ಅದೞ ಮಣಿಭವನದೀಪ್ತಿಗ-
ಳದವಿ ದಿವಂಬರೆಗಮಿಚಿದ್ರಚಾಪಶ್ರೀಯಂ
ಪುದಿದೊಳಕೊಂಡಿರ್ಪುವಕಾ
ಲದೊಳಂ ಸೌಂದರಚಿತ್ರವರ್ಣಯುತಂಗಳ್ ೬೦

ಅನುಪಮಮಪ್ಪ ವಿಭ್ರಮದೊಳೊಂದಿದ ಪುರ್ಬಗಳೆಂಬ ಬಿಲ್ಗಳಿಂ
ಘನಕುಚಮಂಡಳಾಗ್ರದಿನನೂಲಸದ್ದಜಜಪಾಶದಿಂ ವಿಳೋ
ಚನ ಶರಜಾಳದಿಂ ಜಘನ ಚಕ್ರದಿನಲ್ಲಿಯ ಸೌಚಿದರೀಜನಂ
ಮನಸಿಜಭೂಮಿಭೃಜ್ಜಯನ ಶಾಲೆಯ ಲೀಲೆಯಿನೊಪ್ಪಿ ತೋಗುಂ ೬೧

ಎಸೆವ ಬಹುರತ್ನರಾಶಿಯ
ಪಸರಂಗಳಿನದಛಿ ಬೀದಿಗಳ್ ಪಲವುಂ ರಂ-
ಜಿಸಿ ತೋರ್ಕುಮಾವಗಂ ಕುಂ-
ಭಸಂಭವಂ ಕುಡಿದ ಲವಣರ್ವಾಯ ತೆರದಿಂ ೬೨

ಅದನಾಳ್ವಂ ಸಕಳಾವನೀಶ್ರರ ಕಿರೀಟಾನರ್ಘ್ಯರತ್ನಸ್ಪುರ-
ತ್ಪದಪದ್ಮಂ ಗುಣಜನ್ಮಸದ್ಮನಸುಹೃತ್ಸೇನಾನಲಂ ಕಾಮಿನೀ
ವದನಾಂಬೋಜ ದಿವಾಕರಂ ಪ್ರಕತಿತಾಶೇಷಾರ್ಥ ಶಾಸ್ತ್ರಗಮಂ
ಮದನಕಾರನುದಾರನುಚ್ಯುತನಿಭಂ ವಿಶ್ವಾವನೀವಲ್ಲಭಂ ೬೩

ವಿಶದ ಯಶೋಲತಿಕಾವೃತ
ದಶದಿಗ್ವಲಯಂ ಬುಧಾಶ್ರಯಂ ಸಕಳಕಳಾ
ಕುಶಲಂ ಪ್ರಭುಮಂತ್ರೋತ್ಸಾ
ಹಶಕ್ತಿಯುತನಮರಶಕ್ತಿಯೆಂಬ ಪೆಸರಿಂ ೬೪

೬೦, ಅದರ ರತ್ನಸೌಧಗಳ ಕಾಂತಿಗಳು ಹುಟ್ಟಿ ಸ್ವರ್ಗದವರೆಗೆ ಸುಂದರ ವಿಚಿತ್ರ ವರ್ಣಗಳಿಂದ ಕೂಡಿದ ಇಂದ್ರಚಾಪದ ಸೊಬಗನ್ನು ಅಕಾಲದಲ್ಲಿಯೂ ಹೊಂದಿದ್ದವು. ೬೧, ಅಸಾಧಾರಣವಾದ ಭ್ರಮೆಯನ್ನು ಉಂಟುಮಾಡುವ ಹುಬ್ಬುಗಳೆಂಬ ಬಿಲ್ಲುಗಳಿಂದಲೂ ಘನವಾದ ಸ್ತನಗಳೆಂಬ ಖಡ್ಗಗಳಿಂದಲೂ ನಿರ್ದುಷ್ಟವಾಗಿ ಹೊಳೆಯುವ ಭುಜಗಳೆಂಬ ಪಾಶದಿಂದಲೂ ಕಣ್ಣುಗಳೆಂಬ ಬಾಣವಳಿಗಳಿಂದಲೂ ಜಘನವೆಂಬ ಚಕ್ರದಿಂದಲೂ ಸುಂದರಿಯರು ಮನ್ಮಥರಾಜನ ಆಯುಧ ಶಾಲೆಯ ಲೀಲೆಯಿಂದ ಸೊಗಯಿಸಿ ತೋರಿದರು. ೬೨. ಅಗಸ್ತ್ಯನು ಕುಡಿದ ಸಮುದ್ರದಂತೆ ಶೋಭಿಸುವ ಬಹುರತ್ನರಾಶಿಯ ಹೆಸುರುಗಳಿಂದ ಅದರ ಹಲವು ಬೀದಿಗಳು ಯಾವಾಗಲೂ ಶೋಭಿಸಿ ತೋರುತ್ತಿದ್ದವು. ೬೩. ಅದನ್ನಾಳುವವನು ಸಕಲ ರಾಜರ  ಕಿರೀಟಗಳ ಅನರ್ಘ್ಯ  ರತ್ನಗಳಿಂದ ಹೊಳೆಯುವ ಪಾದಕಮಲವುಳ್ಳವನೂ ಗುಣಗಳಿಗೆ ತವರುಮನೆಯೂ, ಶತ್ರುಸೇನೆಗೆ ಅಗ್ನಿಯಾಗಿರುವವನೂ ಕಾಮಿನೀವದನ ಗಳೆಂಬ ಕಮಲಗಳಿಗೆ ಸೂರ್ಯನು ಸಮಸ್ತ ರಾಜನೀತಿಯನ್ನು ತಿಳಿದವನೂ ಮನ್ನಥನಂತೆ ಮನೋಹರಾಕಾರನೂ, ಉದಾರನು ವಿಷ್ಣುವಿಗೆ ಭೂವಲ್ಲಭನೂ ಅಗಿದ್ದನು. ೬೪. ದಶದಿಕ್ಕುಗಳಲ್ಲಿಯೂ ಯಶಸ್ಸೆಂಬ ಬಳ್ಳಿಯು  ಹಬ್ಬಿದವನೂ ಪಂಡಿತರಿಗೆ ಆಶ್ರಯದಾತನೂ ಸಕಲಕಲಾಕುಶಲನೂ,ರಾಜನೀತಿಸಾಮರ್ಥ್ಯವುಳ್ಳವನೂ ಅದ  ಅಮರಶಕ್ತಿಯೆಂಬ ಹೆಸರಿನಿಂದ ಇದ್ದನು.

