ಧನುರ್ವೀಣೆ, ರಾವಣ ಹಸ್ತ, ಕೂರ್ಮವೀಣೆ ಎಂಬ ಹೆಸರಿನ ನಮ್ಮ ದೇಶದ ಪ್ರಾಚೀನ ವಾದ್ಯವು ನೂರಾರು ವರ್ಷಗಳು ಪ್ರಪಂಚ ಪರ್ಯಟನೆ ಮಾಡಿ, ರೂಪಾಂತರಗಳನ್ನು ಹೊಂದಿ, ಸುಧಾರಿತಗೊಂಡು ಪಿಟೀಲು ವಾದ್ಯವಾಗಿ, ಸುಮಾರು ೧೮೦ ವರ್ಷಗಳ ಹಿಂದೆ ಭಾರತವನ್ನು ಪ್ರವೇಶಿಸಿತು. ಮೊಟ್ಟಮೊದಲನೆಯ ಮೂರು ಪಿಟೀಲುಗಳನ್ನು ಸ್ವಾತಿ ತಿರುನಾಳ್‌ ಮಹಾರಾಜರು ಹೊರದೇಶದಿಂದ ತಮ್ಮ ಆಸ್ಥಾನ ವಿದ್ವಾಂಸರಿಗಾಗಿ ತರಿಸಿದರು. ರಾಮಸ್ವಾಮಿ ದೀಕ್ಷಿತರು ಪಿಟೀಲು ವಾದ್ಯವನ್ನು ಪ್ರಪ್ರಥಮವಾಗಿ ಕರ್ನಾಟಕ ಸಂಗೀತಕ್ಕೆ ಅಳವಡಿಸಿದರು. ತಂಜಾವೂರು ಸಹೋದರರಲ್ಲಿ ಒಬ್ಬರಾದ ವಡಿವೇಲು ಹಾಗೂ ತಿರುಕ್ಕೋಡಿ ಕಾವಲ್‌ ಕೃಷ್ಣ ಅಯ್ಯರ್, ತಿರುಚಿ ಗೋವಿಂದ ಸ್ವಾಮಿ ಪಿಳ್ಳೆ ಮುಂತಾದ ಅನೇಕ ವಿದ್ವಾಂಸರು ಈ ವಾದ್ಯವನ್ನು ಕಲಿತು, ರೂಢಿಗೆ ತಂದು, ಕರ್ನಾಟಕ ಸಂಗೀತ ಕಚೇರಿಗೆ ಅಳವಡಿಸಿ, ಭದ್ರ ಬುನಾದಿ ಹಾಕಿ ಜನಪ್ರಿಯಗೊಳಿಸಿದರು. ಇದೇ ಸಮಯದಲ್ಲಿ, ಮೈಸೂರು ಸಂಸ್ಥಾನದಲ್ಲಿಯೂ ಅನೇಕ ವಿದ್ವಾಂಸರು ಪಿಟೀಲು ವಾದನವನ್ನು ಕಲಿತು ಪ್ರಸಿದ್ಧರಾದರು. ೧೯೦೦ ರಿಂದ ೩೦ ವರ್ಷಗಳ ಕಾಲ ಬೆಂಗಳೂರಿನ ಪಿಟೀಲು ತಾಯಪ್ಪನವರ ಹೆಸರು, ಖ್ಯಾತಿ ಎಲ್ಲೆಲ್ಲೂ ಕೇಳಿ ಬರುತ್ತಿತ್ತು. ಮೈಸೂರು ಟಿ. ಚೌಡಯ್ಯನವರ ಪಿಟೀಲು ವಾದನದ ಖ್ಯಾತಿ ಎಲ್ಲೆಡೆ ಹರಡಿ, ಹೆಸರು ಗಳಿಸುವವರೆಗೆ, ತಾಯಪ್ಪನವರ ಹೆಸರೇ ಜನಜನಿತವಾಗಿದ್ದಿತು.

ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿನ ಬಳ್ಳಾಪುರದ ಪೇಟೆ ಎಂಬ ಹೆಸರಿನ ಪ್ರದೇಶವು, ಅಲ್ಲಿಯ ತುಪ್ಪದ ಆಂಜನೇಯಸ್ವಾಮಿ ದೇವಸ್ಥಾನದಿಂದ ಸುಮಾರು ಕಿಲಾರಿ ರಸ್ತೆಯವರೆಗೂ ವ್ಯಾಪಿಸಿದೆ. ಸಣ್ಣಪುಟ್ಟ ವ್ಯಾಪಾರಸ್ಥರು, ಅಕ್ಕಸಾಲಿಗರು, ಕಮ್ಮಾರರು, ಪಾನ್‌ವಾಲಾಗಳೂ ಸೇರಿದಂತೆ ಬಗೆಬಗೆಯ ಉದ್ಯೋಗಗಳಲ್ಲಿ ನಿರತರಾಗಿರುವ ಜನರಿಂದ, ಇಲ್ಲಿರುವ ಸಣ್ಣಪುಟ್ಟ ಗಲ್ಲಿ ರಸ್ತೆಗಳು ಗಿಜಿ ಗುಟ್ಟುತ್ತಿರುತ್ತವೆ. ಈ ಪೈಕಿ ಇಲ್ಲೇ ಹುಟ್ಟಿ ಬೆಳೆದು ಹೆಸರು ಗಳಿಸಿದ್ದ ಅನೇಕ ಸಂಗೀತ ವಿದ್ವಾಂಸರೂ, ನಾಟ್ಯರಾಣಿಯರೂ ಇದ್ದರು. ಈ ಸಂಗೀತಗಾರರಲ್ಲಿ ವೀರಭದ್ರಪ್ಪನವರೆಂಬ ಪಿಟೀಲು ವಿದ್ವಾಂಸರು ೧೮೭೦ರ ಸುಮಾರಿನಲ್ಲಿ ಬಳ್ಳಾಪುರದ ಪೇಟೆಯಲ್ಲಿ ಬಹಳ ಹೆಸರುವಾಸಿಯಾಗಿದ್ದರು. ಪಿಟೀಲು ತಾಯಪ್ಪನವರು, ಪಿಟೀಲು ವೀರಭದ್ರಪ್ಪನವರ ಮಗ. ಅವರ ಜನ್ಮ ದಿನಾಂಕ ೩, ನವೆಂಬರ್, ೧೮೮೦ ಎಂದು ತಿಳಿದು ಬರುತ್ತದೆ.

