕೈಚಾಚಿ ನಿಂತ ಇಂಥ ಸಂದರ್ಭಗಳಲ್ಲಿ ಗುರುಗಳಾದರೂ ಬೇರೇನು ಹೇಳಬಹುದು. ಆದರೆ ಈ ರೈತಾಪಿ ಹುಡುಗನ ಸಂಸ್ಕಾರ ಬೇರೆಯದೇ ಆಗಿತ್ತು. ಚೌಡಯ್ಯ ಒಂದರ್ಥದಲ್ಲಿ ವಿದ್ಯೆಯನ್ನರಿಸಿ ಹೋಗಿರಲಾರರು, ವಿದ್ಯೆಯೇ ಆತನನ್ನು ಅರಸಿ ಬಂದಿರಬೇಕು. ಮೈಸೂರು ಟಿ.ಚೌಡಯ್ಯ ಹುಟ್ಟಿನೊಂದಿಗೇ ಸಂಗೀತ ಕಲೆಯನ್ನು ಸಾಧಿಸಿಯೇ ತೀರುವ ಛಲವನ್ನು ತಳೆದು ಬಂದವರು. ಅದರೊಂದಿಗೆ ಅವರ ಹಿರಿಯರ ಸದಭಿರುಚಿ, ಕಲಾಭಿಮಾನ, ಜೊತೆಗೆ ಅವರಿಗೆ ಅದಕ್ಕೆಲ್ಲ ಬೇಕಾದ ವಾತಾವರಣ ಹಠಯೋಗಿಯಂಥ ಗುರು ಸಿಕ್ಕದ್ದು ಅದೃಷ್ಟವೇ ಅನ್ನಬೇಕು.

ಮೈಸೂರು ಟಿ. ಚೌಡಯ್ಯನವರು ಕರ್ನಾಟಕ ವಾದ್ಯ ಸಂಗೀತ ವಲಯದ ಅನರ್ಘ್ಯರತ್ನ, ಅಪೂರ್ವ ತಾರೆ ಅನ್ನಿಸಿಕೊಂಡವರು. ಪಕ್ಕವಾದ್ಯವಿರಲಿ, ಸೋಲೋ ಇರಲಿ ಅವರದೇ ವಿಶಿಷ್ಟ ಛಾಪು, ಶೈಲಿ. ಹುಲಿಯಿಂತಹ ಧೀರತ್ವ, ಸಿಂಹದಂತಹ ತೇಜಸ್ಸು, ಮಹಾನ್‌ ಸಾಗರದಂತಹ ಭೋರ್ಗರೆವ ನಾದ. ಚೌಡಯ್ಯನವರನ್ನು ಮೀರಿಸುವ ಇನ್ನೊಬ್ಬ ಚೌಡಯ್ಯ ಹುಟ್ಟಲೇ ಇಲ್ಲ.

ಮೈಸೂರು ಟಿ. ಚೌಡಯ್ಯ ಎಂದು ಪ್ರಖ್ಯಾತರಾಗಿದ್ದರೂ ಅವರು ಮೂಲತಃ ಮೈಸೂರಿನಿಂದ ಸುಮಾರು ಹದಿನಾರು ಮೈಲಿಗಳ ದೂರದಲ್ಲಿರುವ ತಿರುಮಕೂಡಲಿನವರು.

ಶ್ರೀಮಂತ ರೈತಾಪಿ ಮನೆತನ. ತಂದೆ ದೊಡ್ಡ ಅಗಸ್ತ್ಯೇಗೌಡರು. ದಾನಗುಣ ಸಂಪನ್ನರು. ಸಂಗೀತ, ಸಾಹಿತ್ಯ, ಸಂಸ್ಕೃತಿಯಲ್ಲಿ ಆಳವಾದ ಅಭಿರುಚಿ. ಊರಿನ ಬ್ರಾಹ್ಮಣ ಪಂಡಿತರು, ವಿದ್ವಾಂಸರಿಗೆ ಆಗಾಗ್ಗೆ ಇವರಲ್ಲಿ ಭೋಜನದ, ವಿದ್ಯಾರ್ಥಿಗಳಿಗೆ ವಾರಾನ್ನದ ವ್ಯವಸ್ಥೆ. ಜೊತೆಗೆ ಇವರ ಹಟ್ಟಿಯ ಹಜಾರದಲ್ಲೇ ಅಥವಾ ಜಗುಲಿಯನ್ನೇ ಸಂಗೀತ, ಸಂಸ್ಕೃತ, ಸಾಹಿತ್ಯ ಕುರಿತು ಚಿಂತನೆ, ವಿಚಾರ ವಿನಿಮಯ. ಆಧುನಿಕ ಚಿಂತನೆ, ದೃಷ್ಟಿಕೋನಗಳನ್ನು ಹೊಂದಿದ್ದ ಅಗಸ್ತ್ಯೇಗೌಡರಿಗೆ ಅನುರೂಪಳಾದ ಸ್ಫುರದ್ರೂಪಿ ಧರ್ಮಪತ್ನಿ ಸುಂದರಮ್ಮ. ಈಕೆ ಗಂಡನಿಗಿಂತಲೂ ಹೆಚ್ಚು ಜ್ಞಾನಿ, ಪ್ರಜ್ಞಾವಂತೆ. ಈ ಸಂಪ್ರದಾಯಸ್ಥ ಹೆಣ್ಣು ಮಗಳಿಗೆ ಗಂಡನ ಸಮ್ಮುಖದಲ್ಲಿ ಮನೆಯಂಗಳದಲ್ಲಿ ನಡೆಯುತ್ತಿದ್ದ ಸಾಹಿತ್ಯಿಕ ವೇದಿಕೆಗಳಲ್ಲಿ ವಿದ್ವಾಂಸರ ಚರ್ಚೆಗಳನ್ನು ಆಲಿಸುವ, ಪಾಲ್ಗೊಳ್ಳುವ ಅವಕಶ. ಚಿಕ್ಕ ವಯಸ್ಸಿನಲ್ಲೇ ಇಂತಹ ವಾತಾವರಣ ಸಿಕ್ಕಿದ್ದಕ್ಕೋ ಅಥವಾ ಆಕೆಗೆ ಹುಟ್ಟಿನಿಂದಲೇಕ ಸಿದ್ಧಿಸಿದ್ಧ ಕಾರಣಕ್ಕೋ ಏನೋ ಸಂಸ್ಕೃತ, ನಾಟ್ಯ ಶಾಸ್ತ್ರ, ಸಂಗೀತ, ಸಾಹಿತ್ಯ ಕಲೆ ಪ್ರಖರಗೊಂಡು, ಪ್ರಕಾಶಿಸತೊಡಗಿತು. ಮಹಾ ದೈವ ಭಕ್ತೆಯೂ ಆದ ವಿದ್ಯಾವತಿ ಸುಂದರಮ್ಮ ಮತ್ತು ಸಂಗೀತ ವಿದ್ಯಾನುರಾಗಿ ದೊಡ್ಡ ಅಗಸ್ತ್ಯೇಗೌಡರಿಗೆ ವಿದ್ಯಾಗುಣ ಸಂಪನ್ನರೂ, ಕಲಾರಾಧಕರೂ ಆದ ಮಕ್ಕಳು ಹುಟ್ಟುವುದರಲ್ಲಿ ಆಶ್ಚರ್ಯವೇನು.

ಸುಂದರಮ್ಮನವರ ಮೊದಲ ಹೆಣ್ಣುಮಗು ಹುಟ್ಟಿದ ವರ್ಷದೊಳಗೇ ಅಕಾಲಮೃತ್ಯವಿಗೆ ಬಲಿಯಾದ ಮೇಲೆ ಅವರು ನಿರಂತರ ದೇವತಾಕಾರ್ಯಗಳಲ್ಲಿ ತೊಡಗಿದರು. ತಿರುಮಕೂಡಲಿನಲ್ಲೇ ಇರುವ ಶೇಷಚಂದ್ರಿಕಾಚಾರ್ಯರ ವೃಂದಾವನ, ಬ್ರಹ್ಮಾಶ್ವತ್ಥ, ನಾಗಪ್ರತಿಮೆ, ಅಗಸ್ತ್ಯೇಲಿಂಗದ ಸನ್ನಿಧಿಗಿಂತ ಬೇರಾವ ಪವಿತ್ರ ಕ್ಷೇತ್ರ ಬೇಕು. ದಂಪತಿಗಳು ದೇವಕೈಂಕರ್ಯದಲ್ಲಿ ಪಾಲ್ಗೊಂಡರು. ಸುಂದರಮ್ಮನವರು ಮತ್ತೆ ಗರ್ಭವತಿಯಾದಾಗಲೂ ಹಟ್ಟಿಯ ಅಂಗಳದಲ್ಲಿ ನಡೆಯುತ್ತಿದ್ದ ವಿದ್ವಾಂಸರ ವಿಚಾರ ವಿನಿಮಯ, ಮುಕ್ತ ಚರ್ಚೆ ನಡೆಯುತ್ತಲೇ ಇದ್ದವು. ದಂಪತಿಗಳು ಅದರಲ್ಲಿ ಭಾಗಿಯಾಗುತ್ತಲೂ ಇದ್ದರು. ೧೮೯೪ರ ಜನವರಿ ೧ನೇ ತಾರೀಖು ಅಗಸ್ತ್ಯೇಶ್ವರ ದೇವಸ್ಥಾನದಲ್ಲಿ ಘಂಟಾಧ್ವನಿ ಮೊಳಗುವ ವೇಳೆ ಸುಂದರಮ್ಮನವರು ಗಂಡಶಿಶುವಿಗೆ ಜನ್ಮ ನೀಡಿದರು. ಈ ಮಗು ಮುಂದೆ ಜಗದ್ವಿಖ್ಯಾತನಾಗುವ ನಾಮಬಲ ಹೊಂದಿದ್ದನೆಂದು ಆಗ ಯಾರೂ ಊಹಿಸಿರಲಾರರು. ಚೌಡಯ್ಯನವರ ನಂತರ ಹುಟ್ಟಿದವರಿಗೂ ಕಲಾಸರಸ್ವತಿ ಒಲಿಯದೇ ಇರಲಿಲ್ಲ. ಆದರೆ ಚೌಡಯ್ಯ ಮಾತ್ರ ಕಣ್ಣುಕೋರೈಸುವ ಸೂರ್ಯನಂತಾದದ್ದಕ್ಕೆ ಅವರ ಅಚಲ ಸಾಧನಾಶಕ್ತಿ, ಏಕೀಕೃತಗೊಂಡ ಆತ್ಮವಿಶ್ವಾಸ ಹಾಗೂ ಸಂಗೀತದ ಮೇಲಿನ ಬಿಗಿಹಿಡಿತ ಜೊತೆಗೆ ಪ್ರೇಮವೇ ಮುಖ್ಯ ಕಾರಣಗಳೆನ್ನಬಹುದು.

೧೯೦೦ರಲ್ಲಿ ಐದಾರು ವರ್ಷದ ಬಾಲಕ ಚೌಡಯ್ಯನಿಗೆ ಔಪಚಾರಿಕ ಶಿಕ್ಷಣ ಪ್ರಾರಂಭವಾಯಿತು. ಓದು ಹಿಡಿಸಲಿಲ್ಲ, ಬದಲಿಗೆ ಕಾವೇರಿ ದಂಡೆಯ ಮುಕ್ತ ವಾತಾವರಣದಲ್ಲಿ ತನ್ನ ಪಾಡಿಗೆ ತಾನು ಹಾಡಿಕೊಳ್ಳುವ ಸ್ವಾತಂತ್ಯ್ರ ಚೌಡಯ್ಯನಿಗೆ ಬೇಕಾಗಿತ್ತು. ಆದರೂ ಘನ ವಿದ್ವಾಂಸರಾಗಿದ್ದ ಗುಂಡಾಚಾರ್ಯರು ತಮಗೆ ಆತ್ಮೀಯರಾಗಿದ್ದ ಅಗಸ್ತ್ಯೇಗೌಡರ ಪ್ರೀತಿಯ ಪುತ್ರನಿಗೆ ಹೆಚ್ಚಿನ ಆಸಕ್ತಿಯಿಂದಲೇ ಸಂಸ್ಕೃತ ಪಾಠಾಭ್ಯಾಸ ಮಾಡಿಸಿದರು. ಅಮರ, ರಘುವಂಶ ಆಯಿತು. ಆದರೆ ಮನಸ್ಸು ಸಂಗೀತಾಭಿಮುಖವಾಗಿ ತಿರುಗಿ ನಿಂತಿತ್ತು.

