ಬೆನ್ನಿನ ಮೇಲೆ ಬಿದ್ದದ್ದು ಹಗುರಾತಿ ಹಗುರ “ಬಾಗಾಳ ಹೂವು”. ಆದರೂ ಮಾಹಿ ಯಾದವಳು ತಾಯಿಯ ಮನೆಯಲ್ಲಿ ಕೋಮಲವಾಗಿ ಬೆಳೆದ ಸುಕೋಮಲ ಸೊಸೆಯ ಬೆನ್ನು  ನೋವಾಯಿತೆ ಎಂದು ಕೇಳಬೇಡವೇ. ಇದು ಮೊದ ಮೊದಲು ಇಷ್ಟು ನಯವಾಗಿದ್ದರೆ ಆಮೇಲೆ ಸೊಸೆ ಜೋರಾಗುತ್ತಾಳೆ.

ಸೊಸೆ ನೀರಿಗೆ ಹೋದಾಗ ತೆಂಗಿನ ಹೆಡೆ ಬಿದ್ದು ನೀರಿನ ಕೊಡ ಒಡೆದಾಗ ಅತ್ತೇ ಬಯ್ಯುತ್ತಾಳೆ “ಅತ್ತೆ ಕಾಲದ ಕೊಡ ಮಾವನ ಕಾಲದ ಕೊಡ ಆ ಕೊಡ ಹ್ಯಾಂಗೆ ಒಡೆದ”  ಎಂದು.ಆಗ ಸೊಸೆ ಹೇಳುತ್ತಾಳೆ.

“ಹೊನ್ನಿನ ಕೊಡವಲ್ಲ, ರನ್ನದ ಕೊಡವಲ್ಲ,
ಮಣ್ಣ ಕೊಡಕ್ಯಾಕೆ ಮಗೂರಿ ಎಲೆ ಮಾಯೆ
ನನ್ನೂರಿಗೊಂದಲೊಲೆ ಕಳುಹೂವೆ ನನ್ನಣ್ಣಯ್ಯ
ಕೊಪಾನದ ಹೊರಿಯೇ ಕಳಿಸು ಎಂದು.  ಆಗ ಅತ್ತೆ ಏನೆನ್ನಬೇಕು.

“ಬತ್ತ ತೊಳಿದಿಯೆ ಸೊಸಿಯೆ, ಬಳಲಿ ಬಂದಿಹೆ ಸೊಸಿಯೆ, ಬಟ್ಟಲಲ್ಹಾಲುಂಟು ಕುಡಿ ಸೊಸೆಯೆ” ಎಂದು ಅತ್ತೇ ಹೇಳಿದರೆ ಸೊಸೆಗೆ ಗೊತ್ತು ಬಂದವರೆದು ಅತ್ತೆಯ ನಾಟಕವೆಂದು. ಅವಳು ಹೇಳಿಯೇ ಬಿಡುತ್ತಾಳೆ” ಬಂದ ಬಂದವರೆದುರು ಬಣ್ಣ ತೀಡುವತ್ತೆ ನಿನ್ನಿನ ಹುಳಿಗಂಜಿ ಎರೆದಿಪ್ರಿ” ಎಂದು.

ಅದೇ ರೀತಿಯ ಹಾಡು ಮಂಡ್ಯದ ಜಾನಪದಲ್ಲಿ “ಕಟ್ಟಾಣಿ ಸೊಸೆ ಮುದ್ದೆ ಕರಿಯೋರು ಬಂದವ್ರೆ, ಬಟ್ಟಲ್ಹಾಲ ಕುಡಿ ಬಾರೆ”, ಎಂದರೆ, “ಬಂದೋರ ಮುಂದೆ ಬರೀ ಮಾತಿನಲ್ಲೇ ನಿನ್ನೆಂದೀನಂಬುಲಿಯ ಬಿಡು ಬಾರೆ” ಎಂದ ಅತ್ತೆಯ ಸೋಗಲಾಡಿತನವನ್ನು ಬಯಲು ಮಾಡುತ್ತಾಳೆ. ಸೊಸೆಯಂದಿರು ಅತ್ತೆಯಂದಿರ ಕೈಯಲ್ಲಿ “ಬೇಯುವುದನ್ನೇ” ಕೇಳುವ ,ಹೇಳುವ ಸ್ತ್ರೀ ಪ್ರಪಂಚಕ್ಕೆ ಈ ಹಾಡಿನ ಧಾಟಿ ಮುದ ಕೊಡುತ್ತದೆ.

ಉಳುವ ಒಕ್ಕಲ ಮೇಲೆ ಭೂಮಿಯ ಒಡೆಯರ ದಬ್ಬಾಳಿಕೆ ಒಕ್ಕಲ ಅಸಹಾಯಕತೆಯ ಬಗೆಗೆ ಬಹಳಷ್ಟು ಹೇಳಲ್ಪಟಿಟದೆ. ಆದರೆ ಎಲ್ಲ ಸಂಬಂಧವೂ ಹಾಗಿರಬೇಕಾಗಿಲ್ಲ. ಕಷ್ಟದಲ್ಲಿದ್ದ ಎಷ್ಟೋ ಒಕ್ಕಲು ಮಕ್ಕಳಿಗೆ ಸಾಕಷ್ಟು ಸಹಾಯ ಮಾಡಿದ, ಒಡೆಯರಿದ್ದಾರೆ, ಅಂಥ  ಒಡೆಯರ ಮೇಲೆ ಅಭಿಮಾನವಿದ್ದ ಒಕ್ಕಲು ಇದ್ದಾರೆ. ಕಾಲಗತಿಯಲ್ಲಿ ಎಲ್ಲ ಒಡೆಯ ಒಕ್ಕಲ ಸಂಬಂಧ ಬದಲಾವಣೆಯಾದರೂ ಕೆಲವು ತ್ರಿಪದಿಗಳು ಇತಿಹಾಸವನ್ನು ಸ್ಪಲ್ಪವಾದರೂ ಹೇಳಬಲ್ಲವುಗಳಾಗಿವೆ., ಉದಾ.

“ಒಡೆಯರ ಮನೆಯಲ್ಲಿ ಮಾದೊಡ್ಡ ಹರಿ ಸೇವೆ
ಒಕ್ಕಲ ಪಂಕ್ತಿ ಕಣದಲ್ಲಿ ನಮ್ಮೊಡಿಯರು
ಒಕ್ಕಲಿಗೆ ಬಡಿಸಿ ದಣೀಯರು”. ಮಾತ್ರವಲ್ಲ
“ಒಡೆಯರ ಕೊಡೆ ಹೇಳಿರೇ ಉಪಪಟ್ಟಿ ಕೊಡುವರು
ಒಡೆಯರ ಮಡದಿ ಒಡತೀಯ ಕೈಲ್ಹೇಳಿರೆ
ಮುಡಿದ ತಾವರಿನ ಕೊಡವರು ”

ಅಷ್ಟು ನಂಬಿಗೆ ತನ್ನೊಡೆಯರ ಮೇಲೆ, ಆದಕ್ಕಾಗಿ ಅವಳಿಗೆ  ಒಡೆಯ ಎಂದರೆ ಅಭಿಮಾನ.

ಶುಕ್ರ ಮೂಡುವ ಮೊಲದೇ ಎದ್ದು ತಂಗಳುಂಡು ಕಾಯಕಕ್ಕೆ ತೊಡಗುವುದು ಹಳ್ಳಿಗರ ಕ್ರಮ. ಅವರು ಶ್ರಮ ಜೀವನಕ್ಕೆ ಹೆದರುವವರಲ್ಲ. ಎಷ್ಟು ಕೆಲಸ ಮಾಡುತ್ತಾರೆ ಎಂದರೆ,

“ಮೂಡಾಯ್ ಮೂಡುವ ಸೂರ್ಯ ಹೊನ್ನ ಬಣ್ಣದ ಸೂರ್ಯ
ನಿಮ್ಮನ್ನು ಕಾಂಬಷ್ಟು ತೆರಲಿಪಿಲ್ಲೆ ನೀವ್ ಕೊಟ್ಟ
ಹೊನ್ನಂಥ ಮನಿ ಕೆಲಸವು:

ಸೂರ್ಯೋದಯದ ಚಂದವನ್ನು ಎಲ್ಲರೂ ಹಾಡಿ ಹೊಗಳುತ್ತಾರೆ ಅದು ಹಳ್ಳಿ ಗರತಿಗೂ ಗೊತ್ತು ಆದರೇನು ಮಾಡೋಣ ಚಂ ಕೆಲಸ ಉಂಟಲ್ಲ. ಕಾಯಕವೇ ಕೈಲಾಸ ಎನ್ನುವವಳು ಅವಳು. ಅವಳು ಅವಳ ಗಂಡ ಮೈಮುರಿದು ದುಡಿದರೆ ಮಾತ್ರ ಹೊಲ,ಮನೆ, ಬೇಲಿ, ಕಣದ ಬತ್ತ, ಸಂಸಾರವೆಲ್ಲ ಚೆಂದ

“ಬೇಸಾಯಗರನ ಬೇಲಿ ಚಂದವ ನೋಡಿ
ನೇಗಿಲ ನೋಡಿ ನೊಗನೊಡಿ ಅವ್ನ ಮನೆಯಲ್ಲಿ
ಬೇಸಾಯ ನೋಡಿ ಅವನ ಕಣದಲ್ಲಿ” ಇದು ಇವಳ ಅನುಭವದ ಮಾತು.

