‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬ  ಹಾಡಿಗೂ ಪಿ. ಕಾಳಿಂಗರಾಯರಿಗೂ ಏನೋ ಒಂದು ಅವಿನಾ ಬಾಂಧವ್ಯವಿದೆ ಅನ್ನಿಸುತ್ತದೆ. ಹುಯಿಲಗೋಳ ನಾರಾಯಣರಾಯರ ಆ ಸುಂದರ ಕವಿತೆ ಪಿ. ಕಾಳಿಂಗರಾಯರ ಸಿರಿಕಂಠದಲ್ಲಿ ಮೂಡಿ ಬಂದು ಮನೆಮನೆಯ ಅಂಗಳವನ್ನೂ ತಲುಪಿತು.  ಮೈಸೂರಿನ ‘ವುಡ್ ಲ್ಯಾಂಡ್ಸ್’ ಚಿತ್ರಮಂದಿರದಲ್ಲಿ ಪ್ರತಿದಿನ ಚಿತ್ರ ಶುರುವಾಗುವ ಮುನ್ನ ಹಾಕುತ್ತಿದ್ದ ನಾಂದಿಗೀತೆ ಇದೇ ಪಿ. ಕಾಳಿಂಗರಾಯರು ಹಾಡಿದ್ದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’. ಹಾಗಾಗಿ ಚಿರಪರಿಚಿತ ಕಂಠ, ಚಿರಪರಿಚಿತ ಹಾಡು ಜನಮನದಲ್ಲಿ ಅಚ್ಚೊತ್ತಿಬಿಟ್ಟಿತು.

ಕಾಳಿಂಗರಾಯರನ್ನು ಕಿನ್ನರ ಕಂಠದ ಕನ್ನಡ ಕೋಗಿಲೆ ಎಂದರೆ ಉತ್ಪ್ರೇಕ್ಷೆಯಾಗಲಾರದು. “ಬಾರಯ್ಯ ಬೆಳದಿಂಗಳೇ, ನಮ್ಮೂರ ಹಾಲಿನಂಥ ಬೆಳಂದಿಂಗಲೇ” ಎಂದು ಹಾಡಿದ ಈ ಸಿರಿಕಂಠದ ಮೋಡಿ, ಚಂದ್ರಮನ ಚಂದ್ರಿಕೆಯ ಮೋಡಿಯಂತೆಯೇ ಚಿರನೂತನ. ಹಾಲಿನಂಥ ಬೆಳದಿಂಗ ಮೋಡಿ, ನಯನಮನೋಹರ ಎಂದರೆ ಹಾಲಿನಂಥ ಬೆಳದಿಂಗಳ ಮೋಡಿ, ನಯನಮನೋಹರ ಎಂದರೆ ಹಾಲಿನಂಥ ಬೆಳಂದಿಗಳನ್ನು ಬಾ ಎಂದು ಕರೆದ ಈ ಕಿನ್ನರ ಕಂಠದ ಮೋಡಿ ಕರ್ಣಾನಂದ. ಶಾಸ್ತ್ರೀಯ ಸಂಗೀತದ ನೆಲೆಗಟ್ಟಿನಿಂದ ಕಾಳಿಂಗರಾಯರು ಲಘು ಸಂಗೀತ ಅಥವಾ ಲಲಿತ ಸಂಗೀತದ ಕಡೆಗೆ ಜಿಗಿದ್ದದು ಪ್ರಾಯಶಃ ಅವರು ಸಂಗೀತ ಬರಿಯ ವಿದ್ವನ್ಮಣಿಗಳು ಹಾಗೂ ಪಂಡಿತರ ಪಾಲಿಗಷ್ಟೇ ಅಲ್ಲದೆ ಜನಸಾಮಾನ್ಯರ ಆಸೆ, ಆಕಾಂಕ್ಷೆಗಳ ಹೃದಯ ತಂತಿಯತ ಮೀಟಿ, ಆನಂದ ನೀಡಲೆಂದೇನಕೋ ಅಲ್ಲದೆ ಹೊಸತನದ ಹುಡುಕುವಿಕೆಯಲ್ಲಿ,  ತನ್ನತನವನ್ನು ಕಂಡುಕೊಳ್ಳುವ ಜಾಡಿನಲ್ಲಿ ಈ ಮಾರ್ಗದಲ್ಲಿ ಹೆಜ್ಜೆಯನ್ನು  ಹಾಕಿರಲೂ ಸಾಕು. `There is only good music and bad music’ ಎಂಬ ಗಾಢನಂಬಿಕೆ ಉಳ್ಳವರಿಗೆ ಶೈ?ಯಾವುದಾದರೇನು? ಆನಂದದ ಸಾಕ್ಷಾತ್ಕಾರದ ಪರಿಣಾಮವಷ್ಟೇ ಮುಖ್ಯ. ಈ ದಿಸೆಯಲ್ಲಿ ಹೆಜ್ಜೆ ಹಾಕಿದ ಕಾಳಿಂಗರಾಯರು ಸಂಗೀತದ ಬದುಕಿನಲ್ಲಿ ಸಾಧಿಸಿದ್ದು ಬಹಳ. ಹಾಗೆಂಧೇ ಅವರು ಸುಗಮ ಸಂಗೀತ ರಂಗದಲ್ಲಿ ಅಚ್ಚಳಿಯದ ಹೆಜ್ಜೆಯ ಗುರುತನ್ನು ಬಿಟ್ಟು ಹೋಗಿದ್ದಾರೆ.

ಇಂತಹ ಈ ಕಾಳಿಂಗರಾಯರ ಸಿರಿಕಂಠಕ್ಕೆ, ಧ್ವನಿ ಮಾಧುರ್ಯಕ್ಕೆ ಹಾಡಿಕೆಯ ಸೊಗಸಿಗೆ, ಸಾಹಿತ್ಯ ಸ್ಪಷ್ಟತೆಗೆ, ಸ್ವಚ್ಛವಾದ ಉಚ್ಚಾರಕ್ಕೆ, ಭಾವಾರ್ಥಗಳಿಗೆ ಒತ್ತುಕೊಡುವ ರಾಗ ಸಂಯೋಜನೆಗೆ ವಿನೂತನ ಶೈಲಿಗೆ, ವೈವಿಧ್ಯತೆಯ ಬೆಡಗಿಗೆ ಮಾರು ಹೋದವರಲ್ಲಿ ನಾನೂ ಒಬ್ಬಳು. ರೇಡಿಯೋದಲ್ಲಿ ಕಾಳಿಂಗರಾಯರ ಕಂಠಸಿರಿ ಮೂಡಿ ಬಂದಾಗಲೆಲ್ಲ ನನ್ನ ಕಿವಿ ಚುರುಕಾಗುತ್ತಿತ್ತು. ಆ ಮಧುರ ಕಂಠ ಕಿವಿಗೆ ಬಿದ್ದೊಡನೆ, ಸಂಕೋಚ ಬಿಟ್ಟು ಅಕ್ಕಪಕ್ಕದ ಮನೆಗೆ ಹೋಗಿ ಅವರ ಸಂಗೀತ ಸುಧೆಯನ್ನು ಕೇಳಿ ಆನಂದಿಸುತ್ತಿದ್ದ ದಿನಗಳವು. ಕಾಳಿಂಗರಾಯರ ಜೇನದನಿಯಲ್ಲಿ ನಾ ಮೊದಲು ಕೇಳಿದ್ದು, ರೇಡಿಯೋದಲ್ಲಿ ಬಿತ್ತರಗೊಳ್ಳುತ್ತಿದ್ದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನು . ಅದು ಪ್ರಾಯಶಃ ೧೯೪೮-೪೯ರ ಸುಮಾಋಇಗೆ, ಕಾಲಕ್ರಮದಲ್ಲಿ ಜನಪದ ಗೀತೆಗಳು, ಭಾವಗೀತೆಗಳು , ವಚನಗಳು  ಇತ್ಯಾದಿ ಬೇರೆ ಬೇರೆ ಪ್ರಕಾರಗಳೂ ಅವರ ಕಲ್ಪನಾ ಮೂಸೆಯಿಂದ ಮೂಡಿ ಬಂತು. ಹಾಡುತ್ತಿದ್ದ ಕ್ರಮವೂ ಅಷ್ಟೆ. ಅದರದರ ಶೈಲಿ ಅದದಕ್ಕೆ. ಇಂತಹ ವೈವಿಧ್ಯತೆ ಕರತಲಾಮಲಕವಾಗುವುದು ಸಂಸ್ಕಾರದಿಂದ ಮಾತ್ರ ಸಾಧ್ಯ. ಅವರು ಹುಟ್ಟು ಕಲಾವಿದರಾಗಿರಬೇಕುಇ.

ನಿಜ. ಅದು ಪುಟ್ಟ ಮಗು ಕಾಳಿಂಗನಲ್ಲೇ ಕಾಣಿಸಿಕೊಂಡಿತ್ತು. ಮನೆಯ ಪರಿಸರವೂ ಅದಕ್ಕೆ ಪರಿಪೋಷಕವಾಗಿಯೂ, ಪೂರಕವಾಗಿಯೂ ಇತ್ತು. ಕಲೆ ಕಾಳಿಂಗನ ಧಮನಿ ಧಮನಿಯಲ್ಲೇ ಹರಿದು ಬಂದಿತ್ತು ಎಂಬ ಮಾತು ಉತ್ಪೇಕ್ಷೆಯಲ್ಲ.

ಯಕ್ಷಗಾನ ಕಲಾಕ್ಷೇತ್ರದ ಆಧಾರಸ್ತಂಭಗಳಲ್ಲಿ ಒಬ್ಬರಾಗಿದ್ದ.  ಯಕ್ಷಗಾನ ಪ್ರವೀಣ ಹಾರಾಡಿ ರಾಮಗಾಣಿಗರ ಗುರುಗಳಾಗಿದ್ದ ದಿವಂಗತ ಪಾಂಡೇಶ್ವರ ಪುಟ್ಟಯ್ಯ ಹಾಗೂ ನಾಗರತ್ನಮ್ಮನವರ ಪುತ್ರನಾಘಿ ಪಾಂಡೇಶ್ವರ ಕಾಳಿಂಗರಾಯರು ಜನ್ಮತಾಳಿದ್ದು ಸಾವಿರ ಒಂಭೈನೂರ ಹದಿನಾಲ್ಕನೇ ಇಸವಿ ಆಗಸ್ಟ್‌ ಮೂವತ್ತೊಂದರಂದು (೩೧.೮.೧೯೧೪). ಸುಬ್ರಹ್ಮಣ್ಯದೇವರ ಮನೆಯೊಕ್ಕಲಿನವರಾಗಿದ್ದ ತಾಯಿ ನಾಗಮ್ಮನವರು ತನ್ನ ಮುದ್ದು ಕಂದನಿಗೆ ಸುಬ್ರಹ್ಮರ್ಣಯದೇವರ ಹೆಸರನ್ನೇ ಇಟ್ಟರು. ಸುಬ್ರಾಯ ಶಾನ್‌ಭಾಗ್‌ ಎಂದು ಕರೆಯುತ್ತಿದ್ದು ನಂತರ ಕಾಳಿಂಗಶರ್ಮನೆನೆಸಿ, ಮುಂದೆ ಕಾಳಿಂಗರಾವ್‌ ಆದರು.

ಬ್ಯಾಂಕಿನ ವಹಿವಾಟು, ಹೋಟೆಲ್‌ ಉದ್ಯಮಕ್ಕೆ ಹೆಸರಾಗಿ,ಒಂದು ದೃಷ್ಟಿಯಿಂದ ಕಲಾ ಪ್ರಪಂಚದಿಂದ ದೂರವೇ ಉಳಿದಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಕುಗ್ರಾಮ ಆರೂರಿನಲ್ಲಿ ಜನಿಸಿದ ಈ ಮಲ್ಲಿಗೆ ಸೂರ್ಯನೊಂದಿಗೇ ಉದಯಹಿಸಿ, ಅವನೊಂದಿಗೇ ಮರೆಯಾಗುವ ಮಲ್ಲಿಗೆಯಂತಲ್ಲದೆ, ಆರು ದಶಕಗಳಿಗೂ ಮಿಕ್ಕು ತನ್ನ ಕಂಪನ್ನು ಬೀರಿ, ಎಂದೆಂದೂ ಮಾಸಿಹೋಗದ ಪರಿಮಳವನ್ನು ನಾಡೆಲ್ಲ ತುಂಬಿ ಚಿರಸ್ಥಾಯಿಯಾಗಿದೆ.

ಎಷ್ಟೋ ವೇಳೆ ಒಂದು ವ್ಯಕ್ತಿಯ ನಿಜ ನಾಮಧೇಯವೇ ಮರೆಯುವಷ್ಟು ಆ ವ್ಯಕ್ತಿಯ ಬಿರುದೋ; ಕಾವ್ಯನಾಮವೋ ರೂಢಿಯಲ್ಲಿ. ಸ್ಥಿರವಾಗುಳಿಯುವ ಸಂದರ್ಭಗಳೂ ಉಂಟು. ಕಾಳಿಂಗರಾಯರ ತಂದೆ ಪಾಂಡೇಶ್ವರದ ನಾರಾಯಣರಾವ್‌ರವರು ಯಕ್ಷಗಾನ ಕುಣಿತದಲ್ಲಿ, ಅದರ ನರ್ತನದ ಅಪೂರ್ವವಾದ ಓಘ, ವೇಗಗಳಿಂದಾಗಿ, ಅದ್ವಿತೀಯರಾಗಿದ್ದುದರಿಂದಲೂ, ಅವರು ಆಕಾರದಲ್ಲಿ ಪುಟ್ಟದಾಗಿದ್ದುದರಿಂದಲೂ, ಅವರಿಗೆ “ಗೆಜ್ಜೆ ಪುಟ್ಟಯ್ಯ” ಎಂಬ ಬಿರುದೇ ಅನ್ವರ್ಥವಾಗುವ ಉಳಿದುಬಿಟ್ಟಿತು. ತಂದೆ ಗೆಜ್ಜೆ ಪುಟ್ಟಯ್ಯನವರು ತಮ್ಮ ಕಲಾಭಿವ್ಯಕ್ತಿಗೆ ‘ಯಕ್ಷಗಾನ’ವನ್ನು ಆಯ್ದುಕೊಂಡರೆ, ಮಗ ಕಾಳಿಂಗರಾಯರು ಮೊಟ್ಟ ಮೊದಲು ಆಯ್ದುಕೊಂಡದ್ದು ರಂಗಭೂಮಿಯನ್ನು. ಜೊತೆಗೆ ಸಂಗೀತವನ್ನು.

ಕಿಶೋರಾವಸ್ಥೆಯಲ್ಲಿದ್ದಾಗಲೇ ಈ ಪುಟ್ಟ ಕಾಳಿಂಗನಿಗೆ ಕಲಾಪ್ರೇಮ ಮೈಗೂಡಿ ಶಾಲಾದಿನಗಳಲ್ಲಿ ಶಾಲಾರಂಗಭೂಮಿಯಿಂದಲೇ ನಾಟಕರಂಗ ಪ್ರವೇಶವಾಯಿತು. ಈ ಪುಟ್ಟ ಕಾಳಿಂಗನಲ್ಲಿದ್ದ ಸುಪ್ತಕಲೆಯ ವಿಕಾಸಕ್ಕೆ ನೆರವಾದವರು ಸೋದರಮಾವ ಸೂರಾಲ್‌ ಮಂಜಯ್ಯನವರು. ಬಾಲಕನಲ್ಲಿದ್ದ ಸಂಗೀತಾಸಕ್ತಿಯನ್ನು ಗುರುತಿಸಿ ಸಂಸ್ಕೃತ ಶ್ಲೋಕಗಳು, ದೇವರನಾಮಗಳು ಹಾಗೂ ಭಜನೆಗಳು ದೇವರ ಸನ್ನಿಧಿಯಲ್ಲಿ ಕಲಿಸಿದರು. ಏಳು ವರ್ಷದ ಪುಟ್ಟ ಬಾಲಕ “ಭಜಗೋವಿಂದಂ ಭಜಗೋವಿಂದ ಮೂಢಮತೆ” ಶ್ಲೋಕವನ್ನು ತಂಬೂರಿ ಶೃತಿಗೆ ಸೇರಿಸಿ ತನ್ಮಯತೆಯಿಂದ ಹಾಡುತ್ತಿದ್ದರೆ ಕೇಳುವವರ ಕಣ್ಣಲ್ಲಿ ಆನಂದಾಶ್ರು ಉಕ್ಕುತ್ತಿತ್ತು. ಭಕ್ತಿ ಪ್ರಧಾನವಾದ ಶ್ಲೋಕಗಳಿಂದ ರಾಯರ ಒಲವು ಶಾಸ್ತ್ರಈಯ ಸಂಗೀತದತ್ತ ಹೊರಳಿತು. ಸಂಗೀತ ಕಲೆಯ ಗೀಳಿನ ಜೊತೆ ಜೊತೆಗೇ ನಾಟಕದ ಗೀಳೂ ಅಂಟಿಕೊಂಡಿತು.

ಕಾಳಿಂಗರಾಯರ ಪುಣ್ಯವೋ, ಕನ್ನಡನಾಡಿನ ಸೌಭಾಗ್ಯವೋ ದೈವಕೃಪೆಯಿಂದ ರಾಯರ ಕಲಾ ಜೀವನಕ್ಕೆ ಭದ್ರವಾದ ಬುನಾದಿ ದೊರೆತುದರಿಂದ ಸಂಗೀತದ ಸುಂದರ ಸೌಧವನ್ನು ಕಟ್ಟಲು ಸಾಧ್ಯವಾಯಿತು. ಸಂಗೀತ, ನಾಟಕದೊಂದಿಗೆ ಸೂರಾಲ್‌ ಅರಮನೆಯ ಹುಡುಗರೊಂದಿಗೆ ರಾಯಲ್‌ ಸ್ಕೂಲಿನಲ್ಲಿ ವಿದ್ಯಾಭ್ಯಾಸ ಸಾಗಿತು. ಆದರೆ ಕಲೆಗೂ, ಶಾಲಾ ವಿದ್ಯೆಗೂ ನಡೆದ ಪಂದ್ಯದಲ್ಲಿ ಕಲೆ ಗೆದ್ದಿತು . ಹಾಗಾಗಿ ಮೂರನೇ ತರಗತಿಯ ವಿದ್ಯಾಭ್ಯಾಸಕ್ಕೆ ಮಂಗಳ ಹಾಡಿ, ಸಂಗೀತದ ತೆರೆಯ ಪರದೆಯನ್ನು ಆಸೇತು ಹಿಮಾಚಲದೆತ್ತರಕ್ಕೆ ಏರಿಸಿ ಹಾರಿಸಿದರು. ಕಾಳಿಂಗರಾಯರು ಶಾಲೆಯಲ್ಲಿ ಕಲಿತಿದ್ದು ಕಡಿಮೆಯಾದರೂ, ತಾರುಣ್ಯದಲ್ಲಿ ಅವರು ಓದಿದ ಕನ್ನಡ, ಇಂಗ್ಲೀಷ್‌ ಕಾದಂಬರಿಗಳಿಗೆ ಲೆಕ್ಕವಿಲ್ಲ. ಅವರಿಗೆ ಕನ್ನಡ ಭಾಷೆಯ ಮೇಲೆ ಅಪಾರ ಪ್ರೇಮ. ಕನ್ನಡ ಭಾಷೆಯ ಮೇಲಿನ ಹಿಡಿತ, ಸಾಹಿತ್ಯ ಶುದ್ಧಿ ಅವರಿಗೆ ಹುಟ್ಟಿನಿಂದಲೇ ಬಂದ ವರವಾಗಿರಬೇಕು.