ಈ ಹೊತ್ತಿನಲ್ಲಿ ಚೌಡಯ್ಯನವರ ಭಾಗ್ಯದ ಬಾಗಿಲನ್ನು ತೆರೆದವರು ಸೋಸಲೆ ಮಠದ ಹಿರಿಯ ವಿದ್ವಾಂಸರಾದ ವಿದ್ಯಾ ಕಾಂತಾಚಾರ್ಯರು. ಅವರನ್ನು ತಂಪು ಹೊತ್ತಿನಲ್ಲೇ ನೆನೆಯಬೇಕು ಎಂದು ಚೌಡಯ್ಯನವರೇ ಹೇಳುತ್ತಿದ್ದರು. ತಿರುಮಕೂಡಲಿನಿಂದ ದೋಣಿಯಲ್ಲಿ ಕಪಿಲೆಯನ್ನು ದಾಟಿ ಗುಂಜಾನರಸಿಂಹನ ಕ್ಷೇತ್ರವಾದ ನರಸೀಪುರಕ್ಕೆ ಚೌಡಯ್ಯ ಶಾಲೆಗೆ ಹೋಗಬೇಕಾಗಿತ್ತು. ಹೀಗೆ ಒಂದು ದಿನ ಶಾಲೆಗೆ ಹೋಗಲು ಮನಸ್ಸಿಲ್ಲದ ಮನಸ್ಸಿನಲ್ಲಿ ಕಪಿಲೆಯ ತಟದಲ್ಲಿ ದೋಣಿಗಾಗಿ ಕಾಯುತ್ತಿದ್ದ ಚೌಡಯ್ಯನಿಗೆ ಸಿಕ್ಕ ವಿದ್ಯಾಕಾಂತಾಚಾರ್ಯರು ಹುಡುಗನ ಅನಾಸಕ್ತ ಮುಖ ನೋಡಿಯೇ ಇವನಿಗೆ ಶಾಲೆಗೆ ಹೋಗಲು ಆಸಕ್ತಿಯಿಲ್ಲ ಎಂದು ಅರ್ಥಮಾಡಿಕೊಂಡರು. ಸಂಗೀತದಲ್ಲಿ ಆತನಿಗೆ ಒಲವಿದೆ ಎಂದು ಅವನಿಂದಲೇ ತಿಳಿದು, ಅವನ ಹಸ್ತ ರೇಖೆಯನ್ನು ನೋಡಿ ಅವನ ತಂದೆ ತಾಯಿಯರನ್ನು ಕಂಡು ಸಂಗೀತ ಪಾಠ ಮಾಡಿಸುವಂತೆ ಸೂಚಿಸಿದರಲ್ಲದೆ, ಆ ಕ್ಷೇತ್ರದಲ್ಲಿ ಅವನಿಗೆ ಯಾರೂ ಸಾಟಿಯಾಗದ ರೀತಿಯಲ್ಲಿ ಬೆಳೆದು ನಿಲ್ಲುತ್ತಾನೆಂದೂ ತಿಳಿಸಿದರು. ಹಾಡುಗಾರಿಕೆಗೆ ಬೇಕಾದ ಮಧುರ ಶಾರೀರ ಚೌಡಯ್ಯನವರಿಗಿರಲಿಲ್ಲ. ಅವರ ಸೋದರ ಸಂಬಂಧಿ ಪಕ್ಕಣ್ಣ ಹಿರಿಯರ ಬಲವಂತಕ್ಕೆ ಪಿಟೀಲು ಕಲಿಸಲು ಆರಂಭಿಸಿದನಾದರೂ, ಅದು ಬಹಳ ಕಾಲ ನಡೆಯಲಿಲ್ಲ. ಮುಂದೆ ಚೌಡಯ್ಯನಿಗೆ ಸ್ವಲ್ಪ ಕಾಲ ತಿರುಮಕೂಡಲು ಸುಬ್ಬಣ್ಣ, ರಾಮಣ್ಣ ಎನ್ನುವವರಲ್ಲೂ ಪಾಠವಾಯಿತು. ಆ ವೇಳೆಗೆ ತಮ್ಮ ಉಳಿದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಗಸ್ತ್ಯೇಗೌಡರು ಕುಟುಂಬವನ್ನು ಮೈಸೂರಿಗೆ ವರ್ಗಾಯಿಸುವ ಸನ್ನಾಹದಲ್ಲಿದ್ದರು. ಅದೇ ಸಂದರ್ಭದಲ್ಲಿ ಸುಂದರಮ್ಮನವರ ಅಣ್ಣ, (ಅವರೂ ಚೌಡಯ್ಯ ಅಂತಲೇ) ತರುಣ ಚೌಡಯ್ಯನಿಗೆ ಮೈಸೂರಿನಲ್ಲೇ ಬಿಡಾರಂ ಕೃಷ್ಣಪ್ಪನವರ ಬಳಿ ಸಂಗೀತಾಭ್ಯಾಸಕ್ಕೆ ಸೇರಿಸುವಂತೆ ಸೂಚಿಸಿದ್ದು ಅಗಸ್ತ್ಯೇಗೌಡರಿಗೂ ಒಪ್ಪಿತು.

ಆದರೆ ಬಿಡಾರಂ ಕೃಷ್ಣಪ್ಪನವರಲ್ಲಿ ಶಿಷ್ಯವೃತ್ತಿ ಸಿಗುವುದು ಸುಲಭದ ವಿಚಾರವಾಗಿರಲಿಲ್ಲ. ಚೌಡಯ್ಯನ ದೈವೀಕಳೆ, ಸ್ಪರದ್ರೂಪ, ದಿಟ್ಟಮೈಕಟ್ಟು, ಅಜಾನುಬಾಹು ವ್ಯಕ್ತಿತ್ವ ಎಲ್ಲಕ್ಕಿಂತ ಹೆಚ್ಚಾಗಿ ಕಾಂತಿಯುಕ್ತ ಕಣ್ಣುಗಳಲ್ಲಿ ಹೊಮ್ಮುತ್ತಿದ್ದ ಸಾತ್ವಿಕ ತೇಜಸ್ಸು ಕೃಷ್ಣಪ್ಪನವರ ಮನ ಮುಟ್ಟಿರಬೇಕು. ಆಗಲೇ ಅವರು ಹೇಳಿದ್ದು ವಿದ್ಯೆ ಸುಲಭವಾಗಿ ದಕ್ಕುವ ವಸ್ತುವಲ್ಲ. ಅದಕ್ಕೆ ತಪಸ್ಸು ಮಾಡಬೇಕು ಎಂದು.

