ಸಾಮಾಜಿಕಕಥೆಗಳು

ಹಾಡ್ಗಥೆಗಳು.

ಕೆರೆಗೆ ನರಬಲಿ :

ಹಾಡು ಕಥೆಗಳನ್ನು ರಾಗವಾಗಿ ತಾನ ತಮದಾನೋ,ಕೇರ್ಳ ಕೇರ್ಳ ಕನ್ನಡಿ, ತಾನೂ, ರಾಮ ರಾಮಜ್ಜಿ ಇತ್ಯಾದಿಯಾಗಿ ಪ್ರತಿ ವಾಕ್ಯದ ಕೊನೆಗೆ ಹೇಳುತ್ತ, ಕೆಲವು ಕಡೆ ಗದ್ಯವೇ ಆಗಬಹುದಾದರೂ ಅದನ್ನು ಹಾಡು ಮಾಡುತ್ತಾರೆ. ಇವು ಕರ್ಣಾಟಕದ ಎಲ್ಲ ಕಡೆಯ ಜಾನಪದ ಸಾಹಿತ್ಯದಲ್ಲಿರುವ ಕಥೆಗಳೇ ಆದರೂ ಪರಿಸರಕ್ಕೆ ಸರಿಯಾಗಿ ಪಾತ್ರೆದ್ಲ ಬದಲಾವಣೆ, ಅಶಯದ ಬದಲಾವಣೆ ಕೆಲವೊಮ್ಮೆ ಕಂಡುಬರುತ್ತದೆ.  ಉದಾಹರನೆಗೆ ಕೆರೆಗೆ ಬಲಿಯಾದ ಹೆಣ್ಣೋಬ್ಬರಳ ಕಥೆ. ಇದು ಬಯಲು ಸೀಮೆಯಲ್ಲಿ ಬಹಳ ಪ್ರಸಿದ್ದವಾದ ಮನಕಲಕುವ ಕಥೆ.  ಕರಾವಳಿಯಪರಿಸರದಲ್ಲಿಯೂ ಈ ಕತೆ ಇದೆ.  ಬಯಲು ಸೀಮೆಯ ಕಥೆಯಲ್ಲಿ ಗೌಡನೊಬ್ಬ ಊರ ಒಳಿತಾಗಿ ಬಾವಿ ಕಟ್ಟಿ, ನೀರುಬಾರದಾಗ ಕಿರಿ ಸೊಸೆಯನ್ನು ಬಲಿಕೊಡುವುದು, ಆದನ್ನು ಶಕುನ, ದುಸ್ವಪ್ನದ ಮೂಲಕ ತಿಳಿದುಕೊಂಡ ಆಕೆಯ ಗಂಡ ದಂಡಿನಿಂದ ಬತ್ತಲು ಕುದುರೆ ಹತ್ತಿ ಮನೆಗೆ ಓಡಿ ಬಂದುವಿಷಯ ತಿಳಿದು ತಾನು ಸತಿ ಹಾರವಾದ ಕೆರೆಗೆ ಹಾರವಾಗುತ್ತಾನೆ. ಪತಿ ಸಹಗಮನದ ಮಾದರಿ ಇದು. ಆದರೆ ಕರಾವಳಿಯಲ್ಲಿ ಮನೆಯ ಯಜಮಾನಿ ತಾಯಮ್ಮ ಮನೆಗಾಗಿ ಬಾವಿ ಕಟ್ಟಿಸುತ್ತಾಳೆ. ಬಾವಿಯಲ್ಲಿ ನೀರೆದ್ದು ಬರುವುದಿಲ್ಲ. ಮಗನನ್ನು ಕರೆದು ಜೋಯಿಸರನ್ನು ಕೇಳಿಬರುವಂತೆ ಹೇಳುತ್ತಾಳೆ. ಜೋಯಿಸರು ಬಾವಿ ನರಬಲಿ ಆದೂ ಮಧ್ಯದ ಸೊಸೆಯಬಲಿಯನ್ನೇ ಕೇಳುತ್ತದೆ ಅನ್ನುತ್ತಾರೆ. (ಹಾಡಿನಲ್ಲಿ ಬರದಿದ್ದರೂ ನನಗೆ ಈ ಹಾಡಳು ಹೇಳಿದವಳು,ಜೋಯಿಸರು ಮಧ್ಯದ ಸೊಸೆಯ ಮೇಲೆ ಕಣ್ಣಿಟ್ಟಿದ್ದರು. ಆದರೆ ಆ ಸೊಸೆಯ ಅವರೊಂದಿಗೆ ಸಲಿಗೆ ಬೆಳೆಸಲು ಒಪ್ಪಿರಲಿಲ್ಲ. ಹಾಗಾಗಿಯೇ ಅವರು ಮಧ್ಯದ ಸೊಸೆಯನ್ನೇ ಬಲ ಕೊಡಲು ಹೇಳುವದು ಎಂದಳು). ಬಯಲು ಸೀಮೆಯ ಕತೆಯಲ್ಲಿ ಯಾರಾದರೂ ಬಲಿ ಆಗಬಹುದು ಎಂದಾಗ ಎಲ್ಲರೂ ನಾನೊಲ್ಲೆ ನಾನೊಲ್ಲೆ ಎಂದಾಗ ಚಿಕ್ಕ ವಯಸ್ಸಿನಕಿರಿಯ ಸೊಸೆಯನ್ನು ಬಲಿ ಕೊಡುತ್ತಾರೆ. ಆದರೆ ಇಲ್ಲಿ ಮಧ್ಯದ ಮಗನ ಹೆಂಡತಿ. ಇಲ್ಲೊಂದು ಬಹಳ ಮುಖ್ಯ ವ್ಯತ್ಯಾಸ ಕತೆಯ ಕೊನೆ.  ಬಯಲು ಸೀಂಎಯ ಒಂದು ಕತೆಯಲ್ಲಿ ಗಂಡ ದಂಡಿನಲ್ಲಿರುತ್ತಾನೆ. ಕೊನೆಯಲ್ಲಿ ಗಂಡ ಹೆಂಡತಿಯ ಇಬ್ಬರೂ ಹಾರವಾಗುತ್ತಾರೆ. ಆದರೆ ಇಲ್ಲಿ ಮಗ ಮನೆಯಲ್ಲಿಯೇ ಇರುತ್ತಾನೆ. ಸೋಸೆ ಮಡಿದರೂ ಅವನು ಮಡಿಯುವುದಿಲ್ಲ. ಆವಳೂ ತಾವರೆ ಹೂವಾಗಿ ಹುಟ್ಟುತ್ತಾಳೆ. ಆಹೂವು ಗಂಡ ಕರೆದರೆ ಆವನ ಮಡಿಲಿಗೆ ಬರುವುದಿಲ್ಲ, ಅತ್ತ ಕರೆದರೆ ಬರುವುದಿಲ್ಲ. ಆದರೆ ಅಣ್ಣ ಕರೆದರೆ ಆವನ ಮಡಿಲಿಗೆ ಬಂದು ಸೇರಿಕೊಳ್ಳುತ್ತದೆ.  ಕರಾವಳಿಯ ಆಳಿಯ ಕಟ್ಟಿನ ಕುಟುಂಬ ವ್ಯವಸ್ಥೆಯಲ್ಲಿ ಅಣ್ಣ ತಂಗಿಯ ಸಂಬಂಧ ಶಾಶ್ವತವಾದುದು. ಅಣ್ಣನ ದುಡಿತವೆಲ್ಲ ತಂಗಿಯ ಮಕ್ಕಳಿಗೆ, ತಂಗಿ ಹೊಕ್ಕ ಮನೆಯಲ್ಲಿ ಬಾಳಲು ಬಂದವಳು ಬಳಮೇಸ್ತ್ರೀ ಅನ್ನುತ್ತಾರೆ. ಈ ಸ್ಥಾನ ಸ್ವಲ್ಪ ಕೆಳಗಿನದೇ. ತಂಗಿ ಹೊಕ್ಕ ಮನೆಯಲ್ಲಿ ಅವಳು ಸಂತಾನತಿ.ಇದು ಹೆಚ್ಚಿನ ಗೌರವದ್ದು, ಹಾಗಾಗಿಯೇ ಏನೋ ಕತೆಯ ಕೊನೆಗೆ ಈ ತಿರುವು ಇದೆ. ಇಷ್ಟು ಮಾತ್ರವಲ್ಲ ಆ ಅಣ್ಣ ಬಲಿಯಾಗಿ ತಾವರೆ ಹೂವಾದ ಆ ತಂಗಿಯನ್ನು ತಂದು ಮನೆಯ “ಕೇಲು ಮಡಿಕೆ” (ಅಕ್ಕಿ ತುಂಬಿದಡುವ ದೊಡ್ಡ ಮಣ್ಣನಿನ ಮಡಕೆ೦ಯಲ್ಲಿ ಇಟ್ಟು, ಮಾರನೆಯ ದಿನ ನೋಡಿದಾಗ ಆ ತಂಗಿ ಹನ್ನೆರಡು ವರ್ಷದ ಬಾಲೆಯಾಗಿರುತ್ತಾಳೆ.  ಹೀಗೆ ದುಃಖ್ಯಾಂತ್ಯದ ಕತೆಯೊಂದು ಇಲ್ಲಿ ಸುಖ್ಯಾಂತಗೊಳ್ಳುತ್ತದೆ.

ಗಿರಿಜಾಬಾಲಿ :

ಸೊಸೆಯನ್ನು ಸುಟ್ಟು ಸಾಯುವಂತೆ ಮಾಡುವುದು ಹೊಸ ಪರಿಯೇನಲ್ಲ. ಆಂದಿನಿಂದಲೂ ಅತ್ತೆ ಸೊಸೆಯನ್ನು ಗೋಳು ಹೊಯ್ಯುವುದು. ಅವಳು ಸಾಯಲು ಕಾರಣವಾಗುವುದು ನಡೆದೇ ಬಂದಿದೆ. ವರದಕ್ಷಿಣೆಗಾಗಿ ಇರಬಹುದು. ಅಧಿಕಾರಕ್ಕಾಗಿ ಇರಬಹುದು, ಅಸೂಯೆಗಾಗಿಯೂ ಇರಬಹುದು.  ತಾಯಿಯನ್ನು, ಅವಳ ವಾತ್ಸಲ್ಯವನ್ನು ಹಾಡಿ ಹೊಗಳುವ ಸಾಹಿತ್ಯ ಬೇಕಾದಷ್ಟಿದೆ. ಆದರೆ ಆ ತಾಯಿಯಲ್ಲಿಯೂ ದ್ವೇಷ, ಕ್ರೊಧ, ಅತಿ ಆಸೆಉಲ್ಬಣಗೊಂಡಾಗ, ವಾತ್ಸಲ್ಯವೆಲ್ಲ ಬತ್ತಿ ಹೋಗಿ ಎಂತಹ ಕೇಡಿಗೆ ಕಾರಣವಾಗಬಲ್ಲದು, ಅದರ ಪರಿಣಾಮವೇನಾಗುವುದು ಎಂಬುವುದನ್ನು ಈ ಜಾನಪದ ಹಾಡುಗಬ್ಬದಲ್ಲಿ  ಕಾಣಬಹುದು.

ಬೇಗ ಮದುವೆಯಾಗುವ ಕಾಲದ ಹಾಡು ಇದು.ಹನ್ನೆರಡರ ಗಿರಿಜಾಬಾಲಿ ತವರಿಗೆ ಬಂದಿದ್ದಾಳೆ.  ಬಹಳ ದಿನವಾಗಿರಬೇಕು ಬಂದು, ಇವತ್ತೇ ಹೋಗುತ್ತೇನಂದು ಹೇಳುತ್ತಿದ್ದಾಳೆ. ಆದರೆ ತಾಯಿಗೆ ಮಗಳನ್ನು ಕಳುಹಿಸುವ ಮನವಿಲ್ಲ. ಆದರೆ ಗಿರಿಜಾ ಬಾಲಿ ಕೇಳುವುದಿಲ್ಲ.

ಮಾರಬು ಕೂಡಿ ನಡೆದಳಲೇ
ಕಟ್ಟಿಗೆ ಹೋರೆ ಎದುರಿಗೆ ಬಂತು.

ಪ್ರಯಾಣದಲ್ಲಿ ಕಟ್ಟಿಗೆ ಹೊರೆ ಎದುರು ಬಂದರೆ ಅಪಶಕುನವೆಂದು ತಾಯಿ ಹೇಳುತ್ತಾಳೆ. ಪ್ರಯಾಣ ನಿಲ್ಲಿಸು ಎನ್ನುವ ಸೂಚನೆ ಕೊಡುತ್ತಾಳೆ, ಅವನು ಹೊಟ್ಟೆ ಪಾಡಿಗೆ ತಿರುಗಾಡುತಿರುವ ಎಂದು ಗಿರಿಜಾಬಾಲಿ ಹೇಳುತ್ತಾಳೆ. ಅವಳಿಗೆ ತನ್ನ ಗಂಡನ ಮನೆಗೆ ಹೋಗುವ ತೀವ್ರ ತರಾತುರಿ ಇರುವಾಗ ಕಟ್ಟಿಗೆ ಹೊರೆ ಅಪಶಕುನವಾಗಿ ಕಾಣುವುದಿಲ್ಲ. ಅವನೊಬ್ಬ ತನ್ನ ಹೊಟ್ಟೆ ಪಾಡಿಗೆ ಕಟ್ಟಿಗೆ ಹೊತ್ತು ಮಾರುವವ, ಅವನೇಕೆ ಅಪಶಕುನವಾಗುತ್ತಾನೆ ಎಂಬ ಆಲೋಚನೆ ಅವಳಿಗೆ. ಗಂಡನ ಮನೆಗೆ ಹೊದವಳು ಅತ್ತೆಯನ್ನು ಕರೆಯುತ್ತಾಳೆ. ತವರಿಂದ ಅತ್ತೇಗಾಗಿ ತಾನು ತಂದ ವಸ್ತುಗಳನ್ನು ಕೊಡುತ್ತಾಳೆ.

ನಾ ತಂದ ಬಿಳಿ ಎಲಿನೇ ಮೇಲಿನೇ ಅತ್ತೆ
ನಾ ತಂದೆ ಬೆಟ್ಟ ಅಡಕೆ ಮೇಲೀನೆ

ಎನ್ನುತ್ತಾಳೆ ಗಿರಿಜಾಬಾಲಿ. ಅತ್ತೆ ಗಿರಿಜಾಬಾಲಿ ತಂದ ಎಲೆ ಆಡಿಕೆ ಸ್ವೀಕರಿಸುತ್ತಾಳೆ. ಆದರೆ ಅವಳ ಮನದಲ್ಲಿರುವುದು ಭಯಂಕರ ವಿಷ.  ಯಾಕೋಗ ಗಿರಿಜಾಬಾಲಿಯ ಮೇಲೆ ಆಕೆಗೆ ಆಸಮಾಧಾನ. ಭಯಂಕರ ವಿಷವಿರುವ  ವಿಷ ಮುಂಗ್ರಿ ಎಲೆಯನ್ನು ತೋಟದಲ್ಲಿ ನೆಟ್ಟು ಬೆಳೆಸಿದ್ದ ಆ ಅತ್ತ ಅದನ್ನು ಕೊಯ್ದ ತರುತ್ತಾಳೆ. ಅದನ್ನು ಹಾಕಿ ಅಡಿಗೆ ಮಾಡುತ್ತಾಳೆ. ಹಾಗೆ ತಂದು ಸೊಸೆಯ ಹತ್ತಿರ ಬಣ್ಣದ ಮಾತನಾಡುತ್ತಾಳೆ.

ದೊಡ್ಡೋರ ಮನಿಯ ಹೆಣ್ಣಲ್ದ ಮಗಳೇ
ಊಟಕ್ಕಾರು ಬಾರೇ ಮಗಳೆ ಎಂದು ಅತ್ತೇ ಕರೆಯುತ್ತಾಳೆ.