ಅದೊಂದು ದಿನ ಶಾಲೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಾಟಕ ಚಂದ್ರಹಾಸ. ಶರೀರ ಹಾಗೂ ಶಾರೀರ ಎರಡೂ ಅದ್ವಿತೀಯವಾಗಿದ್ದ ಈ ಸುಂದರ ಕಾಳಿಂಗನೇ ಚಂದ್ರಹಾಸ. ಅಂದು ಆ ಕಾರ್ಯಕ್ರಮದ ಅಧ್ಯಕ್ಷರು  ಬ್ರಿಟಿಷ್‌ ಅಧಿಕಾರಿಯೊಬ್ಬರು. ಚಂದ್ರಹಾಸನ ಪಾತ್ರಾಭಿನಯಕ್ಕೆ ಮಾರುಹೋದ ಅವರು ಈ ಪುಟ್ಟ ಬಾಲಕನಿಗೆ ಮೆಚ್ಚುಗೆಯಿಂದ ಚಿನ್ನದ ಪದಕವನ್ನು ನೀಡಿ ಬೆನ್ನು ತಟ್ಟಿದರು. ಅಲ್ಲೇ ಇದ್ದ ರಂಗಭೂಮಿಯ ಸುಪ್ರಸಿದ್ಧ ನಟ ಮುಂಡಾಜೆ ರಂಗನಾಥಭಟ್ಟರ ದೃಷ್ಟಿ ಈ ಬಾಲಕನ ಮೇಲೆ ಬಿತ್ತು. ಹಾಗಾಗಿ ಶಾಲಾರಂಗದಿಂದ ನಾಟಕರಂಗಕ್ಕೆ ಧುಮುಕಿದರು ಕಾಳಿಂಗರಾಯರು. ಭಟ್ಟರ ‘ಅಂಬಾಪ್ರಸಾದಿತ ನಾಟಕ ಮಂಡಲಿ’ಯಲ್ಲಿ ಲೋಹಿತಾಶ್ವನಾಗಿ, ಧ್ರುವನಾಗಿ, ಕೃಷ್ಣನಾಗಿ, ಬಾಲ ಪಾತ್ರಗಳಲ್ಲಿ ಮೆರೆದರು. ಅಭಿನಯದ ಜೊತೆಗೆ ಭಟ್ಟರಿಂದ ಕಾಳಿಂಗರಾಯರಿಗೆ ಕರ್ನಾಟಕ ಸಂಗೀತ ಶಿಕ್ಷಣವನ್ನು ಪಡೆಯುವ ಭಾಗ್ಯ ದೊರೆಯಿತು.

ಒಮ್ಮೆ ಶಿವಮೊಗ್ಗೆಯಲ್ಲಿ ೧೬ ವರ್ಷದ ಕಾಳಿಂಗ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನೀಡಿದಾಗ, ಬೆಕ್ಕಸಬೆರಗಾದ ಜನ ಇವನಿಗೆ ಶಲ್ಯ ಹೊದೆಸಿ, ಉಂಗುರದ ಜೊತೆಗೆ ಚಿನ್ನದ ತೋಡವನ್ನೂ ತೊಡಿಸಿ ಸಂತೋಷಪಟ್ಟರು. ‘ಅಂಬಾಪ್ರಸಾದಿತ’ ನಾಟಕ ಕಂಪೆನಿಯಲ್ಲಿ ವೆಂಕಟರಾವ ರಾಮದುರ್ಗಾ ಹಾಗೂ ರಾಮಚಂದ್ರ ಬುವಾ ಮರೇಳಕರ್ ಇಬ್ಬರೂ ಮುಖ್ಯಪಾತ್ರಧಾರಿಗಳಾಗಿದ್ದರು. ಅವರುಗಳಿಂದ ಹಿಂದುಸ್ತಾನಕಿ ಶಾಸ್ತ್ರೀಯ ಸಂಗೀತವನ್ನು ಕಲಿಯುವುದರ ಮೂಲಕ ಕರ್ನಾಟಕ ಸಂಗೀತದ ರೆಂಬೆಯಿಂದ ಹಿಂದುಸ್ತಾನಿ ಸಂಗೀತದ ರೆಂಬೆಗೂ ಜಿಗಿದು ಅಲ್ಲಿಯ ಸವಿಯನ್ನೂ ಉಂಡು ರಸಿಕರಿಗೆ ಉಣಬಡಿಸಿದರು. ಇದರ ಜೊತೆಗೆ ನಾಟಕಗಳಲ್ಲಿ ಸ್ತ್ರೀ ಪಾತ್ರಕ್ಕೇರಿದರು. ಸ್ತ್ರೀ ಪಾತ್ರಗಳ ಅಭಿನಯದಿಂದ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಹಾಕಿದರು. ‘ರಾಯರ ಸೊಸೆ’, ‘ಆಜನ್ಮಕುಮಾರಿ’, ‘ಕಾಳಿಯ ಮರ್ದನ’, ‘ತುಳಸಿದಾಸ’, ‘ಮಿಸ್‌ಮಾಧುರಿ’, ‘ವಿಕ್ರಮಶಶಿಕಲಾ’ ಮುಂತಾದ ನಾಟಕಗಳಲ್ಲಿ ಸ್ತ್ರೀ ಪಾತ್ರಧಾರಿಯಾಗಿ ಅಭಿನಯಿಸಿ ರಸಿಕರನ್ನು ರಂಜಿಸಿದರು.

ಹೊಸಹಾದಿಯನ್ನೇ ಹಿಡಿಯಬೇಕೆಂಬ ಹಂಬಲ, ಅದಮ್ಯ ಆಸೆ ಆಕಾಂಕ್ಷೆಗಳು ರಾಯರನ್ನು ನಾಟಕರಂಗದಲ್ಲಿಯೇ ಉಳಿಯ ಬಿಡಲಿಲ್ಲ. ಹಲವಾರು ಕಂಪೆನಿ ನಾಟಕಗಳಲ್ಲಿ ವೇಷ ಹಾಕಿ ಮೆರೆದಿದ್ದ ರಾಯರು ಚಲನಚಿತ್ರರಂಗದ ಭ್ರಮಾಲೋಕಕ್ಕೆ ಬೆರಗಾಗಿ ಮದ್ರಾಸಿನಲ್ಲಿ ಕಾಲಿಟ್ಟರು. ಆದರೆ ಇವರ ಪ್ರಯೋಗಶೀಲತೆಗೆ ತಕ್ಕ ಪುರಸ್ಕಾರ ದೊರೆಯಲಿಲ್ಲವೆಂಧೇ ಹೇಳಬೇಕು. ‘ಪ್ರೇಮಸಾಗರ’, ‘ವಸಂತಸೇನಾ’ ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದರು. ಚಿತ್ರಗಳಲ್ಲಿ ಅಭಿನಯಿಸಿದರು ಕೂಡ. ಸಂಗೀತದ ಬಗ್ಗೆ ರಾಯರಿಗಿದ್ದ ಅಸಾಧಾರಣ ಪ್ರತಿಭೆಯನ್ನು ಗುರುತಿಸಿ, ದಕ್ಷಿಣ ಭಾರತ ಹಿಂದೀ ಪ್ರಚಾರ ಸಭೆಯವರು, ತಮ್ಮ ಹಿಂದೀ ಸಂಗೀತ ಕಾಲೇಜಿಗೆ ಪ್ರಾಚಾರ್ಯರನ್ನಾಗಿ ನೇಮಿಸಿಕೊಂಡರು. ರಾಯರ ಕೀರ್ತಿ ಬೆಳೆದು ಅವರಿಗೆ ಅನೇಕ ಶಿಷ್ಯರಾದರು. ಅವರಲ್ಲಿ ಮುಖ್ಯರಾದವರು ಜಯಲಕ್ಷ್ಮಿ ವರದಾಚಾರ್, ಸೋಹನ್‌ ಕುಮಾರಿ ಮತ್ತು ಮೋಹನ ಕುಮಾರಿಯವರು.

ಈ ಮಧ್ಯೆ ಬೆಳಗ್ಗೆ ಛತ್ರಿ ಹಿಡಿದು ಹೊರಟು ಸಂಜೆ ಛತ್ರಿ ಮುಚ್ಚಿ ಮನೆಗೆ ಬರುವ ಈ ವೃತ್ತಿ ರಾಯರಿಗೆ ತೃಪ್ತಿ ನೀಡಲಿಲ್ಲ. ಏಕತಾನತೆಯಿಂದ ಬೇಸರಗೊಂಡ ಕಾಳಿಂಗರಾಯರು ಪ್ರಾಚಾರ್ಯರ ಕೆಲಸಕ್ಕೆ ಶರಣು ಹೊಡೆದರು.

ಕಾಳಿಂಗರಾಯರು ಮದ್ರಾಸಿಗೆ ಬರುವ ಮುನ್ನ ತಾಯಿ ನಾಗಮ್ಮ ತನ್ನ ದೊಡ್ಡಮ್ಮನ ಮಗಳಾದ ಸುಬ್ಬಮ್ಮನ ಮೊಮ್ಮಗಳಾದ ಮೀನಾಕ್ಷಿಯೆಂಬ ೧೨ ವರ್ಷದ ಸುಂದರ ಹುಡುಗಿಯನ್ನು ಕಾಳಿಂಗರಾಯರಿಗೆ ಮದುವೆ ಮಾಡಿ ತನ್ನ ಸೊಸೆಯಾಗಿ ತಂದೇಬಿಟ್ಟರು. ಇಪ್ಪತ್ತೆರಡರ ಕಾಳಿಂಗರಾಯರಿಗೆ ಹನ್ನೆರಡರ ಮೀನಾಕ್ಷಿ ವಧುವಾಗಿ ಬಂದವಳು. ಏಕೋ ಏನೋ ಈ ಇಬ್ಬರ ನಡುವೆ ಸಾಮರಸ್ಯ ಬೆಳೆಯಲಿಲ್ಲವೆಂದೇ ಕಾಣುತ್ತದೆ. ಮದ್ರಾಸಿಗೆ ತೆರಳಿದ ಬಳಿಕ ಸಂಗೀತ ಕಲಿಯಲು ಬಂದ ಜಯಲಕ್ಷ್ಮಿಗೆ ರಸಿಕ ಕಾಳಿಂಗರಾಯರು ತಮ್ಮನ್ನೇ ತಾವು ಕಳೆದುಕೊಂಡರು. ಆಕೆಯೊಂದಿಗೆ ನಾಲ್ಕಾರು ವರ್ಷ ಬಾಳ್ವೆ ಮಾಡಿದರು. ಅಷ್ಟರಲ್ಲಿ ಜಯಲಕ್ಷ್ಮಿ ತೀರಿಕೊಂಡಿದ್ದರಿಂದ ಆ ಬಾಂಧವ್ಯ ಅಲ್ಲಿಗೆ ಮುಗಿದು ಹೋಯಿತು.