ಚೌಡಯ್ಯ, ಚೌಡಯ್ಯನವರು ಎನಿಸಿಕೊಳ್ಳಬೇಕಾದರೆ ಹಿಡಿದ ಸಾಧನಾ ಮಾರ್ಗ ಯಾವ ತಪಸ್ಸಿಗೂ ಕಡಿಮೆಯದಾಗಿರಲಿಲ್ಲ. ೧೯೧೦ರ ಆಷಾಢ ಮಾಸದ, ತುಂಬು ಅಮಾವಾಸ್ಯೆಯ ದಿನ ಆರಂಭವಾದ ಅವರ ಪಾಠ ೧೯೧೮ರ ವರೆಗೆ ಅವ್ಯಾಹತವಾಗಿ ಸಾಗಿತು . ಚೌಡಯ್ಯನಿಗೆ ನಿದ್ರಾಹಾರದಲ್ಲೂ ಚಿಂತನ ಮಂಥನದಲ್ಲೂ ಸಮಸ್ತ ಕೆಲಸ ಕಾರ್ಯಗಳಲ್ಲೂ ನಾದೋಪಾಸನೆಯೊಂದೇ ತುಂಬಿಹೋಯಿತು. ಪಿಟೀಲಿನ ಮಧುರ ನಿನಾದ ಆತನ ಉಸಿರಾಯಿತು, ಆತ್ಮವಾಯಿತು. ಸಂಗೀತಗಾರನಿಗೆ ಶರೀರ ಸಂಪತ್ತು ಇರಬೇಕೆಂದು ಗುರುಗಳು ಹೇಳಿದ ಮಾತಿನಂತೆ ಚೌಡಯ್ಯ ಅಂಗ ಸಾಧನೆಯನ್ನೂ ಮಾಡಿಕೊಳ್ಳಬೇಕಿತ್ತು. ಬೆಳಗ್ಗೆ ೪ ರಿಂದ ೮ ಗಂಟೆಯವರೆಗೆ ವ್ಯಾಯಾಮ, ಸಾಮು, ಸ್ನಾನ, ಉಪಹಾರಗಳ ನಂತರ ೯ ರಿಂದ ೧೨ ಗಂಟೆವರೆಗೆ ಪಿಟೀಲು ಸಾಧನೆ, ಭೋಜನ. ವಿಶ್ರಾಂತಿಯ ನಂತರ ೩ ರಿಂದ ೫ರವರೆಗೆ ಮತ್ತೆ ಸಾಧನೆ. ಸಂಜೆ ೫ ರಿಂದ ೭ರವರೆಗೆ ವಾಯುವಿಹಾರ ಮುಗಿಸಿ ೮ ಗಂಟೆಗೆ ಊಟದ ನಂತರ ಮನಸ್ಸು ಹರಿದಷ್ಟು ಕಾಲ ಸಂಗೀತಾಭ್ಯಾಸ. ಒಂದು ವಾರವಿಡೀ ಒಂದೇ ರಾಗದ ಸಂಪೂರ್ಣ ಅಭ್ಯಾಸ. ಬಿಡಾರಂ ಕೃಷ್ಣಪ್ಪನವರೂ ತರುಣನ ಸಂಗೀತ ಜ್ಞಾನ, ಪಿಟೀಲು ನುಡಿಸುವಿಕೆಯ ಸಾಮರ್ಥ್ಯ, ಶೈಲಿ, ಅದರಲ್ಲಿ ಏಕಾಗ್ರತೆ, ತಲ್ಲೀನತೆಗಳನ್ನೆಲ್ಲ ಲಕ್ಷ್ಯಕ್ಕೆ ತೆಗೆದುಕೊಂಡು ಈತನೊಬ್ಬ ಅರ್ಹಶಿಷ್ಯ ಎಂಬ ರೀತಿಯಲ್ಲಿ ತಾವು ಕಷ್ಟಪಟ್ಟು ಲಗ್ರಹಿಸಿ ಕರತಲಾಮಲಕ ಮಾಡಿಕೊಂಡಿದ್ದ ಅದ್ಭುತ ಸಾಧನೆಗಳನ್ನೆಲ್ಲಲ ಚೌಡಯ್ಯನವರಿಗೆ ಧಾರೆ ಎರೆದರು. ಈ ದಾನ ಎಲ್ಲೂ ಅಪಾತ್ರವೆನಿಸದಂತೆ ಚೌಡಯ್ಯನವರು ಅದನ್ನು ಕಾಯ್ದುಕೊಂಡರು. ಗುರುವಿನ ಗ್ರಹಿಕೆ ಹುಸಿಹೋಗಲಿಲ್ಲ.

ಗುರುವಿಗೇ ಪಕ್ಕ ವಾದ್ಯ ನುಡಿಸುವ ಮೂಲಕವೇ ಮೊದಲ ಕಚೇರಿ ನಡೆಸುವ ಭಾಗ್ಯ ಎಷ್ಟು ಶಿಷ್ಯರಿಗಿದ್ದೀತು. ಅಥವಾ ಶಿಷ್ಯನ ಪಾಂಡಿತ್ಯದ ಮೇಲೆ ಸಂಪೂರ್ಣ ನಂಬಿಕೆ ಬರದ ಹೊರತು ಯಾವ ಗುರು ತಾನೇ ಪಕ್ಕವಾದ್ಯಕ್ಕೆ ಅವನನ್ನು ಕೂಡಿಸಿಕೊಳ್ಳಬಹುದು. ೧೯೧೧ರಲ್ಲಿ ಮೈಸೂರಿನಲ್ಲಿ ಶಿವಗಂಗೆ ಮಠಾಧಿಪತಿಗಳ ಸನ್ನಿಧಿಯಲ್ಲಿ ಬಿಡಾರಂ ಕೃಷ್ಣಪ್ಪನವರಿಗೇ ತಮ್ಮ ಮೊದಲ ಪಕ್ಕ ವಾದ್ಯ ನುಡಿಸಿ ಗುರುಕಾಣಿಕೆ ಸಲ್ಲಿಸಿದ ಭಾಗ್ಯ ಚೌಡಯ್ಯನವರದಾಯಿತು. ತಮ್ಮ ಜೀವಮಾನದಲ್ಲೇ ಅದೊಂದು ಮರೆದಯ ಅನುಭವ ಎನ್ನುತ್ತಿದ್ದರು ಚೌಡಯ್ಯ. ಅಲ್ಲಿಂದಾಚೆಗೆ ಈ ಗುರು, ಶಿಷ್ಯ ಜೋಡಿ ಹೆಸರುವಾಸಿಯಾಗಿಬಿಟ್ಟಿತು. ಆದರೆ ಎಲ್ಲ ಸಂದರ್ಭಗಳಲ್ಲೂ ಅವರು ಗುರು, ಶಿಷ್ಯರೇ ಆಗಿದ್ದರೇ ಹೊರತು ಎಲ್ಲೂ ಒಂದೇ ವೇದಿಕೆಯನ್ನು ಹಂಚಿಕೊಂಡ ಸಮಾನಸ್ಥ ಭಾವ ಅವರಿಬ್ಬರಿಗೂ ಬರಲೇ ಇಲ್ಲ. ಒಮ್ಮೆ ಅಡ್ಡಜ್ಞಾನರಲ್ಲಿ ಚೌಡಯ್ಯನವರ ಕೈತಪ್ಪಿ ಒಂದೆಳೆ ಅಪಸ್ವರ ಪಿಟೀಲಿನಿಂದ ಹೊರಟಿದ್ದೇ ತಡ ಕೃಷ್ಣಪ್ಪನವರು ಅದು ಸಾರ್ವಜನಿಕ ಕಚೇರಿ ಎನ್ನುವುದನ್ನೂ ಮರೆತು ಚೌಡಯ್ಯನವರ ಕೆನ್ನೆಗೆ ಹೊಡೆದದ್ದೂ ಇದೆ. ಇಂತಹ ಸಂದರ್ಭಗಳಲ್ಲಿ ದುಃಖದಿಂದ ಖಿನ್ನರಾಗುವ ಬದಲು ಉತ್ತಮ ಮಾರ್ಗದರ್ಶನ ದೊರೆತಂತೆ ಉತ್ಸಾಹದಿಂದ ನುಡಿಸುತ್ತಿದ್ದರು. ಅವರಲ್ಲಿ ನಿಜಕ್ಕೂ ಒಬ್ಬ ನಿಷ್ಠ ಶಿಷ್ಯನನ್ನೇ ಅವನು ಪರಿಪಕ್ವಾಗಿ ಮಾಗುತ್ತಿರುವುದನ್ನೇ ತೋರಿಸುತ್ತಿತ್ತು.