ಅನ್ನದಲ್ಲಿ ವಿಷ ವಿಕ್ಕುವುದು ಘೋರ ಅಪರಾಧ. ಅನ್ನ ಪ್ರಾಣ ಉಳಿಸುವ ಕೆಲಸ ಮಾಡುವುದು. ಅಂಥ ಪ್ರಾನದಾತ ಅನ್ನದಲ್ಲಿ ವಿಷ ಬೆರೆಸುವ ಮಹಾ ಪಾತಕ ಅತ್ತೆಯ ಅಸಮಾಧಾನ ಮಾಡುತ್ತದೆ. ಮುಗ್ದ ಗಿರಿಜಾಬಾಲಿ ಗಂಡನ ಮನೆಗೆ ಹಟ ಹಿಡಿದು ದಾರಿಯ ಆಪಶಕುನವನ್ನು ಗಣನೆಗೆ ತರದೇ ಪ್ರೀತಿಗಾಗಿ ಬಂದವಳು. ಗಂಡನಮುಖ ದರ್ಶನ ಇನ್ನೂ ಆಗಿಲ್ಲ ಅವಳಿಗೆ.  ಅತ್ತೇಗಾಗಿ ಬಿಳಿ ಎಲೆ ಬೆಟ್ಟ ಅಡಿಕೆ ತಂದು ಮೆಲ್ಲ ಹೇಳಿದವಳು. ಅಂತಹಹನ್ನೆರಡರ ಬಾಲೆಗೆ ಅನ್ನದಲ್ಲಿ ವಿಷ ವಿಕ್ಕುವಂಥ ಹೀನ ಕೃತ್ಯಕ್ಕೆ ಅವಳ ಅತ್ತೆ ಇಳಿದಿದ್ದಾಳೆ. ಗಿರಿಜಾಬಾಲಿ ಅತ್ತೆಯ ಬಣ್ಣದ ಮಾತಿಗೆ ಮರುಳಾಗಿ ಊಟಕ್ಕೆ ಕೂತಿದ್ದಾಲೆ. ಅವಳು ಊಟ ಮಾಡುವಾಗ ಕಾಗೆ ಕೋಳಿ ಬರುತ್ತದೆ.

ಊಟಕ್ಕೆ ಕೂತಲ್ಲಿ ಕಾಕಿ ಬಂತು.
ಕಾಕಿಗೆ ಒಂದು ತುತ್ತು ಇಕ್ಕಿದಳೇ
ಕೋಳಿಗ್ ಒಂದ್ ತುತ್ತ ಇಕ್ಕಿದಳೇ

ತಾನು ಒಂದು ತುತ್ತ ಉಂಡಳು. ಕಾಗೆ ಕೋಳೀಗಳೆರಡೂ ರೆಕ್ಕೆ ಬಡಿದು ಸತ್ತು ಹೋದವು. ಗಿರಿಜಾಬಾಲಿಗೂ ಕಣ್ಣು ಕತ್ತಲಿಟ್ಟುಕೊಂಡಿತು. ಅತ್ತೆಗೆ ತನಗಾಗುತ್ತಿದ್ದ ಸಂಕಟವನ್ನು ಹೇಳಿದಾಗ,

ದೊಡ್ಡವರ ಮನಿಯ ಮಗಳಲ್ದ ಮಗ್ಳೇ
ನಡೆದು ಬಂದು ದಣಿವೇ ಅದು
ಮೆತ್ತೀನ ಮೇಲೆ ಒರಗೇ ಹೆ‌ಣ್ಣೇ

ಎಂದು ಪುಟ್ಟ ಹುಡುಗಿಗೆ ವಿಷ ವಿಕ್ಕಿಯೂ, ತೊರಿಕೆಗೆ ಅನುನಯದ ಮಾತನಾಡುತ್ತಾ ಅತ್ತೆ ಹೇಳುತ್ತಾಳೆ.  ಅತ್ತೆ ಹೇಳಿದ್ದನ್ನು ನಂಬಿದ ಗಿರಿಜಾಬಾಲೆ ಮೆತ್ತಿನ ಮೇಲೆ ಹೋಗಿ ಮಲಗುತ್ತಾಳೆ.  ಆಗ, ಅವಳ ಗಂಡ ಮರಿದೇವ್ರ ಬಯಲು ಸುತ್ತಲೂ ಹೋದವ ಮನೆಗೆ ಬರುತ್ತಾನೆ.  ತನ್ನ ಹೆಂಡತಿ ಗಿರಿಜಾಬಾಲಿ ಮನೆಗೆ ಬಂದ ವಿಷಯ ಗೊತ್ತಾಗುತ್ತದೆ. ಆದರೆ ತನ್ನ ತಾಯಿಯೇ ತನ್ನ ಕಾಲಿಗೆ ನೀರು ತಂದು ಕೊಟ್ಟದ್ದನ್ನು ಕಂಡು ಮರಿದೇವ್ರಿಗೆ ಅಶ್ಚರ್ಯವಾಗುತ್ತದೆ. ಮಡದಿ ಮನೆಗೆ ಬಂದರೂ, ನೀರು ಕೊಡಲು ಬರಲಿಲ್ಲವೆಂದು. ನಿನ್ನ ಸೊಸೆ ಗಿರಿಜಾ ಬಾಲಿ ಎಲ್ಲಿಗೆ ಹೋದಳು ಎಂದು ಕೇಳುತ್ತಾನೆ. ಆಗ ತಗಿರಿಜಾ ಬಾಲಿಯ ಅತತೆ, ಈ ಮರಿದೇವ್ರ ತಾಯಿ,

ದೊಡ್ಡೋರ ಮನಿಯ ಹೆಣ್ಣಲ್ದ ಮಗನೇ
ನಡೆದು ಬಂದ ದಣಿವೀಗೆ ಒರಗೀಳಲೇ-   ಎನ್ನುತ್ತಾಳೆ.
ಮರಿದೇವ್ರು ಉಂಡು ಕೈ ಬ್ಯಾ ತೊಳೆದರಲೇ
ಮೆತ್ಹತ್ತಿ ಮ್ಯಾನೆ ನಡಿದರಲೇ
ಮಡದಿಯ ಮೂರ್ ಕರಿಯ ಕರಿದಾರಲೇ
ಎಷ್ಟೆ ಕರೆದ್ರೂ ಮಾತಾಡಲಿಲ್ಲ   ಎಂದು ತಾಯಿಯ ಹತ್ತಿರ ಕೇಳುತ್ತಾನೆ.

ಆಗ ತಾಯಿ ಒಳ ಬಾಯಿಯಲ್ಲಿ

“ಬಂದೀಕ್ಕು ಮೈಮೇಲೆ ಆವಳ್ಮನಿ ಭೂತ”- ಎಂದರೂ
“ಮಡುವಾಳ ಮಾಚಣ್ಣಗೆ ಒಸಗೀ ಹೇಳ ” ಎನ್ನುತ್ತಾಳೆ.
ಏನೆಂದೆ ಒಡಗಿ ಹೇಳಲಿ ಎಂದು ಮರಿದೇವ್ರು ಕೇಳಿದರೂ
ಹನ್ನೆರಡು ವರ್ಷದ ಗಿರಿಜಾಬಾಲಿ
ಋತುವಾದಳೆಂದೇ ಒಸಗೆ ಹೇಳ ಎಂದು  ಉಪಾಯದಿಂದ ಹೇಳುತ್ತಾಳೆ.

ಜಾನಪದ ಸಂಸ್ಕೃತಿಯಲ್ಲಿ ಋತುಮತಿಯಾದಾಗ ಮಡಿವಾಳರು ಬರಬೇಕಾಗುತ್ತದೆ. ಮತ್ತು ಅವರೇ ಈ ಒಸಗೆಯನ್ನು ತವರಿಗೆ ಹೇಳಿ ಬರಬೇಕಾಗುತ್ತದೆ. ಮೊದಲು ಋತಿಮತಿಯಾದಾಗ ಹೆಣ್ಣಿಗೆ ಬಹಳ ನಾಚಿಕೆ. ಹಾಗಾಗಿ ಅವಳು ಗಂಡ ಮಾತನಾಡಿದರೂ ನಾಚಿಕೆಯಿಂದ ಮಾತಾಡಲಿಲ್ಲ ಎಂಬ ಅಭಿಪ್ರಾಯ ಮರಿದೇವ್ರಿಗೆ ಬರಲಿ ಎನ್ನುವ ಉಪಾಯ ಗಿರಿಜಾ ಬಾಲಿಯ ಅತ್ತೆಯದ್ದು. ಮರಿದೇವ್ರು ನಂಬುತ್ತಾರೆ ತಾಯಿಯ ಮಾತನ್ನು.