ವ|ಅಂತಾತನಜಾಶತ್ರುವಿನಂತೆ ಧರ್ಮೋಪಾರ್ಜಿತವಿತ್ತನುಂ ಯಕ್ಷೇಶ್ವರನಂತೆ ಧನರಕ್ಷಾ ಪ್ರವೀಣನುಂ ಏಕದಂತನಂತನವರತ ದಾನಶ್ರರಂ ಅಖಂಡಲನಂತೆ ಖಂಡಿತಾರಾತಿ ಭೂಭೃತ್ಪಕ್ಷನುಂ ಮಂದರಮಹೀಧರನಂತೆ ಕ್ಷಮಾಧರನುಂ. ನಾರಾಯಣನಂತೆ, ಲಕ್ಷ್ಮೀಸಮಾಲಿಗಿಂತ ವಕ್ಷಃಸ್ಥಳನುಂ ಪದ್ಮಾಸನನಂತೆ ರಾಜಹಂಸೋಪಶೋಭಿತನುಂ ವಾಸುಕಿಯಂತನೇಕಬೋಗಾನ್ವಿತನುಂ ಚಂದ್ರಮನಂತೆ ಜನನಯನಾನಂದನುಂ ಅದಿತ್ಯನಂತೆ ಅಮಕಪ್ರತಾಪನುಮೆನಿಸಿ ಸಕಲಗುಣಕ್ಕಾಶ್ರಯನಂ ವಂದಿಜನಾಶ್ರಯವನ್ನು  ಅದ್ವೀತಿಯ ಮಹಿಮಾತಿಶಯನುಂ ಅಗತಸಿದ್ದತ್ರಯನುಂ ಉಪಾಯಚತುಷ್ಟಯ ಪ್ರಯೋಗಪ್ರವೀಣನುಂ ವಿನಿರ್ಜಿತ ಪಂಚೇಂದ್ರಯ ಪ್ರಭಾವಕನುಂ ಅನುಗತ ಷಾಡ್ಗಣ್ಯನನುಂ ದೂರೀಕೃತ ಸಪ್ತವೈಸನನಂ ಮನುಚರಿತಷ್ಟಕ ವರ್ಗವಿಧಾನನುಂ ನವನಿದಿ ಸಂಪೂರ್ಣನುಂ ಪಾಲಿತ ದಶದಿಶಚಕ್ರನುಂ ಎಕಾದಶರುದ್ರಾವತಾರನುಂ ದ್ವಾದಶರಾಜಾರ್ಕಪ್ರಯುಕ್ತ್‌ಗುಪ್ತಚರನುಂ ಅವನಿಪರಿಪೂರ್ಣನುಮಾಗಿ ಸಕಲವಸುಂಧರವಳಯಮಂ ರತ್ನವಳಾಯಮಂ ತಾಳ್ವಂತೆ ನಿಜಭುಜಾಗ್ರದೊಳ್ ತಾಳ್ದು ನಿಂದಾತಾಂಗೆ

