ಜಾನಪದಕ್ಕೆ ವಿಶ್ವ ವ್ಯಾಪಕ ಗುಣವಿರುವುದೆಂಬುದನ್ನು ಜಾನಪದ ಆಸಕ್ತರು ಈಗಾಗಲೇ ತಿಳಿದ ವಿಚಾರವೇ ಆಗಿರುತ್ತಾದರೂ ಪ್ರಾದೇಶಿಕವಾದ ಕೆಲವು ಸೂಕ್ಷ್ಮ ವ್ಯತ್ಯಾಸಗಳೂ ಇರುತ್ತವೆಂಬುದನ್ನೂ ವಿದ್ವಾಂಸರು ಮನಗಂಡಿದ್ದಾರೆ.  ಭೌಗೋಳಿಕ ವ್ಯತ್ಯಾಸ, ಭಾಷಿಕ ವ್ಯತ್ಯಾಸ, ಭಾಷಿಕ ವ್ಯತ್ಯಾಸ, ಸಣ್ಣ ಮಟ್ಟಿಗಿನ ಸಾಂಸ್ಕೃತಿಕ ವ್ಯತ್ಯಾಸಗಳು ಜಾನಪದ ಸಾಹಿತ್ಯದ ಮೇಲೆ ಬೀರುವ ಪ್ರಭಾವ ಈ ವ್ಯತ್ಯಾಸಕ್ಕೆ ಕಾರಣವಾಗುತ್ತವೆ.  ಈ ಹಿನ್ನೆಲೆಯಲ್ಲಿ ಬಯಲುಸೀಮೆಯ ಜಾನಪದ, ಮಲೆನಾಡಿನ ಜಾನಪದ, ಕರಾವಳಿಯ ಜಾನಪದ ಮುಂತಾಗಿ ವಿಭಾಗ ವಿಂಗಡಣೆಯನ್ನು ಅಧ್ಯಯನದ ದೃಷ್ಟಿಯಿಂದ ವಿಭಾಗಿಸಿ ಈಗಾಗಲೇ ಬಹಳಷ್ಟು ಕೆಲಸಗಳು ವಿಶ್ವವಿದ್ಯಾಲಯದ ಮಟ್ಟದಲ್ಲಿ ಆಗಿವೆ.

ಈ ಪುಸ್ತದ್ಲಿರುವ ಜಾನಪದ  ಸಾಹಿತ್ಯ ಕರಾವಳಿಯದ್ದೇ ಆದರೂ, ಇದು ಕುಂದನಾಡಿನ ಕರಾವಳಿಯದ್ದು. ಅದೂ ಕುಂದನಾಡಿನ ಉತ್ತರ ಭಾಗವಾದ ಬೈಂದೂರು ಮತ್ತು ಸುತ್ತಲಿನ ಊರುಗಳ ವ್ಯಾಪ್ತಿಯದ್ದು.

ಕುಂದನಾಡಿನ ಅಂದರೆ ಕುಂದಭಾಷೆಯನ್ನಾಡುವ ಜನಪದರು ನೆಲೆಗೊಂಡ ಉಡುಪಿ ಜಿಲ್ಲೆಯ ಕಲ್ಯಾಣಪುರ ಹೊಳೆಯ (ಸ್ವರ್ಣಾನದಿಯ) ಉತ್ತರ ಭಾಗದಿಂದ ಮೊದಲ್ಗೊಂಡು ಜಿಲ್ಲೆಯ ಉತ್ತರ ತುದಿಯ ಶಿರೂರಿನದಂಡಿನಹೊಳೆಯವರೆಗಿನ ಮತ್ತು ಪೂರ್ವ ಸಹ್ಯಾದ್ರಿಯ ಹಾಗೂ ಪಶ್ಚಿಮದ ಕಡಲು ಗಡಿಯಾಗುಳ್ಳ ಈ ನೆಲದ ಜಾನಪದ ಸಾಹಿತ್ಯದಲ್ಲಿ ತುಳು ನಾಡಿನ ಜಾನಪದ ಸಾಹಿತ್ಯದಲ್ಲಿರುವಂತೆ ಪಾಡ್ದಗಳು ಕೇಳಿ ಬರುವುದಿಲ್ಲ.  ಐತಿಹಾಸಿಕ ನಾಯಕರ, ವೀರರ ಕಥಾನಕಗಳು, ಉದಾ: ಕೋಟಿ ಚನ್ನಯ್ಯರಂಥವೀರರ ಹಾಡು ,ಕಥೆಗಳು ಸಾಮಾನ್ಯವಾಗಿ ಕೇಳಬರುವುದಿಲ್ಲ. ದೈವಗಳ ಹುಟ್ಟುಕಥೆಗಳು ಆರಾಧನಾ ಸಂದರ್ಭದಲ್ಲಿ ಕೇಳಬರುವುದೂ ವಿರಳ. ಇಲ್ಲವೆನ್ನಲಾಗದಂತೆ ಧಕ್ಕೆ ಬಲಿ, ನಾಗಮಂಡಲದ ಸಂದರ್ಭದಲ್ಲಿ ವೈದ್ಯರು ಹಾಡುತ್ತಾರೇನೋ ಹೌದು. ಆದರೆ ಅವು ಹೆಚ್ಚಾಗಿ ಆರ್ಯದೇವತೆಗಳೇ ಆಗಿರುವುದೊಂದು ವಿಶೇಷ.

ಇಲ್ಲಿನವರ ಹಾಡು, ಕಥೆಗಳು ಯಾವುದೇ ಐತಿಹಾಸಿಕ ಮಹತ್ವ (ಕೋಟಿ ಚನ್ನಯ್ಯರಂಥ), ರಾಜಕೀಯ  ಮಹತ್ವದ (ಬಯಲು ಸೀಮೆಯ ಸಂಗೊಳ್ಳಿ ರಾಯಣ್ಣನಂಥ), ಸಾಮಾಜಿಕ ತಲ್ಲಣದ ಘಟನೆಗಳನ್ನು ಹೇಳದೇ ಸಾಮಾನ್ಯ “ಸರ್ವನಾಮ”, ಎಲ್ಲೂ ನಡೆಯಬಹುದಾದ ಸಾಂಸಾರಿಕವಾದ ಕಥಎ ಹಾಡುಗಳೇ ಆಗಿರುತ್ತವೆ.  ಇಲ್ಲವೇ ಇಲ್ಲ ಎನ್ನಲಾಗದಂತೆ ಸಣ್ಣ ಸಣ್ಣ ಪ್ರದೇಶಕ್ಕೆ ಸಂಬಂಧಪಟ್ಟ ಹಾಗೆ ನಡೆಯಿತ್ತೆನ್ನಲಾದ ಕೆಲವು ಘಟನೆಗಳನ್ನು ಹಿರಿಯರ ಬಾಯಿಯಿಂದ ಕೇಳಬಹುದೇ ಹೊರತು, ಅದು ಹಾಡಾಗಿ , ಕಥೆಯಾಗಿ, ಸಾರ್ವತ್ರಿಕವಾಗಿ ಪ್ರಚಲಿತವಾಗಿಲ್ಲ.  ಉದಾಹರಣೆಗಾಗಿ ಹೇಳುವುದಾದಲ್ಲಿ ಬೈಂದೂರು ತಾಲೂಕಿನ ಕೆರ್ಗಾಲು  ಕಡಲ ತುದಿಯ ಒಂದು ಸಣ್ಣ ಗ್ರಾಮ. ಇಲ್ಲಿಯ ಭಗವತಿ ದೇವಸ್ಥಾನದ ಬಳಿಯಲ್ಲಿ ಮರ್ಲುಚಿಕ್ಕು, ಹಾಯ್ಗುಳಿ ಪರಿವಾರದ ದೈವದ ಮನೆ ಇದೆ. ಅದರ ಅನತಿ ದೂರದಲ್ಲಿ ಒಂದು ಸಣ್ಣ ಗುಡಿ ಇದೆ.ಅಲ್ಲಿರುವ ಉರುಹು ಮೋಳೆ ತಿರುಮನದೆಂದು ಹೇಳುತ್ತಾರೆ. ಆತನೊಬ್ಬ ಐತಿಹಾಸಿಕ ವ್ಯಕ್ತಿ. ಕೆಲವು ಶತಮಾನಗಳ ಹಿಂದ ಸಮೀಪದ ಬೋಂಬಳ್ಳಿಯ ರಾಜ ಮನೆತನದವರು ಸಮುದ್ರ ಸ್ನಾನಕ್ಕೆ ಕೆರ್ಗಾಲಿನ ಈ ಪ್ರದೇಶಕ್ಕೆ ಬಂದಾಗ ಯುವತಿಯೊಬ್ಬಳನ್ನು ಕೆಣಕಿದರೆಂದೂ ಆ ಯುವತಿಯ ಮಾನ ಕಾಪಾಡಲು ಈ ದಲಿತ ಮೋಳೆ ತಿಮ್ಮನೆಂಬಾತ ಏಕಾಂಗಿಯಾಗಿ ಅರಸು ಕುಲದವರೊಂದಿಗೆ ಸೆಣಸಿ ಮರಣವನ್ನಪಿದನೆಂದೂ, ಆತನೇ ದೈವವಾಗಿ ಇಲ್ಲಿ ನೆಲೆಗೊಂಡಿದ್ದಾನೆಂದು ಹೇಳುತ್ತಾರೆ. ನನಗಿದನ್ನು ಹೇಳಿದ್ದು,  ಆ ಭಾಗದ ಹಿರಿಯರೊಬ್ಬರು.  ಈಗಿನವರಲ್ಲಿ ಇದರ ವಿಚಾರ ಕೇಳಿದಾಗ ತಮಗೇನೂ ತಿಳಿಯದು, ತಮ್ಮ ಹಿರಿಯರು ಈ ಕಲ್ಲನ್ನು ಪೂಜಿಸಿಕೊಂಡು ಬಂದಂತೆ ನಾವೂ ಪೂಜಿಸುತ್ತೇವೆಂದು ಹೇಳಿದರು. ಚಂದದ ಜಾನಪದ ಹಾಡ್ಗಥೆಯಾಗಬಹುದಾಗಿದ್ದ ಇಂಥ ಸಂಗತಿ ಯಾಕೋ ಒಂದು ಕಲ್ಲಿನಲ್ಲಿ ಸ್ಥಾಯಿಯಾಯಿತೇ ಹೊರತು ಹಾಡಿನಲ್ಲಿ ಮೂಡಿಬರಲಿಲ್ಲ. ಹುಡುಕಿದರೆ ಇಂಥಹ ಹತ್ತಾರು ಐತಿಹ್ಯಗಳು ಈ ಭಾಗದಲ್ಲಿಯೂ ದೊರಕೀತು. ಆದರೆ ಯಾವುವೂ ಕಥೆಯಾಗದೇ, ಹಾಡಾಗದೇ ಅವಜ್ಞೆಗೊಳಗಾಗಿವೆ.

