ಸ್ವಾತಂತ್ರ್ಯಾ ನಂತರ (೧೯೫೦-೫೧ರಲ್ಲಿ) ರಾಷ್ಟ್ರದಲ್ಲಿ ೩.೫ ದಶಲಕ್ಷ ಮೆಟ್ರಿಕ್ ಟನ್ ಬಳಕೆಯಾಗುತ್ತಿದ್ದ ಕಚ್ಚಾ ತೈಲ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಪ್ರಸ್ತುತ ೧೭೫ ದಶಲಕ್ಷ ಮೆಟ್ರಿಕ್ ಟನ್ ನಷ್ಟು ಬಳಕೆಯಾಗುತ್ತಿದೆ. ಇಂದು ವಿಶ್ವದಲ್ಲಿ  ಅತಿ ಹೆಚ್ಚು ಕಚ್ಚಾ ತೈಲ ಬಳಸುವ ರಾಷ್ಟ್ರಗಳಾದ ಅಮೇರಿಕಾ, ಚೈನಾ, ರಷ್ಯಾ, ಜಪಾನ್ ದೇಶಗಳ ನಂತರ ೫ನೇ ಸ್ಥಾನದಲ್ಲಿ ಭಾರತವೂ ಸೇರಿದೆ.  ನಮ್ಮ ಇಂದಿನ ಬೇಡಿಕೆಯ ಶೇ. ೮೦ ರಷ್ಟು ವಿದೇಶದಿಂದ ಪೂರೈಸಿಕೊಳ್ಳಬೇಕಿರುವ ಅನಿವಾರ್ಯತೆಯಿದೆ. ೧೯೯೭-೯೮ನೇ ಸಾಲಿನಲ್ಲಿ ಆಮದು ಮಾಡಿಕೊಳ್ಳಬೇಕಿದ್ದ ಕಚ್ಚಾ ತೈಲ ಶೇ.೬೫ ರಷ್ಟಿದ್ದು, ಪ್ರಸ್ತುತ ಆಮದಿನ ಪ್ರಮಾಣ ಶೇ.೮೦ ಮೀರಿರುವುದು ಯೋಚನೆಗೀಡು ಮಾಡಿದೆ. ಈ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗಿರುವುದು ಶೇ. ೨೦ರಷ್ಟು ಮಾತ್ರ. ಶೇ. ೮೦ರಷ್ಟು ಪರಾವಲಂಬನೆಯಾಗಿರುವುದು ರಾಷ್ಟ್ರದ ಅಭಿವೃದ್ಧಿ ದೃಷ್ಟಿಯಿಂದ ಶುಭ ಸೂಚಕವಲ್ಲ. ಈ ನಿಟ್ಟಿನಲ್ಲಿ ಸ್ವತಂತ್ರವಾಗಿ ಅಭಿವೃದ್ಧಿ ಹೊಂದುವ ಮಾರ್ಗ ಕಂಡುಕೊಳ್ಳಲೇಬೇಕು.  ಜೊತೆಗೆ ವಿಶ್ವದ ಕಚ್ಚಾ ತೈಲದ ನಿಕ್ಷೇಪ ಮುಂಬರುವ ೩೦ ವರ್ಷಗಳಲ್ಲಿ ಬರಿದಾಗುವ ಸೂಚನೆಯನ್ನು  ನಮ್ಮ ವಿಜ್ಞಾನಿಗಳು ನೀಡಿದ್ದಾರೆ. ಭಾರತದ ತೈಲ ನಿಕ್ಷೇಪ ಕೇವಲ ೧೦ ವರ್ಷಗಳಿಗಾಗುವಷ್ಟು ಮಾತ್ರ ಲಭ್ಯವಿರುವದಾಗಿ ಊಹಿಸಿದ್ದಾರೆ. ಆದ್ದರಿಂದ ಪರ್ಯಾಯ ಇಂಧನ ಸಂಪನ್ಮೂಲಗಳ ಅನ್ವೇಷಣೆ ಅತ್ಯಗತ್ಯವಾಗಿರುತ್ತದೆ. ಕಚ್ಚಾ ತೈಲಕ್ಕೆ ಪರ್ಯಾಯವಾಗಿ ಜೈವಿಕ ಇಂಧನ ರಾಷ್ಟ್ರದ ಇಂಧನ ಸಮಸ್ಯೆ ಬಗೆಹರಿಸಬಲ್ಲ ಏಕೈಕ ಆಶಾಕಿರಣವಾಗಿದೆ.

ವಿವಿಧ ಚಟುವಟಿಕೆಗಳಿಗೆ ರಾಷ್ಟ್ರದಲ್ಲಿ ಬಳಕೆಯಾಗುತ್ತಿರುವ ಕಚ್ಚಾ  ತೈಲದ ಶೇಕಡಾವಾರು ಪ್ರಮಾಣ.

