ಆಟ ನೈಸರ್ಗಿಕ:

ಗಾಳಿಯಲೆಗೆ ಗಿಡಬಳ್ಳಿಗಳ ಕುಲುಕಾಟ, ಆಕಾಶದಲ್ಲಿ ಮೋಡಗಳ ಅಲೆದಾಟ, ಹಸು ಹಕ್ಕಿಗಳ ಹಾರಾಟ, ಸಮುದ್ರದಲೆಗಳ ಕುಣಿದಾಟ ಮುಂತಾದವುಗಳನ್ನು ಅವಲೋಕಿಸಿದರೆ ಪ್ರಕೃತಿಯೇ ಕ್ರೀಡಾಸಕ್ತವಾಗಿರುವಂತೆ ತೋರುತ್ತದೆ. ಪ್ರಪಂಚದ  ಜೀವಿಗಳಿಗೆ ಆಟ ನೈಸರ್ಗಿಕವಾಗಿ ಬಂದ ಆಸ್ತಿಯಾಗಿದೆ. ಆಟ ತಾಯಿಯ ವಾತ್ಸಲ್ಯದ ತೊಟ್ಟಿಲಿನಲ್ಲಿಯೇ ಉಗಮ ಹೊಂದಿದೆ. ಅವಳ ವಾತ್ಸಲ್ಯದ ಬೆಸುಗೆ ಆಟಗಳಿಗೆ ಪ್ರೇರಕಶಕ್ತಿಯಾಗಿದೆ. ತಾಯಿಯ ವಾತ್ಸಲ್ಯದಿಂದ ಪುಟಗೊಂಡ ಮನಸ್ಸು ಪಕ್ಕ ಬಿಡಿಸಿ ಆಡಬಯಸುತ್ತದೆ. ಬೆಕ್ಕಿನ ಮರಿ, ನಾಯಿಯ ಮರಿ ತಾಯಿಯ ಮೊಲೆಯುಂಡು ಬಲ ಕುಣಿಸುತ್ತ ತಾಯಿಯೊಡನೆ ಚಿನ್ನಾಟವಾಡುವುದನ್ನೂ ಚೆಂಡು, ಕಾಗದಚೂರು, ಸದೆ ಸೊಪ್ಪಿನ ಜೊತೆಯಲ್ಲಿ ‘ಚೆಲಮಿಣಿ’ (ಚೆಲ್ಲಾಟ) ಯಾಡುವುದನ್ನು ನೋಡದವರಿಲ್ಲ. ದನಕರು, ಕುರಿಗಳ ‘ಚೆಂಗ್ಹರಿಯುವಿಕೆ” (ಚೆಂಗನೆ ನೆಗೆತ) ಕಾದಾಟ, ಕೋಳಿ ಗುಬ್ಬಿಗಳ ಚೆಲ್ಲಾಟ, ಕಾದಾಟಗಳನ್ನು ಕಾಣದವರಿಲ್ಲ. ಮಾನವಶಿಶು ಹುಟ್ಟಿದ ಪ್ರಾರಂಭದ ದಿನಗಳಲ್ಲಿ ಬಹುವೇಳೆಯನ್ನು ನಿದ್ದೆಯಲ್ಲಿ ಕಳೆಯುತ್ತದೆ, ಹಸಿದಾಗ, ಅಸ್ವಾಸ್ಥ್ಯಗೊಂಡಾಗ ಅಳುವದು. ಹೊಟ್ಟೆ ತುಂಬಿದಾಗ, ಸಂತಸಗೊಂಡಾಗ ಒಂದಿಲ್ಲೊಂದು ಬಗೆಯ ಆಟದಲ್ಲಿ ಲೀನವಾಗುವದು. ತನ್ನ ಮಿಂಚುಗಣ್ಣುಗಳನ್ನು ಅತ್ತಿತ್ತ ಹೊರಳಿಸಿ, ಕೈಕಾಲು ಬಡಿದು ನಗುವದು. ತನ್ನ ಕೈ, ಹಸ್ತಮುಷ್ಟಿಗಳನ್ನು ತನ್ನಿಷ್ಟ ಬಂದಂತೆ ಬೀಸಿ, ತಿರುಗಿಸಿ ಅದರ ಚಲನವಲನದ ಚೆಂದ ಕಂಡು ತಾನೆ ನಲಿಯುವದು. ಅಂಗಾತ ಮಲಗಿದಾಗ ಪಾದಗಳನ್ನೆತ್ತಿ ಅಲುಗಾಡಿಸಿ ನೋಡಿ ಕೇಕೆ ಹಾಕುವದು. ಸ್ವಲ್ಪ ಹರಿದಾಡುವಂತಾದ ಮೇಲೆ ಅಲ್ಲಿ ಇಲ್ಲಿ ಹರಿದಾಡಿ ಕೈಗೆ ಸಿಕ್ಕ ವಸ್ತು ಒಡವೆಗಳನ್ನು ಆಚೆ ಈಚೆ ತಳ್ಳಿ ತೂರಿ, ಮುಟ್ಟಲು ಹವಣಿಸುತ್ತ ತನ್ನಷ್ಟಕ್ಕೆ ತಾನೇ ಆಟವಾಡುವದು. ನಾಯಿಯ ವಾತ್ಸಲ್ಯ ರಸಧಾರೆಯ ಸೇಚನವಾದಾಗಲಂತೂ ಮಗುವಿನ ಆಟ ಲಹರಿಗೂಡಿ ಮುಗಿಲೆತ್ತರಕ್ಕೆ ನೆಗೆಯುವದು. ತಾಯಿಯ ಮೊಲೆ ಹಾಲು ಕುಡಿದು ತೃಪ್ತಿಪಟ್ಟ ಮಗು ತಾಯಿಯ ತೊಡೆಯ ಮೇಲೆಯೇ ಹಿಂಜೋಲಿ ಮುಂಜೋಲಿ ಹೊಡೆದು ತಾಯಿಯನ್ನು ಆನೆಯಾಟಕ್ಕೆ ಪ್ರೇರೇಪಿಸುವದು. ತನ್ನ ತೋಳನ್ನು ತಾನೇ ಬೀಸಿ ಬೀಸಿ ತಾಯಿಯನ್ನು ’ತೋಳೇ ತೊಳೇ | ತೋಳನಾಡೇ ಬಂದಾಳಮ್ಮ | ಒಟ್ಟಾಸೇರಿಟ್ಟಾಳಮ್ಮಾ | ಹಳ್ಲಾ ಹುಕ್ಕೇ ಮೆಂದಾಳಮ್ಮಾ| ಅಪ್ಪಾ ಆವ್ವಿ ಕುಲ್ವರಂದೇ | ಒಡೇ ಕೇ ಬಂದಾಳಮ್ಮಾ |”  ಎಂಬ ಹಾಡನ್ನು ಹಾಡಲು ಚಾಲನೆ ಕೊಡುವದು. ತಾಯಿಯ ಸೆರಗಿನಲ್ಲಿ ತನ್ನ ಮುಖ ಮುಚ್ಚಿ, ತೆರೆದು ‘ಹುಮ್ಮಾ’ ಎಂದು ನಕ್ಕು  ತಾಯಿಯನ್ನು  ನಗಿಸುವದು, ಕೈ ಬೆರಳುಗಳನ್ನು ಮುಚ್ಚಿ ಬಿಚ್ಚಿ ತೋರುತ್ತ ತಾಯಿಯನ್ನು “ತಾನ್‌ಗುಬ್ಬಿ ತಂತಾನ್ ಗುಬ್ಬಿ” ಎಂದು ಹಾಡಲು ಉದ್ದೀಪಿಸುವದು.

ಸ್ವಲ್ಪ ಓಡಾಡಲು ಕಲಿತಮೇಲೆ ಮಗು ಕತ್ತಲೆಕೋಣೆಯ ಕದದ ಮೂಲೆಯೊಳಗೆ, ತಾಯಿಯ ಸೆರಗಿನ ಮರೆಗೆ, ಹಿರಿಯರ ಬೆನ್ನು ಹಿಂದೆ ಅಡಗಿ, ‘ಕೂ ಹಾಕಿ’, “ನಾನೆಲ್ಲಿದ್ದೇನೆ ತೋರಿಸು” ಎಂದು ಹೇಳಿ, ಹಿರಿಯರು ತೋರಿಸಲು ಬಂದಾಗ ಸಂತೋಷಾತಿರೇಕದಿಂದ ಚಪ್ಪಾಳೆ ತಟ್ಟುತ್ತ ತಾನೆ ಪ್ರಕಟವಾಗುವದು ಬಲು ಮೋಜು. ಇಂತಹ ಆಟಗಳನ್ನೇ ಕ್ರಮಬದ್ಧವಾಗಿ  ಆಡಿದರೆ, ಆಡಗಾಟವಾಗುವದು. ಈ ಘಟನೆಗಳನ್ನೆಲ್ಲ ನೋಡಿದ ಯಾರಿಗೆ ತಾನೇ ಆಟ ನೈಸರ್ಗಿಕವೆನಿಸಲಿಕ್ಕಲ್ಲ?

ಆಟಗಳ ವಿಕಾಸಕ್ರಮ:

ಮಕ್ಕಳು ದೊಡ್ಡವರಾದ ಮೇಲೆ ತಾಯಿಯ ತೊಡೆಬಿಟ್ಟು ಇತರ ಮಕ್ಕಳ ಜೊತೆಯಲ್ಲಿ ಬೆರೆಯುವರು. ಆಗ ತಾಯಿಯ ತೊಡೆಯ ಮೇಲಿನ ಆಟಗಳು ಮಗುವಿನ ಚಿತ್ತಭಿತ್ತಿಯಿಂದ ಹಿಂದೆ ಸರಿಯುವವು. ಆಗ ಮಕ್ಕಳು ಅಂಗಳಕ್ಕೆ, ಆಟದ ಬೈಲಿಗೆ ಬರುವರು. ಬೈಲಲ್ಲಿ ಮಣ್ಣಾಟ, ಹರಳಾಟ, ಕುಂಟಾಟ, ಎಳೆದಾಟ, ಸುತ್ತಾಟ, ಗುರಿ ಹೊಡೆದಾಟ, ಬೆನ್ನಟ್ಟಾಟ ಮುಂತಾದ ಬೇರೆ-ಬೇರೆ ಆಟಗಳಲ್ಲಿ ಇತರ ಹುಡುಗರ ಜೊತೆ ಬೆರೆತು, ಆಡಿ ನಕ್ಕು ನಲಿಯುವರು. ಆಟಗಾರರು ಯಾರೂ ಇಲ್ಲದ ಸಂದರ್ಭದಲ್ಲಿ ಮಗು ಕಬ್ಬಿಣ, ಬಿದಿರು ಅಥವಾ ಬೆತ್ತದಿಂದ ತಯಾರಿಸಿದ ದೊಡ್ಡ ಗಾಲಿಯನ್ನು ಕೋಲೊಂದರ ಸಹಾಯದಿಂದ ದಾರಿಯ ಮೇಲೆ ಉರುಳಿಸುತ್ತ ಬಿಡುವದು. ಮರದ ಚಿಕ್ಕ ಚಕ್ರಕ್ಕೆ ಬೆಣ್ಣೆಯನ್ನಾಗಲೀ, ಮೊಳೆಯನ್ನಾಗಲೀ ಹೊಡೆದ ಕೋಲನ್ನು ಚಕ್ರ ತಿರುಗುವಂತೆ ಜೋಡಿಸಿ ಉರುಳಿಸುವದು,  ಬಗರಿ, ‘ಚಣಚಣ ಬಗರಿ’ಗಳನ್ನು ತಿರುಗಿಸಿ ತನ್ನಷ್ಟಕ್ಕೆ ತಾನೇ ಆಡಿ ಸಂತೋಷಪಡುವದು.

ಮಳೆಗಾಲ ಬಂತೆಂದರೆ ಮಕ್ಕಳಿಗೆ ಹಿಗ್ಗು, ಓಣಿಯ ನೀರಿನಲ್ಲಿ ಕಾಗದದ ದೋಣಿಗಳನ್ನು ಬಿಡುವರು. ನೀರುಗುಳ್ಳೆಗಳ ವರ್ಣಮಯ ವೈವಿಧ್ಯವನ್ನೂ, ಚೆಲುವನ್ನೂ ಕಂಡು ನಲಿದಾಡುವರು. ‘ಬಾರೋ ಬಾರೋ ಮೊಳಿಯ | ಕೊಡಿತಾರೋ ಸುಬ್ರಾಯ್ ಎನ್ನುತ್ತ ನವಿಲಿನಂತೆ ನರ್ತಿಸುವರು. “ಮೊಳಿಯೇ ಮೊಳಿಯೇ| ನಿನ್ನಾ ಗಂಡಾ ಜಾಲೀಗ್‌ಹೋಗ್ಯಾ |  ಜಾರ್ಕ ಬೆದ್ರೆ ಹಿಡ್ವರಿಲ್ಲಾ ತಡ್ವರಿಲ್ಲಾ | ಹನ್‌ಕಡಿಯೇ ಹನ್ ಕಡಿಯೇ |” ಎಂದು ಮಳೆಯನ್ನು ಹೊಳುವಾಗಿಸಲೆಂದು ಕುಣಿಯುವರು. ಮಳೆಗಾಲದಲ್ಲಿ ಒಳಂಗಣ ಆಟಗಳೇ ಹೆಚ್ಚಾದರು ಮಳೆ ತುಸು ದೂರ ಸರಿಯಿಂತೆಂದರೆ ಮಕ್ಕಳೆಲ್ಲ ಅಂಗಳದಲ್ಲಿ ನೆರೆಯುವರು. ಗೋಲಿಯಾಟ, ಗೊರಟಾಟ, ಹಾಣೆಯಾಟಗಳು ಮರೆದಾಡುವವು. ಚಳಿಗಾಲದಲ್ಲಿ ಗಾಳಿಪಟ ಹಾರಿಸುವರು. ಆಕಾಶಬುಟ್ಟಿ ತೂಗುಬಿಟ್ಟು ನಲಿಯುವರು. ಗದ್ದೆ ಕೆಲಸದಿಂದ ವಿಶ್ರಾಂತ ಪಡೆಯುತ್ತಿರುವ ಹಿರಿಯರೂ ಉತ್ಸಾಹಗೊಂಡು ಕೋಳಿ ಕಾಳಗ ಹಚ್ಚಿ ಮೈಮರೆಯುವರು. ಚೆಂಡಾಟ, ಎಳೆದಾಟ, ಗುರಿಯೆಸೆದಾಟ ಮುಂತಾದ ಹೊರಂಗಣದ ಆಟಗಳನ್ನು ಬಾಲಕರೂ, ತರುಣರೂ ಚಳಿಗಾಲ ಬೇಸಿಗೆಗಳಲ್ಲಿ ಹೆಚ್ಚಾಗಿ ಆಡುವರು.

