೨೪-೩-೧೯೩೧ ರಂದು ಮೈಸೂರಿನಲ್ಲಿ ಜನಿಸಿದ ಶ್ರೀನಿವಾಸಮೂರ್ತಿಯವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಟರ್ ಮೀಡಿಯೆಟ್‌ ಪರೀಕ್ಷೆ ಮುಗಿಸಿಕೊಂಡ ನಂತರ ವೃತ್ತಿಯಾಗಿ ಆರಿಸಿಕೊಂಡದ್ದು ಪತ್ರಿಕೋದ್ಯಮವನ್ನು ವಿದ್ಯಾರ್ಥಿಯಾಗಿದ್ದಾಗಲೇ ಶ್ರೀನಿವಾಸ ರಾಘವಾಚಾರ್ ಹಾಗೂ ಡಿ. ಸುಬ್ಬರಾಮಯ್ಯನವರಲ್ಲಿ ಸಂಗೀತಾಭ್ಯಾಸ ಮಾಡಿದ್ದರು. ವೃತ್ತಿ ಪ್ರವೃತ್ತಿಗಳನ್ನು ಹದವಾಗಿ ಬೆರೆಸಿ ಉತ್ತಮ ಸಂಗೀತ ವಿಮರ್ಶಕನಾದದ್ದು ಅನುಭವದಿಂದ ಹಾಗೂ ನಿಷ್ಪಕ್ಷಪಾತ ನಿಲುವಿನಿಂದ.

ವಿಶ್ವಕರ್ನಾಟಕ ಹಾಗೂ ಇತರ ದೈನಿಕ ಪತ್ರಿಕೆಗಳಲ್ಲಿ ನೃತ್ಯ ಸಂಗೀತಾದಿ ಸಾಂಸ್ಕೃತಿಕ ವಿಷಯಗಳನ್ನು ಕುರಿತು ಲೇಖನ ಬರೆಯತೊಡಗಿದರು. ಇವರ ಆಸಕ್ತಿ ಚಲನಚಿತ್ರ ಕ್ಷೇತ್ರವನ್ನು ವ್ಯಾಪಿಸಿತು. ಆ ಕ್ಷೇತ್ರದ ಸುದ್ದಿ ಬರಹಗಾರರಾಗಿ ಸಾಕಷ್ಟು ಅನುಭವ ಪಡೆದು ಸ್ವತಃ ಸಿನಿಮಾ ಪಾಕ್ಷಿಕ ಹಾಗೂ ಜನಪ್ರಿಯ ಎಂಬ ವಾರಪತ್ರಿಕೆಯನ್ನು ಸ್ಥಾಪಿಸಿ ಸಂಪಾದಕ-ಪ್ರಕಾಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ‘ಗೋಕುಲ’ ವಾರಪತ್ರಿಕೆಯಲ್ಲೂ ಉಪ ಸಂಪಾದಕರಾಗಿ ಸೇವೆ ಸಲ್ಲಿಸಿದ್ದು ೧೯೬೬ ರಲ್ಲಿ ಅಮೇರಿಕ ವಾರ್ತಾ ಸಂಸ್ಥೆಯ (USIS) ಮದ್ರಾಸು ಶಾಖೆಯಲ್ಲಿ ಕನ್ನಡ ವಿಭಾಗದ ಸಂಪಾದಕರಾಗಿಯೂ, ಪ್ರಜಾವಾಣಿ ಪತ್ರಿಕೆಯ ಮದ್ರಾಸು ಪ್ರತಿನಿಧಿಯಾಗಿಯೂ ವಿಶೇಷವಾಗಿ ಕೆಲಸ ಮಾಡಿದ್ದಾರೆ.

ಚಲನಚಿತ್ರ ರಂಗದಲ್ಲಿನ ಅನುಭವ ಶ್ರೀನಿವಾಸಮೂರ್ತಿ ಮದ್ರಾಸಿನ ‘ವಿಜಯಚಿತ್ರ’, ‘ಚಂದಮಾಮ’ ಮತ್ತು ‘ವನಿತ’ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಲು ಅನುವು ಮಾಡಿತು. ಈ ಅವಧಿಯಲ್ಲಿ ತೆಲುಗು, ತಮಿಳು ಭಾಷೆಗಳ ಹಲವಾರು ಲೇಖನಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದು ಕಲಾ ವಿಮರ್ಶಕರಾಗಿಯೂ ದುಡಿದಿರುವ ಶ್ರೀಯುತರ ಸೇವೆ ಶ್ಲಾಘನೀಯ.

ಬೆಂಗಳೂರಿಗೆ ಬಂದು ನೆಲೆಸಿದ ನಂತರ ಕನ್ನಡಪ್ರಭ ಪತ್ರಿಕೆಯಲ್ಲಿ ಸಂಗೀತ ವಿಮರ್ಶಕರಾಗಿ ಕಾರ್ಯನಿರತರಾಗಿದ್ದು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ನಡೆಯುವ ಕರ್ನಾಟಕ ಕಲಾವಿದರ ಕಾರ್ಯಕ್ರಮಗಳ ವಿಮರ್ಶೆ ನೀಡಿ ಅಪಾರವಾದ ಸೇವೆ ಸಲ್ಲಿಸಿರುತ್ತಾರೆ. ಸಮರ್ಥ ಕಲಾ ವಿಮರ್ಶಕರೆಂಬ ಹೆಗ್ಗಳಿಕೆ ಹೊಂದಿರುವ ಇವರಿಗೆ ಮದ್ರಾಸಿನಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಚಲನಚಿತ್ರ ಪತ್ರಕರ್ತರ ಸಂಘದಲ್ಲಿ ಮದ್ರಾಸು ಕನ್ನಡ ಬಳಗದಲ್ಲಿ ಸನ್ಮಾನ ದೊರೆತಿದೆ. ‘ಆರ್ಯಭಟ’, ‘ಆರೆನ್ನಾರ್’, ‘ಕರ್ನಾಟಸಕ ಕಲಾಶ್ರೀ’ ಮುಂತಾದ ಪ್ರಶಸ್ತಿಗಳಲನ್ನು ಪಡೆದಿರುವ ಶ್ರೀಯುತರು ಸರಳ ಸಜ್ಜನಿಕೆಯ ಸಾಕಾರ. ಎಪ್ಪತ್ತೈದು ವಸಂತಗಳನ್ನು ಕಂಡಿರುವ ಶ್ರೀನಿವಾಸಮೂರ್ತಿಯವರು ಈಗಲೂ ಸಂಗೀತ-ನೃತ್ಯ ಕಾರ್ಯಕ್ರಮಗಳು ನಡೆಯುವಲ್ಲಿ ಆಗಮಿಸಿ ತಮ್ಮ ಅನುಭವಪೂರ್ಣ ವಿಮರ್ಶೆ ನೀಡುವುದರ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದು ನಿಜಕ್ಕೂ ಸ್ತುತ್ಯರ್ಹವಾದುದು.