ತಮಿಳು ನಾಡಿನಲ್ಲಿ ಶ್ರೀರಂಗಂ ಒಂದು ದೊಡ್ಡ ನಗರ. ಅದಕ್ಕೆ ಏಳು ಸುತ್ತಿನ ಕೋಟೆ, ಕೋಟೆಯ ಸುತ್ತ ವಿಶಾಲವಾದ ಬಯಲು. ಬಯಲಿನ ಸುತ್ತ ವಿಶಾಲವಾದ ಬಯಲು, ಬಯಲಿನ ಸುತ್ತ ವಿಸ್ತಾರವಾಗಿ ಹರಿಯುವ ಕಾವೇರಿ ನದಿ. ನಗರದ ಮಧ್ಯೆ ಶ್ರೀರಂಗನಾಥನ ದೇವಾಲಯ.

ಅಂದು ಅಲ್ಲಿ ದೊಡ್ಡ ಉತ್ಸವ. ಶ್ರೀರಾಮಚಂದ್ರನು ವಿಭೀಷಣನಿಗೆ ತಾನು ಪೂಜಿಸುತ್ತಿದ್ದ ರಂಗನಾಥನನ್ನು ಕೊಟ್ಟ ದಿವಸದ ನೆನಪಿಗಾಗಿ ಈ ಉತ್ಸವ. ಬಯಲಿನಲ್ಲಿ ಅಗಲವಾದ ಹಸಿರು ಚಪ್ಪರ. ಅದಕ್ಕೆ ವಿವಿಧ ಹೂವುಗಳಿಂದ ಅಲಂಕಾರ ಮಾಡಿದ್ದಾರೆ. ಅದರ ಮಧ್ಯೆ ರತ್ನಖಚಿತವಾದ ಚಿನ್ನದ ಸಿಂಹಾಸನದಲ್ಲಿ ದೇವರು ಮಂಡಿಸಿದ್ದಾರೆ. ಸುತ್ತಲೂ ರತ್ನಗಳಂತೆ ದೀಪಗಳು ಅಲ್ಲಾಡದೆ ಬೆಳಗುತ್ತಿವೆ. ಲಾಮಂಚ, ಕಸ್ತೂರಿ, ಕೇಸರಿಗಳ ಪರಿಮಳದೊಂದಿಗೆ ಕಾವೇರಿಯ ನೀರು ತುಂಬಿದ ಚಿನ್ನದ ಕೊಡಗಳು ದೇವರ ಅಭಿಷೇಕಕ್ಕೆ ಸಿದ್ಧವಾಗಿವೆ. ಇನ್ನೇನು ಮಹಾಭೀಷೇಕ ನಡೆಯಬೇಕು. ಅರ್ಚಕರು ಏಳು ಹಂತದ ಸುತ್ತದೀಪಗಳ ಮಂಗಳಾರತಿ ಎತ್ತುತ್ತಿದ್ದಾರೆ. ಸಾವಿರಾರು ಭಕ್ತರು ತಲೆಯ ಮೇಲೆ ಕೈ ಮುಗಿದುಕೊಂಡು “ಗೋವಿಂದಾ! ಗೋವಿಂದ!” ಎನ್ನುತ್ತಿದ್ದಾರೆ. ಭಕ್ತರು ಎತ್ತಿ ಮುಗಿದ ಕೈಗಳ ಸಾಲುಗಳು ತಾವರೆಹೂವುಗಳ ಸಾಲಿನಂತಿವೆ. ದೇವರು ಸೂರ್ಯನಂತೆ ಪ್ರಕಾಶಿಸುತ್ತಿದ್ದಾರೆ.

ಅವರು ಯಾರು?

ಇಂತಹ ಸುಂದರ ಸನ್ನಿವೇಶದಲ್ಲೂ ದೇವರ ಮುಂದೆ ಒಬ್ಬ ವ್ಯಕ್ತಿ ಏನೋ ಯೋಚಿಸುತ್ತಾ ಕುಳಿತಿದ್ದರು. ಕಪ್ಪಗಿದ್ದರೂ ಒಳ್ಳೆಯ ತೇಜಸ್ವಿನಿಂದ ಕೂಡಿತ್ತು ಅವರ ಮುಖ. ತುಂಬಾ ಶಾಂತ ಸ್ವಭಾವ. ಹಣೆಯಲ್ಲಿ ಬಿಳಿಯ ನಾಮ. ಸೊಂಟದಲ್ಲಿ ಸಾಧಾರಣ ಒಂದು ವಸ್ತ್ರ ಮಾತ್ರ. ಅವರೊಬ್ಬ ಬ್ರಹ್ಮಚಾರಿ. ಅವರಿಗೇನು ಚಿಂತೆ? ಆ ವ್ಯಕ್ತಿ ತಮ್ಮಷ್ಟಕ್ಕೆತಾವೇ ಯೋಚಿಸುತ್ತಿದ್ದರು. “ಚಿಂತಯಂತಿ ಎಂಬ ಗೋಪಿಕೆ ಕೃಷ್ಣನು ತನ್ನ ಊರಿಂದ ಹೊರಟು ಹೋಗುತ್ತಾನಲ್ಲ ಎಂದುಕೊಂಡೇ ಪ್ರಾಣವನ್ನು ಬಿಟ್ಟಳು. ಜಟಾಯು ಪಕ್ಷಿ ಸೀತೆಯ ರಕ್ಷಣೆಗಾಗಿ ರಾವಣನೊಡನೆ ಹೋರಾಡಿ ಪ್ರಾಣ ಬಿಟ್ಟಿತು. ’ತಿರುನರೈ’ಎಂಬ ಊರಿನ ’ಅರೈಯರ್’ ಎಂಬುವರು ತಿರುನಾರಾಯಣ ಪುರದ ಗುಡಿಗೆ ಬೆಂಕಿ ಬಿದ್ದಾಗ ದೇವರನ್ನು ಅಪ್ಪಿಕೊಂಡು ರಕ್ಷಿಸುತ್ತಾ ಪ್ರಾಣಿಬಿಟ್ಟರು. ಆಹಾ! ಅವರೆಲ್ಲ ಎಂತಹ ಭಾಗ್ಯಶಾಲಿಗಳು! ನಮಗೇನಾದರೂ ಅಂತಹ ಭಾಗ್ಯವುಂಟೇ? ನಿಜವಾಗಿ ದೇವರಿಗಾಗಿ, ಸಂಸ್ಕೃತಿಗಾಗಿ ಬಲಿದಾನ ಮಾಡುವ ಭಾಗ್ಯ ನಮಗೆ ದೊರೆಯುವುದೆ?” ಈ ಯೋಚನೆಯಲ್ಲಿ ಜಗತ್ತನ್ನೆ ಅವರು ಮರೆತುಬಿಟ್ಟಿದ್ದರು. ಅವರೇ ಲೋಕಾಚಾರ್ಯರು.

ಶತ್ರಗಳು ಬಂದರು!

ಇಷ್ಟರಲ್ಲೇ ಒಬ್ಬ ವ್ಯಕ್ತಿ ಅಲ್ಲಿಗೆ ಬಂದು ಲೋಕಾಚಾರ್ಯರ ಕಿವಿಯಲ್ಲಿ ಹೇಳಿದ: “ಆಚಾರ್ಯ! ಕಾವೇರಿ ದಂಡೆಯಲ್ಲಿ ದೇವರ ಬಟ್ಟೆಗಳನ್ನು ಬಗೆಯುತ್ತಿದ್ದೆ. ನನ್ನ ಕತ್ತೆಗಳು ಗಾಬರಿಯಿಂದ ಕಿವಿಗಳನ್ನು ನಿಮಿರಿಸಿ ದೂರಕ್ಕೆ ನೋಡಿದವು. ನಾನೂ ಒಂದು ಮರ ಹತ್ತಿ ನೋಡಿದೆ. ದಕ್ಷಿಣ ಮತ್ತು ಉತ್ತರ ಎರಡು ದಿಕ್ಕಿನಿಂದಲೂ ಭಾರೀ ಸೈನ್ಯಗಳು ಬರುತ್ತಿವೆ. ಅವು ಆ ಯವನ ಆಕ್ರಮಕರದೇ ಇರಬೇಕು. ಇನ್ನು ನಮ್ಮ ಗತಿ! ನಾವಿರಲಿ, ನಮ್ಮ ದೇವರಮೂತಿಗಳ ಗತಿ ಏನು?

ಲೋಕಾಚಾರ್ಯರು ಕ್ಷಣ ಕಾಲ ಕಣ್ಮುಚ್ಚಿದರು. ಅನಂತರ, “ಕಸ್ತೂರಿರಂಗ, ನೀನು ನಿನ್ನ ಕೆಲಸಕ್ಕೆ ಹೋಗಿಬಿಡು. ಏನೂ ತಿಳಿಯದವನಂತೆ ಇದ್ದು ಸೈನ್ಯದ ಚಲವಲನಗಳನ್ನೂ ಅದರ ವಿವರಗಳನ್ನೂ ನಮ್ಮಪಾಳೆಯಗಾರ ಶಿಂಗಪ್ಪನಿಗೆತಿಳಿಸುತ್ತಿರು” ಎಂದು ಹೇಳಿದವರೇ ಸಿಂಹದಂತೆ ಮೇಲಿದ್ದರು. “ಶೀನಣ್ಣಾ!” ಎಂದು ಕರೆದರು. ದೇವರ ಪಕ್ಕದಲ್ಲೇ ಇದ್ದ ಅಂಗರಕ್ಷಕ ಶೀನಣ್ಣನು ಬಂದ. ಅವನಿಗೆ ಕಿವಿಯಲ್ಲಿ ಮುಂದಿನ ಕೆಲಸಗಳನ್ನು ತಿಳಿಸಿದರು. ಅವನು ಅರ್ಚಕರಿಗೆ ಶತ್ರುಗಳ ದಾಳಿ ಈಗಲೇ ಆಗುವಂತಿದೆ ಎಂದು ತಿಳಿಸಿ, ಒಡನೆಯೇ “ದೇವರು ಅಭಿಷೇಕವಿಲ್ಲದೆಯೇ ದೇವಸ್ಥಾನಕ್ಕೆ ಗುಟ್ಟಾಗಿ ಪ್ರವೇಶಿಸುವರು” ಎಂದು ಹೇಳಿದ. ಜನರಿಗೂ ಈ ಸೂಕ್ಷ್ಮ ತಿಳಿದು ಎಲ್ಲರೂ ಗಾಬರಿಯಿಂದ ತಮ್ಮತಮ್ಮ ರಕ್ಷಣೆಗಾಗಿ ಚೆಲ್ಲಾಪಿಲ್ಲಿಯಾದರು. ಶ್ರೀರಂಗನಾಥನ ಮೂರ್ತಿ ದೇವಸ್ಥಾನ ಸೇರಿತು.

ಲೋಕಾಚಾರ್ಯರು ವಿಗ್ರಹಗಳನ್ನು ತೆಗೆದುಕೊಂಡು ಕಾವೇರಿ ನದಿಯನ್ನು ದಾಟಿದರು

  ಶ್ರೀರಂಗದ ರಕ್ಷಣೆಗೆ ಪ್ರಯತ್ನ

 

ಇತ್ತ ಆಚಾರ್ಯರು ನೇರವಾಗಿ ಶಿಂಗಪ್ಪನನ್ನು ಭೇಟಿ ಮಾಡಿದರು. ಅವನಿಗೆ ಶ್ರೀರಂಗದ ರಕ್ಷಣೆಯ ಬಗ್ಗೆ ಕೆಲವು ಮುಖ್ಯ ಸೂಚನೆಗಳನ್ನು ತಿಳಿಸಿದರು: “ನೀನು ಆಕ್ರಮಕರನ್ನು ಎದುರಿಸಬೇಡ. ಅವರಿಗೆ ಅನಕೂಲವಾಗಿರುವಂತೆಯೇ ಇದ್ದು ಬಿಡು. ಆದರೆ ದೇವರ ಮೂಲ ವಿಗ್ರಹವನ್ನು ಶತ್ರುಗಳು ಒಡೆಯದ ಹಾಗೆ ಮಾತ್ರ ನೋಡಿಕೋ. ಅಂಗರಕ್ಷಕರು ಈಗಾಗಲೇ ಪಶ್ಚಿಮದ ಕಡೆಗೆ ನದಿ ದಾಟಿ ಹೋಗಿರುತ್ತಾರೆ. ಉತ್ಸವದೇವರು ಸಕಲ ಐಶ್ವರ್ಯದೊಡನೆ ಅವರ ಬಳಿ ಸುರಕ್ಷಿತವಾಗಿದ್ದಾರೆ. ಕಾವೇರಿಯ ನಡುಗಡ್ಡೆಯಲ್ಲಿರುವ ನರಸಿಂಹನ ಗುಡಿಯಲ್ಲಿ ನಮ್ಮ ನೂರಿಪ್ಪತ್ತು ಗ್ರಂಥಗಳೂ ಸೇರಿ ಹೋಗಿವೆ. ಕೊಟ್ಟೂರಿನ ಅಣ್ಣನಿಗೆ ಅವುಗಳನ್ನು ರಕ್ಷಿಸಿಡಹೇಳು. ವೇದಾಂತ ದೇಶಿಕರು ಈ ದಿನವೇ ಇಲ್ಲಿ ಬರಬೇಕಿತ್ತು. ಅವರು ಹೇಗೂ ಸಂಜೆಗಾದರೂ ಈ ಕಡೆ ಸುಳಿಯಬಹುದು. ಅವರೊಡನೆ ಕಲೆತು ಮಾತುಕತೆ ನಡೆಸಿ ಅವರಿಗೆ ನನ್ನನ್ನು ಕನ್ನಡನಾಡಿನ ’ತೆರಕಣಾಂಬಿ’ ಎಂಬ ಸ್ಥಳದಲ್ಲಿ ಭೇಟಿಯಾಗುವಂತೆ ತಿಳಿಸು. ಮತ್ತೊಂದು ವಿಷಯ-ಈ ಅವಸರದಲ್ಲಿ ನಾನು ಆಚಾರ್ಯ ಸುದರ್ಶನ ಭಟ್ಟರನ್ನು ಕಾಣಲಾಗಲಿಲ್ಲ. ಪಾಪ! ಅವರು ಮುದುಕರು. ಅವರ ’ಶ್ರುತಪ್ರಕಾಶಿಕಾ’ ಎಂಬ ಗ್ರಂಥ ಅಪೂರ್ವವಾದುದು. ಅದರ ರಕ್ಷಣೆಗೆ ಮುಖ್ಯ ಗಮನ ಕೊಡಲು ವೇದಾಂತ ದೇಶಿಕರಿಗೆ ಮರೆಯದೆ ತಿಳಿಸು.”

ಹೀಗೆ ಹೇಳಿ ಲೋಕಾಚಾರ್ಯರು ಶಿಂಗಪ್ಪನನ್ನು ಕಳುಹಿಸಿಕೊಟ್ಟರು. ಇನ್ನು ರಂಗನ ವಿಗ್ರಹವನ್ನು ಕಾಪಾಡಬೇಕಲ್ಲ! ತಾವೇ ಆ ಕಷ್ಟದ ಹೊಣೆಯನ್ನು ಹೊತ್ತರು. ವಿಗ್ರಹವನ್ನು ತೆಗೆದುಕೊಂಡು ಕೆಲವರು ಶಿಷ್ಯರೊಡನೆ ಹೊರಟರು. ಪಶ್ಚಿಮದ ಮೂಲೆಯಲ್ಲಿ ಕಾವೇರಿ ನದಿಯನ್ನು ದಾಟಿ ಕೊಂಗುನಾಡಿನ ಕಡೆಗೆ ಪ್ರಯಾಣ ಮಾಡಿದರು.

ಶ್ರೀರಂಗದ ಪರಿಸ್ಥಿತಿ

ಆಕ್ರಮಕರು ಬರುತ್ತಿದ್ದಾರಲ್ಲ? ತಾವೇನು ಮಾಡಬೇಕು? ಶ್ರೀರಂಗದಲ್ಲೇ ಇರುವುದೇ ಬಿಡುವುದೇ ಎಂದು ಜನರಿಗೆ ಸಮಸ್ಯ. ಯಾರು ತೀರ್ಮಾನಿಸಬೇಕು?

ದೇವರಿಗೇ ಸಮಸ್ಯೆಯನ್ನು ಒಪ್ಪಿಸುವುದು ಎಂದು ತೀರ್ಮಾನಿಸಿದರು. ದೇವರ ಬಳಿ ಚೀಟಿ ಹಾಕಿ ಎತ್ತಿದರು. ಎಲ್ಲರೂ ಇಲ್ಲೇ ಇರಬಹುದು ಎಂಬ ಚೀಟಿಯೇ ಮೇಲೆ ಬಂತು. ಅಷ್ಟರಲ್ಲೇ ಹಂಪೆಯ ಕಡೆ ಹೋಗಿದ್ದ ವೇದಾಂತ ದೇಶಿಕರು ಅಲ್ಲಿಗೆ ಬಂದರು. ಶಿಂಗಪ್ಪನೊಡನೆ ಮಾತನಾಡಿ ಒಡನೆಯೇ ದೇವರ ಮೂಲವಿಗ್ರಹದ ಬಳಿಗೆ ಹೋಗಿ ಅಖಂಡ ನಂದಾದೀಪ ಬೆಳಗಿಸಿ ಪ್ರಾರ್ಥನೆ ಸಲ್ಲಿಸಿದರು. ಅನಂತರ ಗರ್ಭಗುಡಿಗೆ (ದೇವಾಲಯದಲ್ಲಿ ದೇವರ ಮೂರ್ತಿ ಇರುವ ಭಾಗವನ್ನು ’ಗರ್ಭಗುಡಿ’ ಎಂದು ಕರೆಯುತ್ತಾರೆ) ಕಲ್ಲುತೆರೆ ಹಾಕಿಸಿ ಮುಂದುಗಡೆ ಕೃತಕ ವಿಗ್ರಹವೊಂದನ್ನು ಇಟ್ಟು ಸುದರ್ಶನ ಭಟ್ಟರ ಬಳಿಗೆ ಓಡಿದರು.

ಶತ್ರುಗಳು ಅಂದು ಸಂಜೆಯೇ ಶ್ರೀರಂಗಕ್ಕೆ ನುಗ್ಗಿದರು. ಊರಿನ ಸಾವಿರಾರು ಜನ ಸತ್ತರು. ಶತ್ರುಗಳು ಊರನ್ನು ಲೂಟಿ ಮಾಡಿದರು. ಎಲ್ಲಿ ನೋಡಿದರೂ ರಕ್ತದ ಕೋಡಿ.

ವೇದಾಂತ ದೇಶಿಕರು

ಸುದರ್ಶನ ಭಟ್ಟರು ಎಂಬ ಹಿರಿಯ ವಿದ್ವಾಂಸರನ್ನು ಲೋಕಾಚಾರ್ಯರು ಗೌರವದಿಂದ ಸ್ಮರಿಸಿಕೊಂಡಿದ್ದರಲ್ಲವೇ? ’ಶ್ರುತಪ್ರಕಾಶಿತಕಾ’ ಎಂಬ ಒಳ್ಳೆಯ ಪುಸ್ತಕವನ್ನು ಬರೆದವರು ಅವರು. ಅವರಿಗೆ ಇಬ್ಬರು ಮಕ್ಕಳು. ಪಾಪ, ಆ ಹಿರಿಯ ವಿದ್ವಾಂಸರು ಈ ಅನಾಹುತದಲ್ಲಿ ತೀರಿಕೊಂಡರು. ಸಾಯುವಾಗ, ತಮ್ಮ ಗ್ರಂಥವನ್ನೂ ಮಕ್ಕಳನ್ನೂ ಕಾಪಾಡುವಂತೆ ವೇದಾಂತ ದೇಶಿಕರಿಗೆ ಒಪ್ಪಿಸಿದರು.

ವೇದಾಂತ ದೇಶಿಕರೂ ಹಿರಿಯ ವಿದ್ವಾಂಸರು, ಊರಿನಲ್ಲಿ ಶತ್ರುಗಳ ಹಾವಳಿ ಅಂಕೆ ಇಲ್ಲದೆ ನಡೆಯುತ್ತಿರುವಾಗ, ’ಶ್ರುತಪ್ರಕಾಶಿಕಾ’ವನ್ನೂ ಇಬ್ಬರು ಎಳೆಯ ಹುಡುಗರನ್ನೂ ಕಾಪಾಡುವುದು ಅವರಿಗೆ ತುಂಬ ಕಷ್ಟದ ಹೊಣೆಯಾಯಿತು.

ಅಪಾಯಕ್ಕೆ ಸಿಕ್ಕದಿರಲು ವೇದಾಂತ ದೇಶಿಕರಿಗೆ ತೋರಿದ್ದು ಒಂದೇ ದಾರಿ. ಶತ್ರುಗಳು ಕೊಂದವರ ಹೆಣಗಳು ರಾಶಿರಾಶಿಯಾಗಿ ಬಿದ್ದಿದ್ದವು. ವೇದಾಂತ ದೇಶಿಕರು ಕೆಲವು ಹೆಣಗಳ ಕೆಳಗೆ ಮಕ್ಕಳನ್ನು ಮಲಗಿಸಿ, ತಾವೂ ಪುಸ್ತಕದೊಡನೆ ಮಲಗಿಬಿಟ್ಟರು. ಹೆಣಗಳೇ ಬಿದ್ದಿವೆ ಎಂದು ಶತ್ರುಗಳ ಅತ್ತ ನೋಡಲಿಲ್ಲ.

ಮಧ್ಯರಾತ್ರಿಯಾಯಿತು. ಸದ್ದಿಲ್ಲದೆ ವೇದಾಂತ ದೇಶಿಕರು ಎದ್ದರು. ಹುಡುಗರನ್ನೂ ಎಬ್ಬಿಸಿಕೊಂಡು ನಡೆದರು. ಸುತ್ತ ಅಪಾಯ, ಹೆಜ್ಜೆಹೆಜ್ಜೆಗೆ ಅಪಾಯ.

ಅಂತೂ ಕಾವೇರಿ ನದಿಯನ್ನು ದಾಟಿ ಮೂವರೂ ಅಪಾಯದಿಂದ ಪಾರಾದರು. ಅವರಿಗೆ ಲೋಕಾಚಾರ್ಯರದೇ ಯೋಚನೆ.

ನೇರವಾಗಿ ಕನ್ನಡನಾಡಿನ ಕಡೆ ನಡೆದು ಸತ್ಯಮಂಗಲವೆಂಬ ಊರಿಗೆ ಬಂದು ಸೇರಿದರು. ಲೋಕಾಚಾರ್ಯರು ತೆರಕಣಾಂಬಿಯಲ್ಲಿ ಇದ್ದಾರೆ ಎಂದು ತಿಳಿದುಬಂತು. ಮಕ್ಕಳನ್ನು ಸತ್ಯಮಂಗಲದಲ್ಲಿ ಬಿಟ್ಟು ತೆರಕಣಾಂಬಿಗೆ ನಡೆದರು. ಲೋಕಾಚಾರ್ಯರ ಜೀವನ, ಅವರ ಸರಳತೆ ದೇವರಲ್ಲಿ ಅವರಿಗಿದ್ದ ಅಚಲವಾದ ಪ್ರೀತಿ, ಸಮಾಜವನ್ನು ಪಡಿಸಲು ಅವರಿಗಿದ್ದ ಆಸೆ-ಇವೆಲ್ಲ ಚಿತ್ರದಂತೆ ಅವರ ಕಣ್ಮುಂದೆ ಓಡುತ್ತಿದ್ದವು.

ತಂದೆಕೃಷ್ಣಪಾದರು

ಲೋಕಾಚಾರ್ಯರು ಬಹು ಒಳ್ಳೆಯ ಕುಟುಂಬಕ್ಕೆ ಸೇರಿದವರು.

ಲೋಕಾಚಾರ್ಯರ ತಂದೆ ಕೃಷ್ಣಪಾದರು ಶ್ರೀರಂಗದಲ್ಲೇ ಉತ್ತರ ಬೀದಿಯಲ್ಲಿ ವಾಸವಾಗಿದ್ದವರು. ಅವರು ಹುಟ್ಟಿದ ಊರು ಕಾಂಚೀಪುರದ ಹತ್ತಿರದ ’ಮುಡುಂಬೈ’ ಎಂಬ ಗ್ರಾಮ. ಅವರಿಗೆ ಚಿಕ್ಕಂದಿನಿಂದಲೇ ಶ್ರೀರಾಮನಲ್ಲಿ ವಿಶೇಷ ಭಕ್ತಿ. ಜೊತೆಗೆ ಹನುಮಂತನಂತೆ ಬ್ರಹ್ಮಚಾರಿಯಾಗಿಯೇ ಇರಬೇಕೆಂದು ಬಹಳ ಆಸೆ. ಆದರೆ ಅವರ ತಾಯಿ ಅವರಿಗೆ ಆಗಲೇ ಮದುವೆ ಮಾಡಿಸಿದ್ದರು. ಕೃಷ್ಣಪಾದರು ಮಾತ್ರ ಸಂಸಾರ ತಾಪತ್ರಯಗಳಿಗೆ ಸಿಕ್ಕಿಕೊಳ್ಳದೆ ಕಲಿವೈರಿದಾಸರೆಂಬ ಗುರುಗಳ ಬಳಿ ವಿದ್ಯಾಭ್ಯಾಸ ಮಾಡತೊಡಗಿದರು. ಪ್ರತಿ ದಿನವೂ ಗುರುಗಳ ಬಳಿ ಕೇಳಿದುದನ್ನೆಲ್ಲಾ ಇವರು ಇಡೀ ರಾತ್ರಿ ಕುಳಿತು ಬರೆದಿಡುತ್ತಿದ್ದರು. ಸ್ನೇಹಿತರನೇಕರು ಇವರ ಟಿಪ್ಪಣಿಗಳನ್ನು ನೋಡಿ ತಮ್ಮ ವಿದ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದರು.

ಗುರುವಿನ ಆಶೀರ್ವಾದ

ಒಂದು ದಿನ ಪಾಠವಾಗುತ್ತಿದ್ದಾಗ ಕೃಷ್ಣಪಾದರ ಹೆಂಡತಿಯೊಡನೆ ಅವರ ತಾಯಿ ಗೋಳಾಡುತ್ತಾ ಬಂದರು. ಗುರುವಾದ ಕಲಿವೈರಿದಾಸರು “ಏನು ತಾಯಿ? ಏನಾಯಿತು?” ಎಂದು ಕೇಳಿದರು. “ಗುರುದೇವಾ! ನಮ್ಮ ವಂಶಕ್ಕೆಲ್ಲ ಇವನೊಬ್ಬನೇ ಮಗ. ಇವನಿಗೆ ಮದುವೆಯಾಗಿ ಬಹಳ ವರ್ಷಗಳಾದವು. ಮಕ್ಕಳೇ ಇಲ್ಲ. ಮಕ್ಕಳಿಲ್ಲದ ಮನೆ ಮನೆಯೇ? ನೀವಾದರೂ ಇವನಿಗೆ ಆಶೀರ್ವದಿಸಿ” ಎಂದಳು ಆ ತಾಯಿ. ಕಲಿವೈರಿದಾಸರು ಕೃಷ್ಣಪಾದರನ್ನು ಕರೆದು ಮೈ ತಡವಿ, “ಮಗು ಮಾತೃದೇವೋ ಭವ; ತಾಯಿ ಎಂದರೆ ದೇವರಂತೆ. ತಾಯಿಯ ಮನಸ್ಸಿಗೆ ನೋವು ಮಾಡಬೇಡ. ಇದೋ ಇವಳ ಕೈಹಿಡಿದು ಮನೆಗೆ ನಡೆ” ಎಂದು ಆಶೀರ್ವದಿಸಿ ಕಳಿಸಿದರು.

ಕೃಷ್ಣಪಾದರಿಗೆ ಹೆಂಡತಿಯೊಡ ಸಂಸಾರ ಬೇಕಿಲ್ಲದಿದ್ದರೂ ಗುರುಗಳು ಕೊಟ್ಟ ವರಪ್ರಸಾದ ಎಂದು ತಿಳಿದು ಹೆಂಡತಿಯೊಡನೆ ಸಂಸಾರ ಮಾಡತೊಡಗಿದರು. ತಾಯಿಯ ಮಾತಿಗೆ ಬೆಲೆ ಕೊಡಬೇಕು, ತಮ್ಮ ಆಚಾರ್ಯರ ಆಜ್ಞೆಯನ್ನು ಮೀರಬಾರದು ಎಂದು ನಿಶ್ಚಯಿಸಿದರು. ಯಾವಾಗಲೂ ಗುರುಗಳನ್ನೇ ನೆನೆಯುತ್ತಾ ಅವರ ಸದ್ಗುಣಗಳನ್ನೇ ತಾವೂ ಅನುಸರಿಸುತ್ತಾ ಕಾಲ ಕಳೆಯುತ್ತಿದ್ದರು.

ಲೋಕಾಚಾರ್ಯರ ಜನನ

ಕೆಲವು ದಿವಸಗಳು ಕಳೆದವು. ೧೨೬೪ರಲ್ಲಿ (ಹಿಂದುಗಳ ಪಂಚಾಂಗದಂತೆ ಕ್ರೋಧನ ಸಂವತ್ಸರ) ಕೃಷ್ಣಪಾದರ ಹೆಂಡತಿ ಗಂಡು ಮಗುವಿಗೆ ಜನ್ಮವಿತ್ತಳು. ಕೃಷ್ಣಪಾದರು ಮುಡುಂಬೈ ಗ್ರಾಮದಲ್ಲೇ ಮಗುವಿಗೆ ಜಾತಕರ್ಮ, ನಾಮಕರಣಗಳನ್ನು ಮಾಡಿದರು. ಅವರ ಗುರುಗಳಿಗೆ ’ಲೋಕಾಚಾರ್ಯ’ ಎಂದರೆ ’ಜಗತ್ತಿಗೆ ಗುರು’ ಎಂಬ ಬಿರುದು ಬಂದಿತ್ತು. ಕೃಷ್ಣಪಾದರಿಗೆ ತಮ್ಮ ಗುರುಗಳಲ್ಲಿ  ಬಹು ಭಕ್ತಿ. ಆದುದರಿಂದ ತಮ್ಮ ಮಗು (’ಪಿಳ್ಳೈ’)ವಿಗೆ ಲೋಕಾಚಾರ್ಯ ಎಂದೇ ಹೆಸರಿಟ್ಟರು. ಕೆಲದಿನಗಳ ಅನಂತರ ಕಲಿವೈರಿದಾಸರಿಗೆ ಈ ವಿಷಯ ತಿಳಿಯಿತು. ಅವರು “ಮಗುವಿಗೆ ದೇವರ ಹೆಸರಿಡಬೇಕೆಂದು ನನ್ನ ಆಸೆಯಿತ್ತು. ನೀನು ನನ್ನನ್ನು ಕೇಳದೆಯೇ ನನ್ನ ಹೆಸರನ್ನೇ ಇಟ್ಟೆಯಲ್ಲ? ಆಗಲಿ ಬಿಡು, ದೇವರ ಹೆಸರಿಗಾಗಿ ನಿನಗೆ ಬೇಗನೇ ಮತ್ತೊಂದು ಮಗುವಾಗಲಿ” ಎಂದು ಹರಸಿದರು.

ಬಾಲ್ಯ, ವಿದ್ಯಾಭ್ಯಾಸ

ಇದಾದ ಮೂರು ವರ್ಷಕ್ಕೆ ಕೃಷ್ಣಪಾದರಿಗೆ ಮತ್ತೊಂದು ಮಗು ಹುಟ್ಟಿತು. ಅದಕ್ಕೆ ಗುರುಗಳ ಆಜ್ಞೆಯಂತೆ ಅಳಹಿಯ ಮಣವಾಳಪ್ಪೆರುಮಾಳ್ ಎಂದರೆ ರಮ್ಯಜಾಮಾತೃದೇವ (ಸುಂದರನಾದ ದೇವ) ಎಂದು ರಂಗನಾಥಸ್ವಾಮಿಯ ಹೆಸರನ್ನೇ ಇಟ್ಟರು. ಇಬ್ಬರು ಹುಡುಗರೂ ರಾಮ ಲಕ್ಷ್ಮಣರಂತೆ, ಲವಕುಶರಂತೆ ಜೋಡಿಯಾಗಿ ಬೆಳೆದರು. ಕಲಿವೈರಿದಾಸರ ಬಳಿಯೇ ಅನೇಕ ವಿದ್ಯೆಗಳನ್ನು ಕಲಿತರು.ಮನೆಯಲ್ಲಿ ತಂದೆಯವರ ಶಿಕ್ಷಣವೂ ಇದ್ದುದರಿಂದ ಬೇಗನೆ ವಿದ್ಯಾವಂತರೂ, ಶೀಲವಂತರೂ ಆದರು. ನಿಜವಾದ ವಿದ್ಯೆಯಿಂದವಿನಯ ಬರುತ್ತದೆ; ವಿನಯವಂತನನ್ನು ಜನರು ಮೆಚ್ಚುತ್ತಾರೆ; ಜನರ ಮೆಚ್ಚಿಕೆಯಿಂದ ಸಮೃದ್ಧಿ, ಸಮೃದ್ಧಿಯಿಂದ ಸಂತೋಷ, ಸಂತೋಷದಿಂದಲೇ ತೇಜಸ್ಸು ಬರುತ್ತದೆ.

ಲೋಕಾಚಾರ್ಯರು ತುಂಬಾ ಬುದ್ಧಿವಂತರು. ಮನೆಯಲ್ಲಿ ತುಂಬಾ ಬಡತನವಿದ್ದರೂ ವಿದ್ಯೆಯನ್ನು ತುಂಬಾ ಆಸಕ್ತಿಯಿಂದ ಕಲಿತರು. ಗುರುವಿನ ಬಾಯಿಂದ ಬಂದ ತಕ್ಷಣ ವಿಷಯವನ್ನು ಗ್ರಹಿಸುತ್ತಿದ್ದರು. ಚಿಕ್ಕವಯಸ್ಸಿನಲ್ಲಿಯೇ ಅನೇಕ ಗ್ರಂಥಗಳನ್ನು ರಚಿಸಿ ಗುರುವಿನ ಮೆಚ್ಚುಗೆಗೆ ಪಾತ್ರರಾದರು. ಸದಾ ಪಾಠ ಓದುವುದು, ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು, ಇದರಲ್ಲೇ ಆಸೆ. ಕಷ್ಟಪಟ್ಟು ಓದಿ ದೊಡ್ಡ ವಿದ್ವಾಂಸರಾದರು.

ಬ್ರಹ್ಮಚಾರಿ

ಒಂದು ದಿನ ಕೃಷ್ಣಪಾದರ ಸ್ನೇಹಿತರೊಬ್ಬರು ಈಮಕ್ಕಳನ್ನು ನೋಡಿ ಬಹಳ ಸಂತೋಷಪಟ್ಟು, “ಅಯ್ಯಾ ಕೃಷ್ಣಾ! ನೀನು ಮದುವೆಯನ್ನೇ ಮಾಡಿಕೊಳ್ಳದೆ ಇದ್ದಿದ್ದರೆ ರತ್ನದಂತಹ ಈ ಲೋಕಾಚಾರ್ಯ ನಮಗಾಗಿ ಸಿಕ್ಕುತ್ತಿದ್ದನೆ?” ಎಂದರು. ಆಗ ಕೃಷ್ಣಪಾದರು “ನನಗಂತೂ ವೀರ ಹನುಮಾನ್, ಶೂರ ಭೀಷ್ಮರಂತಹ ಬ್ರಹ್ಮಚಾರಿಗಳೇ ಇಂದಿಗೂ ಇಷ್ಟ ಅವರಲ್ಲಿಯೇ ನನಗೆ ಬಹು ಗೌರವ” ಎಂದು ಉತ್ತರ ಕೊಟ್ಟರು.

ತಮ್ಮ ತಂದೆಗೂ ಅವರ ಸ್ನೇಹಿತರಿಗೂ ನಡೆದ ಈ ಸಂಭಾಷಣೆಯನ್ನು ಲೋಕಾಚಾರ್ಯ, ರಮ್ಯಜಾಮಾತೃ ದೇವ ಇಬ್ಬರೂ ಕೇಳಿದರು. ತಂದೆಯ ಮಾತುಗಳು ಅವರ ಮೇಲೆ ಆಳವಾದ ಪರಿಣಾಮನ್ನೆ ಮಾಡಿದವು. ತಾವು ಇಡೀ ಜೀವಮಾನ ಮದುವೆಯೇ ಆಗುವುದಿಲ್ಲ. ಬ್ರಹ್ಮಚಾರಿಗಳಾಗಿಯೇ ಉಳಿಯುತ್ತೇವೆ ಎಂದು ಪ್ರತಿಜ್ಞೆ ಮಾಡಿದರು.

ಎಲ್ಲರಿಗೂ ಗುರುವಾದರು

ಲೋಕಾಚಾರ್ಯರ ವಿದ್ಯಾಭ್ಯಾಸ ನಡೆಯುತ್ತಿತ್ತು. ನಮ್ಮಧರ್ಮದ ಅನೇಕ ಮುಖ್ಯ ವಿಷಯಗಳನ್ನು ಚೆನ್ನಾಗಿ ತಿಳಿದರು. ಇದಾದ ಕೆಲವು ತಿಂಗಳಲ್ಲೇ ಕಲಿವೈರಿದಾಸರೂ ತಂದೆ ಕೃಷ್ಣಪಾದರೂ ಕಾಲವಾದರು.

ಲೋಕಾಚಾರ್ಯರಿಗೆ ಈಗ ಜವಾಬ್ದಾಇ ಹೆಚ್ಚಾಯಿತು. ಕಲಿವೈರಿದಾಸರ ಶಿಷ್ಯರೆಲ್ಲರೂ ಈಗ ಲೋಕಾಚಾರ್ಯರ ಹತ್ತಿರಕ್ಕೆ ಬಂದರು. ಇವರಿಗೆ ಶಾಂತವಾದ ವಾತಾವರಣ ತುಂಬ ಇಷ್ಟ. ಆದ್ದರಿಂದ ಶ್ರೀರಂಗಂ ನಗರದ ಆಚೆ ಕಾವೇರಿಯನ್ನು ದಾಟಿ ಕಾಡಿನೊಳಗಿನ ನರಸಿಂಹಸ್ವಾಮಿ ಗುಡಿಯಲ್ಲಿ ಶಿಷ್ಯರಿಗೆ ಪಾಠ ಹೇಳಲು ಪ್ರಾರಂಭಿಸಿದರು. ನೂರಾರು ಶಿಷ್ಯರು ಬಂದು ಸೇರಿದರು.

ಶಿಷ್ಯನ ಆಗಮನ

ಲೋಕಾಚಾರ್ಯರಿಗೆ ಕಾಂಚೀಪಟ್ಟಣದಲ್ಲಿ ಮಣಲ್ ಪಾಕದಂಬಿ ಎಂಬ ಸಜ್ಜನರು ಶಿಷ್ಯರಾದರು. ಇವರೇ ಗುರುಗಳನ್ನು ಹುಡುಕಿಕೊಂಡು ಬಂದರು. ಇದಕ್ಕೆ ಕಾಂಚಿಯ ವರದರಾಜಸ್ವಾಮಿಯೇ ಕಾರಣ ಎಂದು ಭಕ್ತರು ನಂಬುತ್ತಾರೆ. ನಂಬಿಯವರು ಗುರುಗಳನ್ನು ಹುಡುಕಿ ಕೊಂಡು ಹೊರಟುದಕ್ಕೆ ಕಾರಣವಾಗಿ ಒಂದು ಸುಂದರವಾದ ಘಟನೆ ನಡೆಯಿತು ಎಂದೂ ಹೇಳುತ್ತಾರೆ. ಭಕ್ತರು ಹೇಳುವ ವಿವರಣೆ ಹೀಗಿದೆ.

ಒಂದು ದಿನ ವರದರಾಜಸ್ವಾಮಿಯು ಕನಸಿನಲ್ಲಿ ಬಂದು, “ನಂಬಿ, ನೀನು ಎರಡು ನದಿಗಳ ಮಧ್ಯೆ ಹೋಗಿ ಇರು. ನಿನಗೆ ಅಲ್ಲೇ ನಾನು ರಹಸ್ಯಗಳನ್ನು ತಿಳಿಸುವೆನು” ಎಂದಂತಾಯಿತು. ನಂಬಿಯವರು ದೇವರ ವಾಕ್ಯವನ್ನು ನಂಬಿ ನೇರವಾಗಿ ಕಾವೇರಿಯ ಎರಡು ತೊರೆಗಳ ನಡುವೆ ಶ್ರೀರಂಗಕ್ಕೆ ಬಂದು ನೆಲೆಸಿದರು.

ಆಚಾರ್ಯ ದರ್ಶನ

ಶ್ರೀರಂಗಕ್ಕೆ ಬಂದದ್ದಾಯಿತು. ಆದರೆ ದೇವರು ಯಾವ ರೂಪದಲ್ಲಿ ಎಲ್ಲಿ ಉಪದೇಶಿಸುವನೋ! ಇದನ್ನೇ ಯೋಚಿಸುತ್ತ ಅಲ್ಲಲ್ಲೆ ತಿರುಗಾಡುತ್ತಾ ನದಿಯಾಚೆಯ ನರಸಿಂಹಸ್ವಾಮಿಯ ಗುಡಿಗೆ ಬಂದರು. ಅಲ್ಲಿ ತಾವು ಕನಸಿನಲ್ಲಿ ಹಿಂದೆ ಕೇಳಿದ್ದ ರಹಸ್ಯಗಳನ್ನೇ ಶಿಷ್ಯರಿಗೆ ಹೇಳಿಕೊಡುತ್ತಿದ್ದ ಲೋಕಾಚಾರ್ಯರನ್ನು ಕಂಡು ಅವರಿಗೆ ತುಂಬಾ ಸಂತೋಷವಾಯಿತು.

ಪದ್ಮಾಸನದಲ್ಲಿ ಕುಳಿತ ತೇಜಸ್ವಿಗಳಾದ ನಗುಮುಖದ ಆಚಾರ್ಯರನ್ನು ನೋಡಿದೊಡನೆ ನಂಬಿಗಳು, “ಅವರೇ ಏನು ನೀವು!” ಎಂದು ಆನಂದದಿಂದ ನಮಸ್ಕರಿಸಿದರು. ತಮಗಾದ ಕನಸನ್ನು ತಿಳಿಸಿದರು. ಆಚಾರ್ಯರು ಇದೂ ಒಂದು ವಿಧವಾದ ದೇವರ ಆಜ್ಞೆ ಎಂದುಕೊಂಡು ತಾವು ಹಿರಿಯರಿಂದ ತಿಳಿದು ಅನುಭವಿಸಿದಂತಹ ರಹಸ್ಯಗಳನ್ನೆಲ್ಲಾ ಕ್ರಮವಾಗಿ ಉಪದೇಶಿಸಿದರು.

ಎರಡು ದಿಕ್ಕುಗಳಿಂದಲೂ ಭಾರೀ ಸೈನ್ಯಗಳು ಬರುತ್ತಿವೆ.’

ಪುಸ್ತಕಗಳನ್ನು ಬರೆದರು.

ಆಚಾರ್ಯರು ಎಂದಿಗೂ ಕಣ್ಮುಚ್ಚಿಕೊಂಡು ಶಿಷ್ಯರ ಮೇಲಿನ ಕರುಣೆಯಿಂದಲೇ ಉಪದೇಶ ಮಾಡುವರು. ಅವರು ಶಾಸ್ತ್ರದ ಅರ್ಥ ಮತ್ತು ಅದರ ತತ್ವಗಳನ್ನು ಬಹಳ ಸುಂದರವಾದ ಹೋಲಿಕೆ ಮತ್ತು ಉದಾಹರಣೆಗಳಿಂದ ಶಿಷ್ಯರ ಮನಸ್ಸಿಗೆ ನಾಟುವಂತೆ ಪಾಠ ಮಾಡುತ್ತಿದ್ದರು. ಪಾಠದ ಸಮಯದಲ್ಲಿ ಬೇರೆ ಯಾವುದೂ ಗಮನ ವಿರುತ್ತಿರಲಿಲ್ಲ. ಹಳೆಯ ಮತ್ತು ಹೊಸ ಇತಿಹಾಸ ಚರಿತ್ರೆಗಳನ್ನು ಅಲ್ಲಲ್ಲೇ ತಿಳಿಸುವರು. ಒಳ್ಳೆಯ ಜ್ಞಾನ ಬರಿಯ ಪುಸ್ತಕದಲ್ಲಿ ಇಲ್ಲ. ಅದು ಆಯಾ ಕಾಲದ ದೊಡ್ಡ ಬುದ್ಧಿವಂತರ ನಡತೆಗಳಿಂದ ಬರುತ್ತದೆ. ರಾಮಾಯಣ, ಮಹಾಭಾರತಗಳು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದ ಹಲವು ದೇಶಗಳಲ್ಲಿ ಜನರಿಗೆ ಮೆಚ್ಚಿಕೆಯಾಗಿವೆ. ಅವುಗಳನ್ನು ಮನಸ್ಸಿಟ್ಟು ಓದುವವರು ಅನೇಕ ವಿಷಯಗಳಲ್ಲಿ ತಿಳಿವಳಿಕೆಯನ್ನು ಪಡೆಯಬಹುದು.

ಆಚಾರ್ಯರಿಂದ ಉಪದೇಶ ಪಡೆದ ಶಿಷ್ಯರಿಗೆ ಒಂದು ಆಸೆ, ತಮ್ಮ ಗುರುಗಳ ಉಪದೇಶ ಬಹುಕಾಲ ಉಳಿಯಬೇಕು ಎಂದು, ತಾವು ಗುರುಗಳಿಂದಲೇ ಉಪದೇಶ ಪಡೆದರು. ಅವರ ಉಪದೇಶದಿಂದ ಬೆಳಕು ಕಂಡರು. ಇತರರಿಗೂ ಈಬೆಳಕು ಸಿಕ್ಕಲಿ ಎಂದು ಅವರ ಆಸೆ.

ತಮ್ಮ ಆಸೆಯನ್ನು ಗುರುಗಳಿಗೂ ಅರಿಕೆ ಮಾಡಿದರು: “ತಮ್ಮ ಉಪದೇಶವನ್ನು ತಾವೇ ಬರೆದಿಡಬೇಕು” ಎಂದು.

ಆಚಾರ್ಯರು ಒಪ್ಪಿದರು. ’ಶ್ರೀವಚನ ಭೂಷಣ’ ಮೊದಲಾದ ಹದಿನೆಂಟು ಗ್ರಂಥಗಳಲ್ಲಿ ಉಪದೇಶವನ್ನು ಬರೆದಿಟ್ಟರು. ದೇವರ ಸ್ತ್ರೋತ್ರಗಳನ್ನು ರಚಿಸಿದರು. ಇವು ಎಷ್ಟು ಸುಂದರವಾಗಿದ್ದವು. ಸರಳವಾಗಿದ್ದವು ಎಂದರೆ ಮಕ್ಕಳ ಬಾಯಲ್ಲೂ ಆಚಾರ್ಯರ ರಚನೆಗಳೇ.

ಉಪದೇಶದ ರೀತಿ

ಆಚಾರ್ಯರು ಉಪದೇಶಿಸುವುದನ್ನು ಸುಲಭವಾಗಿ ಎಲ್ಲರ ಮನಸ್ಸಿಗೆ ಹಿಡಿಯುವಂತೆ ಹೇಳುತ್ತಿದ್ದರು. ಚೆನ್ನಾಗಿ ಅರ್ಥವಾಗುವಂತೆ ಹೋಲಿಕೆಗಳನ್ನು ಕೊಡುತ್ತಿದ್ದರು. ದೇವರನ್ನು ಜ್ಞಾನಿಗಳು ಅರಿಯುತ್ತಾರೆ. ಜ್ಞಾನದಿಂದ ಇದು ಹೇಗೆ ಸಾಧ್ಯ? ವಾತಾವರಣದಲ್ಲಿ ನೀರಿನ ಸೂಕ್ಷ್ಮ ಕಣಗಳು ಹರಡಿ ನಿಂತಿರುತ್ತವೆ. ಇವು ಕಣ್ಣಿಗೆ ಕಾಣುವುದಿಲ್ಲ. ಆದರೆ ಇವೆ ವಿಜ್ಞಾನಿ ತನ್ನ ವಿದ್ಯೆಯಿಂದ ಇವನ್ನು ಅರಿಯುತ್ತಾಣೆ. ಹಾಗಿಯೇ ದೇವರು ಕಣ್ಣಿಗೆ ಕಾಣುವುದಿಲ್ಲ. ಆದರೆ ಜ್ಞಾನವನ್ನು ಬೆಳೆಸಿಕೊಂಡರೆ ಅವನನ್ನು ಅರಿಯಬಹುದು. ಅವನಿದ್ದಾನೆ ಎಂಬುದು ನಮ್ಮ ಅನುಭವಕ್ಕೆ ಬರುತ್ತದೆ.ಸಮುದ್ರದಲ್ಲಿ ನೀರಿದೆ. ಆದರೆ ಅದು ಉಪ್ಪು ನೀರು ಅದನ್ನು ಕುಡಿಯಬೇಕು ಎನ್ನಿಸಿದರೆ ಅದರ ಉಪ್ಪನ ಭಾಗವನ್ನು ಹೋಗಲಾಡಿಸುವ ರೀತಿ ತಿಳಿದಿರಬೇಕು, ಅಲ್ಲದೆ ಅದಕ್ಕೋಸ್ಕರ ಕಷ್ಟಪಡಬೇಕು. ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕಾದರೂ ಹೀಗೆಯೇ. ತಿಳಿವಳಿಕೆಯನ್ನೂ ಜ್ಞಾನವನ್ನೂ ಬೆಳೆಸಿಕೊಳ್ಳಬೇಕು, ಶ್ರಮಪಡಬೇಕು. ನಾವು ನಡೆದಾಡುವ ಭೂಮಿಯಲ್ಲೆ ನೀರಿದೆ. ಅದನ್ನು ಮೇಲಕ್ಕೆ ತಂದುಕೊಂಡರೆ ನಮಗೆ ಲಭ್ಯವಾಗುತ್ತದೆ. ನಮ್ಮ ಹೃದಯದಲ್ಲಿಯೆ ದೇವರಿದ್ದಾನೆ. ಭೂಮಿಯಲ್ಲಿರುವ ನೀರು ಬೇಕೆಂದರೆ, ನೀರಿರುವ ಸ್ಥಳದ ವರೆಗೆ ಅಗೆಯುತ್ತೇವೆ, ಚಿಲುಮೆಯಾಗಿ ನೀರು ಮೇಲಕ್ಕೆ ಉಕ್ಕುತ್ತದೆ. ಹಾಗೆಯೇ ಯೋಗಾಭ್ಯಾಸ ಮಾಡಬೇಕು; ಆಗ ಹೃದಯದಲ್ಲಿರುವ ದೇವರ ವರೆಗೆ ಮನಸ್ಸು ಸಾಗುತ್ತದೆ, ದೇವರ ಸಾಕ್ಷಾತ್ಕಾರ ಆಗುತ್ತದೆ.

ಅವತಾರಗಳೇಕೆ, ವಿಗ್ರಹಳೇಕೆ?

ದೇವರು ಅವರತಾರವೆತ್ತುತ್ತಾನೆ, ಶ್ರೀರಾಮ, ಶ್ರೀಕೃಷ್ಣ ಇಂತಹ ಅವತಾರಗಳನ್ನು ಎತ್ತಿ, ದುಷ್ಟರನ್ನು ಶಿಕ್ಷಿಸುತ್ತಾನೆ ಎನ್ನುತ್ತಾರಲ್ಲ, ಇದರ ಅರ್ಥವೇನು? ಹಲವು ದೇವರುಗಳನ್ನು ಜನ ಪೂಜೆ ಮಾಡುತ್ತಾರಲ್ಲ, ಏಕೆ? ದೇವಸ್ಥಾನಗಳಿಗೆ ಹೋಗುವುದೇಕೆ? ಈ ಪ್ರಶ್ನೆಗಳಿಗೆಲ್ಲ ಲೋಕಾಚಾರ್ಯರು ತುಂಬ ಸರಳವಾಗಿ ಉತ್ತರ ಕೊಟ್ಟರು. ಮಳೆಗಾಲದ ಹೊಳೆಯ ನೀರಿನಂತೆ ಶ್ರೀರಾಮ, ಶ್ರೀಕೃಷ್ಣ ಮೊದಲಾದ ಅವತಾರಗಲು. ಮಳೆಗಾಲದಲ್ಲಿ ನೀರು ಸಮೃದ್ಧಿಯಾಗಿರುತ್ತದೆ. ನೀರು ಸಿಕ್ಕುವುದು ಸುಲಭ. ಹಾಗೆಯೇ ದೇವರು ಅವತಾರ ಮಾಡಿಬಂದಾಗ ಅವನನ್ನು ತಿಳಿಯುವುದು ಸುಲಭ. ಆದರೆ ಯಾವಾಗಲೂ ಮಳೆಗಾಲವೇ ಇರುವುದಿಲ್ಲ, ಸಿಲುಗಾಲ ಬರುತ್ತದೆ. ಆಗಲೂ ನಮಗೆ ನೀರು ಬೇಕು. ಏನು ಮಾಡುತ್ತೇವೆ? ಕೆರೆ ಕಟ್ಟೆ, ಬಾವಿಗಳನ್ನು ಮಾಡಿಕೊಳ್ಳುತ್ತೇವೆ. ನೀರಿಗಾಗಿ ಅಲ್ಲಿಗೆ ಹೋಗುತ್ತೇವೆ. ಆ ನೀರೇ ಸಾಕು. ಹಾಗೆಯೇ ದೇವಾಲಯಗಳು, ವಿಗ್ರಹಗಳು, ದೇವರ ಚಿತ್ರಗಳು. ಅವತಾರದ ಕಾಲದಲ್ಲಿ ದೇವರನ್ನು ಮನಸ್ಸಿನಲ್ಲಿ ನಿಲ್ಲಿಸಿಕೊಳ್ಳುವುದು ಸುಲಭ. ಅವತಾರಪುರುಷನೇ ನಮ್ಮ ಕಣ್ಣಿಗೆ ಎದುರಿಗೆ ಇರುತ್ತಾನೆ. ಅವತಾರದ ಕಾಲವಲ್ಲದೆ ಹೋದಾಗ ದೇವಸ್ಥಾನಕ್ಕೆ ಹೋಗುತ್ತೇವೆ, ವಿಗ್ರಹಗಳನ್ನು ಪೂಜೆ ಮಾಡುತ್ತೇವೆ. ಚಿತ್ರಗಳನ್ನಿಉ ಪೂಜೆ ಮಾಡುತ್ತೇವೆ. ಹೀಗೆ ದೇವರ ರೂಪಗಳನ್ನು ಕಣ್ಣಿನಲ್ಲಿ-ಮನಸ್ಸಿನಲ್ಲಿ ತುಂಬಿಕೊಳ್ಳುತ್ತೇವೆ. ಬಾವಿ, ಕೆರೆ, ಅಣೆಕಟ್ಟು ಒಂದೊಂದರಲ್ಲಿ ಅದರ ಆಕಾರಕ್ಕೆ ಹೊಂದಿಕೊಂಡು ನೀರು ಇರುತ್ತದೆ. ಎಲ್ಲ ಕಡೆಗಳಲ್ಲಿಯೂ ಇರುವ ನೀರು ಒಂದೇ. ಹಾಗೆಯೇ ದೇವರೂ. ಯಾವ ರೂಪದಲ್ಲಿ ಅವನನ್ನು ಪೂಜಸಲಿ, ಅವನು ಒಬ್ಬನೇ. ನಮ್ಮ ಸ್ವಭಾವಕ್ಕೆ,ನಮ್ಮ ಭಾವನೆಗೆ ಅನುಗುಣವಾಗಿ ಅವನನ್ನು ಒಂದು ರೂಪದಲ್ಲಿ ನಾವು ಪೂಜಿಸುತ್ತೇವೆ. ಆದರೆ ದೇವರು ಒಬ್ಬನೇ.

ಉಪದೇಶದ ತಿರುಳು

ಊರು-ಕೇರಿ-ಜಾತಿ-ಪಂಗಡಗಳಿಂದ ಬರುವ ಹೆಸರು ತುಂಬಾ ಕೆಟ್ಟದ್ದು. ನಿಜವಾದ ವಿಷ್ಣುಭಕ್ತನಿಗೆ ಜಗತ್ತೇ ಸ್ವದೇಶ, ವಿಷ್ಣುವೇ ತಂದೆ, ಮಹಾಲಕ್ಷ್ಮಿ ತಾಯಿ, ಅವನನ್ನು ದೇವರ ದಾಸನೆಂದೇ ಕರೆಯಬೇಕು. ದೇವರನ್ನು ಸೇರಬೇಕಾದರೆ ಒಳ್ಳೆಯವರ ಸಂಬಂಧ ಬೇಕು. ಒಬ್ಬರು ಮೇಲು, ಮತ್ತೊಬ್ಬರು ಕೀಳು ಎಂಬ ಭಾವನೆ ತಪ್ಪು.

ಇತರರ ದೋಷವನ್ನು ವೈಷ್ಣವನು ನೆನೆಯಲೇಬಾರದು. ದೋಷವನ್ನು ಕಾಣುವ ನಮ್ಮ ದೃಷ್ಟಿಯೇ ಕೆಟ್ಟದಿರಬಹುದು. ಎಲ್ಲರಲ್ಲೂ ಗುಣವನ್ನೇ ಗುರುತಿಸುವ ಒಳ್ಳೆಯ ಅಭ್ಯಾಸ ಬರಬೇಕು.

ಇತರರು ನಮಗೆ ಕೇಡು ಮಾಡಬಹುದು. ಆದರೆ ನಾವು ಇತರರನ್ನು ಹಿಂಸಿಸಬಾರದು. ನಮ್ಮಧರ್ಮವನ್ನು ರಕ್ಷಿಸಿಕೊಂಡು ಬರಬೇಕು. ನಾವು ಯಾವಾಗಲೂ ಎಲ್ಲರಿಗೂ ಒಳ್ಳೆಯದೇ ಆಗಲೆಂದು ದೇವರಲ್ಲಿ ಪ್ರಾರ್ಥಿಸಬೇಕು-ಎಂದು ಲೋಕಾಚಾರ್ಯರು ಹೇಳುತ್ತಿದ್ದರು.

ಇದೇ ಇವರ ತತ್ವಾಯಿತು.

ತತ್ವಕ್ಕೆ ವಿಜಯ

ಪಿಳ್ಳೈ ಲೋಕಾಚಾರ್ಯರು ಮತ್ತು ಅವರ ತಮ್ಮ ರಮ್ಯಜಾಮಾತೃದೇವರು ಬಹು ಶುದ್ಧ ಮನಸ್ಸಿನ ಭಕ್ತರು: ಮನುಷ್ಯರಲ್ಲಿ ಒಬ್ಬರು ಹೆಚ್ಚು, ಮತ್ತೊಬ್ಬರು ಕೀಳು ಎಂಬ ಭಾವನೆ ಬಿಡಬೇಕು ಎಂದು ತಿಳಿಯಹೇಳಿದವರು. ಇಂತಹ ಒಳ್ಳೆಯ ಕೆಲಸಕ್ಕೆ ಭಗವಂತನು ತೋರಿಸಿದ ಎಂದು ಭಕ್ತರು ಹವಲು ಉದಾಹರಣೆಗಳನ್ನು ಕೊಡುತ್ತಾರೆ. ಅವುಗಳಲ್ಲಿ ಒಂದನ್ನು ಇಲ್ಲಿ ಹೇಳಬಹುದು.

ಅಂದಿನ ಕಾಲಕ್ಕೆ ಲೋಕಾಚಾರ್ಯರ ಮಾತುಗಳು ಅನೇಕರಿಗೆ ಸರಿಯಾಗಿ ಕಾಣಿಸಲಿಲ್ಲ. ವಿರೋಧಿಗಳು “ಇದೆಲ್ಲ ನಮ್ಮಶಾಸ್ತ್ರಕ್ಕೆ ವಿರುದ್ಧ” ಎಂದರು. ಲೋಕಾಚಾರ್ಯರು ಲೋಕವನ್ನೇ ತಮ್ಮ ಉಪದೇಶಗಳಿಂದ ಕೆಡಿಸಿದ್ದಾರೆಂದು ಶ್ರೀರಂಗನಾಥ ದೇವರಲ್ಲಿ ಮೊರೆಯಿಟ್ಟರು.

ರಂಗನಾಥದೇವರು ಅರ್ಚಕರು ಲೋಕಾಚಾರ್ಯರಿಗೆ ಕರೆ ಕಳುಹಿಸಿದರು. ಆಗ ಅವರು ಸ್ನಾನಕ್ಕಾಗಿ ಕಾವೇರಿಗೆ ಹೋಗಿದ್ದರು.ಮನೆಯಲ್ಲಿದ್ದ ತಮ್ಮ ರಮ್ಯಜಾಮಾತೃದೇವ ಅಣ್ಣನಿಗೆ ಬದಲಾಗಿ ತಾವೇ ದೇವರಬಳಿಗೆ ಹೋಗಿ ನಿಂತರು. ರಂಗನಾಥಸ್ವಾಮಿಯ ಪ್ರೇರಣೆಯಿಂದ ಅರ್ಚಕರು, “ಏನಿದು! ಲೋಕಾಚಾರ್ಯರು ರಹಸ್ಯಗಳನ್ನೆಲ್ಲ ಬಹಿರಂಗಪಡಿಸಿ ಲೋಕವನ್ನೂ ಧರ್ಮವನ್ನೂ ಕೆಡಿಸಿದ್ದಾರಂತೆ, ಹೀಗೆ ಮಾಡಬಹುದೆ?” ಎಂದು ಕೇಳಿದರು. ಆಗ ರಮ್ಯಜಾಮಾತೃದೇವರು ಲೋಕಾಚಾರ್ಯರ ಗ್ರಂಥಗಳ ಅರ್ಥವನ್ನು ಸಂಗ್ರಹಿಸಿ ಒಂದು ಉಪನ್ಯಾಸವನ್ನೇ ಮಾಡಿದರು.

ರಂಗನಾಥನ ಅಪ್ಪಣೆಯಂತೆ ಅರ್ಚಕರು ಹೇಳಿದರು.”ಗೀತೆಯಲ್ಲಿ ಹೇಳಿದ ಅರ್ಥಗಳೇ ಇವೆಲ್ಲ. ಇವು ಹೊಸದೇನೂ ಅಲ್ಲವಲ್ಲ! ಲೋಕಾಚಾರ್ಯರ ಹದಿನೆಂಟು ವಚನ ಗ್ರಂಥಗಳು ಸರಳ ಸುಂದರವಾಗಿವೆ. ನಿಜವಾಗಿ ಅವರು ಜಗದ್ಗುರುಗಳೇ ಸರಿ! ಶ್ರೀವೈಷ್ಣವ ಸಂತರಾದ ಶ್ರೀನಮ್ಮಾಳ್ವಾರ್ ಅವರ ದಿವ್ಯಪ್ರಬಂಧಗಳ ಸಾರವೂ ಸಹ ಉಪನ್ಯಾಸದಲ್ಲಿದೆ. ಇದಕ್ಕೆ ’ಆಚಾರ್ಯ ಹೃದಯ’ ಎಂಬ ಹೆಸರಿರಲಿ.” ಹೀಗೆಂದು ನಗರದ ನಾಲ್ಕು ಬೀದಿಯಲ್ಲೂ ಬ್ರಹ್ಮರಥದಲ್ಲಿ ರಮ್ಯಾಜಾಮಾತೃದೇವರನ್ನು ಮೆರವಣಿಗೆ ಮಾಡಿಸಿ ಗೌರವಿಸಿದರು.

ಭಕ್ತರು.ವಿವರಿಸುವ ಈ ಪ್ರಸಂಗದಿಂದ ಎಲ್ಲರೂ ತಿಳಿಯಬೇಕಾದ ವಿಷಯವಿದೆ. ಯಾರ ಮನಸ್ಸು ಶುದ್ಧವಾಗಿರುವುದೋ ಅವರಲ್ಲಿ ಭಗವಂತನಿಗೆ ಪ್ರೀತಿ; ಹುಟ್ಟಿಗೆ ಮಹತ್ವಕೊಟ್ಟು, ಅವರು ದೊಡ್ಡವರು ಇವರು ಚಿಕ್ಕವರು ಎನ್ನುವುದು ತಪ್ಪು; ಒಳ್ಳೆಯ ಮನಸ್ಸಿನವನು, ಭಗವಂತನ ಮಕ್ಕಳೇ ಎಲ್ಲರೂ ಎಂದು ಎಲ್ಲರನ್ನೂ ಸಮನಾಗಿ ಕಾಣುವವನು ನಿಜವಾದ ಭಕ್ತ. ಭಗವಂತನನ್ನು ಮೆಚ್ಚಿಸಬೇಕು ಎಂದು ಬಯಸುವ ಭಕ್ತ ಹೀಗೆಯೇ ನಡೆದುಕೊಳ್ಳಬೇಕು.

ಬಂಧುವಿಗೆ ಮಾರ್ಗದರ್ಶನ

ಕೆಲವು ಕಾಲದ ಮೇಲೆ ಲೋಕಾಚಾರ್ಯರ ತಮ್ಮ ರಮ್ಯಾಜಾಮಾತೃದೇವರು ಕಾಲವಾದರು. ಇದರಿಂದ ಅಚಾರ್ಯರಿಗೆ ತುಂಬಾ ದುಃಖವಾಯಿತು. ಲೋಕಕ್ಕೆ ಮಂತ್ರ ರಹಸ್ಯಗಳನ್ನು ಉಪದೇಶಿಸಲು ಇನ್ನಾರಿದ್ದಾರೆ? ಎಂದು ಯೋಚನೆಮಾಡಿದರು. ದೊಡ್ಡ ಪಂಡಿತರಿಗೂ ಈ ರಹಸ್ಯಗಳನ್ನು ವಿವರಿಸುವ ಶಕ್ತಿ ಇತ್ತು ರಮ್ಯಜಾಮಾತೃದೇವರಿಗೆ. ಅಂತಹ ತಮ್ಮನನ್ನು ಕಳೆದುಕೊಂಡ ಲೋಕಾಚಾರ್ಯರ ಮನಸ್ಸಿಗೆಮುಂದೆ ಸಮರ್ಥ ವ್ಯಕ್ತಿ ಬೇಕಿನಿಸಿತು. ಅವರಿಗೆ ವೇಂಕಟನಥಾಚಾರ್ಯ ಎಂಬುವರು ಯೋಗ್ಯರಾಗಿ ಕಂಡರು.ವೇಂಕಟನಾಥರು ಲೋಕಾಚಾರ್ಯರ ಸೋದರ ಮಾವನ ಮಗ. ವಿದ್ಯಾರಣ್ಯರ ಸಹಪಾಠಿ. ಸರ್ವತಂತ್ರ ಸ್ವತಂತ್ರರೆಂಬ ಬಿರುದು ಪಡೆದವರು. ಇನ್ನೂ ಚಿಕ್ಕವರು. ಅವರನ್ನು ಕಾಂಚಿಪುರದಿಂದ ಶ್ರೀರಂಗಕ್ಕೆ ಕರೆಸಿದರು. ಅಲ್ಲಿ ರಂಗನಾಥನ ಆಸ್ಥಾನದಲ್ಲಿ ಹಿರಿಯ ಅನುಮತಿ ಯಿಂದ ಅವರ ಉಪನ್ಯಾಸಗಳನ್ನು ಇಡಿಸಿದರು.

ವ್ಯಾಸರ ’ಬ್ರಹ್ಮಸೂತ್ರ’-ಅದಕ್ಕೆ ರಾಮಾನುಜರ ವ್ಯಾಖ್ಯಾನವಾದ ’ಶ್ರೀಭಾಷ್ಯ’ವೆಂಬ ಗ್ರಂಥ. ಇದಕ್ಕೂ ಸುದರ್ಶನ ಭಟ್ಟರ ’ಶ್ರುತಪ್ರಕಾಶಿಕಾ’ ವಿವರಣೆ. ಇದೆಲ್ಲವನ್ನೂ ಸುಧೃಢ ಸುಂದರ ಶೈಲಿಯಿಂದ ವೇಂಕಟನಾಥರು ವಿವರಿಸಿದರು. ಅವರಿಗೆ ರಂಗನಾಥನ ಆಜ್ಞೆಯಂತೆ ’ವೇದಾಂತಾಚಾರ್ಯ’ ಎಂಬ ಬಿರುದನ್ನು ಕೊಡಲಾಯಿತು. ವೇದಾಂತಾಚಾರ್ಯರು ಲೋಕಾಚಾರ್ಯರ ಅನಂತರ ಮಾರ್ಗದರ್ಶಕರಾಗಲು ಎಲ್ಲ ರೀತಿಯಲ್ಲಿ ಶಿಕ್ಷಣ ಕೊಡಲಾಯಿತು.

ಶ್ರೀರಂಗದಲ್ಲಿ ರಂಗನಾಥನ ಸನ್ನಿಧಿಯಲ್ಲಿದ್ದ ಲೋಕಾಚಾರ್ಯರು ಇಂತಹ ವಿದ್ವಾಂಸರು, ಭಕ್ತರು. ಮದುವೆಯನ್ನೆ ಮಾಡಿಕೊಳ್ಳದೆ ತಮ್ಮ ಸಂಸಾರ ಎಂದು ಯೋಚನೆ ಇಲ್ಲದೆ ದೇವರ ಧ್ಯಾನ, ಇತರರಿಗೆ ಉಪದೇಶ ಇವುಗಳಲ್ಲೆ ಜೀವನ ಸವೆಸಿದವರು.

ಶತ್ರುಗಳ ದಾಳಿಗೆ ಊರು ಗುರಿಯಾದಾಗ ಲೋಕಾಚಾರ್ಯರು ವಿಗ್ರಹವನ್ನು ತೆಗೆದುಕೊಂಡು, ಕೆಲವರು ಶಿಷ್ಯರ ಜೊತೆಗೆ ಹೊರಟರಷ್ಟೆ!

ಇತ್ತ ತೆರಕಣಾಂಬಿಯಲ್ಲಿ

ಶ್ರೀರಂಗದಿಂದ ಹೊರಟ ಅವರು ದಾರಿಯುದ್ಧಕ್ಕೂ ತುಂಬ ಕಷ್ಟಪಡಬೇಕಾಯಿತು. ಒಂದು ಕಡೆ ಶತ್ರುಗಳ ಭಯ. ಮತ್ತೊಂದೆಡೆ ಕಳ್ಳರ ಹಾವಳಿ. ತಮಗೆ ತೊಂದರೆ ಆದರೂ ಚಿಂತೆ ಇಲ್ಲ, ಶ್ರೀರಂಗನಾಥನ ವಿಗ್ರಹಕ್ಕೆ ಅಪಾಯ ಬರದಿದ್ದರೆ ಸರಿ ಎಂದು ಸದಾ ಪ್ರಾರ್ಥಿಸುತ್ತಿದ್ದರು. ತುಂಬ ಕಷ್ಟಪಡುತ್ತಾ ಕರ್ನಾಟಕದ ತೆರಕಣಾಂಬಿ ಎಂಬ ಸ್ಥಳಕ್ಕೆ ಬಂದು ಸೇರಿದರು. ಈ ಊರು ಮೈಸೂರು ಜಿಲ್ಲೆಯ ಚಾಮರಾಜನಗರಕ್ಕೆ ಸಮೀಪದಲ್ಲಿದೆ.

ಇಲ್ಲಿಯ ವರದರಾಜಸ್ವಾಮಿಯ ಗುಡಿಯಲ್ಲೇ ಈಗ ಶ್ರೀರಂಗನಾಥನಿಗೂ ಪೂಜೆ ನಡೆಯುತ್ತದೆ.

ಲೋಕಾಚಾರ್ಯರು ಶ್ರೀರಂಗನಾಥನನ್ನು ರಕ್ಷಿಸುತ್ತಾ ಅಲ್ಲಿಯ ಜನರಿಗೆ ಧರ್ಮದ ಬಗ್ಗೆ ಸುಲಭವಾಗಿ ಪಾಠ ಹೇಳುತ್ತಿದ್ದರು.

ಲೋಕಾಚಾರ್ಯರಿಗೆ ಶ್ರೀರಂಗದ ದುಃಸ್ಥಿತಿ ತಿಳಿಯಿತು ತುಂಬಾ ದುಃಖವಾಯಿತು. ನಮ್ಮ ದೇಶದಲ್ಲೆ ನಮಗೆ ಇಂತಹ ಕಷ್ಟ ಬಂದಿತ್ತಲ್ಲ ಎಂದು ಕೊರಗುತ್ತಿದ್ದರು.

ಆಗ ವೇದಾಂತಾಚಾರ್ಯರು ಅಲ್ಲಿಗೆ ಬಂದರು. ಇಬ್ಬರೂ ಪರಸ್ಪರ ನಮಸ್ಕರಿ ಕುಳಿತರು. ಇಬ್ಬರಿಗೂ ಒಂದೇ ಚಿಂತೆ-ಧರ್ಮ ನಾಶವಾಗುತ್ತಿದೆ, ದೇವಸ್ಥಾನಗಳು ನಾಶವಾಗುತ್ತಿವೆ ಎಂದು.

ಆಚಾರ್ಯರು, “ಏನು ವೇದಾಂತಾ! ಶ್ರೀರಂಗದ ಸಮಾಚಾರ ತಿಳಿಯತೆ? ನಮ್ಮ ವಿದ್ಯಾರಣ್ಯರ ಸ್ನೇಹಿತನಾದ ನೀನು ಅದರ ಬಗ್ಗೆ ಏನು ಯೋಚಿಸಿರುವೆ? ನಮ್ಮ ಪಕ್ಕದ ಚಂಪಾರಾಜ್ಯದಲ್ಲಿ ಮಾತ್ರ ಮುಸ್ಲಿಮರು ಪಾಳೆಯಗಾರನಿಗೆ ಅನುಕೂಲವಾಗಿದ್ದಾರಂತೆ. ನಾನು ಅಲ್ಲಿಗೇ ಹೋಗಿ ಶ್ರೀರಂಗನಾಥನನ್ನು ರಕ್ಷಿಸುತ್ತೇನೆ. ನಮ್ಮ ವೆಂಕಟರಮಣನೇ ಇನ್ನು ನಮ್ಮ ರಕ್ಷಕ. ಏನಪ್ಪ ಹೇಳಲಿ? ದಿವ್ಯ ಕ್ಷೇತ್ರಗಳು ನಾಶವಾದವು. ರಾಮಾನುಜರು ಪ್ರಸಿದ್ಧಿಗೊಳಿಸಿದ ಸಿದ್ಧಾಂತ ಮೇಲುಕೋಟೆಯಲ್ಲಿ ಮಾತ್ರ ಉಳಿದಿರುವಂತಿದೆ. ನೀನು ಅಲ್ಲಿಗೆ ಅವರ್ಶಯ ಭೇಟಿ ಕೊಡು. ಅಲ್ಲಿಯ ವಿಚಾರ ನನಗೆ ತಿಳಿಸುತ್ತಿರು. ಮುಖ್ಯವಾಗಿ ವೀರಕಂಪಣರಾಯನು ಈ ಕಡೆ ಬಂದು ಯವನರನ್ನು ತಡೆಗಟ್ಟುವಂತೆ ಮಾಡಿಸು. ನಾನು ಚೆಂಜಿಕೋಟೆಗೆ ಹೋಗಿ ಗೋಪಣರಾಯನನ್ನು ಪ್ರತಿದಾಳಿಗೆ ತಯಾರು ಮಾಡುವೆನು” ಎಂದು ತಿಳಿಸಿ ಮುಂದಿನ ಪ್ರಯಾಣಕ್ಕೆ ಸಿದ್ದರಾದರು.

ವೇದಾಂತಾಚಾರ್ಯರು ಶ್ರೀರಂಗದಲ್ಲಿ ಆದುದನ್ನೆಲ್ಲ ವಿವರಿಸಿದರು. ಕೇಳಿದ ಆಚಾರ್ಯರು ಗಳಗಳನೆ ಅತ್ತುಬಿಟ್ಟರು.

ಸುರಕ್ಷಿತ ಸ್ಥಳವಿದೆ!

ಆ ಹೊತ್ತಿಗೆ ಚೆಂಜಿಯ ಕಡೆ ಹೋಗಿದ್ದ ಮೇಲುಕೋಟೆಯ ಯದುಪತಿ ಮತ್ತು ಸಂಪತ್ಕುಮಾರ ಇಬ್ಬರೂ ಅಲ್ಲಿಗೆ ಬಂದು ಆಚಾರ್ಯರಿಗೆ ನಮಸ್ಕರಿಸಿದರು.

“ಆಚಾರ್ಯರೇ! ಗೋಪಣನು ಚೆಂಜಿಯನ್ನು ಬಿಟ್ಟು ಬಂದಿದ್ದಾನೆ. ಬಂಡೀಪುರದ ಕಾಡಿನಲ್ಲಿ ಐಶ್ವರ್ಯವನ್ನೆಲ್ಲ ಅಡಗಿಸಿದ್ದಾನೆ. ’ಮುಂದಿರಿಷ್ಟೂ’ ಬೆಟ್ಟದಲ್ಲಿ ಸುರುಕ್ಷಿತವಾದ ಸ್ಥಳವಿದೆಯಂತೆ. ಅಲ್ಲಿಗೆ ಯರು ಬೇಕೋ ಬಂದು ರಕ್ಷಣೆಯನ್ನು ಪಡೆಯಬಹುದಂತೆ” ಎಂದು ಯದುಪತಿ ತಿಳಿಸಿದನು.

“ನಮ್ಮ ಸಂಸ್ಕೃತಿಯ ರಕ್ಷಣೆಗೆ ಮುಂದಾಳಾಗಿರುವಂತೆ ಚಿರಾಯುವಾಗಿ ಬಾಳು” ಎಂದು ವೇದಾಂತಾಚಾರ್ಯರಿಗೆ ಆಶೀರ್ವದಿಸಿ, ಲೋಕಾಚಾರ್ಯರು ಶ್ರೀರಂಗನಾಥನ ದಿವ್ಯ ವಿಗ್ರಹದೊಡನೆ ಬಂಡೀಪುರದ ಕಡೆಗೆ ಅಂದೇ ಪ್ರಯಾಣ ಮಾಡಿದರು.

ರಾತ್ರಿ ಇದ್ದಕ್ಕಿದ್ದಂತೆ ಆಚಾರ್ಯರಿಗೂ ಅವರ ಗುಂಪಿನವರಿಗೂ ಏಟುಗಳು ಬಿದ್ದವು.

ಸುಮಾರು ಏಳು ನೂರು ವರ್ಷಗಳ ಹಿಂದೆ ಇದೆಲ್ಲ ನಡೆದದ್ದು. ಆಗಿನ ಕಾಲದಲ್ಲಿ ಸಾಮಾನ್ಯ ಜನರಿಗೆ ಪ್ರಯಾಣ ಬಹು ಕಷ್ಟ. ಇಂದಿನ ಹಾಗೆ ಬಸ್ಸು, ರೈಲುಗಳ ಸೌಕರ್ಯವಿಲ್ಲ. ಗಾಡಿಗಳು ದೊರೆಯುವುದೂ ಕಷ್ಟ. ಲೋಕಾಚಾರ್ಯರಂತಹವರು ತುಂಬ ಆಚಾರ, ನಿಯಮಗಳನ್ನು ಇಟ್ಟುಕೊಂಡವರು. ಇಂತಹವರಿಗೆ ದಾರಿಯಲ್ಲಿ ಇಳಿದುಕೊಳ್ಳಲು ಸ್ಥಳ, ಊಟ ಇವಕ್ಕೆ ತೊಂದರೆ. ಸಾಮಾನ್ಯವಾಗಿಯೇ ಪ್ರಯಾಣಿಕರಿಗೆ ಇಷ್ಟು ಕಷ್ಟಗಳು. ಶ್ರೀರಂಗನಾಥನ ವಿಗ್ರಹವನ್ನು ಜೊತೆಗೆ ತೆಗೆದುಕೊಂಡು ಹೊರಟ ಲೋಕಾಚಾರ್ಯರ ಕಷ್ಟಗಳು ಇದರ ಹತ್ತರಷ್ಟು ದಾರಿಯಲ್ಲಿ ಕಳ್ಳಕಾಕರ ಕಾಟ. ಸುತ್ತ ಶತ್ರುಗಳು. ಯಾವ ಹೆಜ್ಜೆಗೆ ಶತ್ರುಗಳು ಮೇಲೆ ಬೀಳುವರೋ ಹೇಳುವ ಹಾಗಿಲ್ಲ. ಕಾಲು ನಡಿಗೆಯಲ್ಲೆ ನೂರಾರು ಮೈಲಿಗಳ ದೂರ ಹೋಗಬೇಕು. ಉಪವಾಸವಾಗಲಿ, ಕಷ್ಟವಾಗಲಿ ಆಚಾರ್ಯರು ರಂಗನಾಥನ ವಿಗ್ರಹವನ್ನು ಮಾತ್ರ ತಮ್ಮ ಹತ್ತಿರವೇ ಇಟ್ಟುಕೊಂಡಿರುವರು.

ಪ್ರಯಾಣದ ಮಧ್ಯದಾರಿಯಲ್ಲಿ ಮಧುರೆಯ ಕಡೆಯ ’ತಿರುನಗರಿ’ ಎಂಬ ಊರಿನಿಂದ ’ನಮ್ಮಾಳ್ವಾರ್’ ವಿಗ್ರಹದೊಡನೆ ಒಂದುವೈಷ್ಣವರ ಗುಂಪು ಸಿಕ್ಕಿತು. ತಮಗಾದ ಗತಿಯೇ ಅವರಿಗೂ ಆಗಿದೆಯೆಂದು ತಿಳಿದು ಆಚಾರ್ಯರು ಅವರನ್ನೂ ತಮ್ಮ ಜೊತೆಯಲ್ಲೇ ಕರೆದುಕೊಂಡು ಹೋದರು. ಗೋಪಾಲಸ್ವಾಮಿ ಬೆಟ್ಟವನ್ನು ಏರಿ ಮುಂದಿರಿಷ್ಟೂ ಗುಡ್ಡವನ್ನು ಸೇರಿದರು. ಅಲ್ಲಿ ಅಗಾಧವಾದ ಕಮರಿಯ ಒಳಗೆ ಸಾಕಷ್ಟು ನಗನಾಣ್ಯಗಳೊಡನೆ ಕೆಲವು ವಿಗ್ರಹಗಳನ್ನು ಅಡಗಿಸಿಟ್ಟರು. ಗೋಪಣನನ್ನು ಕಂಡು ಅವನಿಗೆ ದಿವ್ಯಕ್ಷೇತ್ರಗಳನ್ನು ರಕ್ಷಿಸಲು ಸೂಚನೆ ಕೊಟ್ಟರು. ವಿಜಯನಗರ, ತಿರುಪತಿಗಳ ಕಡೆಯಿಂದ ಅವನಿಗೆ ತಮ್ಮ ಶಿಷ್ಯರು ಗುಟ್ಟಾಗಿ ಸಹಾಯ ಮಾಡುವುದಾಗಿ ತಿಳಿಸಿದರು. ರಂಗನಾಥ ಸ್ವಾಮಿಯ ವಿಗ್ರಹವನ್ನು ಮಾತ್ರ ನಿತ್ಯಪೂಜೆ ತಪ್ಪದಿರಲೆಂದು ಜೊತೆಯಲ್ಲೇ ಬಹು ಗೌರವದಿಂದ ತೆಗೆದುಕೊಂಡು ಚಂಪರಾಜ್ಯದ ಕಡೆಗೆ ನಡೆದರು.

ಶತ್ರುಗಳ ಮೋಸ

ದಾರಿಯಲ್ಲಿ ಈಗಲೂ ಒಂದು ಗುಂಪು ಎದುರಾಯಿತು.ಅವರ ಬಳಿ ವಿಗ್ರಹಗಳಿರಲಿಲ್ಲ. ಆದರೆ ತಾವೂ ಯುದ್ಧದಲ್ಲಿ ನೊಂದವರೆಂದು ಅವರು ಹೇಳಿಕೊಂಡರು. ಆಚಾರ್ಯರಿಗೆ ’ಅಯ್ಯೋ ಪಾಪ’ ಎನ್ನಿಸಿತು. ಅವರನ್ನೂ ಕರೆದುಕೊಂಡು ಬಂಡೀಪುರದ ಬಳಿ ಬೀಡುಬಿಟ್ಟರು.

ಅರ್ಧರಾತ್ರಿ-ಇದ್ದಕ್ಕಿದ್ದಂತೆ ಹೊಡೆದಾಟ, ಚೀರಾಟಗಳು ಕೇಳಿಬಂದವು. ಎಚ್ಚರವಾಗಿ ನೋಡುವಷ್ಟರಲ್ಲೇ ಆಚಾರ್ಯರಿಗೂ ಅವರ ಗುಂಪಿನವರಿಗೂ ಬಲವಾಗಿ ಏಟುಗಳು ಬಿದ್ದವು. ಚೇತರಿಸಿಕೊಳ್ಳುವಷ್ಟರಲ್ಲಿ ಶತ್ರುಗಳು ಪಲಾಯನ ಮಾಡಿದ್ದರು. ಬೆಳಗ್ಗೆ ನೋಡಿದರೆ ದೇವರ ನಗನಾಣ್ಯಗಳು ಎಲ್ಲ ಮಾಯ! ಹಿಂದಿನ ದಿನ ಸೇರಿದ್ದ ಹೊಸ ಗುಂಪಿನವರು ಕಾಣಿಸಲಿಲ್ಲ. ಅವರ ಗಂಟುಗಳು ಮಾತ್ರ ಇದ್ದವು.

ಆಚಾರ್ಯರಿಗೆ ತುಂಬ ದುಃಖವಾಯಿತು. ಇದ್ದ ಸಾಮಾನೆಲ್ಲ ಹೋಗಿ, ಈಗ ದೇವರಿಗೆ ಎಂದಿನಂತೆ ಪೂಜೆಯೂ ಸಾಧ್ಯವಾಗದಂತೆ ವನವಾಸವಾಯಿತಲ್ಲಾ ಎಂದು ದುಃಖಿಸಿದರು. ಕಳ್ಳರು ಯಾರು? ಹೇಗೆ ಬಂದರು? ಆ ಹೊಸ ಗುಂಪಿನವರು ಪಾಪ, ಬದುಕಿರುವರೋ ಇಲ್ಲವೋ, ಹೀಗೆಲ್ಲ ಚಿಂತಿಸಿದರು. ಅವರನ್ನು ಹುಡುಕುತ್ತಾ ಹತ್ತಿರದ ಗ್ರಾಮವಾದ ’ಜ್ಯೋತಿಷ್ಕಟಿ’ (ಬೆಂಕಿಪುರ)ಗೆ ಬಂದರು. ಅಲ್ಲಿಯೂ ಅವರ ಸುಳಿವಿಲ್ಲ. ದೇವರ ಪೂಜೆಗೂ ನೈವೇದ್ಯಕ್ಕೂ ಅವರ ಗಂಟುಗಳಲ್ಲಿ ಏನಾದರೂ ಇರುವುದೇ ಎಂದು ಬಿಚ್ಚಿಸಿದರು.

ಅವುಗಳಲ್ಲಿ ಮುಸ್ಲಿಂ ಸೈನಿಕರ ಸಮವಸ್ತ್ರಗಳು ಮಾತ್ರ ಇದ್ದವು.

ಈಗ ಗೊತ್ತಾಯಿತು. ಹಿಂದಿನ ದಿನ ಬಂದವರು ಶತ್ರುಗಳು ಎಂದು. “ದೇವರೇ! ಹೀಗೂ ಪ್ರಪಂಚದಲ್ಲಿ ವಂಚಕರುಂಟೆ! ಶತ್ರುಗಳ ಮೋಸಕ್ಕೆ ನೀನು ಸಿಕ್ಕಿಕೊಂಡೆಯಾ!” ಎಂದು ಆಚಾರ್ಯರು ಮರುಗಿದರು. ಅಂದು ಎಲ್ಲರಿಗೂ ಉಪವಾಸವೇ.

ಆಚಾರ್ಯರ ಕೊನೆಯ ದಿವಸಗಳು

ಆಚಾರ್ಯರಿಗೆ ಸರಿಯಾಗಿ ಊಟ ನಿದ್ದೆಯಿಲ್ಲದೆ ಶರೀರವು ಕೆಟ್ಟಿತ್ತು. ತೀವ್ರ ಜ್ವರ ಬಂದಿತು. ಹಿಂದಿನ ರಾತ್ರಿಯಲ್ಲಿ ಶತ್ರುಗಳಿಂದ ಬಲವಾಗಿ ಶರೀರಕ್ಕೆ ಬಿದ್ದ ಏಟಿನಿಂದಲೂ ತುಂಬಾ ತೊಂದರೆ ಆಗಿತ್ತು. ಅದಕ್ಕಿಂತ ಹೆಚ್ಚಾಗಿ ಅವರ ಮನಸ್ಸಿಗೆ ಅಘಾತವಾಗಿತ್ತು. ರಂಗನಾಥನಿಗಾದ ಈ ಸ್ಥಿತಿಯನ್ನು ನೋಡುತ್ತಾ ಬದುಕಿರಲು ಒಪ್ಪದ ಆಚಾರ್ಯಕರು ರಾವಣನಿಂದ ಸೀತೆಯ ರಕ್ಷಣೆಯಲ್ಲಿ ಹೊಡೆತ ತಿಂದ ಜಟಾಯು ಪಕ್ಷಿಯಂತೆ ಸಹಾವಿಲ್ಲದೆ ಮಲಗಿದ್ದರು.

ಮುಂದಿನ ಕಾರ್ಯ

ಶ್ರೀರಂಗನಾಥನ ವಿಗ್ರಹವನ್ನು ’ವನಗಿರಿ’ ಎಂಬಲ್ಲಿಗೆ (ಇದು ಮಧುರೆಯ ಹತ್ತಿರದಲ್ಲಿರುವ ’ಅಳಹರ್ ತಿರುಮಲೆ’ ಎಂಬ ಸ್ಥಳ) ಸೇರಿಸುವಂತೆ ಗೋಪಣನ ಮಂತ್ರಿಯೂ ತಮ್ಮ ಶಿಷ್ಯರೂ ಆದ ಕೂರಕುಲೋತ್ತಮದಾಸರಿಗೆ ತಿಳಿಸಿದರು. ವಿಳಾಂಶೋಲೈ ಎಂಬ ಶಿಷ್ಯರನ್ನು ಕರೆದು ತಿರುವನಂತಪುರದಲ್ಲೇ ಇದ್ದು ಅಲ್ಲಿ ಪದಮನಾಭದೇವರನ್ನು ಕಾಯ್ದುಕೊಳ್ಳುವಂತೆ ತಿಳಿಸಿದರು.

ಲೋಕಾಚಾರ್ಯರ ಶರೀರಸ್ಥಿತಿ ತುಂಬಾ ಕೆಟ್ಟು ಹೋಯಿತು. ದೇಶದ ದೇವಮಂದಿರಗಳಿಗೆ ಆದ ಅನ್ಯಾಯವನ್ನು ನೋಡಲಾರದೆ ಆಚಾರ್ಯರು ಬಹು ಸಂಕಟಪಟ್ಟರು. ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ದ್ವಾದಶಿ, ಆಚಾರ್ಯರು ಶ್ರೀರಂನಾಥನಲ್ಲಿ ಐಕ್ಯರಾದರು. ಶಿಷ್ಯರು ಕಣ್ಣೀರು ಸುರಿಸುತ್ತಿದ್ದರು.

ಹಿರಿಯ ಚೇತನಹಿರಿಯ ಬಾಳು

ಏಳು ನೂರು ವರ್ಷಗಳ ಹಿಂದೆಯೇ ಎಲ್ಲರನ್ನೂ ಸಮಾನರೆಂದು ಕಾಣಬೇಕು, ಊರು-ಜಾತಿ ಇಂತಹವು ಮುಖ್ಯವಲ್ಲ ಎಂದು ಬೋಧಿಸಿದ ಹಿರಿಯರು ಲೋಕಾಚಾರ್ಯರು. ಇವರ ಉಪದೇಶವನ್ನು ಅನೇಕರು ವಿರೋಧಿಸಿದರೂ, ರಂಗನಾಥದೇವರ ಅರ್ಚಕರೇ ಇದನ್ನು ಒಪ್ಪಿದರು-ಲೋಕಾಚಾರ್ಯರಿಗೆ ’ಜಗದ್ಗುರುಗಳೇ’ ಎಂದು ಹೊಗಳಿದರು ಎಂಬುದರಿಂದ ಜನರೂ ಇದನ್ನು ಒಪ್ಪಿಕೊಳ್ಳುವಂತಾಯಿತು. ಇಂದೂ ಜಗತ್ತಿಗೆ ಬೇಕಾದ ಬಹು ದೊಡ್ಡ ತತ್ವ ಇದು. ಬಹು ಶುಭ್ರವಾದ ಜೀವನ ನಡೆಸಿದವರು, ಶಾಸ್ತ್ರಗಳನ್ನು ಬಲ್ಲವರು ಇಂತಹ ತತ್ವವನ್ನು ಹೇಳಿದಾಗ ಜನರ ಮನಸ್ಸಿಗೆ ಹಿಡಿಯುತ್ತದೆ.

ಬಹು ಮಂದಿ ಭಕ್ತರು ಪೂಜಿಸುವ ದೇವರ ವಿಗ್ರಹಗಳ ರಕ್ಷಣೆಗಾಗಿ ಮತ್ತು ದಿವ್ಯಕ್ಷೇತ್ರಗಳ ಸಂರಕ್ಷಣೆಗಾಗಿಯೇ ತಮ್ಮ ಜೀವನ ನಡೆಸಿದ ಲೋಕಾಚಾರ್ಯರನ್ನು ನಾವು ಎಂದಿಗೂ ಮರೆಯುವಂತಿಲ್ಲ. “ಭಗವಂತನಿಗಾಗಿ ದೇಹ ಸವೆಸ, ಪ್ರಾಣವನ್ನು ಕೊಡುವಂತಾಗಬಾರದೆ?” ಎಂದು ಅವರು ಹಂಬಲಿಸುತ್ತಿದ್ದರು. ಅವರ ಆಸೆ ಕೈಗೂಡಿತು. ತಮಗಾಗಿ ಏನನ್ನೂ ಬಯಸದೆ, ಸಂಪಾದಿಸದೆ ಒಂದು ದೊಡ್ಡ ಕೆಲಸಕ್ಕಾಗಿ ಬದುಕಿ ಪ್ರಾಣವನ್ನೇ ಕೊಟ್ಟ ಧೀರರು ಅವರು.