ಆಗ ಹುತ್ತದ ಸರ್ಪ ಹೊರಗೆದ್ದು ಬರುತ್ತದೆ, ಹೆಡೆಯಾಡಿಸುತ್ತ. ಅದನ್ನು ಕಂಡದ್ದೇ ಉತ್ತರದೇವಿಯ ಭಯವೂ ಮಾಯವಾಗುತ್ತದೆ. ಹಳದಿಯಹೆಡೆಯನ್ನು ಆಡಿಸುತ್ತ ಬಂದ ಸರ್ಪ ಅವಳಿಗೆ ಕೇದಗೆಯ ಹೂವಂತೆ ಕಾಣುತ್ತದೆ.  ಅ ಸರ್ಪವನ್ನು ಕೇದಗೆಯ ಹೂವಿನಂತೆ ತನ್ನ ಮುಡಿಯಲ್ಲಿಟ್ಟುಕೊಂಡು ಸೀದ ತನ್ನ ಮನೆಗೆ ಹೋಗುತ್ತಾಳೆ. ಮನೆಯ ಹೊಸ್ತಿಲ ಬಳಿ ನಿಂತು,

“ಯಾರಮ್ಮ ಮನೆಯಲ್ಲಿ, ಯಾರಮ್ಮ ಮಠದಲ್ಲಿ ನಾ ಹೊತ್ತ ಹೊರೆಯ ಇಳಿಸೀನಿ” ಎಂದು ಕರೆಯುತ್ತಾಳೆ.  ಒಳಗಿದ್ದ ಗಂಡನಿಗೂ ಇದು ಕೇಳಿಸುತ್ತದೆ. ಹೆಂಡತಿ ಹೊತ್ತು ತಂದ ಹೊರೆಯ ಅರಿವಿಲ್ಲದೇ

“ಗೌಡೀರೇ ತೋತ್ಯೇರೆ ಎತ್ತೆಲ್ಲ ಹೋದಿರಿ ಸತ್ತಿ ಹೊತ್ತ ಹೊರಿಯ ಇಳುಹೀನಿ” ಎಂದು ಕೆಲಸಗಾರರನ್ನು ಕರೆಯುತ್ತಾನೆ. ಆಗ ಉತ್ತರದೇವಿ,

“ಗೌಡಿಯರು ತೊತ್ಯಾರು ಇಳಿಸುವ ಹೊರಿಯಲ್ಲ ಪುರುಷರು ಬಂದ್ಹೋರಿಯ ಇಳಿಸಲಿ”  ಎಂದು ಅವಳ ಪುರುಷ ಹೊರಗೆ ಬಂದು ನೋಡುತ್ತಾನೆ. ಸತಿ ಹೊತ್ತ ಹೊರೆ ಅಂತಿಂಥ ಹೊರೆಯಲ್ಲ. ಸಾಕ್ಷಾತ ಹೆಡೆಯಾಡಿಸುತ್ತ ಕುಳಿತ”ಸರುಪನ”ನನ್ನು ಕೇದುಗೆಯಂತೆ ಮುಡಿಯ ಮೇಲಿಟ್ಟುಕೊಂಡು ತನ್ನ ಸತಿ ಹೊರೆ ಇಳಿಸಿ ಎನ್ನುತ್ತಿದ್ದಾಳೆ. ಗಾಬರಿಯಾಗಿರಬೇಕು ಪುರುಷನಿಗೆ. ಮುಟ್ಟುವುದಿರಲಿ, ಅದನ್ನು ನೋಡಲೂ ಭಯಪಟ್ಟಿರಬೇಕು ಆತ. ಕೂಡಲೇ ಕೈಮುಗಿದು ಹೇಳುತ್ತಾನೆ.

“ನಿನ್ನಾ ಸತ್ಯವೆ ನಿನ್ಹತ್ರ ಬಿಟ್ಟೇ ಹುಂತಿನ ಸರುಪನ” ಎಂದು. ಸತಿಗೆ ತನ್ನ ಪುರುಷನ ಮೇಲೇನೂ ದ್ವೇಷವಿಲ್ಲ. ತನ್ನ ಸತ್ಯ ಗೆದ್ದಿತುಎಂಬ ಸಂತೋಷವೊಂದೇ ಅವಳಲ್ಲಿ. ಗಂಡ ಹೇಳಿದಂತೆ ಉತ್ತರದೇವಿ ಮತ್ತೆ ಹುತ್ತದ ಬಳಿ ಬಂದು ನಿಂತು “ನಾಗಪ್ಪನಾದರೆ ಹೋಗಪ್ಪ ಹುಂತಿಗೆ” ಎನ್ನುತ್ತಾಳೆ. ಅವಳಿಗೀಗ  ತನ್ನ ಸತ್ಯಕ್ಕೆ ಸಾಕ್ಷಿ” ಹೇಳಿದ ನಾಗಪ್ಪನ ಮೇಲೆ ಬಹಳ ಪ್ರೀತಿ. “ಬಾರಪ್ಪ ಸುಗ್ಗೀ ಬೆಳೆ ಮುಂದೆ ನಾಗಪ್ಪ ನಾಗಮಂಡಲವ ಕೊಡಿಸೂವೆ” ಎಂದು ತನ್ನ ಕೃತಜ್ಞತೆಯನ್ನು ತೋರುತ್ತಾಳೆ ಉತ್ತರದೇವಿ.

ಈಸೂರಯ್ಯ :

ಈ ಹಾಡು ಅತ್ತಿಗೆಗಾಗಿ ಹಂಬಲಿಸಿದ ಮೈದುನನ ಹಾಡು, ಅತ್ತಿಗೆ ಮನೆಗೆ ಮೈದುನ “ಈಸೂರಯ್ಯ” ಬರುತ್ತಾನೆ. ತನ್ನ ಪ್ರೇಮವನ್ನು ನಿವೇದಿಸಿಕೊಳ್ಳುತ್ತಾನೆ. ಆದರೆ ಅತ್ತಿಗೆಗೆ ಮನವಿಲ್ಲ. ಅವನನ್ನು ನಿವಾರಿಸಿಕೊಳ್ಳಲಿಕ್ಕಾಗಿ “ಸಾಧ್ಯವಾಗದ ಕೆಲಸ”ವೊಂದನ್ನು ಹೇಳಿ, ಅದನ್ನು ಮಾಡಿದರೆ ಮಾತ್ರ ತಾನು ಒಲಿಯುವೇನು ಎನ್ನುತ್ತಾಳೆ.

“ನಾ ಕದ ತಗಿಕಿದ್ರೆ ನೀನೊಳಗೆ ಬರಕಿದ್ರೆ
ಈಗೀನ ನೆಟ್ಟ ಹೊಸ ಹೂಗು
ಈಗೀಗ ನೆಟ್ಟ ಹೊಸ ಹೂಗು ತಂದರೆ
ಸಂಶಿಲ್ಲದೇ ಕದವ ತೆರೆವನು ತಾನು”

ಎಂದು ಈಸೂರಯ್ಯ ಅಸಾಧ್ಯವಾದ ಕೆಲಸವನ್ನು ಮಾಡಲು ಹೊರಡುತ್ತಾನೆ.