ವ|| ಹಾಗೆ ಅವನು ಧರ್ಮರಾಯನಂತೆ ಧರ್ಮದಿಂದ ಸಂಪಾದಿಸಿದ  ಐಶ್ವರ್ಯವುಳ್ಳವನೂ, ಕುಬೇರನಂತೆ ಧನರಕ್ಷಾ ಪ್ರವೀಣನೂ ಗಣಪತಿಯಂತೆ  ಸದಾ  ದಾನಶೂರನೂ,   ಇಂದ್ರನಂತೆ ಶತ್ರುಗಳಾದ ರಾಜರ (ಪರ್ವತಗಳ) ರೆಕ್ಕೆಗಳನ್ನು ಕತ್ತರಿಸಿದವನೂ ಮಂದರ ಪರ್ವತದಂತೆ ಭೂಮಿಯನ್ನು   ಧರಿಸಿದವನೂ, ನಾರಾಯಣನಂತೆ ಲಕ್ಷ್ಮೀಯಿಂದ ಅಲಿಂಗಿತ ವಾದ ವಕ್ಷಸ್ಥಳವನೂ ಬ್ರಹ್ಮನಂತೆ ರಾಜಹಂಸಗಳಿಂದ ಶೋಭೀತನೂ ವಾಸುಕಿಯಂತೆ ಅನೇಕ ಸುಖಗಳನ್ನುಳ್ಳವನೂ ಚಂದ್ರನಂತೆ ಜನರ ಕಣ್ಣುಗಳಿಗೆ ಅನಂದಕರನೂ ಅದಿತ್ಯನಂತೆ ಮಹಾ ಪ್ರತಾಪಶಾಲಿಯೂ ಸಕಲ ಗುಣಗಳಿಗೆ  ಆಶ್ರಯಸ್ಥಾನನೂ ಹೊಗಳುಭಟ್ಟರಿಗೆ ಆಶ್ರಯದಾತನು ಅಸಾಧಾರಣ ಮಹಿಮೆಯಿಂದ ಕೂಡಿದವನೂ ಅಣಿಮಾ ಗರಿಮಾ, ಲಘಿಮಾ, ಎಂಬ ಸಿದ್ದಿತ್ರಯಗಳನ್ನು  ಬಲ್ಲವನೂ ಸಾಮ ದಾನ ಭೇದ ದಂಡಗಳೆಂಬ ನಾಲ್ಕು ಉಪಾಯಗಳನ್ನು  ಪ್ರಯೋಗಿಸುವುದರಲ್ಲಿ ಪ್ರವೀಣನೂ, ಪಂಚೇಂದ್ರಿಯಗಳನ್ನು ಗೆದ್ದವನೂ  ಸಂ, ವಿಗ್ರಹ ಯಾನ, ಆಸನ, ಸಮಾಶ್ರಯ ದ್ವೈಭಾವ ಎಂಬ ಷಡ್ಗುಣಗಳನ್ನು  ಹೊಂದಿದವನೂ  ಮೃಗಯಾ ದ್ಯೂತ ಹಗಲು ನಿದ್ರೆ,  ಹಾದರ ಸುರಾಪಾನ ನೃತ್ಯಸಂಗೀತ ಚಾಡಿ ಎಂಬ ಸಪ್ತವ್ಯಸನಗಳನ್ನು ದೂರ ಮಡಿದವನೂ ಕೃಷಿ ವ್ಯಾಪಾರಭಿವೃದ್ದಿ, ದುರ್ಗರಚನೆ ಸೇತು ನಿರ್ಮಾಣ, ಗ್ರಾಮಾರಣ್ಯ ರಕ್ಷಣೆ  ರತ್ನಶೋದನೆ ಗಜಾಶ್ವ ಶಾಲಾ ವ್ಯವಸ್ಥೆ ಕಪ್ಪ ವಸೂಲಿ ಎಂಬ ಮನು ಹೇಳಿದ ಅಷ್ಟಕ ವರ್ಗವಿಧಾನವನ್ನು ಬಲ್ಲವನೂ ಹಯ, ಗಜ, ರಥ, ದುರ್ಗ, ಭಂಡಾರ, ಅಗ್ನಿ ರತ್ನ, ಧಾನ್ಯ ಪ್ರಮದಾ- ಎಂಬ ನವನಿಗಳಿಂದ ಸಂಪೂರ್ಣನೂ ದಶದಿಕ್ಕುಗಳನ್ನು  ಪಾಲಿಸುವವನೂ ಎಕಾದಶ ರುದ್ರಾವತಾರನೂ ದ್ವಾದಶಾರ್ಕರನ್ನೂ ಗುಪ್ತಚಾರರನ್ನಾಗಿ ಹೊಂದಿದವನೂ, ಸಂಪೂರ್ಣ ಭೂಮಿಯನ್ನೂಪಡೆದವನೂ ಅಗಿ ಸಕಲ ಭೂವಲಯವನ್ನುರತ್ನದ  ಬಳೆಯನ್ನು ಧರಿಸುವಂತೆ ತನ್ನ ಭುಜಾಗ್ರದಲ್ಲಿ ಧರಿಸಿ ನಿಂತ ಅವನಿಗೆ,

ಪ್ರಶಮಿತಗುಣರವಿನಯಕ-
ರ್ಕಶಚಿತ್ತೋನ್ಮತ್ತರಖಿಲವಿಷಯಕ್ರೀಡಾ
ವಶಗತಸುತರಾದರನೇ
ಕಶಕ್ತಿ ವಸುಶಕ್ತಿ ರುದ್ರಶಕ್ತಿಗಳೆಂಬರ್ ೬೫