ಕೊಲ್ಲೂರಿನ ಬಳಿಯ ಮಾಸ್ತಿ ಕಟ್ಟೆಯ ಬಳಿ ಹತ್ತಾರು ಮಾಸ್ತಿ ಕಲ್ಲುಗಳಿವೆ. ಬಲಗೋಣು ಎಂಬಲ್ಲೂ ಬೆಟ್ಟದ ಮೇಲೆ ನಿರ್ಲಕ್ಷಿತವಾಗಿ ಬಿದ್ಧ ಸತಿಯ ಕಲ್ಲಿದೆ. ಇದು ಅಲ್ಲಿರುವ ಬ್ರಾಹ್ಮಣ ಮನೆತನದ ಒಬ್ಬ ಸೊಸೆ ಸತಿ ಹೋದ ಕುರುಹಿನ ಕಲ್ಲೆನ್ನುತ್ತಾರೆ.  ಆ ನೆನಪಿಗಾಗಿ ಈಗಲೂ ಆ ಮನೆತನದಲ್ಲಿ ಪ್ರತಿ ತಲೆಮಾರಿನಲ್ಲಿ ಹುಟ್ಟಿದ ಒಂದು ಹೆಣ್ಣು ಮಗುವಿಗೆ ಆ ಸತಿ ಹೋದ ಹೆಂಗಸಿನ ಹೆಸರನ್ನೇ ಇಡಬೇಕೆಂಬ ಕಟ್ಟಳೆಯನ್ನು ಮಾಡಿಕೊಂಡಿದ್ದಾರೆ.  ತ್ರಾಸಿಯ ಬಳಿ ಯುದ್ಧ ನಡೆದಿದೆ ಎನ್ನಲಾಗಿದ್ದು, ಅದಕ್ಕೆ ಸಾಕ್ಷಿಯಾಗಿ ಅಲ್ಲೂ ವೀರಗಲ್ಲುಗಳ ಸ್ಥಾಪನೆಯಾಗಿವೆ ಕಡಲುಗಳ್ಳರು, ಕರಾವಳಿಯುದ್ಧಕ್ಕೂ ದಾಂಧಲೆ ನಡೆಸಿದ ಐತಿಹ್ಯವೂ ಇದೆ. ಆದರೆ ಇವ್ಯಾವುವೂ ನಮ್ಮ ಜಾನಪದದ ಹಾಡಿಗೆ ಕಥೆಗೆ ವಸ್ತುಗಳಾಗದೇ  ಹೋದದ್ದು ಯಾವ ಕಾರಣಕ್ಕಾಗಿ ಎಂದು ತಿಳಿಯುತ್ತಿಲ್ಲ.

ಇಂಥದ್ದೇ ಘಟನೆಗಳು ಬಯಲು ಸೀಮೆ, ಮಲೆನಾಡಿನಲ್ಲಿ ನಡೆದಾಗ ಎಷ್ಟು ಹಾಡುಗಳು, ಕಥೆಗಳು ಹುಟ್ಟುಕೊಂಡವು ! ಸ್ವಾಮಿ ನಿಷ್ಠ ಸಂಗೊಳ್ಳಿ ರಾಯಣ್ಣ, ಕೊಂಡ ಹಾರಿದ ಈರೋಬಿ, ಕೆರೆಗೆ ಬಲಿಯಾದ ಅಣಜಿ ಹೊನ್ನಮ್ಮ, ಇತ್ಯಾದಿ-ಇತ್ಯಾದಿ ಕಥೆಗಳು ಹಾಡುಗಳು ಅವರನ್ನೆಲ್ಲ ಹೇಗೆ ಚಿರಂಜೀವಿಗಳನ್ನಾಗಿ ಮಾಡಿ ಬಿಟ್ಟವು.  ಅದು ಈ ಭಾಗದಲ್ಲೇಕೆ ಸಾರ್ಧಯವಾಗಲಿಲ್ಲ ಎನ್ನುವುದೇ ಒಂದು ಸಮಾಜ ಶಾಸ್ತ್ರೀಯ ಅಧ್ಯಯನಕ್ಕೆ ಕಾರಣವಾದೀತು.

ಈ ಭಾಗದ ಚರಿತ್ರೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕಂಡು ಬರುವುದೇನೆಂದರೆ, ಇಲ್ಲಿಯ ಜನ ಮುನ್ನುಗ್ಗುವವರಲ್ಲ, ಅನ್ಯಾಯವಾದರು ಸಾವರಿಸಿಕೊಂಡು ನಡೆದಾರೇ ಹೊರತು, ತುಳನಾಡ ಸಿರಿಯಂತೆ, ಕೋಟಿ ಚೆನ್ನಯ್ಯರಂತೆ, ಉಳ್ಳಾಲದ ಅಬ್ಬಕ್ಕನಂತೆ, ಸಿಡಿದು ನಡೆದವರಲ್ಲ. ರಾಜನಿದ್ದಿದ್ದರೂ ಅವನಿದ್ದದ್ದು ದೂರದ ಬಾರ್ಕೊರೋ, ಹಾಡುವಳ್ಳಿಯೋ, ಕೇಳದಿಯೋ, ಒಟ್ಟಿನಲ್ಲಿ ರಾಜ ಸತ್ತೆಯ ನೇರ ಪ್ರಭಾವ ಇವರ ಮೇಲೆ ಬಿದ್ದಿಲ್ಲ. ಇವರ ರಾಜರು ಇವರು ಗೇಣಿ ಮಾಡುವ ಭೂಮಿಯ ಒಡೆಯರು.  ಈ ಒಡೆಯರು ದೇಶದ ಉಳಿದ ಜಮೀನ್ದಾರರಂತೆ ಒಕ್ಕಲ ಮೇಲೆ  ಅತಿ ಅಧಿಕಾರ ತೋರಿಸಿದವರಲ್ಲ. ಕಷ್ಟಕ್ಕೆ ಸುಖಕ್ಕೆ ಸದಾ ಸ್ಪಂದಿಸುತ್ತ, “ನಮ್ಮೊಡೆಯರನ್ನ ಕೇಳಿದ್ರೆ, ಉಟ್ಬಟ್ಟೆ ಕೊಟ್ಟಾರು” ಎಂದು ಹಾಡಿಕೊಳ್ಳುವಷ್ಟು ಆತ್ಮೀಯರಾಗಿದ್ದರು.  ಒಮ್ಮೆ ಈ ಲೇಖಕಿಗೆ ಅನುಭವವಾದಂತೆ  ಭೂ ಮಸೂದೆ ಕಾನೂನು ಬಂದ ಸಮಯ ಅದು. ಒಕ್ಕಲೊಬ್ಬ ಮರಣಾ ಸನ್ನದನಾಗಿದ್ದ. ಶ್ವಾಸ ಎಳೆಯುತ್ತ ಅವರು ತನ್ನ ಮಗನನ್ನು ಹತ್ತಿರ ಕರೆದು ಹೇಳಿದ ಕೊನೆಯ ಮಾತು “ನಮ್ಮ ಒಡೆಯರ ಗದ್ದೆಗೆ ಡಿಕ್ಲರೇಷನ್ ಹಾಕಬೇಡ.  ದೇವರು ಮೆಚ್ಚಲಿಕ್ಕಿಲ್ಲ ಎಂದು. ಒಡೆಯರು ಬಂದು ಅವನ ಬಾಯಿಗೆ ಗಂಗಾಜಲ ಬಿಟ್ಟ ಮೇಲೆಯು ಆವನು ಸತ್ತದ್ದು.