ಈಸೂರಯ್ಯ, ಹತ್ತಲಾಗದ ಗುಡ್ಡ ಹತ್ತಿ ಹೋಗಿ, ಮೀಸಲಾರದ ಗುಂಡಿಮೀಸಿಹೋಗಿ, ಶೀಂಗಿ ಮುಳ್ಳೋಳಗೆ ಬಗದು ಹೋಗಿ, ಜೋಯಿಸರನ್ನು ಕಂಡುತಾ ಬಂದ ಕಾರಣ ಹೇಳುತ್ತಾನೆ.

ಅವನಿಗೂ ಗೊತ್ತು, ಈಗ ನೆಟ್ಟ ಗಿಡದಲ್ಲಿ ಈಗಲೇ ಹೂ ಬಿಡುವುದು ಸಾಧ್ಯವಾಗದ್ದು ಎಂದು. ಆದರೆ ಅಲೌಕಿಕ ಮಾಂತ್ರಿಕ ಶಕ್ತಿಯಿಂದ ಅಗದ್ದನ್ನು ಆಗ ಮಾಡುವ  ಜೋಯಿಸರ ಮೇಲೆ ಅವನಿಗೆ ನಂಬಿಕೆ.

ಈಸೂರಯ್ಯ ಎಲ್ಲವನ್ನೂ ಹೇಳುತ್ತಾನೆ. ಅತ್ತಿಗೆಯಲ್ಲಿ ತನ್ನ ಮನೆ ನೆಟ್ಟದ್ದು, ಅತ್ತಿಗೆ ಶರ್ತ… ಆಗ …

ಮೆತ್ಹತ್ತಿ ಮ್ಯಾನೆ ನಡೆದರು ಜೋಯಿಸರು.ಲ
ನಾಗಬೆತ್ತಗಳ ತೆಗೆದರು…
ತಂತ್ರ (ಮಂತ್ರ)ಗಿಂಡಿಗಳ ಹಿಡಿದರು…
ಹೂವಿನ ವನಕೆ ನಡೆದರು…”

ಎಲ್ಲ ಹೂಗಳ ರೆಂಬೆ ಮುರಿದು ನೆಟ್ಟು, ಮಂತ್ರದಿಂದ ಹೂ ಬರಿಸಿ ಈಸೂರಯ್ಯನಿಗೆ ಕೊಡುತ್ತಾರೆ. ಅದನ್ನು ತಂದು ಈಸೂರಯ್ಯ ಅತ್ತಿಗೆಗೆ ಕೊಟ್ಟಾಗ ಆಕೆ ಉಪಾಯವಿಲ್ಲದೇ ಅವರನ್ನು ಒಳಗೆ ಸೇರಿಸುತ್ತಾಳೆ. ತಮಾಷೆ ಎಂದರೆ ಮೈದುನ ಅತ್ತಿಗೆಯರ ಅನೈತಿಕ ಸಂಬಂಧವನ್ನು ನೋಡಿಯೂ ನೋಡದಂತೆ ತನ್ನ ಕಣ್ಣು ಕುರುಡು ಮಾಡಿಕೊಂಡ ಮೈದುನನ ಅಮ್ಮ ಒಳಗೆ ನಡೆದ ವಿದ್ಯಮಾನಗಳನ್ನು ತಿಳಿಯದವಳಂತೆ ಸೊಸೆಯ ಹತ್ತಿರ ಯಾರು ಬಂದವರೆಂದು ಕೇಳುವುದು, ಸೊಸೆಯ ಉತ್ತರ, ಕೊನೆಗೂ ಸೊಸೆ, ಅಮ್ಮ ನಿಮ್ಮ ಹಿರಿಯ ಮಗನಲ್ಲ, ಕಿರಿಮಗ ಎಂದಾಗ ಅತ್ತೆ ಯಾರಿಗೆ ಬೈಯ್ಯಬೇಕು. ಕತೆಗಾರ್ತಿ ಹೇಳುತ್ತಾಳೆ-“ಇದೂ ತನ್ನ ಮಗ, ಅದೂ ತನ್ನ ಮಗ. ಬಾಯಿ ಬಿಟ್ಟರೆ ತನ್ನದೇ ಬಣ್ಣ ಗೇಡು. ಹೊಂದಿಕೊಳ್ಳುವುದಪ್ಪ, ಇನ್ನೇನು ಮಾಡುವುದು” ಎಂದು.

ಇಲ್ಲಿ ಗಂಡ ಇನ್ನೂ ಬಂದಿಲ್ಲ. ಸೊಸೆ ಮೈದುನನ್ನು ನಿವಾರಿಸಿಕೊಳ್ಳಲೆಳಸಿದರೂ ಆಗದೇ ಪರಸ್ಥಿತಿಗೆ ಪಕ್ಕಾಗಿದ್ದಾಳೆ. ಅತ್ತೆ ತಿಳಿದೂ ತಿಳಿದೂ ಏನೂ ಮಾಡಲಾಗದವಳಾಗಿದ್ದಾಳೆ. ಇನ್ನು ಗಂಡ ಬಂದು ಏನು ಮಾಡುತ್ತಾನೆ ಎಂಬುವುದನ್ನು ಓದುಗರ ಊಹೆಗೆ ಬಿಟ್ಟಿದ್ದಾರೆ, ಕಥೆಗಾರರು.

ಆರಂಬ ಅಡವೀಲಿ:

ಇದೊಂದು ಮನೆಗೆ ಹೊಸದಾಗಿ ಬಂದ ಸೊಸೆಯ ಕಥೆ. ಆ ಮನೆಗೆ ಹೊಸ ಮದುವಣಗಿತ್ತಿಯ ಗಂಡ ದಂಡಿನಲ್ಲಿ ಕೆಲಸ ಮಾಡುವವನು. ಮದುವೆಯಾಗಿ ಮಡದಿಯನ್ನು ಮನೆಗೆ ಕರೆತರುತ್ತಲೇ ಕರ್ತವ್ಯದ ಕರೆ ಬರುತ್ತದೆ. ಎಳೆಯ ಹೆಂಡತಿಯನ್ನು ಬಿಡಲಾಗದೇ ಬಿಟ್ಟು ಹೋಗುತ್ತಾನೆ.

ಇತ್ತ ಮನೆಯ ಬಾವಿಯಲ್ಲಿ ನೀರಿಲ್ಲ. ಕಾಡಿನಲ್ಲಿರುವ ಕೆರೆಗೆ ಹೋಗಿ ನೀರು ತರಬೇಕು. ಸಹಜವಾಗಿಯೇ ಮನೆಗೆ ಬಂದ ಜವ್ವನಿಗಳಾದ ಸೊಸೆಯೇ ಈ ಕೆಲಸ ಮಾಡಬೇಕಾಗುತ್ತದೆ. ಆದರೆ ಸೊಸೆ ಕಾಡಿಗೆ ಒಬ್ಬಳೇ ಹೋಗಲು ಹೆದರಿಕೆ. ಹಾಡು ಹೀಗೆ ಶುರುವಾಗುತ್ತದೆ.

