ಜಾನಪದದಲ್ಲಿ ಇಡಿ ಬ್ರಹ್ಮಾಂಡವೇ ಅಡಗಿದೆ. ಅದರಲ್ಲಿ ಒಳಗೊಳ್ಳದ ವಿಷಯವೇ ಇಲ್ಲ. ಇಂದಿನ ಅನೇಕ ವಿಷಯಗಳಿಗೆ ಜಾನಪದವೇ ಮೂಲ. ಜಾನಪದದಲ್ಲಿ ಅತಿ ತಡವಾಗಿ ಹುಟ್ಟಿಕೊಂಡಂತಹ ವಿಷಯಗಳೆಂದರೆ ಒಗಟು ಮತ್ತು ಜನಪದ ಗಣಿತ. ಇದರಲ್ಲಿಯೇ ಜನಪದ ಗಣಿತ ಶಾಸ್ತ್ರ ವಿಷಯವಾಗಿರುವುದರಿಂದ ಜನಪದ ಸಾಹಿತ್ಯದ ಪರಿಧಿಯಿಂದ ಹೊರಗುಳಿದು, ಜಾನಪದದ ಒಂದು ಪ್ರಮುಖ ಅಂಗವಾಗಿದೆ.

ಜನಪದರು ಕ್ರೀಡಾಪ್ರಿಯರು, ತಮ್ಮ ಬಿಡುವಿನ ವೇಳೆಯಲ್ಲಿ ಕ್ರೀಡೆಗಳಲ್ಲಿ ತೊಡಗುತ್ತಾರೆ. ಅದು ಹೆಚ್ಚಾಗಿ ಸಂಜೆಯ ಸಮಯದಲ್ಲಿ ದೇಹಶಕ್ತಿ ಬೆಳೆಸಬೇಕೆನ್ನುವವರು ಕುಸ್ತಿ, ಸರಮನಿ, ಕಬಡ್ಡಿ, ಭಾರವೆತ್ತುವದು ಮುಂತಾದ ದೈಹಿಕ ಕ್ರೀಡೆಗಳಲ್ಲಿ ತೊಡಗಿ ತಮ್ಮ ಶಕ್ತಿಪ್ರದರ್ಶನ ಮಾಡಿದರೆ, ಕಂಠವಿದ್ದವರು ವಿವಿಧ ಪ್ರಕಾರದ ಹಾಡುಗಳನ್ನು ಹಾಡಿ ಕೇಳುಗರಿಂದ ಶಹಬ್ಬಾಷಗಿರಿ ಪಡೆಯುತ್ತಾರೆ. ಆದರೆ ತಲೆ ಇದ್ದವರು ಮತ್ತು ದೈಹಿಕ ಬಲಹೀನರು ಹೆಚ್ಚಾಗಿ ಒಗಟು, ಲೆಕ್ಕಗಳನ್ನು ಹೇಳಿ ಇಲ್ಲವೆ ಬಿಡಿಸಿ ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸುತ್ತಾರೆ. ಅಷ್ಟೇ ಅಲ್ಲದೆ ‘ಈ ಬುದ್ಧಿ ಪ್ರದರ್ಶನದ ಆಟಗಳು ಮನೆಯಲ್ಲಿ ಹೊತ್ತು ಹೋಗದಾಗ, ಕೆಲಸದಲ್ಲಿ ದಣಿವಾದಾಗ, ಪ್ರವಾಸದಲ್ಲಿ ಪ್ರಯಾಣ ಬೇಸರವಾದಾಗ ಬಯಲಿಗೆ ಬರುತ್ತವೆ. ಹೆಚ್ಚಾಗಿ ಹಿರಿಯರೇ ಒಗಟುಗಳನ್ನು ‘ಲೆಕ್ಕಗಳನ್ನು ಹೇಳುತ್ತಾರೆ. ಕಿರಿಯರು ಉತ್ತರ ಕೊಡುತ್ತಾರೆ. ಅವರಿಗೆ ಸಾಧ್ಯವಾಗದ ಪಕ್ಷದಲ್ಲಿ ಹಿರಿಯರೇ ಉತ್ತರ ಹೇಳಿ, ತಮ್ಮ ಪಾಂಡಿತ್ಯವನ್ನು ತೋರಿಸಿ ಜಂಬಕೊಚ್ಚಿ ಕೊಳ್ಳುತ್ತಾರೆ.