ಕಾವೇರಿಯಿಂದ ನರ್ಮದೆಯವರೆಗೆ ಉತ್ತರಕ್ಕೆ, ಕಾವೇರಿಯಿಂದ ದಕ್ಷಿಣಕ್ಕೆ ನೀಲಗಿರಿ ಪರ್ವತದವರೆಗೆ ಹಬ್ಬಿದ್ದ ಪ್ರಾಚೀನ ಕನ್ನಡ ನೆಲದಲ್ಲಿ ಅಲ್ಲಲ್ಲಿ ನಾಡುಗಳಾಗಿ ಅರಸರಿಂದ ಆಳಲ್ಪಟ್ಟವು. ಮಾಂಡಲಿಕರು ಮಾಲಕರಾದರು. ಸಂಸ್ಥಾನಗಳು-ದೇಸಗತಿಗಳು ರಚನೆಗೊಂಡು ಅಲ್ಲಿಯೂ ಅರಸರ ಆಳಿಕೆಗಳು ನಡೆದು ಬಂದವು, ಹೀಗಿರುವ ಇತಿಹಾಸವನ್ನು ಕರ್ನಾಟಕದ ಇತಿಹಾಸ ಪುಟಪುಟಗಳಲ್ಲಿ ಕಾಣುತ್ತೇವೆ. ಈ ಐತಿಹಾಸಿಕ ನೆಲಕ್ಕೆ ೪ನೇ ಶತಮಾನದ ನಂತರ ಮಹಾರಾಷ್ಟ್ರ (ದೊಡ್ಡದೇಶ) ವೆಂದು ಚಾಲುಕ್ಯ ಅರಸರೇ ಹೆಸರಿಟ್ಟರು. ಹೀಗೆ ಸಾಗಿಬಂದು ವಿಜಯನಗರ ಸಾಮ್ರಾಜ್ಯವು ಪತನವಾದ ನಂತರ ವಸಹಾತು ಶಾಹಿ ಅರಸರಿಂದ ಭಾರತ ಮತ್ತು ಕರ್ನಾಟಕ ಮೋಸ ವಂಚನೆಗಳಿಗೆ ಈಡಾದವು.

ಕ್ರಿ.ಶ. ೪ ರಿಂದ ಕದಂಬರಿಂದ ಮೊದಲುಗೊಂಡು ಕ್ರಿ.ಸ. ೧೯ ಶತಮಾನದ ಬ್ರಿಟೀಶ ಆಳಿಕೆಯು ಐತಿಹಾಸಿಕವಾಗಿ ತಿಳಿದುಬಂದ ಸಂಗತಿಯಾಗಿದೆ.

ಕನ್ನಡ ನೆಲದ ಕರಾವಳಿ, ಮಲೆನಾಡು ಮತ್ತು ಬೆಳವಲ ಈ ಮೂರು ಪ್ರದೇಶದ ಮುಖ್ಯ ಮಹತ್ವದ ನೆಲ ಕಿತ್ತೂರು ನಾಡಾಗಿದೆ.

ಇಲ್ಲಿಯ ರಾಜರು ಕ್ರಿ.ಶ. ೧೫೮೫ ರಿಂದ ಕ್ರಿ.ಶ.  ೧೮೨೪ರ ವರೆಗೆ ಅಂದರೆ ಹಿರೇಮಲ್ಲಶೆಟ್ಟಿಯಿಂದ ಶಿವಲಿಂಗರುದ್ರ ದೇಸಾಯಿ (೧೮೧೬-೧೮೨೪ರ ವರೆಗೆ) ಒಟ್ಟು ಹನ್ನೆರಡು ಸಂಸ್ಥಾನಿಕ ಅರಸರು ಆಳಿಕಲೆಯಾಗಿ ಕೊನೆಗೊಂಡ ಇತಿಹಾಸ ಕಿತ್ತೂರ ಇತಿಹಾಸವಾಗಿರುವುದು ನಮ್ಮ ಕಣ್ಮುಂದೆ ಇದೆ. ಈ ಪರಂಪರೆಯಲ್ಲಿ ಕಿತ್ತೂರ ರಾಣಿ ಚೆನ್ನಮ್ಮನ ಇತಿಹಾಸ ಉಜ್ವಲವಾಗಿದೆ. ಈ ಚೆನ್ನಮ್ಮಾಜಿಯ ಬಲಗೈ ಬಂಟ ಸಂಗೊಳ್ಳಿ ರಾಯಣ್ಣನ ಚರಿತ್ರೆಯು ಮತ್ತಷ್ಟು ವೀರವತ್ತಾಗಿದೆ.