ಚಿಕ್ಕಂದಿನಿಂದಲೇ ಮಗು ತಾಯಪ್ಪ, ಸಂಗೀತದಲ್ಲಿ ತೋರಿಸುತ್ತಿದ್ದ ಆಸಕ್ತಿ ಅಭಿರುಚಿಗಳನ್ನು ಗಮನಿಸಿದ ಅವರ ತಂದೆ, ಮಗುವಿಗೆ ಸಂಗೀತದಲ್ಲಿಯೇ ಶಿಕ್ಷಣವನ್ನು ಕೊಡಲು ನಿರ್ಧರಿಸಿದರು. ವೀರಭದ್ರಪ್ಪನವರೇ ತಾಯಪ್ಪನವರಿಗೆ ಮೊದಲ ಗುರು. ಗಾಯನದಲ್ಲೂ, ಪಿಟೀಲು ವಾದನದಲ್ಲೂ ಶಿಕ್ಷಣ ಪ್ರಾರಂಭವಾಯಿತು. ತಂದೆಯವರಿತ್ತ ಕಠಿಣವಾದ ಶಿಕ್ಷಣ, ಸಾಧನೆ, ಪರಿಶ್ರಮ ಮತ್ತು ಶಿಸ್ತಿನ ಅಭ್ಯಾಸದಿಂದಾಗಿ, ತಾಯಪ್ಪನವರು ಅತ್ಯಲ್ಪ ಕಾಲದಲ್ಲಿಯೇ ಗಾಯನ ಮತ್ತು ಪಿಟೀಲು ವಾದನಗಳೆರಡರಲ್ಲೂ ಪಾಂಡಿತ್ಯಗಳಿಸಿ ಪರಿಣತರಾದರು. ಸುಮಾರು ೨೦ ವಯಸ್ಸಿನ ಪ್ರಾಯದಲ್ಲಿಯೇ ಹೆಸರಾಂತ ವಿದ್ವಾಂಸರೆನ್ನಿಸಿಕೊಂಡರು. ತಾಯಪ್ಪನವರಿಗೆ ಒಳ್ಳೆಯ ಶಾರೀರವಿದ್ದಿತು. ಎರಡೂವರೆ ಸ್ಥಾಯಿಗಳಲ್ಲಿ ಸುಶ್ರಾವ್ಯವಾಗಿ ಹಾಡಬಲ್ಲವರಾಗಿದ್ದರು. ಅವರ ಕಚೇರಿಗಳಲ್ಲಿ ಯಾವಾಗಲೂ ರಸಿಕರು ಕಿಕ್ಕಿರಿದು ನೆರೆದಿರುತ್ತಿದ್ದರು. ನೂರಾರು ಗಾಯನ ಕಚೇರಿಗಳನ್ನು ನೀಡಿ ಜನಪ್ರಿಯರಾಗಿದ್ದರು. ಒಮ್ಮೆ ಪ್ರಸಿದ್ಧ ಬರಹಗಾರರಾದ ಡಿ.ವಿ.ಜಿ.ಯವರು ಯಾರೋ ಅಪರಿಚಿತರ ಮದುವೆ ಮನೆಯಲ್ಲಿ ಎರ್ಪಾಟಾಗಿದ್ದ ತಾಯಪ್ಪನವರ ಗಾಯನ ಕಚೇರಿಯನ್ನು ಕೇಳಲೇಬೇಕೆಂದು, ತಮ್ಮ ಸ್ನೇಹಿತರಾದ ಎನ್‌. ನರಸಿಂಹಮೂರ್ತಿಯವರೊಂದಿಗೆ, ಮದುವೆ ಮನೆಗೆ ಹೋಗಿ ಕಚೇರಿಯನ್ನು ಕೇಳಿ ಆನಂದಿಸಿದ ವಿಷಯವನ್ನು ಹೇಳಿದ್ದಾರೆ. ಆದಿನ ರಾತ್ರಿ ೯.೩೦ ರ ಹೊತ್ತಿಗೆ ಪ್ರಾರಂಭವಾದ ಅವರ ಗಾಯನ ಅತ್ಯದ್ಭುತವಾಗಿದ್ದಿತಂತೆ. ಅಂದಿನ ಅವರ ಮನೋಧರ್ಮ, ಪಾಂಡಿತ್ಯ; ಶಾರೀರ ಸೌಖ್ಯಗಳಿಂದಾಗಿ, ಅವರು ಹಾಡಿದ ಗೌಳಿಪಂತು ರಾಗ, ತ್ಯಾಗರಾಜರ ‘ತೆರತೀಯಗರಾದಾ’ ಕೃತಿ ಎಲ್ಲರನ್ನೂ ಮೋಡಿ ಮಾಡಿ ಮೈ ಮರೆಯುವಂತೆ ಮಾಡಿತು, ಮತ್ತೆಂದೂ ಅಂತಹ ಗೌಳಿಪಂತುರಾಗವನ್ನು ಯಾರಿಂದಲೂ ಕೇಳಲಿಲ್ಲ ಎಂದು ನೆನಸಿದ್ದಾರೆ. ತಾಯಪ್ಪನವರು ಅಪರೂಪದ ರಾಗಗಳನ್ನೇ ಹೆಚ್ಚಾಗಿ ವಿಸ್ತರಿಸಲು ಇಷ್ಟಪಡುತ್ತಿದ್ದರು.

ದುರದೃಷ್ಟವಶಾತ್‌, ೧೯೧೮ ರಲ್ಲಿ ಊರಿಗೆ ಬಂದ ಇನ್‌ಪ್ಲೂಯೆಂಜಾ ಪಿಡುಗು ಇವರನ್ನೂ ಬಿಡಲಿಲ್ಲ. ಖಾಯಿಲೆಯಿಂದ ಚೇತರಿಸಿಕೊಂಡರೂ, ಗಾಯನ ಕಷ್ಟಸಾಧ್ಯವಾಗುತ್ತಿತ್ತು. ಆದರೂ ಗಾಯನ ಕಚೇರಿಗಳನ್ನು ಮುಂದುವರಿಸಿದ್ದರು. ೧೯೧೯ ರಲ್ಲಿ ಅಲಸೂರಿನ ಸೋಮೇಶ್ವರ ದೇವಾಲಯದಲ್ಲಿ ಪುಟ್ಟಪ್ಪನವರ ಪಿಟೀಲು ಮತ್ತು ನಂಜಪ್ಪನವರ ತಬಲವಾದನ ಸಹಕಾರದೊಂದಿಗೆ ತಾಯಪ್ಪನವರ ಗಾಯನ ಕಚೇರಿ ಏರ್ಪಾಟಾಗಿದ್ದಿತು. ಕಚೇರಿಯ ಮಧ್ಯದಲ್ಲಿ ತಾಯಪ್ಪನವರು ರಕ್ತವನ್ನು ಕಾರಿ ಅಸ್ವಸ್ಥರಾದರು. ರಸಿಕವೃಂದಕ್ಕೆ ಅದೇ ಅವರ ಕೊನೆಯ ಗಾಯನ ಕಚೇರಿಯಾಯಿತು. ಇದಾದ ನಂತರ ತಾಯಪ್ಪ ಹಾಡುವುದಿರಲಿ, ಮಾತನಾಡುವುದೂ ಕಷ್ಟವಾಗುತ್ತಿತ್ತು. ಸುಮಾರು ಮೂರು ವರ್ಷಗಳು ನರಳಿದ ನಂತರ ಅವರ ಸ್ಥಿತಿ ಸುಧಾರಿಸಿ ಸಂಪೂರ್ಣ ಗುಣಮುಖರಾದರು. ಆದರೆ ಮತ್ತೆ ಹಾಡುವುದು ಸಾಧ್ಯವಾಗಲಿಲ್ಲ. ತಮಗೆ ದೈವದತ್ತವಾಗಿ ಒಲಿದಿದ್ದ ಪಿಟೀಲು ವಾದನವನ್ನೇ ಮುಂದೆ ಗಂಭೀರವಾಗಿ ರೂಢಿಸಿಕೊಳ್ಳುವುದೆಂದು ನಿರ್ಧರಿಸಿದರು. ಕಠಿಣ ಪರಿಶ್ರಮ ಸಾಧನೆಗಳಿಂದ ತಾವು ಈಗಾಗಲೇ ಕಲಿತಿದ್ದ ಪಿಟೀಲು ವಾದನವನ್ನು, ಮತ್ತಷ್ಟು ಮೆರುಗಿತ್ತು ವಿದ್ವತ್ಪೂರ್ಣವಾಗಿಸಿಕೊಂಡರು.

ತಾಯಪ್ಪನವರು ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ವಿದ್ವಾಂಸರ ಪೈಕಿ ಒಬ್ಬರೆನಿಸಿಕೊಂಡಿದ್ದರು. ಅಂದು ಮೈಸೂರಿನಲ್ಲಿ ರಾಜಮಹಾರಾಜರುಗಳಿಂದ ದೊರೆಯುತ್ತಿದ್ದ ಧಾರಾಳವಾದ ಕಲಾಪೋಷಣೆಗೆ ಹೋಲಿಸಿದರೆ, ಬೆಂಗಳೂರಿನಲ್ಲಿ ಕಾಲವಿದರಿಗೆ ಸಿಗುತ್ತಿದ್ದ ಆಶ್ರಯ ಅತ್ಯಲ್ಪ. ಆದರೂ ಅನೇಕ ಮಂದಿ ಹೆಸರಾಂತ ವಿದ್ವಾಂಸರು ಬೆಂಗಳೂರಿನಲ್ಲಿಯೂ ಇದ್ದರು. ಉದಾ: ಕೆಂಪೇಗೌಡರು, ದಕ್ಷಿಣಾಮೂರ್ತಿ ಶಾಸ್ತ್ರಿಗಳು, ಕರೂರು ದಕ್ಷಿಣಾ ಮೂರ್ತಿಗಳು, ಅನಂತ ಕೃಷ್ಣ ಶಾಸ್ತ್ರಿಗಳು, ರುದ್ರಪಟ್ಟಣದ ವೆಂಕಟರಾಮಯ್ಯನವರು, ವೀಣೆ ಗೋಪಾಲರಾಯರು, ಪಿಟೀಲು ಪುಟ್ಟಪ್ಪನವರು, ನಾಗಭೂಷಣಂ ಮೊದಲಾದವರು.

೧೯೧೪-೪೦ರ ನಡುವೆ ಬೆಂಗಳೂರಿನಲ್ಲಿ ನಡೆದ ಸಂಗೀತ ಕಚೇರಿಗಳಿಗೆ, ತಾಯಪ್ಪನವರ ಪಿಟೀಲು ವಾದ್ಯ ಸಹಕಾರಕ್ಕಾಗಿ ಅತ್ಯಂತ ಹೆಚ್ಚು ಬೇಡಿಕೆ ಇದ್ದಿತು. ಅವರ ಸಮಕಾಲೀನರಾಗಿದ್ದ ಬಿಡಾರಂ ಕೃಷ್ಣಪ್ಪನವರು, ಚಿಕ್ಕರಾಮರಾಯರು, ಅನಂತ ಶಾಸ್ತ್ರಿಗಳು, ಕೆಂಪೇಗೌಡರು, ಚಿಂತಲಪಲ್ಲಿ ವೆಂಕಟರಾಯರು, ಚಿಂತಲಪಲ್ಲಿ ರಾಮಚಂದ್ರರಾಯರು, ಬಿ.ಎಸ್‌.ರಾಜ ಅಯ್ಯಂಗಾರ್ಯರು ಮೊದಲಾದ ಕನ್ನಡನಾಡಿನ ಅನೇಕ ಸುಪ್ರಸಿದ್ಧ ಗಾಯಕರಿಗೆ ಅವರು ಪಿಟೀಲು ವಾದನ ಸಹಕಾರವಿತ್ತಿದ್ದರು. ಪ್ರಧಾನ ಕಲಾವಿದರೊಡನೆ ಸ್ವಲ್ಪವೂ ಘರ್ಷಣೆ ಆಗದಂತೆ, ಅವರ ಮನೋಧರ್ಮ ಕಲ್ಪನೆಗಳನ್ನು ಅನುಸರಿಸಿ, ಪ್ರೋತ್ಸಾಹಿಸಿ, ಸಂಗೀತ ಸೌಖ್ಯವನ್ನು ಹೆಚ್ಚಿಸುತ್ತಿದ್ದ ತಾಯಪ್ಪನವರ ಪಿಟೀಲು ವಾದನ ಸಹಕಾರ ಎಂದೆಂದೂ ರಸಿಕರ ಮನಸ್ಸಿನಲ್ಲಿ ಉಳಿಯುವಂತಹುದಾಗಿತ್ತು. ೧೯೧೪ರಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ ೧೮ ಪ್ರಾಯದ ಚೆಂಬೈ ವೈದ್ಯನಾಥ ಭಾಗವತರಿಗೆ ಪಕ್ಕವಾದ್ಯ ನೀಡಿದ್ದ ತಾಯಪ್ಪನವರು, ಮುಂದೆ ಅನೇಕ ಕಚೇರಿಗಳಲ್ಲಿ ಚೆಂಬೈಯವರೊಡನೆ ಪಿಟೀಲು ವಾದಕರಾಗಿ ವೇದಿಕೆ ಏರಿದ್ದರು. ೭೪ರ ವೃದ್ಧಾಪ್ಯದಲ್ಲಿ ಚೆಂಬೈಯವರು ಒಮ್ಮೆ ಬೆಂಗಳೂರಿನ ಫೋರ್ಟ್‌ ಹೈಸ್ಕೂಲಿನಲ್ಲಿ ಸಂಗೀತೋತ್ಸವಕ್ಕಾಗಿ ಬಂದಿದ್ದರು. ಆಗ ಪ್ರಸಿದ್ಧ ಸಂಗೀತ ಸಾಹಿತಿಗಳಾದ ‘ರಾಜಶ್ರೀ’ಯವರು ತಾಯಪ್ಪನವರ ಬಗ್ಗೆ ಅವರ ಅಭಿಪ್ರಾಯ ಕೇಳಲಾಗಿ, ಚೆಂಬೈಯವರು ತಮ್ಮ ಅನೇಕ ಕಚೇರಿಗಳಿಗೆ ತಾಯಪ್ಪನವರ ಪಕ್ಕವಾದ್ಯ ಸಹಕಾರವನ್ನು ನೆನೆದು ಶ್ರುತಿ ಶುದ್ಧತೆ ಮತ್ತು ಸುಸ್ವರಗಳು ಅವರ ಪಿಟೀಲು ವಾದನದ ವಿಶಿಷ್ಟತೆ ಅಲ್ಲದೆ ಪ್ರಧಾನ ಕಲಾವಿದರು ಧೈರ್ಯವಾಗಿ ಮುನ್ನಡೆಯಬಹುದಾದ ವಿಶ್ವಾಸನೀಯ ಪಿಟೀಲು ವಾದನ ಸಹಕಾರ ಅವರದು, ಎಂದರಂತೆ. ಗಾಯನ ಸಮಾಜದಲ್ಲಿ ಏರ್ಪಾಟಾಗಿದ್ದ ಚೆಂಬೈ-ತಾಯಪ್ಪ-ನಂಜಪ್ಪನವರುಗಳು ಸೇರಿದ್ದ ಘನವಾದ ಕಚೇರಿ ಚಿರಸ್ಮರಣೀಯ ಎನ್ನುತ್ತಾರೆ, ಕೇಳಿದ್ದ ರಸಿಕರು.

೧೯೪೦ರಲ್ಲಿ ನಗರದ ಶಿವಾನಂದ ಥಿಯೇಟರ್ ನಲ್ಲಿ ಸುಪ್ರಸಿದ್ಧ ವಿದ್ವಾಂಸರಾದ ಅರಿಯಕ್ಕುಡಿಯವರ ಕಚೇರಿಗೆ ತಾಯಪ್ಪನವರದೇ ಪಿಟೀಲು ಸಹಕಾರ. ಅಕ್ಷರಶಃ ‘ಪಿಟೀಲು ಸಹಕಾರ’ವನ್ನು ಇತ್ತಿದ್ದ ತಾಯಪ್ಪನವರನ್ನು ಮೆಚ್ಚಿ ಮಾರುಹೋದ ಅರಿಯಕ್ಕುಡಿಯವರು, ವೇದಿಕೆಯಲ್ಲೇ ತಾಯಪ್ಪನವರನ್ನು ಕುರಿತು ‘

ನೀವು ಮಗುವನ್ನು ಎಲ್ಲ ರೀತಿಯಲ್ಲೂ ಪ್ರೀತಿಯಿಂದ ಪೋಷಿಸಿ ಬೆಳೆಸುವ ತಾಯಿಯಂತೆ ಇದ್ದೀರಿ. ಕಚೇರಿಯಲ್ಲಿ ಪಕ್ಕವಾದ್ಯದವರಾಗಿ ಕುಳಿತು, ಪ್ರಧಾನ ಗಾಯಕನ ಸಂಗೀತವನ್ನು ಪ್ರೀತಿಯಿಂದ ಪೋಷಿಸುತ್ತಿರುವ ನೀವು ನಿಜವಾಗಿ ಗಾಯಕನಿಗೆ ತಾಯಿ ಇದ್ದಂತೆ. ನಿಮ್ಮ ಹೆಸರು ನಿಮಗೆ ಅನ್ವರ್ಥ ನಾಮವಾಗಿದೆ’ ಎಂದು ಹೃದಯತುಂಬಿ ಭಾವುಕರಾಗಿ ಹೊಗಳಿದರೆಂದು ತಿಳಿದು ಬರುತ್ತದೆ.

ತಾಯಪ್ಪನವರ ಕಲೆಯ ಹಿರಿಮೆಯನ್ನು ಅವರು ನಡೆಸಿಕೊಟ್ಟ ಅಸಂಖ್ಯಾತ ಕಚೇರಿಗಳೇ ತಿಳಿಸುತ್ತವೆ. ತಾಯಪ್ಪನವರ ಪಿಟೀಲು ವಾದನ ಸಹಕಾರವೆಂದರೆ ಪ್ರಧಾನ ಕಲಾವಿದರಿಗೆ ಅತ್ಯಂತ ಹೆಮ್ಮೆಯ ವಿಷಯ. ತಾಯಪ್ಪನವರಿಂದ ಮೆಚ್ಚುಗೆ ಪಡೆದರೆ ಅಂದಿನ ಕಚೇರಿ ಸಾರ್ಥಕವಾದಂತೆ ಎಂಬ ಭಾವನೆ ಇತ್ತು. ಅವರ ಅನೇಕ ಕಚೇರಿಗಳಿಗೆ, ಪ್ರಸಿದ್ಧ ಪಿಟೀಲು ವಿದ್ವಾಂಸರಾಗಿದ್ದ ಪಿ. ಭುವನೇಶ್ವರಯ್ಯನವರ ತಂದೆ, ಕೆ.ವೈ.ಪಿಳ್ಳಯ್ಯನವರ ತಬಲ ವಾದನ ಸಹಕಾರವಿರುತ್ತಿತ್ತು. ತಾಯಿನಾಡು ಪತ್ರಿಕೆಯ ಸಂಪಾದಕರಾಗಿದ್ದ ಪಿ.ಬಿ. ಶ್ರೀನಿವಾಸನ್‌ ರವರು, ಎ. ಸುಬ್ಬರಾಯರು, ‘ಸುಧಾ’ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದ ಇ.ಆರ್. ಸೇತೂರಾಮ್‌ ಅವರು, ‘ರಾಜಶ್ರೀ’ಯವರು, ‘ಸಾರಗ್ರಾಹಿ’ ಮೊದಲಾದ ಕಲಾ ವಿಮರ್ಶಕರು, ಪ್ರಸಿದ್ಧ ಸಾಹಿತಿಗಳಾದ ಡಿ.ವಿ. ಗುಂಡಪ್ಪನವರು ಮುಂತಾದ ಹಲವಾರು ಗಣ್ಯ ವ್ಯಕ್ತಿಗಳು ತಾಯಪ್ಪನವರ ಕಲೆ ಮತ್ತು ವ್ಯಕ್ತಿತ್ವಗಳನ್ನು ಸಮೀಪದಿಂದ ಕಂಡು ಅರಿತವರು. ತಾಯಪ್ಪನವರು ಮದರಾಸು, ತಿರುಚಿ ಮತ್ತು ಮೈಸೂರು ಬಾನುಲಿ ಕೇಂದ್ರಗಳಿಂದ ನಿಯಮಿತವಾಗಿ ಕಾರ್ಯಕ್ರಮಗಳನ್ನೀಯುತ್ತಿದ್ದರು. ಮೇಲೆ ಹೇಳಿದ ಪ್ರದೇಶಗಳಲ್ಲಿಯೂ, ಸೇಲಂ, ಕೊಯಮತ್ತೂರು, ಮುಂತಾದ ಅನೇಕ ದಕ್ಷಿಣ ಭಾರತದ ಪ್ರಸಿದ್ಧ ಊರುಗಳಲ್ಲೂ ಕಚೇರಿ ನೀಡಿ ಪ್ರಖ್ಯಾತರಾಗಿದ್ದರು. ಬೆಂಗಳೂರಿನ ಒಂದು ಅಪರೂಪದ ಕಚೇರಿಯಲ್ಲಿ ಕಾಂಚೀಪುರದ ಸುಪ್ರಸಿದ್ಧ ವಿದ್ವಾಂಸರಾದ ನಾಯನಾ ಪಿಳ್ಳೆಯವರಿಗೆ ಪಿಟೀಲು ವಾದನದಲ್ಲಿ ಸಹಕಾಋ ನೀಡಿ ಮೆಚ್ಚುಗೆ ಪಡೆದ ಹಿರಿಮೆ ತಾಯಪ್ಪನವರದು. ಅವರ ಪಕ್ಕವಾದ್ಯದೊಡನೆ ವಿಜೃಂಭಿಸಿದ ಮತ್ತೆ ಕೆಲವು ದಿಗ್ಗಜರ ಅವಿಸ್ಮರಣೀಯ ಕಚೇರಿಗಳೆಂದರೆ, ಗಾಯನ ಸಮಾಜದಲ್ಲಿ ನಡೆದ ಚಿಂತಲಪಲ್ಲಿ ರಾಮಚಂದ್ರರಾಯರ ಪ್ರಥಮ ಕಚೇರಿ (೧೯೩೦), ಚೆಂಬೈಯವರು ಮಹಾರಾಜಪುರಂನಲ್ಲಿ (ಫೆಬ್ರವರಿ, ೨೪, ೧೯೩೫), ಮೈಸೂರು ಕೆ. ವಾಸುದೇವಾಚಾರ್ಯರು (ಏಪ್ರಿಲ್‌ ೧೪, ೧೯೩೭), ಪಲ್ಲಡಂ ಸಂಜೀವರಾಯರ ಕೊಳಲು (೧೯೩೭), ಪಾಲ್ಫಾಟ್‌ ರಾಮಭಾಗವತರು (೧೯೩೮) ಮುಂತಾದವು. ೧೯೧೨ರ ಸುಮಾರಿನಲ್ಲಿ ತಿರುಚಿ ಮೊದಲಾದ ದಕ್ಷಿಣ ದೇಶದ ಸಂಗೀತ ಕೇಂದ್ರಗಳಲ್ಲಿ ನಡೆದ ಮೈಸೂರು ಕೆ. ವಾಸುದೇವಾಚಾರ್ಯರ ಅನೇಕ ಕಚೇರಿಗಳಿಗೆ ತಾಯಪ್ಪನವರು ಪಿಟೀಲುವಾದನ ಸಹಕಾರ ನೀಡಿದ್ದರು. ಮಲ್ಲೇಶ್ವರದಲ್ಲಿ ನಡೆದ ಎಸ್.ಎನ್‌.ಮರಿಯಪ್ಪನವರ ಗಾಯನ ಮತ್ತು ತಾಯಪ್ಪನವರ ಪಿಟೀಲು ವಾದನದ ಘನವಾದ ಕಚೇರಿ, ಹಿರಯರನೇಕರಿಗೆ ನೆನಪಿರಬಹುದು. ಪ್ರಸಿದ್ಧ ಖಂಜರಿ ವಿದ್ವಾಂಸರಾಗಿದ್ದ ಸಿಂಗಾರಮ್‌ ಪಿಳ್ಳೆ, ಮೃದಂಗವಿದ್ವಾನ್‌ ಪುಟಾಚಾರ್ ಸಾಮಾನ್ಯವಾಗಿ ಅವರ ಸಹ ವಾದಕರಾಗಿರುತ್ತಿದ್ದರು.