ಇದು ಇಲ್ಲಿನ ಜನಪದರ ಗುಣವಾಗಿತ್ತು. ಹಾಗಾಗಿ ಇಲ್ಲಿನ ಜಾನಪದ ಸಾಹಿತ್ಯವು ಇದರ ಹೊರತು ಬೇರೆ ಆಗಲಿಲ್ಲ.  ಇಲ್ಲಿನ ಸಾಹಿತ್ಯದಲ್ಲಿ ವೀರಾವೇಷದ ಕೋಟಿ ಚೆನ್ನಯ್ಯ, ಸಿರಿ, ಅಬ್ಬಕ್ಕ ಮುಂತಾದವರ ಹಾಡು  ಕಥೆಗಳು ಇಲ್ಲದೇ ಹೋದರೂ ಉಳಿದಂತೆ , ಎಲ್ಲ ಕಡೆ ಇರುವಂತೆ ಸಾಂಸಾರಿಕ ಸಂಘರ್ಷ, ಸರಸ ವಿರಸ, ವೇದಾಂತ ಇದ್ದೇ ಇದೆ.

ಜನಪದರು ಜೀವನವನ್ನೇ ಕಾವ್ಯದಂತೆ ಬದುಕುವವರು. ಶ್ರಮ ಜೀವನದ ಉಸಿರಿನ ಮಟ್ಟೇ ಜಾಪದ ಮಟ್ಟು. ಒಮ್ಮೆ ಉಲ್ಲಾಸದ್ದು, ಮಗದೊಮ್ಮೆ ಆಯಾಸದ್ದು, ಕೆಲವೊಮ್ಮೆ ಬೇಸರದ್ದು.  ಈ ಉಸಿರೇ ಜಾನಪದ ಸಾಹಿತ್ಯದ ಛಂದಸ್ಸು, ರಾಗ, ತಾಳ, ಚೌಕಟ್ಟು ಎಲ್ಲ.  ಈ ಸಾಹಿತ್ಯಕ್ಕೆ ಶಿಷ್ಟದ ಮಡಿವಂತಿಕೆ ಇಲ್ಲ. ಶಿಸ್ತು ಇಲ್ಲ. ಕೃತಕತೆಯ ಲವಲೇಶವಿಲ್ಲ. ಅವರ ಜೀವನದಂತೆ ಎಲ್ಲವೂ ಸರಳ,ಸಹಜ.

ಜಾನಪದ ಸಾಹಿತ್ಯ ದಿನನಿತ್ಯ ಹಾಡಿಕೊಳ್ಳುವ ಸಾಹಿತ್ಯ. ಆದರೆ  ಈ ಸಾಹಿತ್ಯ ಬಳಕೆಯಲ್ಲಿ ಮರೆಯಾಗುತ್ತಿರುವುದನ್ನು ಪ್ರಜ್ಞಾವಂತರು ಆತಂಕದಿಂದಲೇ ಗಮನಿಸುತ್ತಿದ್ದಾರೆ. ಆಧುನಿಕತ, ತಾಂತ್ರಿಕ ಸುಧಾರಣೆಗಳಿಂದ ದೈಹಿಕ ಶ್ರಮದ ಕೆಲಸಗಳು ಕಡಿಮೆಯಾಗಿದ್ದು ಅದಕ್ಕಾಗಿ ವ್ಯಯಿಸುವ ಸಮಯದ ಕಡಿತವೂ ಆಗಿದ್ದು ಅದರೊಂದಿಗೆ ಹಳ್ಳಿಗರ ಸೃಜನಶೀಲತೆಯ ಒರತೆ ಬತ್ತಿ ಹೋಗುತ್ತಿದೆ. ಹತ್ತು ಜನ ಸೇರಿ ಕೈ ಕೆಲಸ ಮಾಡುವಾಗ ಇರುವ ಸೃಜನಶೀಲ ಮಾತುಕಥೆ, ಗೀತ-ಗಾಯನ ವೆಲ್ಲವೂ ಯಂತ್ರಗಳೊಂದಿಗೆ ವ್ಯಹರಿಸುವಾಗ ಸ್ಪರಿಸುವುದು ಕಷ್ಟ. ಗದ್ದೆಯಲ್ಲಿ ಎತ್ತುಗಳನ್ನು ಹಿಡಿದು ಉಳುವಾಗ ಕೊಂಗಿಲು ಹಾಕುವುದು, “ಬಲ್ದೆ-ಎಡ್ದೆ” ಎಂದು ಹಾಡುವುದೆಲ್ಲ ಟ್ರಾಕ್ಟರ‍್ ಚಕ್ರ ಹಿಡಿದಾಗ ಬರುವುದಿಲ್ಲ.  ಪಂಪ ಸೆಟ್ಟಿನ ಕೊಳವೆಯಿಂದ ಹರಿವ ನೀರನ್ನು ತೋಟ ಗದ್ದೆಗೆ ಹರಿ ಬಿಡುವಾಗ, ದೊಟ್ಟೆಯಿಂದನೀರು ಮೊಗೆವಾಗಿನ “ಆದಲಾಭ ಒಂದೇ ಎರಡೇ  ಎಂಬ ರಾಗ ಮಾಡಿಲೆಕ್ಕ ಹಾಕುವ ಹಾಡು ಸಾಧ್ಯವಿಲ್ಲ.  ಗಳಿಗೆಯಲ್ಲಿ ಭತ್ತ ಅಕ್ಕಿಯಾಗುವ ಯಂತ್ರಗಳ ಮುಂದೆ ಕೈಗಳಲ್ಲಿ ಒನಕೆ ಹಿಡಿದು ಭತ್ತ ಕುಟ್ಟುವಾಗ ಹಾಡುವ ಜೀವನದ ಸುಖದುಃಖದ ಹಾಡುಗಳನ್ನು ಹಾಡಿಕೊಳ್ಳಲಾದೀತೇ? ಮದುವೆ ಮನೆಗಳಲ್ಲಿ ಕ್ಯಾಸೆಟ್ ಮೈಕ್ ಗಳ ಬೋರ್ಗರೆತದ ಮುಂದೆ ಹಾಡುಗಾರತಿಯರಿಗೇನೂ ಕೆಲಸವಿಲ್ಲ. ಐದಾರು  ದಿನಗಳ ಮದುವೆಯೂ ಒಂದು ಕಾಲದ ಕಥೆಯಾಗಿರುವಾಗ ಮದುವೆಯ ಪ್ರತಿ ಹಂತದ ರಾಗದ ಹಾಡಾದರೂ ಕೇಳಲಿಕ್ಕೆ ಯಾರಿಗೆ ಸಮಯವಿದೆ.

ಇತ್ತಿಚೆಗಿನ ಒಂದು ಅನುಭವವನ್ನು ಹೇಳಬೇಕೆನಿಸುತ್ತದೆ. ಒಂದು ಮದುವೆಗೆ ಹಳೆ ಹಾಡು ಬಲ್ಲ ಹಾಡುಗಾರ್ತಿಯೊಬ್ಬರು ಬಂದಿದ್ದರು. ಯಾರೋ ಹೇಳಿದರು “ಹಾಡು ಹೇಳಿ” ಎಂದು. ಹಾಡುಗಾರ್ತಿಗೇನೋ “ಉಮೇದು “ಇದ್ದಿತ್ತು. ಹಾಡಲು ಶುರು ಮಾಡಿದರು ಆದರೆ ಯಾರಿಗೂ ಆ ಹಾಡು ರುಚಿಸಸಲಿಲ್ಲ. ಮಾತ್ರವಲ್ಲ “ಇದೆಲ್ಲ ಎಂತ ಕರಕರೆಯಪ್ಪ, ಒಂದೇ ರಾಗ ಒಂದೇ ದಾಟಿ. ಅದರ ಬದಲು ಒಳ್ಳೇ ಕ್ಯಾಸೆಟ್ ಯಾವುದಾದರೂ ಹಾಕಬಾರದೇ” ಎಂದುಬಿಟ್ಟರು.