“ಆರಂಭ ಅಡವಿ ನೀರೆಲೆ ಶಿವನೇ ನೀರಿಗೆ ಹೋಪುಕೆ ಮಾವಯ್ಯ ಬನ್ನಿ”

ಸೊಸೆ ಕರೆಯುತ್ತಾಳೆ ಮಾವನನ್ನು,ಜೊತೆಗೆ ರಕ್ಷಣೆಯಾಗಲು. ಆದರೆ ಮಾವನಿಗೆ ಸೊಸೆಯ ಮೇಲೆ ಕರುಣೆ ಇಲ್ಲ. ಸಿಡುಕಿ ನುಡಿಯುತ್ತಾನೆ-

“ನಿನ್ನ ಗಂಡನ ಅಪ್ಪ ನಾನೇನಲ್ಲ”- ಸುಮ್ಮನೇ ಹೇಳೂವುದೋ… ಅಥವಾ ಹಿರಿಮಗನ ಮೇಲೆ ಅವನಿಗೆ ಅಸಮಾಧಾನ ಇತ್ತೋ ಅಂತು ಅವನ ಬರಲೊಪ್ಪುವುದಿಲ್ಲ. ಆಗ ಸೊಸೆ,

“ಕಣ್ಣಲ್ಲಿ ನೀರ ಸೆಡಿದಾಳಲೇ” ದುಃಖವಾಗುತ್ತದೆ.  ಮಾವನ ಒರಟು ಮಾತು ಕೇಳಿ. ಆಗ ಅತ್ತೆಯ ಬಳಿ ಹೋಗಿ,

“ನೀರಿಗೆ ಹೋಪ ಅತ್ಯಮ್ಮ ಬನ್ನಿ ಕರೆಯುತ್ತಾಳೆ. ಅತತೆಯೂ

“ಅತ್ತೆ ಅಂಬೋ ಹೆಣ್ಣೆ ನೀನು ನಿನ್ನ ಗಂಡನಮ್ಮ ನಾನೇನಲ್ಲ” ಎಂಬು ಬಿಡುತ್ತಾಳೆ. ಆಗ ಹೆಣ್ಣು ಮನೆಯಲ್ಲಿದ್ದ ಅತ್ತಿಗೆಯನ್ನು (ಗಂಡನ ಆಕ್ಕ) ಕರೆಯುತ್ತಾಳೆ.ಅವಳದ್ದೂ ಅದೇ ಪ್ರತಿಕ್ರಿಯೆ. ಉಪಾಯವಿಲ್ಲದೇ ಆ ಸೊಸೆ, ಒಬ್ಬಳೇ ಆರಂಭ ಅಡವಿಗೆ ಬೆಳ್ಳಿಯ ಕೊಡ ಹಿಡಿದು ಸಾಗುತ್ತಾಳೆ. ಕೆರೆಯ ನೀರನ್ನು ಕೊಡದಲ್ಲಿ ತುಂಬಿ ಕೊಳ್ಳುತ್ತಾಳೆ.

ಬೆಳ್ಳಿಯ ದೊಡ್ಡ ಕೊಡ. ತುಂಬಿದ ಕೊಡವನ್ನು ನೆಗೆದುಕೊಡುವವರಿಗೆ ಅತ್ತಿತ್ತ ನೋಡಿದರೆ ಯಾರೂ ಇಲ್ಲ. ಯಾಕೆಂದರೆ ಅದುಆರಂಭ ಅಡವಿ. ಇನ್ನೇನು ಮಾಡಲಿ ಎಂದು ಯೋಚಿಸುತ್ತಿರುವಾಗಲೇ, “ಗಂಡನ ತಮ್ಮ ಮೈದಿನಣ್ಣ ಗೋ ಗಂಟಿ ಬಿಟ್ಟು ಕಾಯುತ್ತ ಇದ್ರು- ಕಣ್ಣಿಗೆ ಬೀಳುತ್ತಾನೆ, ಕರೆಯುತ್ತಾಳೆ. “ಗಂಡನ ತಮ್ಮ ಮೈದಿನಣ್ಣ ತುಂಬಿದ ಕೊಡವ ನೆಗೆಯ ಬನ್ನಿ”- ಎಂದು. ಆಗ ಮೈದುನ ಹೇಳುತ್ತಾನೆ,” ತುಂಬಿದ ಕೊಡನ ನೆಗಿಕಿದ್ರೆ ನನಗೇನು ಉಡಗರಿ ಕೊಡುತ್ತೀಯ”-ಸೊಸೆ ಮೈದುನನ ಈ ಮಾತನ್ನು ತಮಾಷೆಯಾಗಿ ಗ್ರಹಿಸಿ, “ಅರ್ಧ ಆಸ್ತಿ ಬರೆದೇ ಕೊಡ್ತೆ; ಎನ್ನುತ್ತಾಳೆ. ಆಗ ಮೈದುನ, “ಅರ್ಧ ಆಸ್ತಿ ನನಗೇನು ಬೇಡ ನಾನ್ಹೇಳೀದ ಮಾತಿಗೆ ಒಲಿಯಬೇಕು”- ಎಂದಾಗ ಆತನ ಮನದಿಂಗಿತ ಅರ್ಥವಾಗುತ್ತದೆ. ಬೆದರುತ್ತಾಳೆ.  ಧೈರ್ಯ ತಂದುಕೊಂಡು, ಅಣ್ಣನ ಹೆಂಡತಿ ತಾಯಿಗೆ ಸಮಾನ, ಅದಕ್ಕಾಗಿ ತನ್ನ ತಂಗಿಯನ್ನು ಧಾರೆ ಎರೆದು ಕೊಡುತ್ತೇನೆ ಎಂದು ಹೇಳಿದರೂ ಮೈದಿನಣ್ಣ ಒಪ್ಪುವುದಿಲ್ಲ. ಸೊಸೆಗೆ ಗೊತ್ತಾಗುತ್ತದೆ. ಈಕಾಡಿನ ಮಧ್ಯದಲ್ಲಿ ಅವನೊಂದಿಗೆ ವಾದ ಮಾಡುವುದಕ್ಕಿಂತ, ಈಗ ನೀರು “ನೆಗೆಸಿ” ಕೊಳ್ಳಬೇಕಾದ ಅಗತ್ಯವಿದೆ ಎಂದು ಅದಕ್ಕಾಗಿ ಏನೋ ಅವಳು,

“ಈ ನೂರೊಂದು ಗೋಗಂಟಿ
ಕೊಟ್ಟಿಗೆಯಲ್ಲಾರೂ ಕೊಡಿಕೆ ಬನ್ನಿ
ಸಂಜೀಯ ಹೊತ್ತಿಗೆ ಮೆತ್ಹತ್ತಿ ಬನ್ನಿ”

ಎಂದು ಕಣ್ಣೀರು ಕರೆಯುತ್ತ ಹೇಳುತ್ತಾಳೆ. ಮೈದುನ ಪ್ರಸನ್ನನಾಗಿ ತುಂಬಿದ ಕೊಡವನ್ನು ಎತ್ತಿಕೊಟ್ಟ. ನೀರು ತುಂಬಿದ ಸೊಸೆ, ಕಣ್ಣೀರು ತುಂಬಿಕೊಂಡೇ “ಮೆತು” ಹತ್ತುತ್ತಾಳೆ. ದಂಡಿಗೆ ಹೋದ ಗಂಡನ ಚಿತ್ರ ಕಂಡು ಕಣ್ಣೀರು ಹಾಕುತ್ತಾಳೆ.

ದನಕರುಗಳನ್ನು ಕೊಟ್ಟಿಗೆಯಲ್ಲಿ ಕೂಡಿ ಬಂದ ಮೈದುನ ಸೀದ ಉಪ್ಪರಿಗೆ ಹತ್ತಿ ಅತ್ತಿಗೆಯ ಕೋಣೆಯ ಬಾಗಿಲನ್ನು ಬಡಿಯುತ್ತಾನೆ. ಅತ್ತಿಗೆ ಕಾಡಿನಲ್ಲೇನೋ ಹೇಳಿದಳು, ಮೇತ್ತಿನ ಮೇಲೆ ಬನ್ನಿ” ಎಂದು ಆದರೆ ಅವಳ ಇಚ್ಛಯಾಗಿರಲಿಲ್ಲ. ಈಗ ಮೈದುನ ಬಂದು ಬಾಗಿಲ ಬಡಿದಾಗ ಮತ್ತೇ ಹೇಳುತ್ತಾಳೆ.

“ಹಿರಿಯ ಅಣ್ಣನ ಮಡದೀ ಕಾಣಿ
ಹೆತತ ತಾಯಿಗೆ ಸರಿಯೇ ಕಾಣಿ
ಪತಿವೃತಿ “ಸರ” ಕೆಡಿಸಬೇಡಿ

ಎಂದು ಗೋಗರೆಯುತ್ತಾಳೆ. ಆದರೆ ಮೈದುನ ಅತ್ತಿಗೆಯ ಮಾತನ್ನು ಕೇಳುವುದಿಲ್ಲ. ಆಗ ಅತ್ತಿಗೆ “ಸ್ವಲ್ಪ ತಡೆದು ಬನ್ನಿ ನೀವು” ಎಂದು ಸಧ್ಯಕ್ಕೆ ಅವನನ್ನು ಕೆಳಗೆ ಕಳೂಹಿಸಿ ಅಳುತ್ತ ಕುಳಿತುಕೊಳ್ಳುತ್ತಾಳೆ. ಪತಿವೃತೆ ಹೆಣ್ಣಿನ ಅಳಲು ದಂಡಿನಲ್ಲಿರುವ ಗಂಡನಿಗೆ ಮುಟ್ಟುತ್ತದೆ.  ದಂಡಿಗೆ ಹೋದ ಗಂಡನಿಗೆ ಕೆಟ್ಟ ಸ್ವಪ್ನ ಬಿದ್ದದ್ದೇ  ದಿಡ್ಡಗ್ಗನೆದ್ದು ಹೊರಟೇ ಬಿಟ್ಟ. ಅವನಿರುವ ಸ್ಥಳದಿಂದ ತನ್ನ ಊರಿಗೆ ಬರಲು ಸಾಮಾನ್ಯವಾಗಿ ಮೂರುದಿನದ ದಾರಿ. ಆದರೆ ಕೆಟ್ಟ ಸ್ವಲ್ಪ ಬಿದ್ದು ಆತಂಕಿತನಾದ ಅವ ಮನೋವೇಗದಲ್ಲಿ ಧಾವಿಸಿ ಬರುತ್ತಾನೆ. ಬಂದವ ಸೀದ ಮಡದಿ ಮಲಗಿರುವ ಉಪ್ಪರಿಗೆಯತ್ತ ಹೋಗಿ ಬಾಗಿಲ ಬಳಿ ನಿಂತು ಬಾಗಿಲು ಬಡಿಯುತ್ತಾನೆ.

“ಮೆತ್ತಿನ ಮೇಲೆ ನಡೆದನಲೇ”
ಬಾಗಿಲನಾರೂ ತೆಗಿಯೇಹೆಣ್ಣೇ”

ಎನ್ನುತ್ತಾನೆ. ಆವನ ಮಡದಿಗೆ ಬಾಗಿಲುಬಡಿಯುತ್ತಿರುವುದು ತನ್ನ ಗಂಡನೆಂದುತಿಳಿಯುವುದೇ ಇಲ್ಲ. ಮೈದುನನೇ ಬಂದು ಎಂದುಕೊಂಡು ಮತ್ತೇ ಮೊದಲಿನಂತೆ

“ಹಿರಿಯ ಅಣ್ಣನ ಮಡದೀ ಕಾಣಿ
ಹೆತ್ತ ತಾಯಿಗೆ ಸರಿಯೇ ಕಾಣಿ
ಪತಿವೃತಿ ಸರ ಕೆಡಿಸ ಬೇಡಿ”

ಎಂದು ಹೇಳಿದಾಗ ಅವಳ ಗಂಡನಿಗೆ ಎಲ್ಲ ಅರ್ಥವಾಗುತ್ತದೆ.

ಮೈದಿನಣ್ಣ ಅಲ್ಲ ಹೆಣ್ಣೆ
ನಿನ್ನ ದಂಡಿನ ಗಂಡ ಕಾಣೇ
ಬಾಗಿಲಾರು ತೆಗೆಯೇ ಹೆಣ್ಣೇ”

ಅಂದಾಗ ಅವಳ ಸಂತೋಷಕ್ಕೆ ಪಾರವಿಲ್ಲ. ಬಾಗಿಲು ತೆಗೆಯುತ್ತಾಳೆ., ಗಂಡನ ಬಳಿ, ಆದಿನ ತಾನು ನೀರಿಗ್ಹೋಗುವ ಮೊದಲುಗೊಂಡ ನಡೆದ ಘಟನೆಯನ್ನೆಲ್ಲ ಮತ್ತೊಮ್ಮೆ ಹೇಳುತ್ತಾಳೆ. ಕೇಳಿದ ಗಂಡ ಕೆರಳಿ, “ದಂಡಿನ ಕತ್ತಿ” ತೆಗೆದವನೇ ತಂದೆ, ತಾಯಿಯನ್ನು ಕೊಂದು ಬಿಡುತ್ತಾನೆ. ಹಾಗೆಯೇ ಅಕ್ಕನ ಕೋಣೆಗೂ ಹೋಗಿ ಅವಳನ್ನು ಮುಗಿಸಿದವ ಕೊನೆಗೆ ತಮ್ಮನ ಕೋಣೆಗೆ ಹೋಗುತ್ತಾನೆ. ತಮ್ಮ ಹೊತ್ತಲ್ಲದ ಹೊತ್ತಿನಲ್ಲಿ ಅಣ್ಣನನ್ನು ಕಂಡು ಗಾಬರಿಯಾಗಿ  ಕೇಳುತ್ತಾನೆ.ಯಾವಾಗ ಬಂದೆ ಎಂದು. ತನ್ನ ತಂದೆ, ತಾಯಿ, ಅಕ್ಕನ ವಿಚಾರವನ್ನು ತಿಳಿಸಿ ಈಗ ತಮ್ಮನನ್ನು ವಿಚಾರಿಸಿಕೊಳ್ಳಲೆಂದು ಬಂದೆ ಎಂದಾಗ, ಅ ತಮ್ಮ “ನೀ ದಂಡಿಗೆ ಹೋಗಿ ಆರೇಳು ವಷೃ ನಿನ ಮಡದಿಯ ಸತ್ಯ ಪರೀಕ್ಷೆ ಮಾಡಿದೆ ನಾನು… ಎಂದು ಬಿಟ್ಟಾಗ ತಂದೆ, ತಾಯಿ, ಅಕ್ಕನನ್ನು ನಿರ್ದಾಕ್ಷಿಣ್ಯವಾಗಿ ಕೊಂದ ಅಣ್ಣ ತಮ್ಮನನ್ನು ನಂಬುತ್ತಾನೆ, ಜೊತೆಗೆ ಮಡದಿಯ ತಂಗಿಯಾದ ಪಾರ್ವತಿಯನ್ನು ಧರ್ಮಕ್ಕೆ ಧಾರೆ ಎರೆದು ಕೊಡುತ್ತಾನೆ.