ಒಂದು ದಿವಸಮಾ ಧಾರಶ್ವರನಾಸ್ಥಾನಭೂಮಿಯೊಳನಂತ ಸಾಮಂತ ಮಂತ್ರಿ  ಪುರೋಹಿತಾಂತರ್ವಾಂಶಿಕ ಶ್ರೀಕರಣಸೇನಾನಾಯಕ ಸಂವಿಗ್ರಹಿ ಪ್ರಮುಖ ನಿಖಿಲ ಪರಿವಾರ ಪರಿವೃತನಾಗಿ ಮಹಾವಿಭೂತಿಯಿಂದೊಡ್ಡೋಲಗಂಗೊಟ್ಟು ಮಹೀಪಾಲನಿರ್ಪುದುಮಾ ಪ್ರಸ್ತವದೊಳತ್ಯಂತ ಯೌವನಮದನವಿಕಾರವಿಕೃತವೇಷರುಂ, ನೀತಿಶಾಸ್ತ್ರ ಸದ್ಬಾವನಾ ಬಹಿರ್ಮುಖರುಂ ವೃದ್ದೋಪಸೇವಾಮೃತಾಸ್ವಾದನಾತಿದೂರರಂ ದುರ್ವಿನೀತ ಧೂರ್ತ ವಿಟ ವಿದೂಷಕ ಪ್ರಭತಿ  ನಿಖಿಲಜನಗೋಷ್ಠಿನಿರತರಂ ವಿವೇಕವಿಕಳವ್ಮತಿಗಳುಮಪ್ಪ ನಿಜತನೂಭವರ್ ಮೂವರುಮೋಲಗಕ್ಕೆ ಬರ್ಪ್ಯದಂ ಕಂಡು ಅರಸಂ ಈ ಕುಮಾರರಂ ಬಾಲಕಾಲದೊಳ್ ತೊಟ್ಟು ವಿದ್ಯಾಭ್ಯಾಸಂಗೆಯಿಸೆದೆ ಸ್ವೇಚ್ಚಾವಿಹಾರಿಗಳು ಮಾಡಿ ಕಿಡಿಸಿದೆಂ. ಇನ್ನುಮಿವಂದಿರನೀಯಂದದೊಳಿರಿಸಿದೆನಪ್ಪೋಡೆ ಅನೀತರಾಗಿ ಪಗೆವರ್ಗೆ ವಶಗರರಪ್ಪರದಂ ಶ್ರುತ ವಿನಯ ಸಂಪನ್ನರಂ ಮಾಡಲ್ದೆಛಿದು ಎಂತುಂ ಸುಭಾಷತಮಿಂತೆಂಬುದಲ್ತೆ :

ಶ್ಲೋ|| ಅವಿನಯಮಂತರಾನಭಿಜ್ಞಂ ವಶಮವಶಂ ಹಿ ನಯಂತಿ ವಿದಿಷಃ |
ಶ್ರುತ ವಿನಯಂ ಸಮಾಶ್ರಿತಂ ತಂ ತನುಮಷಿ ನೃತಿ ಪರಾಭವಃ ಕ್ವಚಿತ್  ೧

೬೫. ಗುಣವಿಹೀನರೂ  ಅವನೀತರೂ ಕರ್ಕಶಚಿತ್ತರೂ ಉನ್ಮತ್ತರೂ ಸಮಸ್ತ ಇಂದ್ರಿಯ ಕ್ರೀಡಾಸಕ್ತರೂ ಅದ ಅನೇಕ ಶಕ್ತಿ  ವಸುಶಕ್ತಿ ರುದ್ರಶಕ್ತಿಗಳೆಂಬ ಗಂಡು ಮಕ್ಕಳಾದರೂ. ಒಂದು ದಿವಸ ಆ ಧರಾಶ್ವರನು ಆಸ್ಥಾನದಲ್ಲಿ ಅನೇಕ ಸಾಮಂತ ಮಂತ್ರಿ ಪುರೋಹಿತರಿಂದಲೂ, ವ್ಯಾಯಾಮಾ ಶಾಲಾಧ್ಯಕ್ಷರಿಂದಲೂ ಗಣಕರಿಂದಲೂ ಸೇನಾನಾಯಕರಿಂದಲೂ ಸಂ  ವಿಗ್ರಹಿಗಳಿಂದಲೂ ಕೂಡಿದ ಸಮಸ್ತ ಪರಿವಾರ ಸಮೇತನಾಗಿ ಮಹಾವೈಭವದಿಂದ  ಒಡ್ಡೋಲಗಗೊಟ್ಟಿದ್ದನು. ಆ ಸಚಿದರ್ಭದಲ್ಲಿ ಅತ್ಯಂತ ಯೌವನ ಮದವಿಕಾರಕವಿಕೃತವೇಷರೂ ನೀತಿಶಾಸ್ತ್ರ ಸದ್ಭಾವನೆಗಳಿಗೆ ಹೊರತಾದವರೂ,ವೃದ್ದಸೇವೆಯೆಂಬ ಅಮೃತಾಸ್ವಾದನಕ್ಕೆ ದೂರವಾದರೂ ಅವಿನೀತರೂ, ಧೂರ್ತವಿಟ ವಿದೂಷಕರೀ ಮೊದಲಾದ ಸಾಮಾನ್ಯ ಜನರ ಗೋಷ್ಠಿಯಲ್ಲಿ ನಿರತರೂ, ವಿವೇಕಶೂನ್ಯರೂ ಅದ ತನ್ನ ಮಕ್ಕಳು ಮೂವರು ಓಲಗಕ್ಕೆ ಬರುವುದನ್ನು ಅರಸನು ಕಂಡು ಹೀಗೆಂದುಕೊಂಡನು. ಈ ಕುಮಾರರನ್ನು ಬಾಲ್ಯದಿಂದಲೂ ವಿದ್ಯಾಭ್ಯಾಸದಲ್ಲಿ ತೊಡಗಿಸದೆ ಸ್ವೇಚ್ಚಾವಿಹಾರಿಗಳನ್ನಾಗಿ ಮಾಡಿ ಕೆಡಿಸಿದೆನು. ಇನ್ನು ಇವರನ್ನು ಇದೇ ರೀತಿಯಲ್ಲಿ ಇರಿಸಿದಲ್ಲಿ ಅವಿನೀತರಾಗಿ ಶತ್ರುಗಳಿಗೆ ವಶರಾಗುವರು. ಅದರಿಂದ ಇವರನ್ನು ಶ್ರುತ ವಿನಯ ಸಂಪನ್ನರಾಗಿ ಮಾಡಬೇಕು. ಹೇಗೂ ಸುಭಾತವೂ ಹೀಗೆ ಹೇಳುವುದಲ್ಲವೇ: ಶ್ಲೋ|| ಅತ್ಯಂತ ದುರ್ವಿನೀತನನ್ನೂ ಭೇದಭಾವವನ್ನು ತಿಳಿಯದವನನ್ನೂ ಇಂದ್ರಿಯ ಲೋಲುಪನನ್ನೂ ಶತ್ರುಗಳು ಕೆಡಿಸುವರು. ಶ್ರುತ ವಿನಯ ಸಂಪನ್ನನಾದವನಿಗೆ ಎಲ್ಲಿಂದಲೂ ಬಡತನವಾದರೂ ಪರಾಭವ ಸಂಭವಿಸುವುದಿಲ್ಲ. ಎಂಬ ಈ ನೀತಿಶಾಸ್ರ್ತವುಂಟು. ಅಲ್ಲದೆ,

