ಆದರೂ… ಇಲ್ಲಿನ ಹಾಡ್ಗಥೆಗಳಲ್ಲಿ ಒಂದೆರಡು ಸೂಕ್ಷ್ಮ ವ್ಯತ್ಯಾಸಗಳು ಕಣ್ಣಿಗೆ ಬೀಳುತ್ತವೆ.  ಉದಾ ಕೆರೆಗೆಹಾರದಂತಹ ಬಯಲ ಸೀಮೆಯ ಘಟನಾತ್ಮಕ ಕಥೆಯಲ್ಲಿ ಕೆರೆಗೆ ಹಾರವಾಗುವ ಹೆಣ್ಣಿಗೊಂದು ಹೆಸರಿದೆ, ಅಣಜಿ ಹೊನ್ನಮ್ಮ, ಕೆಂಚಮ್ಮ, ಧರಣಿಯಮ್ಮ, ಹೀಗೇ ಏನೋ ಒಂದು. ಆದರೆ ಇಲ್ಲಿನ ಕಥೆಯಲ್ಲಿ ಬಲಿಯಾದವಳಿಗೆ, ಬಲಿಗೆ ಕಾರಣವಾದವಳಿಗೆ ಬರೀ ಸಂಬಂಧ ವಾಚಕದ ನಾಮಧೇಯ.

ಅಲ್ಲಿನ ಸೊಸೆ ಮಡಿದು ಮಹಾಸತಿಯಾದರೆ ಇಲ್ಲಿನವಳು ಮಡಿದು ಮತ್ತೇ ಹುಟ್ಟಿ ಬಂದಳು. ಅಲ್ಲಿ ಗಂಡ ಓಡಿ ಬಂದ, ಇಲ್ಲಿ ಅಣ್ಣ ಓಡಿ ಬಂದ, ಪ್ರಾಯಶಃ ಇದಕ್ಕೆ ಒಂದು ಕಾರಣವೆಂದರೆ ನಿಜವಾಗಿ  ನಡೆಯದ  ಈ ಕಥೆ, ಘಟ್ಟದ ಮೇಲೆ  ನಡೆದಿದೆ ಎನ್ನಲಾದ ಕಥೆಯ ಕಥಾ ಮರುಸೃಷ್ಠಿ ಇದಾಗಿರುವುದರಿಂದಲೇ ಇರಬಹುದು. ಒಟ್ಟಿನಲ್ಲಿ ಇಲ್ಲಿಯ ಜಾನಪದರ ಅಶಯ ವಿಭಿನ್ನವಾಗಿ ಕಾಣುತ್ತದೆ.

ಇದೇ ಸಂದರ್ಭದಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಇಲ್ಲಿಯ ಮಹಾಸತಿಯದ್ದು. ಮಹಾಸತಿಯೆಂದು ಹೇಳಲ್ಪಡುವ ಉರುವಿಗೆ ಪೂಜೆ ಏನೋ ನಡೆಯುತ್ತಿದೆ ಆದರೆ ಸತಿಕಲ್ಲಿಗೆ ಸಂಬಂಧ ಪುಟ್ಟ ಹಾಗೆ ಯಾವ ಘಟನೆಯ ಕತೆಯೂ ಇಲ್ಲಿ ಕೇಳಬರುವುದಿಲ್ಲ.  ಸತಿಯಾದ “ಈರೋಬಿ” ಯಂಥ ಕಥೆಗಳು ಇಲ್ಲಿ ಕೇಳಬರುವುದಿಲ್ಲ. ಜನ ನೆನಪು ಬಿಟ್ಟಿದ್ದಾರೋ ಅಥವಾ ಅದು ಅವರ ಮನಕಲಕಿಲ್ಲವೋ  ತಿಳಿಯದು.

ಇವರ ತೆ ಹಾಡುಗಳಲ್ಲಿ ಸಾಂಸಾರಿಕ ಆಸೆ ನಿರಾಸೆಗಳು, ವ್ಯಂಗ್‌ ವಿಡಂಬನೆಗಳು, ದುಃಖ ದುಮ್ಮಾನಗಳೇ ಜಾಸ್ತಿ. ಮಾತ್ರವಲ್ಲ ಇಲ್ಲಿನವರು ಅಕ್ಷರಶಃ ಮಣ್ಣಿನ ಮಕ್ಕಳು. ಬಯಲು ಸೀಮೆಯ ಜಾನಪದದಲ್ಲಿ ಅಲ್ಲಲ್ಲಿ ಅಧ್ಯಾತ್ಮಿಕತೆಯ ಸೆಳಕು ಕಂಡು ಬರುತ್ತದೆ.  ಭಕ್ತಿ ಪಂಥ ವಿಜ್ರಂಭಿಸಿದ ನಾಡಾಗಿದ್ದುದರಿಂದಲೋ ಏನೋ. ಆದರೆ ಕರಾವಳಿಯ ಮಣ್ಣಿನಲ್ಲಿ ಆ ಗುಣ ಕಾಣದು. ಇವರ ಹಾಡಿನ ದೇವರೂ ಸಹ ಕಾಣಿಕೆ ವಸೂಲು ಮಾಡಲು ನಿಲ್ಲುತ್ತಾರೆ. ” ದೊಟ್ಟೀಕಾಲಮ್ಮ ಹೊರಟೀಳ ಗುಡ್ಡಮ್ಮಾಡಿ ತೊಟ್ಟಿಲ ಕಾಣುಕಿಯ ತಿಳಿಕಂದ !. ದೋಟ್ಟೀಕಾಲಮ್ಮ ಎಂಬ ದೈವವೂ ತೊಟ್ಟಿಲು ಕಾಣಿಕೆಯನ್ನು ಕಾಣ ಹೋಗುತ್ತಾಳೆ.

ಈ ಸಂದರ್ಭದಲ್ಲಿ ನನಗೆ ನೆನಪಾಗುವುದು ಘಟ್ಟದ ಮೇಲಿನ “ಎಲ್ಲೋ ಜೋಗಪ್ಪ ನಿನ್ನ ಅರಮನೆ” ಎಂಬ ಹಾಡು ಮತ್ತು ಇಲ್ಲಿನ “ಜಂಗುಮಾ” ಎಂಬ ಹಾಡು. ಅಲ್ಲಿಯ ಜೋಗಪ್ಪನಲ್ಲಿ ಯಾವುದೋ ದಿವ್ಯತೆಯನ್ನು ಕಾಣುತ್ತೇವೆ. ಜೋಗಪ್ಪನೊಂದಿಗೆ ಕೋಡಾಡ್ತಾ ಇರೋ ಗಂಡನನ್ನು ಬಿಟ್ಟು ಹೊರಡ ಬಯಸುವ ಹೆಣ್ಣಿನಲ್ಲಿ ಅತೀ ಎನಿಸುವ ಶಾರೀರಿಕ ಕಾಮನೆಯೇ ಕಾಣುತ್ತೇವೆ.  ಆದರೆ ಅಲ್ಲಿನ ಕತೆಯ ಗಂಡ ತಪಸ್ಸು ಮಾಡಿ, ಮಗನನ್ನು ಬದುಕಿಸಿಕೊಂಡು ದೇವರಲ್ಲಿ ಕೇಳಿಕೊಂಡು ಹೆಂಡತಿಯನ್ನು ವಧಿಸುತ್ತಾನೆ. ಆದರೆ ಇಲ್ಲಿನ ಇಂತಹ ಕಥೆಯಲ್ಲಿ ಹೆಂಡತಿಯ ಕೆಟ್ಟ ಗುಣ ಗೊತ್ತಾದ ತಕ್ಷಣ ರುಂಡವನ್ನು ಕಡಿದು ಬಿಡುತ್ತಾನೆ ಗಂಡ. ಇದು ಮೂಲ ಮನೋಭಾವದ ವ್ಯತ್ಯಾಸ ಅಲ್ಲಿಗೂ ಇಲ್ಲಿಗೂ.