ಪ್ರಸಿದ್ಧ ಸಂಗೀತ, ಚಲನಚಿತ್ರ ಮತ್ತು ಹರಿಕಥಾ ವಿದ್ವಾಂಸರಾಗಿದ್ದ ಹೊನ್ನಪ್ಪ ಭಾಗವತರು ಕನ್ನಡನಾಡಿನ ಒಳಗೂ ಹೊರಗೂ ಅನೇಕ ಸಂಗೀತ ಕಚೇರಿಗಳನ್ನು ಮಾಡಿ ಪ್ರಸಿದ್ಧರಾಗಿದ್ದರು. ಅವರಿಗೆ ತಮಿಳುನಾಡಿನ ಕಚೇರಿಗಳಲ್ಲಿ ತಾಯಪ್ಪನವರು ಮತ್ತು ಅವರ ಮಗ ಬಿ.ಟಿ. ರಾಜಪ್ಪನವರು ಪಿಟೀಲಿನಲ್ಲೂ, ಸೇಲಂ ಪಳಿನಿ ಸಾಮಿ ಮೃದಂಗ ವಾದನದಲ್ಲೂ ಸಹಕಾರವಿತ್ತು ಕಚೇರಿಗಳು ಅತ್ಯಂತ ಯಶಸ್ವಿಯಾಗುವುದಕ್ಕೆ ಕಾರಣರಾದರು. ಹಾಗೆಯೇ, ಅನೇಕ ವರ್ಷಗಳ ಹಿಂದೆ ಬೆಂಗಳೂರಿನ ಕುಳಿತಲೈ ಕೃಷ್ಣಸ್ವಾಮಿರಾವ್‌ ಎಂಬುವರ ಗೃಹದಲ್ಲಿ ನಡೆದ, ಘನ ವಿದ್ವಾಂಶರೂ ವಾಗ್ಗೇಯಕಾರರೂ ಆಗಿದ್ದ ಟೈಗರ್‌ ವರದಾಚಾರ್ಯರ ಸಂಗೀತಕ್ಕೆ ತಾಯಪ್ಪನವರು ಪಿಟೀಲು ನುಡಿಸಿದ ‘ಆ ಕಚೇರಿ’ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಆ ಕಚೇರಿಗೆ ಮೃದಂಗ ಸಹವಾದನ ನೀಡಿದ್ದ ಹೆಚ್‌. ಪುಟ್ಟಾಚಾರ್ ಪದೇ ಪದೇ ನೆನೆಯುತ್ತಿದ್ದರೆಂದು ತಿಳಿದು ಬರುತ್ತದೆ.

ಸಂಗೀತ ಕ್ಷೇತ್ರದಲ್ಲಿ ಅವರು ತಾಯ್ನಾಡಿಗೆ ಸಲ್ಲಿಸಿದ ಸೇವೆ, ತಂದ ಕೀರ್ತಿಗಾಗಿ, ಅಂದಿನ ಮೈಸೂರು ಸಂಸ್ಥಾನದ ಆಳರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಾಯಪ್ಪನವರನ್ನು ಆಸ್ಥಾನ ವಿದ್ವಾಂಸರಾಗಿ ನೇಮಿಸಿ ಗೌರವಿಸಿದರು. ತಾಯಪ್ಪನವರಿಗೆ ದೇಶದ ಪ್ರಪ್ರಥಮ ಸಂಗೀತ ಸಂಸ್ಥೆಯಾದ ಗಾಯನ ಸಮಾಜದ ಬಗ್ಗೆ ಬಹಳ ಅಭಿಮಾನ. ಸಮಾಜ ತಾಯಪ್ಪನವರಿಗೆ ಅವರ ಕೊನೆಗಾಲದವರೆಗೂ ನಿರಂತರವಾಗಿ ಪ್ರೋತ್ಸಾಹವಿತ್ತು ಅವರ ಕಲಾ ಪೋಷಣೆ ಮಾಡುತ್ತಿತ್ತು. ಸಮಾಜದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ಅವರು ತಪ್ಪದೆ ಹಾಜರಿರುತ್ತಿದ್ದರೆಂದು ತಿಳಿದು ಬರುತ್ತದೆ. ಬೆಂಗಳೂರಿನ ಎಣ್ಣೆ ವ್ಯಾಪಾರಿಗಳಾಗಿದ್ದ ತಿರುವೆಂಗಡಸ್ವಾಮಿ ಮೊದಲಿಯಾರ್ ಎಂಬ ಧನಿಕರು ತಾಯಪ್ಪನವರ ಪ್ರಮುಖ ಕಲಾ ಪೋಷಕರೂ, ಕಲಾ ಪ್ರಾಯೋಜಕರೂ ಆಗಿದ್ದರು. ಅವರ ಮನೆಯ ಯಾವೊಂದು ಸಮಾರಂಭವೂ ತಾಯಪ್ಪನವರ ಪಿಟೀಲು ವಾದನದ ಸಂಭ್ರಮವಿಲ್ಲದೆ ನಡೆಯುತ್ತಿರಲಿಲ್ಲ. ಸಮಾರಂಭದ ನಂತರ ಕೊಡುಗೈಯಿಂದ ಅನೇಕ ಕಾಣಿಕೆಗಳನ್ನಿತ್ತು ಸನ್ಮಾನಿಸುತ್ತಿದ್ದರು.

ನಾಟಕರಂಗದ ನಟ ಸಾರ್ವಭೌಮ, ನಾಟಕ ಶಿರೋಮಣಿ ಎನಿಸಿದ ಶ್ರೀ ಎ.ವಿ. ವರದಾಚಾರ್ ಅವರಂತಹ ಕಲಾವಿದರೂ ಸಹ ತಾಯಪ್ಪನವರ ಪಿಟೀಲು ವಾದನದ ವೈಖರಿಗೆ ಮಾರು ಹೋಗಿದ್ದರು. ಎ.ವಿ. ವರದಾಚಾರ್ ಅವರ ಜನಪ್ರಿಯ ಕಂಪೆನಿ ನಾಟಕಗಳು ಸಂಗೀತಕ್ಕೆ ಪ್ರಸಿದ್ಧವಾಗಿದ್ದವು. ಇವರ ನಾಟಕಗಳಲ್ಲಿ, ಅದರಲ್ಲೂ ನಾಟಕದ ಕಂಪೆನಿಯು ಬೆಂಗಳೂರಿನಲ್ಲಿ ಮೊಕ್ಕಾಂ ಹೂಡಿದಾಗ ಬಿ.ಎಸ್‌. ರಾಜಯ್ಯಂಗಾರ್ಯರ ಅದ್ಭುತ ಗಾಯನಕ್ಕೆ, ಅರುಣಾಚಲಪ್ಪನವರ ಹಾರ್ಮೋನಿಯಂ ಮತ್ತು ತಾಯಪ್ಪನವರ ಪಿಟೀಲು, ಪಿಳ್ಳಯ್ಯನವರ ತಬಲವಾದನದೊಡನೆ ತಪ್ಪದೆ ಇರುತ್ತಿತ್ತು. ರಂಗಭೂಮಿಯಲ್ಲಿ, ತಾಯಪ್ಪನವರು ತಮ್ಮ ಹಿನ್ನೆಲೆ ಸಂಗೀತದಿಂದ ಪ್ರೇಕ್ಷಕರಿಗೆ ಮೈಮರೆಸುವಂತಹ ವಿಶೇಷ ನಾದ ಲೋಕವನ್ನು ಸೃಷ್ಟಿಸುತ್ತಿದ್ದರು. ಪಿಟೀಲಿನ ತಂತಿಗಳನ್ನು ಜಗ್ಗಿ, ಹಿಡಿದು ನಾನಾ ರೀತಿಗಳಲ್ಲಿ ವಾದನ ತಂತ್ರಗಳನ್ನು ಅನುಸರಿಸಿ, ನಾಟಕದಲ್ಲಿ ನಟರಿಗೆ ಸಂದರ್ಭೋಚಿತವಾಗಿ ನಾಟಕೀಯವಾದ ಧ್ವನಿ ವಿಶೇಷಗಳನ್ನು ಹೊರಹೊಮ್ಮಿಸುವುದರಲ್ಲಿ ತಾಯಪ್ಪನವರಿಗೆ ಯಾರೂ ಸರಿಸಾಟಿ ಇರಲಿಲ್ಲ. ಹಾಗೆಯೇ ನಾಟಕ ರಂಗದ ಮತ್ತೊಬ್ಬ ಮಹಾನ್‌ ಕಲಾವಿದರಾದ ಬಳ್ಳಾರಿ ರಾಘವಾಚಾರ್ಯರೂ ಸಹ ತಮ್ಮ ನಾಟಕಗಳಲ್ಲಿ ತಾಯಪ್ಪನವರ ಪಿಟೀಲು ವಾದನವನ್ನು ಅತ್ಯವಶ್ಯಕವಾಗಿ ಬಳಸಿಕೊಳ್ಳುತ್ತಿದ್ದರು. ಅವರು ತಾಯಪ್ಪನವರ ಆತ್ಮೀಯ ಗೆಳೆಯರೂ, ಶ್ರೇಯೋಭಿಲಾಷಿಯೂ ಆಗಿದ್ದರು.

ಅಂದಿನ ಸುಪ್ರಸಿದ್ಧ ಹರಿಕಥಾ ವಿದ್ವಾಂಸರಾಗಿದ್ದ ಸೋಸಲೆ ರಾಮದಾಸರಿಗೆ ತಾಯಪ್ಪನವರಲ್ಲಿ ಅತ್ಯಂತ ಗೌರವ. ಅವರ ಕಥಾ ಕಾಲಕ್ಷೇಪಗಳಲ್ಲಿಯೂ ಸಾಮಾನ್ಯವಾಗಿ ತಾಯಪ್ಪನವರದೇ ಪಿಟೀಲು ವಾದನವಿರುತ್ತಿತ್ತು. ಹಾರ್ಮೋನಿಯಂ ವಿದ್ವಾಂಸರಾದ ಅರುಣಾಚಲಪ್ಪನವರೂ ಸಹ ತಾಯಪ್ಪನವರ ಕಲೆ ಮತ್ತು ವ್ಯಕ್ತಿತ್ವಗಳ ಬಗ್ಗೆ ಅತ್ಯಂತ ಗೌರವ ಪೂರ್ಣವಾಗಿ ಹೊಗಳುತ್ತಿದ್ದರೆಂದು ಕೇಳಿಬರುತ್ತದೆ. ಖಂಜರಿ ವಾದನದಲ್ಲಿ ಸುಪ್ರಸಿದ್ಧರಾಗಿದ್ದ ಸಿಂಗಾರಂ ಪಿಳ್ಳೆಯವರು ತಾಯಪ್ಪನವರ ಪಾಂಡಿತ್ಯ ಹಿರಿತನಗಳನ್ನು ಮನಗಂಡು, ಅವರ ಮಾರ್ಗದರ್ಶನವಿಲ್ಲದೆ ಯಾವ ಕಾರ್ಯಕ್ಕೂ ಕೈ ಹಾಕುತ್ತಿರಲಿಲ್ಲವಂತೆ, ಅವರೀರ್ವರೂ ಪ್ರತಿವರ್ಷವೂ ತ್ಯಾಗರಾಜಸ್ವಾಮಿಗಳ ಆರಾಧನೆಯನ್ನು ಒಟ್ಟಾಗಿ ಸೇರಿಯೇ ಆಚರಿಸುತ್ತಿದ್ದರೆಂದು ತಿಳಿದು ಬರುತ್ತದೆ.

ತಾಯಪ್ಪನವರು ವಿಳಂಬಕಾಲದ ನೆಮ್ಮದಿಯ ವಾದನದಲ್ಲಿ ಪ್ರವೀಣರಾಗಿದ್ದರು. ಅಲ್ಲಲ್ಲಿ ದ್ರುತಕಾಲದ ಸಂಚಾರಗಳೂ ಮಿಂಚಿನಂತೆ ಸುಳಿದಾಡುತ್ತಿದ್ದವು. ವಿಳಂಬ ಕಾಲದ ಗಜ ಗಾಂಭೀರ್ಯ ಗತಿಯಲ್ಲಿ ಸಾಗುವ ಅವರ ಸಂಗೀತ ರಚನೆಯಾಗಲೀ, ರಾಗಾಲಾಪನೆಯಾಗಲೀ, ಶ್ರೋತೃಗಳಿಗೆ, ಭಾವ ಪೂರ್ಣವಾದ ಸಂಗೀತದ ಸ್ವರೂಪವನ್ನು ಪರಿಚಯಿಸುತ್ತಿದ್ದವು. ತಾಯಪ್ಪನವರು ಕಟ್ಟಾ ಸಂಪ್ರದಾಯವಾದಿ. ಮನೋಧರ್ಮದ ಹೆಸರಿನಲ್ಲಿ ಸ್ವರಗಳೊಡನೆ ಸ್ವೇಚ್ಛೆಯಾಗಿ ಕಸರತ್ತು ಮಾಡುವುದು ಅವರಿಗೆ ಒಗ್ಗುತ್ತಿರಲಿಲ್ಲ. ಅವರ ಮನೋಧರ್ಮದ ಅಂಶಗಳು ನಾವೀನ್ಯತೆಯಿಂದ ಕೂಡಿದ್ದರೂ ಸಂಪ್ರದಾಯ ಬದ್ಧವಾಗಿಯೇ ಇರುತ್ತಿತ್ತು. ಸಂಗೀತ ಯಾವಾಗಲೂ ಸರಳವಾಗಿದ್ದು, ಹೃದಯದಿಂದ ಭಾವಪೂರ್ಣವಾಗಿ ಹೊರಹೊಮ್ಮಿ, ಕೇಳುಗರ ಆತ್ಮವನ್ನು ಸಹಜವಾಗಿ ಮುಟ್ಟಬೇಕೆಂದು ಅವರು ಹೇಳುತ್ತಿದ್ದರಂತೆ. ಸಂಗೀತ ಕಲಿಕೆಯೂ ಸಹ ಬೌದ್ಧಿಕವಾಗಿರುವುದಕ್ಕಿಂತಕ ಹೆಚ್ಚಾಗಿ ಹೃದಯ ಭಾವಗಳ ಸಂಗಮವಾಗಿರಬೇಕೆಂಬುದು ಅವರ ಅಭಿಪ್ರಾಯವಾಗಿತ್ತು.