ಜಾನಪದ ಗೀತೆಗಳಲ್ಲಿ ಸಂಬಂಧಗಳ ಭಾವ ಸೂಕ್ಷ್ಮತೆಗಳನ್ನು ಹೇಳುವಂತಯೇ ಮಾನವ ಸ್ವಭಾವದ ಅಂಕು ಡೊಂಕುಗಳು, ನಡವಳಿಕೆಗಳು, ಚಿತ್ರವಿಚತ್ರಗಳು, ವ್ಯಂಗ ವಿಡಂಬನೆಗಳು ನವಿರಾಗಿ ಆಭಿವ್ಯಕ್ತಗೊಂಡದ್ದನ್ನು ಕೆಲವು ತ್ರಿಪದಿಗಳಲ್ಲಿ ಕಾಣಬಹುದು.

ಕಂಜೂಸಿ ಹೆಣ್ಣೋಬ್ಬಳಿಗೆ ಇವರು ಲೆವಡಿ ಮಾಡುವ ಬಗೆ ಹೀಗೆ-

ದಾನಕ್ಕನ ಮನೆಯಲ್ಲಿ ದೀನಕ್ಕ ಮನೆ ಕಟ್ಟಿ
ಏನೇ ದಿನಕ್ಕ ಬಡವಾದೆ ದಾನಕ್ಕ
ದಾನ ಮಾಡುವ ಕಂಡು ಬಡವಾದೆ”

ಅದೇ ಒಬ್ಬ ಹಿಂದೂ ಮುಂದಿನ ಪರಿವೆಯಿಲ್ಲದೆ ದಾನ ಮಾಡುವವನದರೆ ಅದಕ್ಕೂ ಒಂದು ಹಾಡು ಕಟ್ಟಬಲ್ಲರು.-

ಮಳೆಗಾಲದ ಮಳಿಯ ಒಳವ್ಯಾರು ಬಲ್ಲರು
ಹೊದಿವ ಕಂಬಳಿನೆ ಪರರೀಗೆ ಕೊಟ್ಬಿಕೆ
ಹಳುವ ಸೇರಿದನೆ ಸಲುಹೆಡ್ಡ” ಎಂದು ನಗುತ್ತಾರೆ.

ಮತ್ಸರಿಗಳಿಗೆ ಅವರು ಬಿಡುವ ಛೂಬಾಣ ಈ ಬಗೆಯದು-

ಹೊಟ್ಟೆ ಕಿಚ್ಚಿನ ಜೀವ ಎಲ್ಹೋಯಿ ಸಾಯ್ವುದೋ
ಹಣ್ಣೆಲಿ ನೆಲ್ಲಿ ಮರದಡಿ ಅ ಜೀವ
ಎಲ್ಲ ಬೆಂದರೂ ಎದಿ ಬೇಯ”

ಆ ಹೊಟ್ಟೆ ಕಿಚ್ಚಿನ ಜೀವ ಸತ್ತು, ಶವ ಸುಟ್ಟರೆ ಇಡೀ ದೇಹ ಬೆಂದರೂ, ಅದರ ಎದೆ ಬೇಯದಂತೆ       .

ಕೆಲಸಗಳ್ಳರನ್ನು ಕಂಡರೆ ಅವರ ನಗೆಯ ಬಗೆ ಹೀಗೆ.

ಹೆಂಡತಿ ಚಿತ್ತಾರದ ಗೊಂಬಿ ಗಂಡ ಉಂಡಾಡಿ ಭಟ್ಟ
ಖಂಡುಗ ಬತ್ತ ಕಣದಲ್ಲೇ ಇಟಕಂಡ
ಕಂಡವ್ರಿಗೆ ದೆಯ್ನ ಹೊಡಿವಾರು”.

ಈ ಹಾಡುಗಳು ಒಂದು ವಿಶೇಷವೆಂದರೆ ಯಾವ ‌ವ್ಯಕ್ತಿಗಳ ಹೆಸರನ್ನೂ ಹೇಳುವುದಿಲ್ಲ. ಎಲ್ಲ ಅವರವರ ಗುಣ ವಿಶೇಷಣಗಳಿಂದಲೇ ಅವರಿಗೆ ನಾಮಕರಣವಾಗುತ್ತದೆ.  ದಾನ ಮಾಡುವವರಿಗೆ ದಾನಕ್ಕ, ಕೆಲಸ ಮಾಡದೆ ಸಿಂಗಾರ ಮಾಡಿಕೊಳ್ಳುವವರಿಗೆ ಚಿತ್ತಾರದ ಗೊಂಬೆ, ನಗುವವನಿಗೆ ನಗೆ ಮುಖದ ಚೆಲುವ, ಹೀಗೆ ಅವರ ಗುಣವಿಶೇಷವೆ ಅವರ ಹೆಸರಾಗುತ್ತದೆ.  ಕೆಲವೊಮ್ಮೆ ಅವರು ಮಾಡುವ ಕೆಲಸದ ಹೆಸರೇ ಅವರ ಹೆಸರಾಗುತ್ತದೆ. ಉದಾ: ಆಚಾರಿ ಗಂಡು, ಗಾಣೇಗರ ಹೆಣ್ಣು, ಅಂಬಿಗರಣ್ಣ ಇತ್ಯಾದಿ ಇತ್ಯಾದಿ.

ಲೋಕಾನುಭವದ ಹಾಡುಗಳಂತೂ ಇವರಲ್ಲಿ ಹೇರಳವಾಗಿವೆ. ಜೀವನದಲ್ಲಿ ಸಾಕಷ್ಟು ನೊಂದು ಬೆಂದು ಅನಂದವನ್ನು ಪಟ್ಟು ಹದವಾದ ಬದುಕಿನಿಂದ ಮೂಡಿದ್ದು ರಸಪಾಕದ ಲೋಕಾನುಭವದ ತ್ರಿಪದಿಗಳು.

“ನಂಟರ ಮನೆಯಲ್ಲಿ ಎಂಟೆಮ್ಮೆ ಎಳಗಂದಿ
ಎಂಟು ದಿನಕಿಂತ್ಹೆಚ್ಚು ಇರಬಾರ ಅಣ್ಣನ ಮಾಯಿ
ಹಸಿಹೋಗಿ ಮಣಿಯು ಕೊಡುವಳು ಅಣ್ಣನ ಮಾಯಿ
ಮೊಸರಿಟ್ಟು ಮಜ್ಜೀಗಿ ಕೊಡುವಳು”

ಎಂಟೆಮ್ಮೆ ಕರೆವ ನೆಂಟರ ಮನೆಯಲ್ಲಿ ಮೊದಲು ಹತ್ತಿಯ ಹಾಸಿಗೆ ಇತ್ತು. ಮೊಸರು ಹಾಕಿ ಉಪಚರಿಸಿದರೂ, ಹೆಚ್ಚು ದಿನ ಇದ್ದರೆ ಮೆದುಹಾಸಿಗೆಯ ಬದಲು ಗಟ್ಟಿ ಮಣೆ ಬರುತ್ತದೆ. ಮೊಸರಿನ ಬದಲು ಮಜ್ಜಿಗೆ ಹಾಕುತ್ತಾರೆ ! ಲೋಕ ರೂಢಿಯೇ ಇದು.