ಆದರೂ… ಬಯಲು ಸೀಮೆಯ ಹೆಣ್ಣು ಮಕ್ಕಳಿಗೆ ಬಿಸುವ ಕಲ್ಲ ಬಳಿಯೇ ತವರು ಮನೆಯೆಂದು ಎಂದು ಹೇಳುತ್ತಾರೆ. ಅವರು ತಮ್ಮ ಕಷ್ಟ ಸುಖ ಬೇನೆ ಬೇಸರಿಕೆಯನ್ನು ಆ ಬಿಸುವ ಕಲ್ಲಿನ ಬಳಿಯೇ ನಿವೇದಿಸಿಕೊಳ್ಳುತ್ತಾರೆ. ಹಾಗೆಯೇ ಬತ್ತ ಕುಟ್ಟುವ ಒರಳು ಇಲ್ಲಿನ ನಾರಿಯರ ತವರು ಮನೆ ಆಗಿತ್ತು ಎಂದು ಧರಾಳವಾಗಿ ಹೇಳಬಹುದು.

ಒಟ್ಟಂದದಲ್ಲಿ ಜಾನಪದ ಸಾಹಿತ್ಯದ ಹರವು ಅಲ್ಲಲ್ಲಿ ಗಾದರೂ ಅದರ ಆಳ ದೊಡ್ಡದೇ. ಪರಿಸರದ ಎಲ್ಲರನ್ನ ಒಳಗೊಳ್ಳುವುದು ಅದರ ಸ್ವಭಾವ. ಬಂಧುಗಳು, “ಸಂದ್ರಿಷ್ಟ”ರು ಕೂಡಿ ಬದುಕುವುದನ್ನು ಇಷ್ಟಪಡುವವರು.” ಹೆಣ್ ಕೇಂಬುಕೆ ಬಂದೀರಿ ಕರಿಕಿ ಕಲ್ಯಾಣದರು ಮಾಯಿ ಮಾವಿದ್ರ ಮಗಳಿಗೆ ಬಾಲಮ್ಮಗೆ ಕೂಡಾಡುಕಿದ್ರ ಮೈದಿನಿ. “ಹೆಣ್ಣು ಕೊಡುವ ಮನೆಯಲ್ಲಿ ಕೂಡಾಡುವ ಜನ ಬೇಕು. ಅಂಥ ಮನೆಗೆ ತಮ್ಮ ಹೆಣ್ಣು ಹೋಗಬೇಕು. ಇದು ಜನಪದರ ಜೀವನ ನೀತಿ, ರೀತಿ,

ತಾಯಿಯ ಪ್ರೀತಿ ವಿಶ್ವವ್ಯಾಪಕವಾದದ್ದು. ನಮ್ಮಲ್ಲಿ “ಯಾರಿದ್ದರೇನು ತಾಯಿ ಇದ್ಹಾಗಲ್ಲ. ಸಾವಿರ ಕೋಳ್ಳಿ ಒಲೆಯೊಳಗೆ ಉರಿದರೂ ದೀವಿಗಿಯಂಥ ಬೆಳಕುಂಟೇ: ಎಂದರು.  ಬಯಲುಸೀಮೆಯ ಗರತಿ ಯಾರಿದ್ದರೂ ನನ್ನ ತಾಯವ್ವನ್ಹೋಲರು ಸಾವಿರ ಕೊಳ್ಳಿ  ಒಲಿಯಾಗ ಇದ್ದರೂ ಜ್ಯೋತಿ ನಿನ್ಯಾರು ಹೋಲರು” ಅಂದಳು. ಅದೇ ರೀತಿ “ಬಡವಿಯ ಮಕ್ಕಳು ನಡೆದರೆ ಸಂತೊಷ ಹುಡಿಯಾಡಿಮನೆಗೆ ಬರುವಾಗ ತಾಯಿಗ ಬಡತನದ ಜಾನ ಮರೆಯಿತು” ಎಂದು “ಹುಡಿ ಹುಡಿ ಮಣ್ಣ’ ಬಯಲು ಸೀಮೆಯ ಅವ್ವ ಹಾಡಿದರು, “ಬಡವಿಯ ದುಃಖ ಅಡಗೀತು” ಅಂದಾಳು ನಮ್ಮ ಕರಾವಳಿಯ “ಅಬ್ಬೆ”.

ಆ ತಾಯಿಗೆ ಮಗು ಹೊರಗೆ ಹೋಗಿ ಆಡಬೇಕು. ಆದರೆ ಕತ್ತಲಾಗುವ ಮುಂಚೆ ಬರಬೇಕು, ಬರದೆಹೋದರೆ ಸೂರ್ಯನಿಗೆ ಆಣತಿ ಮಾಡುತ್ತಾಳೆ. ಇನ್ನೈದು ಗಳಿಗೆ ನಿಲ್ಲೆಂದು.

“ಹೊತ್ತು ಬೈ ಬೈ ಆದೊ ಕಿಚ್ಚು ಪಿಣಿ ಪಿಣಿಯಾದೋ
ಮಕ್ಕಳ ತಾಯಿ ಎದೆಗೂದಿ ಸೂಲ್ಯಮ
ಇಂದೈದೆ ಗಳಿಗಿ ನಿಲಬೇಕು”  ಇನ್ನೂ ಬರಲಿಲ್ಲವೇ ಕಂದ, ಆಗ ನೋಡಿ-

‘ದಾರಿಯ ಕಂಡ್ಡ್ಕಣ್ಣ ದಾಸಾನ ಹೂಗಾದೊ
ಏ ಶಿವ್ನೆ ಮಗುವೆ ಬರಲಿಲ್ಲ ಕಣ್ಣೀರು
ಹಾಸೂಗಿ ಅದ್ದಿ ಹಸಿ ಅದ್ದಿ”  ಅಂಥ ಕಂದನ ವರ್ಣನೆ ಅವಳದ್ದೇ ಭಾಷೆಯಲ್ಲಿ-

“ಹಸುಮಗಿನ ಹಲ್ಬಾಯಿ ಹೆಸರಕೊಡ ಒಡೆದ್ಹಂಗೆ
ಹೊಸ ಮಾತನಾಡಿ  ನೆಗಿಯಾಡೆ ಕಂದಯ್ನ
ತುಟಿಯಲಿ ವಜ್ರವೇ ಅಸುರೀತು.

ಗದ್ದೆಗೆ ಹೋಗುವ ಹೆಣ್ಣು ಹೆಸರು ಕೋಡು ಒಡೆಯುತ್ತಿರುವುದನ್ನು ಕಂಡು ಬಲ್ಲಳು. ನಾಲ್ಕೈದು ಹಲ್ಲು ಹೊರ ಬರುವಾಗ, ಹೊಸದಾಗಿ ಒಂದೊಂದೆ ತೊದಲು ಮಾತನಾಡುವಾಗ ಸುರಿಯುವ ಜೊಲ್ಲು ವಜ್ರದ ಹರಳು ಅವಳ ಪಾಲಿಗೆ. ಭಾವ ಉಕ್ಕಿದಾಗ ಬರಹವಿಲ್ಲದ ಆ ತಾಯಿ ಶಬ್ದಕ್ಕೆ ತಿಣುಕಾಡುವುದೇ ಇಲ್ಲ. ಉಸಿರಾಡಿದಷ್ಟೇ ಸಹಜವಾಗಿ ಶಬ್ದ ಮೂಡುತ್ತದೆ.  “ದಾನ ಹೂಗಿನಕೆಂಪು, “ಹೆಸರು ಕೋಡು”, ಇತ್ಯಾದಿಗಳೆಲ್ಲ ಅವಳು ದಿನನಿತ್ಯ ಕಾಂಬ ವಸ್ತು. ಅದೇ ಅವಳ ಹಾಡಿನ ಶಬ್ದ ಸಂಪತ್ತು.

ಮಗುವಿಗೂ ಮಗುವಿನ ಅಜ್ಜ, ಮಾವಂದಿರಿಗೂ ಇರುವ ನವಿರು ಸಂಬಂಧದ ಸೂಕ್ಷ್ಮವೂ ಅವರ ಹಾಡಿನಲ್ಲಿದೆ.