ಧರ್ಮ, ಸಂಸ್ಕೃತಿ ಎಲ್ಲವೂ ಬದಲಾವಣೆಯ ಹಂತ ಮೀರಿ ಬದಲಾಗಿ ಹೋಗಿದೆ. ದೇವಸ್ಥಾನ ನವೀಕರಿಸುತ್ತಾರೆ, ನಿಜ. ಹೊಸ ದೇವಸ್ಥಾನ ಕಟ್ಟುತ್ತಾರೆ, ನಿಜ. ಆದರೆ ದೇವಾಲಯಗಳಲ್ಲಿ ವಿವಿಧ ರೀತಿಯಲ್ಲಿ ಪಂಚವಾದ್ಯ ಬಾರಿಸುವವರ ಬದಲು ಪಂಚವಾದ್ಯದ ಯಂತ್ರಗಳನ್ನಿಟ್ಟು ಬಿಡುತ್ತಾರೆ. ಪಂಚವಾದ್ಯ ಬಾರಿಸುವ ಜನ ಬೇಕಲ್ಲ ಎಂದು. ಇನ್ನು ಮುಂದೆ ಮರದ ತೆರನ್ನು ಕಾದಿಟ್ಟುಕೊಳ್ಳುವುದು ಕಷ್ಟವೆಂದು ಅದಕ್ಕೂ ಫೈಬರ‍್ನ್ನು ಉಪಯೋಗಿಸುವ ಕಾಲವೂ ಬಂದೀತು. ಮನೆ ಬಾಗಿಲಿನ ತೋರಣಕ್ಕೆ ಪ್ಲಾಸ್ಟಿಕ್ಕಿನ ಮಾವಿನ ಎಲೆ ಬಂದಿಲ್ಲವೇ.

ಹೀಗೆ ಭೌತಿಕಕ್ಕೆ ಬೇಕಾಗುವ ಅನ್ನದ ತಯಾರಿಯಿಂದ ಹಿಡಿದು, ಅತೀತದ ಅವಶ್ಯಕತೆಯಾದ ದೇವಾಲಯಗಳವರೆಗೂ ಯಾಂತ್ರಿಕತೆ ಮೈಗೂಡಿ ನಿಂತಿದೆ. ಎಷ್ಟೋ ಸಾಂಸ್ಕೃತಿಕ ಸಂಗತಿಗಳು ಅರ್ಥ ಕಳೆದುಕೊಂಡು, ಬರೀ “ರಿಚುವಲ್” ಆಗಿ ಉಳಿದುಕೊಂಡಿವೆ.  ಅದೂ ಬಹಳ ದಿನ ಉಳಿಯಲಾರದು.

ಹಿಂದಿನ ಕೂಡು ಕುಟುಂಬ, ಕೃಷಿ ಪದ್ಧತಿ, ಮೌಲ್ಯಗಳು ಎಲ್ಲವೂ ಬದಲಾಗಿರುವಾಗ ಇವುಗಳ ಆಧಾರದ ಮೇಲೆಯೇ ನಿಂತ ಜಾನಪದ ಸಾಹಿತ್ಯ ಉಳಿಯುವುದಾದರೂ ಹೇಗೆ ? ಉಳಿಯಬೇಕೆಂದರೂ ಹೇಗೆ ?

ಜಾಗತೀಕರಣದಿಂದಾಗಿ ಸಾಮಾಜಿಕ ವ್ಯವಸ್ಥೆಯೇ ಬುಡಮೇಲಾಗುತ್ತಿರುವ ಸಮಯವಿದು.ಹಾಗಾಗಿಯೇ ಕೂಡು ಕುಟುಂಬವಿಲ್ಲ. ಕೂಡು ಕುಟುಂಬದಲ್ಲಿ ಬರುವ ಅತ್ತಿಗೆ ಮೈದಿನಿಯ ಸರಸ ವಿರಸವಿಲ್ಲ. ನಂದಗೋಕುಲದಂಥ ಮನೆ ಇಲ್ಲ.

“ಆರೂಡ್ಹಿದ ಗೆದ್ದೀಲೆ ಮಾರೂಡ ಕಂದಯ್ಯ
ಓಳಿಕಡದ್ಹೂಡ ಮರುಹೂಡ ಕಂದಯ್ಯ
ಹೇಳಿಕೊಡುವಜ್ಜ ಮನೆಲಿಲ್ಲ”

ಹೌದು, ಹೇಳಿಕೊಡುವ ಅಜ್ಜ ಇಲ್ಲ ಈಗ. “ಜೋಡೋನಕಿ ಮೇಲೆ ಕೂತ ಗಿಣಿರಾಮ ಇನ್ನು ಯಾವಕ್ಕನ ಪದ ಕಲಿಯಲಿ” ಎಂದು ಹಾಡುಲಾರ.

“ನುರಿ ನುರಿ ಬತ್ತವೆ ನಮ್ಮ ದಣಿಸಬೇಡ
ನಿನ್ನ ಪೂಜಿಸುವೆ ಒರಳಲ್ಲಿ ಶಂಕರ ತಂದೆ
ಕಟ್ಟಿ ಕೂರಿಸುವೆ ಮುಡಿ ನೂರು”-

ಎಂದು ಹಾಡಲು ಒರಳುಂಟೇ, ಒನಕೆಯುಂಟೇ, ಅಕ್ಕಿಯನ್ನು “ಶಂಕರ ತಂದೆ” ಎಂದು ಕರೆಯುವ ಹೃದಯ ಸಂಪನ್ನತೆಯುಂಟೆ ?

ಆದರೂ ಅಳಿದುಳಿದ ಜಾನಪದ ಸಾಹಿತ್ಯವನ್ನು ದಾಖಲಿಸಿಡುವ  ಪ್ರಯತ್ನ ಬಹಳ ಕಡೆ ನಡೆಯುತ್ತಿರುವುದು ಸಂತೋಷದ ಸಂಗತಿ. ಹೀಗಾದರೂ ಒಂದು ಕಾಲಘಟ್ಟದ ಜನಪದ, ಅವರ ಕೌಟುಂಬಿಕ ಜೀವನ, ಕರ್ಮಜೀವನ, ಮಾನವ ಮಾನವ ಸಂಬಂಧ , ಮಾನವ ದೈವ ಸಂಬಂಧ, ಪ್ರಕೃತಿ ಮಾನವ ಸಂಬಂಧ ಇವುಗಳೆಲ್ಲ ಹೇಗಿತ್ತು ಎಂದು ತಿಳಿಯುವ ಅವಕಾಶವಾದರೂ ಇದರಿಂದ ಸಾಧ್ಯವಾಗುತ್ತದೆ.

ಆದರೆ ಈ ಸಾಹಿತ್ಯವನ್ನು ದಾಖಲಿಸಿ ಇಡಬಹುದಾದರೂ ಸಾಹಿತ್ಯದೊಳಗಿನ ಜೀವದನಿಯನ್ನು ಹಿಡಿದಿಡಲಾಗದು. ಶ್ರೀಮಂತರ ಮನೆಯ ಹಜಾರದಲ್ಲಿರುವ ; ಒಂದೊಮ್ಮೆ ಜೀವಂತವಾಗಿದ್ದ ; ಇಂದು ಕೇವಲ ಅಲಂಕಾರಿಕವಾದ ಜಿಂಕೆ ಮುಖದಂತೆ, ಕಾಡೆಮ್ಮೆ ಕೋಡಿನಂತೆ, ಆನೆಯ ಪಾದದಂತೆ ಹಳೆಯ ನೆನಪನ್ನು ಹೇಳಿಯಾವು ಅಷ್ಟೆ. ಜೀವನ ಕ್ರಮವೇ ಬದಲಾಗಿರುವಾಗ ಇಷ್ಟನ್ನಾದರೂ ವಿರೂಪಗೊಳಿಸದೆ ಕಾದಿಟ್ಟುಕೊಳ್ಳುವುದೊಂದು ದೊಡ್ಡ ಕೆಲಸವೇ ಆಗುತ್ತದೆ.

ವಿಶ್ವವಿದ್ಯಾಲಯದ ಮಟ್ಟದಲ್ಲಿ ಹಲವು ಜಾನಪದ ತಜ್ಞರು  ಈ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜಾನಪದ ಸಾಹಿತ್ಯದ ಸಂಗ್ರಹ ಸಾಕಷ್ಟು ಆಗಿದೆ. ಜಾನಪದ ಸಾಹಿತ್ಯವೆಂಬುವುದು ಬಹು ದೊಡ್ಡ ಸಾಗರ. ಇಲ್ಲಿ ಮೊಗೆದಷ್ಟು ನೀರುಂಟು.

ಈ ಜಾನಪದ ಸಾಹಿತ್ಯದ ರಚಯಿತರು ಬಹಳ ದೊಡ್ಡ ವಿದ್ವಾಂಸರೇನಲ್ಲ. ಹೆಚ್ಚಾಗಿ ಓದು ಬರಹ ತಿಳಿಯದ ಅನಕ್ಷರಸ್ಥರು. ಓದು ಬರಹದ ಬಗ್ಗೆ ಅವರದ್ದು ವ್ಯಂಗ್ಯವೇ.

“ಪತ್ರಿಯ ಮರದಡಿ ಬಿಚ್ಚಿದ ಪುಸ್ತಕವ
ಪತ್ರಿ ಮರಬಾಡಿ ಮುಖ ಬೆಗರಿ ತಮ್ಮಯ್ಯ
ಹೊತ್ತ್ ಹೋದ್ರು ಸಂಧಿ ಬಿಳಿಯದು” ಎನ್ನುತ್ತಾರೆ.