ಜನಪದರು ಹೆಚ್ಚು ನಂಬುವುದು ದೈವಗಳನ್ನು. ಶಿಷ್ಟ ದೇವರಿಗೆ ಕೈಮುಗಿದು , ಕಾಯಿ ಒಡೆದರೂ ಅವರ ಹೃದಯಕ್ಕೆ ಹತ್ತಿರವಾದವರು ತಮ್ಮೂರೇ ದೈವಗಳು. ಹಾಗಾಗಿ ಅವರ ಹಾಡಿನಲ್ಲಿ ಕೃಷ್ಣ , ನಾರಾಯಣ ಸ್ವಾಮಿ ಮುಂತಾದವರೆಲ್ಲ ಒಂದು ಪಾತರದ ಹೆಸರಾಗಿ ಬರುತ್ತಾರೆಯೇ ಹೊರತು, ದೇವಾಲಯಗಳಲ್ಲಿರುವ ದೇವರಾಗಿ ಅಲ್ಲ. ಆದರೆ ಶಿರಸಿ ಮಾರಮ್ಮ,ಹಾಯ್ಗಳಿ, ಮರ್ಲಮ್ಮ,ಜಟ್ಟಿಗ, ಮುಂತಾದವರು ಒಂದು ಕಡೆಗಾದರೆ, ನಾಗಮ್ಮ, ಹರಿವ ಗಂಗಾತಾಯಿ, ಶಂಕರ ತಂದಿ(ಅಕ್ಕಿಭತ್ತ), ಭೂಮಿತಾಯಿ ಇವರೆಲ್ಲ ಜನಪದರ ಮಹಾದೈವ ದೇವರುಗಳು. ತಿರುಪತಿಗೆ ಹೋಗುವುದು, ಹೋಗಿ ಬಂದು “ಹರಿಸ್ಯಾವೆ” (ಹರಿಸೇವೆ) ಮಾಡುವುದು ಬಹಳ ವಿಶೇಷ. (ತಿರುಪತಿ ತಿಮ್ಮಪ್ಪನು ಜಾನಪದ ದೇವರೆಂಬ ಒಂದು ಅಭಿಪ್ರಾಯವಿದೆ).

ಕೊಲ್ಲೂರ ಮೂಕಾಂಬೆಯಂತೂ ಹತ್ತಿರವಿರುವವಳು. ಇವರ ಒಂದು ಹಾಡಿನಲ್ಲಿ ಕೊಲ್ಲೂರು ಮೂಕಾಂಬೆ ಬಂಜೆಯರಿಗೆ ಮಕ್ಕಳಾಗುವ ವರಕೊಡು ಎಂದು ವೀರಭದ್ರ ಹೇಳುತ್ತಾನೆ. ಇಲ್ಲಿ ಕೊಲ್ಲೂರು ಮೂಕಾಂಬೆ ವೀರಭದ್ರನ ತಂಗಿಯಂತೆ. ಅಣ್ಣ ತಂಗಿ ಸಂಬಂಧಕ್ಕೆ  ಈ ಭಾಗದಲ್ಲಿ ಬಹಳ ಒತ್ತು.  ಅರಘಟ್ಟದಿಂದ ಬಂಜೆಯರು ಕೊಲ್ಲೂರು ತಳಕ್ಕೆ ಮಕ್ಕಳನ್ನು ಕೇಳಿಕೊಂಡು ಬಂದಿದ್ದಾರೆ.  ಅದಕ್ಕೆ ಅಣ್ಣ ವೀರಭದ್ರ ತಂಗಿಗೆ ಹೇಳುತ್ತಾನೆ, “ಅವರಿಗೆ ವರಕೊಡು” ಎಂದು. ಆದರೆ ತಂಗಿ ಮೂಕಾಂಬೆ” ಆವರು ಹುಟ್ಟು ಬಂಜೆಯರು, ನಾ ವರವ ಕೊಡಲಾರೆ ” ಎನ್ನುತ್ತಾಳೆ. “ಆವರಿಗೆ ಮಕ್ಕಳಾದರೆ ಹೆಸರು ನಮಗೇ ಅಲ್ಲವೇ, ತೊಟ್ಟಿಲ ಕಾಣಿಕೆಯನ್ನು ಪಡೆಕೊಳ್ಳುತ್ತೇನೆ ಎನ್ನುತ್ತಾನೆ ಅಣ್ಣ ವೀರಭದ್ರ. ನಿಜವಾದ ಆಣ್ಣ ಅವ.

“ಬೆನ್ನ ತಿಕ್ಕವರಿಲ್ಲ ಬೆನ್ನಿಗೆ ಬಿದ್ದವರಿಲ್ಲ
ನನ ತಾಯಿ ಹೆಣ್ಣೇ ಪಡಿಸಲಿಲ್ಲ ಶಿರಸಿಯ
ಕಾದೇವಿ ನನ್ನ ಹೆರಿಯಕ್ಕ ಕೊಲ್ಲೂರ
ಮೂಕಾಂಬಿ ನನ್ನ ಕಿರಿಯಕ್ಕ”-

ಎಂದು ಅಕ್ಕ ತಂಗಿಯರಿಲ್ಲದವರು ಹೇಳುವಷ್ಟು ಆತ್ಮೀಯತೆ ಈ ದೇವಿಯರೊಂದಿಗೆ ಇರುತ್ತದೆ ಈ ಕಡೆಯ ಹಳ್ಳಿಗರಿಗೆ.

ಪೂಜೆಗೆ ಉಪಯೋಗಿಸುವ “ಸಿಂಗಾರಕೊನಿ”ಯ (ಅಡಿಕೆ ಹೂ) ಮೇಲೆ ಬಹಳ ವ್ಯಾಮೋಹ ಇವರಿಗೆ. ಅಡಿಕೆ ಬೆಳೆವ ಮಲೆನಾಡಿನಲ್ಲಿ ಈ ಸಿಂಗಾರ ಹೂವನ್ನು ದೇವರಿಗೆ ಹಾಗುವ ವಾಡಿಕೆ ಇಲ್ಲ. ಆದರೆ ಕರಾವಳಿಯಲ್ಲಿ ಇದಕ್ಕೆ ಎಲ್ಲಿಲ್ಲದ ಬೇಡಿಕೆ. ಹಳ್ಳಿಯ ಹೆಣ್ಣು ಮಕ್ಕಳಂತೂ ಇದನ್ನು “ಮುತ್ತೈದೆ ಹೂವು” ಎಂದೇ ಹೇಳುತ್ತಾರೆ.

“ಹೂ ಹೂಗಿನೊಳಗೂ ಯಾ ಹೂಗೆ ಪರಿಮಳೋ
ಗಾಳಿ ಮಾಯೆರದ ಒಳಗೀರು ಸಿಂಗಾರಕೊನಿಯೆ
ಒಡೇದೀರಿನ್ನೆಂಥ ಪರಿಮಳ”
“ಘಟ್ಟದ ಮೇಲಿರುವುದು ಬೆಟ್ಟಕೆ ಬೇರೆಹೊಯ್ವುದು
ಗಾಳೀಗೂ ಗರಭೇಇ ನಿಲುವಾದ ಸಿಂಗರಕೊನಿಯೇ
ಧಾರಿ ಮೂರತಕೂ ಅದು ಮುಂದೆ”-  ಇದು ಸಿಂಗಾರದ ಮಹತ್ವ.

ಇವರ ದೈವಕ್ಕೆ ಅತಿ ಮಾನುಷ ಶಕ್ತಿ ಇದ್ದರೂ ದೈವಗಳು ವ್ಯವಹಾರದಲ್ಲಿ ಮನುಷ್ಯರಂತೇ ಇರುತ್ತಾರೆ.

“ಕೊಲ್ಲೂರು ಮೂಕಾಂಬಿ ಯಾಕಾಗಿ ಮುನಿದಾಳು
ಚಿನ್ನಸಾಲದೆಂದೇ ಮುನಿದಾಳು ಮೂಕಾಂಬಿ
ಪಟ್ಟೇ ಸಾಲದೆಂದೇ ಮುನಿದಾಳು ಮೂಕಾಂಬಿ
ಆದನ್ನೆಲ್ಲ ತಂದು ಕೊಟ್ಟು :ಇನ್ನೇಳು ತಾಯಿ ರಥವೇರು:” ಎಂದು ಹಾಡುತ್ತಾರೆ.