ಉದಾ-

“ಗಿಜ್ಜಿಕಾಲ್ ಕಂದಮ್ಮ ಬೇಲಿಬದಿಗ್ಹೋಯ್ ಬೇಡ
ಗೆಜ್ಜಿಗೆ ಮುಳ್ಳು ಅವುರುಗು ನಿನ್ನಜ್ಜ
ಬೇಲಿಗೆ ಹೀಲಿ ನಡಸೂರು”

ಇಂಥ ಅಜ್ಜನಿಗೆ ಮೊಮ್ಮಗು ಏನು ಮಾಡಬಹುದು.  ಇದನ್ನೂ ಅವಳೇ ಹೇಳುತ್ತಾಳೆ.

ಹಸಿಯ ಮಾವಿನೆಲಿ ಎಸುರು ಗಿಂಡಿಗಿ ನೀರು
ಹಸು ಮಗು ಕಂದಯ್ಯ ಅನುಮಾಡ ನಿನ್ನ ಅಜ್ಜ
ಅಶುವಂತಕ್ಹೋಯಿ ಬರುವರು”

ಎಂದು. ಹಿಂದಿನ ಬದುಕಿನ ಕ್ರಮವನ್ನೇ ಹೇಳುತ್ತದೆ ಇದು. ಕಂದಯ್ಯ ಹಸಿರು ಮಾವಿನೆಲೆ ಎಸರು ಗಿಂಡಿಗಿ ನೀರು ಅನುವು ಮಾಡಿಇಡಬೇಕು. ಅಜ್ಜ ಮಿಂದು ಆಶುವಂತ (ಅಶ್ವತ್ಥ) ನಿಗೆ ನಮಸ್ಕಾರ ಮಾಡಿ ಬರಬೇಕಲ್ಲ. ತೊಳಸಿ, ಆಶುವಂತಹ ವೃಕ್ಷ ಪೂಜೆಯ ಆಜ್ಜಯ್ಯನ ಪೂಜೆ, ಹಸಿರಿನೊಂದಿಗೆ ನಿತ್ಯ ಸಂಗಾತದ ಕಾಲದ ಹಾಡು. ಮಗನಿಗೆ ತಾಯಿಯ ಪಾರ ತೊಟ್ಟಿನಿಲಿಂದಲೇ ಪ್ರಾರಂಭ

ಇನ್ನು ಮಾವ

“ಅಳಿಯ ಹುಟ್ಟಿದನೆಂದು ಎಲೆ ಕೇಂಡ್ಯ ಮಾವಯ್ಯ
ಬಸರುರಂಗಡಿಯ ಹೊಸಪೇಟೆ ತಣಿಮ್ಯಾಲೆ
ಅಳಿಯಗೆ ಚಂಳಿಯಂಗಿ ಹೋಳಿಸುವ”

ಹೀಗೆ ತೊಟ್ಟಿಲಲ್ಲೇ ಅಜ್ಜ ಮಾವ ಮುಂತಾದ ನವಿರು ಸಂಬಂಧಗಳನ್ನು ಹಚ್ಚಿಕೊಡುತ್ತಾಳೆ ತಾಯಿ.

ಜೀವನದಲ್ಲಿ “ಮದುವೆ” ಅನ್ನುವುದು ಬಹು ಸಂಭ್ರಮದ ಘಟ್ಟ, ಅದನ್ನು ಚೆನ್ನಾಗಿ ಅನುಭವಿಸುವ ಹಳ್ಳಿಯ ಹೆಂಗಸರಲ್ಲಿ ಹುಡುಗನಿಗೆ ಹೆಣ್ಣು ಕಾಣುವ, ಹೆಣ್ಣು ಕೇಳುವ ಸಮಾರಂಭವೂ ಸಂಭ್ರಮದಿಂದಲೇ ನಡೆಯುತ್ತದೆ. ಹಾಡು ಹೇಳಿ, ಸಂಭ್ರಮಿಸುತ್ತಾರೆ.  ಹೆಣ್ಣು ಕೇಳ ಹೋಗುವ ಹಾಡಿನಲ್ಲೂ ಮಹಾಭಾರತದ “ಸೌಭಧ್ರಿ” ಬರುತ್ತಾಳೆ. “ಅಭಿಮನ್ಯು” ಬರುತ್ತಾನೆ ; ಕೃಷ್ಣ , ರುಕ್ಮಿಣಿ ಎಲ್ಲ ಬರುತ್ತಾರೆ. ಮಹಾಭಾರ ಕಾವ್ಯ ಅವರ ಜೀವನದಲ್ಲಿ ಹೇಗೆ ಹಾಸು ಹೊಕ್ಕಾಗಿದೆ ಎಂದರೆ ತಂಗಿ ಸೌಭಧ್ರೆ, ಅಣ್ಣ ಕೃಷ್ಣ, ಅಳಿಯ ಅಭಿಮನ್ಯು ಆಗುತ್ತಾರೆ. ಹುಲ್ಲಿನ ಒಂದಂಕಣದ ಬಡ ಮನೆಯಾದರೂ ಅದು ಅಣ್ಣಯ್ಯನ ಅರಮನೆ, ತಂಗಿಯ ಅರಮನೆ… ಅವರುಟ್ಟಿದ್ದು ಪಟ್ಟೆ, ತೊಟ್ಟಿದ್ದು, ರನ್ನ ಚಿನ್ನ. ನಿಜ ಜೀವನದಲ್ಲಿ ಕಣ್ಣಲ್ಲಿ ಕಾಣಲೂ ಆಗಸ ಅಷ್ಟೈಶ್ವರ್ಯದ ಭಾಗ್ಯವನ್ನು ಹಾಡಿನಲ್ಲಿ ಹಾಡುತ್ತ ಅನುಭವಿಸುತ್ತಾರೆ.  ಮಗ ಅಭಿಮನ್ಯುವಿಗಾಗಿ ಹೆಣ್ಣನ್ನು ಕೇಳಲು ಹೋಗುವ ಸೌಭದ್ರಿಗೆ ಮಗನ ಮದುವೆ ನೆನಪಾಗುವುದಾದರೂ ಯಾವಾಗ; “ನಾರಿಯು ನಲ್ಲನು ತೂಗು ಮಂಚದ ಮೇಲೆ ಹೋಳು ಬೆಳಿ ಎಲಿಯ ಮೆಲುವಾಗ…” ಬಹಳ ರಮ್ಯವಾದ ಕಲ್ಪನೆ.

ಹುಡುಗಿಯನ್ನು ಇವರ ಮನೆಗೆ ಕೊಡಲು ಅಣ್ಣನ ಹತ್ತಿರ ತಂಗಿ ಹೆಣ್ಣು ಕೇಳಿದರೆ ಬೇಡವೆಂದು ಕಣ್ಣಿನಲ್ಲೇ ಅಣ್ಣನ ಹೆಂಡತಿ ಪುರುಷನಿಗೆ ಹೇಳುತ್ತಾಳೆ ಎಂದು ಒಂದು ಕಡೆ ಬರುತ್ತದೆ. ಆಗ ತಂಗಿ ಅತ್ತಿಗೆಗೆ ನೀವೇನೂ ಕನ್ನಡಿ ಗೋಡೆಯಡ್ಡ ನಿಂತು ಕಣ್ಣು ಬಿಟ್ಟ ಅಣ್ಣನನ್ನು ಹೆದರಿಸುವುದು ಬೇಡ, ನಿನ್ನ ಮಗಳಿಗಿಂತ ಚೆಂದಾದ ಹುಡುಗಿಯನ್ನು ನಿನ್ನ ಬೈಲಿನಲ್ಲೇ ದಿಬ್ಬಣದಲ್ಲಿ ತರುವ ಎಂದು ಸವಾಲೊಡ್ಡುತ್ತಾಳೆ.  ಅವರು ಅಂಬಲಿ ಕುಡಿಯುವವರು,ದೊಂಬರಾಟ ಆಡುವವರು ಎಂಬ ನೆವ ಹೇಳುತ್ತ ಹುಡುಗಿಯ ಅಮ್ಮ ಅಪ್ಪನಿಗೆ ಮನಸ್ಸು ಇಲ್ಲದೆ ಇಂತಹ ನಾನಾಕಾರಣ ಹೇಳಿದರೂ ಇವನನ್ನು ಮೊದಲೇ ಮೆಚ್ಚಿದ್ದರಿಂದಲೇ ಹುಡುಗಿ

“ಅಂಬಲಿ ಕುಡಿಬಲ್ಲೆ ಕಂಬ್ಳಿಯ ಹೊದಿಬಲ್ಲೇ
ದೊಂಬರಾಟಗಳ ಕಲಿಬಲ್ಲೆ ತಾಯಮ್ಮ
ಆಭಿಮನ್ಯು ಬಾವಯ್ಗೆ ಒಲಿದ್ಹೋಪೆ”.

