. ನರಿಯ ಕತೆ

ಸಿರಿವಾಸಿಯೆಂಬ ಪುರದೊಳ್
ಸಿರಿವಂತನೆಂಬರ್ನೊವ ಪಾದಜನಕಂ
ಸ್ಮರಚಾಪನೊಡನೆ ದೊರೆಯೆನೆ
ಧರೆಯೊಳ್ ತಾಂ ಕರ್ವುವಿತ್ತಿ ಪಾಲಿಸುತಿರ್ದಂ  ೭೦

ವ|ಅಂತಾತಂ ಕರ್ವುವಿತ್ತಿ ಸುತ್ತಂ ಬೇಲಿಯಂ ಕಟ್ಟಿ ಪಾಲಿಸುತ್ತುಮಿರೆ ಕೆಲವಾನೊಂದು ದಿವಸಕ್ಕೆ ಕರ್ವು ನೆನೆದು  ಗಿಣ್ಣೇಱುವುದು ಮೃಗಧೂರ್ತನೆಂಬದೊಂದು ನರಿಯದಂ ಕಂಡು ಸಮೀಪಕ್ಕೆವಂದು ಬೇಲಿಯಂ ಸುತ್ತಿವಂದು ನೋಡಿಯೊಂದೆಡೆಯೊಳೆಂದು ಕಳ್ಳದಾರಿಯಂ ಕಂಡು ನಿಚ್ಚನಿಚ್ಚಂ ಬಂದು ಕರ್ವೆಲ್ಲಮುಂ ತಿಂದು ಬೇಸಱೆತ್ತಿರೆ ಆ ಶ್ರದ್ರಂ ನರಿಯ ಕಾಟಕ್ಕೆ ಬೇಸುತ್ತುವೊಂದು ದಿವಸಮಾ ನರಿಯಂ ಕೊಲಲುಪಾಯಮಂ ಕಂದುವೊಂದು ಮಾರಗಲದ ಬೇಲಿಯಂ ಕಿೞ್ತು ಪೆರ್ಬಟ್ಟೆಯಂ ಮಾಡಿ ತಾನುಮಾ ಬಟ್ಟೆಯಳ್ ಬಯ್ಗಿನ ಸಮಯದೊಳಮೊಂದು ಕಯ್ಯೊಳ್ ಕೂೞ ಬುತ್ತಿಯಂ ಪಿಡಿದು ತಲೆಯಂ ಕದರಿ ಕಣ್ಣಂ ಮುಚ್ಚಿ ಸತ್ತ ಪೆಣ್ನಂತೆ ಬೆೞ್ದೆರ್ಪುದುಂ ಅ ನರಿ ಬಂದು ಸಮೀಪದೊಳ್ನಿಂದು ನೋಡಿ ತನ್ನ ಮನದೊಳ್ ಸಂಶಯಂ ಪುಟ್ಟಿ ಮತ್ತಂ ಕಿಱೆದಂತರಂ ತೊಲಗಿ ತನ್ನೊಳೆಯಿತೆಂದುದು: ನಾ ಕಾಣದ  ಸಂಗ್ರಾಮರಂಗಮಿಲ್ಲ ತೊಛಿಲದ ವಿಷಯಮಿಲ್ಲ ಪೋಗದ ಪೆರ್ಬಟ್ಟೆಯಿಯಲ್ಲ ಅವೆಡೆಯೊಳಂ ಇಂತಪ್ಪ ಸಾವಂ ಕಂಡುದಿಲ್ಲ ಇವನೇಂ ಕಾರಣಮಿಚಿತು ಬಿಛ್ದಪನೋ? ಎನ್ನಂ ಕೊಲಲ್ಲೆಂದು ಕಪಟಮರಣಮಂ ತಾಳ್ದಿರ್ಪನೋ? ಮೇಣಿವಂ ಪೋಗುತ್ತಂ ಬಟ್ಟೆಯೊಳ್ ಪಸಿದು ಬುತ್ತಿಯನುಣಲ್ಕೆಂದು ಕುಳ್ಳಿರ್ದುಣತ್ತುಂ  ಗಂಟಲಲ್ಲಿ ಸತ್ತನೋ?  