ಅವರ ಒಂದು ದೈವ ದೊಟ್ಟಿ ಕಾಲಮ್ಮ ಅನ್ನುವವಳಂತೂ

ಪಟ್ಟೀನ ಒಟ್ಕಂಡ ಪಟ್ಟೀ ಮುಸ್ಕಹಾಯ್ಕಂಡ
ದೊಟ್ಟೀ ಕಾಲಮ್ಮ ಹೊರಟೀಳ ಗುಡ್ಡ ಮ್ಮಾಡಿ
ತೊಟ್ಟಿಲ ಕಾಣುಕಿಯ ತಿಳಿಕಂದ”

ಪ್ರಾಣಿ ಪ್ರಪಂಚ ಸಸ್ಯ ಪ್ರಪಂಚದೊಳಗೆ ಒಂದಾಗಿ ಬದುಕುವ ಇವರ ಉಳುವ ಎತ್ತಿನ ಭಾಗ್ಯದಲ್ಲೇ ನಾ ಉಂಬೆ ಅನುದಿನ ಎಂದು ಕಸ್ತೂರಿ ಕೋಡಿನ ಎತ್ತಿನ ಮೇಲೆ ಅಭಿಮಾನವನ್ನು ಹೇಳಿಕೊಳ್ಳುತ್ತಾರೆ. ಭೇಟೆಯಾಡಲು ಹೋದ ಅಣ್ಣಯ್ಯನಿಗೆ “ಹೆಣ್ಣು ಮಿಗವನ್ನು ಪಾಲಿಸಿಕೋ ಅದು ನಿನ್ನ ತಂಗಿಯಂತೆ” ಎಂದು ಹೇಳುವ ತಂಗಿಯ ಹೃದಯ ಸಂಸ್ಕಾರ ಅದ್ಭುತವಾದದ್ದು. ಹುಲ್ಲು  ಕುತ್ತರಿಯೊಳಗಿರುವ ಹಲ್ಲಿ ಮರಿಗೂ ನೀರಿತ್ತು ಸಲಹುವ ಅವಳ ಪ್ರಾಣಿ ಪ್ರೀತಿ ಅನನ್ಯವಾದುದು.

ಇನ್ನು ಇವರ ಹಾಡ್ಗಥೆಗಳ ವಿಚಾರಕ್ಕೆ ಬಂದರೆ ಪೌರಾಣಿಕ, ಐತಿಹಾಸಿಕ,ಸಾಮಾಜಿಕ ಕತೆಗಳನ್ನೆಲ್ಲ ಕೂಡಿಸಿ ಕಲೆಸಿ ಒಂದು ಅದ್ಭುತ ಲೋಕವನ್ನೇ ಸೃಷ್ಟಿಸಿ ಬಿಡುತ್ತಾರೆ. ಮುದ್ರಿತ ಅಕ್ಷರಗಳ್ಲಿ ದಾಖಲಾಗದ, ಬಾಯಿಂದ ಬಾಯಿಗೆ ಹರಿಯುವ ಇವರ ಕಥ ಸಾಹಿತ್ಯ ನೆನಪಿಟ್ಟುಕೊಳ್ಲಿಕ್ಕಾಗಿ ಹಾಡಾಗಿ ಮೂಡಿ ಬಂದಿದೆ. ಪೌರಾಣಿಕ ಕಥೆಗಳಲ್ಲಿ ವರ್ತಮಾನದ ಕಥೆಗಳು, ವರ್ತಮಾನದ ಕಥೆಗಳಲ್ಲಿ ಪೌರಾಣಿಕದ ಅಂಶಗಳನ್ನು ಬೆರೆಸಿ ಹೇಳುವ ಈ ಹಾಡ್ಗಥೆಗಳದ್ದೇ ಒಂದು ವಿಶಿಷ್ಟ ಪರಂಪರೆ.

 

ಪೌರಾಣಿಕಕಥೆಗಳು:

ಪುರಾಣ ಕಥೆಗೆ ಸಂಬಂಧಿಸಿದ ಹಾಗೆ , ಅಲ್ಲಿ ಇಲ್ಲಿ ಕಿವಿಗೆ ಬಿದ್ದದ್ದು, ಯಕ್ಷಗಾನ ಬಯಲಾಟಗಳಲ್ಲಿ ಕಂಡದ್ದು, ಬಾಯಿಂದ ಬಾಯಿಗೆ ಸಾಗಿ ಬಂದದ್ದು ಇವೆಲ್ಲ ಕಾರಣಗಳಿಂದ ಗ್ರಂಥಸ್ಥ ಪುರಾಣಗಳಿಗಿಂತ ಭಿನ್ನವಾಗಿರುತ್ತವೆ ಇವರ ಪೌರಾಣಿಕ ಕಥೆಗಳು.

ಅಭಿಮನ್ಯು ಹುಟ್ಟಿದ್ದು :

ಮಹಾಭಾರದ ಸಂಧರ್ಭದಲ್ಲಿ ಅಭಿಮನ್ಯು ಹೊಟ್ಟೆಯಲ್ಲಿ ಇದ್ದಾಗಲೇ ಕೃಷ್ಣನ ಮಾತು ಕೇಳಿ ಹೂಂಗುಟ್ಟಿದ್ದನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಇದೇ ಕಥೆ ಜಾನಪದ ಕಥೆಯಾಗುವಾಗ ಅದಕ್ಕೊಂದಿಷ್ಟು ಸೇರಿಸಿ ಬಿಟ್ಟರು. ಕತೆಯ ಕೊನೆಯನ್ನೇ ಬದಲಿಸಿ ಬಿಟ್ಟರು.  ಹಾಂ ಹೂಂ ಅಂದ ಗರ್ಭಸ್ಥ ಶಿಶುವನ್ನು ಸೋದರ ಮಾವ ಚಕ್ರದಲ್ಲಿ ಕಡಿದೇಬಿಟ್ಟ, ಈಗಲೇ ಇಷ್ಟು ಜೋರಿದ್ದವ ಹುಟ್ಟಿ ಬಂದರೆ ಊರನ್ನು ಉಳಿಸಿಯಾನೇ ಎಂದು. ಅಷ್ಟು ಮಾತ್ರವಲ್ಲ ಕತೆಯ ಹಂದರದಲ್ಲಿ ತಾವು ಕಂಡ ಸಣ್ಣ ಬುದ್ಧಿಯ ಅತ್ತಿಗೆಗೇ ಒಂದು ಪಾತರ ಕೊಟ್ಟರು.

ಮಹಾಭಾರತದಲ್ಲಿ ಪಾಂಡವರು ವನವಾಸಕ್ಕೆ ಹೋಗುವಾಗ ದಿನ ತುಂಬಿದ ಬಸುರಿ ತಂಗಿ ಸುಭದ್ರೆಯನ್ನು ಕೃಷ್ಣ ತನ್ನ ಮನೆಗೆ ಕರೆತಂದ ಕಥೆ ಇದೆ. ಈ ಪೌರಾಣಿಕ ಕಥೆಯನ್ನು ಜಾನಪದಕ್ಕೆ ಒಗ್ಗಿಸಿಕೊಂಡ ಬಗೆ ವಿಶಿಷ್ಟವಾದದ್ದು, ಅಣ್ಣ ತಂಗಿಯರದ್ದು ಬಹಳ ಪ್ರೀತಿಯ ಸಂಬಂಧ.  ತನ್ನ ಮದುವೆಯಾದ ಮೇಲೂ ಆಗಾಗ ತವರಿಗೆ ಬರುವ ಹೆಣ್ಣಿಗೆ ತವರು ದೂರವಾಗತೊಡಗುತ್ತದೆ.  ಅತ್ತಿಗೆಗೆ ತನ್ನ ಗಂಡನ ತಂಗಿ ಅಂದರೆ ಅಷ್ಟಕಷ್ಟೇ. ಅದನ್ನು ಮಾತಿನ ಮೂಲಕ , ಕೃತಿಯ ಮೂಲಕ ತೋರ್ಪಡಿಸುತ್ತಾಳೆ. ಆಗಲೂ ಹೆಣ್ಣು ತವರಿನ ಮೇಲಿನ, ತನ್ನಣ್ಣನ ಮೇಲಿನ ವಾಂಛೆಯನ್ನು ಬಿಡಲಾರಳು. ಅತ್ತಿಗೆ ಬೇರೆಯವಳಾದರೂ ಅಣ್ಣ ನಮ್ಮವನೆಂದು ತಿಳಿದು, ಅತ್ತಿಗೆಯಿಂದಾಗುವ ಆಪಮಾನವನ್ನು ತಂಗಿ ನುಂಗಿದರೂ, ಇನ್ನೂ ಗರ್ಭದಲ್ಲಿರುವ ತಂಗಿಯ ಮಗ ಸಹಿಸಲಾರ.

ಕಥೆ ಹೀಗೇ ಸಾಗುತ್ತದೆ. ಅತ್ತಿಗೆ ಬಳಗಿನ ಕೆಲಸವನ್ನೆಲ್ಲ ಮುಗಿಸಿ ಕುಳಿತಿರುತ್ತಾಳೆ. ಆಗ ಅವಳ ದೃಷ್ಟಿ, ಅವಳ ಮನೆ ಎದುರಿಗಿರುವ ಖಂಡಿಗೆ ಬೈಲಿನ ಮೇಲೆ ಬೀಳುತ್ತದೆ. ಅಲ್ಲಿ ತನ್ನ ಗಂಡನ ತಂಗಿ ತುಂಬಿದ ಹೊಟ್ಟೆ ಹೊತ್ತು ಬರುವುದನ್ನು ಕಾಣುತ್ತಾಳೆ.

ಅತತಿಗೆಗೇನೋ ಖೂಷಿಯಾಗುವುದಿಲ್ಲ. ಆದರೆ ತೋರಿಸಿಕೊಳ್ಳುವಂತಿಲ್ಲ. ತನ್ನ ಗಂಡನಿಗೆ ತಂಗಿ ಎಂದರೆ ಬಹಳ ಪ್ರೀತಿ. ಅದೂ ಗರ್ಭಿಣಿ ತಂಗಿ. ಅವಳಿಗಾಗಿ “ಬಯಕೆ ಮದಿ” ಮಾಡಬೇಕು. ಉಡುಗೋರೆ ಕೊಡಬೇಕು ಎಂದೆಲ್ಲ ಮಾತನಾಡಿಕೊಳ್ಳುತ್ತ ಅತ್ತಿಗೆ ಮೈದಿನಿಯನ್ನು ಪ್ರೀತಿಯಿಂದಲೇ ಬರಮಾಡಿಕೊಳ್ಳುತ್ತಾಳೆ. ಬಯಕೆ ಮದಿಗಾಗಿ ಸನ್ನಾಹಕ್ಕೂ ತೊಡಗುತ್ತಾಳೆ. ತೊಂಡೆ ಚಪ್ಪರಕ್ಕೆ ಹೋಗುತ್ತಾಳೆ. ಕಾಯಿಯನ್ನುಗಿಡದಲ್ಲಿಯೇ ಇಟ್ಟು ಎಲೆಯನ್ನು ಕೋಯ್ದು ತರುತ್ತಾಳೆ.  ಗರ್ಭಿಣಿಯರಿಗೆ ತೊಂಡೆಕಾಯಿ ತಿನ್ನಬೇಕೆಂಬ ಶಾಸ್ತ್ರವಿದೆ. ಆದರೆ ಈ ಅತ್ತಿಗೆ ಕಾಯಿಯನ್ನು ಚಪ್ಪರದಲ್ಲಿಯೇ ಬಿಟ್ಟು ಬರೀ ಎಲೆಯನ್ನು ಕೊಯ್ದು ತರುತ್ತಾಳೆ. ಅಲ್ಲಿಂದ ಸೀದ ಅವಳು ಹೋಗುವುದು ಕುಂಬಾರನ ಕೇರಿಗೆ. ಅವಳಿಗೆ ಈಗ ವಿಶಿಷ್ಟ ರೀತಿಯ ಮಡಿಕೆ ಬೇಕಾಗುತ್ತದೆ. ಕುಂಬಾರನಿಗೆ ಹೇಳುತ್ತಾಳೆ ಅಡಿಗೆ ಮಾಡಲು , ಒಂದು ಮಡಿಕೆಯಲ್ಲಿ  ಎರಡು ಅರೆ ಮಾಡು ಎಂದು. ಅಲ್ಲಿಂದ ಆಚಾರಿಯ ಮನೆಗೆ ಹೋಗುತ್ತಾಳೆ. ಅವನಿಗೆ ಒಂದು ಚಿಪ್ಪಿನಲಿ ಎರಡು ಅರೆ ಮಾಡು ಎಂದು ಹೇಳುತ್ತಾಳೆ.  ಎರಡು ಅರೆಯ ಮಡಿಕೆ,ಎರಡು ಅರೆಯ ಚಿಪ್ಪುನ್ನು ಅವರು ಕೇಳಿದ ಕ್ರಯಕ್ಕೆ ಕೊಟ್ಟು ತರುತ್ತಾಳೆ.

ಪಾಯಸ ಹೋಳಿಗೆ  ಮಾಡುತ್ತಾಳೆ. ಜೊತೆಗೆ ಹುಳಿಗಂಜಿಯನ್ನು ಮಾಡುತ್ತಾಳೆ. ಪಾಯಸ ಹೋಳಿಗೆಯ ಪರಿಮಳದಲ್ಲಿ ಹುಳಿಗಂಜಿಯ ವಾಸನೆ ಅಡಗುತ್ತದೆ. ಅಡಿಗೆ ಎಲ್ಲ ಮುಗಿಸಿ ಎರಡು ಅರೆಯ ಮಡಿಕೆಗಳಲ್ಲಿ ಒಂದು ಅರೆಯಲ್ಲಿ ಪಾಯಸ ಹೋಳಿಗೆ ಇಟ್ಟರೆ, ಇನ್ನೊಂದು ಅರೆಯಲ್ಲಿ ಹುಳಿಗಂಜಿ ತುಂಬಿಸಿ ಊಟಕ್ಕೆ ಅಣ್ಣ ತಂಗಿಯನ್ನು ಕರೆಯುತ್ತಾಳೆ.

ಗಂಡನಿಗೆ ಬಡಿಸಿದಳು ಪಾಯಕ ಹೋಳೀಗೆ
ಮೈದಿನಿಗೆ ಬಡಿಸಿದಳು ಹುಳಿಗಂಜಿ…

ಅಣ್ಣ ರುಚಿಯಾದ ಪಾಯಸ ಹೋಳಿಗೆ ತಿನ್ನುವ ಸಂತೋಷದಲ್ಲಿ ತಂಗಿಯ ಎಲೆಯನ್ನು ಗಮನಿಸುವುದೇ ಇಲ್ಲ. ಸಂಭ್ರಮದಿಂದ ತಂಗಿಯನ್ನು ಕೇಳುತ್ತಾನೆ.

ಐದು ಜನ ಪಾಂಡವರಿಗೆ ಅಟ್ಟುಂಡ ತಂಗಿ ನೀನು

ಇಂಥ ಹೋಳೀಗೆಯ ಮೇಲದೀಯೆ ಎಂದು ತನ್ನ ಹೆಂಡತಿಯ ಕೈಗುಣವನ್ನು ಅಪರೋಕ್ಷವಾಗಿ ಹೊಗಳುತ್ತ. ಪಾಪ ತಂಗಿ ಏನು ಹೇಳಬೇಕು. ತಂಗಿಗೆ ಅತ್ತಿಗೆಯ ಬೇಧ ಗೊತ್ತಾಯಿತು. ತನ್ನ ಕೈಬೆಳಲ್ಲಿ ಹಿಡಿದು ಬಾಯಿಗೆ ಹಾಕಿದ್ದು ಹೋಳಿಗೆ ಪಾಯಸವಲ್ಲ, ಅದು ಹುಳಿಗಂಜಿ. ಆದರೆ ಎದುರು ಕುಳಿತ ಅಣ್ಣಯ್ಯನ ಬಾಯಿ ಚಪ್ಪರಿಸುತ್ತ ಹೋಳಿಗೆ ತಿನ್ನುತ್ತ,ಅತತಿಗೆಯ ಕೈಗುಣವನ್ನು ಹೊಗಳುತ್ತ, ಇಂಥ ಹೋಳಿಗೆ ತಿಂದಿದ್ದುಂಟಾ ಎಂದು ಕೇಳುತ್ತಿದ್ದಾನೆ. ಕಣ್ಣೀರು ತುಂಬಿಕೊಂಡು ತಂಗಿ.