ಕೆಲವು ಸಂದರ್ಭಗಳಲ್ಲಿ ಎರಡು ಪಂಗಡಗಳಾಗಿ ಪ್ರಶ್ನೆ ಹಾಕುವ, ಉತ್ತರ ಬಿಡಿಸುವ-ಹೇಳುವ ಸ್ಪರ್ಧೆಗಳು ನಡೆಯುತ್ತವೆ. ಹೀಗಾಗಿ ಈ ಆಟಗಳು ಕೂಡಿದ ಜನಕ್ಕೆ ಒಂದು ರೀತಿಯ ಮನರಂಜನೆಯನ್ನು ನೀಡಿ ಸಂತುಷ್ಟಗೊಳಿಸುತ್ತವೆ. ಹೀಗಾಗಿ ಈ ಆಟಗಳು ಕೂಡಿದ ಜನಕ್ಕೆ ಒಂದು ರೀತಿಯ ಮನರಂಜನೆಯನ್ನು ನೀಡಿ ಸಂತುಷ್ಟಗೊಳಿಸುತ್ತವೆ. ಒಗಟುಗಳಿಗಿಂತ ಜನಪದ ಗಣಿತ ಹೆಚ್ಚು ಕಠಿಣವಾಗಿರುವುದರಿಂದ ಮನರಂಜನೆಯನ್ನು ನೀಡುವದರೊಂದಿಗೆ ತಾರ್ಕಿಕತೆ, ಬುದ್ಧಿತೀಕ್ಷ್ಣತೆಯನ್ನು ಹೆಚ್ಚಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಬಹುದು.

ಮನುಷ್ಯ ಪ್ರತಿಯೊಂದು ಕಾರ್ಯವನ್ನು ಲೆಕ್ಕ ಹಾಕಿಯೇ ಮಾಡುತ್ತಿರುತ್ತಾನೆ. ಲೆಕ್ಕವಿಲ್ಲದ ಬದುಕು ನಾವಿಕನಿಲ್ಲದ ದೋಣಿಯಂತೆ. ಹೀಗಾಗಿ ಲೆಕ್ಕ ಮನುಷ್ಯ ಜೀವನದ ಒಂದು ಪ್ರಮುಖ ಅಂಗವಾಗಿ ಬೆಳದುಬಂದಿದೆ. ಜನಪದರು ತಮ್ಮ ನಿತ್ಯ ಜೀವನದ ಕಲಾಪಗಳನ್ನು ಲೆಕ್ಕಹಾಕಿ ನಿರ್ವಹಿಸುತ್ತ ಬಂದಿದ್ದಾರೆ. ಲೆಕ್ಕಾಚಾರದ ಮೇಲೆಯೇ ತಮ್ಮ ಬದುಕನ್ನು ನಡೆಸುತ್ತಾರೆ. ಅದಕ್ಕಾಗಿ ಅವರ ಅನುಭವದ ಅಭಿವ್ಯಕ್ತಿಯಾದ ಜಾನಪದದಲ್ಲಿ ಇದೂ ಒಂದು ಮಹತ್ವದ ಪ್ರಕಾರವಾಗಿ ಬೆಳೆದು ಬಂದಿದೆ.