ಅಲ್ಲಿಂದಾಚೆಗೆ ಚೌಡಯ್ಯ ಮೈಸೂರನ್ನು ಮೀರಿ, ಕರ್ನಾಟಕವನ್ನೂ ಮೀರಿ, ದಕ್ಷಿಣಾದಿಕ ಸಂಗೀತಕ್ಕೆಕ ಮೇಲುಗೈ ಆಗಿದ್ದ ಚೆಟ್ಟಿನಾಡು, ಮದರಾಸು ವಲಯಗಳಿಗೂ ಹಬ್ಬಿಕೊಂಡರು. ದಕ್ಷಿಣ ದೇಶದ ಎಲ್ಲ ಘಟಾನುಘಟಿ ವಿದ್ವಾಂಸರಿಗೂ ಸಮಾನಸ್ಥರಾಗಿ, ಹಲವು ವೇಳೆ ತಾವೇ ಮೇಲಾಗಿ ವಾದ್ಯ ಪಟುತ್ವ ತೋರುತ್ತಿದ್ದರು. ಘನ ವಿದ್ವಾಂಸರಾದ ವಾಸುದೇವಾಚಾರ್ಯ,ಅರಿಯಕುಡಿ ರಾಮಾನುಜ ಐಯ್ಯಂಗಾರ್ಯ, ಚಂಬೈ ವೈದ್ಯನಾಥ ಭಾಗವತರ್, ಜಿ.ಎನ್‌. ಬಾಲಸುಬ್ರಹ್ಮಣ್ಯಂ, ಆಲತ್ತೂರು ಸಹೋದರರು, ಟೈಗರ್ ವರದಾಚಾರ್ಯ, ಪಲ್ಲಡಂ ಸಂಜೀವರಾವ್‌, ಮಧುರೆ ಮಣಿ ಅಯ್ಯರ್, ಮಹಾರಾಜ ಪುರಂ ವಿಶ್ವನಾಥ ಅಯ್ಯರ್, ಮುಸುರಿ ಸುಬ್ರಹ್ಮಣ್ಯ ಅಯ್ಯರ್ ಮುಂತಾದ ಹುಲಿಗಳ ನಡುವೆ ಚೌಡಯ್ಯ ಧೀಮಂತ ಹುಲಿಯಾಗಿ ಸಭಿಕರ ಗಮನ ಸೆಳೆಯುತ್ತಿದ್ದರು. ತಮಗಿಂತ ಕಿರಿಯರಾದ ಅನೇಕರಿಗೆ, ಆ ಕಾಲಕ್ಕೆ ಮಾನ್ಯತೆ ಗಳಿಸದಿದದ ಸ್ತ್ರೀ ಗಾಯನಕ್ಕೂ ಪಕ್ಕವಾದ್ಯ ನೀಡಿ ಅವರನ್ನು ಪ್ರೋತ್ಸಾಹಿಸಿದ್ದಾರೆ. ಟೀಕೆಗೂ ಒಳಗಾಗಿದ್ದಾರೆ. ಟಿ.ಆರ್‌. ಮಹಾಲಿಂಗಂ ಅವರ ವೇಣುವಾದನ, ದೊರೆಸ್ವಾಮಿ ಅಯ್ಯಂಗಾರರ ವೀಣಾ ವಾದನಕ್ಕೂ ಪಿಟೀಲಿನ ಸಾಹಚರ್ಯ ನೀಡಿದ್ದಾರೆ.

ಪಿಟೀಲು ನಮ್ಮ ದೇಶದ ವಾದ್ಯವೇ ಅಲ್ಲ ಎಂದು ಹೇಳುವ ಮೂಲಕ ಅದರ ಶಾಸ್ತ್ರೀಯತೆಯನ್ನು ಪ್ರಶ್ನಿಸಿದ ಹಲವರಿಗೆ ಚೌಡಯ್ಯ ಆಧಾರಸಹಿತ ಉತ್ತರ ನೀಡಿದ್ದಾರೆ. ಪಿಟೀಲು ಭಾರತೀಯ ಪರಂಪರೆಗೆ ಸೇರಿದ ವಾದ್ಯ ಎಂಬ ಸತ್ಯವನ್ನು ಸಂಶೋಧಿಸಲು ಅವರು ಬಹಳ ದೂರ ಕ್ರಮಿಸಬೇಕಾಗಲಿಲ್ಲ. ಅವರ ಹುಟ್ಟೂರಾದ ತಿರುಮಕೂಡಲಿನ ಅಗಸ್ತ್ಯೇಶ್ವರ ದೇವಾಲಯದ ಕಂಬವೊಂದರ ಮೇಲೆ ಸ್ತ್ರೀ ಪುತ್ಥಳಿಯೊಂದು ಕಮಾನು ಬಳಸಿ ತಂತಿ ವಾದ್ಯವನ್ನು ನುಡಿಸುತ್ತಿರುವ ಚಿತ್ರವಿದೆ. ಧನುರ್ವೀಣಾ ಎನ್ನುವ ಈ ವಾದ್ಯ ಪಿಟೀಲನ್ನು ಹೋಲುವುದರಿಂದ ಪಿಟೀಲಿಗೆ ಭಾರತೀಯ ಇತಿಹಾಸ ಇದೆ ಎಂದವರು ತೋರಿಸಿಕೊಟ್ಟರು.