ನನ್ನಬ್ಬಿ ಮಗನಾರೆ, ನನಗೂ ಅಣ್ಣನಾರೆ
ಮುಟ್ಟಿನೋಡ ಮೂರು ಬೆರಳಲ್ಲಿ ಅಣ್ಣಯ್ಯ

ತಿಂದು ನೋಡು ಮೂರು ಬೆರಳಲ್ಲಿ ಎಂದು ಹೇಳುತ್ತಾಳೆ. ಅಣ್ಣನ ದೃಷ್ಟಿ ತಂಗಿಯ ಎಲೆಯತ್ತ  ಹೋಗುತ್ತದೆ. ಊಟದ ಪಂಕ್ತಿಯಲ್ಲೂ ತನ್ನ ಹೆಂಡತಿ ಬೇಧ ಮಾಡಿದಳಲ್ಲ ಎಂದು ಬ್ರಹ್ಮಾಂಡ ಸಿಟ್ಟು ಬರುತ್ತದೆ ಅಣ್ಣನಿಗೆ. ಸಹಿಸಲಾಗುವುದಿಲ್ಲ ಅವನಿಗೆ.  ಕೂಡಲೇ ಸೊಂಟದಲ್ಲಿದ್ದ ಚೂರಿಯನ್ನು ಹೊರಗೆ ತೆಗೆಯುತ್ತಾನೆ.  ತಂಗಿ ಗಾಬರಿಯಾಗುತ್ತಾಳೆ. ಆಗ,

ಆವರವರು ಮಾಡಿದ ಪಾಪ ಅವರವರೆ ಉಣ್ಣಲಿ
ನೀ ಬಾ ಭಾರತದ ಜಗುಲಿಗೆ ಅಣ್ಣಯ್ಯ
ಭಾರತ ರಾಮಾಯಣವ ತೆಗೆದೋದು

ಎಂದು ಅಣ್ಣನನ್ನು ಸಾಂತ್ವನ ಗೊಳಿಸುತ್ತ ಅಣ್ಣನನ್ನು ಭಾರತ, ರಾಮಾಯಣ ಓದುವ ಜಗಲಿಗೆ ಕರೆತರುತ್ತಾಳೆ. ತಂಗಿಗೆ ಗೊತ್ತು ರಾಮಾಯಣ ಮಹಾಭಾರತ ಕಥೆ ಮತ್ತು ಅದರಲ್ಲಿ ಅವರವರು ಮಾಡಿದ ಪಾಪಕ್ಕೆ ಅವರವರೇ ಹೇಗೆ ಹೊಣೆಯಾಗಬೇಕಾಯಿತು ಎಂದು. ಅಣ್ಣ ಭಾರತ ರಾಮಾಯಣದ ಕಥೆ ಓದ ತೊಡಗುತ್ತಾನೆ. ಕಥೆ ಕೇಳುತ್ತ ಕೇಳುತ್ತ ತಂಗಿಗೆ ನಿದ್ರೆ ಬರುತ್ತದೆ, ಅಣ್ಣನಿಗೆ ತಂಗಿ ನಿದ್ರೆ ಮಾಡಿದ್ದು ಗೊತ್ತಾಗುವುದಿಲ್ಲ. ಯಾಕೆಮದರೆ ಅವನಕಥೆಗೆ ಹೂಂ ಹಾಂ ಎನ್ನುವುದು ಕೇಳುತ್ತಿತ್ತು. ಕೊನೆಗೊಮ್ಮೆ ಪುಸ್ತಕ ಮುಚ್ಚಿದಾಗ ತಂಗಿ ಮಲಗಿರುವುದು ಕಾಣುತ್ತದೆ. ತಾನು ಓದುತ್ತಿದ್ದವ , ತಂಗಿ ಮಲಗಿದವಳು,

ತಂಗಿಗೆ ನಿದ್ದುರಿಯೆ ಕವಿವಂಥ ಸಮಯದಲ್ಲೆ
ಹೊಟ್ಟೆಯೊಳಗಿದ್ದ ಮಗನೇ ಹೂಂ ಅಂದ- ಅಷ್ಟೇ ಅಲ್ಲ ಆ ಮಗ
ಹೊಟ್ಟೆಯೊಳಗಿದ್ದ  ಹೂಂ ಅಂದ ಹಾಂ ಅಂದ
ನಾ ಹುಟ್ಟೀ ಈ ರಾಜ್ಯ ಉಳಿಸುವೆನೇ
ನಾನೇಳು ಕಾಲನು, ನಾನೇಳು ಕೈಯವನು…

ಎಂದು ಹೇಳುತ್ತಿರುವುದು ತಂಗಿಯ ಹೊಟ್ಟೆಯಲ್ಲಿರುವ ಶಿಶು ಎಂದು ಗೊತ್ತಾಗುತ್ತದೆ.  ಏಳು ಕಾಳಲಿನ ಬಲದವನು ಏಳು ಕೈ ಬಲದವನು ತಾನು ಹುಟ್ಟಿದ ಏಳೂರಿಗೊಂದೂರು ಉಳಿಸುವೆ ಎನ್ನುತ್ತಾನೆ.  ಮಾತರವಲ್ಲ ಮಾಯಿ ಮಾಡಿದ ಪಾಪ ಸಲ್ಲಿಸುವೆ ಎನ್ನುತ್ತಾನೆ.  ಇವತ್ತು ತನ್ನ ಅತ್ತೆ ತನ್ನ ಅಮ್ಮನಿಗೆ ಮಾಡಿದ ಅನ್ಯಾಯಕ್ಕೆ ಪ್ರತೀಕಾರ ಮಾಡುತ್ತೇನೆ ಎನ್ನುವ ಪ್ರತಿಜ್ಞೆಯನ್ನು ಇನ್ನೂ ಹುಟ್ಟದ ಕಂದ ಗೈಯುತ್ತದೆ, ತನ್ನ ಅಮ್ಮ ಬೇಡವೆಂದಿದ್ದರೂ…

ಕರ್ಣನ ಹುಟ್ಟು:

ಕುಂತಿ ವಿವಾಹಪೂರ್ವದಲ್ಲಿಯೇ ಮಗುವನ್ನು ಪಡೆದ ಮಹಾಭಾರತದ ವೃತ್ತಾಂತವನ್ನು ಜನಪದರು ಕಂಡ ರೀತಿ ವಿಶಿಷ್ಟವಾದದ್ದು. ಸುಂದರ ಕನ್ಯೆ ಕುಂತಿಯ ಮೇಲೆ ಸೂರ್ಯದೇವನ ದೃಷ್ಟಿ ಬೀಳುತ್ತದೆ. ಬಾಲಕಿ ಕುಂತಿದೇವಿ

“ಅಪ್ಪಯ್ಯ ಮಾಡಿಸಿಕೊಟ್ಟ ಹತ್ತು ತೂಕದ ಚಿನ್ನ”
ಮಾವಯ್ಯ ಮಾಡಿಸಿದ ಮಣಿಸರ ಹಾಯ್ಕಂಡು
ಆಡು ಚಪ್ಪರಕೆ ನಡೆದಾಳು ಕುಂತಿದೇವಿ
ಆರೂ ಗೆಣತಿಯರನೆ ಕರೆದಾಳು ಕುಂತಿದೇವಿ
ಒಂಬೈನೂರು ಚಂದ ಗೆಲಿದಾಳು….”

ಹೀಗೆ ಕುಂತಿ ತನ್ನನ್ನು ಚೆನ್ನಾಗಿ ಅಲಂಕರಿಸಿಕೊಂಡು ಗೆಳತಿಯರ ಜೊತೆಯಲ್ಲಿ ಆಡಹೋಗುತ್ತಾಳೆ. ಆಟದಲ್ಲಿ ತಾನೇ ಗೆಲ್ಲುತ್ತಾಳೆ. ಆಗಲೇ ಇಂತಹ ಚಂದದ ಹುಡುಗಿಯ ಮೇಲೆ ಆಗಸದಲ್ಲಿದ್ದ ಸೂರ್ಯದೇವರ ದೃಷ್ಟಿ ಬೀಳುತ್ತದೆ.

“ಒಂಬೈನೂರು ಚೆಂಡು ಗೆಲುವಂಥ ಸಮ್ಯದಾಗೆ
ಸೂರ್ಯದೇವರು ದೃಷ್ಟಿ ಇಡುವರೆ”

ಸೂಯದೇವರು ಕನ್ಯೆಯ ಮೇಲೆ ದೃಷ್ಟಿಇಟ್ಟದ್ದೇ ತಡ ಕುಂತಿ ಮೈನೆರೆಯುತ್ತಾಳೆ. ಆಡುತ್ತಾಡುತ್ತಾ ದೊಡ್ಡವಳಾದ ಕುಂತಿ, ಆಡ ಬಂದ ಗೆಣತಿಯರನ್ನೇ ಹತ್ತಿರ ಕರೆದು, ಹೋಗಿ ನನ್ನ ತಾಯಿಗೆ ಈ ಸುದ್ಧಿಯನ್ನು ಹೇಳಿ ಎನ್ನುತ್ತಾಳೆ. ಸ್ವತಃ ತಾನೇ ಹೇಳಿಕೊಳ್ಳಲಾರಳು.