‘ಕಿತ್ತೂರು ನಾಡು’ ಸಹ್ಯಾದ್ರಿಯ ಸೆರಗಿನೊಂದಿಗೆ ಪ್ರಾರಂಭವಾಗಿ ಭೂರಮೆಯ ಬೃಹತ್‌ಸೀರೆಯಾಕಾರದ ಸಿರಿಯಿಂದೊಡಗೂಡಿದ ನಾಡಾಗಿದೆ. ತಲ್ಲೂರ ರಾಯನಗೌಡರು ಸಂಗ್ರಹಿಸಿದ ಕಿತ್ತೂರ ಬಂಡಾಯದಲ್ಲಿ ಮಲ್ಲಸರ್ಜಭೂಪನ ಕಾಲದ ಒಂದು ಜನಪದ ವಿವರ ಕೆಳಗಿನಂತಿದೆ.

ತ್ಯಾಗದೋಳ್‌ಭೋಗದೋಳ್‌ಮಿಗಿಲಾದ ಕಿತ್ತೂರು
ದೇಗಾವಿ ಬೈಲೂರು ಹೆಸರಾದ ತೋಲಗಿಯು
ತೇಗೂರು ತಿಗಡೊಳ್ಳಿ ಬಸವಪುರ, ಮಲ್ಲಪುರ ಹಿರಿನಂದಿ ಹಳ್ಳಿಗಳಿಗೆ

ಕುರವಿಂದದಂತಿರುವ ಕುರುಗುಂಡ ತುರಮರಿಯು
ಪರತರ ಸುಗಂದಮಂ ಬೀರುತಿಹ ಪ್ರೀಹಿಗಳು
ಸರಸಾಗಿ ಬೆಳೆಯುತಿಹ ಕಲಭಾವಿ ಕಡತಾಳ ಮೊದಲಾದ ಗ್ರಾಮಗಳಿಗೆ

ಮಾಂಗಲ್ಯಕರಮಾದ ಸಂತ್ಕೇಂದ್ರ ತಾನಾಗಿ
ಸಂಗೀತ ಸಾಹಿತ್ಯ ಶಾಸ್ತ್ರದೋಳ್‌ಪಿರಿದೆನೆಸಿ
ಬಂಗಾರದಂತಿರುವ ಮಲ್ಲಸರ್ಜಭೂಪನಿಂ ಸಿಂಗಾರಮಾಗಿರುವುದು.

ಕಿತ್ತೂರಿನ ಇತಿಹಾಸ ಕಣ್ಣಿಂದ ಕಂಡು ಕಿವಿಯಾರೆ ಕೇಳಿದ ಕಲ್ಮೇಶ್ವರ ಶ್ರೇಷ್ಠಿ ಅಲ್ಲಿಯ ಯುದ್ಧದ ಪರಿಕರ ಹಾಗೂ ಪರಿಸರದ ಬಗೆಗೆ ಕೆಳಗಿನಂತೆ ವಿವರ ನೀಡಿರುವನು.

ಆನೆ ಒಂಟೆಗಳು ನಾಲ್ಕುನೂರಾ ಎಪ್ಪತ್ಮೂರು ರಾಹುತರು
೧೮ ಲಕ್ಷ ಹೊನ್ನಿನ ನಾಣ್ಯಗಳು
೪ ಲಕ್ಷ ವಜ್ರ ವೈಡೂರ್ಯ
೩೦೦೦ ಕುದುರೆಗಳು
೧೦೦೦ ಒಂಟಿಗಳು
೫೬೦ ಬಂದೂಕುಗಳು
೮೦೦೦ ಟನ್‌ಮದ್ದು-ಗುಂಡುಗಳು
೩೬ ಕಂಚಿನ ತೋಪುಗಳು

[1]