ಅವರ ಪಿಟೀಲುವಾದನವು ಅವರದೇ ಆದ ವಿಶಿಷ್ಟ ಶೈಲಿಯನ್ನು ಹೊಂದಿತ್ತು. ಅದರಲ್ಲಿ ಗಾಂಭೀರ್ಯ ಮತ್ತು ಸರಳತೆಗಳು ಭವ್ಯವಾಗಿ ಮನೆ ಮಾಡಿದ್ದವು. ಅವರ ವಾದನದ ಮಾಧುರ್ಯ, ನಾದ ಸೌಖ್ಯಗಳು ಶ್ರೋತೃಗಳಿಗೆ ಅವರ್ಣನೀಯವಾದ ಆನಂದ ಕೊಡುತ್ತಿದ್ದವು. ಸೊಗಸು ಸರಳತೆಗಳು ಅವರ ಸಂಗೀತದ ಅಡಿಪಾಯ. ಆದ್ದರಿಂದ ಕಲಾ ರಸಿಕರಿಗೆ ಗೊಂದಲವಿಲ್ಲದ, ಅಬ್ಬರ ಆರ್ಭಟಗಳಿಲ್ಲದ ನಾದದ ತನಿರಸ ಸರಳ ರೀತಿಯಲ್ಲೇ ಲಭ್ಯವಾಗುತ್ತಿತ್ತು. ಸವಿದು ಮೆಲುಕು ಹಾಕುವಂತಹ ನಾದ ಸಂಗೀತದ ಸರ್ವತೋಮುಖ ಸೌಂದರ್ಯವನ್ನು ಹೊರಸೂಸುವುದಕ್ಕೆ ಬೇಕಾದಂತಹ ಸೂಕ್ಷ್ಮವಾದ ಕೈಚಳಕ, ಪಿಟೀಲುವಾದನದ ತಂತ್ರಗಳು ಅವರಲ್ಲಿ ವಿಶೇಷವಾಗಿದ್ದವು. ಸಂಗೀತ ಮತ್ತು ಸಾಹಿತ್ಯಗಳೊಂದಾಗಿ ಸುಂದರವಾದ ಕುಸುರಿ ಕೆಲಸದಂತೆ ಬೆಳವಣಿಗೆಯಾಗುತ್ತಿದ್ದುದನ್ನು ಅವರ ಪಿಟೀಲಿನ ನುಡಿಸಾಣಿಕೆಯಲ್ಲಿ ಶ್ರೋತೃಗಳು ಅನುಭವಿಸಿ ಆನಂದಿಸುತ್ತಿದ್ದರು. ಅವರ ಕಲ್ಪನಾ ಸ್ವರಗಳೂ ಚೊಕ್ಕವಾಗಿ ಕ್ರಮಬದ್ಧವಾಗಿ, ಲಯಭರಿತವಾಗಿ ಹರಿವ ನದಿಯಂತೆ ಸಹಜ ಸುಂದರವಾಗಿರುತ್ತಿದ್ದವು ಎಂದು ತಿಳಿದುಬರುತ್ತದೆ. ಸಂಗೀತದ ಕಲ್ಪನೆಗಳಾದರೋ, ಸುಸ್ಪಷ್ಟವಾದ ಸರಣಿಯಲ್ಲಿ ಅನುಕ್ರಮಿಸುತ್ತಿದ್ದವು ಎನ್ನುವುದು ಹಿರಿಯ ರಸಿಕರ ನೆನಪು.

‘ತಾಯಪ್ಪನವರು ಸಜ್ಜನರು, ಕಪಟವಿಲ್ಲದವರು ಮತ್ತು ಉದಾರಿಗಳು’ ಎಂದಿದ್ದಾರೆ. ಡಿ.ವಿ.ಜಿ.ಯವರು. ಅವರ ಸರಳತೆ, ಸುಸ್ವಭಾವ, ಪ್ರಾಮಾಣಿಕತೆ, ಸ್ನೇಹ ಸೌಹಾರ್ಧಯುತ ಸರಳವಾದ ಜೀವನಕ್ರಮಗಳಿಂದಾಗಿ ಎಲ್ಲರಿಗೂ ಪ್ರಿಯರಾಗಿದ್ದರು. ಅವರಿಗಿಂತ ಸ್ವಲ್ಪ ಕಿರಿಯ ವಯಸ್ಸಿನವರಾಗಿದ್ದ ಪಿಟೀಲು ಪುಟ್ಟಪ್ಪನವರಲ್ಲಿ ಒಳ್ಳೆಯ ಸ್ನೇಹವಿತ್ತು. ಇಬ್ಬರೂ ಪಿಟೀಲು ವಾದನದಲ್ಲಿ ಒಂದೇ ಕಾಲಕ್ಕೆ ಜೊತೆಯಾಗಿ ಅನೇಕ ದ್ವಂದ್ವ ಕಚೇರಿಗಳನ್ನು ಮಾಡುತ್ತಿದ್ದರು. ವ್ಯಕ್ತಿಯಲ್ಲಿ ಬೋಧಕರಾಗಿ, ಮುದ್ರಣಾಲಯವನ್ನು ನಡೆಸುತ್ತಿದ್ದ ವೀಣಾ ಗೋಪಾಲರಾಯರಲ್ಲೂ ತಾಯಪ್ಪನವರಿಗೆ ಆತ್ಮೀಯ ಗೆಳೆತನವಿದ್ದಿತು. ಸಮಾಜದಲ್ಲಿ ಹೆಸರು, ಹಣ, ಕೀರ್ತಿ ಮುಂತಾದ ಪ್ರಾಪಂಚಿಕ ಭೋಗ ಭಾಗ್ಯಗಳಿಗೆ, ಅವರಲ್ಲಿದ್ದ ಪ್ರಾಮಾಣಿಕ ಕಲಾವಿದ ಎಂದೂ ಮಣಿಯುತ್ತಿರಲಿಲ್ಲ. ಶ್ರೇಷ್ಠವಾದ ಸಂಗೀತಕಲೆಗೆ ಮಾತ್ರ ಶರಣಾಗುತ್ತಿದ್ದರು. ರಸಿಕ ವೃಂದದ ಮೆಚ್ಚುಗೆ, ಕರತಾಡನ, ಪ್ರಶಸ್ತಿ ಇದ್ಯಾವುದರಿಂದಲೂ ವಿಚಲಿತರಾಗದೆ, ಸಂಗೀತಕ್ಕಾಗಿ ಸಂಗೀತವನ್ನು ನುಡಿಸುತ್ತಿದ್ದರು. ತಮ್ಮ ಕಚೇರಿಗಳನ್ನು ಪ್ರಾಯೋಜಿಸಲು ಅವರು ಎಂದೂ ಯಾರನ್ನೂ ಆಶ್ರಯಿಸುತ್ತಿರಲಿಲ್ಲ, ಬೇಡುತ್ತಿರಲಿಲ್ಲ. ಬೆಂಬಲ ಪ್ರೋತ್ಸಾಹ ಇದ್ದಲ್ಲಿ ಕಲಾವಿದರು ಬೇಗ ರಸಿಕರ ಕಣ್ಣಿಗೆ ಬೀಳುತ್ತಾರೆ ಮತ್ತು ಪ್ರಸಿದ್ಧರಾಗುತ್ತಾರೆ ಎನ್ನುವುದು ಅಂದಿಗೂ ಇಂದಿಗೂ ಸತ್ಯವೇ. ತಾಯಪ್ಪನವರ ಸ್ವಭಾವದಿಂದಾಗಿ ಅವರು ಬೆಳಕಿಗೆ ಬಂದು, ರಸಿಕವೃಂದ ಅವರ ಪ್ರತಿಭೆಯನ್ನು ಗುರುತಿಸುವುದಕ್ಕೆ ಸಾಕಷ್ಟು ವಿಳಂಬವಾಯಿತು.

