ಫ್ಲಾರಿಡಾ ಅಮೆರಿಕಾದ ಪೂರ್ವತೀರದ ದಕ್ಷಿಣದ ತುದಿಯಲ್ಲಿ, ಒಂದೆಡೆ ಅಟ್ಲಾಂಟಿಕ್ ಮಹಾಸಾಗರ ಮತ್ತೊಂದೆಡೆ ಮೆಕ್ಸಿಕೋ ಜಲಸಂಧಿ, ಈ ಎರಡರ ನಡುವೆ ಹೆಬ್ಬೆಟ್ಟಿನಾಕಾರದಲ್ಲಿ ಚಾಚಿಕೊಂಡ ಭೂಭಾಗವಾಗಿದೆ. ಇಲ್ಲಿನ ಹವಾಮಾನ ಬಹುಮಟ್ಟಿಗೆ ನಮ್ಮ ಇಂಡಿಯಾದಂಥದೇ. ಜತೆಗೆ ಉತ್ತರ ಅಮೆರಿಕಾದಲ್ಲಿಯಂತೆ ಹಿಮಪಾತ ಇಲ್ಲಿಲ್ಲ. ಅಲ್ಲಲ್ಲಿ, ತೆಂಗು – ಬಾಳೆಗಳೂ, ಕಡಲತೀರಗಳಲ್ಲಿ ಕಾಣಿಸಿಕೊಳ್ಳುವುದುಂಟು; ಮತ್ತು ಫ್ಲಾರಿಡಾ ಹೆಸರುವಾಸಿಯಾಗಿರುವುದು ಕಿತ್ತಲೆ ಹಣ್ಣಿನ ಸಮೃದ್ಧಿಯಿಂದಾಗಿ – ಫ್ಲಾರಿಡಾ ಕಡಲೊಳಗೆ ಚಾಚಿಕೊಂಡಿರುವುದರಿಂದ ಎರಡೂ ಕಡೆ ಸೇರಿ, ಒಟ್ಟು ೮೪೨೬ ಮೈಲಿಗಳಷ್ಟು ಸೊಗಸಾದ ಕಡಲ ತೀರವಿದೆ. ಈ ಸುದೀರ್ಘ ನೀಲ ಕಡಲತೀರದಿಂದಾಗಿ, ಸದಾಕಾಲ ಫ್ಲಾರಿಡಾ ದೇಶ, ವಿದೇಶದ ಪ್ರವಾಸಿಗಳನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತದೆ. ಉತ್ತರ ಅಮೆರಿಕಾದ ಶ್ರೀಮಂತರನೇಕರು ಅಲ್ಲಿನ ಛಳಿಗಾಲದಿಂದ ತಪ್ಪಿಸಿಕೊಂಡು ಬಂದು ಕೆಲವು ಕಾಲ ವಾಸಿಸಲು ದೊಡ್ಡ ದೊಡ್ಡ ಮನೆಗಳನ್ನು ಇಲ್ಲಿ ಕಟ್ಟಿಸಿಕೊಂಡಿದ್ದಾರೆ. ಇಂಡಿಯಾದಿಂದ ಅಮೆರಿಕಾಗೆ ಬಂದ ಭಾರತೀಯರೂ ಈ ಪ್ರದೇಶವನ್ನು ಇಷ್ಟಪಡುತ್ತಾರೆ. ಇದರಿಂದಾಗಿ ಇಲ್ಲಿ ಭಾರತೀಯರ  ಸಂಖ್ಯೆಯೂ ಸಾಕಷ್ಟಿದೆ. ಈ ದೇಶದ ತುದಿಯಲ್ಲಿರುವ ಮಯಾಮಿಯಂತೂ, ಸೊಗಸಾದ ನುಣ್ಮಳಲಿನ ಕಡಲತೀರದಿಂದ, ತೀರದುದ್ದಕ್ಕೂ ಹಬ್ಬಿಕೊಂಡ ದಟ್ಟ ಹಸುರಿನ ಅಂಚಿನಿಂದ, ಪ್ರವಾಸ ಯೋಗ್ಯವಾದ ಸಮಸ್ತ ಅನುಕೂಲಗಳಿಂದ, ಪ್ರವಾಸಿಗರ ಸ್ವರ್ಗವಾಗಿದೆ. ಫ್ಲಾರಿಡಾದ ಇನ್ನೂ ಒಂದು ಲೊಕ ಪ್ರಸಿದ್ಧವಾದ ಆಕರ್ಷಣೆ ಎಂದರೆ ಆರ‍್ಲೆಂಡೋದಲ್ಲಿರವ ‘ಡಿಸ್ನಿವರ್ಲ್ಡ್’ ಎಂದು ಹೆಸರಾದ ಅದ್ಭುತ ಜಗತ್ತು.

ಮಯಾಮಿಯಲ್ಲಿ ನನ್ನನ್ನು ಬರಮಾಡಿಕೊಂಡವರು ಡಾ. ಜಗದೀಶ್. ಇವರು ಮಯಾಮಿಯ ವಿಶ್ವವಿದ್ಯಾಲಯವೊಂದರಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕರು. ನನ್ನ ಕೋರಿಕೆಯ ಮೇರೆಗೆ, ಜಗದೀಶ್ ಅವರು, ಆರ‍್ಲೆಂಡೋದಲ್ಲಿರುವ ಡಿಸ್ನಿ ಜಗತ್ತಿಗೆ ಹೋಗಿಬರಲು, ಖಾಸಗಿ ಪ್ರವಾಸಿ ಸಂಸ್ಥೆಯೊಂದರಿಂದ ನನಗಾಗಿ ಟಿಕೆಟ್ ಅನ್ನು ಕಾದಿರಿಸಿದ್ದರು. ಮಯಾಮಿಯಿಂದ ಆರ‍್ಲೆಂಡೋಗೆ ಹೋಗಿ ಬರುವ ಬಸ್ಸಿನ ಪ್ರಯಾಣದ ವೆಚ್ಚ, ಮೂರು ದಿನಗಳ ಕಾಲ ಆರ‍್ಲೆಂಡೋದ ಇಂಟರ್ ನ್ಯಾಷನಲ್ ಹೋಟಲೊಂದರಲ್ಲಿ ನನ್ನ ವಾಸ್ತವ್ಯದ ವ್ಯವಸ್ಥೆ ಮತ್ತು ಡಿಸ್ನಿ ಜಗತ್ತಿನ ವೀಕ್ಷಣೆಯ ಅವಕಾಶ – ಈ ಎಲ್ಲವೂ ಸೇರಿದಂತೆ ಈ ‘ಟಿಕೆಟ್’ಗೆ ನಾನು ಕೊಡಬೇಕಾಗಿ ಬಂದದ್ದು ಒಂದು ನೂರಾ ಎಪ್ಪತ್ತು ಡಾಲರ್‌ಗಳು. ನಾನು ಮಯಾಮಿಗೆ ಬಂದ ಮರುದಿನ ಬೆಳಿಗ್ಗೆ (೭.೧೦.೮೭) ಖಾಸಗಿ ಸಂಸ್ಥೆಯವರು ವಹಿಸಿಕೊಂಡ ಪ್ರವಾಸದ ಕಾರ್ಯಕ್ರಮಕ್ಕೆ ಅನುಸಾರವಾಗಿ, ಅತ್ಯಂತ ಸುಸಜ್ಜಿತವಾದ ಬಸ್ಸಿನಲ್ಲಿ ಹೊರಟು, ಸುಮಾರು ನಾಲ್ಕು ಗಂಟೆಗಳ ಪ್ರಯಾಣದ ನಂತರ, ಆರ‍್ಲೆಂಡೋದ ಡಿಸ್ನಿ ಜಗತ್ತಿನ ಬಾಗಿಲಲ್ಲಿ ಇತರ ಪ್ರವಾಸಿಗಳ ಜತೆ ಇಳಿದೆ.

‘ಡಿಸ್ನಿ ವರ್ಲ್ಡ್’ – ಡಿಸ್ನಿ ಜಗತ್ತು – ಹೆಸರಿಗೆ ತಕ್ಕಂತೆ ಒಂದು ಪ್ರಪಂಚವೇ ಸರಿ. ಇಪ್ಪತ್ತೆಂಟು ಸಾವಿರ ಎಕರೆಗಳಿಗೂ ಮೀರಿದ ವಿಸ್ತಾರದಲ್ಲಿ ಹರಡಿಕೊಂಡ, ಈ ಡಿಸ್ನಿ ಜಗತ್ತು ಮೂರು ಭಾಗಗಳಾಗಿ ವಿಂಗಡಣೆಗೊಂಡಿದೆ. ಒಂದನೆಯದು, ಜಾದೂ ಜಗತ್ತು (Magic Kingdom). ಮುಖ್ಯವಾಗಿ ಇದು ಮಕ್ಕಳ ಕಲ್ಪನಾಮಯ ಜಗತ್ತನ್ನು ಸಾಕಾರಗೊಳಿಸಿದ ವಲಯ; ಎರಡನೆಯದು ‘ಸಾಗರ ಪ್ರಪಂಚ’ (Sea World) ಸಮುದ್ರ ಸಂಬಂಧಿಯಾದ  ಜಲಚರ ಹಾಗೂ ಪಕ್ಷಿಗಳ ಕ್ಷೇತ್ರ; ಮೂರನೆಯದು, ಎಪ್‌ಕಾಟ್ ಸೆಂಟರ್ (Epcot centre) ; ಇದು ಮಾನವನ ವೈಜ್ಞಾನಿಕ ಅನ್ವೇಷಣೆಗಳ ಹಾಗೂ ಹಲವು ದೇಶಗಳ ಪ್ರದರ್ಶನಾಲಯಗಳನ್ನು ಒಳಗೊಂಡ ಪರಿಸರ. ಈ ಒಂದೊಂದನ್ನೂ ವಿವರವಾಗಿ ನೋಡಲು ಹಲವು ವಾರಗಳೇ ಬೇಕಾಗಬಹುದು. ಇನ್ನು ನಾನು ಮೂರು ದಿನಗಳಲ್ಲಿ ಎಷ್ಟನ್ನು ನೋಡಲು ಸಾಧ್ಯ.?

ಈ ಮೂರು ವಲಯಗಳ ನಡುವೆ, ಒಂದರಿಂದ ಮತ್ತೊಂದೆಡೆಗೆ ಹೋಗಲು ಇರುವ ‘ಮಾನೋರೈಲ್’ ನಲ್ಲಿ ಪ್ರಯಾಣ ಮಾಡುವುದೇ ಒಂದು ಸೊಗಸಾದ ಅನುಭವ. ಬಸವನ ಹುಳುವಿನಂತೆ ದೂರಕ್ಕೆ ಭಾಸವಾಗುವ ಈ ರೈಲು, ಸದಾ ಪ್ರವಾಸಿಗಳನ್ನು ಕೂರಿಸಿಕೊಂಡು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುಯ್ಯೆಂದು ಧಾವಿಸುತ್ತಲೇ ಇರುತ್ತದೆ.