ಇದಂ ನಂಬಲ್ ಬಾರದು, ಪೆಣನಂ ಮುಟ್ಟಲುಂ ಬಾರದು ಕರ್ಬಿನ ತೋಟಮಂ ಪುಗುಲುಂ ಬಾರದು. ಇದಂ ವಿಚಾರಿಸುವೊಡೆಯಿವಂ ಸತ್ತದು ಪುಸಿ ದಿಟಮೆಂದು ಅಛೆವೊಡೆ ಊರ ಸಮೀಪಕ್ಕೆ ಪೋದಂದು ಇವಂ ಸತ್ತ ಸಾವುಳ್ಳೊಡೆ ಐರೊಳಗೆ ಹಲುಬುತ್ತಮತಿರ್ಕುಂ. ಅಲ್ಲದಾಗಳ್ ಸುಮ್ಮನಿರ್ಕುಮೆಂದು ತನ್ನೊಳ್ ನಿಶ್ಚೈಸಿ ಊರ ಸಮೀಪಕ್ಕೆ ಪೋಗಿ ನಾಲ್ಕುಂ ಕಡೆಯನಾರೈದು ಅವ ಕಳಕಳಮಂ ಕೇಳದೆ ಮಗುೞೆವಂದು ಎನ್ನಮಂ ಕೊಲಲ್ಕಿವಂ ಮಾಡಿದ ಮಾಯಮಿದೆಂದು ನಿಶ್ಚೈಸಿ ತನ್ನ ಬುದ್ದಿಗೆ ತಾನೆ ಮೆಚ್ಚಿ ನಕ್ಕುಯಿಂತೆಂದುದು :

ಶ್ಲೋ || ಆಶ್ಚರ‍್ಯಮರಣಂ  ದೃಷ್ಟಂ ಹಸ್ತೇ ದಂಡಕಪಿಂಡಯೋಃ
ಗ್ರಾಮೇ ಕಳಕಳಂ ನಾಸ್ತಿ ಯಃ ಪಲಾಯನ್ ಸ ಸಜೀವತಿ ||

ಟೀ || ಅಪೂರ್ವಮಪ್ಪ ಸಾವಂ ಕಂಡೆಂ. ಕಯ್ಯೊಳೆರಡರೊಳಂ ಕೂೞ ಬುತ್ತಿಯಂ ಡಾಣಿಯಂ ಪಿಡಿದುಕೊಂಡಿರ್ಪುದು. ಉರೊಳಗೆ ಅವ ಕಳಕಳಮುಮಿಲ್ಲ ಎಂದು ತನ್ನ ಬುದ್ದಿಗೆ ತಾನೆ ಮೆಚ್ಚಿ ಓಡಿಪೋಗಿ ಬರ್ದುಂಕಿದತ್ತು.

ಎಂಬುದೊಂದು ಕಥೆಯಂ ವಸುಭಾಗಭಟ್ಟಂ ಪೇಳ್ವುದುಮದಂ ಕೇಳ್ದಾ ಕುಮಾರರಿಂ ತಪ್ಪ ಕಥೆಯನಿನ್ನೊಂದು ಪೇಳೆಮೆಂಬುದುಂ : ಈ ಬಾಲಕರ್ ಕ್ರೀಡಾಶೀಲರಿರವರನೀಯಂದದೊಳ್ ತಿಳುಪುವನೆಂದು, ಅಂತಪ್ಪೊಡೆ ನೀವೀ ಕಥೆಯಂ ಮಗೞೆ ಪೇೞಲ್ ಬಲ್ಲಿರ ಪ್ಪೊಡಿಂತಪ್ಪ ಕಥೆಗಳನನಂತಂ ಪೇೞ್ವೆನೆಂಬುದುಂ ಅವರ್ ಕರಮೊಳ್ಳಿತ್ತಂತೆಗೆಯ್ವೆವೆಂದಾಗಳೆ ಪೋಗಿ  ಮೂವರುಮಾ ಕಥೆಯನಿಂಬಾಗಿ ಸಂಭಾವಿಸಿ ಪೇೞ್ವುದುಂ ವಸುಭಾಗಭಟ್ಟನ ಭೀಷ್ಟ ಸಿದ್ದಿಯಾದುದೆಂತಿ ಸಂತೋಷಬಟ್ಟರ್ಥಶಾಸ್ತ್ರಾ ಭಿಪ್ರಾಯೋಪಾಯಂಗಳಪ್ಪುವೈದು ಕಥೆಗಳಂ ಪೇೞ್ದು ತಿಳಿಪಿ. ರಾಜಪ್ಯತ್ರರಂ ಸತ್ಪಾತ್ರರಂ  ಮಾಡಿ ತಾನುಂ ಸ್ವಾರ್ಥ ಸಿದ್ಧಿಯೊಳ್ ಕೂಡಿದಂ ಅವಾವುವೆಂದೊಡೆ,

ಶ್ಲೋ|| ಭೇದಃ ಪರೀಕ್ಷಾ ವಿಶ್ವಾಸಃ ಚತುರ್ಥಂ ವಂಚನಂ ತಥಾ
ಮಿತ್ರಕಾರ್ಯಂ ಚ ಪಂಚೈತೇ ಕಥಾಸ್ತಂತ್ರಾರ್ಥ ಸಂಜ್ಞಾಕಾಃ ||

ಎಂಬುದು, ಎಂತೆಂದೊಡೆ, ಅನೇಕಪ್ರಕಾರ ಕಪಟೋಪಾಯಂಗಳಿಂದತಿಸ್ನೇಹಿತರೊಳ್ ಪೃಥಗ್ಭಾವಮಂ ಮಾೞ್ಪುದೇ ಭೇದಮೆಂಬುದು. ಅವ ಕಾರ್ಯಮುಮಂ ವಿಚಾರಪೂರ್ವಕಮಲ್ಲದೆ ನೆಗೞಲಾಗದೆಂಬುದನಱ*ಪುವುದು  ಪರೀಕ್ಷೆಯೆಂಬುದು ಎಂತುಂ ನಂಬದರಂ ನಂಬುವಂತೆ ನುಡಿದೊಡಂಬಡಿಸಿಯೊಳಪೊಕ್ಕು ನೆಗೞ್ವುದು ವಿಶ್ವಾಸಮೆಂಬುದು ಪೆಱರ ಬಗೆಯಱ*ದು ಸಂಧಾನಂ ಮಿತ್ರಕಾರ್ಯಮೆಂಬುದು ಗೆಯ್ದು ವಂಚಿಸುವುದು ವಂಚನೆಯೆಂಬುದು ಅನ್ಯರೆಲ್ಲರುಮನತಿಸ್ನೇಹದಿಂ ತನ್ನವರಂ ಮಾಡಿಕೊಳ್ವುದು ಮಿತ್ರಕಾರ್ಯಮೆಂಬುದು, ಇಂತು ಐದು ತಂತ್ರಗಳ ಪ್ರಕಾರಂ ಅದಱೊಳಂ ಮೊದಲ ತಂತ್ರಂ ಭೇದತಂತ್ರವೆಂಬುದು ; ಅದೆಂತೆಂದೊಡೆ

ಸಿರಿವಾಸಿಯೆಂಬ ಪುರದಲ್ಲಿ ಸಿರಿವಂತ ಎಂಬ ಮನ್ಮಥನಿಗೆ  ಸಮಾನನಾಗಿದ್ದ ಒಬ್ಬ ಶೂದ್ರನು ಕಬ್ಬು ಬಿತ್ತಿ ಬೆಳೆಸುತ್ತಿದ್ದನು.  ವ|| ಹಾಗೆ ಅವನು ಕಬ್ಬು ಬಿತ್ತಿ ಬೇಲಿ ಕಟ್ಟಿ ಕಾಪಾಡುತ್ತಿರಲು ಕೆಲವು ದಿನ ಕಳೆಯಲು ಕಬ್ಬು ಬಲಿತು ಗಿಣ್ಣೇರಿದುವು. ಆ ಸಮಯದಲ್ಲಿ ಮೃಗಧೂರ್ತ ಎಂಬ ನರಿಯೊಂದು ಅಲ್ಲಿಗೆ ಬಂದು ಬೇಲಿಯನ್ನು ಸುತ್ತು ಹಾಕಿ ನೋಡಿತು. ಒಂದು ಕಡೆ ಒಳಕ್ಕೆ ಹೋಗಲು ಕಳ್ಳದಾರಿಯಿದ್ದುದನ್ನು ಕಂಡು ದಿನವೂ ಅಲ್ಲಿಂದ ಒಳನುಗ್ಗಿ ಕಬ್ಬನ್ನು ತಿಂದುಹಾಕತೊಡಗಿತು. ನರಿಯ ಕಾಟಕ್ಕೆ ಬೇಸತ್ತ ಶೂದ್ರನ್ನು ಆ ನರಿಯನ್ನು ಕೊಲ್ಲಲು ಒಂದು ಉಪಾಯವನ್ನು ಹೂಡಿದನು. ಒಂದು ಮಾರಗಲ ಬೇಲಿಯನ್ನು ಕಿತ್ತು ದಾರಿಯಾಗುವಂತೆ  ಮಾಡಿ ತಾನು ಸಂಜೆ ಹೊತ್ತು ಒಂದು ಕೈಯಲ್ಲಿ ಅನ್ನದ ಬುತ್ತಿಯನ್ನು ಇನ್ನೊಂದು ಕೈಯಲ್ಲಿ ದಪ್ಪ ದೊಣ್ಣೆಯನ್ನು ಹಿಡಿದುಕೊಂಡು ತಲೆ ಕೆದರಿಕೊಂಡು, ಕಣ್ಣು ಮುಚ್ಚಿ  ಸತ್ತು