ಇವರ ಶಬ್ದ ಭಂಡಾರವು ಬಹಳ ದೊಡ್ಡದಲ್ಲ. ಗೊತ್ತಿದ್ದ ಶಬ್ದಗಳನ್ನೇ ನವಿರಾಗಿ ಬಳಸಬಲ್ಲವರು. ಬೇರೆ ಶಿಷ್ಟ ಸಾಹಿತಿಗಳಂತೆ ಏಕಾಂತದಲ್ಲಿ ಕುಳಿತು ಚಿಂತಿಸಿ ಹೇಳುವವರಲ್ಲ. ಅಂದಂದಿನ ಆಗಾಗಿನ ಘಟನೆಗೆ ತತ್ ಕ್ಷಣದ ಪ್ರತಿಕ್ರಿಯೆ ಅವರದ್ದು.

ಯಾರೋ ಒಬ್ಬ ಅಭಿಜಾತ ಅಶುಕವಯಿತ್ರಿ ಇರುತ್ತಾಳೆ. ಒಂದು ಘಟನೆಗೆ ಅವಳ ಸ್ಪಂದನ ತಕ್ಷಣ ತ್ರಿಪದಿಗಳಲ್ಲಿ ಹೊಮ್ಮ ಬರುತ್ತದೆ. ಆಕೆ ಅದನ್ನು ನಾಲ್ಕು ಜನರೆದುರು ನಾಲ್ಕು ಕಡೆ ಹಾಡಿದಾಗ ಉಳಿದವರಿಗೆ ಬಾಯಿ ಪಾಠವಾಗುತ್ತದೆ. ಬೇರೆ ಬೇರೆ ಕಡೆಗಳಲ್ಲಿ ಇದನ್ನೇ ಬೇರೆ ಬೇರೆಯವರು ಹಾಢಿದಾಗ ರೂಪಾಂತರವಾಗಲೂಬಹುದು. ತಕ್ಷಣ ಹೊಳೆದ ಶಬ್ದ ಅದು ಲಯಕ್ಕೆ ಸಿಕ್ಕಿದರೆ ಸಾಕು, ಭಾವಾರ್ಥಕ್ಕೆ ಒದಗಿದರೆ ಸಾಕು. ಅದನ್ನು ಹಾಡಿನಲ್ಲಿ ಅಳವಡಿಸಿಕೊಂಡು ಬಿಡುತ್ತಾರೆ.  ಹೊಸ ಕನ್ನಡ, ಹಳೆಗನ್ನಡ ಕೆಲವೊಮ್ಮೆ ಈಗ ರೂಢಿಯಲ್ಲಿರುವ ಇಂಗ್ಲೀಷು ಶಬ್ದಗಳೂ ಆದೀತು ಬಳಸಿಕೊಂಡು ಬಿಡುತ್ತಾರೆ.

ಉದಾ –

“ಶಾಲೀಗ್ ಹೋದ್ ಮಗನೀಗೆ
ಹಸಿ ಹಾಲು ಬಿಸಿ ಗಂಜಿ
ಹಸ್ರಂಗಿ ಮ್ಯಾಲೆ ಗಡಿಯಾರು ಹಾಯ್ಕಂಡು
ಇಸ್ಕೊಲಿಗ್ಹೋಪ ಮಗ ಬಂದ”-

ಇನ್ನು ಕೆಲವೊಮ್ಮೆ ಒಂದೇ ಹಾಡು ಬೇರೆ ಬೇರೆ ಪ್ರದೇಶದಲ್ಲಿ, ಬೇರೆ ಬೇರೆ ಜನರ ಬಾಯಿಂದ ಬೇರೆ ರೂಪ ಪಡೆಯುತ್ತದೆ. ಅರ್ಥ ಒಂದೇ.

ಉದಾ:-

“ಮನುಷನ ನಂಬಿ ನಾನಿದ್ದ ಮಗಳಲ್ಲ
ನಂಬೀದೇ ದೊಡ್ಡ ಒಡೆಯನ ಗೋವಿಂದನ
ನಂಬಿದೇ ನಾನು ದೃಢವಾಯಿ”      ಎಂದು ಈಚೆ ಕೇರಿ ತಿಮ್ಮಕ್ಕ ಗೋವಿಂದ ಭಕ್ತೆ ಹೇಳಿದರೆ

“ಯಾರ್ಯಾರ ನಂಬಿ ನಾನಿದ್ದ ಮಗಳಲ್ಲ
ದೇವರ ನಂಬಿದೆ ಧೃಡವಾಯಿ ಶಿರಸೀಯ
ತಾಯ್ ನಂಬಿದಮಗಳು ಕೆಡುವಳೆ”-  ಎಂದು ಆಚೆ ಕೇರಿ ದುಗ್ಗಮ್ಮ ಶಿರಸಿ ಅಮ್ಮನ ಭಕ್ತೆ ಹೇಳಿಯಾಳು.

ಮಗುವಿನ ತಾಯಿ
“ದಾರಿಯ ಕಂಡ್ಕಣ್ಣ ದಾಸಾನ ಹೂಗಾದೋ
ಏ ಶಿವನೆ ಮಗುವೆ ಬರಲಿಲ್ಲ ಕಣ್ಣೀರು
ಹಾಸುಗಿ ಅದ್ದಿ ಹಸಿ ಅದ್ದಿ”-   ಎಂದು ಹಾಡಿದರೆ ಅದೇ ಹಾಡನ್ನು

ದೇಸು ಕಂಡ್ ಕಣ್ ದಾಸಾನ ಹೂಗಾದೋ
ಏ ಸಿವನೆ ದೊರಿಯೇ ಬರಲಿಲ್ಲ ಕಣ್ ನೀರು
ಬಿಸಿ ಬಚ್ಚಲಿಗೆಹರಿದೋದೋ”-      ಎಂದು ಹೆಂಡತಿ ತನ್ನ ಗಂಡನನ್ನು ನೆನೆದುಹಾಡಿಯಾಳು.

ಆ ಶಬ್ದ ಹೀಗೆಇರಬೇಕು ಎಂಬ ಬಂಧವಿಲ್ಲ. ಮುಕ್ತ ಕಾವ್ಯ ಇದು. ಉಸಿರಿನ ಏರಿಳಿತದ ಹಾಗೆ ಸಹಜವಾದದ್ದು. ಜಾನಪದೀಯರು ಜೀವನದಲ್ಲಿ ಕಷ್ಟ ಪಡುವವರೇ ಹೊರತು ಹಾಡು ಕಟ್ಟುವಲ್ಲಿ ಅಲ್ಲ. ಬದಲಾವಣೆಗೆ ಒಗ್ಗುವುದು, ಹೊಸತನಕ್ಕೆ ತೆರೆದುಕೊಳ್ಳುವುದು, ಶಾಸ್ತ್ರೀಯ ಮಡಿವಂತಿಕೆ ಇಲ್ಲದಿರುವುದು, ಈ ಸಾಹಿತ್ಯ ಪ್ರಕಾರದ ವಿಶಿಷ್ಟತೆ. ಹಾಗೋ ಹೀಗೋ, ಹೇಗೋ ಭಾವ ಹೊರ ಹೊಮ್ಮಿದರೆ ಸಾಕು ಅವರಿಗೆ.

ದೊಡ್ಡ ದೊಡ್ಡ ತಾತ್ವಿಕ ಅಂಶವೇನೂ ಈ ಸಾಹಿತ್ಯದಲ್ಲಿ ಚರ್ಚಿಸಲ್ಪಡುವುದಿಲ್ಲ. ಇವರ ದೇವರು ಎಷ್ಟು ಸರಳವೋ, ಧರ್ಮವೂ ಅಷ್ಟೇ ಸರಳ.

‘ಹಸಿದವ್ರ ಹೊಟ್ಟೆಯ ಕಂಡೆ ಮಾಸಿದ ಮಂಡೆಯ ಕಂಡೆ
ಜೋಗೀಗೆ ಬಿಕ್ಷವ ಮಗೆದೊಯ್ದೆ ಯಮರಾಯ
ದಾರಿಯಲ್ಲಿದ್ದ ಮುಳ್ಳ ತೆಗೆದಿದ್ದೆ ಯಮರಾಯ
ಬಾಗಿಲ ತೆಗೆಯೋ ಸ್ವರಗದ:’

ಇಷ್ಟು ಧರ್ಮ ಸ್ವರ್ಗಕ್ಕೆ ಸಾಕು, ಇಷ್ಟೂ ಬೇಡ,

“ಬಾಯಾರಿ ಬಂದವರಿಗೆ ಬಾವಿಯ ತೋರಿಸಿ
ಸೇದುವ ಹಗ್ಗ ಕೊಡಪಾನ ಕೊಟ್ಟೀರು
ಕಾಶೀಗ್ಹೋದಷ್ಟೇ ಫಲ ಬುಕ್ಕು”    ಇದು ಇವರ ಸರಳ ಧರ್ಮದ ರೀತಿ.

ಜೀವನೋತ್ಸಾಹ ಈ ಸಾಹಿತ್ಯದ ವೈಶಿಷ್ಟ್ಯ. ಜನಪದ ಜನರೇ ಹಾಗೆ. ಆದರೂ ಅಲ್ಲಲ್ಲಿ ವೈರಾಗ್ಯದ ಸೆಳಕುಗಳೂ ಇಲ್ಲದಿಲ್ಲ.

“ಗಂಡರ್ಯಾರಿಗೆ ನಿಜವೆ  ಮಕ್ಕಳ್ಯಾರಿಗೆ ನಿಜವೆ
ಇದು ಮುರು ದಿನದ ಸಂಸಾರ ಬದುಕಿಗೆ
ಆಸಿ ಮಾಡಿದರೆ ಫಲ ಉಂಟೆ”

ಎಂದರೂ ವೈರಾಗ್ಯವನ್ನು ಹೆಚ್ಚು ಹಾಡಿ ಹೊಗಳುವವರಲ್ಲ. ಅಧ್ಯಾತ್ಮ ವೇದಾಂತಗಳ ಬಗೆಗೆ ಒಂದು ಬಗೆಯ ನಿರುತ್ಸಾಹವನ್ನೇ ಕಾಣಬಹುದು;

ಅಂದಂದಿನ ದಿನಮಾನ ಹೋದರೆ ಸಾಕು ಎಂಬ ಶ್ರಮಜೀವಿಗಳ ಮೌಖಿಕ ಸಾಹಿತ್ಯದಲ್ಲಿ ಆಯಾ ಸಂದರ್ಭದ ಮಾನಸಿಕ ಸ್ಥಿತಿ, ವ್ಯಕ್ತಿಯ ಹಿನ್ನೆಲೆ, ಪರಿಸರದ ಭಾಷೆಗೆ ಸರಿಯಾಗಿ ಹಾಡುಗಳು ಮೂಡಿ ಬರುತ್ತವೆ.

ನಮ್ಮೂರಲ್ಲೊಬ್ಬಳು “ಮದುವೆ ಪದಗಳ ಹಾಡುಗಾರತಿ” ಇದ್ದಳು. ಅವಳೊಮ್ಮೆ ಮದುವೆಗೆ ಹೋಗಿದ್ದಳು ತಾನು ಹಾಡುಗಾರತಿ ಎಂಬ ಅಭಿಮಾನ ಅವಳಿಗೆ ಆದರೆ ಅವಳಿಗೆ ಸಲ್ಲಬೇಕಾದ ಗೌರವ ಸಲ್ಲಲಿಲ್ಲ. ಆಗ ಅವಳಿಗೆ ಕಂಡದ್ದು ಹಸಿ ಮಣೆಯ ಮೇಲೆ ಕೂತ ಕಪ್ಪು ಹುಡುಗಿ. ಇವಳು ಕೂಡಲೇ ಒಂದು ಹಾಡು ಕಟ್ಟಿಯೇ ಬಿಟ್ಟಳು.

“ಮದುಮಗಳ ಕಂಡೀದ ಹಿಂತುರುಗಿ ಹೇಳೀದ
ಮಾವಯ್ಯ ಈ ಹೆಣ್ಣ ನನಗ್ ಬ್ಯಾಡ  ಈ ಹೆಣ್ಣು
ಗೋಡಿ ಮ್ಯಾಲ್ ಮಸಿಯ ಬರೆದಂತೆ ಅವ್ಳಬ್ಬಿ
ನ್ಯಾಮಾರ್ ಹಣ್ ತಿಂದ ಹಡೆದಿಪ್ಪು”

ಮದುವೆ ಚಪ್ಪರದ ಹತ್ತಿರ ಹಾಡಿಯಲ್ಲಿ ಕಪ್ಪು ಬಣ್ಣದ ನೇಮಾರು ಹಣ್ಣುಗಳು ಮರದಲ್ಲಿ ಜೋತಾಡಿಕೊಂಡಿದ್ದುದನ್ನು ಕಾಣುತ್ತ ಅದಕ್ಕು ಈ ಕಪ್ಪು ಹೆಣ್ಣಿಗೂ ಸಂಬಂಧ ಕಲ್ಪಿಸುವತ್ತ ಈ ಹಾಡುಗಾರತಿ ಹಾಡು ಕಟ್ಟಿ ಹೇಳಿ ತನಗಾದ ಆಗೌರವಕ್ಕೆ ಶಾಸ್ತಿ ಮಾಡಿಕೊಂಡು ಬೀಗಿದಳು.

ಆದರೆ ಈಗ ಹಳ್ಳೀಯವರಿಗೇ ಈ ಹಾಡು ಬೇಡವಾಗಿದೆ. ಜಾನಪದ ಜೀವನ ಕ್ರಮ ಬದಲಾದದ್ದು ಮಾತ್ರ ಕಾರಣವಲ್ಲ. ಅವರಿಗೇ ಇದು ಈಗ ರುಚಿಸುತ್ತಿಲ್ಲ. ಇಲ್ಲಿಯ ಹಳೆಯ ಶಬ್ದಗಳ ಬಗ್ಗೆ ನಾಚಿಕೆ ಪಟ್ಟು ಕೊಳ್ಳುತ್ತಾರೆ.  ನಾನು ಹಾಡು ಬಲ್ಲವರ ಹತ್ತಿರ ಹೇಳಿ ಅಂದರೂ ಕೆಲವು ಶಬ್ದಗಳನ್ನು ಶುದ್ಧಗೊಳಿಸುವ ಪ್ರಯತ್ನ ಮಾಡುತ್ತಾರೆ. ಏಷ್ಟೋ ಶಬ್ದಗಳನ್ನು ಅವರೇ ಮರೆತಿದ್ದಾರೆ. “ಅನು (ವು) ಮಾಡು ಅಂಬಲ್ಲಿ “ರೆಡಿ” ಮಾಡು ಎಂದು ಬಿಡುತ್ತಾರೆ. “ಉಂಬುಕೆ” ಅನ್ನುವಲ್ಲಿ “ಊಟಕ್ಕೆ” ಅನ್ನುತ್ತಾರೆ. “ಅಕ್ಕು” ಅನ್ನುವ ಬದಲು “ಆದೀತು” ಅನ್ನ ಹೋಗುತ್ತಾರೆ ಅಂತೂ ಈ ವಿಶಿಷ್ಟ ಸಾಹಿತ್ಯ ಹಳ್ಳಿಗರ ಬಾಯಲ್ಲಿ ಎಷ್ಟು ದಿನ ಉಳಿದೀತೋ ಅ ದ್ಯಾವ್ರೇ ಬಲ್ಲ !”

ಈ ಭಾಗದ ಜಾನಪದ ಸಾಹಿತ್ಯ ಸಂಗ್ರಹ ಕಾರ್ಯ ಮಾಡುವಾಗ ಕುತೂಹಲದಿಂದ ಕರ್ನಾಟಕದ  ಬೇರೆ ಬೇರೆ ಭಾಗಗಳ ಜಾನಪದ ಸಾಹಿತ್ಯವನ್ನು ಅವಲೋಕಿಸಿದಾಗ ಅವುಗಳಲ್ಲಿರುವ ಸಾಮ್ಯತೆ ಎದ್ದು ಕಾಣುತ್ತದೆ.

ಎಷ್ಟೋ ಹಾಡುಗಳು, ಹಾಡಿನ ಭಾವಗಳು, ಕೆಲವು ನುಡಿಗಟ್ಟುಗಳು, ಶಬ್ದಗಳು ಸಮಾನವಾಗಿದ್ದವು. ಭಾಷೆ ಕನ್ನಡವಾದರೂ ಘಟ್ಟದ ಮೇಲಿನ ಬಯಲು ಸೀಮೆಯ ಆಡುಗನ್ನಡವೇ ಬೇರೆ, ಘಟ್ಟದ ಕೆಳಗಿನಕರಾವಳಿಯ ಆಡುಗನ್ನಡವೇ ಬೇರೆ. ಆದರೆ ಜಾನಪದ ಹಾಡುಗಳಲ್ಲಿ ಹಾಡ್ಗಥೆಗಳಲ್ಲಿ ಕೆಲವು ಸಮಾನ ಶಬ್ದಗಳು, ಹಾಡುಗಳು, ಕಥೆಗಳು ಇವೆ.

ಬಯಲು ಸೀಮೆಯವರು ರಾಗಿ ಬೀಸಿದರೆ, ಕರಾವಳಿಯವರು  ಭತ್ತ ತೊಳೆಸುತ್ತಾರೆ.  ಹೊನ್ನಾವರದ ಕಡೆಗೆ ಹೋದರೆ ಭತ್ತ ಮೆರೆಯುತ್ತಾರೆ.  ಆದರೆ ಇವರೆಲ್ಲರ ಹಾಡೂ ಪಾಡೂ ಒಂದೇ.