ಟೀ|| ಅತ್ಯಂತ ದುರ್ವಿನೀತನಂ ಅಂತರವಱೆಯದನಂ ಇಂದ್ರಿಯವಶನಪ್ಪಾತನಂ ಶತ್ರುಗಳ್ ಕಿಡಿಸುವರ್.ಶ್ರುತವಿನಯ ಸಂಪನ್ನನಪ್ಪಾತಂಗೆತ್ತಲಾನುಂ ಬಡತನಮಾದೊಡಂ ಪರಾಭವ ಮನೆಯ್ದಲಱೆಯಂ.

ನಯಶಾಸ್ತ್ರಕ್ರಮದಿಂ ವಿರೋನೃಪರಂ ಗೆಲ್ದಾಳ್ದನೇಕಾಕಿಯಾ-
ಗಿಯುಮುರ್ವಿತಳಮುಮ ನರೇಂದ್ರ ತಿಲಕಂ ಶ್ರೀಚಂದ್ರಗುಪ್ತಂ ನಿಜಾ-
ನ್ವಯರಾಜ್ಯಕ್ರಮದೊಳ್ ಚತುರ್ಬಲಸಮೇತಂ ನಿಂದು ತನ್ರ್ನೇಂದು ದು-
ರ್ನಯದಿಂದಂ ನೆಗೞ್ದೆಯ್ದೆ ಕೆಟ್ಟನಕಂ ದುರ್ಬ್ದು ದುರ‍್ಯೋಧನಂ ೬೬

೬೬. ನೀತಿ ಶಾಸ್ತ್ರಕ್ಕೆ ಅನುಸಾರವಾಗಿ ಶತ್ರುರಾಜರನ್ನು ಏಕಾಕಿಯಾಗಿಯೂ ಗೆದ್ದು ಭೂತಳವನ್ನು  ಶ್ರೀ ಚಂದ್ರಗುಪ್ತನೆಂಬ ಚಕ್ರವರ್ತಿ ಅಳಿದನು. ತನ್ನ ಕುಲದ ರಾಜ್ಯ ಭಾರದಲ್ಲಿ ಚತುರಂಗಬಲ ಸಮೇತನಾಗಿದ್ದು ತನ್ನ ಒಂದು ದುರ್ನೀತಿಯಿಂದ ನಡೆದು ದುರ್ಬುದ್ದಿಯ ದುರ್ಯೋಧನನು ಅಕವಾಗಿ ಕೆಟ್ಟನು. ವ|| ಅದರಿಂದ ಇವರಲ್ಲಿ ಒಬ್ಬನನ್ನು ನನ್ನ ಭುಜಬಲ  ಸಾಮಾರ್ಥ್ಯದಿಂದ ಸಮುದ್ರವರೆಗೆ ವ್ಯಾಪಿಸಿದ ಸಕಲ ಭೂಮುಂಡಲವನ್ನೂ ರಕ್ಷಿಸುವಂತೆ ಮಾಡೋಣ ಎಂದರೆ ಇವರು ವಿದ್ಯಾವಿಹೀನರು. ಇವರನ್ನೂ  ವಿದ್ಯಾವಿನಯ ಸಂಪನ್ನರಾಗುವಂತೆ ಮಾಡುವೆನೆಂಬವನು ಇರುವುದಾದರೆ ಅವನು ಏನನ್ನು ಬೇಡಿದರೂ ಕೊಡುವೆನು, ಎಂದು ಅಸ್ಥಾನಸ್ಥಿತರಾದ ಪಂಡಿತರನ್ನು ನೋಡಲು ಅವರಲ್ಲಿ ಹರಕು ಬಯಿಯವನೂ  ನಿಕೃಷ್ಟನೂ ಅದ ಭಟ್ಟನೊಬ್ಬನು, “ ನಿಮ್ಮ ಈ ಕುಮಾರರು ಯೌವನ ಮದೋನ್ಮತ್ತರು, ದುಮುರ್ಖರೂ. ಚಂಚಲಚಿತ್ತರೂ ಅಗಿರುವರು. ಇವರನ್ನು ನೀತಿವಿದರನ್ನಾಗಿ ತಿದ್ದುವುದು ಮುದಿಗುದುರೆಯನ್ನು ತಿದ್ದವುದು ಒಂದೇ ಎಂದು ಕಷ್ಟನಿಷ್ಠುರವಾಗಿ  ನುಡಿದವನು. ಅವನನ್ನು ಎದುರಿಸಿ ಸಮಸ್ತಶಾಸ್ತ್ರ ವಿಚಾರಸಾರನೂ ಧರ್ಮ ಅರ್ಥ, ಕಾಮ ಮೋಕ್ಷಗಳೆಂಬ ಚತುರುಪಧಾವಿಶುದ್ದನೂ, ಬುದ್ದಿವೃದ್ಧನೂ ಅನೇಕ ಶಿಷ್ಟ ವಿಖ್ಯಾತ ಕೀರ್ತಿಯುಳ್ಳವನೂ, ಶುಭಾಕಾರನೂ ಅದ ವಸುಭಾಗಭಟ್ಟನು ಹೀಗೆಂದನು :

