ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರು ಗ್ರಾಮದಲ್ಲಿ ಜನಿಸಿದ ಶ್ರೀ ಸುಬ್ರಹ್ಮಣ್ಯ ಅವರು ಸ್ವತಃ ಯಕ್ಷಗಾನ ಕಲಾವಿದರು ಮಾತ್ರವಲ್ಲದೇ ಕೂಚುಪುಡಿ ಹಾಗೂ ಭರತನಾಟ್ಯ ಪ್ರವೀಣರು. ಶ್ರಿ ಜೆ.ವಿ.ರಮಣಮೂರ್ತಿ ಅವರಲ್ಲಿ ಕೂಚುಪುಡಿಯನ್ನೂ ಶ್ರೀ ವಿ.ಸಿ. ಲೋಕಯ್ಯ ಮತ್ತು ಭರತ ಕಲಾಮಣಿ ಶ್ರೀ ಸಿ. ರಾಧಾಕೃಷ್ಣ ಅವರುಗಳಲ್ಲಿ ಭರತನಾಟ್ಯವನ್ನೂ ಅಭ್ಯಸಿಸಿದ ಶ್ರೀಯುತರು, ಶ್ರೀ ವಿ.ಎಸ್. ಕೌಶಿಕರ ಸನಾತನ ಕಲಾಕ್ಷೇತ್ರದಲ್ಲಿ ಸತತ ಅಭ್ಯಾಸ ಮಾಡಿ ಹಲವಾರು ಕಾರ್ಯಕ್ರಮಗಳನ್ನು ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

೨೦ ವರ್ಷಗಳ ಹಿಂದೆ ವಿಶ್ವಕಲಾ ಸಾಂಸ್ಕೃತಿಕ ಸಂಸ್ಥೆ ಸ್ಥಾಪಿಸಿದ ಶ್ರೀ ಸುಬ್ರಹ್ಮಣ್ಯ ಗೀತಗೋವಿಂದ, ಮೋಹಿನಿ ಭಸ್ಮಾಸುರ, ಮಹಾತ್ಮಕಬೀರ, ಗಂಗೆಗೌರಿ ಮುಂತಾದ ನೃತ್ಯ ನಾಟಕಗಳನ್ನೂ ನಿದೇಶಿಸಿದ್ದಾರೆ. ಕರ್ನಾಟಕದ ಸಂಗಿತ-ನೃತ್ಯ-ನಾಟಕ ಹಾಗೂ ಜಾನಪದ ಕ್ಷೇತ್ರದ ಎಲ್ಲ ಹೆಸರಾಂತ ಕಲಾವಿದರನ್ನು ಪರಿಚಯಿಸುವ ಯೋಜನೆ ಹೊಂದಿರುವ “ಭಾರತಕಲಾದರ್ಶನ’ ಎಂಬ ಬೃಹತ್ ಯೋಜನೆಯ ಮುಖಂಡತ್ವವನ್ನು ಶ್ರೀ ಸುಬ್ರಹ್ಮಣ್ಯ ವಹಿಸಿಕೊಂಡಿದ್ದಾರೆ. ಖ್ಯಾತ ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ೮ ಚಿತ್ರಗಳಿಗೆ ನೃತ್ಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಹಿರಿಮೆ ಶ್ರೀಯುತರದು.

ಪ್ರಮುಖ ಆಂಗ್ಲ ಪತ್ರಿಕೆ ’ದಿ ಟೈಮ್ಸ್‌ಆಪ್ ಇಂಡಿಯಾ’ದಲ್ಲಿ ಕಲಾ ವಿಮರ್ಶಕರಾಗಿ ಹಾಗೂ ’ಸಂಯುಕ್ತ ಕರ್ನಾಟಕ’ ಕನ್ನಡ ದಿನಪತ್ರಿಕೆಯಲ್ಲಿ ನೃತ್ಯ ವಿಮರ್ಶಕರಾಗಿ ಸೇವೆ ಸಲ್ಲಿಸಿರುವ ಶ್ರೀಯುತರು ಭಾರತ-ರಷ್ಯಾ ಉತ್ಸವದಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿ ರಾಷ್ಟ್ರಕ್ಕೆ ಗೌರವ ತಂದಿರುವ ಶ್ರೀಯುತರಿಗೆ ೧೯೯೮-೯೯ನೇ ಸಾಲಿನ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ.