ಕಾಲೇಜ್ ವಿದ್ಯಾರ್ಥಿ, ವಯಸ್ಸು ಹತ್ತೊಂಭತ್ತು ವರ್ಷ, ಸರಿವಯಸ್ಕರಂತೆ ಪರಿಪೂರ್ಣವಾಗಿ ಬೆಳೆದಿಲ್ಲ. ಗೆಳೆಯರ ಹೇಳಿಕೆಯಂತೆ, ಇನ್ನೂ ಹತ್ತನೇ ತರಗತಿ ವಿದ್ಯಾರ್ಥಿಯಂತೆ ಕಾಣುತ್ತಿದ್ದೇನೆ. ನನಗೊಬ್ಬ ತಮ್ಮ ನಿದ್ದಾನೆ, ಅವನು ನನಗಿಂತ ಪರಿಪೂರ್ಣವಾಗಿ ಬೆಳೆದಿದ್ದಾನೆ. ಅವನು ನನ್ನ ಕಾಲೇಜಿಗೆ ಪಿ.ಯು.ಸಿ. ಓದಲು ಬರುತ್ತಿದ್ದಾನೆ. ಅವನು ಬಂದ ನಂತರ ಕಾಲೇಜಿನಲ್ಲಿ ನನ್ನ ಬಗ್ಗೆ ಲೇವಡಿ ಹೆಚ್ಚಿದೆ. ಮನೆಯಲ್ಲಿ ನನ್ನನ್ನು ಕೀಳಾಗಿ ಕಾಣಲಾಗುತ್ತಿದೆ. ಅಣ್ಣ ತಮ್ಮಂದಿರು ತಮಾಷೆ ಮಾಡಿದರೂ ಸಹಿಸುವಂತೆ ಇರಬಹುದು. ಆದರೆ ತಾಯಿಯ ರೀತಿ ನೀತಿ ವಿಪರೀತ ಸಿಟ್ಟು ಬರುತ್ತದೆ. ನಾನು ಹುಚ್ಚನಾಗುತ್ತಿದ್ದೇನೆ ಅನಿಸುತ್ತದೆ. ಇದಕ್ಕೆಲ್ಲಾ ಕಾರಣ ಸಮವಯಸ್ಕರಂತೆ ಬೆಳವಣಿಗೆ ಹೊಂದದೆ ಇರುವುದೇ? ಇದಕ್ಕೆ ಹಾರ್ಮೋನುಗಳ ಕೊರತೆ ಎಂದು ಅನಿಸುತ್ತದೆ ಇದಕ್ಕೇನು ಪರಿಹಾರ…?

ಈ ಸಮಸ್ಯೆಗೆ ದೈಹಿಕ, ಮಾನಸಿಕ ಆಯಾಮಗಳಿವೆ. ನಮ್ಮ ದೇಹದ ರೂಪ-ರೇಷೆ, ದೈಹಿಕ ಚೌಕಟ್ಟು, ಅನುವಂಶಿಕ ಮಾದರಿಯಿಂದ ನಿಗದಿಯಾಗುತ್ತದೆ. ನಮ್ಮೆಲ್ಲರ ಬೆಳವಣಿಗೆ, ಎತ್ತರ, ತೂಕ, ಆಹಾರ, ಅಂಗಾಂಗ ಪರಿಪೂರ್ಣತೆ, ಚರ್ಮದ ಬಣ್ಣ, ಮಾಂಸದ ಚೌಕಟ್ಟು, ನಮ್ಮಿಚ್ಛೆಗೆ ಅನುಸಾರವಾಗಿ ಆಗಿದ್ದಲ್ಲ. ಅದೊಂದು ನಮ್ಮ ಹತೋಟಿಯಲ್ಲಿರುವ ಪ್ರಕ್ರಿಯೆ. ವಯಸ್ಸಾಗುತ್ತಾ ಹೋದಂತೆ ಸಣ್ಣವರಂತೆ ಕಾಣಲು ಹೆಚ್ಚಿನ ಮಂದಿ ಪ್ರಯತ್ನಿಸುತ್ತಿರುವಾಗ ನಿಮ್ಮ ಈ ಭೀತಿ ಅನವಶ್ಯಕ, ಆದರೂ ಹಾರ್ಮೋನುಗಳ ಕೊರತೆಯಿಂದಲೂ ಈ ರೀತಿ ಆಗುವ ಸಾಧ್ಯತೆ ಇದೆ. ತಜ್ಞ ವೈದ್ಯರಿಂದ ಪರೀಕ್ಷಿಸಿಕೊಳ್ಳಿ. ಹಾರ್ಮೋನು ಸ್ರವಿಸುವಿಕೆಯ ಲಯ, ಗತಿ, ಪ್ರಮಾಣವನ್ನು ಪರೀಕ್ಷಿಸುವ ಸಾಧನ, ಮಾಪನಗಳು ಬೆಂಗಳೂರು ಮಣಿಪಾಲ ಅಂತಹ ಕೆಲವು ಕೇಂದ್ರಗಳಲ್ಲಿ ಮಾತ್ರ ಲಭ್ಯ. ಮಾನಸಿಕವಾಗಿ ಇದನ್ನು ನಾವು ಅರ್ಗನ್ ಇನ್‌ಫೀರಿಯಾರಿಟಿ ಅಥವಾ ಅಂಗಾಂಗ ಶಿಥಿಲತೆಯ ಅರಿವು ಎನ್ನುವುದುಂಟು. ಇತರರೊಂದಿಗೆ ಅನವಶ್ಯಕ ಅನಪೇಕ್ಷಿತ ಹೋಲಿಕೆ, ವ್ಯತ್ಯಾಸ ಸ್ವಾಸ್ಥತೆಯ ಬಗ್ಗೆ ಮೂಢನಂಬಿಕೆ, ಸಂಪೂರ್ಣವಾಗಿ ಬೆಳೆದ ದೇಹವೇ ಸ್ವಾಸ್ಥ್ಯದ ಸಂಕೇತ ಎಂದು ಭ್ರಮಿಸುವುದು ತಪ್ಪು. ನಿಮ್ಮ ನ್ಯೂನತೆಯನ್ನು ಇತರೇ ವರ್ತುಗಳಲ್ಲಿ ಹೆಚ್ಚಿನ ಯಶಸ್ಸನ್ನು ಪಡೆದು ಸರಿತೂಗಿಸಿಕೊಳ್ಳಿ. ಉದಾಹರಣೆಗೆ ವಿದ್ಯಾಲಯದಲ್ಲಿ, ಕ್ರೀಡೆಗಳಲ್ಲಿ, ಕಲೆ, ಸಾಹಿತ್ಯದಲ್ಲಿ ಕಾರ‍್ಯಪ್ರವೃತ್ತರಾಗಿ ಹೆಚ್ಚು ಯಶಸ್ವಿಯಾದಾಗ ಈ ದೇಹದ ಬೆಳವಣಿಗೆಯ ನ್ಯೂನತೆ ಮುಚ್ಚಿಹೋಗುವ ಸಾಧ್ಯತೆ ಇದೆ. ಇವನ್ನು ನಾವು ಓವರ‍್ ಕಾಂಪೆನ್ಸೇಟರಿ ಬಿಹೇವಿಯರ್ ಎನ್ನುತ್ತೇವೆ. ದಯವಿಟ್ಟು ಇದರ ಬಗೆಗಿನ ಭಿನ್ನತೆಯನ್ನು ತೊರೆದು ಕ್ರಿಯಾಶೀಲರಾಗಿ, ಆತಂಕ ತೊರೆಯಿರಿ, ಆತ್ಮವಿಶ್ವಾಸ ತನ್ನಷ್ಟಕ್ಕೆ ಹೆಚ್ಚುತ್ತದೆ.