ಹೋದಂತೆ ಬಿದ್ದುಕೊಂಡನು. ನರಿ ಬಂದಿತು, ಹತ್ತಿರಕ್ಕೆ  ಬಂದು ನೋಡಿದಾಗ ಅದರ ಮನಸ್ಸಿನಲ್ಲಿ ಸಂಶಯವುಂಟಾಯಿತು. ಸ್ವಲ್ಪ ದೂರಕ್ಕೆ ಹೋಗಿ ತನ್ನಲ್ಲೇ ಹೇಳಿಕೊಂಡಿತು. ‘ತಾನು  ನೋಡದ ಯುದ್ದ ಭೂಮಿಯಿಲ್ಲ, ಅಡ್ಡಾಡದ ದೇಶವಿಲ್ಲ. ಎಲ್ಲಿಯೂ ಈ ಬಗೆಯ ಸಾವನ್ನು ನಾನು ನೋಡಿಲಿಲ್ಲವಲ್ಲ ! ಇವನು ಯಾವ ಕಾರಣದಿಂದ ಹೀಗೆ ಬಿದ್ದಿರಬಹುದು ? ನನ್ನನ್ನು ಕೊಲೆಂದು ಕಪಟ ಮರಣ ಹೊಂದಿರಬಹುದೇ! ಅಥವಾ ಈ ದಾರಿಯಾಗಿ ಹೋಗುತ್ತಾ ಹಸಿದು ಬುತ್ತಿಉಣ್ಣುತ್ತಿರುವಾಗ ಗಂಟಲಿಗೆ ಸಿಕ್ಕಿಕೊಂಡು ಸತ್ತರುವನೊ? ಇದನ್ನು ಸುಮ್ಮನೆ ನಂಬಬಾರದು ಹೆಣವನ್ನು ಮುಟ್ಟಬಾರದು ಕಬ್ಬಿನ ತೋಟಕ್ಕೆ ಹೋಗುವಂತೆಯೂ ಇಲ್ಲ. ಇವನು ಸತ್ತ್ತಿರುವುದು ಹುಸಿಯೊ ದಿಟವೋ ಎಂದು ತಿಳಿಯಬೇಕಾದರೆ ಹೀಗೆ ಮಾಡುತ್ತೇನೆ. ಊರಿನ ಸಮೀಪಕ್ಕೆ ಹೋಗುವುದು ನಿಜವಾಗಿಯೂ ಇವನು ಸತ್ತಿದ್ದರೆ ಅಲ್ಲಿ ಜನರು ಅಳುತ್ತಿರುತ್ತಾರೆ, ಇಲ್ಲವಾದರೆ ಸುಮ್ಮನಿರುತ್ತಾರೆ ಎಂದು ನಿಶ್ಚಯಿಸಿ ಕೊಂಡು ಊರ ಸಮೀಪಕ್ಕೆ ಹೋಗಿ ನಾಲ್ಕು ಕಡೆಯೂ ಚೆನ್ನಾಗಿ ಪರಿಶೀಲಿಸಿ ನೋಡಿತು. ಯಾರು ಅತ್ತು ಗಲಾಟೆ ಮಾಡುತ್ತಿರುವುದು ಕಾಣದೆ ಹಿಂದಕ್ಕೆ ಬಂದು ನನ್ನನ್ನು ಕೊಲ್ಲಲು ಇವನು ಮಾಡಿರುವ ಹೂಟ ಇದು ಎಂದು ತೀರ್ಮಾನಿಸಿಕೊಂಡು ತನ್ನ ಬುದ್ದಿಶಕ್ತಿಗೆ ತಾನೇ ಮೆಚ್ಚಿ ಹೀಗೆಂದಿತು, ಶ್ಲೋ|| ‘ ಅಪೂರ್ವವಾದ ಸಾವನ್ನು ನೋಡಿದೆ , ಕೈಗಳಲ್ಲಿ ಕೂಳಿನ ಬುತ್ತಿ ಹಾಗೂ ದೊಣ್ಣೆಗಳನ್ನು ಹಿಡಿದುಕೊಂಡು ಸತ್ತ ಸಾವು ಕಂಡೆ ಊರಲ್ಲಿ ಈ ಬಗೆಗೆ ಯಾವ ಕಳಕಳವೂ ಇಲ್ಲ ಎಂದು ಕೊಳ್ಳುತ್ತಾ ಓಡಿಹೋಗಿ  ಬದುಕಿಕೊಂಡಿತು, ಎಂಬ ಒಂದು ಕಥೆಯನ್ನು ವಸುಭಾಗಭಟ್ಟನು  