ಜನಪದರು ಗಣಿತವನ್ನು ತಮ್ಮ ಜೀವನದಲ್ಲಿ ಪ್ರಮುಖವಾಗಿ ಎರಡು ಕಾರಣಕ್ಕಾಗಿ ಬಳಸಿಕೊಂಡು ಬಂದಿದ್ದಾರೆ. ಒಂದು ವ್ಯವಹಾರಕ್ಕಾಗಿ ಇನ್ನೊಂದು ಮನರಂಜನೆಗಾಗಿ, ಪಾಂಡಿತ್ಯ ಪ್ರದರ್ಶನಕ್ಕಾಗಿ. ಓದು-ಬರಹ ಬರದವರು ಕೊಡುಕೊಳ್ಳುವ ವಿಷಯವನ್ನು, ಆಳು-ಕಾಳಿನ ಲೆಕ್ಕಗಳನ್ನು ಗೋಡೆಯ ಮೇಲಿಯೊ ಮನೆಯ ನಾಗಾಸರ-ತೊಲೆ-ಕಂಬಗಳ ಮೇಲಿಯೊ ಇದ್ದಲಿಯಿಂದ ಇಲ್ಲವೆ ಸುಣ್ಣದ ಹಳ್ಳ-ವಿಭೂತಿಗಳಿಂದ ವಿವಿಧ ಚಿಹ್ನೆಗಳನ್ನು ಹಾಕಿ ನೆನಪಿಟ್ಟುಕೊಳ್ಳುತ್ತಿದ್ದರು. ಅಮವಾಸ್ಯೆ, ಹುಣ್ಣಿವೆ, ಹಬ್ಬ-ಹರಿದಿನಗಳೇ ಅವರ ಲೆಕ್ಕಕ್ಕೆ ಆಧಾರ. ಇನ್ನೂ ಮನರಂಜನೆಗಾಗಿ ಮತ್ತು ಪಾಂಡಿತ್ಯ ಪ್ರದರ್ಶನಕ್ಕಾಗಿ ಹುಟ್ಟಿಕೊಂಡ ಲೆಕ್ಕಗಳು ಕುತೂಹಲಕಾರಿಯಾದವುಗಳು.ಇವು ಬುದ್ಧಿ ಚುರುಕುಗೊಳಿಸುವ ಒಂದು ಜನಪದ ಆಟವಿದ್ದಂತೆ. ಇಂಥ ಲೆಕ್ಕಗಳು ಅನೇಕ ವಿಧವಾಗಿವೆ.

ಜನಪದ ಗಣಿತದಲ್ಲಿಯ ಲೆಕ್ಕಗಳನ್ನು ಗದ್ಯರೂಪ ಮತ್ತು ಪದ್ಯರೂಪದ ಲೆಕ್ಕಗಳೆಂದು ಪ್ರಮುಖವಾಗಿ ಎರಡು ವಿಧವಾಗಿ ವರ್ಗೀಕರಿಸಬಹುದು. ಇವುಗಳಲ್ಲಿ ಗದ್ಯರೂಪದ ಲೆಕ್ಕಗಳೇ ಹೆಚ್ಚು. ಈ ಗದ್ಯರೂಪದ ಲೆಕ್ಕಗಳನ್ನು ಮತ್ತೆ ಕಥಾರೂಪದ, ಚುಟುಕುರೂಪದ ಲೆಕ್ಕಗಳೆಂದು ಎರಡು ವಿಧವಾಗಿ ವಿಂಗಡಿಸಬಹುದು.ಇವುಗಳಲ್ಲಿ ಕಥಾರೂಪದ ಲೆಕ್ಕಗಳೇ ಹೆಚ್ಚು ಸ್ವಾರಸ್ಯಕರವಾಗಿವೆ. ಚುಟುಕುರೂಪದ ಲೆಕ್ಕಗಳು ಹೆಚ್ಚಾಗಿ ಮಕ್ಕಳಿಗಾಗಿ ಹೇಳುವ ಲೆಕ್ಕಗಳಾಗಿವೆ. ಆದರೆ ದೊಡ್ಡವರೂ ಒಮ್ಮೊಮ್ಮೆ ಇವುಗಳನ್ನು ಬಿಡಿಸಲು ತಿಣಿಕಾಡುವದುಂಟು. ಇನ್ನು ಪದ್ಯರೂಪದ ಲೆಕ್ಕಗಳು ತೀರ ವಿರಳ, ಇವು ಪಂಡಿತರಿಂದಲೇ ರಚನೆಗೊಂಡವುಗಳಾಗಿವೆ.