ಚೌಡಯ್ಯನವರ ಸಂಶೋಧಕ ಮನಸ್ಸು ಸಂಗೀತ ಕ್ಷೇತ್ರದಲ್ಲಿ ನಡೆಸಿದ ಪ್ರಯೋಗಗಳು ತೀರಾ ಗಮನಾರ್ಹ. ಸಾಮಾನ್ಯವಾಗಿ ನುಡಿಸುವ ಪಿಟೀಲಿಗೆ ನಾಲ್ಕು ತಂತಿಗಳಿದ್ದು, ಅದರಿಂದ ಹೊಮ್ಮುವ ನಾದ ನದಿಯಂತೆ ಸರಿದುಹೋಗುತ್ತದೆ. ಅದರಲ್ಲೂ ಆ ಕಾಲದಲ್ಲಿ ಮೈಕ್‌ ವ್ಯವಸ್ಥೆ ಇರದಿದ್ದುದರಿಂದ ತುಂಬಿದ ಸಭೆಗೆ ಪಿಟೀಲಿನ ನಾದ ಮಾಧುರ್ಯವನ್ನು ಸಮನಾಗಿ ಹಂಚುವುದು ಕಷ್ಟವೆಂದು ಭಾವಿಸಿದ ಚೌಡಯ್ಯನವರು ಪಿಟೀಲಿನ ನಾಲ್ಕು ತಂತಿಗಳಿಗೆ ಇನ್ನೂ ಮೂರು ತಂತಿಗಳನ್ನು ಅಳವಡಿಸಿದರು. ಮೊದಲಿನ ಪಂಚಮ, ಷಡ್ಜ ಮತ್ತು ಮಧ್ಯ ಪಂಚಮದ ತಂತಿಗಳಿಗೆ ಕೆಳಗಿನ ಸ್ಥಾಯಿಯ ಇನ್ನೂ ಮೂರು ತಂತಿಗಳನ್ನು ಅಳವಡಿಸಿದರು. ಮೊದಲಿನ ಪಂಚಮ, ಷಡ್ಜ ಮತ್ತು ಮಧ್ಯ ಪಂಚಮದ ತಂತಿಗಳಿಗೆ ಕೆಳಗಿನ ಸ್ಥಾಯಿಯ ಇನ್ನೂ ಮೂರು ತಂತಿಗಳನ್ನು ಸೇರಿಸಿ ಏಳುತಂತಿಯ ತುಂಬುನಾದದ ಪಿಟೀಲನ್ನು ಸಿದ್ಧಪಡಿಸಿದರು. ಸಭೆಗಳಲ್ಲಿ ನುಡಿಸಿದರು. ಗುರು ಬಿಡೃಂ ಕೃಷ್ಣಪ್ಪನವರು, ವೀಣೆ ಶೇಷಣ್ಣ, ಮತ್ತಿತರ ವಿದ್ವಾಂಸರ, ಮಿಗಿಲಾಗಿ ಶ್ರೋತೃರಸಿಕರ ಮನಗೆದ್ದರು. ಹಾಗೇ ಅದು ಶಾಸ್ತ್ರ ಸಮ್ಮತವಲ್ಲ ಎಂಬ ಟೀಕೆಗೂ ಗುರಿಯಾದರು. ಆಗಿನ ಪ್ರತಿಷ್ಠಿತ ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿಯಲ್ಲಿ ನುಡಿಸದಂತೆ ಚೌಡಯ್ಯನವರನ್ನು ಬಹಿಷ್ಕರಿಸಲಾಯಿತು. ಅದರ ಪರಿಣಾಮವೇನಾಯಿತೆಂದರೆ, ಕರ್ನಾಟಕ ಸಂಗೀತದ ಅತ್ಯುನ್ನತ ವಿದ್ವಾಂಸರ್ಯಾರು ಅಕಾಡೆಮಿಗೆ ಹೋಗದೆ ತಮ್ಮ ಪ್ರತಿರೋಧ ವ್ಯಕ್ತಪಡಿಸಿದರಲ್ಲದೆ ಇಂಡಿಯನ್‌ ಫೈನ್‌ ಆರ್ಟ್ಸ್ ಎನ್ನುವ ಸಂಸ್ಥೆಯನ್ನು ಅಕಾಡೆಮಿಗೆ ಸಮಾನಾಂತರವಾಗಿ ಸ್ಥಾಪಿಸಿದರು. ಮುಂದೊಮ್ಮೆ ಏಳುತಂತಿ ಪಿಟೀಲಿನಿಂದಲೇ ಜನಮನ ಗೆದ್ದ ಚೌಡಯ್ಯ ೧೯೫೭ರಲ್ಲಿ ಅಕಾಡೆಮಿಯ ಸಂಗೀತ ಸಮ್ಮೇಳನದ ಅಧ್ಯಕ್ಷರೂ ಆದರು. ಜಲಪಾತದಂತೆ ಭೋರ್ಗರೆದು ಧುಮಿಕ್ಕುವ ಶಬ್ದ ಮಾಧುರ್ಯವಿದ್ದ ಏಳುತಂತಿ ಪಿಟೀಲಿನ ಸೌಂಡಯ್ಯ ಆದರು.

ಚೌಡಯ್ಯನವರ ಇನ್ನೊಂದು ಪ್ರಯೋಗ ೧೯ ತಂತಿ ಪಿಟೀಲಿನದು. ಏಳು ತಂತಿಯ ಪಿಟೀಲಿಗೆ ತಂತಿಗಳ ಇಕ್ಕೆಲಗಳಲ್ಲಿ ಆರಾರು ಸಣ್ಣ ತಂತಿಗಳನ್ನು ಬಿಗಿದು ಸಂಗೀತದ ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನೂ ವಾದ್ಯದಲ್ಲಿ ನೀಡುವ ಪ್ರಯತ್ನ ಮಾಡಿದರು. ಈ ಪ್ರಯೋಗವೂ ಯಶಸ್ವಿಯಾಯಿತಾದರೂ ಅದನ್ನು ಅರಿತು, ಕರಗತ ಮಾಡಿಕೊಂಡು, ನುಡಿಸುವ ಜಾಣ್ಮೆ, ವಿದ್ವತ್ತು, ತಾಳ್ಮೆ, ಕಲೆಗಾರಿಕೆ ಬೇರೆಯವರಲ್ಲಿ ಕಷ್ಟಸಾಧ್ಯವಾಗಿ, ಅದು ಬಳಕೆಗೆ ಬಾರದ ವೈಶಿಷ್ಟ್ಯವಾಗಿ ಉಳಿಯಿತು. ಸೂಕ್ಷವಾದ ತಾಂತ್ರಿಕ ಮಾಹಿತಿಗಳುಳ್ಳ ಈ ವಾದ್ಯ ಸ್ವರ ಸಿದ್ಧಾಂತವನ್ನು ವಿವರಿಸುವ ಪ್ರಾಯೋಗಿಕ ಪರಿಕರವಾಯಿತು.

ಜೀವ ಸಂಕುಲದ ಮೇಲೆ ಸಂಗೀತದ ಹೀಲಿಂಗ್‌ ಎಫೆಕ್ಟ್‌ ಇರುತ್ತದೆ ಎಂಬ ಅಂಶವನ್ನು ಒಂದು ಪ್ರಯೋಗದ ಆಧಾರದಲ್ಲಿ ಸಾಬೀತುಮಾಡಲು ಪ್ರಯತ್ನಿಸಿದವರು ಚೌಡಯ್ಯನವರೇ. ಆದರೆ ಇದನ್ನು ಅವರೆಲ್ಲೂ ದಾಖಲಿಸಿಡದೇ ಹೋದದ್ದು ದುರದೃಷ್ಟಕರ. ತಮ್ಮ ಮನೆಯ ಮುಂದೆ ಎರಡೂ ಬದಿಗಳಲ್ಲಿ ಏಕಕಾಲಕ್ಕೆ ಎರಡು ನಿಂಬೆಗಿಡಗಳನ್ನು  ನೆಟ್ಟು ಪ್ರತಿನಿತ್ಯವೂ ಒಂದು ಗಿಡದ ಬಳಿಗಿದ್ದ ಕೊಠಡಿಯಲ್ಲಿ ಕುಳಿತು ಸುಶ್ರಾವ್ಯವಾಗಿ ಪಿಟೀಲು ನುಡಿಸುತ್ತಿದ್ದರಂತೆ. ಎರಡೂ ಗಿಡಗಳಿಗೆ ನೀರು, ಗೊಬ್ಬರ ಮುಂತಾದವುಗಳನ್ನು ಸಮನಾಗಿ ನೀಡಿದರಾದರೂ, ಒಂದು ಗಿಡಕ್ಕೆ ಸಂಗೀತ ನೀಡಲಿಲ್ಲ. ಪರಿಣಾಮವಾಗಿ ಅವರ ಸಂಗೀತ ಸುಧಾಮೃತವನ್ನುಂಡ ನಿಂಬೆ ಗಿಡ ಊಹಿಸಲಾರದಷ್ಟು ಹುಲುಸಾಗಿ, ಆದರೆ ಮತ್ತೊಂದು ಗಿಡ ಸಾಮಾನ್ಯವಾಗಿ ಬೆಳೆಯಿತಂತೆ. ಈ ವಿಷಯವನ್ನು ಅವರು ಆಕಾಶವಾಣಿಯಲ್ಲಿ ಭಾಷಣದ ಮೂಲಕ ತಿಳಿಸಲು ಬಯಸಿದ್ದರಾದರೂ ಸಮಯ ಕೂಡಿ ಬರಲೇ ಇಲ್ಲ.