ಆಟದಲ್ಲಿ ಅನುಕರಣೆ:

ಮಕ್ಕಳ ಅನೇಕ ಆಟಗಳು ನಮ್ಮ ಸುತ್ತಮುತ್ತಣ ಸಮಾಜದ ಅನುಕರಣೆಯಿಂದ ಪುಷ್ಟಿಗೊಂಡಿವೆ. ನಮ್ಮ ಸಮಾಜದ ಸುವರ್ಣ ಚಿತ್ರಗಳಿಗೆ ಈ ಆಟಗಳು ರನ್ನ ಗನ್ನಡಿಯಾಗಿವೆ. ಉತ್ತರಕನ್ನಡ ಜಿಲ್ಲೆಯ ಬಂಡಿಹಬ್ಬದ ಕಳಸಗಳ ಮೆರವಣಿಗೆ ಚಿತ್ತಾಕರ್ಷಕವಾಗಿದೆ. ಕಳಸದ ಮೆರವಣಿಗೆಯನ್ನು ಕಂಡು ಆಕರ್ಷಿತರಾದ ಮಕ್ಕಳು ‘ಚಿಂಡಪುಳಿಗೆ’(ತೀರ ಎಳೆಯ ತಂಗಿನ ಮಿಳೆ)’ ತೆಂಗಿನ ಗರಿಯ ಕಡ್ಡಿಯನ್ನು ಕಮಾನಿನಂತೆ ಚುಚ್ಚಿ, ಇನ್ನೊಂದು ಕಡ್ಡಿಯನ್ನು ಕಮಾನಿಗಿಂತ ತುಸು ಮೇಲಕ್ಕೆ ಹೋಗುವಂತೆ ಮಧ್ಯದಲ್ಲಿ ನೆಟ್ಟಗೆ ಚುಚ್ಚಿ, ತಟ್ಟಿ (ತಡಿಕೆ)ಯನ್ನು ನೆನದಂತ ಅಡ್ಡಕಡ್ಡಿಗಳನ್ನು ಜೋಡಿಸಿ ಮಧ್ಯದ ರಂಧ್ರಗಳಲ್ಲಿ ಹೂವನ್ನು ಸಿಕ್ಕಿಸುವರು.  ಹೀಗೆ ತಯಾರಾದ ಕಳಸವನ್ನು ತಲೆಯ ಮೇಲೆ ಹೊತ್ತು ಅಣಕು ಬಂಡಿಹಬ್ಬವನ್ನು ಆಚರಿಸುತ್ತಾರೆ.

ಕರಾವಳಿಯಲ್ಲಿ ಯಕ್ಷಗಾನವು ಅತ್ಯಂತ ಜನಪ್ರಿಯ ಕಲೆ, ಇಲ್ಲಿ ಯಕ್ಷಗಾನ ಬಯಲಾಟವಾಗದ ಹಳ್ಳಿಯೇ ದೊರೆಯಲಾರದು. ಯಕ್ಷಗಾನ ನೋಡಿದ ಮಕ್ಕಳು ಮರುದಿನವೇ ಗದ್ದೆಯ ಬೈಲಲ್ಲಿಯೋ, ಹಣ್ಣು ತುಂಬಿದ ಮಾವಿನ ಮರದ ಕೆಳಗೋ ಯಕ್ಷಗಾನದ ಆಟವಾಡುವರು. ಒಡಕು ಟಿನ್ನಿನ ಡಬ್ಬಿಯೇ ಇವರ ಮೃದಂಗ. ಹರಕು ಗೋಣಿಯ ತಟ್ಟು, ಕಂಬಳಿಯ ತುಂಡು  ಯಕ್ಷಗಾನದ ಪರದೆ, ಅಡಕೆ ಗರಿಯಿಂದ ತಲೆಯ ಆಳತೆಗೆ ಹೊಂದುವಂತೆ ರಚಿಸಿದ ಇರಿಕೆಯೇ ಪಗಡೆ.  ಅಡಕೆ ಗರಿಯಿಂದ  ತಲೆಯ ಅಳತೆಗೆ ಹೊಂದುವಂತೆ ರಚಿಸಿದ ಇರಿಕೆಯೇ ಪಗಡೆ. ಪಗಡೆಯನ್ನು ಮಾವಿನ ಎಲೆ ಸೆಟ್ಟೂ  ತಯಾರಿಸುವುದುಂಟು. ಈ ಪಗಡೆಗಳನ್ನು  ಹೂವಿನಿಂದ ಅಲಂಕರಿಸಿ ತಲೆಗೆ ಕಟ್ಟಿಕೊಳ್ಳುವರು. ಹಂಚು, ಮಸಿ, ಸೇಡಿ ಮುಂತಾದವುಗಳನ್ನು ತೇದು ಬಣ್ಣ ತಯಾರಿಸಿ, ಗುಳ್ಳೆಯ  ಓಡುಗಳನ್ನು ತೂತು ಮಡಿ, ಸುರಿದು ತಯಾರಿಸಿದ ಗೆಜ್ಜೆಯನ್ನು ಕಾಲಿಗೆ ಕಟ್ಟಿಕೊಂಡು ಡಬ್ಬಿಯ ಹೊಡೆತದ ಗತ್ತಿಗೆ ತಪ್ಪೋ ಒಪ್ಪೋ ಕುಣಿಯುವರು; ತಮಗೆ ತಿಳಿದಂತೆ ಅರ್ಥ  ಹೇಳುವರು. ಯುದ್ದ ಮಾಡುವರು. ಇವರ ಯಕ್ಷಗಾನದಲ್ಲಿ ಗೆಲುವು ದೈಹಿಕಶಕ್ತಿಯಿದ್ದವರನ್ನೇ ಸೇರುವುದುಂಟು. ಭೀಮನ ಬದಲು ದುರ್ಯೋಧನೂ ಗೆಲ್ಲಬಹುದು. ಸ್ವಲ್ಪ ಬುದ್ದಿಬಲಿತ ಮಕ್ಕಳು ಸರಿಯಾದ ರೀತಿಯಲ್ಲಿಯೇ ಅನುಕರಿಸಿ ನೆರೆದವರನ್ನು ರಂಜಿಸುವ ಉದಾಹರಣೆಗಳೂ ಇಲ್ಲದಿಲ್ಲ.

ಮಕ್ಕಳಿಗೆ ಮಣ್ಣೆಂದರೆ ತುಂಬ ಪ್ರೀತಿ, ಮಣ್ಣಿರುವ ಸ್ಥಳವೇ ಅವರ ಆಟದ ರಂಗಭೂಮಿ, ಅವರ ಆಟದ ಸಾಮಗ್ರಿಗಳು ಕೂಡಾ ಹೆಚ್ಚಾಗಿ ಕಲ್ಲು ಮಣ್ಣುಗಳೇ,  ಗಿಡಮರಗಳಿಗೆ ತಮ್ಮ ತಾಯಿ ನೀರು ಹನಿಸುವುದನ್ನೂ, ಅಡಿಗೆ ಮಾಡುವುದನ್ನೂ ನೋಡಿದ ಮಕ್ಕಳು ಮಣ್ಣನ್ನು ಗೆರಟೆಯಿಂದ ಇಲ್ಲವೆ ಬೊಗಸೆಯಿಂದ ಒಯ್ದು ಗಿಡಗಳಿಗೆ ಹಾಕಿ, ನೀರು ಹನಿಸುವುದನ್ನು ಅನುಕರಿಸುವರು, ಅಡಿಗೆಯ ಆಟವಾಡುವರು. ಮೂರು ಕಲ್ಲಿಟ್ಟು ಒಲೆ ತಯಾರಿಸಿ ಅದರ ಮೇಲೆ ಗೆರಟೆ ಇಡುವರು. ತೆಂಗಿನ ಗರಿಯ ಕಡ್ಡಿಗೆ ಚಿಪ್ಪಿ ಸಿಕ್ಕಿಸಿ ಸವಟು ಮಾಡುವರು. ಗೆರೆಟೆಯಲ್ಲಿ ಮಣ್ಣುಹಾಕಿ ಅನ್ನ, ಪಾಯಸ, ಪರಮಾನ್ನಗಳನ್ನೆಲ್ಲ ಮಾಡುವರು. ಸ್ವಲ್ಪ ಬುದ್ದಿ ಬಲಿತವರು ಅನ್ನ, ಪಾಯಸ, ಹುಳಿಗಳನ್ನು ಪ್ರತ್ಯೇಕಿಸಲು ಮಣ್ಣನಲ್ಲಿ ಬಾಳೆಯ ಹೂವಿನ ಚೂರು, ಎಲೆಯ ಚೂರು, ಚೆಂಡ್‌ಪುಳಿಗಳ ಚೂರನ್ನು ಸೇರಿಸುವರು.

ದೊಡ್ಡ ಮಕ್ಕಳು ತಮಗಿಂತ ಚಿಕ್ಕ ಮಕ್ಕಳನ್ನು ಕರೆದು ಅಥವಾ ಗೊಂಬೆ ತಂದು ಮದುವೆಯಾಟ ಆಡುವರು. ತಾವು ಮದುವೆ ನಡೆದಾಗ ನೋಡಿದ ಅನೇಕ ಚಡಂಗಗಳನ್ನು ತಪ್ಪದೇ ಅನುಕರಿಸುವರು. ಮಾವಿನ ಎಲೆ, ಕಲ್ಲು ಹರಳುಗಳೇ ಅವರ ಮದುವೆಯ ವೀಳ್ಯಗಳು, ಮಾವಿನ ತಳಿರು, ಹೂಗಳು ಇವರ ಬಾಸಿಂಗ ತೊಂಡಿಲುಗಳು, ನೆರೆದ ಹಿರಿಯ ಹುಡುಗರೇ ವಧೂವರರ ತಂದೆ ತಾಯಿ, ಪುರೋಹಿತ, ಕುಂಬಾರ, ಮಡಿವಾಳ ಮುಂತಾದವರ ಪಾತ್ರವಹಿಸುವರು. ಬಾಯಿಯೂದಿ ವಾದ್ಯ ಬಾರಿಸುವರು. ಹೀಗೆ ಇವರ ಮದುವೆಯಾಟ ಮನೋಜ್ಞ.

ಮಕ್ಕಳ ಅನೇಕ ಆಟಗಳು ಹಿಂದೆ ಆಗಿ ಹೋದ ಯಾವುದೋ ಘಟನೆಯ, ಸಾಮಾಜಿಕ ಸಮಸ್ಯೆಯ. ಇಲ್ಲವೇ ಕಥೆಯ ಅನುಕರಣವಾಗಿರುವದುದು ಅನೇಕ ಆಟಗಳಿಂದ ವಿದಿತವಾಗುತ್ತದೆ. ಈ ಸಂಗ್ರಹದಲ್ಲಿಯೆ ‘ಇಟ್ಟು ಇಟ್ಟು ಗುಂಜಿ’,  ‘ಅಜ್ಜೀ ರಾಮಾ ನೀರೀಗ್ಹೋದಾ’ ‘ಹೆರಿಯಣ್ಣ ಅಂಜಂಚೇ’ ಬೆಳೆ ಮುಂತಾದ ಆಟಗಳು ಇಂತಹ ಅನುಕರಣೆಗೆ ಉತ್ತಮ ನಿರ್ದೇಶನಗಳು, ’ಅಂಜಂಜೇ ಬೆಳೆ’ ಯಂತಹ ಆಟಗಳಲ್ಲಿಯ ತಾತ್ವಿಕ ಹಿನ್ನೆಲೆ ದಂಗು ಬಡಿಸುವಂತಿದೆ.

ಅನೇಕ ಆಟಗಳು ಯುದ್ಧ, ಬೇಟೆ ಮುಂತಾದವುಗಳ ಅನುಕರಣೆಗಳಾಗಿವೆ. ಇವುಗಳಿಗೆ ಉದಾಹರಣೆಯಗಿ ಗುಡು-ಗುಡು ಚೆಂಡಕ್ಕೇ, ಗಿಡಗನ ಸೋಡಿ, ತೋಳನ ಆಟ, ಬಲೆ ಆಟ ಮುಂತಾದ ಆಟಗಳನ್ನು ಹೆಸರಿಸಬಹುದು.

ಕೆಲವು ಆಟಗಳಲ್ಲಿ ಅಂಗಳ ಗುಡಿಸುವದು, ಬಟ್ಟಲು ಹಿಡುಕುವದು, ದನ ಬಿಡುವದು, ಸೊಪ್ಪು ಹುಲ್ಲು ಕೊಯ್ಯುವದು, ಕೋಳಿ ಮುಚ್ಚುವದು, ಮುರಿಬಿಡುವದು, ತೊಟ್ಟಿಲು ತೂಗುವದು ಮುಂತಾದ ದೈನಂದಿನ ಕೆಲಸಗಳನ್ನು , ಗಂಧ ತೇಯುವುದು ಗಂಧವಿಡುವದು, ಹೂಮುಡಿಯುವದು ಮುಂತಾದ ಅಲಂಕಾರ ವಿಧಾನಗಳನ್ನು ಆಡುತ್ತಲೇ ಅನುಕರಿಸುತ್ತಾರೆ, ಗುದ್ನಾಟ, ಹರಳಾಟಗಳಲ್ಲಿ ಈ ಅನುಕರಣೆ ಹೆಚ್ಚು, ಗದ್ದೆ ಬಿತ್ತುವದು, ಸವತೆ, ಕುಂಬಳ ನೆಡುವದು, ಬೆಳೆಕೊಯ್ಯುವುದು, ಬೆಳೆದ ಬೆಳೆಯನ್ನು, ಕಳ್ಳರೊಯ್ಯುವುದು, ಮನೆಕಟ್ಟುವದು, ಅಂಗಡಿ ಹಾಕುವದು – ಹೀಗೆ ನೂರಾರು ಬಗೆಯ ಅನುಕರಣೆಗಳು ಜನಪದ ಆಟಗಳಲ್ಲಿ ಮಿಳಿತವಾಗಿದ್ದು ನಮ್ಮ ಜನಪದ ಸಂಸ್ಕೃತಿಗೆ ಸಾಕ್ಷ್ಯಚಿತ್ರವನ್ನೊದಗಿಸುತ್ತವೆ.

ಆಟಗಳಲ್ಲಿ ಹೆಸರಿಸುವ ತಿಂಡಿ-ತಿನಿಸುಗಳು, ಗಿಡಮರ ಬಳ್ಳಿಗಳು, ಹೂ ಹಣ್ಣು ಕಾಯಿಗಳು, ಪ್ರಾಣಿ ಪಶುಪಕ್ಷಿಗಳು, ಬಳಸುವ ಒಡವೆಗಳು, ಮಾಡುವ ಉದ್ಯೋಗ ವ್ಯವಸಾಯಗಳು, ಸ್ಥಳನಾಮಗಳು ಆಟಗಳಲ್ಲಿಯ ಪ್ರಾದೇಶಿಕತೆಯನ್ನು ನಿರ್ದೇಶಿಸುತ್ತವೆ.

ಗಿಡಮಂಗನಾಟ, ತೋಳ ಕುರಿಯಾಟ, ಹುಲಿಕಲ್ಲೆ ಆಟ, ಆನೆ ನಾಯಿ ಆಟ, ಮುಂತಾದ ಆಟಗಳು ಪ್ರಾಣಿಗಳಿಗೂ ಮಾನವನಿಗೂ ಇರುವ ಪುರಾತನ ನಂಟಿನ ನಿದರ್ಶನಗಳು. ಪ್ರಕೃತಿ ಸೌಂದರ್ಯದ ಉಯ್ಯಾಲೆಯಲ್ಲಿ ತೇಲಾಡುವ ಮಾನವನಿಗೆ  ನಿಸರ್ಗದ ಸಾಮೀಪ್ಯ ಸದಾ ಸರ್ವದಾ ಬೇಕು, ಆ ತನ್ನ ಪರಿಸರದ ಸುತ್ತ ಮುತ್ತಲಿನ ಪಶುಪಕ್ಷಿಗಳ ಜೊತೆಯಲ್ಲಿ ಬೆರೆತಾಗ ಮಾತ್ರ ಆತನ ಆನಂದಕ್ಕೆ ಕೋಡು ಮೂಡಬಲ್ಲುದು.

ಅನೇಕ ಆಟಗಳು ಮತೀಯ ಪ್ರತಿಕ್ರಿಯೆಗಳಿಂದ ಉಗಮ ಪಡೆದಿವೆಯೆಂದು ಬಲ್ಲವರ ಮತ. ಆದರೆ ಇಂದು ಕಂಡುಬರುವ ಅನೇಕ ಆಟಗಳಲ್ಲಿ ಮತೀಯ ಅಭಿ ನಿವೇಶನಗಳು  ಕಡಿಮೆ. ಅಂತಹ ಆಟಗಳು ಕ್ರಮೇಣ ಕಣ್ಮರೆಯಾಗಿ ಹೋಗಿರಬೇಕೆನಿಸುತ್ತದೆ. ಉಳಿದುಕೊಂಡ ಕೆಲವು  ಆಟಗಳಲ್ಲಿ ಸುಗ್ಗಿಯ ಕೋಲಾಟ, ಕಳಸದಾಟ, ದೈಕಾಲಿನ ಮೊಸರು ಗಡಿಗೆಯೊಡೆಯುವ ವಿನೋದಾದಿ ಕ್ರೀಡೆಗಳನ್ನು ಹೆಸರಿಸಬಹುದು. ಹೀಗೆ ಈ ಆಟಗಳಲ್ಲಿ ಅಡಕವಾದ ಸಮಾಜದ ಅನುಕರಣೆ, ಸಾಮಾಜಿಕ ಸಮಸ್ಯೆ, ಮತೀಯ ಅಭಿನಿವೇಶಾದಿಗಳು ನಮ್ಮ ಜನಾಂಗದ ಸಂಸ್ಕೃತಿಯ ಅಧ್ಯಯನಕ್ಕೆ ಕನ್ನಡಿ ಹಿಡಿಯುತ್ತವೆ.

ಜನಪದ ಮತ್ತು ನಾಗರಿಕ ಆಟಗಳು:

ಆಟಗಳು ಮನುಷ್ಯನ ನೈಜ ಪ್ರವೃತ್ತಿಯ ಮೂಲಕ ಅವನ ಬಾಲ್ಯಾವಸ್ಥೆಯಲ್ಲಿಯೇ ಗಿಡಗಳಿಗೆ ಚಿಗುರೊಡೆಯುವಂತೆ ಸಹಜವಾಗಿಯೇ ಹುಟ್ಟಿಕೊಂಡುದುಂಟು. ಬಾಲ್ಯದ ನೈಸರ್ಗಿಕ ಚಟುವಟಿಕೆಗಳಲ್ಲಿ. ಸಮಾಜದ ಅನುಕರಣೆಗಳಲ್ಲಿ ವಿಕಾಸಗೊಂಡ ಮಗುವಿನ ದೇಹ, ಬುದ್ಧಿಗಳು ಅಂತರಂಗದ ಬೆಳವಣಿಗೆಯ ಜೊತೆಗೆ ಹೂತು ಫಲಿಸಿದವು. ಅವರವರ ವಯೋಮಾನಕ್ಕೆ ಭಾವಾನುಭೂತಿಗೆ ತಕ್ಕಂತೆ ಹಲವು ಬಗೆಯ ಆಟಗಳು ಒಂದೊಂದಾಗಿ ಸೇರಿಕೊಂಡವು. ಮೊಟ್ಟಮೊದಲು ಅಷ್ಟೊಂದು  ನಿಯಮಬದ್ದವಾಗಿರದ ಆಟಗಳು ಮಾನವ ಬೌದ್ಧಿಕ ಸಂಸ್ಕಾರದೊಂದಿಗೆ ಪ್ರೌಢವಾಗುತ್ತ, ನಿಯಮಬದ್ದ ಶಾಸ್ತ್ರೀಯ ಆಟಗಳು ಜನಪದ ಆಟಗಳಿಂದಲೇ ಉಗಮ ಹೊಂದಿವೆಯೆಂದು ಹೇಳಿದರೆ ತಪ್ಪಾಗದು.

ಆಟದ ವಸ್ತುಗಳು:

ಜನಪದ ಆಟಗಳು ತುಂಬಾ ಕಲಾತ್ಮಕವಾಗಿವೆ. ಕೆಲವು ಆಟಗಳಂತೂ ಉತ್ತಮ ಮನರಂಜನೆಯನ್ನೂ ತದಾತ್ಮ್ಯವನ್ನೂ ಒದಗಿಸಬಲ್ಲವು. ಜಾನಪದ ಆಟಗಳು ಸರಳ ಹಾಗೂ ಸುಲಭ, ಆಟಕ್ಕೆ ದುಡ್ಡು ತೆರಬೇಕಿಲ್ಲ. ಬೆಲೆಯಿಲ್ಲದ ಮಣ್ಣು, ಕಲ್ಲು, ಹರಳು, ಹಂಚಿನ ಕೊಪ್ಪರಿಗೆ ಚಿಪ್ಪಿ, ಬಳೆ ಓಡು, ಗೆರಟ ಚೂರು, ಎಲೆ, ಕಾಯಿ, ಕಾಳು, ಕಡ್ಡಿ, ಕಾಯಿ, ಸಿಪ್ಪೆ, ಮರದ ತುಂಡು, ಮಸಿ ಬೂದಿ, ಸೇಡಿ ಈ ಮುಂತಾದ ಕ್ಷುದ್ರ ವಸ್ತುಗಳಿದ್ದರಾಯ್ತು, ಕೆಲವು ಅನುಕೂಲಸ್ಥರು ಚೆನ್ನೆಮಣೆ, ತಾಬ್ಲಮಣಿ, ಮಾಡಿಸಿಟ್ಟುಕೊಳ್ಳುತ್ತಿದ್ದರು. ಅವು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿನವರೆಗೆ ಉಳಿದುಕೊಳ್ಳುತ್ತಿದ್ದವು. ಮಣೆಯಿಲ್ಲದವರು ನೆಲದಮೇಲೆ  ಸುಣ್ಣ ಅಥವಾ ಮಸಿಯಿಂದ ಅಂಕಣ ಬರೆದು ಆಡುತ್ತಿದ್ದರು. ಕೆಲವಡೆ ದನ ಕಾಯುವ ಮಕ್ಕಳು ಕಲ್ಲರೆಯ ಮೇಲೆ ಹೊಂಡ ತೋಡಿ, ಅರೆಯನ್ನೇ ಚೆನ್ನೆಮಣೆಯಾಗಿ ಉಪಯೋಗಿಸದ ಉದಾಹರಣೆಗಳಿವೆ. ಕೆಲವು ಜನಪದ ಆಟಗಳಿಗಂತೂ ಸಲಕರಣೆಗಳೇ ಬೇಕಾಗಿಲ್ಲ. ಕೇವಲ ಜನರಿದ್ದರಾಯ್ತು.

ಜನಪದ ಆಟಗಳಲ್ಲಿ ಅಜ್ಜಿಯ ಪಾತ್ರ:

ಕೆಲವು ಜನಪದ ಆಟಗಳಲ್ಲಿ ಅಜ್ಜಿಯ ಪಾತ್ರ ಹಿರಿದಾದುದು, ’ಗೌರವಯುತವಾದುದು. ಆಟಗಳ ಹುಟ್ಟು ಹಾಗೂ ಬೆಳವಣಿಗೆಯಲ್ಲಿ  ಅಜ್ಜಿಯ ಪಾತ್ರ ಪ್ರಮುಖವಾದುದೆನ್ನುವುದನ್ನು ನಾವು ಮರೆಯುವಂತಿಲ್ಲ. ಪಟ್ಟಣದ ದುಡಿಯುವ ಮಹಿಳೆಯರು. ತಮ್ಮ ಮಕ್ಕಳನ್ನು ಬಾಲವಾಡಿಗೆ ಕಳಿಸಿಯೋ ಕೆಲಸದವರ ಕಡೆಗೆ ಬಿಟ್ಟೋ ಶಾಲೆಗೆ ಅಟ್ಟಿಯೋ ದುಡಿಯಲು ಹೋಗುತ್ತಾರೆ. ಹೋಗುವಾಗ ನಸುಕಿನಲ್ಲಿಯೇ ಎದ್ದು ಮನೆಯ  ದೊಡ್ಡ ದೊಡ್ಡ ಕೆಲಸಗಳನ್ನು ಮುಗಿಸಿ ಚಿಕ್ಕಪುಟ್ಟ ಕೆಲಸಗಳನ್ನು ಅಜ್ಜಿಯ ಪಾಲಿಗೆ ಬಿಟ್ಟು ಹೋಗುತ್ತಾರೆ. ವಿಶೇಷ ಕೆಲಸಗಳಿಲ್ಲದ ಅಜ್ಜಿ ಹೊತ್ತು ಕಳೆಯಲು, ಮಕ್ಕಳ ರಂಪಾಟವನ್ನು ನಿಲ್ಲಿಸಲು, ಅವರ ಮನವನ್ನು ಆನಂದಗೊಳಿಸಲು ಆಟವಾಡ ಹಚ್ಚುವಳು. ಆ ಸಂದರ್ಭದಲ್ಲಿ ಮಕ್ಕಳನ್ನೇ ಆಡಬಿಟ್ಟರೆ ಆಟದ ತಿಳಿವಳಿಕೆಯುಳ್ಳ ಮಕ್ಕಳು ಆಡಿಯಾವು. ಆದರೆ ಅರಿಯದ ಮಕ್ಕಳು ಅಜ್ಜಿಯ ಸೀರೆಯ ಸೆರಗು ಸುತ್ತುತ್ತ ತಮಗೆ ಆಟವಾಡಿಸಲು ಕಾಡುವವು. ಆಗ ಅಜ್ಜಿ ಮಕ್ಕಳಿಂದ ತಪ್ಪಿಸಿಕೊಳ್ಳಲಾಗದೇ ತಾನೂ ಮಕ್ಕಳ ಆಟದಲ್ಲಿ ಒಂದು ಪಾತ್ರವಾಗುತ್ತಾಳೆ. ಮಕ್ಕಳ ಆಟಗಳಲ್ಲಿ ಅಜ್ಜಿಯದು ಹೆಚ್ಚಾಗಿ ನಿರ್ದೇಶಕ ಪಾತ್ರ. ಅಜ್ಜಿ ಈ ಹಿಂದೆ ವಹಿಸಿದ ಪಾತ್ರ ಇಂದಿನವರೆಗೂ ಉಳಿದುಕೊಂಡು ಬಂದಿದೆ. ಹಿಂದೆ ಆಟಗಳಲ್ಲಿ ಅಜ್ಜಿಯೇ ನೇರವಾಗಿ ಪಾತ್ರವಹಿಸಿದ್ದರಿಂದ ಅಜ್ಜಿಯ ಪಾತ್ರದಲ್ಲಿ ಹೆಚ್ಚಾಗಿ ಓಟ, ಕುಣಿದಾಟ, ಹುಡುಕಾಟಗಳಿಲ್ಲ. ಅಡಗಟ, ಬೆರಳಿನಾಟ, ಕಥನಪರ ಆಟಗಳಲ್ಲಿ ಅಜ್ಜಿಯ ಪಾತ್ರ ಪ್ರಮುಖವಾಗುತ್ತದೆ. ಆದರೆ ಈಗ ಅಜ್ಜಿಯ ಪಾತ್ರವನ್ನೂ  ಮಕ್ಕಳೇವಹಿಸಿ, ಅಜ್ಜಿಯ ಸ್ಥಾನವನ್ನು ಆಕ್ರಮಿಸಿದ್ದಾರೆ. ಆದರೆ ಅಜ್ಜಿಯೆನ್ನುವ ಪಾತ್ರ ಆಟದಲ್ಲಿ ಉಳಿದುಕೊಂಡು ಆಟದ ಬೆಳವಣಿಗೆಯಲ್ಲಿ ಅಜ್ಜಿ ಈ ಹಿಂದೆ ಆಡಿದ ಹಿರಿಯ ಪಾತ್ರದ ಸಂಕೇತವಾಗಿ ಉಳಿದಿದೆ.

ಇಂದು ಮಕ್ಕಳು ಅಜ್ಜಿಯ ಪಾತ್ರವಿದ್ದ ಆಟಗಳನ್ನು ಆಡುವಾಗ ದ್ವಿಪಾತ್ರವಹಿಸುತ್ತಾರೆ. ಕುಳಿತಲ್ಲಿ ನಿಷ್ಕ್ರಿಯವಾಗಿ ಕುಳ್ಳುವ ಅಜ್ಜಿಯ ಪಾತ್ರ ಮಕ್ಕಳ ಅಭಿರುಚಿಗೆ ಹೊಂದುವದಿಲ್ಲ. ಅದಕ್ಕಾಗಿ ಅಜ್ಜಿಯ ಕೆಲಸ ತೀರಿದ ಮೇಲೆ ಇನ್ನೊಬ್ಬರು ಅಜ್ಜಿಯಾಗಿ ಮೊದಲು ಅಜ್ಜಿಯಾದವರ ಆಟದಲ್ಲಿ ಬೆರೆಯುವರು. ಆದರೆ ಅಂಜಂಜೀ ಬೆಳೆ, ಕಣ್ಣೆ ಕಟ್ಟೇ ಕಾಡೇಗುಡೇ-ಮುಂತಾದ ಆಟಗಳಲ್ಲಿ ಅಜ್ಜಿಯ ಪಾತ್ರ ಕೊನೆಯವರೆಗೂ ಇರಬೆಕಾಗುತ್ತದೆ. ಅದಕ್ಕಾಗಿ ಮಕ್ಕಳ ಒತ್ತಾಯಕ್ಕೆ  ಮಣಿದು ಹಿರಿಯರೊಬ್ಬರು ಈ ಪಾತ್ರ ವಹಿಸುವ ಪ್ರಸಂಗಗಳೂ ಇಲ್ಲದಿಲ್ಲ. ನಿರುಪಾಯ ಪರಿಸ್ಥಿತಿಯಲ್ಲಿ ಆಟಗಾರರಲ್ಲೇ ಸ್ವಲ್ಪ ಹಿರಿಯರು ಅಜ್ಜಿಯ ಪಾತ್ರವಹಿಸುತ್ತಾರೆ.

ಗಡಿ (ಪಕ್ಷ) ಆರಿಸುವ ಕ್ರಮ:

ಜನಪದ ಆಟಗಳಲ್ಲಿ ಗಡಿ ಆರಿಸುವಾಗ ಅದೃಷ್ಟದ ಭರವಸೆಯಿಡುವುದೇ ಹೆಚ್ಚಿನದು, ಗಡಿ ಆರಿಸುವ ಅವರ ವಿಧಾನದಿಂದ ಅದು ಸ್ಪಷ್ಟವಾಗುತ್ತದೆ.