ಮದ್ರಾಸನ್ನು ಬಿಟ್ಟು ಮೈಸೂರಿಗೆ ಹೊಸ ಅನ್ವೇಷಣೆಗಾಗಿ ಬಂದರು. ಮೈಸೂರಿನಲ್ಲಿ ತಯಾರಾದ ಮೊಟ್ಟಮೊದಲ ಚಿತ್ರ ‘ಕೃಷ್ಣಲೀಲಾ’ಗೆ (ನವಜ್ಯೋತಿ ಸ್ಟುಡಿಯೋ) ಸಂಗೀತ ನೀಡಿದರು. ಮುಂದೆ ರಾಮದಾಸ ಮೊದಲಾದ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದರು. ಆದರೆ ಚಿತ್ರಬ್ರಹ್ಮರ ಅಪ್ಪಣೇಯ ಮೇರೆಗೆ ಟ್ಯೂನ್‌ಗಳನ್ನು ಸಿದ್ಧಪಡಿಸುವ ಕಾಯಕದಿಂದ ಬೇಸರಗೊಂಢರು. ಕಾಡಹಕ್ಕಿ ಸ್ವಾತಂತ್ಯ್ರ ಕಳೆದುಕೊಂಡು ಪಂಜರದಲ್ಲಿ ಎಷ್ಟು ದಿನ ತಾನೇ ಬದುಕಲು ಸಾಧ್ಯ? ಕಾಳಿಂಗರಾಯರಿಗೆ ಯಾರೂ ತುಳಿಯದ ಜಾಡಿನಲ್ಲಿ ತನ್ನ ಹೆಜ್ಜೆಯನ್ನು ಊರುವ ಆಸೆ. ಕೊನೆಗೂ ಈ ಕಲಾತಪಸ್ವಿ ತನ್ನ ಜಾಡನ್ನು ಗುರುತಿಸಿಕೊಂಡರು. ಅದಕ್ಕೆಂದೇ ಕಂಡುಕೊಂಡವು ಜಾನಪದಗೀತೆಗಳು, ಲಾವಣಿಗಳು, ವಚನಗಳು, ದೇವರನಾಮಗಳು, ಭಾವಗೀತೆಗಳು ಮುಂತಾದ ವೈವಿಧ್ಯಮಯವಾದ ಸಾಹಿತ್ಯ ಪ್ರಕಾರಗಳು. ಈ ನಿಟ್ಟಿನಲ್ಲಿ ಸಾಧನೆಯ ಜೊತೆಗೆ ಶೋಧನೆಯತ್ತ ದಾಪುಗಾಲು ಹಾಕಿದರು. ಇವು ಜನತೆಯ ನಾಡಿಯನ್ನು ಮಿಡಿಯ ಬಲ್ಲುದೆಂದು ಕಂಡುಕೊಂಡರು. ಈ ಎಲ್ಲ ಪ್ರಕಾರದ ಗೀತೆಗಳನ್ನು, ಸಾಹಿತ್ಯವನ್ನು ಆಸ್ಥೆಯಿಂದ ಓದಿಕೊಂಡರು. ಮನನ ಮಾಡಿಕೊಂಡರು. ಚಿತ್ರಗೀತೆಗಳಿಗಿಂತ ತೀರಾ ಭಿನ್ನವಾದ ಪ್ರಕಾರಗಳಿವು ಎಂಬುದನ್ನು ಕಂಡುಕೊಂಡರು. ಕನ್ನಡ ಭಾಷೆಯ ಮೇಲೆ ಕಾಳಿಂಗರಾಯರಿಗೆ ಅಸಾಧಾರಣವಾದ ಹಿಡಿತವಿತ್ತು. ಸಾಹಿತ್ಯ ಶುದ್ಧಿ ಅವರಿಗೆ ಹುಟ್ಟಿನಿಂದಲೇ ಬಂದಿದ್ದ ಬಳುವಳಿ. ಇದರಿಂದ ಕನ್ನಡದ ಎಲ್ಲ ಪ್ರಕಾರದ ಸಾಹಿತ್ಯವೂ ರಾಗದುಡುಗೆ ತೊಡಿಗೆಯನ್ನು ಕೊಟ್ಟು ಕಾಳಿಂಗರಾಯರ ನಾಲಗೆಯಲ್ಲಿ ಲಾಸ್ಯವಾಡಿದವು. ಈ ಮಾಂತ್ರಿಕನ ರಾಗದ ಮೋಡಿಗೆ ರಸಿಕರು ಮೂಕ ವಿಸ್ಮಿತರಾದರು. ಅವರ ರಾಗದ ಮೋಡಿಗೆ, ಹಾಡಿಕೆಯ ಸೊಗಸಿಗೆ ಮರುಳಾದವರು ಹಲವರಾದರೆ, ಅವರ ಹಿಂದೆ ಬಿದ್ದವರು ಹಲವರು. ಅವರ ಸ್ನೇಹಕ್ಕಾಗಿ ಹಾತೊರೆದವರು ಹಲವರಾದರೆ, ಅವರ ಶಿಷ್ಯರಾಗಲು ಹಲುಬಿದವರು ಹಲವರು. ಅದೇ ಕಾಳಿಂಗರಾಯರ ಮಧುರಗಾಯನದ ಮೋಡಿ.

ರಾಗವೂ ವೈವಿಧ್ಯಮಯವೇ; ಸಾಹಿತ್ಯವೂ ವೈವಿಧ್ಯಪೂರ್ಣವೆ. ಕಾಳಿಂಗರಾಯರು ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಜೊತೆಗೆ ಪಾಶ್ಚಾತ್ಯ  ಸಂಗೀತವನ್ನೂ ಅಭ್ಯಾಸ ಮಾಡಿದ್ದರು. ಆದ್ದರಿಂದ ಕವನಗಳನ್ನು ಉತ್ತರ, ದಕ್ಷಿಣ, ಪೌರ್ವಾತ್ಯ, ಪಾಶ್ಚಿಮಾತ್ಯ ಜಾನಪದ, ಶಾಸ್ತ್ರೀಯ ಸಂಗೀತದ ಉಡಿಗೆ ತೊಡಿಗೆಗಳಿಂದಲಂಕರಿಸಿ ಹಾಡಿದರು. ಜನರ ಹೃದಯ ವೀಣೆಯನ್ನು ಮೀಟಿದರು. ರಾಗ ರಸಭಾವಗಳೊಂದಿಗೆ ಜನಮನ ಹೃದಯಗಳನ್ನು ಗೆದ್ದರು. ಚಿರಸ್ಥಾಯಿಯಾಗಿ ಉಳಿದರು. ಕವಿವಾಣಿಯಂಗತೆ “ಇವಳ ಸೊಬಗನವಳು ತೊಟ್ಟು… ಅವಳ ತೊಡಿಗೆ ಇವಳಿಗಿಟ್ಟು ಹಾಡಬಯಸಿದೆ” ಎಂಬುದನ್ನು ತಮ್ಮ ರಾಗಜಾಲದಲ್ಲಿ ಹಿಡಿದಿಟ್ಟಿದ್ದಾರೆ. ಆಯಾಯಾ ಸಾಹಿತ್ಯದ ಧ್ವನಿಯನ್ನು ಅನುಸರಿಸಿ ರಾಗದ ಕವಚ. ಒಂದೇ ಕವನವನ್ನು ನಾಲ್ಕಾರು ಧಾಟಿಯಲ್ಲಿ ಹಾಡುವ ಚೈತನ್ಯ  ಅವರಿಗಿತ್ತು. ಅದು ಕರ್ನಾಟಕ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಜಾನಪದ ಧಾಟಿ, ಪಾಶ್ಚಿಮಾತ್ಯ ಶೈಲಿ ಯಾವುದೂ ಆಗಬಹುದು. ಆದರೆ ಹೇಗೆ ಹಾಡಿದರೆ ಕವನದ ಭಾವಕ್ಕೆ ಇಂಬುಗೊಡುವುದೋ ಅದೇ ಮುಖ್ಯ ಎಂದು ಒತ್ತಿ ಹೇಳುತ್ತಿದ್ದರು.

ಇವರ ಈ ಮಾಂತ್ರಿಕ ಶಕ್ತಿಯಿಂದ ಇಡೀ ಕರ್ನಾಟಕದ ಕಲಾಭಿಮಾನಿಗಳು ಕಾಳಿಂಗರಾಯರ ಆರಾಧಕರಾದರು. ಕಾಳಿಂಗರಾಯರ ಕಚೇರಿ ಎಂದರೆ ಜನ ಹುಚ್ಚೆದ್ದು ಕುಣಿಯುತ್ತಿದ್ದರು. ಆ ಕಡೆ ಮೋಹನ, ಈ ಕಡೆ ಸೋಹನ ಮಧ್ಯೆ ಈ ದಿವ್ಯ ಚೇತನ ಹಾಡುತ್ತಿದ್ದರೆ ಕಲಿಯುಗ ದ್ವಾಪರವಾಗುತ್ತಿತ್ತು. ಮಿಂಚಿನ ಹೊಳೆ ಹರಿಯುತ್ತಿತ್ತು. ರಸಸ್ರೋತ ಪ್ರವಹಿಸುತ್ತಿತ್ತು.