ಮಲ್ಲಸರ್ಜನ ಎರಡನೆಯ ರಾಣಿ ಚೆನ್ನಮ್ಮಾಜಿ, ಕಾಕತಿ ದೇಸಾಯರ ಮಗಳು. ಬಾಲ್ಯದಲ್ಲಿ ಸಿಂಹಗಳ ಬೇಟಯಾಡಿದ ವೀರಕುಮಾರಿ, ವೀರರಾಣಿಯಾಗಿದ್ದು ಇತಿಹಾಸದ ಹೆಮ್ಮೆ. ಕ್ರಿ.ಶ. ೧೮೧೬ರಿಂದ ಕಿತ್ತೂರ ರಾಜ್ಯಭಾರದಲ್ಲಿ ಹಿರಿಮೆ. ಬ್ರಿಟೀಶರ ಕಿರಿಕಿರಿಯಿಂದ ತಾನೇ ಸಜ್ಜಾಗಿ ರಾಜ್ಯಭಾರ ನಡೆಯಿಸಿದಳು. ಆಗ ಸಮಕಾಲೀನ ಜಾನಪದರು ತಿಳಿಸುವಂತೆ-

ಕಿತ್ತೂರು ಚೆನ್ನಮ್ಮ ಸುತ್ತೂರು ಒಡತ್ಯಾಗಿ
ಕತ್ತಿ ಕವಚಗಳ ಉಟುಪುಟ್ಟೋ
ಕತ್ತಿ ಕವಚಗಳ ಉಡುಪಟ್ಯೋ-ಅಬ್ಬರದಿ
ಬತ್ತಲಗುದರಿಯ ಜಿಗದಾಳೋ!

ಕಿತ್ತೂರ ಯುದ್ಧಕ್ಕೆ ತನ್ನ ಸೈನಿಕರಿಗೆ ಕರೆ ಕಳುಹಿಸಿದಳು. ಮುಖ್ಯವಾಗಿ ವೀರರನ್ನು ಲೆಕ್ಕಕ್ಕೆ ತೆಗೆದುಕೊಂಡಳು. ರಕ್ತಮಾನ್ಯದ ಹೊಲ ಹೊಂದಿದ ರೋಗಣ್ಣವರ ಸಂಗೊಳ್ಳಿಯ ರಾಯಣ್ಣನನ್ನು ತೀವ್ರವಾಗಿ ಬರಹೇಳಿದಳು. ಸಂಗೊಳ್ಳಿಯ ವಾಲೀಕಾರ ಮನೆತನದ ಭರಮಪ್ಪ-ಕೆಂಚವ್ವ ದಂಪತಿಗಳ ವೀರಪುತ್ರ ಚೆನ್ನಮ್ಮಾಜಿಯನ್ನು ತಾಯಿ ಸ್ವರೂಪದಲ್ಲಿ ಕಂಡನು. ಆತನ ಸಾಹಸಮಯ ಜೀವನಗಾಥೆಯ ವಿವರಗಳು ಜನಪದರ ನಾಲಿಗೆಗಳಲ್ಲಿ ಉಳಿದು ನಿಜ ಇತಿಹಾಸ ದೊರಕುತ್ತಿದೆ. ಇನ್ನೂ ಕಿತ್ತೂರ ನಾಡಿನ ಇತಿಹಾಸ ಬರೆಯಬೇಕಾಗಿದೆ.

ಭಾರತದಲ್ಲಿ ಬ್ರಿಟೀಶರ ವಿರುದ್ಧ ಟೀಪು ಸುಲ್ತಾನನ ನಂತರದ ಇತಿಹಾಸವೆಂದರೆ ಕಿತ್ತೂರ ಸಂಸ್ಥಾನದ, ರಾಣಿ ಚೆನ್ನಮ್ಮಾಜಿಯ, ಸಂಗೊಳ್ಳಿ ರಾಯಣ್ಣನ ಹಾಗೂ ಸಾವಿರ ಸಾವಿರ ವೀರರ, ಲಕ್ಷಾವದಿ ಜನರ ಇತಿಹಾಸ ನಮ್ಮ ಕಣ್ಣು ಮುಂದಿರುವ ಚರಿತ್ರೆಯಾಗಿದೆ. ಬ್ರಿಟೀಶರನ್ನು ಭಾರತದಿಂದ ಹೊರಹಾಕುವ ಮೊದಲ ಹೋರಾಟ ಕಿತ್ತೂರಿನ ವೀರರದು.
[1]     ವಿ.ಜಿ. ಮಾರಿಹಾಳ, ಕಿತ್ತೂರಿನ ಇತಿಹಾಸ, ಕ.ವಿ.ವಿ. ಧಾರವಾಡ. ಜುಲೈ ೧೯೭೭.