ಚೌಡಯ್ಯನವರು ಕೇವಲ ಪಿಟೀಲು ವಾದಕರಷ್ಟೇ ಆಗಿದ್ದರೆಂದೇ ಬಹಳಷ್ಟು ಜನ ಭಾವಿಸುತ್ತಾರೆ. ಆದರೆ ಅವರದು ಬಹುಮುಖ ಪ್ರತಿಭೇ. ಕಲೆಯ ವಿವಿಧ ಕ್ಷೇತ್ರಗಳಲ್ಲಿ ಅಪಾರ ಜ್ಞಾನ ಉಳ್ಳವರಾಗಿದ್ದರು. ಸಾಹಿತ್ಯ, ನೃತ್ಯ, ಸಂಶೋಧನೆಯಷ್ಟೇ ಅಲ್ಲದೆ ತಾಂತ್ರಿಕ ಮಾಧ್ಯಮವಾದ ಸಿನಿಮಾ ಕ್ಷೇತ್ರದಲ್ಲೂ ಕೈಯಾಡಿಸಿದ್ದಾರೆ. ಚೌಡಯ್ಯನವರು ಕನ್ನಡದ ಪ್ರಮುಖ ವಾಗ್ಗೇಯಕಾರರಲ್ಲೊಬ್ಬರು. ಕನ್ನಡ, ತೆಲುಗು, ಸಂಸ್ಕೃತ ಭಾಷೆಗಳಲ್ಲಿ ಹಲವು ಕೀರ್ತನೆಗಳನ್ನೂ, ತಿಲ್ಲಾನಗಳನ್ನೂ ರಚಿಸಿದ್ದಾರೆ. ತ್ರಿಮಕುಟವಾಸ ಎನ್ನುವ ಅಂಕಿತದ ಅವರ ರಚನೆಗಳು ಸರಳವೂ ಸುಂದರವೂ ಭಕ್ತಿರಸ ಸ್ಫುರಿತವೂ ಆಗಿವೆ.

ಸುಪ್ರಸಿದ್ಧ ನಾಟ್ಯಾಚಾರ್ಯರಾಗಿದ್ದ ಹೆಚ್‌. ದಾಸಪ್ಪನವರೊಂದಿಗೆ ಚೌಡಯ್ಯನವರು ಭರತನಾಟ್ಯದ ವಿಷಯವಾಗಿ ಚರ್ಚೆ, ವಿಚಾರ ವಿನಿಮಯ ಮಾಡುತ್ತಿದ್ದರು. ದಾಸಪ್ಪನವರ, ಅವರ ಶಿಷ್ಯರ ನೃತ್ಯಗಳನ್ನು ನೋಡಿ ಅದರ ಕಲಾಸೂಕ್ಷ್ಮತೆಯನ್ನು ಅರಿತು ಆನಂದಿಸುತ್ತಿದ್ದರು..

೧೯೪೩ರಲ್ಲಿ ಚೌಡಯ್ಯನವರು ವಾಣಿ ಎನ್ನುವ ಕನ್ನಡ ಚಿತ್ರವನ್ನೂ ನಿರ್ಮಿಸಿದರು. ಹಾರ್ಮೋನಿಯಂ ಶೇಷಗಿರಿರಾವ್‌ ಅವರ ಜೊತೆಗೂಡಿ ಈ ಚಿತ್ರಕ್ಕೆ ತಾವೇ ಸಂಗೀತ ನಿರ್ದೇಶನ ಮಾಡಿದ್ದೂ ವಿಶೇಷ. ವಾಣಿ ಕನ್ನಡದ ಮೊದಲ ಸಂಗೀತಕ ಪ್ರಧಾನ ಚಿತ್ರ ಎನಿಸಿಕೊಂಡಿದೆ. ಹೆಚ್‌.ಆರ್.ಜಿ.ಸಿ. ಶ್ರೀ ಪಿಕ್ಚರ್ಸ್ ಲಾಂಛನದಡಿಯಲ್ಲಿ ತಯಾರಾದ ಈ ಚಿತ್ರದಲ್ಲಿ ಚೌಡಯ್ಯನವರು ನಾಯಕ ನಟರಾಗಿಯೂ ಅಭಿನಯಿಸಿದ್ದರು.

ಅವರಿಗೆ ಅನೇಕ ಗೀಳುಗಳಿದ್ದವು. ಹಳೆಯ ಮಾಡೆಲ್ಲಿನ ಆಸ್ಟಿನ್‌ ಕಾರು ಓಡಿಸುವ ಗೀಳು, ಸದಾಕಾಲ ಗೆಳೆಯರ ಹಿಂಡನ್ನೆ ಬೆನ್ನಲ್ಲಿ ಕಟ್ಟಿಕೊಂಡು ಸಾಗುವ ಗೀಳು, ಕೇಳಿದವರಿಗೆ ಬೇಕಾದ್ದನ್ನು ಕೊಡುವ ದಾನಗುಣ ಅರ್ಥಾತ್‌ ದುಂದುಗಾರಿಕೆ, ಎಲ್ಲಕ್ಕಿಂತ ಹೆಚ್ಚಾಗಿ ಭಾಷಣ ಮಾಡುವ ಗೀಳು.

ಚೌಡಯ್ಯನವರು ಅವರಿವರ ಮದ ಮಾತ್ಸರ್ಯಕ್ಕೆ ಸೊಪ್ಪು ಹಾಕಿದವರಲ್ಲ. ಸ್ವತಃ ತಾವೂ ಮತ್ಸರಿಯಲ್ಲ. ಕೋಪದ ಹಿಂದಯೇ ಶಾಂತಿ, ಜೋರು ಮಾತಿನ ಹಿಂದೆಯೇ ನಗು. ಚೌಡಯ್ಯನವರಿಗೆ ಯಾರೂ ಶತ್ರುವಲ್ಲ. ಯಾರೂ ನಿಷ್ಠುರರಲ್ಲ. ಜನರನ್ನು ಬೇಕು ಮಾಡಿಕೊಳ್ಳುವುದು ಕಲೆಗಾರಿಕೆಯೇ ಅಲ್ಲವೆ.