“ಆಡು ಗೆಣತಿಯ ಏನೆಂದು ಕರೆದಳೂ
ಹೊರ್ಯ ಹೇಳಿ ತಾಯಮ್ಮಗೆ ವಸಗೀಯ”

ಗೆಳತಿಯರು ಕುಂತಿಯ ತಾಯಮ್ಮನ ಬಳಿ ಹೋಗುತ್ತಾರೆ. “ಕುಂತಿ ಮೈನೆರೆದು ತಿರುಗೀಳು” ಎನ್ನುತ್ತಾರೆ. ಆಡಲೆಂದು ಹೋದ ಸಣ್ಣ ಬಾಲೆ ಅಲ್ಲಿಯೇ ಮೈನೆರೆದಳೆಂದು ಕೇಳಿ ತಾಯಿ ವ್ಯಾಕುಲಳಾಗುತ್ತಾಳೆ.  ಇನ್ನೂ ಪುಟ್ಟ ಆಡುವ ಹುಡುಗಿ, ಆಗಲೇ ದೊಡ್ಡವಳಾದಳು ಎಂದೋ, ಇಲ್ಲ ಇನ್ನೂ ಹೆಚ್ಚಿದ ತನ್ನ ಜವಾಬ್ದಾರಿಯೋ, ಅಂತೂ ತಾಯಮ್ಮನ ಕಡೆಗಣ್ಣಲ್ಲಿ ನೀರ ಹನಿಯಾಡುತ್ತದೆ. ಆದರೆ ತಾಯಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಮೈನೆರೆದ ಬಾಲಕಿಗೆ ಶುದ್ಧಿಯಾಗಬೇಕು. ಅದಕ್ಕಾಗಿ ಹೊಸ ಬಾವಿಯನ್ನೇ ತೋಡಿಸುತ್ತಾಳೆ, ಕುಂತಿಯ ತಾಯಿ.

“ಜಲಗಾರನ ಕರೆಸಿ ಹಿತ್ತಲ ಬಾವಿಯ ತೋಡಿ, ಹೊಸ ಬಾವಿಯ ತಿಳಿನೀರಿನಲ್ಲಿ ಕುಂತಿಗೆ ಸ್ನಾನ ಮಾಡುವಂತೆ ಹೇಳುತ್ತಾಳೆ. ಆದರೆ ಕುಂತಿ ಮನೆಯ ಹಿತ್ತಲ ಬಾವಿಯಲ್ಲಿ  ಮೀಯಲಾರಳು.  ಕಟ್ಟಿದ ನೀರು ಅವಳಿಗೆ ಬೇಡ. ದೊಡ್ಡವಳಾದ ಕುಂತಿಗೆ ಸುತ್ತಲೂ ಹರಿಯುವ ಆಸೆ.  ಅದಕ್ಕೆ ಕಾರಣ ಹೇಳುತ್ತಾಳೆ.

“ಈ ನೀರ ಮಿಂದರೆ ಕೆಪ್ಪಿ ದಂಡ್ಹೊಯ್ವುದು
ಇಲ್ಲಿ ಮಿಂದ್ ಮಡಿಯ ಒಗಿಲಾರೆ ತಾಯಮ್ಮ.

ನಾ ಹೋಪೆ ಹರಿವ ಜಲಧಿಗೆ ಬಾವಿಯಲ್ಲಿ ಕಪ್ಪೆಯ ದಂಡೇ ಇದೆ. ಇಂಥ ನೀರಿನಲ್ಲಿ ಮೀಯುವುದು ಹೇಗೆ. ಬಟ್ಟೇ ಒಗೆದು ಮಡಿ ಮಾಡಿಕೊಳ್ಳುವುದು ಹೇಗೆ.ಹರಿವ ಹೊಳೆಗೆ ಹೋಗುತ್ತೇನೆ ಎಂದು ನೆವ ಹೇಳುತ್ತಾಳೆ. ಆದರೆ ಕುಂತಿ ತಾಯಿ ಈ ಅವಸ್ಥೆಯಲ್ಲಿ ಕುಂತಿಯನ್ನು ಹೊರಗೆ ಕಳುಹಿಸಲಾರಳು. ಅದಕ್ಕಾಗಿ ಬಾವಿ ಬೇಡವಾದರೆ ಕೆರೆಯನ್ನೇ ತೋಡಿಸುತ್ತೇನೆ ಎಂದು ಮತ್ತೇ ಜಲಗಾರನ ಕರೆಸಿ ಹಿತ್ತಲ ಕೆರೆಯ ತೋಡಿಸಿ ಕೊಡುತ್ತಾಳೆ. ಆಗ ಕುಂತಿ ಇನ್ನೊಂದು ಕಾರಣ ಹೇಳುತ್ತಾಳೆ. ಕುಂತಿ ಹರಿವ ನೀರಿಗಾಗಿಯೇ ಆಸೆ ಪಡುತ್ತಾಳೆ. ಯೌವನದ ಆವೇಗದಲ್ಲಿ ಕುಂತಿಗೆ ಬಾವಿ, ಕೆರೆಯ ನಿಂತ ನೀರಿನ ಚೌಕಟ್ಟು ಬೇಡವಾಗುತ್ತದೆ. ಚಪಲೆ ಕುಂತಿಗ ಹರಿವ ನೀರಿನ ಚಲನಶೀಲತೆಯೇ ಬೇಕೆನಸುತ್ತದೆ. ಮಗಳ ಹಟ ಕಂಡುತಾಯಿ ಉಪಾಯವಿಲ್ಲದೇ

“ಏಳು ಜನ ಬೋಯಿಯರ ಬರಹೇಳಿ ” ಎನ್ನುತ್ತಾಳೆ. ಹರಿವ ಜಲಧಿಗ ಮುದ್ದು ಮಗಳು ನಡೆದು ಹೋಗುವುದೇ ! ದಂಡಿಗೆಯಲ್ಲಿ ಅವಳನ್ನು ಕಳುಹಿಸಬೇಕು. ಬೋವಿಯವರುಬರುತ್ತಾರೆ. ದಂಡಿಗೆತಯಾರಾಗುತ್ತದೆ.  ಕುಂತಿದೇವಿ ದಂಡಿಗೆ ಇಳಿದು ಜಲಧಿಯ ಹನಿ ನೀರಲ್ಲಿ ಮುಳುಗಿ ಸಂಭ್ರಮದಿಂದ ಮೀಯುತ್ತಾಳೆ. ಕುಂತಿ ಹರಿವ ಜಲಧಿಯಲ್ಲಿ ಮೀಯುವಾಗ ಸೂರ್ಯ ಬಾನಿನಿಂದ ಇಳಿದೇ ಬರುತ್ತಾನೆ. ಅದೂ ಹೇಗೆ ?

“ಬೆಳಗಾನ ಉಟ್ಟುಕೊಂಡು ಬೆಳಿ ಮುಸುಕು ಹಾಯ್ಕಂಡು
ಬೆಳಿ ಮುಗಲೊಳಗೆ ಬರುವಾರೆ ಸೂರ್ಯದೇವ್ರು
ಮೂರು ಕಲ್ಲು ಮಂತ್ರಿಸಿ ಇಡುವಾರೆ:

ಸೂರ್ಯ ಬೀಳುವ ವಸ್ತ್ರವನ್ನುಟ್ಟು ಬಿಳಿಯ ಮುಸುಕಿನ ಮರೆಯಲ್ಲಿ ಬಿಳಿ ಮುಗಿಲನ್ನೇರಿ ಕುಂತಿ ಇದ್ದಲ್ಲಿಗೆ ಬರುತ್ತಾರೆ. ಬಂದವರು ಮೂರು ಕಲ್ಲುಗಳನ್ನು ಮಂತ್ರಿಸಿ ಇಡುತ್ತಾರೆ. ಕುಂತಿ ಬಹುಶಃ ಸಮ್ಮೋಹನಕ್ಕೊಳಗಾಗುತ್ತಾಳೆ ಕ್ಷಣದಲ್ಲಿ.  ಆದರೂ ಎಚ್ಚರಗೊಂಡು,

“ಕೆಟ್ಟ ಬೆರಳೆಂದೇ ಕತ್ತರಿಸಿ ಹೆರಗಿಟ್ಟೆ ಮತ್ತೇ ಅ ಬೆರಳೆ ನೆರೆದಾವು”. ಕಾಮದ ಕಾಮನೆಯ ಸಂಖೇತವೇ ಬೇಳೆಯುವ ಬೆರಳು. .. ಆದರೆ ನೆರೆದ ಬೆರಳನ್ನು ಕತ್ತರಿಸಿ ಹಾಕುತ್ತಾಳೆ… ಕೆಟ್ಟ ಬೆರಳೆಂದು ಕತ್ತರಿಸಿ ಹಾಕಿದ ಮೇಲೆ ಮತ್ತೊಮ್ಮೆ ಮುಳುಗಿ ಮೀಯುತ್ತಾಳೆ ಕುಂತಿ ಜಲಧಿಯಲ್ಲಿ.ಈ ಬಾರಿ ಸೂರ್ಯ ಕತ್ತಲಾಗಿ ಬರುತ್ತಾನೆ.

