ಕರ್ನಾಟಕ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯನ್ನು ಘನತೆಯೊಡನೆ ಮೈಸೂರು ವಿಶ್ವವಿದ್ಯಾಲಯದಿಂದ ಗಳಿಸಿರುವ ಪಿ. ರಮಾ ಆ ಕಲೆಯ ವಾತಾವರಣದಲ್ಲಿ ಬೆಳೆದ ಕಲಾವಿದೆ. ಬಾಲ್ಯದಿಂದಲೇ ಸಂಗೀತ ಈಕೆಗೆ ಒಲಿದು ಬಂದು ಚಿಕ್ಕಂದಿನಲ್ಲಿಯೇ ಹಲವು ಪ್ರಥಮ ಬಹಮಾನಗಳನ್ನು ಹೊಗಳಿಕೆಯನ್ನು ಗಳಿಸಿದರು. ಈಕೆಗೆ ವಿಧಿವತ್ತಾಗಿ ಸಂಗೀತದ ದೀಕ್ಷೆಯನ್ನು ಕೊಟ್ಟವರು ಇವರ ಸೋದರತ್ತೆ ಖ್ಯಾತ ವೀಣಾ ವಿದುಷಿ ಎಂ.ಕೆ. ಸರಸ್ವತಿ. ಮುಂದೆ ಹೆಸರಾಂತ ಗಾಯಕ ಬಿ.ಆರ್. ಶ್ರೀನಿವಾಸನ್‌ರಿಂದ ಮಾರ್ಗದರ್ಶನ ಪಡೆದು, ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ, ಆ ಕಲೆಯಲ್ಲಿ ಪಾಂಡಿತ್ಯದ ತೀಕ್ಷ್ಣತೆಯನ್ನುಹಿರಿಯ ಗಾನಪಟುಗಳಾದ ಆರ್.ಕೆ. ಶ್ರೀಕಂಠನ್ ಹಾಗೂ ನಾಗಮಣಿ ಶ್ರೀನಾಥ್‌ ರವರುಗಳಿಂದ ಗಳಿಸಿಕೊಂಡರು. ಕೆಲಕಾಲ ಬೆಂಗಳೂರಿನ ಆಕಾಶವಾಣಿ ನಿಲಯ ಕಲಾವಿದರಾಗಿ ಪ್ರತಿಷ್ಠಿತ ಮಟ್ಟವನ್ನು ಏರಿರುವ ಇವರು ಖ್ಯಾತ ಗಾಯಕ ಟಿ.ಎನ್. ಶೇಷಗೋಪಾಲನ್‌ರಲ್ಲಿ ತಮ್ಮ ವ್ಯಾಸಂಗವನ್ನು ಮುಂದುವರಿಸಿದರು.

ಸುಶ್ರಾವ್ಯವಾದ ಕಂಠಶ್ರೀಯುಳ್ಳ ರಮಾರ ಕಾರ್ಯಕ್ಷೇತ್ರ ಬಹುಮುಖವಾಗಿ ಹಬ್ಬಿದೆ. ಆಕಾಶವಾಣಿಯಲ್ಲದೇ ದೂರದರ್ಶನ ಮತ್ತು ಸಂಗೀತ ಸಭೆಗಳ ಮೂಲಕವೂ ಇವರ ಸಂಗೀತ ಸುಧೆ ಹರಿದು ಬರುತ್ತಿವೆ. ತಮ್ಮ ಸತತ ಸಾಧನೆ ಹಾಗೂ ಕಲೆಯಲ್ಲಿ ಬೆಳೆಸಿಕೊಂಡಿರುವ ಶ್ರದ್ಧೆಯಿಂದ ತಮ್ಮ ಶಾರೀರಕ್ಕೆ ಅನುಗುಣವಾದ ಶೈಲಿಯನ್ನು ರೂಪಿಸಿಕೊಂಡು ತಮ್ಮ ವೈಶಿಷ್ಟ್ಯಪೂರ್ಣ ಸಂಗೀತ ಯಾತ್ರೆಯಲ್ಲಿ ರಮಾ ಅನೇಕ ಸಮಾರಂಭ, ಉತ್ಸವಗಳಲ್ಲಿ ತಮ್ಮ ಗಾನಾಮೃತವನ್ನು ಹರಿಸಿ ಮೆಚ್ಚುಗೆ ಗಳಿಸಿದ್ದಾರೆ. ಅವುಗಳಲ್ಲಿ ಹೆಸರಿಸಬಹುದಾದುವೆಂದರೆ, ದಸರಾ ಸಂಗೀತೋತ್ಸವ, ದಕ್ಷಿಣ ವಲಯ ಸಂಗೀತ ಕೇಂದ್ರ ಮತ್ತು ಆಕಾಶವಾಣಿ ಕಚೇರಿಗಳು. ಮುಖ್ಯವಾಗಿ ಹೆಸರಾಂತ, ವಿಶ್ವವಿಖ್ಯಾತ ಭರತನಾಟ್ಯ ಕಲಾವಿದರಿಗೆ ಹಿನ್ನೆಲೆಯ ಗಾಯಕರಾಗಿ ಇವರು ಗಳಿಸಿರುವ ಕೀರ್ತಿ ಅಸೂಯೆ ಹುಟ್ಟಿಸುವಂತಹದು. ಶ್ರೀಮತಿಯವರಿಗೆ ’ಗಾನಕೋಗಿಲೆ’ಯಲ್ಲದೇ ಇನ್ನೂ ಅನೇಕ ಬಿರುದುಗಳು ಸಂದಿವೆ.

ಇಂತಹ ಕೀರ್ತಿ ಶಾಲೀ ಕಲಾವಿದೆಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೬-೯೭ನೇ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.