ಬಂಜೆಂಬ ಹೆಸರು ತಪ್ಪಾದು ನೋಡ :

ಈ ಹಾಡು ಬಂಜೆಯೊಬ್ಬಳ ಅಳಲಿನ ಹಾಡು. ಅವಳು ಬಂಜೆಯಾದುದಕ್ಕೂ ಒಂದು ಕಾರಣ ಉಂಟು. ಅವಳು ಮುಟ್ಟಿನ ಮೈಲಿಗೆಯಲ್ಲಿರುವಾಗಲೇ ನಾಗನ ಕೆರೆಯಲ್ಲಿ ಮುಳುಗಿ ಮಿಂದುದೇ ಅವಳು ಮಾಡಿದ ಘೋರ ಅಪರಾಧವಾಗಿತ್ತು. ಆಗ ಕೆರೆಯಲ್ಲಿದ್ದ ಮಹಾಶೇಷನಿಗೆ ಮೈಲಿಗೆಯಾಗುತ್ತದೆ.

ಕರಾವಳಿ ಕರ್ನಾಟಕದಲ್ಲಿ “ನಾಗದೇವ”ರೆಂದರೆ ಶುದ್ಧತೆ ಪ್ರತಿರೂಪ. “ನಾಗನ ನಡೆ” ಇರುವಲ್ಲಿ, “ನಾಗನ ಶಿಲೆ”ಇರುವಲ್ಲಿ ನಾಗನು ಇರುವನೆನ್ನಲಾದ ಕೆರೆಯಲ್ಲಿ ಸ್ವಲ್ಪ ಮಟ್ಟಿನ ಅಶುದ್ಧತೆಯಾದರೂ ಅಲ್ಲಿ ನಾಗ ಕಾಣಿಸಿಕೊಳ್ಳುತ್ತಾನೆ. ಮತ್ತು ದೋಷಕ್ಕೆ ಕಾರಣರಾದವರಿಗೆ ಶಾಪ ಕೊಡುತ್ತಾನೆ ಎಂದು ರೂಢಿಯಿಂದ ನಂಬಿಕೊಂಡು ಬಂದ ನಂಬಿಕೆ ಇಲ್ಲಿಯವರಿಗಿದೆ. ಈ ಹಾಡಿನಲ್ಲೂ ಸಹ ಅದನ್ನೇ ಪ್ರತಿಪಾದಿಸಲಾಗಿದೆ.

ಮುಗಟದೇವರ ಸೊಸೆಯಾದರೂ, ಮೈಲಿಗೆಯಲ್ಲಿ ಬಂದು ನಾಗನಕೆರೆಯಲ್ಲಿ ಮಿಂದದ್ದನ್ನು ತಿಳಿದು,ಕೆರೆಯಲ್ಲಿದ್ದ ನಾಗ ಸುಮ್ಮನಿರುವುದಿಲ್ಲ. ಆ ನಾಗ ದೇವನಾದರೂ ಎಂಥವನು, ಏಳು ಹೆಡೆಯ ಶೇಷನಲ್ಲ, ಹದಿನಾಲ್ಕು ಹೆಡೆಯ ಶೇಷನೂ ಅಲ್ಲ.ಆತ ಎಪ್ಪತ್ತು ಹೆಡೆಯ ಮಹಾಶೇಷ.

“ಎಪ್ಪತ್ಹೆಡೆಯ ಮಾಶೇಷ
ಭೋರ್‌ಗುಟ್ಕಂಡ್ ಎದ್ದಿತ್
ಬುಸ್ ಗುಟ್ಕ ಏದ್ದಿತ್’

ಅದನ್ನು ಕಂಡು ಆ ಹೆಣ್ಣು ತಾನು ಮುಗಟ ದೇವ್ರ ಮಗಳು, ಅಗಟದೇವ್ರ ಸೊಸಿ, ಸರ್ವದೇವ್ರ ಮಡದಿ ಎಂದು ತನ್ನ ದೊಡ್ಡಸ್ಥಿಕೆಯನ್ನು ಹೇಳುತ್ತಾಳೆ. ಆದರೆ ಅ ಮಹಾಶೆಷನ ಎದುರು ಯಾರಾದರೂ ದೊಡ್ಡವರು  ಇದ್ದಾರೆಯೇ?

“ನೀನ್ ಮುಗುಟ ದೇವ್ರಿಗೆ ಮಗಳಾರೆ
ನಿನ್ನ ಕಚ್ಚಿ ಕೊಲುವೆನೆಂದಿತು
ನಿನ್ ಅಗಟ ದೇವ್ರಿಗೆ ಸೊಸಿಯಾರೆ
ನಿನ್ನ ಹೊಡೆದು ಕೊಲುವೆನೆಂದಿತು
ನಿನ್ನ ಸರ್ವಾದೇವ್ರಿಗೆ ಮಡ್ಡಿಯಾರೆ
ನಿನ್ನ ಬಡಿದು ಕೊಲುವೆನೆಂದಿತು:
ನೀ ಹೊರಿದಿದ್ ಬಂಜ್ಯಾಗೆಂದ್ಹೇಳಿ
ನೀ ಕಟ್ಟು ಬಂಜ್ಯಾಗೆಂದ್ಹೇಳಿ
ಆದು ಮೂರು ಶಾಪ ಕೊಟ್ಟೀತು”

ಈ ಭಯಂಕರ ಶಾಪಕ್ಕೆ ಬೆದರಿ ಹೋದಳು. ಚಿಂತಾಕ್ರಾಂತಳಾದಳು. ಮನೆಗೆ ಬಂದವಳು “ಜಾನದಲ್ಲೇ ಧ್ಯಾನಿಸುತ್ತ ಒರಗೀಳು” ಆಗ ಅವಳ ತಂದೆ ಬರುತ್ತಾರೆ. ಮಗಳ ಚಿಂತಾಕ್ರಾಂತ ಮುಖವನ್ನು ಕಂಡು ಏನಾಯ್ತು ಮಗಳೇ  ಹೇಳು ಎನ್ನುತ್ತಾರೆ. ಆಗ ಮಗಳು ನಡೆದದ್ದನ್ನೆಲ್ಲ ಮತ್ತೊಮ್ಮೆ ಕಣ್ಣಿಗೆ ಕಟ್ಟುವಂತೆ ಹೇಳುತ್ತಾರೆ.