ತಾಯಪ್ಪನವರು ಕಲಾಬಂಧುಗಳ ಸಂಕಷ್ಟಕ್ಕೆ ಮರುಗಿ, ಬೆಂಬಲವೀಯುತ್ತಿದ್ದ ಸ್ನೇಹಮಯಿ. ಒಮ್ಮೆ ಮೈಸೂರಿನ ಎ.ಎಸ್‌. ಚಂದ್ರಶೇಖರಯ್ಯ (೧೯೦೫) ಪ್ರಸಿದ್ಧ ವೀಣಾ ವಿದ್ವಾಂಶರು ಕಾರಣಾಂತರಗಳಿಂದ ೧೯೩೦ ರ ಸುಮಾರಿನಲ್ಲಿ ಬೆಂಗಳೂರಿನಲ್ಲಿ ಬಂದು ನೆಲೆಸಬೇಕಾಯಿತು. ಹೊಸಜಾಗ, ಹೊಸ ಜನಗಳ ಮಧ್ಯೆ ಅವರಿಗೆ ಬೆಂಗಳೂರಿನಲ್ಲಿ ನೆಲೆಸಲು ಸಾಧ್ಯವಾಗುವಂತೆ, ತಾಯಪ್ಪನವರೇ ಒತ್ತಾಸೆಯಾಗಿ ಮುಂದೆ ನಿಂತರಲ್ಲದೆ, ಆ ಮೈಸೂರಿನ ವಿದ್ವಾಂಸರಿಗೆ ಹಲವಾರು ಸಂಗೀತ ಪಾಠಗಳನ್ನು ಗೊತ್ತು ಮಾಡಿಕೊಟ್ಟರೆಂದು ತಿಳಿದುಬರುತ್ತದೆ. ತಾಯಪ್ಪನವರು ದೈವಭಕ್ತರು. ನಂಜನಗೂಡಿನ ಶ್ರೀ ಕಂಠೇಶ್ವರನಲ್ಲಿ ಅವರಿಗೆ ಪರಮ ಭಕ್ತಿ. ಪ್ರತಿ ವರ್ಷವೂ ಗಿರಿಜಾ ಕಲ್ಯಾಣ ಮಹೋತ್ಸವದ ಸಮಯದಲ್ಲಿ ತಪ್ಪದೆ ನಂಜನಗೂಡಿಗೆ ತೆರಳಿ, ೪ ದಿನಗಳಿದ್ದು, ಸಂಗೀತ ಸೇವೆ ನಡೆಸಿ ಕೊಡುತ್ತಿದ್ದರು ಎಂಬುದಾಗಿ ತಿಳಿದುಬರುತ್ತದೆ. ಗುಡುಮಯ್ಯನ ಪೇಟೆ ಎಂಬಲ್ಲಿದ್ದ ತಮ್ಮ ಮನೆಯಲ್ಲಿ ಪ್ರತಿ ಶುಕ್ರವಾರವೂ ತಾಯಪ್ಪನವರು ಭಜನೆ ನಡೆಸುವ ಸಂಪ್ರದಾಯವನ್ನಿಟ್ಟು ಕೊಂಡಿದ್ದರು. ಅನೇಕ ಮಂದಿ ರಸಿಕರು ಕಲಾವಿದರು ಅಲ್ಲಿ ಸೇರುತ್ತಿದ್ದರು. ಅಂದು ಅವರಿಗೆಲ್ಲ ಸಂಗೀತದ ರಸದೌತಣ ಹಾಗೂ ಮರೆಯಲಾಗದ ಸಂಗೀತಾನುಭವವಾಗಿರುತ್ತಿತ್ತು.

೧೯೪೦ರ ನಂತರ ತಾಯಪ್ಪನವರ ಆರೋಗ್ಯ ಅಷ್ಟೇನೂ ತೃಪ್ತಿಕರವಾಗಿರಲಿಲ್ಲ. ಬಾಗಿದ ಬೆನ್ನು, ಕ್ಷೀಣಿಸುತ್ತಿದ್ದ ದೃಷ್ಟಿಗಳಿಂದಾಗಿ ಅವರಿಗೆ ಸ್ವತಂತ್ರವಾಗಿ ಓಡಾಡುವುದೂ ಕಷ್ಟವಾಗುತ್ತಿತ್ತು. ಆದರೂ ಮಗ ಬಿ.ಟಿ.ರಾಜಪ್ಪನವರ ಜೊತೆ ಸಮಾಜದ ಕಚೇರಿಗಳಿಗೆ ಬಂದು ಕುಳಿತು, ಸದ್ದಿಲ್ಲದೆ ಸಂಗೀತವನ್ನು ಸವಿದು ಹೋಗುತ್ತಿದ್ದರಂತೆ.

ತಾಯಪ್ಪನವರು ಪಿಟೀಲಿನಲ್ಲಿ ಅನೇಕ ಶೀಷ್ಯರನ್ನು ತಯಾರು ಮಾಡಿದ್ದಾರೆ. ಆ ಪಕಿ ಪ್ರಮುಖರಾದವರೆಂದರೆ ಅವರ ಮಗ ಬಿ.ಟಿ. ರಾಜಪ್ಪ, ಆನೇಕಲ್‌ ಮುನಿಸ್ವಾಮಪ್ಪ, ಪುಟ್ಟಸ್ವಾಮಯ್ಯ, ಶಂಭುಲಿಂಗಪ್ಪ ಮತ್ತಿತರರು. ಮಗನಿಗಾಗಿ ಉತ್ತಮ ಭವಿಷ್ಯವನ್ನು ತಾಯಪ್ಪನವರು ಎದುರು ನೋಡುತ್ತಿದ್ದರು. ಆದರೆ ವಿಧಿ ಸಂಕಲ್ಪ ಬೇರೆಯಾಗಿತ್ತು. ಮುಂದೆ ರಾಜಪ್ಪನವರಿಗೆ ಬುದ್ಧಿ ಭ್ರಮಣೆಯಾಗಿ ಕಲಾಪ್ರಪಂಚದಿಂದ ದೂರಸರಿಯಬೇಕಾಯಿತು. ಇದೇ ಸ್ಥಿತಿಯಲ್ಲಿ ಸುಮಾರು ೨೦ ವರ್ಷಗಳು ದಾರುಣವಾಗಿ ಜೀವಿಸಿದ್ದು ೧೯೬೮ರಲ್ಲಿ ಬಿ.ಟಿ. ರಾಜಪ್ಪನವರು ನಿಧನ ಹೊಂದಿದರು. ತಾಯಪ್ಪನವರ ನಂತರ ಅವರ ಪಿಟೀಲು ವಾದನದ ಶೈಲಿ ಸಂಪ್ರದಾಯಗಳನ್ನು ಉಳಿಸಿ ಬೆಳೆಸಲು ಅವರ ಬಂಧುಗಳಾಗಲೀ, ಶಿಷ್ಯವರ್ಗವಾಗಲೀ ಮುಂದೆ ಬರಲಿಲ್ಲ.

ತಾಯಪ್ಪನವರು ಫೆಬ್ರುವರಿ, ೧೫, ೧೯೪೪ ರಂದು ಸಹಸ್ರಾರು ಮಂದಿ ರಸಿಕರನ್ನೂ ಅಭಿಮಾನಿಗಳನ್ನೂ ತೊರೆದು ಸ್ವರ್ಗಸ್ಥರಾದರು. ಅವರ ಸಾವಿನ ಸುದ್ಧಿ ಕೇಳಿದ ಆತ್ಮೀಯ ಸ್ನೇಹಿತರಾಗಿದ್ದ ರಾಘವಾಚಾರ್ಯರು, ತಾಯಪ್ಪನವರ ಮಗ ಬಿ.ಟಿ. ರಾಜಪ್ಪನವರಿಗೆ ಸಮಾಧಾನ ತಿಳಿಸಿ ಬರೆದ ಪತ್ರ ಈಗಲೂ ಆತನ ತಂಗಿಯ ಬಳಿ ಉಂಟೆಂದು ತಿಳಿದು ಬರುತ್ತದೆ. ಪತ್ರದ ಒಕ್ಕಣೆಯಲ್ಲಿ `Dear boy, A great Soul has passed away, I expect you will be able to maintain the respect and greatness of your father, you have my blessing’ ಎಂಬುದಾಗಿ ಇದ್ದಿತೆಂದು ತಿಳಿದು ಬರುತ್ತದೆ. ಪಿಟೀಲು ತಾಯಪ್ಪನವರಂತಹ ಅಪರೂಪದ ಕಲಾವಿದರು, ಸರಳ ವ್ಯಕ್ತಿಗಳು ತಲೆಮಾರುಗಳೇ ಕಳೆದರೂ ಮತ್ತೆ ಜನ್ಮ ತಾಳಿ ಬರುವುದು ಸಂಶಯವೇ.