ಪಂಡಿತ ಜವಹರಲಾಲ್‌ ನೆಹರೂ ಮೆಚ್ಚುಗೆಯನ್ನು ಗಳಿಸಿದ್ದ ಚೌಡಯ್ಯನವರಿಗೆ ಶ್ರೇಷ್ಠ ಪ್ರಶಸ್ತಿ, ಬಿರುದು, ಸನ್ಮಾನ ಮರ್ಯಾದೆಗಳೂ ಸಂದಿವೆ. ೧೯೩೯ರಲ್ಲಿ ಮೈಸೂರು ಸಂಸ್ಥಾನದ ವಿದ್ವತ್‌ ಪದವಿ ಪಡೆದ ಚೌಡಯ್ಯನವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ೧೯೪೧ರಲ್ಲಿ ಸಂಗೀತರತ್ನ ಬಿರುದು ನೀಡಿ ಸನ್ಮಾನಿಸಿದರು. ೧೯೫೬ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿ, ೧೯೫೭ರಲ್ಲಿ ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿಯ ಸಮ್ಮೇಳನಾಧ್ಯಕ್ಷರಾಗಿ ಸಂಗೀತ ಕಲಾನಿಧಿ ಬಿರುದು, ೧೯೫೨ರಿಂದ ೫೮ರವರೆಗೆ ಮೈಸೂರು ಸರ್ಕಾರದ ಎಂ.ಎಲ್‌.ಸಿ ಸ್ಥಾನ, ೧೯೫೯ರಲ್ಲಿ ಮೈಸೂರು ಪ್ರಸನ್ನ ಸೀತಾರಾಮ ಮಂದಿರದ ಸಂಗೀತ ಸಮ್ಮೇಳನದ ಅಧ್ಯಕ್ಷರಾಗಿದ್ದು ಗಾನಕಲಾ ಸಿಂಧು ಬಿರುದು, ಅದೇ ವರ್ಷ ಅವರನ್ನು ಮಧುರೆಯಲ್ಲಿ ಆನೆಯ ಮೇಲೆ ಕೂರಿಸಿ ಭಾರಿ ಮೆರವಣಿಗೆ ಮಾಡಿ, ಅದ್ದೂರಿ ಸನ್ಮಾನ ಮಾಡಿದ್ದಂತೂ ಅವರ ಸಂಗೀತ ಸಾಧನೆಯ ಎತ್ತರದ ದ್ಯೋತಕ. ಕಂಚಿ ಕಾಮಕೋಟಿ ಪೀಠದ ಶ್ರೀಗಳು ಚೌಡಯ್ಯನವರಿಗೆ ಪೊನ್ನುಡೈ ನೀಡಿ ಆಶೀರ್ವದಿಸಿದರೆ, ಶೃಂಗೇರಿಯ ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥರು ೧೯೬೦ರಲ್ಲಿ ಸಂಗೀತ ರತ್ನಾಕರ ಬಿರುದು ನೀಡಿ ಅನುಗ್ರಹಿಸಿದರು. ಮೈಸೂರು ರಾಜ್ಯದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯೂ ಅವರಿಗೆ ಸಂದಿತ್ತು. ವಿದ್ವಾನ್‌ ಸಂಗೀತ ರತ್ನ ಮೈಸೂರು ಟಿ. ಚೌಡಯ್ಯ ಸುವರ್ಣ ಮಹೋತ್ಸವ ಎನ್ನುವ ಭರ್ಜರಿ ಸಮಾರಂಭವೇ ೧೯೬೨ರಲ್ಲಿ ಕಲ್ಕತ್ತಾದಲ್ಲಿ ನಡೆಯಿತು.

ಕರ್ನಾಟಕದ ವಾದ್ಯ ಸಂಗೀತ ಪರಂಪರೆಯಲ್ಲಿ ಮೇರು ಸ್ವರೂಪರಾದ ಚೌಡಯ್ಯನವರನ್ನು ಅವಿಸ್ಮರಣೀಯರಾಗಿ ಮಾಡಿರುವುದು, ಅವರ ಹೆಸರಿನಲ್ಲಿ ಪಿಟೀಲಿನಾಕಾರದಲ್ಲಿ ಬೆಂಗಳೂರಿನಲ್ಲಿ ನಿರ್ಮಿಸಲಾಗಿರುವ ಸ್ಮಾರಕ ಭವನ. ಸ್ಯಾಂಕಿ ರಸ್ತೆ ಎಂದು ಕರೆಯಲಾಗುತ್ತಿದ್ದ ಬೃಹತ್‌ ರಸ್ತೆಗೆ ಟಿ. ಚೌಡಯ್ಯ ರಸ್ತೆ ಎಂದೇ ನಾಮಕರಣ ಮಾಡಲಾಗಿರುವ ರಸ್ತೆಯಲ್ಲೇ ಈ ಸಭಾಭವನವಿದೆ.

ಬದುಕು ಯಾರಿಗೂ ಶಾಶ್ವತವಲ್ಲ. ಆದರೆ ಬದುಕಿದ ಪರಿ ವ್ಯಕ್ತಿಯ ಪಡಿಯಚ್ಚನ್ನು ಮೂಡಿಸುತ್ತದೆ. ಸಮಾಜವನ್ನೂ ತಮ್ಮ ತಂತಿಗಳ ಮಾಯಾಜಾಲದಲ್ಲಿ ಹೆಣೆದಿಟ್ಟುಕೊಂಡ ಚೌಡಯ್ಯ ನಾಕು ತಂತಿಗಳ ತಮ್ಮ ಬದುಕಿನ ಗಾಯನಕ್ಕೆ ಮಂಗಳ ಹಾಡುವ ಕಾಲ ಒದಗಿಬಂತು. ಮೈಸೂರಿನ ಕೃಷ್ಮರಾಜ ಆಸ್ಪತ್ರೆಯಲ್ಲಿ ಪ್ರಜ್ಞಾಹೀನರಾಗಿ ಮಲಗಿದ್ದಾಗಲೂ ಅವರ ಎಡಗೈ ಬೆರಳುಗಳು ಪಿಟೀಲು ಹಿಡಿದಂತೆ ಮಿಡಿಯುತ್ತಿದ್ದವು. ೧೯೬೭ರ ಜನವರಿ ೧೯ನೇ ತಾರೀಖು ಗುರುವಾರ ಮಧ್ಯರಾತ್ರಿ ನಾದೋಪಾಸಕ ಚೌಡಯ್ಯನವರ ತಪಸ್ಸು ಪೂರ್ಣಗೊಂಡಿತು. ನಾದಬ್ರಹ್ಮ ಅವರನ್ನು ತನ್ನೆಡೆಗೆ ಸೆಳೆದುಕೊಂಡ. ಸಂಗೀತ ಲೋಕದ ಉಜ್ವಲ ಧ್ರುವತಾರೆ ಕಳಚಿಬಿತ್ತು. ಮಹಾನ್‌ ಯುಗಪುರುಷ, ಯೋಗಪುರುಷ ಇನ್ನಿಲ್ಲವಾದರು. ಅವರ ಜೀವನದ ಧ್ಯೇಯ ವಾಕ್ಯವೊಂದೇ ಇಂದಿಗೂ ಉಳಿದಿವೆ. ಮೊದಲು ಯೋಗ್ಯತೆಯನ್ನು ಸಂಪಾದಿಸು, ಯೋಗ ತಾನಾಗಿಯೇ ಬರುತ್ತದೆ.