ಆದರೆ ಮುಗುಟದೇವ್ರು ಆ ಶಾಪವನ್ನು ಪರಿಹರಿಸಿಕೊಳ್ಳೋಣ. ಹೆದರಬೇಡ ಅನ್ನುತ್ತಾರೆ. ಶಾಪದ ಪರಿಹಾರವನ್ನು ತಾವೇ ನಿರ್ಣಯಿಸಿಕೊಳ್ಳುತ್ತಾರೆ

“ಅವ್ರು ನಾಗರ ಕೆರಿಯ ಕಟ್ಸೀರು
ಅವ್ರು ಬೀದೀಗ ಹೊನ್ನ ಹೊಯ್ಸೀರು
ಅವ್ರ ಹಾದೀಗ ಅಕ್ಕಿ ಬಿಕ್ಸೀರ್”

ಶ್ರೀಮಂತರು ಅವರು, ಹಣ ಬಿಕ್ಕಿ, ಹೊನ್ನ ಬಿಕ್ಕಿ, ಅಕ್ಕಿ ಬಿಕ್ಕಿ ಪಾಪಪರಿಹರ ಮಾಡಿಕೊಳ್ಳಬಹುದು ಎಮದು ಕೊಂಡಿದ್ದರು. ಆದರೆ ಆವರು ಕೊಟ್ಟದ್ದು ಸ ಸ್ವೀಕೃತವಾದರೆ ಮಾತ್ರ ಫಲ” ದೊರಕೀತು,ಇಲ್ಲಿ ದಾನ ಸ್ವಿಕೃತವಾಗುವುದೇ ಇಲ್ಲ.

ನೂರೊಂದು ಗೋವುಂಟಿಗಳು ಬಾಯಾರಿ ಹೊಸದಾಗಿ ಕಟ್ಟಿದ ನಾಗರ ಕೆರೆಗೆ ಬರುತ್ತವೆ.

ನೂರೊಂದು ಗೋ ಗಂಟಿ
ಬಾಯ್ರಿಗೆ ಕೆರಿಗೆ ಅರಗಿದೋ”

ಇನ್ನೇನು ನೀರು ಕುಡಿಯಬೇಕೆನ್ನುವಾಗ ಒಂದು ದನಕ್ಕೆ ಗೊತ್ತಾಗುತ್ತದೆ.

“ಇದು ಹುಟ್ಟ ಬಂಜಿ ಕಟ್ಟಿದ್ ಕೆರಿ
ಈ ನೀರ ಕುಡಿಯಲು ಬಾರ(ದು)”

ಅಂದದ್ದೇ ತಡ ಎಲ್ಲ ದನಗಳು ನೀರು ಕುಡಿಯದೇ ತಿರುಗಿ ಹೋಗಿಬಿಡುತ್ತವೆ.

ಆದೇ ರೀತಿ ನೂರೊಂದು ಜನ ಜೋಗಿಯವ್ರ

“ಬೇಡಿ ತಿಂಬುಕೆ ಹೊರಟೀರಲೆ
ಬಿದೀಲ್  ಹೊನ್ನೇ ಬಿದ್ದೀತಲೆ
ಮುಷ್ಟಿ ಹೊನ್ನ ಹೆಕ್ಕಂಡ್ ಹೋಪ”

ಅಂದುಕೊಳ್ಳುವಷ್ಟರಲ್ಲಿ ಒಬ್ಬ ಜೋಗಿಗೆ ಗೊತ್ತಾಗುತ್ತದೆ ಇದು ಕಟ್ಟು ಬಂಜಿ ಹೊಯ್ಸೀದ ಹೊನ್ನು

ಇದನ್ಹಾರು ಹೆಕ್ಕಲು ಬಾರ(ದು)” ಆಗ ಉಳಿದೆಲ್ಲ ಜೋಗಿಗಳು ಕೈಯಿಂದ ಹೊನ್ನನ್ನು ಮುಟ್ಟದೇ ಹೋಗುತ್ತಾರೆ. ಇದೇ ರೀತಿ ನೂರೊಂದು ಗಿಳಿ ಹಿಂಡು ಬೀದಿಯಲ್ಲಿ ಬಿದ್ದ ಅಕ್ಕಿಯನ್ನು ನೋಡಿ ಕೆಳಗೆ ಇಳಿಯುತ್ತವೆ.

“ಹಾದಿಲ್ ಅಕ್ಕಿ ಬಿದ್ದೀತಲೆ
ಅದನ್ನಾರು ಹೆಕ್ಕಿ  ತಿಂಬೋ” ಇದಕ್ಕೂ ಒಂದು ಹಕ್ಕಿ ಅಡ್ಡ ಬಮದು
“ಹೊರೆದಿದ್ದ ಬಂಬಿ ಬಿಕ್ಕೀದ  ಅಕ್ಕಿ
ಅದನ್ಯಾರು ಹೆಕ್ಕಲು ಬಾರ(ದು)”

ಎಂದಾಗ ಎಲ್ಲ ಗಿಳಿಗಳು ಒಂದು ಕಾಳು ಅಕ್ಕಿಯನ್ನು ಮುಟ್ಟದೇ ಹಾರಿಹೋಗುತ್ತವೆ.

ಹಾಗಾಗಿ ಅವಳು:” ಮುಗುಟದೇವ್ರ ಮಗಳಾದರೂ ಆಗಟದೇವ್ರ ಸೋಸಿಯಾದ್ರೂ, ಸರ್ವದೇವ್ರ ಮಡದಿಯಾದ್ರೂ, ನಾಗರ ಕೆರಿಯ ಕಟ್ಸಿದರೂ, ಹಾದೀಗ ಹೊನ್ನ ಹೊಯ್ಸಿದರೂ, ಬೀದೀಗೆ ಅಕ್ಕಿಬಿಕ್ಕಿದ್ದರೂ ನಾಗರ ಶಾಪ ತಟ್ಟೀತು ನೋಡ, ಬಂಜೆಂಬ ಹೆಸರು ತಪ್ಪದು ನೋಡ”.

ಕಡ್ಳಿ ಹೊರ್ದು ಕಂದಯ್ಯಗೆ ಕೊಟ್ಟು… :