ಎನಿತೋದನೋದಿಯಂ ಮನ
ದನಿತೆ ವಲಂ ಬುದ್ದಿಯಕ್ಕುಮೆಂದು ಸಮಸ್ತಾ
ವನಿಯ ಜನಮೊನಕೆವಾಡ
ಪ್ಪಿನೆಗಂ ಸಲೆ  ನುಡಿದ ಯಥಾರ್ಥಂ ನಿನ್ನೋಳ್ ೬೭

ಶ್ಲೋ|| ಸ್ವಭಾವಮನುವರ್ತಂತೇ ಪಾಂಡಿತ್ಯಂ ಕಿಂ ಕರಿಷ್ಯತಿ ||೨||
ಟೀ|| ತನ್ನ ಪ್ರಕೃತಿ ಬಿಡದಿರಲ್ ಅಛಕೆಯೇನಂ ಮಾಡುವುದು ?
ಎಂಬ ಪುರಾಣವಾಕ್ಯಮೇಕೆ ಪುಸಿಯಕ್ಕುಮಲ್ಲದೆಯುಂ ೬೮.

ಶುಕಶಾರಿಕಾದಿ ಪಕ್ಷಿ
ಪ್ರಕರಂ ಮೊದಲಾಗಿ ಶಿಕ್ಷೆಯಂ ಕೈಕೊಳ್ಳುವಂ
ಪ್ರಕಟಂ ತಾನೆನೆ ಮಾನವ
ನಿಕರಂ ಕೈಕೊಳ್ಳದೆಂದು ನುಡಿವರೆ ಮರುಳೇ ೬೮

ವ|| ಅದಛೆಂ ನಿನ್ನ ಪರಿಜ್ಞಾನದ ತೆರನನಛಿಯಲಾದುದು ನೀಂ ಮಟ್ಟಮಿರೆಂದಾ ಭಟ್ಟನಂ ಮುಟ್ಟುಗಿಡೆ ನ್ಮಡಿದಂ ಮಾಣದೆ ವಸುಭಾಗಭಟ್ಟಂ ವಿಭುಗಭಿಮುಖನಾಗಿ,

ದೇವ ಭವದೀಯಸುತರಂ
ಮೂವರುಮಂ ಜಡರನಾಱು ತಿಂಗಳ್ಗೆ ಜಯ
ಶ್ರೀವರ ಸಮಸ್ತ ನೃಪವಿ
ದ್ಯಾವರರಪ್ಟಂತು ಮಾಡುವೆಂ ಪರಮಾರ್ಥಂ ೬೯