ಎಂದು ದೃಢವಾಗಿ ಹೇಳುವಾಗ ನಿಜವಾದ ಜೀವನದಲ್ಲಿ ಹಳ್ಳಿಯ ಹುಡುಗಿಯ ಮನದಿಚ್ಛೆ ನಡೆಯುವುದೋ ಇಲ್ಲವೋ, ಆದರ ಹಾಡಿನಲ್ಲಿ ಮಾತ್ರ ಆ ಆಸೆ ಪೂರೈಸಿದೆ. ಜಾನಪದ ಹಾಡುಗಳೇ ಹಾಗೆ. ತಾವು ಕಂಡ ಕನಸು, ಪಟ್ಟಿ ಭಂಗವನ್ನೆ ಸರಳ ಸುಂದರವಾಗಿ ಹೆಣೆದು ಹಾಡಿಕೊಳ್ಳುವುದೇ ಆಗಿದೆ.

ಮದುವೆಗಾಗಿ ತಮ್ಮ ಅಕ್ಕನನ್ನು ಕರೆಯುವುದೂ ಒಂದು ಕ್ರಮವೇ. ಅದು ಒಂದು ರಿವಾಜಿನಲ್ಲೇ ಅಗಬೇಕು. ತಮ್ಮ ಆಕ್ಕನನ್ನು ಕರೆಯಬೇಕು, ಅಕ್ಕ ತನಗೆ ಮದುವೆಗೆ ಬರಲು ಇರುವ ಅಡ್ಡಿಗಳನ್ನು ಹೇಳಬೇಕು, ತಮ್ಮ ಅದನ್ನೆಲ್ಲ ನಿವಾರಿಸುವ ಭರವಸೆ ಕೊಡಬೇಕು. ಆಗಲೂ ಅಕ್ಕ ಬರಲು ಬಿಂಕ ತೋರಿದರೆ ತಮ್ಮನಿಗೆ ಅಕ್ಕನನ್ನು ಹೊರಡಿಸುವ ಕೊನೆಯ ಉಪಾಯವೂ ಗೊತ್ತು.

ನೀನೀಗ ಬರದಿದ್ರೆ ನಾನ್ ಕರೀ ನಿಲ್ಸುವೆ
ನೆರೆಮನಿ ಗೌಂಡೀನ ಕರೆಸುವೆ ಅವ್ಳಕೈಲಿ
ಚಿನ್ನದ ಕಳಸವ ಇಡ್ಸೂವೆ”

ಯಾವ ಅಕ್ಕ ತಮ್ಮನ ಮದುವೆಗೆ ಕಲಶ ಕನ್ನಡಿ ಹಿಡಿಯುವ ತನ್ನ ಹಕ್ಕನ್ನುಬಿಟ್ಟು ಕೊಟ್ಟಾಳು.

ಮದುವೆಗೆ ಎಲ್ಲ ಸಿದ್ಧವಾದ ಮೇಲೆ “ಕೊಡನೀರು ಶಾಸ್ತ್ರ”. ಮದುವೆಗೆ ಮದು ಮಕ್ಕಳ “ಜಳಕ”ಕ್ಕೆ  ಒಡೆಯರ ಮನೆಯಿಂದ ನೀರು ಹೊತ್ತು ತರಬೇಕು. ಇದೇ ಕೊಡನೀರು ಶಾಸ್ತ್ರ. ಅದಕ್ಕೂ ಹಾಡು.. ಕೊಡ ನೀರಿಗೆ “ನಿಸ್ತ್ರೆಯರು ಹೋಗುವ ದಾರಿಯಲ್ಲಿ ಸಾಲು ಸಂಪುಗಿ ಗಿಡ. ಅದರ ಹೂ ಕೊಯ್ದು ಹಗ್ಗವಿಲ್ಲದೆ ಹೂ ನೆಯ್ದು, ಎಳೆ ತೆಗೆಯದೇ ಹೂ ಮುಡಿದು, ಜೋಯಿಸರ “ಅರಮನೆ”ಗೆ ಹೋಗಿ ಕರೆಯುತ್ತಾರೆ. ಆ ಜೋಯಿಸರು ಚಿನ್ನದ ಕೊಡಪಾನ ಬೆಳ್ಳಿಯ ನೇಣಿನಿಂದ ನೀರು ತೆಗೆದು ಅವರ “ಕಂದ್ಲಿ”ಗೆ ತುಂಬಬೇಕು. ಅದು  ಎಂಥನೀರು, “ಹಕ್ಕಿ ಮುಟ್ಟದಿದ್ದ ನೀರು, ಪಕ್ಷಿ ಮುಟ್ಟ ದಿದ್ದ ನೀರು, ಕೊಟೇಶ್ವರ ಕೋಟಿನಿಂಗನ ಕೆರಿ ನೀರು.” ವೈದಿಕರು ಮನೆಯ ಬಾವಿಯಲ್ಲಿ ಗಂಗೆ ಯಮುನೆಯರನ್ನು ಭಾವಿಸಿದ ಹಾಗಯೇ ಈ ಹಳ್ಳಿಯ ನಿರಕ್ಷಕ ಹೆಣ್ಣು ಮಕ್ಕಳು ಕೋಟೇಶ್ವರ ಕೋಟಿಂಗನ ಕೆರಿ ನೀರನ್ನು ಈ ಕೊಡ ನೀರಿನಲ್ಲಿಯೂ ಭಾವಿಸಿಕೊಂಡಾಗ ನಮ್ಮ ಸಂಸ್ಕೃತಿಯ ತಾಯಿ ಬೇರಿ ದರ್ಶನವಾಗುತ್ತದೆ.

ಇಲ್ಲಿ ಮದುವೆಯ ಎಲ್ಲಾ ಕಾರ್ಯವೂ ಹಿರಿಯ ಹೆಂಗಸರ ಗಂಡಸರ ಮೇಲುಸ್ತುವಾರಿಯಲ್ಲಿಯೇ ನಡೆಯುತ್ತದೆ. ಪುರೋಹಿತರ ಸಂಸ್ಕೃತ ಮಂತ್ರದ ಬದಲಿಗೆ ಮದುವೆ ಮನೆಯ ಹಿರಿಯ ಅಚ್ಚ ಗ್ರಾಮ್ಯ ಕನ್ನಡದಲ್ಲಿ “ಹೀಗೆ ಮಾಡಿ”. “ಹೀಗಾಗಬೇಕು” ಎಂದು ಹೇಳುತ್ತಾನೆ.

ದಿಬ್ಬಣ ಹೊರಡುವ ಹಾಡು, ದೂರುವ ಹಾಡು, ಎಲ್ಲದರ ನಡುವೆ ಮಗಳನ್ನು ಕಳುಹಿಸಿಕೊಡುವಾಗ ಆಗುವ ಒಡಲುರಿಯಿಂದ ಹೊಮ್ಮುವ ಹಾಡು.

“ಮೂಲೆ ಮೂಲೆಯ ಸೇರಿ ಯಾಕಳುವೆ ಎಲೆ ಮಗುವೆ ಓಲೆ ಇಟ್ಟಾತು ಬಿಡಲಾರ”- ಎನ್ನುತ್ತಲೇ

ಹುಟ್ಟಿದ ಹೆಣ್ಮಕ್ಳು ಮಟಲಿಳಿಯುವಾಗ ಹೊಟ್ಟೆಯಲಿ ಬೆಂಕಿ ಹೊಯ್ದಂತೆ
ಹೆಣ್ಮಕ್ಳು ಪಡೆಯದಿರೇಳು ಜನ್ಮಕ್ಕೆ”-

ಎಂದು ದುಃಖಿಸುವ ಹಾಡು ಅನುಭವದ್ದೇ.