ಮರಿ ದೇವರೆಂಬವರಿಗೆ ಬಹಳ ಸಂತೋಷವಾಗುತ್ತದೆ.  ಮಡಿವಾಳ ಮಾಚಣ್ಣನನ್ನು ಕರೆದು ಗಿರಿಜಾಬಾಲಿ ಮನಿಗೆ ವಸಗಿ ಹೇಳಿ ಬಾ ಎಂದ. ಆಗ ಮಡಿವಾಲ ಮಾಚಣ್ಣ ಗಿರಿಜಾ ಬಾಲಿ ಮನೆಗೆ ಹೋಗಿ, ಅಲ್ಲಿ, “ಹನ್ನೆರಡು ವರ್ಷದ ಗಿರಿಜಾಬಾಲಿ ಋತುವಾದ ಒಸಗೀ ತಂದೆ” ಎಂದಾಗ, ಸಹಜವಾಗಿಯೇ ಗಿರಿಜಾ ಬಾಲಿಯ ತಂದೆ ತಾಯಿಗೆಮಹಾ ಸಂತೋಷವಾಗುತ್ತದೆ.  ಆಗ ಅವರು ಏಳೂರಿಗೆ  ಓಲೆ ಬರೆದು, ಏಳೂರ ಹೂವ ತರಿಸಿ, ಏಳೂರು ಚಿನ್ನ ತರಿಸಿ ದೊಡ್ಡ ದಿಬ್ಬಣ  ಕೂಡಿ  ಮಗಳ ಮನೆಗಾಗಿ ಸಂಭ್ರಮದಿಂದ ಬರುತಿದ್ದಾರೆ. ಆಗಲೇ ಕುರಿ ಮೇಯಿಸುವ ಮಕ್ಕಳು ಬಯಲಲಿಲ ಎದುರಾಗಿ “ಮರಿದೇವ್ರ ಮನೆಯಲ್ಲಿ ಮಾ ದೊಡ್ಡ ಹೊಮ್ನವು; ಎಂದು ಒಗಟಾಗಿ ಹೇಳುತ್ತಾರೆ. ಮಗಳು ಋತುವಾದಳೆಂದಷ್ಟೆ ಹೇಳಿ ಕಳುಹಿಸಿದ್ದ ಬೀಗರ ಮನೆಯಲ್ಲಿ ಅದ್ಯಾವ ಹೋಮ ನಡೆಯುತ್ತಿದೆಯೋ ತಿಳಿಯದೇ ಮುಂದು ಮುಂದೆ ಬರುತ್ತಾರೆ.

ಆಗ,

ಗೋಮೇಸೋ ಮಕ್ಕಳೂಎದುರೇ ಬಂದೋ
ಮರಿದೇವ್ರ ಮನೆಯಲ್ಲಿ ಮಾ ದೊಡ್ಡ ಹೋಮ್ನವು
ಮಕ್ಕಳು ಶಕುನವ ನುಡಿತೇ ಬಂದೋ

ಮಕ್ಕಳು ಒಗಟಾಗಿ ಹೇಳಿದಾಗ ಗಿರಿಜಾಬಾಲಿಯ ತಾಯಿ ತಂದೆಯರಿಗೆ ಅತಂಕವಾಗುತ್ತದೆ. ಹೋಮದ ಬೆಂಕಿಯ ಮುಂದೆ ಹೋದಾಗ ಗಿರಿಜಾಬಾಲಿ ಆ ಬೆಂಕಿಯಲ್ಲಿ ಕರಟುತ್ತಿದ್ದುದ್ದನ್ನು ಕಾಣುತ್ತಾರೆ.  ಮರಿದೇವ್ರೂ ಅಲ್ಲಿಯೇ ಇರುತ್ತಾನೆ. ಗಿರಿಜಾ ಬಾಲಿಯ ತಂದೆತಾಯಿ ,ಗಿರಿಜಾ ಬಾಲಿಗಾಗಿ ತಂದ ಹೂವನ್ನು ಚಿನ್ನವನ್ನು ಆ ಚಿತೆಗೇ ಹಾಕುತ್ತಾರೆ.. ಸಂಕಟದಿಂದ, ಗಿರಿಜಾಬಾಲಿಯ ತಂದೆ ತಾಯಿ ಅವಳ ಸಾವಿಗೆ ಮರಿದೇವ್ರ ತಾಯಿಯೇ ಕಾರಣವೆಂದು ಹೇಳಿದಾಗ, ನಗುನಗುತ್ತಲೇ ತನ್ನ ಮಡದಿಯನ್ನು ಕೊಂದ ತಾಯಿಯ ಮೇಲೆ ಅಸಾಧ್ಯ ಕೋಪ ಬಂದು,

“ತಾಯಮ್ಮನ ಮೂರು ರುಂಡ ಹೊಡೆದನಲೇ” ಅಷ್ಟೇ ಅಲ್ಲ
ಅತ್ತೆಗೂ ಸೊಸಿಗೂ ಒಂದೇ ಬೆಂಕಿ
ಅತ್ತೇಗೂ ಸೊಸಿಗೂ ಒಂದೇ ಕೊಳ್ಳಿ

ಎನ್ನುತ್ತಾ ತನ್ನ ತಾಯಿಯನ್ನೂ ಗಿರಿಜಾಬಾಲಿಯ ದೇಹವನ್ನು ಕಬಳಿಸುತ್ತಿರುವ ಚಿತೆಗೆ ಹಾಕಿ ಬಿಡುತ್ತಾನೆ.

ರಂಬಿ ಜವ್ವನವು ಗಳದ್ಹೋದು ತಾನು

ಮನೆಯ ಪುರುಷನೊಬ್ಬ ವೇಶ್ಯೆಯ ಸಹವಾಸದಲ್ಲಿ  ಕೈ ಹಿಡಿದ ಮಡದಿಯನ್ನು ಮರೆತುಬಿಟ್ಟಿರುತ್ತಾನೆ. ಅವಳ ಮನೆಯಲ್ಲಿಯೇ ಠಿಕಾಣಿ ಹೂಡಿರುತ್ತಾನೆ. ಅವನಿಗಾಗಿ ಕಾದು ಕಾದು ನಿರಾಶಳಾದ ಆತನ ಮಡದಿ ತಾನು ಸಾಕಿದ ಗಿಣಿಯನ್ನು ಕರೆದು, ಅದರ ಮುಖಾಂತರ ತನ್ನ ಅಳಲನ್ನು ಅವನಿಗೆ ಹೇಳಿಕಳುಹಿಸುತ್ತಾಳೆ. ಹಾರಿ ಬಂದು ತನ್ನ ಬುಜದ ಮೇಲೆ ಕೂತ ಗಿಣಿಯನ್ನು ಒಡೆಯ ಕೇಳುತ್ತಾನೆ.

“ಏನ್ ಬಂದೆ ಗಿಣಿರಾಮ ಎಂತ್ ಬಂದೆ ಗಿಣಿರಾಮ
ಬಂದ ಕಾಣವ ಒದಗ್ಹೇಳು ಎಂದು

ಗಿಣಿ ತನ್ನ ಒಡತಿ  ಹೇಳಿದಂತಗೆಯೇ ತಾನು ಬಂದ ಕಾರಣವನ್ನು ಹೇಳಿ ಅರಗಳಿಗೆಯಾದರೂ ಬಂದು ಹೋಗಿ ಒಡತಿಯ ಬಳಿ ಎಂದು ಕರೆಯುತ್ತದೆ. ಆಗ ಒಡೆಯ,

ರಂಬಿಯವ್ವನವು ಗಳಿದ್ಹೋದರ‍್ಹೋಗಲಿ
ನಾನೊಂದರಿಗಳಿಗೆ ಬರಲಾರೆ
ನಂಬಿದ ಸೂಳಿಯ ಬಿಡಲಾರೆ ಗಿಣಿರಾಮ
ಹೋಯ್ ಹೇಳ ನಿನ್ನ ಒಡತಿಗೆ ಎಂದು ಬಿಡುತ್ತಾನೆ.

ಪಾಪ ಗಿಣಿ ಏನು ಮಾಡಿತು.  ಒಡೆಯ ಹೇಳಿದ ಮಾತನ್ನೇ ಒಡತಿಯ ಬಳಿಗೆ ಬಂದು ಹೇಳುತ್ತದೆ.  ತನ್ನ ಗಂಡನನ್ನು ಕರೆಸಲು ಎಷ್ಟೆಲ್ಲ ಕಾರಣ ಹುಡುಕಿ ಆ ಒಡತಿ ಹೇಳಿ ಕಳಿಸಿದರೂ ಗಂಡ ಬಾರದಾಗ ಆಕೆ ಹತಾಶೆಯಿಂದ.

ನಿನ್ ಮಡದಿಯು ಸತ್ತು ಇಂದೀಗೆ ಮೂರು ದಿವ್ಸ
ಮಡದಿ ಸುಡುವುದಕೆ ಕಟ್ಟಿಗೆ ಇಲ್ಲ
ಮಡದಿ ಸುಡುವುದಕ್ಕೆ ಕಟ್ಟಿಗೆ ಇಲ್ಲ ಗಿಣಿರಾಮ
ಹೋಯ್ ಹೇಳೋ ನಿನ್ನ ಒಡೆಯದೆ-

ಎಂದು ಹೇಳಿ ಕಳೂಹಿಸುತ್ತಾಳೆ. ಮಡದಿ ಸತ್ತಳೆಂದು ಕೇಳಿಯಾದರೂ ಗಂಡ ಬಂದಾನೆಂಬ ಆಶಾಭಾವನೆಯಿಂದ, ಆದರೆ ಆತ ಇನ್ನೂ ಪ್ರಚಂಡ,

ಮಡದಿಯು ಸತ್ತರೆ ಗಂಧದ ಮರ ಉಂಟು
ಆಳು ಮಕ್ಕಳ ಕರೆಸಿ ಕಡಿಸೀನಿ
ಆಳು ಮಕ್ಕಳ ಕರೆಸಿ ಕಡಿಸೀನಿ ಗಿಣಿರಾಮ
ಮನೆ ಹೊದ್ದಿನಮಲಗದ್ದೇಲಿ ಸುಡಿಸೀನಿ ಗಿಣಿರಾಮ
ಒಂದ್ಹಾಡ ತುಪ್ಪ ಹೊಯ್ಸಿನಿ
ಒಂದ್ಹಾಡ ತುಪ್ಪ ಹೊಯ್ಸಿನಿ ಗಿಣಿರಾಮ
ಗಂಧದ ಮರಹತ್ತಿ ಕೂತು ಕಾಂತೆ
ಗಂಧದ ಮರ ಹತ್ತಿ ಕೂತು ಕಾಂತೆ ಗಿಣಿರಾಮ
ನಂಬೀದ ಸೂಳಿಯ ಬಿಡಲಾರೆ
ನಂಬೀದ ಸೂಳಿಯ ಬಿಡಲಾರೆ ಗಿಣಿರಾಮ
ನಾನೊಂದರಗಳಿಗೆ ಬರಲಾರೆ

ನಿನ್ನ ಒಡತಿಗೆ ಇದನ್ನೇ ಹೇಳು ಎಂದು ಹೇಳಿ ಬಿಡುತ್ತಾನೆ. ಇದನ್ನು ಕೇಳಿ ಮಡದಿಗೆ ಬಹಳ ಬೇಸರವಾಗುತ್ತದೆ.  ಮಡದಿಯ ತಂದೆಗೆ ಬಹಳ ಸಿಟ್ಟು ಬರುತ್ತದೆ.  ಅಳಿಯ ಹೇಳಿದಂತೆಯ ಗಂಧದ ಮರ ಕಡಿದು ಚಿತೆ ತಯ್ಯಾರು ಮಾಡುತ್ತಾನೆ. ಅದಕ್ಕೆ ಹಾರಿಕೊಳ್ಳ ಹೋದ ಮಗಳನ್ನು ಇರುವೆ ಸಾಲಿಗೆ ಕಟ್ಟಿ ಹಾಕುತ್ತಾನೆ. ನಾಯಿಯೊಂದನ್ನು ಕೊಂದು ಆ ಚಿತೆಗೆ ಹಾಕುತ್ತಾರೆ.

ಗಂಧದ ಮರ ಹತ್ತಿ ಹೊಗೆ ಕಂಡ ಅವಳಗಂಡ ನಿಜಕ್ಕೂ ತನ್ನ ಮಡದಿ ಮಡಿದಳೆಂದೇ ತಿಳಿದು ಗಾಬರಿಯಾಗಿ ಓಡಿ ಬರುತ್ತಾನೆ.  ತಡೆದ ಸೂಳಿಯ ಕಾಲುಕಡಿಯುತ್ತಾನೆ.  ಕೈ ಕಡಿಯುತ್ತಾನೆ. ಕೊನೆಗೆ ಅವಳನ್ನು ಕೊಂದು ಓಡಿ ಬಂದು ಉರಿಯುತ್ತಿರುವ ಚಿತೆಗೆ ಹಾರಿಬಿಡುತ್ತಾನೆ. ಈಗ ಮಡದಿ ಗೆದ್ದೂ ಸೋಲುತ್ತಾಳೆ. ಗಂಡನೊಂದಿಗೆ ತಾನೂ ಹಾರುತ್ತೇನೆ ಎಂದು ಚಿತೆಯ ಬಳಿ ಹೋಗುತ್ತಾಳೆ.  ಆದರೆ ಅವಳ ತಂದೆ ಅವಳನ್ನು ತಡೆದು, ತನ್ನ ಬಳಿ ಇದ್ದ ನಾಗಬೆತ್ತದ ಮಂತ್ರದಂಡದಿಂದ ಅಳಿಯನನ್ನು ಬದುಕಿಸುತ್ತಾನೆ. ಹೀಗೆ ಒಡೆಯ ಒಡತಿ ಒಟ್ಟಾಗುತ್ತಾರೆ. ಗಿಣಿರಾಮ ಹಾಡುತ್ತಾನೆ.

ಕುಸುಮಾಲಿ:

ಕುಸುಮಾಲಿ ಒಬ್ಬ ಮುಗ್ದ ಹಳ್ಳಿಯ ಹೆಣ್ಣು. ಮನೆಯಸುತ್ತಲೂ ಸುರಗಿ, ಸಂಪಗೆ, ಮಲ್ಲಿಗೆ, ಕೇದಗೆ, ಜಾಜಿ, ಇರುವಂತಿಗೆ, ಶೇವಂತಿಗೆ ಗಿಡಗಳನ್ನು ನೆಟ್ಟು ನೀರೆರೆದು ಮಕ್ಕಳಂತೆ ಸಾಕುತ್ತಿದ್ದ ಕಡು ಚೆಲುವೆ. ಯಾರಿಗೂ ಕೇಡೆಣಿಸದೇ, ತನ್ನಷ್ಟಕ್ಕೆ ತಾನು ಹಕ್ಕಿಯಂತೆ ಬದುಕುತಿತದ್ದವಳು. ಈ ಕುಸುಮಾಲೆಯ ಗಂಡ ದೆವರಾಯ. ದೇವರಾಯನಿಗೆ ಆದೇಕೋ ಎಂಜಲನ್ನದ ಮೋಹ. ಪಕ್ಕದ ಊರಿನ ವೇಶ್ಯೆಯ ಸಂಗ ಅವನಿಗೆ. ವೇಶ್ಯೆಗೆ ದೇವರಾಯನನ್ನು ಪೂರ್ತಿಯಾಗಿ ತನ್ನ ವಶ ಮಾಡಿಕೊಳ್ಳಬೇಕೆಂಬ ಹಂಬಲ. ಅದಕ್ಕಾಗಿ ಅವಳು ಆರಿಸಿಕೊಂಡ ಮಾರ್ಗವೆಮದರೆ ದೇವರಾಯನಿಗೆ ತನ್ನ ಹೆಂಡತಿಯ ಮೇಲೆಯೇ ಅನುಮಾನ ಬರುವಂತೆ ಮಾಡುವುದು. ಅದರ ಪರಿಣಾಮ ಮಾತ್ರ ಭೀಕರವಾದ ಘಟನೆಯ ಕಥೆ ಇದು.