ಶೇ. ೮೦ ರಷ್ಟು ರಾಷ್ಟ್ರದ ಬೇಡಿಕೆಯ ತೈಲ ಪೂರೈಕೆ  ಕೊಲ್ಲಿ ರಾಷ್ಟ್ರಗಳಾದ ಇರಾನ್, ಇರಾಕ್, ದುಬೈ, ಕಟರ್ ನಂತಹ ಓ.ಪಿ.ಇ.ಸಿ. (OPEC) ರಾಷ್ಟ್ರಗಳಿಂದ ಆಗುತ್ತಿದೆ. ಇದರಿಂದ ರಾಷ್ಟ್ರ ಎರಡು ವಿಧದ ಅಪಾಯಕ್ಕೆ ಸಿಲುಕಬಹುದಾಗಿದೆ. ಮೊದಲನೆಯದು ಅಪಾರ ಬೇಡಿಕೆಯನ್ನು ಪೂರೈಸಲು ತೆರಬೇಕಿರುವ ವಿದೇಶಿ ವಿನಿಮಯವಾದರೆ, ಎರಡನೆಯದು ಎಷ್ಟೇ ಹಣ ಕೊಟ್ಟರೂ ಸಹ ಓಪಿಇಸಿ ರಾಷ್ಟ್ರಗಳು ನಮ್ಮ ರಾಷ್ಟ್ರಕ್ಕೆ ರಪ್ತು ಮಾಡಲು ಒಪ್ಪದಿದ್ದಲ್ಲಿ ರಾಷ್ಟ್ರದ ಕೈಗಾರಿಕೆಯ ಮೇಲೆ ಹಾಗೂ ಸಾರಿಗೆ ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಉಂಟಾಗುವುದು. ಕೈಗಾರಿಕೆಗಳು ತಟಸ್ಥವಾಗಬಲ್ಲವು.  ಪರಿಣಾಮ ಕೈಗಾರಿಕೆಗಳಿಂದ ರಫ್ತು ನಿಲ್ಲಬಹುದು. ನಿರುದ್ಯೋಗ ಬೆಳೆಯಬಹುದು. ಇದರಿಂದಾಗಿ ಮುಂದೊಮ್ಮೆ ನಾವು ಆರ್ಥಿಕ ದಿವಾಳಿತನಕ್ಕೆ ಸಿಲುಕಬಹುದಲ್ಲವೆ? ಒಮ್ಮೆ ಯೋಚಿಸಿ ನೋಡಿ. ಈ ಸಂಕಷ್ಟದ ದಿನಗಳನ್ನು ಸಮರ್ಥವಾಗಿ ಎದುರಿಸಬಲ್ಲ ಸಾಮರ್ಥ್ಯ ನಮ್ಮ ರಾಷ್ಟ್ರಕ್ಕಿದೆ, ಆ ಸಾಮರ್ಥ್ಯ ರಾಜ್ಯದ ರೈತರಿಗಿದೆ. ಆ ಸಮಯ ಎದುರಿಸಲು ಸನ್ನದ್ಧರಾಗಬೇಕಿದೆ. ಅದುವೇ ಜೈವಿಕ ಇಂಧನ ಕೃಷಿ.

