ಪುಂಡಿಸೊಪ್ಪು ಪೌಷ್ಟಿಕ ಸೊಪ್ಪು ತರಕಾರಿ. ಇದರ ಬೇಸಾಯ ಮತ್ತು ಬಳಕೆಗಳು ಕಳೆದ ಮೂರು ಶತಮಾನಗಳಿಂದಲೂ ಇವೆ. ಸೊಪ್ಪು, ಹೂಗಳ ತಳಭಾಗ ಅಥವಾ ಪುಷ್ಪಪಾತ್ರೆಯ ಎಸಳುಗಳು ಹಾಗೂ ರಕ್ಷಾದಳಗಳು ದೊಡ್ಡದಾಗಿದ್ದು ರಸವತ್ತಾಗಿರುತ್ತವೆ. ಚಿಗುರೆಲೆಗಳು ಹುಳಿಯುತ್ತವೆ.

ಪೌಷ್ಟಿಕ ಗುಣಗಳು : ಇದರ ಎಲೆಗಳಲ್ಲಿ ಅಧಿಕ ಪ್ರಮಾಣದ ಶರ್ಕರಪಿಷ್ಟ, ಪೊಟ್ಯಾಷಿಯಂ, ಟರ್ಟಾರಿಕ್ ಆಮ್, ಮ್ಯಾಲ್ಲಿಕ್ ಆಮ್ಲ, ಸೆಲ್ಯೂಲೋಸ್, ಎ ಜೀವಸತ್ವ ಮುಂತಾಗಿ ಇರುತ್ತವೆ. ಪುಷ್ಪ ಪಾತ್ರೆಯ ಎಸಳುಗಳಲ್ಲಿ ಅಧಿಕ ಪ್ರಮಾಣದ ಸಿಟ್ರಿಕ್ ಆಮ್ಲವಿರುತ್ತದೆ. ಕಾಯಿಗಳಲ್ಲಿ ಹೆಚ್ಚಿನ ಶರ್ಕರಪಿಷ್ಟ, ಪ್ರೊಟೀನ್ ಮುಂತಾಗಿ ಇರುತ್ತವೆ.

೧೦೦ ಗ್ರಾಂ ಎಲೆ, ಪುಷ್ಪಪತ್ರಗಳು ಹಾಗೂ ಕಾಯಿಗಳಲ್ಲಿರುವ ಪೋಷಕಾಂಶಗಳು

  ಎಲೆ (ಸೊಪ್ಪು) ಪುಷ್ಪ ಪತ್ರಗಳು ಕಾಯಿಗಳು
ತೇವಾಂಶ ೮೬.೨ ಗ್ರಾಂ ೮೮.೨೬ ಗ್ರಾಂ ೮೪.೦ ಗ್ರಾಂ
ಶರ್ಕರಪಿಷ್ಟ ೧೦.೦ ಗ್ರಾಂ ೫.೮೬ ಗ್ರಾಂ ೧೨.೦ ಗ್ರಾಂ
ಪ್ರೊಟೀನ್ ೧.೭ ಗ್ರಾಂ ೧.೪೬ ಗ್ರಾಂ ೧.೭ ಗ್ರಾಂ
ಕೊಬ್ಬು ೧.೧ ಗ್ರಾಂ ೧.೯೬ ಗ್ರಾಂ ೧.೦ ಗ್ರಾಂ
ಖನಿಜ ಪದಾರ್ಥ ೧.೦ ಗ್ರಾಂ
ಹುಳಿ ೧.೨೫ ಗ್ರಾಂ ೩.೭೪ ಗ್ರಾಂ
ಪೆಕ್ಟಿನ್ ೩.೧೯ ಗ್ರಾಂ
ಕ್ಯಾಲ್ಸಿಯಂ ೦.೧೮ ಗ್ರಾಂ ೦.೧೦೮ ಗ್ರಾಂ
ರಂಜಕ ೦.೦೪ ಗ್ರಾಂ ೦.೦೫೨ ಗ್ರಾಂ
ಕಬ್ಬಿಣ ೦.೦೦೫೪ ಗ್ರಾಂ ೦.೦೨೧ ಗ್ರಾಂ
’ಎ’ ಜೀವಸತ್ವ ೪೮೫೦ ಐಯು
’ಸಿ’ ಜೀವಸತ್ವ ೨೮. ಮಿ. ಗ್ರಾಂ
ಕ್ಯಾಲೊರಿಗಳು ೫೭

ಸೊಪ್ಪು ಮತ್ತು ಪುಷ್ಪತ್ರಗಳಲ್ಲಿ ಖನಿಜ ಪದಾರ್ಥದ ಜೊತೆಗೆ ಲೋಳೆ ಪದಾರ್ಥ, ಕ್ಯಾಲ್ಸಿಯಂ ಸಿಟ್ರೇಟ್, ಆಸ್ಕಾರ್ಬಿಕ್ ಆಮ್ಲ ಮುಂತಾಗಿ ಇರುತ್ತವೆ. ಪುಷ್ಪಪತ್ರಗಳಲ್ಲಿ ವರ್ಣದ್ರವ್ಯ ಸಹ ಇರುತ್ತದೆ. ಪೆಕ್ಟಿನ್ ಇರುವ ಕಾರಣ ಆಕರ್ಷಕ ಜೆಲ್ಲಿಯನ್ನು ತಯಾರಿಸಬಹುದು.

ಔಷಧೀಯ ಗುಣಗಳು : ಎಲೆ ಮತ್ತು ಪುಷ್ಪಪಾತ್ರೆಯ ಎಸಳುಗಳು ಮೃದುಕಾರಕವಿರುತ್ತವೆ. ಅವುಗಳಲ್ಲಿ ಶೈತ್ಯಕಾರಕ ಹಾಗೂ ಶಮನಕಾರಕ ಗುಣಗಳಿವೆ. ಹುಳಿಯ ಅಂಶ ಪಿತ್ತ ಜನಕಾಂಗಕ್ಕೆ ಬಲವನ್ನುಂಟು ಮಾಡುತ್ತದೆ. ಎಲೆಗಳನ್ನು ತಿನ್ನುವುದರಿಂದ ಶುದ್ಧರಕ್ತ ಹೆಚ್ಚುತ್ತದೆ ಹಾಗೂ ಮಲಬದ್ಧತೆ ದೂರಗೊಳ್ಳುತ್ತದೆ. ದಣಿವನ್ನು ಹೋಗಲಾಡಿಸಿ ಪಚನಕಾರ್ಯಕ್ಕೆ ನೆರವಾಗುತ್ತದೆ. ಹಸಿವೆಯನ್ನು ಹೆಚ್ಚಿಸುತ್ತದೆ ಹಾಗೂ ಮೂತ್ರೋತ್ಪಾದಕ ಗುಣಗಳಿವೆ. ಪಿತ್ತರಸಬಾಧೆಗಳಿಗೆ ಒಳ್ಳೆಯದು ಹಾಗೂ ಲಘುವಿರೇಚಕವೂ ಹೌದು. ಹೃದಯ ಹಾಗೂ ನರಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಪರಿಣಾಮಕಾರಕ. ಅಧಿಕ ರಕ್ತದ ಒತ್ತಡಕ್ಕೆ ಉತ್ತಮ ಔಷಧಿ. ಈ ಪಾನಕ ಕಾಯಿಲೆ ಬಿದ್ದು ಗುಣಮುಖರಾಗುತ್ತಿರುವವರಿಗೆ ಒಳ್ಳೆಯದು. ಜ್ವರ ನಿವಾರಕ. ಇದರ ಬೀಜಗಳಿಂದ ತಯಾರಿಸಿದ ಕಷಾಯವು ಉರಿಮೂತ್ರ, ಅಗ್ನಿಮಾಂದ್ಯ, ನಿಶ್ಯಕ್ತತೆಗಳಿಗೆ ಒಳ್ಳೆಯದು.

ಉಗಮ ಮತ್ತು ಹಂಚಿಕೆ : ಇದರ ತವರೂರು ಪಶ್ಚಿಮ ಆಫ್ರಿಕಾ ಇಲ್ಲವೇ ಏಷ್ಯಾ. ಪ್ರಸಕ್ತ ಎಲ್ಲಾ ಉಷ್ಣಪ್ರದೇಶಗಳಲ್ಲಿ ಇದನ್ನು ಬೆಳೆದು ಬಳಸುತ್ತಾರೆ.

ಸಸ್ಯ ವರ್ಣನೆ : ಪುಂಡಿ ಮಾಲ್ವೇಸೀ ಕುಟುಂಬಕ್ಕೆ ಸೇರಿದ ಸಸ್ಯ. ಬಹುಮಟ್ಟಿಗೆ ಸೆಣಬಿನ ಗಿಡವನ್ನು ಹೋಲುತ್ತದೆ. ಇದರಲ್ಲಿನ ವರ್ಣತಂತುಗಳ ಸಂಖ್ಯೆ ೨n=೩೬ ಹಾಗೂ ೭೨. ಪೂರ್ಣ ಬೆಳೆದಾಗ ಗಿಡಗಳು ೧ ರಿಂದ ೩ ಮೀಟರ್ ಎತ್ತರವಿರುತ್ತವೆ. ಪುಂಡಿ ರೆಂಬೆಗಳಿಂದ ಕೂಡಿದ ಪೊದೆ ಸಸ್ಯ. ಕಾಂಡಭಾಗಗಳು ಕೆಂಪು, ಹಸುರು ಮುಂತಾಗಿದ್ದು ನುಣುಪಾಗಿ ಇಲ್ಲವೇ ಸ್ವಲ್ಪ ಒರಟಾಗಿ ಇರುತ್ತವೆ. ಕವಲು ರೆಂಬೆಗಳು ನೆಟ್ಟಗಿರುತ್ತವೆ. ಎಲೆಗಳು ಸಂಯೋಗ ಪ್ರತ್ಯೇಕವಿದ್ದು ಉದ್ದ ತೊಟ್ಟುಗಳಿಂದ ಕೂಡಿರುತ್ತವೆ, ಎಲೆಗಳಿಗೆ ಪರ್ವಪುಚ್ಛಗಳಿರುತ್ತವೆ. ೫ ರಿಂದ ೮ ಮಿ.ಮೀ. ಉದ್ದ. ಎಲೆ ತೊಟ್ಟುಗಳು ೨ ರಿಂದ ೧೦ ಸೆಂ.ಮೀ. ಉದ್ದವಿದ್ದು ಕೆಂಪು ಇಲ್ಲವೇ ಹಸುರು ಬಣ್ಣ. ಬುಡಭಾಗದಲ್ಲಿನ ಎಲೆಗಳು ಅಂಡಾಕಾರವಿದ್ದು, ಸೀಳಿರುವುದಿಲ್ಲ. ಕೆಲವೊಮ್ಮೆ  ಅವುಗಳಲ್ಲಿ ೩ ರಿಂದ ೫ ಪಾಲೆಗಳಿರುವುದುಂಟು. ಮಧ್ಯಭಾಗದ ಸೀಳು ಇತರ ಸೀಳುಗಳಿಗಿಂತ ಉದ್ದವಿರುತ್ತದೆ. ಎಲೆಯಂಚು ಕಚ್ಚುಯುಕ್ತ. ಮಧ್ಯನರ ಸ್ಫುಟವಾಗಿ ಕಾಣುತ್ತದೆ.

ಹೂವು ಎಲೆತೊಟ್ಟಿನ ಕಂಕುಳಲ್ಲಿ ಮೂಡುತ್ತವೆ. ಬಿಡಿ ಬಿಡಿಯಾಗಿರುತ್ತವೆ. ಪುಟ್ಟ ತೊಟ್ಟು ಹೊಂದಿರುತ್ತದೆ. ಉಪಪುಷ್ಪ ಪಾತ್ರೆಯಲ್ಲಿ ಹತ್ತರವರೆಗೆ ಸೀಳುಗಳಿರುತ್ತವೆ. ಅವು ಉದ್ದನಾಗಿ ರಸವತ್ತಾಗಿರುವುದು. ಪುಷ್ಪಪಾತ್ರೆಯಲ್ಲಿ ಸಾಮಾನ್ಯವಾಗಿ ಐದು ಎಸಳುಗಳಿರುತ್ತವೆ. ಅವು ೧ ರಿಂದ ೨ ಸೆಂ.ಮೀ. ಉದ್ದ, ರಸವತ್ತಾಗಿರುತ್ತವೆ. ಕಡುಗೆಂಪು ಬಣ್ಣವಿರುತ್ತವೆ. ಹೂದಳಗಳ ಸಂಖ್ಯೆ ಐದು. ಬಣ್ಣ ಹಳದಿ, ಮಧ್ಯಭಾಗದಲ್ಲಿ ಕೆನ್ನೀಲಿ ಬಣ್ಣ, ಹೂಗಳ ಅಡ್ಡ ೨.೫ ಸೆಂ.ಮೀ.; ಆಕರ್ಷಕವಿರುತ್ತವೆ. ಕೇಸರಸ್ತಂಭ ೧-೨ ಸೆಂ.ಮೀ. ಉದ್ದವಿದ್ದು ಸಣ್ಣ ಸಣ್ಣ ಪರಾಗಕೋಶಗಳಿಂದ ಕೂಡಿರುತ್ತದೆ. ಪರಾಗಕೋಶಗಳು ಅಸಂಖ್ಯಾತ. ಶಲಾಕೆಯಲ್ಲಿ ಐದು ಸೀಳುಗಳಿರುತ್ತವೆ.

ಹಣ್ಣು ಅಂಡಾಕಾರದ ಬೀಜಕೋಶ. ಆದರೆ ಉದ್ದ ೨-೩ ಸೆಂ.ಮೀ. ಪೂರ್ಣ ಬಲಿತು ಒಣಗಿದಲ್ಲಿ ಐದು ಹೋಳುಗಳಾಗಿ ಸೀಳುತ್ತದೆ. ಬೀಜ ಆಕಾರದಲ್ಲಿ ಹುರುಳಿ ಬೀಜದಂತೆ ಕಾಣುವುವು. ಅವುಗಳ ಬಣ್ಣ ದಟ್ಟ ಕಂದು. ಮೇಲೆಲ್ಲಾ ತುಪ್ಪಳ ಇರುತ್ತದೆ. ಬೇರು ಸಮೂಹ ಆಳಕ್ಕೆ ಇಳಿದಿರುತ್ತದೆ. ಅದರಲ್ಲಿ ಹಲವಾರು ಕವಲುಗಳಿರುತ್ತವೆ.

ಹವಾಗುಣ : ಇದು ಉಷ್ಣವಲಯದ ಬೆಳೆ. ಇದಕ್ಕೆ ಬೆಚ್ಚಗಿನ ಹವೆ ಸೂಕ್ತ. ಉಷ್ಣತೆ ೨೧ ರಿಂದ ೨೮ಸೆ. ಸಮುದ್ರಮಟ್ಟದಿಂದ ೧೦೦೦ ಮೀಟರ್ ಎತ್ತರದವರೆಗೆ ಚೆನ್ನಾಗಿ ಫಲಿಸುತ್ತದೆ. ಕಡಿಮೆ ಅವಧಿ ಬೆಳಕು ಸಾಕು. ಮುಂಗಾರು ಬೆಳೆಯಾಗಿ ಬೆಳೆಯಲಾಗುತ್ತದೆ.

ಭೂಗುಣ : ಇದರ ಬೇಸಾಯಕ್ಕೆ ಮರಳುಮಿಶ್ರಿತ ಗೋಡು ಮಣ್ಣು ಉತ್ತಮ. ನೀರು ಬಸಿಯುವುದು ಬಹುಮುಖ್ಯ. ಕಪ್ಪು ಜಿಗುಟು ಮಣ್ಣೂ ಸಹ ಉತ್ತಮವೇ. ಅದಕ್ಕೆ ಕೆಮ್ಮಣ್ಣು ಬೆರೆಸಿದರೆ ನೀರು ಬಸಿಯುವ ಕೆಲಸ ಸುಲಭವಾಗುತ್ತದೆ.

ತಳಿಗಳು : ಪುಂಡಿಯಲ್ಲಿ ಹಲವಾರು ಪ್ರಭೇದಗಳಿವೆ, ಕವಲುಗಳಿಂದ ಕೂಡಿದ ಹಾಗೂ ಬಣ್ಣದ ಬಗೆಗಳಿವೆ. ಇದರಲ್ಲಿ ರೂಬರ್, ಆಲ್ಟಿಸ್ ಇಂಟರ್‌ಮೀಡಿಯೆಟ್, ಭಾಗಲ್ಪೂರಿಯೆನ್ಸಿಸ್ ಪ್ರಭೇದಗಳು ಮುಖ್ಯವಾದವು. ತರಕಾರಿಯಾಗಿ ರೂಬರ್ ಉತ್ತಮವಾದುದು. ಫಿಲಿಪ್ಪೈನ್ಸ್‌ನಲ್ಲಿ ವಿಕ್ಟರ್, ರೀಕೊ, ಆರ್ಚರ್ ಹಾಗೂ ಟೆಂಪ್ರಾನೊ ಮುಖ್ಯವಾದವು. ಎತ್ತರಕ್ಕೆ ಬೆಳೆಯುತ್ತವೆ. ಪೂರ್ಣ ಬೆಳೆದಾಗ ಗಿಡಗಳ ಎತ್ತರ ೩ ರಿಂದ ೪.೮ ಮೀಟರ್‌ಗಳಷ್ಟಿರುತ್ತದೆ. ಇದು ಸ್ವ-ಪರಾಗ ಸ್ಪರ್ಶದಿಂದ ಕೂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಾಯಿ ಕಚ್ಚುತ್ತದೆ.

ಸಸ್ಯಾಭಿವೃದ್ಧಿ : ಪುಂಡಿಯನ್ನು ಬೀಜ ಹಾಗೂ ನಿರ್ಲಿಂಗ ವಿಧಾನಗಳಲ್ಲಿ ವೃದ್ಧಿಪಡಿಸಬಹುದು. ಬೀಜ ಪದ್ಧತಿ ಸುಲಭ. ಮೊದಲು ಬೀಜವನ್ನು ಒಟ್ಲು ಪಾತಿಗಳಲ್ಲಿ ಬಿತ್ತಿ ಅನಂತರ ಸಸಿಗಳನ್ನು ಕಿತ್ತು ನಾಟಿ ಮಾಡಬೇಕು. ಬಿತ್ತನೆಗೆ ದಕ್ಷಿಣ ಭಾರತದಲ್ಲಿ ಏಪ್ರಿಲ್-ಮೇ ಉತ್ತಮ. ಪುಂಡಿ ಬೀಜ ಸುಮಾರು ಮೂರು ವರ್ಷಗಳವರೆಗೆ ಮೊಳೆಯುವ ಸಾಮರ್ಥ್ಯ ಹೊಂದಿರುತ್ತವೆ. ಬೀಜ ಮೊಳೆಯಲು ಒಂದು ವಾರ ಹಿಡಿಸುತ್ತದೆ. ಬೀಜವನ್ನು ಎತ್ತರಿಸಿದ ಒಟ್ಲು ಪಾತಿಗಳಲ್ಲಿ ಬಿತ್ತಿದರೆ ಸಸಿಗಳು ದಢತ್ತಾಗಿದ್ದು, ಕಿತ್ತು ತೆಗೆಯಲು ಸುಲಭ. ಸುಮಾರು ೧೫ ರಿಂದ ೨೦ ಕಿ. ಗ್ರಾಂ. ಬೀಜ ಬಿತ್ತಿದಲ್ಲಿ ಒಂದು ಹೆಕ್ಟೇರಿಗಾಗುವಷ್ಟು ಸಸಿಗಳು ಲಭಿಸುತ್ತವೆ.

ಕೆಲವೊಮ್ಮೆ ಚಿಗುರು ರೆಂಬೆಗಳ ತುಂಡುಗಳನ್ನು ನೆಟ್ಟು, ಬೇರು ಬಂದ ನಂತರ ಅವುಗಳನ್ನು ಕಿತ್ತು ನೆಡುವುದುಂಟು.

ಭೂಮಿ ಸಿದ್ಧತೆ ಮತ್ತು ನೆಡುವಿಕೆ : ಸೂಕ್ತ ಅಂತರದಲ್ಲಿ ದಿಂಡು ಮತ್ತು ಕಾಲುವೆಗಳನ್ನು ಸಿದ್ಧಗೊಳಿಸಿ ತಿಪ್ಪೆಗೊಬ್ಬರ ಹರಡಿ ಮಣ್ಣಿನಲ್ಲಿ ಬೆರೆಸಬೇಕು. ನಾಟಿ ಮಾಡುವ ಕಾಲಕ್ಕೆ ಸಸಿಗಳಿಗೆ ನಾಲ್ಕು ವಾರಗಳಾಗಿರಬೇಕು. ಸಾಲುಗಳ ನಡುವೆ ೧.೨೫ ಮೀಟರ್ ಮತ್ತು ಸಸಿಗಳ ನಡುವೆ ೦.೯ ಮೀಟರ್‌ಅಂತರ ಇರಬೇಕು. ನಾಟಿಗೆ ೧೦ ಸೆಂ.ಮೀ. ಎತ್ತರವಿರುವ ಸಸಿಗಳಾದಲ್ಲಿ ಉತ್ತಮ.

ಗೊಬ್ಬರ : ಇದು ಸ್ವಲ್ಪ ಹೆಚ್ಚಿನ ಫಲವತ್ತನ್ನು ಬಯಸುವ ಬೆಳೆ ಹೆಕ್ಟೇರಿಗೆ ೨೦ ರಿಂದ ೨೫ ಟನ್ ತಿಪ್ಪೆಗೊಬ್ಬರ ಕೊಡಬೇಕು. ಅದರ ಜೊತೆಗೆ ಸ್ವಲ್ಪ ಪ್ರಮಾಣದ ರಾಸಾಯನಿಕ ಗೊಬ್ಬರಗಳನ್ನು ಕೊಡುವುದು ಲಾಭದಾಯಕ.

ನೀರಾವರಿ : ಇದು ಸ್ವಲ್ಪ ಮಟ್ಟಿಗೆ ಅನಾವೃಷ್ಟಿಯನ್ನು ಸಹಿಸಬಲ್ಲದು ಆದರೆ ಬೆಳೆ ಸೊಂಪಾಗಿ ಬೆಳೆಯಬೇಕಾದರೆ ಆಗಿಂದಾಗ್ಗೆ ನೀರು ಕೊಡಬೇಕಾಗುತ್ತದೆ. ಮಳೆಯಿಲ್ಲದ ದಿನಗಳಲ್ಲಿ ವಾರಕ್ಕೊಮ್ಮೆ ನೀರು ಹಾಯಿಸಬೇಕು.

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಸಸಿಗಳನ್ನು ನಾಟಿ ಮಾಡಿದ ೪ ರಿಂದ ೬ ವಾರಗಳಲ್ಲಿ ಕಳೆಗಳನ್ನು ಕಿತ್ತು ತೆಗೆಯಬೇಕು. ಅನಂತರ ಸಸಿಗಳು ಬೆಳೆದು ನೆರಳನ್ನುಂಟು ಮಾಡುತ್ತವೆಯಾದ್ದರಿಂದ ಕಳೆಗಳು ಅಷ್ಟಾಗಿ ಪೀಡಿಸಲಾರವು.

ಮಿಶ್ರ ಬೆಳೆಯಾಗಿ : ಇದನ್ನು ಹೆಚ್ಚಾಗಿ ಶುದ್ಧಬೆಳೆಯಾಗಿ ಬೆಳೆಯುತ್ತಾರೆ. ಕೆಲವೊಮ್ಮೆ ಸಾಲುಗಳ ನಡುವೆ ಮೆಣಸಿನಕಾಯಿ, ದ್ವಿದಳ ಧಾನ್ಯ ತರಕಾರಿಗಳು ಹಾಗೂ ಸೊಪ್ಪು ತರಕಾರಿಗಳನ್ನು ಬೆಳೆಯುವುದುಂಟು.

ಕೊಯ್ಲು ಮತ್ತು ಇಳುವರಿ : ಸೊಪ್ಪು ೪-೫ ತಿಂಗಳಲ್ಲಿ ಬೆಳೆದಿದ್ದು ಸಸಿಗಳನ್ನು ಬೇರು ಸಮೇತ ಕಿತ್ತು ತೆಗೆಯುತ್ತಾರೆ. ಹೆಕ್ಟೇರಿಗೆ ೧೦-೧೫ ಟನ್ ಸೊಪ್ಪು ಸಿಗುವುದು ಖಚಿತ. ಎಸಳುಗಳಿಗೆ ಸುಮಾರು ೮ ತಿಂಗಳು ಕಾಯಬೇಕು. ಆ ಸಮಯಕ್ಕೆ ಕಾಯಿ ಸಹ ಬಲಿತಿರುತ್ತವೆ. ಹೆಕ್ಟೇರಿಗೆ ೫ ರಿಂದ ೭ ಟನ್ನುಗಳಷ್ಟು ರಸಭರಿತ ಪುಷ್ಪಪತ್ರಗಳ ಇಳುವರಿ ಸಾಧ್ಯ.

ಕೀಟ ಮತ್ತು ರೋಗಗಳು : ಈ ಬೆಳೆಯನ್ನು ಪೀಡಿಸುವ ಗುರುತರ ಕೀಟ ಮತ್ತು ರೋಗಗಳು ಕಡಿಮೆ.

* * *