ಒಂದನೆಯ ಬಗೆ:

ಆಟವಾಡುವ ಮಕ್ಕಳೆಲ್ಲ ಒಂದೆಡೆ ಸೇರಿದಾಗ ಅವರಲ್ಲಿ ಹಿರೇಮಣಿಗಳಾದ ಇಬ್ಬರು ಎರಡು ಪಕ್ಷದವರಾಗಿ ನಿಲ್ಲುತ್ತಾರೆ. ಆಮೇಲೆ ಉಳಿದ ಹುಡುಗರೆಲ್ಲ ಇಬ್ಬಿಬ್ಬರು ಒಂದೊಂದು ಜೋಡಿಯಾಗಿ ಬೇರೆಬೇರೆ ಕಡೆಗೆ ಹೋಗುವರು. ದೂರಕ್ಕೆ ಹೋಗಿ ಪ್ರತಿಯೊಂದು ಜೋಡಿಯವರೂ ತಮ್ಮ ಮೂಲ ಹೆಸರನ್ನು ಬದಲಿಸಿ ಪತ್ತಿ (ಬೇರ) ಹೆಸರನ್ನು ಹಾಕಿಕೊಂಡು ಬಂದು ತಮ್ಮ ‘ಪತ್ತಿ’ ಹೆಸರು ಹೇಳಿ, ರಾಮ ಬೇಕೋ ಲಕ್ಷ್ಮಣ ಬೇಕೋ, ಹೂವು ಬೇಕೋ ಹಣ್ಣೂ, ಸೀತೆ ಬೇಕೋ ದ್ರೌಪದಿಯೋ ಎನ್ನುವರು. ಆಗ ಹಿರೇಮಣಿಗಳು ಅವರು ಹೇಳಿದ ಒಂದೊಂದು ಹೆಸರನ್ನು ಒಬ್ಬೊಬ್ಬರು ಬೇಡಿಕೊಳ್ಳುತ್ತಾರೆ. ಬೇಡಿದ ಹೆಸರಿನವರು ಬೇಡಿದವರಿಗೆ, ಉಳಿದವರು ಇನ್ನೊಬ್ಬರಿಗೆ ಸೇರುತ್ತಾರೆ.

ಎರಡನೆಯ ವಿಧಾನ:

ಆಟವಾಡ ಬಯಸಿದ ಮಕ್ಕಳೆಲ್ಲ ಒಂದೆಡೆ ಸೇರಿ ತಮ್ಮ ಕೈ ಹೆಬ್ಬೆರಳು ಹಾಗು ತೋರು ಬೆರಳುಗಳನ್ನು ಒಂದೆಡೆ ಕೂಡಿಸಿ ಹಿಡಿದು, ಮಧ್ಯದಲ್ಲಿ ಉಂಟಾದ ರಂಧ್ರದಲ್ಲಿ ಉಗುಳಬೇಕು. ಉಗುಳಿದಾಗ ಕೈಗೆ ಎಂಜಲು ಹತ್ತಿದವರು ಒಂದು ಗಡಿ ಎಂಜಲು ಹತ್ತದವರು ಇನ್ನೊಂದು ಗಡಿ-ಎಂದು ನಿರ್ಧರಿಸುವರು. ಈ ಬಗೆಯ ಕ್ರಮದಿಂದ ಗಡಿಸಂಖ್ಯೆ ಹೆಚ್ಚು ಕಡಿಮೆಯಾದಲ್ಲಿ ಹೆಚ್ಚಿಗೆ ಉಳಿದವರು ಹೆಸರು ಬದಲಿಸುವ ಒಂದನೆಯ ವಿಧಾನದಿಂದ  ಬೇರೆ ಬೇರೆ ಪಕ್ಷ ಸೇರುವರು.

ಮೂರನೇಯ ರೀತಿ

ಕುಪ್ಪನನ್ನು ತರುವ ಆಟದಂತಹ ಆಟಗಳಿಗೆ ಗಡಿಸಂಖ್ಯೆ ಸಮವಾಗಿರುವುದಿಲ್ಲ. ಇಂತಹ ಆಟಗಳಿಗೆ ಈ ಬಗೆಯ ವಿಧಾನದಿಂದ ಗಡಿ ಆರಿಸುವರು. ಆಟಗಾರೆಲ್ಲ ಸಾಲಾಗಿ ಹಿಂದೆ ಕೈಕಟ್ಟಿಕೊಂಡು ನಿಲ್ಲುವರು. ಇಬ್ಬರು ಪ್ರಮುಖ ಆಟಗಾರರು ಸಾಲಿನಿಂದ ಹೊರಗೆ ನಿಂತು ಅವರಲ್ಲೊಬ್ಬ ಒಂದು ಕಲ್ಲು ಹರಳನ್ನು ತೆಗೆದುಕೊಂಡು ಸಾಲಾಗಿ ನಿಂತವರ ಬೆನ್ನ ಹಿಂದೆ ಸುತ್ತಿ ಯಾರೊಬ್ಬನ ಕೈಯಲ್ಲಿ ಹರಳನ್ನು ಹಾಕುವನು. ಆಗ ಇನ್ನೊಬ್ಬ ಹರಳು ಇದ್ದವರನ್ನು ಗುರುತಿಸಿದರೆ ಅವನು ಗುರುತಿಸಿದವನ ಪಕ್ಷಕ್ಕೆ  ಹೋಗುವನು. ಗುರುತಿಸಲಾಗದಿದ್ದಲ್ಲಿ ಹರಳು ಹಾಕಿದವನ ಪಕ್ಷಕ್ಕೆ ಸೇರುವನು. ಹರಳು ಬೇಡುವವನು. ಗುರುತಿಸಿದರೆ, ಅವನು ಹರಳು ಹಾಕುವನು. ಇನ್ನೊಬ್ಬನು ಹರಳು ಬೇಡುವನು. ಹೀಗೆ ತಂತಮಗೆ ದೊರೆತ ಆಟಗಾರರನ್ನು  ತೆಗೆದುಕೊಂಡು ತಮ್ಮ ಮುಂದಿನ ಆಟ ಪ್ರಾರಂಭಿಸುವರು.

ನಾಲ್ಕಣೆಯ ವಿಧಾನ;

ಮಕ್ಕಳು ಕೆಲವು ಆಟಗಳಲ್ಲಿ ಹೇಳುವ, ಅಂಡ, ಭಂಡ ಕಡೆಗೇನ್‌, ಶಂಡ, ಡಾಮ್‌, ಡುಸ್‌, ಕಡೆಗೇನ್‌ಪುಸ್‌ಎಂದೋ, ‘ಅಡುಮ್‌, ತಡುಮ್‌, ತಡತಡ ಬಾಜಾ, ಅಕೋ, ಪೀಕೋ,  ಪಿರಿಂಗ್‌, ಪಕ್ಕ ಲಾಡ್‌, ಚಿಕ್ಕ, ಏನು, ದಯಾ, ಬುಡ್ಕ’-ಎಂದೊ ಹೇಳುತ್ತ ಆಟಗಾರರನ್ನು ಎಣಿಸುವರು, ಕೊನೆಯ ಶಬ್ದದಿಂದ ಎಣಿಸಲ್ಪಟ್ಟವನನ್ನು ಗುಂಪಿನಿಂದ  ಒಂದೆಡೆ ಬೇರೆ ನಿಲ್ಲಿಸಿ ಮತ್ತೆ  ಅದೇ ನುಡಿಗಣವನ್ನು ಹೇಳುವರು. ಇನ್ನೊಮ್ಮೆ ಕೊನೆಯ ಶಬ್ದ  ಬಂದವನನ್ನು ಮತ್ತೊಂದು ಪಕ್ಷಕ್ಕೆ ನಿಲ್ಲಿಸುವರು. ಹೀಗೆ ಆಟಗಾರರೆಲ್ಲ ಎರಡು ಪಕ್ಷವಾಗಿ ಒಡೆಯುವವರೆಗೆ ಎಣಿಸುವರು.

ಐದನೆಯ ವಿಧಾನ:

ಆಟಗಾರರಲ್ಲದ ಹಿರಿಯರೊಬ್ಬರು ಆಟಗಾರರ ವಯೋಮಾನ, ಶಕ್ತಿ ಸಾಮರ್ಥ್ಯ ಆಟದ ನೈಪುಣ್ಯಗಳನ್ನ ಅನುಲಕ್ಷಿಸಿ ಆಟಗಾರರನ್ನು ಎರಡು ಪಂಗಡಗಳಾಗಿ ಆಯ್ಕೆ ಮಾಡುವರು.

ಆರನೆಯ ವಿಧಾನ;

ಇಬ್ಬರು ನಾಯಕರು ಒಂದೊಂದು ಕಡೆ ನಿಂತುಕೊಳ್ಳುತ್ತಾರೆ. ಒಂದು ಪಕ್ಷದ ನಾಯಕ ಆಟಗಾರರಲ್ಲಿ ತನಗೆ ಬೇಕಾದವರೊಬ್ಬರನ್ನು ಆಯ್ಕೆ ಮಾಡುತ್ತಾನೆ. ಅನಂತರ ಎರಡನೆಯ ಪಕ್ಷದ ನಾಯಕ ಇನ್ನೊಬ್ಬನನ್ನು ಆರಿಸಿಕೊಳ್ಳುತ್ತಾನೆ. ಆಮೇಲೆ ಮೊದಲನೆಯವ ಆರಿಸುತ್ತಾನೆ. ಹೀಗೆ ಸರತಿಯಂತೆ ಆಯ್ಕೆ ನಡೆಯುತ್ತದೆ. ಇಬ್ಬರು ನಾಯಕರಲ್ಲಿ ಮೊದಲು ಆಯ್ಕೆ ಮಾಡುವವರಾರು? ಎಂಬುದನ್ನು ತಿಳಿಯಲು ನಾಣ್ಯ ಹಾರಿಸಿಯೋ, ಹಂಚಿನ ಬಿಲ್ಲೆ ಹಾರಿಸಿಯೋ, ಕೈಯ ಬೆರಳೆರಡನ್ನು ನಾಯಕರ ಪ್ರತಿನಿಧಿಯಾಗಿ ಮಾಡಿ ಚಿಕ್ಕ ಹುಡುಗರಿಂದ ಮುಟ್ಟಿಸಿಯೋ ನಿರ್ಧರಿಸುತ್ತಾರೆ. ಪರಸ್ಪರ ಒಪ್ಪಿಗೆಯ ಮೇಲೆಯೂ ಯಾರೊಬ್ಬರು ಮೊದಲು ಆಯ್ಕೆಗೆ ನಿಲ್ಲಬಹುದು.

ವಯೋಮಾನಕ್ಕೆ ತಕ್ಕಂತೆ ಆಟಗಳು:

ಜನಪದ ಆಟಗಳಲ್ಲಿ ಆಯಾ ವ್ಯಕ್ತಿಗಳ ವಯೋಮಾನ, ಮಾನಸಿಕ ಅಭಿರುಚಿಗೆ ತಕ್ಕಂತೆ ಬೇರೆ ಬೇರೆ ಆಟಗಳಿವೆ. ಚಿಕ್ಕಮಕ್ಕಳಿಗೆ ಮಣ್ಣಾಟ, ಅಡಗಾಟ, ಸುತ್ತಾಟ ಬೆರಳೆಣಿಕೆಯ ಆಟಗಳಾದರೆ ಸ್ವಲ್ಪ ದೊಡ್ಡವರಿಗೆ ಗುರಿಯಟ, ಬೆನ್ನಟ್ಟಾಟ, ಎಳೆದಾಟ ಮುಂತಾದ ಶಕ್ತಿ ಪ್ರದರ್ಶನದ ಆಟಗಳು, ನಿರ್ಬಲರಾದವರಿಗೆ ಹುಲಿಕವ್ಲೆ, ಆನೆನಾಯಿ ಪಗ್ಗ, ತಾಬ್ಲ ಮುಂತಾದ ಜಾಣ್ಮೆಯ ಆಟಗಳಿವೆ. ಈ ಜಾಣ್ಮೆಯ ಆಟಗಳ ಸಹೋದರ ಆಟಗಳಾದ ಚದುರಂಗ ನೆತ್ತ ಪಗಡೆ ಮುಂತಾದ ಆಟಗಳು  ಅರಮನೆಯ ಮಂಚವನ್ನೇರಿ, ರಾಜರಾಣಿಯರ ವಿಲಾಸಕ್ರೀಡೆಯಾಗಿ ಒಮ್ಮೊಮ್ಮೆ ರಾಜಮನೆತನಗಳನ್ನು ಏಳಿಸಿ ಬೀಳಿಸಿ ಮಣ್ಣು ಮುಕ್ಕಿಸಿವೆ.