ವ|| ಅಂತು ಮಾಡಲಾಱದಂದು ತಪಂಬಡುವೆನೆಂದು ವಸುಭಾಗಭಟ್ಟಂ ಪ್ರತಿಜ್ಞಾಪೂರ್ವಕಂ ನುಡಿಪುದುಮಮರಶಕ್ತಿ ಸಂತಸಂಬಟ್ಟು ಕುಮಾರರಂ ಸಮರ್ಪಿಸುವುದಂ, ವಸುಭಾಗಭಟ್ಟನವರಂ ಕೈಕೊಂಡು ಶುಭದಿನ ಸುಮುಹೂರ್ತದೊಳ್ ವಿದ್ಯಾಗಮೋದ್ಯುಕ್ತರಂ ಮಾೞ್ಟುದುಂ ಅವಂದಿರ್ ಅತಿವರ್ತಿಯಪ್ಪ ಮತ್ತಗಜಮಂ ಕಂಬಕ್ಕೆ ತರ್ಪಂತೊತ್ತಂಬದಿಂ ಬಂದುಂ ಪಡಿವೆತ್ತ ಕಳ್ಳನಂತೆ ಸಿಡಿಮಿಡಿಗೊಳ್ಮತಿರ್ದುಂ ಅಪಸ್ಮಾರಕಗ್ರಹಗೃಹೀತರಂತೆ ವಕ್ರಗ್ರೀವರಾಗಿಯಂ, ಉಗ್ರಗ್ರಹಂ ಸೋಂಕಿದಂತೆ ಮರುಳಾಗಿಯಂ ನೆಱೆಗಿವುಡರಂತೆ ಕಿವುಂಡುಗೇಳ್ದಂ ಪಿಸ್ಮಣಂ ಕೇಳ್ದ ಸತ್ಪರುಷನಂತೆ ಕೇಳ್ದುದನಲ್ಲಿಯೇ ಮಱೆದುಂ ಸೂಕಳಾಶ್ವದಂತೆ ಶಿಕ್ಷೆಯನೆಂತುಂ ಕೈಕೊಳ್ಳದಿದ್ದರೆ ಚಿಂತಾಕ್ರಾಂತನಾಗಿ ಸ್ವಾಂತದೊಳ್ ವಿಚಾರಿಸಿಕೊಂಡು ಏನಂ ಮಾೞ್ಟೆನೆಂದು ಸವ್ವನೆ ಸುಗಿದು ಬೆಱಗಾಗಿರೆಯಂ ಆ ಕುಮಾರರುಂ ತಮ್ಮೋದನಾಡುವ ಧೂರ್ತ ಗೋವಳಕರಂ ಕೂಡಿಕೊಂಡು ಪಾಸದ ನಾಯ್ಗಳಂ ತರಿಸಿ ಬಲೆಗಳಂ ತಂದು ಬೇಂಟೆಗೆ ಪೋಗಲುದ್ಯುಕ್ತರಪ್ಪು ದುಂ ಆ ವಸುಭಾಗಭಟ್ಟಂ ಆ ಕುಮಾರಕರ ಮನದಿಚ್ಚೆನಳೆದು ತಾನುಮವರೊಳೊರ್ವನಾಗಿ ನಾಯ್ಗಳಂ ಪಿಡಿದು ಪೊಛಿಮಡೆ ಅ ಕುಮಾರರ್ ಕಂಡು ಕರಮೊಳ್ಳಿತ್ತಾಯ್ತೆಂದು ಸಂತೋಷಂಬಟ್ಟು ಉಡಲ್ಕೋಟ್ಟು ವೀಳೆಯಮನ್ನತ್ತು ಸಂತುಷ್ಟಿ ಪಡಿಸಿ ಪೊಗುತ್ತಿರೆ ವಸುಭಾಗಭಟಂ ತನ್ನ ಮನದೊಳಗೆ ಈ ಕುಮಾರರ್ಗೆ  ಹಾಸ್ಯರಸಮೊಸರ್ವಂತುವೊಂದು ಕತೆಯಂ ಪೇಳ್ವರ ಮನೋಧರ್ಮಮಂ ನೋಡುವೆನೆಂದುಯಿಂತೆಂದಂ: ಕುವರರ್ಕಳಿರಾ, ನಾಮೆಲ್ಲಂ ಮುಂದಣ ವನಾಂತರಕ್ಕೆ ಪೋಪನ್ನಮೊಂದು ನರಿಯ ಕಥೆ  ಪೆೞ್ವ್‌ನೆ? ಎಂದು ಬೆಸಗೊಳೆ ಆ ಕುವರುರುಂ  ಪೇೞೆಮೆಂಬುದುಂ ವಸುಭಾಗಭಟ್ಟನಿಂತೆಂದಂ:

೬೭. ಎಷ್ಟು ವಿದ್ಯೆಯನ್ನು ಕಲಿತರೂ ಮನಸ್ಸಿನಷ್ಟೆ ತಾನೇ ಬುದ್ಧಿಯ ಸಿದ್ದಿ ! ಎಂದು ಸಮಸ್ತ ಪ್ರಪಂಚದ ಜನರು ಒನಕೆ ಹಾಡಾಗಿ ನುಡಿದ ಸೂಕ್ತಿ ನಿನ್ನಲ್ಲಿ ಯಥಾರ್ಥವಾಗಿದೆ. ಶ್ಲೋ|| ಸ್ವಭಾವವನ್ನು ಬಿಡದಿರಲು ತಿಳಿವಳಿಕೆಯಿಂದ ಏನು ಪ್ರಯೋಜನ ಎಂಬ ಪುರಾಣವಾಕ್ಯ  ಏಕೆ ಸುಳ್ಳಾಗುವುದು ? ಅಲ್ಲದೆ ೬೮, ಶುಕಶಾರಿಕಾದಿ ಪಕ್ಷಿಗಳು ಶಿಕ್ಷಣವನ್ನು  ಪಡೆಯುತ್ತವೆ. ಎನ್ನುವಾಗ ಮನುಷ್ಯನು ಬುದ್ದಿವಂತನಾಗಲಾರ ಎನ್ನುವುದು ಹುಚ್ಚುತನವಲ್ಲವೆ? ವ|| ಅದರಿಂದ ನಿನ್ನ  ಜ್ಞಾನದ ಮಟ್ಟವನ್ನು ತಿಳಿದಂತಾಯಿತು . ನೀನು ತೆಪ್ಪಗಿರು ಎಂದು ಭಟ್ಟನಿಗೆ ಗೌರವ ಕೆಡುವಂತೆ ಹೇಳಿಯೂ  ಬಿಡದೆ ರಾಜನ ಕಡೆಗೆ ಮುಖಮಾಡಿ ೬೯. ಸ್ವಾಮಿ ನಿಮ್ಮ ಮೂವರೂ ಮಕ್ಕಳನ್ನು ಅರು ತಿಂಗಳು ಕಾಲದಲ್ಲಿ ಜಯಶ್ರೀವರರನ್ನಾಗಿಯೂ ಸಮಸ್ತ ರಾಜವಿದ್ಯಾಪರಿಣತರನ್ನಾಗಿಯೂ ಮಾಡುವೆನು. ಇದು ಸತ್ಯ. ವ|| ಹಾಗೆ  ಮಾಡಲಾಗದಿದ್ದಲ್ಲಿ ತಪಸ್ಸಿಗೆ ಹೋಗುವೆ ಎಂದು ವಸುಭಾಗಭಟ್ಟನು ಪ್ರತಿಜ್ಞಾಪೂರ್ವಕವಾಗಿ ನುಡಿದನು. ಅಮರ ಶಕ್ತಿಯೂ ಸಂತೋಷಪಟ್ಟು ತನ್ನ ಕುಮಾರರನ್ನು ವಸುಭಾಗಭಟ್ಟನಿಗೆ ಸಮರ್ಪಿಸಿದನು. ವಸುಭಾಗಭಟ್ಟನು ಅವರನ್ನು ಸ್ವೀಕರಿಸಿ ಶುಭದಿನ ಶುಭಮುಹೂರ್ತದಲ್ಲಿ ವಿದ್ಯಾಶಾಸ್ತ್ರದಲ್ಲಿ ಉದ್ಯುಕ್ತರನ್ನಾಗಿ ಮಾಡಿದನು. ಅವರು ಮುನ್ನುಗ್ಗುವ ಮದ್ದಾನೆಯನ್ನು ಕಂಬಕ್ಕೆ ತರುವಂತೆ ಒತ್ತಾಯದಿಂದ ಬಂದೂ ಕೋಳ ಹಾಕಿದ ಕಳ್ಳನಂತೆ ಸಿಡಿಮಿಡಿಗೊಳ್ಳುತ್ತಿದ್ದೂ, ಅಪಸ್ಮಾರ ಹಿಡಿದವರಂತೆ ಕುತ್ತಗೆ ಸೊಟ್ಟಗೆ  ಮಾಡಿಕೊಂಡು ಭಯಂಕರ ಭೂತ ಬಡಿದವರಂತೆ ಮರುಳರಾಗಿಯೂ, ಸಂಪೂರ್ಣ ಕಿವುಡರಂತೆ ಕೇಳದವರಂತೆ ಇದ್ದೂ,  ಚಾಡಿಯನ್ನು ಕೇಳುವ ಸತ್ಪರುಷರಂತೆ ಕೇಳಿದುದನ್ನು ಅಲ್ಲಿಯೇ ಮರೆತೂ ಪಳಗಿಸದ ಕುದುರೆಯಂತೆ ಶಿಕ್ಷಣವನ್ನು  ಏನೂ ಮಾಡಿದರು ಸ್ವೀಕರಿಸಲಿಲ್ಲ. ವಸುಭಾಗಭಟ್ಟನು ಚಿಂತಾಕ್ರಾಂತನಾಗಿ ಮನಸ್ಸಿನಲ್ಲಿ ವಿಚಾರಿಸಿಕೊಂಡು ಏನನ್ನು ಮಾಡುವೆನು ಎಂದು ತಟ್ಟನೆ ಹೆದರಿ ಬೆರಗಾದನು. ಆ ಕುಮಾರರೂ ತಮ್ಮೋಡನೆ ಆಡುವ ತುಂಟ ಗೋವಳರನ್ನು ಕೂಡಿಕೊಂಡು ಹಗ್ಗ ಕಟ್ಟಿದ ನಾಯಿಗಳನ್ನು ತರಿಸಿ ಬಲೆಗಳನ್ನು ತಂದು ಬೇಟೆಗೆ ಹೋಗಲು  ಉದ್ಯುಕ್ತರಾದರು. ಆ ವಸುಭಾಗಭಟ್ಟನು ಆ ಕುಮಾರರ ಮನಸ್ಸಿನ ಇಂಗಿತವನ್ನು ತಿಳಿದು ತಾನೂ ಅವರಲ್ಲಿ ಒಬ್ಬನಾಗಿ ನಾಯಿಗಳನ್ನು ಹಿಡಿದು ಹೊರಡಲು ಆ ಕುಮಾರರು ಕಂಡು ಬಹಳ  ಚೆನ್ನಾಯಿತು ಎಂದು ಸಂತೋಷಪಟ್ಟು ಉಡಲಿಕ್ಕೆ ಕೊಟ್ಟು ವೀಳ್ಯವನ್ನಿತ್ತು ಸಂತುಷ್ಟಿಪಡಿಸಿ ಹೋಗುತ್ತಿದ್ದರು. ವಸುಭಾಗಭಟ್ಟನು ತನ್ನ ಮನಸ್ಸಿನಲ್ಲಿ  ಈ ಕುಮಾರರಿಗೆ ಹಾಸ್ಯರಸವು ಒಸರುವಂತೆ ಒಚಿದು  ಕಥೆಯನ್ನು ಹೇಳಿ ಅವರ ಮನೋಧರ್ಮವನ್ನು ಪರೀಕ್ಷಿಸುವೆನು ಎಂದು ಹೀಗೆಂದನು; ಕುಮಾರರೇ ನಾವೆಲ್ಲರೂ ಮುಂದಿನ ಬೇರೋದು ವನಕ್ಕೆ ಹೋಗುವಷ್ಟರಲ್ಲಿ ಒಂದು ನರಿಯ ಕಥೆಯನ್ನು ಹೇಳಲೇ ಎಂದು ಕೇಳಲು ಆ ಕುಮಾರರೂ ಹೇಳಿರಿ ಎನ್ನಲು ವಸುಭಾಗಭಟ್ಟನು ಹೀಗೆಂದನು: