ರೈತ ಕುಟುಂಬದಲ್ಲಿ ೧೯೨೩ ರಲ್ಲಿ ಜನಿಸಿದ ರಾಮಯ್ಯನವರ ಸಂಗೀತ ಶಿಕ್ಷಣ ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ನಡೆಯಿತು. ನಂತರ ತುಮಕೂರಿನಲ್ಲಿ ಸಂಗೀತ ಶಿಕ್ಷಣ ಶಾಲೆ ಆರಂಭಿಸಿ ಅನೇಕ ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದಾರೆ. ಇವರ ಮಾರ್ಗದರ್ಶನ ಪಡೆದ ಅನೇಕ ಪ್ರತಿಭಾವಂತ ಯುವಕ ಯುವತಿಯರು ಸಾರ್ವಜನಿಕ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ ಹಾಗೂ ಸಂಗೀತ ಪರೀಕ್ಷೆಗಳ ನಾನಾ ದರ್ಜೆಗಳಲ್ಲಿ ಉತ್ತಮಾಂಕಗಳನ್ನು ಪಡೆದು ಉತ್ತೀರ್ಣರಾಗುತ್ತಿದ್ದಾರೆ.

ಕೈವಾರದ ಜನತೆಯಿಂದ ‘ಗಾನ ಸುಧಾಕರ’, ದೇವೇಂದ್ರಪ್ಪನವರ ಹನುಮಜ್ಜಯಂತಿ ಉತ್ಸವದಲ್ಲಿ ‘ಗಾಯಕ ಚತುರ’, ತುಮಕೂರಿನ ರಾಘವೇಂದ್ರ ಸಂಗೀತ ಸಭೆಯಿಂದ ‘ಗಾನ ಕಲಾ ಸಿಂಧು’, ಬೆಂಗಳೂರಿನ ಅನನ್ಯ ಸಂಸ್ಥೆಯಿಂದ ವರ್ಷದ ಕಲಾವಿದ ಇತ್ಯಾದಿ ಹಲವು ಪುರಸ್ಕಾರಗಳನ್ನು ಪಡೆದಿರುವ ಇವರನ್ನು ರಾಜ್ಯ ಸಂಗೀತ ನೃತ್ಯ ಅಕಾಡೆಮಿ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ. ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿಯೂ ಒಂದು ಅವಧಿ ಸೇವೆ ಸಲ್ಲಿಸಿರುವ ಶ್ರೀಯುತರು ಇಂದಿಗೂ ಸಕ್ರಿಯವಾಗಿ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.