ಲಂಕೇಶರ ಜನನ ೧೯೩೫ ರಲ್ಲಿ ಶಿವಮೊಗ್ಗ ಬಳಿಯ ಕೊನಗವಳ್ಳಿ ಎಂಬ ಗ್ರಾಮದಲ್ಲಿ. ಶಿವಮೊಗ್ಗದ ಇಂಟರ್ ಮೀಡಿಯಟ್ ಕಾಲೇಜಿನಲ್ಲಿ ಇಂಟರ್‌ಮೀಡಿಯಟ್, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷ್‌ಆನರ್ಸ್, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಎಂ.ಎ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು. ೧೯೭೮ ರಲ್ಲಿ ವೃತ್ತಿಗೆ ರಾಜಿನಾಮೆ ಇತ್ತರು. ಜನವರಿ ೨೦೦೦ ದಲ್ಲಿ ಅನಾರೋಗ್ಯದಿಂದ ತೀರಿಕೊಂಡ ಲಂಕೇಶರು ಕನ್ನಡ ಸಾಹಿತಿಗಳಲ್ಲಿ ಪ್ರಮುಖರು.

ಕವಿ, ಕಥೆಗಾರ, ಕಾದಂಬರಿಕಾರ, ವಿಮರ್ಶಕ, ಅನುವಾದಕ, ಚಲನಚಿತ್ರನಿರ್ದೇಶಕ ಮತ್ತು ಪತ್ರಿಕಾಸಂಪಾದಕರು. ಪ್ರತಿ ಪ್ರಕಾರ ಕ್ಷೇತ್ರದಲ್ಲೂ ತಮ್ಮ ವಿಶಿಷ್ಠತೆಯನ್ನು ಮೆರೆದವರು. ಹೊಸ ಜೀವಕಳೆ ತುಂಬಿದವರು. ೧೯೫೮ ರಲ್ಲಿ ಬರೆದ ವಾಮನ ಇವರ ಮೊದಲ ಕಥೆ. ಲಂಕೇಶರು ಸುಮಾರು ೫೦ ಕ್ಕೂ ಹೆಚ್ಚು ಕಥೆಯನ್ನು ಬರೆದಿದ್ದಾರೆ.

ಖಾಸಗಿ ಅವಮಾನ ಮತ್ತು ಸಂಕೋಚಗಳನ್ನು ಮೂಲವಸ್ತುವಾಗಿ ಹೊಂದಿದ ಇವರ ಕಥೆಗಳು ಮನುಷ್ಯನ ಆಳದ ಸೂಕ್ಷ್ಮಸಂವೇದನೆಗಳನ್ನು ಅನನ್ಯ ರೀತಿಯಲ್ಲಿ ಪ್ರತಿಧ್ವನಿಸುತ್ತವೆ. ಕೆರೆಯ ನೀರನು ಕೆರೆಗೆ ಚೆಲ್ಲಿ(೧೯೬೩), ನಾನಲ್ಲ(೧೯೭೦), ಉಮಾಪತಿಯ ಸ್ಕಾಲರ್‌ಶಿಪ್ ಯಾತ್ರೆ(೧೯೭೩), ಇವು ನವ್ಯ ಕಾಲದ ಅತ್ಯುತ್ತಮ ಕಥಾಸಂಗ್ರಹಗಳಾಗಿವೆ. ಕಲ್ಲುಕರಗುವ ಸಮಯ (೧೯೯೦), ಉಲ್ಲಂಘನೆ ಮತ್ತು ಇತರ ಕಥೆಗಳು(೧೯೯೬), ನವ್ಯೋತ್ತರದವು.

ನವೋದಯ ಸಾಹಿತ್ಯವು ಆದರ್ಶಗಳ ಅಮಲಿನಲ್ಲಿ ತೇಲತೊಡಗಿದಾಗ, ಹೊಸ ತಲೆಮಾರಿನ ಸಿಟ್ಟು ಸೆಡಪು ಅಸಹಾಯಕಥೆಗಳನ್ನು ಪ್ರಕಟಿಸಿದ್ದು ನವ್ಯಸಾಹಿತ್ಯ ಅದರಲ್ಲೂ ಕಾವ್ಯಮಾರ್ಗದ ಮೂಲಕ ಲಂಕೇಶರು ಗದ್ಯದ ವಿಚಿತ್ರ ಸೊಗಡನ್ನು ಪದ್ಯಕ್ಕೆ ತುಂಬಿ ಕಾವ್ಯ ಬರೆಯತೊಡಗಿದರು. ಬಿಚ್ಚು, ಮತ್ತು ತಲೆಮಾರು, ಆ ಕಾಲದ ಇವರ ಕವನ ಸಂಕಲನಗಳು. ಚಿತ್ರಸಮೂಹ ೧೯೯೯ ರಲ್ಲಿ ಪ್ರಕಟವಾದ ಸಮಗ್ರಕಾವ್ಯ. ಅವ್ವ-೧, ಅವ್ವ-೨, ದೇಶಭಕ್ತ ಸೂಳೆಮಗನ ಗದ್ಯಗೀತೆ, ಯಂಥ ಶ್ರೇಷ್ಟ ಕವನಗಳನ್ನು ಬರೆದ ಲಂಕೇಶರದು ಬಂಡಾಯ ಮನೋಧರ್ಮ. ಜೀವನದ ಕೊನೆಗಾಲದಲ್ಲಿ ನೀಲು, ಪದ್ಯಗಳನ್ನು ಬರೆದರು. ಇವರು ಸಂಪಾದಿಸಿದ ಅಕ್ಷರಹೊಸಕಾವ್ಯ(೧೯೭೦), ಆಧುನಿಕ ಕಾವ್ಯದ ಜೀವಂತಿಕೆ ಮತ್ತು ಚೆಂದ ಮಂಡಿಸಿದ ನವ್ಯ ಕಾವ್ಯದ ಪ್ರಾತಿನಿದಿಕ ಸಂಕಲನ.ಪ್ರಸನ್ನನ ಗೃಹಸ್ಥಾಶ್ರಮ(೧೯೬೩), ಕನ್ನಡ ನಾಟಕದ ಆಳ-ಅಗಲಗಳನ್ನು ವಿಸ್ತರಿಸಿದ ಇವರ ಮೊದಲ ನಾಟಕ. ಆನಂತರ ನನ್ನ ತಂಗಿಗೊಂದು ಗಂಡುಕೊಡಿ, ಗಿಳಿಯು ಪಂಜರದೊಳಿಲ್ಲ, ಸಿದ್ಧತೆ, ಪೋಲೀಸರಿದ್ದಾರೆ ಎಚ್ಚರಿಕೆ, ಕ್ರಾಂತಿಬಂತು ಕ್ರಾಂತಿ, ನಾಟಕಗಳನ್ನು ಬರೆದರು. ಈ ಅಸಂಗತ ಏಕಾಂಕ ನಾಟಕಗಳ ಮುಖ್ಯವಸ್ತು; ನಮ್ಮ ಸಮಾಜದಲ್ಲಿ ಕಂಡುಬರುವ ಬೂಟಾಟಿಕೆ, ಜನರ ಸಿನಿಕತೆ, ವ್ಯವಸ್ಥೆಯ ನಿಷ್ಪಲತೆಯ ಬಗ್ಗೆ ಜನರ ಹತಾಶೆ, ಆಕ್ರೋಶ, ಸಾಮಾಜಿಕ ಅಸಮಾನತೆಯ ವಿರುದ್ಧ ಪ್ರತಿಭಟನೆ, ಇತ್ಯಾದಿ. ಸಂಕ್ರಾಂತಿ(೧೯೭೧) ಅನಂತಮೂರ್ತಿಯವರು ಹೇಳುವಂತೆ ನೆಹರೂ ಯುಗದ ಉತ್ತಮ ನಾಟಕ ಕೃತಿ, ಬಸವಣ್ಣನವರ ಕಾಲದ ವ್ಯವಸ್ಥೆ ಮತ್ತು ಕ್ರಾಂತಿಯ ನಡುವೆ ಉಂಟಾಗುವ ಸಂಘರ್ಷ, ಸವರ್ಣೀಯರ ಹಾಗೂ ದಲಿತರ ನಡುವೆ ಘಟಿಸುವ ಸಂಘರ್ಷ ಇದರ ವಸ್ತು, ಗುಣಮುಖ(೧೯೯೩), ನಾಟಕ, ಹೆಸರೇ ಸೂಚಿಸುವಂತೆ, ಕಾಯಿಲೆ ಮತ್ತು ಕಾಯಿಲೆಯ ಚಿಕಿತ್ಸೆಯ ಅವಶ್ಯಕತೆಯನ್ನು ಹೇಳುವ ರೂಪಕ. ವ್ಯಕ್ತಿ ಗುಣವಾಗಬಲ್ಲ ಬದಲಾಗಬಲ್ಲ ಎಂಬ ಗಾಂದಿಯ ಆದರ್ಶ-ಆಶಯಗಳನ್ನುಳ್ಳದ್ದಾಗಿದೆ.

ಲಂಕೇಶರು ಬರೆದಿರುವ ಕಾದಂಬರಿಗಳು ಮೂರು; ಬಿರುಕು(೧೯೬೭), ಮುಸ್ಸಂಜೆಯ ಕಥಾಪ್ರಸಂಗ(೧೯೭೮), ಅಕ್ಕ(೧೯೯೧), ಬಿರುಕು ಆಶಾಡಭೂತಿತನ ತುಂಬಿದ ಜಗತ್ತಿನಲ್ಲಿ ಯುವಕನೊಬ್ಬನ ದಿಗ್ಭ್ರಮೆಯನ್ನು ಹೇಳುವುದಾಗಿದೆ. ನವ್ಯ ಕಾದಂಬರಿಗಳ ಶ್ರೇಷ್ಠ ಮಾದರಿ ಕೃತಿಯಾಗಿದೆ. ಎಲ್ಲ ನವ್ಯನಾಯಕರಂತೆ ಈ ಕಾದಂಬರಿಯ ನಾಯಕನೂ ದುರ್ಬಲ ಮತ್ತು ಸಂವೇದನಾಶೀಲ. ಮುಸ್ಸಂಜೆಯ ಕಥಾಪ್ರಸಂಗ ನವ್ಯಕ್ಕೆ ವಿದಾಯ ಹೇಳಿದ ಕಾದಂಬರಿ. ಅಕ್ಕ ಬಂಡಾಯ, ದಲಿತ ಚಳುವಳಿಗಳ ಮೌಲ್ಯಗಳನ್ನು ಅಂತರಂಗೀಕರಿಸಿಕೊಂಡ ಕಾದಂಬರಿ, ಕೊಳಗೇರಿಯಲ್ಲಿ ವಾಸಿಸುವ ಕ್ಯಾತ ಮತ್ತು ಆತನ ಅಕ್ಕ ದೇವೀರಿಯ ಬದುಕಿನ ಸುತ್ತ ನಿರೂಪಗೊಂಡಿದೆ. ಹೊಸ ಸಾಮಾಜಿಕ, ಆರ್ಥಿಕ, ರಾಜಕೀಯ ಸತ್ಯಗಳನ್ನು ಬರೆಯುವ ಮಹತ್ವಾಕಾಂಕ್ಷೆಯನ್ನು ಪ್ರಕಟಪಡಿಸುವುದಾಗಿದೆ.

ಲಂಕೇಶರು ಸಮರ್ಥ ಅನುವಾದಕರು. ದೊರೆ ಈಡಿಪಸ್ ಮತ್ತು ಅಂತಿಗೊನೆ ಮತ್ತು ಪ್ರೆಂಚ್‌ಕವಿ ಬೋದಿಲೇರ್‌ನ ಕವನಗಳನ್ನು (ಪಾಪದ ಹೂಗಳು)ಸೊಗಸಾಗಿ ಅನುವಾದಿಸಿದ್ದಾರೆ. ಕಂಡದ್ದು ಕಂಡಹಾಗೆ, ಪ್ರಸ್ತುತ, ಟೀಕೆ-ಟಿಪ್ಪಣಿ, ಸಂ-೧ ಮತ್ತು ಸಂ-೨, ಇವರ ಗದ್ಯಬರಹ ಸಂಕಲನಗಳು. ಹುಳಿಮಾವಿನ ಮರ(೧೯೯೭), ಇವರ ಆತ್ಮಕಥನ.

ಸಮಾಜವಾದಿಸ್ನೇಹಿತರೊಂದಿಗೆ ಕರ್ನಾಟಕ ಪ್ರಗತಿರಂಗ, ವೇದಿಕೆ(೧೯೮೭) ಕಟ್ಟಿದವರಲ್ಲಿ ಲಂಕೇಶರು ಮಹತ್ವದ ಪಾತ್ರವನ್ನು ವಹಿಸಿದ್ದರು. ೧೯೮೦ ರಲ್ಲಿ ಇವರು ಹುಟ್ಟುಹಾಕಿದ ಲಂಕೇಶ್ ಪತ್ರಿಕೆ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ನುಡಿಗಟ್ಟು-ಶಕ್ತಿ ಕೊಟ್ಟಿತು. ಸರ್ಕಾರಕ್ಕೆ ನಿರಂತರ ವಿರೋಧಪಕ್ಷವಾಗಿ, ರಾಜಕೀಯ ವಾತಾವರಣವನ್ನು ಬದಲಿಸುವ ಪಕ್ಷವಾಗಿ, ಜನತೆಯ ನೋವಿಗೆ ಮತ್ತು ಸಿಟ್ಟಿಗೆ ಅಬಿವ್ಯಕ್ತಿಯ ಮಾಧ್ಯಮವಾಗಿ ಕೆಲಸಮಾಡಿತು. ಅನೇಕ ಯುವ ಬರಹಗಾರರನ್ನು ಸೃಷ್ಟಿಸಿತು. ರಾಜಕಾರಣ, ಸಾಹಿತ್ಯ, ಧರ್ಮ-ಹೀಗೆ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಆರೋಗ್ಯಕರ ಚಿಂತನೆಗೆ ವೇದಿಕೆಯಾಯಿತು.

ಸಾಹಿತ್ಯದಲ್ಲಿ ಖ್ಯಾತರಾದಂತೆ ಲಂಕೇಶರು ಪತ್ರಿಕೋದ್ಯಮದಲ್ಲಿಯೂ ಯಶಸ್ವಿಯಾದರೆನ್ನುವುದು ಮಹತ್ವದ ಸಂಗತಿ. ಅಷ್ಟೇ ಮಹತ್ವದ್ದು ಅವರು ಉತ್ತಮ ಚಲನಚಿತ್ರ ನಿರ್ದೇಶಕರಾಗಿದ್ದರೆನ್ನುವುದು ಇವರ ಮೊದಲ ಚಿತ್ರ ಪಲ್ಲವಿ, ನಿರ್ದೇಶನಕ್ಕಾಗಿ ರಾಷ್ಟ್ರಪ್ರಶಸ್ತಿ(೧೯೭೭), ಬಂದಿತು. ಲಂಕೇಶ್ ನಿರ್ದೇಶಿಸಿದ ಇತರ ಚಿತ್ರಗಳು ಅನುರೂಪ, ಎಲ್ಲಿಂದಲೋಬಂದವರು, ಖಂಡವಿದೆಕೋ ಮಾಂಸವಿದೆಕೋ, ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೆಬ್ಬಿಸಿದವು.

ಹೀಗೆ ಬಹುಮುಖ ಪ್ರತಿಭೆಯುಳ್ಳ ಲಂಕೇಶ್ ಕೃತಿಯಿಯಿಂದ ಕೃತಿಗೆ ಬೆಳೆಯುತ್ತ ಹೋದ ಸಾಹಿತಿ. ಅನ್ನಿಸಿದ್ದನ್ನು ನಿಷ್ಟುರವಾಗಿ ಹೇಳಿಬಿಡುವ, ಎಂದಿಗೂ ಜಡವಾಗದ ವ್ಯಕ್ತಿ. ಈ ಲಕ್ಷಣಗಳನ್ನು ಹತ್ತು ತಲೆಗಳ ಲಂಕೇಶ್ ಎಂತಲೇ ಕರೆಯಲಾಗುತ್ತದೆ. ಜೀವನದಲ್ಲಿ ಎಷ್ಟು ಸ್ನೇಹಿತರನ್ನು ಹೊಂದಿದ್ದರೋ ಅಷ್ಟೇ ಶತ್ರುಗಳು ಇವರಿಗಿದ್ದರು. ಸಾಹಿತ್ಯವನ್ನು, ರಾಜಕೀಯವನ್ನು ಸುಲಭವಾಗಿ ಗ್ರಹಿಸುವ ಮತ್ತು ಯಾವುದನ್ನೂ ತೆಳುಗೊಳಿಸದೆ ಅಷ್ಟೇ ಸಮರ್ಥವಾಗಿ ಬರೆಯುವ ಅದ್ಭುತ ಕಲೆಗಾರಿಕೆ ಇವರಿಗಿತ್ತು. ಇವರಿಗೆ ೧೯೮೬ ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ೧೯೯೩ ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