ಈ ಕಥೆಯಲ್ಲಿ, ನೀತಿ ಇಲ್ಲದ ಹೆಂಗಸೊಬ್ಬಳು, ಮಗನಿಗೆ ಕಡಲೆ ಹುರಿದುಕೊಟ್ಟು ಹೊರಗೆ ಹೋಗಿ ತಿಂದು ಬರುವಂತೆ ಹೇಳಿ, ವಿಟಪುರುಷನೊಂದಿಗೆ ಸರಸವಾಡುವಾಗಲೇ, ಕಡಲೆ ತಿಂದು ಮುಗಿಸಿದ ಕಂದಯ್ಯ (ಮಗ) ಒಳಗೆ  ಬಂದು ಬಿಡುತ್ತಾನೆ. ಮಾತ್ರವಲ್ಲ, ಒಳಗಿದ್ದ ಪರ ಪುರುಷನನ್ನು ಕಂಡು “ಅಪ್ಪಯ್ಯ:”ನಿಗೆ ಹೇಳುತ್ತೇನೆ ಅನ್ನುತ್ತಾನೆ. ಸಿಕ್ಕಿ ಬೀಳುವ ಹೆದರಿಕೆಯಿಂದ ಆಕೆ ಎಣ್ಣೆ ಹಾಕಿ ಆ ಮಗುವನ್ನು “ಮೀಸಿ” ಮುದ್ದಗರೆದು ಉಪ್ಪರಿಗೆಗೆ ಕರೆದುಕೊಂಡು ಹೋಗಿ ಕತ್ತಿಯಿಂದ ಮೂರು ತುಂಡು ಮಾಡಿ ಮುಚ್ಚಿಡುವ ಭೀಭತ್ಸ ಕೃತ್ಯ ಮಾಡುತ್ತಾಳೆ. ದಂಡಿಗೆ ಹೋದ ಗಂಡನಿಗೆ ಕೆಟ್ಟ ಸ್ವಪ್ನ ಬಿದ್ದು ಮನೆಗೆ  ಓಡಿ ಬಂದು ಮಗನನ್ನು ನೋಡ ಬಯಸಿದಾಗ ಶಾಲೆಗೆ ಹೋಗಿದ್ದಾನೆ, ಆಟಕ್ಕೆ ಹೋಗಿದ್ದಾನೆ ಎಂದು ಸುಳ್ಳು ನೆವ ಹೇಳುವ ತಾಯಿ, ಅಲ್ಲೆಲ್ಲೋ ಮಗನನ್ನು ಕಾಣದೇ, ಉಪ್ಪರಿಗೆಯಲ್ಲಿ ಮಗನ ಶವ ಕಂಡು “ಅಳ್ಳು ಬಳ್ಳು” ಕೂಗಿ,ನಾಗ ಮಂತ್ರ ಸುಳಿದು ಮಗುವನ್ನು ಬದುಕಿಸಿಕೊಂಡು,ಬದುಕಿಬಂದ ಮಗನಿಂದ ವಿಷಯ ತಿಳಿದು ಮಡದಿಯನ್ನೇ ಕೊಂದು ಬಿಡುವ ಕಥೆ ಇದು. ಹೆಚ್ಚು ಕಡಿಮೆ ಇಂಥದ್ದೇ ಕಥೆ ಬಯಲು ಸೀಮೆಯ ಜಾನಪದದಲ್ಲೂ ಇದೆ.

ಇದೇ ಬಗೆಯ ಇನ್ನೊಂದು ಕಥೆ “ಪಟ್ಟಣ ಸೆಟ್ಟಿ ಹೊನ್ನಮ್ಮ”ನ ಕಥೆ. ಕಥೆಯ ಕೊನೆಗೆ ಹೊನ್ನಮ್ಮನನ್ನು ಅನೈತಿಕತೆಯ ಕಾರಣ ಅವಳ ಗಂಡ ಕೊಂದರೂ ಅವಳೂ ಅವಳಾಗಿ ಆ ದಾರಿಯಲ್ಲಿ ಹೋದವಳಲ್ಲ. ಪಟ್ಟಣಸೆಟ್ಟಿ ಎಂಬಾತನ ಕಾಮುಕತೆ, ಹಸಲರ ವೆಂಕಿ ಎಂಬುವಳು ಹೊನ್ನಿನ ಆಸೆಗೆ ಪಟ್ಟಣಸೆಟ್ಟಿಗೆ ಹೊನ್ನಮ್ಮನನ್ನು ಮೋಸದಿಂದ ಒಪ್ಪಿಸಿಕೊಡುವುದೇ ಮುಂತಾದ ಹಿನ್ನಲೆಯಲ್ಲಿ ಈ ಕಥೆ ಸಾಗುತ್ತದೆ.   ಈ ಕಥೆಯ ಕೊನೆಗೆ ಹೊನ್ನಮ್ಮ ಮಾತ್ರವಲ್ಲ ಕಾಮುಕ ಪಟ್ಟಣಸೆಟ್ಟೆ, ಮೋಸಗಾತಿ ಹಸಲರವೆಂಕಿ ಎಲ್ಲರ ರುಂಡವನ್ನು ಚಂಡಾಡುತ್ತಾನೆ ಹೊನ್ನಮ್ಮನ ಗಂಡ.

ಇದೇ ರೀತಿಯ ಕಥೆ ” ಕೊರಮ-ಕೊರತಿ”ಯದು. ಇದರ ಕೊನೆ ಇನ್ನೂ ಭೀಭತ್ಸವಾದದ್ದು. ನೆರೆ ಮನೆಯ ಗೊಲ್ಲನೊಂದಿಗೆ ಓಡಿ ಹೋದ ಕೊರತಿಯನ್ನು ಹಿಡಿದು ಕೊಂದು ಅವಳದ್ದೇ ಮಾಂಸವನ್ನು ಹಂದಿ ಮಾಂಸವೆಂದು ಹೇಳೀ ಅವಳ ತಂದೆ ತಾಯಿಗೆ ಅಡಿಗೆ ಮಾಡಿ ಉಣ್ಣುವಂತೆ ಮಾಡುವುದು.

ಮಲ್ಲಿಗೆ ರಾಯನ ಕಥೆಯಲ್ಲಿ ಮಲ್ಲಿಗೆ ರಾಯ ದಂಡಿಗೆ ಹೋಗುತ್ತಾನೆ. ಅವನ ಮಡದಿ ನೆರೆಯಮನೆಯವನೊಂದಿಗೆ ಸರಸವಾಡುತ್ತಾಳೆ. ಮಲ್ಲಿಗೆ ರಾಯನಿಗೆ ಹೆಣ್ಣು ಹುಲಿ ಗಂಡು ಹುಲಿಯಸ್ವಪ್ನ ಬಿದ್ದು, ಆರು ತಿಂಗಳ ದಂಡವನ್ನು ಮೂರು ತಿಂಗಳಿಗೆ ಸವರಿ ಊರಿಗೆ ಓಡಿ ಬಂದು ಮನೆಯ ಮಂಚದ ಮೇಲಿರುವ ನೆರೆಮನೆಯವನನ್ನು ಮತ್ತು ತನ್ನ ಮಡದಿಯನ್ನು ಕೊಲ್ಲುವುದನ್ನು ಸಾಂಕೇತಿಕವಾಗಿ ಹೇಳುವ ಕಥೆ ಇದು.

ಜೊಗಿ ಜಂಗುಮಾ ಕಥೆಯಲ್ಲಿ ಹೆಣ್ಣೊಬ್ಬಳು ತನ್ನ ಕಾಮನೆಗಳನ್ನು ಪೂರೈಸಿಕೊಳ್ಳಲು ಕಾತರಳಾಗಿ ಶೀಲದ ಪರಿವೇ ಇಲ್ಲದೆ ಹಲುಬುವ ಹಾಡು ಇದು. ಆದರೆ ಆ ಜಂಗಮ ಇದಕ್ಕೆ ಒಪ್ಪದೇ ಹೋಗುವುದು, ಹಾಗೇ ಹೋದ ಜಂಗಮನಿಗೆ ಈ ಹೆಣ್ಣು ಶಾಪ ಹಾಕುವುದು ಕಥೆಯ ವಸ್ತು. ಹಿಂದಿನ ಇಂತಹ ಕಥೆಗಳಲ್ಲಿ ಸಾವು ಹತ್ಯೆ ಸಾಮಾನ್ಯವಾದ ಕೊನೆಯಾಗಿದ್ದರೆ ಇದರಲ್ಲಿ ಮಾತ್ರ ಇಂಥದ್ದೊಂದೂ ಇಲ್ಲದೇ ಇರುವುದು ವಿಶೇಷ.