ಆಟಗಳ ಪ್ರಯೋಜನ

ಫ್ರೆಂಚ್‌ತತ್ತ್ವಜ್ಞಾನಿ ರೂಸೋ ಶಾರೀರಿಕ ಚಟುವಟಿಕೆಗಳಿಗೆ ನಿರ್ಬಂಧವಿರಕೂಡದೆಂದು ಹೇಳಿ, ಮಕ್ಕಳು ವೈವಿಧ್ಯಪೂರ್ಣವಾದ ಆಟಗಳಲ್ಲಿ ಮೈಮರೆಯಬೇಕೆಂದು ಹೇಳಿದ್ದಾನೆ. ಮಕ್ಕಳು ತಮ್ಮ ಎಳೆಯ ವಯಸ್ಸಿನಲ್ಲಿ ಏನೂ ಕೆಲಸಮಾಡದೆ, ಆಟಗಳಲ್ಲಿ ಕಾಲಕಳೆಯುತ್ತಾರೆಂದು ಪಾಲಕರು ವ್ಯಥೆಪಡುವ ಕಾರಣವಿಲ್ಲ. ಆಟದಲ್ಲಿ ಮಕ್ಕಳು ಪಡೆಯುವ ಸಂತೋಷ ಅತ್ಯಮೂಲ್ಯವಾದುದು. ಎಳೆವಯಸ್ಸಿನ ಮಕ್ಕಳು ಮೈದಣಿವಂತೆ ಆಡಬೇಕು; ಆನಂದಪಡಬೇಕು. ಆಟಗಳು ಬೆಳೆಯುವ ಮಕ್ಕಳಿಗೆ  ಮನರಂಜನೆಯನ್ನೊದಗಿಸುವ ಜೊತೆಯಲ್ಲಿ, ಅವರ ಶಾರೀರಿಕ, ಬೌದ್ಧಿಕ ಅಂತರಂಗಿಕ ವಿಕಸನಗಳಿಗೆ ನೆರವು ನೀಡುವವು. ಪ್ರಪಂಚದ ಕ್ಲೇಶದಿಂದ ವಿಮುಕ್ತಿ ನೀಡಿ, ಆನಂದಬ್ರಹ್ಮನಲ್ಲಿ ತಾದಾತ್ಮ್ಯ  ಪಡೆಯುವಂತೆ ಮಾಡಿ, ಅಲೌಕಿಕ ಸುಖವನ್ನು ನೀಡುವವು. ಹಾಳು ಹರಟೆ ಹೊಡೆಯುವ ಪ್ರವೃತ್ತಿಯನ್ನು ದೂರಮಾಡಿ, ಮನಸ್ಸು ಕಾರ್ಯೋನ್ಮುಖವಾಗುವಂತೆ ಆಟಗಳು ಉತ್ತೇಜನ ನೀಡುವವು. ‘ಅಲಸೀ ಮನಸ್ಸು ಸೈತಾನನ ಕರ್ಮಶಾಲೆ’ಯೆಂಬ ಗಾದೆಯಿದೆ. ಆಟಗಳು ಆಲಸೀ ಮನಸ್ಸನ್ನು, ಆಳುವ ಸೈತಾನ ಶಕ್ತಿಯನ್ನು ಕಿತ್ತೆಸೆದು, ಮನಸ್ಸು ದೇವತೆಗಳ ಕರ್ಮಭೂಮಿಯಾಗುವಂತೆ ಮಾಡುವವು. ಆಟಗಳಲ್ಲಿ ಅನೇಕ ಬಗೆಯ ಜನರ ಜೊತೆ ಬೆರೆಯುವ ಅವಕಾಶವಿರುವುದರಿಂದ ಆಟಗಾರರಲ್ಲಿ ಪರಸ್ಪರ ಸ್ನೇಹ-ಸೌಹಾರ್ದಗಳು ಕುದುರುವವು, ಮನಸ್ಸು ಕೂಪಮಂಡೂಕ ವೃತ್ತವನ್ನು ದಾಟಿ ವಿಸ್ತೃತವಾಗುವುದು, ಸ್ನೇಹಪರವಾಗುವದು, ಉದಾತ್ತವಾಗುವದು. ಶಾರೀರಿಕ ಬೆಳವಣಿಗೆ ಮತ್ತು ಮಾನಸಿಕ ಬೆಳವಣಿಗೆ ಒಂದೇ ನಾಣ್ಯದ ಎರಡು ಮೈಗಳೆಂದು ಒಲಂಪಿಕ್‌ಕ್ರೀಡೆಗಳ ಪುನರುತ್ಥಾನಕ್ಕೆ ಕಾರಣನಾದ ಕೂಬರ್ತಿಯ ಅಭಿಪ್ರಾಯ ಆಟಗಳಿಂದ  ದೊರೆತ ವ್ಯಾಯಾಮದಿಂದ  ಶರೀರ ಬಲಿಷ್ಠವಾಗುವದು. ಜೊತೆಗೆ, ಮನೋವಿಕಾಸವಾಗುವದು. ಆಟಗಳಿಂದ ಶಿಸ್ತು, ಸಂಯಮ, ಸ್ವಾರ್ಥ ತ್ಯಾಗ, ಸಮಯಾವಧಾನ, ಸೋಲು ಗೆಲುವುಗಳನ್ನು ಸಮಾನವಾಗಿ ಕಾಣುವ ಮನೋಭಾವನೆಗಳು ವರ್ಧಿಸುವವು. ಹೇಡಿತನ ಕಾಲ್ಕೀಳುತ್ತದೆ. ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ. ಸಾಂಘಿಕ ಮನೋಭಾವ ಪಲ್ಲವಿಸುತ್ತದೆ. ಒಬ್ಬನ ನಾಯಕತ್ವವನ್ನು ಒಪ್ಪಿ ನಿಷ್ಠೆ ತೋರುವದು ನಾಯಕನಾಗಿ ಇತರರನ್ನು ಸಮಾನ ಭಾವದಿಂದ ಕಾಣುವದು-ಮುಂತಾದ ಸದ್ಗುಣಗಳು ದಾಂಗುಡಿಯಿಡುವವು. ಆಟಗಳು ಜನರನ್ನು ದುಶ್ಚಟಗಳಿಂದ ದೂರವಿರಿಸುತ್ತವೆ ಎಂದು ಹೇಳಿದ ಡಾ| ಜಾನ್ಸನ್ನನ ಉಕ್ತಿಯನ್ನು ಈ ಸಂದರ್ಭದಲ್ಲಿ ನೆನೆಯಬಹುದು.

ಹೋರಾಟದ ಗುಣವೇ ಆರೋಗ್ಯದ ಲಕ್ಷಣವೆಂಬುದು ರೋಮನ್ನರ ಮಂತ್ರ. ಆದ್ದರಿಂದ ಅವರು ಜೀವನಕ್ಕೆ ಪೂರಕವಾಗುವ ಆಟಗಳಿಗೆ ಹೆಚ್ಚಿನ ಗಮನವಿತ್ತುದನ್ನು ನೆನೆಯಬಹುದು. ಅನೇಕ ಆಟಗಳು ಸಮರ ಸನ್ನದ್ದತೆಗೆ ಬೇಟೆಯ ಚಾಪಲ್ಯವನ್ನು ವರ್ಧಿಸಲಕ್ಕೆ , ಜೀವನದ ಅಗತ್ಯವನು ಒದಗಿಸಲಿಕ್ಕೆ ಪೂರಕವಾಗಿದೆ.

“ವಾಟರ್ಲೂ ಕದನವನ್ನು ಈಟನ್ನಿನ ಮೈದಾನಿನಲ್ಲಿ ಗೆದ್ದರು” ಎಂಬ ಆಂಗ್ಲ ಪಡೆನುಡಿಯೊಂದಿದೆ. ಅಶಕ್ಯವನ್ನು ನಂಬದ ಅಜೇಯನಾದ ನೆಪೋಲಿಯನ್ನನ್ನು ಸೋಲಿಸಿದ ವೆಲಿಂಗ್ಟನ್‌ ಚಿಕ್ಕವನಿರುವಾಗ ಈಟನ್ನಿನ ಪರಾಭವಕ್ಕೆ ಕಾರಣವಾಯಿತೆಂದು ಆಂಗ್ಲರ ತಿಳುವಳಿಕೆ; ಅದು ಆಟಗಳಿಗೆ ಅವರಿತ್ತ ಪರಾಭವಕ್ಕೆ ಕಾರಣವಾಯಿತೆಂದು ಆಂಗ್ಲರ ತಿಳುವಳಿಕೆ; ಅದು ಆಟಗಳಿಗೆ ಅವರಿತ್ತ ಅಮೂಲ್ಯ ಬೆಲೆಯ ನಿದರ್ಶನ. ಒಳ್ಳೆಯ ಕ್ರೀಡಾಪಟು ಜೀವನದ ಎಂತಹ ವಿಷಯ ಪರಿಸ್ಥಿತಿಯಲ್ಲಿಯೂ ಧೃತಿಗೆಡುವ ಉಳಿಸಿಕೊಳ್ಳುತ್ತಾನೆ. ಸೋಲು ಅನಿವಾರ್ಯವೆನಿಸಿದರೂ ಹಿಂದೆ ಸರಿಯುವದಿಲ್ಲ. ಆಟದಲ್ಲಿ ಸೋಲು ಗೆಲುವು ಮುಖ್ಯವಲ್ಲ. ಕೊನೆಯವರೆಗೆ ಸೆಣಸುವುದು ಮುಖ್ಯ. ಈ ಕ್ರೀಡಾಮನೋಭಾವಗಳು ವೆಲಿಂಗ್ಟನ್ನನಲ್ಲಿ ರಕ್ತಗತವಾದುದರಿಂದಲೇ ಎಂತಹ ವಿಷಮ ಪರಿಸ್ಥಿತಿಯಲ್ಲಿಯೂ ಹೋರಾಡಿ ಗೆಲವನ್ನು ಪಡೆದನು.

ರಾಷ್ಟ್ರ ಉತ್ತಮವೆನಿಸಬೇಕಾದರೆ ರಾಷ್ಟ್ರದ ಪ್ರಜೆಗಳು ಸತ್ಪ್ರಜೆಗಳಾಗಬೇಕು. ಹಾಗಾಗಬೇಕಾದರೆ ಪರಸ್ಪರರಲ್ಲಿ ಸ್ನೇಹ, ಸೌಹಾರ್ದ ಮನೋಭಾವನೆಗಳು ಕುದುರಬೇಕು. ಸ್ಪರ್ಧಾತ್ಮಕ ಮನೋಭಾವ ಬೆಳೆಯಬೇಕು. ದುಸ್ವಾರ್ಥ ಕಾಲ್ಕೀಳಬೇಕು, ಹೀಗಾಗುವುದು ಆಟಗಳಿಂದ ರಾಷ್ಟ್ರದ ಸತ್ತ್ಪಜೆಗಳಾಗಬೇಕಾದರೆ ಆಟಗಳಿಗಾಗಿ ನಾವು ಸಾಕಷ್ಟು ಬೆಲೆ ತೆರಬೇಕು.

ಆಟಗಳ ಧಾರ್ಮಿಕತೆ:

ಆಟಗಳು ಮಾನವನ ಸರ್ವಾಂಗೀಣ ಪ್ರಗತಿಗೆ ತಾರಕ ಎಂದರಿತ ಜಾನಪದರು ಆಟಗಳ ಪಾವಿತ್ರ್ಯವನ್ನುಳಿಸಿಕೊಳ್ಳುವುದಕ್ಕಾಗಿ ಆಟಗಳ ಅಳಿವನ್ನು ತಡೆಯುವುದಕ್ಕಾಗಿ, ಅನೇಕ ಆಟಗಳಿಗೆ ಧಾರ್ಮಿಕತೆಯ ಲೇಪ ಹಚ್ಚಿದರು. ಗ್ರೀಕರಲ್ಲಿ ಒಲಂಪಿಕ್‌ಹಬ್ಬಗಳಲ್ಲಿ ಗ್ರೀಸದ ಪವಿತ್ರ ಸ್ಥಳಗಳಿಗೆ ಹೋಗಿ ಆಟವಾಡುತ್ತಿದ್ದರಂತೆ. ನಮ್ಮ ದೇಶದಲ್ಲಿಯೂ ಹಬ್ಬ ಹುಣ್ಣಿಮೆಯ ಬಿಡುವಿನಲ್ಲಿ ಆಡುವ ಸಂಪ್ರದಾಯವಿದೆ. ಕೆಲವು ಹಳ್ಳಿಗಳಲ್ಲಿ ಹಬ್ಬದ ದಿನ ಆಡಲೇಬೇಕೆಂಬ ನಿರ್ಬಂಧವಿದೆ. ಇದನ್ನು ಇಂದಿನವರೆಗೂ ಅನೇಕರು ಪಾಲಿಸಿಕೊಂಡು ಬಂದಿದ್ದಾರೆ. ವಿಜಯನಗರದ ಅರಸರು ನವರಾತ್ರಿಯ ಸಮಯದಲ್ಲಿ ಮಾನವಮಿಯ ದಿಬ್ಬದ ಮೇಲೆ ಕುಳಿತು. ಅವರ ಮುಂದೆ ನಡೆಯುತ್ತಿದ್ದ ಕ್ರೀಡಾ ವಿನೋದಗಳನ್ನು ನೋಡಿ ಸಂತೋಷಪಡುತ್ತಿದ್ದ ಅಂಶ ಸರ್ವವಿದಿತವಾಗಿದೆ. ಇಂದಿಗೂ ನವರಾತ್ರಿಯ ಸಮಯದಲ್ಲಿ ಮೈಸೂರಿನಲ್ಲಿ ದಸರಾ ಪಂದ್ಯ ನಡೆಯುತ್ತಿರುವುದು ಉಲ್ಲೇಖನಿಯ.

ನಮ್ಮಲ್ಲಿಯ ಕೆಲವು ಆಟಗಳಂತೂ ವಿಶೇಷ ಹಬ್ಬಹುಣ್ಣಿವೆಗಳಲ್ಲಿ ಮಾತ್ರ ಆಡಲ್ಪಡುತ್ತವೆ. ನಮ್ಮ ಜಿಲ್ಲೆಯಲ್ಲಿ ಸುಗ್ಗಿಯ ಕಾಲಕ್ಕೆ ಬೃಹತ್ತ ಪ್ರಮಾಣದಲ್ಲಿ ಕೋಲಾಟಗಳು ನಡೆಯುತ್ತಿವೆ. ಕೋಲಾಟಗಳು ಅಳಿಯಬಾರದೆಂದು ಅವಕ್ಕೆ ಧಾರ್ಮಿಕ ಕವಚ ತೊಡಿಸಿ ಸುಗ್ಗಿಯ ದಿನಗಳಲ್ಲಿ ಅವನ್ನು ಆಡಲೇಬೇಕೆಂಬ ನಿರ್ಬಂಧ ವಿಧಿಸಿದ್ದಾರೆ. ಆಟದ ಪಾವಿರ್ತ್ಯ ಉಳಿಸುವುದಕ್ಕಾಗಿ, ಸುಗ್ಗಿ ಮುಗಿದ ನಂತರ ಸಂಕ್ರಾತಿಯವರೆಗೆ ಕೋಲು ಮುಟ್ಟಕೂಡದು, ಕುಂಚ ಕಟ್ಟಕೂಡದು- ಎಂಬ ಕಟ್ಟು ಹಾಕಿದ್ದಾರೆ. ಮಕರ ಸಂಕ್ರಮಣದ ಸುಗ್ಗಿಯವರೆಗೆ ವಿಧಿವತ್ತಾಗಿ ಕೋಲು ಹಡೆಯಲುಪಕ್ರಮಿಸುವರು. ಎಷ್ಟೋ ಜನ ದೇವತೆಗಳ ಪ್ರೀತ್ಯರ್ಥವಾಗಿ  ಹರಕೆ ಹೊತ್ತು ತಮ್ಮ ತಮ್ಮ ಮನೆದೇವರ ಮುಂದೆ. ಗ್ರಾಮದೇವರ ಮುಂದೆ ಕೋಲಾಟವಾಡಿಸುತ್ತರೆ. ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಕಲೆ ಯಕ್ಕಗಾನ, ಈ ಬಯಲಾಟವನ್ನು  ಕೆಲವು ಹಳ್ಳಿಗರು ದೇವರ ಹೆಸರಿನಲ್ಲಿ ಪ್ರತಿವರ್ಷ ತಪ್ಪದೇ ಹಬ್ಬ ಹುಣ್ಣಿವೆಗಳಲ್ಲಿ ಆಡುವ ಸತ್‌ಸಂಪ್ರದಾಯ ಇನ್ನೂ ಉಳಿದುಕೊಂಡು ಬಂದಿದೆ. ಹೊನ್ನಾವರ ತಾಲೂಕಿನ ಗುಂಡಬಾಳೆಯ ಹನುಮಂತ ದೇವರ ಮುಂದೆ ಇಂದಿನವರೆಗೂ ಪ್ರತಿ  ವರ್ಷ ತಿಂಗಳುಗಟ್ಟಲೆ ಹರಕೆಯೊಪ್ಪಿಸುವುದರಿಂದ ದೇವತೆಗಳು ಸಂಪ್ರೀತರಾಗಿ ದೇಶದಲ್ಲಿ ಸುಭಿಕ್ಷೆ ನೀಡುವರೆಂಬ ಪರಂಪರಾಗತ ನಂಬಿಕೆ ಅನೇಕ ಆಟಗಳ ಉಳಿವಿಗೆ ಕಾರಣವಾಗಿದೆ.

ಹಿಂದೆ ವೀರಜನಾಂಗ ಯುದ್ಧಭೂಮಿಯ ಮೇಲೆ ವೈರಿ ರಕ್ತ ಚೆಲ್ಲಿ, ರಕ್ತ ಬಲಿಯಿಂದ ರಣಭೂಮಿಯನ್ನು ತಣಿಸುತ್ತಿದ್ದರು. ಅಂತಹ ಬಲಿಪಡೆದ ಸ್ಥಳಗಲ್ಲಿ ‘ಕೋಳಿ ಅಂಕ’ವನ್ನಾದರೂ ಆಡಿಸಿ ರಕ್ತ ಚೆಲ್ಲದಿದ್ದರೆ, ರಣದೇವತೆ ಮುನಿಯುವಳೆಂದು ಬಗೆದು ಆ ಪ್ರದೇಶಗಳಲ್ಲಿ ಕೋಳಿ ಅಂಕವನ್ನಾದರೂ ಆಡಿಸಿ ರಣದೇವತೆಯನ್ನು ಸಂತೃಪ್ತಿಪಡಿಸಬೇಕೆಂದು ವಿಧಿಸಿದರು. ಅಷ್ಟೇ ಅಲ್ಲ, ಕೋಳಿ ಅಂಕವಾಡುವ ಮನೆತನದವರು ಒಮ್ಮೆಯಾಧರೂ ಕೋಳಿ ಅಂಕವಾಡದಿದ್ದಲ್ಲಿ  ಅಂಕದೇವತೆ ಮುನಿದು ಅವರ ಕುಟುಂಬಕ್ಕೆ ಪೀಡೆ ಕೊಡುವಳೆಂಬ ಭಯ ಭಕ್ತಿಯನ್ನು ಹಾಕಿ. ಆ ಆಟದ  ಉಳಿವಿಗೆ ಪೋಷಣೆಯಿತ್ತರು. ಕೋಳಿಯಂಕ ಆಡುವುದಕ್ಕೆ ಮೀಸಲಾದ ಅನೇಕ ‘ಕೋಳಿ ಅಂಕದ ಬೈಲು’ಗಳು ನಮ್ಮಲ್ಲಿವೆ. ಹಿಂದೆ ಬೇಟೆಗಾರಿಕೆಯ ವೃತ್ತಿಯಲ್ಲಿ ನಿರತರಾದ ಮನೆತನದವರೂ ಕೂಡ ಬೇಟೆದೇವತೆಯ ಸಂತೃಪ್ತಿಗಾಗಿ ಕೋಳಿ ಅಂಕವಾಡಿ. ರಕ್ತ ಬಲಿಕೊಟ್ಟು, ಇಲ್ಲವೇ ವರ್ಷಕ್ಕೊಮ್ಮೆಯಾದರೂ ಬೇಟೆಮಾಡಿ ದೇವತೆಗಳನ್ನು ಸಂತುಷ್ಟಿಗೊಳಿಸುವ ಪರಿಪಾಠವಿದೆ.

ಆಟಗಳ ಪ್ರಚಾರಕ್ಕಾಗಿ ಪವಿತ್ರತೆಯನ್ನು ಕಾಪಾಡುವುದಕ್ಕಾಗಿ ದೇವಸ್ಥಾನದ ಗೋಡೆಗಳ ಮೇಲೆ ಕೆಲವು ಆಟಗಳ ಮಾದರಿಯನ್ನು ಬರೆದಿರುತ್ತಾರೆ. ದನಕಾಯುವ ಮಕ್ಕಳು ದನಕಾಯುವ ಬೇಸರಿಕೆಯನ್ನು ಕಳೆಯುವುದಕ್ಕಾಗಿ, ದನಕಾಯಲು ಹೋದ ಸ್ಥಳದಲ್ಲ್ಲಿ ಕಲ್ಲರೆಯನ್ನು ಕಟೆದು ಮಾಡಿದ ಚೆನ್ನಮಣೆಯನ್ನು ತೋರಿಸಿ, ರಾಮ ಲಕ್ಷ್ಮಣರು ಆಡಿದ ಚೆನ್ನೆಮಣೆಯೆಂದೋ; ಪಾಂಡವರು ಆಡಿದ ಚೆನ್ನೆಮಣೆಯೆಂದೀ ದೇವರು ಆಡಿದ ಚೆನ್ನಮಣೆಯೆಂದೋ ಹೇಳಿ ದೇವತೆಗಳಿಗೂ ಚೆನ್ನೆಯಾಟ ಪ್ರಿಯವಾದದ್ದೆಂಬ ಭಾವನೆಯನ್ನು ಜನರಲ್ಲಿ ತುಂಬಿ ಆ ಆಟದ ಪ್ರಚಾರಕ್ಕೆ ಕಾರಣರಾಗಿದ್ದಾರೆ. ದೇವರು ಆಡಿದ್ದರೆಂಬ ಚೆನ್ನಮಣೆಗಳುಳ್ಳ ಅನೇಕ ಪರಿತ್ಯಕ್ತ ಸ್ಥಳಗಳು ನೋಡಸಿಗುತ್ತವೆ.

ದೇವತೆಗಳ ರಥೋತ್ಸವ, ಜಾತ್ರೆ ಮುಂತಾದ ಸಂದರ್ಭಗಳಲ್ಲಿ ಆಡುವ ಕೋಲಾಟಗಳು, ಬಣ್ಣ ತೂರುವ ಆಟಗಳು, ಹಗರಣದಾಟಗಳು, ಕೈ-ಕಾಲಿನ ಮೊಸರು ಗಡಿಗೆಯೊಡೆಯುವ ವಿನೋದ, ಮರಕಾಲ ಕುಣಿತ, ಮದುವೆಯಲ್ಲಿಯ ಓಕುಳಿ ಮುಂತಾದ ಕ್ರೀಡೆವಿನೋದಗಳೆಲ್ಲ ಧಾರ್ಮಿಕತೆಯಿಂದ ಒಪ್ಪವಡೆದು ಆಟಗಳ ಪ್ರಾವಿರ್ತ್ಯವನ್ನುಳಿಸಿ ಅವುಗಳ ಉಳಿವು ಹಾಗೂ ಪ್ರಚಾರಗಳಿಗೆ ನೆರವನ್ನಿತ್ತಿವೆ. ಹೀಗೆ ಆಟಗಳ ಪಾವಿತ್ರ ಹಾಗೂ ಉಳಿವಿಗಾಗಿ ಅನೇಕ ಧಾರ್ಮಿಕ ನಂಬಿಕೆಗಳನ್ನು ಪ್ರಚಾರದಲ್ಲಿ ತಂದು ಆಟಗಳ ಉಳಿವಿಗಾಗಿ ಹಾಗೂ ಪ್ರಚಾರಕ್ಕಾಗಿ ಅವರು ಅನುಸರಿಸುವ ವಿಧಾನ ರೋಮಾಂಚನಕಾರಿಯಾಗಿದೆ.

ಆಟಗಳು ಉಳಿವು ಮತ್ತು ಶಿಕ್ಷಕರು :

ಜಾನಪದ ಆಟವನ್ನು ಉಳಿಸುವಲ್ಲಿ ಇಂದಿಗೂ ಕೆಲವು ಪ್ರಾಥಮಿಕ ಶಾಲೆಯ ಹಾಗೂ ಬಲವಾಡಿಯ ಶಿಕ್ಷಕಿಯರು ಮಹತ್ವದ ಸೇವೆ ಸಲ್ಲಿಸುತ್ತಿರುವುದು ಸಂತೋಷ. ಶಾರೀರಿಕ ಶಿಕ್ಷಣ ಶಾಲೆಗಳು ಕಾಲೇಜುಗಳಲ್ಲಿ ಹೊರಡುವ ಪತ್ರಿಕೆಗಳಲ್ಲಿ ದೇಶೀ ಆಟಗಳಿಗೆ ಸ್ಥಾನ ಕೊಟ್ಟಿರುವುದೂ ಉಲ್ಲೇಖನೀಯ. ಹಣದ ಖರ್ಚಿಲ್ಲದೆ  ಅನೇಕ ಆಟಗಳನ್ನು ಮಕ್ಕಳಿಗೆ ಸುಲಭವಾಗಿ ಕಲಿಸಿ, ಅವರ ಶಾರೀರಿಕ ಶಕ್ತಿಯನ್ನು ಹೆಚ್ಚಿಸಬಹುದುದೆಂಬ ಭರವಸೆ ಅವರಿಗಿದೆ. ಆದರೆ ಅವರ ವಿಚಾರಕ್ಕೆ ಪ್ರೋತ್ಸಾಹ ಕೊಡುವವರು ಕಡಿಮೆ. ಹಳ್ಳಿಯ ಆಟಗಳು ಕಗ್ಗದಾಟಗಳೆಂದು ಮೂಗು ಮುರಿಯುವವರೇ ಹೆಚ್ಚು. ಈ ಪ್ರವೃತ್ತಿ ದೂರವಾಗಬೇಕು. ಶಿಕ್ಷಕರ ಅಳಿಲು ಸೇವೆಯನ್ನು  ಜಾನಪದ  ವಿದ್ವಾಂಸರು, ಶಿಕ್ಷಣಾಧಿಕಾರಿಗಳು, ತಜ್ಞರು ಗುರುತಿಸಿ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಆಗ ಈ ಆಟಗಳು ಬದುಕಿಕೊಳ್ಳುತ್ತವೆ; ಬೆಳೆಯುತ್ತವೆ. ಆಟದ ಉಳವಿಗಾಗಿ ಶ್ರಮಿಸಿದವರಿಗೂ ತಮ್ಮ ಕಾರ್ಯದಲ್ಲಿ ಹೆಚ್ಚಿನ ಶ್ರದ್ಧೆ ಗೌರವಗಳು ಮೂಡುತ್ತವೆ.

ಆಟಗಳ ಅಳಿವು ಉಳಿವು :

ಅನೇಕ ರಾಜಕೀಯ ವಿಭಾಗದಿಂದ ಕೂಡಿದ ನಮ್ಮ ದೇಶದಲ್ಲಿ ಶತಶತಮಾನಗಳಿಂದ ಕಲಹ ಕೋಲಾಹಲ, ನೆಮ್ಮದಿ ವೈಭವಗಳ ಕಣ್ಣುಮುಚ್ಚಾಲೆ ನಡೆದುಕೊಂಡೇ ಬಂದಿದೆ. ದೇಶದಲ್ಲಿ ಮೇಲಿಂದ ಮೇಲೆ ಅನೇಕ ಪರಕೀಯರ ಅಭಿಯೋಗಗಳಾಗಿವೆ.  ಆಗಾಗ ನೆಮ್ಮದಿಯ ಸುಭದ್ರ ಆಡಳಿತ ಏರ್ಪಟ್ಟಿದೆ. ಅನೇಕ ಮತಧರ್ಮಗಳ  ಪೈಪೋಟಿ ನಡೆದಿದೆ. ವಿವಿಧ ಬಗೆಗೆ ರೂಢಿ ಸಂಪ್ರದಾಯಗಳು, ಸಾಮಾಜಿಕ ಸಮಸ್ಯೆಗಳು ಉದ್ಭವಿಸಿವೆ. ಇವುಗಳನ್ನವಲಂಬಿಸಿ ನಮ್ಮಲ್ಲಿ ಅನೇಕ ಆಟಗಳು ಹುಟ್ಟಿದವು. ಅನೇಕ ಆಟಗಳು ಸತ್ತವು. ರೂಪಾಂತರಗೊಂಡವು. ಹೀಗಾದರೂ ಜನಪದ ಆಟಗಳು ಪ್ರವಾಹ ಬತ್ತದೆ ಒತ್ತರದಿಂದ ಇಪ್ಪತ್ತನೆಯ ಶತಮಾನದ ನಾಲ್ಕೈದು ದಶಗಳವರೆಗೆ ಹರಿಯುತ್ತಲೇ ಬಂದುದನ್ನು ಕಾಣುತ್ತೇವೆ.

ಇಂದು ಪಾಶ್ಚತ್ಯ ಶಿಕ್ಷಣದ ಸಂಪರ್ಕದಿಂದಲೋ ವೈಜ್ಞಾನಿಕತೆಯ ಪ್ರಭಾವದಿಂದಲೋ, ಪಟ್ಟಣಗಳಲ್ಲಿ ಸುಶಿಕ್ಷಿತ ಮಕ್ಕಳು, ಯುವಕರು ಪಾಶ್ಚಾತ್ಯ ಆಟಗಳನ್ನು ಆಡುತ್ತಿದ್ದಾರೆ. ಈ ಸೋಂಕು ಹಳ್ಳಿಯ  ಯುವಕರನ್ನೂ ಬಾಧಿಸದೆ ಬಿಟ್ಟಿಲ್. ಚಿಕ್ಕ ಮಕ್ಕಳೂ ಹಳ್ಳಿಯ ಅಗ್ಗದ ಆಟಗಳನ್ನು ಮರೆಯುತ್ತಾರೆ. ತುಂಬಾ ಬೆಲೆ ತೆರಬೇಕಾದ ಪಾಶ್ಚಾತ್ಯ ಪದ್ದತಿಯ ಆಟಗಳು ಶಾಲೆ ಕಾಲೇಜುಗಳಲ್ಲಿ ಬಳಕೆಗೆ ಬಂದಿವೆ. ದುಬಾರಿ ವೆಚ್ಚ ಆಟಗಳು ವೆಚ್ಚವನ್ನು ನಿರ್ವಹಿಸಲಾಗದ ಪರಿಸ್ಥಿತಿಯುಂಟಾಗಿವೆ. ಬಡವರಿಗೆ ಇವು ಕೈಗೆ ನಿಲುಕುವ ಸ್ಥಿತಿಯಲ್ಲಿಲ್ಲ. ಆದರೂ ಪಾಶ್ಚಾತ್ಯ  ಆಟಗಳ ಮೋಹ ಬಿಡುತ್ತಿಲ್ಲ. ನಮ್ಮದೆಲ್ಲ ಕಾಡು ಆಟವೆಂಬ ಭಾವನೆ ತೊಲಗುತ್ತಿಲ್ಲ. ಹೀಗಾಗಿ ಹಳ್ಳಿಗರ ಕೈಗೆ  ಬಡವರ ಕೈಗೆ ಎರಡೂ ಆಟಗಳು ತಪ್ಪಿಹೋಗುತ್ತಿವೆ. ಮಕ್ಕಳು ಆಡುತ್ತಿರುವುದು ಕಡಿಮೆಯಾಗಿದೆ. ಬೇರೊಂದು ಸಂಸ್ಕೃತಿಯ ಹೊಡೆತಕ್ಕೆ ಸಿಕ್ಕು ನಮ್ಮ ಸಂಸ್ಕೃತಿ ಅಳಿಯಬಾರದಲ್ಲವೇ? ನಮ್ಮ ಮಕ್ಕಳ ಆಯುರಾರೋಗ್ಯ ಬೆಳೆಯಬೇಕಲ್ಲವೆ? ಅದಕ್ಕಾಗಿ ನಮ್ಮ ಜನತೆಯ ಕೈಗೆ ನಿಲುಕುವ, ಅವರ ಜಾಯಮಾನಕ್ಕೆ ಹೊಂದುವ. ನಮ್ಮ  ಸತ್‌ಸಂಪ್ರದಾಯಗಳಿಂದ ಕಳೆಗೂಡಿದ ಆಟಗಳು  ಹೆಚ್ಚು ಜನಪ್ರಿಯವಾಗಬೇಕು. ಪಾಶ್ಚಾತ್ಯ ಸಂಸ್ಕೃತಿಯ ಆಟಗಳು ನಮ್ಮ ಭೂಗುಣ ವಾಯುಗುಣಗಳಿಗೆ ಹೇಗೆ ಹೊಂದಿಯಾವು? ಒಂದೊಮ್ಮೆ ಅವುಗಳನ್ನು ನಮ್ಮಲ್ಲಿ ಅಳವಡಿಸಿ ಕೊಳ್ಳುವುದಾದರೆ ಅವುಗಳನ್ನು ಸಂಸ್ಕರಿಸಿ ನಮ್ಮ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಮಾಡಬೇಕು

ಇಂದು ಪಟ್ಟಣದ ಕ್ಲಬ್ಬುಗಳಲ್ಲಿ ನಡೆಯುವ ಆಟಗೆಲ್ಲ ವಿದೇಶೀಯ ದುಂದು ವೆಚ್ಚ ಆಟಗಳಾಗಿವೆ. ಹಣ ಹಚ್ಚಿ ಆಡುವ ಇಸ್ಪೇಟು, ಜುಗಾರಿ ಆಟಗಳು ಆಟದ ಪಾವಿತ್ರ್ಯವನ್ನು ಕಳೆದು ದ್ವೇಷ, ಅಸೂಯೆ, ಜಗಳಗಳಿಗೆ ಕಾರಣಗಳಾಗಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತವೆ. ಅದಕ್ಕಾಗಿ ಹಣಕ್ಕಾಗಿ ಆಡುವ ಆಟಗಳು ಉಳಿದ ಆಟಗಳಂತೆ ಉಚ್ಚಮಟ್ಟದ ನೆಮ್ಮದಿಯನ್ನು ನೀಡಲಾರವು. ಹಣಕ್ಕಾಗಿ  ಆಡುವ ಆಟಗಳು ಹಳ್ಳಿಗಳನ್ನೂ ಆವರಿಸಿ ಅವರ ಮನರಂಜನೆ ಮತ್ತು ದೈಹಿಕಬಲ ನೀಡುವ ಆಟಗಳಾದ ಗೆರಟಿಪುಳಿ, ಹಾಣೆಗೆಂಡೆ, ಗಿಡಗನ ಸೋಡಿ ಮುಂತಾದ ಆಟಗಳನ್ನು ತಳ್ಳಿಹಾಕಿವೆ. ಈ ರೀತಿಯಾಗಿ ನಮ್ಮ ದೇಶದಲ್ಲಿ ಆದೆಷ್ಟೋ ಆಟಗಳು ಸಾಯುತ್ತಿವೆ. ಅದಕ್ಕಾಗಿ ಅವನ್ನೆಲ್ಲ ಸಂಗ್ರಹಿಸಿ ಕೇವಲ ಕೆಲವೇ  ಕೆಲವು ವಿದೇಶಿ ಆಟಗಳನ್ನು ನಂಬಿ, ಅವುಗಳ ಬೆನ್ನು  ಹತ್ತಿ, ನಮ್ಮದನ್ನು ಮರೆಯುತ್ತಿರುವ ಭಾರತೀಯರಿಗೆ ತಿಳಿಸಿ, ನಮ್ಮ ಆಟಗಳ  ಬಗೆಗೆ ಅಭಿರುಚಿಯನ್ನು ಆದಷ್ಟು ಬೇಗನೆ ತಂದುಕೊಡುವದು ಒಳ್ಳೆಯದು. ಆಹಾರ ಬಟ್ಟೆಗಾಗಿ ನಮ್ಮ ಭಿಕ್ಷುಕ ವೃತ್ತಿಯನ್ನು ತೋರಿ ಕೈಚಾಚಿದ ನಾವು ನಮ್ಮಲ್ಲಿ ಸಮೃದ್ಧಿಯಿರುವಾಗಲೂ ಆಟಗಳಿಗಾಗಿ  ಪರಕೀಯರ ಮುಖನೋಡುತ್ತ ಕುಳಿತುಕೊಳ್ಳುವುದು ಯೋಗ್ಯವಲ್ಲ, ಉತ್ತಮ ಜನಪದ ಆಟಗಳ  ಸಂಗ್ರಹ ತ್ವರಿತ ಗತಿಯಿಂದ ನಡೆದು  ಪ್ರಚಾರವಾಗಬೇಕು. ಸರಿಯಾಗಿ ಸಂಗ್ರಹಿಸಿದರೆ ಸಾವಿರಾರು ಆಟಗಳು ದೇಶದ ತುಂಬ ದೊರಕಬಲ್ಲವು. ಅವುಗಳಲ್ಲಿ ನೂರಾರು ಆಟಗಳು ಇಂದು ಜನಪ್ರಿಯವಾಗುತ್ತಿರುವ ವಿದೇಶಿ ಆಟಗಳಿಗೆ ಸರಿದೊರೆಯಾಗಿ ನಿಲ್ಲಬಲ್ಲವು. ಹಾಣೆಗೆಂಡೆ ಗುಡ್ನಾಟಗಳಲ್ಲಿಯ ಕೌಶಲ್ಯ ಕಬಡ್ಡಿ, ಗಿಡಗನಸೋಡಿ ಆಟಗಳಲ್ಲಿಯ ಶಕ್ತಿಪ್ರದರ್ಶನ  ವಿದೇಶಿಯ  ಯಾವದೇ ಆಟಗಳ ಕೌಶಲ್ಯ, ಶಕ್ತಿಪ್ರದರ್ಶನಗಳಿಗೂ  ಕಡಿಮೆಯಿಲ್ಲ.  ಇಂತಹ ಆಟಗಳು ನಾಡತುಂಬೆಲ್ಲ ಅಲ್ಪಸ್ವಲ್ಪ ವ್ಯತ್ಯಾಸದೊಂದಿಗೆ ಬೇರೆ ಬೇರೆ ಹೆಸರುಗಳನ್ನು ಹೊಂದಿ ಜೀವ ಹಿಡಿದುಕೊಂಡಿವೆ. ಅಂತಹ ಆಟಗಳನ್ನು  ಸಂಸ್ಕರಿಸಿ ಆಟದ ವಿಧಾನ ಹಾಗೂ ಹೆಸರುಗಳಲ್ಲಿ ಏಕರೂಪತೆಯನ್ನು ತಂದು ಅವುಗಳ ಗುಣಮಟ್ಟದ ಅರಿವು ಮೂಡಿಸಬೇಕು. ಇದಕ್ಕೆ ಸುಶಿಕ್ಷಿತ-ಅಶಿಕ್ಷಿತ ಅಬಾಲ-ವೃದ್ದರೆಲ್ಲರ ಸಹಾಯ ಅವಶ್ಯಕ. ಶಾಲೆ ಕಾಲೇಜುಗಳ ವಾರ್ಷಿಕ ಪಂದ್ಯಾಟಗಳಲ್ಲಿ ಜಾನಪದ ಆಟಗಳಿಗೆ ಕೆಲವು ಸ್ಥಾನದಲ್ಲಿದರೂ ಮೀಸಲಿರಿಸಬೇಕು. ನಾಡಮಟ್ಟದಲ್ಲಿ, ರಾಷ್ಟ್ರೀಯ ಮಟ್ಟದಲ್ಲಿ ಆಡಿ ಅವುಗಳ ಹಿರಿಮೆಯನ್ನು ಪ್ರಪಂಚಕ್ಕೆ ತೋರಿಸಬೇಕು. ಅಂತರಾಷ್ಟ್ರೀಯ ಮಟ್ಟದಲ್ಲಿ ಆಡುವ ಯೋಗ್ಯತೆ ಇದ್ದರೂ ದಾರಿಯಿಲ್ಲದೆ  ಬಿದ್ದಿರುವ ಈ ಆಟಗಳಿಗೆ ತಕ್ಕ ಪ್ರೋತ್ಸಾಹ ದೊರೆತರೆ, ಅವು ಪ್ರಪಂಚಕ್ಕೆ ಭಾರತದ ಕೊಡುಗೆಯಾಗುವದು. ಅಸಾಧ್ಯವೇನಲ್ಲ.

ಆಟಗಳ ಕೃಷಿ:

ಮಾನವನ ಜೀವನದಲ್ಲಿ ಆಟಗಳು ಬಹು ಮಹತ್ವದ ಸ್ಥಾನವನ್ನು ಪಡೆದಿದ್ದರೂ ಆಟಗಳನ್ನು ಕುರಿತು ಹುಟ್ಟಿದ ಗ್ರಂಥಗಳು ಕಡಿಮೆ. ಆಟಗಳನ್ನು ಕುರಿತು ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಅಲ್ಲಲ್ಲಿ ಉಲ್ಲೇಖಗಳು ದೊರೆತರೂ ಆಟಗಳ  ಕುರಿತಾದ ವಿಸ್ತೃತ ವಿವೇಚನೆ ಅಲ್ಲಿ ಬಂದಿಲ್ಲವೆಂದೇ ಹೇಳಬೇಕು. ವೇದ ಉಪನಿಷತ್ತುಗಳಲ್ಲಿ ಬೇಟೆ, ಕುದುರೆ ಸವಾರಿ, ಧನುರ್ವಿದ್ಯೆ, ಅಂಗಸಾಧನೆ, ಓಟ, ಈಜು ಮುಂತಾದ ಕ್ರೀಡೆಗಳ ಉಲ್ಲೇಖಗಳಿವೆ. ಋಗ್ವೇದದ ಕೆಲವು ಸೂತ್ರಗಳಲ್ಲಿ ಜೂಜುಗಾರನ ಅಳಲು ಚಿತ್ರಿತವಾಗಿದೆ. ಪಗಡೆಯಾಟ ಜೂಜಾಟಗಳು ಅನಿಷ್ಟವೆಂಬ  ಭಾವನೆಯಿದ್ದರೂ ಅವು ಪ್ರಾಚೀನ ಭಾರತದ ಜನಪ್ರಿಯ ಆಟಗಳಾಗಿದ್ದವು. ಅರಸನಿಂದ ಹಿಡಿದು ಸಾಮಾನ್ಯನವರೆಗೂ ಈ ಆಟಗಳು ಜನಪ್ರಿಯವಾಗಿದ್ದವು. ಪ್ರಾಚೀನ ಭಾರತದ ಕ್ರೀಡೆಗಳವರೆಗೂ ಈ ಆಟಗಳು ಜನಪ್ರಿಯವಾಗಿದ್ದವು. ಪ್ರಾಚೀನ ಭಾರತದ ಕ್ರೀಡೆಗಳ ಇಣುಕು ನೋಟವು ನಮ್ಮ  ರಾಷ್ಟ್ರೀಯ ಮಹಾಕಾವ್ಯಗಳಾದ ರಾಮಾಯಣ ಮಹಾಭಾರತಗಳಲ್ಲಿ ದೊರೆಯುತ್ತದೆ. ಶರೀರ ಬಲದ ಬೆಳವಣಿಗೆಗೆ ಅಗತ್ಯವಿರುವ ಆಟಗಳನ್ನು ಭಾರತದ ಪ್ರಾಚೀನ ವಿಶ್ವವಿದ್ಯಾನಿಲಯಗಳಲ್ಲಿ ಕಲಿಸುತ್ತಿದ್ದರು. ನಲಂದಾ ವಿಶ್ವವಿದ್ಯಾನಿಲಯದಲ್ಲಿ ಬೆಳಿಗ್ಗೆ ಈಜು, ಬಳಿಕ ನೆಲದಲ್ಲಿ ಗುರುತಿಸಿದ  ನಕಾಶೆಯ ಮೇಲೆ ಜಿಗಿಯುವುದು, ಚೆಂಡು ಹಿಡಿಯುವ ಆಟಗಳು, ಚೆಂಡು ಆಡಿಸುವುದು, ಕಳಹೆ ಊದುವದು. ಕಲ್ಲಿನ ನೇಗಿಲು ಹಿಡಿದು ಉಳುವ ಸ್ಪಧೆ, ಬಿಲ್ಲುಗಾರಿಕೆಯ ಸ್ಪರ್ಧೆ, ಗೋಲಿ ಆಟ, ರಥ ಓಡಿಸುವು, ತೋಳು ತಿರುಗಿಸುವ ಸ್ಫರ್ಧೆ, ಕುಸ್ತಿ, ಮುಷ್ಟಿಯುದ್ಧ ಮುಂತಾದವು ನಿತ್ಯ ಕ್ರೀಡೆಗಳಾಗಿದ್ದವು.

ಪ್ರಾಚೀನ ತಮಿಳು ಕಾವ್ಯ ‘ಶಿಲಪ್ಪದಿಕಾರಂ’ದಲ್ಲಿ  ಗೂಳಿಕಾಳಗದ ಬಣ್ಣನೆಯಿದೆ. ಇಂತಹ ಕಾಳಗದಲ್ಲಿ ಗೆದ್ದ ತರುಣರು-ತರುಣಿಯರು ಮದುವೆಯಾಗುತ್ತಿದ್ದರಂತೆ ಕಂಬಳವೆಂಬ ಕೋಣ-ಗೂಳಿಗಳ ಓಟದ ಸ್ಫರ್ಧೆ ಇಂದಿಗೂ ಕರಾವಳಿಯಲ್ಲಿ ಪ್ರಚಲಿತವಿದೆ.

ಆದಿ ಪಂಪನ ಕಾಲದಿಂದಲೂ ನೆತ್ತಪಗಡೆ, ಪೊಡೆಸೆಂಡು ಮುಂತಾದ ಆಟಗಳು ಕರ್ನಾಟಕದಲ್ಲಿ ಜನಪ್ರಿಯವಾಗಿದ್ದವು. ಪಗಡೆ ಮತ್ತು ಚೆಂಡಾಟದ ಹಲವಾರು ನಮೂನೆಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ನೂ ಬದುಕಿವೆ.

ನಮ್ಮ ಜನಪದ ಸಾಹಿತ್ಯದಲ್ಲಿ ಚೆಂಡು, ಬಗರಿ, ಪಗಡೆಯಾಟಗಳ ಪ್ರಸ್ತಾಪ, ಮೇಲಿಂದ ಮೇಲೆ ಬರುತ್ತಿದೆಯಷ್ಟೇ ಅಲ್ಲದೆ ಆ ಆಟಗಳಲ್ಲಿ ತಲ್ಲೀನರಾದ ವ್ಯಕ್ತಿಗಳ ಚಿತ್ರಗಳು ಮೇಲಿಂದ ಮೇಲೆ ಬರುತ್ತವೆ. ಆದರೆ ಆ ಆಟಗಳನ್ನು ಆಡುವ ವಿಧಾನದ ವಿವರಣೆ ಬರುವುದು ಕಡಿಮೆ.

ಹೀಗೆ ಕ್ರೀಡೆಯನ್ನು ಕುರಿತು ಅನಾದಿಕಾಲದಿಂದಲೂ ನಮ್ಮ ಶಿಷ್ಟ ಹಾಗೂ ಜನಪದ ಸಾಹಿತ್ಯಗಳಲ್ಲಿ ಉಲ್ಲೇಖಗಳು ಮೇಲಿಂದ ಮೇಲೆ ಬರುತ್ತಿವೆಯಾದರೂ ಈ ಕ್ರೀಡೆಯನ್ನು ಕುರಿತು ವಿವರಣೆ ನೀಡುವ ಗ್ರಂಥಗಳು ವಿರಳ, ಕನ್ನಡದಲ್ಲಂತೂ ಇಂತಹ ಗ್ರಂಥಗಳು ತೀರ ಕಡಿಮೆ. ಮಕ್ಕಳ ಆಟಗಳನ್ನು ಕುರಿತ ಡಾ. ವಿ.ಕೆ. ಜವಳಿಯವರ ಕೃತಿ, ‘ಶರೀರ ಶಿಕ್ಷಣ’ಕ್ಕೆ ಸಂಬಂಧಿಸಿದ ಕೆ.ಜಿ.ನಾಡಗೀರರ ಕೃತಿ, ಎಂ.ಎಚ್.ರಾಮಚಂದ್ರರಾವ್ ಇವರ ‘ಆಟಗಳು’ ಎಂಬ ಅನುವಾದ ಗ್ರಂಥ, ಜ್ಞಾನಗಂಗೊತ್ರಿಯ ‘ಕ್ರೀಡೆ ಮನೋಲ್ಲಾಸ’ ಎಂಬ ಗ್ರಂಥ ಹೀಗೆ ಕೆಲಸವನ್ನು ಬಿಟ್ಟರೆ ಕನ್ನಡದಲ್ಲಿ ಆಟಗಳನ್ನು ಕುರಿತು ಗ್ರಂಥಗಳಿಲ್ಲ. ಜನಪದ ಆಟಗಳನ್ನು ಕುರಿತ ಗ್ರಂಥವಂತೂ ಇನ್ನೂ ಬಂದಿಲ್ಲ.

