ಪಿರಿಯಾಪಟ್ಟಣ ತಾಲೂಕು ಜಿಲ್ಲಾ ಕೇಂದ್ರ ಮೈಸೂರಿನಿಂದ ಪಶ್ಚಿಮಕ್ಕೆ ಸುಮಾರು ೬೮ ಕಿ.ಮೀ. ದೂರದಲ್ಲಿದೆ. ೭೮೫ ಚ.ಕಿ.ಮೀ. ಭೂ ಪ್ರದೇಶವನ್ನು ಹೊಂದಿದ್ದು, ಪೂರ್ವ ಹಾಗೂ ದಕ್ಷಿಣಕ್ಕೆ ವಿಶಾಲವಾದ ಭೂ ಪ್ರದೇಶವನ್ನೂ, ಪಶ್ಚಿಮ ಹಾಗೂ ಉತ್ತರಕ್ಕೆ ಬೆಟ್ಟ ಗುಡ್ಡ ಹಾಗೂ ಅರಣ್ಯ ಪ್ರದೇಶವನ್ನೂ ಹೊಂದಿದೆ. ಸಮುದ್ರ ಮಟ್ಟದಿಂದ ಸುಮಾರು ೨೨೮೫ ಅಡಿಗಳಷ್ಟು ಎತ್ತರದಲ್ಲಿರುವ ಈ ತಾಲೂ ಮಳೆ ಆಧಾರಿತ ವ್ಯವಸಾಯವನ್ನು ಹೊಂದಿದೆ. ಪೂರ್ವಕ್ಕೆ ಹುಣಸೂರು, ಪಶ್ಚಿಮಕ್ಕೆ ಕೊಡಗು ಜಿಲ್ಲೆಯ ಸೋಮವಾರ ಪೇಟೆ, ದಕ್ಷಿಣಕ್ಕೆ ವಿರಾಜಪೇಟೆ, ಉತ್ತರಕ್ಕೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕುಗಳು ಇದ್ದು, ಇದೊಂದು ಅರೆ ಮಲೆನಾಡಿನ ಪ್ರದೇಶವಾಗಿದೆ. ಈ ತಾಲೂಕಿನಲ್ಲಿ ಪ್ರಾಕೃತಿಕವಾಗಿ ಕಂಡುಬರುವ ಸಂಪನ್ಮೂಲಗಳೆಂದರೆ ಅರಣ್ಯ ಸಂಪತ್ತು, ಬೆಲೆಬಾಳುವ ಕಲ್ಲಿನ ಗಣಿಗಳು, ಫಲವತ್ತಾದ ಭೂ ಪ್ರದೇಶ ಮತ್ತು ಕೆರೆ ಕಟ್ಟೆಗಳು. ಹೊಗೆಸೊಪ್ಪು ಇಲ್ಲಿನ ಪ್ರಧಾನ ವಾಣಿಜ್ಯ ಬೆಳೆ. ಈ ತಾಲೂಕಿನಲ್ಲಿ ಶಿಲಾಯುಗದ ಆಯುಧಗಳು, ಕಲ್ಲಿನ ಶವಸಂಪುಟಗಳು, ನವಶಿಲಾಯುಗದ ಕೈಗೊಡಲಿ, ಅಸ್ಥಿ ಪಂಜರ, ಅಲಂಕಾರ ಸಾಧನಗಳ ಅವಶೇಷಗಳು ದೊರೆತಿವೆ. ಇಲ್ಲಿ ಗಂಗರು, ಕದಂಬರು, ಚೋಳರು ಅನಂತರ ಚೆಂಗಾಳ್ವರು ೧೧ನೇ ಶತಮಾನದಿಂದ ೧೭ನೇ ಶತಮಾನದವರೆಗೆ ಆಳಿದರೆಂಬುದಕ್ಕೆ ಶಾಸನಗಳು ದೊರೆತಿವೆ.