ಇಂಥ ಕಥೆಗಳ ಸಾಲಿಗೆ ಸೇರದ ಕಥೆಯೆಂದರೆ “ಕಂಪಲುರಾಯ” ಹುಲಿರಾಯ”ನ ಕಥೆ ಮತ್ತು ಜಂಗಮದೇವಿಯ ಕಥೆ.

ಜಂಗಮ ದೇವಿಯ ಕಥೆ ಬಯಲು ಸೀಮೆಯ ಭಕ್ತ ಸಿರಿಯಾಳನ ಕಥೆಯನ್ನು ಹೋಲುತ್ತ ಅಲ್ಲಿಂದಲೇ ಬಮದಿರಬಹುದಾದ ಸಾಧ್ಯತೆ ಇದೆ.

ಕಂಪಲುರಾಯನ ಕಥೆಯಲ್ಲಿ ಅರಮನೆಯಲ್ಲಿ ಕೂತ ಕಂಪಲುರಾಯನಿಗೆ “ಮಾ ಬೇಸರಾಗಿ”ಹಕ್ಕಿಯ ಬೇಟೆಗೆ ಹೊರಟವ, ಹಕ್ಕಿಗಳೆರಡೂ ಅವನ ಬಾಣಕ್ಕೆ ತುತ್ತಾಗುವ ಹಂತದಲ್ಲಿರುವಾಗಲೇ ಅವುಗಳು ತೆಂಕಿನ  “ಸಾಗರದ ಸೌಭದ್ರಿಯ ವಿಷಯ ಹೇಳುತ್ತವೆ. ಅವಳನ್ನು ಅವಳಾಡುವ “ಪಗಡೆ” ಯಾಟದಲ್ಲಿ ಗೆದ್ದು ಬಂದು “ನಮ್ಮನ್ನು ಹೊಡೆ” ಅನ್ನುತ್ತವೆ.  ಯುವಕ ಕಂಪಲುರಾಯ ಅವುಗಳ ಮಾತಿಗೆ ಮನ್ನಣೆ ಇತ್ತು. ಉಪಾಯದಿಂದ ಸೌಭದ್ರಿಯನ್ನು ಸೋಲಿಸಿ ಕರೆದುಕೊಂಡು ಬರುವ ಕಥೆ ಇದು.

“ಮಂಡೆ ಕೂದಲ”ನ್ನು ಮೂರು “ಸಿಗ್ಳ: ಮಾಡಿ, ಅದರಿಂದ ಹೂ ಕಟ್ಟಿ, ಸೌಭದ್ರಿಯ ಮನ ಸೆಳೆಯುವುದು, ಬೆಕ್ಕಿನ ತಲೆಯ ಮೇಲೆ ದೀಪ ಇಟ್ಟು ಪಗಡೆ ಆಡುವ ಸೌಭದ್ರಿಯ ಆಟ ಕೆಡಿಸಲು ಇಲಿ ಮರಿಯನ್ನು ಗುಟ್ಟಾಗಿ ಆಟದ ಮಧ್ಯೆ ಬಿಟ್ಟು,   ಉಪಾಯದಿಂದ ಅವಳನ್ನು ಸೋಲಿಸುವುದು, ಮುಂತಾದ ಸಂಗತಿಗಳು ಹಳ್ಳಿ ಕಥೆಗಳ ಹಂದರದಲ್ಲಿ ಸಾಮಾನ್ಯವಾಗಿ ಹೆಣೆದು ಕೊಂಡಿರುವ ಎಳೆಗಳು.

“ಹುಲಿರಾಯನ ಕಥೆ” ಯಂತೂ ಶೂರನ ಕಥೆ. ಏಳು ಪೈರು ನುಂಗಿ, ಏಳು ಕೆರೆ ನೀರನ್ನು ಕುಡಿದ ಹುಲಿಯನ್ನು ಕಟ್ಟಾಣಿ ಕರಿಯ ಕೊಲ್ಲಲಾಗದೆ ಅದಕ್ಕೆ ಬಲಿಯಾದಾಗ, ಅವನ ಮಗ ಆ ಹುಲಿಯನ್ನು ಕೊಂದು, ಅದರ ಹೊಟ್ಟೆ ಬಗಿದು ಕರಿಯನನ್ನು ತಿರುಗಿ ಕರೆ ತರುವ ಪವಾಡದಂತಹ ಕಥೆ.. ಇದನ್ನೊಂದು ಆಚರಣೆಯ ಹಾಡನ್ನಾಗಿಯೂ ಹಾಡುತ್ತಾರೆ. ಹಾಡುವವರ ಮೈ ಮೇಲೆ ಹುಲಿದೇವರ ಆವೇಶವಾಗುತ್ತದೆ ಎಂದು ಹೇಳುತ್ತಾರೆ.

ನಾನು ಸಂಗ್ರಹಿಸಿದ ಈ ಹಾಡುಗಳು ಹೆಚ್ಚಾಗಿ ಹೆಣ್ಣು ಮಕ್ಕಳೇ ಹಾಡುವ ಹಾಡುಗಳು. ಅಕ್ಕ ತಂಗಿಯರಂತೆ ಪರಸ್ಪರ ಕಷ್ಟ ಸುಖ ಹೇಳಿಕೊಳ್ಳುವ, ಸಂವಾದಿಸುವ ಈ ಹಾಡುಗಳಲ್ಲಿ ಅಕ್ಕ ತಂಗಿಯರ ಒಳ ಮಾತುಗಳಂತೆ, ಸಹಜ ಆತ್ಮೀಯತೆ ಇದೆ. ಹಾಗಾಗಿಯೇ “ಅಕ್ಕ ಕುಂಕುಂದಕ್ಕ” ಎಂದು ಸಂಭೊಧಿಸುತ್ತಾ ಹಾಡಿಗೆ ತೊಡಗುವುದನ್ನು ಸಾಂಕೇತಿಕವಾಗಿ ಸೂಚಿಸಲು ಈ ಸಂಕಲನಕ್ಕೆ “ಅಕ್ಕ ಕುಂಕುಮದಕ್ಕ” ಎಂಬ ಹೆಸರು ಕೊಟ್ಟಿದ್ದೇನೆ. ಹೆಂಗಸರ ಇಂತಹ ಸಂವಾದಗಳು ಕೊನೆಯಿಲ್ಲದ್ದು, ನಿರಂತರವಾಗಿ  ನಡೆಯುತ್ತಿರುವುದು. ಸಂವಾದ ನಿಂತರೆ ಸಮಾಜದ ಸ್ವಾಸ್ಥ್ಯ ಕೆಟ್ಟಂತೆಯೇ.