ಜನನ : ೧೬-೨-೧೯೩೯ ರಂದು ಮೈಸೂರಿನಲ್ಲಿ

ಮನೆತನ : ಸುಸಂಸ್ಕೃತ ಸಂಗೀತಾಸಕ್ತರ ಮನೆತನ. ತಂದೆ ಪಿ. ಕೆ.ಆನಂದರಾವ್, ತಾಯಿ ಇಂದಿರಾಬಾಯಿ, ಗಮಕಿ ರಾಘವೇಂದ್ರರಾಯರ ಎರಡನೇ ಅಳಿಯ, ಅಜ್ಜಿ ರಾಧಾಬಾಯಿ ಸಂಪ್ರದಾಯದ ಹಾಡುಗಳನ್ನು ದೇವರನಾಮಗಳನ್ನು ಹಾಡುತ್ತಿದ್ದರು.

ಗುರುಪರಂಪರೆ : ಕೃಷ್ಣಗಿರಿ ಕೃಷ್ಣರಾಯರು ಸಾಲಿಗ್ರಾಮ ಶ್ರೀ ಕಂಠಶಾಸ್ತ್ರಿಗಳು ಹಾಗೂ ಗಮಕಿ ಎಂ. ರಾಘವೇಂದ್ರ ರಾಯರಲ್ಲಿ ಗಮಕ ಶಿಕ್ಷಣ ಪಡೆದು ಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ ಗಮಕ ಶಿಕ್ಷಕರ ಶಿಬಿರದಲ್ಲಿ ಪ್ರಶಂಸಾಪತ್ರವನ್ನು ಪಡೆದಿದ್ದಾರೆ.

ಕ್ಷೇತ್ರ ಸಾಧನೆ : ತಂದೆ ಆನಂದರಾಯರು ಹಾಡುತ್ತಿದ್ದ ಆನಂದ ರಾಮಾಯಣ – ತ್ಯಾಗರಾಜ ಕೀರ್ತನೆಗಳಿಂದ ಪ್ರಭಾವಿತರಾದ ಗಿರಿಧರ್ ಸುಶ್ರಾವ್ಯ ಕಂಠವನ್ನು ಹೊಂದಿದ್ದು ಎಳೆಯ ವಯಸ್ಸಿನಿಂದಲೇ ಪ್ರದ್ಯವಾಚನ ಕ್ರಮವನ್ನು ರೂಢಿಸಿಕೊಂಡರು. ಗಮಕ ವಾಚನಕ್ಕೆ ಹೆಚ್ಚಾಗಿ ಅಂಟಿಕೊಂಡ ಇವರು ಹೆಚ್ಚಿನಂಶ ಕುಮಾರವ್ಯಾಸ ಭಾರತವನ್ನು ಮೈಸೂರು ನಗರ, ಬೆಂಗಳುರು ನಗರಗಳಲ್ಲಿ ವಾಚನ ಮಾಡಿದ್ದಾರೆ. ಆಕಾಶವಾಣಿ ಮೈಸೂರು ಕೇಂದ್ರದಿಂದ ಸಹ ಇವರ ಕಾರ್ಯಕ್ರಮಗಳು ಪ್ರಸಾರವಾಗಿವೆ. ಮೈಸೂರಿನ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಇವರ ಕುಮಾರವ್ಯಾಸ ಭಾರತ ವಾಚನ ನಿರಂತರವಾಗಿ ನಡೆದಿದೆ. ಕುವೆಂಪು ರಾಮಾಣ ದರ್ಶನಂ ವಾಚನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ. ಗಮಕ ತರಗತಿಗಳನ್ನೂ ನಡೆಸಿ ಅನೇಕ ಶಿಷ್ಯರುಗಳನ್ನು ತಯಾರು ಮಾಡಿದ್ದಾರೆ.

ಪ್ರಶಸ್ತಿ – ಪುರಸ್ಕಾರಗಳು : ಸೋಸಲೆ ವ್ಯಾಸರಾಜ ಮಠಾಧೀಶರಿಂದ ಭಾರತ ವಾಚನ ಪ್ರವೀಣ, ಮೈಸೂರಿನ ಸೀತಾರಾಮ ದೇವಸ್ಥಾನದಲ್ಲಿ ’ಗಮಕ ಕಲಾರತ್ನ’ ಬಿರುದುಗಳು ಇವರಿಗೆ ಸಂದಿವೆ. ಮೈಸೂರಿನ ಗುರುಕೃಪಾ ಸಂಗೀತ ಕಲಾ ಶಾಲೆಯಿಂದ ಸನ್ಮಾನಿತರಾಗಿರುವ ಗಿರಿಧರ್ ಅವರ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೯-೨೦೦೦ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.