ಒಮ್ಮೆ ದೇವರಾಯ ವೇಶ್ಯೆಯ ಮನೆಯಲ್ಲಿ ಇರುವಾಗ ವೇಶ್ಯೆ ಹೇಳುತ್ತಾಳೆ,

ಹೆಂಡಿರ ಗುಣವೇ ಗಂಡರೇನು ಬಲ್ಲರೇ
ಗುಂಡಿ ಒಳಗಿರುವ ಕರು ಮೀನು ನಾ ಅಂತೆ
ಕಂಡು ಬನ್ನಿದೇವ್ರಾಯ್ರೆ ನಿಮ್ಮಡದೀ
ಬೇಡಕು ಬಂದನಿಗೂ ಒಲಿವಾಳೆ
ಹೂವು ತಂದನಿಗೂ ಒಲಿವಾಳೆ

ಎಂದು ಹಗುರವಾಗಿ ವೇಶ್ಯೆ ಹೇಳಿದಾಗ ದೇವರಾಯನ ಮನಸ್ಸು ಅತ್ತ ಇತ್ತ ಉಯ್ಯಾಲೆಯಾಡುತ್ತದೆ. ಪರೀಕ್ಷೆ ಮಾಡಿಯೇ ಬಿಡೋಣವೆಂದು ನಿಶ್ಚಯಿಸಿ ಬಿಡುತ್ತಾನೆ.

ವೇಶ್ಯೆಯ ಮನೆಯಿಂದ ಹೊರಟ ದೇವರಾಯ ಬರುವುದು ಜೋಳಿಗೆ ಹೊಲಿಯುವವನ ಮನೆಗೆ, ಗುಡಿಗಾರನ ಮನೆಗೆ, ಬಡಿಗೆಯವನ ಮನೆಗೆ, ಅಲ್ಲಿ ತನ್ನ ವೇಷ ಪಲ್ಲಟಿಸಿಕೊಂಡು ಜೊಗಿಯವೇಷ ತೊಟ್ಟುಕೊಳ್ಳುತ್ತಾನೆ.

ತನ್ನ ಜೋಗಿಯವೇಷದ ಬಗ್ಗೆ ಖಾತ್ರಿ ಮಾಡಿಕೊಂಡು ಸೀದಾ ಮಡದಿ ಇದ್ದೆಡೆಗೆ ಬರುತ್ತಾನೆ.

ಯಾರಮ್ಮ ಮನೆಯಾಗೆ ಯಾರಮ್ಮ ಮಠದಾಗೆ ಜೋಗಿಗೆ ಪಡಿಯ ಇಡಬನ್ನಿ ಎಂದು ಕರೆಯುತ್ತಾನೆ ಮನೆಯೊಡತಿಯನ್ನು, ಕೇಳಿಸಿಕೊಂಡ ಕುಸುಮಾಲಿ,

ಗೌಡರೇ ತೋತ್ಯರೆ ಎತ್ತೆಲ್ಲ ಹೋದಿರಿ
ಜೋಗಿಗೆ ಪಡಿಯ ಇಡಹೋಗಿ

ಎಂದು ಕೆಲಸದಾಳುಗಳಿಗೆ ಹೇಳುತ್ತಾಳೆ. ಆದರೆ  ಈ ಜೋಗಿ ಭಿಕ್ಷೆಗಾಗಿ ಬಂದ ಜೋಗಿಯಲ್ಲವಲ್ಲ.  ಆವನು ಕುಸುಮಾಲಿಯ ಶೀಲ ಪರೀಕ್ಷೆಗಾಗಿ ಬಂದವನು. ಹಾಗಾಗಿ ಅವನು ಹೇಳುತ್ತಾನೆ.

ಗೌಡ್ಯಾರು ತೊತ್ಯಾರು ಇಡುವಂಥ ಪಡಿಯಲ್ಲ
ಕುಸುಮಬಾಲಿ ಬಂದು ಇಡಬೇಕು ಎನ್ನುತ್ತಾನೆ.

ಪಡಿಗೆ ಬಂದವರನ್ನು ಖಾಲಿ ಕೈಯಲ್ಲಿ ಕಳುಹಿಸುವುದು ಮನೆಗೆ ಶ್ರೇಯಸ್ಕರವಲ್ಲ ಹಾಗಾಗಿ ನಿರ್ವಾಹವಿಲ್ಲದೇ ಕುಸುಮಾಲಿಯೇ

ಸಣ್ಣ ಹರಿವಾಣದಲ್ಲಿ ಸಣ್ಣಕ್ಕಿ ಹ್ಯಾಕಂಡು
ಸಣ್ಣ ಮಾದಲದ ಫಲದ್ವಸ್ತು ಹ್ಯಾಕಂಡು
ಹಿಡಿಬಾರ ಜೋಗಿ ಭಿಕ್ಷೆಯ ಅನ್ನುತ್ತಾಳೆ.

ಬಾಗಿಲ ಕಂಠದಲ್ಲಿ ನಿಂತು. ಆಗ ಜೊಗಿ  ಬಾಗಿಲ ಕಂಠದಿ ಕೊಟ್ರೆ ಭಾಗ್ಯಕೆ ಕಡಿಮೆಯಾದೋ ಮತ್ತೊಂದು ಮೆಟ್ಲ ಇಳಿ ಹೆಣ್ಣೆ ಎಂದು ಹೇಳುತ್ತಾನೆ.

ಒಂದು ಮೆಟ್ಟಿಲನ್ನು ಇಳಿಯುತ್ತಾಳೆ. ಆದರೆ ಜೋಗಿಗೆ ಸಾಕಾಗುವುದಿಲ್ಲ. ಇನ್ನೊಂದು ಮೆಟ್ಟಿಲನ್ನು ಇಳಿಯ ಹೇಳುತ್ತಾನೆ. ಕುಸುಮಾಲಿ ಇನ್ನೊಂದು ಮೆಟ್ಟಿಲನ್ನು ಇಳಿಯುತ್ತಾಳೆ. ಆದರೆ ಜೋಗಿ ಮೂರನೇ ಕೊನೆಯ ಮೆಟ್ಟಿಲನ್ನು ಇಳಿಯ ಹೇಳಿದಾಗ ಮಾತ್ರ ಜೊಗಿಯೆ ಇಂಗಿತವೇನಿರಬಹುದೆಂದು ತಿಳಿಯದೇ ಕಂಗಾಲಾಗುತ್ತಾಳೆ. ಸೇವಕಿಯರನ್ನು ಕರೆಯುತ್ತ.

ಗೌಡಿಯಾರೆ ತೋತ್ತ್ಯಾರೆ ಎತ್ತೆಲ್ಲ ಹೋದಿರಿ
ಹಿಡಿಕಟ್ಟಿನಲ್ಲಿವನ ಹೊಡೆದಟ್ಟಿ

ಎನ್ನುವಷ್ಟು ಸಂಯಮ ಕಳೆದುಕೊಳ್ಳುತ್ತಾಳೆ. ಅಷ್ಟಾದರೂ ಆ ಜೋಗಿ ಮನೆಯಂಗಳ ಬಿಟ್ಟು ಕದಲುವುದಿಲ್ಲ. ಏನೂ ಮಾಡಲು ತೋಚದೆ ಆ ಬಾಲೆ ಅತ್ತಿಗೆಯಂದಿರ ಮನೆಗಳಿಗೆ ಹೋಗಿ, ಹೊತ್ತಾರೆ ಮುಂಚ್ ಬಂದ ಜೋಗಿ ಹೊತ್ತರಗಿ ಬಯ್ಯಾರೂ ಜೋಗಿ ನನ್ನುರಿಯ ಹೊಯ್ಸುವ ಎಂದು ತನ್ನ ಮನೆಯ ಅಂಗಳಕ್ಕೆ ಬಂದು ನಿಂತ ಜ್ಯೋಗಿಯ ಬಗ್ಗೆ ಹೇಳುತ್ತಾಳೆ. ಆದರೆ ಅವರು ಜೋಗಿ ಮತ್ತ್ಯಾರು ಅಲ್ಲ. ಆತ ಕುಸುಮಾಲಿಯ ಗಂಡನೇ ಎಂದು ಹೇಳುತ್ತಾರೆ.

ನಿನ್ನ ಗಂಡನಲ್ದೆ ಪರನಲ್ಲ ಆ  ಜೋಗಿ
ಬೆಚ್ಚಲಲಿ ನೀರ ಅನುಮಾಡೆ ಕುಸುಮಾಲಿ
ಊಟಕ್ಕು ಅವಗೆ ಅಣೆ ಮಾಡೆ

ಎಂದು ಹೇಳಿ ಕಳುಹಿಸುತ್ತಾರೆ. ಕುಸುಮಾಲಿಗೆ ಕಳವಳವಾಗುತ್ತದೆ. ಉಪಾಯವಿಲ್ಲದೇ ಜೋಗಿಗೆ ಬಚ್ಚಲಲ್ಲಿ ನೀರಿಟ್ಟು ಸ್ನಾನ ಮಾಡುವಂತೆ ಹೇಳುತ್ತಾಳೆ.  ಊಟಕ್ಕೂ ಆಣಿಮಾಡಿ ದೇವರಾಯನನ್ನು ಕರೆದು ಕುಳ್ಳಿರಿಸುತ್ತಾಳೆ. ಆದರೂ ಮನಸ್ಸಿಗೆ ಮುದವಿಲ್ಲ ಕುಸುಮಾಲಿಗೆ.

ಎಲ್ಲ ಬಡಿಸಿದೆ ಸ್ವಾಮಿ ಒಂದು ಮರೆತಿದೆ ಸ್ವಾಮಿ
ತುಪ್ಪ ತರುವೇನು ಎಂದು ಮೆತ್ಹತ್ತಿ ಮ್ಯಾನೆ ನಡೆದಾಳೇ
ಮೆತ್ಹತ್ತಿ ಮ್ಯಾನೆ  ನಡೆದಾಳೆ ಕುಸುಮಾಲಿ
ಬೆಳ್ಳಿಯ ನೇಣ ಹಿಡಿದಾಳೆ,

ಬೆಳ್ಳಿಯ ನೇಣನ್ನು ತೆಗೆದುಕೊಂಡು ಕುಸುಮಾಲಿ ಸೀತಾ ತಾನು ಪ್ರೀತಿಯಿಂದ ನೆಟ್ಟು ಬೆಳೆಸಿದ ಹೂ ತೊಟಕ್ಕೆ ಹೊಗುತ್ತಾಳೆ. ಸಂಪಿಗೆ ಮರದ ಬುಡದಲ್ಲಿ ಬಂದು ಕುಸುಮಾಲಿ,

ಸಾಕಿದೆ ಸಲಹಿದೆ ನೆಟ್ಟು ನೀರುಹೊಯ್ದಿದೆ
ನನಗೊಂದು ಎಗಲ ಕೊಡಬೇಕು ಎನ್ನುತ್ತಾಳೆ.

ಆದರೆ ಕುಸುಮಾಲಿ ಸಾಕಿ ಬೆಳೆಸಿದ ಸಂಪಿಗೆ ತನ್ನ ಎಗಲನ್ನು ಕುಸುಮಾಲಿಗೆ  ನೇಣಿಗಾಗಿ ಕೊಟ್ಟಾಳೆಯೇ

ನೀ ಸಾಕಿದೆ ಸಲಹಿದೆ ನೆಟ್ಟು ನೀರ ಹೊಯ್ದಿದೆ
ನಿನಗಂತೂ ಎಗಲ ಕೊಡಲಾರೆ ಅನ್ನುತ್ತದೆ.

ಆಗ ಕುಸುಮಾಲಿ ತಾನು ನೆಟ್ಟ ಎಲ್ಲ ಗಿಡ ಮರಗಳ ಬುಡದಲ್ಲಿ ನಿಂತು ನನಗಾಗಿ ಒಂದು ಎಗಲನ್ನು ಬಗ್ಗಿಸಿಕೊಂಡಿ ಎಂದು ಕೇಳಿದರೆ ಯಾವ ಗಿಡಗಳೂ ಒಪ್ಪುವುದೇ ಇಲ್ಲ. ಕೊನೆಗೆ ಸುರಗಿ ಮರವೊಂದು ಆಕೆಯ ಕಣ್ಣೀರಿಗೆ ಮರುಗಿ ತಲೆಬಾಗಿ ತನ್ನ ಎಗಲನ್ನು ಕೊಡುತ್ತದೆ.

ಇತ್ತ ದೇವರಾಯ ಎಷ್ಟು ಹೊತ್ತಾದರೂ ಮಡದಿ ಬಾರದುದನ್ನು ಕಂಡು ಮನೆಯಲ್ಲ ಹುಡುಕಾಡಿ ಅವಳನ್ನೆಲ್ಲೂ ಕಾಣದೇ ಅವಳು ನೆಟ್ಟು ಬೆಳೆಸು ಹೂತೋಟಕ್ಕೆ ಹೋಗುತ್ತಾನೆ. ಆಲ್ಲಿ ಕುಸುಮಾಲಿ ಆಗಲೇ ಸುರಗಿ ಮರದಲ್ಲಿ ಬೆಳ್ಳಿಯ ನೇಣಿನಲ್ಲಿ ತೂಗಾಡುತ್ತಿರುವುದನ್ನು ಕಂಡು ಕಣ್ಣೀರುಗರೆಯುತ್ತಾನೆ. ಕುಸುಮಾಲಿಯನ್ನು ವೇಶ್ಯೆಯ ಮಾತು ಕೇಳಿ ಅನಾವಶ್ಯಕವಾಗಿ ಶಂಕಿಸಿದೆ ಎಂದು ಗೋಳಾಡುತ್ತಾನೆ.  ಕುಸುಮಾಲಿಗೂ ಗಂಡನನ್ನು ಆಗಲಿ ಹೋಗಲು ಕಷ್ಟವೇ ಆಗುತ್ತದೆ.  ಅವಳು ಸಾಯುವ ಮುನ್ನ ಗಂಡನಿಗೆ ಮಾತು ಕೊಡುತ್ತಾಳೆ.  ವರ್ಷಕ್ಕೊಮ್ಮೆ ಸುರಗಿಯ ಹೂವಾಗಿ ಬರುತ್ತೇನೆ. ಆದರೆ ಆ ಹೊತ್ತಿಗೆ ಸರಿಯಾಗಿ ದೇವರಾಯ ಬರಬೇಕು  ಅಂದಾಗ ದೇವರಾಯ,

ಸೂಳಿ ರಂಡೆ ಮಾತ್ ಕೇಳಿ ಮಾನಭಂಗವ ಆದೆ.
ಚಿನ್ನದಂತಹ ಮಡದಿ ಕಳಕೊಟ್ಟೆ
ಚಿನ್ನದಂತಹ ಮಡದಿ ಕಳಕೊಟ್ಟೆ ಎನುತಲಿ
ವಜ್ರತುಂಬಿಯಾಗಿ ಹಾರಿಹೋದ.