ಹೇಳಲು ಅದನ್ನು ಕೇಳಿದ ಆ ಕುಮಾರರು ಇಂತಹ ಇನ್ನೊಂದು ಕಥೆಯನ್ನು ಹೇಳುವಂತೆ ವಸುಭಾಗಭಟ್ಟನನ್ನು ಒತ್ತಾಯಪಡಿಸಿದರು. ಈ ಬಾಲಕರು ಕ್ರೀಡಾ ಶೀಲರು, ಇವರಿಗೆ ಈ ರೀತಿಯಲ್ಲಿಯೇ ವಿದ್ಯಾಭ್ಯಾಸ ಮಾಡುತ್ತೆನೆ ಎಂದು ಬಗೆದು  ನೀವು ಈ ಕಥೆಯನ್ನು  ಪುನಃ ಹೇಳಬಲ್ಲಿರಾದರೆ ಮಾತ್ರ ಇಂತಹ ಅನೇಕ ಕಥೆಗಳನ್ನು ಹೇಳುವೆ ಎಂದನು. ಒಳ್ಳೆಯದು ಎಂದು ಆ ಕುಮಾರರು ಆ ಕಥೆಯನ್ನು ಚೆನ್ನಾಗಿ ಸಂಭಾವಿಸಿ ಹೇಳಲು  ವಸುಭಾಗಭಟ್ಟನು ತನ್ನ ಅಭೀಷ್ಟಸಿದ್ಧಿಯಾಯಿತು. ಎಂದು ಸಂತೋಷಪಟ್ಟು ಅರ್ಥಶಾಸ್ತ್ರಾಭಿಪ್ರಾಯ ಉಪಾಯಗಳಾದ ಐದು ಕಥೆಗಳನ್ನು ತಿಳಿಸಿ ರಾಜಪುತ್ರರನ್ನು ಸತ್ಪಾತ್ರರನ್ನಾಗಿ ಮಾಡಿ ತಾನೂ ಸ್ವಾರ್ಥ ಸಿದ್ಧಿಯನ್ನು ಪಡೆದನು. ಅವು ಯಾವುವೆಂದರೆ, ಶ್ಲೋ|| ಭೇದ ಪರೀಕ್ಷಾ ವಿಶ್ವಾಸ ವಂಚನೆ, ಮಿತ್ರಕಾರ್ಯ ಎಂಬ ಈ ಐದು ಕಥೆಗಳನ್ನು ತಂತ್ರಾರ್ಥ ಸಂಜ್ಞಕಗಳಾಗಿವೆ, ಹೇಗೆಂದರೆ ಅನೇಕ ರೀತಿಯ ಕಪಟೊಪಾಯಗಳಿಂದ ಅತಿ ಸ್ನೇಹಿತಲ್ಲಿ ಒಡಕುಂಟಾಗುವಂತೆ ಮಾಡುವುದೇ ಭೇದವಾಗಿದೆ. ಯಾವ ಕಾರ್ಯವನ್ನಾದರೂ ವಿಚಾರಪೂರ್ವಕವಲ್ಲದೆ ಮಾಡಬಾರದು ಎಂಬುದನ್ನು ತಿಳಿಸುವುದು ಪರೀಕ್ಷೆಯಾಗಿದೆ, ಏನು ಮಾಡಿದರೂ ನಂಬದಿರುವವರನ್ನು ನಂಬುವಂತೆ*ದು ನುಡಿದು ಒಡಂಬಡಿಸಿ ಒಳಹೊಕ್ಕು ನಡೆಯುವುದು ವಿಶ್ವಾಸವಾಗಿದೆ, ಬೇರೆಯವರ ಹೃದಯವನ್ನು ತಿಳಿದು  ಸಂಧಾನ ಮಾಡಿ ವಂಚಿಸುವುದು ವಂಚನೆಯಾಗಿದೆ. ಬೇರೆಯವರೆಲ್ಲರನ್ನು ಅತಿಸ್ನೇಹದಿಂದ ತನ್ನವರನ್ನಾಗಿ ಮಾಡಿಕೊಳ್ಳುವುದು ಮಿತ್ರಕಾರ್ಯವಾಗಿದೆ, ಹೀಗೆ ಐದು ತಂತ್ತಗಳ ಪ್ರಕಾರ. ಅವುಗಳಲ್ಲಿ ಮೊದಲನೆಯ ತಂತ್ರವೇ ಭೇದತಂತ್ರವಾಗಿದೆ. ಅದು ಹೇಗೆಂದರೆ –