ಪರಮಾನಂದಮನೀನ ದೇವಭವನ ಶ್ರೀಲೀಲೆಯಿಂದ ಧರಾ
ಮರುರುತ್ಸಾಹದೆ  ಮಾಡುತಿರ್ಪ ಮಖಸಂದೋಹಂಗಳಿಂದಂ ಮುನೀ
ಶ್ವರರಿಂದಂ ನುತಸತ್ಕವಿಪ್ರವರ ವಿದ್ವದ್‌ಬೃದದಿಂದಂ ಮನೋ
ಹರ ಸೌಂದರ‍್ಯವಿಭಾಸಿ ಸಯ್ಯಡಿ  ಕರಂ ರಯ್ಯಂ ಮಹೀಭಾಗದೊಳ್ ೪೧

ವ|| ಅಂತು ಸೊಗಯಿಸುವಗ್ರಹಾರದೊಳ್ ತರ್ಕ ವ್ಯಾಕರಣ ವಾತ್ಸ್ಯಾಯನಾದ್ಯಶೇಷ ವಿದ್ಯಾಪ್ರಕರಣನುಂ ಸಕಲಧರ್ಮಕ್ಕೆಲ್ಲಂ ಕಯ್ಯಾಲ್ ಮೂಡಿದಂತೆ  ದುರ್ಗಸಿಂಹ ಬ್ರಾಹ್ಮಣನುಂಟು. ಅತನ ಪತ್ನಿ ರೇವಕಬ್ಬೆ ಗೌರೀದೇವೀಯೋಪಾದಿಯೊಳ್ ತನ್ನ ಪತ್ನಿಭಕ್ತಿಯಿಂದಿರಲ್ ಅ ದಂಪತಿಗಳ್ಗೆ ತಮ್ಮ ಕುಲಕ್ಕೆ ಪ್ರದೀಪನುಮಾಗಿ ಗೌತಮಕುಲದೊಳ್ ಸಮುದ್ರದೊಳ್ ಚಂದ್ರಂ ಪುಟ್ಟುವಂತೆ ಪುಟ್ಟಿ ಆ ಬ್ರಹ್ಮೋದಯದೊಳ್ ಮನ್ವಾದಿಪುರಾಣ ಮುನಿಗಣ ಪ್ರಣೂತ ಶ್ರುತಿವಿಹಿತ ವಿಶುದ್ದ ಮಾರ್ಗನುಂ, ಪ್ರಣೂತಾತ್ಮೀಯ ಬಂಧುವರ್ಗನುಂ ನಿತ್ಯಹೋಮಮಾಧ್ಯಯನಾನೇಕ ಯಾಗಾವಭತಸ್ನಾನ ಪವಿತ್ರಗಾತ್ರನುಂ ಸುಜನೃಕಮಿತ್ರನುಂ, ಸಕಲವ್ಭೆದಾಧ್ಯಯನ ಮುಖರ ಪವಿತ್ರಾನನನುಂ, ಸಂತರ್ಪಿತಾತಿಥಿ ಪಿತೃದೇವತಾದ್ವಿಜನ್ಮಾನನುಂ, ಭಗವನ್ನಾರಾಯಣ ಚರಣಾಂಬುಜಸ್ಮರಣ ಪರಿಣತಾಂತಃಕರಣನುಂ, ನಿಜಗೋತ್ರಶತಪತ್ರಸಹಸ್ರಕಿರಣಂ ತರ್ಕವ್ಯಾಕರಣ ಕಾವ್ಯನಾಟಕ ಭರತ ವಾತ್ಸ್ಯಯನಾದ್ಯಶೇಷ ವಿದ್ಯಾಸಮುದ್ರತರಣಗುಣಕಪುಣ್ಯನುಂ, ಧಾರಾಮರಾಗ್ರಗಣ್ಯನುಮಾಗಿ

ವಿನಯೈಕ ಜನ್ಮಗೃಹಮಾ
ಳ್ತನದಾಸ್ಪದಮೊಳ್ಪಿನಾೞಮಾರ್ಪಿಋನ ಕಣಿಯೆಂ
ದನುಯದಿಂ ಕೂರ್ತು ಜಗ
ಜ್ಜನಜಾಲಂ ಪೊಗಳ್ ದುರ್ಗಮಯ್ಯಂ ನೆಗಛ್ದಿಂ ೪೨

ಅ ವಿಪ್ರೋತ್ತಮನ ಮಗಂ
ಭೂವಿಶ್ರುತನೀಶ್ವರಾರ‍್ಯನೆಂಬೊಳ್ಪೆಸರಿಂ
ದೇವದ್ವಿಜಗುರುಜನಪದ
ಸೇವಾನಿರತಂ ಪರೋಪಕಾರಾಭಿರತಂ ೪೩

ಶರಣಾಗತರಂ ರಕ್ಷಿಸೆ
ಪರೋಪಕಾರಾರ್ಥಮರ್ಥಮುಂ ತವಿಸೆ ದಿಗಂ
ತರಮಂ ನಿಮಿರ್ಚೆ ಜಸದಿಂ
ಪುರುಷೋತ್ತಮನೀಶ್ವರಾರ‍್ಯನಂ ತೋಛೆಸಿದಂ ೪೪

ಅತನ ಸತಿ ವಿಶದಗುಣ
ವ್ರಾತಾನ್ವಿತೆ ಧರ್ಮಮೂರ್ತಿ ಪತಿಭಕ್ತಯೊಳಾ
ಸೀತೆಗರುಂಧತಿಗೆ ಕುಭೃ
ಜ್ಜಾತೆಗೆ ದೊರೆ ರೇವಕಬ್ಬೆಯೊಳ್ ಪೆಸರ್ ೪೫

ಆ ರೇವಾಂಬಿಕೆಗೆಂ ದ್ವಿಜೋತ್ತಮನೆನಲ್ ಸಂದೀಶ್ವರಾರ‍್ಯಂಗಮು
ರ್ವೀರಾಮಾಪವಲ್ಲಭಂ ಬುಧಜನಾನಂದಪ್ರದಂ ಸ್ವಾನಯ
ಕ್ಷಿರೋದಾಮೃತರೋಚಿ ಪುಟ್ಟಿ ನೆಗಛ್ದಿಂ ಶ್ರೀ ದುರ್ಗಸಿಂಹಂ ಗುಣಾ
ಧಾರಂ ದೀರನುದಾರಚಾರುಚರಿತಂ ವಿದ್ವಜ್ಜನೈ ಕಾಶ್ರಯಂ ೪೬

ಬಗೆಬಗೆಯ ವಸ್ತು ಸಮೂಹಗಳಿಗೆ ಆಶ್ರಯ ಸ್ಥಾನವೂ ಆದ ಸಯ್ಯಡಿ ಆತಿಶಯವಾಗಿ ಶೋಭಿಸುತ್ತಿತ್ತು.೪೧. ಪರಮಾನಂದವನ್ನುಂಟುಮಡುವ ದೇವಾಲಯಗಳ ವೈಭವದಿಂದಲೂ ಬ್ರಾಹ್ಮಣರು ಉತ್ಸಾಹದಿಂದ ಮಾಡುತ್ತಿದ್ದ ಯಜ್ಞಗಳಿಂದಲೂ ಮುನಿಶ್ರೇಷ್ಠರಿಂದಲೂ ಶ್ರೇಷ್ಠ ಸತ್ಕವಿಗಳಿಂದಲೂ ಶ್ರೇಷ್ಠ ವಿದ್ವದ್ವೃಂದದಿಂದಲೂ ಮನೋಹರವಾದ ಸೌಂದರ್ಯದಿಂದ  ಶೋಭಿಸುವ ಸಯ್ಯಡಿ  ಪ್ರಪಂಚದಲ್ಲಿ ರಮ್ಯವಾಗಿತ್ತು. ವ|| ಹಾಗೆ ಸೊಗಯಿಸುವ ಅಗ್ರಹಾರದಲ್ಲಿ ತರ್ಕವ್ಯಾಕರಣ ವಾತ್ಸ್ಯಾಯನಾದಿ ಸಮಸ್ತ ವಿದ್ಯಾಪ್ರಕರಣನೂ ಸರ್ವಧರ್ಮಗಳಿಗೆ ಕಯ್ಕಾಲು ಮೂಡಿದಂತೆ ಇರುವವನೂ ಅದ ದುರ್ಗಸಿಂಹನೆಂಬ ಬ್ರಾಹ್ಮಣನಿದ್ದನು. ಅತನ ಪತ್ನಿ ರೇವಕಬ್ಬೆ ಗೌರೀದೇವಿಯಂತೆ  ಪತಿಭಕ್ತಿಯಿಂದದಿರುತ್ತಿರಲು ಆ ದಂಪತಿಗಳಿಗೆ ತಮ್ಮ ಕುಲಪ್ರದೀಪಕನಾಗಿ ಗೌತಮಕುಲದಲ್ಲಿ ಸಮುದ್ರದಲ್ಲಿ ಚಂದ್ರನು ಹುಟ್ಟುವಂತೆ ಹುಟ್ಟಿ ಅವನು ಮನ್ವಾದಿ ಪುರಾಣ ಮುನಿಗಣಗಳಿಂದ ಪ್ರಶಂಸಿತನಾಗಿ ಶ್ರುತಿವಿಹಿತ ವಿಶುದ್ದಮಾರ್ಗನು ಅತ್ಮೀಯ ಬಂಧುವರ್ಗದಿಂದ ಪ್ರಶಂಸಿತನೂ ನಿತ್ಯವೂ ಹೋಮ ಅಧ್ಯಯನ ಅನೇಕ ಯಾಗಗಳನ್ನು ಮಾಡಿ ಅವಭೃತಸ್ನಾನದಿಂದ ಪವಿತ್ರಗಾತ್ರನಾದವನೂ ಸಜ್ಜನ ಮಿತ್ರನೂ ಸಕಲವೇದಾಧ್ಯನ ಶಬ್ದದಿಂದ ಪವಿತ್ರಾನನಾದವನೂ  ಅತಿಥಿ ಪಿತೃ ದೇವತೆ ಬ್ರಾಹ್ಮಣರನ್ನು ಸಂತೃಪ್ತಿಪಡಿಸಿದವನೂ, ಭಗವನ್ನಾರಾಯಣನ ಭಕ್ತನೂ ತನ್ನ ಕುಲವೆಂಬ ಕಮಲಕ್ಕೆ ಸೂರ್ಯನು ತರ್ಕ ವ್ಯಾಕರಣ ಕಾವ್ಯ ನಾಟಕ ಭರತ ವಾತ್ಸ್ಯಾಯನಾದಿ ಸಮಸ್ತ ವಿದ್ಯಾಸಮುದ್ರವನ್ನು ಉತ್ತರಿಸಿದವನೂ ಗುಣಗಳಿಂದ ಪುಣ್ಯನು ಬ್ರಾಹ್ಮಣಶ್ರೇಷ್ಠನೂ ಅಗಿ ೪೨. ವಿನಯಕ್ಕೆ ಏಕಮಾತ್ರ ಆಶ್ರಯನು, ಪರಾಕ್ರಮದ ಅಸ್ಪದನು ಒಳ್ಳೆಯತನಕ್ಕೆ ಆಧಾರನು, ಸಾಮರ್ಥ್ಯದ ಕಣಿ ಎಂದು ಪ್ರೀತಿಯಿಂದ ಜಗತ್ತಿನ ಜನಸಮೂಹವು ಹೊಗಳಲು ದುರ್ಗಮಯ್ಯನು ಪ್ರಸಿದ್ದನಾದವನು. ೪೩. ಆ ಬ್ರಾಹ್ಮಣಶ್ರೇಷ್ಠನ ಮಗ ಪ್ರಸಿದ್ದನಾದ ಈಶ್ವರಾರ್ಯನೆಂಬ ಒಳ್ಳೆಯ ಹೆಸರಿನಿಂದ ದೇವಬ್ರಾಹ್ಮಣ ಗುರು ಜನಪದ ಸೇವಾನಿರತನಾಗಿಯೂ ಪರೋಪಕಾರಿಯೂ ಅಗಿದ್ದನು. ೪೪. ಶರಣಾಗತರನ್ನೂ ರಕ್ಷಿಸಲೂ ಪರೋಪಕಾರಕ್ಕಾಗಿ ಧನವನ್ನು ವ್ಯಯಿಸಲು  ಯಶಸ್ಸಿನಿಂದ ದಿಗಂತಗಳಲ್ಲಿ ವ್ಯಾಪಿಸಲೂ ಪುರುಷೋತ್ತಮನೂ ಈಶ್ವರಾರ್ಯನನ್ನು ನೇಮಿಸಿದನು. ೪೫ ಆತನ ಸತಿಯು ಪರಿಶುದ್ದ ಗುಣಸಮೂಹದಿಂದ ಕೂಡಿದವಳು ಧರ್ಮಮೂರ್ತಿಯು ಪತಿಭಕ್ತಿಯಲ್ಲಿ ಸೀತೆಗೂ ಅರುಂಧತಿಗೂ ಪಾರ್ವತಿಗೂ ಸಮಾನಳೂ ಅದ ರೇವಕಬ್ಬೆ ಎಂಬ ಹೆಸರಿನವಳಾಗಿದ್ದಳು. ೪೬. ಆ ರೇವಾಂಬಿಕೆಗೂ ಬ್ರಾಹ್ಮಣೋತ್ತಮನಾಗಿ ಪ್ರಸಿದ್ದನಾದ ಈಶ್ವರಾರ್ಯನಿಗೂ ಉರ್ವೀರಾಮಾಪವಲ್ಲಭನೂ ವಿದ್ವಜ್ಜನಾನಂದಪ್ರದನೂ ತನ್ನ ಕುಲವೆಂಬ ಕ್ಷೀರಸಾಗರಕ್ಕೆ ಚಂದ್ರನಾಗಿಯೂ ಗುಣಾಧಾರನೂ ರನೂ ಉದಾರನೂ ಸುಂದರಚರಿತನೂ

ಜನಕಂ ಕಮ್ಮೆಕುಲಪ್ರದೀಪನವನೀದೇವಾನ್ಯಯಾಂಭೋಜಿನೀ
ದಿನಪಂ ಗೌತಮಗೋತ್ರಮಂಡನನಿಳಾಲೋಕಸ್ತುತಂ ದಾನಿ ವಾ
ಗ್ವನಿತಾಶ್ವರನ್ರರ್ಜಿತಂ ಜನನಿ ಶುದ್ದಾಚಾರೆ ಸದ್ದರ್ಮಮೂ
ರ್ತಿನಿ ರೇವಾಂಬಿಕೆಯೆಂದೊಡಾರ್ ಪೊಗೞರೀ ದುರ್ಗಾನ್ವಯ ಖ್ಯಾತಿಯಂ ೪೭

ಅಲಘುತರ ಪ್ರಗುಣ ದಶಾ
ಕಲಿತಂ ಜ್ಯೋತಿರ್ವಿಶೇಷದಿಂ ಪರಹಿತಮಂ
ವಿಲಸತ್ಕಾಂತಿ ಸುಪುತ್ರಃ
ಕುಲದೀಪಕ (ಎನಿಸಿ ದುರ್ಗಸಿಂಹಂ) ನೆಗಛಿಂ ೪೮

ಧರೆ ಬಣ್ಣಿಸೆ ಸಯ್ಯಡಿಯೊಳ್
ಪೊರೆದಾಳ್ವನ ಸಕಲ ಚಕ್ರವರ್ತಿಯ ಬೆಸದಿಂ
ಹರಿಹರಭವನಂಗಳನ
ಚ್ಚರಿಯೆನೆ ಮಾಡಿಸಿದನೇಂ ಕೃತಾರ್ಥನೊ ಸಿಂಹಂ ೪೯

ಅನವದ್ಯಾಚರಣಕ್ಕುದಾಹರಣಮುದ್ಯತ್ಕೀರ್ತಿಗಾದಾರಮಾ
ಳ್ದನಮ ಕಾರ‍್ಯಕ್ಕೆ ಮರುತ್ತನೂಜನೆನಿರ್ದಾತ್ಮೀಯವಂಶಕ್ಕೆ ಮಂ
ಡನರತ್ನಂ ಕಟಕಾರ್ಣವ ಪ್ರತರಂ ಪ್ರೋದ್ಬಾಸಿ ಸಿದ್ದೇಷ್ಟ  ಶಿ
ಷ್ಷನಿಕಾಯಕ್ಕೆ ವಹಿತ್ರಮೆಂದು ಪೊಂಛ್ಗಿಂ ವಿದ್ವಜ್ಜನಂ ದುರ್ಗನಂ ೫೦

ವಿನಯಾನನಹೀನಂ
ವಿನುತಕುಲಿನಂ ನಿಜೇಶಕಾರ‍್ಯಧುರೀಣಂ
ಮನುವಿಹಿತ ಧರ್ಮಮಾರ್ಗಾ
ಧ್ವನೀನಿವನೆಂದು (ದುರ್ಗನೆನಿಸಿ) ದನಲ್ತೇ ೫೧

ಅೞೆವಿಂಗಾಗರಮೊಳ್ಗುಣಕ್ಕೆ ಕಣಿ  ಶೌಚಕ್ಕಾಸ್ಪದಂ ಜಾಣ್ತನ
ಕ್ಕೆೞವಟ್ಟೊಳ್ನಡಿಗಾಣ್ಮನಾಚಿiತಿಗಡರ್ಪಾರ್ಪಿಂಗೆ ಲೀಲಾಗೃಹಂ
ಗುೞೆ ಧರ್ಮಕ್ಕೆ ವಿನೀತವೃತ್ತಿಗೆ ತವರ್ ಸತ್ಯಕ್ಕದಿಷ್ಠಾನಮೆಂ
ಚೞೆತ ಕೈಮಿಗೆ ಕೂರ್ತು ಕೀರ್ತಿಸುವುದರ‍್ವೀಮಂಡಲಂ ದುರ್ಗನಂ ೫೨

ನಿಶ್ಚಿತಮನರಲ್ಲದರಂ
ದುಶ್ಚರಿತರನೆಯ್ದೆ ಪಡೆದ ದೋಷಕ್ಕಂ ಪ್ರಾ
ಯಶ್ಚಿತ್ತಮೆಂದು ಸಕಲ ವಿ
ಪಶ್ಚಿನ್ನಿಯೆನಿಪ ದುರ್ಗನಂ ಬಿದಿ ಪಡೆದಂ ೫೩

ವಿನಯಾಂಬೋನಿದಿ ಶಿಷ್ಟಕಲ್ಪ ಮಹಿಜಂ ಸತ್ಯವ್ರತಂ ವಿಪ್ರವಂ
ಶ ನಭೋಮಂಡನ ಚಂಡಭಾನು ವಿಲಸದ್ವಾಕ್ಪೀ ಮನೋರಾಮನೆಂ
ದೆನಸುಂ  ಧಾರಿಣಿ ಬಣ್ಣಿಕುಂ ನಿಜಯಶೋವಲ್ಲಿವ್ಲತಾಂಬೋದಮಾ-
ರ್ಗನನಾರಾದಿತ ಭರ್ಗನಂ ಭೃತವಿಪಶ್ಚಿತ್ವರ್ಗನಂ ದುರ್ಗನಂ ೫೪

ಜಗದೊಳ್ ಪತಿಹಿತದೆಡೆಯೊಳ್
ನೆಗೞ್ದೆನಜನಿನೇಕದಂತನಿಂ ಪವನಜನಿಂ
ಖಗರಾಜನಿನೀ ದುರ್ಗಂ
ದ್ವಿಗುಣಂ ತ್ರಿಗುಣಂ ಚತುರ್ಗುಣಂ ಪಂಚಗುಣಂ ೫೩

ವಿದ್ವಜ್ಜನರಿಗೆ ಏಕಾಶ್ರಯನೂ ಅದ ಶ್ರೀ ದುರ್ಗಸಿಂಹನೂ ಹುಟ್ಟಿ ಪ್ರಸಿದ್ದನಾದನು. ೪೭. ತಂದೆಯು ಕಮ್ಮೆಕುಲಪ್ರದೀಪನೂ ಬ್ರಾಹ್ಮಣವಂಶವೆಂಬ ಕಮಲಕ್ಕೆ ಸೂರ್ಯನೂ ಗೌತಮ ಗೋತ್ರಕ್ಕೆ ಅಲಂಕಾರನೂ ಪ್ರಪಂಚದ ಜನರಿಂದ ಸುತ್ತನೂ ದಾನಿಯೂ ವಾಕ್ಪ್ರೀಯುತನೂ ಪ್ರವರ್ಧಮಾನನೂ, ಜನನಿಯು ಶುದ್ದಾಚಾರೆಯೂ ಸದ್ಧರ್ಮಗಳ ಸಾಕಾರೆಯೂ ಆದ ರೇವಾಂಬಿಕೆ ಅಗಿರಲು ದುರ್ಗಸಿಂಹನ ಕುಲಖ್ಯಾತಿಯನ್ನು  ಹೊಗಳದವರು ಯಾರು? ೪೮.ಗುರುತರವಾದ ಹತ್ತು ಗುಣಗಳಿಂದ ಕೂಡಿದವನೂ ತೇಜಸ್ಸಿನಿಂದ ಪರೋಪಕಾರದಿಂದ ಪ್ರಕಾಶಮಾನನನೂ ಒಳ್ಳೆಯ ಮಗನೂ ಕುಲಪ್ರಕಾಶಕನೆಂದು ದುರ್ಗಸಿಂಹನು ಪ್ರಸಿದ್ದನಾದನು.೪೯. ಪ್ರಪಂಚವೇ ಬಣ್ಣಿಸಲು ಸಯ್ಯಡಿಯಲ್ಲಿ ಕಾಪಾಡಿ ಅಳಿದ ಸಕಲ ಚಕ್ರವರ್ತಿಯ ಆಜ್ಞೆಯಂತೆ ಹರಿಹರ ದೇವಾಲಯಗಳನ್ನು ಮಾಡಿಸಿದನು: ದುರ್ಗಸಿಂಹನು ಎಂಥ ಕೃತಾರ್ಥ ! ೫೦. ನಿರ್ದುಷ್ಟವಾದ ನಡತೆಗೆ ಉದಾಹರಣನು, ಪ್ರಕಾಶಮಾನವಾದ ಕೀರ್ತಿಗೆ ಆಧಾರ, ಸ್ವಾಮಿಕಾರ್ಯಕ್ಕೆ ಹನುಮಂತ ತನ್ನ ವಂಶಕ್ಕೆ ಅಲಂಕಾರ ರತ್ನ,  ಸ್ಯೆನ್ಯೆ, ಸಮುದ್ರವನ್ನು ದಾಟುವುದರಲ್ಲಿ ಶೋಭಾಯಮಾನ, ಸಿದ್ಧ ಶಿಷ್ಟರ ಸಮೂಹಕ್ಕೆ ದೋಣಿ ಎಂದು ದುರ್ಗಸಿಂಹನನ್ನು ವಿದ್ದಜ್ಜನರು ಹೊಗಳುವರು ೫೧. ವಿನಯಕ್ಕೆ ಆಶ್ರಯನು ಉತ್ತಮನು ಸತ್ಕುಲಸಂಭವನೂ ಸ್ವಾಮಿಕಾರ್ಯಧುರೀಣನೂ ಮನು ಧರ್ಮದ ಮಾರ್ಗದಲ್ಲರುವವನೂ ಎಂದು ದುರ್ಗಸಿಂಹ ಪ್ರಸಿದ್ದನಲ್ಲವೇ ? ೫೨. ಜ್ಞಾನಕ್ಕೆ ಆಶ್ರಯಸ್ಥಾನ, ಒಳ್ಳೆಯ ಗುಣಕ್ಕೆ ಕಣಿ, ಶುಚಿಗೆ ಆದಾರ ಜಾಣತನಕ್ಕೆ ದಿಣ್ಣೆ ಒಳ್ಳೆಯ ಮಾತಿಗೆ ಒಡೆಯ ಪರಾಕ್ರಮಕ್ಕೆ ಅಶ್ರಯ ಸಾಮಾರ್ಥ್ಯಕ್ಕೆ ಆಟದ ಮನೆ, ಧರ್ಮಕ್ಕೆ ಗುರಿ, ವಿನಯಕ್ಕೆ ತವರು ಮನೆ, ಸತ್ಯಕ್ಕೆ ಆಶ್ರಯ ಸ್ಥಾನ ಎಂದು ಬುದ್ದಿಗೆ ಮೀರಿ ಪ್ರೀತಿಸಿ ದುರ್ಗಸಿಂಹನನ್ನು ಪ್ರಪಂಚವು ಹೊಗಳುವುದು. ೫೩. ಚಂಚಲಚಿತ್ತರನ್ನೂ ದುಷ್ಟರನ್ನು ಪಡೆದ ದೋಷಕ್ಕೆ ಪ್ರಾಯಶ್ಚಿತ್ತವೆಂಬಂತೆ ಸರ್ವ ವಿದ್ವಜ್ಜನ ಆಶ್ರಯನಾದ ದುರ್ಗಸಿಂಹನನ್ನು ವಿ ಪಡೆದನು. ೫೪. ವಿನಯ ಸಮುದ್ರ ಶಿಷ್ಟ, ಕಲ್ಪವೃಕ್ಷ ಸತ್ಯವ್ರತ ಬ್ರಾಹ್ಮಣ ವಂಶವೆಂಬ ಅಕಾಶಕ್ಕೆ ಅಲಂಕಾರಪ್ರಾಯನಾದ ಸೂರ್ಯ ಶೋಭಿಸುವ ವಾಗ್ವನಿತೆಯ ಮನೋರಮ. ಎಂದೆಷ್ಟೋ ರೀತಿಯಲ್ಲಿ  ತನ್ನ ವಂಶದ ಕೀರ್ತಿಯೆಂಬ ಬಳ್ಳಿಗೆ ಮೋಡನೂ ಶಿವಭಕ್ತನೂ ವಿದ್ವಜ್ಜನ ಸಮೂಹಕ್ಕೆ ಆಶ್ರಯನೂ ಅದ ದುರ್ಗಸಿಂಹನನ್ನು ಪ್ರಪಂಚ  ವರ್ಣಿಸುವುದು ೫೫. ಜಗತ್ತಿನಲ್ಲಿ ಸ್ವಾಮಿ ಹಿತದಲ್ಲಿ ಪ್ರಸಿದ್ದನಾದ ಕರ್ಣನಿಗಿಂತ, ವಿಘ್ನೇಶ್ವರನಿಗಿಂತ ಹನುಮಂತನಿಗಿಂತ, ಗರುಡನಿಗಿಂತ, ದುರ್ಗಸಿಂಹನು ಇಮ್ಮಡಿ, ಮುಮ್ಮಡಿ, ನಾಲ್ಮಡಿ, ಐದುಮಡಿ  ದೊಡ್ಡವನಾಗಿದ್ದಾನೆ.

ಪರಮಾತ್ಮಂ ಪರಮೇಶ್ವರಂ ಮುರಹರಂ ದೆವಂ ಮಹಾಯೋಗಿಗಳ್
ಗುರುಗಳ್ ಶಂಕರಭಟ್ಟರೆದೆ ಪ್ರೆರೆದಂ ಶ್ರೀ ಚೋಳಕಾಳಾನಲಂ
ಚ*ರಣಿಶಾಗ್ರಣಿ ಚಕ್ರವರ್ತಿತಿಲಕಂ ಪ್ರೋನ್ಮತ್ತವೆರೀಭಕೇ
ಸರಿ ಸಿಂಗಂ ಪತಿಯೆಂದೊಡುನ್ನತಿಯನೀನ್ನೇವಣ್ಣಿಪೆಂ ದುರ್ಗನಾ ೫೬

ಪರಮಶ್ರೀಮನ್ಮಹಾಸೌಂದರ ರಜತಗಿರೀಂದ್ರಾಗ್ರದೊಳ್ ರಾಗದಿಂದಂ
ಗಿರಿಜಾಶಂ ಶಿವಂ ಶಂಕರನಮರನದೀವಲ್ಲಭಂ ದೇವದೇವಂ
ವರದಂ ಸಂಸಿದ್ದಮಾದೀ  ಕಥೆಯನಛಿಪುವೊಂದದಿಂದರ್ಧನಾರೀ
ಶ್ವರನಾಗರ್ದಂ ಸಮಸ್ತಾಮರ ಮಣಿಮಕುಟೋದೃಷ್ಟಪಾದಾರವಿಂದಂ೫೭

ವ|| ಒಂದು ದಿವಸಂ ಪರಮೇಶ್ವರನುಂ ಮೇರು ಪರ್ವತದ  ಮೇಲೆ ಪಿರಿದುಂ ಸಂತೋಷದಿಂ ಎಡದಲ್ಲಿ ಬ್ರಹ್ಮನು ಬಲದಲ್ಲಿ ವಿಷ್ಣುವು ಪಿಂದೆ ಮೂವತ್ತುಮೂರುಕೋಟಿ ದೇವತೆಗಳುಂ ಮುಂದೆ ನಂದಿನಾಥ ವೀರಭದ್ರಾದಿಗಣನಾಮಂ ತೊಡೆಯ ಮೇಲೆ ಗೌರಿಯಂ ಜಡೆಯಲ್ಲಿ ಗಂಗೆಯಂ ಸಹಿತಮಾಗಿಯೊಡ್ಡೋಗಂಗೊಟ್ಟು ಕುಳಿತಿರ್ದಂ ಅಂತಿರ್ದ ಪರಮೇಶ್ವರಂಗೆ ಗಿರಿರಾಜತನೂಜೆ ಕರಕಮಲಂಗಳಮ ಮುಗಿದು ದೇವಾ ನೀವೆನಗೊಂದ ಪುರ್ವಮಪ್ಪ ಕಥೆಯಂ ಪೇೞಲ್ವೇೞ್ದುದೆನೆ ಹರಂ ದರಹಸಿತವದನಾರವಿಂದನಾಗಿ ಪಾರ್ವತಿಗಪೂರ್ವಮಪ್ಪ ಕಥೆಗಳಂ ಪೇಳುತಿರಲಾ ಕಥಾಗೋಷ್ಠಿಯೊಳ್ ಪುಷ್ವದಂತನೆಂಬಂ ಗಣಪ್ರಧಾನನಿರ್ದೆಲ್ಲಮಂ ಕೇಳಾತನೇನಾನುಮೊಂದು ಕಾರಣದಿಂ ಮಾನವ ಲೋಕದೊಳ್ ಪುಟ್ಟಿ ಗುಣಾಢ್ಯನೆಂಬ ಸತ್ಕವಿಯಾಗಿ ಶಾಲಿವಾಹನನೆಂಬ ಚಕ್ರವರ್ತಿಯ ಕವಿಯಾಗಿರ್ದು ಹರಂ ಗಿರಿಸುತೆಗೆ ಪೆಳ್ದ ಕಥೆಗಳಂ ಪೆಶಾಚಿಕ ಭಾಷೆಯೊಳ್ ಬೃಹತ್ಕಥೆಗಳಂ ಮಾಡಿ ಪೇಳ್ದೋಡದಂ ವಸುಭಾಗಭಟ್ಟನು ಕೇಳ್ದಾ ಕಥಾಸಮುದ್ರದೊಳ್  ಪಂಚರತ್ನಮಪ್ಪೆದು ಕಥೆಗಳನಾಯ್ದುಕೊಂಡು ಪಂಚತಂತ್ರಮೆಂದು ಪೆಸರಿಟ್ಟು ಸಮಸ್ತಜಗಜ್ಜನೋಪಕಾರಾರ್ಥಂ ಪೇಳ್ದನದಂ

ವಸುಭಾಗಭಟ್ಟ ಕೃತಿಯಂ
ವಸುಧಾದಿಪಹಿತಮನಖಿಲ ವಿಬುಧಸ್ತುತಮಂ
ಪೊಸೆತಾಗಿರೆ ವಿರಚಿಸುವೆಂ
ವಸುಮ್ಮತಿಯೊಳ್ ಪಂಚತಂತ್ರಮಂ ಕನ್ನಡದಿಂ ೫೮

ವ|| ಆ ಕಥಾಪ್ರಪಂಚಮೆಂತೆಂದೊಡ ಅನೇಕ ಕರಿಮಕರ ತಿಮಿತಿಮಿಂಗಿಲ ಕುಲಕ್ಷೋಭಜನಿತಭಂಗುರತರತ್ತರಂಗಸಂಘಾತಸಂಗತಮಪ್ಪ ಜಲನಿದಿವಳಯದಿಂ ಪರಿಕ್ಷಿಪ್ತಮಾಗಿ ಸೊಗಯಿಸುವ ಜಂಬೂದ್ವೀಪದ ಭಾರತ ವರ್ಷದ ಸಕಲಜಗತೀಜನಸ್ತುತ್ಯ ದಾಕ್ಷಿತ್ಯವೆಂಬ ಜನಪದಮುಂಟು. ಅಲ್ಲಿ,

ಮಹನೀಯಂ ಸುರಸದ್ಮಪದ್ಮವನಷಂಡಂ ರಮ್ಯಹರ್ಮ್ಯಾವಳೀ
ಗೃಹರತ್ನದ್ಯುತಿಭಾಸಿತಂ ಫಲಭರಾಕ್ರಾಂತೋನ್ನತೋದ್ಯಾನ ಭೂ
ರುಹ ಸಂಕೀರ್ಣವಿರಾಚಿತಂ ಬಹುಳವಾಪೀಕೂಪ ಶೋಭಾವಹಂ
ಮಹಾನಂದಕರಂ  ಕರಂ ಸೊಗಗಿಕಂ ಸೌರೂಪ್ಯಮೆಂಬಾ ಪುರಂ  ೫೯

ಪರಮಾತ್ಮನು ಪರಮೇಶ್ವರ, ವಿಷ್ಣು   ದೈವ ಮಹಾಯೋಗಿಗಳಾದ ಶಂಕರಭಟ್ಟರು ಗುರುಗಳು ಚೆನ್ನಾಗಿ ಪೋಷಿಸಿದವನು ಶ್ರೀ ಚೋಳಕಾಳಾನಲ ಎಂಬ ಬಿರುದುಳ್ಳ ರಾಜಶ್ರೇಷ್ಠನೂ ಚಕ್ರವರ್ತಿ ತಿಲಕನೂ ಚೆನ್ನಾಗಿ ಸೊಕ್ಕಿದ  ವೈರಿಗಳೆಂಬ ಅನೆಗಳಿಗೆ ಸಿಂಹಸ್ವರೂಪನು ಅದ ಜಗದೇಕಮಲ್ಲ ಜಯಸಿಂಹನೂ ಒಡೆಯನು ಎಂದ ಮೇಲೆ ದುರ್ಗಸಿಂಹನ ದೊಡ್ಡತನವನ್ನು ಏನೆಂದು  ವರ್ಣಿಸುವೆನು. ೫೭, ಮಹಾಸೌಂದರ್ಯದಿಂದ ಕೂಡಿದ ಬೆಳ್ಳಿಯ ಬೆಟ್ಟದ ಶಿಖರದಲ್ಲಿ ಪ್ರೀತಿಯಿಂದ ಗಿರಿಜಾಪತಿಯಾದ  ಶಿವನೂ ಶಂಕರನು ಭಾಗೀರಥಿಯ ವಲ್ಲಭನುದೇವದೇವನು ವರದನೂ ಸಮಸ್ತ ದೇವತೆಗಳ ರತ್ನಕೀರಿಟಗಳ ತಾಗಿದ ಪಾದಕಮಲವುಳ್ಳವನು ಅದ ಶಿವನೂ ಪ್ರಸಿದ್ದವಾದ ಈ  ಕಥೆಯನ್ನುಹೇಳುವುದಕ್ಕಾಗಿ ಅರ್ಧನಾರಿಶ್ವರನಾಗಿದ್ದನು. ವ|| ಒಂದು ದಿವಸ ಪರಮೇಶ್ವರನು ಮೇರು ಪರ್ವತದ ಮೇಲೆ ಅತ್ಯಂತ  ಸಂತೋಷದಿಂದ ಎಡದಲ್ಲಿ  ಬ್ರಹ್ಮನೂ  ಬಲದಲ್ಲಿ  ವಿಷ್ಣವೂ  ಹಿಂದೆ ಮುವತ್ತು ಮೂರು ಕೋಟಿ ದೇವತೆಗಳು ಮುಂದೆ ನಂದೀಶ ವೀರಭದ್ರರೇ ಮೊದಲಾದ  ಗಣಗಳ ಒಡೆಯರೂ ತೊಡೆಯ ಮೇಲೆ ಗೌರಿಯೂ ಜಡೆಯಲ್ಲಿ ಗಂಗೆಯೂ  ಓಲಗಗೊಟ್ಟು ಕುಳಿತಿದ್ದನು. ಹಾಗಿದ್ದ ಪರಮೇಶ್ವರನಿಗೆ ಗೌರಿಯು ಕರಕಮಲಗಳನ್ನು ಮುಗಿದು ದೇವಾ ನೀವು ನನಗೆ ಒಂದು ಅಪೂರ್ವವಾದ ಕಥೆಯನ್ನು  ಹೇಳಬೇಕು ಎನ್ನಲು ಹರನು ಮುಗುಳ್ನಕ್ಕು ಪಾರ್ವತಿಗೆ ಅಪೂರ್ವವಾದ ಕಥೆಗಳನ್ನು ಹೇಳುತ್ತಿದ್ದನು. ಆಗ ಆ ಕಥಾ ಗೋಷ್ಠಿಯಲ್ಲಿ ಪುಷ್ವದಂತನೆಂಬ ಗಣ ಪ್ರಧಾನನು ಇದ್ದು ಎಲ್ಲವನ್ನು ಕೇಳಿ ಅತನು ಎನೋ ಒಂದು ಕಾರಣದಿಂದ ಮುನುಷ್ಯ ಲೋಕದಲ್ಲಿ ಹುಟ್ಟಿ ಗುಣಾಢ್ಯನೆಂಬ ಸತ್ಕವಿಯಾಗಿ ಶಾಲಿವಾಹನನೆಂಬ ಚಕ್ರವರ್ತಿಯ ಕವಿಯಾಗಿದ್ದು ಹರನು ಗೌರಿಗೆ ಹೇಳಿದ ಕಥೆಗಳನ್ನು  ಪೈಶಾಚಿಕ ಭಾಷೆಯಲ್ಲಿ  ಬೃಹತ್ಕಥೆಗಳನ್ನಾಗಿ ಮಾಡಿ ಹೇಳಿದನು. ಅವುಗಳನ್ನು ವಸುಭಾಗಭಟ್ಟನುಕೇಳಿ  ಅ  ಕಥಾಸಮುದ್ರದಲ್ಲಿ ಪಂಚರತ್ನವಾದ ಐದು ಕಥೆಗಳನ್ನು  ಆರಿಸಿ ಪಂಚತಂತ್ರ ಎಂದು ಹೆಸರಿಟ್ಟು ಸಮಸ್ತ ಜನರ ಉಪಕಾರಕ್ಕಾಗಿ ಹೇಳಿದನು. ಅದರಿಂದ. ೫೮. ರಾಜರಿಗೆ ಹಿತಕರವೂ ಸಮಸ್ತ ಪಂಡಿತರಿಂದ ಪ್ರಶಂಸಿತವೂ ಅದ ವಸುಭಾಗಭಟ್ಟನು ಕೃತಿಯನ್ನು ಪ್ರಪಂಚದಲ್ಲಿ  ಹೊಸದಾಗುವಂತೆ ಪಂಚತಂತ್ರವನ್ನು ಕನ್ನಡದಲ್ಲಿ  ವಿರಚಿಸುವೆನು. ವ|| ಆ ಕಥಾ ಪ್ರಪಂಚ ಹೀಗಿದೆ: ಅನೇಕ ನೀರಾನೆ, ಮೊಸಳೆ, ತಿಮಿ, ತಿಮಿಂಗಿಲಗಳ ಸಮೂಹದ ಕ್ಷೋಭೆಯಿಂದ ಹುಟ್ಟಿದ  ಮೇಲೇದ್ದು ಬೀಳುವ ತೆರೆಗಳ ಪರಂಪರೆಯಿಂದ ಕೂಡಿದ ಸಮುದ್ರಗಳಿಂದ ಅವೃತವಾಗಿ ಶೋಭಿಸುವ ಜಂಬೂದ್ವೀಪದ ಭಾರತವರ್ಷದ ಸರ್ವಜನರ ಪ್ರಶಂಸೆಗೆ ಗುರಿಯಾದ ದಾಕ್ಷಿಣಾತ್ಯ ಎಂಬ ಪ್ರದೇಶವಿದೆ. ಅಲ್ಲಿ ೫೯. ದೊಡ್ಡ ದೊಡ್ಡ ದೇವಾಲಯಗಳಿಂದಲೂ ಸರೋವರಗಳಿಂದಲೂ ಮನೋಹರವಾದ ಸೌಧಸಮೂಹಗಳ ರತ್ನಕಾಂತಿಯ ಶೋಭೆಯಿಂದಲೂ  ಫಲಭಾರದಿಂದ ಬಾಗಿರುವ ದೊಡ್ಡ ತೋಟಗಳಲ್ಲಿರುವ ವೃಕ್ಷರಾಜಿಗಳ ಸೊಬಗಿನಿಂದಲೂ, ಅನೇಕ ಕೆರೆಬಾವಿಗಳಂದ ಶೋಭಾಯಮಾನವೂ ಮಹಾನಂದಕರವೂ ಅದ ಸೌರೂಪ್ಯ ಎಂಬ ಪಟ್ಟಣವೂ ಅತಿಶಯವಾಗಿ ಶೋಭಿಸುತ್ತಿತ್ತು.