ಕಾಳಿಂಗರಾಯರು ಕನ್ನಡ ಭಾವಗೀತೆಗಳನ್ನು ಹಾಡಲು, ಅವರಿಗೆ ಪ್ರೇರಕ ಶಕ್ತಿಯಾಗಿದ್ದವರಲ್ಲಿ ಅತಿ ಮುಖ್ಯರಾದವರೆಂದರೆ ಅ.ನ.ಕೃಷ್ಣರಾಯರು. ಮಿತ್ರರ ಒತ್ತಾಯಕ್ಕೆ ಮಣಿದು ೧೯೪೬ರಲ್ಲಿ ಹುಯಿಲಗೋಳ ನಾರಾಯಣರಾಯರ “ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು” ಎಂಬ ಗೀತೆಯನ್ನು ಸ್ವರ ಸಂಯೋಜಿಸಿ ಹಾಡಿದರು. ಕನ್ನಡ ರಾಜ್ಯೋದಯದ ನಂತರ ಈ ಹಾಡನ್ನು ಹಾಡಿದ್ದ ಕಾಳಿಂಗರಾಯರಿಗೆ ಕರ್ನಾಟಕ ಸರ್ಕಾರ ಸನ್ಮಾನ ಮಾಡಿತು.

‘ತೂಗಿರೇ ರನ್ನವಾ, ತೂಗಿರೇ ಚಿನ್ನವಾ’, ‘ಬಾರಯ್ಯ ಬೆಳುದಿಂಗಳೇ’, ‘ಅಮ್ಮಕ ಜಮ್ಮಕದಿಂದ ಬರುತಾಳೇ ರತುನಾ’, ‘ಮೂಡಲ್‌ ಕುಣಿಗಲ್‌ ಕೆರೆ’, ‘ಬೆಟ್ಟ ಬಿಟ್ಟಿಳಿಯುತ್ತ ಬಂಧಾಳೆ ಚಾಮುಂಡಿ ಒಂದೇ ಎರಡೇ. ಜಾನಪದ ಗೀತೆಗಳಿಗೇ ಹೊಸ ತಿರುವನ್ನು ಕೊಟ್ಟರು. ಈ ಧ್ವನಿ ಮುದ್ರಿಕೆಗಳನ್ನು ಕೇಳಿದವರು ಮೈಮರೆತರು. ಹಾಡುವುದರಿಲಿ, ಓದುವುದಕ್ಕೂ ಕಷ್ಟವೆನಿಸಿದ್ದ ಜಿ.ಪಿ. ರಾಜರತ್ನಂರವರ ‘ರತ್ನನ ಪದ’ಗಳನ್ನು ಭಾವಪೂರ್ಣವಾಗಿ ಹಡಬಹುದೆಂಬುದನ್ನು ತೋರಿಸಿಕೊಟ್ಟ ಮೊಟ್ಟ ಮೊದಲಿಗರೇ ಕಾಳಿಂಗರಾಯರು. ಅಂತೂ ಪುಸ್ತಕದಲ್ಲಿದ್ದಕ “ಬ್ರಹ್ಮಾನಿಂಗೆ ಜೋಡಿಸ್ತೀನಿ ಯೆಂಡಾ ಮುಟ್ಟಿದ್‌ ಕೈನಾ” ಅಂತ ಹೇಳಿ ಬೆಳಕಿಗೆ ತಂದರು. ಇವರ ನಾಲಿಗೆಯ ಮೇಲೆ ದಾಸರು ನಲಿದರು. ವಚನಕಾರರು ಕುಣಿದರು, ಯೆಂಡ್ಕುಡ್ಕ ರತ್ನ ಮೆರೆದರು ಜನಪದರು ಉಕ್ಕಿ ಹರಿದರು.  ಭಾವಗೀತಕಾರರು ಮಿಂಚಿದರು. ‘ಎಲ್ಲಾದರು ಇರು, ಎಂತಾದರು ಇರು’, ‘ಏರಿಸಿ ಹಾರಿಸಿ ಕನ್ನಡದ ಬಾವುಡ’, ಯಾರು ಹಿತವರು ನಿನಗೆ, ಮಾಡು ಸಿಕ್ಕದಲ್ಲ, ಮನವೆಂಬ ಸರಸಿಯಲಿ, ಪರಚಿಂತೆ ನಮಗೆ ಏಕೆ ಅಯ್ಯಾ, ಮಂಕುತಿಮ್ಮನ ಕಗ್ಗ, ದೇಶಭಕ್ತಿಗೀತೆಗಳು, ಹರಿಹರನ ರಗ ಳೆ ಎಲ್ಲವನ್ನೂ ಹಾಡಿ ಸೈ ಎನಿಸಿಕೊಂಡರು. ಕರ್ನಾಟಕದಲ್ಲಿ ಮಾತ್ರವಲ್ಲದೆ ಡೆಲ್ಲಿ, ಕಲ್ಕತ್ತ, ಮುಂಬಯಿ, ಮದ್ರಾಸ್‌, ಪೂನಾ, ನಾಗಪುರ ಮುಂತಾದ ಕಡೆಗಳಲ್ಲೆಲ್ಲ ಹಾಡಿ ಭಾರತದ ಉದ್ದಗಲಕ್ಕೂ ತಮ್ಮ ಇನಿದನಿಯ ಗಾನಸುಧೆಯನ್ನು ಹರಿಸಿ ಕೀರ್ತಿ ಶಿಖರಕ್ಕೇರಿದರು. ಇವರ ಗಾಯನವನ್ನು ಧ್ವನಿ ಮುದ್ರಿಸಿಕೊಳ್ಳಲು ಎಚ್‌.ಎಂ.ವಿ. ಮತ್ತು ಸರಸ್ವತಿ ಸಂಸ್ಥೆಗಳು ಪೈಪೋಟಿಯನ್ನೇ ನಡೆಸಿದವು.

ಕಾಳಿಂಗರಾಯರು ಚಲನಚಿತ್ರಗಳಲ್ಲಿಯೂ ಹಾಡಿದರು. “ಕಿತ್ತೂರು ಚೆನ್ನಮ್ಮ”, “ಅಬ್ಬಾ ಆ ಹುಡುಗಿ”, “ಅಣ್ಣ-ತಂಗಿ” ಚಿತ್ರಗಳಲ್ಲಿ ಹಾಡಿದ ಹಾಡುಗಳು ಇಂದಿಗೂ ಜನಮನದಲ್ಲಿ ಹಚ್ಚಹಸುರಾಗಿ ಉಳಿದಿವೆ. ಸಂಗೀತ ನಿರ್ದೇಶಕರಾಗಿ “ನಟಶೇಖರ”, “ಅಬ್ಬಾ ಆ ಹುಡುಗಿ”, “ತರಂಗ” ಚಿತ್ರಗಳಿಗೆ ಸಂಗೀತ ನೀಡಿದರು. ಬಿಡಿಹಾಡುಗಳಿಗೆ, ಚಿತ್ರಗೀತೆಗಳಿಗೆ ಪಾಶ್ಚಾತ್ಯವಾದ್ಯಗಳನ್ನು ಬಳಸಿ ಯಶಸ್ವಿಯಾಗಿದ್ದಾರೆ.  ಕ್ಲಾರಿಯೊನೆಟ್‌, ಗಿಟಾರ್, ಹವಾಯಿ ಗಿಟಾರ್, ಮ್ಯಾಂಡೋಲಿನ್‌ ಮುಂತಾದ ವಾದ್ಯಗಳ ಮಿಡಿತಗಳನ್ನು ಅಧ್ಯಯನ ಮಾಡಿ, ಎಲ್ಲೆಲ್ಲಿ  ಯಾವ ರೀತಿಯಲ್ಲಿ ಬಳಸಬೇಕೆಂಬುದನ್ನು ಅರಿತುಕೊಂಡರು.

ಈ ಮಧ್ಯೆ ೧೯೫೫ರ ವೇಳೆಗೆ ಈ ರಾಗ ಜಾದುಗಾರನ ಯೋಗ್ಯತೆಯನ್ನು ಗುರುತಿಸಿದ್ದ ನಾಟಕರತ್ನ ಗುಬ್ಬಿ ವೀರಣ್ಣನವರು ಒಂದು ಮಹಾನಾಟಕ ‘ದಶಾವತಾರ’ವನ್ನು ರಂಗಕ್ಕೆ ತಂದರು. ಅದಕ್ಕೆ ಸಂಗೀತ ನಿರ್ದೇಶನ ಮಾಡಲು ವೀರಣ್ಣನವರು ಕಾಳಿಂಗರಾಯರನ್ನು ನಿಯೋಜಿಸಿಕೊಂಡರು . ಗುಬ್ಬಿ ಕಂಪನಿಯಲ್ಲಿ ಕಾಳಿಂಗರಾಯರು ಸುಮರು ಐದಾರು ವರ್ಷ ಸಂಗೀತ ನಿರ್ದೇಶಕರಾಗಿ ದುಡಿದರು. ರಂಗನಾಟಕಗಳಿಗೂ ವಿನೂತನ ಶೈಲಿಯ ಹೊಚ್ಚ ಹೊಸ ರಾಗರೂಪವನ್ನು ಕೊಟ್ಟು ಪ್ರಸಿದ್ಧರಾದರು.

ಗುಬ್ಬಿ ವೀರಣ್ಣನವರ ಕಂಪನಿಯಲ್ಲಿ, ವೀರಣ್ಣ ಮತ್ತು ಸುಂದರಮ್ಮನವರ

ಗುಬ್ಬಿ ವೀರಣ್ಣನವರ ಕಂಪನಿಯಲ್ಲಿ, ವೀರಣ್ಣ ಮತ್ತು ಸುಂದರಮ್ಮನವರ ಮಕ್ಕಳಾದ ಸ್ವರ್ಣಮ್ಮ ಹಾಗೂ ಮಾಲತಮ್ಮ ‘ದಶಾವತಾರ ’ದ ನಾಟಕದಲ್ಲಿ ಪಾತ್ರ ಮಾಡುತ್ತ  ಸುಶ್ರಾವ್ಯವಾಗಿ ಹಾಡುತ್ತಿದ್ದರು . ಈ ಮಧ್ಯೆ ಕಾಳಿಂಗರಾಯರಿಗೂ, ಸ್ವರ್ಣಮ್ಮನಿಗೂ ಅದು ಬೆಳೆದು ಸಖ್ಯ ಪ್ರೇಮಕ್ಕೆ ತಿರುಗಿ ಜೋಡಿ ಹಕ್ಕಿಗಳಂತೆ ಬಾಳತೊಡಗಿದರು. ಸ್ವರ್ಣಮ್ಮನ ಹಾಡಿನಿಂದ ರಾಯರು ಪ್ರಭಾವಿತರಾಗಿದ್ದರು. ‘ಸ್ತ್ರೀ ಸೌಂದರ್ಯ ಶರೀರದಲ್ಲಿಲ್ಲ. ಶಾರೀರದಲ್ಲಿದೆ” ಎನ್ನುತ್ತಿದ್ದ ರಾಯರು ಸ್ವರ್ಣಮ್ಮನವರ ಗಾಯನದ ವೈಖರಿಗೆ ಮರುಳಾದದ್ದು ಆಶ್ಚರ್ಯವಿಲ್ಲ. ಅವರ ಗಾಯನದಿಂದಾಗಿಯೇ ಕಾಳಿಂಗರಾಯರಿಗೆ ಸ್ವರ್ಣಮ್ಮನವರಲ್ಲಿ ವಿಶೇಷ ಆಕರ್ಷಣೆ. ಕಾಳಿಂಗರಾಯರು ಮತ್ತು ಮೀನಾಕ್ಷಮ್ಮನವರಿಗೆ ಶರತ, ವಸಂತ, ಪ್ರೇಮ, ಸಂತೋಷ ಎಂಬ ನಾಲ್ಕು ಮಕ್ಕಳಿದ್ದರೂ ಸಂಸಾರದ ಜವಾಬ್ದಾರಿಯನ್ನು ರಾಯರು ಎಂದೂ ಹೊತ್ತವರಲ್ಲ. ಸುಖವನ್ನೇ ಕಂಡರಿಯರದ ಮೀನಾಕ್ಷಮ್ಮನವರ ಬಾಳಿಗೆ ಸ್ವರ್ಣಮ್ಮ ಆಶಾದೀಪವಾಗಿ ಬಂದರು. ಕಾಳಿಂಗರಾಯರು ಸಂಸಾರದ ಜವಾಬ್ದಾರಿಯನ್ನು ಹೊರಬೇಕೆಂದು ಅವರಿಗೆ ಸದಾ ಮನವರಿಕೆ ಮಾಡಿಕೊಡುತ್ತಿದ್ದವರು ಸ್ವರ್ಣಮ್ಮ. ಮೀನಾಕ್ಷಮ್ಮನವರ ಬಾಳಿನಲ್ಲಿ ಒಂದಷ್ಟು ಸುಖದ ಸಿಂಚನವಾಗಿದ್ದರೆ ಅದು ಸ್ವರ್ಣಮ್ಮನ ಮೂಲಕವಷ್ಟೆ. ಹಾಗಾಗಿ ಸ್ವರ್ಣಮ್ಮ ಮೀನಾಕ್ಷಮ್ಮನವರಿಗೆ ಸ್ವರ್ಣಕ್ಕ ಆದರು.

ಲೌಕಿಕ ಜಗತ್ತಿನ ಕಾಳಿಂಗರಾಯರು ತಮ್ಮ ಜವಾಬ್ದಾರಿಯಿಂದ ಜಾರಿಕೊಂಡವರು. ಕಲಾಜಗತ್ತಿನ ಕಾಳಿಂಗರಾಯರು  ಶ್ರದ್ಧೆಯಿಂದ ದುಡಿದು ಕಲಾಶಿಖರದ ನೆತ್ತಿಗೇರಿದವರು. ಎಂಥ ವಿಪರ್ಯಾಸ! ಇದಕ್ಕೆ ಕಾರಣವೂ ಇದ್ದೀತು. ಇವರ ತಂದೆ ಗೆಜ್ಜೆ ಪುಟ್ಟಯ್ಯನವರು ಮತ್ತೊಂದು ಮದುವೆಯಾಗಿ ಕಾಳಿಂಗರಾಯರ ತಾಯಿ ನಾಗಮ್ಮನವರನ್ನು ತ್ಯಜಿಸಿದುದರು ಪರಿಣಾಮ ಕಾಳಿಂಗರಾಯರಿಗೆ ಬಾಲ್ಯದಲ್ಲಿ ತಂದೆಯ ಪ್ರೀತಿ ದೊರೆಯಲೇ ಇಲ್ಲ. ತೀರ ಚಿಕ್ಕವಯಸ್ಸಿನಿಂದಲೇ ನಾಟಕ, ಸಂಗೀತ ಎಂದು ಕಂಪನಿಯ ನಾಟಕಕ್ಕೆ ಸೇರಿದುದರ ಪರಿಣಾಮ ಬಂಧು ಬಾಂಧವರ, ತನ್ನವರ ಒಡನಾಟ ದೊರೆಯಲಿಲ್ಲ. ಇದು ಅವರ ಮೇಲೆ ಆಘಾತ ಮಾಡಿರಲಿಕ್ಕೂ ಸಾಕು. ಹಾಗಾಗಿ ಇವರು ಕೈ ಹಿಡಿದ ಹೆಂಡತಿ ಮಕ್ಕಳ ಮೇಲೂ ಪ್ರೀತ್ಯಾದರಗಳನ್ನು ತೋರದಿದ್ದುದು ಬದುಕಿನ ದುರಂತ.

ಆದರೆ ಕಾಳಿಂಗರಾಯರು ಹೊರ ಪ್ರಪಂಚದಲ್ಲಿ ಎಂದೂ ಏಕಾಂಗಿಯಾಗಿರಲೇ ಇಲ್ಲ. ಗೆಳೆಯರ ಸಮೂಹ ಸದಾ ಅವರನ್ನು  ಬಳಸಿರುತ್ತಿತ್ತು. ರಾಯರು ಮದ್ರಾಸಿನಲ್ಲಿ ಪ್ರತಿಷ್ಠಿತ ಸಂಗೀತ ನಿರ್ದೇಶಕರಾಗಿದ್ದಾಗ ಅವರ ಮನೆಗೆ ಬರುವವರು ಅದೆಷ್ಟೋ ಮಂದಿ ಇದ್ದರು. ಎಲ್ಲರಿಗೂ ಅವರ ಮನೆಯಲ್ಲೇ ಊಟೋಪಚಾರ. ಇದು ಅವರ ಹೃದಯ ವೈಶಾಲ್ಯಕ್ಕೆ ಸಾಕ್ಷಿಯಾಗಿತ್ತು. ಅಲ್ಲದೆ ಸುತ್ತಮುತ್ತಲಿನವರನ್ನು ಸದಾ ನಗಿಸುವ ಜಾಯಮಾನ ಬೇರೆ ರಾಯರಲ್ಲಿ ಮನೆ ಮಾಡಿತ್ತು.

ಸದಾ ಹಸನ್ಮುಖಿಯಾಗಿರುತ್ತಿದ್ದ ರಾಯರು ಯಾವತ್ತೂ ಶುಭ್ರವಾದ ಉಡಿಗೆ ತೊಡಿಗೆಗಳನ್ನು ತೊಡುತ್ತಿದ್ದರು. ನೀಲಿಯ ಬಣ್ಣದ ಮೇಲೆ ಅವರಿಗೆಂಥದೋ ವ್ಯಾಮೋಹ. ಹೆಚ್ಚು ಆ ಬಣ್ಣದ ಬಟ್ಟೆಗಳನ್ನು ಉಪಯೋಗಿಸುತ್ತಿದ್ದರು. ಅವರ ಹಾಡುಗಾರಿಕೆಯಲ್ಲೂ ಬಹಳ ಅಚ್ಚುಕಟ್ಟು. ಆದರೆ ಈ ಕಲಾವಿದನಿಗೆ ಇಂಥದೇ ಪಕ್ಕವಾದ್ಯಗಳು ಬೇಕೆಂಬ ಹಟವಿಲ್ಲ. ಯಾವುದಾದರೂ ಸರಿಯೆ.  ಯಾರಾದರೂ ಸರಿಯೆ. ಅಷ್ಟು ನಂಬಿಕೆ ಅವರಿಗೆ, ಅವರ ಕಂಠಶ್ರೀಯ ಮೇಲೆ. ಅವರ ಪ್ರತಿಭೆಯ ಮೇಲೆ. ಅವರು ರಂಗದ ಮೇಲೆ ಬಂದರೇ ಸಾಕು. ಬೇರೆ ಲೋಕವೇ ಸೃಷ್ಟಿಯಾಗುತ್ತಿತ್ತು. ಅವರ ಗಾನ ಸುಧೆಯಿಂದ. ಇಷ್ಟಿದ್ದೂ  ರಾಯರಿಗೆ ಲವಲೇಶವೂ ಅಹಂಕಾರವಾಗಲೀ., ಗರ್ವವಾಗಲೀ ಇರಲಿಲ್ಲ. ಹಾಲಿನಂಥ ನಿರ್ಮಲ ಮನಸ್ಸಿನವರಾಗಿದ್ದರು.

ಒಮ್ಮೆ ಒಂದು ಕಡೆ ಸರಿಯಾದ ಪಕ್ಕವಾದ್ಯ ದೊರೆಯದಿದ್ದಾಗ ಭಜನೆ ಮನೆಯ ಆರ್ಕೆಸ್ಟ್ರಾದೊಂದಿಗೇ ಕಾರ್ಯಕ್ರಮವನ್ನು ಪ್ರಾರಂಭಿಸಿದರು. “ಬ್ರಹ್ಮಾನಿಂಗೆ ಜೋಡಿಸ್ತೀನಿ” ಹಾಡ್ತಿದ್ದಾರೆ. ಪಾಪ ಆ ಭಜನೆಯ ಜನ ಆ ಹಾಡನ್ನು  ಭಜನೆಯಂತೆಯೇ ನುಡಿಸಲು ಪ್ರಾರಂಭಿಸಿದರು. ರಾಯರು ನಗುನಗುತ್ತ ಆ ಹಾಡನ್ನು ಭಜನೆಯಂತೆಯೇ ಹಾಡಿ ಮುಗಿಸಿದಾಗ ಜನ ಚಪ್ಪಾಳೆಯ ಮಳೆಗರೆಯಿತು.

ರಾಯರ ಹಾಸ್ಯ ಪ್ರವೃತ್ತಿ, ಸಮಯ ಸ್ಪೂರ್ತಿ ಕೂಡ ಬೆರಗುಗೊಳಿಸುವಂತಹುದು. ಒಮ್ಮೆ ಬೆಂಗಳೂರಿನಲ್ಲಿ ಇವರ ಕಾರ್ಯಕ್ರಮ. ಕರ್ನಾಟಕದ ಉನ್ನತ ಮಹಿಳಾ ರಾಜಕಾರಿಣಿಯವರ ಅಧ್ಯಕ್ಷತೆ. ಕಾಳಿಂಗರಾಯರು ಎಂದಿನಂತೆ ಕುಣಿಯುತ್ತ ನಗುನಗುತ್ತ ಹಾಡುತ್ತಿದ್ದರು.  ಆ ರಾಜಕಾರಿಣಿಯವರು ಕಾರ್ಯಕ್ರಮಕ್ಕೆ ಸ್ವಲ್ಪ ತಡವಾಗಿ ಬಂದರು. ಅವರನ್ನು ಕಾಣುತ್ತಿದದ ಹಾಗೇ ರಾಯರು ಹಾಡುತ್ತಿದ್ದ ಹಾಡನ್ನು ಅರ್ಧಕ್ಕೆ ನಿಲ್ಲಿಸಿ “ಅಂತಿಂಥ ಹೆಣ್ಣು ನೀನಲ್ಲ, ನಿನ್ನಂಥ ಹೆಣ್ಣು ಇನ್ನಿಲ್ಲ” ಎಂದು ನಗುನಗುತ್ತ ಆಖೆಯ ಕಡೆ ಕೈ ಮಾಡಿ ತೋರಿಸುತ್ತ ಹಾಡಿಯೇ ಬಿಟ್ಟರು. ಆಕೆ ನಾಚಿ ಕೆಂಪಾದರೆ, ಸಭೆ ನಗೆಗಡೆಲಿನಲ್ಲಿ ಮುಳುಗಿತು.

ಇನ್ನೊಮ್ಮೆ ಬಾಳೆಹೊನ್ನೂರಿನಲ್ಲಿ ಕಾರ್ಯಕ್ರಮ. ಜಿನುಗುವ ಮಳೆಯಲ್ಲೂ ಛತ್ರಿ ಹಿಡಿದೇ ಸಾವಿರಾರು ಮಂದಿ ಕಾರ್ಯಕ್ರಮಕ್ಕೆ ಸೇರಿದ್ದರು. ಮುಂದೆಯೇ ಕುಳಿತಿದ್ದ ಅತಿ ಸುಂದರ ಹೆಣ್ಣು ಮಗಳೊಬ್ಬಳನ್ನು ನೋಡುತ್ತ ಹಾಡುತ್ತಿದ್ದರು. ಆಕೆ ಮೈಮರೆತಳು. ಕಾರ್ಯಕ್ರಮ ಮುಗಿದ ಬಳಿಕ ಮಡಿಲಿನಲ್ಲಿದ್ದ ಮಗುವನ್ನು ಕೆಳಗೆ ಮಲಗಿಸಿ ಭ್ರಮೆಗೊಂಡವಳಂತೆ ರಾಯರ ಹಿಂದೆ ಹೋದಳು. “ಎಲ್ಲಿ ನಿಮ್ಮ ಕೈಯಲ್ಲಿ ಮಗು ಇತ್ತಲ್ಲ” ಎಂದು ರಾಯರೇ ಎಚ್ಚರಿಸಿದಾಗ, ಆಕೆ ವಾಸ್ತವ ಪ್ರಪಂಚಕ್ಕಿಳಿದು ಮಗುವನ್ನರಸಿ ಓಡಿದಳಂತೆ. ಇದು ರಾಯರ ಹಾಡಿನ ಮೋಡಿ.

ಇನ್ನು ಕಾಳಿಂಗರಾಯರು ಆಕಾಶವಾಣಿ ಗಾಯಕರಾಗಿಯೂ ಅನಭಿಷಿಕ್ತ ದೊರೆಯಾಗಿಯೇ ಮೆರೆದವರು. ಆಕಾಶವಾಣಿಗೆ ಅವರು ಎಂದೂ ಪೂರ್ವಸಿದ್ಧತೆ ಮಾಡಿ ಹೋದವರಲ್ಲ. ಅಲ್ಲಿಗೆ ಬರುತ್ತಿದ್ದ ಹಾಗೇ ಅಲ್ಲಿಯ ಪುಸ್ತಕ ಭಂಡಾರದಿಂದ ಪುಸ್ತಕ ತರಿಸಿ ಅಲ್ಲೇ ಅರ್ಧಘಂಟೆಯಲ್ಲಿ ಸ್ವರ ಸಂಯೋಜಿಸಿ ಹಾಡಿ ಮುಗಿಸುತ್ತಿದ್ದ ಸೃಷ್ಟ್ಯಾತ್ಮಕ ಕಲಾವಿದ. ಇಂಥ ಮಹಾನ್‌ ಕಲಾವಿದನಿಗೆ, ಸಂಗೀತ ಸಂಯೋಜಕನಿಗೆ ತೆರೆದ ಮನಸ್ಸಿತ್ತು. ಮುಕ್ತ ಮನಸ್ಸಿತ್ತು. ಅಷ್ಟು ಹಿರಿಯ ಕಲಾವಿದನಾಗಿಯೂ ಅನ್ಯ ನಿರ್ದೇಶಕರ ಹಾಡುಗಳನ್ನು ಹಾಡುವಲ್ಲಿ ಹಿಂಜರಿಯುತ್ತಿರಲಿಲ್ಲ. ಮೈಸೂರು  ಅನಂತಸ್ವಾಮಿಯವರ ಸ್ವರ ಸಂಯೋಜನೆಯ “ಇಳಿದು ಬಾ ತಾಯಿ ಇಳಿದು ಬಾ” ಕಾಳಿಂಗರಾಯರಿಗೆ ಅತ್ಯಂತ ಪ್ರಿಯವಾಗಿ ತಮ್ಮೆಲ್ಲ ವೇದಿಕೆಯ ಕಾರ್ಯಕ್ರಮಗಳಲ್ಲೂ ಹಾಡುತ್ತಿದ್ದರು. ಪದ್ಮಚರಣರ ಸಂಗೀತ ನಿರ್ದೇಶನದ ಅನೇಕ ಆಕಾಶವಾಣಿಯ ಸಂಗೀತ ರೂಪಕಗಳಲ್ಲಿ ಹಾಡಿದ್ದಾರೆ.

ಆಕಾಶವಾಣಿಇಯಲ್ಲಿ ಅಂಥ ಕಲಾವಿದನೊಂದಿಗೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಯೋಗ ನನ್ನ ಪಾಲಿಗೆ ಬಂದದ್ದು ಹೆಮ್ಮೆಯ ಸಂಗತಿ. ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ ನಡೆಯುತ್ತಿದ್ದ ಸುಗಮ ಸಂಗೀತ ಕಾರ್ಯಕ್ರಮಗಳಲ್ಲಿ ನೂರಕ್ಕೆ ತೊಂಭತ್ತು ಪಾಲು ಕಾರ್ಯಕ್ರಮಗಳಲ್ಲಿ ನಾವಿಬ್ಬರೂ ಹಾಡಿದ್ದೇವೆ. ಅಲ್ಲದೆ ಸಂಗೀತ ರೂಪಕಗಳಲ್ಲಿ ‘ಅಕ್ಕಮಹಾದೇವಿ’, ‘ಮೋಹನ ಮಂತ್ರ,’ ‘ಗೆಲುವಿನ ಗುಡಿ’ ಇತ್ಯಾದಿಗಳಲ್ಲಿ ಕೂಡಿ ಹಾಡಿದ್ದೇವೆ. ‘ಕಿತ್ತೂರ ಕೇಸರಿಣಿ’ ಹಾಗೂ ಮಾಸ್ತಿಯವರ ‘ತಾನಸೇನ್‌’ ಗೀತ ನಾಟಕದಲ್ಲೂ ಮುಕ್ತವಾಗಿ ಹಾಡಿದ್ದಾರೆ. ಇವೆಲ್ಲದರ ಸಂಗೀತ ನಿರ್ದೇಶನವೂ ಪದ್ಮಚರಣರದೇ. ಯಾರ ಸಂಘಈತ ನಿರ್ದೇಶನವಾದರೂ ಒಂದೇ ಸಲಕ್ಕೆ ಧಾಟಿ ಹಿಡಿದು ಹಾಡುತ್ತಿದ್ದ ಪ್ರತಿಭಾವಂತ ಗಾಯಕರು ಕಾಳಿಂಗರಾಯರು.

ಇಂಥ ಈ ಪ್ರತಿಭಾವಂತ ಗಾಯಕನಿಗೆ ಬಿರುದು ಬಾವಲಿಗಳ ಸರಮಾಲೆಯೇ ದೊರೆತದ್ದು ಆಶ್ಚರ್ಯದ ಸಂಗತಿಯಲ್ಲ. ಜಾನಪದ ಸಂಗೀತರತ್ನ, ಬಾಲಗಂಧರ್ವ, ಜಾನಪದ ಕಲಾ ಚಕ್ರವರ್ತಿ, ಗಾಯನ ಚಕ್ರವರ್ತಿ, ಗಾಯನ ಕಂಠೀರವ, ಕನ್ನಡ ಉದಯಗಾನ ಕೋಗಿಲೆ, ಸಂಗೀತ ರಸ ವಿಹಾರಿ ಎಲ್ಲವೂ ಜನಮೆಚ್ಚಿ ಕೊಟ್ಟ ಬಿರುದು ಬಾವಲಿಗಳೇ.

ಇಂತಹ ಈ ಕಲಾವಿದನ ಹೃದಯವಂತಿಕೆಯೂ ಹಿರಿದೆ. ಒಮ್ಮೆ ಉಪಾಸನೆ ಚಿತ್ರದಲ್ಲಿ ಒಂದು ಪುಟಾಣಿ ಹುಡುಗಿ (ಮೈಸೂರು ಎಸ್‌. ರಾಜಲಕ್ಷ್ಮಿ ಈಗ ಮೈಸೂರು ಆಕಾಶವಾಣಿಯ ನಿಲಯದ ಕಲಾವಿದೆ. ಸಂಗೀತ ನಿರ್ದೇಶಕ ಪಿ. ಶಾಮಣ್ಣನವರ ಮಗಳು) ವೀಣೆ ನುಡಿಸಿದಳು. ಅವರ ಮನಗೆ ಕಾಳಿಂಗರಾಯರು ಸದಾ ಹೋಗುತ್ತಿದ್ದರಂತೆ. ಹಾಗಾಗಿ ಆ ಪುಟಾಣಿ ಹುಡುಗಿಯನ್ನು “ನನ್ನ ಕಚೇರಿ ಟೌನ್‌ ಹಾಲಿನಲ್ಲಿದೆ. ನೀನು ನನಗೆ Background music ನುಡಿಸಬೇಕು” ಎಂದು ಹೇಳಿಬಿಟ್ಟರು. ಹುಡುಗಿ ಭಯದಿಂದಲೇ ವೇದಿಕೆಗೆ ಹೋದಳು. ಮೋಹನ ರಾಗದಲ್ಲಿ ಒಂದು ಗೀತೆಯನ್ನು ಹಾಡುತ್ತ ಮಧ್ಯೆ ಹುಡುಗಿಯ ಕಡೆಗೆ ನೋಡಿದರಂತೆ ರಾಯರು. ಹುಡುಗಿ ಮಧ್ಯೆ ಬಂದ ಆ ಅಂತರವನ್ನು ಅಚ್ಚುಕಟ್ಟಾಗಿ ನುಡಿಸಿದಾಗ ರಾಯರಿಗೆ ವಿಪರೀತ ಸಂತೋಷವಾಗಿ ಹಾಡುವುದನ್ನು ನಿಲ್ಲಿಸಿ ಆ ಹುಡುಗಿಯ ಕೈಗೆ ನೂರೊಂದು ರೂಪಾಯಿ ಕೊಟ್ಟು ಹುಡುಗಿಯನ್ನು ಎತ್ತಿ ಹಿಡಿದು ಸಭಿಕರಿಗೆ ತೋರಿಸಿದರಂತೆ. ಮತ್ತೊಂದು ಸಾರಿ ಬೆಂಗಳೂರು ಟೌನ್‌ಹಾಲ್‌ನಲ್ಲಿ ರಾಯರು ಹಾಡುತ್ತಿದ್ದ ಸಮಯ. ಅವರ ಅಭಿಮಾನಿ ಕಾಲೇಜ್‌ ಹುಡುಗನೊಬ್ಬ ಅವರ ಹಾಡು ಕೇಳುತ್ತ ಸ್ಟೇಜ್‌ ಹತ್ತಿರವೇ ನಿಂತಿದ್ದ. ಅವನು ಹಾಡುತ್ತಿದ್ದುದನ್ನೂ ರಾಯರು ಕೇಳಿದ್ದರು. ಹೀಗಾಗಿ ಅರ್ಧ ಹಾಡಿದ ಮೇಲೆ ಈಗ ನೀನೊಂದೆರಡು ಹಾಡು ಹಾಡೆಂದು ಹೇಳಿ ಬೆನ್ನು ತಟ್ಟಿ ಸ್ಟೇಜಿಗೆ ಕಳುಹಿಸಿದರಂತೆ. ಆ ಹುಡುಗ ಬೇರೆ ಯಾರೂ ಅಲ್ಲ. ನನ್ನ ಪತಿ ಎಸ್‌.ಜಿ. ರಘುರಾಂ. ಮೈಸೂರು ಅನಂತಸ್ವಾಮಿಗೆ ಅವರ ಸಂಗೀತದ ಬದುಕಿನಲ್ಲಿ ಪ್ರೋತ್ಸಾಹ ಹಾಗೂ ಸಲಹೆಗಳನ್ನು  ನೀಡಿದುದಲ್ಲದೆ ಅವರ ಸ್ವರ ಸಂಯೋಜನೆಯ ಹಾಡು “ಇಳಿದು ಬಾ ತಾಯಿ, ಇಳಿದು ಬಾ” ಎಲ್ಲ ಕಡೆ ಹಾಡುವುದರ ಮೂಲಕ ಹಿರಿತನವನ್ನು ತೋರಿಸಿದರು.

ಕಾಳಿಂಗರಾಯರ ಕೊನೆಕೊನೆಯ ದಿನಗಳು ಅಷ್ಟು ಸುಖಾಂತವಾಗಿರಲಿಲ್ಲ. ಮಗಳು ಪ್ರೇಮಾಳ ಗಂಡ ಆತ್ಮಹತ್ಯೆ ಮಾಡಿಕೊಂಡದ್ದು, ಸ್ವರ್ಣಮ್ಮನೊಡನೆ ಸಣ್ಣ ವಿಚಾರಕ್ಕಾಗಿ ಮನಸ್ತಾಪ ಮಾಡಿಕೊಂಡಿದ್ದು ಎರಡೂ ನೋವಿನ ಸಂಗತಿಯೇ. ಮನೆಯ ಮೆಟ್ಟಿಲೇರುವಾಗ ಜಾರಿಬಿದ್ದು ಚೇತರಿಸಿಕೊಳ್ಳುವಷ್ಟರಲ್ಲಿ ಮತ್ತೆ ರಿಕ್ಷಾ ಬಡಿದು ಮೂಳೆ ಜಜ್ಜಿಹೋಯಿತು. ಕಷ್ಟದ ದಿನಗಳೇ ಎದುರಾದವು. ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಕೊಂಡರು.

ಆ ಸಂದರ್ಭದಲ್ಲಿ ನಾನು, ರಘುರಾಂ ಇಬ್ಬರೂ ಅವರನ್ನು ಕಾಣಲು ಹೋಗಿದ್ದೆವು. ಕೈಲಾಗದಿದ್ದರೂ ಏನೋ ಗುನುಗುವ ಪ್ರಯತ್ನದಲ್ಲಿದ್ದರು. ಎಂತಹ ಸಂಗೀತದ ಗುಂಗು. “ನೀವು ಬೇಗೆ ಚೇತರಿಸಿಕೊಂಡು ಎಂದಿನಂತೆ ಹಾಡುವ ಹಾಗಾಗಬೇಕು” ಎಂದೆ. ಅದಕ್ಕೆ ಕಾಳಿಂಗರಾಯರು “Why not?IF i get a girl friend like you i will sing o.k” ಎಂದರು. ಅವರಿಗೆ ನನ್ನ ಹಾಡಿಕೆಯ ಬಗ್ಗೆ ಬಹಳ ಪ್ರೀತಿ ಇತ್ತು. ಹಾಗೆಂದು ಹೇಳುತ್ತ ಕೋಲೂರಿಕೊಂಡು ಬಂದು ನನ್ನ ಕೈ ಹಿಡಿದುಕೊಂಡರು. ನನ್ನ ಕಣ್ಣಲ್ಲಿ ನೀರಾಡಿತು. ಆದಾದ ಕೆಲವು ದಿನಗಳಲ್ಲೇ ಅವರು ತೀರಿಕೊಂಡ ಸುದ್ದಿ ನನ್ನ ಕಿವಿ ಮುಟ್ಟಿತು. (೨೧.೦೯.೧೯೮೧) ೨೧ರಂದು ನಿಧನರಾದ ರಾಯರ ದೇಹ ಒಮ್ಮೆ ಸ್ಮಶಾನವನ್ನು ಪ್ರವೇಶ ಮಾಡಿ ಅವರ ಅಭಿಮಾನಿಗಳಿಗಾಗಿ ಮತ್ತೆ ಸಂಪಂಗಿರಾಮನಗರದ ಸಾಂಸ್ಕೃತಿಕ ವೇದಿಕೆಯ ಮೇಲೆ ಮರಳಿ ಬಂದು ಮಲಗಿದ್ದು ರಾಯರ ಜನಪ್ರಿಯತೆಗೆ ಸಾಕ್ಷಿ.

ಆರೂರಿನಲ್ಲಿ ಹುಟ್ಟಿ, ನೂರೂರು ತಿರುಗಿ, ಸಾವಿರಾರು ಕಾರ್ಯಕ್ರಮಗಳನ್ನು ನೀಡಿ, ಲಕ್ಷಾಂತರ ಜನಗಳ ಹೃದಯವನ್ನು ಗೆದ್ದ ಕಿನ್ನರ ಕಂಠದ ಕನ್ನಡದ ಕೋಗಿಲೆ, ಭಾವಗೀತಾಗಾಯನ ಚತುರ, ಜಾನಪದ ಜಗತ್ತಿನ ಮೋಡಿಗಾರ, ದಾಸರ ಪದಗಳ ಸುಲಲಿತ ಹಾಡುಗಾರ, ವಚನ ವೈಭವದ ಸರದಾರ. ಇಂಥ ಇನ್ನೂ ಅನೇಕ ಗುಣವಾಚಕಗಳಿಗೆಲ್ಲ ಈತನೇ ಹರಿಕಾರ. ಶರೀರವಳಿದರೂ, ಅವರ ಗಾಯನ ಚಿರಂತನವಾಗಿ ಮುಂದಿನ ಜನತೆಗೆ ಬಳವಳಿಯಾಗಿ ಉಳಿದಿದೆ.