“ಕರಿದಾನು ಉಟ್ಟುಕೊಂಡು ಕರಿ ಮುಸುಕು ಹಾಯ್ಕಂಡು”
ಕರಿಮುಗಿಳೊಳಗೆ ಬರುವರೆ ಸೂರ್ಯದೇವ್ರು.
ಮೂರು ನಾಲ್ಕು ಮಂತ್ರಿಸಿ ಇಡುವಾರೆ”
ಮತ್ತೆ ಕೆಟ್ಟ ಬೆರಳು “ನೆರೆ”ಯುತ್ತದೆ.  ಈ ಬಾರಿಯೂ ಕುಂತಿ
ಕೆಟ್ಟ ಬೆರಳೆಂದೇ ಕತ್ತರಿಸಿ ಹೆರಗಿಟ್ಟೆ” ಮತ್ತೆ ಆ ಬೆರಳೆ ನೆರೆದಾವು”

ಸೂರ್ಯದೇವರು ತನಗೆ ಮಂತ್ರ ಮಾಡಿ ಒಮ್ಮೆ ಬಿಳಿ ಬಟ್ಟೆ ಧರಿಸಿ, ಬಿಳಿ ಮುಸುಕನ್ನು ಮರೆ ಮಾಡಿಕೊಂಡು ಬಿಳಿ ಮುಗಿಲನ್ನೇರಿ, ಇನ್ನೊಮ್ಮೆ ಕರಿಬಟ್ಟೆ ತೊಟ್ಟು ಕರಿಯ ಮುಸುಕಿನಲ್ಲಿಕರಿ ಮುಗಿಲನ್ನೇರಿ ತನ್ನ ಬಳಿ ಬಮದು ತನ್ನನ್ನು ಫಲವತಿಯನ್ನಾಗಿ ಮಾಡಿದ್ದಾರೆ ಎಂಬುವುದನ್ನು ಕುಂತಿ ತಿಳಿಯುತ್ತಾಳೆ. ಸೂರ್ಯದೇವರು ಆಡುವ ಬಾಲೆಯ ಮೇಲೆ ದೃಷ್ಟಿ ಹಾಕಿದಾಲೇ ಮುಗ್ದತೆ ಮಾಯವಾಗಿತ್ತು. ತಾಯಿಯ ಕೈಯ :”ಮೊಸರನ್ನ, ಕರಿಜಿಗೆ”ಗಳನ್ನು ಮೆಲ್ಲಬೇಕೆಂಬ ಆಸೆ ತೀವ್ರವಾಗುತ್ತಿದ್ದಮತೆಯೇ ಬೊವಿಯವರನ್ನು ಕರೆದು ದಂಡಿಗೆ ಏರಿ ಕುಳಿತುಕೊಳ್ಳುತ್ತಾಳೆ. ಬೋವಿಯರು ದಂಡಿಗೆ ಬಹಳ ಹಗುರವಿತ್ತು. ಈಗ ಅದರ ತೂಕ ಜಾಸ್ತಿಯಾಗಿದೆ. ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಾರೆ.

“ಆಗಳು ನೋಡಿರೇ ಬೋ ಹಗುರ ಇದ್ದೀತು ಈಗ ನೋಡಿದರೆ ಬಹು ಭಾರ”

ಕುಂತಿಗೆ ಕೇಳಿಸುತ್ತದೆ. ಬೋವಿಯವರೂ ತನ್ನ ಅವಸ್ಥೆಯನ್ನು ಅರಿತರೇ ಎಂದು ಕಳವಳವಾಗುತ್ತದೆ. ಯಾಕೆಂದರೆ ಕರಿ, ಬಿಳಿ ಮುಸುಕಿನಲ್ಲಿ ನಡೆದ ವ್ಯವಹಾರ ಅದು. ಆದರೆ ಕುಂತಿ ಹತಾಶಳಾಗುವುದಿಲ್ಲ.  ಬೋವಿಯವರ ಮಾತಿಗ ಸರಿಯಾದ ಉತ್ತರವನ್ನೇ ಕೊಡುತ್ತಾಳೆ.

“ಕಟ್ಟಿದ ಮುಡಿ ಚಂಡಿ ಉಟ್ಟ ಪಟ್ಟೆ ಚಂಡಿ
ಸುಮ್ಮನೆ ಬೊಯೀರೆ ಹೊರಡೇಳೀ
ಸುಮ್ಮನೆ ಬೋಯಿರೇ ಹೊರಡೇಳಿ… ”

ಎಂದು ಹೇಳುತ್ತಾ ದಂಡಿಗೆಯನ್ನು ಏರಿಕೊಳ್ಳುತ್ತಾಳೆ. ತಾಯಮ್ಮನ ಹತ್ತಿರ ಹೋಗಿ ಮೊಸರನ್ನ ಉಂಡು ತನ್ನ ಬಯಕೆ ತೀರಿಸಿಕೊಳ್ಳಲು….

ಇದರಂತೆಯೇ ರಾಮಾಯಣದ ಕೆಲವು ಪ್ರಸಂಗಗಳೂ ಜಾನಪದದ ಜಾಡಿನಲ್ಲಿಯೇ ಮುಂದುವರೆಯುತ್ತಾ ಕುತೂಹಲ ಹುಟ್ಟಿಸುವಂತಿದೆ.  ಲಕ್ಷ್ಮಣ ಸೀತೆಯ ಬಳಿ ಹುಸಿ ನೀರು ಮಿಂದ ದಿನವನ್ನು ಕೇಳುವುದು. ಸೀತೆ ,ವನದಲ್ಲಿ ನವಿಲ್ಹಿಂಡು ಬಂದ ದಿನ” ಎಂದು ಉತ್ತರಿಸುವುದು ಎಲ್ಲ ಸಾಂಕೇತಿಕವಾಗಿದೆ. ಲಕ್ಷ್ಮಣ ಸೀತೆಯ ತಲೆ ಕಡಿಯಲೆಂದು ಆಜ್ಞಪ್ತನಾದವನು. ಆದರ ಅವಳ ಹೊಟ್ಟೆಯಲ್ಲಿರುವ ಗರ್ಭದ ಆರಿವಾಗಿ ಸೀತೆಯ ಬದಲು ನೆತ್ತರ ಹೊನ್ನೆಯ ಮರ ಕಡಿದು ಆದರ ರಸವನ್ನು ರಾಮನಿಗೆ ತೊರಿಸಿ ಸೀತೆಯನ್ನು ಕಡಿದು ಬಂದೆ ಎನ್ನುತ್ತಾನೆ. ಆಗ ರಾಮನಿಗೆ ಪಶ್ಚಾತಾಪ. ಹೇಗೆ ಕಡಿದಿಯೋ,ಮಾತಿಗೊಂದು ಹೇಳಿದ್ದಕ್ಕೆ: ಎಂದು ಅರೋಫಿಸುತ್ತಾನೆ. ವ್ಯಾಕುಲನಾಗಿ ಸೀತ ಮಡಿವಾಗ ಏನು ಹೇಳಿದಳೂ ಎಂದು ಕೇಳಿದಾಗ ” ತಾಯಿ ಅನ್ನಲಿಲ್ಲ, ತಂದೆ ಅನ್ನಲಿಲ್ಲ, ಆದರೆ ರಾಮ ರಾಮ ಎನ್ನುತ್ತಾ ಮಡಿದಳು” ಎಂದಾಗ ರಾಮನಿಗೆ ಹೇಗಾಗಿರಬೇಡ. ಇದು ಅವರು ರಾಮಾಯಣದ ಸೀತಾ ಪರಿತ್ಯಾಗದ ಪ್ರಸಂಗವನ್ನು ಚಿತ್ರಿಸಿದ ರೀತಿ.