ಗಂಡಿನವರಿಗೆ ಹೆಣ್ಣಿನ ತಾಯಿ

“ಅಚ್ಚ ಮಲ್ಲಿಗೆ ಹೂಗು ಮುಚ್ಚಿ ಕೈಲ್ ಕೊಟ್ಟಂತೆ
ಬಟ್ಟಲು ಬೆಳಗುಕೆ ಆರಿಯದು ಅರಿಯದ ಮಗಳನ್ನ
ಈ ಹೊತ್ತು ಎತ್ತಿ ಕೊಡುತೇನೆ
ಹತ್ತು ಕೊಡ ನೀರನ್ನು  ಎತ್ತಿ ತಂದವಳಲ್ಲ
ಚಿತ್ತದಲ್ಲಿ ಬಹಳ ಅರತ್ರಾಣಿ ನಮ್ಮಗಳು
ನಿಮ್ಮಗಳ ಹಾಗೇ ಸಲಹೀನಿ”

ಎಂದು ಕೇಳಿಕೊಂಡರೆ, ಜಾನಪದ ಮದುವೆಯ ಹಾಡಿನಲ್ಲಿ ಇದಕ್ಕೂ ಉತ್ತರ ಉಂಟು.

“ಚಪ್ಪರದ ಕಂಬ್ಹಿಡಿದು ಯಾಕಳುವೆ ಎಲೆ ಮಗಳೆ
ಬಾ ನಮ್ಮ ಸತ್ತುಗಿಯ ನೆಳಲಡ್ಡೆ ಬಾಲಮ್ಮ
ಪಟ್ಟೆ ಕೋಟ್ಟಾತ ಬಿಡುವನೆ ಬಾಮ್ಮ
ಇಂದೋಗಿ ನಾಳೆ ಬರಲಕ್ಕು…
… ಅಡುಗೆ ಗೆಯ್ಟಿಯ ಕೊಡುವೆ ತೊಳುಕೆ ಜಲ್ಲನು ಕೊಡುವೆ
ಬಾ ನಮ್ಮ ಸತ್ತುಗಿಯ ನೆಳಲಡ್ಡೆ” ಎಂದು ಹಾಡುತ್ತಾರೆ.

ಪ್ರಾಯಶಃ ಬಾಲ್ಯ ವಿವಾಹದ ಕಾಲದ ಹಾಡಿರಬೇಕು, ಅದಕ್ಕೆ ಆಟಕ್ಕೆ ಕರಟ, ಬತ್ತ ಕುಟ್ಟಲು ಜಲ್ಲು, ಅಥವಾ ಹೆಣ್ಣು ಕಳುಹಿಸಿಕೊಡುವಂಥ ಸನ್ನಿವೇಶದ ಗಂಭೀರತೆಯನ್ನು ತಿಳಿಗೊಳಿಸುವ ಪ್ರಯತ್ನವಿರಲೂಬಹುದು.

ಮದುವೆ ಮುಗಿದ ಮೇಲೆ “ಸಾಸ ಮಂತ್ರ (ಶಾಸ್ತ್ರ ಮಂತ್ರ?) ಹೇಳುವ ಪರಿಪಾಠವೂ ಇದೆ (ಇದ್ದಿತ್ತು). ಸಾಸ ಮಂತ್ರವೆಂದರೆ ಬೇರೇನೂ ಅಲ್ಲ. ಹಿರಿಯ ಗಂಡಸರು ಸೇರಿ ಹೇಳುವ ಮದುವೆಯ ಮುಕ್ತಾಯದ ಸಂದರ್ಭದ ಮಾತುಗಳು. ತಾವು ಗಂಡಿಗಾಗಿ ಹೆಣ್ಣು ಹುಡುಕಲು ಹೋದದ್ದು, ಎಲ್ಲ ಕಡೆ ತಿರುಗಿದ್ದು, ಕಡೆಗೆ ಈ ಹೆಣ್ಣು ಎಲ್ಲರಿಗೂ ಒಪ್ಪಿಗೆಯಾಗಿದ್ದು, ಮದುವ ಮಾತುಕತೆಯಾಗಿ, “ಮದಿ ಆಯ್ತಯ್ಯ.. ಮದಿ ಅಯ್ತಯ್ಯ.. “ಎಂದು ರಾಗವಾಗಿ ದೊಡ್ಡ ದನಿಯಲ್ಲಿ ಹೇಳಿ ಮದುವ ಶಾಸ್ತ್ರಕ್ಕೆ ಮುಕ್ತಾಯದ ತೆರೆ ಹಾಕುವುದೇ  ಈ ಸಾಸ ಮಂತ್ರ.

ಹುಡುಗಿ “ಜವ್ವನತಿ” ಆಗುವ ಸಂದರ್ಭವೂ ಬಹಳ ಮುಖ್ಯವಾದ ಘಟ್ಟ. ಆಗ ಅವಳ ಮನಸ್ಸಿಗಾಗುವ “ಹೊಸಪರಿ”, ಇದುವರೆಗೂ ಮಗುವಂತೆ ಇದ್ದವಳ (ಈಗ ಕಂಡ ಮಗುವೆ ಒಳಗಿಲ್ಲ…!) ನಾಚಿಕೆ, ಸಂಪಿಗೆ ಎಣ್ಣೆ ಹನಿಸಿ, ಕೈಗೆ ಬಿಸಿ ಎಲೆ ಕೊಡುವ ಅತ್ತಿಗೆ, ಕೆಂದಾಳಿ ಮರದ “ಮುಗುಟ ಬಚ್ಚಿ ಕಾಯಿ ಕೊಯ್ದು” ಜೋಯಿಸರಿಗೆ ಫಲವಿತ್ತು ಮಡದಿ “ಮೈನೆರದ ಗಳಿಗೆ” ಕೇಳುವ ಗಂಡನ ಸಂಭ್ರಮ, ಶುಕ್ರವಾರ ದಿನದಲ್ಲಿ “ಹೊತ್ಮೂಡಿ ಗಂಜ್ಹೋತ್ತಿಗೆ ಕರೆ ಕಂಡೆ ಕ್ಯಾದಗಿ ಅರಳಿದೆ” ಎಂದು ಸಮಯದ ಅಂದಾಜು ನೋಡಿ ಹೇಳುವ ಜೋಯಿಸರ ಶುಭ ನುಡಿ, ಆಮೇಲೆ ಆಕೆ ಮಿಂದು ಸೂರ್ಯನಿಗೆ ಕೈಮುಗಿದು

“ನಿಮ್ಮಂಥ ತೋಳೋನೆ ನಿಮ್ಮಂಥ ತೊಲೆಯೋನೆ
ನಿಮ್ಮಂಥ ಮುದ್ದು ಮೊಗದೋನೆ ಸೂಲ್ಯದೇವ
ನಿಮ್ಮಂಥ ಗರಭೇ ನಿಲ್ಲಬೇಕು ”      ಎಂದು ಕೇಳಿಕೊಳ್ಳುವುದು,

ದಾರಿಯಲ್ಲಿ “ಚಿತ್ತೂಳಿ ಹಣ್ಣು”, ಮೆಲಿದು, “ಪಚ್ಚೆ ಕದಿರು” ಮುಡಿದು, ದೇವಸ್ಥಾನಕ್ಕೆ ಹೋಗಿ ಮತ್ತೊಮ್ಮೆ ಒಳ್ಳೆಯ ಮಗನನ್ನು ಬಯಸಿ ಮನೆಗೆ ತೆರಳಿ, ಹಾಲುಗಂಜಿ ಉಂಡು, ಆ ದಿಟ್ಟ ಆಡಿಕೆ ಹೋಳು, ಸೋಸಿಟ್ಟ ಬಿಳಿ ಎಲೆ ಮತ್ತು ಹಾಲಲ್ಲಿಂಗಿಸಿದ ಕೆನೆಸುಣ್ಣ (ಎಂಥ ಚಂದದ ವೀಳ್ಯ) ಮೆಲಿಯುತ್ತ, ಮಲಗಿ ಶುಭ ಸ್ವಪ್ನ (ಗೊನೆಯಡಕಿ, ಸಿಂಗಾರಕೊನಿ) ಕಂಡು ಫಲವತಿಯಾಗುವ ಸಮಯದ ಸಿದ್ಧತೆಗಳನ್ನೆಲ್ಲ ಹಳ್ಳಿಯ ಭಾಷೆ ಬಹಳ ನವಿರಾಗಿ ಹೇಳುತ್ತದೆ. ಜಾನಪದದ ಇಂತಹ ಹಾಡು ಜಾನಪದ ಸಂಸ್ಕೃತಿಯನ್ನು ಕಣ್ಣ  ಮುಂದೆ ಕಟ್ಟಿ ನಿಲ್ಲಿಸುತ್ತದೆ.