ಜನಪದ ಆಟಗಳನ್ನು ಕುರಿತು ಡಾ.ಗದ್ದಗಿಮಠ ಅವರು ತಮ್ಮ ‘ಜಾನಪದ ಗೀತೆ’ಗಳೆಂಬ ಮಹಾಪ್ರಬಂಧದಲ್ಲಿ ಪ್ರಸ್ತಾಪ ಮಾಡಿ. ಕೆಲವು ಜಾನಪದ ಆಟಗಳ  ವಿವರಣೆಯಿತ್ತು ವಿಮರ್ಶಿಸಿದ್ದಾರೆ. ಆದರೆ ಅವರು ಪ್ರಬಂಧಕ್ಕೆ ಆಯ್ಕೆ ಮಾಡಿಕೊಂಡ ವಿಷಯ ಗೀತೆ, ಸಾಹಿತ್ಯಕ್ಕಷ್ಟೆ ಪರಿಮಿತವಾಗಿದ್ದರಿಂದ ಅವರು ಗೀತವನ್ನೊಳಗೊಂಡ ಕೆಲವು ಜನಪದ ಆಟಗಳನ್ನಷ್ಟೇ ವಿವೇಚನೆ ಮಾಡಿದ್ದಾರೆ. ಎಲ್ಲ ಬಗೆಯ ಆಟಗಳ ವಿವರಣೆಗೆ ಅಲ್ಲಿ ಆಸ್ಪದ ದೊರೆತಿಲ್ಲ. ಡಾ. ಜೀ.ಶಂ.ಪರಮಶಿವಯ್ಯನವರು ‘ಹೊನ್ನ ಬಿತ್ತೇವು ಹೊಲಕ್ಕೆಲ್ಲ’ ಎಂಬ ಉದ್ಗ್ರಂಥದಲ್ಲಿ ದಕ್ಷಿಣ ಕರ್ನಾಟಕದ ಜನಪದ ಸಾಹಿತ್ಯದಲ್ಲಿಯ ಮಕ್ಕಳ ಹಾಡುಗಳನ್ನು ಕುರಿತು ವಿವೇಚಿಸುವಾಗ ಪ್ರಾಸಂಗಿಕವಾಗಿ ಹಾಡುಗಳಿಂದ ಕೂಡಿದ ಕೆಲವು ಆಟಗಳನ್ನು ಹೆಸರಿಸಿ ಕೆಲವು ಆಟಗಳ ಪರಿಚಯ ಮಾಡಿಕೊಟ್ಟಿದ್ದಾರೆ. ಇಲ್ಲಿಯೂ ಆಟಕ್ಕಿಂತ ಅಲ್ಲಿರುವ ಸಾಹಿತ್ಯದ ಕಡೆಗೆ ಹೆಚ್ಚಿನ ಗಮನ ಕೊಡಲಾಗಿದೆ. ಇದೇ ಗ್ರಂಥದಲ್ಲಿ ಶಿಶುಪ್ರಾಸಗಳ ವಿಷಯವಾಗಿ ವಿವರವಾಗಿ  ಚರ್ಚಿಸಿದ ಶ್ರೀ ಈಶ್ವರಚಂದ್ರ ಚಿಂತಾಮಣಿಯವರು ಕೂಡ ಹಾಡುಗಳುಳ್ಳ ಆಟಗಳ ಬಗೆಗೆ ತುಸು ವಿವರವಾಗಿ  ಚರ್ಚಿಸಿದ್ದಾರೆ. ‘ಜಾನಪದ’ವೆಂಬ ಷಾಣ್ಮಾಸಿಕದ ನಾಲ್ಕನೆಯ ಸಂಚಿಕೆಯಲ್ಲಿ ಶ್ರೀ. ಡಿ.ಕೆ. ರಾಜೇಂದ್ರ ಅವರು ಶಿಶುಪ್ರಾಸಗಳನ್ನು ಕುರಿತು ಪ್ರಬಂಧವೊಂದನ್ನು ಬರೆದು ಅಲ್ಲಿ ಮಕ್ಕಳ ಕೆಲವು ಆಟಗಳನ್ನು  ಉದಾಹರಿಸಿ ವಿವರಣೆ ನೀಡಿದ್ದಾರೆ. ‘ಜಾನಪದ’ ಸಂಚಿಕೆ ಮೂರನೆಯದರಲ್ಲಿ ಬಿ.ವಿ. ವಿವೇಕ ರೈ ಅವರು ‘ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಜನಪದ ಕಲಾತ್ಮಕ ವಿನೋದಗಳು’ ಎಂಬ ಪ್ರಬಂಧದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಚಲಿತವಿರುವ ಕೆಲವು ಆಟ ವಿನೋದಗಳನ್ನು ಪರಿಚಯಿಸಿದ್ದಾರೆ. ಶ್ರೀ ಗುಂಡ್ಮಿ ಚಂದ್ರಶೇಖರ ಯತಾಳ ಇವರು ತಮ್ಮ ‘ಮದ್ದುಂಟೇ ಜನನ ಮರಣಕ್ಕೆ’ ಎಂಬ ಗ್ರಂಥದ  ಮುನ್ನುಡಿಯಲ್ಲಿ ಆಟಗಳನ್ನು ಕುರಿತು ವಿವೇಚಿಸಿದ್ದಾರೆ. ಆದಿ ಚುಂಚನ ಗಿರಿಯಲ್ಲಿ ಟಿ. ಎನ್. ರಾಜಪ್ಪನವರು, ಆಟಕ್ಕೆ ಸಂಬಂಧಿಸಿದ ಶಿಶು ಪ್ರಾಸಗಳನ್ನು ಸಂಗ್ರಹಿಸಿದ್ದಾರೆ. ಅಲ್ಲಿ ಆಟದ ಬಗೆಗೆ ವಿವರಣೆಯಿಲ್ಲ. ಇದೇ ಗ್ರಂಥದಲ್ಲಿ ಶ್ರೀ.ಕೆ.ಶ್ರೀಕಂಠ ಅವರು ಲಗ್ಗೆ ಆಟ ಕುರಿತು ಉತ್ತಮ ಪರಿಚಯಾತ್ಮಕ ಲೇಖನವೊಂದನ್ನು ಬರೆದಿದ್ದಾರೆ. ಸುಧಾ ಪತ್ರಿಕೆಯಲ್ಲಿ ‘ಕಂದನ ಕಾವ್ಯಮಾಲೆಯಲ್ಲಿ’ ಕೆಲವು ಆಟದ ಹಾಡುಗಳು ವಿವರಣೆ ರಹಿತವಾಗಿ ಪ್ರಕಟವಾಗಿವೆ. ಇವುಗಳ ಹೊರತಾಗಿ ಶಾರೀರಿಕ ಶಿಕ್ಷಣ ತರಬೇತಿ  ಕೇಂದ್ರಗಳು ಹೊರಡಿಸುವ ಪತ್ರಿಕೆಗಳಲ್ಲಿ ದೇಶೀಯ ಆಟಗಳು ನಿಯಮಬದ್ದವಾಗಿ ಪ್ರಕಟವಾಗಿವೆ. ಚಿಕ್ಕಮಕ್ಕಳ ಪುಸ್ತಕಗಳಲ್ಲಿ ಲಗೋರಿ, ಕುಂಟಲಿಪಿ, ಕಣ್ಣೇ ಮುಚ್ಚೇ, ಕಂಬಳ ಮುಂತಾದ ಆಟಗಳ  ವಿವರಣೆಗಳು  ಅಲ್ಲೊಂದು ಇಲ್ಲೊಂದು ದೊರಕುತ್ತವೆ. ಇಲ್ಲಿಗೆ ಜನಪದ ಆಟಗಳ  ಆಟಗಳ  ಕೃಷಿಯಲ್ಲಿ ಕಥೆ ಹೆಚ್ಚು ಕಡಿಮೆ ಮುಗಿಯಿತು. ಈ ಮೇಲಿನ ಪಕ್ಷನೋಟದಿಂದ, ಮನುಷ್ಯನ ಜೀವನದಲ್ಲಿ ಅತ್ಯಮೂಲ್ಯವಾದ ಆಟಗಳ ಕ್ಷೇತ್ರ ಎಷ್ಟು ಬಡವಾಗಿದೆಯೆಂಬುದು ಸಹೃದಯಿಗಳ  ಕೊರತೆಯನ್ನು  ನೀಗಿಸುವ ಹೇತುವಿನಿಂದ ಉತ್ತರ ಕನ್ನಡ ಜಿಲ್ಲೆಯ ಆಟಗಳನ್ನು ಈ ಗ್ರಂಥದಲ್ಲಿ ಒಂದೆಡೆ ಕ್ರೋಢೀಕರಿಸಿ ಆಯಾ ಆಟಗಳನ್ನು ಆಡುವ ವಿಧಾನಗಳನ್ನು ವಿವರಿಸಿದ್ದೇವೆ. ಈ ದಿಸೆಯಲ್ಲಿ ಇದೊಂದು ಅಲ್ಪ ಸೇವೆ.

ವರ್ಗೀಕರಣ:

ಸಂಗ್ರಹಿಸಿದ ಆಟಗಳನ್ನು ವರ್ಗೀಕರಿಸುವುದು ತುಂಬ ತೊಡಕಿನ ಕೆಲಸ. ಯಾವ ಬಗೆಯಲ್ಲಿ ವರ್ಗೀಕರಿಸಿದರೂ ವರ್ಗೀಕರಣ ಪರಿಪೂರ್ಣವಾಗುತ್ತದೆಯೆಂದು ಧೈರ್ಯವಾಗಿ ಹೇಳಲಾಗದು, ಆಟಗಳನ್ನು ಹೊರಂಗಣ ಮತ್ತು ಒಳಾಂಗಣ ಆಟಗಳೆಂದು ವರ್ಗಿಕರಿಸುವುದುಂಟು. ಹೀಗೆ ವಿಶಾಲ ತಳಹದಿಯ ಮೇಲೆ ಆಟಗಳನ್ನು ಎರಡೇ ಬಗೆಯಲ್ಲಿ ವಿಭಾಜನೆಗೆ ಅಳವಡಿಸಿಕೊಂಡು ಅಭ್ಯಸಿಸುವುದು ಹೆಚ್ಚಿನ ಪ್ರಯೋಜನವನ್ನು ನೀಡಲಾರದು. ಕೆಲವು ಆಟಗಳು ಎರಡೂ ಪಂಗಡಕ್ಕೆ ಸೇರಿದಂಥವು.

ಗಂಡುಮಕ್ಕಳ, ಹೆಣ್ಣುಮಕ್ಕಳ ಆಟವೆಂದು ವಿಭಾಗ ಮಾಡುವುದಿದೆ. ಆದರೆ ಜಾನಪದ ಆಟಗಳನ್ನು ಚಿಕ್ಕವರಿರುವಾಗ ಗಂಡು ಹೆಣ್ಣೆಂಬ ಭೇದವಿಲ್ಲದೆ ಎಲ್ಲರೂ ಆಡುತ್ತಾರೆ. ಇಷ್ಟೇ ಅಲ್ಲದೆ ಕೆಲವಡೆಯಲ್ಲಿ ಹೆಣ್ಣು ಮಕ್ಕಳಾಟವೆಂದು ಪರಿಗಣಿಸಲ್ಪಟ್ಟ ಆಟಗಳನ್ನು ಗಂಡುಮಕ್ಕಳೂ ಆಡುತ್ತಾರೆ. ಉದಾಹರಣೆಗೆ ಗಜ್ಜುಗ ಇಲ್ಲವೆ ಹರಳಾಟ ಹೆಣ್ಣು ಮಕ್ಕಳ ಆಟವೆಂದು ಕೆಲವು ಪ್ರದೇಶದಲ್ಲಿ ತಿಳಿದಿದ್ದರೆ, ಇನ್ನೊಂದು ಪ್ರದೇಶದಲ್ಲಿ ಅದನ್ನು ಗಂಡು ಹೆಣ್ಣು  ಮಕ್ಕಳಿಬ್ಬರೂ ಆಡುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಹಾಣೆ, ಗೋಲಿ, ಗೆರೆಟೆಪುಳಿ ಆಟಗಳನ್ನು ಗಂಡುಮಕ್ಕಳು ಮತ್ರ ಆಡುತ್ತಾರೆ. ಉಳಿದೆಲ್ಲ ಆಟಗಳಲ್ಲಿ ಗಂಡು ಹೆಣ್ಣು ಮಕ್ಕಳು ಭಾಗವಹಿಸುತ್ತಾರ. ಕೆಲವರು ಹಲಗೆ ಆಟಗಳು (ಬೋರ್ಡಗೇಮ್ಸ ) ಆಡಗಾಟಗಳು (ಹೈಡಿಂಗ ಗೇಮ್ಸ್) ಗುಂಪಾಟಗಳು (ಪಾರ್ಟಿಗೇಮ್ಸ್) ಹಾಡಿನ ಆಟಗಳು (ಸಿಂಗಿಂಗ್‌ಗೇಮ್ಸಸ) ಎಂದು ಮುಂತಾಗಿ ವಿಭಜಿಸಿರುವುದೂ ಉಂಟು. ನಾವು ನಮಗೆ ಲಭ್ಯವಾದ ಆಟಗಳನ್ನು ಅಭ್ಯಸಿಸಲು ಅನುಕೂಲವಾಗಲೆಂದು ಆಟಗಳ ಗುಣಲಕ್ಷಣವನ್ನನುಲಕ್ಷಿಸಿ ಈ ಕೆಳಗಿನಂತೆ ವಿಭಜಿಸಿದ್ದೇವೆ :

೧. ಹರಳಾಟ ೨. ಬೆರಳಾಟ ೩. ತುಳಿದಾಟ ೪. ಸುತ್ತಾಟ ೫ ಹುಡುಕಾಟ ೬ ಕುಂಟಾಟ ೭ ಎಳೆದಾಟ ೮ ಗುರಿಯಾಟ ೯ ಬೆನ್ನಟ್ಟುವ ಆಟ ೧೦ ಅನುಕರಣ ದಾಟಗಳೆಂದು ಹತ್ತು ಬಗೆಯಲ್ಲಿ ವಿಭಜಿಸಿಕೊಳ್ಳಲಾಗಿದೆ. ಈ ಕೃತಿ ಸಹೃದಯರ ಮೆಚ್ಚುಗೆ ಪಡೆಯಬಹುದೆಂದು ಆಶಿಸುತ್ತೇವೆ.

ಸಂಪಾದಕರು.