‘ಮ್ಯಾಜಿಕ್ ಕಿಂಗ್‌ಡಂ’ ಅಥವಾ ಜಾದೂ ಜಗತ್ತು, ನಮಗೆ ಪರಿಚಿತವಾದ ಯಂತ್ರನಾಗರಿಕತೆಯ ಗಡಿಬಿಡಿಯ ಲೋಕದಿಂದ ನಮ್ಮನ್ನು ಪಾರುಮಾಡಿ, ಮಕ್ಕಳ ಕನಸುಗಳ, ಕಲ್ಪನೆಯ, ಮಾಯಾಲೋಕದೊಳಕ್ಕೆ ನಿಲ್ಲಿಸುವ ಒಂದು ವ್ಯವಸ್ಥೆಯಾಗಿದೆ. ‘ಸಿಂಡರೆಲಾ ಕೋಟೆ’ಯ ಸುತ್ತ ಹರಹಿಕೊಂಡ ಈ ಲೋಕ, ಮಕ್ಕಳ ಮನಸ್ಸಿನ ಭಯ – ಕುತೂಹಲ – ಸಾಹಸ – ವಿಸ್ಮಯ ಇತ್ಯಾದಿಗಳನ್ನು ಕೆರಳಿಸುವ, ಮಕ್ಕಳು ತಮ್ಮ ‘ಅಜ್ಜಿ’ಯರಿಂದ ಕೇಳಿದ ಅಥವಾ ಪುಸ್ತಕಗಳಲ್ಲಿ ಓದಿದ ಕಥಾ ಜಗತ್ತಿನ ಪಾತ್ರಗಳನ್ನು ಪ್ರತ್ಯಕ್ಷವಾಗಿ ಕಾಣುವ, ಹಾಗೂ ಘಟನೆಗಳಲ್ಲಿ ಪಾಲುಗೊಳ್ಳುವ ಅವಕಾಶವನ್ನು ಕಲ್ಪಿಸುವ ಒಂದು ಪರಿಸರವಾಗಿದೆ. ತಮ್ಮ ತಂದೆ – ತಾಯಂದಿರೊಡನೆ ಮಕ್ಕಳು ಈ ಆವರಣವನ್ನು ಪ್ರವೇಶಿಸಿದ ಕೂಡಲೆ ಅಲ್ಲಲ್ಲಿ ಕರಡಿಗಳು, ಮೊಲಗಳು, ನರಿಗಳು, ಹಕ್ಕಿಗಳು, ಮಿಕ್ಕೀಮೌಸ್‌ಗಳು ಹತ್ತಿರಕ್ಕೆ ಬಂದು ಪುಟ್ಟ ಪುಟ್ಟ ಮಕ್ಕಳ ತಲೆಸವರಿ, ಗಲ್ಲ  ಚಿವುಟಿ, ಹಲೋ ಅನ್ನುತ್ತವೆ. ಮಕ್ಕಳ ಜತೆಗೆ ನಿಂತು ಫೋಟೋ ತೆಗೆಯಿಸಿಕೊಳ್ಳುತ್ತವೆ. ಕತೆಗಳಲ್ಲಿ ತಾವು ಕೇಳಿದ, ಓದಿದ, ಪ್ರಾಣಿ ಪಕ್ಷಿ ವಿಶೇಷಗಳು ಹೀಗೆ ಬಂದು ತಮ್ಮ ಜತೆ ಸಲೀಸಾಗಿ ಬೆರೆಯುವುದನ್ನು ಕಂಡು ಮಕ್ಕಳು ಮೊದಮೊದಲು ಭಯಚಕಿತರಾದರೂ, ಅನಂತರ ತೀರಾ ಸಲುಗೆ ಪ್ರೀತಿಗಳಿಂದ ಈ ‘ವೇಷಧಾರಿ’ಗಳನ್ನು ಒಪ್ಪಿಕೊಳ್ಳುತ್ತಾರೆ. ಈ ಮಕ್ಕಳರಾಜ್ಯದ ಉದ್ದಕ್ಕೂ ಮಕ್ಕಳಿಗೆ ಹಾಗು ದೊಡ್ಡವರಿಗೆ ಆಕರ್ಷಕವಾದ ಅನೇಕ ಪ್ರದರ್ಶನಗಳಿವೆ. ಒಂದೆಡೆ ನಾವು ಕಂಬಿಗಳ ಮೇಲೆ ಚಲಿಸುವ ವಾಹನಗಳ  ಸರಣಿಯೊಂದರಲ್ಲಿ ಕೂತರೆ, ಅದು ಚಲಿಸುತ್ತಾ ನಮ್ಮನ್ನು ‘ಸ್ನೋ ವೈಟ್ ಮತ್ತು ಏಳು ಜನ ಕುಳ್ಳರು’ ಕಥಾಜಗತ್ತಿನೊಳಕ್ಕೆ ಕರೆದುಕೊಂಡು ಹೋಗುತ್ತದೆ.  ದಟ್ಟವಾದ ಕಾಡು; ಅತ್ತ ಇತ್ತ ಗುಹೆಗಳು; ಗುಹೆಗಳೊಳಗೆ ಉರಿಯುವ ಬೆಂಕಿ, ಕುಣಿಯುವ ನೆರಳುಗಳು; ದಟ್ಟವಾದ ಕಾಡಿನುದ್ದಕ್ಕೂ ಕೇಳಿಬರುವ ನಾನಾ ಬಗೆಯ ಪ್ರಾಣಿ – ಪಕ್ಷಿಗಳ ಕೂಗು ; ಹಲ್ಲು ಕಿರಿಯುವ ಪ್ರೇತಗಳ ಕುಣಿತ, ಕಿರುಚು. ಇವುಗಳ ಮಧ್ಯೆ ಹಾದು ನಾವು ಏಳು ಜನ ಕುಳ್ಳರ ಗುಹೆಯೊಳಕ್ಕೇ ಪ್ರವೇಶಿಸಿದ ಅನುಭವವಾಗುತ್ತದೆ. ಇನ್ನೊಂದು ಪ್ರದರ್ಶನ : ನೀರ ಮೇಲೆ ಸಾಲುಸಾಲು ದೋಣಿಗಳು. ಈ ದೋಣಿಗಳಲ್ಲೊಂದರಲ್ಲಿ ನಾವು ಕೂರುತ್ತೇವೆ. ಇತರ ದೋಣಿಗಳ ಜತೆ, ಇದೂ ತೇಲುತ್ತ ಗುಹೆಯಾಕಾರದ ಬಾಗಿಲೊಂದರ ಮೂಲಕ ಒಂದು ಮಕ್ಕಳ ರಾಜ್ಯವನ್ನು ನಾವು ಪ್ರವೇಶಿಸುತ್ತೇವೆ. ಸೊಗಸಾದ ವಾದ್ಯವೃಂದ ಪ್ರಾರಂಭವಾಗುತ್ತದೆ. ಈ ವಾದ್ಯ ಸಂಗೀತದ ತಾಳ – ಲಯಕ್ಕೆ ಅನುಸಾರವಾಗಿ ನಮ್ಮ ದೋಣಿಯ ಎರಡೂ ಬದಿಗೆ ವಿವಿಧ ಬಣ್ಣದ ತೊಡುಗೆಗಳನ್ನು ತೊಟ್ಟು ಹಾಡುವ – ಕುಣಿಯುವ ಬೊಂಬೆಗಳು. ಈ ಬೊಂಬೆಗಳೋ ಜಗತ್ತಿನ ಎಲ್ಲಾ ದೇಶದ ಉಡುಗೆ- ತೊಡುಗೆ ಹಾಗೂ ಆಕಾರಗಳನ್ನು ಉಳ್ಳಂಥವು. ದೋಣಿ ಚಲಿಸುತ್ತಲೇ ಇರುತ್ತದೆ. ಜಗತ್ತಿನ ಬೇರೆ ಬೇರೆ ದೇಶದ ಬಹುಸಂಖ್ಯೆಯ ಪುಟಾಣಿಬೊಂಬೆಗಳು, ಮೊಳಗುವ ವಾದ್ಯ ಸಂಗೀತದ ರಾಗ-ತಾಳವನ್ನು ಹಿಡಿದು ಕುಣಿಯುತ್ತವೆ, ಹಾಡುತ್ತವೆ. ಆ ಬೊಂಬೆಗಳ ಮುಖಭಾವ, ಅವುಗಳ ಅಭಿನಯ, ರಂಗುರಂಗಿನ ಉಡುಗೆಗಳು – ಈ ಎಲ್ಲವೂ ಅದ್ಭುತವಾಗಿದೆ. ಸುಮಾರು ಹದಿನೈದು ನಿಮಿಷಗಳ ಕಾಲದ ಈ ದೋಣಿಯ ಪ್ರಯಾಣದಲ್ಲಿ ಜಗತ್ತಿನ ಎಲ್ಲಾ ದೇಶದ ಪುಟಾಣಿಗಳ ಹಾವ ಭಾವ-ವಿಲಾಸಗಳೊಡಗೂಡಿದ ಈ ನರ್ತನ ದೃಶ್ಯ ಮಾಲಿಕೆಗೆ ಕೊಟ್ಟಿರುವ ಹೆಸರು “Small small world ‘ಪುಟ್ಟ ಪುಟಾಣಿಗಳ ಪ್ರಪಂಚ’ – ಎಂದು. ಇನ್ನೊಂದು ಕಡೆ ‘ಹಳ್ಳಿಗಾಡಿನ ಕರಡಿಗಳ ಮೇಳ’ (Country Bears Jamboori) ಎಂಬ ಪ್ರದರ್ಶನವಿದ್ದ ಸಣ್ಣ ಥಿಯೇಟರನ್ನು ಪ್ರವೇಶ ಮಾಡಿದೆ. ಅದೊಂದು ಸಭಾಂಗಣ. ಹೋಗಿ ಕೂತ ಒಡನೆಯೇ ದೀಪಗಳಾರಿ, ಮುಂದಿನ ರಂಗಸ್ಥಳದ ತೆರೆ ಸರಿದು, ಝಗ್ಗನೆ ಬಿದ್ದ ಬೆಳಕಿನಲ್ಲಿ ಸುಮಾರು ವಿಸ್ತಾರವಾದ ವೇದಿಕೆಯ ಮೇಲೆ ಕರಡಿಗಳ ವಾದನ ಗೋಷ್ಠಿ, ಹಾಡು ಕುಣಿತ ಪ್ರಾರಂಭವಾಯಿತು. ವಿವಿಧ ವೇಷಗಳನ್ನು ತೊಟ್ಟ ಅಪ್ಪ ಕರಡಿ, ಅಮ್ಮ ಕರಡಿ, ಪುಟಾಣಿ ಕರಡಿಗಳ ಹಾಡು ಮತ್ತು ಕುಣಿತ ಎಂಥವರಿಗೂ ಸಂತೋಷವನ್ನು ಕೊಡುವಂಥದಾಗಿದೆ.

ಈ ಪ್ರದರ್ಶನಾಲಯದಿಂದ ಹೊರಗೆ ಬಂದು, ಸ್ವಲ್ಪ ದೂರದಲ್ಲಿ ನಿಂತ ಹಡಗೊಂದನ್ನು ಏರಿದೆ. ಎರಡು ಮೂರು ಹಂತಗಳ ಈ ಹಡಗು ವೃತ್ತಾಕಾರವಾಗಿ ಹರಿಯುವ ನದಿಯೊಂದರಲ್ಲಿ ನಮ್ಮನ್ನು ಸಂಚಾರಕ್ಕೆ ಕರೆದೊಯ್ಯುತ್ತದೆ. ಹಡಗು ಮುಂದುವರಿದಂತೆ ನದಿಯ ಅತ್ತ ಇತ್ತ ದಟ್ಟವಾದ ಕಾಡು. ಒಂದು ಬಗೆಯ ವಿಲಕ್ಷಣ ಭಯ ಮಿಶ್ರಿತ ಮೌನ. ಈ ಮೌನದೊಳಗೆ ಇದ್ದಕ್ಕಿದ್ದ ಹಾಗೆ ಮುಂದಣ ನದೀ ಜಲವನ್ನು ಸೀಳಿಕೊಂಡು ಬಾಯ್ದೆರೆದು ಮೇಲೆದ್ದ ಮೊಸಳೆಯೊಂದು ನಮ್ಮನ್ನು ಗಾಬರಿಗೊಳಿಸುತ್ತದೆ. ಇನ್ನೂ ಮುಂದೆ ಹೋದರೆ, ನದೀ ತೀರದಲ್ಲೊಂದು ಪರ್ವತ ಶಿಖರ. ಅದರ ತಪ್ಪಲಿನಲ್ಲಿರುವ ಸಣ್ಣ ಹಳ್ಳಿಯೊಂದು ಈಗ ತಾನೆ ದರೋಡೆಕೋರರ ದಾಳಿಗೆ ತುತ್ತಾಗಿದೆ. ಅವರು ಕೊಳ್ಳೆ ಹೊಡೆದ ನಂತರ ಗುಡಿಸಲುಗಳಿಗೆ ಹಚ್ಚಿದ ಬೆಂಕಿ ಇನ್ನೂ ಉರಿಯುತ್ತಿದೆ. ಹಡಗು ಮುಂದುವರಿಯುತ್ತದೆ. ಅಲ್ಲಿ ಕಾಡನಡುವೆ ರೆಡ್‌ಇಂಡಿಯನ್ ಜನರ ಡೇರೆಯಾಕಾರದ ನೆಲೆಗಳು; ಆ ನಿವಾಸದ ಹೊರಗೆ ಕಟ್ಟಿ ಹಾಕಿದ ಕುದುರೆಗಳು; ಅವುಗಳ ಪಕ್ಕದಲ್ಲಿ ತಲೆಗೆ ಕೆಂಪು ಗರಿಗಳನ್ನು ಸಿಕ್ಕಿಸಿಕೊಂಡ ರೆಡ್‌ಇಂಡಿಯನ್ ತರುಣ; ಇನ್ನೂ ಸ್ವಲ್ಪ ಮುಂದೆ ನದಿಯಲ್ಲಿ ಮೀನು ಹಿಡಿಯುತ್ತ ಕುಳಿತ ಅದೇ ಬುಡಕಟ್ಟಿನ ಮುದುಕ. ಹಡಗು ಇನ್ನಷ್ಟು ದೂರ ಹೋದೊಡನೆ ನೀರೊಳಗಿಂದ ಢಮಾರ್ ಎಂದು ಆಸ್ಫೋಟಿಸಿದ ಶಬ್ದ; ಪಕ್ಕದ ದಟ್ಟವಾದ ಕಾಡಿನ ಮರಗಳ ಹಿಂದೆ ಹಲವರು ಕೇಕೆ ಹಾಕುವ ಅಬ್ಬರ. ಅಂತೂ ಈ ನದಿಯೊಳಗಿನ ಸಂಚಾರದ ಅರ್ಧಗಂಟೆಯ ಕಾಲ, ಪಯಣಿಗರನ್ನು ಹೀಗೆ ಭಯ-ಕುತೂಹಲ – ತಲ್ಲಣಗಳಲ್ಲಿ ನಿಲ್ಲಿಸುವ ಉದ್ದೇಶಕ್ಕೆಂದೇ ನಿಯೋಜಿತವಾದದ್ದು.

ಮಕ್ಕಳಿಗಾಗಿಯೆ ಇರುವ ವಿವಿಧ ವಿನೋದ ವಿಹಾರಗಳು ಕ್ರೀಡೆಗಳು ಮತ್ತು ಇನ್ನೂ ಇದೇ ಬಗೆಯ ಎಷ್ಟೋ ಪ್ರದರ್ಶನಗಳನ್ನು ನೋಡುತ್ತಾ ಸುಸ್ತಾಗಿ ಹೋಯಿತು. ನಾನು ಒಂದಷ್ಟು ಹಾಲು-ಹಣ್ಣಿನ – ರಸ – ಆಪಲ್ ಪೈ ಇತ್ಯಾದಿಗಳನ್ನು ಸೇವಿಸಿ, ಅಲ್ಲಲ್ಲಿ ಕುಳಿತು ವಿಶ್ರಮಿಸುತ್ತ ಸುಮಾರು ಮೂರೂವರೆಯ ವೇಳೆಗೆ, ವಿಸ್ತಾರವಾಗಿ ಚಾಚಿಕೊಂಡ ಸರೋವರವೊಂದರ ದೊಡ್ಡ ಬೀದಿಯ ಎರಡೂ ಬದಿಗೆ ಜನರು ಏನನ್ನೋ ನೋಡಲೆಂದು ಮಕ್ಕಳನ್ನು ಮುಂದುಮಾಡಿಕೊಂಡು ಜಮಾಯಿಸಿದ್ದನ್ನು ಕಂಡೆ. ನಾನೂ ಈ ಸಂದಣಿಯಲ್ಲಿ ತೂರಿಕೊಂಡು ನೋಡುತ್ತೇನೆ, ಒಂದು ಭರ್ಜರಿ ಉತ್ಸವ ಬರುತ್ತಿದೆ. ಬಗೆಬಗೆಯ ಸಿಂಗಾರಗೊಂಡ ವಾಹನಗಳ ಮೇಲೆ ಮಕ್ಕಳ ಕಲ್ಪನಾಜಗತ್ತಿನ ಸಮಸ್ತವೂ ಬರುತ್ತಿದೆ; ಬೆಳ್ಳನೆ ಉಡುಗೆಯ, ಹಾಲಿನ ಬಣ್ಣದ ರೆಕ್ಕೆಯ, ಹೊಳೆವ ಕಿರೀಟಗಳ, ಕಿತ್ತಲೆ ಬಣ್ಣದ ಮುಖದ ಅಪ್ಸರೆಯರು ಮಂತ್ರದಂಡಗಳನ್ನು ಹಿಡಿದು ಮುಗುಳುನಗುತ್ತಾ ನಿಂತಿದ್ದಾರೆ; ಉಯ್ಯಲಾಡುವ ಬೆಳ್ಳಿಗಡ್ಡದ, ಕಪ್ಪುನಿಲುವಂಗಿ ತೊಟ್ಟ ಮುದುಕರು; ಮಾಟಗಾತಿಯರು; ರಾಜಕುಮಾರರು; ರಾಜಕುಮಾರಿಯರು; ಹದ್ದುಗಳು, ನವಿಲುಗಳು, ಹಂಸಗಳು, ಮೊಲಗಳು, ನರಿಗಳು, ಕರಡಿಗಳು; ಹಾಡುವ ಕುಣಿಯುವ ಮೋಹಕವಾದ ಹುಡುಗರು, ಹುಡುಗಿಯರು, ನಿಯತವಾದ ವಾದ್ಯ ಸ್ವರಗಳ ಹಿನ್ನೆಲೆಯಲ್ಲಿ, ಈ ಪಾತ್ರಧಾರಿಗಳು ಎರಡೂ ಬದಿಗೆ ಕಣ್ಣರಳಿಸಿಕೊಂಡು ನಿಂತ ಮಕ್ಕಳ ಕಡೆಗೆ ಮುದ್ದಿನ ನಗೆ ಬೀರುತ್ತಾ, ಕೈ ಸನ್ನೆ ಮಾಡುತ್ತಾ ಮುನ್ನಡೆಯುವ ಈ ಉತ್ಸವ, ಶೈಶವಜಗತ್ತಿನ ಕಲ್ಪನಾ ವಿಲಾಸಗಳನ್ನು ಕಣ್ಣೆದುರಿಗೆ ಸಮೃದ್ಧವಾಗಿ ತೆರೆದು ಹಾಸಿದಂತೆ ತೋರುತ್ತದೆ. ಮಕ್ಕಳ ಜತೆಗೆ ದೊಡ್ಡವರೂ ಈ ಮೋದದ ಉತ್ಸವದಲ್ಲಿ ಮೈ ಮರೆಯುತ್ತಾರೆ. ಡಿಸ್ನಿಲೋಕದಲ್ಲಿ ಮಗುವುತನದ ಮುಗ್ಧ ವಿಸ್ಮಯದ ಬಂಗಾರದ ಬೆಳಕು ತುಳುಕಾಡುತ್ತದೆ. ಅಮೆರಿಕಾದ ಮಕ್ಕಳು ನಿಜವಾಗಿಯೂ ಅದೃಷ್ಟಶಾಲಿಗಳು. ಬಾಲ್ಯಕಾಲದ  ಈ ಮುಗ್ಧ ವಿಸ್ಮಯದ ಜಗತ್ತನ್ನು ಹೀಗೆ ಸಾಕಾರಗೊಳಿಸಿ ಮಕ್ಕಳನ್ನು ಅದರೊಂದಿಗೆ ಬೆಸೆಯುವ ಈ ವ್ಯವಸ್ಥೆಯ ಹಿಂದೆ, ಮಕ್ಕಳನ್ನು ಕುರಿತ ಎಂಥ ಅದಮ್ಯವಾದ ಪ್ರೀತಿ ಕೋಡಿವರಿದಿದೆ! ಎಳೆಯತನದ ಕನಸುಗಳನ್ನು ವಿಸ್ಮಯಗಳನ್ನು ಮಕ್ಕಳಿಗಾಗಿ ಹೀಗೆ ಉಳಿಸುವುದು, ಅವುಗಳ ಮಾನಸಿಕ ಬೆಳವಣಿಗೆಯ ದೃಷ್ಟಿಯಿಂದ ಎಷ್ಟು ಮುಖ್ಯವಾದುದು ಎಂಬುದನ್ನು ಇಲ್ಲಿ ನಾವು ಸಾಕ್ಷಾತ್ತಾಗಿ ತಿಳಿದುಕೊಳ್ಳಬಹುದು. ಆದರೆ ನಮ್ಮ ದೇಶದ, ಮುಖ್ಯವಾಗಿ ಅನಕ್ಷರಸ್ಥ ಬಹುಸಂಖ್ಯಾತಜನವಿರುವ ಗ್ರಾಮೀಣ ಪರಿಸರದ ಮಕ್ಕಳಿಗೆ, ‘ಬಾಲ್ಯ’ ಅನ್ನುವುದು ಇದೆಯೆ? ಬಾಲ್ಯ ಕಾಲದ ಮುಗ್ಧ ವಿಸ್ಮಯದ ಜಗತ್ತು ಅವುಗಳ ಪಾಲಿಗೆ ಉಳಿದಿದೆಯೆ ಎಂದು ಎಷ್ಟೋ ಸಲ ನನಗೆ ಅನಿಸಿದೆ. ಅಮೆರಿಕಾದ ಮಕ್ಕಳು ಈ ಒಂದು ವಿಚಾರದಲ್ಲಿ ತುಂಬ ಅದೃಷ್ಟಶಾಲಿಗಳು ಎಂದು ನಾನು ಅಂದುಕೊಂಡರೂ, ಅಮೆರಿಕಾದ ಸಾಮಾಜಿಕ ಪರಿಸರದಲ್ಲಿ, ಮಕ್ಕಳಿಗೊದಗುವ ಈ ಬಗೆಯ ಮುಗ್ಧ – ಸುಂದರ ಅನುಭವಗಳು ಯಾಕೆ ಮುಂದೆ ತಂದೆ-ತಾಯಂದಿರ ಹಾಗೂ ಮಕ್ಕಳ ಸಂಬಂಧಗಳಲ್ಲಿ ಪರಿಣಾಮಕಾರಿ ಯಾಗುವುದಿಲ್ಲ ಅನ್ನುವುದು ನನ್ನನ್ನು ಕಾಡುವ ಪ್ರಶ್ನೆಯಾಗಿದೆ. ಮಕ್ಕಳು ಶೈಶವಾವಸ್ಥೆಯಲ್ಲಿ ಇರುವಾಗ ಇಲ್ಲಿನ ತಂದೆ-ತಾಯಂದಿರು ಅವುಗಳ ಬಗ್ಗೆ ತೋರುವ ಪ್ರೀತಿ, ಅವುಗಳನ್ನು ಕುರಿತು ವಹಿಸುವ ಮುತುವರ್ಜಿ ಈ ಎಲ್ಲವೂ ಮೇಲೆ ನೋಡಲು ತುಂಬ ಸೊಗಸಾಗಿಯೇ ತೋರುತ್ತವೆ. ಅಮೆರಿಕಾದ ಯಾವ ತಂದೆ-ತಾಯಂದಿರೂ, ಯಾವ ಕಾರಣಕ್ಕೂ ತಮ್ಮ ಮಕ್ಕಳನ್ನು ದಂಡಿಸುವುದಿಲ್ಲ. ‘ದಂಡಿಸುವುದಿಲ್ಲ’ ಅಲ್ಲ, ‘ದಂಡಿಸುವಂತಿಲ್ಲ’ ಅನ್ನುವುದು ಸ್ವಾರಸ್ಯದ ಸಂಗತಿಯಾಗಿದೆ. ತಂದೆ ತಾಯಂದಿರು, ತಮ್ಮ ಮಕ್ಕಳನ್ನು ಜೋರಾಗಿ – ಅಂದರೆ ಆಚೀಚೆ ಮನೆಯವರಿಗೆ ಕೇಳುವಂತೆ, ಗದರಿಸಿಕೊಳ್ಳುವುದಾಗಲಿ, ಹೊಡೆಯುವುದಾಗಲಿ ಅಮೆರಿಕಾದಲ್ಲಿ ಕಾನೂನಿನ ಪ್ರಕಾರ ಒಂದು ಅಪರಾಧವಾಗಿದೆ. ಪಕ್ಕದ ಮನೆಯವರೇನಾದರೂ, ತಮ್ಮ ನೆರೆಹೊರೆಯವರು ಅವರವರ ಮಕ್ಕಳನ್ನು ಜೋರಾಗಿ ಬಯ್ಯುವುದನ್ನು, ಹೊಡೆಯುವುದನ್ನು ಕಂಡರೆ ಆ ಕುರಿತು ಪೊಲೀಸಿಗೆ ದೂರು ಕೊಟ್ಟರೆ ಮುಗಿಯಿತು. ತಮ್ಮ ಮಕ್ಕಳನ್ನು ದಂಡಿಸಿದ ಅಪರಾಧಕ್ಕೆ (Child abuse) ಆಯಾ ತಂದೆ ತಾಯಂದಿರು ಕಾನೂನಿನ ಪ್ರಕಾರ ಶಿಕ್ಷೆಗೆ ಒಳಗಾಗಬಹುದು. ಈ ದಂಡನೆಯ ಭಯ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿದೆಯೋ, ಅಥವಾ ಅದು ಮುಖ್ಯವಾಗಿದೆಯೋ ನಾನು ಹೇಳಲಾರೆ. ಆದರೆ ತಂಟೆಮಾಡುವ ಯಾವ ಒಂದು ಮಗುವನ್ನೂ ಇಲ್ಲಿನ ತಂದೆ ತಾಯಂದಿರು ಗದರಿಕೊಂಡದ್ದನ್ನು ಕೂಡ ನಾನು ಕಾಣಲಿಲ್ಲ. ಅದರ ಬದಲು  ಹಾಗೆ ತಂಟೆ ಮಾಡಿದ ಮಗುವನ್ನು ಕೂರಿಸಿಕೊಂಡು ಅದರ ಮನೋಗತವನ್ನು ಅತ್ಯಂತ ತಾಳ್ಮೆಯಿಂದ ಕೇಳಿ, ಅದನ್ನು ಮಾತಿನ ಮೂಲಕ ಒಲಿಸಿಕೊಂಡದ್ದನ್ನು ನಾನು ಹಲವು ಸಲ ಗಮನಿಸಿದ್ದೇನೆ. ಅಂತೂ ಇಲ್ಲಿನ ಮಕ್ಕಳ ಬಾಲ್ಯ ಜೀವನ, ಬಹುಮಟ್ಟಿಗೆ ಬೆದರಿಕೆ ದಂಡನೆಗಳಿಲ್ಲದೆ ಸುಗಮವಾಗಿಯೇ ಇರುವುದೆಂದು ನಾನು ತಿಳಿದಿದ್ದೇನೆ. ಆದರೆ ಮಕ್ಕಳು ಮನೆಯೊಳಗೆ ಒಂದು ಬಗೆಯ ಶಿಸ್ತಿನಲ್ಲಿ ಬಾಳುವ ಹಾಗೂ ಬೆಳೆಯುವ ಕ್ರಮ, ಎಳೆಯಂದಿನಿಂದ ಪ್ರತ್ಯೇಕವಾದ ಕೋಣೆಗಳೊಳಗೆ ಇದ್ದುಕೊಂಡು, ತಂದೆ ತಾಯಂದಿರ ಸಂಪರ್ಕವನ್ನು ನಿಯಮಿತ ವೇಳೆಗಳಿಗೆ ಸೀಮಿತಗೊಳಿಸಿಕೊಂಡು, ತಮ್ಮದೇ ಆದ ಪ್ರತ್ಯೇಕ ಅಸಿತ್ತ್ವವನ್ನೂ, ವಿಚಾರ ಕ್ರಮವನ್ನೂ ರೂಢಿಸಿಕೊಳ್ಳಬೇಕಾದ ಈ ಬದುಕಿನ ವಿಧಾನ, ಒಂದು ರೀತಿಯಲ್ಲಿ ಗರಿ ಬಲಿಯುವ ತನಕ ಗೂಡಿನೊಳಗಿದ್ದುಕೊಂಡು, ಗರಿ ಬಲಿತ ಮೇಲೆ ಗೂಡುಗಳನ್ನು ತೊರೆದು ಯಾವುದೇ ಪೂರ್ವ ಸಂಬಂಧಗಳಿಗೆ ಕಟ್ಟು ಬೀಳದೆ ಹಾರಿ ಹೋಗುವ ಹಕ್ಕಿಗಳ ನಡವಳಿಕೆಯಂತೆಯೆ ಪರ‍್ಯವಸಾನಗೊಳ್ಳುತ್ತದೆ. ಮಕ್ಕಳು ಹದಿನೈದು-ಹದಿನೆಂಟನೆಯ ವಯಸ್ಸನ್ನು ದಾಟಿದರೆಂದರೆ, ಅವರಿಗೂ, ಅವರ ಮನೆಗಳಿಗೂ ಇರಬಹುದಾದ ಪ್ರೀತಿಯ ನಂಟಿನ ಗಂಟು ಕಳಚಿಕೊಂಡ ಹಾಗೆಯೇ. ತಾವು ತಮ್ಮ ಉದ್ಯೋಗಗಳನ್ನು ಹುಡುಕಿಕೊಂಡು, ತಮ್ಮ ಬದುಕಿನ ಸಂಗಾತಿಗಳನ್ನು ತಾವೇ ಆಯ್ದುಕೊಂಡು, ತಮ್ಮದೇ ಆದ ಜೀವನವನ್ನು ಬಾಳುವ ಈ ಮಕ್ಕಳು, ಮುಂದೆ ಅಪ್ಪ – ಅಮ್ಮಂದಿರ ಪಾಲಿಗೆ ಕೇವಲ ‘ನಂಟ’ರಂತೆ ಆಗಿಬಿಡುತ್ತಾರೆ. ತಮಗೆ ಬಿಡುವಾದಾಗ, ಒಮ್ಮೆ ಮನೆಗೆ ಬಂದು ಅಪ್ಪ – ಅಮ್ಮಂದಿರನ್ನು ಮಾತನಾಡಿಸಿಕೊಂಡು, ತಮ್ಮ ತಮ್ಮ ನೆಲೆಗಳಿಗೆ ಹೋದರೆಂದರೆ, ವಯಸ್ಸಾದ ತಂದೆ-ತಾಯಂದಿರು ಒಂದು ಬಗೆಯ ಅಸಹಾಯಕ ಏಕಾಕಿತನದಲ್ಲಿ ಕಾಲಹಾಕಬೇಕಾಗುತ್ತದೆ.

***

ಆರ್ಲೆಂಡೋದಲ್ಲಿ, ಉಳಿದ ಎರಡು ದಿನಗಳಲ್ಲಿ ನಾನು ನೋಡಿದ್ದು, ಡಿಸ್ನಿ  ಜಗತ್ತಿನ  ವಿಸ್ತಾರದೊಳಗಿರುವ ಇನ್ನೂ ಎರಡು ಭಾಗಗಳನ್ನು. ಇವುಗಳಲ್ಲಿ ಸಾಗರಜಗತ್ತು ಮುಖ್ಯವಾಗಿ ಸಮುದ್ರಕ್ಕೆ ಸಂಬಂಧಪಟ್ಟ ಜಲಚರಗಳ ಹಾಗೂ ಪಕ್ಷಿಗಳ ಒಂದು ಪ್ರದರ್ಶನ ಪ್ರಪಂಚ.  ಭಾರೀ ಗಾತ್ರದ ತಿಮಿಂಗಿಲಗಳು; ವಿವಿಧ ಕ್ರೀಡೆಗಳಲ್ಲಿ ಪಳಗಿದ ಡಾಲ್ಫಿನ್‌ಗಳು; ಮಿರಿಮಿರಿ ಮಿಂಚುವ ಅಚ್ಚ ಕಪ್ಪುಬಣ್ಣದ ‘ಸೀಲ್’ಗಳು; ಸಮುದ್ರಸಿಂಹ ಎಂದು ಕರೆಯಲಾಗುವ ವಾಲ್ರಸ್‌ಗಳು ; ಮನುಷ್ಯರಿಗೆ ಮಾರಕವಾದ ಭಯಂಕರ ಷಾರ್ಕ್‌ಗಳು; ಹಿಮಾಚ್ಛಾದಿತ ಕಡಲತೀರಗಳಲ್ಲಿ, ಎದ್ದು ನಿಂತರೆ ಕಪ್ಪುಕೋಟು ತೊಟ್ಟು ನಿಂತ ಮನುಷ್ಯರಂತೆ ತೋರುವ ಬಹುಸಂಖ್ಯೆಯ ಪೆಂಗ್‌ವಿನ್ ಪಕ್ಷಿಗಳು; ಇನ್ನೂ ಬಹುಬಗೆಯ ಸಮುದ್ರ ಸಂಬಂಧಿಯಾದ ಜಲಚರ ಹಾಗೂ ಪಕ್ಷಿಗಳು – ಈ ಎಲ್ಲವಕ್ಕೂ ಅವುಗಳಿಗೆ ತಕ್ಕ ಪರಿಸರವನ್ನೂ, ಮತ್ತೆ ಪ್ರತ್ಯೇಕವಾದ ಪ್ರದರ್ಶನಾಲಯಗಳನ್ನೂ ಏರ್ಪಡಿಸಲಾಗಿದೆ. ಮತ್ತು ತಿಮಿಂಗಿಲ, ವಾಲ್ರಸ್, ಡಾಲ್ಫಿನ್ ಇತ್ಯಾದಿಗಳ ವಿವಿಧ ಕ್ರೀಡೆಗಳನ್ನು, ಸಂಗೀತಕ್ಕೆ ಅನುಗುಣವಾಗಿ ಪ್ರದರ್ಶಿಸುವುದನ್ನು ವೀಕ್ಷಿಸಲು ಅನುಕೂಲವಾದ, ಏಕಕಾಲಕ್ಕೆ ಸಹಸ್ರಾರು ಜನ ಕೂರಲು ತಕ್ಕ ಬಯಲು ರಂಗಮಂದಿರಗಳೂ ಇವೆ.

ವಿಸ್ತಾರವಾದ ಈ ಸಾಗರ ಜಗತ್ತಿನ ಪರಿಸರದಲ್ಲಿರುವುದನ್ನೆಲ್ಲಾ ನೋಡಲು ಕೇವಲ ಒಂದು ದಿನ ಏನೇನೂ ಸಾಲದು. ಕೆಲವು ಜಲಚರಗಳನ್ನು ಕುರಿತ ವಿಶೇಷ ಮಾಹಿತಿಗಳನ್ನು ಕೊಡುವ ಚಲನಚಿತ್ರಗಳ ಪ್ರದರ್ಶನ, ನಿಯಮಿತವಾದ ವೇಳೆಗನುಸಾರವಾಗಿ ಇಡೀ ದಿನದುದ್ದಕ್ಕೂ ನಡೆಯುತ್ತಿರುತ್ತದೆ. ಜತೆಗೆ ‘ಫ್ಯಾಂಟಸಿ ಥಿಯೇಟರ್’ನಲ್ಲಿ ನಾಟಕವೊಂದನ್ನು ವೀಕ್ಷಿಸುವ ಅವಕಾಶ ನನಗೆ ದೊರೆಯಿತು. ನಾಟಕ ಶಾಲೆ ಸುಮಾರು ಎರಡು ಸಾವಿರ ಜನ ಕೂತು ನೋಡಲು ಅನುಕೂಲವುಳ್ಳದ್ದು. ನಾಟಕದ ರಂಗಸ್ಥಳವೇ ವಿಸ್ತಾರವಾದದ್ದು. ದೀಪಗಳಾರಿ ತೆರೆ ಸರಿದಾಗ, ಒಂದು ದೃಶ್ಯ : ಒಬ್ಬಳು ಪುಟ್ಟ ಹುಡುಗಿ, ತಾನು ಶಾಲೆಯಲ್ಲಿ ಬರೆದು ಒಪ್ಪಿಸಬೇಕಾದ Science Project (ವೈಜ್ಞಾನಿಕ ಪ್ರಬಂಧ)ಗಾಗಿ, ಸಮುದ್ರ ಪ್ರಾಣಿಗಳನ್ನು ಕುರಿತ ಪುಸ್ತಕವೊಂದರ ಪುಟವನ್ನು ತೆರೆಯುತ್ತಾಳೆ. ಕೂಡಲೇ ದೃಶ್ಯ ಬದಲಾಯಿಸುತ್ತದೆ. ಆ ಹುಡುಗಿ ಈಗ ಸಮುದ್ರದ ತಳದಲ್ಲಿ ನಿಂತಿದ್ದಾಳೆ. ಅವಳ ಸುತ್ತ ಹಲವು ಬಗೆಯ ಜಲಚರಗಳು ಸಂಚರಿಸುತ್ತವೆ. ಅಲ್ಲಿ ಆಕೆ ಒಂದು ಭಾರೀ ಗಾತ್ರದ ಪ್ರಾಚೀನ ಕಾಲದ ಆಮೆಯನ್ನು ಭೆಟ್ಟಿಯಾಗುತ್ತಾಳೆ. ಅದು ಈ ಹುಡುಗಿಗೆ ಕಡಲತಳದ ಇನ್ನೂ  ಇತರ ಜಲಚರಗಳನ್ನು ಪರಿಚಯ ಮಾಡಿಕೊಡುತ್ತದೆ. ಅವುಗಳೆಲ್ಲಾ ತಮ್ಮ ಪರಿಚಯವನ್ನು – ತಾವು ಯಾವ ವರ್ಗಕ್ಕೆ ಸೇರಿದವರು, ತಮ್ಮ ಸಂತಾನ ಎಷ್ಟು ಶತಮಾನಗಳ ಹಳೆಯದು, ತಮ್ಮ ಗುಣ ಲಕ್ಷಣಗಳೇನು, ಇತ್ಯಾದಿ – ಈ ಹುಡುಗಿಗೆ ವಿವರಿಸಿ, ಅವಳ ಜತೆ ಹಾಡಿಕೊಂಡು ಕುಣಿಯುತ್ತವೆ. ಮತ್ತೆ ಹಾಡು ಮುಗಿದಾಗ ದೃಶ್ಯ ಬದಲಾಯಿಸುತ್ತದೆ. ಆ ಪುಟ್ಟ ಹುಡುಗಿ ತನ್ನ ಓದುವ ಕೋಣೆಯಲ್ಲಿ ತೆರೆದ ಪುಸ್ತಕದೆದುರು ಕೂತಿರುತ್ತಾಳೆ. ಇಡೀ ರೂಪಕದ ರಾಗಸಂಯೋಜನೆ ಹಾಗೂ ನರ್ತನದ ಜತೆಗೆ, ‘ಮನುಷ್ಯ ತಿಳಿದುಕೊಳ್ಳುವುದು ಅಗಾಧವಾಗಿದೆ, ಆದರೆ ಕೊನೆಗೂ ಮನುಷ್ಯ ನಿಲ್ಲುವುದು ಪ್ರಶ್ನೆಗಳಲ್ಲಿಯೇ’ – ಎಂಬ ‘ಭರತವಾಕ್ಯ’ದೊಂದಿಗೆ ಮುಗಿಯುವ, ಕೇವಲ ನಲವತ್ತು ನಿಮಿಷಗಳ ಕಾಲದ ಈ ಪ್ರದರ್ಶನ ತುಂಬ ಪರಿಣಾಮ ಕಾರಿಯಾಗಿದೆ.

ಈ ನಾಟಕರಂಗದಿಂದ ಹೊರಕ್ಕೆ ಬಂದು ಮತ್ತಷ್ಟು ದೂರ ನಡೆದೆ. ಅಲ್ಲಿ ಒಂದು ದೊಡ್ಡ ಸರೋವರ. ಅದಕ್ಕೆ ಲಗತ್ತಾಗಿ ಭಾರೀ ಪ್ರೇಕ್ಷಕಾಂಗಣ. ಅದರ ಹೆಸರು ಅಟ್ಲಾಂಟಿಕ್ ಥಿಯೇಟರ್. ಹಲವು ಹಂತಗಳ ಈ ಕ್ರೀಡಾಂಗಣ (ಸ್ಟೇಡಿಯಂ)ದಲ್ಲಿ ಏಕಕಾಲಕ್ಕೆ ಸುಮಾರು ಹತ್ತು ಸಾವಿರ ಜನ ಕೂತು ನೋಡಬಹುದು. ಎದುರಿನ ಸರೋವರಕ್ಕೂ, ಪ್ರೇಕ್ಷಕಾಂಗಣಕ್ಕೂ ನಡುವಣ ಅವಕಾಶವೇ ರಂಗಸ್ಥಳ. ಈ ಪ್ರೇಕ್ಷಾಮಂದಿರದೊಳಗೆ ಕೂತು, ಎದುರಿಗೆ ಚಾಚಿಕೊಂಡ ಸರೋವರದ ರಂಗಸ್ಥಳದ ಮೇಲೆ ವಿವಿಧ ಪ್ರದರ್ಶನಗಳು ನಡೆಯುವುದನ್ನು ನೋಡಬಹುದು. ಆವತ್ತಿನ (೮.೧೦.೮೭) ಪ್ರದರ್ಶನದ ಹೆಸರು Ski pirates (ನೀರ ಮೇಲೆ ಜಾರುವ ಕಡಲುಗಳ್ಳರು). ‘ಸ್ಕೀಯಿಂಗ್’ ಎಂಬುದು ನೀರ ಮೇಲೆ ಅಥವಾ ಹಿಮದ ಮೇಲೆ ಜಾರಿ ಆಡುವ ಒಂದು ಆಟ. ಮೊದಲು ಒಬ್ಬ ಬಿಳಿಗಡ್ಡದ ಪುರಾತನ ನಾವಿಕ ಬರುತ್ತಾನೆ. ಅವನೇ ಈ ಪ್ರದರ್ಶನದ ಸೂತ್ರಧಾರ. ಅವನು ಹಾಡುತ್ತಾ ಕುಣಿಯುತ್ತಾ ಬರುತ್ತಾನೆ. ಬಂದವನೇ ಒಂದು ಕತೆ ಹೇಳುತ್ತಾನೆ ಅಥವಾ ಕಟ್ಟುತ್ತಾನೆ: ಎದುರಿಗೇ ಕಾಣುತ್ತದಲ್ಲ, ನೀವು ನೋಡುವ ಈ ಸರೋವರದ ಜಲರಾಶಿ ಇದೇ ಕಡಲು, ಅದರಲ್ಲಿ ಕಡಲುಗಳ್ಳರಿದ್ದಾರೆ ಎಚ್ಚರಿಕೆ ಎಂದು ಪೀಠಿಕೆ ಹಾಕುತ್ತಾನೆ. ಈ ವೇಳೆಗೆ ತಲೆಬುರುಡೆ ಬಾವುಟದ ಸಣ್ಣ ಹಡಗೊಂದು ತೇಲಿಕೊಂಡು ದಡಕ್ಕೆ ಬರುತ್ತದೆ. ಅದರೊಳಗಿಂದ ಕತ್ತಿ ಹಿಡಿದ ಕೆಲವು ಕಡಲುಗಳ್ಳರು (ಪೈರೆಟ್ಸ್) ಬರುತ್ತಾರೆ. ಬಂದವರೇ ಸರೋವರಕ್ಕೂ ಪ್ರೇಕ್ಷಕಾಂಗಣಕ್ಕೂ ನಡುವಣ ಹರಹಿನಲ್ಲಿ ಕತ್ತಿ ಬೀಸುತ್ತಾ, ಮೊಳಗುವ ಹಿನ್ನೆಲೆ ಸಂಗೀತಕ್ಕನುಸಾರವಾಗಿ ಕುಣಿಯುತ್ತಾರೆ. ಆಗ ಅದೆಲ್ಲಿಂದಲೋ ಬಣ್ಣ ಬಣ್ಣದ ಉಡುಗೆ ತೊಡುಗೆಗಳನ್ನು ತೊಟ್ಟ ಒಂದಷ್ಟು ಜನ ರಮಣಿಯರು, ಈ ಕಡಲುಗಳ್ಳರನ್ನು ಒಲಿದು ಬಂದು, ಅವರ ಜತೆ ಕೈ ಕೈ ಸೇರಿಸಿ ಕುಣಿತದಲ್ಲಿ ಭಾಗಿಯಾಗುತ್ತಾರೆ. ಅನಂತರ ಈ ತರುಣಿಯರು ತಮ್ಮ ಮೇಲುಡುಪುಗಳನ್ನು ತೆಗೆದು ಒಗೆದು, ಈಜುವ ಉಡುಪಿನಲ್ಲಿ, ತಮ್ಮ ಕಾಲುಗಳಿಗೆ ಕಟ್ಟಿಕೊಂಡ ರೆಕ್ಕೆಯಾಕಾರದ ಪಾದರಕ್ಷೆಗಳ ಸಹಿತ ನೀರ ಮೇಲೆ ನಿಂತು, ಅದೇ ಹೊತ್ತಿಗೆ ಸಿದ್ಧವಾದ ದೋಣಿಗಳಿಗೆ ಜೋಡಿಸಿದ ಹಗ್ಗಗಳನ್ನು ಹಿಡಿದು, ವೇಗವಾಗಿ ಹೊರಟ ದೋಣಿಯ ಹಿಂದೆಯೇ ನೀರನ್ನು ಸೀಳಿಕೊಂಡು ಪಂಕ್ತಿ ಪಂಕ್ತಿಗಳಲ್ಲಿ ಚಲಿಸುತ್ತಾರೆ. ಇದೇ ಬಗೆಯ ಆಟ ಪುರುಷರಿಂದಲೂ ನಡೆಯುತ್ತದೆ. ಸರೋವರವೊಂದರ ನೀರಿನ ಮೇಲೆ ಎಷ್ಟೆಷ್ಟು ಸಾಹಸ-ಚಮತ್ಕಾರಗಳನ್ನು ತೋರಿಸಬಹುದೋ ಅಷ್ಟನ್ನೂ ತೋರಿಸುತ್ತಾರೆ. ಸಾಹಸ-ವಿನೋದ-ಚಮತ್ಕಾರ- ಗಾಯನ-ನರ್ತನ ಈ ಎಲ್ಲವನ್ನು ಮೇಳೈಸಿ ಪ್ರದರ್ಶನಗೊಳ್ಳುವ ಈ ಕ್ರೀಡಾನಾಟಕ, ಸಹಸ್ರಾರು ಪ್ರೇಕ್ಷಕರ ಎದುರಿಗೆ, ಸುಮಾರು ಮೂವತ್ತೈದು ನಿಮಿಷಗಳ ಕಾಲ, ಮಧ್ಯಾಹ್ನದ ತಳತಳಿಸುವ ಬಿಸಿಲಿನಲ್ಲಿ ಸರೋವರದ ನೀರಿನ ಮೇಲೆ ನಡೆಯುತ್ತದೆ.

ಮತ್ತೂ ಒಂದು ಪ್ರದರ್ಶನ ‘ತಾಹಿತಿ ಡ್ರಮ್ಸ್’ ಅಂದಿನ ವೇಳಾಪಟ್ಟಿಯ ಪ್ರಕಾರ ಈ ಪ್ರದರ್ಶನ ಮಧ್ಯಾಹ್ನ ಮೂರುವರೆ ಗಂಟೆಗೆ. ಸಾಗರ ಜಗತ್ತಿನ ಈ ಆವರಣದೊಳಗೆ ಒಂದು ಪಾಲಿನೀಷಿಯನ್ ಹಳ್ಳಿಯ ಪರಿಸರವನ್ನು ನಿರ್ಮಿಸಲಾಗಿದೆ. ಈ ಹಳ್ಳಿಮನೆಗಳ ಬದಿಗೆ ಒಂದು ಉಷ್ಣವಲಯದ ಅರಣ್ಯ. ಅದನ್ನು ‘Rain Forest’ (ಮಳೆ ಕಾಡು) ಎಂದು ಕರೆಯಲಾಗಿದೆ. ಈ ಕಾಡೊಳಗೆ ಮೂರು ನಾಲ್ಕು ನಿಮಿಷಗಳ ಹಾದಿ. ಕಾಡು ಅತ್ಯಂತ ದಟ್ಟವಾಗಿದೆ. ಈ ಉಷ್ಣವಲಯದ ಕಗ್ಗಾಡಿನೊಳಗೆ, ನೆಳಲು-ಬೆಳಕಿನ ಜರಡಿಯಾದ ಈ ಕಾಡಿನ ಶೀತಲ ಮೌನದೊಳಗೆ ನಾವು ನಡೆಯುವಾಗ ಅನೇಕ ಬಗೆಯ ಪಕ್ಷಿಗಳ ಧ್ವನಿ ಕೇಳುತ್ತದೆ; ಎಲ್ಲೋ ನೀರು ಹರಿಯುವ ಮೊರೆಯುವ ಸದ್ದು. ಜತೆಗೇ ಮೈ ನಡುಗಿಸುವ ಹೆಬ್ಬುಲಿಯ ಘರ್ಜನೆ. (ಇದೆಲ್ಲಾ ಈ ಕಾಡಿನ ಒಂದು ಮಾದರಿಯೊಳಗೆ, ಅಳವಡಿಸಲಾದ ಶಬ್ದ ಚಮತ್ಕಾರಗಳ ಪರಿಣಾಮ ಎಂದು ಹೇಳಬೇಕಾಗಿಲ್ಲ) ಈ ದಟ್ಟವಾದ ಪುಟ್ಟ ಅರಣ್ಯದಾಚೆಗೆ ಬಂದರೆ ಒಂದೇ ಒಂದು ಪಾಲಿನೀಷಿಯನ್ ಹಳ್ಳಿಯ ಮನೆ. ಮನೆಯ ಸುತ್ತ ಹರಹಿದ ಕಡಲ ತೀರದ ಮರಳು; ಆ ಮರಳಿನ ಮಧ್ಯೆ ಅಲ್ಲಲ್ಲಿ ತಾಳೆಯ ಮರಗಳು. ಈ ನೆರಳು ಚೆಲ್ಲಿದ ಮರಳ ಹಾಸಿನ ಮೇಲೆ ಕೂರಲು ಉದ್ದನೆಯ ಹಲಗೆಯನ್ನುಳ್ಳ ಬೆಂಚುಗಳು. ನಾನು ಈ ಸ್ಥಳವನ್ನು ತಲುಪುವ ವೇಳೆಗೆ ಸಾಕಷ್ಟು ಜನ ಈ ಬೆಂಚುಗಳ ಮೇಲೆ ಕೂತಿದ್ದರು. ನಾನೂ ಕೂತೆ. ಎದುರಿಗೆ ತಾಹಿತಿ ದ್ವೀಪದ ಒಂದು ಗುಡಿಸಲು. ಅದೇ ಈ ಮಧ್ಯಾಹ್ನದ ಪ್ರದರ್ಶನದ ರಂಗಸ್ಥಳ ಕೂಡಾ. ಮರಳ ಹಾಸಿನ ಮೇಲೆ ಹಾಕಿದ್ದ ಬೆಂಚುಗಳ ಮೇಲೆ ಕುತೂಹಲದಿಂದ ಪ್ರದರ್ಶನಕ್ಕೆ  ಕಾಯುತ್ತಿರುವಂತೆಯೆ, ಆ ಗುಡಿಸಲಿನ ಒಳಗಿನಿಂದ ನಾಲ್ಕು ಜನ ಪಾಲಿನೀಷಿಯನ್ ಗಂಡಸರು ತಮ್ಮ ವಾದ್ಯಗಳ ಸಹಿತ ಕಾಣಿಸಿಕೊಳ್ಳುತ್ತಾರೆ. ಅವರು ವಾದ್ಯಗಳ ಜತೆಗೆ ತಾಹಿತಿ ಭಾಷೆಯ ಒಂದೆರಡು ಹಾಡುಗಳನ್ನು ಹಾಡುತ್ತಾರೆ. ಹಾಡು ಮುಗಿಸಿ ಅವರು ಡ್ರಮ್ಮು (ಒಂದು ಬಗೆಯ  ಚರ್ಮವಾದ್ಯ)ಗಳನ್ನು ಲಯಬದ್ಧವಾಗಿ ಬಾರಿಸಲು ತೊಡಗಿದಾಗ, ಗುಡಿಸಲ ಒಳಗಿನಿಂದ ನಾಲ್ಕಾರು ಜನ ಪಾಲಿನೀಷಿಯನ್ ಜನಾಂಗದ ಬೆಡಗಿಯರು, ಈ ವಾದ್ಯಗಳ ತಾಳ – ಲಯಗಳಿಗೆ ಅನುಸಾರವಾಗಿ ಬಳುಕುತ್ತಾ ಬರುತ್ತಾರೆ. ಕೇವಲ ಮೊಲೆಗಟ್ಟಿನ, ಅರ್ಧ ಲಂಗದ, ಕೊರಳಲ್ಲಿ ಹಳದಿ ಬಣ್ಣದ ಹೂವಿನ ಮಾಲೆಯೊಂದನ್ನು ಹಾಕಿಕೊಂಡು, ಅದೇ ಬಣ್ಣದ ಟೊಪ್ಪಿಗೆಯನ್ನು ಧರಿಸಿದ, ಈ ತಾಹಿತಿ ಸುಂದರಿಯರು ಬಳುಕು ನೃತ್ಯ ಮಾಡುತ್ತಾರೆ. ಅವರ ಈ ನರ್ತನದಲ್ಲಿ ಪ್ರಧಾನ ಪಾತ್ರವಹಿಸುವುದು ಅವರ ತೆಳ್ಳನೆಯ ಹೊಟ್ಟೆ ಮತ್ತು ಅವರ ಸೊಂಟದ ಕೆಳಗಿನ ಭಾಗ ಮಾತ್ರ. ಕಾಲುಗಳು ನಿಂತಲ್ಲೇ ನಿಂತ ಹಾಗೇ ತೋರುತ್ತವೆ. ಹೊಟ್ಟೆ ಹಾಗೂ ನಿತಂಬಗಳನ್ನು ವಿವಿಧ ವಿನ್ಯಾಸಗಳಲ್ಲಿ ಕುಣಿಸುವ ಇವರ ನರ್ತನ ತುಂಬ ಮಾದಕವಾಗಿರುತ್ತದೆ. ಈ ಬಗೆಯ ಎರಡು ಮೂರು ವರಸೆಗಳ ಕುಣಿತದ ನಂತರ, ಗುಡಿಸಲೊಳಗಿನಿಂದ ಇದೇ ವೇಷದ ಧಡೂತಿ ಮಹಿಳೆಯೊಬ್ಬಳು ಬಂದು ವಾದ್ಯಗಳ ತಾಳ- ಲಯಕ್ಕೆ ಅನುಸಾರವಾಗಿ ತನ್ನ ಸೊಂಟ ಮತ್ತು ಅಂಡುಗಳನ್ನು ವಿಲಕ್ಷಣವಾಗಿ ಕುಣಿಸತೊಡಗುತ್ತಾಳೆ. ನೋಡಿದವರಲ್ಲಿ ನಗೆಯನ್ನುಕ್ಕಿಸುವ ಈ ಕುಣಿತ ಇಲ್ಲಿಗೇ ಮುಗಿಯುವುದಿಲ್ಲ. ಆಕೆ ಹಾಗೇ ಕುಣಿಯುತ್ತಾ, ಗುಡಿಸಲ ಛಾವಣಿಯ ರಂಗಸ್ಥಳವನ್ನು ದಾಟಿ, ನೊಡುತ್ತಾ ಕುಳಿತ ಪ್ರೇಕ್ಷಕರ ಬಳಿಗೆ ಅದೇ ಬಳುಕು ನಡಿಗೆಯಲ್ಲಿ ಬಂದು, ತನ್ನ ಜತೆಗೆ ಯಾರಾದರೂ ಕುಣಿಯಲು ಬನ್ನಿ ಎಂದು ಕರೆಯುತ್ತಾಳೆ. ಈ ದುಡುಮಿ ಕರೆದದ್ದೆ ತಡ, ಹಿಂದೆ-ಮುಂದೆ ನೋಡದೆ ಹತ್ತು ಹದಿನೈದು ಮಂದಿ – ಗಂಡಸರು, ಹೆಂಗಸರು, ಹುಡುಗರು, ಜತೆಗೆ  ಮಕ್ಕಳು ಕೂಡಾ – ಅವಳ ಜತೆ ಗುಡಿಸಲಿನ ಅಂಗಳಕ್ಕೆ ಧಾವಿಸುತ್ತಾರೆ. ಆಕೆ ತಾಹಿತಿ ಡ್ಯಾನ್ಸ್ ಮಾಡುವುದು ಹೇಗೆ ಎಂಬುದನ್ನು, ವಾದ್ಯವೃಂದದ ಹಿನ್ನೆಲೆಯಲ್ಲಿ ಕುಣಿದು ತೋರಿಸುತ್ತಾಳೆ. ವಿವಿಧ ವಯೋಮಾನದ ಈ ಜನ ಏನೂ ಎಗ್ಗಿಲ್ಲದೆ ಅವಳು ತೋರಿಸಿಕೊಟ್ಟಂತೆ ತಾವೂ ಕುಣಿಯುತ್ತಾರೆ. ನೆರೆದ ಪ್ರೇಕ್ಷಕರು ಈ ಕುಣಿತದ ಭಂಗಿಗಳನ್ನು ಕಂಡು ಹೋ ಎಂದು ಬಿದ್ದು ಬಿದ್ದು ನಗುತ್ತಾರೆ. ಈ ಜನ ತುಂಬಾ ಸರಸಿಗಳು; ವಿನೋದ ಪ್ರಿಯರು; ಬದುಕಿನಲ್ಲಿ ಸಂತೋಷವೆಂದರೆ ಏನು ಎಂಬುದನ್ನು ಬಲ್ಲವರು. ಗಾಂಭೀರ‍್ಯ ಅನ್ನುವುದೇನಿದ್ದರೂ, ವಾರದ ಐದೂ ದಿನಗಳುದ್ದಕ್ಕೂ ಅವರು ತೊಡಗಿಸಿಕೊಳ್ಳುವ ಉದ್ಯೋಗಗಳಲ್ಲಿ. ದುಡಿಮೆಯ ನಂತರ ದೊರಕುವ ವಾರಾಂತ್ಯದ – ಶನಿವಾರ, ಭಾನುವಾರಗಳ – ವಿರಾಮದಲ್ಲಿ, ತಮ್ಮ ಮೈ ಮನಸ್ಸುಗಳನ್ನು ಸುಖ-ಸಂತೋಷ – ವಿನೋದ – ವಿಲಾಸಗಳಿಂದ ಹಗುರ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಚೆನ್ನಾಗಿ ಬಲ್ಲವರು. ನಮ್ಮ ದೇಶದ ನಿತ್ಯ ಸೋಮಾರಿಗಳಿಗೆ ಇವೆಲ್ಲ ಅರ್ಥವಾಗುವ ಸಂಗತಿಗಳಲ್ಲ.

***

ಡಿಸ್ನಿ ಜಗತ್ತಿನ ನನ್ನ ಸಂಚಾರದ ಮೂರನೆಯ ದಿನ ನಾನು ನೋಡಿದ್ದು Epcot centre (ಎಪ್‌ಕಾಟ್ ಸೆಂಟರ್) ಅನ್ನು. ಇದು ಮುಖ್ಯವಾಗಿ ಮನುಷ್ಯನ ನಾಗರಿಕತೆ ಹಾಗೂ ವೈಜ್ಞಾನಿಕ ಪ್ರಗತಿಯನ್ನು ತೋರಿಸುವ ಪ್ರದರ್ಶನಾಲಯಗಳಿಂದ, ಹಾಗೂ ದೊಡ್ಡ ಸರೋವರವೊಂದರ ಸುತ್ತಲೂ ಹರಹಿಕೊಂಡ, ಜಗತ್ತಿನ ವಿವಿಧ ರಾಷ್ಟ್ರಗಳ ಸಾಂಸ್ಕೃತಿಕ ವಸ್ತು ಪ್ರದರ್ಶನಾಲಯಗಳಿಂz ಕೂಡಿದ ಒಂದು ವಿಸ್ತಾರವಾದ ಪರಿಸರ. ಚೀನಾ, ಮೆಕ್ಸಿಕೋ, ಜಪಾನ್, ಫ್ರಾನ್ಸ್ , ಇಂಗ್ಲೆಂಡ್, ಮೊರಾಕೋ, ಕೆನಡಾ, ಅಮೆರಿಕಾ ಇತ್ಯಾದಿ ರಾಷ್ಟ್ರಗಳಿಗೆ ಸಂಬಂಧಿಸಿದ ಪ್ರದರ್ಶನಾಲಯಗಳೂ, ಆಯಾ ದೇಶಕ್ಕೆ ವಿಶಿಷ್ಟವಾದ ಸಾಮಗ್ರಿಗಳ ಮಳಿಗೆಗಳೂ, ಆಯಾ ದೇಶದ ತಿಂಡಿ-ತಿನಸುಗಳು ದೊರೆಯುವ ರೆಸ್ಟೊರಾಂಟುಗಳೂ ಇವೆ. ಈ ಮಳಿಗೆಗಳಲ್ಲಿ – ಪ್ರದರ್ಶನಾಲಯಗಳಲ್ಲಿ, ಇರುವ ಅಧಿಕಾರಿ ವರ್ಗದವರು, ವ್ಯವಸ್ಥಾಪಕರು, ಪರಿಚಾರಕರು ಎಲ್ಲರೂ ಆಯಾ ದೇಶಕ್ಕೆ ವಿಶಿಷ್ಟವಾದ ಉಡುಗೆ ತೊಡುಗೆಗಳನ್ನು ಧರಿಸಿರುತ್ತಾರೆ. ವ್ಯಾಪಾರದ ಮಳಿಗೆಗಳಲ್ಲಿರುವ ವಿವಿಧ ವಸ್ತುಗಳು, ಎಲ್ಲಕ್ಕೂ ಮಿಗಿಲಾಗಿ ಕಣ್ಣನ್ನು ಸೆಳೆಯುವ ಬೊಂಬೆಗಳು ವಿಶೇಷ ರೀತಿಯವಾಗಿವೆ. ಒಂದೊಂದು ರಾಷ್ಟ್ರದ ಇಂಥ ಪ್ರದರ್ಶನಾಲಯದ ಒಳಗೆ ಆಯಾ ದೇಶದ ಪ್ರಗತಿಯನ್ನು ತೋರಿಸುವ ಸಾಕ್ಷ್ಯಚಿತ್ರಗಳು ದಿನದುದ್ದಕ್ಕೂ ತೋರಿಸಲ್ಪಡುತ್ತವೆ. ಆದರೆ ಕಣ್ಣಲ್ಲಿ ಕಣ್ಣಿಟ್ಟು ಹುಡುಕಿದರೂ ನಮ್ಮ ಪುಣ್ಯಭೂಮಿ ಭಾರತಕ್ಕೆ ಮಾತ್ರ ಇಲ್ಲಿ ಸ್ಥಳಾವಕಾಶವೇ ಇಲ್ಲ.