ಆ ದಿನದಿಂದ ಕುಸುಮಾಲಿ ತಪ್ಪದೇ ವರ್ಷಕ್ಕೊಮ್ಮೆ ಸುರಗಿಮರದಲ್ಲಿ ಸುರಗಿ ಹೂವಾಗಿ ಅರಳಿ ಬರುತ್ತಾಳೆ.  ಈ ದಿನಕ್ಕಾಗಿಯೇ ವಜ್ರದುಂಬಿ ದೇವರಾಯ ಕಾದು ಸುರಗಿ ಹೂವನ್ನು ಸೇರಿ ತನ್ನ ತಾ ಮರೆಯುತ್ತಾನೆ…

ಉತ್ತರ ದೇವಿ:

ಉತ್ತರದೇವಿ ಎಂಬುವವಳಿಗೆ ತನ್ನ ಗಂಡನಿಲ್ಲದ ವೇಳೆಯಲ್ಲಿ ಸಮಯ ಕಳೆಯುವುದೇ ಕಷ್ಟ. ಗಂಡನ ತಮ್ಮ ಮೈದುನ ತನ್ನ ಅತ್ತಿಗೆಯ ಬೇಸರವನ್ನು ಅರಿಯುತ್ತಾನೆ. “ಚೆನ್ನೆ ಯಾಡೋಣ ಬನ್ನಿ” ಎಂದು ಕರೆಯುತ್ತಾನೆ.  ಅತ್ತಿಗೆಗೂ ಗಂಡನ ತಮ್ಮಲ್ಲಿ ಸಲುಗೆ, ಅವನ ವಾತ್ಸಲ್ಯ. ಉತ್ತರದೇವಿ ಸಂತೋಷದಿಂದಲೇ ಮೈದುನನೊಂದಿಗೆ ಚೆನ್ನೆಯಾಟಕ್ಕೆ ತೊಡಗುತ್ತಾಳೆ. ಆಗ,

“ಅತ್ತಿಗೆ ಮೈದುನ ಕೂತು ಚೆನ್ನೆಯಾಡುತ್ತಿದ್ರು
ಪುರುಷ ಫಲಗುಣರು ಬರುವಾರೇ ಬಂದು ನಿಂತುಕೊಂಡು
ಕೂತು ಚೆನ್ನಿ ಆಡೂ ಬಗಿ ಹೆಂಗ” ಎನ್ನುತ್ತಾನೆ.

ತನ್ನ ತಮ್ಮ ಯುವಕ, ಹೆಂಡತಿಯು ಸಣ್ಣ ಪ್ರಾಯದವಳು. ಮನೆಯಲ್ಲಿ ತಾನಿಲ್ಲದಿರುವಾಗ ದಿನವೂ ಇದೇ ರೀತಿ ಸರಸದಲ್ಲಿ ಇವರಿಬ್ಬರೂ ಕಳೆಯುತ್ತಿರಬಹುದೇ ಇವರಿಬ್ಬರ ಸಂಬಂಧ ಯಾವ ರೀತಿ ಇದ್ದೀತು. ಗಂಡ ಯೋಚನೆಗೀಡಾಗುತ್ತಾನೆ. ಸಿಟ್ಟೂ ಬರುತ್ತದೆ. ಹೆಂಡತಿಯೊಡನೆ ಕೇಳಿಯೇ ಬಿಡುತ್ತಾನೆ. “ನಿನ್ನ ಚೆನ್ನಿ ಆಡುಗ ಬಗೆ ಹೆಂಗೆ” ಎಂದು. ಆಗ ಉತ್ತರದೇವಿ ತನ್ನಲ್ಲಿ ಸತ್ಯವಾಗಿಯೂ ಕಳಂಕವಿಲ್ಲ ಎಂದರೂ ಗಂಡನಿಗೆ ತೃಪ್ತಿ ಇಲ್ಲ. ಆತ ಹೇಳುತ್ತಾನೆ.

“ನಿನ್ನ ಸತ್ಯ ನಿನ್ನ ಹತ್ತಿರ ಇದ್ದರೆ,
ಮುಟ್ಟಿ ಬಾ ಹುಂತಿನ ಸರುಪನ”.

ಎಂದಾಗ ಉತ್ತರದೇವಿ ಎಷ್ಟು ಸತ್ಯವಂತೆಯಾಗಿದ್ದರೂ ಬೆದರುತ್ತಾಳೆ. ಜೀವಂತ ಹಾವನ್ನು ಮುಟ್ಟುವ ಧೈರ್ಯ ಮಾತ್ರ ಅವಳಿಗೆ ಇಲ್ಲ. ಕಳವಳಗೊಳ್ಳುತ್ತಾಳೆ. ಆದರೆ ಗಂಡನಿಗೆ  ಎದುರಾಡುವಂತಿಲ್ಲ. ಸತ್ಯದ ಪರೀಕ್ಷೆ ಮಾಡ ಹೊರಟ ಗಂಡನಿಗೆ ಕನಿಕರವಿಲ್ಲ.

ಹೆಣ್ಣಿಗೆ ಗಂಡನ ಮನೆಯಲ್ಲಿ ಕಷ್ಟ ಬಂದ ಕೂಡಲೇ ನೆನಪಾಗುವುದು ತವರಿನ “ತಾಯಮ್ಮ” ಅವಳ ತಾಯಿ, ಮಗಳು ಇದ್ದಕ್ಕಿದ್ದಂತೆ ಬಂದುದನ್ನು ಕಂಡು ಆಶ್ಚರ್ಯಪಡುತ್ತಾಳೆ.

“ಎಂದು ಬಾರದ ಉತ್ತರದೇವಿ ಇಂದೇನು ಬಂದೀಯೆ
ಬಂದ ಕಾರಣದ ಒದಗ್ಹೇಳು”

ಎಂದಾಗ ಉತ್ತರ ದೇವಿ ತನ್ನ ಗಂಡ ತನ್ನ ಶೀಲದ ಮೇಲೆ ಅನುಮಾನ ಪಟ್ಟಿದ್ದನ್ನು ಹೇಳೀದಾಗ ಅವಳೂ ಸಹಜವೆಂಬಂತೆ ಹೇಳಿಬಿಡುತ್ತಾಳೆ “ನಿನ್ನ ಸತ್ಯ ನಿನ್ಹತ್ರ ಇದ್ದೀರೆ ಮುಟ್ಟಿಬಾ ಹೆಣ್ಣೇ ಹುಂತಿನ ಸರುಪನ ” ಎಂದು.  ತಾಯಮ್ಮನಿಗೆ ತನ್ನ ಮಗಳ ಮೇಲೂ ನಂಬಿಕೆ ಉಂಟು,  ಹುತ್ತದ ಸರ್ಪದ ಮೇಲೂ ನಂಬಿಕೆ ಉಂಟು. ಆಗ ಉತ್ತರದೇವಿ ತನ್ನ ತಂದೆಗೆ ಹೇಳುತ್ತಾಳೆ. ತಂದೆಯಿಂದಲೂ ಅಂಥದ್ದೇ ಮಾತು, ಅಣ್ಣನಿಂದಲೂ ಅಂಥದ್ದೇ ಮಾತು ಕೇಳಿದ ಉತ್ತರದೇವಿಯನ್ನು ಈಗ ಹುಂತಿನ ಸರ್ಪವೇ ಕಾಯವೇಕು.

“ಅಷ್ಟೊಂದ ಮಾತ ಕೇಂಡಳುತ್ತರದೇವಿ
ಹೋದಳೇ ಹುಂತದ ಬುಡಕಾಗಿ ಉತ್ತರದೇವಿ
ಮ್ಯಾದುಲಿ ಸೆರಗ್ಹಾಸಿ ನಿಲುವಳು”

ತನ್ನವರೆಲ್ಲ ತನ್ನ ಕೈಬಿಟ್ಟ ಮೇಲೆ ಉತ್ತರದೇವಿ ಒಂದೇ ಮನದಿಂದ ನಾಗಪ್ಪನನ್ನೇ ಧ್ಯಾನಿಸುತ್ತ, ಹುತ್ತದ ಬಳಿಯಲ್ಲಿ ತನ್ನ ಸೆರಗೊಡ್ಡಿ ಕೇಳಿಕೊಳ್ಳುತ್ತಾಳೆ.

ನನ್ನ ಸತ್ಯ ನನ್ಹತ್ರ ಇದ್ದೀರೇ
ಹುಂತಿನ ಸರ್ಪ ಹೆರಗ್ಹೆಯ್ಟ ಎಂದ್ಹೇಳಿ
ಮ್ಯಾದುಲಿ ಸೆರಗ್ಹಾಸಿ ನಿಲುವಳು”