ಅವರೂ ಮಗನಿಗೆ ಹೆಣ್ಣು ಕೇಳಲು ಅಣ್ಣನ ಮನೆಗೆ ಹೋಗುತ್ತಾರೆ. ಇವರೂ ಅಣ್ನನ ಮನೆಗೆ ಹೋಗುತ್ತಾರೆ. ಅವರಿಗೂ ಅಣ್ಣನ ಹೆಂಡತಿ ಕನ್ನಡಿಗೋಡೆಯಡ್ಡ ನಿಂತು ಪುರುಷನಿಗೆ ಸನ್ನ ಮಾಡಿ ಬೆಡವೆನ್ನುತ್ತಾಳೆ, ಇವರಿಗೂ ಹಾಗೆಯೇ ಆಗುತ್ತದೆ.

“ಅಣ್ಣನ ಮಡದಿ ಹೆಣ್ಣು ಬೇಡಲಿ ಹೋದೆ
ಕನ್ನಡಿಗೋಡಿ ಮರೆ ಮಾಡಿ ಅತ್ತೀಗಿ
ಕಣ್ಣು ಚಿವುಟಾಳ ಪುರುಷಗೆ
ಕಣ್ಣು ಚಿವುಟಲು ಬೇಡ ನಿನ್ಹೆಣ್ಣು ನಾನೊಲ್ಲೆ
ಅನ್ನಿಗರ ಮಗಳು ಅತಿಚಲುವಿ ಮಾಡಿಕೊಂಡು
ನಿನ್ನೂರು ಮ್ಯಾಲ ಬರುವೇನ”- ಎಂದು ಬಯಲು ಸೀಮೆಯ ಗರತಿ ಹೇಳಿದರೆ,

ಇಲ್ಲಿಯು –

“ಅಣ್ಣನ ಮಡದಿ ಕೂಡೆ ಹೆಣ್ಣು ಕೊಡೆಂದೀರೆ
ಕನ್ನಡಿ ತಳಿಯಡ್ಡ ನಿಂತಕಂಡ ಅತ್ತಿಗಿ
ಕಣ್ಣ ಬಿಟ್ಟಿದಳೇ ಪುರುಷಗೆ
ಕಣ್ಣಬಿಡುವುದು ಬ್ಯಾಡ ಹೆಣ್ಣ ಕೊಡುವುದು ಬ್ಯಾಡ
ಅನ್ನಿಗರ ಮಗಳೆ ಕಡುಚಲುವಿ ದಿಬ್ಬಣ
ನಿಮ್ಮೂರ ಬಯಲಲ್ಲೇ ಕರೆತಪ್ಪೆ”-   ಎಂದು ಹೇಳುತ್ತಾರೆ.

ಇವರಿಗೂ, ಅವರಿಗೂ ಹೆತ್ತ ತಾಯಿ ಎಂದರೆ, ಒಲೆಯಲ್ಲಿ ಉರಿಯುವ ಸಾವಿರ ಕೊಳ್ಳಿಗಿಂತಲೂ ಹೆಚ್ಚು ಬೆಳಕು ಕೊಡಬಲ್ಲ ಒಂದೇ ದೀವಿಗೆಯಂಥವಳಾಗುತ್ತಾಳೆ.

ಇಲ್ಲಿಯ ಹೆಣ್ಣಿಗೆ ಬಳೆಗಾರರನ್ನು ಕಂಡೊಡನೆ ತೌರಿನ ನೆನಪಾಗುವಂತೆ ಅಲ್ಲಿನ ಹೆಣ್ಣೀಗೂ ತೌರ ನೆನಪಾಗುತ್ತದೆ.

ಅಲ್ಲಿನ ಹಾಡುಗಾರತಿಯರು-

“ಹತ್ತು ಸಾವಿರ ಹಾಡ ಹೋರಿ ಮ್ಯಾಲ್ಹೇರಿಕೊಂಡು
ಮ್ಯಾಲೆ ಸಾವಿರ ಕೈ ಬಳಕೆ ತಂದೀವಿ
ತಾರೆ ನಿನ್ಹಾಡ ಕಾಲದಸೀಗೆ”-   ಎಂದರೆ
“ಹತ್ತು ಸಾವಿರ ಹಾಡ ಎತ್ತಿನ ಮೇಲ್ಹೇರಿಕೊಂಡು
ಮತ್ತೇ ಸಾವಿರವ ಕಲಿತೀದೆ ಎಲೆಹೆಣ್ಣೆ
ಮತ್ತೂ ಸಾವಿರ ಕಲ್ಸೂವೆ”   ಎಂದು ಇಲ್ಲಿನ ಹಾಡುಗಾರತಿ ಬೀಗುತ್ತಾಳೆ.

ಮದುವೆಗೆ ತಮ್ಮ ಅಕ್ಕನನ್ನು ಕರೆಯ ಹೋಗುವುದು, ಅವಳು ಬರಲು ಇರುವ ಕಷ್ಟಗಳನ್ನು ಹೇಳುವುದು, ಅದು ಇಲ್ಲಿಗೂ ಅಲ್ಲಿಗೂ ಸಾಮಾನ್ಯ. ಅವುಗಳನ್ನುತಮ್ಮ ಪರಿಹರಿಸುವ ರೀತಿಯೂ ಒಂದೇ ಆಗಿರುತ್ತದೆ.

ಹಲಸಂಗಿಯ ಗರಿಯೊಬ್ಬಳು,

‘ಕುಂಬಾರನಿಗ್ಯಾಕೋ ಗೊಂಬಿಮಾಟದ ಹೆಣ್ಣು
ತುಂಬೆದೆ ಮಣ್ಣ ತುಳಿ ಎಂದ ಮನೆ ಮನೆಗೆ
ಹೊತ್ತು ಮಾರೆಂದ ಹೊಸ ಮಡಕಿ’ – ಎಂದು ವ್ಯಂಗ್ಯವಾಡಿದರೆ

‘ಕುಂಬಾರನಿಗ್ಯಾತಕೆ ಗೊಂಬಿಮಾಟದ ಹೆಣ್ಣು
ಕಡಿ ಎಂಬ ಮಣ್ಣ ಬನಿ ಎಂಬ ಮಜ್ಜ್ಯಾನ (ಮಧ್ಯಾಹ್ನದಲ್ಲಿ)
ಹೊತ್ತು ಮಾರೆಂಬ ಕೊಡಗಡಗಿ’ –  ಘಟ್ಟದ ಕೆಳಗಿನವಳ ವ್ಯಂಗ.

ದನಿ, ಸಾಹಿತ್ಯ, ಭಾವ ಎಲ್ಲವೂ ಒಂದೇ.

ಘಟ್ಟದ ಮೇಲಿನದ್ದು, ಹೀಗಾದರ ಘಟ್ಟದ ಕೆಳಗೆ ಬೈಂದೂರಿನಿಂದ ದಕ್ಷಿಣದ ಕೋಟ ಹದಿನಾಲ್ಕು ಗ್ರಾಮದವರೆಗೆ, ಉತ್ತರ ಹೊನ್ನಾವರ, ಕುಮಟ, ಅಂಕೋಲದವರೆಗಿರುವ ಹೆಚ್ಚಿನ ಜಾನಪದ ಸಾಹಿತ್ಯ ಇಲ್ಲಿನದು ಅಲ್ಲನದೇ, ಅಲ್ಲಿನದು ಇಲ್ಲಿನದೇ ಎಂಬಷ್ಟು ಸಾಮ್ಯ ಕಂಡು ಬರುತ್ತದೆ.  ಉತ್ತರ ಕನ್ನಡದ ಹಳ್ಳೇರ, ಗಾಮೊಕ್ಕಲ ಮುಂತಾದವರ ಹಾಡುಗಳಿಗೂ ಇಲ್ಲಿನ ದೇವಾಡಿಗರು, ಬಿಲ್ಲುವರು ಮುಂತಾದವರ ಹಾಡುಗಳಿಗೂ ಬಹಳಷ್ಟು ಸಾಮ್ಯವಿದೆ.

ಸಾಮಾಜಿಕ ಪದ್ಧತಿ, ಬಳಿಯ ಮೂಲಕ ಗುರುತಿಸಿಕೊಳ್ಳುವುದು,ಮಾತೃಪ್ರಧಾನ ಕುಟುಂಬ ವ್ಯವಸ್ಥೆ, ದೂರದ ತಿರುಪತಿ ತಿಮ್ಮಪ್ಪನನ್ನು (ಗೊವಿಂದ) ಆರಾಧಿಸುವುದು, ಜೀವನಾವರ್ತನೆಯ ಸಂದರ್ಭದ ವಿಶೇಷ ಅಚರಣೆಗಳ ಸಾಮ್ಯತೆಗಳಿಂದಾಗಿ ಇವರ ಸಾಹಿತ್ಯದಲ್ಲಿಯೂ ಸಾಮ್ಯತೆಗಳೀರುವುದು ಸಹಜ.  ಆದರೆ ಗೊಡೆಯಂಥ ಘಟ್ಟದಾಚೆ ಇರುವ ಬಯಲು ಸೀಮೆಯ ಜನಪದ ಸಾಹಿತ್ಯಕ್ಕೂ ಇಲ್ಲಿನ ಸಾಹಿತ್ಯಕ್ಕೂ ಸಾಮ್ಯತೆ ಇರುವುದು ವಿಶೇಷವೇ.

ಇಲ್ಲಿಯ ಜಾನಪದ ಸಾಹಿತ್ಯ ಕೆಲವೊಂದು ಐತಿಹಾಸಿಕ ಸಂಗತಿಗಳನ್ನೂ ಅಲ್ಲಲ್ಲಿ ತೆರೆದಿಡುತ್ತವೆ. ಈ ಸಾಹಿತ್ಯದಲ್ಲಿ, ಮಲೆನಾಡಿನ ಇಕ್ಕೇರಿ, ಸಾಗರ, ಕಾರ್ಗಲ್ಲು, ಶಿರಸಿ,  ದೂರದ ತಿರುಪತಿ, ಕಾವೇರಿ ( ಭಾಗಮಂಡಲ) , ಹುಬ್ಬಳಿ ಇವೆಲ್ಲ ಹೆಸರುಗಳು ಬರುತ್ತವೆ. ಆಂದು ಘಟ್ಟದ ಕೆಳಗ ಬಡತನವಿತ್ತು. ಕೂಲಿಗಾಗಿ ಇಲ್ಲಿನವರೆಲ್ಲ ಘಟ್ಟ ಹತ್ತುತ್ತಿದ್ದರು.  ಹಾಗಾಗಿ ಇಲ್ಲಿನ ಹಾಡು ಅಲ್ಲಿಗೆ, ಅಲ್ಲಿನ ಹಾಡು ಇಲ್ಲಿಗೆ ಬಂದಿರಬಹುದು.

ಜಾನಪದ ಸಾಹಿತ್ಯದಲ್ಲಿ “ದಂಡಿನವರಿಗೆ” ಬಹಳ ಮರ್ಯಾದೆ.  ಈ ಶಬ್ದ  ಎಲ್ಲ ಕಡೆಯ ಜಾನಪದ ಸಾಹಿತ್ಯದಲ್ಲಿ ಬರುತ್ತದೆ.  ಜಾನಪದೀಐರಿಗೆ ದಂಡಿನವರ ಮೇಲೆ ಬಹಳ ವ್ಯಾಮೋಹ. ಗಂಡ, ಅಣ್ಣ, ಮಾವ, ಮುಂತಾದವರು ದಂಡಿಗೆ ಹೋದ ಸಂಗತಿ ಪದೇ ಪದೇ ಬರುತ್ತದೆ.  ಸಾಮಾಜಿಕವಾಗಿ  ಅಂದು ದಂಡಿನವರಿಗೆ ಬಹಳ ಮರ್ಯಾದೆ ಇದ್ದಿರಬಹುದು. ಇಲ್ಲವೇ ಅಬಲೆಯಾದ ಹೆಣ್ಣಿಗೆ ಶೂರ ವೀರ ಗಂಡಸರ ಬಗ್ಗೆ ಮೆಚ್ಚುಗೆ ಇರುವ ಕಾರಣ, ದಂಡಿನವರೆಂದರೇ ಶೂರರೇ ಆಗಿರುತ್ತಾರಾದ್ದರಿಂದ ತಮ್ಮ ಮನದಾಳದ ಅಶಯ ಈ ರೀತಿ ಹೊಮ್ಮಿರಲೂಬಹುದು. ಭಾವನಾತ್ಮಕವಾದ  ಈ ಕಾರಣವಲ್ಲದೆ, ರಾಜಕೀಯವಾಗಿ ಅಂದು ತುಂಡು ಪಾಳೆಯಗಾರರ ಕಾಲದಲ್ಲಿ ಪರಸ್ಪರ ವೈರತ್ವ, ಕಾದಾಟದಿಂದಾಗಿ ದಂಡಿಗೆ ಹೋಗುವವರ ಸಂಖ್ಯೆಯೂ ಸಾಕಷ್ಟಿರಬಹುದು. ಅಂದು ಕಟ್ಟಿದ ಹಾಡೇ ಮುಂದುವರಿದುಕೊಂಡು ಇಂದಿಗೂ ಬಂದಿರಬಹುದು. ಅಂತೂ ದಂಡಿನವರು, ಚಿನ್ನದ ಕತ್ತಿ (ಚಿನ್ನದ ಕತ್ತಿ ಎಂದು ಒಂದು ಮನೆತನದ ಹೆಸರೇ ಈ ಭಾಗದಲ್ಲಿ ಇದೆ). ರುಂಡಕ್ಕೆ ರುಂಡ ಹೊಯ್ಸುವುದು ಇವೆಲ್ಲ ಹಳ್ಳಿಯ  ಹೆಂಗಳೆಯರ ಹಾಡುಗಳಲ್ಲಿ ಸಲೀಸಾಗಿ ಬರುತ್ತವೆ.

“ನಿಸ್ತ್ರೇ”ಯರೆಂಬ ಶಬ್ದ ಮಂಡ್ಯ ಕಡೆಯ ಜಾನಪದದಲ್ಲಿ ಮತ್ತು ನಮ್ಮಲ್ಲಿಯೂ ಬರುತ್ತದೆ.  ಆಡು ಮಾತಿನಲ್ಲಿ ನಿಸ್ತ್ರೆಯರೆಂದರೆ ಹೆಂಗಸೆಂದೇ ಅರ್ಥ.  ಶಬ್ದಾರ್ಥಕೋಶಗಳಲ್ಲಿ ಈ ಪದಕ್ಕೆ ಅರ್ಥವಿಲ್ಲ. ಆದರೆ ಜಾನಪದದಲ್ಲಿ ಈ ಶಬ್ದವಿದೆ.  ಕರಾವಳಿಯ

“ಮೂರು ಜನನ ನಿಸ್ತ್ರೆಯರು ಹಾಡ್ಹೇಳಿ ಬತ್ತ ತೋಳುವಾಗೆ
ಜೋಡೇನಕಿ ಮ್ಯಾನೆ ಗಿಣಿರಾಮ ಕೂಕಂಡ
ಯಾವಕ್ಕನ ಪದವ ಕಲಿಕೆಂಬ”  – ಎಂದು ಕಂಡು ಬಂದರೆ ಮಂಡ್ಯ ಕಡೆಯ ಹಾಡೊಂದರಲ್ಲಿ

“ನಿಸ್ತ್ರಟ್ಟ  ಬಣ್ಣ ನೋಡಾನ ಬಲ್ಲಿ
ಚಂದ್ರಾಮರವೇ ಎಳಿನಾಗ ಗೀಜಗನ್ಹಿಂಡು
ಕಾದಾಡುತಾವೆ ಸೆರಗಲ್ಲಿ”  – ಎಂದಿದೆ.

ಕೆಲವು ಶಬ್ದಗಳು, ಕಾರ್ಯಸಂಬಂಧೀ, ಭಾವ ಸಂಬಂಧೀ, ಹಾಡುಗಲು ಸಮಾನವಾಗಿರುವುದನ್ನು ಕಂಡರೆ ಕಾವೇರಿಯಿಂದ ಗೋದಾವರಿ, ಅರಬೀ ಸಮುದ್ರದಿಂದ ಪೂರ್ವ ಘಟ್ಟಗಳ ನಡುವಿನ ಕನ್ನಡನಾಡಿನ ಜಾನಪದ ಗೆರಗು ಮೂಡಿಸುತ್ತದೆ. ಕರಾವಳಿ, ಮಲೆನಾಡು, ಬಯ;ಮಾಡುಗಳ ವ್ಯತ್ಯಾಸವೇನಿದ್ದರೂ ಮೇಲ್ನೋಟಕ್ಕೆ, ಒಳ ಹರಿವಿನ ಸಾಂಸ್ಕೃತಿಕ ಅಂತರ್ಜಲ ಒಂದೇ.

ಕರಾವಳಿ ಜಾನಪದದಲ್ಲಿ ಕಥೆಯೊಂದಿದೆ. ಎಲ್ಲರೂ ಒಂದೇ “ಅಬ್ಬೆ”ಯ ಮಕ್ಕಳು. ಒಬ್ಬೊಬ್ಬರು ಒಂದೊಂದು ಕೆಲಸ ಕಲಿತು ಒಂದೊಂದು ಜಾತಿ ಆದರು ಎಂದು. ಇದನ್ನು ಇನ್ನಷ್ಟು ವಿಸ್ತರಿಸಿ ಆ ಅಬ್ಬೆಯ ಮಕ್ಕಳು ಬೇರೆ ಬೇರೆ ಊರಿಗೂ ಹೋಗಿ ನೆಲೆಸಿದರು, ಬದುಕ ನಡೆಸಿದರು.  ಪಾಡು ಪಟ್ಟರು ಹಾಡು ಕಟ್ಟಿದರು ಎಂದು ಹೇಳಬಹುದೋ ಏನೋ.