ಹೊಂಗೆ, ಬೇವು, ಹಿಪ್ಪೆ, ಸೀಮಾರೂಬಾ, ಕಾಡುಹರಳುಗಳಂತಹ ಅನೇಕ ಮರಗಿಡಗಳ ಬೀಜಗಳಿಂದ ತೈಲ ಪಡೆದು ಈ ಜೈವಿಕ ಇಂಧನವನ್ನು  ಕಚ್ಚಾ ತೈಲಕ್ಕೆ ಪರ್ಯಾಯ ಇಂಧನವಾಗಿ ಬಳಸಬಹುದಾಗಿದೆ. ಇದರ ಜೊತೆಗೆ ದೊರಕುವ ಹಿಂಡಿ ಉತ್ತಮ ಸಾವಯವ ಗೊಬ್ಬರ. ಮರಗಳ ಎಲೆಯನ್ನು ಹಸಿರೆಲೆ ಗೊಬ್ಬರವಾಗಿಯೂ ಉಪಯೋಗಿಸಬಹುದಾಗಿದೆ. ಎಣ್ಣೆಯಿಂದ ಬಸ್ಸು, ಲಾರಿ, ಟ್ರಾಕ್ಟರ್, ಕಾರು, ಜೀಪುಗಳಂತಹ ವಾಹನಗಳ ಇಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡದೆ ಓಡಿಸಬಹುದು.  ಕಾರ್ಖಾನೆಗಳ ಯಂತ್ರಗಳಲ್ಲಿ ಡೀಸೆಲ್‌ಗೆ ಪರ್ಯಾಯವಾಗಿ ಈ ಜೈವಿಕ ಇಂಧನ ಬಳಸಬಹುದು. ರೈಲುಗಳನ್ನು ಸಹ ಓಡಿಸಲು ಸಾಧ್ಯವಿದೆ. ರಾಜ್ಯದ ಕೃಷಿ ವಿಶ್ವ ವಿದ್ಯಾಲಯ (ಯು.ಎ.ಎಸ್,) ಭಾರತೀಯ ವಿದ್ಯಾ ಮಂದಿರ (ಐ.ಐ.ಎಸ್.ಸಿ) ಗಳು ಇಂತಹ ಸಂಶೋಧನೆಯಲ್ಲಿ ತೊಡಗಿವೆ.  ಈಗಾಗಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆ.ಎಸ್.ಆರ್.ಟಿ.ಸಿ.) ೫೦೦ ಬಸ್ಸುಗಳನ್ನು ಓಡಿಸುತ್ತಿದೆ. ಹಂತಹಂತವಾಗಿ ಮುಂಬರುವ ದಿನಗಳಲ್ಲಿ ೫೫೦೦ ಬಸ್ಸುಗಳು ಪರಿಸರ ಸ್ನೇಹಿಯಾದ ಬಯೋ ಡೀಸಲ್‌ನಿಂದ ಓಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕ್ರಮ ಪರಿಸರ ಸ್ನೇಹಿ.  ಈ ಕಾರ್ಯ ಕೆ.ಎಸ್.ಆರ್.ಟಿ.ಸಿ. ಗಳಂತಹ ಸಾರಿಗೆ ಸಂಸ್ಥೆಗಳಿಗೆ ಹಾಗೂ ಜೈವಿಕ ಇಂಧನ ಉತ್ಪಾದನೆ ಕಾರ್ಖಾನೆಗಳಿಗೆ ಲಾಭ ದೊರಕಿಸುವುದಲ್ಲದೇ, ವಿದೇಶೀ ವಿನಿಮಯ ಉಳಿಕೆ ಆಗಿ ಹಾಗೂ ಪರಾವಲಂಬನೆ ಕಡಿಮೆಗೊಳಿಸಿ ಸ್ವಾವಲಂಬನೆಗೆ ಹಂತ ಹಂತವಾಗಿ ದಾರಿ ಮಾಡಿಕೊಟ್ಟಂತಾಗುತ್ತದೆ.

ವಿವಿಧ ರೀತಿಯ ಮೌಲ್ಯವರ್ಧನೆ ಚಟುವಟಿಕೆಗಳನ್ನು ಗ್ರಾಮೀಣ ಪ್ರದೇಶದಲ್ಲೇ ಮಾಡಬಹುದಾಗಿದ್ದು, ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಠಿಯ ಅವಕಾಶಗಳನ್ನು ಹೆಚ್ಚಿಸುವುದಲ್ಲದೇ, ರೈತರಿಗೆ ಹೆಚ್ಚುವರಿ ಆದಾಯ ತರಬಲ್ಲದು. ಗ್ರಾಮೀಣ ಪ್ರದೇಶದ ಇಂಧನದ ಅವಶ್ಯಕತೆಯನ್ನು ಅಲ್ಲೇ ತಯಾರಾದ ಇಂಧನಗಳಿಂದ ಪೂರೈಸಿ, ಹೆಚ್ಚುವರಿ ಇಂಧನವನ್ನು ಮಾರಾಟ ಮಾಡಬಹುದಾಗಿದೆ.

ಜೈವಿಕ ಇಂಧನ ಸಸಿಗಳನ್ನು ಕೃಷಿಗೆ ಯೋಗ್ಯವಾಗಿರದ ರಾಜ್ಯದ ೧೩.೫ ಲಕ್ಷ ಹೆ. ಬರಡು, ಬಂಜರು ಭೂ ಪ್ರದೇಶಗಳಲ್ಲಿ, ನದಿ, ಕಾಲುವೆ, ಹಾಗೂ ರೈತರ ಜಮೀನುಗಳ ಬೇಲಿ, ಬದುಗುಂಟ, ಸರ್ಕಾರಿ ಹಾಗೂ ಖಾಸಗಿ ಜಮೀನುಗಳಲ್ಲಿ ಳೆಸಬಹುದಾಗಿದೆ.  ಬಯಲು ಸೀಮೆ ಹಾಗೂ ಕಡಿಮೆ ಮಳೆಯಾಗುವ ಭೂ ಪ್ರದೇಶಗಳಲ್ಲಿ ಜೈವಿಕ ಇಂಧನ ಸಸಿಗಳನ್ನು ಸುಲಭವಾಗಿ ಬೆಳೆಸಬಹುದಾಗಿದೆ. ಅರಣ್ಯೀಕರಣದ ಜೊತೆಗೆ ಪರಿಸರ ಮಾಲಿನ್ಯ ತಡೆಗಟ್ಟಬಹುದಾಗಿದೆ. ಉತ್ತಮ ಸಾವಯವ ಗೊಬ್ಬರದ ಜೊತೆಗೆ ರಾಷ್ಟ್ರದ ಇಂಧನ ಸುರಕ್ಷತೆಗೆ ಭದ್ರ ಬುನಾದಿ ಹಾಕಬಹುದಾಗಿದೆ.