ಸಾಹಸ, ಗುಣಸಾಧನೆಯ ಹದ, ಕಷ್ಟ ಸಹಿಷ್ಣುತೆ, ಉತ್ಕಟ ಕಲಾ ಸಾಹಿತ್ಯಾಸಕ್ತಿ, ಸ್ವಯಂಗುರುವಾಗಿ ಕಲಿತ ಸಂಗೀತ, ಸ್ವಂತಿಕೆ ಸ್ವಬುದ್ಧಿಗಳನ್ನೆಲ್ಲ ಕೂಡಿಸಿದ ಗುಣ ಗುಂಫನಕ್ಕೆ ಪಿ.ಆರ್. ಭಾಗವತ ಎಂದು ಕರೆಯಬಹುದು.

ಇವರ ಪರೋಪಕಾರ ಬುದ್ಧಿಗೆ ಒಂದು ಜೀವಂತ ನಿದರ್ಶನ ಕೊಡಬೇಕೆಂದರೆ ತಮ್ಮ ಮರಣಾನಂತರ ತಮ್ಮ ಪಾರ್ಥಿವ ದೇಹವನ್ನು ದಹನಮಾಡದೆ ಅದನ್ನು ಹುಬ್ಬಳ್ಳಿಯ ಸರಕರಿ ಆಸ್ಪತ್ರೆ, ವೈದ್ಯಕೀಯ ಕಾಲೇಜ್‌ಗೆ ‘ಎನಾಟಮಿ’ ಉಪಯೋಗಕ್ಕಾಗಿ ಕೊಟ್ಟು ಬಿಡಬೇಕು ಎಂದು  ಮೃತ್ಯುಪತ್ರ ಬರೆದಿಟ್ಟಿದ್ದರು. ಆ ಮೇರೆಗೆ ಅವರ ಅಂತಿಮ ಇಚ್ಛಾನುಸಾರವಾಗಿ ಅವರ ಮೃತ ದೇಹವನ್ನು ಹುಬ್ಬಳ್ಳಿಯ ಕೆ.ಎಂ.ಸಿ.ಗೆ (karnataka Medical College) ಒಪ್ಪಿಸಲಾಯಿತು. (ಒಂದು ವಾರದ ತರುವಾಯವೂ ಆ ಮೃತ ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಪ್ರಯೋಜನಕ್ಕಾಗಿ ಅದಿನ್ನೂ ತುಂಡಾಗದೆ ಉಳಿದ ಬಗ್ಗೆ ತಿಳಿದು, ಇನ್ನೊಮ್ಮೆ ನಮ್ಮ ಭಾಗವತರ ಮುಖ ನೋಡಬೇಕೆಂಬ ಆಸೆಯಿಂದ ಕೆ.ಎಂ.ಸಿ.ಯಲ್ಲಿ ವಿಚಾರಿಸಿದಾಗ ಅದನ್ನು ನೋಡಲು ನಮಗೆ ಅಪ್ಪಣೆ ದೊರಕಲಿಲ್ಲ. ಯಾರ ಮುಂದೂ ಹೇಳಿರದ ರಕ್ತದ ಒತ್ತಡದ ಹೆಚ್ಚಳದ ಮೂಲಕ ಕೊನೆಯುಸಿರೆಳೆಯುವ ಮುನ್ನಾದಿನ ತಮ್ಮ ಶೋ ನಂತರ ಸ್ಲೈಡ್ಸ್ ಪರದೆ, ಪ್ರೊಜೆಕ್ಟರ್ ಗಳ ಬ್ಯಾಗ್‌ಗಳನ್ನು ವ್ಯಾಯಾಮಶಾಲೆಯ ಸ್ಥಾಪಕ ನಿರ್ದೇಶಕ ಶ್ರೀ ಕೆ.ಜಿ. ನಾಡಗ ಈರ ಅವರಲ್ಲಿಟ್ಟಿದ್ದರು. ನಾಡಗೀರರು ನಂತರ ಅದನ್ನು ಭಾಗವತರ ಕುಟುಂಬಕ್ಕೆ ಒಪ್ಪಿಸಿದರು.

ನನ್ನ ಭಾಗವತರ ಸಖ್ಯ ತೀರ ಸಮೀಪವಾಗಿ ಬೆಳೆದು ಬಂದಿತ್ತು. ಅವರ ನಾಟಕ ನೋಡುವ ಹುಚ್ಚು ಎಷ್ಟಿತ್ತೆಂದರೆ ನನಗೂ ಅದನ್ನು ತಗುಲಿಸಿದ್ದರು. ಹೀಗಾಗಿ ಬೆಳಗಾವಿಗೆ ಒಳ್ಳೊಳ್ಳೆಯ ಹೊಸ ವಿಚಾರಗಳ, ಹೊಸ ಹೊಸ ರಂಗಗೀತೆಗಳುಳ್ಳ ನಾಟಕಗಳು ಬಂದರೆ ನನ್ನನ್ನೂ ಜೊತೆಗೆ ಕರೆದುಕೊಂಡು ಬಸ್‌ನಿಂದ ಬೆಳಗಾವಿಗೆ ಧಾವಂತ ಮಾಡುತ್ತಿದ್ದರು. ಬುಕಿಂಗ್‌ ಆಫೀಸಿಗೆ ಕ್ಯೂಹಚ್ಚಿ ಲಭ್ಯವಿದ್ದ ಜಾಗೆಯ ಟಿಕೆಟ್‌ ಪಡೆಯುವ ಖಟಿಪಿಟಿ ಅವರದೆ. ಮರಳಿ ಮಧ್ಯರಾತ್ರಿ ಮೀರಿ ಒಂದು ಎರಡು ಗಂಟೆಗೆ ಬಸ್‌ ಸಿಗದಿದ್ದರೆ ಲಾರಿ, ಟ್ರಕ್‌ ಯಾವ ವಾಹನವಾದರೂ ಸರಿ, ಅದರಿಂದ ಎಷ್ಟೊತ್ತಾದರೂ ಊರು ತಲುಪುವುದು. ಇದರಿಂದಾಗಿ ನನಗೆ ಮರಾಠಿ ವೈಚಾರಿಕ ಕ್ರಾಂತಿಕಾರಿ ನಾಟಕಕಾರರ-ವಿಜಯ ತೆಂಡೂಲ್‌ಕರ, ತೋಡರಮಲ್‌, ಪು.ಲ. ದೇಶಪಾಂಡೆ ಮೊದಲಾದಂತಹರ-ನಾಟಕಗಳನ್ನು ನೋಡುವ ಲಾಭ ದೊರಕುತ್ತಿತ್ತು. ಇದರಿಂದ ನಿಜವಾಗಿಯೂ ಭಾಗವತರು ನನ್ನ ಸಾಹಿತ್ಯ ನಾಟಕ ಕಾವ್ಯಾಭಿರುಚಿಗಳನ್ನು ಬೆಳೆಸಿದರೆಂದು ಪ್ರಾಂಜಲಬುದ್ಧಿಯಿಂದ ಒಪ್ಪಿ ಹೇಳಬೇಕು.

ಹೀಗೆ ಭಾಗವತರು ನನ್ನ ರಚನಾಭಿರುಚಿಯನ್ನು ಹೆಚ್ಚಿಸಿ ನನ್ನಲ್ಲಿ ಸೃಜನ ಶಕ್ತಿ ಬೆಳೆಯುವಂತೆ, ಒಳ್ಳೊಳ್ಳೆಯ ಮರಾಠಿ ಕಾವ್ಯ ಸಾಹಿತ್ಯ ಕೃತಿಗಳನ್ನು ಲೈಬ್ರರಿಯಿಂದ ಸಂಪಾದಿಸಿ ನನಗೆ ಓದಿ ತೋರಿಸುವರು. ನನ್ನ ರಚನಾಕ್ರಿಯೆಗೆ ಸುಂದರ ಕಲ್ಪನೆಗಳನ್ನು ಕೊಟ್ಟು ಕೃತಿರಚನೆಗೆ ಹಚ್ಚುವರು.