ಬಸುರಿಯ ಬಯಕೆಗಳು, ಅವಳು ಪಡುವ ಯಾತನೆಗಳು ಪಟ್ಟವಾಳುವ ಮಗನ ಪಡೆದು ಯಾತನೆಗಳನ್ನೆಲ್ಲ ಮರೆತು ಬಾಲಮ್ಮ ತಾಯಮ್ಮನಾಗುವ ಸುಂದರ ಹಾಡುಗಳನ್ನು ಹಾಡುವ ಹಾಡುಗಾರತಿಯರ ಕುಲ ಕಣ್ಮರೆಯಾಗುತ್ತಿದೆ.   ಈಗ ಇಡೀ ಗ್ರಾಮದಲ್ಲಿ ಹುಡುಕಿದರೆ ಒಬ್ಬರಿಗೋ ಇಬ್ಬರಿಗೋ ಬರಬಹುದು.  ಅದೂ ನೆನಪು ಮಾಡಿಕೊಂಡು ಹೇಳಬೇಕಾದ ಪರಿಸ್ಥಿತಿ. ಸಂತೋಷಪಡುವ ಪರಿ, ಸಂತೋಷದ ವ್ಯಾಖ್ಯೆ, ಹಳ್ಳಿಗಳಲ್ಲೂ ಬದಲಾಗುತ್ತಿದೆ.

ಗಂಡ ಹೆಂಡತಿಯರ ಸರಸ ವಿರಸದ ಪರಿಯನ್ನಂತೂ ಹಳ್ಳಿಗರು ಇನ್ನಿಲ್ಲದಂತೆ ಹಾಡು ಕಟ್ಟಿ ಇಟ್ಟಿದ್ದಾರೆ. ಹೆಂಡತಿ “ಕರು ಹಂಡಿ ತಕ್ಕಂಡ ಕೈಲಿ ಕರೆಯುಕೆ ಹೋದೆ ಏನ್ಹೆಣ್ಣೆ ಕೈಲಿ ಒರಗಿದೆ ನಿನ್ನೊಡಿಯರು ಹಾಲಿಲ್ಲದ ಊಟ ಉಣಲಾರರು; ಎಂದು ಹಾಡುವಳು. ಗಂಡನ ತೋಳ ಮೆಲೊರಗಿ ತೌರಿನ ಹಂಬಲವನ್ನೇ ಮರೆಯುವೆ ಎನ್ನುವಳು. ಮನೆಯೊಡೆಯರಿಲ್ಲದೆ ಮನೆಯೇ ಬಿಮ್ಮಗಾಯಿತು ಎನ್ನುತ್ತಾಳೆ. ಗಂಡನಿಗೆ ಮಡದಿ ಮೇಲೆ ಹೊಡೆಯುವಂಥ ಸಿಟ್ಟು ಬಂದರೂ “ಮಡದಿಯ ಹೊಡಿಕೆಂದ್ರೆ ಇಲ್ಲೆಲ್ಲೋ ಕೋಲಿಲ್ಲ, ನೇತ್ರಾವತಿ ಗುಡ್ಡಿ ಹೊಹತ್ತಿ ಪುರುಷರು ಸಿಟ್ಟಿಳಿದು ಮನೆಗೆ ಬರುವರು” ಎಂದು ಆಕೆಗೆ ಗೊತ್ತು. ಗಂಡ ಚದುರಂಗ ಆಡಿ ಬರುವಾಗ “ಉದುರುದುರ ಮಲ್ಲಿಗೆ ಉದುರು ಆಂಗಣದಲ್ಲಿ ಚದುರಂಗ ಆಡಿ ಬರುವವರ ಪುರುಷರ ಮೇಲೆ ಉದುರಲಿ ರುಮಾಲಿಯ ಸರಗಿಗೆ” ಎನ್ನುವ ರಸಿಕತೆ. ಆದರೆ ಎಲ್ಲರಿಗೂ, ಯಾವಾಗಲೂ ಈ ಭಾಗ್ಯ ಸಿಗದೇ ಹೋದಾಗ ಆ ಮಡದಿ ಹೇಳುತ್ತಾಳೆ ” ಹಾಗಲ ಕಾಯಿಗೆ ಹಾಲೊದೆ ಮೊಸರು ಹೊಯ್ದೆ, ಏನ ಹೊಯ್ದರೂ ಅದರ ಕಹಿ ಬಿಡ, :ಆಪ್ಪನಳಿಯ ಊರಿಗುಪಕಾರಿ, ನನಗ್ವೈರಿ” ಎನ್ನುತ್ತಲೇ “ಪುರುಷರೊಳ್ಳೆಯರೆಂದು ವರಸಿಕೊಳ್ಳದಿರು, ಹರುಷದಲಿ ನಗಿಯ ನಕ್ಕರೂ ಅವ್ರೆದೆಯಲ್ಲಿ ಸರ್ಪ ಕಾಳಿಂಗ”ನ ವಿಷದ ಆನುಭವವಾದ ಪಾಡನ್ನೂ ಹೇಳಿಕೊಳ್ಳುತ್ತಾಳೆ.

ಗಂಡನೇನಾದರೂ ನೈತಿಕತೆಯ ಗೆರೆಯನ್ನು ದಾಟಿದನೊ “ಹಣ್ಣಡಿಕಿ ಇದ್ಹಂಗೆ ಕಾಯಿಡಿಕಿ ತಿಂದಾನೆ ಹಿಂಡಾರು ಇದ್ದಂತ ನೆರಮನಿ ಹೊಗುವವನಿಗೆ ನಡುದಾರಿಯಲ್ಲಿ ಸಿಡ್ಲ ಎರಗಲಿ” ಎಂದು ಹೇಳುವಷ್ಟು ಕಠೋರತೆ ಹಳ್ಳಿಯ ಹೆಣ್ಣಿಗಿದೆ. ಆದರೂ ಗಂಡನ ಮನೆ ಬಿಟ್ಟು ಹೋಗುವುದಿಲ್ಲ. ಅಣ್ಣಯ್ಯ ಬಂದು ಕರೆಯುತ್ತಾನೆ. “ಬೀಳಿಗೆ ಕಾಯಿ ಹೊರೆಯಲ್ಲ, ತಂಗಿಯನ್ನು ಕಳುಹಿಸಿ”, “ಏಳೆಮ್ಮೆ ಹಾಲುಂಟು, ಹತ್ತಿ ಹಾಸುಗೆಯುಂಟು, ಬಾರೆ ತಂಗ್ಯಮ್ಮ ಮನೆಗ್ಹೋಪೋ” ಎಮದರೆ ಆ ತಂಗಿ : ಏಳೆಮ್ಮೆ ಹಾಲಿದ್ರ ಹಳ್ಳಕ್ಕೆ ಹೊಯ್ಯಣ್ಣ, ಹತ್ತಿಯಹಾಸಿಗೆ ಮಡಿದಿಗೆ, ಭಾವನ ಮನೆಯ ಕಷ್ಟ ಆನುಭವಿಸಿ ಇರತೇನೆ” ಎನ್ನುತ್ತಾಳೆ.

ಅನೈತಿಕ ಸಂಬಂದದ ಕುರಿತಾದ ಹಾಡುಗಳು ಸಾಕಷ್ಟು ಇವೆ. ಗಂಡ ಬೇರೆಯವಳನ್ನು ಬಯಸಿದ್ದು, ಹೆಣ್ಣು ಒಪ್ಪದೇ ಹೊದದ್ದು, ಕೆಲವೊಮ್ಮೆ ಒಪ್ಪಿದ್ದು, ಎಲ್ಲವನ್ನೂ ಸಹಜವಾಗಿ ಸರಳವಾಗಿ ಸಂವಾದ ರೂಪದಲ್ಲಿ ಹೇಳಿಕೊಳ್ಳುತ್ತ, ಗದ್ದೆ ಬಯಲಲ್ಲೋ, ಹಾಡಿ ತಿಟ್ಟಿನಲ್ಲೋ,ತಮ್ಮದೇ ಕಥಯಾದರೆ ಹೇಳಿಕೊಂಡು ತಮ್ಮ ಎದೆಗುದಿ ಹಗುರ ಮಾಡಿಕೊಳ್ಳುತ್ತಾರೆ.  ಇನ್ನೊಬ್ಬರದಾದರೆ ನಕ್ಕು ವ್ಯಂಗ್ಯವಾಡುತ್ತಾರೆ. ಹಾಗಾಗಿಯೇ ಹಳ್ಳಿಯ ಹೆಣ್ಣು ಮಕ್ಕಳು ಮೈಮುರಿಯುವ ದುಡಿತವಿದ್ದರೂ, ಬಡತನದ ಬವಣೆಯನ್ನೇ ಹಾಸಿ ಹೊದ್ದರೂ, ನಗುನಗುತ್ತ ಇರುತ್ತಾರೆ.

ನಮ್ಮ ಸಂಸ್ಕೃತಿಯಲ್ಲೇ ಅಣ್ಣ ತಂಗಿಯ ತವರಿನ ಸಂಬಂಧ ಅಮೂಲ್ಯವಾದದ್ದು, ಬಹಳ ಸುಂದರವಾದದ್ದು. ಅದರಲ್ಲೂ ಮಾತೃಮೂಲಿಯ ಕರಾವಳಿ ಜನಪದರಲ್ಲಿ ಇದು ಇನ್ನೂ ಸುಂದರವಾಗಿದೆ.

ಅಣ್ಣನ ಕಂಡರೆ ತಂಗಿಗೆ ಬಹಳ ಪ್ರೀತಿ.

ಆಳು ಕಾಳು ಹೆಚ್ಚಲಿ ಅರ್ಥ ಕೈಗೊಡಲಿ
ದಾಯಾದ್ರ ಬಲುವು ಚಿಗುರಲಿ ಅಣ್ಣಯ್ನ
ಬೆನ್ನಿಗೆ ನೂರಾಳು ತಿರುಗಲಿ”,  ಅಂಥ ಅಣ್ಣಯ್ಯ ತಂಗಿಯ ಮನೆಗೆ ಬಂದರೆ,
“ಇಂದುಳಿ ಅಣ್ಣಯ್ಯ ಇಂದ್ರ ಲೋಕನ ಕೊಡುವೆ
ಚಂದ್ರ ದೇವರ ಕೊಡಿ ಕೊಡುವೆ ಅಣ್ಣಯ್ಯ
ಇಂದುಳಿ ಬಾವಯ್ಯನ ಮನೆಯಲ್ಲಿ” ಎಂದು ಉಪಚರಿಸುತ್ತಾಳೆ.

ಅಣ್ಣನ ಮೇಲೆ ಆಕೆಗೆಷ್ಟು ಅಭಿಮಾನ.

“ಕೊಲ್ಲೂರಿಗ್ಹೊಯಿ ಹೂಗಿನ ತೇರು ಎಳದೀಕೆ
ಆನೆ ಬಾಗಿಲಲಿ ಬರುವಾಗ ಅಣ್ಣಯ್ನ
ಅರಿದಿದ್ದರು ಕಂಡು ಅರಸೆಂಬ್ರು !

ಅವನ ಮನೆಯ

“ಹುಲ್ಲು ಕುತ್ತರಿ ಕಂಡು ಅಕ್ಕಿಕುತ್ತಟವೆಂಬ್ರು
ಹಟ್ಟೀನೆ ಕಂಡು ಮಠವೆಂಬ್ರು ಆಣ್ಣಯ್ಯನ
ಕಿವಿ ಒಂಟಿ ಕಂಡು ಅರಸೆಂಬ್ರು”.

ಎಲ್ಲ ಸರಿ, ಆದರೆ ಜೀವನ ಬರಿ ಜೇನಲ್ಲ, ಬರಿ ಸಿಹಿಯಲ್ಲ. ಒಗರೂ ಉಂಟಲ್ಲ. ಅಣ್ಣನ

“ಹಾಲಂಥ ಬುದ್ಧಿ ಹಾಳು ಮಾಡಿದವರು ಯಾರು”
ನ್ಯಾಗಳದಮಥ ನೆಯಿಗಿಯ ಅಣ್ಣನ
ಬುದ್ಧಿ ಹಾಳು ಮಾಡಿದಳು ಮಡದೀಯು ”

ಮನಸ್ಸು ನ್ಯಾಗಳ (ನೇವಳ)ದ ನೇಯ್ಗೆಯಂತ ಸೂಕ್ಷ್ಮವಾದದ್ದು- ಎಂಥ ಕಲ್ಪನೆ. ಒಂದು ನೇಯ್ಗೆ ತಪ್ಪಿದರೂ ನೆವಳದಲ್ಲಿ ಮುಳ್ಳು ಏಳುತ್ತದೆ. ಅಂಥ ಅತ್ತಿಗೆ ಎಂದರೆ ನಾದಿನಿಗೆ ಬಹಳ ಸಿಟ್ಟು. ಅದನ್ನು ತೋರಿಸಿಕೊಳ್ಳುತ್ತಾಳೆ ಹಾಡಿನಲ್ಲಿ.

“ಕೆಮ್ಮಣ್ಣ ಗುಡ್ಡಿಯ ಮ್ಯಾಲೆ ಅಣ್ಣಯ್ಯದೇವರು ಮಾಡಿ
ನನ್ನತ್ತಿಗಿ ಹೋಗಿ ಕೈಮುಗಿದು ಬರುವಾಗ
ಮುಂಗುಸಿ ಮೂಜ ಮುರಿದಾವು”    ಎಂದು.
ಬೇಜರಾಯಿತೆಂದು ಅಣ್ಣನ ಮನೆಗ್ಹೋದೆ
ಹೋತೋತ್ನೆ ಕೊಟ್ಳು ಕೊಡಗಡಿಗಿ
ಕೊಟ್ಟಂಥ ಕೊಡಗಡಿಗಿ ಅಂಗ್ಳದಲ್ ಜರೀದಿಕೆ
ಸೋದರ ತಮ್ಮಯ್ನ ಮನಿಗ್ಹೋದೆ
ಅಣ್ಣನ ಹೆಂಡ್ತಿಗಿಂತ  ತಮ್ಮನ ಹೆಂಡ್ತಿ ಜಾಣೆ
ತಂಗಿಗೊಬ್ಬಳಿಗೆ ನೆಲೆ ಇಲ್ಲ ಸಂಪೂರಿ
ಹೋಳಿ ಬೇಕು ಅಣ್ಣಯ್ನ ಮನಿ ಬೇಡ”

ಅಣ್ಣನ ಮನೆಗಿಂತ ಸಂಪ್ರಿ ಹೊಳಿ (ಸೌಪರ್ಣಿಕಾ ನದಿ) ಹಾರುವುದೇ ಒಳ್ಳೆಯದು ಅನ್ನುವಂತಾಗುತ್ತದೆ ಅವಳಿಗೆ.

“ಹಾಗಲ್ ಕಾಯಿ ಆಪಾಗೆ ಆರೆಮ್ಮ ಕರುವಾಗೆ “ತಮ್ಮಯ್ಯನಿಗೆ ಮಡದಿಯನ್ನು ಕರೆಯುವ ಮನಸ್ಸಾಗುತ್ತದೆ. ಅದೇ ಆರೆಮ್ಮೆ ಬತ್ತಿ ಹಾಗಲಕಾಯಿ ಬಿಳಿದು ಹೋದಾಗ ಅಕ್ಕನ ಕರೆಯುವ ಮನಸ್ಸಾಗುತ್ತದೆ. ಅದು “ಬಡವಿ” ಅಕ್ಕ ಯಾ  ತಂಗಿಯಾದರೆ ಕತೆ ಮುಗಿಯುತು.

“ಭಾರತವಿದ್ದರೆ ಬಾರೆಂಬಲಣ್ಣಯ್ಯ
ಭಾರತವಿಲ್ಲದ ಬಡವೀಯ ಹೋಗಿರೆ
ಬಾಗಿಲ ಕಸವ ಗುಡಿಸೆಂಬ”

ಜಗತ್ತಿನ ರಿವಾಜಿಗೆ ಕನ್ನಡಿ ಹಿಡಿಯುವಂತಿದೆ ಈ ಹಾಡು.

“ಅಪ್ಪ” ಎಂದರೂ ಹೆಣ್ಣು ಮಕ್ಕಳಿಗ ಬಲು ಪ್ರೀತಿ, ಅಭಿಮಾನ,

ದಶ ದೇಶವ ತಿರುಗಿ ಕಾಶೀ ಯಾತ್ರೆಗೆ ಹೋದೆ
ಕಾಸ್ ಕೊಟ್ಟರುದಕ ಕೊಡಲಿಲ್ಲ ಅಪ್ಪಯ್ಯನ
ಹೆಸರು ಹೇಳಿದರುದಕ ಕೊಡುವರು”.

ಬಳೆಗಾರನ ಹಾಡಂತೂ ಕರ್ನಾಟಕ ಜಾನಪದದಲ್ಲಿ ಹೆಸರಿಗೆ ಹೋದದ್ದು. ಎಲ್ಲ ಪ್ರದೇಶದಲ್ಲೂ ಪ್ರಾದೆಶಿಕ ನುಡಿಗಟ್ಟಿನೊಂದಿಗೆ ಹಾಡುತ್ತಾರೆ. ಕರಾವಳಿ ಪ್ರದೇಶದ ಹೆಣ್ಣು ಮಕ್ಕಳು ಹೊರತಲ್ಲ. ಆದರೆ ಇಲ್ಲಿಯ ಹಾಡಿನಲ್ಲಿ ಮನೆಯ ಮುಂದೆ ಮಲೆನಾಡಿನಂತೆ ಆಲೆ ಆಡುವುದಿಲ್ಲ.  ಗಾಣ ಹೂಡುವುದಿಲ್ಲ. ಬದಲಿಗೆ

“ರಸಬಾಳೆ ನೆಟ್ಟಿದ್ದ, ಹೆಬ್ಬಾಗಿಲು ಕಟ್ಟಿದ್ದ
ಹೆಬ್ಬಾಗಿಲ ಹೊರಗೆ ಅಸುವಂತ ಮರನಡಿ
ಧರ್ಮದಣ್ಣಯ್ಯ ಒರಗೀರೆ ಬಳೆಗಾರ
ಹೋಯ್ ಹೇಳೋ ನನ್ನ ತವರಿಗೆ ”

ಇಂಥ ಹೆಣ್ಣಿಗೆ ಹೆಣ್ಣಿನ ಕಷ್ಟ ಕಂಡುಉಂಡು ಬೆಳೆದವಳಿಗೆ ಹೆಣ್ಣಿನ ಮೇಲೆ ತಾತ್ಸಾರ ಮಾಡುವವರನ್ನು ಕಂಡರೆ ಸಿಟ್ಟು ಉಕ್ಕಿ ಬರುತ್ತದೆ. ಸ್ವಾಭಿಮಾನದ ಕಿಡಿ ಮಿಂಚುತ್ತದೆ.

“ಹೆಣ್ಣು ಹುಟ್ಟಿತು ಎಂದು ಅಣ್ಣನಿಗೆ ಹೇಳುಕಿ ಕೊಟ್ಟೆ
ರನ್ನದ ತೊಟ್ಟಿಲ ಕೊಡಲೆಂದೇ
ಹೆಣ್ಣು ಹುಟ್ಟಿದರೆ ಮಣ್ಣಿನ ಹೊಂಡಕೆ ಹಾಕು
ರನ್ನದ ತೊಟ್ಟಿಲ ಕೊಡಲಾರೆ” ಎಂದು ಅಣ್ಣ ಅಂದಾಗ
“ಪಾಪಿಷ್ಠ ಅಣ್ಣಯ್ಯ ಅಷ್ಟೊಂದು ಹೇಳಿರೆ ಸಾಕು
ಕಾನೊಳಗಿನ ಎರಡೇ ಕಣಗೀಲ ಎಲೆ ತಂದು
ಹಾಸುನೆ ಎರಡೇ ಹೊದೆಸೂವೆ
ನಾಡಿಗರ ಕೇರೀಲೆ ಬೇಡುಗರ ಮನೆಯುಂಟು
ಬೇಡಿ ತಂದ್ ಹಾಲ ಕುಡುಸುವೆ” ಅನ್ನುತ್ತಾಳೆ, ಮತ್ತೂ ಹೇಳುತ್ತಾಳೆ
ಹೆಣ್ಣಿಲ್ಲದಾಕಿಯ ಹೆಣ ಸಿಂಗಾರಪತಿಗೆ
ಬಣ್ಣದ ನೆರಿಯ ಸೊಸೆದೀರು ನಿಂತ್ಕಂಡ

ಕಣ್ಣ ಕಾಡಿಗೆಯ ಅಳಿಯಾರು”, ಕಣ್ಣ ಕಾಡಿಗೆ ಅಳಿಯುವಷ್ಟೂ ಅಳದವರೂ ಸೊಸೆಯರು- ಅದೇ ಹೆಣ್ಣಿದ್ದರೆ ?

ಅತ್ತೆ ಸೊಸೆ ಸಂಬಂಧ ಜಾನಪದ ಜಗತ್ತಿನಲ್ಲಿ ಎಂದೂ ಚಂದವಾದದ್ದಲ್ಲ. ಪೂರ್ವಾಗ್ರಹಪೀಡಿತ ಸಂಬಂಧವಿದು. ಮದುಮಗಳು ಗಂಡನ ಮನೆಗೆ ಬಂದಾಗ ಕೆಲಸ ತಿಳೀಯದು, ಗಣತಿಯರ ಕೊಡೆ ಆಡುತ್ತಲ್ಲಿದ್ದವಳು ಎಂದರೆ

“ಮಗಳು ಕೊಟ್ಟ ಮನಿಗೆಮುದ್ದಲ್ ಎಲೆ ಹೆಣ್ಣೆ
ಹಿಡಿಯೆ ಚಂದಣದ ಬಲಗೀಯ ನಿನ್ನಪ್ಪಯ್ಯ
ದೊರೆಯಾದ್ರು ನನಗೆ ಭಯವಿಲ್ಲ”

ಎಂದು ಬಿಡುತ್ತಾಳೆ. ಅದಕ್ಕೆ ಸೊಸೆ ಹೇಳುವುದು,

“ರಾಕೆಸ್ತಿ ನನ್ನ ಮಾಯಿ ರಣಭೂತು ನನ ಮಾವ
ಸೂರ್ಪಣಕಿ ನನ್ನ ಮೈದಿನಿ ಸಂಗಡ
ಹೆಂಗಿರಲಮ್ಮ ಅನುದಿನ?”

ಕೆಲವೊಮ್ಮೆ “ಅತ್ತೆ”ಯ ಮೇಲಿನ ಪೂರ್ವಾಗ್ರಹವೂ “ಸೊಸೆಯ ಸಿಡಿಮಿಡಿಗೆ ಕಾರಣವಾಗುತ್ತದೆ. ಇದನ್ನೇ ತಮಾಷೆ ಮಾಡುತ್ತಾಳೆ ಇನ್ನೊಬ್ಬಳು.

“ಬಾಗಾಳ ಹೂ ಬಿದ್ದು ಮುರಿದಿತ್ತು ನನ ಬೆನ್ನು
ನೋಯಲಿಲ್ಯೇನೆಂದು ಕೇಳಲಿಲ್ಲ ನನಮಾಯಿ
“ಅಂಥ ಗಂಡನ ಮನಿಯ ನನಗ್ ಬ್ಯಾಡ”