ಇಡೀ ದಿನ ಈ ‘ಎಪ್‌ಕಾಟ್ ಸೆಂಟರ್’ ಅನ್ನು, ಗಿಜಿಗುಟ್ಟುವ ಜನದ ಮದ್ಯೆ ಸೇರಿಕೊಂಡು ಸುತ್ತುತ್ತ, ವಿವಿಧ ವೈಜ್ಞಾನಿಕ ಸಂಗತಿಗಳನ್ನು ಕುರಿತ ಅದ್ಭುತ ಪ್ರದರ್ಶನಗಳನ್ನು ನೋಡುತ್ತ, ಸಂಜೆಯ ವೇಳೆಗೆ ನಮ್ಮ ಬಸ್ಸಿನವನು ಹೇಳಿದ್ದ ಕಡೆಗೆ ಬಂದು ನಿಂತೆ. ಸಂಜೆ ಐದೂವರೆಗೆ ಸರಿಯಾಗಿ ನಿಗದಿತ ಸ್ಥಳಕ್ಕೆ ಬಂದ ಬಸ್ಸಲ್ಲಿ ಕೂತು, ನಮ್ಮನ್ನು ಈ ಮೂರು ದಿನ ಉಳಿಸಿಕೊಂಡಿದ್ದ ಆರ್ಲೆಂಡೋದ ಇಂಟರ್ ನ್ಯಾಷನಲ್ ಹೋಟಲಿಗೆ ಬಂದು, ಅರ್ಧಗಂಟೆ ವಿಶ್ರಾಂತಿಯನ್ನು ಪಡೆದು ಮಯಾಮಿಯ ಕಡೆಗೆ ಹೊರಟಾಗ ರಾತ್ರಿ ಏಳುಗಂಟೆ. ಮತ್ತೆ ನಾಲ್ಕೂವರೆ ಗಂಟೆಗಳ ಪ್ರಯಾಣದ ಕೊನೆಗೆ-ನಾನು ಲಾಡರ್ ಡೇಲ್ ಎಂಬಲ್ಲಿನ ಹಾಲಿಡೇ ಇನ್ ಎಂಬ ಹೋಟಲಿನ ಮೊಗಸಾಲೆಯಲ್ಲಿ ಕಾಯಬೇಕೆಂದೂ, ಶ್ರೀ ಗೋಪಿ ಬೋರೆಯವರು ಅಲ್ಲಿಗೆ ಬಂದು ನನ್ನನ್ನು ಆ ನಡುರಾತ್ರಿ ತಮ್ಮ ಮನೆಗೆ ಕರೆದುಕೊಂಡು ಹೋಗುವರೆಂದೂ, ಡಾ. ಜಗದೀಶ್ ಅವರು ಮೊದಲೇ ಕೊಟ್ಟ ಸೂಚನೆಯ ಪ್ರಕಾರ, ಬಸ್ಸಿಳಿದು ‘ಹಾಲಿಡೇ ಇನ್’ ಎಂಬ ಭಾರಿ ಹೋಟಲಿನ ಮೊಗಸಾಲೆಯನ್ನು ಪ್ರವೇಶಿಸಿದೆ. ರಾತ್ರಿ ಹನ್ನೆರಡು ಗಂಟೆ ಬಡಿಯತೊಡಗಿದ ಹೊತ್ತು. ಸುತ್ತ ಕಣ್ಣಾಡಿಸಿದೆ, ಯಾರೂ ಇಲ್ಲ. ಹೀಗಾಗಿ ಸ್ವಾಗತ ಕಚೇರಿಯ ಎದುರಿಗೆ ಹಾಕಿದ ಕುರ್ಚಿಯ ಮೇಲೆ ಕೂತೆ. ಗಂಟೆ ಹನ್ನೆರಡೂವರೆಯನ್ನು ದಾಟಿತು. ನನ್ನನ್ನು ಕರೆದುಕೊಂಡು ಹೋಗಲು ಬರಬೇಕಾಗಿದ್ದ ಗೋಪಿ ಬೋರೆಯವರ ಸುಳಿವಿಲ್ಲ. ನನ್ನ ಬಳಿ ಇದ್ದ ಅವರ ದೂರವಾಣಿ ನಂಬರ್‌ಗೆ, ಅವರ ಮನೆಗೆ ಫೋನ್ ಮಾಡಿದೆ. ಗೋಪಿಯವರ ಶ್ರೀಮತಿಯವರು ಸಿಕ್ಕರು. ನಿಮ್ಮನ್ನು ಕರೆದು ತರಲು ಗೋಪಿಯವರು ಮನೆ ಬಿಟ್ಟು ಅರ್ಧ ಗಂಟೆಯಾಯಿತು. ಇನ್ನೇನು ಬಂದುಬಿಡುತ್ತಾರೆ, ಸ್ವಲ್ಪ ಕಾಯಿರಿ-ಎಂಬ ಆಶ್ವಾಸನೆಯಿಂದ ಸಮಾಧಾನವಾಯಿತು. ಸುಮಾರು ರಾತ್ರಿ ಒಂದು ಗಂಟೆ ಬಡಿಯುವ ವೇಳೆಗೆ ಕಾರೊಂದು ಬಂದು ಪೋರ್ಟಿಕೋದಲ್ಲಿ ನಿಂತಿತು. ಕಾರಿಳಿದು ಬಂದ ಗೋಪಿಯವರು, ಮಂಕಾಗಿ ಕೂತ ನನ್ನನ್ನು ಗುರುತಿಸಿ ಕರೆದುಕೊಂಡು ಹೊರಟರು. ನಟ್ಟ ನಡುರಾತ್ರಿಯ ಆತಂಕದ ಕಾಯುವಿಕೆ ಕೊನೆಗೊಂಡಿತು. ‘ಕ್ಷಮಿಸಿ ದಾರಿ ಉದ್ದಕ್ಕೂ ವಾಹನ ಸಂಚಾರದ ತೊಡಕುಗಳನ್ನು ದಾಟಿ ಬರಬೇಕಾದರೆ ಇಷ್ಟು ಹೊತ್ತಾಯಿತು’ ಎಂದರು. ಮತ್ತೆ ಆ ಅರ್ಧರಾತ್ರಿಯಲ್ಲೂ ದಾರಿಯುದ್ದಕ್ಕೂ ಸಂಚಾರಗಳ ತೊಡಕುಗಳನ್ನು ಹಾದು ಮನೆ ಸೇರಿದಾಗ, ರಾತ್ರಿ ಒಂದೂ ಮುಕ್ಕಾಲು ಗಂಟೆ. ಕಳೆದ  ಮೂರು ದಿನಗಳ ಕಾಲ ಕೇವಲ ಬ್ರೆಡ್ಡು – ಹಣ್ಣು – ಹಾಲುಗಳಲ್ಲಿ ಕಾಲ ಹಾಕಿದ ನನಗೆ, ನಡುರಾತ್ರಿಯಲ್ಲಿ ಶ್ರೀ ಗೋಪಿಯವರ ಶ್ರೀಮತಿಯವರು ಬಡಿಸಿದ ನಮ್ಮೂರಿನ ಊಟ ಕೊಟ್ಟ ಸಮಾಧಾನವನ್ನು ಹೇಗೆ ವರ್ಣಿಸಲಿ?

ಗೋಪಿಯವರ ಮನೆಯಲ್ಲಿ, ನನಗೆ ಎಚ್ಚರವಾದಾಗ ಬೆಳಗಿನ ಒಂಬತ್ತೂ ಮುಕ್ಕಾಲು ಗಂಟೆ. ಮನೆಯಾಚೆ ಏನೋ ಮಬ್ಬು. ಸ್ನಾನ ಮುಗಿಸಿ, ತಿಂಡಿ ತಿಂದು, ಶನಿವಾರದ ಬಿಡುವಿನಲ್ಲಿದ್ದ ಗೋಪಿಯವರ ಜತೆ, ‘ಲಾಡರ್ ಡೇಲ್’ ಸುತ್ತ – ಮುತ್ತ ನೊಡಲು ಹೊರಟೆವು. ಹೊರಗೆ ಹೋದಂತೆ ಇಡೀ ಮಯಾಮಿಯ ಮೇಲೆ ಮಳೆಯ ಮಬ್ಬು; ಜತೆಗೆ ಬಿರುಸಾದ ಗಾಳಿ. ಮಯಾಮಿಗೆ ನಾನು ಬಂದ ಹಾಗೂ ಅನಂತರ ಡಿಸ್ನಿವರ್ಲ್ಡ್‌ನಲ್ಲಿದ್ದ ಕಳೆದ ಮೂರು ದಿನಗಳ ಕಾಲದ ಸೊಗಸಾದ ಬಿಸಿಲು, ಈ ವೇಳೆಗಾಗಲೇ ನಾಪತ್ತೆಯಾಗಿ ದಟ್ಟವಾದ ಮೋಡ ಕವಿದು ಸಣ್ಣಗೆ ತುಂತುರು ಹನಿಯತೊಡಗಿತ್ತು. ಈ ಮಳೆಗಾಳಿಯ ಮಬ್ಬಿನಲ್ಲಿಯೇ ಮಯಾಮಿಯ ಅಟ್ಲಾಂಟಿಕ್ ಮಹಾಸಾಗರದ ನುಣ್ಮಳಲಿನ ತೀರಕ್ಕೆ ಹೋದೆವು. ಕಡಲ ತೀರದ ತೆಂಗಿನ ಮರಗಳು, ವೇಗದಿಂದ ಕಡಲ ಮೇಲೆ ಬೀಸುತ್ತಿದ್ದ ಗಾಳಿಗೆ ತಲೆಗೆದರಿಕೊಂಡು ಜೋಲಿ ಹೊಡೆಯುತ್ತಿದ್ದವು. ಅಲೆಗಳ ರಭಸವೂ ಹೆಚ್ಚತೊಡಗಿತ್ತು. ಆದರೂ ಸಾಕಷ್ಟು ಜನ ಆ ಮಳೆ ಗಾಳಿಯಲ್ಲೂ ಸಮುದ್ರ ಸ್ನಾನಕ್ಕೆ ಇಳಿದಿದ್ದರು. ಒಂದು ವೇಳೆ ನಿನ್ನೆ ಮೊನ್ನೆಯಂತೆ ಪ್ರಶಾಂತ ವಾತಾವರಣ ಹಾಗೂ ಒಳ್ಳೆಯ ಬಿಸಿಲು, ಈ ಹೊತ್ತು ಇದ್ದಿದ್ದರೆ, ಬಹು ಸಂಖ್ಯೆಯ ಮಹನೀಯರೂ – ಮಹಿಳೆಯರೂ, ಈ ಕಡಲ ತೀರದ ಚಿನ್ನದ ಮರಳಿನ ಮೇಲೆ ತಮ್ಮ ಮೈಯನ್ನು ಒಣಗಲು ಹಾಕಿಕೊಂಡು ದಿನವಿಡೀ ಬಿದ್ದುಕೊಂಡಿರುವುದನ್ನು ಕಾಣಬಹುದಾಗಿತ್ತು.