ಪಿರಿಯಾಪಟ್ಟಣ ತಾಲೂಕು ಕೇಂದ್ರವಾಗಿದ್ದು ಕ್ರಿ.ಶ. ೧೧೩೫ರ ಸಮಾರಿಗೆ ಹೊಯ್ಸಳ ರಾಜ ವಿಷ್ಣುವರ್ಧನನು ಸ್ಥಾಪಿಸಿದ ‘ನಾರಸಿಂಗ ಪಟ್ಟಣ’ದಲ್ಲಿ ಮಯೋಜನ ನೇತೃತ್ವದ ಶಿಲ್ಪಗಳ ತಂಡವು ಚೆನ್ನಕೇಶವ ದೇವಾಲಯವು ಕಟ್ಟಲ್ಪಟ್ಟಿದೆ. ನಂತರ ವಿಜಯನಗರ ಸಾಮ್ರಾಜ್ಯದ ಸಾಮಂತರಾಜ ಚೆಂಗ್ವಾಳ ಪಿರಿಯರಾಜನು ಇದಕ್ಕೆ ‘ಪಿರಿಯಾ ಪಟ್ಟಣ’ ಎಂದು ಪನರ್‌ನಾಮಕರಣ ಮಾಡಿದ ಬಗ್ಗೆ ನವರಂಗ ಮಂಟಪದ ಶಾಸನದಲ್ಲಿ ಉಲ್ಲೇಖವಿದೆ. ಉತ್ಖನನದ ಸಂದರ್ಭದಲ್ಲಿ ದೊರೆತ ಪ್ರಾಚ್ಯ ಅವಶೇಷಗಳನ್ನು ದೇವಾಲಯದ ಒಳಾವರಣದಲ್ಲಿ ಸಂಗ್ರಹಿಸಿಡಲಾಗಿದೆ. ದೇವಾಲಯವು ಗರ್ಭಗುಡಿ, ಸುಖನಾಸಿ, ನವರಂಗ ಮಂಟಪ, ವಸಂತಮಂಟಪ, ಮುಖಮಂಟಪಗಳನ್ನು ಒಳಗೊಂಡಿದೆ. ಗರ್ಭಗುಡಿಯಲ್ಲಿ ಆಳೆತ್ತರದ ಕೃಷ್ಣಶಿಲೆಯ ಚೆನ್ನಕೇಶವ ಮೂರ್ತಿ ಇದೆ.

ಆನೆಚೌಕೂರು

ದೂರ ಎಷ್ಟು?
ತಾಲ್ಲೂಕಿನಿಂದ: ೮ ಕಿ.ಮೀ.
ಜಿಲ್ಲಾಕೇಂದ್ರದಿಂದ: ೬೮ ಕಿ.ಮೀ.

ಆನೆಚೌಕೂರು ನಾಗರಹೊಳೆ ಅರಣ್ಯಪ್ರದೇಶದಲ್ಲಿದ್ದು ಇಲ್ಲಿ ವಿವಿಧ ಜಾತಿಯ ಮರಗಳು ವನ್ಯ ಪ್ರಾಣಿಗಳು ಇವೆ. ಇದರ ಸಮೀಪದಲ್ಲಿ ಪ್ರಸಿದ್ಧ ಮುತ್ತುರಾಯಸ್ವಾಮಿ ದೇವಾಲಯವಿದ್ದು ನಿಸರ್ಗ ಪ್ರೇಮಿಗಳು ಅರಣ್ಯ ವೀಕ್ಷಣೆಯ ನಂತರ ಇಲ್ಲಿಗೆ ಭೇಟಿ ನೀಡುತ್ತಾರೆ.

 

ಬೈಲಕುಪ್ಪೆ

ದೂರ ಎಷ್ಟು?
ತಾಲ್ಲೂಕಿನಿಂದ: ೨೦ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೬೮ ಕಿ.ಮೀ.

ಬುದ್ಧನ ಸ್ವರ್ಣ ದೇಗುಲ

ಈ ಬೌದ್ಧ ಕ್ಷೇತ್ರವು ೧೯೬೫ರ ಚೀನಾ ಟಿಬೆಟ್‌ಯುದ್ಧದಲ್ಲಿ ನಿರಾಶ್ರಿತರಾದ ಟಿಬೇಟಿಯನ್ನರಿಗಾಗಿ ರೂಪುಗೊಂಡ ಪುನರ್ವಸತಿ ಕೇಂದ್ರ. ಇಲ್ಲಿ ಸುಮಾರು ೧೬ ಕ್ಯಾಂಪ್‌ಗಳಿವೆ. ಇಲ್ಲಿ ಟಿಬೆಟಿಯನ್‌ಬೌದ್ಧ ವಿಶ್ವವಿದ್ಯಾನಿಲಯ ಮತ್ತು ಪ್ರಖ್ಯಾತವಾದ ಬುದ್ಧನ ಸ್ವರ್ಣ ದೇಗುಲಗಳಿವೆ. ಇಲ್ಲಿಗೆ ಸಾವಿರಾರು ಯಾತ್ರಿಕರು ಭೇಟಿ ನೀಡುತ್ತಾರೆ.

 

ಬೆಟ್ಟದಪುರ

ದೂರ ಎಷ್ಟು?
ತಾಲ್ಲೂಕಿನಿಂದ: ೧೫ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೬೮ ಕಿ.ಮೀ.

 

ಪಂಚಮುಖಿ ಬೆಟ್ಟ

ಪಿರಿಯಾಪಟ್ಟಣದಿಂದ ೧೫ ಕಿ.ಮೀ. ದೂರದ ಬೆಟ್ಟದಪುರ ಗ್ರಾಮದಲ್ಲಿ ಎತ್ತರ ಶಿಖರೋಪಾದಿಯಲ್ಲಿ ಪಂಚಮುಖಿ ಬೆಟ್ಟವಿದ್ದು, ಇಲ್ಲಿ ಚೋಳರ ಕಾಲದ ಶ್ರೀ ಶಿಡ್ಲು ಮಲ್ಲಿಕಾರ್ಜುನ ದೇವಾಲಯವಿದೆ. ಇದರ ಮೂಲ ಹೆಸರು ವಿಜಯಗಿರಿ ಎಂದೂ ಇದೆ. ಈ ಬೆಟ್ಟಕ್ಕೆ ಸುಮಾರು ೩೧೫೦ ಮೆಟ್ಟಿಲುಗಳಿದ್ದು, ಪ್ರತಿ ೨೦೦ ಮೆಟ್ಟಿಲುಗಳಿಗೆ ಒಂದು ಮಂಟಪ ಮತ್ತು ಬಸವನ ವಿಗ್ರಹವಿದೆ. ಬೆಟ್ಟದ ಮೇಲಿರುವ ದೇವಸ್ಥಾನ, ಮಂಟಪಗಳು ಹಾಗೂ ಕಲ್ಯಾಣಿ ಚೋಳರ ಆಳ್ವಿಕೆಯಲ್ಲಿ ನಿರ್ಮಿಸಲ್ಪಟ್ಟಿದೆಯೆಂದು ಇತಿಹಾಸವಿದೆ. ವರ್ಷಕ್ಕೊಮ್ಮೆ ಫೆಬ್ರವರಿ ತಿಂಗಳಿನಲ್ಲಿ ಜಾತ್ರೆ ನಡೆಯುತ್ತದೆ. ಈ ಸಮಯದಲ್ಲಿ ದನಗಳ ಜಾತ್ರೆಯೂ ನಡೆಯುತ್ತದೆ. ಇದು ಆ ಗ್ರಾಮದ ಸಾಮಾಜಿಕತೆಯ ಜೀವನವನ್ನು ಪ್ರತಿಬಿಂಬಿಸುತ್ತದೆ.

 

ಆನಿವಾಳು

ದೂರ ಎಷ್ಟು?
ತಾಲೂಕಿನಿಂದ: ೨೫ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೬೮ ಕಿ.ಮೀ.

ಪಿರಿಯಾಪಟ್ಟಣದಿಂದ ೨೦ ಕಿ.ಮೀ. ದೂರದಲ್ಲಿ ೧೫ನೇ ಶತಮಾನದಲ್ಲಿ ಚಿಕ್ಕಣ್ಣಗೌಡರ ಮಗನಾದ ಹೊನ್ನಗೌಡರಿಂದ ಕಟ್ಟಿಸಲ್ಪಟ್ಟ ಜೈನರ ಬಸದಿಯಿದೆ.

ಇದರಲ್ಲಿ ೩ ಅಡಿ ಎತ್ತರದ ಪದ್ಮಾಸನದಲ್ಲಿರುವ ಭಗವಾನ್‌ಅನಂತನಾಥರ ವಿಗ್ರಹವಿದೆ ಇದರೊಂದಿಗೆ ಪದ್ಮಾಸನದಲ್ಲಿ ತೀರ್ಥಂಕರರ ಮತ್ತು ಇಬ್ಬರು ತೀರ್ಥಂಕರರಿರುವ ಏಕಶಿಲಾ ವಿಗ್ರಹವನ್ನು ಬಸದಿಯಲ್ಲಿ ಕಾಣಬಹುದಾಗಿದೆ.